ಅರಸುಗಲಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿ ಗುಣ
|
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ||

ಈ ಪದ್ಯ ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯಲ್ಲಿದೆ. ಕುಮಾರವ್ಯಾಸ ಭಾರತದ ತಿರುಳೇ ಈ ಪದ್ಯದಲ್ಲಿದೆ. ’ಕುಮಾರವ್ಯಾಸ’ನೆಂಬ ಕಾವ್ಯನಾಮದಿಂದ ಪ್ರಸಿದ್ಧನಾದ ನಾರಣಪ್ಪ ಗದುಗಿಗೆ ಸಮೀಪದಲ್ಲಿರುವ ಕೋಳೀವಾಡದವನು. ಗದುಗಿನ ವೀರನಾರಾಯಣಸ್ವಾಮಿಯ ಪರಮಭಕ್ತ. ಭಾರತದ ಕಥೆಯನ್ನು ’ಕರ್ನಾಟ ಭಾರತ ಕಥಾಮಂಜರಿ’ ಎಂಬ ಕಾವ್ಯದಲ್ಲಿ ತನ್ನದೇ ಆದ ರೀತಿಯಲ್ಲಿ ಹೇಳಿ  ಪ್ರಸಿದ್ಧನಾಗಿದ್ದಾನೆ. ನಾರಣಪ್ಪನ ಭಾರತವನ್ನು ಗದುಗಿನ ಭಾರತವೆಂದೂ ಕರೆಯುತ್ತಾರೆ.  ಕುಮಾರವ್ಯಾಸ ಭಾರತವೆಂದೂ ಬಹು ಪ್ರಸಿದ್ಧಿ. ನಾರಣಪ್ಪನ ಭಾರತಕ್ಕೆ ಮೂಲಾಧಾರ ಸಂಸ್ಕೃತದಲ್ಲಿರುವ ವ್ಯಾಸಭಾರತ. ಆದರೆ ಕುಮಾರವ್ಯಾಸ ಭಾರತ ಸಂಸ್ಕೃತ ಭಾರತದ ಪರಿಯಚ್ಚಲ್ಲ. ಕವಿಯ ಸ್ವಂತ ಪ್ರತಿಭೆ ಬೇಕಾದಷ್ಟಿದೆ. ಹದಿನೈದನೆ ಶತಮಾನದ ಸುಮಾರಿನಲ್ಲಿ ಕುಮಾರವ್ಯಾಸ ಭಾರತ ರಚಿತವಾಗಿರಬಹುದು. ಆದರೂ ಅದು ಇವೊತ್ತಿಗೂ ಜನಪ್ರಿಯವಾಗಿದೆ. ಕುಮಾರವ್ಯಾಸ ಭಾರತದ ಜನಪ್ರಿಯತೆಗೆ ಕಾರಣ ನಮ್ಮ ಗಮಕಿಗಳು.

ಕುಮಾರವ್ಯಾಸ ಭಾರತವನ್ನು ಕನ್ನಡನಾಡಿನಲ್ಲಿ ಜನಪ್ರಿಯಗೊಳಿಸಿದ ಗಮಕಿಗಳಲ್ಲಿ ಬಿಂದೂರಾಯರು ಬಹು ಪ್ರಸಿದ್ಧರು. ಅವರು ಕನ್ನಡನಾಡಿನ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಹಳ್ಳಿಗಳವರೆಗೂ ಸಂಚಾರ ಮಾಡಿ, ಪಂಡಿತರಿಂದ ಹಿಡಿದು ಪಾಮರರವರೆಗೂ ಭಕ್ತಿಶ್ರದ್ಧೆಗಳಿಂದ ಕುಮಾರವ್ಯಾಸ ಭಾರತವನ್ನು ಕೇಳುವಂತೆ ಸಮಸ್ತರ ಮನಗಳನ್ನು ಒಲಿಸಿಕೊಂಡರು. ಬಿಂದೂರಾಯರ ಭಾರತವಾಚನವನ್ನು ನಮ್ಮ ಜನ ಬಹಳ ಮೆಚ್ಚಿಕೊಂಡರು. ಅವರನ್ನು ’ಭಾರತದ ಬಿಂದೂರಾಯ’ ರೆಂದೇ ಪ್ರೀತಿ ವಿಶ್ವಾಸಗಳಿಂದ ಕರೆದು ಗೌರವವನ್ನು ಸೂಚಿಸಿದರು.

ಗಮಕಿ ಶ್ಯಾಮಾಚಾರ್ಯರು

ಬಿಂದೂರಾಯರು ತಾವಾಗಿ ಗಮಕಿಗಳಾಗಬೇಕೆಂದು ಬಯಸಿದವರಲ್ಲ. ಕುಮಾರವ್ಯಾಸನಾಗಲಿ, ಅವನ ಭಾರತವಾಗಲಿ ಮಹಾಶ್ರೇಷ್ಠವೆಂದು ಅವರು ಭಾವಿಸಿಯೂ ಇರಲಿಲ್ಲ. ಕುಮಾರವ್ಯಾಸನ ಪದ್ಯಗಳನ್ನು ಅವರು ’ಅರಲ್ಹಿಟ್ಟಿನ ಪದ್ಯ’ಗಳೆಂದು ಗೇಲಿ ಮಾಡುತ್ತಿದ್ದರು. ಹೀಗೆ ಗೇಲಿ ಮಾಡುತ್ತಿದ್ದ ಬಿಂದೂರಾಯರು ಕುಮಾರವ್ಯಾಸನ ಪರಮ ಭಕ್ತರಾದರಲ್ಲ! ಕುಮಾರವ್ಯಾಸ ಭಾರತ ವಾಚನ ಮಾಡಿ ಕನ್ನಡನಾಡಿನ ರಸಿಕರಿಂದ ’ಭಾರತದ ಬಿಂದೂರಾಯರು’ ಎನ್ನಿಸಿಕೊಂಡರಲ್ಲ! ಅದು ಪರಮ ಆಶ್ಚರ್ಯ.

ಬಿಂದೂರಾಯರು ಯುವಕರಾಗಿದ್ದ ಕಾಲದಲ್ಲಿ ಹೊಸ ದುರ್ಗದ ಶ್ಯಾಮಾಚಾರ್ಯರು ಕಾವ್ಯವಾಚನದಲ್ಲಿ ಪ್ರವೀಣ ರಾಗಿದ್ದರು. ಸುಪ್ರಸಿದ್ಧ ಗಮಕಿಗಳೆಂದು ಜನಪ್ರಿಯರಾಗಿದ್ದರು. ಬಿಂದೂರಾಯರು ಮತ್ತು ಶ್ಯಾಮಾಚಾರ್ಯರು ಆಪ್ತಗೆಳೆಯರು. ಅವರು ಬಿಂದೂರಾಯರಿಗಿಂತ ವಯಸ್ಸಿನಲ್ಲಿ ಮೂವತ್ತು ವರ್ಷಗಳಷ್ಟು ಹಿರಿಯರು. ಆದರೂ ಈ ಗೆಳೆಯರು ಒಬ್ಬರನ್ನು ಒಬ್ಬರು ’ಹೋಗು, ಬಾ’ ಎನ್ನುವಷ್ಟು ಸಲಿಗೆಯಿಂದ ನಡೆದುಕೊಳ್ಳುತ್ತಿದ್ದರು. ಶ್ಯಾಮಾಚಾರ್ಯರು ಜೋಡೀದಾರರಾಗಿದ್ದರು. ಕಂಟ್ರಾಕ್ಟರ‍್ ಕೆಲಸ ಮಾಡುತ್ತಿದ್ದರು. ಶ್ಯಾಮಾಚಾರ್ಯರಿಗೆ ಕಾವ್ಯವಾಛನ ಮಾಡುವುದು ಒಂದು ಹವ್ಯಾಸ. ಅವರದು ಕಂಚಿನ ಕಂಠ. ಕುಮಾರವ್ಯಾಸ ಭಾರತ, ಲಕ್ಷ್ಮೀಶನ ಜೈಮಿನೀ ಭಾರತ, ಷಡಕ್ಷರಿಯ ರಾಜ ಶೇಖರವಿಲಾಸ ಇಂಥ ಮಹಾಕಾವ್ಯಗಳನ್ನು ಓದುವುದರಲ್ಲಿ ಮಹಾ ಪ್ರಭಾವಶಾಲಿಗಳು. ಶ್ಯಾಮಾಚಾರ‍್ಯರ ಕುಮಾರ ವ್ಯಾಸ ಭಾರತವಾಚನವೆಂದರೆ ಜನ ಜಾತ್ರೆಗೆ ಸೇರಿದಂತೆ ಸೇರುತ್ತಿದ್ದರು. ಬಿಂದೂರಾಯರಿಗೆ ಕುಮಾರವ್ಯಾಸನ ಅರಳ್ಹಿಟ್ಟಿನ ಪದ್ಯಗಳನ್ನು ಶಾಮಾಚಾರಿ ಓದಿದರೆ ಸಂತೆಯಂತೆ  ಜನ ಸೇರುತ್ತಾರಲ್ಲ! ನಮ್ಮ ಜನ ಎಂಥ ಹುಂಬರು! ಎಂದು ತಾತ್ಸಾರ. ಅವರು ಯಾವ ದಾಕ್ಷಿಣ್ಯವೂ ಇಲ್ಲದೆ ತಮಗೆ ತೋರಿದುದನ್ನು ಸ್ಪಷ್ಟಪಡಿಸುವುದರಲ್ಲಿ ನಿಸ್ಸೀಮರು.

’ಮೂವತ್ತು ದಿನಗಳಲ್ಲಿ ಓದುತ್ತೇನೆ’

ಸ್ವಲ್ಪ ಓದಿ ತೋರಿಸಪ್ಪ

ಬಿಂದೂರಾಯರು ಒಂದು ದಿನ ’ನಿನ್ನ ಭಾರತವಾಚನವೆಂದರೆ ನಮ್ಮ ಜನ ಹಾತೊರೆಯುತ್ತಾರೆ. ಕುಮಾರವ್ಯಾಸನ ಅರಳ್ಹಿಟ್ಟಿನ ಪದ್ಯಗಳಲ್ಲಿ ಜನ ಮರುಳಾಗುವಂಥ ಆಕರ್ಷಣೆ ಏನಿದೆಯೋ ನಾನು ಬೇರೆ ಕಾಣೆ’ ಎಂದರು. ಶ್ಯಾಮಾ ಚಾರ್ಯರು ಅದಕ್ಕೆ ಉತ್ತರ ಕೊಟ್ಟರು. ’ಬಿಂದೂರಾಯ, ನಾನು ಕುಮಾರ ವ್ಯಾಸಭಾರತ ವಾಚನಕ್ಕೆ ಮೂವತ್ತು ವರ್ಷಗಳಿಂದ ಜೀವ ತೇಯುತ್ತಿದ್ದೇನೆ. ಆದರೂ ಕುಮಾರವ್ಯಾಸ ನನ್ನ ಕೈಗೆ ಎಟುಕಿಲ್ಲ. ನೀನು ಅವನ ಪದ್ಯಗಳನ್ನು ಅರಳ್ಹಿಟ್ಟಿನ ಪದ್ಯಗಳೆಂದು ಮೂಗುಮುರಿಯುತ್ತಿ’.

ಬಿಂದೂರಾಯರು ಶ್ಯಾಮಾಚಾರ್ಯರಿಗೆ ತಟ್ಟನೆ ಪ್ರತ್ಯುತ್ತರ ಕೊಟ್ಟರು. ’ಶ್ಯಾಮಾಚಾರಿ, ಅದರಲ್ಲೇನಿದೆ ಮಹಾ! ಮೂವತ್ತು ವರ್ಷಗಳಿಂದ ಕುಮಾರವ್ಯಾಸನೊಡನೆ ಗುದ್ದಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದೀಯ. ಅದೇನು ಸಂಸ್ಕೃತದ ಮಹಾ ಗ್ರಂಥವೇ ಗುದ್ದಾಡುವುದಕ್ಕೆ?’

ಶ್ಯಾಮಾಚಾರ್ಯರು ಕುಮಾರವ್ಯಾಸ ಭಾರತವನ್ನು ಬಿಂದೂರಾಯರ ಮುಂದಿಟ್ಟು ’ಬಿಂದೂರಾಯ, ಕುಮಾರ ವ್ಯಾಸನ ಅರಳ್ಹಿಟ್ಟಿನ ಪದ್ಯಗಳನ್ನು ಈಗ ಸ್ವಲ್ಪ ಓದಿ ತೋರಿಸಪ್ಪ. ಕೇಳಿ ಸಂತೋಷಪಡುತ್ತೇನೆ’ ಎಂದರು

ಬಿಂದೂರಾಯರು ಕೂಡಲೇ ಶ್ಯಾಮಾಚಾರ್ಯರ ಸವಾಲನ್ನು ಸ್ವೀಕರಿಸಿದರು. ಕುಮಾರವ್ಯಾಸ ಭಾರತವನ್ನು ತೆಗೆದುಕೊಂಡು ಪುಟಗಳನ್ನು ಒಂದೊಂದಾಗಿ ತಿರುವಿ ಹಾಕಿದರು. ಯಾವ ಪದ್ಯಗಳನ್ನು ಅರಳ್ಹಿಟ್ಟಿನ ಪದ್ಯಗಳೆಂದು ಹಾಸ್ಯಮಾಡಿ ಗೇಲಿಮಾಡಿದ್ದರೋ ಆ ಪದ್ಯಗಳು ಕಬ್ಬಿಣದ ಕಡಲೆಗಳಷ್ಟು ಕಠಿಣವಾಗಿ ತೋರಿದವು. ಏನು ಓದುವುದು? ಅಭಿಮಾನ ಭಂಗವಾಯಿತು. ಮುಖತಗ್ಗಿಸಿ ಮೌನವಾಗಿ ಕುಳಿತರು. ಶ್ಯಾಮಾಚಾರ್ಯರೇ ಮೌನ ಮುರಿದರು, ’ಬಿಂದೂರಾಯ, ಕುಮಾರವ್ಯಾಸ ಸಾಮಾನ್ಯನಲ್ಲ, ಮಹಾಕವಿ, ವರಕವಿ ಮಹಾನುಭಾವ’.

ಬಿಂದೂರಾಯರು ಪ್ರತ್ಯುತ್ತರ ಕೊಟ್ಟರು. ’ಶ್ಯಾಮಾಚಾರಿ, ಸದ್ಯಕ್ಕೆ ನಾನು ಸೋತೆ. ಆದರೆ ನಾನು ನಿನಗೆ ಕುಮಾರವ್ಯಾಸನನ್ನು ಓದಿ ತೋರಿಸುತ್ತೇನೆ. ನೀನು ಕುಮಾರವ್ಯಾಸ ಭಾರತವನ್ನು ಮೂವತ್ತು ವರ್ಷಗಳಿಂದ ಓದುತ್ತಿದ್ದೀಯ. ನಾನು ಇನ್ನು ಮೂವತ್ತು ದಿವಸಗಳಲ್ಲಿ ಪೂರ್ತಿ ಒಂದು ಸಂಧಿಯನ್ನು ಓದದಿದ್ದರೆ ಆಗ ಕೇಳು’.

ಶ್ಯಾಮಾಚಾರ್ಯರು ಬಿಂದೂರಾಯರ ಸವಾಲನ್ನು ಒಪ್ಪಿಕೊಂಡರು.

ಕುಮಾರವ್ಯಾಸ
ನಿನಗೆ ಒಲಿದಿದ್ದಾನೆ

ಬಿಂದೂರಾಯರು ಅಂದಿನಿಂದಲೇ ಕುಮಾರವ್ಯಾಸ ಭಾರತವನ್ನು ಓದಲು ಪ್ರಾರಂಭಿಸಿದರು. ಅಭ್ಯಾಸಕ್ಕೆ ’ಕೀಚಕವಧಾ’ ಪ್ರಕರಣವನ್ನು ಆರಿಸಿಕೊಂಡರು. ಕುಮಾರವ್ಯಾಸ ಭಾರತದಲ್ಲಿ ’ಕೀಚಕವಧಾ’ ಕಥಾ ಭಾಗ ಬಹಳ ಸ್ವಾರಸ್ಯವಾಗಿದೆ. ದ್ರೌಪದಿಯನ್ನು ಕಿಡಿಗೇಡಿ ಕೀಚಕ ಛೇಡಿಸುತ್ತಾನೆ. ದ್ರೌಪದಿ ಭೀಮಸೇನನನ್ನು ಮೊರೆ ಹೋಗುತ್ತಾಳೆ. ಅವನಿಗೆ ಕೀಚಕನ ದುಷ್ಟತನವನ್ನು ಮಟ್ಟಹಾಕುವಂತೆ ಅವನಲ್ಲಿ ವೀರಾವೇಶ ಹುಟ್ಟಿಸುತ್ತಾಳೆ. ಭೀಮನಿಗೆ ದ್ರೌಪದಿಯ ಗೋಳಿನ ಕರೆ ಕೇಳಿ ಕರುಣವುಂಟಾಗುತ್ತದೆ. ಕೋಪದಿಂದ ಭುಗಿಲೇಳುತ್ತಾನೆ. ದ್ರೌಪದಿಯಂತೆ ವೇಷಮರೆಸಿಕೊಂಡು ಗರಡಿ ಮನೆ ಸೇರುತ್ತಾನೆ. ಕೀಚಕ ದ್ರೌಪದಿಗಾಗಿ ಅಲ್ಲಿಗೆ ಬರುತ್ತಾನೆ. ಕೀಚಕ ಭೀಮರಿಬ್ಬರೂ ಮಲಯುದ್ದ ಮಾಡುತ್ತಾರೆ. ಭೀಮನ ಕೈಗೆ ಕೀಚಕ ಸಿಕ್ಕಿ ಮಾಂಸದ ಮುದ್ದೆಯಾಗಿ ಪ್ರಾಣ ಬಿಡುತ್ತಾನೆ.

ಬಿಂದೂರಾಯರು ಹಗಲು ರಾತ್ರಿಯೆನ್ನದೆ ದೃಢ ಮನಸ್ಸಿನಿಂದ ’ಕೀಚಕವಧಾ’ ಭಾಗದ ಅಭ್ಯಾಸಕ್ಕೆ ತೊಡಗಿದರು. ಅವರದು ಕಂಚಿನ ಕಂಠ. ಶ್ಯಾಮಾಚಾರ್ಯರ ಕಾವ್ಯವಾಚನವನ್ನು ಕೇಳಿದ ಅನುಭವ. ಸ್ವಲ್ಪ ಸಂಸ್ಕೃತಾಭ್ಯಾಸವೂ ಆಗಿತ್ತು. ಹಿಡಿದ ಕೆಲಸವನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹಟ. ಆದುದರಿಂದ ಬಿಂದೂರಾಯರು ಮೂವತ್ತು ದಿವಸಗಳಲ್ಲಿ ’ಕೀಚಕವಧಾ’ ಕಥಾಭಾಗ ಸಂಧಿಯನ್ನು ತಮ್ಮ ಸ್ವಾಧೀನ ಮಾಡಿಕೊಂಡರು.

ಮೂವತ್ತು ದಿವಸಗಳಿಗೆ ಸರಿಯಾಗಿ ಶ್ಯಾಮಾಚಾರ್ಯರು ಬಿಂದೂರಾಯರ ಮನೆಗೆ ಬಂದರು. ಊಟ ಉಪಚಾರಗಳಾದ ಮೇಲೆ ಬಿಂದೂರಾಯರು ಕುಮಾರವ್ಯಾಸ ಭಾರತವನ್ನು ಕೈಗೆ ತೆಗೆದುಕೊಂಡು ಕೀಚಕವಧಾ ಕಥಾಭಾಗವನ್ನು ಓದಲು ಪ್ರಾರಂಭಿಸಿದರು. ಕಂಚಿನ ಕಂಠ ಮೊಳಗಿತು. ಅರ್ಥಭಾವಗಳಿಗೆ ತಕ್ಕಂತೆ ರಾಗ ಹೊಮ್ಮಿತು. ಪದಗಳ ಉಚ್ಛಾರಣೆ ಸ್ಪಷ್ಟವಾಗಿತ್ತು. ಶ್ಯಾಮಾಚಾರ್ಯರು ಬೆರಗಾಗಿ ಗೆಳೆಯನ ಕಾವ್ಯವಾಚನ ಕೇಳಿ ಆನಂದದಿಂದ ಮೈಮರೆತು ಹೋದರು. ಗೆಳೆಯನನ್ನು ತಬ್ಬಿಕೊಂಡು ’ಬಿಂದೂರಾಯ, ಕುಮಾರವ್ಯಾಸ ನಿನಗೆ ಒಲಿದಿದ್ದಾನೆ. ಭಾರತವಾಚನವನ್ನು ಕೈಬಿಡಬೇಡ. ಗಮಕಕಲೆಯನ್ನು ಸಾಧಿಸಿಕೊ’ ಎಂದು ಉತ್ತೇಜನ ಕೊಟ್ಟರು.

ಆದರೇನು! ಬಿಂದುರಾಯರ ಮನಸ್ಸು ಇನ್ನೂ ಉಯ್ಯಾಲೆಯಂತೆ ತೂಗಾಡುತ್ತಲೇ ಇತ್ತು ಗಮಕಿಯಾಗುವುದಕ್ಕೆ.

ಗಮನವಿಟ್ಟು
ಕೇಳುವ ಕಲೆ

ಬಿಂದೂರಾಯರ ಮನೆತನದ ಹುಟ್ಟೂರು ಸಂತೇ ಬೆನ್ನೂರು. ಅವರ ಹಿರಿಯರ  ಇತಿಹಾಸ ಮಸುಕು ಮಸುಕಾಗಿದೆ. ಮುತ್ತಾತನ ಕಾಲಕ್ಕೆ ಚಿತ್ರದುರ್ಗಕ್ಕೆ ಬಂದಂತೆ ತೋರುತ್ತದೆ. ಅವರು ಪತ್ರ ವ್ಯವಹಾರದಲ್ಲಿ ತಮ್ಮ ಹೆಸರನ್ನು ಸಂ.ಗೋ. ಬಿಂದೂರಾಯರೆಂದೇ ಬಳಸುತ್ತಿದ್ದರು. ’ಸಂ’ಎಂದರೆ ಸಂತೇಬೆನ್ನೂರು. ’ಗೋ’ ಎಂದರೆ ಗೋವಿಂದರಾಯರು. ಬಿಂದೂರಾಯರು ಗೋವಿಂದರಾವ್, ರಮಾಬಾಯಿ ದಂಪತಿಗಳಿಗೆ ಹಿರಿಯ ಮಗನಾಗಿ ತಳಕು ಗ್ರಾಮದಲ್ಲಿ ೧೮೭೭ನೆಯ ವರ್ಷದ ಜನವರಿ ೨೪ ರಂದು ಹುಟ್ಟಿದರು. ತಳಕು ಒಂದು ಸಣ್ಣ ಹಳ್ಳಿ. ಬಿಂದೂರಾಯರ ತಂದೆ ಗೋವಿಂದರಾಯರು ಸಾಮಾನ್ಯವಾಗಿ ಓದು ಬರಹ ಕಲಿತಿದ್ದರು. ತಾಯಿ ರಮಾಬಾಯಿ ಸಂಸಾರ ತೂಗುವಷ್ಟು ಮಟ್ಟಿನ ಜಾಣೆ. ಆದರೆ ಬಿಂದೂರಾಯರಿಗೆ ಗಮನವಿಟ್ಟು ಕೇಳುವ ಕಲೆ ಬಾಲ್ಯದಿಂದಲೇ ರಕ್ತಗತವಾಗಿತ್ತು. ಅದೇ ಅವರನ್ನು ಶ್ರೇಷ್ಠ ಗಮಕಿಯನ್ನಾಗಿ ಮಾಡುವುದಕ್ಕೆ ಕಾರಣವಾಯಿತೆಂದು ತೋರುತ್ತದೆ. ಕೊಯಮತ್ತೂರು ಕೃಷ್ಣರಾಯರೆಂಬುವರು ಸಾಕಷ್ಟು ಹೆಸರು ಮಾಡಿದ್ದ ಸಂಗೀತ ವಿದ್ವಾಂಸರು. ಅವರು ಬಿಂದೂರಾಯರ ನೆರೆಮನೆಯವರಾಗಿದ್ದಿರಬೇಕು. ಅವರ ಮನೆಯೇ ಒಂದು ಸಂಗೀತ ಪಾಠಶಾಲೆಯಾಗಿತ್ತು. ಕೃಷ್ಣರಾಯರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದ ಸಂಗೀತ ಪಾಠವನ್ನು ಬಾಲಕ ಬಿಂದೂರಾಯ ಗಮನವಿಟ್ಟು ಕಿವಿಗೊಟ್ಟು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ. ಮನಸ್ಸಿನಲ್ಲೇ ಸಂಗೀತಕಲೆಯ ಗುಟ್ಟನ್ನು ಸೆರೆಹಿಡಿಯುತ್ತಿದ್ದ. ಬೇಲೂರು ವೆಂಕಟಸುಬ್ಬದಾಸರು ಎಂಬುವರು ಪ್ರಸಿದ್ಧ ಹರಿಕಥಾ ವಿದ್ವಾಂಸರು. ಅವರು ಚಿತ್ರದುರ್ಗಕ್ಕೆ ಪದೇ ಪದೇ ಬಂದು ಹರಿಕಥೆ ಮಾಡುತ್ತಿದ್ದರು. ಬಾಲಕ ಬಿಂದೂರಾಯ ವೆಂಕಟಸುಬ್ಬದಾಸರ ಹರಿಕಥೆಗಳನ್ನು ತಪ್ಪದೆ ಕೇಳುತ್ತಿದ್ದ ಅವರು ತಮ್ಮ ಕಥೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದ ದೇವರನಾಮಗಳು, ಕುಮಾರವ್ಯಾಸ, ಲಕ್ಷ್ಮೀಶ, ಜಗನ್ನಾಥ ದಾಸರ ಪದ್ಯಗಳು, ಬಾಲಕ ಬಿಂದೂರಾಯನ ಎಳೆಯ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು. ಬಿಂದೂರಾಯರು ಭಾರತ ವಾಚನದಲ್ಲಿ ಸಂದರ್ಭೋಚಿತವಾಗಿ ದೇವರನಾಮಗಳನ್ನು ಜಗನ್ನಾಥದಾಸರ ಹರಿಕಥಾಮೃತ ಸಾರದ ಪದ್ಯಗಳನ್ನು ಧಾರಾಳವಾಗಿ ಬಳಸುತ್ತಿದ್ದರು.

ಬಾಲಕನಿಗೆ ಕಂಚಿನ ಕಂಠ ದೈವದತ್ತವಾದ ವರವಾಗಿತ್ತು. ಮುಂದೆ ನಾಟಕ ಶಿರೋಮಣಿ ಎಂದು ಕೀರ್ತಿಗಳಿಸಿದ ಎ.ವಿ. ವರದಾಚಾರ್ಯರು ಹುಟ್ಟು ಸಂಗೀತಗಾರರು. ಅವರು ಬಿಂದೂರಾಯರ ಬಾಲ್ಯಸ್ನೇಹಿತ. ಅವರೂ ಚಿತ್ರದುರ್ಗದವರೇ. ನಿತ್ಯವೂ ಅವರು ಶಿರಸ್ತೇದಾರ‍್ ಅಣ್ಣಗೇರಿ ಕೃಷ್ಣರಾಯರ ಮನೆಗೆ ಹೋಗಿ, ಅವರಲ್ಲಿದ್ದ ತಂಬೂರಿಯನ್ನು ಶ್ರುತಿಮಾಡಿ ತಮಗೆ ತೋಚಿದಂತೆ ಹಾಡುತ್ತಿದ್ದರು. ಆ ಸಮಯಗಳಲ್ಲಿ ಬಾಲಕ ಬಿಂದೂರಾಯನೂ ಅಲ್ಲಿರುತ್ತಿದ್ದ. ಗೋವಿಂದರಾಯರು ಶಿರಸ್ತೇದಾರರ ಮನೆಗೆ ಆಗಾಗ ಹೋಗುತ್ತಿದ್ದರು. ಬಾಲಕ ಬಿಂದೂರಾಯ ತಂದೆಯ ಜೊತೆಗೆ ಶಿರಸ್ತೇದಾರರ ಮನೆಗೆ ಹೋಗುತ್ತಿದ್ದ.  ಬಿಂದೂರಾಯ ದೊಡ್ಡವರಾಗಿ ಮೈಸೂರಿಗೆ ಸರಕಾರಿ ಉದ್ಯೋಗಸ್ಥರಾಗಿ ಬಂದರಲ್ಲ! ಆಗ ಗಾನವಿಶಾರದ ಬಿಡಾರಂ ಕೃಷ್ಣಪ್ಪ, ಸಂಗೀತಶಾಸ್ತ್ರರತ್ನ ವಾಸುದೇವಾಚಾರ ಮೊದಲಾದ ಘಟಾನುಘಟಿ ಸಂಗೀತ ವಿದ್ವಾಂಸರುಗಳ ಸಂಗೀತ ಕಛೇರಿಗಳನ್ನು ಕೇಳುವ ಅವಕಾಶ ದೊರೆಯಿತು. ಎ.ವಿ. ವರದಾಚಾರ್ಯರು ಬಾಲ್ಯ ಸ್ನೇಹಿತರಾಗಿದ್ದುದರಿಂದ ಅವರ ನಾಟಕಗಳನ್ನು ತಪ್ಪದೆ ನೋಡುತ್ತಿದ್ದರು. ವರದಾಚಾರ್ಯರು ಹಾಡುತ್ತಿದ್ದ ಕಂದಗಳು, ವೃತ್ತಗಳು ಅರ್ಥಭಾವಗಳಿಂದ ಕೂಡಿ ಸ್ವಾರಸ್ಯವಾಗಿರುತ್ತಿದ್ದವು. ಅವುಗಳಿಗೆ ಉಪಯೋಗಿಸುತ್ತಿದ್ದ ಗಮಕ ಅದ್ಭುತವಾಗಿರುತ್ತಿತ್ತು. ಬಿಂದೂರಾಯರ ಚುರುಕು ಕಿವಿಗಳು ಈ ಮಹನೀಯರುಗಳ ಸಂಗೀತ, ಗಮಕಗಳನ್ನು ಕೇಳಿ ಸಂಸ್ಕಾರ ಪಡೆದವು. ಬಿಂದೂರಾಯರು ಗಮಕಿಗಳಾದಾಗ ತಮ್ಮ  ಕಾವ್ಯ ವಾಚನದಲ್ಲಿ, ತಾವು ’ಕೇಳ್ಮೆ’ಯಿಂದ ಕಲಿತ ಎಲ್ಲ ಪಟ್ಟುಗಳನ್ನು ಉಪಯೋಗಿಸಿಕೊಂಡರು. ಬಿಂದೂರಾಯರ ವಾಚನದಲ್ಲಿ ಸಾಹಿತ್ಯ ಪ್ರಧಾನವಾಗಿತ್ತು. ಸಂಗೀತ ಹಿತಮಿತವಾಗಿತ್ತು. ಪದಗಳ ಉಚ್ಛಾರ ಸ್ಪಷ್ಟ ಹಾಗೂ ಶುದ್ಧವಾಗಿರುತ್ತಿತ್ತು. ಪದ್ಯಪದ್ಯಕ್ಕೆ ರಾಗ ಬದಲಾಯಿಸುವ ಪದ್ಧತಿ ಅವರಿಗಿರಲಿಲ್ಲ. ಹತ್ತು ಇಪ್ಪತ್ತು ಪದ್ಯಗಳನ್ನು ಒಂದೇ ರಾಗದಲ್ಲಿ ಓದುತ್ತಿದ್ದರು. ಆದರೆ ಭಾವಕ್ಕೆ ತಕ್ಕ ಹಾಗೆ ರಾಗ ಪೋಷಣೆ ಮಾಡುವ ಗುಟ್ಟು ಅವರಿಗೆ ಸಿದ್ಧಿಸಿತ್ತು. ಇದೇ ಭಾವಕ್ಕೆ ಇದೇ ರಾಗ ಹಾಕಬೇಕು ಎಂಬ ಕಟ್ಟುಪಾಡಿಗೆ ಬಿಂದೂರಾಯರು ಅಂಟಿಕೊಂಡಿರಲಿಲ್ಲ. ಒಂದೊಂದು ಸಲ ಇಡೀ ಸಂಧಿಯನ್ನು ಒಂದೇ ರಾಗದಲ್ಲಿ ಓದುತ್ತಿದ್ದರು. ಆದರೂ ಕೇಳುವವರಿಗೆ ಬೇಸರ ಬರದಂತೆ ಭಾರತವಾಛನ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಬಿಂದೂರಾಯರು ಭಾರತವಾಛನವನ್ನು ಪ್ರಾರಂಭಿಸಿದರೆ ಅದು ಮುಗಿಯುವವರೆಗೆ ಕೇಳುವವರು ಕಥಾಭಾಗದಲ್ಲಿ ಲೀನವಾಗುತ್ತಿದ್ದರು. ಅವರ ಎದುರಿಗೆ ದ್ವಾಪರಯುಗವೇ ಬಂದು ನಿಂತಂತೆ ಭಾಸವಾಗುತಿತ್ತು.

ಕರ್ನಾಟಕದಲ್ಲಿ ಬಹು ಪ್ರಸಿದ್ಧರಾಗಿದ್ದ ವೈಣಿಕ ಶಿಖಾಮಣಿ ವೀಣೆ ಶೇಷಣ್ಣ, ಗಾನವಿಶಾರದ ಬಿಡಾರಂ ಕೃಷ್ಣಪ್ಪ, ಸಂಗೀತ ಶಾಸ್ತ್ರರತ್ನ ಕಾನಕಾನಹಳ್ಳಿ ವಾಸು ದೇವಾಚಾರ‍್ ಬಿಂದೂರಾಯರ ಭರತವಾಚನವನ್ನು ಕೇಳಿ ಮೆಚ್ಚಿಕೊಂಡಿದ್ದರು.

ಬಿಂದೂರಾಯರು ಗಮಕಿಗಳಾದರು

ಹೊಸದುರ್ಗದ ಶ್ಯಾಮಾಚಾರ‍್ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಬಿಂದೂರಾಯರ  ಮನೆಯಲ್ಲೇ ಇಳಿದುಕೊಳ್ಳುತ್ತಿದ್ದರು. ಸಂಜೆಯ ಹೊತ್ತು ಅವರು ಭಾರತವಾಚನ ಮಾಡಿ ಬಿಂದೂರಾಯರನ್ನೂ ಭಾರತವಾಚನ ಮಾಡಲು ಬಲವಂತ ಪಡಿಸುವರು. ಬಿಂದೂರಾಯರು ಬೇರೆ ದಾರಿಗಾಣದೆ ಕುಮಾರವ್ಯಾಸ ಭಾರತ ವಾಚನ ಮಾಡುವರು. ಹಾಗೆ ಬಿಂದೂರಾಯರ ಕುಮಾರ ವ್ಯಾಸ ಭಾರತ ವಾಚನ ’ಕೀಚಕವಧಾ’ ಕಥಾಭಾಗದಿಂದ ಪ್ರಾರಂಭವಾದುದು ನಾನಾ ಕಥಾಭಾಗಗಳನ್ನು ವಾಚನ ಮಾಡುವ ಘಟಕ್ಕೆ ಬಂತು. ಈ ಸಮಯದಲ್ಲಿ ಬಿಂದೂರಾಯರು ಮೈಸೂರು ಸರ್ಕಾರದಲ್ಲಿ ಉದ್ಯೋಗಸ್ಥರಾಗಿದ್ದರು. ಚಿತ್ರದುರ್ಗದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಪ್ರೌಢಶಾಲಾಭ್ಯಾಶ ಮುಗಿಸಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಕೊಟ್ಟ ವರೆ ಸರಕಾರಿ ಕೆಲಸ ಹಿಡಿದರು. ಅವರ ಸರಕಾರಿ ಕೆಲಸ ಪ್ರಾರಂಭವಾದುದು ಅರಣ್ಯ ಇಲಾಖೆಯ ಗುಮಾಸ್ತನಾಗಿ. ಅನಂತರ ಅವರು ಮೈಸೂರಿಗೆ ವರ್ಗವಾಗಿ ಗಂಧದೆಣ್ಣೆಯ ಕಾರ್ಖಾನೆಯ ಅಧಿಕಾರಿಯಾಗಿ ಬಂದರು. ಪ್ರದರ್ಶನ ಸಮಿತಿಯ ಸರಕಾರಿ ಕಾರ್ಯದರ್ಶಿಯಾಗಿಯೂ ಇದ್ದರು.

ಈ ಸಮಯದಲ್ಲಿ ಬಿಂದೂರಾಯರ ಕುಮಾರವ್ಯಾಸ ಭಾರತವಾಚನದ ಅಭ್ಯಾಸ ಪ್ರಾರಂಭವಾಗಬೇಕು. ಬಿಂದೂರಾಯರು ಕುಮಾರವ್ಯಾಸ ಭಾರತ ಓದಬಲ್ಲರು ಎಂಬ ಸುದ್ದಿ ಸಾಹಿತ್ಯಪ್ರೇಮಿಗಳ ಕಿವಿಗೆ ಮುಟ್ಟಿತು. ಸಾಹಿತಿಮಿತ್ರರು ಸಂಜೆಯ ಹೊತ್ತಿನಲ್ಲಿ ಬಂದು ಬಿಂದೂರಾಯರನ್ನು ಕುಮಾರವ್ಯಾಸ ಭಾರತ ಓದೆಂದು ಬಲವಂತ ಪಡಿಸಿದರು. ಬಿಂದೂರಾಯರು ಕುಮಾರವ್ಯಾಸಭಾರತ ವಾಚನ ಮಾಡಲೇಬೇಕಾಯಿತು.

ಪೌರಾಣಿಕರತ್ನರಿಂದ ಜ್ಞಾನೋದಯ

ಮೈಸೂರು ಸುಬ್ಬರಾಯನ ಕೆರೆಯ ದಂಡೆಯಲ್ಲಿ ಪೂರ್ವಕ್ಕೆ ಮುಖವುಳ್ಳ ಕಾಂಪೌಂಡು ಇಲ್ಲದ ಕೇವಲ ಬೊಂಬು ಬಿದರಿನಿಂದ ಮಾಡಿದ ತಡಿಕೆ ಕಟ್ಟುಳ್ಳ ಮನೆ ಕುಮಾರವ್ಯಾಸ ಭಕ್ತರಿಗೆ ಯಾತ್ರಾ ಸ್ಥಳವಾಯಿತು. ಬಿಂದೂರಾಯರು ತಮ್ಮ ದಿನದ ಕೆಲಸ ಮುಗಿಯುತ್ತಲೇ ಮನೆ ಸೇರುವರು. ಉದ್ಯೋಗಕ್ಕೆ ಹೋಗುವಾಗ ಧರಿಸುತ್ತಿದ್ದ ಉಡುಪು ಬಿಚ್ಚಿ ಕಚ್ಚೆಪಂಚೆಯುಟ್ಟು ಜುಬ್ಬ ಧರಿಸಿ ಶ್ರುತಿಗೆ ತಂಬೂರಿ ಮೀಟುತ್ತ ಕುಮಾರವ್ಯಾಸ ಭಾರತ ವಾಚನದ ಅಭ್ಯಾಸಕ್ಕೆ ತೊಡಗುವರು.

ಬಿಂದೂರಾಯರು ಕುಮಾರವ್ಯಾಸ ಭಾರತ ವಾಚನ ಮಾಡುವರೆಂಬ ಸುದ್ದಿ ಮೈಸೂರಿನಲ್ಲಿ ಬಹುಬೇಗ ಹರಡಿತು. ಆದರೆ ಅವರ ಗಮಕವನ್ನು ಕೇಳಬೇಕಾದರೆ ಅವರ ಮನೆಗೆ ಹೋಗಿ ಕೇಳಬೇಕು. ಅದೂ ರಾಯರು’ಬನ್ನಿ ಕೇಳುವಿರಂತೆ’ ಎಂದು ಕರೆದರೆ ಮಾತ್ರ. ಇಷ್ಟಾದರೂ ಬಿಂದೂರಾಯರಿಗೆ ಮಾತ್ರ ಕುಮಾರವ್ಯಾಸ ಇನ್ನೂ ಒಬ್ಬ ಸಾಮಾನ್ಯ ಕವಿ. ತಮ್ಮ ಕಂಚಿನ ಕಂಠಕ್ಕೆ ಮರುಳಾಗಿ ಭಾರತವಾಚನ ಕೇಳುವುದಕ್ಕೆ ಜನ ಬರುತ್ತಾರೆ ಎಂದು ಅವರು ಭಾವಿಸಿದ್ದರು. ಬಿಂದೂರಾಯರ ಈ ಅಹಂಭಾವವನ್ನು ಹೋಗಲಾಡಿಸಿ, ಕುಮಾರವ್ಯಾಸ ಅರಳ್ಹಿಟ್ಟು ಪದ್ಯಗಳನ್ನು ಹೊಸೆಯುವ ಕವಿಯಲ್ಲ. ಅವನು ಮಹಾಕವಿ, ವರಕವಿ ಎಂಬ ಜ್ಞಾನ ಬರುವಂತೆ ಮಾಡಿದ ಶ್ರೇಯಸ್ಸು ಪೌರಾಣಿಕರತ್ನಂ ಹೊಳವನಹಳ್ಳಿ ಶೇಷಾಚಾರ್ಯರಿಗೆ ಸಲ್ಲುತ್ತದೆ.

ಶೇಷಾಚಾರ್ಯರು ಬಿಂದೂರಾಯರ ಭಾರತವಾಛನ ಕೇಳಲು ಒಂದು ದಿವಸ ಅವರ ಮನೆಗೆ ಹೋದರು. ’ಕೃಷ್ಣರಾಯಭಾರ ಕಥಾಭಾಗವನ್ನು ಓದಪ್ಪ, ಕೇಳೋಣ’ ಎಂದರು. ಬಿಂದೂರಾಯರು ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ ’ಕೃಷ್ಣರಾಯಭಾರ’ ವನ್ನು ವಾಚನ ಮಾಡಿದರು. ಪೌರಾಣಿಕರತ್ನರು ಕಣ್ಣು ಮುಚ್ಚಿಕೊಂಡು ಒಂದೇ ಮನಸ್ಸಿನಿಂದ ಪ್ರತಿಪದ್ಯವನ್ನೂ ಗಮನ ಇಟ್ಟು ಕೇಳುತ್ತಿದ್ದರು. ಕಣ್ಣುಗಳಿಂದ ಆನಂದಭಾಷ್ಪ ಧಾರಾಕಾರವಾಗಿ ಹರಿಯುತ್ತಿತ್ತು. ಬಿಂದೂರಾಯರ ಕಾವ್ಯವಾಚನ ಮುಗಿಯಿತು. ಆಚಾರ್ಯರು ತಮ್ಮ ಕಂಚಿನ ಕಂಠಕ್ಕೆ ಭಾವಪರವಶರಾಗಿದ್ದಾರೆ, ಅದಕ್ಕಾಗಿ ಸಂತೋಷಪಟ್ಟು ಆನಂದದ ಕಣ್ಣೀರ ಕೋಡಿ ಹರಿಸುತ್ತಿದ್ದಾರೆ ಎಂದು ಬಿಂದೂರಾಯರು ಭಾವಿಸಿದರು. ’ಪೂಜ್ಯರೇ, ನನ್ನ ಭಾರತವಾಚನ ಕೇಳಿ ಸಂತೋಷದಿಂದ ಆನಂದದ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದೀರಿ. ನೀವೇನು ಕಂಡಿರಿ ಕುಮಾರವ್ಯಾಸನಲ್ಲಿ? ಗದುಗಿನ ನಾರಣಪ್ಪನ ಭಾರತ ಅಂಥ ಮಹಾಗ್ರಂಥವೆ?’ ಎಂದು ಪ್ರಶ್ನಿಸಿದರು. ಪೌರಾಣಿಕ ರತ್ನರು ಒಂದು ನಿಮಿಷ ಮೌನವಾಗಿದ್ದು ಅನಂತರ ಹೇಳಿದರು: ’ ಅಪ್ಪ, ಕುಮಾರವ್ಯಾಸ ಮಹಾನುಭಾವ. ಅವನು ಬರಿಯ ಕವಿಯಲ್ಲ, ಮಹಾಶಾಸ್ತ್ರಜ್ಞ, ನೀನು ಶಾಸ್ತ್ರಗಳನ್ನು ಅಭ್ಯಾಸ ಮಾಡಿದರೆ ಆಗ ತಿಳಿಯುತ್ತದೆ ನಾರಣಪ್ಪನ ಪ್ರತಿಭೆ’.

ಬಿಂದೂರಾಯರ ಅಹಂಭಾವ ನುಚ್ಚುನೂರಾಗಿ ಹೋಯಿತು. ಪೌರಾಣಿಕರತ್ನರ ಮಾತುಗಳಿಂದ, ’ನನ್ನ ಕಂಚಿನಕಂಠಕ್ಕೆ ಜನ ಮರುಳಾಗಿಲ್ಲ. ಕುಮಾರವ್ಯಾಸನ ಭಾರತಕ್ಕೆ ನಮ್ಮ ಜನ ಮನಸೋತಿದ್ದಾರೆ. ಹಿಂದೆ ನನ್ನ ಗೆಳೆಯ ಶ್ಯಾಮಚಾರ್ಯ ಕೂಡ ಇದೇ ಅಭಿಪ್ರಾಯ ಕೊಟ್ಟಿದ್ದ. ಪೌರಾಣಿಕರತ್ನ ಹೊಳವನಹಳ್ಳಿ ಶೇಷಾಚಾರ್ಯರಿಂದ ನನ್ನ ಕಣ್ಣು ತೆರೆಯಿತು. ಇನ್ನು ನಾನು ಶಾಸ್ತ್ರಾಭ್ಯಾಸ ಮಾಡಿ ಕುಮಾರವ್ಯಾಸನನ್ನು ಒಲಿಸಿಕೊಳ್ಳಬೇಕು’ ಎಂದು ನಿರ್ಧರಿಸಿದರು. ಆನಂದತೀರ್ಥರ ಭಾರತ ತಾತ್ಪರ್ಯ ನಿರ್ಣಯ, ಜಗನ್ನಾಥ ದಾಸರ’ ಹರಿಕಥಾಮೃತ ಸಾರ’ ಪುರಂದರದಾಸರ ದೇವರನಾಮಗಳು, ಕನಕದಾಸರ ಹರಿಭಕ್ತಿಸಾರ ಮೊದಲಾದವುಗಳನ್ನು ಅಭ್ಯಾಸ ಮಾಡತೊಡಗಿದರು.

ಪ್ರಸಿದ್ಧ ಕನ್ನಡ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ‍್ ರವರು ಆಗ ಮೈಸೂರು ಸರಕಾರದಲ್ಲಿ ಒಬ್ಬ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದರು. ಅವರು ತಮಗೆ ಬೇಕೆನಿಸಿದಾಗ ಸಂಜೆಯ ಹೊತ್ತು ಬಿಂದೂರಾಯರ ಮನೆಗೆ ಬರುವರು. ಬಿಂದೂರಾಯರಿಂದ ಕುಮಾರವ್ಯಾಸ ಭಾರತ ವಾಛನ ಮಾಡಿಸುವರು. ’ಬಿಂದೂರಾಯರ ವಾಚನದಲ್ಲಿ ಸಾಹಿತ್ಯದ ತಪ್ಪಿದ್ದರೆ ತಿದ್ದುವರು. ಸಾಹಿತ್ಯಕ್ಕೆ ಪ್ರಾಧಾನ್ಯ ಕೊಡಬೇಕು. ಸಂಗೀತ ಸಾಹಿತ್ಯ ಪೋಷಣೆಗೆ ಎಷ್ಟು ಅವಶ್ಯಕವೋ ಅಷ್ಟು ಮಾತ್ರ ಇರಬೇಕು. ರಾಗಗಳ ಎಳೆತ ಹೆಚ್ಚಾದರೆ ಸಾಹಿತ್ಯಾಂಶ ಮೊಟಕಾಗುತ್ತದೆ. ಹೀಗೆ ಹೇಳಿ ಬಿಂದೂರಾಯರ ಭಾರತವಾಚನ, ಸಾಹಿತ್ಯ ಪ್ರಧಾನವಾಗಿ ಶೋಭಿಸಿ ಪಂಡಿತ ಪಾಮರ ರಂಜನೆಯಾಗುವಂತೆ ಮಾರ್ಗದರ್ಶನ ಮಾಡಿದರು.

ಎಡಗಡೆ: ಭಾರತ ಬಿಂದೂರಾಯರು ಬಲಗಡೆ : ಅಧಿಕಾರದ ಠೀವಿಯ ಬಿಂದೂರಾಯರು

ತಂದೆಯ ಹಂಬಲ

ಕುಟುಂಬ ಜೀವನ

ಬಿಂದೂರಾಯರ ತಂದೆ ಗೋವಿಂದರಾಯರಿಗೆ ತಮ್ಮ ಮಗ ಕುಮಾರವ್ಯಾಸ ಭಾರತ ವಾಚನ ಮಾಡಬೇಕೆಂದು ಆಸೆ. ಅವರು ತಮ್ಮ ಮಗನನ್ನು ’ಶಾಮು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅವರು ’ಶಾಮು, ನೀನು ಭಾರತ ವಾಛನ ಕಲಿಯಬಾರದೇಕೆ? ನೋಡು, ನಿನ್ನ ಗೆಳೆಯ ಹೊಸದುರ್ಗದ ಶ್ಯಾಮಾಚಾರ‍್ ಎಷ್ಟು ಚೆನ್ನಾಗಿ ಭಾರತ ಓದುತ್ತಾರೆ! ಹಾಗೆ ನೀನೂ ಭಾರತ ಓದುವುದನ್ನು ನಿನ್ನ ಬಾಯಿಂದ ನಾನು ಕೇಳಬೇಕಪ್ಪ. ಭಾರತ ಅಭ್ಯಾಸ ಮಾಡು’ ಎಂದು ತಮ್ಮ ಅಂತರಾಳದ ಆಸೆಯನ್ನು ಸಮಯಬಂದಾಗಲೆಲ್ಲ ಹೊರಗೆಡಹುತ್ತಿದ್ದರು. ಮಗ ಅಭ್ಯಾಸ ಮಾಡಲೆಂದು ಕುಮಾರವ್ಯಾಸ ಭಾರತದ ಪ್ರತಿ ಒಂದನ್ನು ಬಿಂದೂರಾಯರಿಗೆ ತಂದು ಕೊಟ್ಟಿದ್ದರು. ಗೋವಿಂದ ರಾಯರ ಆಸೆ ಫಲಿಸಿತು. ಆದರೆ ಅದನ್ನು  ಕೇಳುವ ಭಾಗ್ಯವನ್ನು ಅವರು ಪಡೆಯಲಿಲ್ಲ. ಬಿಂದೂರಾಯರು ಭಾರತ ವಾಚನ ಮಾಡಿ ಕನ್ನಡನಾಡಿನ ಜನರ ಮನಸ್ಸನ್ನು ಸೂರೆಗೊಂಡರು. ಆದರೆ ೧೯೦೧ರಲ್ಲಿ ಅವರ ತಂದೆ ತೀರಿಕೊಂಡರು.

ಇಷ್ಟು ಹೊತ್ತಿಗಾಗಲೇ ಬಿಂದೂರಾಯರಿಗೆ ಮದುವೆ ಆಗಿತ್ತು. ಒಂದು ಹೆಣ್ಣು ಮಗುವಾಯಿತು. ಆದರೆ ತಮ್ಮ ಹೆಂಡತಿ ಇನ್ನೂ ಬಾಣಂತಿಯಾಗಿರುವಾಗಲೇ ಪಾರ್ಶ್ವ ವಾಯು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದು ಮಲಗಿದರು. ಸುಖ ಕಾಣುವ ಚಿಕ್ಕವಯಸ್ಸಿನಲ್ಲಿ ಹಾಸಿಗೆ ಹಿಡಿದವರು ಮೇಲೇಳಲೇ ಇಲ್ಲ. ಮೂವತ್ತು ನಲವತ್ತು ವರುಷಗಳು ಹಾಗೇ ಬದುಕಿದ್ದರು. ಈ ಮಧ್ಯೆ ಬಿಂದೂರಾಯರ ಬಂಧುಮಿತ್ರರು ಬಲವಂತಪಡಿಸಿ ಎರಡನೆಯ ಮದುವೆ ಮಾಡಿಸಿದರು. ಬಿಂದೂರಾಯರು ಸಂಸಾರಸುಖದಲ್ಲಿ ದುರದೃಷ್ಟವಂತರು. ಎರಡನೆಯ ಹೆಂಡತಿ ಒಂದು ಹೆಣ್ಣು ಮಗುವನ್ನು ಹಡೆದು ಚಿಕ್ಕವಯಸ್ಸಿನಲ್ಲೇ ಸತ್ತರು. ಬಂಧು ಮಿತ್ರರು ಮತ್ತೆ ಬಿಂದೂರಾಯರನ್ನು ಮೂರನೆಯ ಮದುವೆಯಾಗೆಂದು ಪೀಡಿಸಿದರು. ಆದರೆ ಬಿಂದೂರಾಯರು ಒಪ್ಪಲಿಲ್ಲ. ಒಂದು ತರಹದ ವೈರಾಗ್ಯ ಜೀವನ ಅವರದಾಯಿತು. ಸರಕಾರದ ಕೆಲಸ ಮುಗಿಸಿ ಸಂಜೆ ಮನೆ ಸೇರುವರು. ತಂಬೂರಿ ಶ್ರುತಿ ಹಿಡಿದು ಕುಮಾರವ್ಯಾಸ ಭಾರತವನ್ನು ಮುಂದಿ‌ಟ್ಟುಕೊಂಡು ಗಂಟೆಗಟ್ಟಲೆ ಹಾಡುವರು. ಇದು ನಿತ್ಯ ಕಾರ್ಯಾಚರಣೆಯಾಯಿತು.

ಗೆಳೆಯ ಹೊಸದುರ್ಗದ ಶ್ಯಾಮಾಚಾರ್ಯರ ಸವಾಲನ್ನು ಸ್ವೀಕರಿಸಿ ಬಿಂದೂರಾಯರು ೧೯೦೨ರ ಸುಮಾರು ಕುಮಾರವ್ಯಾಸ ಭಾರತ ವಾಚನಕ್ಕೆ ಕೈ ಹಾಕಿದರು. ಅದು ಸತತವಾಗಿ ೧೯೬೭ – ೬೮ರವರೆಗೆ ತಪ್ಪದೆ ಮುಂದುವರಿಯಿತು.

ಜನಪ್ರಿಯ ಗಮಕಿ

ಬಿಂದೂರಾಯರು ತಮ್ಮ ಮೊಟ್ಟಮೊದಲು ಕುಮಾರವ್ಯಾಸ ಭಾರತವಾಚನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಮೈಸೂರು ಮಹಾರಾಜ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲೆಂದು ತೋರುತ್ತದೆ. ’ವಿಶ್ವ ಕರ್ಣಾಟ’ ದ ತಿರುಮಲೆ ತಾತಾಚಾರ್ಯ ಶರ್ಮರು ಆಗ ಕರ್ನಾಟಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಯಾಗಿದ್ದರಂತೆ. ಅವರು ಕಾಲೇಜಿಗೆ ಹೋಗುವಾಗ ಬರುವಾಗ ಸುಬ್ಬರಾಯನ ಕೆರೆಯ ದಂಡೆಯ ಮೇಲಿದ್ದ ಬಿಂದೂರಾಯರ ಮನೆಯನ್ನು ದಾಟಿಯೇ ಹೋಗಬೇಕು. ಕಾಲೇಜಿನಿಂದ ಸಂಜೆ ಮನೆಗೆ ಹೋಗುವಾಗ ಬಿಂದೂರಾಯರ ಮನೆಯ ಹತ್ತಿರ ಬರುತ್ತಲೇ ಬಿಂದೂರಾಯರ ಕುಮಾರ ವ್ಯಾಸ ಭಾರತ ವಾಚನ ಮೊಳಗು ಕಿವಿಗೆ ಬೀಳುವುದು. ಅರ್ಧ ಮುಕ್ಕಾಲು ಗಂಟೆ ನಿಂತು ಕೇಳುವರು. ಅವರಿಗೆ ಬಿಂದೂರಾಯರನ್ನು ಮೈಸೂರಿನ ಜನಕ್ಕೆ ಪರಿಚಯ ಮಾಡಿಸಬೇಕು. ಅವರ ಭಾರತವಾಚನವನ್ನು ಕೇಳಿಸಬೇಕು ಅನ್ನಿಸಿತ್ತು.

ಆದರೆ ಬಿಂದೂರಾಯರು ಸಾರ್ವಜನಿಕ ಸಭೆಗೆ ಬರಲು ಒಪ್ಪರು. ತಾತಾಚಾರ್ಯ ಶರ್ಮ ಬಿಡರು. ಕೊನೆಗೆ ಬಿಂದೂರಾಯರು ಮೈಸೂರು ಮಹಾರಾಜ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ ಭಾರತವಾಚನ ಮಾಡಲು ಒಪ್ಪಿದರು.

೧೯೨೪-೨೫ನೆಯ ಇಸವಿ ಇರಬಹುದು. ಮಾಸ್ತಿ ವೆಂಕೇಶ ಅಯ್ಯಂಗಾರ‍್ ರವರು ಮೈಸೂರು ಸಬ್ ಡಿವಿಜನ್ ಅಧಿಕಾರಿಯಾಗಿದ್ದರು. ಅವರು ಪ್ರವಾಸ ಹೋಗುವಾಗೆಲ್ಲ ಬಿಂದೂರಾಯರನ್ನು ತಮ್ಮ ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಬಿಂದೂರಾಯರು ಮಾಸ್ತಿಯವರ ಆಶ್ರಯದಲ್ಲಿ ಇಡೀ ಕುಮಾರವ್ಯಾಸ ಭಾರತ ವಾಚನ ಮಾಡಿದರಂತೆ.

೧೯೨೬-೨೭ನೆಯ ಇಸವಿಯಿರಬಹುದು. ಮೊದಲ ಬಾರಿಗೆ ಬೆಂಗಳೂರು ಸೆಂಟ್ರಲ್ ಕಾಲೇಜು ಸಂಘ ಬಿಂದೂರಾಯರ ಭಾರತ ವಾಚನವನ್ನು ಏರ್ಪಾಡು ಮಾಡಿತು. ಅದು ಬೆಂಗಳೂರಿನ ಚಾಮರಾಜಪೇಟೆ ಮೂರನೆಯ ರಸ್ತೆಯಲ್ಲಿರುವ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಾಯಿತಂತೆ. ಬಹು ಮಂದಿ ಗಣ್ಯರು ಬಿಂದೂರಾಯರ ಭಾರತವಾಚನ ಕೇಳಲು ಬಂದಿದ್ದರು. ಜನ ಕಿಕ್ಕಿರಿದಿದ್ದರು. ಆ ಮಹಾಸಭೆಯಲ್ಲಿ ಬಿಂದೂರಾಯರಿಗೆ ಬಂಗಾರದ ಪದಕವನ್ನು ಕೊಟ್ಟು ಸನ್ಮಾನ ಮಾಡಿದರಂತೆ.

ಸ್ವಾಭಿಮಾನಿ

ಬಿಂದೂರಾಯರು ಬಾಲಕನಾಗಿದ್ದಾಗಿನಿಂದಲೂ ಒಳ್ಳೆ  ಕಟ್ಟುಮಸ್ತಾದ ಆಳು. ಜೊತೆಗೆ ಕಂಡದ್ದನ್ನು ಕಂಡಂತೆ ಆಡುವ ನಿಷ್ಠುರ ಸ್ವಭಾವ ಅವರ ಹುಟ್ಟುಗುಣ. ಧ್ವನಿ ಗಡಸು; ’ಯಾರ ಹಂಗೇನು? ಎಂಬ ಮನೋಭಾವ. ಯಾರಿಗೂ ತಲೆಬಾಗಿ ನಡೆದುಕೊಂಡವರಲ್ಲ. ಬಿಂದೂರಾಯರು. ಇಂಥ ಸ್ವಭಾವದ ಬಿಂದೂರಾಯರನ್ನು ಮಾತಾಡಿಸುವುದಕ್ಕೆ ಅಧಿಕಾರಿಗಳು ಹತ್ತಾರು ಸಲ ಆಲೋಚಿಸಬೇಕಾಗುತ್ತಿತ್ತು. ಆದರೆ ಅದೇ ಅಧಿಕಾರಿಗಳು ಬಿಂದೂರಾಯರು ಕಾರ್ಯತತ್ಪರತೆ, ಶಿಸ್ತು, ಪ್ರಾಮಾಣಿಕತನ ಮೊದಲಾದ ಸದ್ಗುಣಗಳನ್ನು ಮೆಚ್ಚಿಕೊಂಡು ಗೌರವ ತೋರಿಸುತ್ತಿದ್ದರು.

ಬಿಂದೂರಾಯರು ಆತ್ಮಾಭಿಮಾನಿಗಳು. ಮೈಸೂರಿನ ಕೃಷ್ಣರಾಜೇಂದ್ರ ಮಿಲ್ಲಿನಲ್ಲಿ ಒಂದು ಅಧಿಕಾರಸ್ಥಾನದಲ್ಲಿದ್ದರು. ಕೃಷ್ಣರಾಜೇಂದ್ರ ಮಿಲ್ಲನ್ನು ನಡೆಸುವುದಕ್ಕೆ ಒಂದು ಕಾರ್ಯನಿರ್ವಾಹಕ ಸಮಿತಿಯಿತ್ತು.. ಅದರ ಸದಸ್ಯರಲ್ಲಿ ಖಾಸಗಿಯವರೂ ಇದ್ದರು. ಒಬ್ಬ ಖಾಸಗಿ ಕಾರ್ಯಕಾರಿ ಸಮಿತಿ ಸದಸ್ಯರು ಬಿಂದೂರಾಯರ ಮೇಲೆ ತಮ್ಮ ಅಧಿಕಾರ ದರ್ಪ ಚಲಾಯಿಸಿದರು. ಮಾತಿಗೆ ಮಾತು ಬೆಳೆಯಿತು. ಸ್ವಾಭಿಮಾನಿಗಳಾದ ಬಿಂದೂರಾಯರಿಗೆ ಇದನ್ನು ಸಹಿಸಲಾಗಲಿಲ್ಲ. ಆದ್ದರಿಂದ ಅವರು ’ರಾಜೀನಾಮೆ ತೆಗೆದುಕೊಳ್ಳಿ’ ಎಂದು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟರು.

ರಾಜೀನಾಮೆ ತೆಗೆದುಕೊಳ್ಳಿ

ಬಿಂದೂರಾಯರು ಅಧಿಕಾರದಲ್ಲಿದ್ದಾಗ ತುಂಬ ಶಿಸ್ತಿನ ಆಸಾಮಿಯಾಗಿದ್ದರಂತೆ. ಭರ್ಜರಿ ಮೀಸೆ, ತೆರೆದ ಕಾಲರ‍್ ಕೋಟು, ನೆಕ್ ಟೈ, ಪೈಜಾಮ ಮೊದಲಾದವು ಇದ್ದವು.

ಬಿಂದೂರಾಯರು ಗಮಕಿಗಳಾದ ಮೇಲೂ ಬಹು ಸ್ವಾಭಿಮಾನದಿಂದಲೇ ಬದುಕು ನಡೆಸಿದರು. ಭಾರತ ಸ್ವತಂತ್ರವಾದ ಮೇಲೆ ಆಗಿನ ಮೈಸೂರು ಸಂಸ್ಥಾನದಲ್ಲಿ ಸಂಸ್ಕೃತಿ ಪ್ರಸಾರದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಬಿಂದೂರಾಯರು ಸಂಸ್ಕೃತಿ ಪ್ರಸಾರದಲ್ಲಿ ಭಾಗವಹಿಸಿದರು. ಒಂದು ಸಂದರ್ಭ. ಕಾರ್ಯಕ್ರಮ ಆರೂವರೆ ಗಂಟೆಗೆಂದು ಪ್ರಕಟವಾಗಿತ್ತು. ಬಿಂದೂರಾಯರು ಅರ್ಧಗಂಟೆಗೆ ಮುಂಚೆಯೇ ಕಾರ್ಯಕ್ರಮವಿದ್ದ ಸ್ಥಳಕ್ಕೆ ಹೋದರು. ತಂಬೂರಿ ತೆಗೆದು ಶ್ರುತಿ ಮಾಡಿಕೊಂಡು ವಾಚನ ಮಾಡುವುದಕ್ಕೆ ಕುಮಾರವ್ಯಾಸ ಭಾರತವನ್ನು ತೆಗೆದಿಟ್ಟುಕೊಂಡರು. ಆರೂವರೆ ಗಂಟೆಯಾದರೂ ಸಭೆಗೆ ಸಾಕಷ್ಟು ಜನವಿಲ್ಲ. ಕಾರ್ಯಕ್ರಮ ಏರ್ಪಡಿಸಿದ್ದ ತಹಸೀಲ್ದಾರರು ಬಿಂದೂರಾಯರು ತಂಬೂರಿ ಶೃತಿ ಮೀಟುವುದಕ್ಕೆ ಪ್ರಾರಂಭಿಸಿದುದನ್ನು ನೋಡಿ ಕಕ್ಕಾಬಿಕ್ಕಿಯಾದರು. ’ಜನ ಸೇರಿಲ್ಲ. ದಯವಿಟ್ಟು ಸ್ವಲ್ಪ ನಿಧಾನಿಸಿ’ ಎಂದು ಪ್ರಾರ್ಥಿಸಿದರು ತಹಸಿಲ್ದಾರರು. ’ನೀವೇ ಸಾಕು. ಕುಳಿತು ಕೇಳಿ ನಾರಣಪ್ಪನ್ನ’ ಎಂದು ಹೇಳಿ ಬಿಂದೂರಾಯರು ’ಶ್ರೀವನಿತೆಯರಸನೆ’ ಎಂದು ಮಂಗಳಾಚರಣ ಪದ್ಯವನ್ನು ಪ್ರಾರಂಭಿಸಿಯೇ ಬಿಟ್ಟರು. ಅಂದಿನ ಸಭೆಗೆ ಬಂದಿದ್ದವರು ಐದಾರು ಮಂದಿ. ಬಿಂದೂರಾಯರು ಅವರಿಗೇ ಕುಮಾರವ್ಯಾಸ ಭಾರತ ಶ್ರವಣ ಮಾಡಿಸಿ ಕಾರ್ಯಕ್ರಮ ಮುಗಿಸಿದರು. ಮುಗಿದ ಕೂಡಲೇ ತಂಬೂರಿಯನ್ನು ಗೌಸಿಗೆ ಸೇರಿಸಿ, ಕುಮಾರವ್ಯಾಸ ಭಾರತವನ್ನು ಕೈಯಲ್ಲಿ ಹಿಡಿದು ಹೊರಟೇಬಿಟ್ಟರು. ಅವರು ಅನವಶ್ಯಕವಾಗಿ ಕಾಲಹರಣ ಮಾಡಲು ಇಚ್ಛಿಸುತ್ತಿರಲಿಲ್ಲ. ಅವರು ಕಾಲಕ್ಕೆ ತುಂಬಾ ಮಹತ್ವ ನೀಡುತ್ತಿದ್ದರು.

ಬಿಂದೂರಾಯರು ಕೆಲಸಕ್ಕೆ ರಾಜೀನಾಮೆ ಕೊಟ್ಟ ಮೇಲೆ, ಅವರ ಜೀವನ ಹೊಸರೂಪ ಪಡೆಯಿತು. ಅವರು ತಮ್ಮ ಭರ್ಜರಿ ಮೀಸೆಯನ್ನು ತೆಗೆಸಿಬಿಟ್ಟರು. ಆವರೆಗೆ ತೊಡುತ್ತಿದ್ದ ಐದು ಬೆರಳುಗಳ ಜರಿಯಂಚಿನ ಮೈಸೂರು ರುಮಾಲನ್ನು ಮೂಲೆಗೆಸೆದರು., ನೆಕ್ ಟೈ, ಓಪನ್ ಕಾಲರ‍್ ಕೋಟ್, ಪೈಜಾಮ, ಕಾಲುಚೀಲ, ಬೂಟುಗಳು ಮೂಲೆಗುಂಪಾದವು. ಲೌಕಿಕ ಜೀವನ ವೈದಿಕ ಜೀವನಕ್ಕೆ ತಿರುಗಿತು. ಕಚ್ಚೆ ಪಂಚೆ, ಮೈಮೇಲೆ ಹೊದಿಯುವುದಕ್ಕೆ ಖಾದಿ ಶಾಲು. ಅಂಗಾರ ಅಕ್ಷತೆ ಮುದ್ರೆಗಳು ಹಣೆಯ ಮೇಲೆ. ಕುಮಾರವ್ಯಾಸನಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಕುಮಾರವ್ಯಾಸನು ಬಿಂದೂರಾಯರನ್ನು ಕನ್ನಡ ನಾಡಿನ ಗಮಕ  ಶಿರೋಮಣಿಯನ್ನಾಗಿ ಮೆರೆಸಿದ. ಕರ್ನಾಟಕ ಏಕಿಕರಣದ ಧುರೀಣರೆನಿಸಿಕೊಂಡ ಮಹಾವಾಗ್ಮಿ ಮುದವೀಡು ಕೃಷ್ಣರಾಯರು ’ಭಾರತದ ಬಿಂದೂರಾಯ’ ರೆಂದು ಕರೆದರು. ಶಿವಮೊಗ್ಗ ಜಿಲ್ಲೆಯ ಕೂಡಲಿ ಮಠಾಧಿಪತಿಗಳು ಬಿಂದೂರಾಯರಿಗೆ ’ಭಾರತ ವಾಚನ ಪ್ರವೀಣ’ ರೆಂಬ ಪ್ರಶಸ್ತಿಯನ್ನು ಜೋಡಿ ಶಾಲು ಹೊದಿಸಿ ಗೌರವಿಸಿದರು. ಬಿಂದೂರಾಯರು ಮುಂಬಯಿಯಲ್ಲಿ ೧೯೫೦ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಆಶ್ರಯದಲ್ಲಿ ನಡೆದ ಗಮಕಗೋಷ್ಠಿಗೆ ಅಧ್ಯಕ್ಷರಾಗಿದ್ದರು.

ಗಮಕ ಕೆಲೆ

ಗಮಕ ಕಲೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಜನಜೀವನದೊಡನೆ ಬೆಳೆದು ಬಂದಿರುವ ಶ್ರೇಷ್ಠ ಕಲೆ. ವಾಲ್ಮೀಕಿ ರಾಮಾಯಣ, ವ್ಯಾಸ ಭಾರತಗಳು ಭಾರತ ದೇಶದ ಸಂಸ್ಕೃತಿಯ ಎರಡು ಕಣ್ಣುಗಳು ಇದ್ದಂತೆ. ಅವು ಸಂಸ್ಕೃತ ಭಾಷೆಯಲ್ಲಿವೆ. ಶ್ಲೋಕರೂಪದಲ್ಲಿದ್ದು ರಾಗ ಬದ್ಧವಾಗಿ ಹಾಡುವುದಕ್ಕೆ ಗಮಕಿಗಳಿಗೆ ಅಮೂಲ್ಯ ಆಸ್ತಿಗಳಾಗಿವೆ. ವಾಲ್ಮೀಕಿ ರಾಮಾಯಣ ಕಾವ್ಯವಾಚನ ಮಾಡಿದ ಮೊಟ್ಟ ಮೊದಲ ಗಮಕಿಗಳು ಕುಶಲವರಂತೆ.

ಸಂಸ್ಕೃತದಲ್ಲಿರುವ ವಾಲ್ಮೀಕಿ ರಾಮಾಯಣ, ವ್ಯಾಸ ಭಾರತಗಳು ಕ್ರಮೇಣ ಭಾರತದ ದೇಶದ ಪ್ರಾದೇಶಿಕ ಭಾಷೆಗಳಿಗೂ ಭಾಷಾಂತರಗೊಂಡವು. ಕನ್ನಡ ಭಾಷೆಗೂ ಭಾಷಾಂತರಗೊಂಡವು. ಅಲ್ಲದೆ ಹಲವಾರು ಕವಿಗಳು ಈ ಕಥೆಗಳನ್ನು ತಮ್ಮ ಪ್ರತಿಭೆಗೆ ಅನುಗುಣವಾಗಿ ಮತ್ತೆ ಹೇಳಿದ್ದಾರೆ.

ಗಮಕ ಕಲೆ ಕರ್ನಾಟಕದಲ್ಲಿ ನೂರಾರು ವರ್ಷಗಳಿಂದ ಉಳಿದು ಬೆಳೆದುಕೊಂಡು ಬಂದಿರುವ ಪ್ರಾಚೀನ ಕಲೆ. ನಮ್ಮ ನಾಡಿನ ಶಾಸನಗಳಲ್ಲಿ, ಕಾವ್ಯಗಳಲ್ಲಿ ಕವಿ, ಗಮಕಿ,ವಾದಿ, ವಾಗ್ಮಿಗಳ ಹೆಸರುಗಳು ಶಾಶ್ವತ ಸ್ಥಾನ ಪಡೆದಿವೆ. ಕವಿಗಳು ರಚಿಸಿದ ಕಾವ್ಯಗಳನ್ನು ಜನಪ್ರಿಯಗೊಳಿಸಿದವರೇ ಗಮಕಿಗಳು. ನವ ನಾಗರಿಕತೆ ನಮ್ಮ ಹಳ್ಳಿಗಳನ್ನು ಮುಟ್ಟುವವರೆಗೆ ಹಳ್ಳಿಯ ಮಣ್ಣಿನ ಮಕ್ಕಳಿಗೆ ಮನರಂಜನೆ ಮತ್ತು ಜ್ಞಾನಭೋದನೆಯನ್ನು ಮಾಡುತ್ತಿದ್ದವರೇ ಗಮಕಿಗಳು. ಗಮಕಿಗಳು ಕುಮಾರ ವ್ಯಾಸಭಾರತ, ಲಕ್ಷ್ಮೀಶನ ಜೈಮಿನಿ ಭಾರತ, ಷಡಕ್ಷರಿಯ ರಾಜಶೇಖರ ವಿಲಾಸ, ಭೂಮನಕವಿಯ ಬಸವಪುರಾಣ ಮೊದಲಾದ ಕಾವ್ಯಗಳನ್ನು ಓದಿ ಗ್ರಾಮಸ್ಥರಿಗೆ ಸಂಜೆಯ ಹೊತ್ತು ಕಾಲ ಕಳೆಯಲು ಒಳ್ಳೆಯ ಅವಕಾಶ ಒದಗಿಸುತ್ತಿದ್ದರು. ಹಳ್ಳಿಯ ಜನರು ಅನಕ್ಷರಸ್ಥರಾದರೂ ಅಜ್ಞಾನಿಗಳಲ್ಲ. ಸುಸಂಸ್ಕೃತರು. ಈ ಸಂಸ್ಕಾರ ಅವರು ಪಡೆದುದು ಕಾವ್ಯವಾಚನದಿಂದ. ಅವರು ಓದದೆಯೂ ಕಾವ್ಯ ಪರಿಣತರಾಗಿದ್ದರು. ನೀತಿವಂತರು, ಒಳ್ಳೆಯ ನಡತೆವಂತರಾಗಿ ಒಳ್ಳೆಯ ಬಾಳು ಬಾಳುತ್ತಿದ್ದರು.

ಕರ್ನಾಟಕದಲ್ಲಿ ವಿಶೇಷವೆನ್ನಿಸಿಕೊಂಡ ಗಮಕಕಲೆ ಕಾಲಕ್ರಮದಲ್ಲಿ ಅರಮನೆಗಳಲ್ಲಿ ಮಾತ್ರ ಉಳಿದುಕೊಂಡಿತು. ಆಯಾ ನಗರಗಳಲ್ಲಿ ಗ್ರಾಮಗಳಲ್ಲಿ ಮಾತ್ರ ಜೀವಂತವಾಗಿತ್ತು. ಹಳೆಯ ಮೈಸೂರು ರಾಜ್ಯದಲ್ಲಿ ಜನಪ್ರಿಯವಾಗಿದ್ದ ಗಮಕ ಕಲೆಯನ್ನು ಉತ್ತರ ಕರ್ನಾಟಕಕ್ಕೆ ಪರಿಚಯ ಮಾಡಿಕೊಟ್ಟ ಮಹಾಪುರುಷರೆಂದರೆ ಬಿಂದೂರಾಯರೇ ಎಂದು ಧಾರಾಳವಾಗಿ ಹೇಳಬಹುದು. ಕನ್ನಡ ಸಾಹಿತ್ಯ ಪರಿಷತ್ತು ಬಿಂದೂರಾಯರನ್ನು ಹಳೆಯ ಮೈಸೂರಿನ ಗಡಿಯಾದ ತುಂಗಭದ್ರೆಯಿಂದ ಕೃಷ್ಣಾನದಿಯ ಗಡಿಯವರೆಗೂ ಕಳಿಸಿ ಗಮಕ ಕಲೆಯ ಪ್ರಚಾರ ಮಾಡಿಸಿತು. ಗಮಕ ಕಲೆಯನ್ನು ಕನ್ನಡನಾಡ ಜನ ಕೇಳಿ ಸಂತೋಷಪಡುವಂತೆ ಮಾಡಿದ ಮೊಟ್ಟಮೊದಲ ಗಮಕ ಶಿರೋಮಣಿಯೆಂದರೆ ಭಾರತದ ಬಿಂದೂರಾಯರೇ. ಇವರು ಭಾರತ ಸಾರೋದ್ಧಾರ ಎಂಬ ಗ್ರಂಥವನ್ನು ರಚಿಸಿದ್ದಾರೆ.

ಬಿಂದುರಾಯರ ಶಿಷ್ಯ ಪರಂಪರೆ

ಸಾಹಿತ್ಯ ಪ್ರಧಾನವಾದ ಗಮಕಕಲೆಯನ್ನು ಜನಪ್ರಿಯ ಮಾಡಬೇಕೆಂಬ ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳಬೇಕೆಂದು ಉದ್ದೇಶಪಟ್ಟವರು ಹಿರಿಯ ಸಾಹಿತಿಗಳಾದ ಡಿ.ವಿ., ಗುಂಡಪ್ಪನವರು, ಅವರು ೧೯೩೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಉಪಾಧ್ಯಕ್ಷರಾಗಿ ಬಂದರು. ಕೂಡಲೇ ಗಮಕ ತರಗತಿಯನ್ನು ಪ್ರಾರಂಭಿಸಿದರು. ಭಾರತದ ಬಿಂದೂರಾಯರೇ ಗಮಕ ಶಿಕ್ಷರಾಗಿರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿತು. ಬಿಂದೂರಾಯರು ೧೯೩೪ ರೀಂದ ೧೯೩೭ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಗಮಕ ತರಗತಿಗಳನ್ನು ಬಹಳ ಯಶಸ್ವಿಯಾಗಿ ನಡೆಸಿದರು.

ಬಿಂದೂರಾಯರು ಶಿಸ್ತಿನ ಸಿಪಾಯಿ. ತರಿಗತಿಗೆ ಯಾರೂ ಒಂದು ನಿಮಿಷ ಹೊತ್ತಾಗಿ ಬಂದರೂ ಸಿಡಿಮಿಡಿಗೊಳ್ಳುವರು. ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ನಿತ್ಯವೂ ಪದ್ಯ ಓದಿಸುತ್ತಿದ್ದರು. ಈ ರಾಗದಲ್ಲಿಯೇ ಈ ಪದ್ಯವನ್ನು ಓದಬೇಕು ಎಂಬ ನಿಯಮಕ್ಕೆ ಅವರು ಬದ್ಧರಾಗಿರಲಿಲ್ಲ. ಒಂದೇ ರಾಗವನ್ನು ಹಲವಾರು ಭಾವಗಳಿಗೆ ಉಪಯೋಗಿಸಬಹುದು ಎಂಬ ಮನೊಭಾವ ಅವರದು. ಭಾವಗಳ ಏರಿಳಿತಗಳಿಗೆ ರಾಗ ಸಂಚಾರ ಹೊಂದಿಸಿಕೊಳ್ಳಬೇಕು. ಪದಗಳನ್ನು ನುಂಗಬಾರದು. ಉಚಿತ ಪದಕ್ಕೆ ಹೆಚ್ಚು ಒತ್ತು ಕೊಡಬೇಕು. ಕಠಿಣ ಪದಗಳಿಗೆ ಸಮಾನಾರ್ಥ ಕೊಡುವ ಸುಲಭ ಪದಗಳನ್ನು ಉಪಯೋಗಿಸಬಹುದು. ಗಮಕ ಕಲೆ ಸಾಹಿತ್ಯ ಪ್ರಧಾನವಾದದ್ದು. ಸಂಗೀತದ ಎಳೆತ ಕೂಡದು. ಕಾವ್ಯವಾಚನ ಸಂಗೀತ ಕಛೇರಿಯಲ್ಲ. ಈ ದೃಷ್ಟಿಯಿಟ್ಟು ಕೊಂಡು ಬಿಂದೂರಾಯರು ವಿದ್ಯಾರ್ಥಿಗಳಿಗೆ ಗಮಕ ಪಾಠ ಮಾಡಿದರು.
ಡಿ.ವಿ. ಗುಂಡಪ್ಪನವರು ಬಿಂದೂರಾಯರ ವ್ಯಕ್ತಿ  ಚಿತ್ರಣವನ್ನು ತಮ್ಮ ಜ್ಞಾಪಕ ಚಿತ್ರಶಾಲೆ ಗ್ರಂಥದಲ್ಲಿ ನಿರೂಪಿಸುತ್ತ, ರಾಯರ ಶಿಷ್ಯ ಸಂಪತ್ತನ್ನು ಕುರಿತು ಹೀಗೆ ಹೇಳಿದ್ದಾರೆ:

’ಬಿಂದೂರಾಯರಿಗೆ ಒಳ್ಳೊಳ್ಳೆಯ ಶಿಷ್ಯ ಶಿಷ್ಯೆಯರು ದೊರೆತದ್ದೂ ಒಂದು ಭಾಗ್ಯ. ಅವರಲ್ಲಿ ಮೊಟ್ಟ ಮೊದಲನೆಯ ಸಾರಿ ಶಿಷ್ಯಯರಾಗಿದ್ದವರಲ್ಲಿ ಶ್ರೀಮತಿ ಶಕುಂತಲಾ ಬಾಯಿ ಪಾಂಡುರಂಗರಾವ್ ಅವರು ಈಗಲೂ ತಮ್ಮ ಕಾವ್ಯವಾಚನದಿಂದ ಸಭಿಕರನ್ನು ಸಂತೊಪಡಿಸುತ್ತಿದ್ದಾರೆ.’

ಧಾರವಾಡದ ಸುಪ್ರಸಿದ್ಧ ಗವಾಯಿ ಗುರುರಾವ್ ದೇಶಪಾಂಡೆ ಅವರೂ ಬಿಂದೂರಾಯರ ಶಿಷ್ಯರಾಗಿ ಕುಮಾರವ್ಯಾಸ ಭಾರತವಾಚನದಲ್ಲಿ ಅತಿ ಪ್ರಸಿದ್ಧರಾಗಿ ಅನೇಕ ಸಪ್ತಾಹಗಳನ್ನು ನಡೆಸಿ ಸನ್ಮಾನಿತರಾಗಿದ್ದಾರೆ. ಬಿಂದೂರಾಯರ ಧಾರವಾಡದ ಶಿಷ್ಯರಲ್ಲಿ ಇನ್ನೊಂದು  ಪ್ರಸಿದ್ಧ ಹೆಸರು ಕೆ.ಜಿ. ಹಲಸಗಿ.

ಹಳೆ ಮೈಸೂರಿನ ಬಿಂದೂರಾಯರ ಶಿಷ್ಯರಲ್ಲಿ ಎಸ್. ನಾಗೇಶರಾವ್, ಎನ್. ಶ್ರೀನಿವಾಸರಾವ್, ಎಂ. ಹರಿ ನಾರಾಯಣ ಜನಪ್ರಿಯ ಗಮಕಿಗಳು.

ಕುಮಾರವ್ಯಾಸನ ಪ್ರವಚನಕಾರರಾದರು

ಪೌರಾಣಿಕರತ್ನ ಹೊಳವನಹಳ್ಳಿ ಶೇಷಾಚಾರ್ಯರು ಕುಮಾರವ್ಯಾಸನನ್ನು ವರಕವಿ, ಮಹಾಶಾಸ್ತ್ರಜ್ಞ ಮಹಾನುಭಾವ ಎಂದು ಕೀರ್ತಿಸಿದರಲ್ಲ! ಅಂದಿನಿಂದಲೇ ಬಿಂದೂರಾಯರು ಭಾರತಕ್ಕೆ ಸಂಬಂಧಪಟ್ಟ ಹಾಗೆ ಸಂಸ್ಕೃತದಲ್ಲಿ ಶಾಸ್ತ್ರಾಭ್ಯಾಸಕ್ಕೆ ಪ್ರಾರಂಭಿಸಿದರು. ವ್ಯಾಸಂಗ ಮುಂದುವರಿದ ಹಾಗೆ ಕುಮಾರವ್ಯಾಸ ಬಿಂದೂರಾಯರಿಗೆ ಅಸಾಧಾರಣ ಪುರುಷನಾಗಿ ಕಾಣತೊಡಗಿದ. ತಾವು ಕುಮಾರವ್ಯಾಸ ಭಾರತದಲ್ಲಿ ತಪಸ್ಸಿದ್ಧಿ ಪಡೆದರು. ಗಮಕ ಕಲಾವಿದರಾಗಿ ಬೆಳಕಿಗೆ ಬಂದ ಭಾರತವಾಛನ ಪ್ರವೀಣ ಬಿಂದೂರಾಯರು ಕುಮಾರವ್ಯಾಸ ಭಾರತದ ಪ್ರವಚನಕಾರರಾಗಿ ಹೊಸ ಹುಟ್ಟು ಪಡೆದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ವಿ.ಬಿ.ನಾಯಕರು ಹುಬ್ಬಳ್ಳಿಯಲ್ಲಿ ಕುಮಾರವ್ಯಾಸ ಭಾರತ ವಾಛನ ಪ್ರವಚನದ ಏರ್ಪಾಟು ಮಾಡಿದರು. ಬಿಂದೂರಾಯರ ಕುಮಾರವ್ಯಾಸ ಭಾರತ ಪ್ರವಚನ ನಾಲ್ಕೂವರೆ ತಿಂಗಳ ಕಾಲ ನಡೆಯಿತು. ಅವರ ಕುಮಾರವ್ಯಾಸ ಭಾರತ ವಾಚನ ಪ್ರವಚನವನ್ನು ಹುಬ್ಬಳ್ಳಿಯ ಜನ ಕಿಕ್ಕಿರಿದು ಆಲಿಸಿದರು.

ಹೀಗೆ ಹುಬ್ಬಳ್ಳಿಯಲ್ಲಿ ಮೊಟ್ಟ ಮೊದಲು ಪ್ರಾರಂಭವಾದ ಬಿಂದೂರಾಯರ ಕುಮಾರವ್ಯಾಸ ವಾಚನ ಪ್ರವಚನ ಕಾರ್ಯಕ್ರಮಗಳು ಗದಗ, ಧಾರವಾಡ, ಬಿಜಾಪುರ, ಬೆಂಗಳೂರು, ಮಂಗಳೂರುಗಳಲ್ಲಿ ಹತ್ತಾರು ವರ್ಷಗಳಲ್ಲಿ ತಿಂಗಳುಗಟ್ಟಳೆ ನಡೆದು ಲೆಕ್ಕವಿಲ್ಲದಷ್ಟು ಮಂಗಳೋತ್ಸವಗಳನ್ನು ಕಂಡವು. ಅವರ ಕಡೆಯ ಕುಮಾರವ್ಯಾಸ ಭಾರತ ವಾಚನ ಪ್ರವಚನ ಕಾರ್ಯಕ್ರಮ ೧೯೬೮ರಲ್ಲಿ ಬಾಗಿಲುಕೋಟೆಯಲ್ಲಿ ನಡೆಯಿತು. ಮಂಗಳ ಮಹೋತ್ಸವವನ್ನು ಮುಗಿಸಿಕೊಂಡು ಬಾಗಿಲುಕೋಟೆಯಿಂದ ಚಿತ್ರದುರ್ಗಕ್ಕೆ ಹಿಂದಿರುಗಿದ ಬಿಂದೂರಾಯರು ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದರು. ೧೯೬೯ರ ಮಾರ್ಚ್ ೧೨ ರಂದು ಬಿಂದೂರಾಯರು ತಮ್ಮ ಕೊನೆಯುಸಿರೆಳೆದರು. ಆಗ ಅವರಿಗೆ ೯೨ ವರ್ಷ ವಯಸ್ಸು.

ರಾಯರು ಕೊನೆವರೆಗೂ ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರಚಾರಕರಾಗಿ ಸೇವೆ ಸಲ್ಲಿಸಿದರು. ಕನ್ನಡ ನಾಡಿನಲ್ಲಿ ಗಮಕ ಕಲೆಯ ಬೆಳವಣಿಗೆಗೆ ಶ್ರಮಿಸಿದರು. ಕುಮಾರವ್ಯಾಸನ ಕಾವ್ಯವನ್ನು ವಿದ್ವಾಂಸರು, ಸಾಮಾನ್ಯ ಜನ, ಅಕ್ಷರ ತಿಳಿಯದವರು ಎಲ್ಲರ ಅಂತಃಕರಣಕ್ಕೆ ಮುಟ್ಟಿಸಿದ ಹಿರಿಯರು ಅವರು.