ವೈಷ್ಣವ ಪಂಥ

ವೈಷ್ಣವ ಸಣ್ಣಾಟಗಳು ಎಂದು ಕರೆಯಲ್ಪಟ್ಟಿರುವ ಈ ಆಟಗಳ ಹಿನ್ನೆಲೆ ಕುರಿತು ಯೋಚಿಸುವುದು ಇಲ್ಲಿ ಅಗತ್ಯವಾಗಿದೆ. ‘ಉತ್ತರ ಕರ್ನಾಟಕದ ಬಯಲಾಟಗಳೆಲ್ಲ ಒಂದಿಲ್ಲೊಂದು ಧಾರ್ಮಿಕ ಆಂದೋಲನವನ್ನು ಆಧರಿಸಿಯೇ ಹುಟ್ಟಿ ಬಂದಿವೆ. ಧಾರ್ಮಿಕ ಚಳುವಳಿಯಾಗಿ ಒಂದು ಪಂಥದ ತತ್ವವನ್ನು ಸ್ವೀಕಾರ ಮಾಡುವುದಷ್ಟೇ ತಡ ಆ ತತ್ವ ಸಾಮಾನ್ಯನಿಗೆ ಹೋಗುವಾಗ ಸಗುಣವಾಗಿ ಕಥೆಯ ಮೈತೊಟ್ಟು ಬಯಲಾಟವಾಗಿದೆ. ಆದ್ದರಿಂದ ಸದ್ಯಕ್ಕೆ ಪ್ರಚಾರದಲ್ಲಿರುವ ಬಯಲಾಟಗಳನ್ನು ಈ ಮತ ಪಂಥಗಳ ಇತಿಹಾಸದ ಬೆಳಕಿನಲ್ಲಿ ನೋಡಬಹುದು[1] ಎಂಬ ಅಭಿಪ್ರಾಯ ಸರಿಯಲ್ಲ. ಜನಪದರ ಸಮೂಹಗಳ ಮಧ್ಯೆ ಬಾಳಿ ಬದುಕಿದ, ಪ್ರಾಚೀನ ಶಿಷ್ಟ ಕವಿಗಳೆನಿಸಿ ಕೊಂಡ ಅನೇಕರು ಒಂದಿಲ್ಲ ಒಂದು ಧರ್ಮದ ಚೌಕಟ್ಟಿಗೊ ಅಥವಾ ಧರ್ಮದ ನಿಯಂತ್ರಣಕ್ಕೊ ಒಳಪಟ್ಟಿರುವುದನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣುತ್ತೇವೆ. ವಡ್ಡಾರಾಧನೆಯ ಕರ್ತೃ ಶಿವಕೋಟಾಚಾರ್ಯ ಈ ಹಿನ್ನೆಲೆಯಲ್ಲಿ ಬೆಳೆದು ಬಂದವ. ಇವನಿಗೆ ರಾಜಾಶ್ರಯ ಇರಲಿಲ್ಲ. ಜನಪದರ ಮಧ್ಯೆ ಬಾಳಿ ಬದುಕಿದ ಇವನು ಅಂದು ಜನಪ್ರಿಯವಾಗಿದ್ದ ಜನಪದ ಕಥೆಗಳನ್ನು ಹೇಗೆ ಬಳಸಿಕೊಂಡು ಅದರಲ್ಲಿ ಜೈನ ಧರ್ಮದ ತತ್ವಗಳನ್ನು ತುಂಬಿ ತನ್ನ ಪರಿಸರದ ಜನತೆಗೆ ಆ ಧರ್ಮದ ತತ್ವಗಳನ್ನು ಬಿತ್ತರಿಸಿದ ಎಂಬುದು ಗೊತ್ತಿರುವ ಸಂಗತಿ. ವಡ್ಡಾರಾಧನೆಯ ಕಥೆಗಳಲ್ಲಿಯ ಜೈನಧರ್ಮದ ಚೌಕಟ್ಟನ್ನು ತೆಗೆದು ಹಾಕಿದರೆ ಅಲ್ಲಿರುವ ಬಹುತೇಕ ಕಥೆಗಳು ಜನಪದ ಕಥೆಗಳೇ ಎಂದು ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ವಡ್ಡಾರಾಧನೆ ಕೃತಿ ಲಿಖಿತ ರೂಪದಲ್ಲಿದ್ದು ಅದು ಲಭ್ಯವಿದ್ದದ್ದರಿಂದ ಜನಪದ ಕಥೆಗಳನ್ನು ಒಂದು ಕಾಲಕ್ಕೆ ಒಂದು ಧರ್ಮ ತನ್ನ ತತ್ವಗಳನ್ನು ಬಿತ್ತರಿಸುವುದಕ್ಕೆ ಹೇಗೆ ಬಳಸಿಕೊಂಡಿತ್ತು ಎಂಬುದನ್ನು ಗಮನಿಸಲು ಸಾಧ್ಯವಾಗಿದೆ. ಸಮಾಜದಲ್ಲಿ ಅಂದು ಜನಪ್ರಿಯವಾಗಿದ್ದ ಅನೇಕ ಜಾನಪದ ಮಾಧ್ಯಮಗಳನ್ನು ಧರ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಅನೇಕ ಜನಪದ ಕಲಾ ಮಾಧ್ಯಮಗಳು ಕಾಲಕಾಲಕ್ಕೆ ಧಾರ್ಮಿಕ ಬದಲಾವಣೆಗಳಿಗೆ ಸ್ಪಂದಿಸುತ್ತ ಹಳೆಯದನ್ನು ಕಳಚಿಕೊಳ್ಳುತ್ತ ಹೊಸದನ್ನು ತುಂಬಿಕೊಳ್ಳುತ್ತ ಜನಪ್ರಿಯವಾಗುತ್ತ ಇಲ್ಲಿಯವರೆಗೆ ಸಾಗಿ ಬಂದಿವೆ. ಆದರೆ ಅವುಗಳಿಗೆ ದಾಖಲೆಗಳಿಲ್ಲ. ನಾವು ಒಂದು ಕಾಲಘಟ್ಟದಲ್ಲಿ ನಿಂತುಕೊಂಡು ಗುರುತಿಸಿರುವ ಧರ್ಮದ ಚೌಕಟ್ಟು ಆ ಕಲೆಗಳಲ್ಲಿ ಇಂದೂ ಇದೆ ಎಂದು ಅರ್ಥೈಸಿಕೊಳ್ಳಲಾಗದು. ಧರ್ಮಕ್ಕೂ ಜನಪದ ಕಲೆಗಳು ನಂಟಿದೆ. ಕಾಲಕಾಲಕ್ಕೆ ಜನಪದ ಕಲೆಗಳು ಧರ್ಮದ ಪ್ರಭಾವಕ್ಕೆ ಒಳಗಾಗಿ, ರೂಪಾಂತರಗೊಳ್ಳುತ್ತ ಬಂದಿವೆ.

‘ವೈದಿಕ ಸಂಪ್ರದಾಯದಲ್ಲಿ ಸೇರಿಕೊಂಡ ಭಕ್ತಿಪಂಥ ದಕ್ಷಿಣದ ಆಳ್ವಾರರಿಂದ ಅಸ್ತಿತ್ವ ಉಳಿಸಿಕೊಂಡು ಮುಂದೆ ರಾಮಾನುಜರಿಂದ ಗಟ್ಟಿಯಾಗಿ ಕಾಲೂರಿ ಮಧ್ವಾಚಾರ್ಯರ ಮೂಲಕ ಕರ್ನಾಟಕದ ಧಾರ್ಮಿಕ ನೆಲೆಯಲ್ಲಿ (ಭಕ್ತಿ ಪಂಥ) ಒಂದು ಮಹಾ ಸಂಘಟನೆಯಾಗಿ ಬೆಳೆಯಿತು’ ‘ಕೃಷ್ಣ’ ರುಕ್ಮಿಣಿಯರ ಪ್ರೇಮ ಭಕ್ತಿಗೆ ಈ ಭಕ್ತಿ ಪಂಥವೇ ಪ್ರೇರಕವಾಯಿತು.

ಇದರೊಂದಿಗೆ ಪೂರ್ವ ಭಾರತದ ಚೈತನ್ಯ ದೇವನು ವಾದ್ಯಗಳೊಂದಿಗೆ ಮೇಳವಾಗಿ ಕೀರ್ತನೆ, ನಾಗರ ಕೀರ್ತನೆಗಳನ್ನು ಹಾಡಿ ದಿವ್ಯೋನ್ಮಾದದಿಂದ ನರ್ತನ ಮಾಡಿ ದಕ್ಷಿಣಾ ಪಥವನ್ನು ಸುತ್ತಾಡಿದ ಪರಿಣಾಮವಾಗಿ ‘ರಾಧಾ-ಕೃಷ್ಣ’ರ ಮಧುರ ಭಕ್ತಿಯೂ ಮಿಳಿತವಾಯಿತು. ಹೀಗೆ ಸತಿ-ಪತಿ ಭಾವದ ಪ್ರೇಮ ಭಕ್ತಿಯೂ, ರಾಧಾ-ಕೃಷ್ಣ ಭಾವದ ಮಧುರ ಭಕ್ತಿಯೂ ಕರ್ನಾಟಕ ರಂಗದಲ್ಲಿ ಸಮಸಮವಾಗಿ ಪ್ರಭಾವವನ್ನು ಬೀರಿದವು. ಸಣ್ಣಾಟಗಳ ಸೊಬಗಿಗೆ ಮಧುರ ಭಕ್ತಿಯ ಮೋಹಕ ರಸದಾರೆ ಸಂಜೀವನವನ್ನು ಸಿಂಚಿಸಿತು’[2] ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ.

‘೧೦ನೆಯ ಶತಮಾನ ಕಾಲಕ್ಕೆ ವಿಷ್ಣುಭಕ್ತಿಯ ಅವತಾರಗಳೆಲ್ಲ ಮುಗಿದು ವಿಷ್ಣು ಭಕ್ತಿಯಲ್ಲಿ ಕೃಷ್ಣ ಭಕ್ತಿ, ರಾಮ ಭಕ್ತಿ ಎಂದು ಕವಲೊಡೆದು ಕೃಷ್ಣ ಭಕ್ತಿಯಲ್ಲಿ ರುಕ್ಮಿಣಿ ಕೃಷ್ಣರನ್ನು ‘ಕಾಂತಾಭಾವ ಭಕ್ತಿ’ ಯಿಂದ ಪೂಜಿಸುವ ಪಂಥ ಜ್ಞಾನೇಶ್ವರರ ಮುಂದಾಳತ್ವದ ಮೂಲಕ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿತು. ಬಂಗಾಲದಲ್ಲಿ ರಾಧಾಕೃಷ್ಣರನ್ನು ‘ಮಧುರ ಭಾವ ಭಕ್ತಿ’ಯಿಂದ ಆರಾಧಿಸುವ ಪಂಥ ಹುಟ್ಟಿಕೊಂಡಿತು. ಆಶ್ಚರ್ಯದ ಮಾತೆಂದರೆ ಉತ್ತರ ಕರ್ನಾಟಕದ ಬಯಲಾಟಗಳು ಮಹಾರಾಷ್ಟ್ರದಲ್ಲಿ ಆಗಲೇ ಪ್ರಚಲಿತವಿದ್ದ ರುಕ್ಮಿಣಿ ಕೃಷ್ಣರ ಪಂಥ ನಿರಾಕರಿಸಿ ರಾಧಾಕೃಷ್ಣಭಕ್ತಿ ಪಂಥದ ಪ್ರಭಾವವನ್ನು ಒಪ್ಪಿಕೊಂಡು ತಮ್ಮ ಸ್ವರೂಪವನ್ನು ಬದಲಿಸಿಕೊಂಡವು. ವಿಠ್ಠಲ ಭಕ್ತಿ, ರಾಧಾಕೃಷ್ಣ ಭಕ್ತಿ ಹೆಚ್ಚು ಕಡಿಮೆ ಏಕಕಾಲಕ್ಕೆ ದಕ್ಷಿಣಕ್ಕೆ ಬಂದಿದ್ದರೂ ಬಯಲಾಟಗಳಲ್ಲಿ ರಾಧಾಕೃಷ್ಣ ಭಕ್ತಿಯನ್ನೇ ಸ್ವೀಕಾರ ಮಾಡಿದುದರಲ್ಲಿ ಶಕ್ತಿ ಪಂಥದ ಪ್ರಭಾವವೇ ಸ್ಪಷ್ಟವಾಗಿದೆ. [3] ರಾಧಾಕೃಷ್ಣರ ಭಕ್ತಿಯಲ್ಲಿ ಶಕ್ತಿ ಪಂಥ ಹೇಗೆ ಪ್ರವೇಶಿಸಿತು ಎಂಬುದನ್ನು ಡಾ. ಚಂದ್ರಶೇಖರ ಕಂಬಾರರು ರಾಧಾಕೃಷ್ಣರ ಸರಸ ಸಲ್ಲಾಪದ ಕಥೆ ಹುಟ್ಟಿಕೊಳ್ಳಲಿಕ್ಕೆ ಆಭೀರರ (ಗೊಲ್ಲರ) ಕೆಲ ಸ್ಥಳಿಕ ದೇವತೆಗಳೂ ಕಾರಣವಾಗಿವೆ. ಇದು ನಡೆದದ್ದು ಕ್ರಿ.ಶ. ೮೦೦ ಸುಮಾರಿಗೆ. ಆದರೆ ಈ ಕಲ್ಪನೆಯ ಹಿಂದಿರುವ ತಾಂತ್ರಿಕರ ಪ್ರಭಾವವನ್ನು ಮಾತ್ರ ಮರೆಯುವಂತಿಲ್ಲ. ಆ ಭಾಗದಲ್ಲಾಗಲೇ ತಾಂತ್ರಿಕರ ಶಕ್ತಿ ಪಂಥ ಜನಮನವನ್ನು ಅತಿಯಾಗಿ ಆಕರ್ಷಿಸಿದ್ದರಿಂದ ವೈಷ್ಣವ ಪಂಥ ಅಲ್ಲಿ ಬದುಕಬೇಕಾದರೆ ಇಂಥ ವೇಷ ಧರಿಸುವುದು ಅನಿವಾರ್ಯವಾಗಿರಲೂಬಹುದು ಎಂದು ಅಭಿಪ್ರಾಯಪಡುತ್ತಾರೆ.

‘೧೨ನೆಯ ಶತಮಾನದಿಂದಲೇ ಭಕ್ತಿ ಆಂದೋಲನದ ಅಂಗವಾಗಿ ಗುಡಿ ಗುಂಡಾರಗಳಲ್ಲಿ ದೇವ ಮಂದಿರಗಳಲ್ಲಿ ದೇವರ ‘ರಂಗಭೋಗ’ಕ್ಕಾಗಿ ನೃತ್ಯಗಾಯನವನ್ನೇ ಕಸಬಾಗಿರುವ ಒಂದು ಸಂಪ್ರದಾಯವನ್ನು ನಿಯೋಜಿಸಲಾಯಿತು. ಈ ಸಂಪ್ರದಾಯದವರು ದೇವರಲ್ಲಿ ಅನನ್ಯ ಭಕ್ತಿಯನ್ನಿಟ್ಟ ‘ದೇವದಾಸ’ರು ಈ ದಾಸರ ಸಂಪ್ರದಾಯವೇ ಬೆಳೆದು ‘ಸಮಾಜ ಕುಲ’ದ ರೂಪವನ್ನು ತಳೆಯಿತು. ವಂಶಪರಂಪರಾಗತವಾಗಿ ಈ ಜನ, ದೇವರ ಉತ್ಸವದ ಕಾಲದಲ್ಲಿ ನೃತ್ಯ, ಗಾಯನ, ಅಭಿನಯಗಳ ಸೇವೆಯನ್ನು ಸಲ್ಲಿಸುವವರಾದರು. ಭಗವಂತನ ವಿವಿಧ ಲೀಲೆಗಳನ್ನು, ದಾಸರ ಪದಗಳ ಭಗವದ್ಭಕ್ತರ ಗೀತೆಗಳ ಹೊಂದಾಣಿಕೆಯೊಂದಿಗೆ ಅಭಿನಯಿಸಿ ತೋರಿಸುವ ಪರಿಪಾಠ ಬಿದ್ದಿತು. ಭಗವಂತನ ದಶರೂಪಗಳನ್ನು, ಅವತಾರ ಲೀಲೆಗಳನ್ನು ನಟಿಸುವ ಪರಿಪಾಠ ಇಂದಿಗೂ ಇದೆ. ಈ ದಾಸರಲ್ಲಿ ಹೆಣ್ಣು ದಾಸರು, ಗಂಡು ದಾಸರು ಎಂದು ಸ್ತ್ರೀ ಪುರುಷರಿಬ್ಬರಿಗೂ ನೃತ್ಯ ಗೀತ ಸೇವೆ ಸಲ್ಲಿಸುವ ಅಧಿಕಾರವಿದೆ. ಗ್ರಾಮೀಣ ದೇವಾಲಯಗಳಲ್ಲಿ ಪಲ್ಲಕ್ಕಿ ಸೇವೆ, ಜಾತ್ರೆ, ಉತ್ಸವಗಳಲ್ಲಿ ದೇವರ ಮುಂದೆ ದಾಸರು ಹಾಡುವ, ಕುಣಿಯುವ ಪರಿಪಾಠವಿದೆ. ಇವರಿಗೆ ಈ ಕಾರ್ಯಕ್ಕಾಗಿ ಪರಂಪರೆಯ ದತ್ತಿಗಳೂ ಇವೆ. ನೃತ್ಯ ಗೀತ ಸೇವೆ ಸಲ್ಲಿಸುವ ಅಧಿಕಾರವಿದೆ. ಭಗವಂತನ ಲೀಲಾ ನಾಟಕಗಳನ್ನು ಹೆಚ್ಚಾಗಿ ಶ್ರೀಕೃಷ್ಣ ಲೀಲೆಗಳನ್ನು ಅಭಿನಯಿಸುವ ಪರಿಪಾಠವೇ ‘ದಾಸರಾಟ’ದ ಪರಂಪರೆಗೆ ಮೂಲವಾಯಿತು.[4] ಶ್ರೀಕೃಷ್ಣ ಲೀಲೆಗಳನ್ನು ಮತ್ತು ಅವನ ಅವತಾರಗಳನ್ನು ರಾಧಾನಾಟದಲ್ಲಿ ಸೇರಿಸಿಕೊಳ್ಳಲು ರಾಧಾಕೃಷ್ಣರ ಭಕ್ತಿ ಪಂಥ ಪ್ರೇರಣೆಯಾಯಿತು.

ಹರಿದಾಸರ ಪರಂಪರೆ ಕೃಷ್ಣ ದೇವರಾಯನ ಮೂಲಕ ವಿಜಯನಗರವನ್ನು ಪ್ರವೇಶಿಸಿತು. ಪುರಂದರದಾಸರು, ಕನಕದಾಸರು ಜನ ಸಾಮಾನ್ಯರ ಭಾಷೆಯಲ್ಲಿಯೇ ಹಾಡುಗಳನ್ನು ಹಾಡುತ್ತ ಸಂಚರಿಸಿ ಜನರಲ್ಲಿ ಭಕ್ತಿಯ ಬೀಜವನ್ನು ಬಿತ್ತಿದರು. ಭಕ್ತಿ ನಿವೇದನೆಗೆ ಹಾಡಿಗಿಂತ ಉತ್ತಮ ಮಾಧ್ಯಮ ಬೇರಾವುದಿಲ್ಲ’ ಎಂದು ದಾಸರು ನಂಬಿದ್ದರು. ವಿಜಯನಗರ ಅರಸರ ಕಾಲಕ್ಕೆ ಜನಪದ ನಾಟಕಗಳು ಪ್ರದರ್ಶಿಸಲ್ಪಡುತ್ತಿದ್ದವು. ಹಳ್ಳಿ ಹಳ್ಳಿಗಳಲ್ಲಿ ಮೆರೆಯುತ್ತಿದ್ದ ಬಯಲಾಟಗಳನ್ನು ಕಂಡು ಅನುಭವಿಸಿದ ಪುರಂದರದಾಸರು ‘ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ’ ಎಂದು ಡಂಭಾಚಾರಿಗಳನ್ನು ನಿಂದಿಸಿದ್ದಾರೆ.[5] ಈ ಹೇಳಿಕೆಯಿಂದ ಪುರಂದರಾದಿ ದಾಸರು ಬಯಲಾಟಗಳನ್ನು ಪ್ರದರ್ಶಿಸುವ ಅಥವಾ ಆ ಮೂಲಕ ವೈಷ್ಣವ ಧರ್ಮ ಪ್ರಚಾರಕ್ಕೆ ಕೈ ಹಾಕಿದವರಲ್ಲ. ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ದೇವದಾಸ, ದಾಸಿಯರಿಗೆ ರಾಜ ಮಹಾರಾಜರ ಆಶ್ರಯ ತಪ್ಪಿದ ಮೇಲೆ ಅವರು ನಿರ್ಗತಿಕರಾದರು. ದೇವಸ್ಥಾನಕ್ಕಷ್ಟೇ ಮೀಸಲಾಗಿದ್ದ ಅವರ ಕಲಾಸೇವೆ ದೇವಸ್ಥಾನದ ಹೊರಗೆ ಉಪಜೀವನಕ್ಕಾಗಿ ಪ್ರದರ್ಶಿಸುವುದು ಅನಿವಾರ್ಯವಾಯಿತು. ಮೊದ ಮೊದಲು ಭಕ್ತಿಯನ್ನೇ ಪ್ರಧಾನವಾಗಿಟ್ಟುಕೊಂಡು ಕೃಷ್ಣ ರಾಧೆಯರ ಮಧುರ ಪ್ರಣಯ ಭಾವವನ್ನು ನೃತ್ಯ ಹಾಡುಗಳ ಮೂಲಕ ಅಭಿವ್ಯಕ್ತಪಡಿಸುತ್ತಿದ್ದರು. ಈ ಕಥೆ ಪ್ರೇಕ್ಷಕರಿಗೆ ರುಚಿಸದಿದ್ದಾಗ ಅವರ ಆಸೆಗಳಿಗೆ ಸ್ಪಂದಿಸುವಂತಹ ಹರಕು ಮುರುಕಾದ ಅತಿಯಾದ ಶೃಂಗಾರ ಭಾವವುಳ್ಳ ಆಟಗಳನ್ನು ಆಡತೊಡಗಿದರು. ದೇವದಾಸರು ದೇವಸ್ಥಾನಗಳ ನಂಟು ಕಳೆದುಕೊಂಡ ಮೇಲೆ ರಾಧಾನಾಟದಲ್ಲಿ ಭಾಗವಹಿಸಿ ನಂತರ ತಮ್ಮದೇ ಆದ ಪರಂಪರೆಯುಳ್ಳ ದಾಸರಾಟವನ್ನು ಹುಟ್ಟು ಹಾಕಿದಂತೆ ತೋರುತ್ತದೆ.

ಶಕ್ತಿ ಪಂಥ

‘ಉತ್ತರ ಕರ್ನಾಟಕದ ಮಟ್ಟಿಗಂತೂ ಶುದ್ಧ ಜಾನಪದ ನಾಟ್ಯವೆಂದರೆ ಸಣ್ಣಾಟವೇ ಆಗಿದೆ. ಪರಂಪರೆಯ ಸ್ವರೂಪ ತಿಳಿಸಬಲ್ಲ ಪಳೆಯುಳಿಕೆಗಳೆಂದರೆ ಬಹುರೂಪದವರು, ರಾಧಾಕೃಷ್ಣರ ಕಲ್ಪನೆ, ಕಲ್ಗಿ ತುರಾ (ಹರದೇಶಿ-ನಾಗೇಶಿ) ಮತ್ತು ಇಂದಿಗೂ ಇರುವ ಕೆಲವು ರಂಗಪದ್ದತಿ ಇವಿಷ್ಟೇ ಆಗಿವೆ. ಕಲ್ಗಿತುರಾ, ಶಕ್ತಿ ಪಂಥ ಮೂಲಕ ಜಾನಪದಲ್ಲಿ ಹೆಸರುವಾಸಿಯಾಗಿದ್ದು ರಾಧಾಕೃಷ್ಣರ ಕಲ್ಪನೆ ಪ್ರಚಾರಗಳಿಗೆ ಮೂಲ ಪ್ರೇರಣೆಯಾಗಿದೆ. ಉತ್ತರ ಕರ್ನಾಟಕದ ಲಾವಣಿ, ಶಾಹೀರಕಿ, ಬಯಲಾಟ ಮುಂತಾದ ಜಾನಪದ ಕಲೆಯ ಯಾವ ತಿರುವಿನಲ್ಲಿಯೂ ಈ ಪಂಥದ ಚರ್ಚೆ ಬರುತ್ತದೆ. ಇಷ್ಟಕ್ಕೇ ನಿಲ್ಲದೆ ಶಕ್ತಿ ಹೆಚ್ಚೆಂಬ ಹರದೇಶಿ, ಶಿವ ಹೆಚ್ಚೆಂಬ ನಾಗೇಶಿ ಹೀಗೆ ಶಾಶ್ವತವಾದ ಪಂಗಡಗಳೇ ಉಂಟಾದವು. ಶಕ್ತಿ ಪಂಥದಷ್ಟು ತೀರ್ವವಾಗಿ ಯಾವ ಪಂಥವೂ ಬೆಳೆದಿರಲಾರದು. ಶಕ್ತಿ ಪಂಥ ಇದು ಕಾಶಿಯ ಕಡೆಯಿಂದ ಬಂತೆಂಬ ವದಂತಿಯಿದೆ. ಲಾವಣಿಕಾರರೇ ಇದರ ಹುಟ್ಟಿನ ಬಗೆಗೆ ಹೀಗೆ ಹೇಳುತ್ತಾರೆ.

ಪುಟ್ಟಿ ಇಲ್ಲಿಗೆ ತುರಾಕಲ್ಗಿ ಚರ್ಚೆ ತಿಳಿಯೆಲೋ ಷಾಹಿರ
ಒಟ್ಟು ಸಾವಿರದೊಂಬೈನೂರ ವರುಷಗಳ ಮೇಲ್ ಚಿಲ್ಲಾ ||[6]

ಶಕ್ತಿ ಪಂಥ ರೂಪ ಪಡೆದುಕೊಂಡದ್ದು ಆದಿಮಾನವ ಕೃಷಿ ಹಂತದಲ್ಲಿದ್ದಾಗ ಆದಿಮಾನವನ ಬೇಟೆ, ಪಶುಪಾಲನೆ, ಕೃಷಿ ಈ ಹಂತದಲ್ಲಿ ಪ್ರಕೃತಿಯ ಶಕ್ತಿಗಳನ್ನು ಆರಾಧಿಸಿದ ಬುದ್ಧಿ ಬೆಳವಣಿಗೆಯಾದಂತೆ ಸ್ತ್ರೀಗೆ ಮಾತೃದೇವತೆಯ ಸ್ಥಾನ ನೀಡಿ ಆರಾಧಿಸಿದ. ಬೇಟೆಯ ಹಂತದಲ್ಲಿ ಪ್ರಕೃತಿ ಆರಾಧಕನಾಗಿದ್ದ ಆದಿ ಮಾನವ ಕೃಷಿ ಹಂತಕ್ಕೆ ಬಂದಾಗ ‘ಹೆಣ್ಣಿನ ಗರ್ಭಧಾರಣೆ ಮತ್ತು ಭೂಮಿಯ ಸಸ್ಯಧಾರಣೆ ಇವೆರಡಕ್ಕೂ ಸಾಮ್ಯತೆ ಕಂಡುಕೊಂಡ ಹೆಣ್ಣು ಮತ್ತು ಭೂಮಿ ಇವೆರಡೂ ಪೂಜ್ಯ ವಸ್ತುಗಳೆಂದು ಭಾವಿಸಿದ ಹೆಣ್ಣು ಮತ್ತು ಪ್ರಕೃತಿಯಲ್ಲಿ ಅಡಗಿರುವುದು ಒಂದೇ ಶಕ್ತಿ ಎಂದು ತಿಳದು ಶಕ್ತಿಯ ಆರಾಧನೆ ಪ್ರಾರಂಭಿಸಿದ.

ಮನುಷ್ಯನ ಪ್ರಥಮ ಆರ್ಥಿಕ ಚಟುವಟಿಕೆಯಾದ ಆಹಾರ ಸಂಗ್ರಹಣೆಯ ಹಂತದಲ್ಲಿ ಸ್ತ್ರೀಯ ಪಾತ್ರ ಪ್ರಧಾನವಾಗಿತ್ತು. ಮಕ್ಕಳನ್ನು ಹೆರುವುದಲ್ಲದೇ ಅವರನ್ನು ಪಾಲನೆ ಮಾಡುವ ಮತ್ತು ಬೆಳೆಸುವ ಹೊಣೆಗಾರಿಕೆ ಅವಳದಾಗಿತ್ತು. ಎಲ್ಲ ಪದ್ಧತಿಗಳು ಮತ್ತು ಸಾಂಸ್ಕೃತಿಕ ಲಕ್ಷಣಗಳು ಹೆಣ್ಣಿನ ಮೂಲಕವೇ ಸಂವಹನ ಗೊಳ್ಳುತ್ತಿದ್ದವು. ಹೆಣ್ಣು ಒಂದು ಜನಾಂಗದ ಸಂಕೇತವಷ್ಟೇ ಅಲ್ಲ ಜೀವೋತ್ಪತ್ತಿಯ ಮೂಲ ಶಕ್ತಿಯಾಗಿದ್ದಳು. ಆಕೆಯ ಅಂಗಾಂಗಗಳು ಮತ್ತು ಗುಣ ಶಕ್ತಿಗಳಿಗೆ ಸೃಷ್ಟಿ ಶಕ್ತಿಯ ಸಾಮರ್ಥ್ಯವಿದೆಯೆಂದು ಭಾವಿಸಲಾಯಿತು. ಅವುಗಳನ್ನು ಚೈತನ್ಯ ಶಕ್ತಿಯ ಸಂಕೇತಗಳೆಂದು ತಿಳಿಯಲಾಯಿತು. ಸಮಾಜದ ಬೆಳವಣಿಗೆಯ ಮೊದಲ ಹಂತದಲ್ಲಿ ಮಾತೃವೇ ಧರ್ಮದ ಕೇಂದ್ರ ಸ್ಥಾನದಲ್ಲಿದ್ದಳು. ಆಹಾರ ಸಂಗ್ರಹಣೆ ಮತ್ತು ಆಹಾರ ಉತ್ಪಾದನೆ ಸ್ತ್ರೀಯ ಕರ್ತವ್ಯವಾಗಿತ್ತು. ಇದರಿಂದ ಸ್ತ್ರೀಯ ಸ್ಥಾನಮಾನ ಹೆಚ್ಚಿತು. ಈ ಮಾನ್ಯತೆ ಅವಳನ್ನು ದೈವತ್ವಕ್ಕೇರಿಸುವವರೆಗೆ ಹೋಯಿತು.[7]

ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಒಂದಿಲ್ಲ ಒಂದು ಶಕ್ತಿ ಇದೆ ಎಂದು ತಿಳಿದಿದ್ದ ಆದಿಮಾನವ ಆ ಎಲ್ಲ ಶಕ್ತಿಗಳಿಗೆ ಕೇಂದ್ರಬಿಂದು ಸ್ತ್ರೀ ಎಂದು ಶಕ್ತಿ ದೇವತೆಯನ್ನು ಆರಾಧಿಸತೊಡಗಿದ. ಮಾನವ ವಿಕಾಸಗೊಂಡಂತೆ ಶಕ್ತಿಪೂಜೆ ದಿನೇ ದಿನೇ ಹೆಚ್ಚಾದಂತೆ ವಿಶ್ವವನ್ನೆಲ್ಲ ಈ ಶಕ್ತಿಯೇ ನಿಯಂತ್ರಿಸುತ್ತದೆ. ಅವಳನ್ನೇ ನಾವು ಆರಾಧಿಸಿ ಅವಳಲ್ಲಿರುವ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು. ಆ ಶಕ್ತಿಯಿಂದ ನಾವು ವಿಶ್ವವನ್ನು ನಿಯಂತ್ರಿಸಬಹುದು ಎಂಬ ಪರಿಕಲ್ಪನೆ ಅನೇಕ ತಾಂತ್ರಿಕ ಪಂಥಗಳಲ್ಲಿ ಹುಟ್ಟಿಕೊಂಡಿತು. ಈ ಹಿನ್ನೆಲೆಯಲ್ಲಿ ಹುಟ್ಟಿದ ತಾಂತ್ರಿಕ ಪಂಥಗಳು ಶಕ್ತಿ ಆರಾಧನೆ ಪ್ರಾರಂಭಿಸಿದವು. ಪೇಯ್ನ ಎಂಬ ವಿದ್ವಾಂಸ ತನ್ನ ‘ದಿ ಶಾಕ್ತಾಜ’ ಎಂಬ ಪುಸ್ತಕದಲ್ಲಿ ಶಕ್ತಿಪೂಜೆಯ ಪಂಥ ಭಾರತದಲ್ಲಿ ಕ್ರಿ.ಪೂ. ೩೦೦೦ ವರ್ಷದಷ್ಟು ಪ್ರಾಚೀನ ಕಾಲದಿಂದಲೇ ರೂಪಗೊಂಡಿರುವುದನ್ನು ಗುರುತಿಸುತ್ತಾನೆ. ಅಂದಿನಿಂದಲೇ ಶಕ್ತಿ ಪೀಠಗಳು ಹೆಚ್ಚಾಗಿ ನಿಶಾಚರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟವು.ಈ ಪಂಥದ ಅನುಯಾಯಿಗಳು ಘೋರವಾದ ಉಗ್ರ ತಪಸ್ಸನ್ನು ಆಚರಿಸುತ್ತಿದ್ದರು. ಸಾಮಾನ್ಯ ಜನರನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ. ತಮ್ಮ ಮೂಲಭೂತವಾದ ಬೇಡಿಕೆಗಳನ್ನು ಪಡೆದುಕೊಳ್ಳಲು ಮಾತ್ರ ಜನರನ್ನು ಬಳಸಿಕೊಳ್ಳುತ್ತಿದ್ದರು. ಅವರು ಯೋಗ, ಯಂತ್ರ, ಮಂತ್ರ, ಮೋಡಿ, ರಸ ವಿದ್ಯೆ, ವನಸ್ಪತಿ ಮುಂತಾದವುಗಳ ಬಗೆಗೆ ದಿವ್ಯಜ್ಞಾನ ಹೊಂದಿವರಾಗಿದ್ದರು. ಯೋಗ ತತ್ವದ ಮೂಲಕ ತಮ್ಮ ದೇಹವನ್ನು ವಜ್ರ ಮಾಡಿಕೊಂಡವರಾಗಿದ್ದರು. ಇವರನ್ನು ಕಂಡರೆ ಜನರು ಮಾತ್ರವಲ್ಲ ರಾಜ ಮಹಾರಾಜರು ಭಯ ಭಕ್ತಿಯಿಂದ ಕಾಣುತ್ತಿದ್ದರು. (ತಾಂತ್ರಿಕ ಪಂಥಗಳು ಜನಪ್ರಿಯವಾಗಿದ್ದ ಪ್ರದೇಶಗಳಲ್ಲಿ ವೈಷ್ಣವ ಪಂಥ ಅಸ್ತಿತ್ವ ಉಳಿಸಿಕೊಳ್ಳಲು ರಾಧಾಕೃಷ್ಣರ ಪಂಥದಲ್ಲಿ ಮಾತೃದೇವತೆಯ ಎಲ್ಲ ಗುಣಗಳನ್ನು ತೊಡಿಸಿದ್ದರು ಎಂದು ಹೇಳುವ ಕಂಬಾರರ ಮಾತನ್ನು ಇಲ್ಲಿ ಅನುಮೋದಿಸಬಹುದು) ಇವರು ಶಕ್ತಿಯನ್ನು ಒಲಿಸಿಕೊಳ್ಳಲು ಬಲಿ ನರಬಲಿಗಳನ್ನು ಕೊಡುತ್ತಿದ್ದರು. ಈ ಎಲ್ಲ ಅಂಜಿಕೆಗಳಿಂದ ಈ ಸಿದ್ಧರು ವಾಸಿಸುತ್ತಿದ್ದ ಸ್ಥಳಗಳಿಗೆ ಜನ ಸಾಮಾನ್ಯರು ಹೋಗುತ್ತಿರಲಿಲ್ಲ. ಶಾಕ್ತಪಂಥ ಮೊದಲು ಉತ್ತರ ಭಾರತದಲ್ಲಿ ಹುಟ್ಟಿ ನಂತರ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ೧೩ನೆಯ ಶತಮಾನದವರೆಗೆ ಶಾಕ್ತಪಂಥ ಅತ್ಯಂತ ಪ್ರಬಲವಾಗಿತ್ತು ಎಂದು ತಿಳಿಯುತ್ತದೆ. ‘ಕರ್ನಾಟಕದಲ್ಲಿ ಸುಮಾರು ಕ್ರಿ.ಪೂ. ೪-೫ನೆಯ ಶತಮಾನದಿಂದ ಶಕ್ತಿ ಆರಾಧನೆ ಪ್ರಾರಂಭವಾಯಿತಾದರೂ ೮ನೆಯ ಶತಮಾನದಲ್ಲಿ ತಾಂತ್ರಿಕ ವಿಧಿಗೆ ಅನುಗುಣವಾಗಿ ದೇವಿ ಆಲಯಗಳು ರೂಪಗೊಂಡಿವೆ’ ಎಂದು ಶ್ರೀಮತಿ ವಸಂತಲಕ್ಷ್ಮಿ ಅಭಿಪ್ರಾಯ ಪಡುತ್ತಾರೆ.

ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ಶಕ್ತಿಪೀಠಗಳನ್ನು ಶಾಕ್ತಪಂಥದವರೇ ಸ್ಥಾಪಿಸಿದರು. ಈ ಸಿದ್ಧರನ್ನೇ ಋಷಿಗಳು ಎಂದು ಕರೆಯುವ ಸಂಪ್ರದಾಯ, ವೇದಕಾಲಕ್ಕಿಂತ ಹಿಂದಿನಿಂದಲೇ ಬೆಳೆಯಿತು. ಭಾರತಕ್ಕೆ ಆಗಮಿಸಿದ ಆರ್ಯರು ಶಕ್ತಿ ಆರಾಧನೆ, ಆರಾಧನೆಯಲ್ಲಿ ತೊಡಗಿದವರನ್ನು ವಿರೋಧಿಸುತ್ತಲೇ ಬಂದರು. ಶಕ್ತಿ ಆರಾಧಕರು ಉಗ್ರ ಆಚರಣೆ ಯೋಗ ತತ್ವಗಳ ಮೂಲಕ ಸಿದ್ಧಿಸಿಕೊಳ್ಳುವ ವಿದ್ಯೆಗಳನ್ನು ಅವರು ವಿರೋಧಿಸುತ್ತಲೇ ಬಂದರು. ವಿಶ್ವವನ್ನಾಳುವ ಶಕ್ತಿಯನ್ನು ಈ ಸಿದ್ಧರು ಪಡೆದುಕೊಂಡರೇ ನಮ್ಮ ಮುಂದಿನ ಸ್ಥಿತಿಗತಿಗಳೇನು? ಅವರನ್ನು ನಿಯಂತ್ರಣದಲ್ಲಿಡಬೇಕು ಎಂಬ ಭಾವನೆಗಳು ಉದಯಿಸಿರಬೇಕು. ಶಕ್ತಿ ಆರಾಧಕರನ್ನು ಆರ್ಯರು ತಮ್ಮ ಹಿತಿದಲ್ಲಿಟ್ಟುಕೊಳ್ಳಲು ಪ್ರಾರಂಭಸಿದ ಮೇಲೆ ಘರ್ಷಣೆಗಲು ಹುಟ್ಟಿಕೊಳ್ಳತೊಡಗಿದವು. ಆರ್ಯರ ಘರ್ಷಣೆಗಳು ಕೇವಲ ಸಿದ್ಧರ ಮೇಲಲ್ಲ, ಶಕ್ತಿ ಆರಾಧನೆ ಮಾಡುತ್ತಿದ್ದ ಸ್ಥಳೀಯ ಆಡಳಿತಾಗರರ ಮೇಲೂ ಪ್ರಾರಂಭವಾದವು.

ಡಾ. ಸಿದ್ಧಲಿಂಗಯ್ಯ ಅವರು ಶಾಕ್ತ ಪಂಥದ ಹುಟ್ಟು ಕುರಿತು ‘ಭಾರತದಲ್ಲಿ ಕೃಷಿ ಆರ್ಥಿಕ ಚಟುವಟಿಕೆಯಾಗಿ ರೂಪಗೊಳ್ಳುವುದರ ಜೊತೆಗೆ ಶಾಕ್ತ ಪಂಥವು ತಲೆ ಎತ್ತಿತು. ಶಾಕ್ತಧರ್ಮವು ದೇವತೆಯನ್ನು ಪ್ರಪಂಚದ ಮೂಲ ಶಕ್ತಿಯ ಸಾಕಾರ ರೂಪವನ್ನಾಗಿ ಲೋಕದ ದೈವಿಕ ಮತ್ತು ಜೈವಿಕ ಬೆಳವಣಿಗೆಯ ಮೂಲ ಶಕ್ತಿಯನ್ನಾಗಿ ಪರಿಗಣಿಸುತ್ತದೆ. ಕೃಷಿ ಜನಾಂಗವೊಂದರ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ಪರಿಣಾಮವೇ ಇದಾಗಿರಬೇಕು. ವಿಶ್ವದ ಎಲ್ಲಾ ಜನಾಗಗಳಲ್ಲಿ ದೇವತೆಯು ಅಗ್ರಮಾನ್ಯಳಾದಂತಹ ಧಾರ್ಮಿಕ ಪಂಥಗಳು ಸೃಷ್ಟಿಯಾದವು. ಭಾರತ ದೇಶದಲ್ಲಿ  ಶಾಕ್ತ ಪಂಥದ ಉದಯಕ್ಕೆ ಕಾರಣವಾದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಅಂಶಗಳೇ ವಿವಿಧ ದೇಶಗಳ ಸಮೃದ್ಧಿ ಪಂಥಗಳ ಹುಟ್ಟಿಗೆ ಕಾರಣಗಳಾಗಿವೆ ಎನ್ನಬಹುದು.[8]

ಶಿಲಾಯುಗದ ಎಲ್ಲದೇವತೆಗಳು ಸ್ತ್ರೀಯರೆ. ಪಶುಪಾಲನೆ ಆರಂಭಗೊಂಡು ಪುರುಷರ ಕೈಗೆ ಪಶು ಸಂಪತ್ತು ಸೇರಿ ಹೋಗಿ ಪಿತೃಸ್ವಾಮಯ್ಯ ಸಮಾಜ ಹುಟ್ಟಿಕೊಂಡ ನಂತರವಷ್ಟೇ ಪುರುಷ ದೇವತೆಗಳು ಬಂದದ್ದು ‘ಮಾತೃಪ್ರಧಾನ ವ್ಯವಸ್ಥೆಯ ಅನೇಕ ಸಮಾಜಗಳಲ್ಲಿ ಪಿತೃವಿಲ್ಲದೆ ನೂರಾರು ದೇವತೆಗಳು ಕಂಡುಬಂದರೂ ಮಾತೃವಿಲ್ಲದ ಒಂದು ದೇವತೆಯನ್ನು ಕಾಣಲಾರೆವು. ಜೀವ ಸೃಷ್ಟಿಗೆ ಮಾತೆಯೇ ಕಾರಣ ಎನ್ನುವ ಮನೋಧರ್ಮವೇ ಇದಕ್ಕೆ ಕಾರಣವಿರಬಹುದು’[9]

ಪಶುಪಾಲನೆ, ಪಶು ಸಂಪತ್ತು ಪುರುಷರ ಕೈಗೆ ಸೇರಿ ಕೃಷಿ ಆರಂಬವಾದ ಮೇಲೆ ಮಾತೃಪ್ರಧಾನ ವ್ಯವಸ್ಥೆ ಸಡಿಲಗೊಳ್ಳತೊಡಗಿತು. ಪುರುಷರು ಸ್ತ್ರೀಗಿಂತ  ಹೆಚ್ಚು ಶಕ್ತಿವಂತರು. ಶತೃಗಳ ಜೊತೆ ಹೋರಾಡಲು ಶಕ್ತರಾದವರು. ಶಕ್ತಿಯುತ ಕೆಲಸಗಳನ್ನು ನಿರ್ವಹಿಸಲು ಪುರುಷರೇ ಸಮರ್ಥರು. ವಿದ್ಯೆ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಈ ಎಲ್ಲ ಅಂಶಗಳಿಂದಲೇ ಪಿತೃ ಪ್ರಧಾನ ವ್ಯವಸ್ಥೆ ಜಾರಿಯಲ್ಲಿ ಬರತೊಡಗಿತು. ಇದರ ಜೊತೆಯಲ್ಲೇ ಪಿತೃಪ್ರಧಾನ ದೇವತೆಗಳ ಆರಾಧನೆ, ಪೂಜೆ, ಆಚರಣೆಗಳು ಪ್ರಾರಂಭಗೊಂಡವು. ಹಂತಹಂತವಾಗಿ ಮಾತೃ ದೇವತೆಯ ಜೊತೆಗೆ ಪುರುಷ ದೇವವರನ್ನು ಸೇರಿಸಿ ಗಂಡ ಹೆಂಡರನ್ನಾಗಿಸುವ ಪ್ರಕ್ರಿಯೆ ಪ್ರಾರಂಭವಾಯಿತು.

ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಮಾತೃ ದೇವತೆಗಳಿಗೆ ಪ್ರಾಮುಖ್ಯತೆ ಇತ್ತು. ಅದು ಪುರುಷ ಪ್ರಧಾನ ವ್ಯವಸ್ತೆಗೆ ವರ್ಗವಾದಾಗ ಪುರುಷ ದೈವಗಳು ತಮ್ಮ ಘನತೆ, ಗೌರವ, ಅಸ್ತಿತ್ವಗಳನ್ನು ಪಡೆದುಕೊಳ್ಳಲು ಮಾತೃದೇವತೆಗಳ ಜೊತೆಗೆ ವಾದಕ್ಕೂ ಇಳಿದಿರಬಹುದೆಂದು ತೋರುತ್ತದೆ. ಮಾತೃ ಮತ್ತು ಪಿತೃ ದೇವತೆಗಳಲ್ಲಿ ಹುಟ್ಟಿಕೊಂಡ ಈ ವಾದ ವಿವಾದಗಳೇ ಮುಂದೆ ಸ್ತ್ರೀ  ಹೆಚ್ಚೋ ಪುರುಷ ಹೆಚ್ಚೋ  ಎಂಬ ವಾದಕ್ಕಿಳಿದಿರಬಹುದೆಂದು ತೋರುತ್ತದೆ.

‘ದಕ್ಷಿಣದಲ್ಲಿ ವೈಷ್ಣವರಿಗಿಂತ ಕಾಪಾಲಿಕ, ಕಾಳಾಮುಖ ಮುಂತಾದ ಶೈವ ಪಂಗಡಗಳೇ ತಾಂತ್ರಿಕರಿಂದ ಹೆಚ್ಚು ಪ್ರಬಾವಿತವಾದವು. ಉತ್ತರದಲ್ಲಿ ಮಾತ್ರ ಶಕ್ತಿಪಂಥ ತಾಂತ್ರಿಕ ಪಂಥದ ಇನ್ನೊಂದು ಹೆಸರಾಗುವ ಮಟ್ಟಿಗೆ ಅದರ ಆಚರಣೆಗಳನ್ನು ಒಪ್ಪಿಕೊಂಡಿತು. ಆಗ ಶಿವ ಹೆಚ್ಚೋ, ಶಕ್ತಿ ಹೆಚ್ಚೋ ಎಂಬ ವಿವಾದ ಪ್ರಾರಂಬವಾಯಿತು. ಶಿವನ ಅಥವಾ ಶಕ್ತಿಯ ಹೆಚ್ಚಳಿಕೆಯನ್ನು ಸ್ಥಾಪಿಸುವುದಕ್ಕಾಗಿ ಪುರಾಣಗಳು ಹುಟ್ಟಿದವು. ಶಿವ ವಿಷ್ಣುಗಳಿಗೀಗ ಎದುರಿಸಲು ಯಾವ ರಾಕ್ಷಸರೂ ಉಳಿದಿರದಿದ್ದರಿಂದ ತಮ್ಮ ಹೆಂಡಂದಿರ ಜೊತೆಗೇ ಜಿದ್ದಾಡಿ ಗೆಲ್ಲಬೇಕಾಯಿತು. ಸೋತು ಅರ್ಧನಾರೀಶ್ವರರೂ ಆಗಬೇಕಾಯಿತು. [10]

ಮಾತೃ ಪ್ರಧಾನ ವ್ಯವಸ್ಥೆಯನ್ನು ಪಿತೃಪ್ರಧಾನ ವ್ಯವಸ್ಥೆ ಹಂತ ಹಂತವಾಗಿ ಆಕ್ರಮಿಸಿಕೊಂಡರೂ ೧೩-೧೪ನೆಯ ಶತಮಾನದವರೆಗೆ ಉಳಿದುಕೊಂಡಿತ್ತು. ಮತ್ತು ಈ ಶಕ್ತಿಪಂಥ ಜನಪದ ಸಾಹಿತ್ಯದ ಮೇಲೆ ಪ್ರಬಾವ ಬೀರಿದೆ ಎಂದು ಹೇಳಬಹುದು.

‘ಕನ್ನಡಕ್ಕೆ ಶಕ್ತಿಪಂಥ ೨.೩ನೆಯ ಶತಮಾನಕ್ಕೆ ಬಂದಿರಬಹುದು! ಪ್ರಾರಂಭದ ಸಾಹಿತ್ಯದಲ್ಲಿ ಇದರ ಉಲ್ಲೇಖಗಳು ಸಿಕ್ಕುವುದಿಲ್ಲ. ಬಹುಶಃ ಜೈನಧರ್ಮವೊಂದೇಶಕ್ತಿ ಪಂಥದಿಂದ ನಿರ್ಲಿಪ್ತವಾಗಿರುವುದರಿಂದಲೂ ಶಕ್ತಿಪಂಥದ ವಿಚಾರವಾಗಿ ಆಗಿನ ಕಾಲಕ್ಕೆ ಸುಸಂಸ್ಕೃತರಲ್ಲಿದ್ದ ಪ್ರತಿಕ್ರಿಯೆ ಏನೆಂಬುದು ತಿಳಿದುಬರುವುದಿಲ್ಲ.

ವಚನಗಳಲ್ಲಿ ಮಾಯೆಯ ಶಕ್ತಿಯ ಮಾತು ಮೇಲಿಂದ ಮೇಲೆ ಬರುತ್ತದೆ. ಅಲ್ಲಮಪ್ರಭುವಿನ ವಚನಗಳಲ್ಲಿ[11]

‘ಶಿವಶಕ್ತಿ ಸಂಪುಟವೆಂಬುದೆಂದು ಹೇಳಿರಣ್ಣಾ…
ಒಬ್ಬರನ್ನೊಳಕೊಂಡಿತ್ತೆ ಹೇಳು ಗುಹೇಶ್ವರಾ?’

‘ಆ ಕಾಲದಲ್ಲಿಯ ವಿಚಾರವಂತರು ಕುತೂಹಲಜನಕವಾದ ಮಾಯೆ-ಶಕ್ತಿ ಕುರಿತು ವಾದ ವಿವಾದಗಳನ್ನು ಮಾಡುತ್ತಿರಬಹುದು. ಎಲ್ಲವನ್ನು ಸಗುಣವಾಗಿ ನುಂಗುವ ಜಾನಪದವು ಕಥೆಗಳನ್ನು ಕಟ್ಟಿ ಹೇಳಿರಬಹುದು. ಮುಂದೆ ಮಾಯೆ ಮತ್ತು ಶಕ್ತಿವಾದ ಎಷ್ಟರ ಮಟ್ಟಿಗೆ ಸಮಷ್ಟಿ ಚೇತನವನ್ನು ಉದ್ರೇಕಿಸಿದ್ದಿತೆಂಬುದಕ್ಕೆ ‘ಪ್ರಭುಲಿಂಗಲೀಲೆ’ಯೇ ಸಾಕ್ಷಿಯಾಗಿದೆ. ಸುಮಾರು ಆ ಕಾಲದಿಂದಲೇ ಪ್ರಚಾರದಲ್ಲಿರುವ ದಾಸರಾಟದ ಮುಖ್ಯ ವಿಷಯವೂ ಪುರುಷ ಶಕ್ತಿಯರ ಹೆಚ್ಚಳಿಕೆಯೇ ಆಗಿದೆ. ಪ್ರತ್ಯೇಕವಾಗಿ ಮಾಯೀ ಆಟವೇ ಬಂದಿದೆ’[12]

೬ ರಿಂದ ೧೦ನೆಯ ಶತಮಾನದ ಹೊತ್ತಿಗೆ ಶಕ್ತಿ ಪಂತದ ಪ್ರಭಾವದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟದಲ್ಲಿ ‘ಶಿವ ಹೆಚ್ಚೋ’ ಗಂಡು ಹೆಚ್ಚೋ’ ಎಂಬ ಭಕ್ತಿ ಪ್ರೇರಣೆವಾದೀ ಹಾಡುಗಳು ಹುಟ್ಟಿಕೊಂಡು ಅದೇ ಮುಂದುವರೆದು ಅದರಲ್ಲಿ ಪುರಾಣ, ಇತಿಹಾಸ, ಶೃಂಗಾರ, ಸಾಮಾಜಿಕ ವಸ್ತುಗಳು ಸೇರಿಕೊಂಡು ‘ಹೆಣ್ಣು ಹೆಚ್ಚೋ ಗಂಡು ಹೆಚ್ಚೋ’ ಎಂಬ ವಾದಗಳು ಕಲ್ಗಿ-ತುರಾ, ಅಥವಾ ಹರದೇಶಿ-ನಾಗೇಶಿ ಸಂಪ್ರದಾಯಗಳ ಮೂಲಕ ಬೆಳೆದು ಮುಂದೆ ಸಣ್ಣಾಟದ ಉಗಮಕ್ಕೆ ಪ್ರೇರಣೆಯಾಯಿತು.

‘ದಾಸರಾಟದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ‘ಕಲ್ಗಿ-ತುರಾ’ ಚರ್ಚೆ. ಹೆಣ್ಣು ಹೆಚ್ಚು ಗಂಡು ಹೆಚ್ಚೆಂದು ವಾದಿಸುವ ಈ ಲಾವಣಿ ಹಾಡುಗಳನ್ನು ಈ ಜಾತಿಗಾರರೂ ತಮ್ಮ ಆಟಕ್ಕೆ ಅಳವಡಿಸಿಕೊಂಡರು.

‘ರಾಧಾಕೃಷ್ಣರ ಮಧುರ ಭಾವ ಭಕ್ತಿಯ ಮೂಲಕ ಬಂಗಾಲದಲ್ಲಿ ವೈಷ್ಣವ ಪಂಥದ ಪ್ರಚಾರ ತರಲು ಯತ್ನಿಸಿದಾಗ ಅಲ್ಲಿ ಜನಪ್ರಿಯವಾಗಿದ್ದ ಶಕ್ತಿ ಪಂಥದ ಪ್ರಭಾವಕ್ಕೆ ಮಣಿದು ರಾಧಾಕೃಷ್ಣರ ಮಧುರ ಭಾವಭಕ್ತಿಯಲ್ಲಿ ಮಾತೃದೇವತೆಯ ಎಲ್ಲ ಗುಣ ಸ್ವಭಾವಗಳನ್ನು ತೊಡಿಸಿ ಪ್ರದರ್ಶಿಸುತ್ತಿದ್ದರು ಎಂಬುದನ್ನು ಗಮನಿಸಿದರೆ, ವೈಷ್ಣವ ಪಂಥ ಶಕ್ತಿ ಪಂಥವನ್ನು ಒಪ್ಪಿಕೊಂಡಿತ್ತು ಎಂದು ಗೃಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ‘ಕಲ್ಗಿ-ತುರಾ’ ಸಂಪ್ರದಾಯದಲ್ಲಿ ತುರಾ ಪಂಗಡ (ಶಕ್ತಿಪಂಗಡ) ಪ್ರತಿನಿಧಿಸುತ್ತಿದ್ದವರು ಹರಿದಾಸರೆಂದು ಡಾ. ಚಂದ್ರಶೇಖರ ಕಂಬಾರರು ಅಭಿಪ್ರಾಯಪಡುತ್ತಾ ಶಿವಶರಣರಾರೂ ಮಾಯೆಯನ್ನು ಗೌರವದಿಂದ ಕಾಣಲಿಲ್ಲ. ಹೀಗಾಗಿ ಶೈವನಾಯಕರೆಲ್ಲ ಶಕ್ತಿಯನ್ನು ಗೆಲ್ಲುತ್ತಾರೆ. ೧೫ನೆಯ ಶತಮಾನದ ಹೊತ್ತಿಗೆ ಮಾಯೆ ಪ್ರಭುವಿನ ಕಥೆಗೆ ಸೇರಿಕೊಂಡಿದ್ದರೂ ಅಲ್ಲಿ ಅವಳು ಸೋಲಬೇಕಾಯಿತು. ಬರುಬರುತ್ತ ಕವಿತ್ವವುಳ್ಳ ಹೊಲತಿಯರೂ ‘ಕಲ್ಗಿತುರಾ’ ಮೇಳಗಳಲ್ಲಿ ಸೇರಿಕೊಂಡು ಹಾಡುತ್ತ ಅಲೆಯತೊಡಗಿದರು. ಹರಿದಾಸರು ಅಥವಾ ಹರದೇಶಿಗಳು ಆಕರ್ಷಕ ಹೆಣ್ಣೊಂದನ್ನು ಮುಂದೆ ಮಾಡಿಕೊಂಡು ತಮ್ಮ ಆಟದ ಉತ್ತರಾರ್ಧದಲ್ಲಿ ‘ಕಲ್ಗಿ-ತುರಾ’ ಚರ್ಚೆಯನ್ನು ಮುಂದುವರೆಸಿ ಹೇಗೋ ಬೆಳಗುಮಾಡತೊಡಗಿದರು’.[13] ಈ ಶಕ್ತಿ ಪಂಥ ಹರದೇಶಿ ನಾಗೇಶಿ ಸಂಪ್ರದಾಯದಲ್ಲಿ ಬೆಳೆದು ಸಣ್ಣಾಟದ ಉದಯಕ್ಕೆ ಕಾರಣವಾಯಿತು.

ಲಾವಣಿ

ಒಬ್ಬನೇ ಹಾಡುವ ಲಾವಣಿಗೆ ಬಯಲು ಲಾವಣಿ ಎನ್ನುತ್ತಾರೆ ಮತ್ತು ಶಾಹಿರ ಲಾವಣಿ ಎನ್ನುವು ದುಂಟು. ಒಬ್ಬನೇ ಹಾಡುವ ಈ ಗೀತ ಪ್ರಕಾರಕ್ಕೆ ‘ಚಿಟಕಿ ಲಾವಣಿ’ ಎನ್ನುವುದೂ ಉಂಟು. ಈ ಹಾಡಿನಲ್ಲಿ ಹಾಡುಗಾರ ಚಿಟಕಿ ಹಾಕುತ್ತ ಹಾಡುವುದರಿಂದ ಈ ಹೆಸರು ಬಂದಿರಬಹುದು. ಜನ ಸಮೂಹಗಳು ಇದ್ದ ಪ್ರದೇಶಗಳಲ್ಲಿ ಈ ಸಮುದಾಯದ ಹಾಡುಗಾರನೊಬ್ಬ ಚಕ್ಕನೇ ನಡಕ್ಕೆ ಸೆಲ್ಲೆ ಬಿಗಿದುಕೊಂಡು, ಬಲಗೈ ಬೆರಳುಗಳಿಂದ ಚಿಟಕಿ ಬಾರಿಸುತ್ತ ಏರುಸ್ವರದಲ್ಲಿ ಲಾವಣಿ ಹಾಡಲು ಪ್ರಾರಂಭಿಸುತ್ತಾನೆ. ರಾಗಾಲಾಪ ಇಲ್ಲಿಲ್ಲ. ಆರಂಭದ ಲಾವಣಿಗಳಲ್ಲಿ ಪುರಾಣ ಪುರುಷರ, ಸಾಧು ಸಂತರ, ಶಿವಶರಣರ, ವೀರರ, ಪತಿವ್ರತೆಯರ ಮಹಿಮೆಗಳನ್ನು ಕಾಲಾನಂತರ ಸಮಾಜದಲ್ಲಿ ಸಂದು ಹೋದ ಘಟನೆಯನ್ನಾಧರಿಸಿ ಕಥೆ ಕಟ್ಟಿ ವರ್ಣಿಸುತ್ತ ನೀತಿ ಬೋಧಿಸುವುದು ಲಾವಣಿ ಹಾಡುವವರ ಉದ್ದೇಶವಾಗಿತ್ತು. ಈ ಬಯಲು ಲಾವಣಿಗಳ ಮೇಲೆ ವೈಷ್ಣವ ಪಂಥದ ‘ಹರಿಕೀರ್ತನ’ ಸೂಕ್ಷ್ಮವಾಗಿ ಪ್ರಭಾವ ಬೀರಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಸುಮಾರು ೧೬ನೇ ಶತಮಾನದವರೆಗೆ ಹರಿದಾಸರು ಭಕ್ತಿಪಂಥವನ್ನು ಜನರಲ್ಲಿ ಬಿತ್ತರಿಸಿದರು. ಮಹಾರಾಷ್ಟ್ರದಲ್ಲಿ ‘ವಾಕರಿಕ ಪಂಥ’ ಹುಟ್ಟಿಕೊಂಡು ಜನಪ್ರಿಯತೆ ಸಾಧಿಸಿತ್ತು. ವಾಕರಿಕ ಪಂಥ ಮಹಾರಾಷ್ಟ್ರ ಕರ್ನಾಟಕದ ಗಡಿಭಾಗದ ಜನತೆಯ ಮೇಲೆ ಪ್ರಭಾವ ಬೀರಿತು. ಇಲ್ಲಿಯ ಜನ ಜಾತಿ ಮತ ಬೇಧವಲ್ಲದೆ ಸಾಮೂಹಿಕವಾಗಿ ದಿಂಡಿ ಯಾತ್ರೆಯ ಮೂಲಕ ಪಂಢರಾಪುರಕ್ಕೆ ವಿಠ್ಠಲನ ದರ್ಶನ ಪಡೆಯಲು ಹಿಂಡು ಹಿಂಡಾಗಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ‘ಹರಿಕೀರ್ತನೆ’ಯ ಮೂಲಕ ವಿಷ್ಣು ಭಕ್ತಿಯನ್ನು ಜನರಲ್ಲಿ ಬಿತ್ತುತ್ತಿದ್ದರು. ಪುರಾಣ ಪುರುಷರ, ರಾಮಾಯಣ, ಮಹಾಭರತ ಮತ್ತು ದಾಸರ ಚರಿತ್ರೆಗಳ ಮೂಲಕ ಜನರಲ್ಲಿ ಭಕ್ತಿಯ ಬೀಜ ಬಿತ್ತುವುದೇ ಹರಿಕೀರ್ತನೆಯ ಉದ್ದೇಶವಾಗಿತ್ತು. ಹರಿಕೀರ್ತನದಲ್ಲಿ ಬಯಲು ಲಾವಣಿಯಂತೆ ಒಬ್ಬನೇ ನಟ. ಅವನೇ ಕೀರ್ತನಕಾರ. ಅವನೇ ಎಲ್ಲ ಪಾತ್ರಗಳ ಅಭಿನಯ ಮಾಡುತ್ತಾನೆ. ಮುಖ್ಯ ಕಥೆಯಲ್ಲಿ ಬರುವ ವೀರನ ಆರ್ಭಟ, ರಾಕ್ಷಸನ ರೌದ್ರ, ಹೆಣ್ಣಿನ ಕೋಮಲತೆ, ಮಗುವಿನ ಮುಗ್ಧತೆ, ವೃದ್ಧನ ಸ್ಪಾಲಿತ್ಯ, ರಾಜನ ಠೀವಿ, ವಿದೂಷಕನ ವಿಕಾರ, ಸೇವಕನ ದೈನ್ಯ ಎಲ್ಲವನ್ನೂ ಕೀರ್ತನಕಾರ ಸೊಗಸಾಗಿ ಅಭಿನಯಿಸಿ ತೋರಿಸುತ್ತಾನೆ. ಔಚಿತ್ಯವನ್ನರಿತು ಹಾಡು, ಭಜನೆ, ನೃತ್ಯಗಳಿಂದ ಜನರನ್ನು ಗಂಧರ್ವಲೋಕಕ್ಕೆ ಕರೆದೊಯ್ಯುತ್ತಾನೆ. ಅವನಿಗೆ ಜೊತೆಗಾರರಾದ ವಾದ್ಯ ವೃಂದದವರೂ ಸಮಯೋಚಿತವಾದ ಸಹಕಾರದಿಂದ ಕೀರ್ತನಕ್ಕೆ ಕಳೆಕಟ್ಟುತ್ತಾರೆ. ಇದೊಂದು ಏಕಪಾತ್ರಾಭಿನಯದ ಮನೋಹರ ಮಾದರಿಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕೀರ್ತನವು, ಮೌಲಿಕ ಪರಂಪರೆಯಾಗಿದೆ ಮತ್ತು ಅತ್ಯಂತ ಲೋಕಪ್ರಿಯವಾದ ಜನಪದ ಕಲೆಯಾಗಿದೆ.’[14] ಕೀರ್ತನಕಾರರ ಮತ್ತು ಬಯಲು ಲಾವಣಿಕಾರರ ಪ್ರದರ್ಶನಗಳಲ್ಲಿ ಸಾಮ್ಯತೆ ಇರುವುದು ಕಂಡು ಬರುತ್ತದೆ.

‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಜನಪದ ಪದ್ಯ ಪ್ರಕಾರಗಳು ಉಪಲಬ್ಧವಿದ್ದರೂ ‘ಲಾವಣಿ’ಯ ವಿಶಿಷ್ಟ ನಮೂನೆ ದೊರೆಯುವುದಿಲ್ಲ. ಮರಾಠೀ ಸಾಹಿತ್ಯದಲ್ಲಿ ಇನ್ನೂರು ವರ್ಷಗಳಿಂದ ‘ಲಾವಣಿ’ಯ ಪ್ರಚಾರವಿದೆ. ಆದ್ದರಿಂದಲೇ ‘ಇಂದು ಲೋಕಪ್ರಿಯವಾದ ಲಾವಣಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕಾಲಿಕ್ಕಿ ಕನ್ನಡ ವಾಙ್ಮಯದಲ್ಲಿ ಪ್ರಭಾವಶಾಲಿಯಾದಂತೆ ತೋರುತ್ತದೆ ಎಂಬ ವಿದ್ವಾಂಸರ ಅಭಿಪ್ರಾಯ ಒಪ್ಪುವಂತಿದೆ. ಮಹಾರಾಷ್ಟ್ರವೇ ಈಗಿನ ಲಾವಣಿ ಸ್ವರೂಪಕ್ಕೆ ಆದಿ ಕ್ಷೇತ್ರ ಎಂಬ ಅವರ ಅಭಿಪ್ರಾಯ ಗ್ರಾಹ್ಯವಾದುದು.’[15] ಎಂಬ ಮಾತನ್ನು ಅನುಮೋದಿಸಲಾಗುವುದಿಲ್ಲ ಯಾಕೆಂದರೆ ಕರ್ನಾಟಕವು ಹತ್ತೊಂಬತ್ತನೆಯ ಶತಮಾನದ ಆರಂಭ ಕಾಲದಲ್ಲಿ ಪೇಶ್ವೆಯರ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷರು ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರದ ಆಡಳಿತಕ್ಕೆ ಒಳಪಡಿಸಿದ್ದರು. ಲಾವಣಿ ಎಂಬ ಪ್ರಕಾರ ಪೇಶ್ವೆಯರ ಆಡಳಿತ ಕಾಲಕ್ಕಿಂತ ಪೂರ್ವ ಕರ್ನಾಟಕದಲ್ಲಿ ಹುಟ್ಟಿ ಜನಪ್ರಿಯತೆಗಳಿಸಿರುವುದನ್ನು ಕಂಡು ಅದರಿಂದ ಪ್ರಭಾವಿತರಾದ ಮರಾಠಿಗರು ಲಾವಣಿ ಸಾಹಿತ್ಯವನ್ನು ಬೆಳೆಸಿದರು. ಕರ್ನಾಟಕದ ಕೆಲಭಾಗ ಮಹಾರಾಷ್ಟ್ರದ ಮೂಲಕ ಆಡಳಿತಕ್ಕೊಳ ಪಟ್ಟದ್ದರಿಂದ ಆ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕಕ್ಕೆ ವಲಸೆ ಬಂದಿದೆ ಎಂದು ಅಭಿಪ್ರಾಯ ಮೂಡಿರಬಹುದು. ಆರಂಭದ ಹಂತದ ಚಿಟಕಿ ಲಾವಣಿಗಳಲ್ಲಿ ಪುರಾಣ ಪುರುಷ, ಶರಣರ, ದಾಸರ ಜೀವನ ಚರಿತ್ರೆಗಳನ್ನುಳ್ಳ ದೀರ್ಘ ಕಥಾನಕಗಳೇ ಹಾಡಲ್ಪಡುತ್ತಿದ್ದವು. ಮೊದಲ ಹಂತದ ಚಿಟಕಿ ಲಾವಣಿಗಳು ಕರ್ನಾಟಕದಲ್ಲಿ ಹರಿಕೀರ್ತನೆ ಪ್ರಭಾವದಿಂದ ರೂಪಗೊಂಡು ಅದರ ಬೆಳವಣಿಗೆಯ ಎರಡನೆಯ ಹಂತದಲ್ಲಿ ಮಹಾರಾಷ್ಟ್ರದ ‘ಪೊವಾಡ’ಗಳ ಪ್ರಭಾವಕ್ಕೆ ಒಳಗಾಗಿ ಐತಿಹಾಸಿಕ ಘಟನೆಗಳನ್ನೊಳಗೊಂಡ ಕಥಾನಕಗಳು ಲಾವಣಿಗಳ ಮೂಲಕ ಪ್ರಸರಣಗೊಂಡವು. ಲಾವಣಿ ಬೆಳವಣಿಗೆಯ ಮೂರನೆಯ ಘಟ್ಟದಲ್ಲಿ ಶೃಂಗಾರ ಪ್ರಮುಖ ವಸ್ತುವಾಯಿತು. ಆದ್ದರಿಂದ ಚಿಟಕಿ ಲಾವಣಿ ಮೊದಲ ಹಂತ. ಈ ಹಂತದಲ್ಲಿ ಪುರಾಣ ಪುರುಷರ, ಶರಣರ, ದಾಸರ, ಪತಿವೃತೆಯರ ಕಥಾವಸ್ತುಗಳ ಮೂಲಕ ನೀತಿ ಬೋಧನೆ ಎರಡನೆಯ ಹಂತದ ಲಾವಣಿಗಳಲ್ಲಿ ಐತಿಹಾಸಿಕ ವೀರರ ಘಟನೆಗಳನ್ನೊಳಗೊಂಡ ಕಥನಗಳ ಮೂಲಕ ತ್ಯಾಗ, ರಾಷ್ಟ್ರಾಭಿಮಾನ, ಸ್ವಾಭಿಮಾನ, ಹೋರಾಟ, ಸಾಹಸ ಮುಂತಾದ ವಿಷಯಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಈ ಹಂತದಲ್ಲಿಯೇ ಡಪ್ಪು, ತುಂತುಣಿ, ತಾಳಗಳ ಬಳಕೆ ಪ್ರಾರಂಭವಾಯಿತು ಮತ್ತು ಮುಮ್ಮೇಳ ಹಿಮ್ಮೇಳಗಳ ರೂಪ ಪಡೆದು ಮೇಳ ಲಾವಣಿಯಾಯಿತು. ಈ ಘಟ್ಟದ ಲಾವಣಿಗಳ ಹಾಡುಗಾರಿಕೆಯ ಸ್ವರೂಪವನ್ನು ಗಮನಿಸಿ ಗೀಗೀ ಅಥವಾ ಜೀಜೀ ಪದಗಳೆಂದೂ ಹೆಸರು ಪಡೆಯಿತು. ಲಾವಣಿ ಬೆಳವಣಿಗೆಯ ಮೂರನೆಯ ಘಟ್ಟ ಸಂಕೀರ್ಣವಾದುದು. ಈ ಘಟ್ಟದಲ್ಲಿ ಲಾವಣಿ, ಗೀಗೀ, ಹರದೇಶಿ-ನಾಗೇಶಿ, ಕಲ್ಗಿ-ತುರಾ, ಸವಾಲ್-ಜವಾಬ್ ಈ ಪ್ರಕಾರಗಳಲ್ಲಿ ಕವಲೊಡೆಯಿತು. ಶೃಂಗಾರ ರಸ ಪ್ರಧಾನವಾದ ಹಾಡುಗಳ ಮೂಲಕ ಸ್ತ್ರೀ ಹೆಚ್ಚೋ, ಪುರುಷ ಹೆಚ್ಚೋ ಎಂಬ ವಾದಗಳು ಹುಟ್ಟಿಕೊಂಡವು. ಶಿವ-ಶಕ್ತಿ, ಪುರಾಣ, ಇತಿಹಾಸ, ಶರಣರ, ದಾಸರ, ವಿಭೂತಿ ಪುರುಷರ, ಸಮಾಜದ ಘಟನೆಗಳ ಮೂಲಕ ತಮ್ಮ ವಾದಗಳನ್ನು ಪುಷ್ಟೀಕರಿಸುವ ಸಂಪ್ರದಾಯ ಈ ಘಟ್ಟದಲ್ಲಿ ಆರಂಭವಾಯಿತು ಮತ್ತು ಅತೀ ವೇಗದಲ್ಲಿ ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿ ಸಣ್ಣಾಟಗಳ ಉಗಮಕ್ಕೆ ಕಾರಣವಾಯಿತು.

 

[1]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೨೮, ೨೯

[2]ಅದೇ ಪುಟ ೧೨

[3]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೧೩

[4]ಅದೇ ಪುಟ ೧೫

[5]ಆರ್. ಜಿ. ಕುಲಕರ್ಣಿ ‘ಅರಕೇರ’ ಅಪರಾಳ ತಮ್ಮಣ್ಣ ಕೃತ ಶ್ರೀಕೃಷ್ಣ ಪಾರಿಜಾತ, ಪುಟ, ೭೬

[6]ಅದೇ, ಪುಟ ೨

[7]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೧೭

[8]ಡಾ. ಸಿದ್ಧಲಿಂಗಯ್ಯ, ಗ್ರಾಮ ದೇವತೆಗಳು, ಪುಟ ೧೭

[9]ಡಾ. ಸಿದ್ಧಲಿಂಗಯ್ಯ, ಗ್ರಾಮ ದೇವತೆಗಳು, ಪುಟ ೧೭

[10]ಅದೇ. ಪುಟ ೩೩

[11]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೧೯

[12]ಅದೇ, ಪುಟ ೧೯

[13]ಅದೇ ಪುಟ ೧೯

[14]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೧೮ ಮತ್ತು ೩೨

[15]ಆರ್. ಜಿ. ಕುಲಕರ್ಣಿ ‘ಅರಕೇರ’ ಅಪರಾಳ ತಮ್ಮಣ್ಣ ಕೃತ ಶ್ರೀಕೃಷ್ಣ ಪಾರಿಜಾತ, ಪುಟ, ೨೭