‘ಡಪ್ಪಿನಾಟ’ ಅಥವಾ ಸಣ್ಣಾಟ ಎಂದು ಕರೆಯಲ್ಪಟ್ಟಿರುವ ಈ ರಂಗ ಪ್ರಕಾರ ೧೮೬೦ಕ್ಕಿಂತಲೂ ಮೊದಲೇ ಅಸ್ತಿತ್ವ ಪಡೆದುಕೊಂಡಿತ್ತು. ‘ಸಣ್ಣಾಟ’ ಅಥವಾ ಡಪ್ಪಿನಾಟವೆಂಬ ಈ ರಂಗಪ್ರಕಾರ ಹುಟ್ಟಿಕೊಳ್ಳಲು ಅನೇಕ ಪ್ರೇರಣೆ ಪ್ರಭಾವಗಳು ಕಾರಣಗಳಾಗಿವೆ. ಅದರಲ್ಲಿ ಪ್ರಮುಖವಾಗಿ ಶೈವ ಪಂಥ, ವೈಷ್ಣವ ಪಂಥ, ಶಕ್ತಿ ಪಂಥ, ಬಹುರೂಪಿಗಳು, ಲಾವಣಿ, ಹರದೇಶಿ-ನಾಗೇಶಿ, ಸವಾಲ್-ಜವಾಬ್ ಕಾರಣಗಳಾಗಿವೆ. ‘ತಮಿಳುನಾಡಿನಲ್ಲಿ ಭಕ್ತಿ ಚಳುವಳಿಯನ್ನು ಆರಂಭಿಸಿದ ೬೩ ಜನ ಪುರಾತನರ ಪ್ರಭಾವದಿಂದ ಕರ್ನಾಟಕದಲ್ಲಿ ೧೨ನೆಯ ಶತಮಾನದ ಶಿವಶರಣರು ಭಕ್ತಿ ಚಳುವಳಿಯನ್ನು ಮುಂದುವರೆಸಿದರು. ರಾಜ-ಮಹಾರಾಜರ ಪರಿಪೋಷಣೆಯಲ್ಲಿ ಬದುಕು ಸಾಗಿಸುತ್ತಿದ್ದ ಜನ ಸಮುದಾಯ ಬೇಸತ್ತು ರೋಸಿ ಹೋಗಿತ್ತು. ಈ ಸಂದರ್ಭದಲ್ಲಿ ಶಿವಶರಣರು ಜನರಿಗೆ ಸಮಾಜ ಸುಧಾರಣೆ, ಮೋಕ್ಷದ ಪರಿಕಲ್ಪನೆ, ಕಾಯಕದ ಮಹತ್ವ, ಏಕದೇವೋಪಾಸನೆ, ಜಾತಿ, ಬೇಧ, ನೀತಿ, ಪ್ರಭುತ್ವದ ನಿರಾಕರಣೆ ಮುಂತಾದವುಗಳನ್ನು ತಮ್ಮ ವಚನಗಳ ಮೂಲಕ ಬಿತ್ತಿದರು. ಶಿವಶರಣರ ತತ್ವಗಳಿಂದ ಜನ ಸಾಮಾನ್ಯರು ಕ್ರಿಯಾಶೀಲರಾಗ ತೊಡಗಿದರು. ಶರಣರ ಆಂದೋಲನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿರುವ ಜನಪದ ಕಲಾಪ್ರಕಾರದಲ್ಲಿ ಭಕ್ತಿ ಶಿವಶರಣರ ತತ್ವಗಳನ್ನು ತುಂಬಿ ಮೈಮರೆತು ಹಾಡಿ ಕುಣಿಯತೊಡಗಿದರು.[1] ಶರಣ ತತ್ವಗಳಿಗೆ ಮಾರು ಹೋದ ಬಹುರೂಪಿಗಳು ಶರಣರ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಶಿವನ, ಶರಣೆ ಮಹಿಮೆಗಳನ್ನು ತಮ್ಮ ಆಟಗಳಲ್ಲಿ ರೂಪಿಸಿಕೊಂಡು ಜನರಲ್ಲಿ ಭಕ್ತಿ-ಮುಕ್ತಿ ತತ್ವ ಬಿತ್ತರಿಸತೊಡಗಿದರು.

೧೨ನೆಯ ಶತಮಾನದಿಂದ ೧೬ನೆಯ ಶತಮಾನದವರೆಗೆ ದಾಸರು ಭಕ್ತಿ ಪಂಥವನ್ನು ಮುಂದುವರೆಸಿದರು. ಹರಿದಾಸರು ತಮ್ಮ ತತ್ವ, ಆಚಾರ ವಿಚಾರಗಳನ್ನು ಜನತೆಯ ಮನೆಯ ಬಾಗಿಲಿಗೆ ಹಾಡಿನ ಮೂಲಕ ಕೊಂಡೊಯ್ದರು. ಜನರಲ್ಲಿ ಭಕ್ತಿಯ ಹೊನಲು ಬಿತ್ತಿದರು. ಮುಂದೆ ಹರಿದಾಸರ ಪ್ರಭಾವದಿಂದ ದೇವರ ನಾಮಸ್ಮರಣೆಯನ್ನು ಬಿತ್ತಲು ಕೀರ್ತನವೆಂಬ ರಂಗಪ್ರಕಾರ ಹುಟ್ಟಿಕೊಂಡಿತು. [2] ವಾಕರಿಕ ಪಂಥ ಹುಟ್ಟಿ ಉತ್ತರ ಕರ್ನಾಟಕದ ಜನರು ಜಾತಿ ಮತ ಬೇಧವಿಲ್ಲದೆ ‘ದಿಂಡಿಯ’ ಮೂಲಕ ತಂಡೋಪತಂಡವಾಗಿ ವಿಠ್ಠಲನ ದರ್ಶನಕ್ಕೆ ಧಾವಿಸತೊಡಗಿದರು. ‘ಭಜನೆ’ ಎಂಬ ಪ್ರಕಾರ ಹುಟ್ಟಿಕೊಂಡಿತು.

ಶರಣರು ದಾಸರು ಭಕ್ತಿಯ ಮೂಲಕ ಜನರಲ್ಲಿ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದರು. ಇದರ ಪರಿಣಾಮವಾಗಿ ಅನೇಕ ಜನಪದ ಕಲೆಗಳು ಪುನಶ್ವೇತನ ಪಡೆದುಕೊಂಡವು. ಅನೇಕ ಜನಪದ ಕಲೆಗಳು ಮರುಹುಟ್ಟು ಪಡೆದುಕೊಂಡವು. ಈ ಭಕ್ತಿ ಚಳುವಳಿಯ ಪ್ರೇರಣೆಯಿಂದ ಅನೇಕ ಪ್ರಕಾರದ ಕಲಾ ಮಾಧ್ಯಮಗಳು ಹುಟ್ಟಿಕೊಂಡು ಜನಪದ ರಂಗಭೂಮಿ ಅಸ್ತಿತ್ವ ಪಡೆಯಲು ಹೇಗೆ ಸಹಾಯಕವಾದವು. ಸಣ್ಣಾಟದ ಹುಟ್ಟಿಗೆ ಪ್ರೇರಣೆ ನೀಡಿದ ಶೈವ, ವೈಷ್ಣವ, ಶಕ್ತಿ ಪಂಥ, ಜನಪದ ಸಂಗೀತ, ಭಜನೆ, ಲಾವಣಿ, ಹರದೇಶಿ-ನಾಗೇಶಿ ಇವುಗಳ ಹಿನ್ನೆಲೆ ಅವಶ್ಯವೆಂದು ಮನಗಂಡು ಇಲ್ಲಿ ವಿಶ್ಲೇಷಿಸಲಾಗಿದೆ.

ಶೈವ ಪಂಥ

ಸಣ್ಣಾಟದ ಹುಟ್ಟಿನ ಬಗೆಗೆ ಅನೇಕ ಅಭಿಪ್ರಾಯಗಳನ್ನು ವಿವಿಧ ವಿದ್ವಾಂಸರು ಮಂಡಿಸಿದ್ದಾರೆ. ‘ಸಣ್ಣಾಟಗಳು ಶೈವ ಮತ್ತು ವೈಷ್ಣವ ಮತ ಪ್ರಚಾರದ ಉದ್ದೇಶದಿಂದಲೇ ಹುಟ್ಟಿದವೆಂಬುದಂತೂ ಸತ್ಯ. ಸಣ್ಣಾಟಗಳಿಗೆ ಮೂಲ ಪ್ರೇರಣೆ ಹನ್ನೆರಡನೇ ಶತಮಾನಕ್ಕಿಂತಲೂ ಪ್ರಾಚೀನ ಕಾಲದಿಂದ ಹರಿದು ಬಂದಿದೆ. [3] ಸಣ್ಣಾಟಗಳಲ್ಲಿ ಶೈವ ಮತ್ತು ವೈಷ್ಣವ ಮತ ಪ್ರಚಾರದ ಉದ್ದೇಶ ಮಾತ್ರ ಇರಲಿಲ್ಲ. ಶೈವ ಮತ್ತು ವೈಷ್ಣವ ಧರ್ಮದ ಪ್ರಚಾರಕ್ಕಾಗಿ ಸಣ್ಣಾಟಗಳು ಎಂದೂ ಪೈಪೋಟಿ ನಡೆಸಲಿಲ್ಲ. ಸಣ್ಣಾಟಗಳ ಮೂಲ ಉದ್ದೇಶ ಮನರಂಜನೆಯ ಜೊತೆಗೆ ಮಾನವರಿಗೆ ಮಾನವತ್ವದ ಕಲ್ಪನೆ ನೀಡುವುದೇ ಅತೀ ಮುಖ್ಯವಾಗಿತ್ತು. ಪ್ರತಿಯೊಂದು ಧರ್ಮವೂ ಮಾನವನ ಒಳಿತನ್ನೇ ಬಯಸುವಂತಹದ್ದಾಗಿದೆ. ಯಾವ ಧರ್ಮವೂ ಮಾನವರಿಗೆ ದಾನವ ಗುಣಗಳನ್ನು ಬೋಧಿಸುವುದಿಲ್ಲ. ಒಳ್ಳೆಯ ಆಚಾರ, ವಿಚಾರ, ತತ್ವ, ನೀತಿ ಯಾವ ಧರ್ಮದಲ್ಲೇ ಇರಲಿ ಅಂತಹ ಎಲ್ಲ ಧರ್ಮಗಳನ್ನು ನಮ್ಮ ಗ್ರಾಮೀಣ ಜನರು ಪ್ರೀತಿಸುತ್ತಾ ಬಂದಿದ್ದಾರೆ. ಶರಣರ, ದಾಸರ, ವಿಭೂತಿ ಪುರುಷರ ಯಾವ ಆಟಗಳನ್ನಾಡಿದರೂ ಕೂಡ ಅವುಗಳನ್ನು ಪ್ರೀತಿಸುವ ಹೃದಯವಂತರು ನಮ್ಮ ಈ ಗ್ರಾಮೀಣ ಪ್ರೇಕ್ಷಕರು. ಹೀಗಾಗಿ ಸಣ್ಣಾಟಗಳು ಮತ ಪ್ರಚಾರಕ್ಕಾಗಿ ಹುಟ್ಟಿ ಬಂದವು ಎಂದು ಮತೀಯತೆಯ ಭಾವನೆ ತಾಳುವುದು ಉಚಿತವಲ್ಲ. ಸಣ್ಣಾಟಗಳ ಉಗಮಕ್ಕೆ ಪ್ರೇರಣೆ ಹನ್ನೆರಡನೆಯ ಶತಮಾನ ಎಂದು ಅಭಿಪ್ರಾಯ ತಾಳಿದ್ದಾರೆ. ಸಣ್ಣಾಟ ರಂಗಭೂಮಿ ವಿವಿಧ ಜಾನಪದ ಕಲೆಗಳಿಂದ ಹಾಡುಗಳಿಂದ, ಆರಾಧನೆಗಳಿಂದ ಪ್ರೇರಣೆ ಪಡೆದುಕೊಂಡು ನಿರ್ದಿಷ್ಟವಾದ ರೂಪವನ್ನು ಹಂತ ಹಂತವಾಗಿ ರೂಪಿಸಿಕೊಂಡಿದೆ. ೧೨ನೆಯ ಶತಮಾನಕ್ಕೆ ಸಣ್ಣಾಟದ ಇಡಿಯಾದ ರೂಪ ಮಾತ್ರ ಇದ್ದಿರಲಿಲ್ಲ. ಆದರೆ ೧೨ನೆಯ ಶತಮಾನದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಜನಪದ ಕಲಾ ಪ್ರಕಾರಗಳು ಸಣ್ಣಾಟವೆಂಬ ರೂಪ ಪಡೆಯಲು ಪ್ರೇರಣೆ ನೀಡಿದೆ ಎಂಬುದಂತೂ ಸತ್ಯ. ಸಣ್ಣಾಟದ ಉಗಮ ಕುರಿತು ಅನೇಕ ವಿದ್ವಾಂಸರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವುಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ.

ಕನ್ನಡ ನಾಡಿನಲ್ಲಿ ಭಕ್ತಿ ಪಂಥಗಳು ಹುಟ್ಟಿಕೊಂಡು ಜನಮನದಲ್ಲಿ ಭಕ್ತಿಯ ಬೀಜವನ್ನು ಬಿತ್ತುವಲ್ಲಿ ಸಾಕಷ್ಟು ಕಾರ್ಯ ಮಾಡಿವೆ. ಅಂತಹ ಪಂಥಗಳಲ್ಲಿ ಶೈವ ಪಂಥ, ದಾಸ ಪಂಥ, ಬಹುಮುಖ್ಯವಾದವು. ಜೀವನವನ್ನು ಮಾಯೆ ಮುಸುಕಿದೆ ಆ ಮಾಯಾ ಪರದೆಯನ್ನು ಹರಿದೊಗೆದು ಗುರುವಿನ ಸಹಾಯದಿಂದ ಅರಿವನ್ನು ಮಾಡಿಕೊಳ್ಳುವುದೇ ಮುಕ್ತಿಯ ವಿಧಾನ, ಭಕ್ತಿ ಅದಕ್ಕೊಂದು ಪರಮ ಸಾಧನ, ಅಂತಹ ಶುದ್ಧ ಭಕ್ತಿ ಜನತೆಯಲ್ಲಿ ಪಸರಿಸಲೆಂದೇ ಸಾಧು ಸಂತರು, ಶಿವಶರಣರು, ದಾಸರು ಯತ್ನಿಸುತ್ತ ಬಂದರು. ತಮ್ಮ ಗುರಿ ಸಾಧನೆಗಾಗಿ ಭಕ್ತಿ ಸಾಹಿತ್ಯವನ್ನು ಎತ್ತಿ ಹಿಡಿದರು. ಭಕ್ತಿಯ ಮಹತ್ವ ಪಂಡಿತರಿಗಷ್ಟೇ ತಿಳಿದರೆ ಸಾಲದು ಅದು ಜನಸಾಮಾನ್ಯರ ಸೊತ್ತಾಗಬೇಕೆಂಬುದು ಇವರ ಹಂಬಲ. ಈ ಕಾರ್ಯ ನೆರವೇರಿಸಲು ಬಯಲಾಟ ಒಂದು ಉತ್ತಮ ಮಾಧ್ಯಮವೆಂದು ಅವರಿಗೆ ಮನವರಿಕೆಯಾದಂತಿದೆ. ಅಂದಿನಿಂದ ಕನ್ನಡದಲ್ಲಿ ಭಕ್ತಿ ಪ್ರಧಾನವಾದ ಸಣ್ಣಾಟಗಳು ಹುಟ್ಟಿಕೊಂಡು ಪ್ರದರ್ಶನ ಹೊಂದುತ್ತ ಬಂದಿವೆ ಅವು ನೀಡಿದ ಲೋಕಶಿಕ್ಷಣ ಅನುಪಮವಾದುದು. [4]

ಡಾ. ಎಂ.ಎಂ. ಕಲಬುರ್ಗಿ ಅವರು ‘ಪ್ರಾಚೀನ ಕನ್ನಡ ಶಿಷ್ಟ ಸಾಹಿತ್ಯದ ಬದಲಾವಣೆಗೂ ಕಾರಣವಾದ ವೀರ ಸಂವೇದನೆಗೆ ಪ್ರತಿಯಾಗಿ ತಲೆ ಎತ್ತಿದ ಹನ್ನೆರಡನೆಯ ಶತಮಾನದ ಭಕ್ತಿ ಸಂವೇದನೆ ಆಗಿದೆ. ಅಂದರೆ ಕನ್ನಡಿಗರ ‘ವೀರಕ್ಕೆ ಬದಲು ಭಕ್ತಿ’ ಯನ್ನು ಒಂದು ಮೌಲ್ಯವೆಂದು ಪರಿಗಣಿಸುತ್ತಲೇ ಶಿಷ್ಟ ಸಾಹಿತ್ಯದ ಚಂಪೂ ಹಿಂದೆ ಸರಿದು, ವಚನ ರಗಳೆ, ಷಟ್ಟದಿಗಳು ಮುಂದೆ ಬಂದಂತೆ ಜಾನಪದ ಸಾಹಿತ್ಯದಲ್ಲಿ ದೊಡ್ಡಾಟದ ಮಗ್ಗುಲಲ್ಲಿ ಸಣ್ಣಾಟ ಸೃಷ್ಟಿಯ ಸಂಕಲ್ಪ ಅಂದೇ ಅಂಕುರಿಸಿತೆಂದು ಅಭಿಪ್ರಾಯ ಪಡುವರು’.

‘ಕನ್ನಡ ನಾಡು ಭಕ್ತಿಯ ಬೀಡು. ಇಲ್ಲಿ ಅನೇಕ ಮತ ಪಂಥಗಳು ಹುಟ್ಟಿಕೊಂಡು ಭಕ್ತಿಯ ಹುಲುಸಿಗೆ ಕಾರಣವಾಗಿವೆ. ಈ ಮಾರ್ಗ ಹಿಡಿದವರಲ್ಲಿ ಶರಣರೂ ದಾಸರೂ ಪ್ರಮುಖರು. ತಮ್ಮ ತಮ್ಮ ಧರ್ಮಗಳನ್ನು ಪ್ರಚಾರಗೊಳಿಸುವುದಕ್ಕಾಗಿಯೇ ಇವರು ಸಣ್ಣಾಟಗಳ ಬೆನ್ನು ಹತ್ತಿದಂತಿದೆ’. [5]

‘ವೇಷಗಾರರ ಸಣ್ಣಪುಟ್ಟ ಪ್ರಸಂಗಗಳೇ ನಮ್ಮ ಸಣ್ಣಾಟಕ್ಕೆ ಮೂಲ ಆಧಾರ ಎಂದು ತಿಳಿಸುತ್ತಾ ಸಣ್ಣಾಟ ಮೊದಲು, ನಂತರ ದೊಡ್ಡಾಟ ಹುಟ್ಟಿತು. ಸಣ್ಣಾಟಗಳು ಪ್ರಾರಂಭದಲ್ಲಿ ಪೌರಾಣಿಕ ಹಿನ್ನೆಲೆಯುಳ್ಳಂತಹ ಕಥೆಗಳನ್ನೇ ಆಡುತ್ತಿದ್ದರು. ಅದು ಹನ್ನೆರಡನೆಯ ಶತಮಾನದಲ್ಲಿ ಹೊಸ ತಿರುವು ಪಡೆಯಿತು. ಆರ್ಥಿಕ ಶ್ರೇಣಿಯಿಂದ ಕೆಳವರ್ಗದ ಜನರ ಸೊತ್ತಾದ ಕಲೆಗಳನ್ನು ಕೇವಲ ಹೊಟ್ಟೆ ಹೊರೆಯುವುದಕ್ಕಾಗಿ ಕೆಲವು ಕಲಾ ಪ್ರದರ್ಶನಗಳನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡ ಜನ ಈ ಕಲೆಗಳನ್ನು ‘ಕಾಯಕ’ ತತ್ವದಲ್ಲಿ ಅಳವಡಿಸಿಕೊಂಡಾಗ ಅವುಗಳಿಗೆ ಹೊಸ ಜೀವ ಪ್ರಾಪ್ತವಾಯಿತು. ಜನಪದ ಕಲೆಗಳ ಪುನರುಜ್ಜೀವನವಾಯಿತು. ಚೌಡಯ್ಯ ಶರಣ ಜೀವನಾಧಾರಿತ ಸಣ್ಣಾಟ ರೂಢಿಗೆ ತಂದನೆಂದು ಕಾಣುತ್ತದೆ. ಭಕ್ತಿ ಪ್ರೇರಣೆ, ಧಾರ್ಮಿಕ ಸ್ವರೂಪದ ಕಥಾವಸ್ತುಗಳನ್ನು ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಶರಣರಾಟಗಳು ಹುಟ್ಟಿಕೊಂಡವು. ಈ ಶರಣರಾಟಗಳು ಸಣ್ಣಾಟ ಪ್ರಕಾರದಲ್ಲಿ ವಿಶೇಷ ಸ್ಥಾನ ಹೊಂದಿದೆ. ಶರಣರ ತತ್ವಗಳನ್ನು ಕಣ್ಣಮುಂದೆ ಕಟ್ಟುವಂತೆ ಮಾಡುವುದರಿಂದ ಅವು ಜನಾಂಗದ ಪರಂಪರೆಯಲ್ಲಿ ಉಳಿದು ಬರಲು ಸಾಧ್ಯವಾಯಿತು’. [6]

ಹನ್ನೆರಡನೆಯ ಶತಮಾನಕ್ಕೆ ಶರಣರಾಟ ಎಂಬ ರೂಪ ಇತ್ತು. ಶಿವಶರಣರು ತಮ್ಮ ಮತ ತತ್ವ ಪ್ರಚಾರಕ್ಕೆ ಈ ಜನಪದ ರೂಪವನ್ನು ಬಳಸಿಕೊಂಡಿದ್ದರು ಎಂದು ತಿಳಿದುಕೊಳ್ಳಲು ಯಾವ ಆಧಾರಗಳೂ ಇಲ್ಲ. ಶಿವಶರಣರ ಆಂದೋಲನಗಳು ಜನರಲ್ಲಿ ಭಕ್ತಿ ಮತ್ತು ಕಾಯಕದ ಮಹತ್ವ ಬಿಂಬಿಸುವುದು ಪ್ರಮುಖವಾದ ಗುರಿಯಾಗಿತ್ತು. ಬಸವಣ್ಣ ಸಮಾಜಿಕ ಮತ್ತು ಆರ್ಥಿಕ ಸಮತೆಗೋಸ್ಕರ ಕ್ರಾಂತಿಕಾರಕ ಚಳುವಳಿಯನ್ನು ಪ್ರಾರಂಭಿಸಿದ. ಬಸವಣ್ಣನ ಈ ಚಳುವಳಿಯಲ್ಲಿ ಅನುಭವ ಮಂಟಪದಲ್ಲಿ ಉಚ್ಚ ಕುಲದವರಾರು ಮೊದಲು ಪ್ರವೇಶ ಮಾಡಲೇ ಇಲ್ಲ. ಇಲ್ಲಿ ಮೊದಲು ಪ್ರವೇಶಿಸಿದವರು ಕಾಯಕ ಜೀವಿಗಳು. ಬಿಜ್ಜಳನ ಆಸ್ಥಾನದಲ್ಲಿ ಅರ್ಥ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಸವಣ್ಣನಿಗೆ, ಆರ್ಥಿಕ ಮತ್ತು ಸಾಮಾಜಿಕ ಸಮತೆಯ ಮೂಲಕ ಮಾನವನ ಮತ್ತು ರಾಷ್ಟ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದ. ರಾಷ್ಟ್ರದ ಜನತೆ ಸಮಾನವಾಗಿ ದುಡಿದು, ಸಮಾನವಾಗಿ ಹಂಚಿಕೊಂಡು, ಸಮಾನ ಸುಖದಲ್ಲಿ ಬದುಕಬೇಕು ಎಂಬುದು ಬಸವಣ್ಣನ ನಿಲುವಾಗಿತ್ತು. ೧೨ನೇ ಶತಮಾನಕ್ಕೆ ಕಾಯಕ ಯೋಗಿಗಳು ಅಸಮಾನತೆಯ ನೀತಿಯಲ್ಲಿ ಬೆಂದು ಹೋಗಿದ್ದರು. ಈ ಸಮಾಜದಲ್ಲಿ ಕಾಯಕ ಕರ್ಮಿಗಳ ಮಹತ್ವ ಏನು ಎಂಬುದನ್ನರಿತಿದ್ದರೂ ಮೇಲ್ವರ್ಗದ ಜನ ಅವರನ್ನು ತುಚ್ಫವಾಗಿ ಕಾಣುತ್ತಿದ್ದರು. ಕಾಯಕ ಜೀವಿಗಳು ಇಡೀ ಸಮುದಾಯವನ್ನು ನೋಡಿಕೊಳ್ಳುವುದು, ಇಡೀ ಸಮುದಾಯ ಈ ಕಾಯಕ ಜೀವಿಗಳನ್ನು ನೋಡಿಕೊಳ್ಳುವುದು. ಇದು ಪರಂಪರಾನುಗತವಾಗಿ ಸಾಗಿ ಬಂದ ವ್ಯವಸ್ಥೆ. ಇಲ್ಲಿ ಸಾಮರಸ್ಯ ಮುಖ್ಯ. ಸಮಾಜ ಮತ್ತು ಕಾಯಕ ಜೀವಿಗಳು ಒಂದರ್ಥದಲ್ಲಿ ಪರಾವಲಂಬಿಗಳೇ ಎಂದು ಹೇಳಬಹುದು. ರಾಷ್ಟ್ರಕ್ಕೆ ಅನ್ನ ಹಾಕುವ ರೈತ, ರೈತನ ಕಾಯಕಕ್ಕೆ ಸಹಕಾರಿಯಾದ ಬಡಿಗ, ಕಮ್ಮಾರ, ಸಮುದಾಯಕ್ಕೆ ಬೇಕಾದ ಮಡಿವಾಳ, ಚಮ್ಮಾರ, ಕುಂಬಾರ, ನೇಕಾರ, ಗಾಣಿಗ, ಮೇದಾರ ಮುಂತಾದವರ ವೃತ್ತಿಗಳು ಬೇರೆ ಬೇರೆಯಾಗಿದ್ದರೂ ತಾಂತ್ರಿಕವಾಗಿ ಒಬ್ಬರಿಂದೊಬ್ಬರಿಗೆ ಅನೇಕ ಸಂಬಂಧಗಳಿವೆ ಮತ್ತು ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿದ್ದರು. ಎಲ್ಲಿ ಅವಲಂಬನೆ ಗಟ್ಟಿಯಾಗಿರುತ್ತದೆಯೋ ಅಲ್ಲಿ ಸಮಾಜ ಭದ್ರವಾಗಿರುತ್ತವೆ. ರೈತ, ಬಡಿಗ ಮತ್ತು ಕಮ್ಮಾರನನ್ನು ಅವಲಂಬಿಸಿ ಕೃಷಿ ವೃತ್ತಿ ಪ್ರಾರಂಭಿಸಿರುತ್ತಾನೆ. ಈ ಮೂವರಲ್ಲಿ ಸಾಮರಸ್ಯ ಅತ್ಯಗತ್ಯ. ಇವರಲ್ಲಿ ಸಾಮರಸ್ಯ ಇರದೇ ಹೋದರೆ ಎಂತಹ ಅನಾಹುತವಾಗುತ್ತದೆ ಎಂಬುದನ್ನು ನೋಡಬಹುದು. ಹದವರಿತ ಮಳೆಯಾದಾಗ ಭೂಮಿಯನ್ನು ಉತ್ತಿ ಬಿತ್ತಲು ರೈತನಿಗೆ ಬೇಕಾದ ಉಪಕರಣಗಳನ್ನು ಬಡಿಗ, ‘ಕಮ್ಮಾರ ತಯಾರಿಸಿಕೊಡದಿದ್ದರೆ ರೈತ ಬೆಳೆ ಬೆಳೆಯಲಿಕ್ಕಾಗುವುದಿಲ್ಲ. ರೈತ ಬೆಳೆ ಬೆಳೆಯದಿದ್ದರೆ ವರ್ಷವಿಡೀ ಕಾಯಕ ಜೀವಿಗಳು ಮತ್ತು ಸಮಾಜ ಆಹಾರವಿಲ್ಲದೇ ಕೊರಗಬೇಕಾಗುತ್ತದೆ. ಹರಿಜನರು ಪ್ರಾಣಿಗಳ ಚರ್ಮವನ್ನು ಸುಲಿದು ಹದಗೊಳಿಸಿ ಚಮ್ಮಾರನಿಗೆ ಕೊಡುವರು. ಕಮ್ಮಾರ ಚಮ್ಮಾರನಿಗೆ ಪಾದರಕ್ಷೆ ತಯಾರಿಸಲು ಬೇಕಾದ ಉಪಕರಣಗಳನ್ನು ರಚಿಸಿ ಕೊಡುವನು. ಇವರಿಬ್ಬರ ವಸ್ತುಗಳನ್ನು ಬಳಸಿಕೊಂಡು ಚಮ್ಮಾರ ಪಾದರಕ್ಷೆ ಸಿದ್ಧಪಡಿಸುತ್ತಾನೆ. ಹೀಗೆ ಉತ್ಪಾದನಾ ವ್ಯವಸ್ಥೆಯಲ್ಲಿ ಕಾಯಕ ಜೀವಿಗಳ ಮಹತ್ವ ಏನು? ಅವರಲ್ಲಿ ಸಾಮರಸ್ಯ ಇದ್ದರೆ ಮಾತ್ರ ಹೆಚ್ಚು ಉತ್ಪಾದನೆ ಸಾಧ್ಯ. ಉತ್ಪಾದನೆಯಿಂದ ರಾಷ್ಟ್ರದ ಅಭಿವೃದ್ಧಿ ಎಂಬುದನ್ನರಿತ ಬಸವಣ್ಣ ಕಾಯಕ ಜೀವಿಗಳಿಗೆ ಹೆಚ್ಚಿನ ಮಹತ್ವ ನೀಡಿ ‘ಕಾಯಕವೇ ಕೈಲಾಸ’ ಎಂದು ಸಾರಿದ. ಈ ಜಗತ್ತಿನಲ್ಲಿ ಕಾಯಕ ಜೀವಿಗಳಿಗಿರುವ ಮಹತ್ವ ಬೇರೆ ಯಾರಿಗೂ ಇಲ್ಲ. ಅಂತೆಯೇ ಕಾರ್ಲ್‌ಮಾರ್ಕ್ಸ್ ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಬಲಿಷ್ಠ’ ಎಂದು ಹೇಳಿದ್ದಾನೆ. ಕಾಯಕಕ್ಕೆ ಇಷ್ಟೆಲ್ಲ ಮಹತ್ವವಿದ್ದರೂ ಅದು ೧೨ನೆಯ ಶತಮಾನಕ್ಕಿಂತ ಹಿಂದೆ ಗೌಪ್ಯವಾಗಿತ್ತು ಮತ್ತು ೧೨ನೆಯ ಶತಮಾನದವರೆಗೆ ವಿದ್ಯೆಯೊಂದೇ ವಿಶ್ವಾತ್ಮನನ್ನೊಲಿಸುವ ಸಾಧನವೆಂದು ವಿದ್ಯೆಗಷ್ಟೇ ಮಹತ್ವವಿತ್ತು. ಅಂದು ಕಾಯಕ ಜೀವಿಗಳೂ ವಿದ್ಯೆಯನ್ನು ಪಡೆಯಬೇಕೆಂದುಕೊಂಡರೂ ಬುದ್ದಿಜೀವಿಗಳು ಅವಕಾಶ ಕೊಡುತ್ತಿರಲಿಲ್ಲ. ೫ ಮತ್ತು ಕಾಯಕ ಜೀವಿಗಳನ್ನು ಸ್ವತಂತ್ರವಾಗಿ ಜೀವಿಸಲು, ಬೆಳೆಯಲು ಬಿಡುತ್ತಿರಲಿಲ್ಲ. ಈ ವ್ಯವಸ್ಥೆಯಿಂದ ಬೇಸತ್ತ ಕಾಯಕ ಜೀವಿಗಳು ಹೊರಬರಲು ಮತ್ತು ಅಂತಹ ವ್ಯವಸ್ಥೆಯ ವಿರುದ್ಧ ಹೋರಾಡಲು ಹಾತೊರೆಯುತ್ತಿದ್ದರು. ಒಂದೊಂದು ಸಲ ಕಾಯಕ ಜೀವಿಗಳು ‘ಬಡವನ ಸಿಟ್ಟು ದವಡೆಗೆ ಮೂಲ’ ಎಂದುಕೊಂಡು ಬುದ್ಧಿಜೀವಿಗಳು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದರು. ಕಾಯಕ ಜೀವಿಗಳಿಗೆ ಈ ವ್ಯವಸ್ಥೆಯಿಂದ ಹೊರಬರಲು ಅವಕಾಶ ನೀಡಿದವ ಬಸವಣ್ಣ. ೧೨ನೆಯ ಶತಮಾನದಲ್ಲಿಯ ಅನೇಕ ಕೆಳವರ್ಗದ ಜನರು ತಾವು ಕಂಡುಕೊಂಡ ಪರಂಪರಾನುಗತವಾಗಿ ಬಂದ ಕಲೆಯನ್ನು ಪ್ರದರ್ಶಿಸುವ ವೃತ್ತಿಯನ್ನೇ ಅನುಸರಿಸಿಕೊಂಡವರಾಗಿದ್ದರು. ಬಸವಣ್ಣನಿಂದ ಪ್ರೇರಣೆ ಪಡೆದ ಕೆಳವರ್ಗದ ಕಲಾವಿದರು ತಮ್ಮ ಕಲೆಯಲ್ಲಿ ‘ಕಾಯಕ ತತ್ವ’ದ ಮಹತ್ವ ಸೃಷ್ಟಿಸಿ ಪ್ರತಿಬಿಂಬಿಸತೊಡಗಿದರು. ಬಸವಣ್ಣನ ಈ ಪ್ರೇರಣೆಯಿಂದ ಅವರಲ್ಲಿರುವ ಕಲೆ ಹೊಸರೂಪ ಪಡೆದುಕೊಂಡಿತು ಮತ್ತು ಅನೇಕ ಕೆಳವರ್ಗದ ಕಲಾವಿದರು ಬಸವಣ್ಣನ ಗುಂಪು ಸೇರಿ ತಮ್ಮ ತಮ್ಮ ವೃತ್ತಿಗಳ ಮಹತ್ವ ನಾವು ಸಮಾಜಕ್ಕೆ ಸಮುದಾಯಕ್ಕೆ ನಮ್ಮ ವೃತ್ತಿಯ ಮೂಲಕ ಏನನ್ನು ನೀಡಲು ಸಾಧ್ಯ ಎಂಬುದನ್ನು ಮನಗಂಡರು. ಬಸವಣ್ಣನೆಂಬ ಗುರುವಿನ ಮೂಲಕ ಭಕ್ತಿ ಮತ್ತು ಕಾಯಕದ ಮಹತ್ವ ಅರಿತ ಅನೇಕ ಕಲಾವಿದರು ಬೀದಿಗಿಳಿದು ವೇಷ ಹಾಕಿ ಜನಸಾಮಾನ್ಯರ ಮನಸ್ಸಿಗೆ ಹತ್ತುವಂತೆ ಸರಳವಾಗಿ ಶರಣರ ಭಕ್ತಿ ಮತ್ತು ಕಾಯಕದ ಮಹತ್ವ ಬಿತ್ತರಿಸಿದರು. ಇವೆಲ್ಲ ಏಕಪಾತ್ರಾಭಿನಯ ಹೊಂದಿದ ಗೀತರೂಪಕಗಳಾಗಿದ್ದವು.

ಬಹುರೂಪಿಗಳು

ಹನ್ನೆರಡನೆಯ ಶತಮಾನಕ್ಕಿಂತ ಪೂರ್ವದಲ್ಲಿಯೇ ಇದ್ದ ಬಹುರೂಪಿ ಜನಾಂಗ ವೇಷ ಧರಿಸಿ ತಮ್ಮಲ್ಲಿರುವ ಕಲೆಯ ಪ್ರದರ್ಶನ ನೀಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿತ್ತು. ೧೨ನೆಯ ಶತಮಾನದ ಶಿವಶರಣರ ಆಂದೋಲನಗಳು ಇವರ ಮೇಲೆ ಪ್ರಭಾವ ಬೀರಿದವು. ಈ ಸಮುದಾಯದ ಚೌಡಯ್ಯ, ನಗೆಯ ಮಾರಯ್ಯ ಮತ್ತು ಕಲಕೇತ ಬೊಮ್ಮಯ್ಯ ಇವರು ಶಿವಶರಣರ ಗುಂಪು ಸೇರಿದ್ದರು ಎಂದು ಹೇಳಲಿಕ್ಕೆ ಸಾಕಷ್ಟು ಆಧಾರಗಳಿವೆ. ‘ಈ ಬಹುರೂಪಿಗಳ ಕಲೆ ಶರಣರ ಆಶ್ರಯದಲ್ಲಿ ಬೆಳೆದು ೧೨ನೆಯ ಶತಮಾನಕ್ಕೆ ಸಾಕಷ್ಟು ಪ್ರಚಾರ ಪಡೆಯಿತು ಮತ್ತು ಈ ಕಲೆ ಶಿವಶರಣರ ಕಾಲಕ್ಕೆ ಪ್ರಗತಿಯನ್ನು ಹೊಂದಿ ನಾಲ್ಕೈದು ಶತಮಾನ ಬದುಕಿ ಅದೃಶ್ಯವಾದಂತೆ ಕಾಣುತ್ತದೆ ಅಥವಾ ತನ್ನ ವೈಶಿಷ್ಟ್ಯ ಕಳೆದುಕೊಂಡು ವೇಷಗಾರರ ಸಂಪ್ರದಾಯದಲ್ಲಿ ಬೆರೆತಿರುವ ಸಾಧ್ಯತೆಯೂ ಇದೆ’. [7]

ಚೌಡಯ್ಯ ೧೨ನೆಯ ಶತಮಾನದ ವಚನಕಾರರ ಸಮಕಾಲಿನವ. ಇವನು ವಿವಿಧ ವೇಷಗಳನ್ನು ಧರಿಸಿ ಆಟ ಆಡುತ್ತಿದ್ದುದರಿಂದ ಇವನನ್ನು ಬಹುರೂಪಿ ಚೌಡಯ್ಯ ಎಂದೇ ಕರೆದಿರುವುದು. ಚೌಡಯ್ಯನ ಕಾಯಕ ಕುರಿತು ಎರಡು ವಚನಗಳಲ್ಲಿ ಹೀಗೆ ವ್ಯಕ್ತವಾಗಿದೆ.

‘ಇಂದು ಬಂದ ಬಹುರೂಪವ ನೋಡಿರಯ್ಯ..
ಠೇಕಣ್ಣ ಪ್ರಿಯನಾಗಿನಾಥ ಬಸವಣ್ಣನಿಂದ ಬದುಕಿದೆನು’[8]
‘ಇನ್ನಾಡುವೆ ಜಂಗಮ ರೂಪ ಅಲ್ಲಮನಂತೆ….
ಬಸವಣ್ಣನಿಂದ ಬದುಕಿತ್ತೇ ಲೋಕವೆಲ್ಲ’[9]

೧೨ನೆಯ ಶತಮಾನದಲ್ಲಿದ್ದ ಬಹುರೂಪಿಗಳು ತಮಗಿಷ್ಟವಾದ ಶರಣೆ ವೇಷಧರಿಸಿ ಆ ಮೂಲಕ ಶಿವ, ಕಾಯಕ ತತ್ವ, ಮಾನವ ಧರ್ಮ ಮುಂತಾದವುಗಳ ಬಗೆಗೆ ಏಕಪಾತ್ರದಲ್ಲಿ ಪ್ರದರ್ಶನ ನೀಡುತ್ತಿರಬಹುದು. ೧೨ನೆಯ ಶತಮಾನದಲ್ಲಿಯ ಶೈವ ವೈಷ್ಣವ ಧರ್ಮಗಳು ಪರಸ್ಪರ ದೂಷಿಸುತ್ತಿದ್ದವು ಎಂಬುದರ ಚಿತ್ರಣ ಬಹುರೂಪಿ ಚೌಡಯ್ಯನ ಹಿನ್ನೆಲೆಯಿಂದ ತಿಳಿದು ಬರುತ್ತದೆ. ಚೌಡಯ್ಯನು ಜನಸೇವ್ಯ ಧರ್ಮರತಿಯೆಂಬ ದಂಪತಿಗಳ ಮಗ. ಚಿತ್ರ ವಿಚಿತ್ರವಾದ ಬಹುರೂಪವನಾಡಿ ವಿದ್ಯವ ತೋರಿ ಭಕ್ತರಲ್ಲಿ ಕಾಯಕವ ತಂದು ಜಂಗಮಾರ್ಚನೆಯಂ ಮಾಡುತ್ತ ರೇಕಳಿಗೆಯಂಬ ಪುರದಲ್ಲಿ ಚವುಡಯ್ಯ ನಿರುತಿರಲು ಇತ್ತ ಕೋಟೆಗಿರಿಯೆಂಬ ಪಟ್ಟಣದರಸು ರಾಮ ದೇವನೆಂಬಾತನಲ್ಲಿ, ಭಾಸ್ಕರ ಭಟ್ಟನ ಮಗ ಅಚ್ಯುತನೆಂಬವನು ಗಾನ, ನರ್ತನ, ಜಾತಿಕಾರರ ವಿದ್ಯಮಂ ಕಲಿತು ಗಾನವಿದ್ಯಾ ಗಜೇಂದ್ರ ಸಿಂಹನೆಂಬ ಬಿರಿದ ಹೊಗಳಿಸಿಕೊಳುತಿರಲು, ಆ ವಾರ‍್ತೆಯಂ ಬಹುರೂಪಿ ಚವುಡಯ್ಯ ಕೇಳಿ ಕಾಯಕ ಮುಖದಿಂದಾ ಪಟ್ಟಣಕ್ಕೆ ಹೋಗಿ, ಶಿವಭಕ್ತರಲ್ಲಿ ತಮ್ಮ ವಿದ್ಯವಂ ತೋರಿ ಕಾಯಕಮಂ ಮಾಡುತ್ತಿರಲಾಗ ಅಚ್ಯುತ ಬಂದು ತಡವು ತರ್ಕಮಂ ಮಾಡಿ ಸೆಣಸಿ ತನ್ನ ವಿದ್ಯಮಂ ತೋರಲು ಜಾತಿಗಾರ ವಿದ್ಯದಲ್ಲಿ ಹದಿನೆಂಟು ಜಾತಿಯ ನೂರೊಂದು ಕುಲದ ವೇಷಮಂ ತೊಟ್ಟು ಭಾಷೆಯನ್ನಾಡುವಲ್ಲಿ ಅವನಿಗೆ ಬಾರದೆ ಸೋಲಲು ಗಾನ ನರ್ತನ ಭರತ ವಿದ್ಯದಲ್ಲಿಯ ಸೋಲಲು, ಅವನೆಲ್ಲವನು ಚವುಡಯ್ಯನಾಡಿ ತೋರಿಗೆದ್ದು[10] ಅವನ ಬಿರುದುಗಳನ್ನೆಲ್ಲ ಪಡೆದುಕೊಂಡನು ಈ ಹೇಳಿಕೆ ಬಹಳಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಚೌಡಯ್ಯನನ್ನು ಬಹುರೂಪಿಯೆಂದು ಸ್ಪಷ್ಟವಾಗಿ ಕರೆಯಲಾಗಿದೆ ಎಂದು ಡಾ. ಮಲಶೆಟ್ಟಿ ಅಭಿಪ್ರಾಯ ಪಡುತ್ತಾ ಚೌಡಯ್ಯ ಶಿವಭಕ್ತ, ಜಾತಿಕಾರರ ಅಚ್ಯುತ ವೈಷ್ಣವ ಬಹುರೂಪಿಗಳು ಮತ್ತು ಜಾತಿಕಾರರು ಪರಸ್ಪರ ಸ್ಪರ್ಧೆಯಲ್ಲಿ ತೊಡಗಿದ್ದ ಸಂಗತಿ ತಿಳಿಯುತ್ತದೆ. ಈ ಹೇಳಿಕೆಯ ಮುಂದಿನ ಭಾಗದಲ್ಲಿ ಶಿವನು ಚೌಡಯ್ಯನನ್ನು ಪರೀಕ್ಷಿಸಲು ಯಕನಾಥನೆಂಬ ಗಾರುಡಿಗನಾಗಿ ಬಂದು ಸ್ಪರ್ಧೆಗೆ ನಿಂತು ವಿಷ್ಣುವಿನ ದಶಾವತಾರಗಳನ್ನು ಪ್ರದರ್ಶಿಸುತ್ತಾನೆ. ಪ್ರತಿಯಾಗಿ ಚೌಡಯ್ಯನು ಶಿವನು ಇಪ್ಪತ್ತೈದು ಲೀಲೆಗಳನ್ನು ಅಭಿನಯಿಸಿ ಗೆಲ್ಲುತ್ತಾನೆ ಎಂದಿದೆ. [11] ಶೈವ ಮತ್ತು ವೈಷ್ಣವ ಧರ್ಮ ಒಂದಕ್ಕೊಂದು ಪ್ರತಿ ಸ್ಪರ್ಧಿಯಾಗಿದ್ದವು ಎರಡೂ ಧರ್ಮಗಳು ತಮ್ಮ ತತ್ವಗಳನ್ನು ಪ್ರತಿಬಿಂಬಿಸಲು ಅಂದು ಪ್ರಚಲಿತವಿದ್ದ ಜನಪದ ಕಲಾ ಮಾಧ್ಯಮಗಳ ಮೇಲೆ ಪ್ರಭಾವ ಬೀರಿದ್ದವು. ‘ಬಹುರೂಪಿಗಳು ತಮ್ಮ ತಂತ್ರ ಪ್ರದರ್ಶನಗಳ ಸಾಮರ್ಥ್ಯವನ್ನು ಸಂಗೀತ ನೃತ್ಯ ಕಲೆಗಳಿಂದ ಹೆಚ್ಚಿನ ಕೊಂಡಿದ್ದರೆಂದು ಅರ್ಥವಾಗುತ್ತದೆ.[12] ೧೨ನೆಯ ಶತಮಾನಕ್ಕೆ ಜನಪ್ರಿಯವಾಗುತ್ತಿದ್ದ ಶರಣಧರ್ಮದ ತತ್ವಗಳನ್ನು ಗಮನಿಸಿದ ವೈಷ್ಣವ ಧರ್ಮ ತಾನೂ ಬೆಳೆಯಬೇಕು ಎಂಬ ಹವಣಿಕೆಯನ್ನು ಹನ್ನೆರಡನೆಯ ಶತಮಾನದಲ್ಲಿಯೇ ಹೊಂದಿತ್ತು ಎಂಬುದು ತಿಳಿಯುತ್ತದೆ.

ಬಹುರೂಪಿಗಳು ಅಥವಾ ಜಾತಿಗಾರರು ಶೈವರ ಪರ, ದಾಸರು ವೈಷ್ಣನವರ ಪರ ನಿಂತು ನಾಟ್ಯದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಈ ಎರಡೂ ಸಮುದಾಯಗಳು ನಾಟ್ಯ ಸಂಗೀತದಲ್ಲಿ ನುರಿತವರಾಗಿದ್ದರು ಎಂದು ತಿಳಿಯುತ್ತದೆ. ಈ ಸ್ಪರ್ಧೆಗಳು ಆಗಾಗ ನಡೆಯುತ್ತಿದ್ದವು. ಚೌಡಯ್ಯ ಮತ್ತು ಅಚ್ಯುತ ಪರಸ್ಪರ ಧರ್ಮದ ಪರವಾಗಿ ನಿಂತು ವಾದಗಳನ್ನು ಮಂಡಿಸುತ್ತಿದ್ದರು. ಇಂತಹ ಒಂದು ಸ್ಪರ್ಧೆಯ ಕಥೆ ಜನತೆಯಲ್ಲಿ ಹಾಡಾಗಿ ನಿನಾದಿಸಿದೆ.

‘ಛಪನ್ನ ದೇಶದಲ್ಲಿ ಒಪ್ಪಿದರು ಜಾತಿಗರು
ತಪ್ಪದಲೆ ಕಲಿತು ಕುಣಿಯದಕೆ ಶಿವರೂಪ’

ಗೀತ, ನೃತ್ಯ ನಾಟಕದ ಸೊಗಸಾದ ಚಿತ್ರ ಇಲ್ಲಿದೆ. ದಶರೂಪ, ಶಿವಲೀಲೆ ನಾಟಕಗಳ ನಾಟ್ಯದ ವರ್ಣನೆ, ಅಂದು ಲೋಕಪ್ರಿಯವಾಗಿದ್ದ ಜನಪದ ನಾಟ್ಯಗಳ ಪ್ರಕಾರಗಳನ್ನು ವಿವರಿಸುತ್ತದೆ. ಬಹುರೂಪಿಗಳು (ಜಾತಿಗಾರರು, ದೇವದಾಸರು) ರೂಪ ತೊಡುತ್ತಿದ್ದರು. ಗೀತದ ಭಾವಕ್ಕೆ ತಕ್ಕಂತೆ ನರ್ತಿಸುತ್ತಿದ್ದರು. ಚೌಡಯ್ಯ ಹಾಗೂ ಅಚ್ಯುತನ ನಾಟ್ಯದ ಸೊಬಗನ್ನು ಈ ಜನಪದ ಗೀತೆ ಸೊಗಸಾಗಿ ಚಿತ್ರಿಸಿದೆ[13] ಅಂದು ಬಹುರೂಪಿಗಳು ಪ್ರದರ್ಶಿಸುತ್ತಿದ್ದ ಆಟಗಳು ಏಕಪಾತ್ರದ ಜನಪದ ಗೀತರೂಪಕಗಳಾಗಿದ್ದವು. ಶಿವನ, ಶರಣರ ಲೀಲೆಗಳನ್ನು ತೋರಿಸುವ ಗೀತರೂಪಕಗಳು. ಅವು ಇಂದಿನಂತೆ ಸಣ್ಣಾಟದ ರೂಪ ಅಂದು ಪಡೆದಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ವಿಷ್ಣು, ಶಿವ ಮತ್ತು ಶರಣರ ತತ್ವಗಳನ್ನು ಪ್ರಚಾರ ಮಾಡುವುದಕ್ಕಾಗಿ ಅಂದು ಪ್ರಚಲಿತವಿದ್ದ ಜನಪ್ರಿಯ ಕಲಾಮಾಧ್ಯಮಗಳನ್ನು ರೂಪಾಂತರಿಸಿಕೊಂಡಿದ್ದರು ಎಂದು ಅಭಿಪ್ರಾಯ ತಾಳಬಹುದು.

ವಚನಕಾರರ ಕಾಲಕ್ಕೆ ಚೌಡಯ್ಯನಂತೆ ‘ನಗೆಯ ಮಾರಯ್ಯ’ ನೆಂಬ ಶರಣನು ಬಹುರೂಪಿಯಾಗಿರಬಹುದು. ಹಾಸ್ಯ ಪ್ರಸಂಗಗಳನ್ನು ಮಾಡಿ ತೋರಿಸಿ ಶಿವಭಕ್ತರನ್ನು ನಗಿಸಿ ಅವರಿಂದ ಹಣ ಪಡೆದುಕೊಂಡು ಬಂದು ದಾಸೋಹ ನಡೆಸುತ್ತಿದ್ದನಂತೆ. ನಗಿಸುವುದೇ ಅವನ ಕಾಯಕ. ನಯಸೇನ ‘ಬಹುರೂಪಿಯಂತೆ ಪೊತ್ತಿ ಗೊಂದವನಾಗದೆ’ ಎಂದಷ್ಟೆ ಹೇಳಿದ್ದಾನೆ. ಬಹುರೂಪಿಗಳ ವೇಷಭೂಷಣಗಳ ವಿವರ ತಿಳಿಸುವ ಚನ್ನಬಸವಣ್ಣನ ವಚನವೊಂದು ಹೀಗಿದೆ.[14]

‘ಮಣಿ ಮಾಲೆಗಳ ಹಾರ ಹೊಳೆವ ಮುತ್ತಿನ ದಂಡೆ….
ಕುಣಿವ ಪಾಡುವ ಬಹುರೂಪಗಳ ನಾಟಕ’[15]

‘ಬಸವ ಪುರಾಣದಲ್ಲಿ ಬರುವ ಕಲಕೇತ ಬೊಮ್ಮಯ್ಯನೆಂಬ ಶರಣನು ಬಹುರೂಪಿಯೆಂದು ಸ್ಪಷ್ಟವಾಗಿ ಹೇಳಿರದಿದ್ದರೂ ಅವನ ವೇಷಭೂಷಣ, ಸ್ವಭಾವ, ವೃತ್ತಿಗಳ ಮೇಲಿಂದ ಅವನೊಬ್ಬ ಹಾಸ್ಯ ಪಾತ್ರಗಳನ್ನು ವಹಿಸುವ ಬಹುರೂಪಿ ಎಂದು ಊಹಿಸಿದರೆ ತಪ್ಪಿಲ್ಲ. ಬಸವ ಪುರಾಣದ ಎರಡು ಪದ್ಯಗಳು ವೇಷ ಅಲಂಕಾರಗಳ ಬಗ್ಗೆ ಸಾಕಷ್ಟು ವಿವರಣೆ ನೀಡುತ್ತವೆ.[16]

‘ಮುಂದಲೆಯ ಮುಡಿ ನಡುವೆ ಭಸಿತವ
ದಂದವಿಂದೊಲೆದು ನಡೆವುತ ಗಹಗಹಿಸಿ ನಗುತ’[17]
‘ಗಿಲಿಕೆ ಘಲಿಕೆಲೆಂದುಲಿಯೆ ದಕ್ಷನ…
ಬೆಳೆಗುದುಗೆಯಂ ಬಲದ ಕರದಲಿ ಪಿಡಿದು ತಿರುವುತ್ತ’[18]

‘ಬಹುರೂಪಿಗಳು ಪೂರ್ತಿ ಜಾನಪದ ಕಲಾವಿದರಲ್ಲ. ಸಂಗೀತ, ಕುಣಿತ, ಮಾತುಗಳನ್ನು ಅಭ್ಯಸಿಸಿ ತಮ್ಮ ವೇಷಗಳಿಗೆ ಒಂದು ತರದ ಸುಸಂಸ್ಕೃತ ವಾತಾವರಣ ನಿರ್ಮಿಸಿಕೊಂಡಿದ್ದರು. ಆದ್ದರಿಂದ ಅವರ ಪ್ರದರ್ಶನಗಳು ರಾಜಸಭೆಯವರೆಗೆ ವ್ಯಾಪಿಸಿಕೊಂಡಿದ್ದವು.[19] ಬಹುರೂಪಿಗಳು ಕರ್ನಾಟಕದಾದ್ಯಂತ ಕಂಡುಬಂದರೂ ಬಳ್ಳಾರಿ ಜಿಲ್ಲೆಯಲ್ಲಿ ಅಧಿಕವಾಗಿದ್ದಾರೆ. ತರಬೇತಿ ಪಡೆದು ಶಿಷ್ಟ ಕಲಾವಿದರು ಎನಿಸಿಕೊಳ್ಳುವವರಿಗಿಂತ ಸುಂದರವಾಗಿ ಕುಣಿತ, ಸಂಗೀತ ಬಲ್ಲ ಇವರು ಜಾನಪದ ಕಲಾವಿದರಾಗಿದ್ದಾರೆ. ಹೀಗಾಗಿ ಬಹುರೂಪಿಗಳು ಪೂರ್ತಿ ಜಾನಪದ ಕಲಾವಿದರಲ್ಲ ಎಂದು ಹೇಳುವುದು ಸರಿ ಎನಿಸುವುದಿಲ್ಲ. ಹನ್ನೆರಡನೆಯ ಶತಮಾನ ಮತ್ತು ಅದಕ್ಕಿಂತ ಪೂರ್ವದಲ್ಲಿದ್ದ ಬಹುರೂಪಿಗಳು, ದಾಸರು ಮತ್ತು ಜಾತಿಗಾರರ ಪ್ರದರ್ಶನಗಳು ಜಾನಪದ ರಂಗಭೂಮಿಯ ನಿರ್ಮಾಣಕ್ಕೆ ಪ್ರೇರಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ನಿರ್ಧಾರ ತಾಳಬಹುದು.

‘ಬಹುರೂಪಿಗಳು’ ದಿನದಿನವೂ ಒಂದೊಂದು ಸೋಗು ಹಾಕಿಕೊಂಡು ಗ್ರಾಮೀಣ ಜನತೆಯ ಮನ ರಂಜಿಸುವುದನ್ನು ನಾವು ನೋಡುತ್ತೇವೆ. ಸ್ಥಾನಿಕ ಜೀವನವನ್ನು ಚಿತ್ರಿಸುವ, ಪೌರಾಣಿಕ ಕಥೆಗಳನ್ನು ಒಡಮೂಡಿಸುವ ವೇಷಗಳನ್ನು ಈ ಚರ ನಟರು ಧರಿಸಿ ತಮ್ಮದೇ ಆದ ಆಶು ಸಂಭಾಷಣೆಗಳಿಂದ ಜನರನ್ನು ರಂಜಿಸುತ್ತ ಬಂದಿದ್ದಾರೆ.

ಮತೀಯ ಗಲಭೆ ಜನಪದ ಕಲಾವಿದರ ಮೇಲೂ ಪ್ರಭಾವ ಬೀರಿತ್ತು ಎಂಬುದನ್ನು ಗಮನಿಸಬಹುದು. ‘ಬಹುರೂಪಿಗಳು ವಿನೋದದ ಸಂಭಾಷಣೆಗಳನ್ನು ಯೋಚಿಸುತ್ತಿದ್ದರು. ಒಂದು ಸಲ ಇಬ್ಬರು ಬಹುರೂಪಿಗಳು ಒಬ್ಬ ಬ್ರಾಹ್ಮಣನ ಹಾಗೂ ಒಬ್ಬ ಜಂಗಮನ ವೇಷ ತೊಟ್ಟು ಬಂದರು. ನನ್ನ ಧರ್ಮ ಹೆಚ್ಚು, ನನ್ನ ಧರ್ಮ ಹೆಚ್ಚು ಎಂದು ಅವರಿಬ್ಬರೂ ಜಗಳವಾಡುತ್ತಿದ್ದರು. ಜಗಳದಲ್ಲಿ ಪಕ್ಷ ಪ್ರತಿಪಕ್ಷಗಳ ವಾದ ನಡೆಯುತ್ತಿತ್ತು. ಕಡೆಗೆ ಜಂಗಮ ಬ್ರಾಹ್ಮಣನಿಗೆ ಒಂದು ಸವಾಲು ಹಾಕಿದನು. [20]

ಜಂಗಮ :ಏ ಹಾರುವ ಯಾಕೆ ನನ್ನ ಧರ್ಮ ಹೆಚ್ಚು ಎಂದು ಜಂಭ ಪಡುವೆ?

ಪರೀಕ್ಷಿಸೋಣ ಬಾ. ಸೌದೆಯ ಉರಿಯಲ್ಲಿ ನೀನು ಜನಿವಾರ ಎಸೆ, ನಾನು ಲಿಂಗ ಎಸೆಯುತ್ತೇನೆ. ಯಾವುದು ಸುಡುವುದಿಲ್ಲವೊ ಆ ಧರ್ಮ ಹೆಚ್ಚು.

ಬ್ರಾಹ್ಮಣ : (ಥಟ್ಟನೆ ಮರು ಸವಾಲು ಹಾಕುವನು) ಏ ಜಂಗಮ ಪರೀಕ್ಷೆ ಮಾಡುವುದಾದರೆ, ನಡೆ ಆ ಸೇದುವ ಭಾವಿಗೆ. ನೀನು ನಿನ್ನ ಲಿಂಗ ಎಸೆ, ನಾನು ನನ್ನ ಜನಿವಾರ ಎಸೆಯುತ್ತೇನೆ. ಯಾವುದು ನೀರ ಮೇಲೆ ತೇಲುತ್ತದೋ ಅದು ಹೆಚ್ಚು.

ಹೀಗೆ ವಿನೋದದ ಸಂಭಾಷಣೆಗಳು ನಡೆಯುತ್ತಿದ್ದವು. ಬಹುರೂಪಿಗಳದು ಸೋಗು ಹಾಕುವ ಒಂದು ಜಾತಿ ಊರೂರು ಅಲೆದಾಡಿ ಮನೆಮನೆಗೆ ಹೋಗಿ, ಅಭಿನಯಿಸಿ, ಹಾಡಿ, ಕುಣಿದು, ಉಪಜೀವಿಕೆಯನ್ನು ಗಳಿಸುತ್ತಿದ್ದರು[21] ಎಂಬುದಾಗಿ ತಿಳಿಯುತ್ತದೆ.

ಪ್ರಾಚೀನ ಕವಿಗಳು ಅಂದು ತಮ್ಮ ಪರಿಸರದಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಪಗರಣ, ನಾಳ್ಪಗರಣ, ಬಾಜನೆಗಬ್ಬ, ಬೆದೆಂಡೆ ಮೊದಲಾದ ವಿವಿಧ ಜಾತಿಯ ಜನಪದ ನಾಟಕ ರೂಪಗಳು. ಅವುಗಳನ್ನು ಪ್ರದರ್ಶಿಸಲ್ಪಡುತ್ತಿದ್ದ ಸಮುದಾಯಗಳ ಬಗೆಗೆ ಉಲ್ಲೇಖಿಸಿದ್ದಾರೆ. ಈ ಜನಪದ ನಾಟಕದ ರೂಪಗಳು ಕಾಲದಿಂದ ಕಾಲಕ್ಕೆ ವಿಕಾಸ ಹೊಂದುತ್ತಿದ್ದವು. ಕುಮಾರವ್ಯಾಸ ತನ್ನ ಸುತ್ತಲ ಪ್ರದೇಶದಲ್ಲಿದ್ದ ಜನಪದ ನಾಟಕಗಳ ರೂಪಗಳಿಂದ ಪ್ರಭಾವಿತನಾಗಿದ್ದ. ಕುಮಾರವ್ಯಾಸ ತನ್ನ ಕಾವ್ಯದಲ್ಲಿ ನಾಟಕದ ಹೋಲಿಕೆಗಳನ್ನು ಕೊಡುವುದನ್ನು ಅವಲೋಕಿಸಿದರೆ ಗೊತ್ತಾಗುತ್ತದೆ. ಜನಪದ ನಾಟಕಗಳಿಗೆ ಅವನು ತನ್ನದೇ ಆದ ‘ನಾಡಾಡಿಗಳ ನಾಟಕ’ ಎಂದು ಕರೆದಿದ್ದಾನೆ.

ನೋಡಲೀ ವ್ಯಥೆಯುಂಟೆ ಭುವನದ….
ನಾಡಾಡಿಗಳ ನಾಟಕದ ಫಣಿಯಲ್ಲಾರು ನೀನೆಂದ

‘ಇವಿಷ್ಟು ಉದಾಹರಣೆಗಳಿಂದ ಆತನ ಕಾಲದಲ್ಲಿ ನಾಟಕಗಳು ಅವು ಸಾಹಿತ್ಯಕ್ಕೆ ಉಚಿತವಾಗಿರಲಿ, ಅನುಚಿತವಾಗಿರಲಿ, ಸಾಕಷ್ಟು ಇದ್ದಿರಬೇಕು. ಅವನ್ನು ಆಗಾಗ ನಟಿ ಸುತ್ತಲೂ, ಅಭಿನಯಿಸುತ್ತಲೂ ಇದ್ದುದನ್ನು ಕುಮಾರವ್ಯಾಸ ಕಣ್ಣಾರೆ ಕಂಡಿರಬೇಕು. ಅವು ಕುಮಾರವ್ಯಾಸನ ಮನಸ್ಸಿನಲ್ಲಿ ಹೇಗೆ ನಾಟಿದವೋ, ಹಾಗೆಯೇ ಇನ್ನೇಷ್ಟೋ, ಪ್ರೇಕ್ಷಕರ ಮನಸ್ಸನ್ನು ಆಕರ್ಷಿಸಿ ಲೋಕಪ್ರಿಯವೂ ಆಗಿರಬೇಕು. ಆ ಕಾರಣವೇ ಅವೆಲ್ಲವೂ ತೀರ ಕನ್ನಡ ನಾಟಕಗಳೇ ‘ನಾಡಾಡಿಗಳ ನಾಟಕ’ ವಂತೂ ಕನ್ನಡವೇ ಆಗಿರಬೇಕು[22] ಎಂಬುದನ್ನು ಅನುಮೋದಿಸಬೇಕಾಗುತ್ತದೆ.

ಪ್ರತಿಯೊಬ್ಬ ಜನಪದ ಕಲಾವಿದ ತನ್ನದೇ ಆದ ಮತ ಧರ್ಮ ಹೊಂದಿರುತ್ತಾನೆ. ಅವನು ಹೊಸದೊಂದು ಮತವನ್ನು ಒಪ್ಪಿಕೊಂಡರೆ ಅಥವಾ ಅವನ ಮೇಲೆ ಇನ್ನೊಂದು ಧರ್ಮ ಪ್ರಭಾವ ಬೀರಿದರೆ ಅವನು ಮತ್ತು ಅವನಲ್ಲಿರುವ ಕಲೆಯ ಸ್ವರೂಪವೂ ಬದಲಾಗುತ್ತದೆ. ಕಾಲಕ್ಕೆ ತಕ್ಕಂತೆ ನೀತಿ ನಿಯಮಗಳು ಬದಲಾದಂತೆ ಪ್ರಬಲವಾಗಿ ಬೆಳೆಯುತ್ತಿರುವ ಮತ ಧರ್ಮಗಳು ಪ್ರಭಾವ ಬೀರಿದಂತೆ ಪ್ರದರ್ಶಿಸಲ್ಪಡುತ್ತಿದ್ದ ಕಲೆಯ ಸ್ವರೂಪಗಳು ಮತ್ತು ಕಲಾವಿದರು ಸ್ಥಿತ್ಯಂತರಗೊಳ್ಳುತ್ತಾರೆ. ೧೨ನೇ ಶತಮಾನದಲ್ಲಿ ಶರಣ ಧರ್ಮ ಉನ್ನತ ಸ್ಥಿತಿಯಲ್ಲಿತ್ತು. ಎಲ್ಲೆಡೆ ತನ್ನ ಪ್ರಭಾವವನ್ನು ಬೀರಿತ್ತು. ಅನ್ಯ ಧರ್ಮಗಳ ಮುಂದೆ ನನ್ನ ಧರ್ಮ ಶ್ರೇಷ ಎಂದು ಪ್ರತಿಪಾದಿಸುವ ಹಂತವು ಆಗ ಬೆಳೆದಿತ್ತು. ಈ ವಿಚಾರ ಕೇವಲ ಶೈವ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಜೈನ, ಬೌದ್ಧ, ವೈಷ್ಣವ ಧರ್ಮಕ್ಕೂ ಅನ್ವಯವಾಗುತ್ತದೆ. ೯, ೧೦ನೆಯ ಶತಮಾನದಲ್ಲಿ ಉನ್ನತ ಸ್ಥಿತಿಯಲ್ಲಿದ್ದ ಜೈನ ಧರ್ಮವು ತನ್ನ ಧರ್ಮದ ಶ್ರೇಷ್ಠತೆಯನ್ನು ಎತ್ತಿ ತೋರಿಸಲು ಇನ್ನೊಂದು ಧರ್ಮದ ಮೇಲೆ ಹೆಣಗಾಡಿದ್ದುದರ ಬಗೆಗೆ ಉಲ್ಲೇಖಗಳಿವೆ. ಧರ್ಮ ಧರ್ಮದ ನಡುವೆ ಸ್ಪರ್ಧೆಗಳು ಏರ್ಪಟ್ಟಾಗ ಸೋತವರು ಗೆದ್ದವರ ಧರ್ಮ ಸ್ವೀಕರಿಸುತ್ತಿದ್ದರು ಎಂಬುದು ಧರ್ಮಾಮೃತದ ಕಥೆಗಳಿಂದ ತಿಳದು ಬರುತ್ತದೆ. ‘ವಿಷ್ಣುವಿನ ಲೀಲೆಗಳಂತೆ ಶಿವ ಮತ್ತು ಜಿಣರ ಲೀಲೆಗಳನ್ನು ಅಡಿ ತೋರಿಸುವ ಬೇರೆ ಬೇರೆ ಧರ್ಮದ ಜಾತಿಗಾರರ ನಡುವೆ ಆಗಾಗ ಸ್ಪರ್ಧೆಗಳೇರ್ಪಡುತ್ತಿದ್ದವು. ಸೋತವರು ಗೆದ್ದವರ ಮೇಳದಲ್ಲಿ ಸೇರಿಕೊಳ್ಳುತ್ತಿದ್ದರು. [23] ವಿಷ್ಣುವಿನ ದಶರೂಪಗಳ ಲೀಲೆಗಳನ್ನು ಕುರಿತು ಆಟವಾಡಿ ತೋರಿಸುತ್ತಿದ್ದ ಕೊಟ್ಟಗಿರಿಯ ಅಚ್ಯುತನನ್ನು ಚೌಡಯ್ಯ ಸೋಲಿಸಿ ತನ್ನ ಮೇಳದಲ್ಲಿ ಅಚ್ಯುತನನ್ನು ಜೀತದಾಳಾಗಿ ಸೇರಿಸಿಕೊಂಡಿದ್ದ ಎಂಬುದನ್ನು ಗಮನಿಸಬಹುದು. ೧೨ನೆಯ ಶತಮಾನ ಶರಣದರ ಪ್ರಭಾವಕ್ಕೊಳಗಾಗಿದ್ದ ಜನಪದ ಕಲೆಗಳು ಮತ್ತು ಬಹುರೂಪಿಗಳು ಅದನ್ನು ಹಾಗೆಯೇ ಮುಂದುವರಿಸಿಕೊಂಡು ಬಂದವು ಎಂದು ಹೇಳಲಿಕ್ಕೆ ಆಗದು. ಕಾಲಕಾಲಕ್ಕೆ ವಿವಿಧ ಧರ್ಮಗಳ ಪ್ರಭಾವ ಈ ಕಲೆಗಳ ಮೇಲಾಗುತ್ತ ಬಂದಿದೆ. ಹೀಗಾಗಿ ಶರಣೆ ತತ್ವಗಳನನ್ನುಸರಿಸಿದ ಬಹುರೂಪಿಗಳು ಅವರ ಜನಪದ ಕಲೆಗಳು ಮತ್ತು ಗೀತರೂಪಕಗಳು ೨೦ನೆಯ ಶತಮಾನದವರೆಗೆ ಸಾಗಿ ಬಂದು ‘ಶರಣರಾಟ’ ಎಂಬ ರಂಗಪ್ರಕಾರವಾಯಿತು ಎಂದು ಹೇಳಲಿಕ್ಕಾಗದು. ‘ಶರಣರಾಟ’ ಎಂದು ಹೇಳಲ್ಪಟ್ಟಿರುವ ಆಟಗಳನ್ನು ಹೊರತುಪಡಿಸಿದರೂ ಸಣ್ಣಾಟಗಳೆಂದು ಕರೆಯಲ್ಪಟ್ಟಿರುವ ಈ ಆಟಗಳಲ್ಲಿ ಭಕ್ತಿ, ಜ್ಞಾನ, ಸಂಸಾರ, ವೈರಾಗ್ಯ, ಮುಕ್ತಿ, ಮಾಯೆ ಎಷ್ಟು ಪ್ರಮುಖವಾಗಿದೆಯೋ ಅಷ್ಟೇ ಇತರೆ ಪೌರಾಣಿಕ ಮತ್ತು ವೈಷ್ಣವ ಆಟಗಳಲ್ಲಿಯೂ ಕಂಡುಬರುತ್ತದೆ. ಹೀಗಾಗಿ ತಿರುನೀಲಕಂಠ, ಅಲ್ಲಮಪ್ರಭು, ಅಕ್ಕಮಹಾದೇವಿ ಎಂಬ ಸಣ್ಣಾಟದ ತಲೆಬರಹಗಳಿಂದ ಇವು ‘ಶರಣರಾಟ’ಗಳು ಎಂದು ಪ್ರತಿಪಾದಿಸುವುದು ಸೂಕ್ತವೆನಿಸಲಾರದು. ಶಿವಶರಣರ ತತ್ವಗಳ ಮತ್ತು ಸಣ್ಣಾಟಗಳ ತತ್ವಗಳ ನಿರೂಪಣೆಗಳಲ್ಲಿ ವ್ಯತ್ಯಾಸಗಳಿವೆ.

 

[1]ಡಾ. ಶ್ರೀರಾಮ ಇಟ್ಟಣ್ಣವರ, ಸಣ್ಣಾಟ ಭೌಗೋಳಿಕ ಪ್ರಸಾರ, ಪುಟ, ೧೭-೧೮

[2]ಶ್ರೀ ಬೆಟಗೇರಿ ಕೃಷ್ಣಶರ್ಮ, ಜಾನಪದ ನಾಟಕ ನಡೆದು ಬಂದ ದಾರಿ, ಪುಟ, ೨೪

[3]ಆಧುನಿಕ ಕನ್ನಡ ನಾಟಕ, ಪುಟ, ೩೬

[4]ಡಾ. ಆರ್. ಸಿ. ಹಿರೇಮಠ, ಕನ್ನಡ ಬಯಲಾಟ; ಅಲ್ಲಮಪ್ರಭು, ಮುನ್ನುಡಿ iv

[5]ಡಾ. ಎಂ.ಎಸ್. ಸುಂಕಾಪುರ ಕನ್ನಡ ಬಯಲಾಟ; ಅಲ್ಲಮಪ್ರಭು, ಪ್ರಸ್ತಾವನೆ  vi

[6]ಡಾ. ದೇವೇಂದ್ರಕುಮಾರ ಹಕಾರಿ, ಉತ್ತರ ಕರ್ನಾಟಕದ ಸಣ್ಣಾಟಗಳು

[7]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೧೪

[8]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕ ಬಯಲಾಟಗಳು, ಪುಟ, ೨೨

[9]ಸಂ.ಶಿ. ಭೂಸನೂರಮಠ ಸಂ. ವಚನ ಸಾಹಿತ್ಯ ಸಂಗ್ರಹ, ಪುಟ. ೫೮೩

[10]ಅದೇ ಪುಟ, ೫೮೩

[11]ಡಾ. ಆರ್. ಸಿ. ಹಿರೇಮಠ ಮತ್ತು ಡಾ. ಎಂ.ಎಸ್. ಸುಂಕಾಪುರ (ಸಂ) ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಸಂ ೧, ಪುಟ, ೨೨೨ ಮತ್ತು ೨೨೩

[12]ಅದೇ, ಪುಟ ೨೨೩

[13]ಡಾ. ಬಸವರಾಜ ಮಲಶೆಟ್ಟಿ ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೨೪

[14]ಆರ್. ಜಿ. ಕುಲಕರ್ಣಿ ‘ಅರಕೇರ’ ಅಪರಾಳ ತಮ್ಮಣ್ಣ ಕೃತ ಶ್ರೀಕೃಷ್ಣ ಪಾರಿಜಾತ, ಪುಟ, ೪

[15]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೨೪

[16]ಡಾ. ಆರ್.ಸಿ. ಹಿರೇಮಠ (ಸಂ) ದ್ವಿತೀಯ ಮುದ್ರಣ ಚೆನ್ನಬಸವಣ್ಣನ ವಚನಗಳು, ಪುಟ, ೯೨೨

[17]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೨೪

[18]ಡಾ. ಆರ್. ಸಿ. ಹಿರೇಮಠ (ಸಂ) ಬಸವ ಪುರಾಣ ೨೮,೩

[19]ಅದೇ ೨೧, ೪

[20]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೨೫

[21]ಆರ್. ಜಿ. ಕುಲಕರ್ಣಿ ‘ಅರಕೇರ’ ಅಪರಾಳ ತಮ್ಮಣ್ಣ ಕೃತ ಶ್ರೀಕೃಷ್ಣ ಪಾರಿಜಾತ, ಪುಟ, ೨೫

[22]ಅದೇ ಪುಟ, ೨೬

[23]ಅದೇ, ಪುಟ ೨೦ ಮತ್ತು ೨೧