ಸಚಿನ್ ರಮೇಶ್ ತೆಂಡುಲ್ಕರ್(ಜನನ: ಏಪ್ರಿಲ್ ೨೪, ೧೯೭೩) ಕ್ರಿಕೆಟ್ ಇತಿಹಾಸದಲ್ಲಿ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗುತ್ತಿರುವ ಭಾರತದ ಕ್ರಿಕೆಟಿಗ. ಅವರು ಟೆಸ್ಟ್ (೧೨೯೧೭) ಹಾಗೂ ಏಕದಿನ ಮಾದರಿ (೧೭,೧೭೮) ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಹಾಗೂ ಗರಿಷ್ಠ ಶತಕ ಗಳಿಕೆಯ ವಿಶ್ವದಾಖಲೆ ಹೊಂದಿದ್ದಾರೆ. ಸಚಿನ್, ಡಾನ್ ಬ್ರಾಡ್ಮನ್ ನಂತರದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ವಿಸ್ಡನ್ ೨೦೦೨ರಲ್ಲಿ ಹೆಸರಿಸಿತ್ತು. ಅದೇ ರೀತಿ ವಿವ್ ರಿಚರ್ಡ್ಸ್ ನಂತರದ ಸರ್ವ ಶ್ರೇಷ್ಠ ಏಕದಿನ ಮಾದರಿ ಬ್ಯಾಟ್ಸ್‌ಮನ್ ಎಂದು ಅದು ಗುರುತಿಸಿತ್ತು. ತೆಂಡುಲ್ಕರ್ ತಾವು ಜೊತೆಯಲ್ಲಿ ಅಥವಾ ವಿರುದ್ಧ ಆಡಿದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ೨೦೦೭ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿಸಿದ್ದರು. ಬ್ರಾಡ್ಮನ್ ಖುದ್ದು ಆಯ್ಕೆ ಮಾಡಿದ್ದ ಸಾರ್ವಕಾಲಿಕ ಶ್ರೇಷ್ಠ ಇಲೆವೆನ್‌ನಲ್ಲಿ ಸ್ಥಾನ ಪಡೆದ ಏಕೈಕ ಸಮಕಾಲೀನ ಪೀಳಿಗೆಯ ಕ್ರಿಕೆಟಿಗರ ತೆಂಡುಲ್ಕರ್. ಅವರನ್ನು ಲಿಟ್ಲ್ ಮಾಸ್ಟರ್, ಮಾಸ್ಟರ್ ಬ್ಲಾಸ್ಟರ್ ಎಂದೂ ಗುರುತಿಸಲಾಗುತ್ತದೆ.

ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಉಭಯ ಮಾದರಿಗಳಲ್ಲಿ ಅತ್ಯಧಿಕ ಶತಕಗಳ ದಾಖಲೆಯೂ ಅವರ ಹೆಸರಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೫೦ ಶತಕ (ಉಭಯ ಮಾದರಿ ಸೇರಿ) ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ತೆಂಡುಲ್ಕರ್. ಸದ್ಯ ಅವರು ೮೮ (೪೩ ಟೆಸ್ಟ್, ೪೫ ಏಕದಿನ) ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ.

೨೦೦೯, ನವೆಂಬರ್ ೨೦ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೩೦,೦೦೦ ರನ್ ಗಡಿ ದಾಟಿದರು.

೨೦೦೮ ಅಕ್ಟೋಬರ್ ೧೮ರಂದು ಬ್ರಿಯಾನ್ ಲಾರಾ ಹೆಸರಲ್ಲಿದ್ದ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳಿಕೆಯ ದಾಖಲೆಯನ್ನು ತೆಂಡುಲ್ಕರ್ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಆ ಮಾದರಿಯಲ್ಲಿ ೧೨ ಸಾವಿರ ರನ್ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಸಹ ಅವರಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ೧೧ ಸಾವಿರ ರನ್ ಗಡಿ ದಾಟಿದ ಮೊದಲ ಭಾರತೀಯ ಹಾಗೂ ಏಕದಿನ ಮಾದರಿಯಲ್ಲಿ ೧೦ ಸಾವಿರ ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆಯೂ ಅವರ ಹೆಸರಲ್ಲಿದೆ. ಏಕದಿನ ಕ್ರಿಕೆಟ್‌ನಲ್ಲಿ ೧೦,೦೦೦ದ ಬಳಿಕ ಮುಂದಿನ ಎಲ್ಲಾ ಸಾವಿರ ರನ್‌ಗಳ ಗಡಿಯನ್ನೂ ಮೊದಲು ದಾಟಿದವರು ಸಚಿನ್. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗಳಲ್ಲಿ ೧೦ ಶತಕ ಬಾರಿಸಿದ ೨ನೇ ಆಟಗಾರ ಎಂಬ ಹಿರಿಮೆ ಸಚಿನ್‌ಗೆ ಸೇರಿದೆ. ಇದಕ್ಕೆ ಮುನ್ನ ಇಂಗ್ಲೆಂಡ್‌ನ ಸರ್ ಜಾಕ್ ಹಾಬ್ಸ್ ೭೦ ವರ್ಷ ಕೆಳಗೆ ಈ ಸಾಧನೆ ಮಾಡಿದ್ದರು.

ಬಾಲ್ಯ ಹಾಗೂ ವೈಯಕ್ತಿಕ ಬದುಕು:
ತೆಂಡುಲ್ಕರ್ ಬಾಂಬೆಯಲ್ಲಿ (ಈಗ ಮುಂಬೈ) ಜನಿಸಿದರು. ಅವರ ತಂದೆ ರಮೇಶ್ ತೆಂಡುಲ್ಕರ್ ಮರಾಠಿ ಕಾದಂಬರಿಕಾರ. ಮಗನಿಗೆ ಅವರು ಪ್ರಖ್ಯಾತ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ಹೆಸರಿಟ್ಟಿದ್ದರು. ಸಚಿನ್‌ಗೆ ಹಿರಿಯ ಅಣ್ಣ ಅಜಿತ್ ಕ್ರಿಕೆಟ್ ಆಡುವಂತೆ ಉತ್ತೇಜಿಸಿದರು. ಸಚಿನ್‌ಗೆ ನಿತಿನ್ ಎಂಬ ಇನ್ನೊಬ್ಬ ಸೋದರ ಹಾಗೂ ಸಾವಿತ್ರಿ ಎಂಬ ಸೋದರಿ ಇದ್ದಾರೆ.

ತೆಂಡುಲ್ಕರ್ ಶಾರದಾಶ್ರಮ ವಿದ್ಯಾಮಂದಿರ ಹೈಸ್ಕೂಲ್‌ನಲ್ಲಿದ್ದಾಗ ಕೋಚ್ ಹಾಗೂ ಮಾರ್ಗದರ್ಶಕ ರಮಾಕಾಂತ್ ಅಚ್ರೇಕರ್ ಗರಡಿಯಲ್ಲಿ ಪಳಗಿದರು. ಶಾಲಾ ದಿನಗಳಲ್ಲಿ ಅವರು ವೇಗದ ಬೌಲರ್ ಆಗುವ ಕನಸು ಹೊತ್ತು ಚೆನ್ನೈನ ಎಂಆರ್‌ಎಫ್ ವೇಗದ ಪ್ರತಿಷ್ಠಾನಕ್ಕೆ ತೆರಳಿದ್ದರು. ಆದರೆ, ಅವರ ಬೌಲಿಂಗ್ ಆ ಸಂದರ್ಭದಲ್ಲಿ ೩೫೫ ಟೆಸ್ಟ್ ವಿಕೆಟ್‌ಗಳ ವಿಶ್ವದಾಖಲೆ ಹೊಂದಿದ್ದ ಆಸ್ಟ್ರೇಲಿಯಾದ ವೇಗಿ ಡೆನಿಸ್ ಲಿಲ್ಲಿ ಅವರ ಗಮನ ಸೆಳೆಯಲಿಲ್ಲ. ಹಾಗಾಗಿ, ಅವರು ಬ್ಯಾಟಿಂಗ್ ಮೇಲೆ ಗಮನ ಹರಿಸುವಂತೆ ತೆಂಡುಲ್ಕರ್ ಗೆ ಸಲಹೆ ನೀಡಿದರು.

ಸಚಿನ್, ಅಚ್ರೇಕರ್ ಗರಡಿಯಲ್ಲಿ ಗಂಟೆಗಟ್ಟಲೆ ನೆಟ್ ಅಭ್ಯಾಸ ನಡೆಸುತ್ತಿದ್ದರು. ಅವರು ಬಳಲಿದ ಮೇಲೆ ಅಚ್ರೇಕರ್ ಸ್ಟಂಪ್‌ನ ಮೇಲೆ ಒಂದು ರುಪಾಯಿಯ ನಾಣ್ಯ ಇರಿಸುತ್ತಿದ್ದರು. ತೆಂಡುಲ್ಕರ್‌ರನ್ನು ಔಟ್ ಮಾಡಿದ ಬೌಲರ್‌ಗೆ ಆ ನಾಣ್ಯ ಸಿಗುತ್ತಿತ್ತು. ಒಂದು ವೇಳೆ ತೆಂಡುಲ್ಕರ್ ಔಟಾಗದೇ ಉಳಿದರೆ, ಆ ದುಡ್ಡು ಅವರಿಗೇ ಸಿಗುತ್ತಿತ್ತು. ತೆಂಡುಲ್ಕರ್ ಆ ರೀತಿ ಗೆದ್ದುಕೊಂಡ ೧೩ ನಾಣ್ಯಗಳನ್ನು ಈಗಲೂ ಕಾಪಾಡಿಕೊಂಡಿದ್ದಾರೆ.

ಶಾಲಾ ದಿನಗಳಲ್ಲಿಯೇ ಸಚಿನ್ ಬಾಲಪ್ರತಿಭೆ ಎಂದು ಮುಂಬೈನ ಕ್ರಿಕೆಟ್ ವಲಯದಲ್ಲಿ ಜನಪ್ರಿಯರಾಗಿದ್ದರು. ೧೯೮೮ರಲ್ಲಂತೂ ಅವರು ಆಡಿದ ಪ್ರತೀ ಇನಿಂಗ್ಸ್‌ನಲ್ಲೂ ಶತಕ ಬಾರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಲಾರ್ಡ್ ಹ್ಯಾರಿಸ್ ಶೀಲ್ಡ್ ಅಂತರಶಾಲಾ ಪಂದ್ಯದಲ್ಲಿ ವಿನೋದ್ ಕಾಂಬ್ಳಿ ಜೊತೆ ೬೬೪ ರನ್ ಜೊತೆಯಾಟವಾಡಿದ್ದು ಅವರನ್ನು ಜಗದ್ವಿಖ್ಯಾತರಾಗಿಸಿತು. ತೆಂಡುಲ್ಕರ್ ಆ ಪಂದ್ಯದಲ್ಲಿ ೩೨೬* ರನ್ ಗಳಿಸಿದರು.

ತೆಂಡುಲ್ಕರ್ ೧೯೯೫ರಲ್ಲಿ ಮಕ್ಕಳ ವೈದ್ಯೆ ಹಾಗೂ ಗುಜರಾತಿ ಕೈಗಾರಿಕೋದ್ಯಮಿ ಆನಂದ್ ಮೆಹ್ತಾ ಅವರ ಮಗಳು ಅಂಜಲಿಯನ್ನು ವಿವಾಹವಾದರು. ತೆಂಡುಲ್ಕರ್ ದಂಪತಿಗೆ ಸಾರಾ (ಜನನ ೧೯೯೭) ಮತ್ತು ಅರ್ಜುನ್ (೧೯೯೯) ಎಂಬ ಮಕ್ಕಳಿದ್ದಾರೆ.

ತೆಂಡುಲ್ಕರ್ ಮುಂಬೈನ ಅಪ್ನಾಲಯ ಸಂಸ್ಥೆಯ ೨೦೦ ಅನಾಥ ಮಕ್ಕಳನ್ನು ಪ್ರತೀ ವರ್ಷ ಪ್ರಾಯೋಜಿಸುತ್ತಾರೆ.

ಪ್ರಥಮ ದರ್ಜೆ ಕ್ರಿಕೆಟ್:
ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯ ಪದಾರ್ಪಣೆ ಪಂದ್ಯಗಳಲ್ಲಿ ಶತಕ ಬಾರಿಸಿರುವ ಏಕೈಕ ಆಟಗಾರ ಸಚಿನ್. ನೆಟ್ಸ್‌ನಲ್ಲಿ ಅವರು ಕಪಿಲ್ ದೇವ್ ವಿರುದ್ಧ ಲೀಲಾಜಾಲವಾಗಿ ಆಡುವುದನ್ನು ಕಂಡು ಮುಂಬೈ ನಾಯಕ ದಿಲಿಪ್ ವೆಂಗ್ಸರ್ಕಾರ್, ಸಚಿನ್‌ರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಭಾರತೀಯ (೧೫ ವರ್ಷ, ೨೩೨ ದಿನ) ಆಟಗಾರ. ಒಂದೇ ದೇಶಿ ಋತುವಿನ ಬಳಿಕ ತೆಂಡುಲ್ಕರ್ ೧೯೮೯ರಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾದರು.

೧೯೯೨ರಲ್ಲಿ ಸಚಿನ್ ಇಂಗ್ಲೆಂಡ್‌ನ ಯಾರ್ಕ್‌ಷೈರ್ ಕೌಂಟಿ ಪ್ರತಿನಿಧಿಸಿದರು. ಅವರು ಈ ಕೌಂಟಿ ಪರ ಆಡಿದ ಪ್ರಪ್ರಥಮ ವಿದೇಶದಲ್ಲಿ ಜನಿಸಿದ ಆಟಗಾರ.
ವೃತ್ತಿಜೀವನ:

ತೆಂಡುಲ್ಕರ್ ೧೯೮೯ರಲ್ಲಿ ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ಚೊಚ್ಚಲ ಟೆಸ್ಟ್ ಆಡಿದರು. ೧೬ ವರ್ಷದ ಅವರು ಆ ಪಂದ್ಯದಲ್ಲಿ ೧೫ ರನ್ ಮಾಡಿದರು. ಸಿಯಾಲ್‌ಕೋಟ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಬೌನ್ಸರ್ ಒಂದು ಅವರ ಮೂಗಿಗೆ ಅಪ್ಪಳಿಸಿತು. ರಕ್ತ ಸುರಿಯಲಾರಂಭಿಸಿತು. ಆದರೂ, ವೈದ್ಯಕೀಯ ನೆರವು ನಿರಾಕರಿಸಿದ ತೆಂಡುಲ್ಕರ್ ಬ್ಯಾಟಿಂಗ್ ಮುಂದುವರಿಸಿದರು. ಇದಾದ ಬಳಿಕ ಪೇಷಾವರದಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ತೆಂಡುಲ್ಕರ್ ೧೮ ಎಸೆತಗಳಲ್ಲಿ ೫೩ ರನ್ ಬಾರಿಸಿದರು. ಈ ಹಾದಿಯಲ್ಲಿ ಅವರು ಅಬ್ದುಲ್ ಖಾದರ್ ಅವರ ಒಂದೇ ಓವರ್‌ನಲ್ಲಿ ೨೮ ರನ್ ಚಚ್ಚಿದ್ದರು. ಅವರು ಚೊಚ್ಚಲ ಏಕದಿನ ಪಂದ್ಯದಲ್ಲಿ ರನ್ ಗಳಿಸಲಿಲ್ಲ. ಸಚಿನ್ ಚೊಚ್ಚಲ ಟೆಸ್ಟ್ ಶತಕವನ್ನು ೧೯೯೦ರಲ್ಲಿ ಇಂಗ್ಲೆಂಡ್‌ನಲ್ಲಿ ಗಳಿಸಿದರು. ಆದರೆ, ಏಕದಿನ ಶತಕಕ್ಕಾಗಿ ಅವರು ೭೯ ಪಂದ್ಯ ಆಡಬೇಕಾಯಿತು. ಕೊನೆಗೂ ಆಸ್ಟ್ರೇಲಿಯಾ ವಿರುದ್ಧ ಕೊಲಂಬೋದಲ್ಲಿ ೧೯೯೪ರಲ್ಲಿ ಅವರು ಶತಕದ ಖಾತೆ ತೆರೆದರು.

೧೯೯೨ರ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಸಿಡ್ನಿಯಲ್ಲಿ ಅಜೇಯ ೧೪೮ ರನ್ ಬಾರಿಸಿದ್ದ ಸಚಿನ್, ಪರ್ತ್‌ನ ಪುಟಿಯುವ ವೇಗದ ಪಿಚ್‌ನಲ್ಲಿ ಹೋರಾಟದ ಶತಕ ಬಾರಿಸಿದ್ದರು. ಈ ಕುಳ್ಳ ನಿನಗಿಂತ ಹೆಚ್ಚು ರನ್ ಗಳಿಸುತ್ತಾನೆ ಎಂದು ಆ ಸಂದರ್ಭದಲ್ಲಿ ಮೆರ್ವ್ ಹ್ಯೂಸ್, ಆಲನ್ ಬಾರ್ಡರ್‌ಗೆ ಹೇಳಿದ್ದರು.

ತೆಂಡುಲ್ಕರ್‌ರ ಒಂದೊಂದು ಇನಿಂಗ್ಸ್ ಹಿಂದೆಯೂ ಒಂದೊಂದು ರೋಚಕ ಕಥೆಯಿದೆ. ಆದರೂ, ಆಸ್ಟ್ರೇಲಿಯಾ ವಿರುದ್ಧದ ಅವರ ಕೆಲವು ಯಶಸ್ಸುಗಳು ಐತಿಹಾಸಿಕ. ೧೯೯೮ರಲ್ಲಿ ಆಸೀಸ್, ಭಾರತ ಪ್ರವಾಸಕ್ಕೆ ಆಗಮಿಸಿದ್ದಾಗ ಟೆಸ್ಟ್ ಸರಣಿಯಲ್ಲಿ ಸತತ ೩ ಶತಕ ಬಾರಿಸಿದ್ದ ಸಚಿನ್, ತದನಂತರ ಶಾರ್ಜಾದಲ್ಲಿ ಸತತ ೨ ಶತಕ ಬಾರಿಸಿ ಭಾರತದ ಪ್ರಶಸ್ತಿ ಗೆಲುವಿಗೆ ಕಾರಣರಾಗಿದ್ದರು. ಆ ಸಂದರ್ಭದಲ್ಲಿ ಶೇನ್ ವಾರ್ನ್ ತಮಗೆ ನಿದ್ರೆಯಲ್ಲೂ ಸಚಿನ್ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.

೨೦೦೭-೦೮ರ ಆಸ್ಟ್ರೇಲಿಯಾ ಪ್ರವಾಸದಲ್ಲೂ ಸಿಡ್ನಿಯಲ್ಲಿ ಅಜೇಯ ೧೫೪, ಅಡಿಲೇಡ್‌ನಲ್ಲಿ ೧೫೩, ಹಾಗೂ ಭಾರತ ಗೆಲುವು ಸಾಧಿಸಿದ ಪರ್ತ್ ಟೆಸ್ಟ್‌ನಲ್ಲಿ ೭೧ ರನ್ ಬಾರಿಸಿದ್ದರು. ಇದಾದ ಬಳಿಕ ನಡೆದ ಕಾಮನ್ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಿತು. ಸಚಿನ್ ಮೊದಲ ಎರಡು ಫೈನಲ್‌ಗಳಲ್ಲಿ ಅಜೇಯ ೧೧೭ ಮತ್ತು ೯೧ ರನ್ ಗಳಿಸಿ ಭಾರತದ ಗೆಲುವಿನ ರೂವಾರಿಯಾದರು.

೨೦೦೯ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಹೈದರಾಬಾದ್ ಪಂದ್ಯದಲ್ಲಿ ೧೭೫ ರನ್ ಬಾರಿಸಿದರು. ಆ ಪಂದ್ಯದಲ್ಲಿ ೩೫೧ ರನ್ ಗುರಿ ಬೆನ್ನಟ್ಟಿದ್ದ ಭಾರತ ೩೪೭ ರನ್ ಗಳಿಸಿ ಕೇವಲ ೩ ರನ್‌ಗಳಿಂದ ಸೋತಿತು. ಇದೇ ಪಂದ್ಯದ ಸಂದರ್ಭದಲ್ಲಿ ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ ೧೭,೦೦೦ ರನ್ ಗಡಿ ದಾಟಿದರು.

ವಿಶ್ವಕಪ್‌ಗಳಲ್ಲಿ:
೧೯೯೬ ಮತ್ತು ೨೦೦೩ರ ವಿಶ್ವಕಪ್‌ಗಳಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ. ೧೯೯೯ರ ವಿಶ್ವಕಪ್ ಸಂದರ್ಭದಲ್ಲಿ ತೆಂಡುಲ್ಕರ್ ತಂದೆ ನಿಧನರಾದರು. ಟೂರ್ನಿ ಅರ್ಧದಲ್ಲೇ ತೊರೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಅವರು ನಂತರ ಮರಳಿ ಬಂದು ಕೀನ್ಯಾ ವಿರುದ್ಧ ಶತಕ ಬಾರಿಸಿದರು. ೨೦೦೭ರ ವಿಶ್ವಕಪ್‌ನಲ್ಲಿ ಸಚಿನ್‌ಗೆ ಇಷ್ಟವಿಲ್ಲದಿದ್ದರೂ, ಕೆಳಕ್ರಮಾಂಕದಲ್ಲಿ ಆಡುವಂತೆ ಕೋಚ್ ಗ್ರೆಗ್ ಚಾಪೆಲ್ ಬಲವಂತ ಮಾಡಿದ್ದರು. ಕೊನೆಗೂ ಮೊದಲ ಸುತ್ತಿನಲ್ಲೇ ಭಾರತ ನಿರ್ಗಮಿಸಿತು.

ನಾಯಕತ್ವ:
ತೆಂಡುಲ್ಕರ್ ಎರಡು ಬಾರಿ ಭಾರತದ ನಾಯಕರಾಗಿದ್ದರೂ, ಯಶಸ್ಸು ಅವರಿಗೆ ಒಲಿಯಲಿಲ್ಲ. ಅವನು ಗೆಲ್ಲುವುದಿಲ್ಲ. ಆ ವಾಮನನ ಹಣೆಯಲ್ಲಿ ಗೆಲುವು ಬರೆದಿಲ್ಲ ಎಂದು ಮೊಹ್ಮದ್ ಅಜರುದ್ದೀನ್ ಒಮ್ಮೆ ತೆಂಡುಲ್ಕರ್ ನಾಯಕತ್ವವನ್ನು ಟೀಕಿಸಿದ್ದರು.

ವಿವಾದಗಳು:
೨೦೦೧ರ ದಕ್ಷಿಣ ಆಫ್ರಿಕಾ ಪ್ರವಾಸದ ೨ನೇ ಟೆಸ್ಟ್‌ನಲ್ಲಿ ಮ್ಯಾಚ್ ರೆಫ್ರಿ ಮೈಕ್ ಡೆನಿಸ್ ತೆಂಡುಲ್ಕರ್ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಹೊರಿಸಿ ಒಂದು ಟೆಸ್ಟ್ ನಿಷೇಧ ವಿಧಿಸಿದರು. ಈ ವಿವಾದ ವರ್ಣಭೇದದ ಸ್ವರೂಪ ಪಡೆದುಕೊಂಡಿತ್ತು. ಕೊನೆಗೂ ಪ್ರಕರಣದ ಕೂಲಂಕಶ ತನಿಖೆ ನಡೆಸಿದ ಐಸಿಸಿ ಆ ಟೆಸ್ಟ್‌ನ ಅಧಿಕೃತ ಮಾನ್ಯತೆಯನ್ನು ಹಿಂತೆಗೆದುಕೊಂಡಿತು ಮತ್ತು ತೆಂಡುಲ್ಕರ್ ಶಿಕ್ಷೆ ರದ್ದು ಪಡಿಸಿತು. ೩ನೇ ಟೆಸ್ಟ್ ಸಂದರ್ಭದಲ್ಲಿ ಡೆನಿಸ್‌ಗೆ ಕ್ರೀಡಾಂಗಣಕ್ಕೆ ಪ್ರವೇಶ ನಿಷೇಧಿಸಲಾಗಿತ್ತು.

ಡಾನ್ ಬ್ರಾಡ್ಮನ್‌ರ ೨೯ ಶತಕ ಸರಿಗಟ್ಟಿದ ಸಂದರ್ಭದಲ್ಲಿ ಫೆರಾರಿ ಸಂಸ್ಥೆ ಸಚಿನ್‌ಗೆ ಕಾರು ಕೊಡುಗೆ ನೀಡಿತ್ತು. ಇದನ್ನು ಭಾರತಕ್ಕೆ ತರುವ ಸಂದರ್ಭದಲ್ಲಿ ಆಗಿನ ಕೇಂದ್ರ ವಿತ್ತ ಸಚಿವ ಜಸ್ವಂತ್ ಸಿಂಗ್ ಆಮದು ಸುಂಕ ಮನ್ನಾ ಮಾಡಲು ಮುಂದಾದರು. ಆದರೆ, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಅಂತಿಮವಾಗಿ ಫೆರಾರಿ ಸಂಸ್ಥೆ ಸುಂಕ ಭರಿಸಿತು.

೨೦೦೭ರ ವಿಶ್ವಕಪ್‌ಗೆ ಮುನ್ನ ಆಗಿನ ಕೋಚ್ ಗ್ರೆಗ್ ಚಾಪೆಲ್ ಸಚಿನ್ ಮನೋಭಾವವನ್ನು ಟೀಕಿಸಿದರು. ಸಚಿನ್ ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡಲು ನಿರಾಕರಿಸಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಮನೋಭಾವವನ್ನು ಇದುವರೆಗೆ ಯಾವ ಕೋಚ್‌ಗಳೂ ಟೀಕಿಸಿರಲಿಲ್ಲ ಎಂದು ಸಚಿನ್ ಸಹ ಪ್ರತಿಯಾಗಿ ತಿರುಗೇಟು ನೀಡಿದ್ದರು.

೨೦೦೩-೦೪ರ ಪಾಕ್ ಪ್ರವಾಸದ ಸಂದರ್ಭದಲ್ಲಿ ಮುಲ್ತಾನ್ ಟೆಸ್ಟ್‌ನಲ್ಲಿ ತೆಂಡುಲ್ಕರ್ ೧೯೪ ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಹಂಗಾಮಿ ನಾಯಕ ರಾಹುಲ್ ದ್ರಾವಿಡ್ ಇನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು. ದ್ವಿಶತಕ ವಂಚಿತನಾಗಿದ್ದರಿಂದ ನಿರಾಸೆಯಾಗಿದೆ ಎಂದು ಸಚಿನ್ ಆ ಸಂದರ್ಭದಲ್ಲಿ ಹೇಳಿದ್ದರು.

೨೦೦೬ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ೨೧ ಎಸೆತಗಳಲ್ಲಿ ೧ ರನ್ ಗಳಿಸಿ ಔಟಾದ ಬಳಿಕ ತವರು ವಾಂಖೆಡೆ ಕ್ರೀಡಾಂಗಣದ ಪ್ರೇಕ್ಷಕರು ಮೂದಲಿಸಿದ್ದರು.

ಗಾಯಗಳು:
ತೆಂಡುಲ್ಕರ್ ರ ಸುದೀರ್ಘ ವೃತ್ತಿಜೀವನದ ನಾನಾ ಘಟ್ಟಗಳಲ್ಲಿ ಗಾಯಗಳೂ ಬಾಧಿಸಿವೆ. ಅವರ ದೇಹದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗದ ಭಾಗಗಳೇ ಇಲ್ಲ ಎನ್ನಬಹುದು. ಇವುಗಳ ಪೈಕಿ ಭುಜ ಹಾಗೂ ಟೆನಿಸ್ ಎಲ್ಬೋ ಗಾಯಗಳು ಅವರು ದೀರ್ಘ ಕಾಲ ವಿಶ್ರಾಂತಿ ಮೊರೆ ಹೋಗುವಂತೆ ಮಾಡಿದ್ದವು.

ಪ್ರಶಸ್ತಿಗಳು:
೨೦೦೮: ಪದ್ಮ ವಿಭೂಷಣ
೨೦೦೫ ರಾಜೀವ್ ಗಾಂಧಿ ಪ್ರಶಸ್ತಿ
೧೯೯೯ ಪದ್ಮಶ್ರೀ
೧೯೯೭-೯೮: ರಾಜೀವ್‌ಗಾಂಧೀ ಖೇಲ್‌ರತ್ನ
೧೯೯೪: ಅರ್ಜುನ

ಐಪಿ‌ಎಲ್: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐಕನ್ ಆಟಗಾರನಾಗಿರುವ ಸಚಿನ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ.

ಇತರೆ: ಮುಂಬೈನ ಕೊಲಾಬದಲ್ಲಿ ತೆಂಡುಲ್ಕರ‍್ಸ್, ಮುಲುಂದ್‌ನಲ್ಲಿ ಸಚಿನ್ಸ್ ಹಾಗೂ ಬೆಂಗಳೂರಿನಲ್ಲಿ ಸಚಿನ್ಸ್ ಹೋಟೆಲ್ ನಡೆಸುತ್ತಿದ್ದಾರೆ.