ಇಂದು ಇಂಧನದ ಕೊರತೆ ಎಲ್ಲೆಡೆಯ ಸಮಸ್ಯೆ. ಸಾಂಪ್ರದಾಯಿಕ ಇಂಧನ ಮೂಲಗಳು ನಶಿಸಿ ಹೋಗುತ್ತಿವೆ. ಆದರೆ ಬೇಡಿಕೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೀಗಾಗಿ  ಅಸಾಂಪ್ರದಾಯಿಕ ಇಂಧನ ಮೂಲಗಳ ಮೇಲೆ ನಾವು ಹೆಚ್ಚು ಅವಲಂಬಿಸಬೇಕಾಗಿದೆ. ವಿಜ್ಞಾನ, ತಂತ್ರಜ್ಞಾನ ಇಂದು ನಾಗಾಲೋಟದಲ್ಲಿ ಓಡುತ್ತಿವೆೆ. ಈ ಬೆಳವಣಿಗೆಗಳಿಗೆ ಇಂಧನ ಮೂಲಗಳು ಬೇಕು. ಕಾರ್ಖಾನೆಗಳು, ವಾಹನಗಳ ಓಡಾಟ, ಇವೆಲ್ಲಕ್ಕೂ ಇಂಧನ ಬೇಕಲ್ಲವೇ?ಅದಕ್ಕಾಗಿ ಪರ್ಯಾಯ ಶಕ್ತಿ ಅಂದರೆ ಬೇರೆ ಇಂಧನ ಮೂಲಗಳ ಬಳಕೆ ಅವಶ್ಯವಿರುತ್ತದೆ. ಅವುಗಳಲ್ಲಿ ನಮಗೆ ಸುಲಭದಲ್ಲಿ ದೊರೆಯುವ ಮೂಲಗಳೆಂದರೆ ಸೌರಶಕ್ತಿ, ಗಾಳಿ ಶಕ್ತಿ, ಜೈವಿಕ ದ್ರವ್ಯ (ಬಯೊಮಾಸ್), ಸಮುದ್ರ ಅಲೆ ಮುಂತಾದವುಗಳು.

ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕದ್ರವ್ಯ ವಿಪುಲವಾಗಿ ಲಭ್ಯವಿರುತ್ತದೆ. ದನಗಳ ಸಗಣಿ, ಮೂತ್ರ, ಸಸ್ಯಭಾಗಗಳು ಟೋಮೇಟೋ, ಬದನೆ, ಆಲೂ ಮುಂತಾದ ತರಕಾರಿಗಳ ವ್ಯರ್ಥ ಪದಾರ್ಥಗಳು. ಈಗ ಸಗಣಿ (ಮಲ) ಅದರಲ್ಲಿಯೂ ದನಗಳ ಸಗಣಿಯನ್ನು ತೆಗೆದುಕೊಳ್ಳೋಣ. ಅದರಿಂದ ವಿದ್ಯುತ್ತನ್ನು ಈ ಕೆಳಗೆ ಕಾಣಿಸಿದ ವಿಧಾನದಿಂದ ಪಡೆಯಬಹುದು.

ಬೇಕಾಗುವ ಸಲಕರಣೆಗಳು :

1.  ಪ್ಲಾಸ್ಟಿಕ್ ಡಬ್ಬಿ

2.  ನಿರುಪಯುಕ್ತ ವಿದ್ಯುತ್ ಕೋಶದಲ್ಲಿರುವ ಕಾರ್ಬನ್  ಮತ್ತು ಸತು (ಜಿಂಕ್)ವಿನ ಗಣಿಕೆಗಳು.

3.  ಒಂದು ವಿದ್ಯುತ್ ಕೋಶ

4.  ವಿದ್ಯುತ್ ಮಾಪಕ – (ಮಿಲಿ ಅಮ್ಮೀಟರ್)

5.  ತಂತಿ

6.  ದನಗಳ ಸಗಣಿ ಮತ್ತು ನೀರು

ವಿಧಾನ : ಆಕೃತಿಯಲ್ಲಿ ತೋರಿಸಿದಂತೆ ಉಪಕರಣಗಳನ್ನು ಜೋಡಿಸಿರಿ. ಸಗಣಿ ಹಾಗೂ ನೀರನ್ನು ಸರಿಯಾಗಿ ಬೆರೆಸಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿರಿ.

ಏನು ನಡೆಯುತ್ತದೆ:

ದನದ ಸಗಣಿಯಲ್ಲಿ ಮೂಲತಃ ಕಾರ್ಬಾನಿಕ್ ಆಮ್ಲ (H2CO3),ಫಾರ್ಮಿಕ್ ಆಮ್ಲ (HCOOH), ಅಸಿಟಿಕ್ ಆಮ್ಲ (CH3COOH),ಹೈಡ್ರೊಕಾರ್ಬನ್ ಮುಂತಾದವುಗಳಿರುತ್ತವೆ. ಸಗಣಿಯ ನೀರಿನೊಂದಿಗೆ ಬೆರೆತಾಗ ಅದರಲ್ಲಿರುವ ಆಮ್ಲಗಳು ಆಯಾನೀಕರಣಗೊಳ್ಳುತ್ತವೆ. ಅಲ್ಲಿ ಉಂಟಾಗುವ ಹೈಡ್ರೊಜನ್ ಆಯಾನುಗಳು (H+) ಕಾರ್ಬನ್ ಗಣಿಕೆಯ ಸುತ್ತಲೂ ಒಟ್ಟುಗೂಡುತ್ತವೆ. ಅವು ಇಲೆಕ್ಟ್ರಾನುಗಳನ್ನು ಆಕರ್ಷಿಸುತ್ತವೆ. ಆದ್ದರಿಂದ ಇಲೆಕ್ಟ್ರಾನುಗಳು ಕಾರ್ಬನ್ ಗಣಿಕೆಯ ಕಡೆಗೆ ಚಲಿಸುತ್ತವೆ. ಅಲ್ಲಿಂದ ತಂತಿಯ ಮೂಲಕ ಚಲಿಸುತ್ತವೆ. ಈ ಇಲೆಕ್ಟ್ರಾನುಗಳು ಹೈಡ್ರೊಜನ್ ಅಯಾನುಗಳೊಂದಿಗೆ ಕೂಡಿ ಹೈಡ್ರೊಜನ್ ಅನ್ನು ಉಂಟು ಮಾಡುತ್ತವೆ. ಹೀಗೆ ಒಂದು ರಾಸಾಯನಿಕ ಕ್ರಿಯೆ ಪೂರ್ತಿಗೊಳ್ಳುತ್ತದೆ.

ಇಲೆಕ್ಟ್ರಾನುಗಳ ಪ್ರವಾಹವೆಂದರೆ, ವಿದ್ಯುತ್ ಪ್ರವಾಹ. ಇಲ್ಲಿ ಉಂಟಾಗುವ ವಿದ್ಯುತ್ ಪ್ರವಾಹ ನೇರ, ಅಂದರೆ ಡಿ.ಸಿ.ಯಾಗಿರುತ್ತದೆ. ಕಾರ್ಬನ್ ಗಣಿಕೆ ಧನಾಗ್ರದಂತೆ ಹಾಗೂ ಸತು ಗಣಿಕೆ ಋಣಾಗ್ರದಂತೆ ವರ್ತಿಸುತ್ತವೆ. ಇಲ್ಲಿಯ ಪ್ರತಿ ಕೋಶ 0.34 mA (ಮಿಲಿಆಂಪಿಯರ್)ವಿದ್ಯುತ್ ಹಾಗೂ 0.8ರಿಂದ 0.95ವೋಲ್ಟ್ ವರೆಗೆ ವಿಭವಾಂತರವನ್ನುಂಟು ಮಾಡುತ್ತದೆ. ಶ್ರೇಣಿ ಜೋಡಣೆಯ ಸಹಾಯದಿಂದ ವಿಭವಾಂತರವನ್ನು ಹೆಚ್ಚಿಸುತ್ತ ಹೋಗಬಹುದು.

ಇದೇ ರೀತಿ ದನದ ಮೂತ್ರ, ಕಿತ್ತಿಳೆ, ಬಾಳೆಹಣ್ಣುಗಳ ಸಿಪ್ಪೆ, ಟೋಮೆಟೋ, ಬದನೆ, ಆಲೂಗಳ ವರ್ಜಿತ ಭಾಗಗಳ ಹೂರಣ (ಪೇಸ್ಟ್) ತಯಾರಿಸಿ ವಿದ್ಯುತ್ಪ್ರವಾಹ ಉಂಟುಮಾಡಲು ಸಾಧ್ಯ.  ನೀವು ಪ್ರಯತ್ನಿಸಿ ಪ್ರಯೋಗದ ಮೂಲಕ ಇದನ್ನು ಮನಗಾಣಿರಿ.

ಈ ಕೋಶಗಳ ಶ್ರೇಣಿ ರೂಪದ ಉಪಯೋಗದಿಂದ ಗಡಿಯಾರ, ಕ್ಯಾಲ್ಕುಲೇಟರ್, ಎಲ್.ಇ.ಡಿ. ಮುಂತಾದ ಇಲೆಕ್ಟ್ರಾನಿಕ್ ಪರಿಕರಗಳನ್ನು ಚಲಾಯಿಸಲು ಸಾಧ್ಯ. ಈ ವಿದ್ಯುತ್ ಪರಿಸರ ಮಾಲಿನ್ಯ ರಹಿತವಿದ್ದು, ಸುಲಭದಲ್ಲಿ ಕಡಿಮೆ ಬೆಲೆಗೆ ಅದು ದೊರೆಯುವ ಕಚ್ಚಾವಸ್ತುವಿನಿಂದ ಪಡೆಯಬಹುದು.

 

ಸಸ್ಯದಿಂದ ಜೈವಿಕ ಇಂಧನ

ಸತ್ತ ಸಸ್ಯಗಳು ಕೊಳೆತಾಗ ಮೀಥೇನ್ ಅನಿಲ ಬಿಡುಗಡೆಯಾಗುತ್ತದೆ. ಇದನ್ನು ಜೈವಿಕ ಇಂಧನ (ಬಯೊಫ್ಯುಯಲ್) ಆಗಿ ಬಳಸಬಹುದು. ಚಿತ್ರದಲ್ಲಿ ಎಲೆಗಳು ಹಾಗೂ ಸಸ್ಯದ ಇತರ ವರ್ಜಿತ ಭಾಗಗಳನ್ನು ಕೊಳೆಯಿಸಿ ಪಡೆಯಬಹುದಾದ ಮೀಥೇನ್ ಇಂಧನ ತಯಾರಿಕೆಯನ್ನು ತೋರಿಸಲಾಗಿದೆ.