ಬೇಸಗೆಯ ದಿನಗಳಲ್ಲಿ ಮೋಜು ಮಾಡಲು ನಮಗೆ ದೊರೆಯುತ್ತಿದ್ದ ಹಲವು ವಿಷಯಗಳಲ್ಲಿ ಬಾಂಬೆ ಶೋ ಕೂಡ ಒಂದು. ಆಗಿನ್ನೂ ಮೋಜಿನ ರೆಸಾರ್ಟ್ಗಳು ಕನಸಾಗಿದ್ದ ಸಮಯ.  ಕಬ್ಬಿಣದ ಬಾವಿಯ ಗೋಡೆಯ ಮೇಲೆ ಕೆಂಪು ಬೈಕ್ ಓಡುವ ರೋಮಾಂಚಕ ಸಾಹಸ, ಕತ್ತಲೆಯ ಗುಡಾರದೊಳಗೆ ಮಾನವ ತಲೆಯಿರುವ ಹಾವಿನ ವಿಸ್ಮಯ, ಅಷ್ಟಾವಕ್ರ ಕನ್ನಡಿಗಳ ಮುಂದೆ ನಿಂತು ಚಿತ್ರ-ವಿಚಿತ್ರವಾಗಿ ತೋರುವ ಪ್ರತಿಬಿಂಬಗಳನ್ನು ಕಾಣುವ ಮೋಜು, ಇವೆಲ್ಲಕ್ಕಿಂತಲೂ ಅತಿ ಇಷ್ಟವಾಗುತ್ತಿದ್ದದ್ದು ಟಿಕೆಟ್ ಗೂಡಿನ ಬಳಿಯೇ ಸೈಕಲ್ ಮೇಲೆ ಒಂದು ಪುಟ್ಟ ರಾಗಿ ಗಿರಣಿಯಂತಹ ಉಪಕರಣವನ್ನು ಕೈಯಿಂದ ತಿರುಗಿಸುತ್ತಾ ಗುಲಾಬಿ ಬಣ್ಣದ ಕಾಟನ್ ಕ್ಯಾಂಡಿ ಸೃಷ್ಟಿಯಾಗುವ ಮ್ಯಾಜಿಕ್.

ಉದ್ದನೆಯ ಕಡ್ಡಿಯ ತುದಿಯಲ್ಲಿದ್ದ ಕ್ಯಾಂಡಿ ಬಾಯಿಗಿಟ್ಟ ಕೂಡಲೆ ಕರಗಿ ಹೋಗುತ್ತಿತ್ತು. ಭಾರಿ ಗಾತ್ರ ಎನಿಸಿದರೂ, ಕ್ಷಣ ಮಾತ್ರದಲ್ಲಿ ಮರೆಯಾಗುತ್ತಿದ್ದ ಕ್ಯಾಂಡಿಯನ್ನು ಅಮ್ಮ ಬೇಡ, ಬೇಡ ಎಂದರೂ ಕದ್ದಾದರೂ ತಿನ್ನಬೇಕೆನ್ನಿಸುತ್ತಿತ್ತು.  ಹಿರಿಯರಾದ ಮೇಲಿನ ಸಂಭಾವಿತನದಿಂದಾಗಿ ದೂರದಿಂದಲೇ ಅದನ್ನು ನೋಡಿ, ಆಸೆ ಪಟ್ಟ ಮಕ್ಕಳನ್ನು ಅದು ಅನಾರೋಗ್ಯಕರ ಎನ್ನುತ್ತಾ ದೂರ ಕರೆದೊಯ್ಯುವ ನನಗೆ ಮೊನ್ನೆ ಬಾಲ್ಯದ ನೆನಪು ಮರುಕಳಿಸುವಂತೆ ಮಾಡಿದ್ದು ಬ್ರಿಟನ್ನಿನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಪ್ರಕಟಿಸುವ ಸಾಫ್ಟ್ ಮ್ಯಾಟರ್ ಪತ್ರಿಕೆಯ ಮೊನ್ನಿನ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸಂಶೋಧನಾ ಪ್ರಬಂಧ. ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದ ನ್ಯಾನೊಬಯೋಟೆಕ್ನಾಲಜಿ ವಿಭಾಗದ ವಿಜ್ಞಾನಿಗಳು ಕಾಟನ್ ಕ್ಯಾಂಡಿಯನ್ನು ಬಳಸಿಕೊಂಡು, ಸಂಕೀರ್ಣ ನಾಳಸಮೂಹ ಇರುವ ಸಾಧನಗಳನ್ನು ರೂಪಿಸಿದ್ದಾರೆ. ಇದೇ ತಂತ್ರವನ್ನು ಬಳಸಿಕೊಂಡು ನಿಜಾಂಗದಂತೆಯೇ ರಕ್ತನಾಳಗಳ ಜೋಡಣೆಯಿರುವ ಕೃತಕ ಅಂಗಗಳನ್ನು ರೂಪಿಸಬಹುದು ಎನ್ನುವ ಆಸೆ ಇವರದ್ದು.

ಕೃತಕ ಅಂಗಗಳು ಅಂದರೆ ಕಬ್ಬಿಣ, ಉಕ್ಕು, ಪ್ಲಾಸ್ಟಿಕ್ಕಿನಿಂದ ಮಾಡಿದವುಗಳಲ್ಲ. ಅಂತಹ ಅಂಗಗಳೂ ಇವೆ. ಆದರೆ ದೇಹದಲ್ಲಿರುವ ಎಲ್ಲ ಬಗೆಯ ಜೀವಕೋಶಗಳನ್ನೂ ಹುಟ್ಟಿಸಬಲ್ಲ ಆಕರಕೋಶಗಳಿರುವಾಗ ಲೋಹದ ಅಂಗಗಳ ಆಸೆ ಏಕೆ? ಆಕರಕೋಶಗಳನ್ನೇ ಬಳಸಿಕೊಂಡು ಇಷ್ಟ ಬಂದ ಅಂಗಗಳನ್ನು ಬೆಳೆಸಬಾರದೇಕೆ? ಇವು ಇಂದಿನ ಸಂಶೋಧಕರ ಕನಸು. ಕನಸು ಎಂದ ಮಾತ್ರಕ್ಕೆ ಬಹಳ ದಿನಗಳವರೆಗೆ ಕಾಯಬೇಕೆಂದೇನಿಲ್ಲ. ಕಳೆದ ವರ್ಷವಷ್ಟೆ ಅಮೆರಿಕೆಯ ಜೆನೆಂಟೆಕ್ ಕಂಪೆನಿಯ ವೈದ್ಯರುಗಳು ಇಲಿಯ ಪರಿಪೂರ್ಣವಾದೊಂದು ಪ್ರಾಸ್ಟೇಟ್ ಗ್ರಂಯನ್ನು ಆಕರಕೋಶವೊಂದರಿಂದ ಹೊಸದಾಗಿ ಬೆಳೆಸಿದ್ದು ಸುದ್ದಿಯಾಗಿತ್ತು.  ಇದೇ ಬಗೆಯಲ್ಲಿ ಮಾನವನ ಗ್ರಂಯನ್ನೂ ಬೆಳೆಸಬೇಕೆನ್ನುವ ಹಂಬಲ ವೈದ್ಯರಿಗಿದೆ.

ಹಂಬಲವಿದ್ದರೆ ಸಾಕೇ? ಅದನ್ನು ಸಾಕಾರಗೊಳಿಸುವ ಸಾಧನ, ವಿಧಾನಗಳೂ ಕೈಗೆ ದಕ್ಕಬೇಕಲ್ಲವೇ! ಕೃತಕ ಅಂಗಗಳ ನಿರ್ಮಾಣಕ್ಕೆ ಅವಶ್ಯಕವಾದ ಆಕರಕೋಶಗಳ ಶೋಧ ಈಗ ನಿತ್ಯವಿಧಿ ಎನ್ನುವಷ್ಟು ಸರಾಗವಾಗಿಬಿಟ್ಟಿದೆ. ಆದರೆ ಅವುಗಳನ್ನು ಅಂಗರೂಪಕ್ಕೆ ತರುವ ಪ್ರಯತ್ನ ಇನ್ನು ಆರಂಭವಾಗಬೇಕಷ್ಟೆ.  ಈ ಕೆಲಸಕ್ಕೆ ಮೊದಲ ತೊಡಕು ಅಂಗಗಳಿಗೆ ಬೇಕಾಗುವ ಹಂದರ. ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ಒಂದು ಆಕಾರವಿದೆ. ಗಾತ್ರವಿದೆ. ಯಾವುದೇ ಅಚ್ಚು, ಮುದ್ರೆಗಳಿಲ್ಲದೆ ಪ್ರತಿಯೊಂದು ದೇಹದಲ್ಲಿಯೂ ಒಂದೇ ಆಕಾರವಿರುವ ಅಂಗಗಳನ್ನು ನಿಸರ್ಗ ರೂಪಿಸುತ್ತದೆಯಲ್ಲ, ಅದು ಎಂತಹ ಅದ್ಭುತ!

ನಿಸರ್ಗದ ಈ ಅದ್ಭುತವನ್ನು ಮಾನವ ನಕಲು ಮಾಡಲು ಪ್ರಯತ್ನಿಸಿದ್ದುಂಟು. ದೇಹಕ್ಕೆ ಒಗ್ಗುವ ಪಾಲಿಮರ್ಗಳಿಂದ ಅಂಗಗಳ ಆಕಾರದ ಹಂದರ ರೂಪಿಸಿ, ಅದರೊಳಗೆ ಆಕರಕೋಶಗಳನ್ನು ಬಿತ್ತಿ, ಅಂಗವನ್ನು ಸೃಷ್ಟಿಸುವ ಪ್ರಯತ್ನವನ್ನು ನಡೆಸಲಾಗಿದೆ. ಇಲಿಯ ಪ್ರಾಸ್ಟೇಟ್ ಗ್ರಂಯ ವಿನ್ಯಾಸ ನಡೆದಿದ್ದು ಇದೇ ತಂತ್ರದಿಂದ. ಅಂಗದ ಆಕಾರವೇನೋ ಬಂತು ಆದರೆ ಅಂಗದ ಎಲ್ಲ ಚಟುವಟಿಕೆಗಳನ್ನೂ ನಕಲು ಮಾಡಲಾಗಲಿಲ್ಲ. ಏಕೆಂದರೆ ಒಂದೆರಡು ಸೆಂಟಿಮೀಟರ್ ಗಾತ್ರದ ಈ ಗ್ರಂಯೊಳಗಿನ ಎಲ್ಲ ಜೀವಕೋಶಗಳಿಗೂ ಆಹಾರ, ಆಮ್ಲಜನಕ ಕೊಂಡೊಯ್ಯುವಂತೆ ರಕ್ತ ಸರಬರಾಜು ಮಾಡಲಾಗಲಿಲ್ಲ. ನಿಸರ್ಗದಲ್ಲಿ ಅಂಗದ ಪ್ರತಿಯೊಂದು ಜೀವಕೋಶಕ್ಕೂ ಅತಿ ಸೂಕ್ಷ್ಮವಾದ ರಕ್ತನಾಳಗಳು ಆಹಾರ, ಆಮ್ಲಜನಕವನ್ನು ಸರಬರಾಜು ಮಾಡುತ್ತವೆ. ಕೂದಲೆಳೆಗಿಂತಲೂ ಸೂಕ್ಷ್ಮವಾದ ಈ ನಾಳಗಳನ್ನು ಲೋಮನಾಳಗಳೆನ್ನುತ್ತಾರೆ. ಆಹಾರ, ಆಮ್ಲಜನಕದ ಸರಬರಾಜಾಗದಿದ್ದರೆ ಜೀವಕೋಶಗಳು ಬದುಕುಳಿಯಲಾರವು. ಕೃತಕ ಅಂಗ ಕ್ಷಣಿಕ ಜೀವವಾದೀತು.

ಕೃತಕ ಅಂಗಗಳಲ್ಲಿ ನಿಸರ್ಗ ಸಹಜವಾಗಿರುವ ಲೋಮನಾಳಗಳ ಹಂದರವನ್ನು ರೂಪಿಸುವುದು ಇದುವರೆವಿಗೂ ಸಾಧ್ಯವಾಗಿಲ್ಲ. ಏಕೆಂದರೆ ಎರಕ ಹೊಯ್ದೋ, ರಂಧ್ರ ಕೊರೆದೋ ಇಷ್ಟು ಸೂಕ್ಷ್ಮವಾದ ಕೊಳವೆಗಳನ್ನು ತಯಾರಿಸುವುದು ಕಷ್ಟ. ಒಂದೆರಡು ನಾಳಗಳನ್ನು ಕಷ್ಟ ಪಟ್ಟು ಎರಕ ಹೊಯ್ಯಬಹುದು. ಆದರೆ, ಮಾವಿನ ಮರದಂತೆ ಶಾಖೋಪಶಾಖೆಗಳ ಹಂದರವಿರುವ ಲೋಮನಾಳಗಳ ಜಾಲವನ್ನು ಎರಕ ಹೊಯ್ಯುವುದು ಎಂತಹ ಇಂಜಿನೀಯರಿಗೂ ದೊಡ್ಡ ಸವಾಲೇ ಸರಿ. ಈ ಸವಾಲಿಗೆ  ಉತ್ತರವಾಗಿ ಕಾರ್ನೆಲ್ ವಿಶ್ವವಿದ್ಯಾನಿಲಯದ ನ್ಯಾನೋ ತಂತ್ರಜ್ಞ ಜೇಸನ್ ಸ್ಪೆಕ್ಟರ್ ಮತ್ತು ತಂಡದವರು ಸಕ್ಕರೆ ಮಿಠಾಯಿಯನ್ನು ಬಳಸಿದ್ದಾರೆ. ಕಾಟನ್ ಕ್ಯಾಂಡಿ ಎಂದರೆ ಸಕ್ಕರೆ ಪಾಕದ ಎಳೆಗಳಷ್ಟೆ!  ಸಕ್ಕರೆ ಪಾಕದ ಎಳೆಗಳ ಮೇಲೆ ಪಾಲಿಮರ್ ಎರಕ ಹೊಯ್ದು, ಲೋಮನಾಳಗಳ ಹಂದರವನ್ನು ಸೃಷ್ಟಿಸುವ ವಿನೂತನ ತಂತ್ರವನ್ನು ಸ್ಪೆಕ್ಟರ್ ತಂಡ ನಿರೂಪಿಸಿದೆ.

ಮೊದಲಿಗೆ ಕಾಟನ್ ಕ್ಯಾಂಡಿಯ ಒಂದು ಮುದ್ದೆಯನ್ನು ತಯಾರಿಸಿ, ಅದರ ಎರಡೂ ತುದಿಗೆ ಸಕ್ಕರೆಯ ಎರಡು ಕಡ್ಡಿಗಳನ್ನು ಈ ತಂಡ ಹುದುಗಿಸಿತು. ಈ ಸಕ್ಕರೆಯ ಮುದ್ದೆಯ ಮೇಲೆ ದೇಹಕ್ಕೆ ಒಗ್ಗುವ ಪಾಲಿಮರ್ (ಇದನ್ನು ಪಿಡಿಎಂಎಸ್ ಎನ್ನುತ್ತಾರೆ) ಅನ್ನು ಎರಕ ಹೊಯ್ಯಲಾಯಿತು. ಪಾಲಿಮರ್ ಒಣಗಿದ ಅನಂತರ ಇಡೀ ಮುದ್ದೆಯನ್ನು ಎರಡು ದಿನಗಳ ಕಾಲ ನೀರಿನಲ್ಲಿ ಇಟ್ಟರು. ಪಾಲಿಮರ್ನ ಒಳಗಿದ್ದ ಸಕ್ಕರೆಯೆಲ್ಲ ನೀರಿನಲ್ಲಿ ಕರಗಿದ ಮೇಲೆ, ಮದ್ಯಸಾರ ಬಳಸಿ ಪಾಲಿಮರ್ ಅನ್ನು ಒಣಗಿಸಿದರು. ಪಿಡಿಎಂಎಸ್ ನೀರಿನಲ್ಲಿ ಕರಗುವುದಿಲ್ಲ. ಈಗ ಉಳಿದದ್ದು, ಕಾಟನ್ ಕ್ಯಾಂಡಿಯ ಎಳೆಗಳಷ್ಟು ಸೂಕ್ಷ್ಮವಾದ ರಂಧ್ರವಿರುವ ಪಿಡಿಎಂಎಸ್ ಕೊಳವೆಗಳ ಹಂದರ.  ತುದಿಯಲ್ಲಿದ್ದ ಸಕ್ಕರೆ ಕಡ್ಡಿಗಳೂ ಕರಗಿ, ಎರಡು ಕೊಳವೆಗಳಾಗಿದ್ದುವು. ಇದರಲ್ಲಿ ಒಂದರ ಮೂಲಕ ಇಲಿಯ ರಕ್ತವನ್ನು ಹರಿಸಿದಾಗ ಅದು ಮತ್ತೊಂದು ಬದಿಯ ಕೊಳವೆಯಿಂದ ಹೊರಬಂದಿತು.  ಸೂಕ್ಷ್ಮದರ್ಶಕಕ್ಕೆ ವೀಡಿಯೊ ಕ್ಯಾಮರಾ ಜೋಡಿಸಿ, ಈ ಕೃತಕ ಅಂಗದಲ್ಲಿ ರಕ್ತ ಹರಿಯುವ ಬಗೆಯನ್ನೂ ಚಿತ್ರೀಕರಿಸಿದ್ದಾರೆ. ಅಷ್ಟೇ ಅಲ್ಲ. ಅದನ್ನು ಕತ್ತರಿಸಿ ಒಳರಚನೆ ಹೇಗಿದೆ ಎಂದೂ ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿದ್ದಾರೆ.

ಕಾಟನ್ ಕ್ಯಾಂಡಿ ಬಳಸಿ ತಯಾರಿಸಿದ ಈ ಲೋಮನಾಳಗಳ ಗಾತ್ರ ನಿಜಾಂಗಗಳಲ್ಲಿರುವ ಲೋಮನಾಳಗಳಿಗೆ ಸಮಾನವಾಗಿದೆಯಂತೆ. ಅಲ್ಲದೆ ಲೋಮನಾಳಗಳ ನಡುವಣ ಅಂತರವೂ ಅಂಗಗಳಲ್ಲಿರುವಂತೆಯೇ ಇರುವುದರಿಂದ, ಈ ಹಂದರದೊಳಗೆ ಬೆಳೆಯುವ ಜೀವಕೋಶಗಳಿಗೆ ಆಹಾರ, ಆಮ್ಲಜನಕದ ಕೊರತೆ ತಟ್ಟಲಾರದು ಎನ್ನುತ್ತದೆ ಸ್ಪೆಕ್ಟರ್ ತಂಡ.  ಕೃತಕ ಅಂಗಗಳ ಹಂದರವನ್ನು ತಯಾರಿಸಲು ಇತ್ತೀಚಿನವರೆಗೂ ಬಳಸಿರುವ ತಂತ್ರಗಳಲ್ಲೆಲ್ಲಾ ಇದುವೇ ಅತ್ಯಂತ ಸರಳ ಹಾಗೂ ಸಹಜ ಅಂಗದ ಒಳರಚನೆಯನ್ನು ಹೋಲುವ ಹಂದರವೂ ದೊರೆಯುವುದರಿಂದ ಕೃತಕ ಅಂಗಗಳ ರಚನೆ ಸುಲಭವಾಗಬಹುದು ಎನ್ನುವುದು ತಂಡದ ಆಶಯ.

Leon M. Bellan  et al; Fabrication of an artificial 3-dimensional vascular network using sacrificial sugar structures,  Soft Matter, DOI: 10.1039/b819905a,  2009, (published online 20.3.2009)