ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ವಿದ್ಯಾರ್ಥಿ. ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಕುಮಾರವ್ಯಾಸ ಭಾರತದ ಸಭಾಪರ್ವ ಓದುತ್ತಿದ್ದೆ. ಪಕ್ಕದಲ್ಲಿ ಓದುಬರಬಹ ಬಾರದ ವೃದ್ಧರೊಬ್ಬರು ಕುಳಿತಿದ್ದರು. ‘ನೀನು ಓದುತ್ತಿರುವ ಪುಸ್ತಕ ಯಾವುದು’ ಎಂದು ಕುತೂಹಲದಿಂದ ಅವರು ಕೇಳಿದರು. ನಾನು ‘ಕುಮಾರವ್ಯಾಸಭಾರತ’ವೆಂದು ಹೇಳಿದೆ. ಅದಕ್ಕವರು ಬಿಂದೂರಾಯರ ಭಾರತವಾಚನ ಕೇಳಿದ್ದೀಯ ಎಂದು ಪ್ರಶ್ನಿಸಿದರು. ಇಲ್ಲವೆಂದೆ. ಅವರು ತಮ್ಮ ಹಳೆಯ ನೆನಪನ್ನು ಕೆದಕಿ, ಬಿಂದೂರಾಯರು ಭಾರತವಾಚನ ಮಾಡುತ್ತಿದ್ದ ವೈಖರಿಯನ್ನು ಕುರಿತು ಹೇಳಿದರು. ಒಮ್ಮೆ ದ್ರೌಪದಿಯ ಅಕ್ಷಯ ವಸನ ಪ್ರಸಂಗದ ವಾಚನ ಕೇಳಿದ ಇಡೀ ಸಭೆ ಭಾವಪರವಶತೆಯಿಂದ ಕಣ್ಣೀರಿಟ್ಟಿತ್ತಂತೆ. ಆ ಸಂಧರ್ಭ ನೆನೆದ ಹಿರಿಯರು ಅತ್ತೇಬಿಟ್ಟರು. ಬಿಂದೂರಾಯರ ಭಾರತವಾಚನವನ್ನು ಕೇಳುವ ಯೋಗ ನನಗೆ ದೊರಕಲಿಲ್ಲ. ಆದರೆ ಬಿಂದೂರಾಯರು ತಮ್ಮ ಕಾವ್ಯವಾಚನದ ಮೂಲಕ ಕಲಿಯುಯಗದವರನ್ನೂ ದ್ವಾಪಾರಕ್ಕೇ ಕೊಂಡೊಯ್ಯುತ್ತಿದ್ದರು ಎಂದು ಹೃದಯತುಂಬಿ ಹೇಳುವವರನ್ನು ನೋಡಿದ್ದೇನೆ. ಇಂತಹ ಗಮಕಿಗಳನ್ನು ಪಡೆದ ಕನ್ನಡ ನಾಡು ಧನ್ಯ.

ಬಿಂದೂರಾರಯರು ೧೮೭೭ರ ಜನವರಿ ೨೪ರಂದು ಚಿತ್ರದುರ್ಗದ ಚಳ್ಳಕೆರೆಕ ತಾಲ್ಲೂಕಿನ ತಳಕಿನಲ್ಲಿ ಜನಿಸಿದರು. ಇವರ ತಂದೆ ಸಂತೇಬೆನ್ನೂರು ಗೋವಿಂದರಾಯರು. ವ್ಯವಹಾರಕ್ಕೆ ಬೇಕಾದಷ್ಟು ಮಾತ್ರ ಓದು ಬರಹ ತಿಳಿದಿದ್ದ ಅವರು ಶೇಕದಾರರಾಗಿ ಚಿತ್ರದುರ್ಗದಲ್ಲಿ ನೆಲಸಿದ್ದರು. ಇವರ ತಾಯಿ ರಮಾಬಾಯಿ. ಓದು-ಬರಹ ಅಷ್ಟಾಗಿ ತಿಳಿಯದವರು. ಆದರೆ ತಿಳಿವಳಿಕಸ್ಥೆ. ವ್ಯವಹಾರ ಬಲ್ಲ ಗೃಹಿಣಿ. ಹೀಗಾಗಿ, ಬಿಂದೂರಾಯರಿಗೆ ಬಾಲ್ಯದಲ್ಲಿ ಮನೆಯ ಒಳಗಾಗಲೀ, ಹೊರಗಿನ ಪರಿಸರದಲ್ಲಾಗಲೀ  ಸಂಗೀತ, ಸಾಹಿತ್ಯ ಗಮಕಕಲೆ ಇವುಗಳಿಗೆ ಯಾವುದೇ ಅವಕಾಶ ಪ್ರೋತ್ಸಾಹಗಳು ದೊರಕಲಿಲ್ಲ. ಚಿತ್ರದುರ್ಗದಲ್ಲಿ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದರು. ವಿದ್ಯಾರ್ಥಿಯಾಗಿದ್ದಾಗ ಹರಿಕಥೆ, ಸಂಗೀತಗಳನ್ನು ಕೇಳುವ ಹುಚ್ಚಿತ್ತಂತೆ. ಆದರೆ ಅದನ್ನು  ಕಲಿಯುವ ಅವಕಾಶ ಸಿಗಲಿಲ್ಲ. ಜೀವನ ನಿರ್ವಹಣೆಗಾಗಿ ಅರಣ್ಯ ಇಲಾಖೆಯಲ್ಲಿ ನೌಕರಿಗೆ ಸೇರಿದರು. ಅನಂತರ ಗಂಧದ ಎಣ್ಣೆಯ  ಕಾರ್ಖಾನೆ, ವಸ್ತು ಪ್ರದರ್ಶನ ಶಾಖೆ, ಕೃಷ್ನರಾಜೇಂದ್ರ ಮಿಲ್ಸ್ ಮೊದಲಾದ ಕಡೆಗಳಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು. ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ನೌಕರಿ ಮಾಡಿದರು.

ಬಿಂದೂರಾಯರು ನೌಕರಿ ನಿಮಿತ್ತವಾಗಿ ಮೈಸೂರು ಸೇರಿದ ಮೇಲೆ ಅವರಿಗೆ ಸಾಹಿತ್ಯ-ಸಂಗೀತ ಇವುಗಳ ಸಂಪರ್ಕ ಬೆಳೆಯಿತು. ಆ ಕಾಲದಲ್ಲಿ, ಮೈಸೂರಿನಲ್ಲಿ  ಜರುಗುತ್ತಿದ್ದ ಘನ ವಿದ್ವಾಂಸರುಗಳ ಸಂಗೀತ ಕಚೇರಿಗಳನ್ನು ಕೇಳುವ ಅವಕಾಶ ಬಿಂದೂರಾಯರಿಗೆ ಲಭಿಸಿತು. ಇದರಿಂದ ಅವರಲ್ಲಿ ಸಂಗೀತಜ್ಞಾನ ಬೆಳೆಯಿತು. ಅದೇ ಸಮಯದಲ್ಲಿ, ನಾಟಕ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಎ.ವಿ. ವರದಾಚಾರ್ಯರ ಪರಿಚಯವಾಯಿತು. ರಂಗಭೂಮಿಯ ಮೇಲಿನ ಅವರ ಅಭಿನಯ ಹಾಗೂ ಅವರು ಭಾವಪೂರ್ಣವಾಗಿ, ಅರ್ಥಗರ್ಭಿತವಾಗಿ ಹಾಡುತ್ತಿದ್ದ ಕಂದ-ವೃತ್ತಗಳು ಬಿಂದೂರಾಯರ ಗಮನ ಸೆಳೆಯಿತು. ಇಂತಹ ಒಡನಾಟದಿಂದ, ಬಿಂದುರಾಯರ ಅಂತರಂಗದಲ್ಲಿ ಹುದುಗಿದ್ದ ಪ್ರತಿಭೆಗೆ ಬೇಕಾದ ಸಾಹಿತ್ಯ-ಸಂಗೀತ-ರಸಗ್ರಹಣ-ಶಕ್ತಿಯ ಸಂಸ್ಕಾರ ಬೆಳೆಯುತ್ತಾ ಬಂತು.

ಇಷ್ಟಾದರೂ ಬಿಂದೂರಾಯರ ಅಂತರಂಗದಲ್ಲಿ ಹುದುಗಿದ್ದ ‘ಗಮಕ ಕಲೆ’ ಹೊರಹೊಮ್ಮಿದ್ದು ಒಂದು ವಿಚಿತ್ರ ಸನ್ನಿವೇಶದ ಮೂಲಕ. ಅಂದಿನ ಕಾಲದಲ್ಲಿ ಕಾವ್ಯವಾಚನದಲ್ಲಿ ಪ್ರಸಿದ್ಧರಾಗಿದ್ದ ಶಾಮಾಚಾರ್ಯರು ಬಿಂದೂರಾಯರು ಆಪ್ತ ಸ್ನೇಹಿತರು. ಕುಮಾರವ್ಯಾಸ. ಲಕ್ಷ್ಮೀಶ, ಷಡಕ್ಷರಿ ಕವಿಗಳ ಕಾವ್ಯಗಳನ್ನು ಬಹಳ ಸ್ವಾರಸ್ಯವಾಗಿ ವಾಚನ ಮಾಡುತ್ತಿದ್ದರು. ಇವರಲ್ಲಿ ವಿದ್ವತ್ತು, ಸಾಹಿತ್ಯಜ್ಞಾನ, ಉತ್ತಮ ಶಾರೀರಗಳಿದ್ದು ಇವರ ವಾಚನ ಬಹು ಜನರ ಮೆಚ್ಚುಗೆ ಪಡೆದಿತ್ತು. ಒಮ್ಮೆ ಬಿಂದುರಾಯರು ಶಾಮಾಚಾರ್ಯರನ್ನು  ಕುರಿತು, “ನಿನ್ನ ಭಾರತವೆಂದರೆ ನಮ್ಮ ಜನಕ್ಕೆ ಅದೇನು ಮರುಳೋ ನಾ ಬೇರೆ ಕಾಣೆ, ಅರಳಿಟ್ಟಿನ ಪದ್ಯಗಳನ್ನು  ಕೇಳುವುದಕ್ಕೆ ನಮ್ಮ ಜನ ಅದೇಕೆ ಹಾತೊರೆಯುವುರೋ ದೇವರೇ ಬಲ್ಲ” ಎಂದರಂತೆ. ಅದಕ್ಕೆ ಶಾಮಾಚಾರ್ಯರು  ನೀನೂ ಒಂದು ಸಲ ಕುಮಾರವ್ಯಾಸ ಭಾರತವನ್ನು ವಾಚನ ಮಾಡು ನೋಡೋಣ ಎಂದು ಸವಾಲು ಹಾಕಿದರಂತೆ. ಆಗ ಬಿಂದೂರಾಯರು ಕುಮಾರವ್ಯಾಸ ಭಾರತವನ್ನು ವಾಚನ ಮಾಡಲು ಪ್ರಯತ್ನಿಸಿ ಸೋತರಂತೆ. ತಕ್ಷಣದಲ್ಲಿ ತಮ್ಮ ಸೋಲನ್ನು  ಒಪ್ಪಿಕೊಂಡ ಬಿಂದುರಾಯರು ಒಂದು ತಿಂಗಳ ಅವಧಿಯನ್ನು ತೆಗೆದುಕೊಂಡು, ಕುಮಾರವ್ಯಾಸ ಭಾರತದ ‘ಕೀಚಕವಧೆ’ ಪ್ರಸಂಗವನ್ನು ಅಭ್ಯಾಸ ಮಾಡಿ, ಶಾಮಾಚಾರ್ಯರ ಮುಂದೆ ಹಾಡಿ ತೋರಿಸಿದರು. ಇವರ ಕಾವ್ಯವಾಚನವನ್ನು  ಆಲಿಸಿದ ಶಾಮಾಚಾರ್ಯರು, “ಬಿಂದೂರಾಯ, ನಿನಗೆ ಕುಮಾರವ್ಯಾಸ ಒಲಿದಿದ್ದಾನೆ. ಬಹಳ ಚೆನ್ನಾಗಿ ಓದಿದ್ದೀಯ. ನಿನ್ನ ಶಾರೀರ, ಶೈಲಿ, ಕುಮಾರವ್ಯಾಸ ಭಾರತಕ್ಕೆ ಒಗ್ಗಿ ಬರುತ್ತದೆ. ಅಭ್ಯಾಸ ಬಿಡಬೇಡ, ನಿನ್ನ ವಾಚನ ಕೇಳಿ ತುಂಬಾ ಸಂತೋಷಪಟ್ಟಿದ್ದೇನೆ” ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದರಂತೆ.

ಹೀಗೆ ಕುಮಾರವ್ಯಾಸನನ್ನು ಸವಾಲಿಗಾಗಿ ಹಾಡಲು ಹೋಗಿ, ಮೊದಲು ಸೋತ ಬಿಂದೂರಾಯರು ಸೋತು ಗೆದ್ದರು. ಮುಂದೆ ಅವರೆಂದೂ ಹಿಂದಿರುಗಿ ನೋಡಲಿಲ್ಲ. ಬಿಂದೂರಾಯರಲ್ಲಿ ಹುದುಗಿದ್ದ ಪ್ರತಿಭೆ ಹೊರಬರಲು ಈ ಪ್ರಸಂಗವೊಂದು ನೆಪವಾಯಿತು. ಅಂದಿನಿಂದ ಅವರ ಜೀವನ ಶೈಲಿಯೇ ಬದಲಾಯಿಸಿತು. ಇದು ನಡೆದದ್ದು ೧೯೦೨ರಲ್ಲಿ. ಅನಂತರ ಕುಮಾರವ್ಯಾಸ ಭಾರತದ ವಾಚನವನ್ನು ಶ್ರದ್ಧೆಯಿಂಧ ಮುಂದುವರಿಸಿದರು . ಅವರ ಕಲಿಕೆ ಸಾಂಪ್ರದಾಯಿಕವಾಗಿ ಗುರುಮುಖೇನ ಆಗಲಿಲ್ಲ. ಕಾವ್ಯವಾಚನಕ್ಕೆ ಪೂರಕವಾಗಿದ್ದ ಸಂಗೀತ ಜ್ಞಾನವೂ ಶಾಸ್ತ್ರೀಯ ಅಭ್ಯಾಸದಿಂದ ಬಂದುದಲ್ಲ. ಕೇಳುವಿಕೆಯಿಂದ ಬಂದ ಸಂಗೀತ-ಸಾಹಿತ್ಯದ ಸಂಸ್ಕಾರದ ಬಲವೇ ಇವರ ಕಾವ್ಯವಾಚನಕ್ಕೆ ತಳಹದಿ. ಈ ಹಿನ್ನೆಲೆಯಲ್ಲಿಯೇ ಭಾವಕ್ಕೆ ತಕ್ಕ ರಾಗ ಸಂಯೋಜಿಸಿ ಕುಮಾರವ್ಯಾಸವನ್ನು ಹಾಡುವ ಪ್ರಯತ್ನಕ ಮಾಡಿದರು. ಸತತ ಅಭ್ಯಾಸವನ್ನು ಕೈಗೊಂಡರು. ದಿನವೂ ಸಂಜೆ ತಂಬೂರಿ ಶ್ರುತಿಯಲ್ಲಿ ಕಂಚಿನ ಕಂಠದಲ್ಲಿ ಭಾರತವನ್ನು ಹಾಡುತ್ತಿದ್ದರೆ ದಾರಿಯಲ್ಲಿ ಹೋಗುವವರು ನಿಂತು ಆಲಿಸುತ್ತಿದ್ದರಂತೆ.

ಬಿಂದೂರಾಯರಿಗೆ ಸಾಹಿತ್ಯದ ಮಾರ್ಗದರ್ಶನ ನೀಡಿದವರು ಕನ್ನಡ ಸಾಹಿತ್ಯದ ದಿಗ್ಗಜಗಳೆನಿಸಿದ್ದ ಬಿ.ಎಂ.ಶ್ರೀ., ಎಂ.ಆರ್.ಶ್ರೀ., ಟಿ.ಎಸ್‌. ವೆಂಕಣ್ಣಯ್ಯ, ಮಾಸ್ತಿ, ಡಿ.ವಿ.ಜಿ. ಮೊದಲಾದವರು. ಇವರೆಲ್ಲ ಬಿಂದುರಾಯರ ಕಾವ್ಯವಾಚನದ ಶೈಲಿಯನ್ನು ಮೆಚ್ಚಿ, ನ್ಯೂನತೆಗಳನ್ನು ತಿದ್ದಿ, ಅವರ ವಾಚನ ಪರಿಷ್ಕಾರಗೊಳ್ಳುವಲ್ಲಿ ಸಹಕಾರ ನೀಡಿದರು. ಮಾಸ್ತಿಯವರು ಮೈಸೂರಿನಲ್ಲಿ ಸಬ್‌ಡಿವಿಜನ್‌ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಮಯ. ಅವರು ಕಛೇರಿಯ ತಮ್ಮ ಕೆಲಸ ಮುಗಿದ ತಕ್ಷಣ ನೇರವಾಗಿ ಬಿಂದುರಾಯರ ಮನೆಗೆ ಬಂದು ಕುಳಿತು, ‘ಕುಮಾರವ್ಯಾಸ ಭಾರತ’ ಕೇಳುವ ಪರಿಪಾಟ ದಿನನಿತ್ಯದ್ದು. ಅಲ್ಲದೆ ಮಾಸ್ತಿಯವರು ಪ್ರವಾಸ ಹೊರಟಾಗ ಬಿಂದುರಾಯರನ್ನು  ಕರೆದೊಯ್ಯುತ್ತಿದ್ದರಂತೆ. ಅವರಿಂದ ಇಡೀ ಭಾರತವನ್ನು  ಓದಿಸಿ, ಕೇಳಿ ಅನಂದಪಡುತ್ತಿದ್ದರಂತೆ. ವಾಚನದ ಮಧ್ಯೆಮಧ್ಯೆಯೆ ಸಾಹಿತ್ಯದ ಸೊಬಗನ್ನೂ, ಭಾಮಿನಿ ಷಟ್ಪದಿಯ ಕುಣಿತದ ವೈಖರಿಯನ್ನು ಪರಿಚಯಿಸಿ ಕೊಡುತ್ತಿದ್ದರಂತೆ. ರಾಗಗಳಲ್ಲಿರುವ ರಸಪ್ರತಿಪಾದನಾ ಶಕ್ತಿ, ಪದ್ಯದಲ್ಲಿ ಯಾವ ಮಾತಿಗೆ ಯಾವ ಪ್ರಾಶಸ್ತ್ಯಕೊಡಬೇಕು ಮೊದಲಾದ ವಿಚಾರಗಳನ್ನು ಬಿಂದೂರಾಯರೊಡನೆ ಚರ್ಚಿಸುತ್ತಿದ್ದರಂತೆ.

ಪೌರಾಣಿಕ ರತ್ನ ಶೇಷಾಚಾರ್ಯರು ಬಿಂದುರಾಯರ ಆಪ್ತವರ್ಗದಲ್ಲೊಬ್ಬರು. ಅವರಿಗೂ ಬಿಂದೂರಾಯರ ಭಾರತ ವಾಚನವೆಂದರೆ ಬಹಳ ಪ್ರೀತಿ. ಒಮ್ಮೆ ಇವರ ಭಾರತ ವಾಚನ ಕೇಳುತ್ತ ಶೇಷಾಚಾರ್ಯರು ಕಣ್ಣೀರು ಸುರಿಸುತ್ತಿದ್ದರಂತೆ. ಬಿಂದೂರಾಯರು, “ಸ್ವಾಮಿ, ಈ ಭಾರತದಲ್ಲಿ ಅಮತಹ ಮಹತ್ವದ್ದೇನಿದೆ” ಎಂದು ಕೇಳಿದರು. ಅದಕ್ಕೆ ಶೇಷಾಚಾರ್ಯರು. “ಕುಮಾರವ್ಯಾಸ ಮಹಾ ಶಾಸ್ತ್ರಜ್ಞ. ಶ್ರೀಮಧ್ವಾಚಾರ್ಯರ ಶಾಸ್ತ್ರಗಳನ್ನು, ಮೂಲಭಾರತವನ್ನು  ಅನ್ವಯಿಸಿ ಕನ್ನಡದಲ್ಲಿ ಭಾರತವನ್ನು ರಚಿಸಿದ ಮಹಾನುಭಾವನಪ್ಪ” ಎಂದರಂತೆ. ಕುಮಾರವ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾದರೆ ಪೂರಕ ಸಾಹಿತ್ಯ ಹಾಗೂ ಶಾಸ್ತ್ರಗಳ ಅಧ್ಯಯನ ಅಗತ್ಯ ಎಂದು ಮಾರ್ಗದರ್ಶನ ಮಾಡಿದರಂತೆ. ಅದರಂತೆ, ಸಂಸ್ಕೃತದ “ಮಹಾಭಾರತ”, ಶ್ರೀಮಧ್ವಾಚಾರ್ಯರ “ಮಹಾಭಾರತ ತಾತ್ಪರ್ಯ ನಿರ್ಣಯ”, ಜಗನ್ನಾಥದಾಸರ ಹರಿಕಥಾಮೃತಸಾರ, ಕನಕದಾಸರ ಹರಿಭಕ್ತಿಸಾರ, ಪುರಂದರದಾಸರ ಕೀರ್ತನೆಗಳು, ಭಗವದ್ಗೀತೆ ಮೊದಲಾದುದವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರು . ಪರಿಣಾಮವಾಗಿ ಕುಮಾರವ್ಯಾಸನ ಪ್ರತಿಯೊಂದು ಪದ್ಯವನ್ನು  ಶಾಸ್ತ್ರಾಧಾರಸಹಿತ ವಿವರಿಸುವ ವಿದ್ವತ್ತನ್ನು ಸಂಪಾದಿಸಿದರು. ಉತ್ತಮಶಾರೀರ, ಸಂಗೀತಜ್ಞಾನ, ಸಾಹಿತ್ಯ ಸಮೃದ್ಧಿ, ಶಾಸ್ತ್ರಜ್ಞಾನ ಎಲ್ಲವನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದುದರಿಂದಾಗಿ ಬಿಂದುರಾಯರು ಕುಮಾರವ್ಯಾಸ ಭಾರತ ವಾಚನದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ರೂಪಿಸಿಕೊಂಢರು. ಅನಂತರ ಭಾರತದ ಬಿಂದುರಾಯರೆಂದೇ ಪ್ರಸಿದ್ಧರಾದರು.

ಬಿಂದೂರಾಯರು ಕುಮಾರವ್ಯಾಸನ ಪದ್ಯಗಳಿಗೆ ರಾಗಗಳನ್ನು ಅಳವಡಿಸುತ್ತಿದ್ದ ರೀತಿ ವಿಶಿಷ್ಟವಂತೆ. ಭಾವಕ್ಕೆ ತಕ್ಕಂತ ರಾಗಗಳನ್ನು ಸಮಯ ಸ್ಪೂರ್ತಿಯಿಂದ ಜೋಡಿಸುವರು. ಅದನ್ನು ಹಾಡುವಗ ಸಂಗೀತವನ್ನು  ಪ್ರಾಧಾನ್ಯ ಮಾಡದೆ, ಆ ಸಾಹಿತ್ಯದ ಭಾವವನ್ನು ಎತ್ತಿ ಹಿಡಿಯಲು ಎಷ್ಟುಬೇಕೋ ಅಷ್ಟನ್ನು ಮಾತ್ರ ಬಳಸಿಕೊಂಡು ಕವಿಹೃದಯವನ್ನು ಸಮರ್ಥವಾಗಿ ಶ್ರೋತೃಗಳಿಗೆ ತಲುಪಿಸುತ್ತಿದ್ದರಂತೆ. ಇಂತಹ ವಾಚನ ಕೇಳುಗರ ಮೇಲೆ ಪರಿಣಾಮವನ್ನುಂಟುಮಾಡುತ್ತಿತ್ತು. ಭಾರತದ ನಾಯಕ ನಾಯಕಿಯರು ಶ್ರೋತೃಗಳ ಮುಂದೆ ಬಂದು ನಿಂತು ಜೀವಂತವಾಗಿ ತಮ್ಮ ಪಾತ್ರಗಳನ್ನು ಅಭಿನಯಿಸುತ್ತಿರುವರೇನೋ ಎಂಬ ಭ್ರಮೆಯನ್ನು ಉಂಟುಮಾಡುತ್ತಿದ್ದರಂತೆ. ಹೀಗೆ ಕವಿಹೃದಯವನ್ನು ಭಾವಪೂರ್ಣ ವಾಚನದ ಮೂಲಕವೇ ಸಹೃದಯನಿಗೆ ತಲುಪಿಸುವುದು ಗಮಕಿಗೆ ಸಾಧ್ಯವಾಗುವುದರ ಅದಕ್ಕೆ ವ್ಯಾಖ್ಯಾನದ ಅಗತ್ಯವೇನಿದೆ ಎಂಬುದು ಮೊದಮೊದಲು ಬಿಂದುರಾಯರ ಅಭಿಪ್ರಾಯವಾಗಿತ್ತು. ಅವರು ಕಾರ್ಯಕ್ರಮಗಳನ್ನು ನೀಡುತ್ತಾ, ಅನುಭವಗಳನ್ನು ಗ್ರಹಿಸುತ್ತಾ ಹೋದಂತೆಲ್ಲ ಸಾಹಿತ್ಯದ ಕೆಲವು ಸೂಕ್ಷ್ಮಗಳನ್ನು ವ್ಯಾಖ್ಯಾನದ ಮೂಲಕ ತಿಳಿಸುವ ಅಗತ್ಯವನ್ನು ಕಂಡುಕೊಂಡರು. ಮುಂದೆ, ಕುಮಾರವ್ಯಾಸನ ಹೃದಯವನ್ನು ಪ್ರವಚನ ರೂಪದಲ್ಲಿ ಅಂದರೆ ವಾಚನದ ಜೊತೆ ವ್ಯಾಖ್ಯಾನ ಸೇರಿಸಿ ಕಾರ್ಯಕ್ರಮ ನೀಡುವ ಪ್ರಯೋಗ ಮಾಡಿದರು. ಮೊದಲು ಹುಬ್ಬಳ್ಳಿಯಲ್ಲಿ ಈ ಪ್ರಯೋಗವನ್ನು ಮಾಡಿ ಅಪಾರವಾದ ಯಶಸ್ಸನ್ನು ಪಡೆದರು. ಅಲ್ಲಿಂದ ಮುಂದೆ ಕರ್ನಾಟಕದ ಉದ್ದಗಲಕ್ಕೂ ಕುಮಾರವ್ಯಾಸ ಭಾರತವನ್ನು  ಪ್ರವಚನದ ಮೂಲಕ ಜನಗಳಿಗೆ ತಲುಪಿಸುವ ಕಾರ್ಯ ಕೈಗೊಂಡರು.

ಇವರು ನೀಡಿದ ಭಾರತ ವಾಚನ ಕಾರ್ಯಕ್ರಮಗಳು ಸಾವಿರಾರು. ಇಂದಿನ ಹಾಗೆ, ಕಾವ್ಯದ ಯಾವುದೋ ಒಂದು ಭಾಗವನ್ನೊ ಅಥವಾ ಕೆಲವೇ ಪದ್ಯಗಳನ್ನೊ ಶ್ರೋತೃಗಳಿಗೆ ಮುಟ್ಟಿಸುವ ಜವಾಬ್ದಾರಿ ಅವರದಾಗಿರಲಿಲ್ಲ. ಒಮ್ಮೊಮ್ಮೆ ಕಾರ್ಯಕ್ರಮ ಪ್ರಾರಂಭವಾದರೆ ೩-೪ ತಿಂಗಳುಗಳು ಸಂಪೂರ್ಣ ಕಾವ್ಯ ಮುಗಿಯುವವರೆಗೆ ಜರುಗುತ್ತಿದ್ದವು. ಒಂದು ಕಾಲದಲ್ಲಿ ಆತ್ಮ ಸಂತೋಷಕ್ಕಾಗಿ ಕುಮಾರವ್ಯಾಸನ ಕಾವ್ಯ ಹಾಡಲು ಪ್ರಾರಂಭಿಸಿದ ಬಿಂದುರಾಯರು ಸಾರ್ವಜನಿಕ ವಲಯಕ್ಕೆ ತಾವಾಗಿ ಪ್ರವೇಶಿಸಲಿಲ್ಲ. ಆಸಕ್ತಿ ಇದ್ದವರು ಅವರ ವಾಚನವನ್ನು ಮನೆಗೆ ಬಂದೋ, ಹಾದಿಯಲ್ಲಿ ನಿಂತು ಆಲಿಸಿಯೋ ಆನಂದ ಪಡುತ್ತಿದ್ದರು. ತಿ.ತಾ.ಶರ್ಮರು ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ, ಅಲ್ಲಿನ ‘ಕರ್ನಾಟಕ ಸಂಘ’ದ ಕಾರ್ಯಕ್ರಮವೊಂದರಲ್ಲಿ ಬಿಂದೂರಾಯರ ಭಾರತವಾಚನವನ್ನು ಏರ್ಪಡಿಸಿದರು. ಮೊದಲಬಾರಿಗೆ ಇವರ ವಾಚನ ಕೇಳಿದ ಜನ ಆನಂದಪಟ್ಟರು. ಅನಂತರ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘ ಬಿಂದುರಾಯರ ಕಾವ್ಯವಾಚನವನ್ನು  ಏರ್ಪಡಿಸಿತು. ಈ ಸಭೆಗೆ ನಾಡಿನ ಗಣ್ಯರುಗಳಾದ ಕರ್ಪೂರ ಶ್ರೀನಿವಾಸರಾಯರು, ಎಸ್‌.ಜಿ. ಶಾಸ್ತ್ರಿಗಳು, ದಿವಾನ ಬಹದ್ದೂರ್ ಎಂ.ಎನ್‌. ಕೃಷ್ಣರಾಯರು ಮೊದಲಾದವರು ಸೇರಿದ್ದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಬಿಂದೂರಾಯರ ಪ್ರತಿಭೆಗೆ ಸ್ವರ್ಣಪದಕ ಹಾಗೂ ೫೦/- ರೂ.ಗಳ ಸಂಭಾವನೆಯನ್ನು ಕೊಟ್ಟು ಗೌರವಿಸಿದರು. ಹೀಗೆ ಪ್ರಾರಂಭವಾದ ಇವರ ಭಾರತವಾಚನ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯಿತು . ಗದಗು, ವಿಜಾಪುರ, ಹುಬ್ಬಳ್ಳಿ, ಬೆಂಗಳೂರು, ಬಾಗಲಕೋಟೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಕಾರ್ಯಕ್ರಮ ನೀಡಿ ಯಶಸ್ಸಿಯಾಗಿದ್ದಾರೆ. ಇವರ ಕಾರ್ಯಕ್ರಮ ಜರುಗುವ ಕಡೆಗಳಲ್ಲಿ ಸುತ್ತಮುತ್ತಲಿನ ಗ್ರಾಮದವರು ನೂರಾರು ಸಾವಿರಾರು ಸಂಖ್ಯೆಯಲ್ಲಿ ಗಾಡಿಯಲ್ಲಿ ಬಂದು, ಪ್ರವಚನ ಕೇಳಿ ಆನಂದಿಸುತ್ತಿದ್ದರಂತೆ. ಹುಬ್ಬಳ್ಳಿಯಲ್ಲಿ ನಡೆಸಿದ ಭಾರತ ಪ್ರವಚನಗಳ ದೈನಂದಿನ ವರದಿಯನ್ನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಮೂಲಕ ಓದಿ ಜನ ಆನಂದಿಸಿದ್ದಾರೆ. ಹುಬ್ಬಳ್ಳಿಯ ಕಾರ್ಯಕ್ರಮದ ಪ್ರವಚನಗಳು ಜನರ ಅಪೇಕ್ಷೆಯಂತೆ ‘ಭಾರತ ಸಾರೋದ್ಧಾರ’ ಎಂಬ ಹೆಸರಿನಿಂದ ಗ್ರಂಥ ರೂಪದಲ್ಲಿಯೂ ಪ್ರಕಟವಾಗಿ ಬಿಂದೂರಾಯರ ಕೊಡುಗೆ ಈ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿತು.

ಬಿಂದೂರಾಯರ ಕಾರ್ಯಕ್ರಮಗಳು ಇಷ್ಟೊಂದು ಯಶಸ್ವಿಯಾಗಲು ಮುಖ್ಯ ಕಾರಣ ಪ್ರತಿಭೆ, ವಿದ್ವತ್ತು, ಶಾರೀರ, ಇವುಗಳ ಜೊತೆ ಆ ಲಕಲೆಗೆ ಅವರು ತೋರಿಸುತ್ತಿದ್ದ ಅಪಾರ ನಿಷ್ಠೆ. ಇದಕ್ಕೆ ಒಂದು ನಿದರ್ಶನ ಸಂಸ್ಕೃತಿ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ಸಮಯಕ್ಕೆ ಅರ್ಧಗಂಟೆ ಮುಂಚಿತವಾಗಿ ಬಂದು, ನಿಷ್ಠೆಯಿಂದ ತಂಬೂರಿ ಶೃತಿ ಮಾಡಿಕೊಂಡು, ಸಮಯಕ್ಕೆ ಸರಿಯಾಗಿ ವಾಚನ ಪ್ರಾರಂಭ ಮಾಡಿಯೇ ಬಿಟ್ಟರಂತೆ. ಕಾರ್ಯಕ್ರಮ ಸಂಯೋಜಕರು ಇನ್ನೂ ಸಭೆ ಸೇರಿಯೇ ಇಲ್ಲವಲ್ಲ ಎಂದರೆ, ನೀವೇ ಸಭೆ ಕುಳಿತು ಕೇಳಿ ಎಂದು, ಅಲ್ಲಿದ್ದ ನಾಲ್ಕಾರು ಜನಕ್ಕೇ ಕಾರ್ಯಕ್ರಮ ಕೊಟ್ಟರಂತೆ. ಯಾವುದೇ ಕಾರ್ಯಕ್ರಮದಲ್ಲಿ ಸಮಯ ಪ್ರಜ್ಞೆಯಿಂದ, ನಿಷ್ಠೆಯಿಂದ, ಪ್ರತಿಫಲಾಪೇಕ್ಷೆಯನ್ನು  ಯಾವ ರೂಪದಲ್ಲಿಯೂ ಬಯಸದೆ ಬೆಳೆಸಿಕೊಂಡು ಬಂದ ನಿಷ್ಠೆಯೇ ಅವರ ಕಲೆಗೆಕ ಬೆನ್ನೆಲುಬು.

ಬಿಂದೂರಾಯರ ವ್ಯಕ್ತಿತ್ವೇ ವಿಶಿಷ್ಟ ರೀತಿಯದು. ಅವರಿಗೆ ಭಾರತ ವಾಚನದಲ್ಲಿ ಶ್ರದ್ಧೆ, ನಿಷ್ಠೆ ಬೆಳೆಯುತ್ತಾ ಹೋದಂತೆ, ಲೌಕಿಕ ಜೀವನಕ್ಕಾಗಿ ಆಶ್ರಯಿಸಿದ್ದ ಕೃಷ್ಣರಾಜೇಂದ್ರ ಮಿಲ್ಲಿನ ಹುದ್ದೆಗೂ ರಾಜೀನಾಮೆ ಕೊಟ್ಟರು. ನೌಕರಿ ಮಾಡುತ್ತಿದ್ದಾಗ, ಮೈಸೂರು ಸೀಮೆಯ, ಜರಿಪೇಠ ಪ್ಯಾಂಟಿನ, ದರ್ಪ ಸ್ವಭಾವದವರಾಗಿದ್ದರು. ಅನಂತರ ತಮ್ಮ ಪ್ರವೃತ್ತಿಗೆ ತಕ್ಕಂತೆ ವೇಷವನ್ನು ಬದಲಿಸಿಕೊಂಡರು. ಶುದ್ಧ ವೈದಿಕರಂತೆ ಮೀಸೆ ಬೋಳಿಸಿ, ಮುದ್ರೆ, ಗೋಪಿ ಚಂದನ, ಅಂಗಾರಕ್ಷತೆಗಳಿಂದ ಅಲಂಕೃತವಾಗಿ, ದೇಸೀ ಉಡುಗೆಯಲ್ಲಿ ಮೆರೆದರು. ನಾಡಿನುದ್ದಕ್ಕೂ ಕಲಾ ಸೇವೆಯನ್ನು ಕೈಗೊಂಡರು. ಎಂದು ಯಾರಿಗೂ ತಲೆಬಾಗಲಿಲ್ಲ. ಕಲೆಗೆ ಅನ್ಯಾಯ ಮಾಡಲಿಲ್ಲ. ಸಂಭಾವನೆಗಾಗಲೀ, ಕೀರ್ತಿಗಾಗಲೂ ಅಪೇಕ್ಷೆ ಪಡಲಿಲ್ಲ. ಕಲೆಯಲ್ಲಿ ತಲ್ಲೀನರಾದರು. ೯೨ರ ವಯಸ್ಸಿನಲ್ಲೂ ದೇಹಶ್ರಮವನ್ನು ಲೆಕ್ಕಿಸದೆ ಕಾರ್ಯಕ್ರಮ ನೀಡುತ್ತಿದ್ದರು. ಅವರ ಕೊನೆಯ ದಿನಗಳಲ್ಲಿ ಸಾಂಸಾರಿಕವಾದ ಅನೇಕ ಕಷ್ಟಗಳಿಗೆ ಸಿಲುಕಿದ್ದರೂ, ವಿಚಲಿತರಾಗದೆ ದೀಕ್ಷಾಬದ್ಧರಗಿ ಸಾಹಿತ್ಯ ಸೇವೆಯನ್ನು ಮಾಡಿದರು. ಸಂಸಾರದಲ್ಲಿ ಸುಖದ ದಿನಗಳನ್ನು ಕಳೆದಷ್ಟೇ ಸಂತೋಷವಾಗಿ ಕಷ್ಟದ ದಿನಗಳನ್ನೂ ಕಳೆದ ನಿಯತ್ತರು. ಅವರ ಬದುಕಿನಲ್ಲಿ ಊಟ-ತಿಂಡಿ, ಉಡಿಗೆ-ತೊಡಿಗೆ-ಕಲಾಸೇವೆ ಎಲ್ಲದರಲ್ಲೂ ಶಿಸ್ತು ಸಮಯಪ್ರಜ್ಞೆ ಇತ್ತು. ಸರಳಜೀವಿ, ಜೀವನ ನಿರ್ವಹಣೆಗಾಗಿ ಉದ್ಯೋಗ ಮಾಡುತ್ತಿದ್ದಾಗಲೂ ಖಂಡಿತವಾದಿ. ಗಂಧದ ಎಣ್ಣೆ ಕಾಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಿಂದುರಾಯರ ಕೈಕೆಳಗೆ ಬಂಗ್ಲೆ ಶಾಮರಾಯರು (ಚಿತ್ರನಟ-ನಿರ್ಮಾಪಕ ದ್ವಾರಕೀಶ್‌ ಅವರ ತಂದೆ) ನೌಕರರಾಗಿದ್ದರಂತೆ. ಶಾಮರಾಯರು ಒಂದು ದಿನ ಕೆಲಸಕ್ಕೆ ತಡವಾಗಿ ಬಂದುದಕ್ಕಾಗಿ ಬಿಂದೂರಾಯರು ಸ್ನೇಹಿತರಾದ ಶಾಮರಾಯರನ್ನೂ ವಿವರಣೆ ಕೇಳಿದರಂತೆ. ಕೊನಗೆ ಶಾಮರಾಯುರು ರಾಜೀನಾಮೆ ಸಲ್ಲಿಸಿದರಂತೆ. ಬಿಂದೂರಾಯರು ಕೆಲಸದ ವಿಷಯ ಬಂದಾಗ ಸ್ನೇಹವನ್ನೂ ಲೆಕ್ಕಿಸದೆ ಕರ್ತವ್ಯ ಪ್ರಜ್ಞೆ ತೋರಿದವರು. ಆದರೂ ಕೊನೆವರೆಗೂ ಇಬ್ಬರೂ ಆತ್ಮೀಯ ಸ್ನೇಹಿತರಾಗಿಯೆ ಉಳಿದರು.

ಬಿಂದುರಾಯರು ಮಾಡಿದ ಕಲಾ ಸೇವೆಯನ್ನು ಗುರುತಿಸಿ, ಅವರಿಗೆ ಹಲವಾರು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದ್ದಾರೆ. ಕರ್ನಾಟಕ ಸರ್ಕಾರ ೧೯೬೭ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ. ಸಾಹಿತ್ಯ ಪರಿಷತ್ತು ಮಾನಪತ್ರ ಅರ್ಪಿಸಿ, ಜೋಡಿ ಶಾಲಿನ ಸಮೇತ ಬಿಂದೂರಾಯರನ್ನು ಸನ್ಮಾನಿಸಿದೆ. ಮಕ್ಕಳ ಮಂಟಪ ಬಿಂದೂರಾಯರಿಗೆ ಗೌರವ ಸಮರ್ಪಣೆ ಮಾಡಿದೆ. ಬೊಂಬಾಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಗಮಕ ಗೋಷ್ಠಿಯ ಅಧ್ಯಕ್ಷತೆಯನ್ನು ಬಿಂದೂರಾಯರಿಗೆ ಕೊಡುವ ಮೂಲಕಕ ಅವರನ್ನು ಗೌರವಿಸಿದೆ. ದೊಡ್ಡ ದೊಡ್ಡ ಸಂಗೀತ ವಿದ್ವಾಂಸರುಗಳು ಇವರ ಕಾವ್ಯವಾಚನ ಕೇಳಿ ಮನದುಂಬಿ ಕೊಂಡಾಡಿದ್ದಾರೆ. ವೀಣೆ ಶೇಷಣ್ಣನವರು “ಸ್ವಾಮಿ ನಿಮ್ಮ ಕಲೆ ದೈವವನ್ನು ಪ್ರತ್ಯಕ್ಷೀಕರಿಸಿ ದರ್ಶನ ಮಾಡಿಸುತ್ತದೆ. ನಮ್ಮ ಸಂಗೀತ ಎಷ್ಟೆಂದರೂ ಬೆಡಗು ಕಲೆ” ಎನ್ನುತ್ತಾ ಸನ್ಮಾನಿಸಿದರಂತೆ. ಹೀಗೆ ಸಾಹಿತಿಗಳೂ, ಕಲಾವಿದರೂ, ನಾಡಿನ ಸಮಸ್ತ ಜನರು ಮನದುಂಬಿ ಮಿಡಿದ ಆನಂದ ಭಾಷ್ಪ ಅವರಿಗೆ ಸಂದ ಬಹು ದೊಡ್ಡ ಗೌರವ.

ಯಾವ ಗುರುಪರಂಪರೆಯಲ್ಲೂ ಬೆಳೆಯದ ಬಿಂದೂರಾಯರು ತಮ್ಮ ಶಿಷ್ಯರ ತಂಡವನ್ನು ಬೆಳೆಸುವ ಪ್ರಯತ್ನ ಮಾಡಲಿಲ್ಲ. ಆದರೆ ಅವರ ಕಲೆ ಶಾಶ್ವತವಾಗಿ ಉಳಿಯಲೆಂಬ ಸದುದ್ದೇಶದಿಂದ ಅವರ ಅಭಿಮಾನಿಗಳೂ, ಆಪ್ತರೂ ಆದ ಡಿ.ವಿ.ಜಿ.ಯವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಗಮಕ ತರಗತಿಗಳು ನಡೆಸುವ ಯೋಜನೆ ಕೈಗೊಂಡರು. ಅದರ ಆಚಾರ್ಯರಾಗಿ ಬಿಂದೂರಾಯರನ್ನು ಒತ್ತಾಯಪೂರ್ವಕ ನೇಮಿಸಿದರು. ೧೯೩೫ ರಿಂದ ಮೂರು ವರ್ಷಗಳ ಕಾಲ ನಿಷ್ಠೆಯಿಂದ ಶಿಷ್ಯರ ತಂಡ ಬೆಳೆಸಿದರು. ಅಂಥವರಲ್ಲಿ ಶ್ರೀಮತಿ ಶಕುಂತಲಾಬಾಯಿ ಪಾಂಡುರಂಗರಾವ್‌ ಅವರು ಬಿಂದೂರಾಯರ ಶೈಲಿಯನ್ನು ವಿಶೇಷವಾಗಿ ಅನುಸರಿಸಿದರು. ತಮ್ಮ ಶಿಷ್ಯರ ವಾಚನ ಶೈಲಿ, ಸಾಮರ್ಥ್ಯಗಳನ್ನು ಕಂಡು ಬಿಂದೂರಾಯರು ಅಭಿಮಾನದಿಂದ ಹರಸಿದ್ದಾರೆ. ಇವರು ಅವಕಾಶ ದೊರೆತಾಗಲೆಲ್ಲ ಕಾವ್ಯವಾಚನ ಕಲೆ ಹೇಗಿರಬೇಕೆಂಬ ಬಗ್ಗೆ ವಾಚನದ ಮೂಲಕ, ಲೇಖನಗಳು ಗ್ರಂಥಗಳು, ಪತ್ರಗಳ ಮೂಲಕ ಮತ್ತೆ ಮತ್ತೆ ಗಮಕಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಸದಾ ಅವರ ಮನಸ್ಸು ಗಮಕ ಕಲೆಯ ಅಭಿವೃದ್ಧಿಯ ಕಡೆಗೇ ತುಡಿಯುತ್ತಿತ್ತು. ೧೯೦೨ರಲ್ಲಿ ಕಾವ್ಯವಾಚನ ಪ್ರಾರಂಭಿಸಿದ ಅವರು ೧೯೬೮ವರೆಗೂ ಈ ಕ್ಷೇತ್ರದಲ್ಲಿ ಸತತವಾಗಿ ೬೬ ವರ್ಷಗಳ ಕಾಲ ಕಲೆಗಾಗಿ ನಿರಂತರ ದುಡಿದಿದ್ದಾರೆ. ಆದರೂ ಅವರ ಮನಸ್ಸಿಗೆ ದಣಿವಿರಲಿಲ್ಲ. ದೇಹ ಸೋತಿತ್ತು. ೯೩ ವರ್ಷಗಳ ತುಂಬು ಜೀವನ ನಡೆಸಿದ ಅವರು ಶತಾಯುಷಿಯಾಗಲೆಂಬ ಹೆಬ್ಬಯಕೆಕ ಕನ್ನಡ ಜನತೆಯದಾಗಿತ್ತು. ಆದರೆ ವಿಧಿ ಬಿಡಲಿಲ್ಲ. ೧೯೬೯ ಮಾರ್ಚಿ ೧೨ ರಂದು ಚಿತ್ರದುರ್ಗದಲ್ಲಿ ಅಸ್ತಮಿಸಿದರು. ಗಮಕ ಕಲಾಕ್ಷೇತ್ರದಲ್ಲಿ ಬಿಂದೂರಾಯರು ಸಿಂಧುವಾದರು.