ಮಂಜರಾಬಾದ್ ಕೋಟೆ, ಸಕಲೇಶಪುರ

ದೂರ ಎಷ್ಟು?

ಜಿಲ್ಲಾ ಕೇಂದ್ರದಿಂದ : ೫೩ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೩ ಕಿ.ಮೀ

 

ಕ್ರಿ.ಶ. ೧೭೯೨ರಲ್ಲಿ ಟಿಪ್ಪು ಸುಲ್ತಾನ್ ಈ ಕೋಟೆ ಕಟ್ಟಿಸಿದನು

ಭೂಮಟ್ಟದಿಂದ ೩೩೯೩ ಅಡಿ ಎತ್ತರದಲ್ಲಿರುವ ಅಡಾಣಿ ಗುಡ್ಡದ ಮೇಲೆ ನಿರ್ಮಿಸಿದ ಟಿಪ್ಪುವಿನ ಗಿರಿದುರ್ಗ ಮಂಜರಾಬಾದ್ ಕೋಟೆ. ಕೋಟೆಯ ಮುಂಭಾಗ ಸೂಕ್ಷ್ಮವಾದ ಅಲಂಕಾರದೊಡನೆ ಮೊದಲನೇ ದ್ವಾರ ಹಿಂದೂ ಮುಸ್ಲಿಂ ಶೈಲಿಯಲ್ಲಿದೆ. ಕೆಳಹಂತದಿಂದ ೯೦೦ ಡಿಗ್ರಿಯಲ್ಲಿ ರಚಿತವಾದ ೨೫೨ ಮೆಟ್ಟಿಲುಗಳು. ಸುಂದರ ಕಲಾಕೃತಿಯುಳ್ಳ ಕೋಟೆಯು ೧ನೇ ಬಾಗಿಲು. ಹೊರಗಿನವರನ್ನು ಒಳಗೆ ಬಿಡುವಾಗ, ತಪಾಸಣೆ ಮಾಡಲೆಂದು ಕಟ್ಟಡದ ಪರಿವೀಕ್ಷಣಾ ಕೊಠಡಿಗಳಿವೆ. ಕೋಟೆಯ ವಾಸ್ತವಿಕ ನಕ್ಷೆಯನ್ನು ೩ನೇ ಬಾಗಿಲಿನಲ್ಲಿ ಭುವನೇಶ್ವರಿ ಚಿತ್ರ ಬಿಡಿಸುವ ಸ್ಥಳದಲ್ಲಿ ರಚಿಸಲಾದ ನಕ್ಷತ್ರಾಕಾರದ ಕೋಟೆಯಿದೆ. ಕೋಟೆಯ ಹಿಂಬದಿಯ ಕಂದಕದ ಮೂಲೆಯ ನೋಟ ಪದಭಾಗದಿಂದ ೨೫ ಅಡಿ ಎತ್ತರವಾಗಿ ಕೋಟೆ ಇದೆ. ಮುಖ್ಯ ಕೋಟೆಯ ಆಗ್ನೇಯ ದಿಕ್ಕಿನಲ್ಲಿ ರಚಿತವಾದ ಕಲಾತ್ಮಕತೆಯ ಗೋಪುರ. ಚೌಕಾಕಾರವಾಗಿ ಕಾಣುವ ರಹಸ್ಯಕೋಣೆ, ಮದ್ದು ಸಂಗ್ರಹಿಸಿಡುತ್ತಿದ್ದ ಕೋಣೆಗಳಿವೆ. ಕೋಟೆಯ ಮಧ್ಯಬಿಂಧುವಿನಲ್ಲಿರುವ ೪೦ x ೪೦ ಅಡಿ ಅಳತೆಯ ೪ ದಿಕ್ಕುಗಳಲ್ಲಿಯೂ ಮೆಟ್ಟಿಲಿರುವ ಕೊಳಗಳಿವೆ.

 

ತೂಗು ಸೇತುವೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೧೧೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೬೦ ಕಿ.ಮೀ

ಕಾಗಿನದಿ :- ಸಕಲೇಶಪುರದಿಂದ ೬೦ ಕಿ.ಮೀ ಅಂತರದಲ್ಲಿರುವ ಈ ಸ್ಥಳ ಪ್ರೇಕ್ಷಣೀಯವಾಗಿದೆ. ಹಳೆಯ ಕೋಟೆ ಮತ್ತು ಸೃಷ್ಟಿಯ ಸೊಬಗು ಆಕರ್ಷಕವಾಗಿದೆ. ಬ್ರಿಟಿಷರ ಕಾಲದ ಬ್ಯೂಟಿಸ್ಪಾಟ್ ಕಣ್ಣೆದುರಿಗೆ ಮಡಿಕೇರಿ ಜಿಲ್ಲೆಯ ಕುಮಾರ ಪರ್ವತ ಈ ಕಡೆ ದಕ್ಷಿಣ ಕನ್ನಡ ಜಿಲ್ಲೆ ಘಟ್ಟ ಶ್ರೇಣಿ ಮತ್ತು ಜೇನುಕಲ್ಲು ಗುಡ್ಡಗಳಲ್ಲಿರುವ ಕಣಿವೆ ಕಂದಕಗಳ ನಿತ್ಯಹರಿದ್ವರ್ಣಮಯ ರಮ್ಯ ಸೊಬಗು ಒಟ್ಟಾರೆಯಾಗಿ ಗೋಚರಿಸುತ್ತವೆ. ೩ ರಿಂದ ೪ ಸಾವಿರ ಅಡಿಗಳಿಗೂ ಎತ್ತರವಾದ ಈ ಪರ್ವತ ಸಮುಚ್ಚಯಗಳು ಒಟ್ಟಾರೆಯಾಗಿ ಕಾಣುವಂತೆ, ಸಕಲೇಶಪುರದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯ ಮುಂದೆ ಬ್ರಿಟಿಷರ ಕಾಲದಲ್ಲಿಯೇ ಒಂದು ಕಟ್ಟೆಯನ್ನು ಕಟ್ಟಿದ್ದಾರೆ. ಈ ಕಟ್ಟೆಯ ಮೇಲೆ ನಿಂತು ನೋಡಿದಾಗ ಉತ್ತುಂಗ ಶಿಖರ ಶ್ರೇಣಿ ಅಲ್ಲಲ್ಲಿ ಮೇಲಿನಿಂದ ಬಿಳಿಹಾವಿನಂತೆ ಹರಿದು ಬರುವ ಜರಿಜಲಪಾತ ಹಸಿರು ಪ್ರಕೃತಿಗಳು ಗೋಚರಿಸುತ್ತವೆ. ಇದೊಂದು ರಮ್ಯ ಮನೋಹರವಾದ ಸ್ಮರಣೀಯ ಸ್ಥಳವಾಗಿದೆ.

 

ಕಾಡುಮನೆ ಎಸ್ಟೇಟ್

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೭೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೫ ಕಿ.ಮೀ

೧೫೦ ವರ್ಷಗಳ ಹಿಂದೆ ಬೆಟ್ಟಗುಡ್ಡ ಕಂದರಗಳಿಂದ ಕೂಡಿದ್ದ ಈ ಸ್ಥಳವು ಮೊದಲು ಕಾಫಿ ತೋಟವಾಗಿ ಇದೀಗ ಸಾವಿರಾರು ಎಕರೆ ಭೂ ಪ್ರದೇಶದಲ್ಲಿರುವ ಟೀ (ಚಹ) ಎಸ್ಟೇಟ್ ಆಗಿ ನಿರ್ಮಾಣವಾಗಿದೆ. ೩,೦೦೦ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಇಲ್ಲಿ ಟೀ ಸಂಸ್ಕರಣ ಕೇಂದ್ರವಾಗಿದ್ದು, ಕಾಡಿನೊಳಗಿರುವ ಮನೆಗಳ ಎಸ್ಟೇಟ್ ಇದಾಗಿ “ಕಾಡುಮನೆ ಎಸ್ಟೇಟ್ ಎಂದೇ ಕರೆಯಿಸಿಕೊಳ್ಳುತ್ತಿದ್ದ. ಇಡೀ ಕರ್ನಾಟಕದಲ್ಲಿ ಈ ಟೀ ಎಸ್ಟೇಟ್ ಸುಂದರ ಪ್ರಕೃತಿಯ ಮಡಿಲಲ್ಲಿ ಇದೆ ವಿಹಾರಧಾಮವಾಗಿ ಪ್ರೇಕ್ಷಣೀಯ ಸ್ಥಳವಾಗಿ ಪರಿಣಮಿಸಿದ ಈ ಕಾಡು ಮನೆಯಲ್ಲಿ ಏಲಕ್ಕಿಯನ್ನು ಕೂಡ ಬೆಳೆಯಲಾಗುತ್ತಿದ್ದು ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು, ಪುರುಷರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಹಾಯಕವಾಗುತ್ತಿದೆ. ಉತ್ತಮ ಮಟ್ಟದ ಟೀ ಪುಡಿಯನ್ನು ತಯಾರಿಸುತ್ತಿದ್ದು ಇದರ ರುಚಿಗೆ ಜಿಲ್ಲಾದ್ಯಂತ ಹೆಚ್ಚಿನ ಬೇಡಿಕೆಯಿದೆ.

 

ಉದಯವಾರ ದೊಡ್ಡಮನೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೪ ಕಿ.ಮೀ

ಮೈಸೂರಿನ ಅರಮನೆಯನ್ನೇ ಹೋಲುವ ಮಹಾಸೌದ ಕ್ರಿ.ಶ.೧೭೦೦ರಲ್ಲಿ ಲಿಂಗಣ್ಣಗೌಡರು ಅಪ್ರತಿಮವಾದ ಕಲಾಸೌಧವನ್ನು ಕಟ್ಟಿಸಿದ್ದಾರೆ. ಕಲಾ ಪ್ರೋತ್ಸಾಹದ ಅಭಿಮಾನಿಯೂ ಆvದ್ದ ಲಿಂಗಣ್ಣಗೌಡರು ಈ ಪರಿಸರದಲ್ಲಿ ಆಳ್ವಿಕೆ ಮಾಡಿದರಲ್ಲದೇ ಮೈಸೂರು ಅರಸರ ರಾಜ ಪ್ರತಿನಿಧಿಗಳೂ ಆಗಿದ್ದರೆಂದು ಹೇಳಲಾಗಿದೆ. ಬೇಲೂರಿನ ಶಿಲ್ಪಕಲಾ ವೈಭವವನ್ನು ನೋಡಿ ತಮ್ಮ ಊರಿನಲ್ಲಿಯೇ ಇಂತಹ, ಸೌಧವನ್ನು ಮರದಲ್ಲಿಯೇ, ನಿರ್ಮಿಸಬೇಕೆಂಬ ಕನಸು ಹೊತ್ತು ಕಟ್ಟಿಸಿದರೆಂದು ತಿಳಿದು ಬಂದಿದೆ. ಹೀಗಾಗಿ ಮಲೆನಾಡಿನ ಗರ್ಭದಲ್ಲಿ ಅರಳಿದ ಸುಂದರ ಕಲಾ ಭಂಡಾರವಿದಾಗಿದೆ.

ಕೊರಡಲ್ಲಿ ದವರು :- ೮೦ ಭಾಗವೆಲ್ಲ ಮರದಲ್ಲಿಯೇ ಮಾಡಿದ ಹೊಯ್ಸಳ ಶೈಲಿಯ ವಿಭಿನ್ನ ಮಾದರಿಯ ಕಲಾಕೃತಿಗಳೇ ಆಗಿದೆ. ಕಂಬದಿಂದ ಕಂಬಗಳಲ್ಲಿ ಕೆತ್ತಲಾದ ಕಮಾನುಗಳು ವಿಜಯನಗರದ ಶೈಲಿಯವುಗಳಾಗಿವೆ. ಮೈಸೂರಿನ ಅರಮನೆಯ ಮೂರ್ತಿ ಸ್ವರೂಪದಂತಹ ಕಲಾಪ್ರಕಾರದ ಸಾಧನವನ್ನು ೩೦೦ x ೩೦೦ ಅಡಿಗಳ ವಿಸ್ತಾರದಲ್ಲಿ ಅರಮನೆಯ ತದ್ರೂಪ ತಾಳೀತು. ವಿಜಯನಗರದ ಸಾಂಸ್ಕೃತಿಕ ಶೈಲಿಯ ಕಮಾನಿನ ಮೈಸೂರಿನ ಛಾಯೆ ರೂಪುಗೊಂಡಿತು.

ಈಗಲೂ ಸಹ ಖ್ಯಾತಿವೆತ್ತ ಈ ವೃತ್ತಕಾರದ ಸ್ಮಾರಕಗಳಾದ, ಕತ್ತಿ, ಗುರಾಣಿ, ಬರ್ಜಿ, ಶಾಲು, ರಾಜರಾಜೇಶ್ವರಿ ನೂರಾರು ಫಿರಂಗಿ ಗುಂಡುಗಳು ಕಲ್ಲಿನ ದೋಣಿ ಉಯಲೆ ಮಂಚ, ಇತ್ಯಾದಿ ನೋಡಲು ಲಭ್ಯವಾಗಿದೆ.

 

ಸಕಲೇಶಪುರದ ಶಾಖಾ ಗ್ರಂಥಾಲಯ:

ಗ್ರಂಥಗಳ ಆಲಯವಾದ ಇಲ್ಲಿಯ ಗ್ರಂಥಾಲಯದಲ್ಲಿ ಸಾಹಿತಿ, ಮತ್ತು ಇತಿಹಾಸಕಾರರಾದ ಚಂದ್ರಶೇಖರ್ ಧೂಳೇಕರ್ ಅವರ ಶ್ರಮದ ಸಾಧನೆಯ ಫಲವಾಗಿ ಗ್ರಂಥಾಲಯದಲ್ಲಿ ವಸ್ತು ಸಂಗ್ರಹಾಲಯವೊಂದು, ನಿರ್ಮಾಣವಾದದ್ದು, ವಿಶೇಷವೆಂದೇ ಹೇಳಬಹುದು. ಇಲ್ಲಿ ವಸ್ತುಗಳು ಸ್ವತಂತ್ರವಾದರೂ ಇವರು ಇಲ್ಲಿಯ ಗ್ರಂಥಪಾಲಕರು ಆಗಿದ್ದರಿಂದ ಸಾಮಾನ್ಯ ಜನರ ಐತಿಹಾಸಿಕ ಪ್ರಜ್ಞೆಯನ್ನು ಹೆಚ್ಚಿಸಲಕ್ಕಾಗಿ ಈ ವಿನೂತನ ಪ್ರಯತ್ನವನ್ನು ಮಾಡಿದ್ದಾರೆ.

ದಾಖಲೆಗಳು :- ಈ ಗ್ರಂಥಾಲಯ ಒಂದು ಕೊಠಡಿಯಲ್ಲಿ ೫೦೦ ವರ್ಷಗಳ ಹಿಂದಿನ ಹಸ್ತ ಪ್ರತಿಗಳು ೧೦೦ ವರ್ಷಗಳ ಹಿಂದಿನ ಚಾಪ ಕಾಗದಗಳು, ಟಿಪ್ಪು ಕಾಲದ ಪತ್ರಗಳು, ಐತಿಹಾಸಿಕ ಕಾಲದ ರಶೀದಿಗಳು, ಸಾಹಿತಿಗಳ ಹಸ್ತಾಕ್ಷರಗಳು, ಸ್ವಾತಂತ್ರ್ಯ ಪೂರ್ವದ ಪತ್ರಿಕೆಗಳು, ಬ್ರಿಟಿಷರ  ಕಾಲದ ಅಂಚೆ ಪತ್ರಗಳು, ಮತ್ತು ಕವರುಗಳು ಸ್ವಾತಂತ್ರ್ಯ ಪೂರ್ವದ ಆಹ್ವಾನ ಪತ್ರಗಳು ಲಾಟರಿ ಟಿಕೇಟುಗಳು ಮತ್ತು ೫೦೦ ವರ್ಷಗಳ ವಂಶವೃಕ್ಷ ಸಹ ಇಲ್ಲಿದ್ದು, ಪಿ.ಹೆಚ್.ಡಿ. ವಿದ್ಯಾರ್ಥಿಗಳೇ ಆಕಾರವಾಗಿದೆ.

ಸಂದರ್ಭ ಸೇವಾ ವಿಭಾಗ :- ಈ ವಿಭಾಗದಲ್ಲಿ ವೈವಿಧ್ಯಮಯ ವಸ್ತುಗಳು ಇದ್ದು, ಮೊದಲನೆದಾಗಿ ೩೦ದೇಶಗಳ ಕರೆನ್ಸಿ ನೋಟುಗಳು, ಸ್ವಾತಂತ್ರ್ಯ ಪೂರ್ವದ ಅಂಚೆ ಚೀಟಿಗಳು, ಐತಿಹಾಸಿಕ ಕಾಲದ ದ್ವೀಪಸ್ತಂಭಗಳು, ಸ್ವಾತಂತ್ರ್ಯ ಪೂರ್ವದ ಬೆಳ್ಳಿ, ಹಿತ್ತಾಳೆ, ತಾಮ್ರದ ನಾಣ್ಯಗಳು ೫೦೦ ವರ್ಷಗಳ ಹಿಂದಿನ ಸಂಸ್ಕೃತ ಹಳೆಗನ್ನಡದ ತಾಳೆ ಓಲೆ ಗ್ರಂಥಗಳು, ಪುಟ್ಟ ದೇವತಾ ವಿಗ್ರಹಗಳು, ಕಲಾತ್ಮಕ ಅಗ್ಗಿಷ್ಟಿಕೆ ವಿಶೇಷವಾದ ಸ್ಟೌವುಗಳು ಹಳೆಕಾಲದ ಕ್ಯಾಮರ್‌ಗಳು ಕಲಾತ್ಮಕ, ಹಿತ್ತಾಳೆ, ತಟ್ಟೆಲೆಗಳು, ಮಾಪನಗಳು, ಮೊಸಳೆ ಹಲ್ಲಿನ ಕತ್ತಿ ಮತ್ತು ಸಾಮಾನ್ಯ ಕತ್ತಿಗಳು, ಬೆಳ್ಳಿಯ ಸ್ತ್ರೀಯರ ಆಭರಣಗಳು, ಹೀಗೆ ಅಸಂಖ್ಯಾತ ವೈವಿಧ್ಯಮಯ ವರ್ಣ ರಂಜಿತ ಐತಿಹಾಸಿಕ ವಸ್ತುಗಳನ್ನು ಈ ಗ್ರಂಥಾಲಯದಲ್ಲಿ ಇರಿಸಲಾಗಿದೆ. ಈ ವಸ್ತುಗಳೆಲ್ಲ ಈ ಭಾಗದಲ್ಲಿ ದೊರೆತವುಗಳಾಗಿವೆ. ಮುದೊಂದು ದಿನ ಈ ವಸ್ತುಗಳ ಸಂರಕ್ಷಣೆಗಾಗಿ ಪಟ್ಟಣದಲ್ಲಿ ಒಂದು ‘ಮ್ಯೂಜಿಯಂ’ ಸ್ಥಾಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

 

ಕೆಂಪು ಹೊಳೆ (ಎತ್ತಿನಹಳ್ಳ)

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೪ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೪ ಕಿ.ಮೀ

ಇದು ಸಾಮಾನ್ಯವಾಗಿ ಹಾನುಬಾಳಿನ ಎತ್ತಿನಹಳ್ಳ ದೇವಾಲಯದ ಕೆರೆ ಅಗನಿ ಸಮೀಪ ಹುಟ್ಟಿ, ಹಾರ್ಲೆ ಮುಖಾಂತರ ಹರಿದು ಕೆಂಚಗ ಕುಂಬ್ರಿ ರಕ್ಷಿ ತಾರಣ್ಯ ದಾಟಿ ಟಾಕ್ಕಡ್ ಹತ್ತಿರ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿಗೆ ಸೇರುತ್ತದೆ. ಇದು ಭತ್ತ ಮತ್ತು ಕಾಫಿ ಬೆಳೆಯುವವರಿಗೆ ಹೆಚ್ಚು ಉಪಯೋಗ ವಾಗಿದ್ದು, ಕೃಷಿಕರಿಗೆ ಸಂಜೀವಿನಿಯಾಗಿದೆ.

 

ಹೊಳೆಮಲ್ಲೇಶ್ವರ ದೇವಸ್ಥಾನ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೧ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೧ ಕಿ.ಮೀ

ಸಕಲೇಶಪುರ ತಾ|| ವಲಳಲ್ಲಿ ಮಂಜಯ್ಯನೆಂಬ ಶಿವಭಕ್ತನು ಕಾಲ್ನಡಿಗೆಯಿಂದ ಕಾಶಿಗೆ ಹೋಗಿ, ಕಾಶಿ ವಿಶ್ವನಾಥನ ದರ್ಶನ ಪಡೆದು, ಆ ವಿಶ್ವನಾಥನ ಮೂರ್ತಿಯನ್ನು ಹೊಳೆಯ ದಡದಲ್ಲಿ ಮಲ್ಲೇಶ್ವರನನ್ನು ಸ್ಥಾಪಿಸಿದ್ದರಿಂದಲೂ, ಈ ದೇವರು ಹೊಳೆಯ ಅಂಚಿನಲ್ಲಿರುವುದೆಂದಲೂ ಈ ದೇವಾಲಯಕ್ಕೆ ಹೊಳೆಮಲ್ಲೇಶ್ವರ ದೇವಾಲಯವೆಂದು ಕರೆಯಲಾಯಿತು. ಮಂಜಯ್ಯನವರು ಕಾಶಿಗೆ ಹೋಗಿ ಬಂದ ಕಾಲ ೧೮೯೫. ಇಲ್ಲಿ ಒಂದು ಮಠವನ್ನು ಸ್ಥಾಪಿಸಿ, ಧರ್ಮಸ್ಥಳಕ್ಕೆ  ಹೋಗಿಬರುತ್ತಿದ್ದ ಭಕ್ತಾದಿಗಳಿಗೆ ದಾಸೋಹವನ್ನು ಏರ್ಪಡಿಸಲಾಗಿತ್ತು. ನಂತರ ಎಲ್ಲವೂ ಶಿಥಿಲಗೊಂಡು ಕುರುಚಲು ಕಾಡಿನಿಂದ ತುಂಬಿಕೊಂಡಿತು. ನಂತರ ೧೯೮೩ ರಿಂದ ಅಭಿವೃದ್ಧಿಯಾಗುತ್ತಾ ಬಂದ ಈ ದೇವಾಲಯ ೨೦೦೧ರಲ್ಲಿ ಧೂಲ್‌ರಾಜ್ ಜೈನ್‌ರವರ ಅಧ್ಯಕ್ಷತೆಯಲ್ಲಿ ಸುಂದರವಾದ ಚಾಲುಕ್ಯ ಶೈಲಿಯ ದೇವಾಲಯವನ್ನು ಕಟ್ಟಲಾಯಿತು. ಮುಖಮಂಟಪದ ಮೇಲೆ ೧೮ ಅಡಿ ಎತ್ತರದ ಶಿವನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಪ್ರತೀ ವರ್ಷ ಅನ್ನಧಾನ, ಸಂಗೀತ ಕಛೇರಿ, ಶಿವಾರಾಧನೆ, ಪ್ರತಿಭಾಪ್ರಕಾಶನ ನಡೆಯುತ್ತಿವೆ ಮತ್ತು ಸಕಲೇಶಪುರಕ್ಕೆ ಆಕರ್ಷಕವಾದ ಸುಂದರಪರಿಸರದಲ್ಲಿರುವ ಈ ಹೊಳೇಮಲ್ಲೇಶ್ವರ ದೇವಾಲಯವು ಪ್ರಸಿದ್ಧ ಪ್ರವಾಸೀ ಕ್ಷೇತ್ರವಾಗಿದೆ.

 

ಕನ್ನಿಕಾಪರಮೇಶ್ವರಿ ದೇವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೧ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೦ ಕಿ.ಮೀ

ವೈಶ್ಯಧರ್ಮದ ಆರಾಧ್ಯ ದೈವವಾದ ಕನ್ನಿಕಾಪರಮೇಶ್ವರಿ ದೇವಾಲಯವು ಈ ಹಿಂದೆ ವಾಸವಿ ವಿದ್ಯಾ ವಿಹಾರದಲ್ಲಿತ್ತು. ೧೯೮೧ರಲ್ಲಿ ದಿ.ಹಾ.ಸು. ರಂಗಶೆಟ್ಟಿಯವರು ಅಶೋಕ ರಸ್ತೆಯಲ್ಲಿ ದೊಡ್ಡ ನಿವೇಶನವನ್ನು ಕೊಂಡು ಕನ್ನಿಕಾಪರಮೇಶ್ವರಿ ದೇವಾಲಯ ಸಮಾಜದವರೊಂದಿಗೆ ಸೇರಿ ಇಂದಿನ ಬೃಹತ್ತಾದ ಕನ್ನಿಕಾಪರಮೇಶ್ವರಿ ದೇವಾಸ್ಥಾನವನ್ನು ನಿರ್ಮಿಸಿದರು. ಈ ದೇವಸ್ಥಾನದಲ್ಲಿರುವ ಎಲ್ಲಾ ಅಂಗಗಳಲ್ಲಿಯೂ, ವಾಸ್ತುಕಲೆಯ ವೈಭವ ಎದ್ದು ಕಾಣುತ್ತದೆ. ಉದ್ಯುಕ್ತವಾಗಿ ಈ ದೇವಾಲಯ ೧೯೯೫ರಲ್ಲಿ ಉದ್ಘಾಟನೆಯಾಯಿತು. ಈ ದೇವಸ್ಥಾನದಲ್ಲಿ ಕೈಸಾಲ, ರಾಜಗೋಪುರ, ಪ್ರಾರ್ಥನಾಲಯ, ಪಾಕಶಾಲೆಗಳನ್ನು ಹೊಂದಿದೆ. ಗರ್ಭಗೃಹವನ್ನು ವಿಶೇಷವಾದ ಶಿಲೆಯಿಂದ ಅಲಂಕರಿಸಲಾಗಿದೆ. ಗರ್ಭಗುಡಿಯಲ್ಲಿರುವ ಕನ್ನಿಕಾಪರಮೇಶ್ವರಿಯ ವಿಗ್ರಹವನ್ನು ಕೃಷ್ಣಶಿಲೆಯಲ್ಲಿ ಕಂಡಿರಿಸಿ ಹಸನ್ಮುಖಗೊಳಿಸಲಾಗಿದೆ. ಇದು ಗೋಪುರಗಳುಳ್ಳ ರಾಜಗೋಪುರವು ಬಹುದೂರದಿಂದಲೂ ಕಾಣುತ್ತಿದ್ದು ಕಲಾತ್ಮಕವಾಗಿದೆ. ದ್ವಾರ ಬಾಗಿಲಿನ ಎಡ-ಬಲದಲ್ಲಿರುವ ಸುಂದರ ಅಂಗ ಸೌಷ್ಟವದ ದ್ವಾರ ಪಾಲಿಕೆಯರು ಮತ್ತು ಗೋಪುರದ ಮೇಲು ಹಂತದಲ್ಲಿ ಕನ್ನಿಕಾಪರಮೇಶ್ವರಿಯ ಜೀವನಚರಿತ್ತೆಯನ್ನೊಂಡ ಭಿತ್ತಿಚಿತ್ರಗಳನ್ನು ಸಿಮೆಂಟಿನಲ್ಲಿ ರೂಪಿಸಲಾಗಿದೆ. ಈ ದೇವಾಲಯದಲ್ಲಿ ವೈಶ್ಯ ಜನಾಂಗದ ವೃತ್ತಿ ಲಾಂಛನಗಳು ವಿಶೇಷವಾದ ದರ್ಪಣ ಮಂದಿರಗಳು ಇದ್ದು, ಪ್ರತೀ ವರ್ಷ ಪೂಜೆ, ಹೋಮಾದಿಗಳು ನಡೆಯುತ್ತಿವೆ. ಇದೊಂದು ಸಕಲೇಶಪುರದ ವಿಶೇಷವಾದ ಸ್ಮಾರಕಗಳಲ್ಲಿ ಒಂದಾಗಿದೆ.

 

ರಾಜೇಂದ್ರಪುರ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೮ ಕಿ.ಮೀ

೧೦ನೇ ಶತಮಾನದಿಂದ ಪ್ರಚಲಿತವಾಗಿರುವ ರಾಜೇಂದ್ರಪುರದಲ್ಲಿ ಚಂಗಾಳ್ವರಾಜ ರಾಜೇಂದ್ರ ಚೋಳನು ಇಲ್ಲಿಯ ಬಸವೇಶ್ವರ ದೇವಾಲಯವನ್ನು ನಿರ್ಮಿಸಿದ್ದಾನೆ. ಬನವಾಸಿಯಲ್ಲಿ ಆಳಿದ ಉತ್ತರ ಕದಂಬರ ಮೂಲಪುರುಷ ಚಾಮರಸನ ಬಗೆಗೆ ಬರೆದ ಮೂಲ ಶಾಸನವೊಂದು ದೇವಾಲಯದ ತೊಲೆಯಮೇಲಿದ್ದುದ್ದನ್ನು, ಈಗ ಹೊರಗಡೆ ಸ್ಥಾಪಿಸಲಾಗಿದೆ. ಐತಿಹಾಸಿಕವಾಗಿರುವ ರಾಜೇಂದ್ರಪುರದಲ್ಲಿ ಹೊಯ್ಸಳರಿಗೂ, ಕದಂಬರಸರಿಗೂ ಯುದ್ಧಗಳಾಗಿದೆ. ಇಲ್ಲಿ ಅಪೂರ್ವವಾದ ಬಸವೇಶ್ವರ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರಿದ್ದಾರೆ. ಪ್ರತೀ ವರ್ಷವು ಏಪ್ರಿಲ್ ತಿಂಗಳಲ್ಲಿ ಜಾತ್ರೆಯು ನೆರವೇರುತ್ತಿದ್ದು, ಇತ್ತೀಚೆಗೆ ಈ ದೇವಸ್ಥಾನವನ್ನು ಕಲಾತ್ಮಕವಾಗಿ, ಸುಂದರವಾಗಿ ನಿರ್ಮಿಸಿದ್ದಾರೆ.