ಪ್ರತಿಭಾವಂತ ನಾಟಕಕಾರ. ಸಂಸ ಎಂಬುದು ಇವರ ಕಾವ್ಯನಾಮ. ಎ.ಎಸ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಇವರ ಹೆಸರು. ಯಳಂದೂರು ತಾಲ್ಲೂಕಿನ ಅಗರದ ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿದ ಇವರು ಮೈಸೂರಿನಲ್ಲಿ ಇಂಗ್ಲಿಷ್ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಶಿಕ್ಷಣ ಪಡೆದು ಹತ್ತಾರು ವರ್ಷಗಳ ಕಾಲ ಮೈಸೂರು, ಮಂಗಳೂರು, ಮುಂತಾದ ಸ್ಥಳಗಳಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಸಂಸರ ಕೆಲವು ಕವನಗಳು ಮತ್ತು ಆರು ನಾಟಕಗಳು ಮಾತ್ರ ಇಂದು ದೊರೆಯುತ್ತವೆ. ‘ಸುಗುಣ ಗಂಬೀರ, ‘ವಿಗಡವಿಕ್ರಮರಾಯ, ‘ಬೆಟ್ಟದರಸು, ‘ಬಿರುದೆಂಬತ್ತರ ಗಂಡ, ‘ಮಂತ್ರಶಕ್ತಿ, ಮತ್ತು ‘ವಿಜಯ ನಾರಸಿಂಹ, ಈ ನಾಟಕಗಳಲ್ಲಿ ಅರಮನೆಯ ಕೋಲಾಹಲಗಳು ಕುಟಿಲ ತಂತ್ರಗಳ ಸಂಚು ಹೊಂಚುಗಳು, ನೀಚಸ್ಥಾನಗಳು ವಸ್ತುವಾಗಿ ಬಂದಿರುವುದರಿಂದ ಕ್ರಿಯೆಯಲ್ಲೆಲ್ಲ ಸಹಜವಾಗಿಯೇ ವೈವಿದ್ಯ ಸ್ವಾರಸ್ಯಗಳಿವೆ. ನಾಟಕದ ಕ್ರಿಯೆ ಒಂದು ಘಟನೆಯಿಂದ ಇನ್ನೊಂದಕ್ಕೆ ಮಿಂಚಿನಂತೆ ಚಲಿಸುವುದರಿಂದ ಅಲ್ಲಿನ ವಾತಾವರಣ ಜೀವಂತವಾಗಿದೆ.

ಬಿರುದೆಂಬತ್ತರ ಗಂಡ ಎಂಬ ಏಕಾಂಕ ನಾಟಕದಲ್ಲಿ ಮುಖ್ಯ ಕಥೆಯೊಂದಿಗೆ ದುರಂತ ಪ್ರೇಮದ ಕಥೆಯೂ ಸೇರಿ ನಾಟಕ ಸಂಕೀರ್ಣ ಸ್ವರೂಪ ಪಡೆದಿದೆ ಸಂಸರ ಎಲ್ಲ ನಾಟಕಗಳಲ್ಲಿ ದೊರೆಯ ವಿರುದ್ದವಾಗಿಯೋ, ಸ್ವಂತ ಪ್ರತಿಷ್ಟೆಗಾಗಿಯೋ, ನಡೆಸಿದ ತಂತ್ರ ಪ್ರತಿ ತಂತ್ರಗಳನ್ನು ಕಾಣಬಹುದಾಗಿದೆ. ಇದರಿಂದಾಗಿ ಸಹಜವಾಗಿಯೇ ಇವರ ನಾಟಕ ಕ್ರಿಯಾತ್ಮಕವಾಗಿದೆ. ಕ್ರಿಯೆ ವೇಗದಿಂದ ಚಲಿಸುತ್ತ ಪಾತ್ರವರ್ಗವನ್ನೇ ಕಬಳಿಸಿ ಬಿಡುವಂತೆ ತೋರುತ್ತದೆ. ಬೆಟ್ಟದರಸು, ನಾಟಕವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಧೂರ್ತ ವಿಕ್ರಮರಾಯನು ದಳವಾಯಿ ಬೆಟ್ಟದ ಅರಸುವನ್ನು ಅದಿಕಾರದಿಂದ ಕೆಳಕ್ಕಿಳಿಸಿ ತಾನು ಪ್ರಭಲ ದೈತ್ಯನಾಗಿ ಬೆಳೆಯುವ ಸನ್ನಿವೇಷಗಳು ಚಿತ್ರಿತವಾಗಿವೆ. ‘ವಿಗಡ ವಿಕ್ರಮ ರಾಯ ಮುಂದಿನ ಕಥೆಯನ್ನು ಬೆಳೆಸಿ ತೋರುತ್ತದೆ.

ಹಳಗನ್ನಡ ಸಾಹಿತ್ಯ ಶಾಸನಗಳನ್ನು ಇತರ ಇತಿಹಾಸ ಆಕರಗಳನ್ನು ಆಳವಾಗಿ ಅಭ್ಯಾಸಮಾಡಿ ಕನ್ನಡ ಭಾಷೆಯಲ್ಲಿ ಹಿಂದೆಂದೂ ಕಾಣದಿದ್ದಂಥ ಅಮೂಲ್ಯ ಐತಿಹಾಸಿಕ ನಾಟಕಗಳನ್ನು ಬರೆದ ಪ್ರಚಂಡ ಪ್ರತಿಭಾಶಾಲಿ ಸಂಸರು, ಆದರೆ ಅವರದು ದುರಂತಛಾಯೆ ಆವರಿಸಿದ ಮಹಾಪ್ರತಿಭೆ. ತಾವು ಕ್ರಾಂತಿಕಾರರೆಂದು ಭಾವಿಸಿದ ಪೋಲೀಸರು ತಮ್ಮ ಮೇಲೆ ಕಣ್ಣಿಟ್ಟು ತಮ್ಮನ್ನು ಹಿಂಸಿಸಲು ನಾಶಗೊಳಿಸಲು ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆಂಬ ಭ್ರಮೆ ತೀವ್ರವಾಗಿ ಅವರನ್ನು ಕಾಡತೊಡಗಿತು. ಇದರಿಂದಾಗಿ ಅವರು ತೀರ ವಿಲಕ್ಷಣ ವ್ಯಕ್ತಿಯಾಗಿ ಮನೋವೇದನೆಯಿಂದ ಬಳಲಿದರು ಈ ಪ್ರತಿಭೆಯೇ ಅವರ ದುರ್ಮರಣಕ್ಕೂ ಕಾರಣವಾಯಿತು.