ನಮಗೆ ವೈರಿಗಳಿಲ್ಲ ಎಂದು ಹೇಳುವ ಪುಣ್ಯ ಇನ್ನು ನಮಗಿಲ್ಲ
ಆದರೂ ಬೇಡ ಯಾರೊಂದಿಗೂ ವೈರ.
ಶತಮಾನಗಳಿಂದ ಪಾಠವಾಗಿದೆ ಮಂತ್ರ :
‘ಸರ್ವೇಜನಾಃ ಸುಖಿನೋಭವಂತು.’

ಬಂದವರನೆಲ್ಲ ನಸುನಗೆಯಿಂದ ಸ್ವಾಗತಿಸಿ,
ಮಣೆ ಚಾಪೆಗಳ ಹಾಕಿ ಕುಳ್ಳಿರಿಸಿ, ಅರ್ಘ್ಯಪಾದ್ಯಗಳಿಂದ
ಸತ್ಕರಿಸಿ, ಎಂಥ ಕಲ್ಲಿಗೂ ಹಾಲೆರೆದು ಮಿದು ಮಾಡಿ,
ಕಪ್ಪು ಮೋಡಕ್ಕು ಬೆಳ್ದಿಂಗಳಿನ ಶಾಲನು ಹೊದಿಸಿ
ಹಾಡಿದ್ದೇವೆ : ‘ಅತಿಥಿ ದೇವೋಭವ.’

ಈ ಪಂಕ್ತಿಯಲಿ ನೀನಾರಯ್ಯ ನವೋನವ !
ಕಾಮಾಲೆ ಕಾಲನು ತಂದು ನೆಟ್ಟಗೇ ನುಗ್ಗಿದವ ನೀನು !
ಅಭ್ಯಾಸವಿಲ್ಲವಯ್ಯಾ ನಮಗೆ ನಿನ್ನ ಶೀತಲ ವಿದ್ಯೆ,
ನಮಗೋ ಬೆಚ್ಚಗಿನ ಪ್ರೀತಿ-ವಿಶ್ವಾಸದಲಿ ಬಹಳ ಶ್ರದ್ಧೆ.

ನಾವು ಇದ್ದೆವು ಇಲ್ಲಿ, ನೇಗಿಲ ಮೇಲೆ ಕೈ ಊರಿ
ಹಳೆ ನೆಲದಮೇಲೆ ಹೊಸಬೆಳಕುಗಳ ಗೆರೆಯ ಬರೆಯುತ್ತ ;
ಕೆರೆ-ಕಟ್ಟೆಗಳ ಬಂದೋಬಸ್ತು ಮಾಡುತ್ತ ; ಮಕ್ಕಳಿಗೆ
ಅದೇ ಹಳೆಯ ಶಾಂತಿಮಂತ್ರವನು ಪಾಠ ಹೇಳುತ್ತ.

ನಮಗೆ ಗೊತ್ತಿರಲಿಲ್ಲ ಬೇಲಿಯಾಚೆಗೆ ನಡೆದ
ತುಡುಗು ವಿದ್ಯೆ ; ಒಂದೊಂದು ಸಲ ಬಿಸಿಲಿನ ಜಳಕೆ
ನಮಗೂ ನಿದ್ದೆ. ಸದ್ಯ ನೀನೆಚ್ಚರಿಸಿದೆ,
ಅದಕ್ಕಿದೋ ವಂದನೆ !

ನಮಗೂ ಗೊತ್ತು : ತಲೆಗೆಲ್ಲ ಅಲ್ಲ ಒಂದೇ ಮಂತ್ರ,
ಅಭ್ಯಾಸವಾಗಿದೆ ನಮಗೆ ಒಂದಿಷ್ಟು ಹೊಸತಂತ್ರ.
ನೇಗಿಲ ಮೇಲೆ ಕೈ ಊರಿದ್ದರೂ ಬಗಲಲ್ಲಿ ತೂಗುಬಿಟ್ಟಿದ್ದೇವೆ
ಒಂದೊಂದು ಬಂದೂಕ. ನೀವಿದ್ದರೇನು ಎಲ್ಲೋ ಎತ್ತರ,
ಕೊಡಬಲ್ಲೆವಯ್ಯಾ ನಾವು, ಕೆಣಕಿದರೆ, ಸಿಡಿಗುಂಡಿನ ಉತ್ತರ.