ರಾಧಾನಾಟ

ರಾಧಾಕೃಷ್ಣರ ರಾಸಲೀಲಾ ರಾಧಾನಾಟದ ಉಗಮಕ್ಕೆ ಪ್ರೇರಣೆಯಾಗಿದೆ. ‘ರಾಧಾಕೃಷ್ಣರ ರಾಸಲೀಲೆ ವೃಂದಾವನದ ರಾಸಲೀಲಾ ನೃತ್ಯ ೧೫ ರಿಂದ ೧೭ನೆಯ ಶತಮಾನದಲ್ಲಿ ಬೆಳೆದು ಬಂದ ಭಕ್ತಿರಂಗಭೂಮಿಯ ಪ್ರಕಾರ. ರಾಧಾಕೃಷ್ಣರ ಉತ್ಕಟ ಭಕ್ತಿಯ ಪ್ರಸಾರವೇ ಇದರ ಸ್ಥಾಯಿಭಾಗ, ರಾಸಲೀಲಾ ನೃತ್ಯದ ಕಲಾವಿದರು ಅಭಿನಯ ಚತುರರಾಗಿರಲಿಲ್ಲ. ವೇಷಗಾರಿಕೆ, ರಂಗದ ಪರಿಕಲ್ಪನೆ ಅಷ್ಟಾಗಿ ಇವರಲ್ಲಿರಲಿಲ್ಲ. ಕೃಷ್ಣಭಕ್ತಿಯನ್ನು ಜನರಲ್ಲಿ ಬಿತ್ತಿ ಅವರನ್ನು ತನ್ಮಯಗೊಳಿಸುವುದೇ ಇವರ ಉದ್ದೇಶವಾಗಿತ್ತು. ಇಲ್ಲಿಯ ಕೃಷ್ಣನ ಚಿತ್ರಣ ಮಹಾಭಾರದ ಕೃಷ್ಣನ ಚಿತ್ರಣದಂತಿದೆ. ಎಲ್ಲರೂ ಪ್ರೀತಿಸಬಹುದಾದ ಹುಡುಗನ ಪಾತ್ರ, ರಾಧೆಯನ್ನು ಮುಂದಿಟ್ಟುಕೊಂಡು ಎಲ್ಲ ಗೋಪಿಯರೂ ರಮಿಸಬಹುದಾದ ಪ್ರಿಯಕರ ಕೃಷ್ಣನ ಈ ಹೊಸ ಸಾಂಸ್ಕೃತಿಕ ಅವತಾರವು ಮೊದಲು ಪ್ರಸಿದ್ಧವಾದದ್ದು. ಜಯದೇವನ ಗೀತಗೋವಿಂದ ಹಾಡಲಿಕ್ಕಾಗಿ, ಅಭಿನಯಿಸಲಿಕ್ಕಾಗಿಯೇ ರಚಿತವಾದ ಈ ಸಾಹಿತ್ಯ ಕೃತಿಯು ಮಧ್ಯಯುಗದ ಹಲವು ಆಸ್ಥಾನಗಳಲ್ಲಿ ಪ್ರಯೋಗವಾಯಿತು. ಹೊಸ ಮಾದರಿಯ ಕೃಷ್ಣ ಸಾಹಿತ್ಯ, ಕೃಷ್ಣ ನಾಟಕಗಳಿಗೆ ಬೀಜವಾಯಿತು. ೧೫-೧೬ನೆಯ ಶತಮಾನಗಳಲ್ಲಿ ಹಿಂದೂ ಧರ್ಮದ ಒಣ ತಾತ್ವಿಕತೆಯನ್ನು ತಿರಸ್ಕರಿಸಿ ಬಂದ ಉನ್ಮತ್ತ ಭಕ್ತಿಯ ವೈಷ್ಣವ ಪಂಥವು ಕೃಷ್ಣನ ಈ ಹೊಸ ಅವತಾರವನ್ನು ಪೂರ್ಣವಾಗಿ ದುಡಿಸಿಕೊಂಡಿತು.

ಉತ್ತರ ಭಾರತದ ಕೃಷ್ಣನ ಜನ್ಮಭೂಮಿ ‘ವಜ್ರಭೂಮಿ’ (ವೈಷ್ಣವ ಭಕ್ತಿಯ ಪ್ರಮುಖ ಕೇಂದ್ರ) ಭಾರತದ ಹಲವು ಭಾಗಗಳ ಸಂತರನ್ನು ಸಮಾವೇಶಗೊಳಿಸುವ ಕೇಂದ್ರ ಸ್ಥಾನವಾಗಿತ್ತು. ಇಲ್ಲಿ ೧೬ನೆಯ ಶತಮಾನದಲ್ಲಿ ಆಂಧ್ರದ ವಲ್ಲಭಾಚಾರ್ಯವೆಂಬ ಸಂತ ನೆಲೆಸಿ ವೈಷ್ಣವ ಪಂಥದ ಶಾಖೆ ಪ್ರಾರಂಭಿಸಿ ಬೆಳೆಸಿದ. ಇವನ ಶಿಷ್ಯ ಸಂತ ಸೂರದಾಸ ಮತ್ತು ಏಳು ಜನ ಶಿಷ್ಯರು ಕೃಷ್ಣಕಥೆಯನ್ನು ಸಾಹಿತ್ಯ ಸಂಗೀತಗಳಲ್ಲಿ ರಚಿಸಿದರು. ಕಾಲಾನಂತರ ನಾರಾಯಣ ಭಟ್ಟ, ಘಮಂಡದೇವ ಮತ್ತು ಹಿತ ಹರಿವಂಶ ಇವರು ಕೃಷ್ಣಕಥೆಯನ್ನು ಮತ್ತು ವಜ್ರಭೂಮಿ ಪರಿಸರದಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಜನಪದ ಆಟಗಳನ್ನು ಮೇಳೈಸಿ ‘ರಾಸಲೀಲಾ’ ಎಂಬ ಪ್ರಕಾರ ಹುಟ್ಟು ಹಾಕಿದರು. ರಾಸಲೀಲಾ ಪ್ರದರ್ಶನ ಉತ್ತರ, ದಕ್ಷಿಣ ಭಾರತದಲ್ಲೆಲ್ಲ ಜನಪ್ರಿಯವಾಯಿತು. ಕಲಾಪ್ರಕಾರಗಳ ಹುಟ್ಟಿಗೆ ರಾಸಲೀಲಾ ಪ್ರೇರಣೆ ನೀಡಿತು. ರಾಸಲೀಲಾ ಪ್ರದರ್ಶನ ಭಕ್ತ ಭಜನೆಯ ಉದ್ದೇಶಕ್ಕಾಗಿ ಮಾತ್ರ ಇದ್ದು ದೇವಾಲಯಗಳ ಆವರಣಗಳಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿತ್ತು. ಆರಂಭದಲ್ಲಿ ೧೪ ವರ್ಷದೊಳಗಿನ ಮಕ್ಕಳು ಇಲ್ಲಿ ಭಾಗವಹಿಸುತ್ತಿದ್ದರು. ಸರಳವಾದ ದೋತ್ರ, ಮೇಲಂಗಿ, ಕಿರೀಟ, ಕೃಷ್ಣನಿಗೊಂದು ನವಿಲುಗರಿ, ಮುಖದ ಮೇಲೆ ವೃತ್ತಾಕಾರದ ಹೊಳೆವ ಬೊಟ್ಟುಗಳ ಸರಳ ವಿನ್ಯಾಸ. ರಾಸಲೀಲಾ ಪ್ರದರ್ಶನದ ಅವಧಿ ಮೂರು ಗಂಟೆ. ಇದರಲ್ಲಿ ಎರಡು ಭಾಗಗಳು. ಮೊದಲು ಒಂದು ಗಂಟೆ ‘ರಾಸ’ ಸಿಂಹಾಸನದಲ್ಲಿ ಕುಳಿತ ರಾಧಾಕೃಷ್ಣರನ್ನು ಪೂಜಿಸುವರು. ಹಿಮ್ಮೇಳದವರು ಪ್ರಾರ್ಥನೆ ಹಾಡುತ್ತಿರುವಾಗ ಗೋಪಿಯರು ಆರತಿ ಎತ್ತಿ, ಅವರನ್ನು ‘ರಾಸ’ಕ್ಕೆ ಕರೆಯುವರು. ರಾಧಾಕೃಷ್ಣರು ರಂಗಕ್ಕೆ ಬರುತ್ತಾರೆ. ಗೋಪಿಯರು ರಾಧಾಕೃಷ್ಣರನ್ನು ನಡುವೆ ಮಾಡಿಕೊಂಡು ವಿವಿಧ ಭಂಗಿಗಳಲ್ಲಿ ರಾಸ ನೃತ್ಯ ಮಾಡುತ್ತಾರೆ. ಪೂಜೆ ಪ್ರಸಾದ ನಂತರ ಎರಡನೆಯ ಭಾಗ ಲೀಲೆ ಪ್ರಾರಂಭವಾಗುತ್ತದೆ. ಇಲ್ಲಿ ಕೃಷ್ಣಪುರಾಣದ ಯಾವುದಾದರೊಂದು ಕಥೆ ಇರುತ್ತದೆ. ಕಾಳಿಮರ್ಧನ, ಗೋವರ್ಧನ ಲೀಲಾ, ದಾನಲೀಲಾ ಮುಂತಾದ ಪ್ರಸಿದ್ಧ ಕೃಷ್ಣನ ಲೀಲೆಗಳ ಪ್ರದರ್ಶನ. ಲೀಲೆ ಈ ಭಾಗದಲ್ಲಿ ಕಥೆಯ ನಾಟಕೀಯ ನಿರೂಪಣೆ ಇರುತ್ತದೆ. ಇಲ್ಲಿ ಪಾತ್ರ, ದೃಶ್ಯ, ಹಾಡು, ಸಂಭಾಷಣೆಗಳಿರುತ್ತವೆ. ಕಥೆ ಘಟನೆಯಿಂದ ಘಟನೆಗೆ ಬೆಳೆಯುತ್ತ ಹೋಗುತ್ತದೆ. ಲೀಲೆಯಲ್ಲಿ ಪ್ರದರ್ಶಿಸಲ್ಪಡುವ ಕೃಷ್ಣನ ಉದ್ಭವ ಲೀಲೆಯಲ್ಲಿ ನಾಲ್ಕು ದೃಶ್ಯಗಳಿವೆ.

೧ನೆಯ ದೃಶ್ಯ : ಗೋಕುಲದಲ್ಲಿ ರಾಧೆ ಮತ್ತು ಗೋಪಿಯರು ಮಧುರೆಗೆ ಹೋದ ಕೃಷ್ಣನನ್ನು ಹುಡುಕುವ, ವಿರಹದಿಂದ ಅವನಿಗಾಗಿ ಕಾಯುವ ಸನ್ನಿವೇಶವಿದೆ.

೨ನೆಯ ದೃಶ್ಯ : ಮಧುರೆಯಲ್ಲಿ ಕೃಷ್ಣನು ಗೋಕುಲದ ನೆನಪಿನಿಂದ ತಪ್ಪನಾಗಿದ್ದಾನೆ. ಕೃಷ್ಣನ ಮಂತ್ರಿ ಉದ್ಬವ ಕೃಷ್ಣನಿಗೆ ನೀನು ಈ ಲೌಕಿಕ ಹುಚ್ಚಾಟಗಳನ್ನು ಬಿಡಬೇಕೆಂದು ವೇದಾಂತವನ್ನು ಬೋಧಿಸುತ್ತಿರುತ್ತಾನೆ. ಈ ವೇದಾಂತಿಗೆ ಬುದ್ಧಿ ಕಲಿಸಲು ಕೃಷ್ಣ ಒಂದು ಉಪಾಯ ಮಾಡಿ ಅವನಿಗೆ ಒಂದು ಸಂದೇಶ ಕೊಟ್ಟು ಆತನನ್ನು ಗೋಕುಲಕ್ಕೆ ಅಟ್ಟುತ್ತಾನೆ.

೩ನೆಯ ದೃಶ್ಯ : ಉದ್ಬವ ಗೋಕುಲದಲ್ಲಿದ್ದು ಯಶೋಧೆ. ರಾಧೆಯ ವಿರಹ ವೇದನೆ ಕಂಡು ಕೃಷ್ಣನಿಗೆ ಹೇಳಿದ ಅಮೂರ್ತ ತತ್ವಗಳ ಭಾಷಣವನ್ನು ಅವರಿಗೂ ಹೇಳುತ್ತಾನೆ. ಯಶೋಧೆ ಮತ್ತು ರಾಧೆ ಕೃಷ್ಣನ ಮೇಲಿಟ್ಟಿರುವ ಪ್ರೀತಿಯ ಮುಂದೆ ಮಂತ್ರಿಯ ಭಾಷಣ ಸೋಲುತ್ತದೆ.

೪ನೆಯ ದೃಶ್ಯ : ಉದ್ಬವ ಮಧುರೆಗೆ ಮರಳಿ ಬಂದು ಗೋಕುಲವನ್ನು  ಉಪೇಕ್ಷಿಸಿದ್ದಕ್ಕಾಗಿ ಕೃಷ್ಣನನ್ನೇ ತರಾಟೆಗೆ ತೆಗೆದುಕೊಳ್ಳುತ್ತಾನೆ.

‘ರಾಸ’ ಭಕ್ತಿಯ ಮನೋಭೂಮಿಕೆಯನ್ನು ಪ್ರೇಕ್ಷಕರಲ್ಲಿ ಉದ್ದೀಪಿಸುವ ಸಾಧನ ‘ಲೀಲೆ’ ಪುರಾಣ ಪ್ರತಿಮೆಯೊಂದರ ಮೂಲಕ ಭಕ್ತಿಯ ಸಂದೇಶವನ್ನು ತಲುಪಿಸುವ ಮಾರ್ಗ ಈ ರಾಸ ಲೀಲೆಗಳೆರಡೂ ಕೂಡಿ ಪ್ರೇಕ್ಷಕರನ್ನು ಸೆಳೆಯುತ್ತದೆ. ನಿತ್ಯ ಬಳಕೆಯ ಪ್ರತಿಮೆಗಳನ್ನೇ ಬಳಸಿಕೊಂಡು ಸಾದಾ ಭಾಷೆಯಲ್ಲೇ ಅಲೌಕಿಕದ ಬಗ್ಗೆ ಮಾತಾಡುವ ಭಕ್ತಿ ಸಾಹಿತ್ಯದ ತಂತ್ರವು ಈ ಪ್ರಕಾರದಲ್ಲಿ ರಂಗಭೂಮಿಗೆ ರೂಪಾಂತರಗೊಂಡಿದೆ.[1]

ರಾಸಲೀಲಾ ಪ್ರದರ್ಶನ ಕಾಲಾನಂತರ ಅನೇಕ ಪ್ರಭಾವ ಪ್ರೇರಣೆಗಳಿಗೆ ಒಳಗಾಗಿರುವುದನ್ನು ಡಾ. ಚಂದ್ರಶೇಖರ ಕಂಬಾರ ಅವರು ಗುರುತಿಸಿ ಚೈತನ್ಯ ಪಂಥದ ‘ರಾಸಲೀಲಾ’ದ ಕೊಡುಕೊಳ್ಳುವಿಕೆ, ಪ್ರದರ್ಶನ ಕುರಿತು ಹೀಗೆ ವಿವರ ನೀಡಿದ್ದಾರೆ. ‘ಉತ್ತರ ಭಾರತದಲ್ಲಿ ವಿಷ್ಣು ಭಕ್ತಿಯಲ್ಲಿ ಕೃಷ್ಣ ಭಕ್ತಿಯಲ್ಲಿ ಕವಲೊಡೆದು ಕೃಷ್ಣ ಭಕ್ತಿಯಲ್ಲಿ ರುಕ್ಮಿಣಿ ಕೃಷ್ಣರನ್ನು ಕಾಂತಾಭಾವ ಭಕ್ತಿಯಿಂದ ಪೂಜಿಸುವ ಪಂಥ ಮಹಾರಾಷ್ಟ್ರದಲ್ಲಿ ಬೆಳೆಯಿತು. ಬಂಗಾಲದಲ್ಲಿ ರಾಧಾ-ಕೃಷ್ಣರನ್ನು ‘ಮಧುರಭಾವ ಭಕ್ತಿ’ ಯಿಂದ ಆರಾಧಿಸುವ ಪಂಥ ಹುಟ್ಟಿ ಕೊಂಡಿತು. ಬಂಗಾಲದಲ್ಲಿ ರಾಧಾ-ಕೃಷ್ಣ ಪಂಥ ತಲೆಯೆತ್ತುವಾಗಲೇ ಶಕ್ತಿ ಪಂಥದ ಪ್ರಭಾವಕ್ಕೊಳಗಾಗಿತ್ತು. ಈ ರಾಧಾ ಕೃಷ್ಣ ಪಂಥ ಚೈತನ್ಯ ದೇವನ ಮೂಲಕ ಕರ್ನಾಟಕ ಪ್ರವೇಶಿಸಿತು. ರಾಧಾ-ಕೃಷ್ಣರ ಮಧುರ ಭಾವ ಭಕ್ತಿ ಬೃಂದಾವನದ ರಾಸ ನೃತ್ಯದ ಪರಂಪರೆ ದಾಸರ ಲಾಸ್ಯದಂತೆಯೇ ಉತ್ತರ ಭಾರತವನ್ನು ಬಹುಬೇಗ ವ್ಯಾಪಿಸಿತು. ಚೈತನ್ಯರು ಧರ್ಮ ಪ್ರಸಾರಕ್ಕಾಗಿ ಜಾನಪದಕ್ಕೆ ತೀರ ಸಮೀಪದ ಭಕ್ತಿಯ ಆವೇಶ ತುಂಬಿದ ನರ್ತನವನ್ನು ಮಾಧ್ಯಮದಂತೆ ಸ್ವೀಕಾರ ಮಾಡಿದ್ದರು. ಅಸ್ಸಾಮ ಮಣಿಪುರಗಳತ್ತ ಇವರ ಪ್ರಭಾವ ಅತಿಯಾಯಿತು. ಪ್ರಾಚೀನ ಕಾಲದಿಂದಲೂ ಅಲ್ಲಿ ಪ್ರಚಾರದಲ್ಲಿದ್ದ ಲಾಯ್ ಹರೋಬ, ಖಂಬಾ ತೊಯಿಬಿ (ಶಿವ ಪಾರ್ವತಿ) ನೃತ್ಯಗಳ ಆಧಾರದ ಮೇಲೆ ರಾಸಲೀಲಾ ನೃತ್ಯಗಳು ಹುಟ್ಟಿಕೊಂಡವು. ಕೃಷ್ಣ ರಾಧೆಯ ಜೊತೆಗೆ ನಡೆಸಿದ ಹಲವಾರು ಪ್ರಣಯ ಕಥೆ ಮತ್ತು ಆತನ ಬಾಲಲೀಲೆಗಳೀಗ ಈ ನೃತ್ಯಗಳಿಗೆ ವಸ್ತುವಾದವು. ಲಕ್ನೋ, ಜಯಪುರಗಳ ಕಡೆಗೆ ಪ್ರಚಾರದಲ್ಲಿದ್ದ ಕಥಕ್ ನೃತ್ಯ ಕೂಡ ರಜಪೂತ ಮೊಘಲರ ಚಿತ್ರ ಕಲೆಯಿಂದ ಶೃಂಗಾರ ಭಾವಗಳನ್ನು ತೆಗೆದುಕೊಂಡು ರಾಧಾ-ಕೃಷ್ಣರಿಗೆ ಆರೋಪಿಸಿ ಅವರ ಲೀಲೆಗಳನ್ನಾಡತೊಡಗಿದರು. ಆದರೆ ಈ ನೃತ್ಯ ಮುಸಲ್ಮಾನರ ಸಂಪರ್ಕದಿಂದ ‘ನಾಚ್’ ಆಗಿ ಪರಿವರ್ತನೆ ಹೊಂದಿ ಕೀಳು ಶೃಂಗಾರವನ್ನೇ ಕೆಲದಿನ ರಾಧಾ-ಕೃಷ್ಣರ ಹೆಸರಿನಲ್ಲಿ ಚಿತ್ರಿಸಿ ಮುಂದೆ ಲೌಕಿಕಕ್ಕೆ ಇಳಿಯಿತು. ಗುಜರಾತದ ಲಾಸ್ಯ ಜಾತಿಯ ‘ಗರ್ಭಾನೃತ್ಯ’ ರಾಜಸ್ಥಾನದ ‘ರಾಸಧಾರಿ’ ಬಯಲಾಟ ಇವೆಲ್ಲವೂ ರಾಧಾ-ಕೃಷ್ಣರ ಲೀಲೆಗಳನ್ನೇ ಚಿತ್ರಿಸುತ್ತವೆ. ದಕ್ಷಿಣದಲ್ಲಿ ಮೊದ ಮೊದಲು ತಾಂಡವಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದ ಕಥಕಳಿಯಲ್ಲಿ ೧೭ನೆಯ ಶತಮಾನದಿಂದ ಕೃಷ್ಣಲೀಲೆಗಳು ಸೇರಿಕೊಂಡವೆಂದು ಕೃಷ್ಣಾಟ್ಟ ನಾಮನಾಟ್ಯಗಳ ಹುಟ್ಟಿನ ಬಗೆಗಿದ್ದ ಕಥೆಗಳಿಂದ ತಿಳಿದುಬರುತ್ತದೆ. ೧೫ನೆಯ ಶತಮಾನದವರೆಗೆ ಹೆಚ್ಚಾಗಿ ಶಿವಲೀಲೆಗಳನ್ನಾಡುತ್ತಿದ್ದ ಆಂಧ್ರದ ‘ಭಾಗವತುಲು’ ಮುಂದೆ ಭಾಗವತ ಪುರಾಣದ ಕಥೆಗಳನ್ನು ಆಯ್ದುಕೊಂಡರೆಂದೂ ತಿಳಿಯುತ್ತದೆ.[2] ಎಂದು ಸೂಚಿಸಿದ ಡಾ. ಚಂದ್ರಶೇಖರ ಕಂಬಾರರು ರಾಸಲೀಲೆ ಪ್ರದರ್ಶನದಲ್ಲಿ ಯಾವ ಯಾವ ಹಂತಗಳಿದ್ದವು ಎಂಬುದನ್ನು ತಿಳಿಸಿದ್ದಾರೆ. ರಾಸಲೀಲೆ ಪ್ರದರ್ಶನದಲ್ಲಿ ಪ್ರಮುಖವಾಗಿ ಆರು ಹಂತಗಳಿವೆ. ೧. ಕೃಷ್ಣನ ಪ್ರವೇಶ ನರ್ತನ ೨. ರಾಧೆಯ ಪ್ರವೇಶ ನರ್ತನ ೩. ಇವರಿಬ್ಬರ ಜೋಡಿ ನರ್ತನ; ಇದೇ ರಾಸಲೀಲೆಯ ಸರಿಯಾದ ಭಾಗ ೪. ಭಂಗಿ ಕೃಷ್ಣನೋ ರಾಧೆಯೋ ನರ್ತಿಸಲು ನಿರಾಕರಿಸುವುದು, ಪರಸ್ಪರ ವಾಗ್ವಾದ, ಮನವೊಲಿಸುವಿಕೆ ೫. ಮಿಲನ ೬. ಪ್ರಾರ್ಥನೆ ನೃತ್ಯದ ಎಲ್ಲ ಹಂತಗಳಲ್ಲಿಯೂ ಪಕ್ಕ ವಾದ್ಯಗಳನ್ನು ಬಾರಿಸುತ್ತಾರೆ. ನರ್ತಕರೂ, ಕೆಲಸಲ ಅವರ ಬದಲಾಗಿ ಗಾಯಕರೂ ಹಾಡುತ್ತಾರೆ. ರಾಧೆಯ ಹಾಡುಗಳನ್ನು ಹೆಂಗಸರೂ, ಕೃಷ್ಣನ ಹಾಡುಗಳನ್ನು ಪುರುಷರೂ ಹಾಡುತ್ತಾರೆ. ತತ್ವ, ವಿಧಾನಗಳು ಭಿನ್ನವಾದಂತೆ ಈ ನೃತ್ಯದಲ್ಲಿಯೂ ವೈವಿಧ್ಯ ಸಾಧ್ಯವಾಗುತ್ತದೆ. ಈ ನೃತ್ಯವನ್ನು ಭಾರತದ ಇನ್ನಿತರ ಪ್ರಾಂತ್ಯಗಳವರೂ ಸ್ವೀಕರಿಸಿ ತಂತಮ್ಮ ಮಣ್ಣಿನ ವಾಸನೆಗೊಗ್ಗುವಂತೆ ಬದಲಾಯಿಸಿಕೊಂಡಿದ್ದಾರೆ. ನೌಟುಂಕಿಯ ಕಥೆಗಳು ಉತ್ತರ ಕರ್ನಾಟಕದ ಬಯಲಾಟಗಳಿಗೆ ವಸ್ತುವಾಗಿ ಬಂದಂತೆ ರಾಧಾ-ಕೃಷ್ಣರ ಲಾಸ್ಯವೂ ಉತ್ತರದಿಂದಲೇ ಬಂದಿದೆ ಎಂದು ಡಾ. ಚಂದ್ರಶೇಖರ ಕಂಬಾರ ಹೇಳುತ್ತಾರೆ.

ರಾಧಾ-ಕೃಷ್ಣರ ರಾಸಲೀಲಾ ನೃತ್ಯದ ಮೂಲಕ ದಕ್ಷಿಣ ಭಾರತಕ್ಕೆ ಚೈತನ್ಯ ದೇವನು ಸುಮಾರು ಕ್ರಿ.ಶ. ೧೫೩೩ ರೊಳಗಾಗಿ ಪ್ರವೇಶಿಸಿರಬೇಕು. (ಚೈತನ್ಯ ದೇವನ ಕಾಲ ಕ್ರಿ.ಶ. ೧೪೮೫-೧೫೩೩) ಚೈತನ್ಯ ದೇವನ ಆಗಮನಕ್ಕಿಂತ ಮೊದಲೇ ವೈಷ್ಣನ ಪಂಥ ತನ್ನ ತತ್ವಗಳ ಮೂಲಕ ಗಟ್ಟಿಯಾದ ನೆಲೆಯನ್ನು ಕರ್ನಾಟಕದಲ್ಲಿ ಕಂಡುಕೊಂಡಿತ್ತು. ೧೫ನೆಯ ಶತಮಾನಕ್ಕಾಗಲೇ ವೈಷ್ಣವ ದೇವಾಲಯಗಳಲ್ಲಿ ದೇವರ ರಂಗಭೋಗ ಸೇವೆಗೆ ದೇವದಾಸಿಯರನ್ನು ನಿಯಮಿಸಲಾಗಿತ್ತು. ದೇವದಾಸಿಯರು ಪೂಜಾ ಸಮಯಕ್ಕೆ ದೇವಸ್ಥಾನದ ಎದುರಿಗೆ ಇರುವ ರಂಗಮಂಟಪದಲ್ಲಿ ನೃತ್ಯ, ಸಂಗೀತ ಸೇವೆ ಸಲ್ಲಿಸುತ್ತಿದ್ದರು. ರಾಜ-ಮಹಾರಾಜರು, ನಾಡಿನ ಜನತೆ ಈ ದೇವದಾಸಿಯರನ್ನು ಗೌರವದಿಂದ ಕಾಣುತ್ತಿದ್ದರು. ರಾಜರು ದೇವದಾಸಿಯರಿಗಾಗಿಯೇ ಅನೇಕ ದಾನ ದತ್ತಿಗಳನ್ನು ಬಿಟ್ಟಿದ್ದರು ಎಂಬುದು ಶಾಸನಗಳ ಮೂಲಕ ತಿಳಿಯುತ್ತದೆ. ರಾಧಾ-ಕೃಷ್ಣರ ಮಧುರ ಭಕ್ತಿ ಭಾವವನ್ನು ಸೂಚಿಸುವ ರಾಸಲೀಲಾ ನೃತ್ಯ ವೈಷ್ಣವ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ದೇವದಾಸಿಯರ ಮೇಲೂ ಪ್ರಭಾವ ಬೀರಿರಬೇಕು. ವಿಜಯನಗರದ ಅರಸರು ದೇವದಾಸಿ ಪರಿವಾರದವರಿಗೆ, ವೈಷ್ಣವ ಪಂಥದ ಅನುಯಾಯಿಗಳಿಗೆ ಸಾಕಷ್ಟು ಮನ್ನಣೆ ಪುರಸ್ಕಾರಗಳನ್ನು ನೀಡಿದ್ದರು ಎಂಬುದು ತಿಳಿಯುತ್ತದೆ. ಕ್ರಿ.ಶ. ೧೫೬೫ರ ವೇಳೆಗೆ ವಿಜಯನಗರ ಸಾಮ್ರಾಜ್ಯ ಸೋಲು ಕಂಡ ಮೇಲೆ ಈ ಪ್ರದೇಶದಲ್ಲಿ ಮುಸ್ಲಿಂ ರಾಜರ ಆಡಳಿತ ಪ್ರಾರಂಭವಾಯಿತು. ವೈಷ್ಣವ ಶೈವ ದೇವಾಲಯಗಳಿಗೆ ಹಿಂದೂ ಧರ್ಮದ ರಾಜರಿಂದ ಸಿಗುತ್ತಿದ್ದ ಮನ್ನಣೆ ಪುರಸ್ಕಾರಗಳು ಮುಸ್ಲಿಂ ರಾಜರಿಂದ ಸಿಗಲೇ ಇಲ್ಲ. ಬದಲಾಗಿ ಶೈವ, ವೈಷ್ಣವ ದೇವಾಲಯಗಳಲ್ಲಿ ನಡೆಯುತ್ತಿದ್ದ ಆರಾಧನೆ ಸಂಪ್ರದಾಯಗಳಿಗೂ ಕುತ್ತು ಬಂದಿತು. ದೇವಸ್ಥಾನಗಳನ್ನೇ ಆಶ್ರಯಿಸಿದ್ದ ದೇವದಾಸಿಯರ ಬದುಕು ದುಸ್ತರವಾಯಿತು. ದೇವಾಲಯಗಳಲ್ಲಿ ಕೇವಲ ಭಕ್ತಿ ಪ್ರತಿಬಿಂಬಿಸುವ ಸಂಗೀತ ಹಾಡುಗಳ ಮೂಲಕ ನೃತ್ಯ ಮಾಡುತ್ತಿದ್ದ ದೇವದಾಸಿಯರು ದೇವಸ್ಥಾನದ ಹೊರಗಿನ ಜಗತ್ತನ್ನು ಪ್ರವೇಶಿಸಿದಾಗ ಅವರ ಭಕ್ತಿಯುತವಾದ ಸಂಗೀತ, ನೃತ್ಯ ಜನರಿಗೆ ರುಚಿಸಲಿಲ್ಲ. ರಾಧಾ-ಕೃಷ್ಣರ ರಾಸಲೀಲೆಯ ನಾಟ್ಯವೂ ಜನರಿಗೆ ಹಿಡಿಸಲಿಲ್ಲ. ನಂತರ ದೇವದಾಸಿ ಪರಿವಾರದವರು ವಿಷ್ಣುವಿನ ಲೀಲೆಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಅದೂ ಜನರಿಗೆ ಹಿಡಿಸದೇ ಇದ್ದಾಗ ತಮ್ಮಲ್ಲಿದ್ದ ಮಾರ್ಗ ಶೈಲಿಯನ್ನು ಬಿಟ್ಟು ಜನರ ಅಭಿರುಚಿಗೆ ತಕ್ಕಬಹುದಾದ ಜಾನಪದ ಶೈಲಿಯನ್ನು ತಮ್ಮ ಪ್ರದರ್ಶನಗಳಲ್ಲಿ ಅಳವಡಿಸಿಕೊಂಡರು. ಇದರ ಪರಿಣಾಮವಾಗಿ ರಾಧಾ-ಕೃಷ್ಣರ ರಾಸಲೀಲೆ ದೇವದಾಸಿ ಪರಿವಾರದಿಂದ ಜಾನಪದದ ಮೈ ಗುಣಕ್ಕೆ ಒಗ್ಗುವಂತೆ ಮಾರ್ಪಾಡು ಹೊಂದಿ, ಶೃಂಗಾರವೇ ಪ್ರಮುಖ ಸ್ಥಾನ ಪಡೆದುಕೊಂಡು ‘ರಾಧಾನಾಟ’ ಎಂದು ರೂಪ ಪಡೆಯಿತು. ೧೬-೧೭ನೆಯ ಶತಮಾನಕ್ಕೆ ಜನಪ್ರಿಯವಾಗಿದ್ದ ರಾಧಾ-ಕೃಷ್ಣರ ರಾಸಲೀಲೆಯನ್ನು ಜನಪದರ ಮನಸ್ಸುಗಳಿಗೆ ಸ್ಪಂದಿಸುವಂತೆ ಭಕ್ತಿ ಮತ್ತು ಶೃಂಗಾರ ಭಾವವನ್ನು ತುಂಬಿ ‘ರಾಧಾನಾಟ’ ವೆಂದು ರೂಪಾಂತರಿಸಿ ೧೭ನೆಯ ಶತಮಾನದ ಉತ್ತರಾರ್ಧದ ಹೊತ್ತಿಗೆ ಪ್ರದರ್ಶನ ಕಂಡಿತು ಎಂದು ಹೇಳಬಹುದು. ರಾಧಾನಾಟ ಸಣ್ಣಾಟದ ಒಂದು ಪ್ರಕಾರ ಎಂದು ಗುರುತಿಸಲ್ಪಟ್ಟಿದ್ದರಿಂದ ಸಣ್ಣಾಟ ಎಂಬ ರೂಪ ಪಡೆದದ್ದು ಈ ಕಾಲಘಟ್ಟದಲ್ಲಿ ಎಂದು ಹೇಳಬಹುದು. ಇದು ಸಣ್ಣಾಟದ ಉಗಮದ ಮೊದಲ ಹಂತ.

‘ವೈಷ್ಣವ ಪರ ಆಟಗಳನ್ನು ಆಡುವ ದಾಸರು ಮೇಳವೊಂದನ್ನು ಕಟ್ಟಿಕೊಂಡು ಆಟವಾಡುವುದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು. ಅವರಾಡುವ ಆಟಗಳು ‘ದಾಸರಾಟ’ವೆಂದು ಪ್ರಸಿದ್ಧಿ ಪಡೆದವು’[3] ಎಂಬ ನಿರ್ಧಾರ ಸರಿಯಲ್ಲ. ಹರಿದಾಸರಾರೂ ವೇದಿಕೆ ನಿರ್ಮಿಸಿಕೊಂಡು ಆಟವಾಡಿದವರಲ್ಲ. ಹರಿದಾಸರಿಗೂ ಆಟ ಆಡುವ ದಾಸರಿಗೂ ಯಾವುದೇ ಸಂಬಂಧವಿಲ್ಲ. ಆಟವಾಡುವ ದಾಸರು ದೇವದಾಸಿ ಸಂತಾನದವರು. ಈ ಆಟವಾಡುವ ದಾಸರು ಮೊದಲು ರಾಧಾನಾಡವನ್ನೇ ಆಡುತ್ತಿದ್ದರು. ಕಾಲಾನಂತರ ದಾಸ ಸಮುದಾಯದವರು ಆಡುವ ಆಟ ‘ದಾಸರಾಟ’ ಎಂದು ಬೆಳೆಯಿತು. ರಾಧಾನಾಟಕ್ಕೂ ದಾಸರಾಟಕ್ಕೂ ವ್ಯತ್ಯಾಸಗಳುಂಟು ಅದನ್ನು ದಾಸರಾಟದಲ್ಲಿ ಚರ್ಚಿಸಿದ್ದೇನೆ.

ಡಾ. ಚಂದ್ರಶೇಖರ ಕಂಬಾರವರು ರಾಧಾ-ಕೃಷ್ಣರ ರಾಸಲೀಲೆಯ ಪ್ರದರ್ಶನದಲ್ಲಿ ಗುರುತಿಸಿದ ಆರು ಹಂತಗಳಾದ ಕೃಷ್ಣನ ಪ್ರವೇಶ, ನರ್ತನ; ರಾಧೆಯ ಪ್ರವೇಶ, ನರ್ತನ; ಇವರಿಬ್ಬರ ಜೋಡಿ ನರ್ತನ; ಭಂಗಿ; ಕೃಷ್ಣನೋ ರಾಧೆಯೋ ನರ್ತಿಸಲು ನಿರಾಕರಿಸುವುದು. ಪರಸ್ಪರ ವಾಗ್ವಾದ ಮನವೊಲಿಸುವಿಕೆ; ಮಿಲನ; ಪ್ರಾರ್ಥನೆ ಇವುಗಳನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ರಾಧಾನಾಟದಲ್ಲಿ ಪ್ರೇಕ್ಷಕರ ಹೃದಯಕ್ಕೆ ಮುಟ್ಟುವಂತ ಮಾಡಿದರು. ರಾಧೆಯ ಪಾತ್ರವನ್ನು ಈ ದೇವದಾಸಿ ಸಂತಾನದ ಹೆಣ್ಣು ಮಕ್ಕಳೇ ನಿರ್ವಹಿಸುತ್ತಿದ್ದುದರಿಂದ ಜನರು ಈ ಆಟವನ್ನು ಬಹುಬೇಗ ಸ್ವೀಕರಿಸಿರಬೇಕು ಎನಿಸುತ್ತದೆ.

ರಾಧಾಕೃಷ್ಣರ ರಾಸಲೀಲಾ ಧರ್ಮದ ಕವಚವನ್ನು ಕಳಚಿಕೊಂಡು ಜಾನಪದದ ರಾಧಾನಾಟದ ರೂಪ ಪಡೆಯಿತು. ಜಾನಪದದ ಯಾವುದೇ ರೂಪವಿರಲಿ ಅದು ‘ತಲೆಮಾರಿನಿಂದ ತಲೆಮಾರಿಗೆ ಜನತೆಯ ಅಭಿರುಚಿಯಲ್ಲಿ ವ್ಯತ್ಯಾಸವಾಗುವುದು ಸತ್ಯ ಸಂಗತಿ. ಒಂದೊಂದು ಕಾಲದ ಜನಾಭಿರುಚಿ ಒಂದೊಂದು ಬಗೆಯ ಸಂಸ್ಕೃತಿಯನ್ನು ಸೃಷ್ಟಿಸುತ್ತದೆ. ಹೊಸ ಸಂಸ್ಕೃತಿ ಹಳೆಯ ಸಂಸ್ಕೃತಿಯ ಸತ್ವ ಬಲಗಳ ನೆರವಿನಿಂದಲೇ ನಿರ್ಮಿತವಾಗಿರುವುದು ಎಂಬುದನ್ನು ನಾವು ಮರೆಯಬಾರದು’. [4] ರಾಧಾ-ಕೃಷ್ಣರ ರಾಸಲೀಲಾ ರಾಧಾನಾಟವಾಗಿ ಪರಿವರ್ತನೆ ಹೊಂದಿದ ಮೇಲೆ ಅದು ಜನಾಭಿರುಚಿಗೆ ತಕ್ಕಂತೆ ಸ್ಥಿತ್ಯಂತರಗಳನ್ನು ಪಡೆಯತೊಡಗಿತು. ರಾಧಾನಾಟದ ಮೇಲೆ ಶಕ್ತಿ ಪಂಥ, ಹರದೇಶಿ-ನಾಗೇಶಿ ಸಂಪ್ರದಾಯದ ಮೂಲಕ ಅನೇಕ ಪ್ರಭಾವಗಳನ್ನು ಬೀರಿತು. ರಾಧಾನಾಟದ ಬೆಳವಣಿಗೆಯಲ್ಲಿ ಅನೇಕ ಹರದೇಶಿ-ನಾಗೇಶಿ ಸಂಪ್ರದಾಯದ ಕಲಾವಿದರು ರಾಧಾನಾಟವನ್ನು ತಮ್ಮ ಅಭಿರುಚಿಗೆ ತಕ್ಕಂತೆ ಬದಲಾಯಿಸಿಕೊಂಡದ್ದು ಕಂಡುಬರುತ್ತದೆ.

ರಾಸಲೀಲಾದಲ್ಲಿರುವಂತೆ ರಾಧಾನಾಟದಲ್ಲಿಯೂ ಎರಡು ಭಾಗಗಳಿವೆ. ‘ರಾಸ’ದಲ್ಲಿ ಕೃಷ್ಣ ರಾಧೆಯ ಪ್ರವೇಶ ಅವರಿಬ್ಬರ ನರ್ತನವಿದ್ದರೆ ರಾಧಾನಾಟದ ಪೂರ್ವರಂಗದಲ್ಲಿ (ಶಕ್ತಿ ಹೆಚ್ಚು ಎಂದು ಪ್ರತಿಪಾದಿಸಲ್ಪಡುವ ರಾಧಾನಾಟವಾಗಿದ್ದರೆ ಸ್ತ್ರೀ ದೇವತೆಯ ಸ್ತುತಿ, ಶಿವ ಹೆಚ್ಚು ಎಂದು ಚಿತ್ರಿಸಲ್ಪಡುವ ಆಟವಾಗಿದ್ದರೆ ಗಣಪತಿ ಸ್ತುತಿ ಇರುತ್ತದೆ) ಸ್ತುತಿ ಪದ್ಯದ ನಂತರ ಗೊಲ್ಲತಿ ರಂಗಕ್ಕೆ ಬರುತ್ತಾಳೆ. ದೂತಿ ಅಥವಾ ಹಾಸ್ಯ ಪಾತ್ರ ಗೊಲ್ಲತಿಯನ್ನು ನೀನು ಯಾರು? ಇಲ್ಲಿಗೇಕೆ ಬಂದಿರುವೆ? ಎಂದು ಪ್ರಶ್ನಿಸುತ್ತಾಳೆ. ನಾನು ಹಾಲು, ಮೊಸರು, ಬೆಣ್ಣೆ ಮಾರುವ ಗೊಲ್ಲತಿ, ವ್ಯಾಪಾರಕ್ಕಾಗಿ ಬಂದಿದ್ದೇನೆ ಎಂದು ತಿಳಿಸುತ್ತ ಹಾಲು, ಮೊಸರು ಬೆಣ್ಣೆಯ ವರ್ಣನೆ ಮಾಡುತ್ತಾಳೆ. ಅದನ್ನು ಕೇಳಿದ ದೂತಿ ನೀನು ತಂದಿರುವ ಹಾಲು ಮೊಸರನ್ನು ಕೊಳ್ಳುವಷ್ಟು ಯೋಗ್ಯ ಜನ ಇಲ್ಲಿಲ್ಲ. ನೀನು ಗೋಕುಲಕ್ಕೆ ಹೋಗು ಅಲ್ಲಿ ನಿನಗೆ ವ್ಯಾಪಾರವಾಗುತ್ತದೆ ಎಂದು ಹೇಳಿ ಕಳುಹಿಸುತ್ತಾನೆ.

ಗೊಲ್ಲತಿ ಹಾಲು ಮೊಸರಿನ ಬುಟ್ಟಿಯನ್ನು ಹೊತ್ತುಕೊಂಡು ಗೋಕುಲಕ್ಕೆ ಬರುತ್ತಾಳೆ. ಬಾಲ ಗೋಪಾಲ ಅವಳನ್ನು ತಡೆದು ನಿಲ್ಲಿಸಿ ಇಲ್ಲಿ ವ್ಯಾಪಾರ ಮಾಡಬೇಕೆಂದರೆ, ಸುಂಕ ಕೊಡಬೇಕೆಂದು ಕೇಳುತ್ತಾನೆ. ಗೊಲ್ಲತಿ ಸುಂಕ ಕೊಡಲು ನಿರಾಕರಿಸುತ್ತಾಳೆ. ಆಗ ಕೃಷ್ಣ ಗೊಲ್ಲತಿಯನ್ನು ಸುಂಕಕ್ಕಾಗಿ ಪೀಡಿಸುತ್ತಾನೆ. ಕೊನೆಗೆ ಇಬ್ಬರಲ್ಲಿಯೂ ಕೆಲ ಹೊತ್ತು ವಾದ-ವಿವಾದಗಳು ಉದ್ಬವಿಸುತ್ತವೆ. ಕೊನೆಗೆ ಗೊಲ್ಲತಿ ನೀನು ಮುಂದಿನ ಜನ್ಮದಲ್ಲಿ (ಕೃಷ್ಣ) ಗುಲಪೋಜಿಯಾಗು, ನಾನು ಚಿಮಣಾ ಆಗುತ್ತೇನೆ. ದೂತಿ ಸಖಾರಾಮ ತಾತ್ಯ ಆಗಿ ಜನ್ಮವೆತ್ತುತ್ತಾನೆ. ಆಗ ನಿನ್ನ ಕೈವಶಳಾಗಿ ಸುಂಕ ಕೊಡುತ್ತೇನೆ ಎಂದು ಹೇಳುತ್ತಾಳೆ. ಇಲ್ಲಿಗೆ ಪೂರ್ವರಂಗ ಮುಕ್ತಾಯವಾಗುತ್ತದೆ. ರಾಧಾನಾಟದ ಪೂರ್ವರಂಗದಲ್ಲಿ ಕೃಷ್ಣ ಗೊಲ್ಲತಿಯಂತಹ ಪೌರಾಣಿಕ ಪಾತ್ರಗಳು ಮುಂದಿನ ಜನ್ಮದಲ್ಲಿ ಅಂದರೆ ಉತ್ತರ ರಂಗದಲ್ಲಿ ಲೌಕಿಕ ಪಾತ್ರಗಳ ಕಡೆಗೆ ತಿರುಗುತ್ತವೆ. ಇಲ್ಲಿ ಪ್ರೇಮ, ಕಾಮ, ಮೋಹಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇರುತ್ತದೆ. ರಾಧಾನಾಟದ ಉತ್ತರಾರ್ಧದ ಕಥೆ ಗುಲಪೋಜಿ, ಸಖಾರಾಮತಾತ್ಯ ಇಬ್ಬರೂ ಪಗಡೆ ಆಡುತ್ತ ಕುಳಿತಾಗ ಚಿಮಣಾ ಇವರ ಮುಂದೆ ಹಾದು ಹೋಗುವಳು. ಚಿಮಣಾಳನ್ನು ಕಂಡು ಗುಲಪೋಜಿ ಮೋಹಿತನಾಗುತ್ತಾನೆ. ಸಖಾರಾಮ ತಾತ್ಯನನ್ನು ಚಿಮಣಾನ ಹತ್ತಿ ಗುಲಪೋಜಿ ತನ್ನ ಬಯಕೆಯನ್ನು ತಿಳಿಸಲು ಕಳಿಸುತ್ತಾನೆ. ಚಿಮಣಾ ಒಪ್ಪುವುದಿಲ್ಲ. ಗುಲಪೋಜಿ ನೇರವಾಗಿ ಚಿಮಣಾ ಹತ್ತಿರ ಹೋಗುತ್ತಾನೆ. ಇಬ್ಬರ ನಡುವೆ ವಾದ ವಿವಾದಗಳು ಏರ್ಪಡುತ್ತವೆ. ಚಿಮಣಾ ಗುಲಪೋಜಿ ಕೈವಶವಾಗದಿದ್ದಾಗ, ಎಲ್ಲವನ್ನೂ ತ್ಯಜಿಸಿ ಗುಲಪೋಜಿ ದೇಶಾಂತರ ಹೋಗುತ್ತಾನೆ. ನಂತರ ಚಿಮಣಾಳ ಮನಸ್ಸು ಪರಿವರ್ತನೆಯಾಗಿ ಗುಲಪೋಜಿಗಾಗಿ ಹುಡುಕಾಡುತ್ತಾಳೆ. ಆಗಲೇ ಗುಲಪೋಜಿ ಸನ್ಯಾಸಿಯಾಗಿರುತ್ತಾನೆ. ನನ್ನದು ತಪ್ಪಾಗಿದೆ. ಸನ್ಯಾ ಸತ್ವವನ್ನು ಬಿಟ್ಟು ನನ್ನನ್ನು ಸ್ವೀಕರಿಸಬೇಕೆಂದು ಚಿಮಣಾ ಕೇಳಿಕೊಳ್ಳುತ್ತಾಳೆ. ಅದಕ್ಕೆ ಗುಲಪೋಜಿ ಒಪ್ಪುವುದಿಲ್ಲ. ಇವರಿಬ್ಬರ ನಡುವೆ ಮತ್ತ ವಾದ-ವಿವಾದಗಳು ಹುಟ್ಟಿಕೊಳ್ಳುತ್ತವೆ. ಕೊನೆಗೆ ಗುಲಪೋಜಿ ಚಿಮಣಾಳನ್ನು ಸ್ವೀಕರಿಸುತ್ತಾನೆ. ಪೌರಾಣಿಕ ಪಾತ್ರಗಳು ಲೌಕಿಕದೆಡೆಗೆ ತಿರುಗುವುದೆಂದರೆ ಹೊಸ ರೂಪಕ್ಕೆ ತಿರುಗುವುದೆಂದೇ ಅರ್ಥ. ಹಳೆಯ ಸಂಸ್ಕೃತಿ ಸತ್ವ ಬಲಗಳನ್ನು ಕಳಚಿಕೊಳ್ಳದೇ ಅದನ್ನು ಉಳಿಸಿಕೊಂಡು ನವೀಕರಣ ಹೊಂದಿದೆ. ರಾಧಾನಾಟದ ಉತ್ತರ ರಂಗ ಕಾಲ ಕಾಲಕ್ಕೆ ಜನರ ಕವಿಗಳ ಆಶಯಕ್ಕೆ ತಕ್ಕಂತೆ ನವೀಕರಣಗೊಳ್ಳುತ್ತಲೇ ನಡೆಯಿತು. ಆದರೆ ರಾಧಾನಾಟದ ಪೂರ್ವರಂಗ ಮಾತ್ರ ಬದಲಾವಣೆಗೆ ಒಳಪಡಲಿಲ್ಲ.

ರಾಸಲೀಲೆಯ ಉತ್ತರಾರ್ಧದ ‘ಲೀಲೆ’ ಪ್ರದರ್ಶನದಲ್ಲಿ ಕೃಷ್ಣನೋ, ರಾಧೆಯೋ ನರ್ತಿಸಲು ನಿರಾಕರಿಸುವುದು ಪರಸ್ಪರ ವಾಗ್ವಾದ, ಮನವೊಲಿಸುವಿಕೆ, ಮಿಲನ ಮತ್ತು ಕೃಷ್ಣ ಪುರಾಣದಿಂದ ಆಯ್ದುಕೊಂಡ ಯಾವುದಾದರೂ ಒಂದು ಲೀಲೆ ಇಲ್ಲಿ ಪ್ರದರ್ಶಿಸಲ್ಪಡುತ್ತದೆ.

ರಾಧಾನಾಟ ಕುರಿತು ಬೆಟಗೇರಿ ಕೃಷ್ಣಶರ್ಮರು ಶೃಂಗಾರ ರಸವೇ ಸ್ಥಾಯಿಯಾಗಿರುವ ಈ ಆಟದ ಮಾತು ಅಭಿನಯ ನೃತ್ಯಗಳು ಜಾನಪದದ ಅಭಿರುಚಿಗೆ ತಕ್ಕವುಗಳಾಗಿವೆ. ರಾಧಾನಾಟದ ಪಾತ್ರಗಳು ಇಂದಿನ ನಾಟಕ ಮತ್ತು ಕಾದಂಬರಿಯ ಪಾತ್ರಗಳಂತೆ ಪ್ರಥಮ ದರ್ಶನದಲ್ಲಿಯೇ ಸಂಸಾರ ಆರಂಭಿಸಿ ಬಿಡುವುದಿಲ್ಲ. ರಾಧಾನಾಟದ ಹೆಣ್ಣು ಪಾತ್ರ ಲಜ್ವೆ, ಭೀತಿ ನೀತಿಗಳ ಮೂಲಕ ಸಂಯಮದಿಂದ ವರ್ತಿಸುತ್ತದೆ. ಹೆಣ್ಣಿನ ಸಂಯಮ ಗಂಡನ್ನು ಕಾತರಗೊಳಿಸಿ ಕೋಪವಶನನ್ನಾಗಿ ಮಾಡುತ್ತದೆ. ಗಂಡಿನ ಕೋಪ ಹೆಣ್ಣಿನ ಕರುಳನ್ನು ಕರಗಿಸುತ್ತದೆ. ಸಂಯಮಯುಕ್ತವಾದ ಪ್ರಣಯಭಾವವನ್ನು ನಡೆಸುತ್ತಲೇ ಗಂಡನ್ನು ಹೆಣ್ಣು ತನ್ನವನನ್ನಾಗಿ ಮಾಡಿಕೊಳ್ಳುತ್ತದೆ. ಹೆಣ್ಣು ಗಂಡುಗಳ ಪ್ರಣಯಲೀಲೆಯ ಸಹಜಚಿತ್ರವನ್ನು ನಾವು ರಾಧಾನಾಟದಲ್ಲಿ ಕಾಣಬಹುದು. [5] ಎಂದು ರಾಧಾನಾಟ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾಸರಾಟ

ಸಣ್ಣಾಟದ ಉಗಮದ ಮೊದಲನೆಯ ಘಟ್ಟದಲ್ಲಿಯೇ ‘ದಾಸರಾಟ’ವೆಂಬ ಪ್ರಕಾರ ರೂಪ ಪಡೆಯಿತು. ಆಟ ಆಡುವ ದಾಸ ಸಮುದಾಯದವರೇ ರಾಧಾನಾಟದ ನಂತರ ಒಂದೆರಡು ದಶಕಗಳಲ್ಲಿ ಈ ಪ್ರಕಾರಕ್ಕೆ ಹುಟ್ಟು ಹಾಕಿದಂತೆ ತೋರುತ್ತದೆ. ಡಾ. ಬಸವರಾಜ ಮಲಶೆಟ್ಟಿ ಅವರು ‘ದೇವಸ್ಥಾನಗಳಲ್ಲಿ ರಂಗಭೋಗ ಸಲ್ಲಿಸುತ್ತಿದ್ದ ದೇವದಾಸಿಯರಿಗೆ ರಾಜಾಶ್ರಯ ತಪ್ಪಿದ ನಂತರ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಯುವ ಜನತೆಯ ಮನಸ್ಸು ಕೆರಳಿಸುವಂತಹ ಹರಕು ಮುರಾಕದ ತೇಪೆ ಕಥೆಯೊಂದಿಗೆ ದಾಸರಾಟ ಎಂಬ ಪ್ರದರ್ಶನಕ್ಕೆ ಹುಟ್ಟು ಹಾಕಿದರು. ದಾಸರಾಟವೇ ಮೊದಲು ರೂಪ ಪಡೆದು ನಂತರ ರಾಧಾನಾಟ ಹುಟ್ಟಿಕೊಂಡಿತು’ ಎಂದು ಅಭಿಪ್ರಾಯ ಪಡುತ್ತಾರೆ.

ಸುಮಾರು ೧೬ನೆಯ ಶತಮಾನದವರೆಗೆ ವೈಷ್ಣವ ದೇವಸ್ಥಾನಗಳಲ್ಲಿ ಅತ್ಯಂತ ಭಕ್ತಿಯಿಂದ ರಂಗಸೇವೆ ಸಲ್ಲಿಸುತ್ತಿದ್ದ ಈ ದೇವದಾಸಿ ಸಮುದಾಯದವರು ರಾಜಾಶ್ರಯ ತಪ್ಪಿದ ನಂತರ ಬದುಕು ರೂಪಿಸಿಕೊಳ್ಳಲು ಜನರ ಕೀಳು ಅಭಿರುಚಿಯ ತೃಪ್ತಿಗಾಗಿ ಅಷ್ಟು ಬೇಗನೇ ಅಂಟಿಕೊಂಡು ‘ದಾಸರಾಟ’ ಎಂಬ ಆಟವನ್ನು ಹುಟ್ಟು ಹಾಕಿದರು ಎಂದು ಅಂದುಕೊಳ್ಳುವುದು ಸರಿಯಲ್ಲ. ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ದೇವದಾಸ-ದಾಸಿಯರನ್ನು ಸಮಾಜ ಗೌರವದಿಂದ ಕಾಣುತ್ತಿತ್ತು. ಇಂತಹ ಭಾವನೆಯುಳ್ಳ ಜನ ಸಮುದಾಯ ರಾಜಾಶ್ರಯ ತಪ್ಪಿ ನಿರ್ಗತಿಕರಾದ ದೇವದಾಸಿಯರಿಂದ ಅಷ್ಟುಬೇಗ ಪ್ರೇಮ ಕಾಮದಿಂದಕೂಡಿದ ಆಟವನ್ನು ಜನತೆ ಮೊದಲು ಬಯಸಿಯೇ ಇರಲಿಲ್ಲ. ದೇವದಾಸಿ ಸಮುದಾಯ ನಿಗ೪ತಿಕರಾದ ಮೇಲೆ ಭಕ್ತಿ ಮತ್ತು ಪ್ರೇಮದ ಮಧುರ ಭಾವನೆಯುಳ್ಳ ರಾಧಾನಾಟದಲ್ಲಿ ಭಾಗವಹಿಸಿ ಒಂದೆರಡು ದಶಕಗಳ ನಂತರ ‘ದಾಸರಾಟ’ ಎಂಬ ಆಟವನ್ನು ರೂಪಿಸಿಕೊಂಡಂತಿದೆ. ಬಸವಿ ಬಿಡುವ ಪದ್ಧತಿ, ವ್ಯಭಿಚಾರಕ್ಕೆ ಪ್ರೋತ್ಸಾಹ ನೀಡುವಿಕೆ ಇವೆಲ್ಲವೂ ಹಂತ ಹಂತವಾಗಿ ಸಮಾಜದ ಮೇಲ್ವರ್ಗಧ ಜನರ ಪ್ರೇರಣೆ ಪ್ರೋತ್ಸಾಹಗಳಿಂದರೂಪ ಪಡೆದಂತೆ ಕಾಣುತ್ತದೆ. ಹೀಗಾಗಿ ನಿರಾಶ್ರಿತರಾದ ದೇವದಾಸಿ ಸಮುದಾಯ ಮೊದಲು ‘ರಾಧಾನಾಟ’ ಎಂಬ ಪ್ರಕಾರದಲ್ಲಿ ಒಂದೆರಡು ದಶಕಗಳವರೆಗೆ ಸೇವೆ ಸಲ್ಲಿಸಿದರು. ನಿಷ್ಕಳಂಕವಾದ ಪ್ರೇಮ ಭಾವನೆ ಹೊತ್ತು ಪ್ರದರ್ಶಿಸಲ್ಪಡುತ್ತಿದ್ದ ರಾಧಾನಾಟಕದಲ್ಲಿ ಜನತೆ ಬಯಸಲ್ಪಡುತ್ತಿದ್ದಕಾಮ, ಪ್ರೇಮ, ಮೋಹಗಳನ್ನು ತುಂಬಲು ಮನಸ್ಸು ಒಪ್ಪದೇ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತಹ ಆಟಕ್ಕೆ ನಾಂದಿ ಹಾಡಿದರು. ಆ ಆಟವೇ ದಾಸರಾಟವಾಯಿತು. ರಾಧಾನಾಟದಲ್ಲಿ ದಾಸರ ಸ್ತ್ರೀಯರು ಭಾಗವಹಿಸುತ್ತಿದ್ದರೂ ಅಲ್ಲಿ ಅವರಿಗೆ ಸ್ವಾತಂತ್ರ್ಯ ಕಡಿಮೆ ಇತ್ತು. ಭಕ್ತಿ ಅವರನ್ನು ಅಲ್ಲಿ ಕಟ್ಟಿ ಹಾಕಿತ್ತು. ದಾಸರಾಟ ರೂಪ ಪಡೆದ ಮೇಲೆ ದೇವದಾಸಿ ಸ್ತ್ರೀಯರಿಗೆ ಸ್ವಾತಂತ್ರ್ಯ ಸಿಕ್ಕ ಹಾಗಾಯಿತು. ಇಲ್ಲಿ ಅವರು ಮೈ ಚಳಿ ಬಿಟ್ಟು ರಂಗದ ಮೇಲೆ ಕುಣಿಯತೊಡಗಿದರು. ಪ್ರೇಮ, ಕಾಮ, ವಿರಹ ವೇದನೆ ತುಂಬಿದ ದ್ವಂದ್ವಾರ್ಥವುಳ್ಳ ಸಂಭಾಷಣೆಗಲನ್ನು ರಂಗದ ಮೇಲೆ ಹೆಣೆಯತೊಡಗಿದರು. ದಾಸರಾಟಗಳಲ್ಲಿ ಭಕ್ತಿಯ ಅಭಿವ್ಯಕ್ತಿ ಇಲ್ಲವೇ ಇಲ್ಲ ಎಂದು ಹೇಳಬಹುದು. ರಾಧಾನಾಟ ಒಂದು ಹಂತದಲ್ಲಿ ಭಕ್ತಿಯ ತಳಹದಿಯ ಮೇಲೆ ಬೆಳೆದು ಬಂದಿರುವಂತಹದ್ದು. ದಾಸರಾಟ ಜನರ ಆಶೋತ್ತರಗಳ ತಳಹದಿಯ ಮೇಲೆ ರೂಪಗೊಂಡಿರುವಂತಹದ್ದು, ದಾಸರಾಟ, ರಾಧಾನಾಟದ ಕೆಲವು ಅಂಶಗಳನ್ನು ಬಳಸಿಕೊಂಡು ರೂಪ ಪಡೆದಿದೆ.

‘ವೈಷ್ಣವ ಧರ್ಮ ಪ್ರಚಾರಕ್ಕಾಗಿಯೇ ದಾಸರಾಟಗಳು ಹುಟ್ಟಿಕೊಂಡವು’[6] ಎಂಬ ಅಭಿಪ್ರಾಯಗಳನ್ನು ಅನೇಕ ವಿದ್ವಾಂಸರು ಮುಂದಿಟ್ಟಿದ್ದಾರೆ. ದಾಸರಾಟಗಳನ್ನು ಆಡುವ ದೇವದಾಸ-ದಾಸಿಯರು ಒಂದು ಕಾಲ ಘಟ್ಟದಲ್ಲಿ ವೈಷ್ಣವ ದೇವಾಲಯಗಳಲ್ಲಿಸೇವೆ ಸಲ್ಲಿಸುತ್ತಿದ್ದರು.ಅಂದು ವೈಷ್ಣವ ಧರ್ಮಧ ಚೌಕಟ್ಟಿಗೆ ಒಳಪಟ್ಟಿದ್ದರೆಂಬುದು ನಿಜ. ದೇವಾಲಯದ ಧರ್ಮದ ನಂಟು ಕಳೆದುಕೊಂಡ ಮೇಲೆ ಇವರು ತೊಟ್ಟಿದ್ದ ಧಾರ್ಮಿಕ ಕವಚವನ್ನು ಹಂತ ಹಂತವಾಗಿ ಕಳಚಿಕೊಂಡಿದ್ದಾರೆ. ಹೀಗಾಗಿ ಇವರು ಆಡುವ ಆಟಗಳು ವೈಷ್ಣವ ಪಂಥದಪ್ರಚಾರಕ್ಕಾಗಿಯೇ ಜನ್ಮ ತಾಳಿವೆ ಎಂದು ಹೇಳುವ ಯಾವ ಅಂಶಗಳೂ ದಾಸರಾಟಗಳಲ್ಲಿ ಇಲ್ಲ. ಇವರಿಗೆ ಅಂಟಿದ ವೈಷ್ಣವ ಪಂಥದಸೊಂಕು ಮಾತ್ರ ಆಟದ ಪ್ರದರ್ಶನದ ಪೂರ್ವದ ಆಚರಣೆಗಳಲ್ಲಿ, ಪೂರ್ವ ರಂಗದಲ್ಲಿ ಅಲ್ಪ ಸ್ವಲ್ಪ ಉಳಿದುಕೊಂಡು ಬಂದಿದೆ.

ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಇವರನ್ನು ‘ದೇವದಾಸ’ ಸಮುದ್ಯಾದವರು ಎಂದು ಹೇಳಲ್ಪಡುತ್ತಿದ್ದ ಜನ ಇವರು ದೇವರ ಸೇವೆ ಬಿಟ್ಟು ಹೊಟ್ಟೆ ಪಾಡಿಗಾಗಿ ವಿವಿಧ ವೃತ್ತಿಗಳನ್ನು ಆಶ್ರಯಿಸಿದ ಮೇಲೆ ‘ದಾಸರ’ ಸಮುದಾಯದವರು ಎಂದು ಗುರುತಿಸಿದರು. ಈಸಮುದಾಯ ದೇವಾಲಯಗಳಲ್ಲಿಯ ದೇವರ ಸೇವೆಯಿಂದ ಕಳಚಿಕೊಳ್ಳುವುದೇ ತಡ, ದೇವದಾಸರು ಎಂಬ ಶಬ್ದದ ‘ದೇವ’ ಪದಕಳಚಿ ಹೋಗಿ ಕೇವಲ ‘ದಾಸರು’ ಎಂಬುದು ಮಾತ್ರ ಉಳಿದುಕೊಂಡಿತು.

ಮೂಲದಲ್ಲಿ ಒಂದೇ ವೃತ್ತಿಯ ಒಂದೇ ಸಮುದಾಯದವರಾಗಿದ್ದ ದಾಸರು ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿ ಕೊಂಡ ಮೇಲೆ ಇವರಲ್ಲಿ ಗೊಲ್ಲದಾಸರು, ಹೊಲೆದಾಸರು, ಅಂಬಿಗದಾಸರು, ಪುಟ್ಟದಾಸರು, ರಾಮದಾಸರು, ಕಬ್ಬೇದಾಸರು, ಛತ್ತೇದಾಸರು, ಬೇಡದಾಸರು, ಡೊಂಬದಾಸರು, ದಂಡಿಗಿದಾಸರು, ಕಮರುದಾಸರು, ಗೋಪಾಲ ಬುಟ್ಟಿ ದಾಸರು ಹೀಗೆ ಹಲವಾರು ಉಪಜಾತಿಗಲು ಹುಟ್ಟಿಕೊಂಡವು ಇವರಲ್ಲಿ ಕಬ್ಬೇರದಾಸರು ಮಾತ್ರ ದಾಸರಾಟ ಆಡುವ ಪರಂಪರೆಯನ್ನು ರೂಢಿಸಿಕೊಂಡವರಾಗಿದ್ದಾರೆ. ಇವರಲ್ಲಿ ಬಸವಿ ಬಿಡುವ ಪದ್ಧತಿ ಇದೆ. ಈ ಸ್ತ್ರೀಯರೇ ಆಟಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆಂಬುದು ತಿಳಿಯುತ್ತದೆ. ಡಾ. ಚಂದ್ರಶೇಖರ ಕಂಬಾರ ಅವರು ದಾಸರ ಸಮುದಾಯದಲ್ಲಿ ‘ಬಲಗೈ ದಾಸರು ಮತ್ತು ಎಡಗೈ ದಾಸರು ಎಂಬ ಎರಡು ಪಂಗಡಗಳಿವೆ. ಎಡಗೈ ದಾಸರಲ್ಲಿ ದೇವದಾಸಿ ಬಿಡುವ ಸಂಪ್ರದಾಯವಿದೆ. ಇವರೇ ಮುಂದೆ ನೃತ್ಯ ನಾಟಕಗಳಲ್ಲಿ ಭಾಗವಹಿಸುತ್ತಾ ಜೀವನ ಸಾಗಿಸುತ್ತಾ ಬಂದವರಾಗಿದ್ದಾರೆ’[7] ಎಂದು ಅಭಿಪ್ರಾಯ ಪಡುವರು.

ದಾಸರ ಸಮುದಾಯ ಕುರಿತು ‘ಉತ್ತರ ಕರ್ನಾಠಕದಲ್ಲಿ ದಾಸರೆಂಬವರು ಬ್ರಾಹ್ಮಣರಲ್ಲಿದ್ದಂತೆ ಕ್ಷತ್ರಿಯ ಶೂದ್ರರಲ್ಲೂ ಇದ್ದಾರೆ. ಕೈಚಿಟಿಕಿಗಳನ್ನು ಹಿಡಿದು ಹಾಡುತ್ತ ಮನೆ ಮನೆಗೆ ತಿರುಗಿ, ಸುಗ್ಗಿಯಲ್ಲಿ ಕಣಗಳಿಗೆ ಅಡ್ಡಾಡಿ, ಗೋಪಾಳ ಬುಟ್ಟಿಯಲ್ಲಿ ಭಿಕ್ಷೆ ಎತ್ತಿ ಉಪಜೀವನ ಸಾಗಿಸುವ ದಾಸ ಪಂಗಡವನ್ನು ಗೋಪಾಳಬುಟ್ಟಿಯ ದಾಸರು, ಹೊಲೆ (ಈ ಪದಪ್ರೋಯಗ ಈಗ ಬಹಿಷ್ಕೃತ) ದಾಸರು ಎಂದು ಕರೆಯಲಾಗುತ್ತಿದ್ದಿತು. ಇವರಲ್ಲಿಯೂ ಅನಿಷ್ಟಕರವಾದ ವೇಶ್ಯಪದ್ಧತಿಯಿದ್ದಿತು. ಇನ್ನೊಂದು ವರ್ಗದ ದಾಸರು ಇವರು ತಮ್ಮದು ಕ್ಷತ್ರೀಯ ಕುಲವೆಂದು ಹೇಳುತ್ತಾರೆ. ಇವರಲ್ಲಿಯೂ ವೇಶ್ಯಾವೃತ್ತಿಯಿದ್ದಿತು. ಆದರಿವರು ಅಸ್ಪೃಶ್ಯರೆಂದು ಗಣನೆಯಾದವರಲ್ಲ. ಸವರ್ಣೀಯರೊಡನೆ ಸಂಪರ್ಕ ಇಟ್ಟುಕೊಂಡಂತವರು. ದೇವದಾಸಿಯರು, ಹರಿದಾಸರು, ದಶವಂತರು ಎಂದು ಇವರನ್ನು ಕರೆಯಲಾಗುತ್ತಿದೆ. ಇವರೇ ಹೆಚ್ಚಾಗಿ ದಾಸರಾಟವನ್ನಾಡುವ ಜನ’[8] ಎಂದು ಡಾ.ಬಿ.ಬಿ. ಹೆಂಡಿ ಅವರು ಅಭಿಪ್ರಾಯ ಪಡುವರು.

ಬೆಟಗೇರಿ ಕೃಷ್ಣಶರ್ಮರು ೧೯೭೨ರಲ್ಲಿ ದಾಸರಾಟ ಕುರಿತು ಈಗ ೬೦-೬೫ ವರ್ಷಗಳ ಹಿಂದೆ ‘ತಾರಾಸಾನಿ ಮೇಳ, ಬಾಳಾಸಾನಿ ಮೇಳ, ರುಕುಮಾಸಾನಿ ಮೇಳ,ಚಂದ್ರಾಸಾನಿ ಮೇಳ’ ಮುಂತಾದ ಮೇಳಗಳಿದ್ದವು. ಈ ಮೇಳಗಳು ಆಟವಾಡುತ್ತಿದ್ದುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆಟದಲ್ಲಿ ಸ್ತ್ರೀ ಪುರುಷರಿಬ್ಬರೂ ಇರುತ್ತಿದ್ದರು. ಮೃದಂಗ, ಪಿಟೀಲು, ತಂಬೂರಿ ವಾದ್ಯಗಳೊಂದಿಗೆ ಹಿಮ್ಮೇಳದವರ ಕೈಯಲ್ಲಿ ಕಂಚಿನ ತಾಳಗಳಿರುತ್ತಿದ್ದವು. ಮೇಳಕ್ಕೆ ಹೆಸರಿದ್ದ ಸಾನಿಯೇ ಈ ಆಟದಲ್ಲಿ ನಾಯಕಿಯಾಗಿರುತ್ತಿದ್ದಳು. ಆಟದಲ್ಲಿ ನಾಯಕ, ನಾಯಕಿ, ಜವಾರಿ ಎಂಬ ಮೂರೇ ಪಾತ್ರಗಳಿರುತ್ತಿದ್ದವು[9] ದಾಸಾರಟದ ಸ್ವರೂಪ ಕುರಿತು ವಿಶ್ಲೇಷಿಸಿದ್ದಾರೆ.

ದಾಸರಾಟದಲ್ಲಿ ಪ್ರೇಮ, ಕಾಮದ ಉನ್ಮಾದತೆ, ಕೀಳು ಅಭಿರುಚಿ ಬೆಳೆಯಲು ಮಹಾರಾಷ್ಟ್ರದ ತಮಾಷಾ ಕಾರಣವಲ್ಲ. ದಾಸರಾಟದ ಹುಟ್ಟಿಗೆ ತಮಾಷಾ ಪ್ರೇರಣೆ ನೀಡಿದೆ ಎಂಬ ವಿದ್ವಾಂಸರ ವಾದಗಳನ್ನು ಅಲ್ಲಗಳೆದ ಡಾ. ಬಸವರಾಜ ಮಲಶೆಟ್ಟರು ‘ದಾಸರಾಟದ ಮೇಲೆ ಮಹಾರಾಷ್ಟ್ರದ’ ‘ಜಲಸಾ’ ಎಂಬ ರಂಗ್‌ರಕಾರ ಪ್ರಭಾವ ಬೀರಿದೆ. ತಮಾಷಾಕ್ಕೂ ಜಲಸಾಕ್ಕೂ ಬಹಳ ಅಂತರವಿದೆ. ತಮಾಷಾ ಅತಿಯಾದ ಅಶ್ಲೀಲತೆಯನ್ನು ಮೈಗೂಡಿಸಿಕೊಂಡು ಜಲಸಾ ಆಯಿತು. ಜಲಸಾದಲ್ಲಿ ಮೂರ‍್ನಾಲ್ಕು ಹೆಣ್ಣುಗಳು ಕಾಮುಕ ಮುದ್ರೆಗಳನ್ನು ಅಭಿನಯಿಸುತ್ತ ಕುಣಿಯುತ್ತವೆ. ಅದಕ್ಕೆ ತಕ್ಕಂತೆ ಅಶ್ಲೀಲ ಜಾನಪದ ಹಾಡುಗಳ, ಒಮ್ಮೊಮ್ಮೆ ಸಿನೇಮಾ ನಾಟಕ ಹಾಡುಗಳ ಹಿನ್ನೆಲೆ ಪ್ರೇಕ್ಷಕನು ನೋಟಿನ ಮೇಲೆ ಬರೆದುಕೊಟ್ಟ ಹಾಡನ್ನು ಹಾಡಿದ ಅವನಿಗೆ ‘ದೌಲತ್‌ಜಾವೂ’ ಹೇಳುತ್ತಾರೆ. ಅವರೊಂದಿಗೆ ಮಾತಿಗೆ ತೊಡಗಿ ಅರ್ಥಕ ಅಪಾರ್ಥ ಹಚ್ಚಿ ನಗಿಸುವ ಕುಚೇಷ್ಟೆಯ ಗಂಡಸನೊಬ್ಬನಿರುತ್ತಾನೆ. ಇದು ಸಭ್ಯರು ನೋಡುವಂತಹದ್ದಲ್ಲ ಎಂದು ಮರಾಠಿಗರು ನಿಣ೪ಯಿಸಿದ್ದಾರೆ[10] ಎಂದು ಹೇಳುತ್ತಾರೆ.

ಮಹಾರಾಷ್ಟದ ತಮಾಷಾದಲ್ಲಿ ಅತಿಯಾದ ಅಶ್ಲೀಲತೆ, ಕಾಮಚೇಷ್ಟೆಯ ಹಾವಭಾವಗಳನ್ನು ತುಂಬಲು ಯತ್ನಿಸಿದ ಫಲವಾಗಿ ತಮಾಷಾದಲ್ಲಿಯೇ ಜಲಸಾ ಎಂಬ ಪ್ರಕಾರ ಹುಟ್ಟಿಕೊಂಡಂತೆ, ರಾಧಾನಾಟದಲ್ಲಿಯೂ ಜಲಸಾದಂತಹ ಸನ್ನಿವೇಶ ತುಂಬಲು ಯತ್ನಿಸಿ ವಿಫಲವಾಗಿ ಅದು ದಾಸರಾಟದ ರೂಪ ಪಡೆದಿರಬೇಕು. ಹೀಗಾಗಿ ರಾಧಾನಾಟ ಮತ್ತು ತಮಾಷಾ, ದಾಸರಾಟ ಮತ್ತು ಜಲಸಾಗಳಲ್ಲಿ ಸಾಮ್ಯತೆ ಇರುವುದು ಕಂಡು ಬರುತ್ತದೆ.

ದಾಸರಾಟದಲ್ಲಿ ‘ತರುಣ ತರುಣಿಯರ ಸಂದರ್ಶನ, ಪರಸ್ಪರ ಆಕರ್ಷಣೆ, ಪ್ರಣಯಾಂಕುರ,ರಸ್ಪರ ಪ್ರೇಮಯಾಚನೆ, ಹೆಣ್ಣಿನಿಂದ ಗಂಡಿನ ಪ್ರಣಯದ ನಿರಾಕರಣೆ, ಗಂಡಿನ ವಿರಹವೇದನೆ, ಹೆಣ್ಣಿನ ಪಶ್ಚಾತ್ತಾಪ, ಹೆಣ್ಣಿನ ಪ್ರಣಯ ಯಾಚನೆಯನ್ನು ಗಂಡು ನಿರಾಕರಿಸುವುದು.’ ಹೆಣ್ಣಿನ ವಿರಹವೇದನೆ, ಇವರಿಬ್ಬರಿಗೂ ನೆರವಾಗುತ್ತ ಬಂದ ಜವಾರಿ (ವಿದೂಷಕ)ಯ ದೌತ್ಯದಿಂದ ಪರಸ್ಪರ ಸಂಯೋಗ’[11] ಇದಿಷ್ಟು ವಸ್ತುವನ್ನು ಪ್ರದರ್ಶಿಸಲು ದಾಸರ ಹಾಡು, ಶೃಂಗಾರ ಲಾವಣೆ, ಜಾವಳಿ ಮತ್ತು ಇತರೆ ಲಘು ಗೀತೆಗಳನ್ನು ಬಳಸಿಕೊಳ್ಳುತ್ತಾರೆ. ಬರುಬರುತ್ತಾ ಸಮಕಾಲೀನ ನಾಟಕ, ಸಿನೇಮಾಗಳ ಹಾಡುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತು, ಪ್ರೇಕ್ಷಕರ ಅಬಿರುಚಿಗೆ ತಕ್ಕಂತೆ ಹಾಡಿ ಕುಣಿಯುವುದು ಪ್ರಾರಂಭವಾಯಿತು. ದಾಸರಾಟದಲ್ಲಿ ನಿಶ್ಚಿತ ಕಥಾನಕವೇನೂ ಇರುವುದಿಲ್ಲ. ರಾತ್ರಿಯೆಲ್ಲ ಕೃಷ್ಣಲೀಲೆಯ ಶೃಂಗಾರ ಪದ, ಹೆಣ್ಣು-ಗಂಡಿನವಾದೀ ಹಾಡು, ಹಾಸ್ಯ, ಅಡ್ಡ ಸೋಗು ಬಂದು ಬೆಳಗು ಮಾಡುವ. ಹಳ್ಳಿಯ ತರುಣ ರಸಿಕರ ಅಸಭ್ಯ ರುಚಿಗೆ ಚಾಲನೆ ನೀಡುವ ಒಂದು ಮೇಳ, ಅದು ತಮ್ಮ ಬಾಯಿ ಚಟ ತೀರಿಸಿಕೊಳ್ಳಲು ಪ್ರೇಕ್ಷಕರಾದ ತರುಣ ರಸಿಕರೂ ನಡು ನಡುವೆ ಅಡ್ಡಸೋಗು ಹಾಕಿ ಭಾಗವಹಿಸುವುದುಂಟು.[12]

ದಾಸರಾಟ ತನ್ನದೇ ಆದಂತೆಹ ಅಸ್ತಿತ್ವವ್ವನ್ನು ರೂಪಿಸಿಕೊಳ್ಳಲೇ ಇಲ್ಲ. ಪ್ರೇಕ್ಷಕರ ಅಭಿರುಚಿಯನ್ನು ಪೂರೈಸುವುದೇ ಇದರ ಉದ್ದೇಶವಾದ್ದರಿಂದ ಖಚಿತವಾದ ಸ್ವರೂಪವನ್ನು ಅದು ಆರಂಭದಿಂದ ಕೊನೆಯವರೆಗೆ ಪಡೆದುಕೊಳ್ಳಲೇ ಇಲ್ಲ. ಕಾಲಮಾನಕ್ಕೆ, ಪರಿಸರಕ್ಕೆ, ಜನಾಭಿಪ್ರಾಯಕ್ಕೆ ತಕ್ಕಂತೆ ಸಾಗಿತು. ನಿರ್ದಿಷ್ಟವಾದ ಕಥೆ ಸಂಭಾಷಣೆಯನ್ನು ಎಂದೂ ರೂಡಿಸಿಕೊಳ್ಳಲಿಲ್ಲ. ಪ್ರತಿ ಪ್ರದರ್ಶನದಿಂದ ಪ್ರದರ್ಶನಕ್ಕೆ ತೀರ ಬದಲಾವಣೆಗೆಪಡುತ್ತಲೇ ಸಾಗಿ ಬಂದಿತು. ಸುಂದರಿಯರಾದ ದಾಸರ ಸ್ತ್ರೀಯರು ಆ ಕ್ಷಣಕ್ಕೆ ಪ್ರೇಕ್ಷಕರನ್ನು ರಂಜಿಸಲು ಯಾವ ಯಾವ ಮಾರ್ಗಗಳ್ನು ಸಾಧ್ಯವಿದ್ದವೋ ಅವುಗಳನ್ನೆಲ್ಲ ಆಟದಲ್ಲಿ ಬಳಸಿಕೊಳ್ಳುತ್ತಿದ್ದರು. ಹೀಗಾಗಿಯೇ ‘ದಾಸರಾಟವಲ್ಲ ದೋಸೆ ಊಟವಲ್ಲ’ ಎಂಬ ಗಾದೆ ಬೆಳೆಯಿತು. ದಾಸರಾಟ ಜಾನಪದ ರಂಗ ಭೂಮಿಗೆ ನೀಡಿದ ವಿಶಿಷ್ಟಕೊಡುಗೆ ಎಂದರೆ  ‘ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸುವುದು’ ಜಾನಪದ ರಂಗಭೂಮಿಯಲ್ಲಿ ಸ್ತ್ರೀ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡ ಮೇಲೆ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವ ಅನೇಕ ಮಹಿಳೆಯರು ತರಬೇತಿ ಪಡೆದುಕೊಂಡು ವೃತ್ತಿಯನ್ನಾಗಿಸಿಕೊಂಡು ‘ಚಿಮಣಾ ಪಾತರದವರು’ ಎಂಬ ಹಣೆಪಟ್ಟಿ ಗಿಟ್ಟಿಸಿಕೊಂಡರು. ಹಂತ ಹಂತವಾಗಿ ಸಣ್ಣಾಟಗಳ ಎಲ್ಲ ಪ್ರಕಾರಗಳಲ್ಲಿ ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸಲು ಪ್ರಾರಂಭಿಸಿದ ಮೇಲೆ ‘ಸಣ್ಣಾಟ’ ಜನಪ್ರಿಯವಾಯಿತು. ‘ಮೆಟಗುಡ್ಡ ಕಮಲವ್ವ, ಬಡಕಾಂದ್ರಿ, ಗಂಗವ್ವ, ದುಳಗುಣವಾಡಿ ಯಮನವ್ವ, ಅಲತಗಿಯ ಯಮನವ್ವ, ಭೀಮವ್ವ, ಸೀತವ್ವ, ಶಂಕ್ರೆವ್ವ, ಹೂಡೇದ ಮಾದಾರ ಶಾರವ್ವ, ಮೋದಗಾ ಸುಶೀಲಾ, ಶಿವನಾಪುರ ಗಂಗಾ, ನಾವಲಗಟ್ಟಿಯ ಶಾಂತವ್ವ, ಸೀತವ್ವ, ಲಲಿತಾ, ಕಮಲವ್ವ, ಮಲ್ಲವ್ವ ಮ್ಯಾಗೇರಿ ಮುಂತಾದವರು ಪ್ರಸಿದ್ಧ ಸ್ತ್ರೀ ಪಾತ್ರದ ಚಿಮಣಾಗಳೆಂದು ಹೆಸರು ಪಡೆದುಕೊಂಡರು’.[13]

 

[1]ಅಕ್ಷರ ಕೆ.ವಿ., ರಂಗಪ್ರಪಂಚ, ಪುಟ, ೧೪೩

[2]ಅದೇ, ಪುಟ, ೧೭೧ ಮತ್ತು ೧೭೨

[3]ಡಾ. ಚಂದ್ರಶೇಖರ ಕಂಬಾರ, ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಪುಟ, ೩೦

[4]ಡಾ. ಎಂ.ಎಸ್. ಸುಂಕಾಪುರ, ಜಾನಪದ ಸಾಹಿತ್ಯ ದರ್ಶನ ಭಾಗ ೩ ಪುಟ ೧೩೧

[5]ಶ್ರೀ ಬೆಟಗೇರಿ ಕೃಷ್ಣಶರ್ಮ, ಜಾನಪದ ನಾಟಕ ಬೆಳೆದು ಬಂದ ದಾರಿ,  ಜಾನಪದ ರಂಗಭೂಮಿ

[6]ಅದೇ

[7]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೧೧೫

[8]ಡಾ. ಚಂದ್ರಶೇಖರ ಕಂಬಾರ,  ಬಯಲಾಟಗಳು ಪುಟ, ೨೭

[9]ಬಿ.ಬಿ. ಹೆಂಡಿ, ರಾಸರಾಟ, ಜಾನಪದ ಸಾಹಿತ್ಯ

[10]ಬೆಟಗೇರಿ ಕೃಷ್ಣಶರ್ಮ, ಜಾನಪದ ನಾಟಕ ನಡೆದು ಬಂದ ದಾರಿ,  ಜಾನಪದ ರಂಗಭೂಮಿ

[11]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೧೦೯

[12]ಬೆಟಗೇರಿ ಕೃಷ್ಣಶರ್ಮ, ಕನ್ನಡ ಜಾನಪದ ಸಾಹಿತ್ಯ, ಪುಟ, ೭೯

[13]ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು, ಪುಟ, ೧೦೮