-೧-

‘ಸತ್ಯ ಒಂದೇ; ತಿಳಿದವರು ಅದನ್ನು ಬಗೆಬಗೆಯಾಗಿ ಬಣ್ಣಿಸುತ್ತಾರೆ’- ಹೀಗೆಂದು ಘೋಷಿಸಿದೆ ಪ್ರಾಚೀನ ಋಷಿವಾಣಿ. ಯಾವುದು ಈ ಸತ್ಯ?

‘ಸತ್’ ಎಂದರೆ ಯಾವುದು ಇರುವುದೋ ಅದು; ಯಾವುದು ಎಲ್ಲವೂ ಆಗಿದೆಯೋ ಅದು. ಸ್ಥೂಲವಾಗಿ ಹೇಳುವುದಾದರೆ ಯಾವುದು ನಮ್ಮ ದೃಷ್ಟಿಗೆ ಹಾಗೂ ಮುಷ್ಟಿಗೆ ಸಿಕ್ಕುತ್ತದೆಯೋ ಅದೇ ಸತ್. ಏಕೆಂದರೆ ಅನ್ಯ ಪ್ರಮಾಣವನ್ನಪೇಕ್ಷಿಸದ ಸಾಮಾನ್ಯ ಬುದ್ಧಿಗೆ ಇಂದ್ರಿಯಾನುಭವವೇ ಪ್ರಥಮ ಪ್ರಮಾಣ. ಆದುದರಿಂದ ಸತ್ ಎಂದರೆ ಯಾವುದು ಇಂದ್ರಿಯ ಗೋಚರವಾಗುತ್ತಿದೆಯೋ, ಆ ಜಗತ್ತು ಮತ್ತು ಅದರ ವ್ಯಾಪಾರಗಳು. ಇದು ಮೊದಲ ಹೆಜ್ಜೆ. ಆದರೆ ನಾವು ಯಾವುದನ್ನು ಕಾಣುತ್ತಿದ್ದೇವೋ, ಯಾವುದನ್ನು ಸ್ಪರ್ಶಿಸುತ್ತಿದ್ದೇವೋ, ಆ ವಸ್ತುಗಳು  ಸತ್ಯವಲ್ಲ ಎಂಬುದು ಎಲ್ಲರಿಗೂ ದಿನದಿನವೂ ಅನುಭವಕ್ಕೆ ಬರುತ್ತದೆ. ಏಕೆಂದರೆ ಅವು ಇಂದು ಇರುವಂತೆ ಕಂಡರೂ, ಕ್ರಮೇಣ ನಶಿಸಿ ಇಲ್ಲವಾಗುವುದನ್ನು ನಾವು ಕಣ್ಣಾರೆ ಕಾಣುತ್ತೇವೆ. ಆದುದರಿಂದ ಇಂದು ಕಂಡು ಕ್ಷಣಮಾತ್ರದಲ್ಲಿ ಕಣ್ಮರೆಯಾಗುವ, ಇಂದು ಇದ್ದು ನಾಳೆ ನಶಿಸಿ ಹೋಗುವ ವಸ್ತುಗಳನ್ನು ‘ಸತ್ಯ’ವೆಂದು ಕರೆಯಲು ಬಾರದು. ಹೀಗಾಗಿ ಇವುಗಳನ್ನು ಮಿಥ್ಯೆ ಎನ್ನುತ್ತೇವೆ. ಮಿಥ್ಯೆ ಎಂದರೆ ಕೇವಲ ತೋರಿಕೆ, ಕ್ಷಣಿಕ ಎಂದು ಅರ್ಥ. ಆದರೆ, ಈ ಮಿಥ್ಯೆಯನ್ನು ಕಣ್ಣ ಮುಂದೆ ತಂದು ಬೆರಗುಗೊಳಿಸುವ ಒಂದು ಶಾಶ್ವತದ ಹಿನ್ನೆಲೆ ಇರಬೇಕಲ್ಲ? ಈ ಎಲ್ಲ ಪರಿವರ್ತನೆಗಳ ಮೂಲದಲ್ಲಿ ತಾನು ಇದ್ದು, ಮೇಲಿನ ಎಲ್ಲ ವ್ಯಾಪಾರಗಳ, ನಶ್ವರವಾದರೂ ಮನೋಹರವಾದ ಈ ಲೀಲೆಯನ್ನು ಸೃಜಿಸಿ, ಒಳಗೆ ಇರುವ ಮಹಾಶಕ್ತಿಯನ್ನೇ ನಮ್ಮವರು ಸತ್ಯ ಎಂದು ಕರೆದರು. ‘ಈ ಸತ್ಯದ ಮುಖ ಬಂಗಾರದ ಹೊದಿಕೆಯಿಂದ ಆವೃತವಾಗಿದೆ; ಸತ್ಯ ಧರ್ಮ ದರ್ಶನಾಕಾಂಕ್ಷಿಯಾದ ನನಗಾಗಿ ಆ ಹೊದಿಕೆಯನ್ನು ತೆರೆ’- ಎಂದು ಋಷಿಗಳು ಪ್ರಾರ್ಥಿಸಿದರು. ಆ ಸತ್ಯವನ್ನೇ ‘ಶಾಶ್ವತಂ, ಶಿವಂ, ಅಚ್ಯುತಂ’ ಎಂದು ಕರೆದರು. ಈ ಪರಮ ಸತ್ಯವನ್ನೇ ನಾನಾ ಬಗೆಯ ಸಾಧಕರು ನಾನಾ ಮಾರ್ಗಗಳಲ್ಲಿ ಸಾಧನೆ ಮಾಡಿ ಸಾಕ್ಷಾತ್ಕರಿಸಿ ಕೊಂಡರು. ಅವರವರ ಭಾವಕ್ಕೆ, ಅವರವರ ದೃಷ್ಟಿಗೆ ಅನುಸಾರವಾಗಿ ಆ ಸತ್ಯ ಅವರಿಗೆ ಕಾಣಿಸಿಕೊಂಡಿತು: ದಾನಮಾಡುವುದೇ ಕರ್ಣನಿಗೆ ಆ ಸತ್ಯದೆಡೆಗೆ ಹಾದಿಯಾಯಿತು; ಪಾತಿವ್ರತ್ಯವೇ ಸೀತೆಯಂಥ ಸತಿಯರಿಗೆ ಸತ್ಯದ ಸಾಧನೆಯಾಯಿತು; ನುಡಿದ ಮಾತನ್ನು ಕಡೆತನಕ ನಡೆಸುವುದೇ ಹರಿಶ್ಚಂದ್ರನಿಗೆ ಸತ್ಯವಾಯಿತು; ಅಹಿಂಸೆಯೆ ಗಾಂಧೀಜಿಗೆ ಸತ್ಯವಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ.

-೨-

‘ಸತ್ಯ’ ಎಂಬ ಮಾತು ಬಂದೊಡನೆಯೇ ಅದಕ್ಕೆ ಹರಿಶ್ಚಂದ್ರನ ಹೆಸರು ಅಂಟಿಕೊಂಡು ಬರುತ್ತದೆ- ಕರ್ಣನ ಹೆಸರಿನೊಂದಿಗೆ ‘ದಾನ’ ಎಂಬುದು ಬಂದಂತೆ. ಕರ್ಣನನ್ನು ದಾನಶೂರನೆಂದಂತೆ ಹರಿಶ್ಚಂದ್ರನಿಗೆ ಸತ್ಯಹರಿಶ್ಚಂದ್ರನೆಂಬ ಹೆಸರು ಸಾರ್ಥಕವಾಗಿದೆ. ಹರಿಶ್ಚಂದ್ರನ ವ್ಯಕ್ತಿತ್ವ ಆ ಸತ್ಯದಲ್ಲಿ ಕರಗಿ ಒಂದಾಗಿದೆ. ಸತ್ಯದಿಂದ ಹರಿಶ್ಚಂದ್ರ ಹೇಗೆ ಅಮರನಾದನೊ, ಅಂತೆಯೇ ಹರಿಶ್ಚಂದ್ರನಿಂದ ಸತ್ಯವೂ ಒಂದು ಹೊಸ ಹೊಗರನ್ನು ಪಡೆಯಿತು. ಹರಿಶ್ಚಂದ್ರ ಬರುವ ಮುನ್ನ ಸತ್ಯಕ್ಕೆ- ಎಂದರೆ ಆಡಿದ ಮಾತನ್ನು ಅತ್ಯಂತ ನಿಷ್ಠೆಯಿಂದ ಪಾಲಿಸತಕ್ಕದ್ದು- ಯಾವ ಸ್ಥಾನವಿತ್ತೋ ಅದು, ಹರಿಶ್ಚಂದ್ರನು ಬಂದಮೇಲೆ ಅವನಿಂದ ಒಂದು ವಿಶಿಷ್ಟವಾದ ಸ್ಥಾನವನ್ನು, ಬೆಲೆಯನ್ನು ಪಡೆಯಿತೆನ್ನಬೇಕು. ಅನಂತ ಸತ್ಯದ ಟಂಕಸಾಲೆಯಿಂದ ಒಂದಿಷ್ಟು ಚಿನ್ನವನ್ನು ತೆಗೆದುಕೊಂಡು, ತಮ್ಮ ಬದುಕಿನ ಮೂಸೆಯಲ್ಲಿ ಕರಗಿಸಿ, ತಮ್ಮ ಚಾರಿತ್ರ್ಯದ ಮುದ್ರೆಯನ್ನೊತ್ತಿ ಅವುಗಳನ್ನು ಮಹಾವ್ಯಕ್ತಿಗಳು ಲೋಕದಲ್ಲಿ ಚಲಾವಣೆಗೆ ತರುತ್ತಾರೆ. ಹೀಗೆ ಮಹಾವ್ಯಕ್ತಿಗಳ ಸಾಧನೆಯಿಂದ ಈ ಜಗತ್ತು ಶ್ರೀಮಂತವಾಗುತ್ತಲೇ ಇದೆ.

‘ಮನುಜರ ಮೇಲೆ, ಸಾವವರ ಮೇಲೆ, ಕನಿಷ್ಠರ ಮೇಲೆ’ ಕಾವ್ಯವನ್ನು ಬರೆಯ ಕೂಡದೆನ್ನುವ ಮನೋಧರ್ಮವುಳ್ಳ ಯುಗದಲ್ಲಿ, ಕವಿ ರಾಘವಾಂಕ ಧೈರ್ಯವಾಗಿ ತನ್ನ ಕಾವ್ಯಕ್ಕೆ ಹರಿಶ್ಚಂದ್ರನ ಕಥೆಯನ್ನು ಆರಿಸಿಕೊಂಡು ಕೃತಾರ್ಥನಾಗಿದ್ದಾನೆ. ಕವಿಗೆ ಗೊತ್ತು, ತನ್ನ ಕಥಾನಾಯಕ ಸಾಮಾನ್ಯ ಮನುಜನೂ ಅಲ್ಲ, ಕನಿಷ್ಠನೂ ಅಲ್ಲ, ಸಾವವನೂ ಅಲ್ಲ ಎಂಬುದು! ಆತ ಸತ್ಯಸಾಧಕ ಹರಿಶ್ಚಂದ್ರನ ಜೀವನವನ್ನು ಕುರಿತು ಹಾಡುವ ಮುನ್ನ ಮಾಡಿರುವ ಪಂಪಾಪತಿಯ ಸ್ತೋತ್ರವೇ  ಆ ಪರಮ ಸತ್ಯದ ಪ್ರತಿಮೆಯಂತಿದೆ:

ಶ್ರೀಪತಿಗೆ ಸೊಬಗನ್, ಉಡುಪತಿಗೆ ಶಾಂತಿಯನು,
ವಾಣೀಪತಿಗೆ ಚಾತುರ್ಯಮಂ, ದಿವಸ್ಪತಿಗೆ ಪ್ರತಾಪಮಂ,
ಸುರಪತಿಗೆ ಭೋಗಮಂ, ರತಿಪತಿಗೆ ಮೂಲೋಕವಾವರಿಸುವ
ರೂಪಂ, ಸರಿತ್ಪತಿಗೆ ಗಂಭೀರತೆಯನು, ಸ್ವಾಹಾಪತಿಗೆ
ತೇಜಮಂ ಕೊಟ್ಟ ಗುರುಮೂರ್ತಿ ಪಂಪಾಪತಿ ವಿರೂಪಾಕ್ಷನ್
ಎಮಗೆ ಇಷ್ಟ ಸಿದ್ಧಿಯಂ ಮಾಳ್ಕೆ ಸಂತೋಷದಿಂದ
(೧-೧)

ಇಲ್ಲಿ ವರ್ಣಿತವಾಗಿರುವುದು ‘ಗುರುಮೂರ್ತಿ’ಯಾದ, ಸಮಸ್ತ ಶಕ್ತಿ ಸೌಂದರ‍್ಯಗಳಿಗೂ ಮೂಲವಾದ ಪರಮಸತ್ಯದ ಸ್ವರೂಪ. ಹರಿಶ್ಚಂದ್ರನು ಸಾಕ್ಷಾತ್ಕರಿಸಿಕೊಂಡುದು ಈ ಸತ್ಯವನ್ನು. ಅವನ ಅನುಭವದಲ್ಲಿ-

‘ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು.’

-೩-

ಯಾವ ನಿಜವಾದ ಸಾಧಕರ ಜೀವನವನ್ನವಲೋಕಿಸಿದರೂ ಕಾಣುವುದಿಷ್ಟು: ಅವರು ಹುಟ್ಟುತ್ತಲೇ ಪರಿಪೂರ್ಣರಲ್ಲ; ಬೆಳೆಯುತ್ತ ಪರಿಪೂರ್ಣತೆಗಾಗಿ ಶ್ರಮಿಸುತ್ತಾ ಮುನ್ನಡೆಯುವ ವೀರರು. ಅವರ ಬದುಕು ಹೂವಿನ ಹಾಸಿಗೆಯಲ್ಲ; ಶರಶಯನ. ಅವರು ಭೋಗ ವೈಭವಗಳ ನಡುವೆ ಬಾಳಿದರೂ, ಅವರ ದೃಷ್ಟಿ ಅದರಾಚೆಗಿರುವ ಭೂಮದೆಡೆಗೆ. ಅವರ ಹಾದಿಯ ತುಂಬ ಧರ್ಮಸಂಕಟಗಳ ಕೂರಲಗಿನ ಕೊಳ್ಳಗಳು; ಅಗ್ನಿಪರೀಕ್ಷೆಯ ಕುಂಡಗಳು; ಕಂಬನಿಯ ಕಡಲುಗಳು. ಆದರೂ ಈ ಎಲ್ಲ ಸಂಕಟಗಳ ಮಾಲೆಯ ಮೇಲೆ ನಗುಮುಖದಿಂದ, ದಿವ್ಯ ಶ್ರದ್ಧೆಯಿಂದ, ಉಳಿದವರೆಡೆಗೆ ಪರಮ ಅನುಕಂಪದಿಂದ, ಅವರ ಯಾತ್ರೆ ಸಾಗುತ್ತದೆ. ಈ ಎಲ್ಲ ನಿಶಿತಧಾರೆಯ ಮೇಲೆ ನಡೆದು ಮಾನವ ಕಲ್ಯಾಣಕ್ಕೆ ತಮ್ಮ ಸಮಸ್ತವನ್ನೂ ಧಾರೆ ಎರೆದು ಶಿವದ ಬೆಳಕಿನಲ್ಲಿ ನಿಂತ ಧೀರರಿವರು!

ಹರಿಶ್ಚಂದ್ರನ ಜೀವನ ಮೇಲಿನ ಹೇಳಿಕೆಗೆ ಒಂದು ವಿವರಣೆಯಂತಿದೆ. ಅವನ ಕಥೆ ಎಲ್ಲರಿಗೂ ಗೊತ್ತಿದೆ. ಅಲ್ಲಿ ಕಥೆ ನಿಮಿತ್ತ ಮಾತ್ರ; ವ್ಯಥೆ ಮುಖ್ಯ; ಆ ವ್ಯಥೆಯನ್ನು ವ್ಯಕ್ತಿ ತಾಳಿಕೊಂಡು ನಿಂತ ರೀತಿ ಮುಖ್ಯ. ಅಲ್ಲಿಯೇ ಅವನ ಹಿರಿಮೆ.

ಕವಿ ರಾಘವಾಂಕ ಸಹೃದಯರಿಗೆ ಕಾವ್ಯಾರಂಭದಲ್ಲಿ ಹರಿಶ್ಚಂದ್ರನನ್ನು ಹೀಗೆ ಪರಿಚಯ ಮಾಡಿಕೊಡುತ್ತಾನೆ:

ಸುರಪತಿಯ ಭೋಗ, ವಹ್ನಿಯ ತೇಜ,
ಅಂತಕನ ಭರದದಟು, ನೈರುತಿಯ ಕಾಯ್ಪು,
ರತ್ನಾಕರೇಶ್ವರನ ಗಂಭೀರ, ಅನಿಲನ ಬಲಂ,
ವಿತ್ತಪನ ಸಿರಿ, ರುದ್ರನುಗ್ರತ್ವವು,
ತರಣಿಯ ಪ್ರಭೆ, ಧರೆಯ ಧೈರ್ಯ,
ಚಂದ್ರನ ಶಾಂತಿವೆರಸಿ ರೂಪಾದುದು.   (೧-೪೦)

ಸೃಷ್ಟಿಯ ಸಮಸ್ತ ‘ಸತ್’ ಶಕ್ತಿಗಳ ಎರಕಹೊಯ್ದು ಮಾಡಿದಂತಿದೆ ಈ ಪಾತ್ರ. ಹರಿಶ್ಚಂದ್ರನ ಈ ಯೋಗ್ಯತೆ ಮೂರು ಲೋಕಕ್ಕೂ ಗೊತ್ತು; ಅಂತೆಯೇ ಅವನ ಸತ್ಯದ ಮಹತ್ತೂ ಕೂಡ. ಆದುದರಿಂದಲೇ ದೇವಲೋಕದಲ್ಲಿ ಸತ್ಯವಂತರ ಮಾತು ಬಂದಾಗ ವಸಿಷ್ಠರು ಹರಿಶ್ಚಂದ್ರನ  ಪ್ರಶಂಸೆ ಮಾಡಿ-

ಹಲವು ಮಾತೇಕೆ? ಆ ಹರಿಶ್ಚಂದ್ರ ಭೂನಾಥ-
ನೊಳಗೆ ಅಸತ್ಯವನು ಕಾಣಿಸಬಲ್ಲರು ಧಾತ್ರಿ-
ಯೊಳು ಮುನ್ನ ಹುಟ್ಟಿದವರಿಲ್ಲ, ಇನ್ನು ಹುಟ್ಟುವರ
ನಾ ಕಾಣೆ; ನಾನಿದ ಬಲ್ಲೆನು………….  (೨-೨೦)

ಎಂದು ಧೈರ್ಯವಾಗಿ ಘೋಷಿಸುತ್ತಾರೆ. ಆದರೆ ವಸಿಷ್ಠರ ಪ್ರಶಂಸೆಯ ಮಾತು ಸ್ವರ್ಗದ ಇಂದ್ರಸಭೆಯಲ್ಲಿ ಋಷಿಗಳೀರ್ವರ ವೈಯಕ್ತಿಕ ರಾಗ ದ್ವೇಷಗಳ ವಾಗ್ವಾದದ ವಿಷಯವಾಗಿ,  ಕಡೆಗೆ ವಿಷಮವಾದ ಸಿಡಿಲಾಗಿ ಹರಿಶ್ಚಂದ್ರನ ತಲೆಯ ಮೇಲೆ ಇಳಿದೇ ಬಿಡುತ್ತದೆ!

ಹರಿಶ್ಚಂದ್ರನ ಸತ್ಯಪರೀಕ್ಷೆಗೆ ಮಹರ್ಷಿಗಳಾದ ವಸಿಷ್ಠರೂ, ವಿಶ್ವಾಮಿತ್ರರೂ ಸ್ಥಾವರ-ಜಂಗಮ ಕ್ರಿಯಾಶಕ್ತಿಗಳಾಗಿ ನಿಲ್ಲುತ್ತಾರೆ. ದೇವತೆಗಳೇ ಪ್ರೇಕ್ಷಕರಾಗುತ್ತಾರೆ. ಪಂಪಾಪತಿ  ವಿರೂಪಾಕ್ಷನ ಅಧ್ಯಕ್ಷತೆಯಲ್ಲಿ ಹರಿಶ್ಚಂದ್ರನ ನೋವಿನ ನಾಟಕ ಆರಂಭವಾಗುತ್ತದೆ.

-೪-

ರಾಘವಾಂಕ ಹರಿಶ್ಚಂದ್ರನನ್ನು ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಅವನನ್ನು ಸೃಷ್ಟಿಯ ಸಮಸ್ತ ‘ಸತ್’ ಶಕ್ತಿಗಳ ಸಾಕಾರಮೂರ್ತಿಯೆಂಬಂತೆ ಬಣ್ಣಿಸಿದ್ದರೂ, ಅವನಿನ್ನೂ ಸಾಧಕನೆಂಬುದನ್ನು ಕವಿ ಮರೆತಿಲ್ಲ. ಅವನಲ್ಲಿಯೂ ದೋಷಗಳಿವೆ. ತನಗೆ ಮಗನಾದರೆ ಅವನನ್ನು ಬಲಿಕೊಡುವೆನೆಂದು ಹರಸಿಕೊಂಡು, ಮಗು ಹುಟ್ಟಿದ ಮೇಲೆ ಪುತ್ರವ್ಯಾಮೋಹದಿಂದ ಬಲಿಗೊಡಲೊಪ್ಪದೆ ಅಡವಿಯಲ್ಲಿ ಬಚ್ಚಿಟ್ಟುದುಂಟು; ಮಾಯದ ಅಬಲೆಯರನ್ನು ತಾನೇ ಸ್ವತಃ ಚಮ್ಮಟಿಗೆವಿಡಿದು- ರಾಜಗಾಂಭೀರ್ಯವನ್ನೂ ಈಡಾಡಿ- ಚರ್ಮ ಸುಲಿಯುವತನಕ ಬಡಿದುದುಂಟು; ಸಮಸ್ತ ರಾಜ್ಯವನ್ನೂ ವಿಶ್ವಾಮಿತ್ರನಿಗೆ ಒಪ್ಪಿಸಿಕೊಟ್ಟು, ನಿರ್ಗತಿಕನಾಗಿ ತನ್ನನ್ನೇ ಮಾರಿಕೊಳ್ಳಲು ಹೊರಟಾಗ, ತೆತ್ತ ಸಾಲದ ಭರದಲ್ಲಿ ಅರಿಯದೆ ಅನಾಮಿಕನನ್ನು ಹೊಲೆಯನೆಂದು  ಕರೆದದ್ದುಂಟು. ವ್ಯಕ್ತಿ ಎಂದ ಮೇಲೆ ದೋಷಗಳಿದ್ದೇ ಇರುತ್ತವೆ. ಕವಿ ತನ್ನ ಕಾವ್ಯಾರಂಭದಲ್ಲೆ ಹೇಳಿದಂತೆ ‘ನಡೆವರೆಡಹದೆ ಕುಳಿತರೆಡಹುವರೆ’? ಎಂಬ ಮಾತು ಕವಿಕೃತಿಯನ್ನು ಮಾತ್ರ ಕುರಿತು ಹೇಳಿದ ಮಾತಲ್ಲ, ಹರಿಶ್ಚಂದ್ರನ ಪಾತ್ರವನ್ನೂ ಕುರಿತು ಹೇಳಿದ ಮಾತು ಎಂದು ತೋರುತ್ತದೆ; ಅಥವಾ ಹಾಗೆ ನಾವು ಅನ್ವಯಿಸಿಕೊಂಡು ನೋಡಬೇಕಾಗುತ್ತದೆ. ನಾವು ಗಮನಿಸಬೇಕಾದುದು ಒಬ್ಬ ವ್ಯಕ್ತಿ ಎಷ್ಟರಮಟ್ಟಿಗೆ ಪರಿಪೂರ್ಣನಾಗಿದ್ದಾನೆ ಎಂದಲ್ಲ; ಅವನಲ್ಲಿ ಅಪರಿಪೂರ್ಣತೆ ಉಳಿದವರಿಗಿಂತ ಎಷ್ಟು ಕಡಿಮೆ ಎಂಬುದನ್ನು!

ಮೊದಮೊದಲು ಸಾಮಾನ್ಯರಂತೆ ತೋರುತ್ತಿದ್ದವನು, ಮಾನವ ಸಹಜವಾದ ದೌರ್ಬಲ್ಯಗಳಿಂದ ಕೂಡಿದವನು, ತನ್ನ ಸಂಸ್ಕಾರ ವಿಶೇಷದಿಂದ ಯಾವುದೋ ಒಂದು ಅಮೃತ ಮುಹೂರ್ತದಲ್ಲಿ ಹೊಸಬೆಳಕಿಗೆ ಎಚ್ಚರಗೊಳ್ಳುತ್ತಾನೆ. ಒಮ್ಮೆ ಎಚ್ಚರದೊಳಗೊಂದು ಎಚ್ಚರ ಮೂಡಿದಾಗ, ಸತ್ಯದ ಮಿಂಚು ಅಂತರಂಗದಲ್ಲಿ ಹೊಳೆಯಿತೆಂದಾಗ, ಅದನ್ನು ಸಾಧಿಸುವ ಹಂಬಲ ಪ್ರಬಲವಾದಾಗ, ವ್ಯಕ್ತಿ ತನ್ನ ದಾರಿಯನ್ನು ಧ್ಯೇಯವನ್ನು ರೂಪಿಸಿಕೊಂಡಾಗ, ಶ್ರದ್ಧೆ ಗರಿಗೆದರಿದಾಗ, ಅದಕ್ಕಾಗಿ ವ್ಯಕ್ತಿ ತನ್ನೆಲ್ಲವನ್ನೂ ತೃಣೀಕರಿಸಿ ಮುನ್ನಡೆದಾಗ, ಅದಕ್ಕಾಗಿ ಕಡೆ ತನಕ ಹೋರಾಡಿ ಸಾಕ್ಷಾತ್ಕರಿಸಿ ಕೊಂಡಾಗ ನಮಗೆ ಆ ಪಾತ್ರದ ಹಿರಿಮೆ ಗೋಚರವಾಗುತ್ತದೆ. ಹರಿಶ್ಚಂದ್ರನ ವಿಚಾರದಲ್ಲೂ ಹೀಗೇ ಆಗಿದೆ.

ಹರಿಶ್ಚಂದ್ರನ ದೃಷ್ಟಿಯಲ್ಲಿ ಸತ್ಯ ಎಂದರೆ, ಆಡಿದ ಮಾತನ್ನು ತಪ್ಪದೆ ನಡೆಯಿಸುವುದು ಮತ್ತು ನಿರ್ಲಿಪ್ತನಾಗಿ ಸ್ವಾಮಿಕಾರ‍್ಯವನ್ನು ಪರಿಪಾಲಿಸುವುದು.

ಹರಿಶ್ಚಂದ್ರನ ಜೀವನವೆ ಸತ್ಯದ ಪ್ರಯೋಗಶಾಲೆ. ಅವನದು ವಿರಾಗಿಗಳ ಹಾಗೆ ಗೂಢ ಗುಹಾವಾಸದಲ್ಲಿ ಸಾಗಿದ ಸಾಧನೆಯಲ್ಲ; ಬಂದ ಬಿರುಗಾಳಿಯಲ್ಲಿ ಗರಿಗೆದರಿ ಹಾರಿದ ಹಕ್ಕಿಯ ಹೋರಾಟದಂಥದ್ದು. ಅವನು ಕಾಷಾಯ ವಸನಧಾರಿಯಾದ ಸನ್ಯಾಸಿಯಲ್ಲ, ಸಂಸಾರದ ಭಾರವನ್ನು ಹೊತ್ತ ವೀರ ಕ್ಷತ್ರಿಯ. ರಾಜನಾಗಿ ಧುರದಲ್ಲಿ ಅರಿನೃಪರನ್ನು ನಡುಗಿಸಿದ ಆ ಕ್ಷಾತ್ರವೀರತೆ, ಅವನ ಸಾಧನೆಯಲ್ಲಿ ಧರ್ಮವೀರವಾಗಿ ಪರಿಣಮಿಸುತ್ತದೆ. ಅವನು ಹೋರಾಡುವುದು ಬಹಿರಂಗ ಶತ್ರುಗಳೊಡನೆ ಅಲ್ಲ, ಅಂತರಂಗ ಶತ್ರುಗಳೊಡನೆ!

ಹರಿಶ್ಚಂದ್ರನ ಸತ್ಯಸಾಧನೆ ಬುದ್ಧಿಪೂರ್ವಕವಾಗಿ ಮೊದಲಾದುದಲ್ಲ; ಶ್ರದ್ಧಾ ಪೂರ್ವಕವಾಗಿ ಮೊದಲಾದುದು. ತುತ್ತತುದಿಯಲ್ಲಿ, ಸಮಸ್ತ ರಾಜ್ಯವನ್ನೂ ಕಳೆದುಕೊಂಡು, ಹೆಂಡತಿ ಮಕ್ಕಳನ್ನು ಮಾರಿ, ವೀರಬಾಹುಕನ ಆಳಾಗಿ ನಿಂತ ಹರಿಶ್ಚಂದ್ರನನ್ನು ಕುರಿತು ‘ನೀನು ಏಕೆ ಹೀಗೆ ಮಾಡಿದೆ?’ ಎಂದು ಕೇಳಿದ್ದರೆ, ಅವನಿಗೇ ಆ ಪ್ರಶ್ನೆ ಹಾಗೂ ತನ್ನ ಚಾರಿತ್ರ್ಯ ಆಶ್ಚರ್ಯವನ್ನೂ ಸಂತೋಷವನ್ನೂ ಉಂಟು ಮಾಡುತ್ತಿದ್ದುವೆಂದು ತೋರುತ್ತದೆ! ಶಿವೇಚ್ಛಾರೂಪಿಯಾದ ಯಾವುದೋ ಶಕ್ತಿಯೊಂದು ಅವನನ್ನು ಮುನ್ನಡೆಸಿತ್ತು. ಜಗತ್ತಿನ ಸತ್ಯಸಾಧಕರ ಹಾರೈಕೆಗಳೆಲ್ಲಾ ಅವನ ಅಂತರಂಗದಲ್ಲಿ ಒಂದಾಗಿ ಅವನಿಗೆ ಶಕ್ತಿಯಾಗಿರಬೇಕು. ಏಕೆಂದರೆ ಸತ್ಕಾರ್ಯದಲ್ಲಿ ತೊಡಗಿದವನಿಗೆ ಜಗತ್ತಿನ ಸತ್‌ಶಕ್ತಿಗಳೆಲ್ಲವೂ ನೆರವಾಗುತ್ತವೆ. ಹೊರನೋಟಕ್ಕೆ ಆ ಸಾಹಸದಲ್ಲಿ ವ್ಯಕ್ತಿಯೊಬ್ಬನೇ ಗೋಚರಿಸಿದರೂ, ಆ ವ್ಯಕ್ತಿಯಲ್ಲಿ ಅಡಗಿ ಅವನನ್ನು ಲೋಕ ಕಲ್ಯಾಣಕ್ಕೆ ಪ್ರೇರಿಸುವ, ಸ್ಫೂರ್ತಿಯಾಗುವ ಶಕ್ತಿಗಳೆಷ್ಟೋ! ಮಹಾ ವ್ಯಕ್ತಿಗಳ ತಪಸ್ಸು ಕೇವಲ ಒಬ್ಬ ವ್ಯಕ್ತಿಯದಲ್ಲ, ಅನೇಕ ಶಕ್ತಿಯದು.

ಹರಿಶ್ಚಂದ್ರನ ಸತ್ಯ ಸಾಧನೆಗೆ ಪ್ರಧಾನ ಶಕ್ತಿಯಾಗಿ ನಿಂತಿರುವುದು ಗುರುವಸಿಷ್ಠರ ಆಶೀರ್ವಾದ. ಅವರು ಹರಿಶ್ಚಂದ್ರನ ಸತ್ಯನಿಷ್ಠೆಯನ್ನು ಬಲ್ಲವರಾಗಿದ್ದುದರಿಂದಲೇ ಅಷ್ಟು ಖಚಿತವಾದ ವಾಣಿಯಲ್ಲಿ ಹರಿಶ್ಚಂದ್ರನ ಮಹಿಮೆಯನ್ನು ದೇವಸಭೆಯಲ್ಲಿ ಘೋಷಿಸಿದರು; ವಿಶ್ವಾಮಿತ್ರನೆದುರಿಗೆ ಬಲು ಘೋರವಾದ ಪಣವನ್ನು ತೊಟ್ಟರು. ಯಾವ ವಿಧವಾದ ಲೌಕಿಕ ರಾಗ ದ್ವೇಷಕ್ಕೂ ಆಸ್ಪದವಿಲ್ಲದಂತಹ ದಿವ್ಯಲೋಕದ ಸಭೆಯಲ್ಲಿ, ಯಾವ ವಿಧಿ, ಋಷಿಶ್ರೇಷ್ಠರಿಬ್ಬರ ಮನಸ್ಸಿನಲ್ಲಿ ರಾಗದ್ವೇಷದ ಕಿಡಿಗಳನ್ನುದ್ದೀಪಿಸಿ ಹರಿಶ್ಚಂದ್ರನ ಸತ್ಯ ಪರೀಕ್ಷೆಯ ನಾಟಕಕ್ಕೆ ನಾಂದಿಯನ್ನು ಹಾಡಿತೋ, ಅದು ಶಿವಮುಖವಾದುದೆಂಬುದು ವಸಿಷ್ಠರ ಯೋಗದೃಷ್ಟಿಗೆ ಸಂಪೂರ್ಣವಾಗಿ ವೇದ್ಯವಾದುದು. ಇಂಥದೊಂದು ಪರೀಕ್ಷೆಯ ಹಾದಿಯಲ್ಲಿ ಹರಿಶ್ಚಂದ್ರನ ಬಾಳಿನಲ್ಲಿ ಬಂದೊದಗುವ ಸಂಕಟಗಳ ಪರಂಪರೆಯನ್ನು ಅವರು ಬಲ್ಲರು. ಆದರೆ ಹಾಗಾಗುವುದೇ ಹರಿಶ್ಚಂದ್ರನ ಸತ್ಯವನ್ನು ಪ್ರಕಟಿಸುವ ವಿಧಿಯ ಅನಿವಾರ‍್ಯ ಮಾರ್ಗವಾದುದರಿಂದ, ವಸಿಷ್ಠರು ಅದನ್ನು ತಡೆಯುವ ಋತ ವಿರುದ್ಧವಾದ ಕಾರ್ಯಕ್ಕೆ ಹೋಗದೆ, ಹರಿಶ್ಚಂದ್ರನಿಗೆ ಆ ಬವಣೆಗಳಿಂದ  ಕೇಡಾಗದಂತೆ ಆಶೀರ್ವಾದ ಮಾಡುವ, ದೈವೀಕೃಪೆಯನ್ನು ಅರ್ಜಿಸುವ ಪ್ರಯತ್ನ ಮಾಡುತ್ತಾರೆ. ಆದುದರಿಂದಲೇ ಅವರು ಹರಿಶ್ಚಂದ್ರನ ಮೇಲೆ ಕೌಶಿಕನ ಕಾಟ ಅಡಿಯಿಟ್ಟುದನ್ನು ಗಮನಿಸಿ, ಅವನಿಗೆ ಆ ವಿಚಾರವನ್ನು ವಾಚ್ಯವಾಗಿ ಸೂಚಿಸದೆ, ಅವನನ್ನು ನೇರವಾಗಿ ಪಂಪಾ ವಿರೂಪಾಕ್ಷನ ಸನ್ನಿಧಿಗೆ ಕರೆದೊಯ್ಯುತ್ತಾರೆ. ಅಲ್ಲಿ ವಸಿಷ್ಠರು ಹರಿಶ್ಚಂದ್ರನನ್ನು ಕರೆದೊಯ್ದುದು ಹರಿಶ್ಚಂದ್ರನ ಸತ್ಯ ಸಾಧನೆಯ ಯಾತ್ರೆಗೆ ದೈವೀಕೃಪೆಯ ರಕ್ಷೆಯನ್ನು ಕಟ್ಟುವುದಕ್ಕೆ ಎಂಬುದು ತಿಳಿಯುತ್ತದೆ. ಈ ದೈವೀಕೃಪೆ ಹರಿಶ್ಚಂದ್ರನನ್ನು ಉದ್ದಕ್ಕೂ ಬೆಳಕಾಗಿ ಮುಸುಕಿದ ಮಬ್ಬಿನಲ್ಲಿ ಕೈಹಿಡಿದು ನಡೆಸುತ್ತದೆ.[1]

ಎರಡನೆಯ ಶಕ್ತಿ, ವಿಶ್ವಾಮಿತ್ರನ ಕಠೋರ ಕರುಣೆ! ವಿಶ್ವಾಮಿತ್ರನ ಪಾತ್ರ ಈ ಕಾವ್ಯದ ಮೊದಲರ್ಧದಲ್ಲಿ ಪ್ರತ್ಯಕ್ಷವಾಗಿ, ಉಳಿದರ್ಧದಲ್ಲಿ ಪರೋಕ್ಷವಾಗಿ ಪ್ರವಹಿಸುತ್ತದೆ. ಮೊದಲರ್ಧದಲ್ಲಿ ಆತ ವ್ಯಕ್ತಿಯಾಗಿ, ಉಳಿದರ್ಧದಲ್ಲಿ ಶಕ್ತಿಯಾಗಿ ಗೋಚರಿಸುತ್ತಾನೆ. ಉತ್ತರಾರ್ಧದಲ್ಲಿಯಂತೂ ಆತ ಪ್ರಕೃತಿಯ ಪ್ರಚಂಡಶಕ್ತಿಯ ಪ್ರತಿನಿಧಿ. ‘ಬಿಸಿಲಾಗಿ, ಬಿರುಗಾಳಿಯಾಗಿ, ಕಲುನೆಲನಾಗಿ, ವಿಷಮಾಗ್ನಿಯಾಗಿ, ನಾನಾ ಕ್ರೂರಮೃಗವಾಗಿ, ಮಸಗಿ ಘೋರಾರಣ್ಯವಾಗಿ, ಗರ್ಜಿಸಿ ಕವಿವ ಭೂತ ಭೇತಾಳರಾಗಿ, ಹಸಿವು ನೀರಡಿಕೆ ನಿದ್ರಾಲಸ್ಯವಾಗಿ, ಸಂದಿಸಿಹೋಗಿ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ’ (೯-೧೮) ಕಾಡುವ ಶಕ್ತಿ ಅವನು. ಸಾಮಾನ್ಯ ಕಿವಿಗೆ ಕಾವ್ಯದ ತುಂಬಾ ಕೇಳಿಸುವುದು ವಿಶ್ವಾಮಿತ್ರನ ಕಾಟದ ಬಿರುಗಾಳಿಯ ಭೋರ್ಗರೆಯುವ ರವ; ಆದರೆ ಎಲ್ಲರಿಗೂ ಆ ಬಿರುಗಾಳಿಯ ಹೃದಯದಲ್ಲಿ ಸುಪ್ತವಾಗಿರುವ ಶಿವದ ಬೆಳಕು ಸುಲಭವಾಗಿ ಕಾಣದು. ಯಾವ ಕವಿ ಮೊದಮೊದಲು ಉದ್ದೇಶಪೂರ್ವಕವಾಗಿಯೇ, ಸಾಮಾನ್ಯ ಸಹೃದಯರ ಪರವಾಗಿ ನಿಂತು ಟೀಕಿಸುತ್ತಿದ್ದಾನೆಯೋ ಎಂಬಂತೆ, ವಿಶ್ವಾಮಿತ್ರನನ್ನು ‘ಅನಿಮಿತ್ತ ಮುನಿವ ಮುನಿ’ ‘ಆಸುರದ ಕೋರಡಿಗ’ ‘ಮುನಿರಕ್ಕಸ’ ಎನ್ನುತ್ತಾನೆಯೋ, ಅದೇ ಕವಿ ಕಡೆಯಲ್ಲಿ ವಿಶ್ವಾಮಿತ್ರನನ್ನು ಕುರಿತು, ‘ಲೋಕದ ಕಣ್ಗೆ ಕಡುಮುಳಿದರಂತೆ ತೋರಿಸಿ, ಸತ್ಯಶುದ್ಧವಪ್ಪನ್ನೆಗಂ ಕಾಡಿ ನೋಡಿ, ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ ಮೃಡನನೆಳತಂದಿತ್ತು ಕೀರ್ತಿಯಂ ಮೂಜಗದ ಕಡೆಗೆ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ’ (೧೪-೩) ಎಂದು ಸ್ತುತಿಸುತ್ತಾನೆ. ಆತ ಈಗ ‘ಮುನಿರಕ್ಕಸ’ನಲ್ಲ, ‘ಮುನಿವರೇಣ್ಯ’, ಅವನು ‘ಕಡು ಮುಳಿದರಂತೆ’ ತೋರಿದ್ದು ಕವಿಯ ಕಣ್ಣಿಗಲ್ಲ, ‘ಲೋಕದ ಕಣ್ಗೆ’. ಹರಿಶ್ಚಂದ್ರ ತನ್ನ ರಾಜ್ಯ ಸಮಸ್ತವನ್ನೂ ತೆತ್ತು, ಮೂರು ತಿಂಗಳ ಗಡುವನ್ನು ಬೇಡಿ, ಕಡೆಗೆ ಅವಧಿ ಮುಗಿಯುವ ಹೊತ್ತಿನಲ್ಲಿ ಮುಂದುಗಾಣದೆ ತಳಮಳಿಸುತ್ತಿರುವಾಗ, ಅವನ ಪತ್ನೀ ಪುತ್ರರನ್ನು ಕೊಂಡುಕೊಳ್ಳಲು ಏರ್ಪಾಡು ಮಾಡಿದವನೂ ವಿಶ್ವಾಮಿತ್ರನೇ ಎಂಬುದನ್ನು ಮರೆಯಬಾರದು. ವಿಶ್ವಾಮಿತ್ರನು ಸೂತ್ರಧಾರನಾಗಿ ಕೈಗೊಂಡ ಈ ಹರಿಶ್ಚಂದ್ರನ ಸತ್ಯಪರೀಕ್ಷೆಯ ನಾಟಕದಲ್ಲಿ ಭಾಗಿಗಳಾಗಲು ಒಪ್ಪಿ, ಅಗ್ನಿ ವಿಪ್ರವೇಷವನ್ನು ಧರಿಸಿ ಹರಿಶ್ಚಂದ್ರನ ಸತಿಸುತರನ್ನು ಕೊಳ್ಳುತ್ತಾನೆ; ಯಮ ವೀರಬಾಹುಕನಾಗಿ ಹರಿಶ್ಚಂದ್ರನನ್ನು ಕೊಳ್ಳುತ್ತಾನೆ. ಹೀಗೆ ನಿರ್ದಿಷ್ಟವಾದ ಗಡುವಿನೊಳಗಾಗಿ ಹರಿಶ್ಚಂದ್ರನು ಋಣವಿಮುಕ್ತನಾಗಿ ಅಡಿದ ಮಾತನ್ನು ಉಳಿಸಿಕೊಳ್ಳಲು ನೆರವಾಗುವವನೂ ವಿಶ್ವಾಮಿತ್ರನೇ! ಹೀಗೆ ಕೊಲ್ಲಲೆತ್ತಿದ ಕೈಯೀ, ಕಾಯಲೂ ಚಾಚಿದೆ! ನಮಗೆ ಹೊರಗಣ್ಣಿಗೆ ಕಾಣುವುದು ಕಾಡುವ ಕೈಮಾತ್ರ; ಕಾಪಾಡುವ ಕೈ ಗುಪ್ತಗಾಮಿನಿಯಾಗಿ ಸರ್ವದಾ ಹರಿಶ್ಚಂದ್ರನ ಹಿತಚಿಂತನೆಯಲ್ಲಿ ತೊಡಗಿದೆ. ಯಾವ ಕೈ ನಿಷ್ಕರುಣವಾಗಿ ರಾಜ್ಯವನ್ನು ಸುಲಿಯಿತೋ ಅದೇ ಕೈ ಕಡೆಗೆ-

ಆನೇಕೆ ರಾಜ್ಯವೇಕೆಲೆ ಜನಪ, ಸತ್ಯಸಂ-
ಧಾನಮಂ ನೋಡಲೆಂದುಳ್ಳದೆಲ್ಲವಕೊಂಡ-
ಡೇನೆಂಬನೋ ಎಂದು ಕಾಡಿ ನೋಡಿದನೈಸೆ;
ಸರ್ವರಾಜ್ಯಂ ನಿನ್ನದು………   (೧೪-೧೩)

ಎಂದು ಘೋಷಿಸಿ ತನ್ನ ಐವತ್ತು ಕೋಟಿ ವರುಷದ ತಪಸ್ಸಿನಲ್ಲಿ ಅರ್ಧವನ್ನು ಧಾರೆ ಎರೆಯುತ್ತದೆ. ಮೊದಲು ವಸಿಷ್ಠರ ಮೇಲೆ ಗುಡುಗಾಡಿದಂತೆ ಕಂಡ ವಿಶ್ವಾಮಿತ್ರನೇ ಕಡೆಗೆ ಹರಿಶ್ಚಂದ್ರನಿಗೆ ಸತ್ಯಸಾಕ್ಷಾತ್ಕಾರವಾದಾಗ, ‘ಮುನಿವರೇಣ್ಯ ವಿಶ್ವಾಮಿತ್ರ ಬಂದನು ವಸಿಷ್ಠ ಸಹಿತ.’ ಬಹುಶಃ ಅವರಿಬ್ಬರೂ ಕೈ ಕೈ ಹಿಡಿದುಕೊಂಡು ಬಂದರೋ ಏನೊ! ಅಂತೂ ಅವರಿಬ್ಬರಲ್ಲಿ ಯಾವ ಹಗೆತನದ ಹೊಗೆಯೂ ಇಲ್ಲ. ಈ ತುದಿಯಿಂದ ನಿಂತು ನೋಡಿದರೆ, ಅವರಿಬ್ಬರೂ  ಹರಿಶ್ಚಂದ್ರನ ಸತ್ಯವ್ರತದ ಪುರೋಹಿತರು![2]

ಮೂರನೆಯದಾಗಿ, ಹರಿಶ್ಚಂದ್ರನ ಸತ್ಯಸಾಧನೆಯಲ್ಲಿ ಶಕ್ತಿಯಾದುದು ಸತಿ ಚಂದ್ರಮತಿಯ ಅಚಲವಾದ ವಿಶ್ವಾಸ ಮತ್ತು ಅನುಸರಣೆ. ಮಹಾವ್ಯಕ್ತಿಗಳ ಸಾಧನೆಯಲ್ಲಿ ಅವರ ಸಹಧರ್ಮಿಣಿಯರ ಸಾಧನೆಯೂ ಪೂರಕವಾಗಿರುವುದುಂಟು. ಸಾಧಕ ಸಂಸಾರಿಯಾಗಿದ್ದರಂತೂ ಆತನ ಸಾಧನೆಗೆ ಸಹಧರ್ಮಿಣಿಯ ಅನುಮತಿ, ಅನುಸರಣೆ ಅತ್ಯಂತ ಅವಶ್ಯಕ. ಹರಿಶ್ಚಂದ್ರನ ಸತ್ಯಸಾಧನೆಯಲ್ಲಿ ಚಂದ್ರಮತಿಯ ಒಲವು ಬಲು ಹಿರಿಯದು.

ಆಕೆಯನ್ನು ಕುರಿತು ‘ಪತಿಭಕ್ತಿಯೊಳರುಂಧತಿಗೆ ಸರಿ, ಜಗದೊಳು ಪರಮ ರೋಹಿಣಿಗೆ ಹೆಗಲೆಣೆ, ಪುಣ್ಯದೊಳು ಸ್ವಧಾತರುಣಿಗೋರಗೆ, ವಂದ್ಯತೆಯೊಳು ಗಾಯಿತ್ರಿಗೊರೆದೊರೆ’ ಎಂದು ಕವಿಯ ವರ್ಣನೆ. ಹರಿಶ್ಚಂದ್ರನ ಮೇಲೆ ಕೌಶಿಕನ ಕಾಟ ಮೊದಲಾದಾಗ, ಬೇಟೆಯ ಆಯಾಸದಿಂದ ಬಳಲಿ ಮಲಗಿದ ಹರಿಶ್ಚಂದ್ರನಿಗೆ ಮುಂದೊದಗಲಿರುವ ಗತಿಯನ್ನು ಸೂಚಿಸುವಂತಹ ಕನಸೊಂದು ಬೀಳುತ್ತದೆ. ಆಗ ಆತ ಎಚ್ಚೆತ್ತು ಆ ಕನಸಿನ ಪರಿಯನ್ನು ವಿವರಿಸಿದಾಗ ಚಂದ್ರಮತಿ ಹರಿಶ್ಚಂದ್ರನನ್ನು ಕುರಿತು:

ಬಗೆವಡೀ ಕನಸು ಗುರುವಾಜ್ಞೆಯಂ ಮೀರಿತಕ್ಕೊಗೆವ ಸೂಚನೆ;
ಮುನಿಯಬೇಡ. ಮಂತ್ರಿಗೆ, ಮಗಂಗೆ, ಎನಗೆ, ರಾಜ್ಯಕ್ಕೆ,
ಚತುರಂಗ ಸೇನೆಗೆ, ಸಕಲ ಭಾಂಡಾರಕೆ, ನಗರಕ್ಕೆ, ಸರ್ವ
ಪರಿವಾರಕ್ಕೆ, ತೇಜದೇಳ್ಗೆಗೆ, ನಿನ್ನ ಹರಣಕ್ಕೆ ಕೇಡು ಬಂದರೆ
ಬರಲಿ; ಮಿಗೆ ಸತ್ಯವಂ ಬಿಟ್ಟು ಕೆಡದಿರವನೀಶ.   (೬-೫೭)

ಎಂದು ಕೈಮುಗಿದು ಬೇಡಿಕೊಳ್ಳುತ್ತಾಳೆ. ಚಂದ್ರಮತಿ ಹರಿಶ್ಚಂದ್ರನ ಸತ್ಯಯಾತ್ರೆಗೆ ಸಹಯಾತ್ರಿ ಹಾಗೂ ಸ್ಫೂರ್ತಿ. ಆಕೆಯ ದೃಷ್ಟಿಗೆ ಎಲ್ಲಕ್ಕಿಂತ-ತನಗಿಂತಲೂ, ಕಡೆಗೆ ತನ್ನ ಪತಿಗಿಂತಲೂ-ಸತ್ಯವೇ ಮಿಗಿಲಾದುದು. ಆದುದರಿಂದ ಸಕಲ ರಾಜ್ಯಭ್ರಷ್ಟನಾದ ಹರಿಶ್ಚಂದ್ರನೊಡನೆ ತುಟಿಪಿಟಕ್ಕೆನ್ನದೆ ಮೌನವಾಗಿ ಹಿಂಬಾಲಿಸುತ್ತಾಳೆ. ಒಂದು ಚಕ್ರಾಧಿಪತ್ಯದ ಮಹಾರಾಣಿಯಾದವಳು ಕಲ್ಲು ಮುಳ್ಳಿನ ಹಾದಿಯನ್ನು ತುಳಿಯುತ್ತಾಳೆ. ಕೌಶಿಕನೊಡ್ಡಿದ ದಾವಾಗ್ನಿಯನ್ನು ಹೊಕ್ಕು ಹೊರಬಂದ ಸಂದರ್ಭ ಆಕೆಯ ಪತಿ ಭಕ್ತಿಗೆ ಮತ್ತು ದೈವೀಶ್ರದ್ಧೆಗೆ ಒಡ್ಡಿದ ಅಗ್ನಿ ಪರೀಕ್ಷೆಯಂತಿದೆ. ಮುಂದೆ ನಿರ್ದಿಷ್ಟವಾದ ಅವಧಿಯೊಳಗಾಗಿ ಸಾಲವನ್ನು ತೀರಿಸುವ ಬಗೆ ಹೇಗೆಂದು ಹರಿಶ್ಚಂದ್ರನು ಚಿಂತಾಕ್ರಾಂತನಾದಾಗ ಚಂದ್ರಮತಿ ಗಂಡನನ್ನು ಕುರಿತು ‘ಸಾಲದಲಿ ಪೋದನಿತು ಪೋಗಲಿ, ನಮ್ಮಿಬ್ಬರಂ ಮಾರು; ಬಳಿಕುಳಿದುದಂ ಕಾಣು ನಡೆ’ ಎಂದು ದಾರಿ ತೋರಿಸುತ್ತಾಳೆ. ಅನಂತರ ಪಶುಗಳಗಡಿನಂತಿದ್ದ ಆ ವಿಪ್ರನ ಮನೆಯಲ್ಲಿ ದಾಸಿಯಾಗಿ ಅವಳು ಪಡಬಾರದ ಪಾಡುಗಳನ್ನು ಅನುಭವಿಸುತ್ತಾಳೆ. ತನ್ನ ಬಾಳಿನ ಕಣ್ಣಾದ ಲೋಹಿತಾಶ್ವನು ಹಾವು ಕಡಿದು ಸತ್ತಾಗ, ಶವಸಂಸ್ಕಾರಕ್ಕೂ ಹಣವಿಲ್ಲದಿದ್ದಾಗ ‘ವಿಗತಸಪ್ತದ್ವೀಪಪತಿಯ ಬಸುರಲಿ ಬಂದು, ಮಗನೆ ನಿನಗೊಮ್ಮೆ ಸುಡುಗಾಡು ಹಗೆಯಾಯ್ತೆ’ ಎಂದು ಹಲುಬುತ್ತಾಳೆ. ಒಮ್ಮೆಯಾದರೂ ತಮ್ಮ ದುರ್ಗತಿಗಾಗಿ ಆ ವಿಶ್ವಾಮಿತ್ರನನ್ನು ಶಪಿಸಲಿಲ್ಲ; ಗಂಡನ ವರ್ತನೆಯನ್ನು ಕುರಿತು ಗೊಣಗಲಿಲ್ಲ. ಸ್ಮಶಾನದಲ್ಲಿ ಚಾಂಡಾಲವೇಷದ ಹರಿಶ್ಚಂದ್ರ ಅವಳನ್ನು ಕುರಿತು ‘ಜನಕೆ ನಗೆಗೆಡೆಯಾದ ಪಾತಕ ಹರಿಶ್ಚಂದ್ರನವನನೇಕೆ ನೆನೆದಪೆ’ ಎಂದಾಗ ಅವಳು-

ಜಡೆವೊತ್ತಡಂ, ಹಸಿಯ ತೊವಲುಟ್ಟಡಂ, ನಾಡ ಸುಡುಗಾಡಿ
ನೊಳಗಿರ್ದೊಡಂ, ನರಕಪಾಲಮಂ ಪಿಡಿದಿರ್ದಡಂ,
ತಿರಿದು ವಿಷವುಂಡಡಂ, ಶವ ಶಿರೋಮಾಲೆಗಟ್ಟಿರ್ದಡಂ,
ಕಡು ಮರುಳ್ ಪಡೆಯ ಸಂಗಡ ಬತ್ತಲಿರ್ದಡಂ, ಮೃಡ
ನಲ್ಲದಖಿಳ ಲೋಕಕ್ಕೊಡೆಯರಿಲ್ಲೆಂಬ ನುಡಿಯಂತಿರೆ,
ಎನಗಾ ಹರಿಶ್ಚಂದ್ರನಲ್ಲದಿನ್ನಾರುಗತಿಮತಿ?          (೧೨-೪೪)

ಎನ್ನುತ್ತಾಳೆ. ಹರಿಶ್ಚಂದ್ರನಿಗೆ ‘ಹರನೆಂಬುದೇ ಸತ್ಯ, ಸತ್ಯವೆಂಬುದೆ ಹರನು’ ಎನ್ನುವುದರಲ್ಲಿ ಎಷ್ಟು ಶ್ರದ್ಧೆಯೋ, ಚಂದ್ರಮತಿಗೆ ‘ಪತಿ ಎಂಬುದೇ ಹರನು, ಹರನೆಂಬುದೇ ಪತಿಯು’- ಎನ್ನುವಷ್ಟರಮಟ್ಟಿನ ಶ್ರದ್ಧೆ. ಕಡೆಗೆ ಸ್ಮಶಾನದಲ್ಲಿ ಹರಿಶ್ಚಂದ್ರನು ಅವಳ ತಲೆಗಡಿಯಲು ಸಿದ್ಧನಾದಾಗ, ಅವಳು ದೇವರಲ್ಲಿ ಮಾಡಿಕೊಂಡ ಪ್ರಾರ್ಥನೆ ಇದು-

‘ಭೂಚಂದ್ರ ತಾರಾರ್ಕಂಬರಂ
ಕಲಿ ಹರಿಶ್ಚಂದ್ರರಾಯಂ ಸತ್ಯವೆರಸಿ ಬಾಳಲಿ;
ಮಗಂ ಮುಕ್ತನಾಗಲಿ, ಮಂತ್ರಿ ನೆನೆದುದಾಗಲಿ,
ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ.’        (೧೩-೧೪)

ಇಂತಹ ಸಾಧ್ವೀ ಶಿರೋಮಣಿಯ ತಪಸ್‌ಶಕ್ತಿ ನೆರವಾದಾಗ ಹರಿಶ್ಚಂದ್ರ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡುದು ಅಚ್ಚರಿಯೇನಲ್ಲ ಎನ್ನಿಸಿಬಿಡುತ್ತದೆ.

ಇದೆಲ್ಲಕ್ಕಿಂತ ಮಿಗಿಲಾದುದು ಹರಿಶ್ಚಂದ್ರನ ಅಚಲವಾದ ಶ್ರದ್ಧೆ. ಅದು ಆತನ ನಡೆಯಲ್ಲಿ ಕಾಣಿಸುತ್ತದೆ. ಆ ಶ್ರದ್ಧೆಗೆ ಅಶಿವದ ಭೀತಿ ಒಂದಿನಿತೂ ಇಲ್ಲ; ಅಂತಹ ವೀರ ಶ್ರದ್ಧೆ ಅದು.

ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ತ್ಯಾಗ ಎಂದರೆ ಬಲವಂತದಿಂದ ಕೊಡುವುದಲ್ಲ; ಮಾತಿಗೆ ಸಿಕ್ಕಿದೆನಲ್ಲಾ ಎಂಬ ತಳಮಳದಿಂದ ಕೊಡುವುದೂ ಅಲ್ಲ; ಪ್ರತಿಫಲ ನಿರೀಕ್ಷೆಯಿಂದ ಮಾಡುವುದಲ್ಲ; ಅಥವಾ ಬೆಪ್ಪುತನದಿಂದ ಕೊಡುವುದಲ್ಲ; ಇಲ್ಲವೇ ತಾನು ತ್ಯಾಗಿ ಎನ್ನಿಸಿಕೊಳ್ಳಬೇಕೆಂಬ ಗೂಢೋದ್ದೇಶದಿಂದ ಕೈಕೊಳ್ಳುವುದೂ ಅಲ್ಲ. ಹರಿಶ್ಚಂದ್ರನ ಸಮಸ್ತ ತ್ಯಾಗವೂ, ಎಲ್ಲದಕ್ಕಿಂತ ಸತ್ಯವೆ ಮಿಗಿಲಾದುದೆಂಬ ಶ್ರದ್ಧೆಯಿಂದ ಮೂಡಿದುದು. ಅವನಿಗೆ ತಾನು ಮಾಡುತ್ತಿರುವುದು ತ್ಯಾಗ ಎಂಬ ಭಾವನೆ ಕೂಡಾ ಇರುವಂತೆ ತೋರುವುದಿಲ್ಲ. ಅಷ್ಟೊಂದು ಲೀಲಾ ಜಾಲವಾಗಿ ಆತ ಕೊಡುತ್ತಾನೆ. ತನ್ನ ರಾಜ್ಯ ಸಮಸ್ತವನ್ನೂ ವಿಶ್ವಾಮಿತ್ರನಿಗೆ  ಒಪ್ಪಿಸುವಾಗ, ಅದು ತನ್ನದು ಎನ್ನುವುದಕ್ಕಿಂತ, ಅದು ವಿಶ್ವಾಮಿತ್ರನಿಗೇ ಸೇರಿದ್ದೆಂಬ ಭಾವನೆಯಿಂದ ನಡೆದುಕೊಳ್ಳುತ್ತಾನೆ! ರಾಜ್ಯಕೋಶಗಳನ್ನೊಪ್ಪಿಸಿದ್ದೇನೋ ಸರಿಯೇ; ಆದರೆ ಅಂತರಂಗದಲ್ಲಿ ಅಂಟಿಕೊಂಡ ಕುಲದ, ಜಾತಿಯ, ಅಭಿಮಾನವನ್ನು, ತನಗೆ ಅತ್ಯಂತ ಪ್ರಿಯವಾದ ವ್ಯಕ್ತಿಗಳನ್ನೂ ಬಿಡತಕ್ಕದ್ದು ಇನ್ನೂ ಕಷ್ಟ. ಯಾವಾಗ ಆತ ತನಗೆ ಪ್ರೀತಿಪಾತ್ರರಾದ ಸತಿ-ಸುತರನ್ನೂ ಮಾರಬೇಕಾದಂತಹ ಸ್ಥಿತಿ ಒದಗಿತೋ ಆಗ ಆತ ತಾನು ಒಂದು ದೇಶದ ರಾಜನಾಗಿದ್ದವನು, ಈಗ ಸತಿ-ಸುತರನ್ನು ಮಾರುವುದು ಹೇಗೆ ಎಂಬ ಲಜ್ಜೆಯಲ್ಲಿ ಸಿಕ್ಕಿಕೊಂಡಂತೆ ತೋರುತ್ತದೆ. ಆಗ ಸತಿ ಚಂದ್ರಮತಿ ಹೇಳುತ್ತಾಳೆ, ‘ಲಜ್ಜೆಗೆಡದೆಮ್ಮೆ ಮಾರು’- ಎಂದು. ಆಗ ಈ ‘ಸತ್ಯನಿಧಿ ಭೂಪಾಲನು’ ‘ಓರಂತೆ ಲಜ್ಜೆಯನುಳಿದು’ ಪುರದ ಬೀದಿಗಳಲ್ಲಿ ಸುತ್ತುತ್ತಾನೆ, ಸತಿ ಸುತರನ್ನು ಮಾರುವ ಘೋಷಣೆಯನ್ನು ನುಡಿಯುತ್ತಾ. ಆದರೆ ಇಷ್ಟಕ್ಕೇ ಮುಗಿಯಲಿಲ್ಲ. ತಾನು ರಾಜನೆಂಬ  ಹೆಮ್ಮೆಯನ್ನೂ, ಆದುದರಿಂದ ಸತಿಸುತರನ್ನು ಮಾರುವುದು ಹೇಗೆ ಎಂಬ ಲಜ್ಜೆಯನ್ನೂ ಕಿತ್ತೆಸೆದರೆ, ಮತ್ತೂ ಒಂದು ತೆರೆ ಆವರಿಸಿ ತಬ್ಬಿದೆ ಅಹಂಕಾರವನ್ನು. ಅದು, ‘ತಾನು ರವಿಕುಲದವನು’ ಎಂಬ ಕುಲದ ಹೆಮ್ಮೆ! ಆದುದರಿಂದಲೇ ಕಡೆಗೆ ತನ್ನನ್ನು ಮಾರಿಕೊಳ್ಳುವಾಗಲೂ ವೀರಬಾಹುಕನು ತನ್ನ ಹಡಪಿಗನಿಂದ ಬೆಲೆಯನ್ನು ಕೇಳಿಸಿದಾಗ ‘ಸೂರ್ಯವಂಶದಲಿ ಹುಟ್ಟಿ ಮೃಡಮೂರ್ತಿ ವಾಸಿಷ್ಠ ಮುನಿಯ ಕಾರುಣ್ಯಮಂ ಪಡೆದೆನ್ನನ್, ಈ ಹೊಲೆಯನ್ ಇರಿಸಿಕೊಂಡೆಪೆನೆಂದು  ನುಡಿವ ಬಲುಹಂ ನೋಡುನೋಡು……’, ‘ಕಡೆಗೆ ಮೆಣಸು ಹುಳಿತಡೆ ಜೋಳದಿಂ ಕುಂದೆ’  ಎಂದು ಹರಿಶ್ಚಂದ್ರನು ಕೋಪಗೊಳ್ಳಲು ಈ ಕುಲದ ಹೆಮ್ಮೆಯೇ ಕಾರಣ. ಕಡೆಗೆ ಕೋಪವಿಳಿದು, ತಾನು ಆಡಿದುದು ತಪ್ಪೆಂದು ತಿಳಿದಾಗ, ಆತ ‘ರವಿ’ ಕುಲಕೆ ಕುಂದಿಂದು ಬಂದಡಂ ಬರಲಿ’ ಎಂದು, ಆ ಅಭಿಮಾನವನ್ನೂ ತೆಗೆದೆಸೆಯುತ್ತಾನೆ. ಹೀಗೆ ತಾನು ತನ್ನದು ಎಂಬ ಮಮಕಾರವನ್ನು ಭದ್ರವಾಗಿ ಕಾಪಾಡುತ್ತಿದ್ದ ಒಂದೊಂದೇ ಆವರಣಗಳನ್ನು ಆತ ಕಿತ್ತೆಸೆದು, ಕಡೆಗೆ ತನ್ನನ್ನೇ ತಾನು ಮಾರಿಕೊಂಡ. ಪುಣ್ಯಕ್ಷೇತ್ರವಾದ ಕಾಶಿಯಲ್ಲಿ ಹರಿಶ್ಚಂದ್ರ ತನ್ನತನವನ್ನು ಮಾರಿ, ಸತ್ಯ ನಿಷ್ಠೆಯನ್ನು ಕೊಂಡುಕೊಂಡ!

ಆತ ಇಷ್ಟೆಲ್ಲವನ್ನು ಬಿಟ್ಟರೂ, ಪ್ರತಿ ಹೆಜ್ಜೆ ಹೆಜ್ಜೆಗೂ ಅವನೊಬ್ಬ ರಾಜನೇ. ಅವನ ದೃಷ್ಟಿಗೆ ಈಗ ಹಿಂದಾದ ರಾಜ್ಯ ಭೋಗಗಳ ನಷ್ಟದ ಕೊರಗಿನ ನೆರಳೂ ಇಲ್ಲ. ರಾಜ್ಯವಿರಲಿ ಇಲ್ಲದಿರಲಿ, ಅವನೊಬ್ಬ ರಾಜ. ಆದುದರಿಂದಲೇ ಅವನು ಸ್ಮಶಾನದ ಕಾವಲುಗಾರನಾಗಿಯೂ-

ವರ ವಾರಣಾಸಿ ಮಧ್ಯವೆ ಲಾಳದೇಶ,
ಅಚ್ಚರಿಯ ಕಾಶೀಪುರ ಅಯೋಧ್ಯೆ,
ಶ್ಮಶಾನ ಧರೆ ಅರಮನೆ; ಪ್ರೇತಗಾಹಿನ ತವಗ ಮಣಿಪೀಠ,
ಪರಿಣಾಮವಾರೋಗಣೆ, ಪರಮಧೃತಿ ಚದುರಂಗ ಸೇನೆ,
ಸಂಬಳಿಗೋಲು ಕರವಾಳು, ಸತ್ಯ ಭಂಡಾರ,
ಪತಿಯಾಜ್ಞೆ ಭಾಸುರತರ ಕ್ಷತ್ರ ಧರ್ಮಗಳೆಂದೇ ಕಾಣುತಿರ್ದನು.  (೧೧-೪೬)

ಅವನೀಗ ಸಮದರ್ಶಿ. ಅರಮನೆಯೋ, ಸ್ಮಶಾನವೋ, ರಾಜ್ಯವೋ, ಸುಡುಗಾಡೋ ಎಲ್ಲವೂ ಒಂದೇ. ಕರ್ಮ ಬೇರೆಯಾದರೂ ಮನೋಧರ್ಮ ಮಾತ್ರ ಒಂದೇ. ಇದು ಆತನ ಸಾಧನೆಯ ಶಿಖರ; ಸಿದ್ಧಿಯ ಮುಂಬೆಳಗು.

ಹರಿಶ್ಚಂದ್ರನ ಸಾಧನೆಯಲ್ಲಿ ಅತ್ಯಂತ ಮುಖ್ಯವಾದುದು ಈ ಸ್ಮಶಾನಪರ್ವ. ಈ ಪ್ರಸಂಗ ಅತ್ಯಂತ ಸ್ವಾರಸ್ಯವೂ, ಅರ್ಥಪೂರ್ಣವೂ ಆಗಿದೆ.

ಸತ್ಯಸಾಧಕರಿಗೆ ಈ ಜಗತ್ತು ಮಿಥ್ಯೆ ಎಂಬ ಅರಿವಿದ್ದರೆ ಸಾಲದು, ಅದರ ಅನುಭವವೂ ಅಗತ್ಯ. ಸ್ಮಶಾನ ಎಲ್ಲ ಲೌಕಿಕ ವಿಭವಗಳ ನಿಲುಗಡೆ. ಜೀವನ ನಶ್ವರ ಮಿಥ್ಯೆ ಎಂಬ ಅರಿವು ಅನುಭವಕ್ಕೆ ಬರುವುದಕ್ಕೆ ಸ್ಮಶಾನಕ್ಕಿಂತ ಮಿಗಿಲಾದ ಸ್ಥಳವುಂಟೆ? ಎಲ್ಲ ಲೌಕಿಕ ಬದುಕಿನ ತೊರೆಗಳು ಹರಿದು ಬಂದು ಕೂಡುವಂಥ ಸ್ಮಶಾನದ ಕೇಂದ್ರದಲ್ಲಿ ಹರಿಶ್ಚಂದ್ರ ಕುಳಿತಿದ್ದಾನೆ. ದಿನ ಬೆಳಗಾದರೆ ಹಲವಾರು ದೇಹಗಳು ಬಂದು ಅಲ್ಲಿ ಬೆಂದು ಬೂದಿಯಾಗುತ್ತವೆ. ಈ ನಶ್ವರದ ಲೀಲೆಯನ್ನು ಕಾಣುತ್ತಾ ಕಾಣುತ್ತಾ ಆತನ ಮನಸ್ಸು ಶಾಶ್ವತದ, ಸತ್ಯದ ನಿಷ್ಠೆಯನ್ನು ಇನ್ನೂ ಬೆಳೆಸಿಕೊಳ್ಳುತ್ತದೆ. ದಿನವೂ ಬೇಯುವ ಎಷ್ಟೋ ದೇಹಗಳು ಯಾರವೋ ತನಗೆ ಸಂಬಂಧಿಸದೆ ಇದ್ದವರವು ಎಂದು ಅವುಗಳ ಬಗೆಗೆ ಗಮನ ಕೊಡದೆ ತನ್ನ ಕರ್ತವ್ಯವನ್ನು ನಿರ್ವಹಿಸಬಹುದು. ಆದರೆ ಒಂದುದಿನ ಅನಿರೀಕ್ಷಿತವಾಗಿ ಆಗಮಿಸುತ್ತದೆ ತನ್ನ ಪ್ರಿಯಪುತ್ರ ಲೋಹಿತಾಶ್ವನ ಶವ! ಪಿತೃ ಸಹಜವಾದ ವೇದನೆ ಅವನ ಕರುಳನ್ನು ಕೊರೆಯುತ್ತದೆ. ತನ್ನನ್ನು ತಾನು ಶಪಿಸಿಕೊಳ್ಳುತ್ತಾನೆ. ಮಗನಿಗಾಗಿ ಕಣ್ಣೀರು ಸುರಿಸುತ್ತಾನೆ. ಆದರೆ ಕಂಬನಿಯ ಮಬ್ಬಿನಲ್ಲೂ ಆತನಿಗೆ ತನ್ನ ಕರ್ತವ್ಯದ ಹಾದಿ ಸ್ಪಷ್ಟವಾಗಿ ಕಾಣಿಸುತ್ತದೆ. ತನ್ನ ಮಗನ ಶವವಾದರೇನು, ಯಾರದಾದರೆ ಏನು? ಚಂದ್ರಮತಿಗೆ ಹೇಳುತ್ತಾನೆ:

‘ತೆರೆಯನಿಕ್ಕದೆ ಸುಡಲ್ ಬಾರದು; ಉಳ್ಳಡೆ ಕೊಡು
ಇಲ್ಲದಡೆ ಬೇಗನೆ ಹೋಗಿ ನಿನ್ನೊಡೆಯನಂ ಬೇಡಿ ತಾ,
ತಾರದಿರೆ ಸುಡಲ್ ಬೇಡ……’   (೧೨-೫೫)

ಎಂದು. ಆತನಿಗೆ ತನ್ನ ಮಗ ಮಡಿದನೆಂದು ಶೋಕಿಸಲು ಮಾತ್ರ ಅಧಿಕಾರ ಉಂಟು; ಆದರೆ ತನ್ನ ಮಗನ ಶವವೆಂದು ಉಚಿತವಾಗಿ ಸಂಸ್ಕಾರ ಮಾಡಲು ಅಧಿಕಾರವಿಲ್ಲ. ಏಕೆಂದರೆ ಅವನೀಗ ವೀರಬಾಹುಕನ ಸೇವಕ. ಲೋಹಿತಾಶ್ವನ ಜವಾಬ್ದಾರಿಯನ್ನು ಹೊತ್ತುಕೊಂಡ ತಂದೆಯಲ್ಲ.

ಈ ಘಟನೆ ನಡೆದ ಕೊಂಚ ಹೊತ್ತಿನಲ್ಲೇ ಆತ ಮತ್ತೊಂದು ಘಟನೆಯನ್ನೆದುರಿಸ ಬೇಕಾಗುತ್ತದೆ. ತೆರವನ್ನು ಬೇಡಿ ತರಲೆಂದು ನಡುವಿರಳು ಮನೆಗೆ ಹೊರಟ ಚಂದ್ರಮತಿಯ ಮೇಲೆ ರಾಜಪುತ್ರ ವಧೆಯ ಅಪರಾಧ ಬಂದ ಕಾರಣ ವೀರಬಾಹುಕನ ಸೇವಕರು ಅವಳ ತಲೆಗಡಿಯಬೇಕೆಂಬ ರಾಜಾಜ್ಞೆಯೊಡನೆ ಅವಳನ್ನು ಹರಿಶ್ಚಂದ್ರನ ಎದುರಿಗೆ ತಂದು ನಿಲ್ಲಿಸುತ್ತಾರೆ. ಹರಿಶ್ಚಂದ್ರನಿಗೆ ಆಕೆ ತನ್ನ ಸತಿ ಎಂದು ತಿಳಿದಿರಲಿಲ್ಲ. ಆಕೆ ಯಾವಾಗ ‘ಕಲಿ ಹರಿಶ್ಚಂದ್ರರಾಯಂ ಸತ್ಯವೆರಸಿ ಬಾಳಲಿ’ ಎಂದು ಹರಕೆಯನ್ನು ನುಡಿದಳೋ ಆಗ ಹರಿಶ್ಚಂದ್ರ ಬೆರಗಾಗುತ್ತಾನೆ.[3] ಯಾವ ವಿಧಿ ಕೊಂಚ ಹೊತ್ತಿನ ಮುಂಚೆ ಮಗನ ಮರಣವನ್ನು ತೋರಿತೋ, ಅದೇ ಈಗ ತನ್ನ ಕೈಯಿಂದಲೇ ತನ್ನ ಮಡದಿಯ ತಲೆಯನ್ನು ಕಡಿಸಲು ಹೊಂಚುಹಾಕಿರುವುದನ್ನು ಕಂಡು ಆತ ಚಕಿತನಾಗುತ್ತಾನೆ. ಜಗತ್ತಿನಲ್ಲಿ ತನ್ನವರೆಂದು ಕರೆದುಕೊಳ್ಳಬಹುದಾಗಿದ್ದವರು ಇವರಿಬ್ಬರು; ಒಬ್ಬ ಲೋಹಿತಾಶ್ವ, ಮತ್ತೊಬ್ಬಳು ಚಂದ್ರಮತಿ. ಆ ಇಬ್ಬರಲ್ಲಿ ಒಬ್ಬರ ಕತೆ ಆಗಲೇ ಮುಗಿದಿದೆ;  ಇನ್ನೊಬ್ಬರದನ್ನು ತಾನೇ ಮುಗಿಸಬೇಕಾಗಿದೆ. ತನ್ನದಾಗಿ ಉಳಿದುಕೊಂಡ ಒಂದೇ ಒಂದು ಮಧುರಬಾಂಧವ್ಯವನ್ನೂ ಕಡಿಯಲು ಸಿದ್ಧನಾಗಿ ನಿಂತಿದ್ದಾನೆ. ಆಗಲೂ ವಿಶ್ವಾಮಿತ್ರನ ಪ್ರಲೋಭನೆಯ ಕಡೆಯ ಮಿಂಚು ಮಿಂಚಿತು; ಆದರೆ ಸತ್ಯನಿಷ್ಠನಾದ ಹರಿಶ್ಚಂದ್ರನ ದೃಢನಿರ್ಧಾರದ ವಾಣಿ ಮೊಳಗಿತು-

‘ವರಪುತ್ರನಸುವಳಿದು ಪೋದೊಡೇಂ, ನಾನೆನ್ನ
ತರುಣಿಯಂ ಕೊಂದಡೇಂ, ಕುಂದೆ? ಸತ್ಯವನು
ಬಿಟ್ಟಿರನ್ ಎನಿಸಿದಡೆ ಸಾಕು………….’  (೧೩-೧೭)

ಹರಿಶ್ಚಂದ್ರನು ಕಡಿಯಲು ನಿಂತದ್ದು ಚಂದ್ರಮತಿಯ ಕೊರಳನ್ನಲ್ಲ; ಇನ್ನೂ ಉಳಿದು ಕೊಂಡಿದ್ದ ಮಮಕಾರದ ಮೂಲವನ್ನು; ನಾನು ನನ್ನದು ಎಂಬ ಬಂಧನವನ್ನು. ಯಾವಾಗ ಸಾಧಕ ತನ್ನ ಅಳಿದುಳಿದ ಅಹಂಕಾರವನ್ನೂ ಕತ್ತರಿಸಲು ಸಿದ್ಧನಾಗುವನೋ ಆಗ ಅಲ್ಲಿಂದಲೇ ಮೂಡುತ್ತದೆ ಸಾಕ್ಷಾತ್ಕಾರದ ಜ್ಯೋತಿ. ಹರಿಶ್ಚಂದ್ರನು ಹೊಡೆದ ಖಡ್ಗಧಾರೆಗೂ, ಚಂದ್ರಮತಿಯ ಕೊರಳಿಗೂ ಆದ ಘರ್ಷಣೆಯ ನಡುವಿನಿಂದಲೇ ಪಂಪಾಪತಿ ವಿರೂಪಾಕ್ಷ ಮೂಡಿಬರುತ್ತಾನೆ. ಆಗ ‘ಸರ್ವದೇವರು ಬಂದರಪ್ರತಿಮ ದೇವಾಧಿದೇವ ಪಂಪಾ ವಿರೂಪಾಕ್ಷನೆಡೆಗೆ.’ ಅದು ಅಂತಹ ದೇವ ಮನೋಹರ ಲೋಕೋತ್ತರ ಘಟನೆ. ಆ ಘಟನೆಯ ರೋಮಾಂಚಕಾರಿಯಾದ ಸುದ್ದಿ ಮೂರು ಲೋಕಕ್ಕೂ ಹರಡುತ್ತದೆ. ಎಲ್ಲ ದಿವ್ಯ ಸಭೆಗಳಲ್ಲಿಯೂ ‘ಧರಣಿಪನ ಕಥನವೇ ಕಥನ, ಮಾತೇ ಮಾತು.’

ಪರಿಶೀಲನ (೧೯೬೭)


[1] ಹರಿಶ್ಚಂದ್ರ ಕಾವ್ಯ : ಪದ್ಯ ೭೩ ರಿಂದ ೮೪-ಪಂಚಮ ಸ್ಥಲ. ಸಂಪಾದಕರು: ಎನ್. ಬಸವಾರಾಧ್ಯ ಮತ್ತು ಪಂಡಿತ ಎಸ್. ಬಸಪ್ಪ.

[2] ಹರಿಶ್ಚಂದ್ರನ ಸತ್ಯಸಾಧನೆಯ ಸಂಗತಿಯನ್ನು ಬಹುಮಂದಿ, ಅದೊಂದು ವಸಿಷ್ಠ- ವಿಶ್ವಾಮಿತ್ರರ ಕುಸ್ತಿಯ ಕಾಳಗವೆಂದೂ, ಕಡೆಗೆ ವಸಿಷ್ಠ ಶಿಷ್ಯನಾದ ಹರಿಶ್ಚಂದ್ರ ಗೆದ್ದಾಗ ವಿಶ್ವಾಮಿತ್ರ ಬಹಳ ಚಾಕಚಕ್ಯತೆಯಿಂದ ತನ್ನ ನಿಲುವನ್ನು ಬದಲಾಯಿಸಿಕೊಂಡು ಅನಿವಾರ್ಯವಾಗಿ ಹರಿಶ್ಚಂದ್ರನ ಮಹಿಮೆಯನ್ನು ಒಪ್ಪಿಕೊಂಡನೆಂದೂ ಭಾವಿಸುವುದುಂಟು. ಆದರೆ, ಗಮನಿಸಬೇಕು: ಸ್ವರ್ಗದ ಸಭೆಯಲ್ಲಿ ಮೊಟ್ಟಮೊದಲು ನಮ್ಮ ದೃಷ್ಟಿಗೆ ಗೋಚರವಾಗುವ ಋಷಿ ಶ್ರೇಷ್ಠರನ್ನು ಕವಿ ‘ಒಡಲನಾವರಿಸಿದಂಗೋಪಾಂಗ ಸಂಕುಳದ ನಡುವೆ ನಯನದ್ವಯಂಗಳು’ (೨-೫) ಎಂದು ಪರಿಚಯ ಮಾಡಿಕೊಡುತ್ತಾನೆ. ಕಣ್ಣೆರಡಾದರೂ ದೃಷ್ಟಿ ಒಂದೇ ಎಂಬುದನ್ನು, ಸಹೃದಯರು ಅನಂತರ ಮರೆತೇ ಬಿಡುತ್ತಾರೆ. ಅನಂತರದ ವಿಶ್ವಾಮಿತ್ರನ ವರ್ತನೆಯನ್ನು ನೋಡಿ, ಆತನೊಬ್ಬ ರಾಗ ದ್ವೇಷ ಕಲುಷಿತನಾದ ಸಾಮಾನ್ಯ ಋಷಿ, ‘ಆತ ಖಳನಾಯಕನಿಗೆ ಸಮ, ಕಡೆಗೆ ನಿರ್ವಾಹವಿಲ್ಲದೆ ಹರಿಶ್ಚಂದ್ರನ ಸತ್ಯಕ್ಕೆ ತಲೆಬಾಗಿದ- ಎನ್ನುತ್ತಾರೆ ಹಲವರು. ಆದರೆ ಹೀಗೆ ಹೊರಗಣ್ಣಿನಿಂದ ಕಾಣತಕ್ಕವರಿಗೂ ಕವಿ ಅನ್ಯಾಯಮಾಡಿಲ್ಲ. ‘ಲೋಕದ ಕಣ್ಗೆ’ ಕಡುಮುಳಿದರಂತೆಯೇ ಕವಿ ಚಿತ್ರಿಸಿದ್ದಾನೆ ಆತನ ಪಾತ್ರವನ್ನು. ಆದರೆ ಒಳಗಣ್ಣಿಗೆ ಕಾಣತಕ್ಕದ್ದು ಇನ್ನೂ ಬೇರೆ. ಯಾವ ಮಹಾಮಹಿಮನಾದ ಋಷಿ, ಇಂದ್ರ ಸನ್ಮಾನಿತನೋ, ‘ದೇವಲೋಕದ ಸಭೆಯಲ್ಲೂ ಸ್ವಾಗತಾರ್ಹನೋ, ಯಾರ ಮಾತಿಗೆ ಬೆಲೆಕೊಟ್ಟು ಲೋಕದ ಋತಧರ್ಮದ ಆಧಿದೇವತೆಗಳಾದ ಅಗ್ನಿ ಯಮ ಇವನೂ ವಿಶ್ವಾಮಿತ್ರನು ಏರ್ಪಡಿಸಿದ ಈ ನಾಟಕದಲ್ಲಿ ಪಾತ್ರಧಾರಿಗಳಾಗಲು ಒಪ್ಪಿದರೋ, ಅಂಥವನನ್ನು ಕೇವಲ ‘ಅಸುರದ ಕೋರಡಿಗ’ನೆಂದಾಗಲೀ “ಮುನಿ ರಕ್ಕಸ” ನೆಂದಾಗಲೀ, ರಾಗದ್ವೇಷಪೀಡಿತನಾದ ವಸಿಷ್ಠ ಸ್ಪರ್ಧಿ ಎಂದಾಗಲೀ ಭಾವಿಸತಕ್ಕದ್ದು ಎಂಥಾ ಆಭಾಸ! ವಿಶ್ವಾಮಿತ್ರನು ಕೇವಲ ‘ಲೋಕದ ಕಣ್ಣು’ ನಿರ್ಣಯಿಸುವಂತೆ, ಕೀಳ್ಮಾನಿಸನೂ, ಸತ್ಯವನ್ನು ಲೋಕದೆದುರು ಪರಾಭವಿಸಿ ಅಪಚಾರ ಮಾಡುವ ದುಷ್ಟ ಬುದ್ಧಿಯುಳ್ಳವನೂ ಆಗಿದ್ದ ಪಕ್ಷದಲ್ಲಿ, ಹರಿಶ್ಚಂದ್ರನನ್ನು ಸತ್ಯಭ್ರಷ್ಠನನ್ನಾಗಿ ಮಾಡುವುದರ ಮೂಲಕ  ವಶಿಷ್ಠನ ಮೇಲಣ ಸೇಡನ್ನು ತೀರಿಸಿಕೊಳ್ಳತಕ್ಕವನಾಗಿದ್ದಲ್ಲಿ, ಧರ್ಮದರ್ಶಿಗಳಾದ ಅಗ್ನಿ ಯಮ ಇವರಂಥ ದೇವತೆಗಳು ಖಂಡಿತವಾಗಿಯೂ ವಿಶ್ರಾಮಿತ್ರನ ಈ ನಾಟಕದಲ್ಲಿ ಪಾತ್ರವಹಿಸುತ್ತಿರಲಿಲ್ಲ. ಇದು ಕೇವಲ ಋಷಿಗಳಿಬ್ಬರ ಸ್ಪರ್ಧೆಯ ಕಣವಾಗಿದ್ದಿದ್ದರೆ ಉದ್ದಕ್ಕೂ ಹರಿಶ್ಚಂದ್ರನ ಹಿನ್ನೆಲೆಯಲ್ಲಿ ವಿಶ್ವಾಮಿತ್ರನ ಕಾಟಕ್ಕೆ ಪ್ರತಿಯಾಗಿ ವಸಿಷ್ಠರೂ ನಿಂತು, ಹರಿಶ್ಚಂದ್ರನ ಪರವಾಗಿ ಹೋರಾಡುತ್ತಿದ್ದರೆಂದು ಚಿತ್ರಿಸಲು ಕವಿ ಹಿಂದೆಗೆಯುತ್ತಿರಲಿಲ್ಲ. ಹಾಗೆ ಮಾಡಿದ್ದರೆ ಅದರ ಕಥೆಯೇ ಬೇರೆ. ಆದರೆ ಕವಿಯ ಉದ್ದೇಶ ಋಷಿಗಳಿಬ್ಬರ ಹೋರಾಟವನ್ನು ಚಿತ್ರಿಸಬೇಕೆಂಬುದಲ್ಲ, ವಿಶ್ವಾಮಿತ್ರನ ನಿಕಷದಲ್ಲಿ ಹರಿಶ್ಚಂದ್ರನ ಸತ್ಯದ ಹೊನ್ನು ಹೇಗೆ ಹೊಳೆಯುತ್ತದೆ ಎನ್ನುವುದನ್ನು ಚಿತ್ರಿಸುವುದು. ಮೇಲಾಗಿ ರನ್ನನನ್ನು ಬಿಟ್ಟರೆ, ಅಂಥದೇ ಅಪೂರ್ವ  ನಾಟ್ಯ ಪ್ರತಿಭೆಯುಳ್ಳ ಕವಿ ರಾಘವಾಂಕನಲ್ಲಿ ವಿಶ್ವಾಮಿತ್ರನ ಪಾತ್ರದಲ್ಲಿ, ಕಡೆಗೆ ಕಂಡು ಬರುವ ಈ ಪರಿವರ್ತನೆ- ‘ಇದು ಲೋಕದ ಕಣ್ಗೆ’ ಆಕಸ್ಮಿಕ ಅಷ್ಟೆ-ಎಷ್ಟೊಂದು ಕಲಾತ್ಮಕವಾಗಿದೆ! ಒಟ್ಟಿನಲ್ಲಿ ವಿಶ್ವಾಮಿತ್ರನು ಈ ಹರಿಶ್ಚಂದ್ರನಿಗೆ ಕೊಟ್ಟ ಕಾಟವೆಲ್ಲವೂ, ‘ಲೋಕದ ಕಣ್ಗೆ’ ‘ಮುಳಿದರಂತೆ’ ತೋರಿದರೂ ‘ಕವಿಯ ಕಣ್ಗೆ’ ಲೋಕಕಲ್ಯಾಣಕ್ಕಾಗಿಯೇ ಏರ್ಪಟ್ಟುದೆಂಬುದು ಸ್ಪಷ್ಟ.

[3] ಹರಿಶ್ಚಂದ್ರನು ವೀರಬಾಹುಕನ ಸೇವಕನಾದ ಹೊಸದರಲ್ಲಿ ವೀರಬಾಹುಕನಿಗೆ ನಂಬುಗೆಗೊಡಲು,  ಹರಿಶ್ಚಂದ್ರ ಹೀಗೆನ್ನುತ್ತಾನೆ : ‘ಹಸುವನಳಿ, ಹಾರುವನನಿಱಿ, ಮಾತೆ ಪಿತರನಾರ್ದಿಸು, ಸುತನ ತಿವಿ, ಸತಿಯ ಕೊಲು, ಮಾರಿಗೊಱೆಗಟ್ಟು, ವಿಷವ ಕುಡಿ, ಹಾವ ಹಿಡಿ, ಹುಲಿಗೆ ಮಲೆ, ದಳ್ಳುರಿಯೊಳಡಗು ಹೋಗೆಂದು ಒಡೆಯನು ಬೆಸಸಿದರೆ ನಾನಾರೆನೆನಬಾರದು.’ (೧೧-೩೪) ಆದರೆ ಈ ಎಲ್ಲ ಮಾತುಗಳಲ್ಲಿ ‘ಸತಿಯ ಕೊಲು’- ಎಂಬ ಮಾತಿನ ಪರೀಕ್ಷೆ ಮುಂದೆ ಬರಬಹುದೆನ್ನುವ ಅರಿವು ಆಗ ಇರಲಿಲ್ಲ, ಅದು ಬಂದಿತು, ಸ್ಮಶಾನ ಪರ್ವದಲ್ಲಿ!