ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾ ರಮಣ ನಾ ನಂಬಿದೆ
ತುಂಬಿದ ಹರಿಗೋಲು ಅಂಬಿಗಾ
ಅದಕ್ಕೆ ಒಂಬತ್ತು ಚಕ್ರವು ಅಂಬಿಗಾ
ಸಂಭ್ರಮದಿಂದ ನೋಡು ಅಂಬಿಗಾ
ಅದರಿಂಬು ನೋಡಿ ನಡಸು ಅಂಬಿಗಾ || ಅಂಬಿಗಾ ||

ಹೊಳೆಯ ಬರವ ನೋಡಂಬಿಗಾ
ಅದರ ಸೆಳೆವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗಾ
ಎನ್ನ ಸೆಳೆದುಕೊಂಡು ಹೋಗಯ್ಯ ಅಂಬಿಗಾ || ಅಂಬಿಗಾ ||

ಆರು ಕೆರೆಯ ನೋಡ ಅಂಬಿಗಾ |
ಅದು ಮೀರಿಬರುತಲಿದೆ ಅಂಬಿಗಾ |
ಯಾರಿಂದಲಾಗದು ಅಂಬಿಗಾ |
ಅದ ನಿವಾರಿಸಿ ನಡೆ ಅಂಬಿಗಾ || ಅಂಬಿಗಾ ||

ಸತ್ಯವೆಂಬುದೆ ಹುಟ್ಟು ಅಂಬಿಗಾ |
ಸದ್ಭಕ್ತಿಯೆಂಬುದು ಪಥ ಅಂಬಿಗಾ |
ನಿತ್ಯಾ ಮೂರುತಿ ನಮ್ಮ ಪುರಂದರ ವಿಠಲನಾ |
ಮುಕ್ತಿ ಮಂಟಪಕೊಯ್ಯೊ ಅಂಬಿಗಾ || ಅಂಬಿಗಾ ||