ಲೋಕದಲ್ಲಿ ನಾವು ಕಾಣುವ ವಸ್ತುಗಳು ನಮ್ಮಲ್ಲಿ ನಾನಾ ಬಗೆಯಾದ ಭಾವನೆಗಳನ್ನುಂಟುಮಾಡಿದರೂ ಆ ಭಾವನೆಗಳನ್ನು ಸ್ಥೂಲವಾಗಿ ಎರಡು ವಿಧವೆಂದು ಗುರುತಿಸಬಹುದು. ಒಂದು, ಆಕರ್ಷಣೆಯ ಭಾವ, ಮತ್ತೊಂದು ವಿಕರ್ಷಣೆಯ (Repulsive) ಭಾವ. ಕೆಲವು ವಸ್ತುಗಳು ತೆಕ್ಕನೆಯೆ ನಮ್ಮ ಕಣ್ಣನ್ನು ಸೆಳೆಯುತ್ತವೆ, ಹೃದಯವನ್ನು ಕರಗಿಸುತ್ತವೆ. ಅವುಗಳಿಗೂ ನಮಗೂ ಏನೋ ಒಂದು ಪ್ರಿಯವಾದ, ಮಧುರವಾದ ‘ಜನನಾಂತರ ಸೌಹೃದ’ ಬಹುಕಾಲದಿಂದ ಇರುವುದೋ ಏನೋ ಎಂಬಷ್ಟರ ಮಟ್ಟಿಗೆ ನಾವು ಅವುಗಳ ಒಲವಿನಲ್ಲಿ ನಿಲ್ಲುತ್ತೇವೆ. ಅಂತಹ ವಸ್ತುಗಳ ಸೆಳೆತದಿಂದ, ಸಂಪರ್ಕದಿಂದ ಮನಸ್ಸಿಗೆ ಒಂದು ಬಗೆಯ ಉಲ್ಲಾಸವೂ, ಹಿಗ್ಗೂ ಉಂಟಾಗುತ್ತದೆ. ಹೀಗೆ ಪ್ರಿಯವೂ ಹಿತವೂ ಆದಕಾರಣದಿಂದ ಇವುಗಳನ್ನು ‘ಸುಂದರ’ ಎಂದು ನಾವು ಕರೆದುಬಿಡುತ್ತೇವೆ. ಮತ್ತೆ ಕೆಲವು ವಸ್ತುಗಳಿವೆ. ಇವು ತೆಕ್ಕನೆಯೆ ನಮ್ಮಲ್ಲಿ ಒಂದು ಬಗೆಯ ವಿಕರ್ಷಣೆಯನ್ನುಂಟುಮಾಡುತ್ತವೆ. ಇಲ್ಲಿನ ವಿಕರ್ಷಣೆಯಲ್ಲಿ, ವಸ್ತುವೇ ತನ್ನ ವಿಕೃತಿಯಿಂದ ನಮ್ಮನ್ನು ದೂರ ತಳ್ಳಿದಂತಾಗುತ್ತದೆ. ಇಲ್ಲವೆ ನಾವೇ ಆ ವಸ್ತುವಿನ ಸಾಮೀಪ್ಯದಿಂದ ದೂರ ನಿಲ್ಲಲೆಳಸುತ್ತೇವೆ. ಏಕೆಂದರೆ ಅವುಗಳ ಸಂಪರ್ಕ ನಮಗೆ ಅಪ್ರಿಯವೂ ಅಹಿತವೂ (ugly) ಬೇಸರ ಜಿಗುಪ್ಸೆಗಳಿಗೆ ಕಾರಣವೂ ಆಗುವುದು. ಇಂತಹ ವಸ್ತುಗಳನ್ನು ನಾವು ‘ವಿಕೃತ’, ಎಂದು ಕರೆಯುತ್ತೇವೆ. ಆದರೆ ಯಾವುದು ವಸ್ತುವನ್ನು ಸುಂದರವನ್ನಾಗಿಸುತ್ತದೆ; ಯಾವುದು ವಸ್ತುವನ್ನು ವಿಕೃತವನ್ನಾಗಿಸುತ್ತದೆ-ಎನ್ನುವುದರ ವಿವರಣೆ ಕಷ್ಟ, ನಮಗೆ ಇಷ್ಟು ಮಾತ್ರ ಗೊತ್ತು: ಲೋಕದಲ್ಲಿ ಸುಂದರವಾದ ವಸ್ತುಗಳೂ ಇವೆ. ವಿಕೃತವಾದ ವಸ್ತುಗಳೂ ಇವೆ.

ಆದರೆ ಹಲವರಿಗೆ ಸುಂದರವಾದುದು ಮತ್ತೆ ಹಲವರಿಗೆ ವಿಕೃತವಾಗಿಯೂ, ಹಲವರಿಗೆ ವಿಕೃತವಾದುದು ಮತ್ತೆ ಹಲವರಿಗೆ ಸುಂದರವಾಗಿಯೂ ತೋರಬಹುದು – ಅವರವರ ದೃಷ್ಟಿಗನುಸಾರವಾಗಿ. ಈ ಒಂದು ಸತ್ಯವನ್ನೇ ‘ಹೆತ್ತವರಿಗೆ ಹೆಗ್ಗಣ ಮುದ್ದು, ಕೂಡಿದವಳಿಗೆ ಕೋಡಗ ಮುದ್ದು” ಎಂಬ ಕನ್ನಡ ಗಾದೆ ಬಹು ಸೊಗಸಾಗಿ ಸೂಚಿಸುತ್ತದೆ. ಹಾಗೆ ನೋಡಿದರೆ ಲೋಕದಲ್ಲಿ ಸುಂದರವಾದುದೂ ಇಲ್ಲ; ಅಸುಂದರವಾದುದೂ ಇಲ್ಲ, ಮನಸ್ಸಿಗೆ ರುಚಿಸಿದರೆ ನಿಕೃಷ್ಟವಾದ ವಸ್ತುವೂ ಸುಂದರವೇ[1] ಎಂದು ವ್ಯಕ್ತಿನಿಷ್ಠ ತೀರ್ಮಾನಕ್ಕೆ ಈ ವಿಚಾರವನ್ನು ಬಿಡಬಹುದು.

ಹಾಗಾದರೆ ವಿಕೃತವೆಂದರೆ ಏನು? ನಮ್ಮ ಲೋಕದ ಅನುಭವವನ್ನೆ ನೋಡುವುದಾದರೆ ನಾವು ಏಕೆ ಒಂದು ವಸ್ತುವನ್ನು ವಿಕೃತವೆಂದು ಕರೆಯುತ್ತೇವೆ – ಎಂಬ ಪ್ರಶ್ನೆ ಏಳುತ್ತದೆ. ಸೌಂದರ್ಯಮೀಮಾಂಸೆಯ ಬಗ್ಗೆ ಮೊಟ್ಟಮೊದಲು ಮಾತನಾಡಿದ ಪ್ಲೇಟೋ ಒಂದೆಡೆ ಸಾಕ್ರೆಟೀಸನಿಗೂ, ಹಿಪ್ಪಯಾಸನಿಗೂ, ನಡೆದ ಸಂವಾದವನ್ನು ವಿಕೃತಿಯ ವಿವರಣೆಗಾಗಿ ಕೊಡುತ್ತಾನೆ. ಅದು ಹೀಗಿದೆ: “ಕೋತಿಯ ಸೌಂದರ್ಯ ಮಾನವ ಸೌಂದರ್ಯದೊಡನೆ ಹೋಲಿಸಿ ನೋಡಿದಾಗ ವಿಕೃತವಾಗಿ ತೋರಬಹುದು. ಒಂದು ಸೊಗಸಾದ ಮಡಕೆಯನ್ನು ಸುಂದರಿಯಾದ ಹುಡುಗಿಯೊಂದಿಗೆ ಹೋಲಿಸಿ ನೋಡಿದಾಗ ಮಡಕೆ ವಿಕೃತವಾಗಬಹುದು. ಈ ಸುಂದರಿಯಾದ ಹುಡುಗಿಯನ್ನು ದೇವತೆಗಳ ಸೌಂದರ್ಯದ ಎದುರಿಗೆ ನಿಲ್ಲಿಸಿದಾಗ ಅವಳು ವಿಕೃತವಾಗಿ ತೋರಬಹುದು. ಆದುದರಿಂದ ಸಮಯ ಸಂದರ್ಭಗಳಿಗೆ ಅನುಸಾರವಾಗಿ ಸೌಂದರ್ಯ ವಿಕೃತವಾಗಿ ತೋರಬಹುದು”[2] ಈ ಮೇಲಿನ ವಿವರಣೆಯಲ್ಲಿ ವಸ್ತುಗಳೆಲ್ಲವೂ ಸುಂದರವಾಗಿವೆ ಎನ್ನುವ ವಿಷಯವನ್ನು ಮೊದಲು ಒಪ್ಪಿಕೊಂಡು, ನಂತರ ಅವುಗಳೂ ಬೇರೆ ಬೇರೆಯ ವಸ್ತುಗಳೊಡನೆ ಹೋಲಿಸಲ್ಪಟ್ಟಾಗ, ಮೊದಲು ಸುಂದರವಾಗಿ ಕಂಡದ್ದು, ಹೋಲಿಸಲ್ಪಟ್ಟ ವಸ್ತುವಿನ ಎದುರು ವಿಕೃತವಾಗಬಹುದು- ಎನ್ನುವ ಅಂಶವನ್ನು ಮಂಡಿಸಲಾಗಿದೆ. ಒಂದು ವಸ್ತುವನ್ನು ಸುಂದರವಾಗಿದೆ ಎಂದು ಒಪ್ಪಿದಮೇಲೆ, ಅದನ್ನು ಅದಕ್ಕಿಂತ ಸುಂದರವಾದ ವಸ್ತುವಿನ ಎದುರು ನಿಲ್ಲಿಸಿದಾಗ ಮೊದಲನೆಯದು ಎರಡನೆಯದಕ್ಕಿಂತ ಕಡಿಮೆ ಸೌಂದರ್ಯವುಳ್ಳ ವಸ್ತುವಾಯಿತೆನ್ನಬಹುದೇ ಹೊರತು, ವಿಕೃತವಾಯಿತೆಂದು ಹೇಳಲು ಹೇಗೆ ಸಾಧ್ಯ? ಸಾಕ್ರೆಟೀಸನ ಅಭಿಪ್ರಾಯದ ಪ್ರಕಾರ ಕಡಮೆ ಸೌಂದರ್ಯ ಉಳ್ಳದ್ದು, ಅಥವಾ ಮಸುಳಿಸಲ್ಪಟ್ಟ ಸೌಂದರ್ಯ ಉಳ್ಳದ್ದನ್ನು ವಿಕೃತ ಎನ್ನಬೇಕಾಗುತ್ತದೆ. ಈ ಅಭಿಪ್ರಾಯವೂ ಒಂದು ದೃಷ್ಟಿಯಿಂದ ಸರಿ; ಸುಂದರವಾದ ವಸ್ತುಗಳು ಬೇರೊಂದು ಬಗೆಯ ಅವಕ್ಕೂ ಮೀರಿದ ಸುಂದರವಾದ ವಸ್ತುವಿನ ಎದುರು ವಿಕೃತವೆಂಬಂತೆ ತೋರಬಹುದು. ಇಲ್ಲಿ ನಾವು ಗ್ರಹಿಸಬೇಕಾದದ್ದು ಇಷ್ಟುಮಾತ್ರ. ವಿಕೃತ ಎನ್ನುವುದು ಸೌಂದರ್ಯ ವಿರೋಧಿಯಾದ ಬೇರೆ ಏನೂ ಅಲ್ಲ; ಅದೂ ಸೌಂದರ್ಯದ ಒಂದು ಪ್ರಕಾರವೇ. ಇಲ್ಲಿ ವಸ್ತು ತನಗೆ ತಾನೇ ಮೊದಲು ಸುಂದರವಾಗಿ ತೋರಿದರೂ ಬೇರೊಂದು ನಿಲುವಿಗೆ ಅಥವಾ ಬೇರೊಂದು ಸುಂದರತಮ ವಸ್ತುವಿನ ಹೋಲಿಕೆಗೆ ಸಂದಾಗ ಮೊದಲು ಮನಸ್ಸನ್ನು ಸೆಳೆದಷ್ಟು ಆಮೇಲೂ ಮನಸ್ಸನ್ನು ಸೆಳೆಯುವುದಿಲ್ಲ ಎನ್ನುವುದೇನೋ ನಿಜವೆ. ಆದರೆ ವಾಸ್ತವವಾಗಿ ನಾವು ವಿಕೃತಿ ಎಂದು ಭಾವಿಸಿರುವುದು ಇನ್ನೂ ಬೇರೆ ಇದೆ: ಲೋಕದಲ್ಲಿ ನಾವು ಸಾಮಾನ್ಯವಾಗಿ ಕಾಣುವ ಹಲವು ನಿರ್ದಿಷ್ಟ ಹಾಗೂ ಪ್ರಿಯವಾದ ಆಕಾರದ ವಸ್ತುಗಳನ್ನು ಸುಂದರ ಎಂದು ಕರೆಯುತ್ತಾ ಬಂದಿದ್ದೇವೆ. ನಮಗೆ ಚಿರಪರಿಚಿತವಾದ ರೂಪಲೋಕದಲ್ಲಿ ಈ ಪರಿಚಿತವಾದ ರೂಪವಾವುದಕ್ಕಾದರೂ ಒಂದು ಬಗೆಯ ಧಕ್ಕೆಯೊದಗಿದೆ ಎಂಬಂಥ ವೈಚಿತ್ರ್ಯ ಘಟಿಸಿದರೆ ಅದನ್ನು ನಾವು ವಿಕೃತ ಎಂದು ಕರೆಯುತ್ತೇವೆ. ಅಥವಾ ಈ ಪರಿಚಿತವಾದ ರೂಪಲೋಕಕ್ಕೆ ನಮ್ಮ ರೂಪಲೋಕದ ಪರಿಚಿತ ಮಾದರಿಗಳಿಂದ ಭಿನ್ನವಾದ ರೂಪ ಉಳ್ಳ ವಸ್ತುವಾಗಲೀ, ವ್ಯಕ್ತಿಯಾಗಲೀ ಪ್ರವೇಶಿಸಿದಾಗಲೂ ಅದನ್ನು ವಿಕೃತ ಎನ್ನುತ್ತೇವೆ. ಹಾಗೆ ವಸ್ತುವಿಗೋ ವ್ಯಕ್ತಿಗೋ ಒದಗುವ ಅನೌಚಿತ್ಯವೆಂಬಂತೆ ತೋರುವ ವೈಚಿತ್ರ್ಯ, ಅಲ್ಪವಾಗಿದ್ದರೆ ನಗೆಗೂ, ಹೆಚ್ಚಾದರೆ ಜುಗುಪ್ಸೆಗೂ, ವಿಶೇಷವಾದರೆ ಭಯಕ್ಕೂ ಕಾರಣವಾಗುವುದುಂಟು. ಇಂಥ ವಸ್ತುಗಳ ಬಗೆಗೆ ನಾವು ಸುಂದರವಾದ ವಸ್ತುಗಳ ಬಗೆಗೆ ತೋರುವಷ್ಟು ಆದರವನ್ನು ತೋರಲಾಗುವುದಿಲ್ಲ. ಆದುದರಿಂದ ವಿಕೃತಿ ಎಂದರೆ ಕಡಮೆ ಸೌಂದರ್ಯಉಳ್ಳದ್ದೆಂದೂ, ಮತ್ತೊಂದರೊಡನೆ ಹೋಲಿಸಿದಾಗ ಮಸುಳಾಗಿ ತೋರತಕ್ಕದ್ದೆಂದೂ ಮಾತ್ರ ಅರ್ಥವಾಗುವುದಿಲ್ಲ. ಯಾವ ವಸ್ತು ವಾಸ್ತವವಾಗಿ ನಮ್ಮಲ್ಲಿ ಬೇಸರವನ್ನೂ ಜುಗುಪ್ಸೆಯನ್ನೂ ವಿಕರ್ಷಣೆಯನ್ನೂ ಹುಟ್ಟಿಸುವುದೋ ಅದನ್ನು ವಿಕೃತ ಎಂದು ಕರೆಯಬೇಕಾಗುತ್ತದೆ.

ಪಾಶ್ಚಾತ್ಯ ಸೌಂದರ‍್ಯಮೀಮಾಂಸೆಯಲ್ಲಿ ವಿಕೃತಿಯ ಬಗೆಗೆ ಗಮನಾರ್ಹವಾದ ಚರ್ಚೆಗಳು ನಡೆದಿವೆ. ಯಾವುದು ಒಂದು ವಸ್ತುವನ್ನು ಸುಂದರವನ್ನಾಗಿ ಅಥವಾ ವಿಕೃತವನ್ನಾಗಿ ಮಾಡಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವ ಅತ್ಯುತ್ತಮ ಉಪಾಯವೆಂದರೆ, ವಸ್ತುವನ್ನು ಸುಂದರವಾಗಿಸುವುದು ಏನು ಎನ್ನುವುದರ ಜಿಜ್ಞಾಸೆಗಿಂತ, ವಸ್ತು ಸುಂದರವಾಗದಂತೆ ತಡೆಯುವುದು ಯಾವುದು ಎನ್ನುವುದರ ಜಿಜ್ಞಾಸೆ ಅಥವಾ ವಿಕೃತದ ಜಿಜ್ಞಾಸೆ [3] – ಎಂದು ವಿಲಿಯಂ ನೈಟ್ ಅವರು ಅಭಿಪ್ರಾಯ ಪಡುತ್ತಾರೆ. Schlegel ನು ಕಲೆಗೆ ಸೌಂದರ‍್ಯಕ್ಕಿಂತ ವಿಕೃತಿಯೇ ಸ್ಫೂರ್ತಿದಾಯಕ ಎನ್ನುತ್ತಾನೆ.[4] ಥಿಯೋಡಾರ್ ಲಿಪ್ಸ್ ಮತ್ತು ಇತರರು ಸೌಂದರ‍್ಯಕ್ಕೆ ಪೂರಕವಾದ ಒಂದು ಸ್ಥಾನವನ್ನು ವಿಕೃತಿಗೂ ನೀಡಿದರು. ರೊಸೆನ್‌ಕ್ರನ್ಸ್ (Rosenkranz) ಎನ್ನುವವನು “ವಿಕೃತಿ ಮೀಮಾಂಸೆ” (The aesthetic of Ugliness)ಯನ್ನೇ ಬರೆದಿದ್ದಾನೆ. ಇವರಲ್ಲಿ ವಿಕೃತಿ ಎನ್ನುವುದು ಸೌಂದರ‍್ಯಕ್ಕೆ ವಿರುದ್ಧವಾದುದಲ್ಲ, ಸೌಂದರ‍್ಯದ ಬೇರೊಂದು ರೂಪ – ಎನ್ನುವುದನ್ನು ಬಹುಮಂದಿ ಒಪ್ಪಿದ್ದಾರೆ. ರೋಸೆನ್‌ಕ್ರನ್ಸ್ ಎನ್ನುವವನು ‘ಸೌಂದರ‍್ಯದ ನೇತ್ಯಾತ್ಮಕ ಸ್ಥಿತಿಯೇ ವಿಕೃತಿ’ ಎನ್ನುತ್ತಾನೆ. ಯಾವುವು ಸೌಂದರ‍್ಯಸಾಧಕಗಳೋ ಅವೇ ವಿಕೃತಿಗೂ ಕಾರಣವಾಗಬಹುದು- ಒಂದು ಬಗೆಯ ಪರಿವರ್ತನೆಯಿಂದ. ಸೌಂದರ‍್ಯ ಮತ್ತು ವಿಕೃತಿಗಳು ತಮಗೆ ತಾವೇ ಸುಸ್ಪಷ್ಟ; ಒಂದು ಮತ್ತೊಂದರಲ್ಲಿ ಪ್ರವೇಶಿಸುವುದಿಲ್ಲ. ಆದರೂ ಎರಡರ ಸಾಮಗ್ರಿಯೂ ಒಂದೇ ಆದುದರಿಂದ, ವಿಕೃತಿ, ಸುಕೃತಿಗೆ (ಸೌಂದರ‍್ಯ ಎಂಬ ಅರ್ಥದಲ್ಲಿ) ಅಧೀನವಾಗಬಹುದು, – ಹಾಸವೆಂಬ ಮತ್ತೊಂದು ಚೆಲುವಿನ ಮುಖದಲ್ಲಿ.[5] ಎಸ್. ಅಲೆಗ್ಸಾಂಡರ್ ಅವರೂ ಈ ಮತಕ್ಕೆ ದನಿಗೂಡಿಸುತ್ತಾ “ವಿಕೃತಿ ಸುಕೃತಿಗೆ ವಿರುದ್ಧವಾದುದಲ್ಲ, ಸುಂದರವಲ್ಲದುದನ್ನು ಸುಂದರವಾಗಿಲ್ಲ ಎನ್ನುತ್ತೇವೆಯೇ ಹೊರತು ವಿಕೃತವಾಗಿದೆ ಎನ್ನುವುದಿಲ್ಲ.[6] ಆದರೆ ಮನಸ್ಸಿಗೆ ಹಿತವಲ್ಲದುದನ್ನು ವಿಕೃತಿ ಎನ್ನುತ್ತೇವೆ” ಎನ್ನುತ್ತಾರೆ. [7]

ಲೋಕದಲ್ಲಿರುವುದೆಲ್ಲವೂ ಭಗವತ್ ಸೃಷ್ಟಿಯಾದುದರಿಂದ ಸುಂದರವಾಗಿಯೇ ಇದೆ. ಆದರೆ ನಾವು ಇಲ್ಲಿ ವಿಕೃತಿಯನ್ನು ಕಾಣಲು ನಮ್ಮ ದೃಷ್ಟಿದೋಷವೇ, ಆತ್ಮದ ದೌರ್ಬಲ್ಯವೇ ಕಾರಣ ಎಂದು ಹಲವರು ಹೇಳಿದರೆ, ಈ ಲೋಕ ಆ ಪರಮ ಸತ್ಯದ ಅಪರಿಪೂರ್ಣಾಭಿವ್ಯಕ್ತಿ; ಸೌಂದರ‍್ಯ, ಶಿವದ ಆಕರ್ಷಕವಾದ ಅಭಿವ್ಯಕ್ತಿಯಾದರೆ, ವಿಕೃತಿ ಅಶಿವದ ಅಭಿವ್ಯಕ್ತಿ ಎಂದೂಅಧ್ಯಾತ್ಮವಾದಿಗಳಲ್ಲಿ ಹಲವರು ಹೇಳುತ್ತಾರೆ. ಈ ವಿವರಣೆ ಹೇಗಾದರೂ ಇರಲಿ. ಲೋಕದಲ್ಲಿ ಬಾಳುವ ನಮ್ಮಪಾಲಿಗೆ ಮಾತ್ರ ಸುಕೃತಿ-ವಿಕೃತಿ ಎರಡೂ ಇವೆ. ಸುಖ-ದುಃಖ, ನೆಳಲು-ಬೆಳಕು, ಹಗಲು-ರಾತ್ರಿ, ಒಳಿತು-ಕೆಡಕು ಇರುವಂತೆ ಸೌಂದರ್ಯ ವಿಕೃತಿಗಳಿವೆ. ಈ ವಿಕೃತಿ ಹೊರಮೈಯಲ್ಲಿ ಕಾಣಬಹುದು; ಒಳಗಿನ ಚಾರಿತ್ರ್ಯದಲ್ಲಿ ತೋರಬಹುದು. ದೈಹಿಕ ವಿಕಾರ, ವ್ಯಕ್ತಿಯ ಸದ್ಗುಣಗಳ ಅಥವಾ ಚಾರಿತ್ರ್ಯದ ಮಹೋನ್ನತಿಯ ಸೌಂದರ್ಯದಿಂದ ಸುಂದರವೇ ಆಗಿ ಹಿತವೂ ಪ್ರಿಯವೂ ಆಗುವಂತೆ, ದೈಹಿಕ ಸೌಂದರ್ಯ ಚಾರಿತ್ರ್ಯದ ವಿಕಾರದಿಂದ ವಿಕೃತವೇ ಆಗಿ ಅಹಿತವೂ ಅಪ್ರಿಯವೂ ಆಗುವುದುಂಟು. ಹೀಗೆ ಸೌಂದರ್ಯ-ವಿಕೃತಿಗಳ ಮೌಲ್ಯ ನಿರ್ಣಯದಲ್ಲಿ ಮಾನವನ ನೈತಿಕ ದೃಷ್ಟಿಯೂ ಪ್ರಬಲವಾದ ಪ್ರಭಾವವನ್ನು ಬೀರಿರುವುದುಂಟು. ನಾವು ಎಲ್ಲಿನತನಕ ಲೋಕದ ದ್ವಂದ್ವಗಳ ಸಂಪರ್ಕದಲ್ಲಿರುವೆವೋ ಅಲ್ಲಿನ ತನಕ ಸೌಂದರ್ಯವಿಕೃತಿಗಳುಂಟು. ಇನ್ನು ಧಾರ್ಮಿಕ ದೃಷ್ಟಿಯಿಂದ ನೋಡಿದಾಗ ಪಾಪ-ಪುಣ್ಯಗಳ, ಶಿವ – ಅಶಿವಗಳ ವಿಚಾರವೂ ಇಲ್ಲಿ ತಲೆಹಾಕುತ್ತದೆ. ಪಾಪವನ್ನು ವಿಕೃತವೆಂಬಂತೆಯೂ ಪುಣ್ಯವನ್ನು ಸುಕೃತವೆಂಬಂತೆಯೂ ಬಣ್ಣಿಸುವುದನ್ನು, ಚಿತ್ರಿಸುವುದನ್ನು ಧಾರ್ಮಿಕ ವಿಚಾರಗಳಿಂದ ಸ್ಫೂರ್ತಿಗೊಂಡ ಕಲೆಯಲ್ಲಿ ಕಾಣುತ್ತೇವೆ. ನಾವು ಲೋಕದಲ್ಲಿ ಸುರೂಪ ಕುರೂಪಗಳೆರಡನ್ನೂ ಕಾಣಲು ಕಾರಣ, ನಮ್ಮ ದೃಷ್ಟಿ ಆಸುರೀಶಕ್ತಿಗಳಿಂದ, ಪಾಪದಿಂದ ವೇಧಿಸಲ್ಪಟ್ಟುದೇ ಆಗಿದೆ ಎಂದು ಉಪನಿಷತ್ತು ಹೇಳುತ್ತದೆ. ಛಾಂದೋಗ್ಯ ಉಪನಿಷತ್ತು ಇದನ್ನು ವಿವರಿಸುತ್ತ ಹೀಗೆ ಹೇಳುತ್ತದೆ: “ಪ್ರಜಾಪತಿಯ ಮಕ್ಕಳಾದ ದೇವಾಸುರರು ತಮ್ಮೊಳಗೆ ಹೋರಾಡುತ್ತಿರುವಾಗ ದೇವತೆಗಳು ಓಂಕಾರೋಪಾಸನೆಮಾಡಿದರು…..ಬಳಿಕ ಅವರು ಕ್ರಮವಾಗಿ ವಾಣಿ, ಕಣ್ಣು,ಕಿವಿ ಮತ್ತು ಮನಸ್ಸುಗಳನ್ನು ಅವಲಂಬಿಸಿ ಉದ್ಗೀಥದ ಉಪಾಸನೆಯನ್ನು ಮಾಡಿದರು. ಆದರೆ ಅಸುರರು ಕ್ರಮವಾಗಿ ಅವೆಲ್ಲವನ್ನೂ ಪಾಪದಿಂದ ವೇಧಿಸಿದರು. ಆದುದರಿಂದ ವಾಣಿಯು ಸತ್ಯಾಸತ್ಯಗಳೆರಡನ್ನೂ ನುಡಿಯುವುದು. ಕಣ್ಣು ಸುರೂಪ ಕುರೂಪಗಳೆರಡನ್ನೂ ನೋಡುವುದು. ಕಿವಿಯು ಒಳಿತು – ಕೆಡುಗಳೆರಡನ್ನೂ ಕೇಳುವುದು. ಮನಸ್ಸು ಸತ್-ಅಸತ್‌ಗಳೆರಡನ್ನೂ ಕಲ್ಪಿಸುವುದು.”[8] ಆದರೆ ಈ ಪಾಪದ ಲೇಪವನ್ನು ಕಳೆದುಕೊಂಡವನ ಕಣ್ಣಿಗೆ ಎಲ್ಲವೂ ಸುಂದರವೇ. ಈ ಕಾರಣದಿಂದ ನಮಗೆ ವಿಕೃತಿ ಎಂದು ತೋರುವುದೇನಿದ್ದರೂ ಸೌಂದರ್ಯವನ್ನೆ ವಿಕೃತಿ ಎಂದು ಭ್ರಮಿಸುವ ದೋಷ. “ಇಂದ್ರಿಯ ಧೂಳೀ ದೂಸರದಿಂದ ಮಸುಳಾದ ಸಾಂತತೆಯ ಪರಿಣಾಮವೇ ವಿಕೃತಿ; ಯಾವಾಗ ನಮ್ಮ ಆತ್ಮ ಈ ಮಾಲಿನ್ಯದಿಂದ ಬಿಡುತೆಗೊಳ್ಳುವುದೋ ಆಗ ಅದರ ಕಣ್ಣಿಗೆ ಎಲ್ಲವೂ ಸುಂದರವಾಗಿಯೇ ತೋರುತ್ತದೆ”[9] ಈ ಒಂದು ಪರಮ ಸಿದ್ಧಿಯನ್ನು ಪಡೆದವರ ಕಣ್ಣಿಗೇನೋ ಎಲ್ಲವೂ ಸುಂದರವಾಗಿಯೇ ತೋರಬಹುದು. ಆದರೆ ನಮಗೋ ಲೋಕದಲ್ಲಿ ಎಲ್ಲವೂ ಸುಂದರ ಎಂದು ಎನ್ನಿಸುವುದೇ ಇಲ್ಲವಲ್ಲ. ಅಷ್ಟೇ ಅಲ್ಲ, ವಿಕೃತವೆನಿಸುವುದು ಹೇರಳವಾಗಿರುವುದರಿಂದಲೇ ನಾವು ಸುಂದರವಾದದ್ದನ್ನು ಸುಂದರ ಎಂದು ಗುರುತಿಸುತ್ತೇವೆ. ನಾವು ಸುಂದರ ಎಂದು ಯಾವುವನ್ನು ಭಾವಿಸಿದ್ದೇವೆಯೋ, ಅವೂ ಕೂಡ ಕ್ರಮೇಣ ಕಾರಣಾಂತರಗಳಿಂದ ವಿಕೃತವೆಂಬಂತೆ ಅನುಭವಕ್ಕೆ ಬರಬಹುದು. ಆದುದರಿಂದ ಎಲ್ಲವೂ ಸುಂದರ ಎಂದು ನಮಗೆ ಅನುಭವಕ್ಕೆ ಬರಬೇಕಾದರೆ, ನಾವು ಈ ದ್ವಂದ್ವವನ್ನು ಮೀರಿ ನಿಲ್ಲುವ ಯೋಗಿಯಾಗಬೇಕು, ಇಲ್ಲವೇ ಕವಿಯಂತೆ ನಿಸ್ಸಂಗ ಪರಿಭಾವನೆಯಲ್ಲಿ ನಿಂತು ಎಲ್ಲವನ್ನೂ ನಮ್ಮ ರಸಾನುಭವದ ವಸ್ತುವನ್ನಾಗಿ ಮಾಡಿಕೊಳ್ಳಬೇಕು. ಆಗ ಅದು ನಿಜವಾಗಿಯೂ ಸುಂದರವಾಗುತ್ತದೆ. ಏಕೆಂದರೆ ಕೇವಲ ಸುಖವನ್ನು ಉಲ್ಲಾಸವನ್ನು ನೀಡುವ ವಸ್ತು ಸುಂದರವೆಂದಾಗಲೀ, ಅಸುಖವನ್ನು ತರುವ ವಸ್ತು ವಿಕೃತಿ ಎಂದಾಗಲೀ ಹೇಳುವುದು ನಿಜವಾದ ಸೌಂದರ‍್ಯಾನುಭವವನ್ನು ಪಡೆದವನ ಮಾತಲ್ಲ. ಯಾವುದು ನಮ್ಮ ರಸಾನುಭವದ ವಸ್ತುವೋ ಅದು ಮಾತ್ರ ಸುಂದರ. ಅಂತಹ ರಸಾನುಭವವನ್ನು ಪಡೆಯುವ ಕಲೆಗಾರಿಕೆ ನಮ್ಮೆಲ್ಲರಿಗೂ ಸುಲಭವಾಗಿ ಲಭಿಸತಕ್ಕದ್ದಲ್ಲ; ಆದುದರಿಂದ ನಾವು ಕಲಾ ಕೃತಿಗೆ ಹೋಗುತ್ತೇವೆ. ನಾವು ಲೋಕದಲ್ಲಿ ಕಾಣುವ ಸೌಂದರ್ಯವನ್ನು ಕಲೆಯಲ್ಲಿ ಕಲೆಗಾರನು ಇನ್ನೂ ಪ್ರಿಯವನ್ನಾಗಿಯೂ, ವಿಕೃತಿಯನ್ನು ಸಹನೀಯವನ್ನಾಗಿಯೂ ಮಾಡುತ್ತಾನೆ. ಅಲ್ಲಿ ನಾವು ಲೋಕದಲ್ಲಿ ಕಂಡ ಚೆಲುವು ನಮಗೆ ಇನ್ನೂ ಪ್ರಿಯವಾಗುತ್ತದೆ; ಕಾಣದ ಚೆಲುವು ಅಲ್ಲಿ ಕಂಡು ಹಿಗ್ಗಿಸುತ್ತದೆ. ಲೋಕದಲ್ಲಿ ನಾವು ಕಂಡ ವಿಕೃತಿ ಅಲ್ಲಿ ಆಕರ್ಷಕವಾಗಿ, ಪ್ರಶಂಸನೀಯವಾಗಿ ಪರಿಣಮಿಸುತ್ತದೆ- ನಮ್ಮನ್ನು ಲೌಕಿಕ ಸಂಗದಿಂದ ಬಿಡುಗಡೆಗೊಳಿಸುವುದರ ಮೂಲಕ. ಸೃಷ್ಟಿಶೀಲನಾದ ಕಲಾವಿದನ ಕಣ್ಣಿಗೆ ಸುಂದರ ವಿಕೃತವೆನ್ನುವ ವ್ಯತ್ಯಾಸಗಳಿಲ್ಲ. ಭಾರತೀಯ ಕಾವ್ಯಮೀಮಾಂಸೆ ಹೇಳುತ್ತದೆ, “ರಮ್ಯ, ಅಸಹ್ಯ, ಉದಾರ, ನೀಚ, ಉಗ್ರ, ಪ್ರಸನ್ನ, ಕ್ಲಿಷ್ಟ, ವಿಕೃತ-ವಸ್ತು  ಹೀಗೆ ಯಾವುದಾದರೂ ಆಗಿರಲಿ, ಕಡೆಗೆ ವಸ್ತುವಲ್ಲದ್ದೇ ಆಗಿರಲಿ, ಕವಿ ಭಾವಕರ ಭಾವನೆಗೆ ವಿಷಯವಾದಮೇಲೆ ರಸಮಯವಾಗದ್ದು ಲೋಕದಲ್ಲಿ ಏನೊಂದೂ ಇಲ್ಲ”[10] ಎಂದು. ಲೋಕದ ಸೌಂದರ್ಯ ಹೇಗಾದರೂ ಇರಲಿ, ಕಲಾಸೌಂದರ್ಯದಲ್ಲಿ ಮಾತ್ರ ಪ್ರತಿಯೊಂದೂ ಸುಂದರ ಅಥವಾ ರಸವತ್ತಾಗಿರಬೇಕೆನ್ನುವುದನ್ನು ಸೌಂದರ್ಯಮೀಮಾಂಸಕರು ಹೇಳುತ್ತಾ ಬಂದಿದ್ದಾರೆ.

ಇನ್ನು ಮುಂದಿನ ಪ್ರಶ್ನೆ ಕಲಾಕೃತಿಯಲ್ಲಿ ವಿಕೃತಿ ಹೇಗೆ ನಮ್ಮ ರಸಾನುಭವಕ್ಕೆ ಪಾತ್ರವಾಗುತ್ತದೆ ಅಥವಾ ಸುಂದರವಾಗುತ್ತದೆ – ಎನ್ನುವುದು.

ವಿಕೃತಿ ಕಲೆಯಲ್ಲಿ ಸುಂದರವಾಗಬಲ್ಲದೇ ಎಂಬ ಪ್ರಶ್ನೆಯನ್ನು ಬಲು ಹಿಂದೆಯೇ ಗ್ರೀಕ್ ತತ್ವಶಾಸ್ತ್ರಜ್ಞ ಪ್ಲೂಟಾರ್ಕ್ ಎತ್ತಿಕೊಂಡು, ವಿಕೃತಿ ಸುಂದರವಾಗಲಾರದು, ಆದರೆ ಕಲೆಯಲ್ಲಿ ನಾವು ಅದನ್ನು ಮೆಚ್ಚಿಕೊಳ್ಳಬಹುದು, ವಿಕೃತಿಯನ್ನೆ ಚಿತ್ರಿಸುವ ಕಲೆ ಸುಂದರ ಕಲಾಕೃತಿಯಾಗಲಾರದು – ಎನ್ನುತ್ತಾನೆ.[11] ಕಲೆಯ ಪರಿಪೂರ್ಣತೆಗೆ ವಿಕೃತಿ ಅಗತ್ಯವಾದರೂ, ವಿಕೃತಿ ಎಂದೂ ಸುಂದರವಾಗಲಾರದು ಎಂದು ರಸ್ಕಿನ್ ಹೇಳುತ್ತಾನೆ.[12] ಕಲೆಯಲ್ಲಿ ವಿಕೃತಿಯನ್ನು ಚಿತ್ರಿಸಿದಾಗ ಕಲಾಕೃತಿ ಸುಂದರವಾಗಬಹುದೇ ಹೊರತು, ವಿಕೃತಿ ಮಾತ್ರ ಸುಂದರವಾಗಲಾರದು ಎನ್ನುತ್ತಾರೆ ಇನ್ನೂ ಹಲವರು. ವಿಕೃತಿ ಭವ್ಯತೆಯ ಒಂದು ಅಂಶವೆಂದು ಎಡ್ಮಂಡ್ ಬರ್ಕ್‌ನೂ, ವಿಕೃತಿ ಹಾಸ್ಯ ಭೀಭತ್ಸದ ಒಂದು ಮಾಧ್ಯಮವೆಂದು ಲೆಸ್ಸಿಂಗ್‌ನೂ ಅಭಿಪ್ರಾಯ ಪಡುತ್ತಾರೆ. “ವಿಕೃತಿ, ಸೌಂದರ್ಯಕ್ಕೆ ವಿರುದ್ಧವಾಗಿ ಎದ್ದ ಒಂದು ದಂಗೆ, ಶಿವಕ್ಕೆ ಅಶಿವ ಹೇಗೋ ಹಾಗೆ, ಸೌಂದರ್ಯದೊಂದಿಗೆ ತತ್‌ಕ್ಷಣವೇ ವಿರುದ್ಧವೆಂಬಂತೆ ಅದು ತೋರುತ್ತದೆ. ಅದು ಸೌಂದರ್ಯದ ನೇತ್ಯಾತ್ಮಕ ಸ್ಥಿತಿಯಾದರೂ ಕಲೆಯಲ್ಲಿ ಒಂದು ಇತ್ಯಾತ್ಮಕವಾದ ಸ್ಥಾನವನ್ನು ಆಕ್ರಮಿಸುತ್ತದೆ. ಭವ್ಯತೆಯಿಂದ ಹಾಸ್ಯದವರೆಗಿನ ವಿವಿಧ ಮಜಲುಗಳಲ್ಲಿ ಹಾಯ್ದು ಬರುವ ಸೌಂದರ್ಯ ವಿಕೃತಿಗೆ ಸಮೀಪವಾಗಿಯೂ ಬರುತ್ತದೆ”[13] ಎನ್ನುತ್ತಾನೆ ಷೋಪನ್ ಹೌರ್. ಈ ವಿಚಾರದಲ್ಲಿ ಎಸ್. ಅಲೆಗ್ಸಾಂಡರ್ ಅವರು ಹೀಗೆ ಹೇಳುತ್ತಾರೆ: “ರಸದ ದೃಷ್ಟಿಯಿಂದ ಸೌಂದರ‍್ಯ ವಿಕೃತಿ ಎನ್ನುವುದು ಒಂದೇ ಚೆಲುವಿನ ಬೇರೆ ಬೇರೆ ಶಾಖೆಗಳು. ಸುಂದರ ಎಂದರೆ ಕಲೆಯಲ್ಲಾಗಲೀ ಲೋಕದಲ್ಲಾಗಲೀ ತನಗೆ ತಾನೇ ಆಕರ್ಷಕವಾದುದು-ಎಂದು ಸ್ಥೂಲವಾಗಿ ಹೇಳಬಹುದು. ಅಂತೆಯೇ ಆಕರ್ಷಕವಲ್ಲದ, ಸಂತೋಷದಾಯಕವಲ್ಲದ ಚೆಲುವಿನ ಒಂದು ರೀತಿಯನ್ನು ವಿಕೃತ ಎನ್ನಬಹುದು. ಅದೊಂದು ಕ್ಲಿಷ್ಟಸೌಂದರ‍್ಯ. ಪ್ರಕೃತಿಯಲ್ಲಿ ಯಾವುದನ್ನು ವಿಕೃತ ಎನ್ನುತ್ತೇವೆಯೋ ಅದು ಕಲೆಯಲ್ಲಿ ಸೌಂದರ‍್ಯದ ಆವರಣಕ್ಕೆ ಸಂದು ಸುಂದರವೂ ಆಕರ್ಷಕವೂ ಆಗಬಹುದು. ಆದುದರಿಂದ, ಲೋಕ ವಿಕೃತಕ್ಕೂ ಕಲೆಯಲ್ಲಿ ಬಂದ ವಿಕೃತಕ್ಕೂ ಅಂತರವಿದೆ. ನಮ್ಮ ರಸನಾನುಭವಕ್ಕೆ ಒಳಿತೆಂದು ತೋರುವ ತನಕ, ಆಕರ್ಷಕವಾಗಲಿ, ಅಲ್ಲದಿರಲಿ ತನಗೆ ತಾನೇ ಸುಂದರವಲ್ಲ. ಅಂತೆಯೇ ಕಲೆಯಲ್ಲಾಗಲೀ ಪ್ರಕೃತಿಯಲ್ಲಾಗಲೀ ಸೌಂದರ‍್ಯ, ವಿಕೃತಿಗಳು ಚೆಲುವಿನ ಬೇರೆ ಬೇರೆ ವಿನ್ಯಾಸಗಳೆಂದು ನೋಡುವ ಕಣ್ಣಿಗೆ ಭಾಸವಾಗುತ್ತವೆ. ಇವೆರಡರ ವ್ಯತ್ಯಾಸವೇನಿದ್ದರೂ ವ್ಯಕ್ತಿನಿಷ್ಠವಾದುದು.”[14] ವಿಕೃತಿಯ ಬಗೆಗೆ ಕ್ರೋಚೆಯು ಗಮನಾರ್ಹವಾದ ಮತ್ತೊಂದು ಅಂಶವನ್ನು ಹೇಳುತ್ತಾನೆ; ಅವನ ಪ್ರಕಾರ ಅಭಿವ್ಯಕ್ತಿಯಲ್ಲಿರುವ ಅಸಮರ್ಪಕತೆಯೇ ವಿಕೃತಿಗೆ ಕಾರಣ. ವಿಕೃತಿಯದ್ದೋ, ಸೌಂದರ‍್ಯದ್ದೋ ಯಾವುದರ ಅಭಿವ್ಯಕ್ತಿ ಪರಿಪೂರ್ಣವಾಗುವುದೋ ಅದು ಕಲೆಯಲ್ಲಿ ಸುಂದರವೇ ಆಗಬೇಕು. ಆದರೆ ನಿಜವಾದ ವಿಕೃತಿ ಎನ್ನುವುದೊಂದು ಕಲಾದೋಷ. ಕಲಾವಿದ ತನ್ನ ಹೊಳಹಿಗೆ ಸಂದುದನ್ನು ಅಭಿವ್ಯಕ್ತಿಗೊಳಿಸಿದಾಗ ಸುಂದರವಾಗುತ್ತದೆ. ಅಷ್ಟೇ ಅಲ್ಲ, ಕಲೆಯಲ್ಲಿ ನೈತಿಕ ಅಥವಾ ಅನೈತಿಕ ಪ್ರಭಾವಗಳಿಂದ ಪ್ರಚೋದಿತವಾದ ಒಂದು ಲೌಕಿಕೋದ್ದೇಶದ ಅನುಚಿತ ಪ್ರವೇಶವೇ ವಿಕೃತಿ – ಎನ್ನುತ್ತಾನೆ.[15] ಕ್ಯಾಥರೀನ್ ಗಿಲ್ಬರ್ಟ ಅವರೂ ಇದನ್ನು ಸಮರ್ಥಿಸುತ್ತಾ “ಕಲೆಯಲ್ಲಿ ವಿಕೃತಿಯನ್ನು ಕಂಡಾಗಲೆಲ್ಲಾ ಕಲೆಗಾರ ಏನೋ ಒಂದನ್ನು ಮಾಡಲು ಹೋಗಿ ಏನೋ ಆಗಿದೆ ಎನ್ನಿಸುತ್ತದೆ. ಕಲೆಗಾರ ಕೃತಿರಚನೆಗೆ ತೊಡಗಿದಂದು ಕೈಕೊಂಡ ಉದ್ದೇಶ ವಿಫಲವಾಗಿ ಅದು ಅಭಿವ್ಯಕ್ತಿಯಲ್ಲಿ ಬೇರೆ ಏನೋ ಒಂದಾದಾಗ, ಅದು ನೋಟಕನಲ್ಲಿ ಒಂದು ಬಗೆಯ ಅತೃಪ್ತಿಯನ್ನು ಅಸುಖವನ್ನು ಉಂಟುಮಾಡುತ್ತದೆ. ಮತ್ತೊಂದು ಬಗೆಯ ವಿಕೃತಿ, ಕಲಾವಿದನ ಪ್ರಜ್ಞಾಪೂರ್ವಕವಾದ ಚಾತುರ‍್ಯದಿಂದ ಆದುದು. ಈ ಎರಡು ಬಗೆಯ ವಿಕೃತಿಯನ್ನೂ ಒಂದು ಮಾತಿನಲ್ಲಿ ಹೇಳುವುದಾದರೆ ಅಸಾಮಂಜಸ್ಯತೆಯೇ ಇದರ ಮೂಲ[16] ಎನ್ನುತ್ತಾರೆ. ನಮ್ಮಲ್ಲೂ ಕಲಾಕೃತಿಯ ವಿಕೃತಿಗೆ ಅಸಮಂಜಸವಾದ, ಅಭಿವ್ಯಕ್ತಿಯೇ ಕಾರಣ ಎಂದು ಶಿಲ್ಪಶಾಸ್ತ್ರಗಳು ಹೇಳುತ್ತವೆ. ಶಿಲ್ಪಿಯ ವಿಗ್ರಹ ಪರಿಪೂರ್ಣವಾಗಿರಬೇಕು – ಎಂದರೆ ಶಾಸ್ತ್ರದಲ್ಲಿ ಹೇಳಿರುವ ಪ್ರಮಾಣಗಳನ್ನು ಅನುಸರಿಸಬೇಕು. ವಿಗ್ರಹಕ್ಕೆ ಅಪರಿಪೂರ್ಣ ಅಥವಾ ಅಪರಿಪಕ್ವ ಕಲಾಶಕ್ತಿಯಿಂದಾಗಬಹುದಾದ ಅವಲಕ್ಷಣಾದಿ ವಿಕೃತಿಗಳಿದ್ದರೆ ಅದನ್ನು ಮಾಡಿಸಿದವನಿಗೂ, ಮಾಡಿದವನಿಗೂ ಅಶುಭ ಉಂಟಾಗುತ್ತದೆ ಎಂದು ಶಿಲ್ಪಗ್ರಂಥಗಳು ಹೇಳುತ್ತವೆ. ಇದು ಕಲಾಕೃತಿಯ ವಿಕೃತಿಗೆ ಸಂಬಂಧಿಸಿದ ಮಾತು. ಆದರೆ ಕಲಾಕೃತಿಯಲ್ಲಿ ವಿಕೃತಿಯನ್ನು ಚಿತ್ರಿಸಬಾರದೆಂದೇನೂ ಅವು ಹೇಳುವುದಿಲ್ಲ. ನಮ್ಮ ಭಾರತೀಯ ದೇಗುಲಗಳಲ್ಲಿ ನಾವು ವಿಕೃತವೆಂದು ಭಾವಿಸುವ ಎಷ್ಟೋ ಚಿತ್ರಗಳಿವೆ. ಯಾಕೆಂದರೆ ವಿಕೃತಿ ಒಂದು ಬಗೆಯ ಭೂಷಣವೂ ಹೌದು, ಅಮಂಗಳ ಪರಿಹಾರವೂ ಹೌದು ಸೌಂದರ‍್ಯಕ್ಕೆ.

ಈ ಮೇಲಿನ ವಿಚಾರಸರಣಿಯಲ್ಲಿ ಕಲಾಕೃತಿಯಲ್ಲಿ ವಿಕೃತಿ ಚಿತ್ರಣ, ಮತ್ತು ಕಲಾಕೃತಿಯ ವಿಕೃತಿಗೆ ಕಾರಣ ಇವುಗಳನ್ನು ಗುರುತಿಸಬಹುದು. ಲೋಕದಲ್ಲಿ ಸುಂದರವಾದದ್ದನ್ನೆ ಕಲಾವಿದ ಕಲೆಯಲ್ಲಿ ಚಿತ್ರಿಸಿದಾಗ ನಾವು ಅದರಿಂದ ಸೌಂದರ‍್ಯಾನುಭವವನ್ನು ಪಡೆಯುವಷ್ಟರಮಟ್ಟಿಗೆ, ಲೋಕದಲ್ಲಿ ವಿಕೃತವಾದದ್ದನ್ನು ಕಲೆಯಲ್ಲಿ ಚಿತ್ರಿಸಿದಾಗ ನಾವು ಸೌಂದರ್ಯಾನುಭವವನ್ನು ಪಡೆಯಲಾಗುತ್ತದೆಯೆ ಎಂಬ ಪ್ರಶ್ನೆ ಏಳುತ್ತದೆ. ಆದರೆ ವಿಕೃತಿಯನ್ನು ಕಲೆಯಲ್ಲಿ ರಸಾನುಭವಕಾರಿಯಾಗುವಂತೆ ಮಾಡುವುದು ಕಷ್ಟವೆಂದು ಒಪ್ಪಿದರೂ, ಅದನ್ನು ರಸಾನುಭವಕಾರಿಯಾಗಿ ಕಲೆಯಲ್ಲಿ ಚಿತ್ರಿಸಿದಾಗಲೇ ಅವನ ಕಲೆ ಯಶಸ್ವಿಯೂ ಸುಂದರವೂ ಆಗುತ್ತದೆ ಎಂಬುದನ್ನು ಮರೆಯಬಾರದು. ಇದರ ರಸಾನುಭವ, ಮತ್ತು ಇದರ ಚಿತ್ರಣ ಕಷ್ಟವಾದುದರಿಂದ, ಇದೂ ಸೌಂದರ್ಯದ ಒಂದು ಅಂಶವೆಂದು ಭಾವಿಸುವುದು ಕಷ್ಟವಾದುದರಿಂದ, ಇದು ಒಂದು ಬಗೆಯ ಕ್ಲಿಷ್ಟ ಸೌಂದರ‍್ಯ (Difficult Beauty) ವೆಂದು ಹೇಳಬಹುದು. ಆದರೆ ವಿಕೃತವನ್ನು ರಸಾನುಭವಕಾರಿಯಾಗಿ ಚಿತ್ರಿಸುವುದು ಕವಿಯ ಶಕ್ತಿಯನ್ನು ಅವಲಂಬಿಸಿದೆ. ಉದಾಹರಣೆಗಾಗಿ ಕನಕದಾಸರ ನಳ ಚರಿತ್ರೆಯಲ್ಲಿ, ಕಾರ್ಕೋಟಕನ ವಿಷದಿಂದ ನಳನಿಗೊದಗಿದ ಈ ವಿಕೃತ ರೂಪದ ಚಿತ್ರಣವನ್ನು ನೋಡಿ:

ಅಡ್ಡ ಮೋರೆಯ ಗಂಟು ಮೂಗಿನ
ದೊಡ್ಡ ಹೊಟ್ಟೆಯ ಗೂನು ಬೆನ್ನಿನ
ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ
ಜಡ್ಡುದೇಹದ ಗುಜ್ಜುಗೊರಲಿನ
ಗಿಡ್ಡುರೂಪಿನ ಹರಕು ಗಡ್ಡದ
ಹೆಡ್ಡನಾದ ಕುರೂಪಿತನದಲಿ
ನೃಪತಿ ವಿಷದಿಂದ

ಇಂಥ ಒಬ್ಬ ವ್ಯಕ್ತಿ ಲೋಕದಲ್ಲಿ ನಮ್ಮ ಎದುರಿಗೆ ಬಂದ ಎನ್ನಿ. ಆಗ ಮೊದಲ ಪ್ರತಿಕ್ರಿಯೆ ಈ ವಿಕೃತಿಯನ್ನು ಕಂಡು ನಗುತ್ತೇವೆ. ಕಾರಣ ಅವನ ಅಂಗಾಂಗದ ವೈಪರೀತ್ಯದ ರಚನೆ. ಆದರೆ ಮರುಕ್ಷಣಕ್ಕೆ ಇಂಥ ಅಸಹ್ಯದ ವ್ಯಕ್ತಿ ನಮ್ಮ ಎದುರಿಗಿರುವುದು ಬೇಡ; ಇದು ನಮ್ಮ ಅಸುಖವನ್ನು ಹೆಚ್ಚಿಸುವುದು ಬೇಡ – ಎನ್ನುತ್ತದೆ ನಮ್ಮ ಸ್ವಾರ್ಥ. ಈ ವಿಕರ್ಷಣೆಯ ಭಾವ ನಮಗೆ ಜುಗುಪ್ಸೆಯನ್ನು ತರುತ್ತದೆ. ಆದರೆ ಚಿತ್ರದಲ್ಲಾದರೋ, ಕಾವ್ಯದಲ್ಲಾದರೋ ಇದೇ ಕುರೂಪವನ್ನು ಕವಿ ಚಿತ್ರಿಸಿದಾಗ, ಅದರ ಒಂದೊಂದು ರೇಖೆಯೂ ಬಣ್ಣನೆಯೂ ಒಂದೊಂದು ಭಾವ ಪ್ರದರ್ಶನಕ್ಕೆ ನೆರವಾಗುತ್ತದೆ. ನಳಚರಿತ್ರೆಯ ಈ ಪ್ರಸಂಗದಲ್ಲಿ ಇಂಥ ವಿಕೃತಿಯನ್ನು ನೋಡಿದಾಗ ನಾವು ಆ ವ್ಯಕ್ತಿಯೊಂದಿಗೆ ಕನಿಕರಿಸುತ್ತೇವೆ. ಕಾವ್ಯದ ಸಂದರ್ಭದ ಪರಿಭಾವನೆಯಿಂದ ನಮ್ಮ ಮನಸ್ಸು ಹೊರರೂಪಕ್ಕಿಂತ ಒಳರೂಪಕ್ಕೆ ಪ್ರವೇಶಿಸಿ ಆ ವ್ಯಕ್ತಿಯೊಂದಿಗೆ ತಾದಾತ್ಮ್ಯಾನುಭವವನ್ನು ಪಡೆಯುತ್ತದೆ. ಮತ್ತು ನಮ್ಮ ಮನಸ್ಸು ಹೊರಗೆ ಕಾಣುವುದಕ್ಕಿಂತ ಬೇರೆಯಾದುದನ್ನು ಅದರಲ್ಲಿ ಕಾಣುತ್ತದೆ. ಕವಿಯ ಕಾವ್ಯಲೋಕದಲ್ಲಿ ಎಲ್ಲದಕ್ಕೂ ಸ್ಥಾನ ಉಂಟು. ಲೋಕದಲ್ಲಿ ನಾವು ವಿಕಾರವೆಂದು ದೂರ ತಳ್ಳುವುದನ್ನೆಲ್ಲ ಕಾವ್ಯ ತನ್ನ ಸಹಾನುಭೂತಿಯ ಮಡಿಲಿನಲ್ಲಿ ಎತ್ತಿಕೊಳ್ಳುತ್ತದೆ. ಶ್ರೀ ಪು.ತಿ.ನ ಅವರು ರಸಸರಸ್ವತಿಯನ್ನು ವರ್ಣಿಸುತ್ತಾ –

ವಿಟ, ವೇಶ್ಯೆ, ಜೂಜಾಳಿ, ಕಳ್ಳ, ಲಂಪಟ, ಕುಡುಕ
ಕುಲಟೆ, ಪಾದರಿ, ಸುಳ್ಳಿ, ಧೂರ್ತ, ವಂಚಕ, ಕಟುಕ
ಹೆಸರಿಸುವುದೇನೆಲ್ಲ ಧರ್ಮಜ್ಞಧಿಕೃತರ ಪತಿಕರಿಪ ತೆರದೆ
ಸಹೃದಯಾನಂದದೊಳು ನಿಷ್ಕೃತಿಯ ವರವೀವ ವರದೆ.
(ರಸ ಸರಸ್ವತಿ ಮತ್ತು ಇತರ ಕವನಗಳು: ಪು. ೪೬)

ಎಂದು ಹೇಳುತ್ತಾರೆ. ಕಾವ್ಯಲೋಕದಲ್ಲಿ ಲೋಕದ ವಿಕೃತಿಯನ್ನು ಕಂಡಾಗ ಅದೂ ರಸಾನುಭವಕಾರಿಯೇ ಆಗುತ್ತದೆ. ಈ ಅರ್ಥದಲ್ಲಿ ಕಲೆಯಲ್ಲಿ ಚಿತ್ರಿತವಾಗಿರುವುದನ್ನು ನಾವು ವಿಕೃತಸುಂದರ ಎಂದು ಕರೆಯಬಹುದು; ಲೋಕದಲ್ಲಿ ಕಾಣುವ ವಿಕೃತಿ ಇಲ್ಲಿಯೂ ಇರುವುದರಿಂದ – ಲೋಕದ ಅರ್ಥದಲ್ಲಿ ವಿಕೃತಿ, ಈ ವಿಕೃತಿ ರಸಾನುಭವಕಾರಿಯಾಗುವುದರಿಂದ, ಕಾವ್ಯದ ಅರ್ಥದಲ್ಲಿ ಸುಂದರ.

ಪಾಶ್ಚಾತ್ಯರಲ್ಲಿಯಷ್ಟು ನಮ್ಮಲ್ಲಿ ವಿಕೃತಿಯನ್ನು ಕಲೆಯಲ್ಲಿ ವೈವಿಧ್ಯಪೂರ್ಣವಾಗಿ ಮತ್ತು ವಿಶೇಷವಾಗಿ ತರಲಿಲ್ಲ. ಕಾಮವಿಕಾರಗಳನ್ನೆ ವಸ್ತುವಾಗಿ ಉಳ್ಳ ಮತ್ತು ವಿಕೃತವನ್ನು ಯಶಸ್ವಿಯಾಗಿ ಚಿತ್ರಿಸುವ ಕೃತಿಗಳು ಪಾಶ್ಚಾತ್ಯರಲ್ಲಿವೆ. ಕನ್ನಡದಲ್ಲಿ ವಿಕೃತ ಕಾಮವನ್ನು ಯಶಸ್ವಿಯಾಗಿ ಚಿತ್ರಿಸಿರುವುದು ಜನ್ನನ ಯಶೋಧರಚರಿತೆಯೊಂದೇ ಎಂದು ಹೇಳಬಹುದು. ಅಮೃತಮತಿ ಅಷ್ಟವಂಕನ ಪ್ರಣಯಪ್ರಸಂಗ ನಿಜವಾಗಿಯೂ ಕಾಮವಿಕಾರವನ್ನು ಚಿತ್ರಿಸುವ ಕತೆ. ಅಷ್ಟವಂಕನ ವಿಕೃತಿ ಒಳಹೊರಗೂ ಏಕಪ್ರಕಾರವಾಗಿ ತೋರಿದರೂ, ಅಮೃತಮತಿಯಂಥ ಅಪೂರ್ವಸುಂದರಿಯೂ ಅಲ್ಲಿ ವಿಕೃತಳಾಗಿದ್ದಾಳೆ ತನ್ನ ಚಾರಿತ್ರ್ಯದಿಂದ. ಇಲ್ಲಿನ ಅಷ್ಟವಂಕ ನಿಜವಾಗಿಯೂ ಅಷ್ಟವಂಕನೇ. ಕವಿ ಅವನನ್ನು ಚಿತ್ರಿಸಿರುವ ಪರಿಯನ್ನು ನೋಡಿ ;

ಪಱದಲೆ ಕುೞನೊಸಱುಗ
ಣ್ಣೊಱುವಾಯ್ ಹಪ್ಪಳಿಕೆ ಮೂಗು ಮುರುಟಿದ ಕಿವಿ ಬಿ-
ಬ್ಬಿಱವಲ್ ಕುಸಿಗೊರಲಿೞದೆರ್ದೆ
ಪೊಱಂಟ ಬೆನ್ ಬಾತಬಸಿಱಡಂಗಿದ ಜಘನಂ.
ಕಱಿದೊವಲ ಪೞುಯ ಕುೞಯಂ

ತೆಱುದಂದಂದ ಮೆಯ್ಯನಾತಮಾತನ ಕಯ್ಗಳ್
ಕುೞಗಣ್ಣು ಕೂನಬೆನ್ ಕಾಲ್
ಮಱುಯಿಸುವುದು ಟೊಂಕ ಮುರಿದ ಕತ್ತೆಯ ಕಾಲಂ
ಮುದುಗರಡಿಯ ಮುದುದೊವಲಂ
ದದ ಕರಿಯಂ ತಾಳಕಾಯ ಮೋಳಿಗೆಯೊಂದಂ
ದದಮುರುಡನಷ್ಟವಂಕಂ

ಮೊದಲೊಣಗಿದ ಕೂನಕೊರಡಿನಂದದ ಕೊಂಕಂ

ಅಷ್ಟವಂಕನ ಈ ವಿಕೃತಿಯ ಮುಂದೆ ನಳಚರಿತ್ರೆಯ ಬಾಹುಕನ ರೂಪವೇ ಸುಂದರ ಎನಿಸಿಬಿಡುತ್ತದೆ! ಯಶೋಧರ ಚರಿತೆಯಲ್ಲಿ ಚಿತ್ರಿತವಾಗಿರುವ ಅಷ್ಟವಂಕ ಯಾವ ಕನಿಕರಕ್ಕೂ ಪಾತ್ರನಾಗದೆ ಅಸಹ್ಯವಾಗಿಯೇ ಉಳಿಯುತ್ತಾನೆ ಕಡೆತನಕ. ಆದರೆ ಕುವೆಂಪು ಅವರು ಚಿತ್ರಿಸಿರುವ ಮಂಥರೆಯ ವಿಕೃತಿಯನ್ನು ನೋಡಿ:

ಕುಡುಬಿಲ್ಲು ಬಾಗಿದ ಮೆಯ್ಯ,
ತೊನ್ನ ಬೆಳ್ಗಲೆವಿಡಿದ ಕರ್ರನೆಯ ಕುಬ್ಜತೆಯ,
ಗೂಳಿ ಹಿಣಿಲಿನವೋಲು ಗೂನುವುಬ್ಬಿದ ಬೆನ್ನ
ಸುಕ್ಕು ನಿರಿನಿರಿಯಾಗಿ ಬತ್ತಿದ ತೊವಲ್ ಪತ್ತಿ,
ಬಿಗಿದೆಲ್ವುಗೂಡಿನಾ ಶಿಥಿಲ ಕಂಕಾಲತೆಯ
ಪಲ್ಲುದುರಿ ಬೋಡಾದ ಬಾಯಿಯ, ಕುಳಿಯ,
ಕೆನ್ನೆಗಳ, ದಿಟ್ಟಿ ಮಾಸಿದ ಕಣ್ಣ ಕೋಟರದ
ಕರ್ಬುನ ಮೊರಡು ಮೊಗದ, ಕೂದಲುದುರಿದ ಬೋಳು
ಪುರ್ಬಿನ ವಿಕಾರದಾ, ಬೆಳ್ವಕ್ಕಿ ತಿಪ್ಪುಳೆನೆ
ಮಂಡೆಯಂ ಮುತ್ತಿ ಕೆದರಿದ ಬೆಳ್ಳನೆಯ ನವಿರ
ಅಸ್ಥಿಪಂಜರದಂತೆ ವೋಲ್ ಅಸ್ಥಿರ ಸ್ಥವಿರೆ….
(ಶ್ರೀರಾಮಾಯಣ ದರ್ಶನಂ : ಭಾ. ೧ ಪು. ೨೧)

ಇಲ್ಲಿನ ಮಂಥರೆ ಹೊರಗಣ್ಣಿಗೆ ವಿಕೃತೆಯಾಗಿ ತೋರಿದರೂ, ಕೈಕೆಯಿಯನ್ನು ರಾಮನ ವನವಾಸ ಪ್ರಾಪ್ತಿಯೊದಗುವಂತೆ ವರವನ್ನು ಕೇಳಲು ಪ್ರಚೋದಿಸುವ ಮೂಲಕ ಇನ್ನೂ ವಿಕೃತೆಯಂತೆ ಕಂಡರೂ, ಮೊದಲಿನಿಂದಲೂ ಅವಳೊಂದು “ಮಮತೆಯ ಸುಳಿ” ಎಂದು ಒಳಗಣ್ಣಿಗೆ ಕಾಣುತ್ತಾಳೆ. ಅವಳು ಭರತನಿಗಾಗಿ ತೋರುವ ಅಪಾರವಾದ ಅಪೂರ್ವವಾದ ಆ ಪ್ರೇಮ, ಕಡೆಗೆ ಆ ಪ್ರೇಮಕ್ಕಾಗಿಯೇ ಅವಳು ಅಸುವನ್ನು ನೀಗಿ, ಭರತನ ಕಲ್ಯಾಣಕ್ಕೆ ಸದಾ ತುಡಿಯುವ ಹಂಬಲದಿಂದ ಅಶರೀರಿಯಾಗಿ ಅವಳು ನಡೆಸುವ ಸಾಧನೆ, ಇವೆಲ್ಲವೂ ಮಂಥರೆಯ ಬಗೆಗೆ ನಮ್ಮ ಕರುಣೆಯನ್ನೂ, ಸಹಾನುಭೂತಿಯನ್ನೂ ಮತ್ತು ಪ್ರೀತಿಯನ್ನೂ ಗಳಿಸಿಕೊಡುತ್ತವೆ. ಕಡೆಗೆ ನಾವು ಮತ್ತೊಮ್ಮೆ ಮಂಥರೆಯನ್ನು ಕಾಣುತ್ತೇವೆ, ಹದಿನಾಲ್ಕು ವರ್ಷಗಳ ದೂರ ದೀರ್ಘ ನಿರೀಕ್ಷೆಯ ತುದಿಯಲ್ಲಿ ರಾಮಾಗಮನಕ್ಕೆ ಕಾತರನಾಗಿ, ಭರತ ಅಗ್ನಿಪ್ರವೇಶಕ್ಕೆ ಸಿದ್ಧನಾದಾಗ –

“ಯಜ್ಞಕುಂಡಾಗ್ನಿಯಿಂ
ಜ್ವಾಲೆಯೇಳ್ವಂದದಿಂ ಜ್ವಾಲಾ ವಿಲೀನಮೆನೆ
ಮೈದೋರ್ದುದೊಂದಮರ ಸುಂದರ ಸೂಕ್ಷ್ಮ ತೇಜದ
ಸುರಾಂಗನಾ ಮೂರ್ತಿ”

ಆಗ ಭರತ ಕೇಳುತ್ತಾನೆ ‘ನೀನಾರ್’ ಎಂದು. ಆ ಮೂರ್ತಿ ಹೇಳುತ್ತದೆ ‘ಸದಾ ನಿನ್ನ ಕ್ಷೇಮ ಚಿಂತನೆಯಲ್ಲಿರುವ ಮಂಥರೆಯ ವಿನಾ ಮತ್ತಾರು’ – ಎಂದು. ಮಂಥರೆ ಎಂಬ ಹೆಸರನ್ನು ಕೇಳಿದೊಡನೆಯೇ ssರತ – ‘ಬೇಡ ಆ ಹೆಸರನ್ನು ಹೇಳಬೇಡ, ಅವಳ ಕಾರಣದಿಂದಲೇ ನನಗೀ ಕಷ್ಟದ ಕೆಲಸ’ ಎನ್ನುತ್ತಾನೆ. ಆಗ ಆ ಅಮರ ಸುಂದರ ಮೂರ್ತಿ ಹೇಳುತ್ತದೆ –

ವತ್ಸ, ಕಾರಣಳಲ್ತು; ಬರಿ ಕರಣಮಾ ಕುಬ್ಜೆ,
ಮಂಥರಾ ಪ್ರೇಮದಂತಃಕರಣಮಂ ಕಾಣೆ
ನೀಂ, ರಾಮನಂ ಮತ್ತೆ, ನಿನ್ನಭ್ಯುದಯಕಾಗಿ,
ಪಿಂ ಮರಳ್ಚುವುದ್ಯೋಗದೊಳ್ ತೊಡಗಿರಲ್ಕವಳ್
ದಾವಾಗ್ನಿಗಾಹುತಿಯಾದಳಲ್ತೆ ? ಬಹಿರಂಗದೊಳ್
ಆ ಕುಬ್ಜೆ ವಿಕೃತಿಯೆಂತಂತೆ ಹೊರನೋಟಕಾ
ಗೂನಿಗೆಯ್ದುದು ಪಾಪವೇಷಿ; ನಾನೆಯೆ ನೋಡು,
ನಿನ್ನ ಮಂಥರೆಯಂತರಾತ್ಮದ ಪುಣ್ಯಲಕ್ಷ್ಮಿ”
(ಶ್ರೀರಾಮಾಯಣದರ್ಶನಂ: ಭಾಗ ೩ ಪು. ೮೫೨, ೮೫೩)

ಇಲ್ಲಿ ಕಾಣುವುದು ಮಂಥರೆಯ ಪ್ರೇಮ ಮಂಗಳ ಸುಂದರಮೂರ್ತಿಯನ್ನು. ಅವಳ ಬಹಿರಂಗ ವಿಕೃತವಾದಾಗ ನಾವು ಅವಳ ಗೆಯ್ಮೆಯಲ್ಲಿ ಕೇವಲ ವಿಕೃತಿಯೇ ತುಂಬಿದೆ ಎಂದುಕೊಂಡಿದ್ದೆವು. ಆದರೆ ಅವಳ ಅಂತರಂಗದ ಸೌಂದರ್ಯ ಪ್ರೇಮ ತಪಸ್ಯಾರೂಪಿಯಾದುದು. ಈ ಕಾರಣದಿಂದ ಮಂಥರೆ ಓದುಗರ ರಸಾನುಭವಕ್ಕೆ ಪಾತ್ರಳಾಗಿ ಪ್ರಶಂಸನೀಯಳಾಗುತ್ತಾಳೆ. ಆದರೆ ಜನ್ನನ ಅಷ್ಟವಂಕನೋ ಪತನಾಭಿಮುಖಿ; ಮತ್ತು ಆ ಪತನದಲ್ಲಿ ಅಮೃತಮತಿಯ ಸಹಯಾತ್ರಿ; ಮಂಥರೆಯೋ ಊರ್ಧ್ವಯಾತ್ರಿ. ಅಮೃತಮತಿ – ಅಷ್ಟವಂಕರ ಅಂತರಂಗ ಕಾಮವಿಕಾರಮಯ, ಮಂಥರೆಯದು ಪ್ರೇಮಮಯ. ಈ ಕಾರಣದಿಂದಲೇ ಒಂದರ ವಿಕೃತಿ ತ್ಯಾಜ್ಯವಾದರೆ, ಮತ್ತೊಂದರ ವಿಕೃತಿ ಪೂಜ್ಯವಾಗುತ್ತದೆ.

ಆತ್ಮಯಾತ್ರೆಯಲ್ಲಿ ಮೇಲೇರುವ ಚೇತನದ ಕಣ್ಣಿಗೆ ನಾವು ಲೋಕದಲ್ಲಿ ಯಾವುದನ್ನು ಸುಂದರ ಮತ್ತು ಸೌಂದರ್ಯ ಸಾಧನಗಳೆಂದು ಭಾವಿಸಿರುವೆವೋ ಅವೆಲ್ಲ ವಿಕೃತವೆಂದು ತೋರುವಂತಹ ಸ್ಥಿತಿ ಬರುವುದುಂಟು. ಇಂಥ ಪ್ರಸಂಗಗಳೂ ಕನ್ನಡ ಕಾವ್ಯಗಳಲ್ಲಿವೆ. ಒಂದು ನಿದರ್ಶನವನ್ನು ಪಂಪನ ಆದಿಪುರಾಣದಲ್ಲಿ ನೋಡಬಹುದು. ನೀಳಾಂಜನೆಯ ನೃತ್ಯವನ್ನುಕಂಡ ಬಳಿಕ ಆದಿನಾಥನು ವಿರಕ್ತಿ ಹೊಂದಿ ಸಂಸಾರವನ್ನು ತ್ಯಜಿಸಿ ತಪಸ್ಸಿಗೆ ನಡೆವ ಮುನ್ನ ತಾನು ಅದುವರೆಗೂ ಭೋಗಿಸಿದ ಸುಖಗಳನ್ನು ಕುರಿತು –

ತನುಗೆ ಪೊಱ ತುಡುಗೆ ನವಲೇ
ಪನಮೆ ಮಳಂ ಗೀತಮೞು ನೃತ್ಯಂ ಬಗೆಯ-
ಲ್ಕೆನಗೆ ದಲುನ್ಮತ್ತ ವಿಳಾ-
ಸನ ಮಿಂತಿನಿತಱಳವೊಂದಱಳ್ ಪುರುಳುಂಟೇ
(ಆದಿ ಪುರಾಣ ೯-೫೫)

ಎನ್ನುತ್ತಾನೆ. ಇಲ್ಲಿನ ವಿಕೃತಿಯಲ್ಲಿ ಬೀಭತ್ಸವು ರಸವಾಗಿದೆ. ಅಂತೆಯೇ ಶರೀರವನ್ನು ಕುರಿತ ನಿಂದನೆಯ ವರ್ಣನೆಯಲ್ಲಿಯೂ, ವಿಕೃತಿಯ ಅತಿರೇಕವನ್ನು ಕಾಣಬಹುದು. ಶರೀರವನ್ನು ಸೌಂದರ್ಯದ ಸಾಕಾರವೆಂದು ವರ್ಣಿಸಲು ಸಾಧ್ಯವಿರುವಂತೆಯೇ, ಶರೀರವನ್ನು ಹೊಲಸಿನ ಆಗರವೆಂದು ವಿಕೃತವಾಗಿ ವರ್ಣಿಸಲೂ ಸಾಧ್ಯವಿದೆ. ಅಂತೆಯೇ ಎಷ್ಟೋ ಸಲ ಅಶ್ಲೀಲವಾದ ವರ್ಣನೆಯೂ ವಿಕೃತಿಯಾಗುವುದುಂಟು. ಇಂಥ ಕಡೆಗಳಲ್ಲೆಲ್ಲಾ ಅತಿರೇಕದ ಪರಿಣಾಮದಿಂದ ರಸಾನುಭವ ಸಾಧ್ಯವಾಗದೆ ಹೋಗಬಹುದು.[17]

ಮೃಗಗಳಲ್ಲಿ ನಾವು ಕಾಣುವ ಕ್ರೌರ‍್ಯವನ್ನು ಅದರದೊಂದು ಲಕ್ಷಣವೆನ್ನುತ್ತೇವೆಯೇ ಹೊರತು ವಿಕೃತ ಎನ್ನುವುದಿಲ್ಲ. ಆದರೆ ಆ ಮೃಗೀಯ ಕ್ರೌರ‍್ಯವನ್ನು ಮಾನವನಲ್ಲಿ ಕಂಡಾಗ ಆ ವ್ಯಕ್ತಿ ನಮ್ಮ ಕಣ್ಣಿಗೆ ತತ್ಕಾಲದಲ್ಲಿ ವಿಕೃತವೆಂಬಂತೆ ತೋರುತ್ತಾನೆ. ಮಾನವರಲ್ಲಿ ತೋರುವ ಪೈಶಾಚಿಕ ವರ್ತನೆ, ಅದು ಸಮರ್ಥನೀಯವೇ ಆಗಬಹುದಾದರೂ, ವಿಕೃತ ಎನ್ನಿಸುತ್ತದೆ. ಕುರುಕ್ಷೇತ್ರದಲ್ಲಿ ದುಶ್ಯಾನನ ಕರುಳನ್ನು ಬಗಿದು, ರಕ್ತವನ್ನು ಕುಡಿದು ಹಿಡಿಂಬೆಯೊಡನೆ ರಣಕ್ರೀಡೆಯಾಡುವ ಭೀಮ ನಿಜವಾಗಿಯೂ ವಿಕೃತವಾಗಿ ತೋರುತ್ತಾನೆ. ನಾರಣಪ್ಪ ಆ ಪ್ರಸಂಗದ ಚಿತ್ರವನ್ನು ಹೀಗೆ ಕೊಡುತ್ತಾನೆ:

ಕೆಲದ ತಲೆಯದ್ರಿಗಳ ಮೂಳೆಯ ಹೊಳೆವ ಸಾಲಿನ ಸುಂಟಗೆಯ ತೊಂ
ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ
ತಿಳಿದ ರಕುತದ ಕೊಳನ ಘನ ಕೊಳುಗುಳದ ತೋಪಿನ ನಡುವೆ ಮಾರುತಿ
ಲಲನೆ ಸಹಿತಾಡಿದನು ಶೋಣಿತವಾರಿಯೋಕುಳಿಯ:
(ಕರ್ಣಪರ್ವ : ೧೯-೮೬)

ಆದರೆ, ವಿಕೃತಿಯಿಂದ ಕೇವಲ ಜುಗುಪ್ಸೆಯಲ್ಲೇ ನಿಲ್ಲಬಹುದಾದ ಈ ಪ್ರಸಂಗವನ್ನು ಕವಿ ಪಂಪ, ಉಚಿತವಾದ ಒಂದು ವಿವರಣೆಯ ಮೂಲಕ ಸೌಂದರ‍್ಯದ ನಿಲುವಿಗೆ ಏರಿಸಿರುವುದು ಗಮನಾರ್ಹವಾಗಿದೆ. ದುಶ್ಯಾಸನನ ರಕ್ತಪಾನ ಮಾಡಿದ ಸಂದರ್ಭವನ್ನು ಕವಿ ಚಿತ್ರಿಸಿದನಂತರ ಕೊನೆಯಲ್ಲಿ ಈ ಒಂದು ಮಾತನ್ನು ಜನರು ಆಡಿಕೊಂಡರೆಂದು ಹೇಳುತ್ತಾನೆ-

ಆದ ಮುಳಿಸಿಂದಮೆಲ್ವಂ
ತೇದು ಕುಡಿಯಲ್ಕೆ ತಕ್ಕ ಪಗೆವನ ರುಧಿರಾ-
ಚ್ಛೋದಮೆನೆ ಕುಡಿದು ಮಾಣ್ದ ವೃ-
ಕೋದರನೇನಾವ ತೆಱದೊಳಂ ದೋಷಿಗನೇ
(ಪಂಪ ಭಾರತ : ೧೨-೧೫೯)

ದುಶ್ಯಾಸನ ಭೀಮನ ವಿಚಾರದಲ್ಲಿ ಮಾಡಿರುವ ಒಂದೊಂದು ಅಪಚಾರವನ್ನೂ ಗಮನದಲ್ಲಿರಿಸಿಕೊಂಡರೆ, ಭೀಮ ತನಗೆ ಆಗಿರುವ ಮುಳಿಸಿನಿಂದ ಈ ಶತ್ರುವಿನ ಎಲುಬನ್ನೇ ತೇದು ಕುಡಿಯಬೇಕಾಗಿತ್ತು; ಆದರೆ ಹಾಗೆ ಮಾಡದೆ ದುಶ್ಯಾಸನನ ರಕ್ತದ ತಿಳಿನೀರನ್ನು ಮಾತ್ರ ಕುಡಿದುಬಿಟ್ಟಿದ್ದಾನೆ. ಇಷ್ಟರಮಟ್ಟಿಗೆ ಮಿತಿಯನ್ನರಿತು ನಡೆದುಕೊಂಡ ವೃಕೋದರ ಯಾವ ರೀತಿಯಲ್ಲೂ, ದೋಷಿಗನೆನ್ನಬಹುದೇ – ಎಂದು ಉಭಯ ಬಲದವರೂ ಕೊಂಡಾಡಿದರಂತೆ! ಈ ಒಂದು ಚಿಂತನೆಯ ಪರಿಭಾವನೆಯಿಂದ, ಭೀಮನ ಕ್ರೋಧದ ಔಚಿತ್ಯವನ್ನು ನಾವು ಮೆಚ್ಚುತ್ತೇವೆ; ವಿಕೃತಿಯ ಬದಲು ಸೌಂದರ‍್ಯವನ್ನೇ ಕಾಣುತ್ತೇವೆ.

ಹೊಸಗನ್ನಡ ಸಾಹಿತ್ಯದಲ್ಲೂ, ಹಳಗನ್ನಡದಂತೆಯೇ, ಕಾವ್ಯದಲ್ಲಿ ಈ ವಿಕೃತಿಯ ಚಿತ್ರಣ ಅತಿವಿರಳ. ನವ್ಯಕವಿಗಳು ವಿಶೇಷವಾಗಿ ಬಾಳಿನ ವಿಕೃತಿಯನ್ನು ಕಾವ್ಯದಲ್ಲಿ ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ. ನಿದರ್ಶನಕ್ಕಾಗಿ ಹಲವು ಪಂಕ್ತಿಗಳನ್ನು ನೋಡಬಹುದು.

ಬಾನಿಗಂಟಿದೆ ತೊನ್ನು ಮೋಡ; ಚಿಕ್ಕೆಯ ಬೊಕ್ಕೆ
ರಸಿಗೆ ಬೆಳಕನು ಕಿವುಚಿ ಕಮರುತ್ತಿದೆ.
ನೆಲ ಚಿತೆಯ ಹಸಿ ಸೌದೆ ಸೌಧದಲಿ ಹತ ನರತೆ
ಬೆಂಕಿ ಸೊಂಕಿಗೆ ಕಾದು ಕೊಳೆಯುತ್ತಿದೆ.
………………………………….
ಸರಕು ಹೊಸಹೊಸತು ಮಾರುತ್ತಲಿದೆ; ಕೂಸುಗಳ
ಕಂಕಾಲ, ಕಣ್ಣು ಗುಡ್ಡೆಗಳ ಗಾಜು;
ಕರುಳ ಮಾಲೆಯು, ತೊಗಲ ಚೀಲ, ಅಟ್ಟೆಯ ಬುಟ್ಟಿ,
ಹೃತ್ಪಿಂಡ ಚೆಂಡು, ಬೆನ್ನೆಲುಬು ದಾಂಡು.
ತಟ್ಟುತಿದೆ ಮಸಣದಪಹಾಸ ಕೇರಿಗೆ, ಮನೆಗೆ;
ವಿಜನ ಪಥಪಥ ವಿಕೃತ ಕೇಕೆ ಕುಣಿತ.,
ಕಿರಿದೆಲ್ಲಹಲ್ಲ ತಲೆಬುರುಡೆ ಹಾಕಲು ಲಾಗ
ಅಟ್ಟೆ ಅಡಿಯಿಟ್ಟು ನಡೆಸಿದೆ ಕವಾತ
(ನಡೆದುಬಂದ ದಾರಿ : ಗೋಪಾಲ ಕೃಷ್ಣ ಅಡಿಗ, ಪು. ೧೦೨-೧೦೩)

ನಮ್ಮ ನಾಡು ಸ್ವತಂತ್ರವಾದೊಡನೆಯೇ ಅಡಿಗರು ಕಂಡ ಭಾರತದ ವಿಕೃತ ಚಿತ್ರ ಇದು, ‘ಇಂದು ನಮ್ಮೀ ನಾಡು’ ಎಂಬ ಕವಿತೆಯಲ್ಲಿ. ಅವರ ‘ಚಂಡೆ ಮದ್ದಲೆ’ ಎಂಬ ಕವನ ಸಂಗ್ರಹದಲ್ಲಿ ಆಧುನಿಕ ಜೀವನದ ವಿಕೃತಿಯ ಚಿತ್ರಗಳು ಹೇರಳವಾಗಿ ದೊರೆಯುತ್ತವೆ. ಅವುಗಳಲ್ಲಿ ಹಲವನ್ನು ಗಮನಿಸಿ:

‘ಮಿದುಳು – ಬಚ್ಚಲ ಹಂಡೆಯಲ್ಲಿ ಬೇಯುವ ಆಮೆ-
ಎದ್ದೆದ್ದು ಬಿದ್ದು ಒದ್ದಾಡುತ್ತಿತ್ತು’                                         (ಪು ೩)
‘ಬೀದಿ ಲಕ್ವಾ ಹೊಡೆದು ಮಿಡುಕುತ್ತಿತ್ತು.’                          (ಪು ೧೦)
“ಮಬ್ಬು –
ಕಾಮಾಲೆ ಕತ್ತಲು……”                                                  (ಪು೧೭)
‘ಮೈಯೆಲ್ಲ ಜೇಬು; ಜೇಬಲ್ಲೆ ಮಡಗಿತ್ತು ಮಿದುಳು;
ಎದೆ ಸುರಂಗದಿ ಕಂಡೆ ರಿಂಗ್‌ವರ್ಮು, ಕೊಕ್ಕೆಹುಳ;
ಹೊಟ್ಟೆಯಲಿ ಹೆಪ್ಪುನೆತ್ತರ ತಿಜೋರಿ,                                          (ಪು. ೨೬)
‘ಡೊಳ್ಳು ಹೊಟ್ಟೆಯ ಥೈಲಿ ಕಿತ್ತು ಕೊಬ್ಬುವ ಅಸ್ತಿಪಂಜರವ ಅಗೋ
ನೋಡು ಹೇಗೆ ಹೇಗೆ ಬೆಳೆಯುತ್ತಲಿದೆ ದುಂಡು ದುಂಡು;
ಮೂಳೆಯೆಲ್ಲಾ ಹೂತು ಮಾಂಸ ಪರ್ವತದಲ್ಲಿ ಗುಹೆಗಣ್ಣಿನಲ್ಲಿ
ಲೋಭತೋಳ ತೆವಲು’                                                 (ಪು.೩೧)
‘…………ಕೆಂಡದೊಳಗಡೆ ಕಂತ
ಹೂತ ಬದನೆಯ ಕಾಯಿಯಂತೆ ಮೈ; ಮೈತುಂಬ
ಜಿನುಗುತಿದೆ ತಿಗಣೆ ಬೆವರಿನ ಕಟಕಿ; ಹಣೆ ಪಾಚಿಗಲ್ಲಲ್ಲಿ
ಜಾರಿ ಚಾಚುತ್ತಲಿದೆ ಜೋಮುಗೈ; ಜೇವೊಡೆದ ಬಿಲ್ಲನಾರಿಯ ಹಾಗೆ
ನರ ವಿಕಂಪಿಸೆ ಸ್ಲೆ ಡು ಸ್ಲೆ ಡು ಜಾರುತ್ತಲಿದೆ ಅಂತಃಪಟದ ಮೇಲೆ.’          (ಪು.೩೧)

ಈ ಹಲವು ಪ್ರಕೃತಿ ಚಿತ್ರಗಳಲ್ಲಿ, ವ್ಯಕ್ತಿ ಚಿತ್ರದಲ್ಲಿ ‘ವಿಕೃತಿ’ಯನ್ನು ಕಾಣಬಹುದು.

ವಿಕೃತಿಯನ್ನು ಸಹನೀಯವನ್ನಾಗಿ, ಸುಂದರವನ್ನಾಗಿ, ಎಂದರೆ ರಸಾನುಭವಕಾರಿಯನ್ನಾಗಿ ಚಿತ್ರಿಸುವುದು ಕಲೆಗಾರನ ಸಾಮರ್ಥ್ಯವನ್ನು ಅವಲಂಬಿಸಿದೆ. ಆದರೆ ಈ ಚಿತ್ರಣದಲ್ಲಿ ವಿಕೃತಿ ಎಲ್ಲಿ ಕೇವಲ ಜುಗುಪ್ಸೆಯೆ ಆಗಿ ಬರಿಯ ಲೋಕ ಭಾವಗಳ ತುಮುಲದಲ್ಲಿ ನಿಲ್ಲಿಸುತ್ತದೆ, ಎಲ್ಲಿ ಇದು ನಿಜವಾಗಿಯೂ ರಸತ್ವವನ್ನು ಪಡೆಯಬಲ್ಲುದು – ಎನ್ನುವುದನ್ನು ಲೇಖಕರು ಗಮನದಲ್ಲಿರಿಸಿಕೊಂಡರೆ ಒಳ್ಳೆಯದು.

* * *


[1] ಸುಂದರಾ ಸುಂದರಂ ಲೋಕೇ ನ ಕಿಂಚಿದಪಿ ವಿದ್ಯತೇ | ನಿಕೃಷ್ಣಷ್ಟಮಪಿತತ್ ಶ್ರೇಷ್ಠಂ ಮನಸಃ ಪ್ರತಿ ಭಾತಿಯತ್-ಆರ‍್ಯೋಕ್ತಿ.

[2] Carritt: Philosophy of Beauty,  p 6

[3] William Kinght : The Philosophy of the Beautiful.  p. 30

[4] Pepita Haezrah : The contemplative Activity   p. 17-18

[5] Basanquet: History of Aesthetics : p.40.

[6] ಅಂತೆಯೇ ವಿಕೃತವಲ್ಲದ್ದನ್ನು ವಿಕೃತವಲ್ಲ ಎನ್ನಬಹುದೇ ಹೊರತು ಸುಂದರವಾಗಿದೆ ಎನ್ನುವುದಿಲ್ಲ.

[7] S. Alexander: Beauty and other forms of value  :  p. 163.

[8] ಛಾಂದೋಗ್ಯ ಉಪನಿಷತ್: ೨,೪; ಅನು. ರಂಗನಾಥ ದಿವಾಕರ.

[9] P.N. Srinivasachari : The Philosophy of Visistadvaita, p. 201

[10] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ (ದಶರೂಪಕ ೪-೮೫) (ಅನು) ಪು. ೨೧೧

[11] Basanquet : History of Aesthetic: p. 107

[12] ಅಲ್ಲೇ : ಪು. ೪೪೮

[13] ಅಲ್ಲೇ : ಪು. ೩೯೬-೩೯೭.

[14] S. Alexander. Beauty and other forms of Value. p. 263.

[15] Carritt. The Theory of Beauty : p. 213-15-16.

[16] Catharine Gilbert. Studies in Recent Aesthetics : p. 164-65

[17] ಎಂದರೆ, ಆ ವರ್ಣನೆಯ ಉದ್ದೇಶವನ್ನು ನಾವು ಗಮನಿಸಬೇಕು. ಜನ್ನನ ಯಶೋಧರ ಚರಿತ್ರೆಯಲ್ಲಿ ಬರುವ ಅಮೃತಮತಿ ಅಷ್ಟವಂಕರ ಕಾಮವಿಕಾರ ನಿಜವಾಗಿಯೂ ಅಶ್ಲೀಲವಾಗಿದ್ದರೂ ಅದರ ಉದ್ದೇಶ ವೈರಾಗ್ಯ ಪ್ರಚೋದಕವಾದುದೇ. ಆದ್ದರಿಂದ ವರ್ಣನೆ ಬರಿಯ ಅಶ್ಲೀಲವಾದ ಮಾತ್ರಕ್ಕೆ ಅದು ರಸಾನುಭವಕಾರಿಯಾಗದೆನ್ನಲಾಗುವುದಿಲ್ಲ. ಅದರ ಉದ್ದೇಶದ ಮೇಲೆ ಈ ಪ್ರಶ್ನೆ ನಿಂತಿದೆ.