ಸಖೂಬಾಯಿಪಾಂಡುರಂಗ ವಿಠಲನ ಭಕ್ತಳು. ಕ್ರೂರಳಾದ ಅತ್ತೆ, ಮೂರ್ಖ ಗಂಡ ಇವರ ಕೈಯಲ್ಲಿ ನರಳುತ್ತಿದ್ದರೂ ವಿಠಲನಲ್ಲಿ ನಿರ್ಮಲ ಭಕ್ತಿಯನ್ನಿಟ್ಟಳು. ಆ ಭಕ್ತಳಿಗಾಗಿ ಮನುಷ್ಯರ ಸೇವೆ ಮಾಡಿದ ವಿಠಲ.

ಸಖೂಬಾಯಿ

ಪಂಢರಾಪುರಕ್ಕೆ ಸಮೀಪದ ಒಂದೂರಿನಲ್ಲಿ ಬಡವನೊಬ್ಬ ತನ್ನ ಹೆಂಡತಿಯೊಡನೆ ವಾಸಮಾಡಿಕೊಂಡಿದ್ದನು. ಬಡವರಾದರೂ ದಂಪತಿಗಳು ಶಾಂತಿಯಿಂದ, ತೃಪ್ತಿಯಿಂದ ಇದ್ದರು. ಯಥಾಶಕ್ತಿ ದಾನ ಧರ್ಮಗಳನ್ನು ಮಾಡುತ್ತಿದ್ದರು; ಅತಿಥಿಗಳನ್ನೂ ಉಪಚರಿಸುತ್ತಿದ್ದರು. ಊರಮಂದಿಯ ಕಷ್ಟಸುಖಗಳಿಗೆ ನೆರವಾಗುತ್ತಾ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದರು.

ಪಂಢರಾಪುರವು ಒಂದು ಧರ್ಮಕ್ಷೇತ್ರ. ಪಾಂಡುರಂಗ ವಿಠಲನು ಇಲ್ಲಿಯ ದೇವರು. ಆಸುಪಾಸಿನ ಊರಿನವರೆಲ್ಲರೂ ಈ ದೇವರನ್ನೇ ನಂಬಿಕೊಂಡು ಬಂದಿದ್ದರು. ಬಡ ದಂಪತಿಗಳೂ ದೈವಭಕ್ತರೇ. ತಮಗೆ ಮಕ್ಕಳಾಗಲಿಲ್ಲವೆಂಬ ದುಃಖ ಇವರನ್ನು ಬಾಧಿಸುತ್ತಿತ್ತು. ಭಕ್ತಿಯಿಂದ ದಿನವೂ ದೇವರನ್ನು ಪ್ರಾರ್ಥಿಸುತ್ತಿದ್ದರು. ಭಕ್ತರ ಕರೆಗೆ ದೇವರು ಓಗೊಟ್ಟನೊ ಎಂಬಂತೆ ಇವರಿಗೊಂದು ಹೆಣ್ಣು ಮಗು ಹುಟ್ಟಿತು. ಅದಕ್ಕೆ ಸಖೂಬಾಯಿ ಎಂದು ಹೆಸರಿಟ್ಟರು. ಸುಂದರವಾದ ಮಗು ಗುಣವಂತವಾಗಿಯೂ ಬೆಳೆಯಿತು. ಚಿಕ್ಕಂದಿನಿಂದಲೂ ಸಖೂವಿಗೆ ದೇವರ ಮೇಲೆ ಬಹಳ ಭಕ್ತಿ. ಹೂ ಬಿಡಿಸಿತಂದು ತರತರಹ ಮಾಲೆಗಳನ್ನು ಕಟ್ಟುವುದು, ಗಂಧ ತೇದು ಪೂಜೆಗೆ ಅಣಿಮಾಡುವುದು, ದನಕರುಗಳಿಗೆ ಹುಲ್ಲುಮೇವು ಹಾಕುವುದು ಅಡುಗೆ ಕೆಲಸಗಳಲ್ಲಿ ತಾಯಿಗೆ ನೆರವಾಗುವುದು…. ಹೀಗೆ ಸದಾ  ಏನಾದರೊಂದು ಕೆಲಸವನ್ನು ಮಾಡುತ್ತಲೇ ಇರುತ್ತಿದ್ದಳು. ತಂದೆತಾಯಿಗಳಿಗೆ ಮಗಳು ಪಂಚಪ್ರಾಣವಾಗಿದ್ದಳು.

ಈ ಬಾಲೆ ನಗುಮೊಗದಿಂದ ಓಡಾಡುವುದನ್ನು ಕಂಡು ನೆರೆಹೊರೆಯವರಿಗೂ ಸಂತೋಷ. ಸಖೂ ಎಂದೂ ಯಾರ ಮನಸ್ಸನ್ನೂ ನೋಯಿಸಿದುದಿಲ್ಲ. ಯಾರಿಗೂ ಬಿರು ನುಡಿಯನ್ನು ನುಡಿದುದಿಲ್ಲ. ಮಕ್ಕಳೊಡನೆ ಸ್ನೇಹದಿಂದ ಆಡಿಕೊಳ್ಳುತ್ತಿದ್ದಳು. ಹಿರಿಯರನ್ನು ಗೌರವದಿಂದ, ಭಕ್ತಿಯಿಂದ ಕಾಣುತ್ತಿದ್ದಳು. ಈ ಜಾಣಹುಡುಗಿಯನ್ನು ಎಲ್ಲರೂ ಮುದ್ದುಮಾಡುವವರೇ ಆಗಿದ್ದರು.

ಕರವೀರಪುರದ ಕೃಪಣರಾಯ

ಕರವೀರಪುರ ಎಂಬ ಊರು. ಅಲ್ಲೊಬ್ಬ ಪಂಡಿತನಿದ್ದ. ಕೈಯಲ್ಲಿ ವೇದ; ಬಾಯಲ್ಲಿ ಮಂತ್ರ. ಆದರೇನು? ಎಂಜಲು ಕೈಯಿಂದ ಕಾಗೆಯನ್ನೂ ಅಟ್ಟುತ್ತಿರಲಿಲ್ಲ. ಏಕೆಂದು ಕೇಳುತ್ತೀರಾ? ಕೈಯಲ್ಲಿ ಎಲ್ಲಾದರೂ ಒಂದಗುಳು ಅನ್ನವಿದ್ದೀತು. ಅದು ಬಿದ್ದುಹೋದರೆ ಕಾಗೆ ತಿಂದು ವ್ಯರ್ಥವಾದೀತು ಎಂಬ ಹೆದರಿಕೆ. ಅಯ್ಯೋ ಪಾಪ! ಎಷ್ಟು ಬಡತನ ಎನ್ನಿಸಬಹುದಲ್ಲವೇ? ಆದರೆ ಈ ಪಂಡಿತ ಬಡವನಿರಲಿಲ್ಲ. ಅವನು ಮಹಾ ಲೋಭಿಯಾಗಿದ್ದ.

ನಮ್ಮ ಭಾರತ ಬಹು ದೊಡ್ಡ ದೇಶ. ಇಲ್ಲಿ ಅನೇಕ ಪರ್ವತಗಳಿವೆ, ನದಿಗಳಿವೆ, ಕಾಡುಗಳಿವೆ, ಬಯಲುಗಳಿವೆ. ಉತ್ತರದಲ್ಲಿ ಗಂಗಾ, ಸಿಂಧು, ಯಮುನಾ ಬಹು ದೊಡ್ಡ ನದಿಗಳು. ಹಾಗೆಯೇ ದಕ್ಷಿಣದಲ್ಲಿ ಗೋದಾವರಿ, ಕೃಷ್ಣಾ,ಕಾವೇರಿ ಇತ್ಯಾದಿ ನದಿಗಳು ಹರಿಯುತ್ತವೆ.

ಕರವೀರಪುರ ಕೃಷ್ಣಾನದಿ ದಂಡೆಯ ಮೇಲೆಯೇ ಇತ್ತು. ಹಸುರಾದ ಬಯಲುಗಳು; ತುಂಬಿನಿಂತ ತೆನೆಗಳು. ದವಸಧಾನ್ಯ, ಕಾಳುಕಡ್ಡಿಗಳೆಲ್ಲವೂ ಧಾರಾಳವಾಗಿದ್ದುವು. ಭೂಮಿತಾಯಿ ಎರಡೂ ಕೈಗಳನ್ನು ನೀಡಿ ಕೊಟ್ಟಿದ್ದಳು. ತಾಯಿ ಕೊಟ್ಟುದನ್ನು ಮಕ್ಕಳು ಹಂಚಿ ತಿಂದರೆ ಸುಖವಿದೆ. ಎಲ್ಲವೂ ತನಗೇ ಬೇಕು ಎಂದು ಆಸೆಪಟ್ಟು ಕಟ್ಟಿಡುವವನು ಲೋಭಿ; ಜಿಪುಣ. ಆಗಲೆ ಪಂಡಿತನ ವಿಷಯ ಹೇಳಿದೆಯಲ್ಲ? ಆತನು ಕಡುಲೋಭಿಯಾಗಿದ್ದ. ಆದುದರಿಂದಲೇ ಜನ ಅವನನ್ನು ಕೃಪಣರಾಯ ಎಂದು ಕರೆಯುತ್ತಿದ್ದರು. ಈತನ ಹೆಂಡತಿ ಗಯ್ಯಾಳಿಬಾಯಿಯು ಇಡೀ ದಿನ ಊರಮಂದಿಯನ್ನು ಬೈಯುತ್ತಾ ಜಗಳವಾಡುತ್ತಾ ಇರುತ್ತಿದ್ದಳು. ದೇವರಲ್ಲಿ ಭಕ್ತಿಯಿಲ್ಲ; ದಾನಧರ್ಮಗಳ ಹೆಸರಿಲ್ಲ; ಅತಿಥಿಗಳ ನೆರಳು ಮನೆ ಬಾಗಿಲಲ್ಲಿ ಬೀಳುವಂತಿಲ್ಲ. ಈಕೆಯ ಮಗನ ಹೆಸರು ಓದುರಾಯ. ಆದರೆ ಗಂಡನಾಗಲೀ ಮಗನಾಗಲೀ ಮನೆಯಲ್ಲಿ ತುಟಿ ಪಿಟಕ್ಕೆನ್ನುವಂತಿರಲಿಲ್ಲ. ಇವಳದೇ ಅಧಿಕಾರ, ಇವಳದೇ ಕಾರುಭಾರು ನಡೆಯುತ್ತಿತ್ತು.

ಕೃಪಣರಾಯ ಮಗನಿಗೂ ವೇದಪಾಠಗಳನ್ನು ಕಲಿಸಿದ್ದ. ಓದುರಾಯನಿಗೆ ಎಲ್ಲವೂ ಗಿಳಿಪಾಠವಾಗಿತ್ತು. ಅವನ ತಲೆತುಂಬ ಪಾಂಡಿತ್ಯವೇ ತುಂಬಿತ್ತು. ಆದರೆ ಹೃದಯ ಮಾತ್ರ ಬರಿದಾಗಿತ್ತು. ಪರೋಪಕಾರ, ಸ್ನೇಹ, ಕರುಣೆ, ದಯೆ, ಪ್ರೀತಿ ಮೊದಲಾದ ಯಾವ ಒಳ್ಳೆಯ ಗುಣಗಳೂ ಅಲ್ಲಿ ಬೆಳೆಯಲಿಲ್ಲ.

ಊರಮಂದಿ ಇವರಿಂದ ಮುಖತಿರುಗಿಸತೊಡಗಿದರು. ಗಯ್ಯಾಳಿಬಾಯಿಯ ಕೆಟ್ಟ ನಾಲಿಗೆಗೆ ಹೆದರಿ ಕೆಲವರು ದೂರವಾದರೆ, ಇನ್ನು ಕೆಲವರು ಈ ‘ಧನಪಿಶಾಚಿಗಳ ಸುದ್ದಿಯೇ ಬೇಡವಪ್ಪಾ’ ಎಂದು ಹತ್ತಿರ ಸುಳಿಯುತ್ತಿರಲಿಲ್ಲ.

ಹೀಗಿರುವಾಗ ತಂದೆತಾಯಂದಿರಿಗೆ ವಯಸ್ಸಿಗೆ ಬಂದ ತಮ್ಮ ಮಗನಿಗೆ ಮದುವೆ ಮಾಡಬೇಕೆಂಬ ಮನಸ್ಸಾಯಿತು. ಗೊತ್ತಿದ್ದೂ ಗೊತ್ತಿದ್ದೂ ಈ ಮನೆಗೆ ಹೆಣ್ಣು ಯಾರು ಕೊಡುತ್ತಾರೆ? ಇವರಿಗೆ ಮಗಳನ್ನು ಕೊಡುವುದಕ್ಕಿಂತ ಅವಳನ್ನು ಕೆರೆಗೊ ಬಾವಿಗೊ ದೂಡಬಹುದು ಎಂದು ಹೆಣ್ಣು ಹೆತ್ತವರು ಹೇಳುತ್ತಿದ್ದರು. ಕೃಪಣರಾಯನಿಗೂ ತಮ್ಮ ಊರಲ್ಲಿ ಕನ್ಯೆ ಸಿಗುವುದಿಲ್ಲವೆಂದು ಗೊತ್ತಾಯಿತು. ಅವನು ಹತ್ತಿರದ ಊರುಗಳಲ್ಲಿ ವಿಚಾರಿಸತೊಡಗಿದ.

ಸಖೂಬಾಯಿಯ ವಿವಾಹ

ತನ್ನ ಮಗನಿಗೆ ಹೆಣ್ಣು ಹುಡುಕುತ್ತಾ ಬಂದ ಕೃಪಣರಾಯ ಸಖೂಬಾಯಿಯ ಊರಿಗೆ ಬಂದ. ಯಾರೋ ಇವನನ್ನು ಸಖೂವಿನ ಮನೆಗೆ ತಂದುಬಿಟ್ಟರು. ಮನೆಗೆ ಬಂದ ಅತಿಥಿಯನ್ನು ಸಖೂಬಾಯಿಯ ತಂದೆ ಸಂತೋಷದಿಂದ ಉಪಚರಿಸಿದರು. ಮಗಳು ಅತಿಥಿಗೆ ಕೈಕಾಲು ತೊಳೆಯಲು ನೀರು ತಂದುಕೊಟ್ಟಳು. ಅಡುಗೆ ಮಾಡಲು ತಾಯಿಗೆ ನೆರವಾದಳು. ದೇವರ ಪೂಜೆಗೆ ಅಣಿ ಮಾಡಿದಳು. ಮಣೆ,  ತಂಬಿಗೆ, ಲೋಟಗಳನ್ನಿಟ್ಟು ಎಲೆ ಹಾಕಿದಳು. ಊಟವೂ ತಯಾರಾಗಿಯೇಬಿಟ್ಟತು.

ಕೃಪಣರಾಯನಿಗೆ ಹುಡುಗಿಯ ಚುರುಕುತನ ಕಂಡು ಬಹಳ ಖುಷಿಯಾಗಿತ್ತು. ಈಕೆಯನ್ನು ತನ್ನ ಮಗನಿಗೆ ಕೊಡಬೇಕೆಂದು ಕೇಳಿಯೇಬಿಟ್ಟನು.

ಸಖೂವಿನ ತಂದೆಗೆ ಕೃಪಣರಾಯನು ಧನಿಕ ಪಂಡಿತನೆಂಬ ಸುದ್ದಿ ಗೊತ್ತಿತ್ತು. ಆದರೆ ಅವನ ವಿದ್ಯೆ ಮತ್ತು ದುಡ್ಡಿನ ಹಿಂದೆ ಇದ್ದ ಅಪಕೀರ್ತಿ ಈ ಸಜ್ಜನ, ಬಡದಂಪತಿಗಳ ಕಿವಿಗೆ ಬಿದ್ದಿರಲಿಲ್ಲ. ಆದುದರಿಂದಲೇ ಕೃಪಣರಾಯನು ವಿವಾಹದ ಪ್ರಸ್ತಾಪವನ್ನು ಮಾಡಿದೊಡನೆಯೇ ತಂದೆತಾಯಿ ಬಹಳ ಸಂತೋಷಪಟ್ಟರು. ತಾವು ನಂಬಿಕೊಂಡು ಬಂದ ವಿಠೋಬನ ದಯೆಯೆಂದು ತಿಳಿದರು. ಬಡತನದ ಕಾರಣದಿಂದಾಗಿ ಕೆಲವೊಮ್ಮೆ ಅವರು ಅಲ್ಪಸ್ವಲ್ಪವನ್ನೇ ಹಂಚಿಕೊಂಡು ತಿನ್ನಬೇಕಾಗುತಿತ್ತು. ಹಳೇ ಬಟ್ಟೆಗಳನ್ನೇ ತೊಡಬೇಕಾಗುತ್ತಿತ್ತು. ಇವೆಲ್ಲವೂ ತಪ್ಪಿಹೋಗಿ ಮಗಳು ಸುಖವಾಗಿರುತ್ತಾಳೆಂದು ಹಿಗ್ಗಿದರು. ಮಗಳ ಭಾಗ್ಯಕ್ಕೆ ಆನಂದಿಸುತ್ತಾ ಒಪ್ಪಿಗೆ ಕೊಟ್ಟರು.

ಕೃಪಣರಾಯನು ಮುಹೂರ್ತವನ್ನಿಟ್ಟನು. ಹೆಂಡತಿ ಯನ್ನೂ ಮಗನನ್ನೂ ಕರೆದುಕೊಂಡು ಸಖೂವಿನ ಊರಿಗೆ ಬಂದನು. ಗುಟ್ಟು ರಟ್ಟಾಗದೆ ಮದುವೆ ನಡೆದೇ ಹೋಯಿತು. ಗಯ್ಯಾಳಿಬಾಯಿಯು ಬೀಗರಿಗೆ, ಬಂಧುಗಳಿಗೆ ಉಡುಗೊರೆಗಳನ್ನು ತಂದಿದ್ದಳು. ಸೊಸೆಗೆ ಚೂರುಪಾರು ಬಂಗಾರವನ್ನೂ ಹಾಕಿದ್ದಳು. ಬೀಗರ ಧಾರಾಳತನವನ್ನು ಕಂಡು ಸಖೂವಿನ ತಂದೆತಾಯಿಗಳಿಗೆ ಮಗಳ ಭಾಗ್ಯದ ಬಾಗಿಲು ತೆರೆದಂತೆ ಕಂಡಿತು. ಮದುವೆ ಕಾರ್ಯವನ್ನು ಮುಗಿಸಿ, ಕೃಪಣರಾಯನ ಸಂಸಾರ ಕರವೀರಪುರಕ್ಕೆ ಬಂತು.

ದಿಕ್ಕುಗೆಟ್ಟ ಜಿಂಕೆಮರಿ

ಗಂಡನ ಮನೆಯವರು ಕೆಲವು ದಿನಗಳಲ್ಲಿಯೇ ಸಖೂಬಾಯಿಯನ್ನು ಕರೆದುತರಲು ಮುಹೂರ್ತ ನೋಡಿದರು. ಸಖೂವನ್ನು ಕರೆದುತಂದು ಬಿಡಬೇಕೆಂದು ಹೇಳಿ ಕಳುಹಿಸಿದರು. ಆಗಿನ್ನೂ ಸಖೂವಿಗೆ ಹನ್ನೆರಡು ವರ್ಷ. ಮುದ್ದುಮಗಳನ್ನು ಕರೆದುಕೊಂಡು ತಂದೆತಾಯಿ ಕರವೀರಪುರಕ್ಕೆ ಬಂದರು. ಗೃಹಪ್ರವೇಶದ ಶಾಸ್ತ್ರವಾಯಿತು. ಊಟ, ಉಪಚಾರಗಳಾದವು. ಹುಡುಗಿ ಇನ್ನೂ ಚಿಕ್ಕವಳು, ತಮ್ಮೊಡನೆಯೇ ಬರಲಿ, ದೊಡ್ಡವಳಾದ ಮೇಲೆ ತಂದುಬಿಟ್ಟರಾಯಿತು, ಎಂದು ತಾಯಿಯ ಹೃದಯದ ಆಸೆಯಾಗಿತ್ತು. ಆದರೆ ಗಯ್ಯಾಳಿಬಾಯಿ ಸೊಸೆಯನ್ನು ಬಿಟ್ಟುಹೋಗಿ ಎಂದಳು. ಅವಳಿಗೆ ವಿರೋಧ ಹೇಳಲಾಗದೆ, ಕೆಲವು ದಿನಗಳಲ್ಲಿ ಕರೆಯಿಸಿಕೊಂಡರಾಯಿತು ಎಂದು ಸಮಾಧಾನಪಟ್ಟುಕೊಂಡು ಸಖೂಬಾಯಿಯ ತಂದೆತಾಯಿಗಳು ಊರಿಗೆ ಮರಳಿದರು.

ಮುದ್ದುಬಾಲೆ ಸಖೂ, ಅತ್ತೆಮಾವಂದಿರನ್ನು ತಾಯಿತಂದೆಯರೆಂದೇ ಭಾವಿಸಿದ್ದಳು. ಗಂಡನನ್ನು ದೇವರೆಂದೇ ತಿಳಿದಿದ್ದಳು. ಆದರೆ ಇಲ್ಲಿ ಹಿರಿಯರು ನಡೆಯುವ ರೀತಿಯಿಂದ ಅವಳಿಗೆ ಗಾಬರಿಯಾಯಿತು. ಅತ್ತೆ ಹಗಲೂ ರಾತ್ರಿ ಬೈಯುತ್ತಿದ್ದಳು. ಜೋಳ ಬೀಸುವುದು, ಬತ್ತ ಕುಟ್ಟುವುದು, ಪಾತ್ರೆ ಬೆಳಗುವುದು, ನೀರು ತುಂಬುವುದು, ಬಟ್ಟೆ ಒಗೆಯುವುದು….ಒಂದೇ ಎರಡೇ, ಎಷ್ಟು ಕೆಲಸ ಮಾಡಿದರೂ ಅತ್ತೆಗೆ ತೃಪ್ತಿಯೇ ಇರಲಿಲ್ಲ. ಪಾತ್ರೆ ಚೆನ್ನಾಗಿ ಬೆಳಗಿಲ್ಲವೆಂದು ರೇಗುತ್ತಿದ್ದಳು; ಅಕ್ಕಿಯಲ್ಲಿ ಕಲ್ಲಿದೆಯೆಂದು ಜರೆಯುತ್ತಿದ್ದಳು; ತಾಯಿ ಕೆಲಸ ಕಲಿಸಿಲ್ಲವೆಂದು ಕೆಟ್ಟ ಮಾತುಗಳಿಂದ ಹಂಗಿಸುತ್ತಿದ್ದಳು. ಸಖೂವಿನ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಹರಿಯುತ್ತಿತ್ತು. ಅತ್ತೆ, ಗಂಡಸರಿಗೆ ಬಡಿಸಿ ತಾನೂ ಬಿಸಿಬಿಸಿಯಾಗಿ ಉಂಡು ಸಖೂವಿನ ಬಟ್ಟಲಲ್ಲಿ ಒಂದಿಷ್ಟು ಅನ್ನ, ಪದಾರ್ಥಗಳನ್ನು ಸುರಿಯುತ್ತಿದ್ದಳು. ನಾಯಿಗೆ ಕೂಳು ಹಾಕುವಂತೆ ಆ ಬಟ್ಟಲನ್ನು ಒಂದು ಮೂಲೆಗೆ ತಳ್ಳುತ್ತಿದ್ದಳು. ಸಖೂ ನದಿಗೆ ಹೋಗಿ ಬಟ್ಟೆಬರೆಗಳನ್ನು ಒಗೆದು ಬರುವ ಹೊತ್ತಿಗೆ ಅದು ಆರಿ ತಂಗಳಾಗುತ್ತಿತ್ತು. ಮೂಲೆಯಲ್ಲಿ ಮುದುರಿ ಕುಳಿತು ಅವಳು ಅದನ್ನೇ ತಿನ್ನುತ್ತಿದ್ದಳು. ಉಕ್ಕಿಬಂದ ಕಣ್ಣೀರು ಗಲ್ಲಗಳಿಂದ ಹರಿದು ಬಂದು ತುತ್ತಿನೊಡನೆ ಸೇರಿಕೊಳ್ಳುತ್ತಿತ್ತು. ಕೆಲವೊಮ್ಮೆ ನೊಣ, ಇರುವೆಗಳು ಮುತ್ತಿಕೊಂಡು ಅನ್ನ ತಿನ್ನಲು ಅಸಾಧ್ಯವಾಗಿರುತ್ತಿತ್ತು. ಕಣ್ಣೀರೇ ಆಹಾರವಾಗಿ ಅವಳು ಎದ್ದುಬಿಟ್ಟ ದಿನಗಳೂ ಇದ್ದುವು. ಗಂಡನ ಮನೆ ಸೇರಿದ ಸಖೂವಿನ ಸ್ಥಿತಿ ದಿಕ್ಕುಗೆಟ್ಟ ಜಿಂಕೆಮರಿಯ ಸ್ಥಿತಿಯಂತಾಗಿತ್ತು.

ದೇವರು, ಧರ್ಮ ಇಲ್ಲದ ಮನೆಯಲ್ಲಿ ಹೇಗಿರುವುದು?

ಬಡತನದಲ್ಲಿ ಬೆಳೆದ ಸಖೂ ರುಚಿಯಾದ ಆಹಾರಕ್ಕೆ ಎಂದೂ ಆಸೆಪಟ್ಟವಳಲ್ಲ. ಹೊಟ್ಟೆಗೆ ಹಿಟ್ಟಿಲ್ಲವಾದರೆ ಹೇಗೋ ಸಹಿಸಬಹುದಿತ್ತು. ಆದರೆ ಮನೆಯ ಕೆಟ್ಟ ವಾತಾವರಣದಲ್ಲಿ ಅವಳಿಗೆ ಉಸಿರು ಕಟ್ಟಿದಂತಾಗುತ್ತಿತ್ತು. ಮಾವ ದೊಡ್ಡ ಪಂಡಿತನೆಂದು ಅವಳು ಕೇಳಿದ್ದಳು. ವೇದಮಂತ್ರಗಳನ್ನು ಓದಿದ ದೊಡ್ಡವರಿಗೆ ದೇವರಲ್ಲಿ ಹೆಚ್ಚು ಭಕ್ತಿಯಿರುವುದೆಂದು ಅವಳು ನಂಬಿದ್ದಳು. ಪಂಡಿತನಾದ, ಧನಿಕನಾದ ಕೃಪಣರಾಯ ದಾನಧರ್ಮಗಳಲ್ಲಿ ಕೊಡುಗೈ ದೊರೆಯೇ ಆಗಿರಬೇಕೆಂಬು ದರಲ್ಲಿ ಅವಳಿಗೆ ಸಂಶಯವೇ ಇರಲಿಲ್ಲ. ಆದರೆ ಇಲ್ಲಿ ಅವಳ ಕಲ್ಪನೆಗಳೆಲ್ಲವೂ ತಲೆಕೆಳಗಾದುವು. ಒಂದು ದಿನ ಒಬ್ಬ ಕುರುಡ ಭಿಕ್ಷುಕನು ಬಂದಿದ್ದನು. ಸಖೂ ಬತ್ತ ಕುಟ್ಟುತ್ತಿದ್ದಳು. ಅವನ ದೀನ ಸ್ವರವನ್ನು ಕೇಳಿ ಒಂದು ಹಿಡಿ ಅಕ್ಕಿಯನ್ನು ಹಿಡಿದು ಹೊರಗೆ ಬಂದಳು. ಅವಳನ್ನು ಗಯ್ಯಾಳಿಬಾಯಿ ಸಿಟ್ಟಿನಿಂದ ಹೀನಾಮಾನವಾಗಿ ಬೈದಳು. ಮನೆ ತೊಳೆಯುವ ದುರ್ಬುದ್ಧಿಯವಳೆಂದು ಕೂಗಾಡಿದಳು. ಕೃಪಣರಾಯನೂ ಹೆಂಡತಿಯ ಪಕ್ಷವನ್ನೇ ಹಿಡಿದನು. ಸಖೂವಿನ ದುಃಖಕ್ಕೆ ಕೊನೆಯೇ ಇರಲಿಲ್ಲ. ತನ್ನ ಭಾಗ್ಯಕ್ಕೆ ದಯೆ, ದಾನ, ಧರ್ಮ ಯಾವುದೂ ಇಲ್ಲದೇಹೋಯಿತಲ್ಲ? ಆಕೆಯ ಬಡ ತವರಿನಲ್ಲಿಯೂ ನಾಲ್ಕಾರು ಕಾಸುಗಳ ಧರ್ಮಕ್ಕೆ ಕೊರತೆಯಿರಲಿಲ್ಲ. ಒಂದು ಹಿಡಿ ಅಕ್ಕಿಗೆ ಬರಗಾಲ ಬಂದಿರಲಿಲ್ಲ. ಇಲ್ಲಿ ಬೇಕಾದಷ್ಟು ಬತ್ತ ಇತ್ತು. ಕೃಪಣರಾಯ ಹಗಲಿಡೀ ಎಷ್ಟೋ ರೂಪಾಯಿಗಳ ಲೇವಾದೇವಿ ವ್ಯವಹಾರ ಮಾಡುತ್ತಲೇ ಇದ್ದ. ಆದರೂ ದಾನವಿಲ್ಲ, ಧರ್ಮವಿಲ್ಲ. ಅತಿಥಿಗಳ ಹೆಸರಿಲ್ಲ. ಒಂದು ಹೊತ್ತಾದರೂ ಸರಿಯಾಗಿ ದೇವರ ಪೂಜೆಯಿಲ್ಲ, ಪ್ರಾರ್ಥನೆಯಿಲ್ಲ. ಹೀಗೆ ನಡೆದರೆ ಮನುಷ್ಯರಿಗೆ ಪಶು ಪಕ್ಷಿಗಳಿಗೂ ಏನು ಭೇದ ಎಂದೂ ಸಖೂ ದುಃಖಿಸಿದಳು. ಅಂದು ಅವಳಿಗೆ ಊಟವೂ ಸೇರಲಿಲ್ಲ. ಆದರೂ ಆ ಬಾಲೆ ಅತ್ತೆಮಾವಂದಿರನ್ನು ದೂರಲಿಲ್ಲ. ಕಣ್ಣೀರು ಸುರಿಸುತ್ತಾ, ‘‘ಪಂಢರಾಪುರಸ್ವಾಮಿ ವಿಠಲನೇ, ಈ ಮನೆಯವರಿಗೆಲ್ಲ ಸದ್ಬುದ್ಧಿಯನ್ನು ಕೊಡು’’ ಎಂದು ಪ್ರಾರ್ಥಿಸಿದಳು.

ಸಖೂಬಾಯಿಯ ತಾಯಿಯ ಕಳವಳ

ಸಖೂವಿನ ತಾಯಿಗೆ ಮಗಳನ್ನು ಗಂಡನ ಮನೆಯಲ್ಲಿ ಬಿಟ್ಟುಬಂದರೂ ಹೆಜ್ಜೆಹೆಜ್ಜೆಗೆ ಅವಳದೇ ನೆನಪಾಗುತ್ತಿತ್ತು. ‘‘ಇನ್ನೂ ಚಿಕ್ಕವಳು. ನಮ್ಮೊಟ್ಟಿಗೆ ಕರೆದು ತಂದರೆ ಚೆನ್ನಾಗಿರುತ್ತಿತ್ತು’ ಎಂದು ಗಂಡನೊಡನೆ ಹೇಳುತ್ತಿದ್ದಳು. ಮಗಳ ಧ್ಯಾನದಲ್ಲಿ ತಾಯಿಗೆ ಕೆಲಸ ಕಾರ್ಯಗಳ ಮರವೆಯಾಗುತ್ತಿತ್ತು. ಹಟ್ಟಿಯಲ್ಲಿ ದನ ‘ಅಂಬಾ’ ಎಂದು ಕೂಗಿದ ಮೇಲೆ ಓಡಿಹೋಗಿ ಹುಲ್ಲು ಹಾಕುತ್ತಿದ್ದಳು. ‘‘ನಮ್ಮ ಸಖೂಬಾಯಿ ಇದ್ದಿದ್ದರೆ ನಿನಗೆ ಹೊತ್ತಿಗೆ ಸರಿಯಾಗಿ ಮೇವು ಸಿಗುತ್ತಿತ್ತು’ ಅದರ ಮೈದಡವುತ್ತಿದ್ದಳು. ಅವಳ ಮನಸ್ಸು ಮಗಳೆಡೆ ಹಾರಿಹೋಗುತ್ತಿತ್ತು. ಆ ತಾಯಿ ಅಡಿಗಡಿಗೂ ಮಗಳನ್ನು ನೆನೆಸುತ್ತಿದ್ದಳು. ಈಗಿನಂತೆ ಆಗ ಅಂಚೆಯ ವ್ಯವಸ್ಥೆ ಇರಲಿಲ್ಲವಲ್ಲ? ಸಾಧುಗಳಿಂದ, ಯಾತ್ರಿಕರಿಂದ ಊರಿಂದೂರಿಗೆ ಸಮಾಚಾರ ತಿಳಿಯುತ್ತಿತ್ತು. ಮನೆಗೆ ಅತಿಥಿಗಳು ಬಂದರೆ ತಾಯಿ ಕರವೀರಪುರದವರು ಇದ್ದಾರೆಯೇ ಎಂದು ಉತ್ಸಾಹದಿಂದ ವಿಚಾರಿಸುತ್ತಿದ್ದಳು. ಆದರೆ ಅವಳಿಗೆ ನಿರಾಶೆಯೇ ಕಾದಿರುತ್ತಿತ್ತು.

ಗೃಹಪ್ರವೇಶದ ದಿನ ಬಾಲೆಯನ್ನು ಬಿಟ್ಟುಬಂದುದೆಷ್ಟೋ ಅಷ್ಟೆ. ಅನಂತರ ಅಲ್ಲಿಯ ಯಾವ ಸಮಾಚಾರವೂ ಗೊತ್ತಾಗಿರಲಿಲ್ಲ. ಮನಸ್ಸಿನ ತಳಮಳವನ್ನು ತಾಳಲಾರದೆ ತಾಯಿ, ‘‘ನಾವೇ ಕರವೀರಪುರಕ್ಕೆ ಹೋಗಿ ಬರೋಣವೇ?’’ ಎಂದು ಗಂಡನನ್ನು ಕೇಳಿದಳು. ಬಡ ತಂದೆಗೂ ಮಗಳ ಯೋಚನೆಯಾಗಿತ್ತು. ಅವನು ಕೂಡಲೇ ಒಪ್ಪಿದನು. ದಂಪತಿಗಳು ಮಗಳನ್ನು ನೋಡುವ ಸಂತೋಷದಲ್ಲಿ ಹೊರಟರು.

ತಂದೆತಾಯಂದಿರ ಗೋಳು

ಕರವೀರಪುರಕ್ಕೆ ಬಂದು ಮಗಳನ್ನು ನೋಡಿದಾಗ ಅವರ ಮನಸ್ಸಿಗೆ ದೊಡ್ಡ ಆಘಾತವಾಯಿತು. ಹುಡುಗಿ ತೀರ ಬಡಕಲಾಗಿದ್ದಳು. ಮಾಸಲು ಬಟ್ಟೆಯನ್ನು ಉಟ್ಟಿದ್ದಳು. ಕೂದಲು ಎಣ್ಣೆ ಕಂಡು ಎಷ್ಟು ದಿನಗಳಾಗಿದ್ದವೊ! ಮಗಳನ್ನು ನೋಡಿದವಳೇ ತಾಯಿ, ‘‘ಮಗೂ, ನನ್ನ ಕಂದಾ’’ ಎಂದು ಬಾಚಿ ತಬ್ಬಿಕೊಂಡಳು. ಪ್ರೀತಿಯ ಇಂತಹ ಒಂದು ಕರೆಯನ್ನು ಕೇಳಿ ಎಷ್ಟೋ ವರ್ಷಗಳಾದಂತೆ ಸಖೂವಿಗೆ ಎನಿಸಿತು. ಕಟ್ಟಿಟ್ಟ ದುಃಖ ಕಟ್ಟೊಡೆಯಿತು. ತಾಯಿಯ ಸೆರಗು ಕಂಬನಿಯಿಂದ ಒದ್ದೆಯಾಯಿತು.

ಅಷ್ಟರಲ್ಲಿ ಎಲ್ಲಿಂದಲೋ ಪ್ರತ್ಯಕ್ಷಳಾಗಿಬಿಟ್ಟಳು ಗಯ್ಯಾಳಿಬಾಯಿ. ರುದ್ರಕಾಳಿಯಂತೆಯೇ ಆರ್ಭಟಿಸಿದಳು: ‘‘ಹಾಲು ಚೀಪುವ ಕಂದನಂತೆ ತಾಯಿಗೆ ಅಂಟಿಕೊಳ್ಳಲು ನಿನಗೆ ನಾಚಿಕೆಯಿಲ್ಲವೇನು? ನಡಿ ಒಳಗೆ, ಕೆಲಸ ಬಿದ್ದಿದೆ ರಾಶಿ.’’

ಏಳುವ ಮನಸ್ಸಿಲ್ಲದಿದ್ದರೂ ಅತ್ತೆಗೆ ವಿಧೇಯಳಾಗಿ ಸಖೂ ಎದ್ದು ಮೆಲ್ಲಮೆಲ್ಲನೆ ಒಳಗೆ ಹೋದಳು.

ಲವಲವಿಕೆಯಿಂದ ಜಿಂಕೆಯಂತೆ ಓಡಾಡುತ್ತಿದ್ದ ತಮ್ಮ ಸಖೂ ಎಲ್ಲಿ! ಅತ್ತೆಗೆ ಹೆದರಿ ನಡುಗುವ ಕಾಲುಗಳಿಂದ ಹೆಜ್ಜೆ ಹಾಕುತ್ತಿರುವ ಇವಳೆಲ್ಲಿ! ಸ್ನೇಹದ ಮಾತುಗಳನ್ನಾಡುತ್ತಲೋ ತನ್ನಷ್ಟಕ್ಕೆ ಹಾಡುಹಸೆಗಳನ್ನು ಹೇಳಿಕೊಳ್ಳುತ್ತಲೋ ಪ್ರಶಾಂತವಾಗಿರುತ್ತಿದ್ದ ಮುಖದ ಆ ಕಳೆಯೆಲ್ಲಿ! ಅನಾಥ ಕಳೆ ಸುರಿಯುವ ಈ ಮುಖ ಎಲ್ಲಿ! ಮಗಳನ್ನು ನೋಡಿ ತನ್ನ ದುಃಖವನ್ನು ತಾಳಲಾರದೆ ತಾಯಿ ಅಂಜುತ್ತಂಜುತ್ತಾ ಕೇಳಿದಳು:

‘‘ಸಖೂವಿಗೆ ಕಾಯಿಲೆ ಏನಾದರೂ ಆಗಿತ್ತೇನು?’’

ಗಯ್ಯಾಳಿಬಾಯಿಗೆ ಜಗಳ ತೆಗೆಯಲು ಅಷ್ಟೇ ಸಾಕಾಯಿತು.

‘‘ಮೂರು ಹೊತ್ತು ಕೂಳು ತಿಂದು ಸೊಕ್ಕುರೋಗ ಬಂದಿತ್ತು’’ ಎಂದಳು. ‘‘ಒಂದು ಹೊತ್ತು ತಿನ್ನುವುದಕ್ಕೆ ಗತಿಯಿಲ್ಲದ ಜನ ಮಗಳನ್ನು ವಿಚಾರಿಸೋಕೆ ಬಂದಿದ್ದಾರೆ’’ ಎಂದು ಹಂಗಿಸಿದಳು. ಕೆಟ್ಟ ಮಾತುಗಳಿಂದ ನಿಂದೆಗೆ ತೊಡಗಿದಳು.

ಬಡ ದಂಪತಿಗಳು ಸಿಡಿಲು ಬಡಿದವರಂತೆ ನಿಂತೇ ಇದ್ದರು. ಈ ಗೃಹಿಣಿ ಕೈಕಾಲು ತೊಳೆಯಲು ನೀರು ಕೊಟ್ಟಳೇ? ದೂರದ ಊರಿನಿಂದ ಬಂದವರಿಗೆ ಬಾಯಾರಿಕೆ ಕೇಳಿದಳೇ? ಚಾಪೆ ಹಾಸಿದಳೇ? ಕುಶಲ ವಿಚಾರಿಸಿದಳೇ? ಯಾವುದೂ ಇಲ್ಲ. ಇನ್ನು ಕೃಪಣರಾಯ! ಅವನು ಎಂತಹ ಯಜಮಾನ! ಹೆಂಡತಿಯ ಅನ್ಯಾಯದ ಮಾತಿಗೂ ಎದುರಾಡುವ ಧೈರ್ಯವಿಲ್ಲದೆ ಸುಮ್ಮನೆ ಕುಳಿತಿದ್ದ.

ಸಖೂವಿನ ತಂದೆತಾಯಿಗಳು ಮೌನವಾಗಿದ್ದುದರಿಂದ ಗಯ್ಯಾಳಿಬಾಯಿಗೆ ಜಗಳವಾಡಲು ಆಗಲಿಲ್ಲ. ಮಾತು ಸಾಕಾಗಿ ಆಕೆ ಒಳಹೋದಳು. ಸ್ವಲ್ಪ ಹೊತ್ತಿನಲ್ಲಿಯೇ ಸಖೂ ಬಟ್ಟೆಗಳನ್ನೆತ್ತಿ ಒಗೆಯಲು ಹೊರಟುದು ಕಂಡಿತು. ತಾಯಿ ಮೆಲ್ಲನೆ ಎದ್ದು ಅವಳನ್ನು ಹಿಂಬಾಲಿಸಿದಳು. ಬಟ್ಟೆ ಒಗೆಯಲು ನದಿಗೆ ಊರಿನ ಇತರ ಹೆಂಗಸರೂ ಬಂದಿದ್ದರು. ಸಖೂವಿನೊಂದಿಗೆ ಬಂದವಳು ಅವಳ ತಾಯಿಯೆಂದು ತಿಳಿದು ಅವರು ಅವಳನ್ನು ಮಾತನಾಡಿಸಿದರು.

‘‘ಏನಕ್ಕಾ? ನಿಮ್ಮೂರಲ್ಲಿ ಕೆರೆ, ಬಾವಿ ಯಾವುದೂ ಇಲ್ಲವೇ?‘‘ ಎಂದು ವಿಚಾರಿಸಿದರು. ತಾಯಿಗೆ ಈ ಮಾತಿನ ಅರ್ಥ ಹೊಳೆಯಲಿಲ್ಲ. ಆಕೆ ಸಹಜವಾಗಿ ಕೇಳಿದಳು, ‘‘ಹೀಗೇಕೆ ಕೇಳುತ್ತೀರಿ? ಕೆರೆ, ಬಾವಿ ಇಲ್ಲದ ಊರು ಇದೆಯೇ?’’

‘‘ನಿಮ್ಮ ಸಖೂವನ್ನು ಈ ರಾಕ್ಷಸಿಯ ಕೈಗೆ ಕೊಡುವುದಕ್ಕಿಂತ ಅಲ್ಲಿಯೇ ದೂಡಿಬಿಡಲಿಲ್ಲವೇಕೆ?’’

‘‘ನಾವು ಕೆಟ್ಟೆವಮ್ಮಾ….ಗೊತ್ತಿಲ್ಲದೆ ನಾವು ಕೆಟ್ಟೆವು’’ ಎಂದು ಆ ತಾಯಿ ಗೊಳೋ ಎಂದು ಅತ್ತಳು. ಎಲ್ಲರೂ ‘ಅಯ್ಯೋಪಾಪ’ ಎಂದು ಕನಿಕರ ಪಟ್ಟರು. ಇದಕ್ಕಿಂತ ಹೆಚ್ಚಿಗೆ ಅವರು ಏನು ಮಾಡಬಹುದು? ಗಯ್ಯಾಳಿಬಾಯಿಗೆ ಬುದ್ಧಿ ಹೇಳುವ ಧೈರ್ಯ ಯಾರಿಗಿದೆ? ಅವಳ ನಾಲಿಗೆ ಎಂತಹುದು ಎಂದು ಆ ತಾಯಿಗೂ ಆಗಲೇ ಅನುಭವಕ್ಕೆ ಬಂದಿರಲಿಲ್ಲವೇ?

ಸಖೂವೇ ಸಮಾಧಾನ ಹೇಳಬೇಕಾಯಿತು: ‘‘ಅಮ್ಮಾ, ನೀನು ಹೆಚ್ಚು ಚಿಂತೆ ಮಾಡಬೇಡ. ಈಗ ಬೇಗನೆ ಮನೆಗೆ ಹೋಗು. ಊಟದ ಹೊತ್ತಾಗಿರಬಹುದು.’’

ಹೌದು, ತಾನು ಇಲ್ಲಿ ಮಗಳ ಹಿಂದೆ ಬಂದಿರುವೆನೆಂದು ತಿಳಿದರೆ ಇನ್ನೇನು ಗಲಾಟೆಯಾದೀತೊ ಎಂದು ಹೆದರಿ ತಾಯಿ ಲಗುಬಗನೆ ಮನೆಗೆ ಬಂದಳು. ಇವಳು ಬಂದುದಕ್ಕೂ ಗಯ್ಯಾಳಿಬಾಯಿ ಊಟಕ್ಕೆ ಎಲೆ ಹಾಕುವುದಕ್ಕೂ ಸರಿಯಾಯಿತು. ಎಲ್ಲರಿಗೂ ಬಡಿಸಿ ಗಯ್ಯಾಳಿಬಾಯಿ ತಾನೂ ಎಲೆಯಿಟ್ಟುಕೊಂಡಳು. ಕೃಪಣರಾಯನೂ ಓದುರಾಯನೂ ಗಡದ್ದಾಗಿ ಉಂಡು ತೇಗಿದರು. ಸಖೂಬಾಯಿಯ ತಂದೆತಾಯಿ ಹೇಗೋ ಊಟದ ಶಾಸ್ತ್ರ ಮಾಡಿ ಮುಗಿಸಿದರು.

ದಂಪತಿಗಳು ಅಂಜುತ್ತಂಜುತ್ತಾ ಮಗಳನ್ನು ಕೆಲವು ದಿನಗಳಮಟ್ಟಿಗೆ ಕಳುಹಿಸಿಕೊಡಬೇಕೆಂದು ಕೇಳಿದರು. ಕೇಳುವುದೆಲ್ಲಿ ಬಂತು? ಕೈಜೋಡಿಸಿ ಪ್ರಾರ್ಥಿಸಿಕೊಂಡರು. ಗಯ್ಯಾಳಿಬಾಯಿಯು ನಿಷ್ಠುರವಾಗಿ, ‘‘ನಿಮಗೇ ತಿನ್ನಲು ಗತಿಯಿಲ್ಲ. ಇಲ್ಲಿ ಬೇಕಾದಷ್ಟು ಉಂಡು, ತಿಂದು ಬಿದ್ದುಕೊಂಡಿರುತ್ತಾಳೆ. ಕಳುಹಿಸುವುದಿಲ್ಲ’’ ಎಂದಳು.

ತಂದೆ, ಮಗ ಮೌನವಾಗಿದ್ದರು. ಸಖೂಬಾಯಿಯ ತಂದೆಯು ದೀನಸ್ವರದಲ್ಲಿ ಹೇಳಿದನು: ‘‘ಹುಡುಗಿ ದೊಡ್ಡವಳಾಗುವವರೆಗೂ ತವರುಮನೆಯಲ್ಲಿ ಇರುವುದೇ ನ್ಯಾಯಸಮ್ಮತವಾದುದು.’’

ತಾಯಿಯೂ ದೈನ್ಯದಿಂದ, ‘‘ನಾವು ಬಡವರು ನಿಜ. ಆದರೆ ಬಳ್ಳಿಗೆ ಕಾಯಿ ಭಾರವಾಗುವುದಿಲ್ಲ’’ ಎಂದಳು.

ನ್ಯಾಯ, ಧರ್ಮದ ಮಾತುಗಳು ಗಯ್ಯಾಳಿಬಾಯಿಯ ಹತ್ತಿರ ನಡೆಯುವುದೇ? ಯಾವ ವಾದಕ್ಕೂ ಅವಳು ಬಗ್ಗಲಿಲ್ಲ. ಗಂಟಲು ದೊಡ್ಡದು ಮಾಡಿಕೊಂಡು ತನ್ನ ಹಟವನ್ನೇ ಸಾಧಿಸಿದಳು.

ಕೊನೆಗೆ, ಸಂತಾಪದಿಂದ ಸಖೂವಿನ ತಂದೆಯು, ‘ದೇವರ ಇಚ್ಛೆಯಂತಾಗಲಿ’ ಎಂದು ಅಳುತ್ತಿರುವ ಹೆಂಡತಿಯನ್ನು ಕರೆದುಕೊಂಡು ಹೊರಟನು. ಹೋಗುವ ಮೊದಲು ಕೊನೆಯಬಾರಿಗೆ ಮಗಳನ್ನು ಕಂಡು ಹೇಳಿದನು:

‘‘ಅಮ್ಮಾ ಮಗಳೇ, ನಿನ್ನನ್ನು ಇವರಿಗೆ ದಾನಮಾಡಿ ಕೊಟ್ಟಮೇಲೆ ನೀನು ಅವರ ಸೊತ್ತು. ಭಕ್ತವತ್ಸಲನಾದ ಪಂಢರಾಪುರದ ವಿಠಲಸ್ವಾಮಿ ನಿನ್ನನ್ನು ಎಂದೂ ಕೈಬಿಡಲಾರ. ಇಗೊ ಆ ಸ್ವಾಮಿಯ ವಿಗ್ರಹ. ಅವನೇ ನಿನ್ನನ್ನು ಸದಾ ರಕ್ಷಿಸುವನು.’’

ಸಖೂಬಾಯಿಯ ಯಜಮಾನ ಓದುರಾಯ

ತಂದೆತಾಯಂದಿರನ್ನು ನೋಡಿದಾಗ ಆ ಬಾಲೆಯ ಮನಸ್ಸಿನಲ್ಲಿ ಒಂದು ಆಸೆ ಕಾಣಿಸಿತ್ತು. ಕೆಲವು ದಿನಗಳ ಮಟ್ಟಿಗಾದರೂ ತಾನು ಹುಟ್ಟಿಬೆಳೆದ ಮನೆಗೆ ಹೋಗಬಹುದು ಎಂದು. ಆ ಆಸೆಯೂ ಕಡಿದುಬಿತ್ತು. ತಾನು ಗಂಡನ ಮನೆಯಲ್ಲಿರುವುದೇ ಧರ್ಮ ಎಂದು ಸಖೂ ಮನಸ್ಸನ್ನು ಗಟ್ಟಿಮಾಡಿಕೊಂಡಳು. ಆದರೆ ಅವಳ ಕೈಹಿಡಿದ ಮಹಾರಾಯ ಓದುರಾಯ ಹೇಗಿದ್ದ?ತಂದೆ ತಾಯಂದಿರಿಂದ ದೂರವಾಗಿ ತನ್ನನ್ನೇ ನಂಬಿಬಂದ ಬಾಲೆ ಸಖೂ. ಮನೆಯವರನ್ನು ಬಿಟ್ಟುಬಂದ ದುಃಖವೂ ಅವಳಿಗಿರುತ್ತದೆ. ಹಾಗೆಯೇ ಇನ್ನೊಂದು ಮನೆಯವರ ಸ್ವಭಾವವನ್ನು ಅನುಸರಿಸಿ ಬಾಳುವುದರಲ್ಲಿಯೂ ಕಷ್ಟವಿದೆ. ಅವಳ ಕೈಹಿಡಿದ ತಾನು ಪ್ರೀತಿಯನ್ನು ತೋರಬೇಕು. ಸ್ನೇಹದಿಂದ ನಡೆಯಬೇಕು. ವಿಶ್ವಾಸದಿಂದ ಅವಳನ್ನು ಕಾಣಬೇಕು. ಈ ತೆರನಾದ ಯಾವ ಭಾವನೆಯೂ ಅವನಲ್ಲಿ ಇರಲಿಲ್ಲ. ಒಂದು ದಿನವೂ ಹೆಂಡತಿ ಉಂಡಳೇ ತಿಂದಳೇ ಎಂದು ವಿಚಾರಿಸಲಿಲ್ಲ. ಸ್ನೇಹದ ಒಂದು ನುಡಿಯನ್ನು ಆಡಲಿಲ್ಲ. ಒಂದು ಹೂ ತರಲಿಲ್ಲ. ತುಂಡುಬಟ್ಟೆ ಕೊಡಲಿಲ್ಲ. ತಾಯಿಗೆ ಹೆದರಿ ನಡುಗುತ್ತಿದ್ದ.

ಗಂಡ ಸಖೂಬಾಯಿಯನ್ನು ತನ್ನ ದಾಸಿಯೆಂದೇ ತಿಳಿದುಕೊಂಡ. ಸಹಧರ್ಮಿಣಿಯೆಂದು ಮನ್ನಿಸಲಿಲ್ಲ. ಅತ್ತೆ ಕಷ್ಟ ಕೊಟ್ಟರೆ ಗಂಡನ ಪ್ರೀತಿಯಲ್ಲಿ ಅದನ್ನು ಮರೆಯಬಹುದಿತ್ತು. ಕೊನೆಗೆ ಮನೆಯ ಹಿರಿಯನಾದ ಕೃಪಣರಾಯನಾದರೂ ಸಹಾನುಭೂತಿಯ ಒಂದುಮಾತ ನ್ನಾಡುತ್ತಿದ್ದನೇ? ಅದೂ ಇಲ್ಲ. ಹೀಗಾದ ಮೇಲೆ ಅವಳು ಯಾವ ಆಧಾರದಿಂದ ಬದುಕಬೇಕಿತ್ತು?

ವಿಠಲಸ್ವಾಮಿಯೇ, ನನಗೆ ನೀನೇ ದಿಕ್ಕು

ತಂದೆತಾಯಿಯೂ ದೂರವಾದರು. ಅತ್ತೆ, ಮಾವ, ಗಂಡ ಇವರಲ್ಲಿ ಯಾರೊಬ್ಬರೂ ಪ್ರೀತಿಯನ್ನೇ ತೋರಿಸಲಿಲ್ಲ. ಸ್ನೇಹವೂ ಪ್ರೀತಿಯೂ ಇಲ್ಲದ ಜೀವನದಿಂದ ನೊಂದ ಸಖೂಬಾಯಿ ದೇವರನ್ನೇ ಪ್ರೀತಿಸತೊಡಗಿದಳು. ಚಿಕ್ಕಂದಿನಿಂದಲೂ ಅವಳಿಗೆ ದೇವರಲ್ಲಿ ಬಹಳ ಭಕ್ತಿ. ಈಗಂತೂ ತಾಯಿಯೂ ದೇವರೇ ತಂದೆಯೂ ದೇವರೇ; ಗಂಡ, ಅತ್ತೆ, ಮಾವ ಎಲ್ಲರೂ ದೇವರೇ. ತಂದೆ ಹೇಳಿ ಹೋಗಿದ್ದ ‘ವಿಠಲಸ್ವಾಮಿಯು ಎಂದೂ ನಿನ್ನ ಕೈ ಬಿಡಲಾರ’ ಎಂಬ ಮಾತನ್ನೇ ಅವಳು ಬಲವಾಗ ನಂಬಿದಳು. ರಾತ್ರಿ, ಹಗಲು ‘ವಿಠಲ, ವಿಠಲ’ ಎಂದು ಜಪಿಸತೊಡಗಿದಳು.

ಗಯ್ಯಾಳಿಬಾಯಿ ಕೊಡುವ ಪೀಡೆ ಹೆಚ್ಚಿತು. ಮೂಕ ಬಸವಣ್ಣನಂತೆ ಸಖೂಬಾಯಿ ಎಲ್ಲವನ್ನೂ ಸಹಿಸುತ್ತಿದ್ದುದರಿಂದಲೋ ಏನೋ. ಅಲ್ಲದೆ, ಈಗ  ಅವಳಿಗೆ ಯಾರು ದಿಕ್ಕು? ಸೊಸೆ ಕೂತರೆ ತಪ್ಪು. ‘‘ಹಿರಿಯರ ಎದುರಿಗೆ ಕೂಡುವ ಧೈರ್ಯವೆ?’’  ಎಂದು ರೇಗುತ್ತಿದ್ದಳು. ಒಂದು ನಿಮಿಷ ನಿಂತರೆ, ‘‘ಕೆಲಸಕ್ಕೆ ಕಳ್ಳಿ’’  ಎಂದು ಕೂಗುತ್ತಿದ್ದಳು. ಬೆಳಗಿನ ಜಾವದಿಂದ ರಾತ್ರಿಯವರೆಗೂ ಗಾಣದೆತ್ತಿನಂತೆ ದುಡಿಯಬೇಕಾಗಿದ್ದ ಸಖೂಬಾಯಿ ಅತ್ತೆ ಬಟ್ಟಲಲ್ಲಿ ಸುರಿಯುವುದನ್ನು ಕಣ್ಣುಮುಚ್ಚಿ ನುಂಗುತ್ತಿದ್ದಳು. ಅತ್ತೆಗೆ ಸಿಟ್ಟು ಬಂದರೆ ಅದೂ ಕಡಿಮೆಯಾಗುತ್ತಿತ್ತು. ಹಸಿವಿನಿಂದ ಸಖೂಬಾಯಿಗೆ ಸಂಕಟವಾಗುತ್ತಿತ್ತು. ಕೆಲವೊಮ್ಮೆ ಮನಸ್ಸಿನ ಸಂಕಟವನ್ನೂ ದೇಹದ ಸಂಕಟವನ್ನೂ ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಆಗ ತನ್ನ ಉಡಿಯಲ್ಲಿ ಇಟ್ಟಿದ್ದ ವಿಠಲ ವಿಗ್ರಹವನ್ನು ಹೊರತೆಗೆಯುತ್ತಿದ್ದಳು. ತನ್ನ ಕಷ್ಟಗಳನ್ನು ಅವನಿಗೆ ನಿವೇದಿಸುತ್ತಿದ್ದಳು: ‘‘ಇನ್ನೆಷ್ಟು ಜನ್ಮದ ಪ್ರಾರಬ್ಧವನ್ನು ಸವೆಯಿಸಲಿಕ್ಕಿದೆ ವಿಠಲ? ನೀನು ಇನ್ನೆಷ್ಟು ವಿಧದಲ್ಲಿ ನನ್ನನ್ನು ಪರೀಕ್ಷೆ ಮಾಡಬೇಕೆಂದಿರುವಿ? ಆದರೂ ನೀನೇ ನನ್ನ ರಕ್ಷಕ. ನೀನೇ ನನಗೆ ದಿಕ್ಕು. ನನ್ನ ತಂದೆತಾಯಿ, ಬಂಧುಬಳಗ ಎಲ್ಲವೂ ನೀನೇ.’’ ಮನಸ್ಸಿಗೆ ಸ್ವಲ್ಪ ಶಾಂತಿ ಸಿಗುತ್ತಿತ್ತು. ಸಮಾಧಾನವಾಗುತ್ತಿತ್ತು. ಆ ವಿಗ್ರಹವನ್ನು ಹಾಗೆಯೇ ಅಡಗಿಸಿ ಕೆಲಸಕ್ಕೆ ಹೊರಡುತ್ತಿದ್ದಳು. ಅತ್ತೆಯ ಕಣ್ಣಿಗೆ ಬಿದ್ದರೆ ತನಗೆ ಉಳಿಗಾಲವಿಲ್ಲೆಂದು ಅವಳಿಗೆ ಗೊತ್ತಿತ್ತು. ದೇವರಿಗೆ ಪ್ರಾರ್ಥನೆ ಸಲ್ಲಿಸುವುದೂ ಆ ಮನೆಯಲ್ಲಿ ಒಂದು ಪಾಪಕೆಲಸವೇ ಆಗಿತ್ತು.

ಗಯ್ಯಾಳಿಬಾಯಿಯ ಪತ್ತೇದಾರಿಕೆ

ಸೊಸೆ ಕೆಲವು ಸಲ ತನ್ನಷ್ಟಕ್ಕೆ ಮಾತನಾಡಿಕೊಳ್ಳುತ್ತಾಳೆಂದು ಅತ್ತೆಗೆ ತಿಳಿಯಿತು. ತನಗೆ ಎದುರು ನಿಂತು ಜವಾಬು ಹೇಳುವ ಧೈರ್ಯ ಇಲ್ಲ. ಆದುದರಿಂದಲೇ ಹಿಂದಿನಿಂದ ಗೊಣಗುತ್ತಾಳೆ. ಇವಳಿಗೆ ಕಲಿಸುತ್ತೇನೆ ಬುದ್ಧಿ ಎಂದುಕೊಂಡಳು. ಅವಳ ಮಾತುಗಳನ್ನು ಕೇಳಿಸಿಕೊಂಡು ಸರಿಯಾಗಿ ಬೈದುಬಿಡಬೇಕು ಎಂದು ಎರಡು ಮೂರು ಸಲ ಕದ್ದು ಕೇಳಿದಳು. ‘ವಿಠಲ, ಪಾಂಡುರಂಗ ವಿಠಲ’ ಎಂದುದು ಕೇಳಿಸಿತು. ಇವಳು ಯಾರ ಜೊತೆಗೆ ಮಾತನಾಡುತ್ತಾಳೆ ಎಂದು ಥಟ್ಟನೆ ಇಣುಕಿದಳು. ವಿಗ್ರಹವನ್ನು ಉಡಿಯಲ್ಲಿಟ್ಟು ಮುಚ್ಚಿದುದರಿಂದ ಅತ್ತೆಗೆ ಏನೂ ಗೊತ್ತಾಗಲಿಲ್ಲ. ಮಿತಿಮೀರಿದ ಕೆಲಸಗಳಿಂದ ಅರೆಜೀವವಾದ ಸಖೂವಿಗೆ ಅತ್ತೆ ತನ್ನ ಬೆನ್ನುಹತ್ತಿದ್ದಾಳೆ ಎಂದು ಹೇಗೆ ತಿಳಿಯಬೇಕು? ಇನ್ನೊಂದು ಸಲ ಅವಳು ಹೀಗೆಯೇ ತನ್ನ ಕಷ್ಟವನ್ನು ವಿಠಲನೊಡನೆ ಹೇಳಿಕೊಳ್ಳುತ್ತಿದ್ದಳು. ಅತ್ತೆ ಬಂದೇಬಿಟ್ಟಳು. ವಿಗ್ರಹವನ್ನು ನೋಡಿಯೂಬಿಟ್ಟಳು. ‘‘ಏನದು ಅನಿಷ್ಟ?’’  ಎಂದು ಅದನ್ನು ಕಸಿದುಕೊಂಡಳು. ಮುರಿದು ಕಿಟಕಿಯಿಂದ ಹೊರಕ್ಕೆ ಎಸೆದಳು. ‘ಅಯ್ಯೋ, ನನ್ನ ಸ್ವಾಮಿ ಅವನು. ವಿಠಲಸ್ವಾಮಿ’ ಎಂದು ಸಖೂ ಗೋಳಿಟ್ಟಳು. ಗಯ್ಯಾಳಿಬಾಯಿ ಸಿಟ್ಟಿನಿಂದ ವಿಠಲನನ್ನು ಬಾಯಿಗೆ ಬಂದಂತೆ ಬೈದಳು. ಸಖೂಬಾಯಿಗೆ ಸಹಿಸುವುದಾಗಲಿಲ್ಲ.

‘‘ಅತ್ತೆಮ್ಮಾ, ನೀವು ನನ್ನನ್ನು ಬೇಕಾದ ಹಾಗೆ ಬೈಯಿರಿ. ಆದರೆ ಆ ವಿಗ್ರಹ ನಿಮಗೇನು ಮಾಡಿತು? ದೇವರನ್ನು ಬೈಯಬೇಡಿ’’ ಎಂದುಬಿಟ್ಟಳು.

ಗಯ್ಯಾಳಿಬಾಯಿಯ ರುದ್ರಾವತಾರವನ್ನು ಏನು ಹೇಳುವುದು? ಸೊಸೆ ತನಗೆ ಎದುರುನಿಂತು ವಾದಿಸಿದಳೆಂದು ಮನೆತುಂಬ ಹಾರಾಡಿದಳು. ಕೃಪಣರಾಯನೊಡನೆ ದೂರು ಹೇಳಿದಳು. ಮಗನು ಬಂದೊಡನೆಯೇ ‘‘ನಿನ್ನ ಹೆಂಡತಿಗೆ ನಾನು ಕಾಲಕಸ ಆಗಿದ್ದೇನೆ’’ ಎಂದು ಒಂದಕ್ಕೆರಡು ಚಾಡಿ ಹೇಳಿದಳು.

ಓದುರಾಯ ಏನಾಯಿತೆಂದು ವಿಚಾರಿಸಿದನೆ? ಕತ್ತೆ ಚಾಕರಿ ಮಾಡುವ ತನ್ನ ಹೆಂಡತಿ ಎಷ್ಟು ಸಹನಶೀಲೆಯಿರುವಳೆಂಬುದನ್ನು ಯೋಚಿಸಿದನೆ? ಹೃದಯಹೀನನಾದ ಆ ಮನುಷ್ಯನು ಒಂದು ಬೆತ್ತವನ್ನು ತೆಗೆದುಕೊಂಡು ಹೆಂಡತಿಯನ್ನು ಥಳಿಸಿದನು. ದನಕ್ಕೆ ಬಡಿಯುವಂತೆ ರಪರಪನೆ ಏಟು ಹಾಕಿದನು. ತವರುಮನೆಯಲ್ಲಿ ಸಖೂಬಾಯಿ ತನ್ನ ಮನೆಯ ದನದ ಮೇಲೆ ಕೂಡ ಒಂದು ದಿನವೂ ಕೈಯೆತ್ತಿರಲಿಲ್ಲ. ಇಲ್ಲಿ ತನಗೇ ಬಿದ್ದ ಗಂಡನ ಹೊಡೆತವನ್ನು ಮೌನವಾಗಿ ಸಹಿಸಿದಳು. ಮೈಮೇಲೆ ಬಾಸುಂಡೆಗಳೆದ್ದುವು. ನೋವಿನಿಂದ ಹುಡುಗಿ ರಾತ್ರಿ ಇಡೀ ನರಳಿದಳು. ನರಳುವಿಕೆಯಲ್ಲಿಯೂ ಅವಳ ಬಾಯಿಂದ ‘ವಿಠಲ, ವಿಠಲ, ದಯೆ ತೋರಪ್ಪಾ, ನನಗೆ ನೀನೇ ದಿಕ್ಕು’ ಎಂಬ ಪ್ರಾರ್ಥನೆಯೇ ಹೊರಡುತ್ತಿತ್ತು.

ಸಂಸಾರದಲ್ಲಿ ವಿರಕ್ತಿ

ರಾತ್ರಿ ಹಗಲು ದೇವರನ್ನೇ ನೆನೆಯುತ್ತಿದ್ದುದರಿಂದ ಸಖೂವಿನಲ್ಲಿ ದೇವರ ಭಕ್ತಿ ಬೆಳೆಯಿತು. ಸಂಸಾರದಲ್ಲಿ ಆಸಕ್ತಿ ಅಳಿಯಿತು. ಕೆಲಸಗಳನ್ನು ಅಚ್ಚುಕಟ್ಟಾಗಿ, ನಿಯಮಬದ್ದವಾಗಿ ಮಾಡುತ್ತಿದ್ದರೂ ಮನಸ್ಸು ದೇವರನ್ನೇ ಧ್ಯಾನಿಸುತ್ತಿತ್ತು. ನೋಡುವವರ ಹೃದಯ ಮರುಗುವಷ್ಟು ಸಖೂ ಬಡಕಲಾಗಿದ್ದಳು. ಅವಳ ಕಷ್ಟಗಳಿಗಾಗಿ ನೆರೆಹೊರೆಯವರು ಮರುಗುತ್ತಿದ್ದರು. ಗಯ್ಯಾಳಿಬಾಯಿಗೆ ಬುದ್ಧಿ ಹೇಳಬೇಕೆಂದು ಅವರೊಳಗೆ ಚರ್ಚೆಯಾಗುತ್ತಿತ್ತು. ಆದರೆ ಹೇಳುವುದು ಯಾರೆಂಬ ಪ್ರಶ್ನೆ ಬಂದೊಡನೆಯೇ ‘ನೀನು ಹೋಗು’, ‘ಅವಳು ಹೇಳಲಿ’, ‘ಇವಳು ಹೋಗಲಿ’  ಎಂದು ಗಡಿಬಿಡಿಯಾಗುತ್ತಿತ್ತು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಇಲಿಗಳ ಸಭೆಯಂತೆ ಹೆಂಗಸರು ಚೆಲ್ಲಾಪಿಲ್ಲಿಯಾಗುತ್ತಿದ್ದರು.

ಕೊನೆಗೆ ಗಂಡಸರಲ್ಲಿ ಕೆಲವರು ಧೈರ್ಯಮಾಡಿ ಕೃಪಣರಾಯನನ್ನು ಮಾತನಾಡಿಸಿದರು. ‘‘ಕೃಪಣರಾಯರೇ, ನಿಮ್ಮ ಸೊಸೆ ತುಂಬಾ ಕಾಯಿಲೆಯಾದವಳಂತೆ ಕಾಣುತ್ತಾಳೆ. ಹಿರಿಯರಾದ ನೀವು ಅವಳ ಕಷ್ಟ, ಸುಖ ವಿಚಾರಿಸಬೇಕು’’ ಎಂದರು. ಊರಮಂದಿ ವಿಚಾರಣೆಗೆ ಬಂದರೂ ಕೃಪಣರಾಯನು ಜಂಬದ ಮಾತುಗಳನ್ನಾಡಿದನು. ‘‘ಅವಳಿಗೇನು ಕಡಿಮೆಯಾಗಿದೆ? ಮನೆಯಲ್ಲಿ ಮೂರು ಹೊತ್ತು ಉಣ್ಣುತ್ತಾಳೆ, ತಿನ್ನುತ್ತಾಳೆ’’ ಎಂದನು.

‘‘ಇನ್ನೊಂದು ಮನೆಯ ಹೆಣ್ಣುಮಗು ಕಣ್ಣೀರು ಹಾಕುವಂತೆ ಮಾಡಬಾರದು. ಇಲ್ಲಿಗೆ ಬಂದಮೇಲೆ ನೀವು ಅವಳನ್ನು ತವರುಮನೆಗೂ ಕಳುಹಿಸಲಿಲ್ಲ. ಕೆಲವು ದಿನಗಳ ಮಟ್ಟಿಗಾದರೂ ಕಳುಹಿಸಿ’’ ಎಂದು ಆದಷ್ಟು ಸೂಕ್ಷ್ಮವಾಗಿ ಗಂಡಸರು ಬುದ್ಧಿ ಹೇಳಿದರು.

ಗಯ್ಯಾಳಿಬಾಯಿ ಸೊಸೆಗೆ ಹಿರಿಯರ ಎದುರಿಗೆ ಸುಳಿಯಬಾರದೆಂದು ಆಜ್ಞೆ ಮಾಡಿದ್ದಳು. ಸಖೂ ಕೃಪಣರಾಯನ ಕಣ್ಣಿಗೂ ಬೀಳುತ್ತಿರಲಿಲ್ಲ. ಆ ದಿನ ಕೃಪಣರಾಯನು ಮನೆಗೆ ಬಂದವನೇ ಪ್ರಯತ್ನಪಟ್ಟು ಸೊಸೆಯನ್ನು ನೋಡಿದನು. ಅವಳು ಗುರುತು ಸಿಗಲಾರದಷ್ಟು ಬಡವಾಗಿದ್ದಾಳೆಂದು ಅವನಿಗೆ ಆ ದಿನವೇ ಗೊತ್ತಾದುದು. ಊರವರು ಹೇಳಿದ ಮಾತುಗಳನ್ನು ಹೆಂಡತಿಯೊಡನೆ ಹೇಳಿದನು.

ಸರಿ. ಗಯ್ಯಾಳಿಬಾಯಿ ಊರಮಂದಿಗೆಲ್ಲ ಹಿಡಿಶಾಪ ಹಾಕಿದಳು. ಕೊನೆಗೆ ಸೊಸೆಯೇ ದೂರು ಹೇಳಿರುವಳೆಂದು ಕೂಗಾಡಿದಳು. ಮನೆ ಮರ್ಯಾದೆಯನ್ನು ಬೀದಿಪಾಲು ಮಾಡುತ್ತಾಳೆಂದು ಮಗನ ಕಿವಿ ಊದಿದಳು. ಅನಾಥಳಾದ, ನಿರಪಪಾಧಿಯಾದ ಆ ಬಾಲೆಗೆ ಪುನಃ ಹೊಡೆತಗಳು ಬಿದ್ದುವು. ಈ ಸಂಗತಿಯನ್ನು ಕೇಳಿ ಊರಮಂದಿ ಬಹಳ ವ್ಯಥೆಪಟ್ಟರು.

ಮರುದಿನ ಸಖೂಬಾಯಿ ಬಟ್ಟೆ ಒಗೆಯಲು ನದಿಗೆ ಬಂದಾಗ ಹೆಂಗಸರು ಪಶ್ಚಾತ್ತಾಪದಿಂದ ಹೇಳಿದರು: ‘‘ಅಮ್ಮಾ ಸಖೂ, ನೀನು ವ್ಯರ್ಥವಾಗಿ ಇವರ ಕೈಯಲ್ಲಿ ಪ್ರಾಣವನ್ನೇಕೆ ಕಳಕೊಳ್ಳುತ್ತಿ? ನಿನ್ನ ತಾಯಿತಂದೆಗಳ ಬಳಿಗಾದರೂ ಹೋಗು. ನಿನಗಾರೂ ದಿಕ್ಕಿಲ್ಲವೇ?’’

ಸಖೂಬಾಯಿ ದೃಢಕಂಠದಿಂದ ಹೇಳಿದಳು: ‘‘ತಾಯಂದಿರೇ, ನಿಮ್ಮ ಸ್ನೇಹ, ಪ್ರೀತಿ, ದುಃಖ ನನಗೆ ಅರ್ಥವಾಗುತ್ತದೆ. ಆ ವಿಠಲಸ್ವಾಮಿಯ ಇಚ್ಛೆಯಂತೆಯೇ ಎಲ್ಲವೂ ನಡೆಯುವುದು. ಅವನೇ ನನ್ನ ತಾಯಿ, ತಂದೆ. ಅವನೇ ನನ್ನನ್ನು ರಕ್ಷಿಸುವನು. ನೀವು ಯಾರೂ ಚಿಂತೆಯನ್ನೇ ಮಾಡಬೇಡಿ.’’

ಇಷ್ಟೊಂದು ಹಿಂಸೆ, ಪೀಡೆಗಳನ್ನು ಕೊಡುವ ಅತ್ತೆ, ಮಾವಂದಿರ ಬಗೆಗೆ ಅಥವಾ ಗಂಡನ ಬಗೆಗೆ ಒಂದು ಕೆಟ್ಟ ಮಾತು ಅವಳ ಬಾಯಿಂದ ಬರಲಿಲ್ಲ. ಹೆಂಗಸರಿಗೆ ಆಶ್ಚರ್ಯವಾಯಿತು. ಪರಮಾತ್ಮನನ್ನೇ ನಂಬಿ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡಿರುವ ಸಖೂ ಶ್ರೇಷ್ಠ ಭಕ್ತಳಿರಬೇಕೆಂದು ಮಾತನಾಡಿಕೊಂಡರು. ಈ ಬಾಲೆಯ ಶಾಂತ ಸ್ವಭಾವವನ್ನೂ ಸಹನಶೀಲತೆಯನ್ನೂ ಭಕ್ತಿಯನ್ನೂ ಕೊಂಡಾಡುತ್ತಾ ತಮ್ಮ ಮನೆಗಳಿಗೆ ಹೋದರು.

ಹೊಳೆಯಂತೆ ಹರಿದ ಭಕ್ತಿ

ಒಂದು ದಿನ ಸಾಯಂಕಾಲದ ಹೊತ್ತಿಗೆ ಸಖೂಬಾಯಿ ನೀರು ತರಲು ಕೃಷ್ಣಾನದಿಗೆ ಬಂದಿದ್ದಳು. ಜೊತೆಗೆ ನೆರೆಮನೆಯ ಶಾಂತಾಬಾಯಿ ಎಂಬ ಹೆಂಗಸಿದ್ದಳು. ಪಂಢರಾಪುರಕ್ಕೆ ಹೋಗುವ ಯಾತ್ರಿಕರ ಒಂದು ಗುಂಪು ಅಲ್ಲಿಗೆ ಬಂದಿತ್ತು. ಆ ಕಾಲದಲ್ಲಿ ಈಗಿನಂತೆ ವಾಹನ ಸೌಕರ್ಯಗಳು ಇರಲಿಲ್ಲ. ಯಾತ್ರಿಕರು ನಡೆದುಕೊಂಡೇ ಪುಣ್ಯಸ್ಥಳಗಳಿಗೆ ಹೋಗುತ್ತಿದ್ದರು. ನದೀದಂಡೆಗಳಲ್ಲಿ ಬೀಡುಬಿಟ್ಟು ಆಹಾರವನ್ನು ಬೇಯಿಸಿ ತಿಂದು, ವಿಶ್ರಮಿಸಿ ಮತ್ತೆ ಮುನ್ನಡೆಯುತ್ತಿದ್ದರು. ಈ ಯಾತ್ರಿಕರನ್ನು ನೋಡುತ್ತಲೇ ಸಖೂಬಾಯಿಗೆ ತಾನು ನೀರಿಗೆ ಬಂದಿರುವುದು ಮರೆತುಹೋಯಿತು. ಅವರಲ್ಲಿ ಅನೇಕರು ‘‘ಪಾಂಡುರಂಗ ವಿಠಲಾ’ ಎಂದು ಹಾಡುತ್ತಿದ್ದರು. ಭಕ್ತಿ ಪರವಶರಾಗಿ ಕುಣಿಯುತ್ತಿದ್ದರು. ‘ದರ್ಶನ ಕೊಡು ತಂದೆಯೇ’ ಎಂದು ಹಾಡಿಹಾಡಿ ಕರೆಯುತ್ತಿದ್ದರು.

ಸಖೂಬಾಯಿಯ ಹೃದಯದಲ್ಲಿ ಭಕ್ತಿರಸ ಹೊಳೆಯಂತೆ ಹರಿದುಬಂತು. ಆನಂದವಶಳಾಗಿ ಅವಳು, ‘ಶಾಂತಾಬಾಯಿ, ನಾನು ವಿಠಲನ ದರ್ಶನಕ್ಕೆ ಪಂಢರಾಪುರಕ್ಕೆ ಹೋಗುತ್ತೇನೆ’’ ಎಂದಳು. ‘‘ಮನೆಯಲ್ಲಿ ಗೊತ್ತಾದರೆ ನಿನ್ನ ಅತ್ತೆ ಸೊಂಟ ಮುರಿದಾರು. ಸುಮ್ಮನೆ ಮನೆಗೆ ಹೋಗೋಣ’’ ಎಂದು ಶಾಂತಾಬಾಯಿ ಎಚ್ಚರಿಸಿದಳು. ಆದರೆ ಸಖೂಬಾಯಿ ಯಾತ್ರಿಕರನ್ನು ಸೇರಿಯೇಬಿಟ್ಟಳು.

ಗಯ್ಯಾಳಿಬಾಯಿಗೆ ಸುದ್ದಿ ಸಿಕ್ಕಿದುದೇ ತಡ, ರೋಷಭೀಷಣವಾಗಿ ಕೂಗಾಡುತ್ತಾ ಮಗನ ಜೊತೆಗೇ ಬಂದಳು. ಸಖೂಬಾಯಿ ಆನಂದಭಾವದಲ್ಲಿ, ‘ಪಾಂಡುರಂಗ ವಿಠಲ, ಪಂಢರಾಪುರ ವಿಠಲ’ ಎಂದು ಹಾಡಿ ಕುಣಿಯುತ್ತಿದ್ದಳು. ಕಣ್ಣುಗಳು ಮುಚ್ಚಿದ್ದುವು. ಅತ್ತೆ ಅವಳ ಮುಡಿಯನ್ನು ಹಿಡಿದೆಳೆಯುವವರೆಗೂ ಅವಳಿಗೆ ಈ ಲೋಕದ ಜ್ಞಾನವಿರಲಿಲ್ಲ. ಸಖೂವನ್ನು ಹೊಡೆಯುತ್ತಾ ಬಡಿಯುತ್ತಾ ತಾಯಿ ಮಗ ಕೂಡಿ ಎಳೆದುತಂದರು. ಮನೆಯಿಂದ ಓಡಿಹೋಗುವಂತಹ ನೀಚ ಕೆಲಸ ಮಾಡಿದಳೆಂದು ಊರಿಗೆಲ್ಲ ಸಾರಿದರು. ಪುನಃ ಅವಳು ಓಡಿಹೋಗದಂತೆ ಕಂಬಕ್ಕೆ ಕಟ್ಟಿದರು. ರಾತ್ರಿ ತಾವು ಉಂಡು ಅವಳನ್ನು ಉಪವಾಸ ಕೆಡವಿದರು.

ಭಕ್ತಳ ಮೊರೆಗೆ ದೇವರ ಕೃಪೆ

ಸಖೂಬಾಯಿಗೆ ದೇವರು ಹೇಗೆ ಕೃಪೆ ತೋರಿದ ಎಂಬ ಕಥೆಯನ್ನು ಭಕ್ತರು ಹೇಳುತ್ತಾರೆ. ತುಂಬ ಸ್ವಾರಸ್ಯಕರವಾದ ಕಥೆ.

ಹೊಡೆತಗಳಿಂದ ದೇಹಕ್ಕೆ ಉಂಟಾದ ನೋವಿಗಿಂತಲೂ ಹೆಚ್ಚಾಗಿ ಸಖೂವಿನ ಮನಸ್ಸಿಗೆ ನೋವಾಗಿತ್ತು. ತಿನ್ನುವುದಕ್ಕೆ, ಉಣ್ಣುವುದಕ್ಕೆ, ಉಡುವುದಕ್ಕೆ ಯಾವುದಕ್ಕೂ ಆಸೆಪಡದ ಸಖೂವಿಗೆ ದೇವರನ್ನು ನೋಡಬೇಕೆಂಬ ಆಸೆ ತಡೆಯಲೇ ಇಲ್ಲ. ಸರಿಯಾಗಿ ನಿಲ್ಲುವುದಕ್ಕೂ ಶಕ್ತಿ ಇರದ ಸಖೂ ಕಟ್ಟಿದಲ್ಲಿಂದಲೇ, ‘‘ವಿಠಲ, ವಿಠಲ, ನನ್ನ ಆಸೆ ತೀರಿಸಪ್ಪಾ’’ ಎಂದು ಒಂದೇ ಮನಸ್ಸಿನಿಂದ ಬೇಡಿದಳು.

ಭಕ್ತವತ್ಸಲನಾದ ವಿಠಲನಿಗೆ ಈ ಮೊರೆ ಕೇಳಿಸಿತು. ಮಧ್ಯರಾತ್ರಿಯ ಹೊತ್ತಿಗೆ ಆತನು ಸ್ತ್ರೀ ವೇಷ ಧರಿಸಿ ಸಖೂವಿನ ಬಳಿ ಬಂದನು. ಅವಳ ಕಟ್ಟುಗಳನ್ನು ಬಿಚ್ಚಿದನು. ಕರುಣೆ, ವಾತ್ಸಲ್ಯಗಳಿಂದ ಅವಳನ್ನು ಮುಟ್ಟಿದನು. ಸಖೂವಿಗೆ ಹೊಸ ಚೈತನ್ಯ ಬಂದಂತಾಯಿತು. ಶಕ್ತಿ, ಉತ್ಸಾಹ ತುಂಬಿತು. ನೋವು ದೂರವಾಯಿತು. ಆಗ ಆ ವೇಷಧಾರಿಯು, ‘‘ಅಮ್ಮಾ ಸಖೂ, ನಿನಗೆ ವಿಠಲನ ದರ್ಶನ ಮಾಡಬೇಕೆಂಬ ಆಸೆಯಿರುವುದಲ್ಲವೇ? ನೀನು ಹೋಗಿ ಬಾ. ಅಷ್ಟರವರೆಗೆ ನೀನು ಮಾಡುತ್ತಿರುವ ಕೆಲಸಗಳನ್ನು ಮಾಡಿಕೊಂಡು ನಾನು ಇಲ್ಲಿರುತ್ತೇನೆ’’ ಎಂದಳು.

ದೇವರ ಹುಚ್ಚಿನಲ್ಲಿಯೇ ಇದ್ದ ಸಖೂಬಾಯಿ ಹೆಚ್ಚಿಗೇನೂ ಯೋಚಿಸಲಿಲ್ಲ. ಓಡಿಹೋಗಿ ಯಾತ್ರಿಕರ ಗುಂಪನ್ನು ಸೇರಿಕೊಂಡಳು. ಸ್ತ್ರೀ ವೇಷಧಾರಿಯಾದ ದೇವಾಧಿದೇವನು ಭಕ್ತಳ ಸ್ಥಳದಲ್ಲಿ ತನ್ನನ್ನು ತಾನೇ ಬಂಧಿಸಿಕೊಂಡು ನಿಂತನು.

ರಾತ್ರಿ ಕಳೆದು ಬೆಳಗಾಯಿತು. ತಾಯಿ ಮಗ ಎದ್ದು ಬಂದರು. ಹೊಡೆದು, ಬಡಿದು ಕಟ್ಟಿಹಾಕಿದರೂ ಸಖೂಬಾಯಿ ವಿಠಲ ನಾಮಸ್ಮರಣೆ ಮಾಡುತ್ತಲೇ ಇರುವುದನ್ನು ನೋಡಿದರು. ಕಣ್ಣುಗಳು ಮುಚ್ಚಿಕೊಂಡಿದ್ದರೂ ಬಾಯಿ, ‘ಪಾಂಡುರಂಗ ವಿಠಲ, ಪಂಢರಾಪುರ ವಿಠಲ’ ಎಂದು ಜಪಿಸುತ್ತಲೇ ಇತ್ತು. ಅವರಿಗೆ ಆಶ್ಚರ್ಯವಾಯಿತು. ಭಯವೂ ಆಯಿತು! ಮೈಮೇಲೆ ಮುಳ್ಳುಗಳೆದ್ದುವು. ಮನುಷ್ಯಮಾತ್ರರಿಂದ ಇಂತಹ ಭಕ್ತಿ ಸಾಧ್ಯವೇ? ಭಯಪಟ್ಟುಕೊಂಡೇ ಅವಳ ಕಟ್ಟುಗಳನ್ನು ಬಿಚ್ಚಿದರು. ಈಗಲಾದರೂ ಸಖೂಬಾಯಿ ಮೂರ್ಛೆಗೊಂಡು ಬೀಳುತ್ತಾಳೆ ಎಂದು ಎಣಿಸಿದ್ದರು. ಆದರೆ ಏನಾಶ್ಚರ್ಯ! ಅವಳು ಕಣ್ಣುಬಿಟ್ಟು ನೆಟ್ಟಗೆ ನಿಂತುಕೊಂಡಳು. ಅತ್ತೆಗೆ ಭಯದಿಂದ ಕೈಕಾಲು ನಡುಕ ಬರಹತ್ತಿತ್ತು. ಆದರೂ ತೋರಿಸದೆ, ಸ್ನಾನಮಾಡಿ ಅಡುಗೆ ಮಾಡು’ ಎಂದು ಆಜ್ಞೆ ಕೊಟ್ಟಳು.

‘ಸಖೂಬಾಯಿ’ ಮರುಮಾತಾಡದೆ ಸ್ನಾನಮಾಡಿ ಬಂದು ಅಡುಗೆ ಮಾಡಿದಳು. ಪರಮಾತ್ಮನ ಕೈಯಡುಗೆಯನ್ನು ಊಟಮಾಡಲು ಇವರು ಯಾವ ಜನ್ಮದ ಪುಣ್ಯವನ್ನು ಮಾಡಿದ್ದರೊ! ಏನು ದಿವ್ಯ ಅಡುಗೆಯದು! ಅಮೃತವನ್ನೇ ಉಂಡಷ್ಟು ತೃಪ್ತಿಯಾಯಿತು. ಮನಸಾರೆ ಉಂಡರು, ತೇಗಿದರು. ಬಾಯಿತುಂಬ ಹೊಗಳಿಯೇ ಹೊಗಳಿದರು. ‘‘ನೀನು ಅಡುಗೆ ಬಹಳ ಚೆನ್ನಾಗಿ ಮಾಡುತ್ತಿ’’ ಎಂದರು. ಆದರೆ ಆ ವಿಠಲ ನಾಮಸ್ಮರಣೆಯೊಂದಿದೆಯಲ್ಲ? ಅದು ಗಯ್ಯಾಳಿಬಾಯಿಗೆ ಅಸಹ್ಯವಾಗಿ ತೋರುತ್ತಿತ್ತು. ಅವಳು, ‘‘ಆ ಕರ್ಕಶ ಸ್ಮರಣೆಯನ್ನು ಬಿಡು’’ ಎಂದಳು.

ವೇಷಧಾರಿ ಪರಮಾತ್ಮ ಯಾವ ಜವಾಬನ್ನೂ ಕೊಡಲಿಲ್ಲ. ಭಗವನ್ನಾಮಸ್ಮರಣೆಯನ್ನು ಬಿಡಲೂ ಇಲ್ಲ. ಸಖೂವಿನಂತೆಯೇ ಅವಳ ಸ್ಥಾನಕ್ಕೆ ಬಂದ ಹೆಂಗಸೂ ಮೌನವಾಗಿ ಎಲ್ಲ ಕೆಲಸಗಳನ್ನೂ ಮಾಡುತ್ತಲೇ ಹೋದಳು. ನದಿಗೆ ಹೋದಳು. ನೀರು ತಂದು ತುಂಬಿದಳು. ಪಾತ್ರೆ ಬೆಳಗಿದಳು; ಬಟ್ಟೆ ಒಗೆದಳು. ಬೀಸುವುದು, ಕುಟ್ಟುವುದು ಮೊದಲಾದ ಎಲ್ಲ ಕೆಲಸಗಳೂ ಕ್ರಮವಾಗಿ ನಡೆದುವು. ಈಗ ದಿನದಿಂದ ದಿನಕ್ಕೆ ‘ಸಖೂ’ವನ್ನು ನೋಡಿದರೆ ಮನೆಮಂದಿಗೆ ಏನೋ ಒಂದು ತರಹ ಭಯಭಕ್ತಿಗಳು ಉಂಟಾಗುತ್ತಿದ್ದುವು. ಮೊದಲಿನಂತೆ ಬೈಯಲು ಗಯ್ಯಾಳಿಬಾಯಿಯ ನಾಲಿಗೆ ಹೊರಳುತ್ತಿರಲಿಲ್ಲ. ಹೊಡೆಯಲು ಓದುರಾಯನ ಕೈ ಏಳುತ್ತಿರಲಿಲ್ಲ. ದೇವಸನ್ನಿಧಿಯಿಂದ ಮನೆಯ ವಾತಾವರಣವೇ ಬದಲಾಗಿತ್ತು.

ಇತ್ತ ಭಕ್ತಳಾದ ಸಖೂಬಾಯಿ ಪಂಢರಾಪುರಕ್ಕೆ ಬಂದಳು. ವಿಠಲನ ದರ್ಶನ ಪಡೆದಳು. ಭಕ್ತಿ, ಆನಂದವಶಳಾಗಿ ಅವನನ್ನು ಭಜಿಸಿದಳು; ಪೂಜಿಸಿದಳು. ಅವಳಲ್ಲಿ ಸಂಸಾರದ ಆಸೆಯೇ ಉಳಿದಿರಲಿಲ್ಲ. ಒಂದೊಂದಾಗಿ ದಿನಗಳು ಕಳೆಯುತ್ತಿದ್ದರೂ ತನ್ನ ಮನೆಗೆ ಹೋಗಬೇಕೆಂಬ ವಿಚಾರವೂ ಬರಲಿಲ್ಲ. ದೇವರ ಧ್ಯಾನದಲ್ಲಿ ರಾತ್ರಿ, ಹಗಲು, ಮನೆ, ಮಂದಿರ ಎಲ್ಲವೂ ಒಂದೇ ಆಯಿತು. ವಿಠಲ ಪರವಶಳಾದ ಈ ಭಕ್ತಶ್ರೇಷ್ಠಳು ಒಂದು ದಿನ ‘ವಿಠಲ, ವಿಠಲ’ ಎಂದು ದೇವಸನ್ನಿಧಿಯಲ್ಲಿ ತಲೆಯಿಟ್ಟುದೇ ತಡ, ಅವಳ ಪ್ರಾಣಗಳು ಆ ದೇವನನ್ನೇ ಸೇರಿಕೊಂಡವು.

ಪಂಢರಾಪುರದಲ್ಲೆಲ್ಲ ಇದೇ ಸುದ್ದಿಯಾಯಿತು. ದೇವಾಧಿದೇವನ ಚರಣಕಮಲಗಳಲ್ಲಿ ತಲೆಯಿಟ್ಟು ಈ ನಶ್ವರ ದೇಹವನ್ನು ತ್ಯಜಿಸಬೇಕಾದರೆ ಅವಳು ಪರಮ ಭಕ್ತಳಿರಬೇಕೆಂದು ಆಕೆಯ ಕೊನೆಯ ದರ್ಶನಕ್ಕೆ ಜನ ಓಡೋಡಿ ಬಂದರು. ಊರತುಂಬ ಸಖೂವಿನ ಪ್ರಶಂಸೆಯೇ ಆಯಿತು. ಜನವೆಲ್ಲ ಸೇರಿ ಶ್ರೀಗಂಧ, ಕರ್ಪೂರಗಳ ಚಿತೆಯಲ್ಲಿ ಈಕೆಯ ಶವದಹನ ಮಾಡಿದರು.

ರುಕುಮಾಯಿಯ ಚಿಂತೆ

ಭಕ್ತರು ಹೇಳುವ ಕಥೆ ಇಲ್ಲಿಂದ ಇನ್ನೂ ಕುತೂಹಲ ಕಾರಿಯಾಗುತ್ತದೆ.

ಸಖೂಬಾಯಿ ದೇಹಾಂತವಾಗಿತ್ತು. ವೇಷಧಾರಿ ವಿಠಲನು ಕರವೀರಪುರದ ಅವಳ ಮನೆಯಲ್ಲಿ ಕೆಲಸಕ್ಕಿದ್ದನು. ‘ನೀನು ಬರುವವರೆಗೂ ನಿನ್ನ ಮನೆಯ ಕೆಲಸಗಳನ್ನು ನಾನು ಮಾಡುವೆನು’  ಎಂದು ಅವನು ತನ್ನ ಭಕ್ತಳಿಗೆ ಮಾತು ಕೊಟ್ಟಿದ್ದನಲ್ಲ? ಈಗ ಅವನನ್ನು ಹೇಗೆ ಬರಮಾಡಿಕೊಳ್ಳುವುದು? ವಿಠಲನ ಸತಿ ರುಕುಮಾಯಿ ಈ ಚಿಂತೆಯಲ್ಲಿ ಬಳಲಿದಳು. ಸಖೂವನ್ನು ಬದುಕಿಸುವುದೇ ಇದಕ್ಕೆ ಇರುವ ಒಂದೇ ಉಪಾಯ ಎಂದು ನಿರ್ಣಯಿಸಿದಳು. ತನ್ನ ಭಕ್ತರಿಗೆ ಕನಸಿನಲ್ಲಿ ದರ್ಶನ ಕೊಟ್ಟಳು. ನಡೆದಿರುವ ಸಂಗತಿಯನ್ನು ಅವರಿಗೆ ತಿಳಿಸಿದಳು. ಸಖೂವಿನ ಆಸ್ಥಿಗಳನ್ನು ಸಂಗ್ರಹಿಸಿ ತಂದು ತನ್ನ ಸನ್ನಿಧಿಯಲ್ಲಿ ಇಡುವಂತೆ ಅಪ್ಪಣೆ ಮಾಡಿದಳು. ಭಕ್ತರು ಆಸ್ಥಿಗಳನ್ನು ದೇವಿಯ ಸನ್ನಿಧಿಗೊಯ್ದು ಇಟ್ಟರು. ರುಕುಮಾಯಿ ತನ್ನ ದಿವ್ಯಹಸ್ತದಿಂದ ಅವುಗಳನ್ನು ಸ್ಪರ್ಶಿಸಿ ಸಖೂಬಾಯಿಯನ್ನು ಬದುಕಿಸಿದಳು. ‘‘ಭಕ್ತಶ್ರೇಷ್ಠಳೇ, ನೀನು ಕರವೀರಪುರದ ನಿನ್ನ ಮನೆಗೆ ಹೋಗು. ಅಲ್ಲಿ ನಿನಗಾಗಿ ವಿಠಲಸ್ವಾಮಿಯು ನಿನ್ನ ಮನೆಯ ಕೆಲಸಕ್ಕೆ ನಿಂತಿರುವನು. ಅವನನ್ನು ಕಳುಹಿಸು. ನಿನಗೆ ಮಂಗಳವಾಗಲಿ’’ ಎಂದು ಹರಸಿ ಕಳುಹಿಸಿದಳು.

ಸಖೂಬಾಯಿ ನಡೆದುಬಂದು ಊರು ಸೇರಿದಳು. ಕೃಷ್ಣಾನದಿ ದಂಡೆಯಲ್ಲಿ ಕೊಡಗಳನ್ನು ಹಿಡಿದು ವೇಷಧಾರಿ ಸಖೂಬಾಯಿ ನಿಂತುಕೊಂಡಿದ್ದಳು. ಭಕ್ತಸಖೂ ಓಡಿಬಂದು ದೇವರ ಚರಣಗಳನ್ನು ಹಿಡಿದುಕೊಂಡಳು. ‘‘ದೇವಾಧಿದೇವ, ನಿನ್ನನ್ನು ಸೇವಾಕಾರ್ಯಕ್ಕೆ ಹಚ್ಚಿದ ನಾನು ಎಂತಹ ಹುಚ್ಚಿ! ನೀನು ಯಾರು, ಏನು, ಎತ್ತ- ಯಾವುದನ್ನೂ ಕೇಳದೆ ಹೋಗಿಬಿಟ್ಟೆನಲ್ಲ! ಎಂತೆಂತಹ ಕೆಲಸಗಳನ್ನು ನೀನು ಮಾಡಬೇಕಾಯಿತೊ? ನನ್ನನ್ನು ಕ್ಷಮಿಸು’’ ಎಂದು ಗೋಗರೆದಳು.

ವಿಠಲಸ್ವಾಮಿಯು ನಕ್ಕು ಹೇಳಿದನು: ‘‘ಭಕ್ತರಿಗಾಗಿ ನಾನು ಮಾಡದ ಕೆಲಸವಿಲ್ಲ. ನಿನ್ನ ಬಾಳು ಸುಗುಮವಾಗುವುದು. ನಿನಗೆ ಕಲ್ಯಾಣವಾಗುವುದು. ಇತರರಿಗೆ ನೆರವಾಗುವಂತೆ ಬಾಳು.’’

ದೇವರ ಆಶೀರ್ವಾದವನ್ನು ಪಡೆದು ಸಖೂಬಾಯಿ ಸಂತೋಷದಿಂದ ಮನೆಗೆ ಮರಳಿದಳು.

ನಡೆದ ಸಂಗತಿ ಎಲ್ಲವೂ ಸೊಸೆಯಿಂದ ಗಯ್ಯಾಳಿ ಬಾಯಿಗೆ ತಿಳಿಯಿತು. ಅವಳು ಬೆರಗಾದಳು. ‘ವಿಠಲಸ್ವಾಮಿಯನ್ನು ಹೀಗೆ ದುಡಿಸಿಕೊಂಡೆನೇ!’ ಎಂದು ದುಃಖದಿಂದ, ನಾಚಿಕೆಯಿಂದ ಕರಗಿಹೋದಳು. ಸೊಸೆ ದೇವರನ್ನು ಒಲಿಸಿಕೊಂಡ ಮಹಾಭಕ್ತಳು ಎಂದು ಹಿಗ್ಗಿದಳು, ತನ್ನ ನಡತೆಗಾಗಿ ನಾಚಿದಳು. ‘‘ಹಿಂದಿನದನ್ನೆಲ್ಲ ಮರೆತುಬಿಡು, ನೀನು ನಮ್ಮ ಮನೆಯ ಭಾಗ್ಯ’’ ಎಂದು ಸೊಸೆಯನ್ನು ಕೇಳಿಕೊಂಡಳು.

ಸಖೂಬಾಯಿಯ ಬಾಳಿನ ರೀತಿಯೇ ಬದಲಾಯಿತು. ಅತ್ತೆ, ಮಾವ, ಗಂಡ ಸಂಪೂರ್ಣ ಬದಲಾಗಿ ಹೋಗಿದ್ದರು. ಸಖೂಬಾಯಿಯನ್ನು ಈಗ ಎಲ್ಲರೂ ಪ್ರೀತಿಸುತ್ತಿದ್ದರು. ಸಖೂಬಾಯಿ ಮೊದಲಿನಂತೆಯೇ ಎಲ್ಲರನ್ನೂ ಪ್ರೀತಿಸಿದಳು. ಸ್ನೇಹದಿಂದ ಬಾಳಿದಳು. ತನ್ನ ಸುತ್ತ ಸೇರುತ್ತಿದ್ದವರಿಗೆಲ್ಲ ದೇವರ ಮಹಿಮೆಯ್ನೂ ಭಕ್ತಿಯನ್ನೂ ಬೋಧಿಸಿದಳು. ಸುಖ, ಶಾಂತಿಯಿಂದ ಹೆಚ್ಚು ಕಾಲ ಬಾಳಿದಳು.

ಭಕ್ತಿಯೇ ಶಕ್ತಿಯಾದ ಸಖೂಬಾಯಿ

ಎಲ್ಲ ದೇಶಗಳಲ್ಲಿಯೂ ಸಾಧುಸಂತರ, ಭಗವದ್ಭಕ್ತರ ಹಿರಿಮೆಯನ್ನು ತೋರಿಸುವ ಕಥೆಗಳಿವೆ. ಸಖೂಬಾಯಿಯ ಕಥೆ ನಮ್ಮ ದೇಶದಲ್ಲಿ ಬಹು ಜನಪ್ರಿಯ. ಭಕ್ತರು ಬಹು ಶ್ರದ್ಧೆಯಿಂದ, ಭಕ್ತಿಯಿಂದ ಆಕೆಯನ್ನು ಸ್ಮರಿಸುತ್ತಾರೆ.

ಚಿಕ್ಕ ವಯಸ್ಸಿನಿಂದಲೂ ಸಖೂ ಎಷ್ಟೊಂದು ಕಷ್ಟಗಳನ್ನು ಅನುಭವಿಸಿದಳು! ಗಂಡನ ಮನೆಗೆ ಕಾಲಿಟ್ಟುದೇ ತಡ, ತವರಿನ ಮುಖವನ್ನೂ ನೋಡಲಿಲ್ಲ. ಮನೆಯಲ್ಲಿ ಬಡತನ ಇದ್ದು ಉಣ್ಣಲಿಕ್ಕಿಲ್ಲ, ತಿನ್ನಲಿಕ್ಕಿಲ್ಲ ಎಂದರೆ ಅದೊಂದು ದೊಡ್ಡ ಕಷ್ಟವೆಂದು ತೋರುವುದಿಲ್ಲ. ಪ್ರೀತಿಯಿಂದ ಹಂಚಿ ತಿನ್ನುವುದರಲ್ಲಿ ಸುಖ ಇದೆ. ಆದರೆ ಮನೆಯಲ್ಲಿ ಧನ-ಧಾನ್ಯಗಳ ಸಮೃದ್ಧಿಯಿದ್ದೂ ನಾಯಿಗೆ ಹಾಕುವಂತೆ ಕೂಳು ತಿನ್ನಬೇಕಾದರೆ ಮನಸ್ಸಿಗೆ ಎಷ್ಟು ಹಿಂಸೆಯಾಗಬೇಕು? ಮನೆಯವರ ತಿರಸ್ಕಾರ, ಬೈಗಳು ಸಾಲದೇನೊ ಎಂಬಂತೆ ಹೊಡೆತಗಳು. ‘ಕೊಟ್ಟ ಹೆಣ್ಣು, ಕುಲಕ್ಕೆ ಹೊರಗು’ ಎಂದು ನಂಬಿದ ಆ ಕಾಲದಲ್ಲಿ ತಂದೆ ತಾಯಂದಿರೂ ಅಸಹಾಯಕರು. ಎಲ್ಲವನ್ನೂ ತಾಳಿಕೊಂಡ ಅವಳ ಸಹನೆ ಅಪಾರ. ಇದಕ್ಕೆಲ್ಲ ಶಕ್ತಿಯಾಗಿ ನಿಂತುದು ದೇವರ ಮೇಲಿನ ಅವಳ ಭಕ್ತಿ. ತನ್ನ ಒಳಿತನ್ನೂ ಕೆಡುಕನ್ನೂ ಅವನಿಗೇ ಬಿಟ್ಟುಬಿಟ್ಟಳು. ಯಾರನ್ನೂ ನಿಂದಿಸಲಿಲ್ಲ. ಒಂದು ಕೆಟ್ಟಮಾತನ್ನೂ ಆಡಲಿಲ್ಲ. ವಿಠಲಸ್ವಾಮಿಗೆ ಸಂಪೂರ್ಣ ಶರಣಾದ ಅನುಪಮ ಭಕ್ತಿ ಅವಳದು. ಲೋಕ ಕಲ್ಯಾಣಕ್ಕಾಗಿಯೇ ಬಾಳಿದ ಸಖೂಬಾಯಿಯ ಜನ್ಮ ಸಾರ್ಥಕವಾಯಿತು.