ಸತ್ಯಸಾಯಿ ನಿನ್ನ ಪ್ರೇಮದಲೆಗಳು ನಾವು
ನಿನ್ನ ಕರುಣೆಗಾಗಿ ಮಿಡಿವ ಮಕ್ಕಳು ನಾವು
ಬಿರಿದು ನಗುತಲಿರುವ ಎಳೆಯ ಹೂಗಳು ನಾವು
ನಿನ್ನ ಪದದಿ ಮುದದಿ ನಲಿವ ಸುಮಗಳು ನಾವು ||

ತಾಯಿತಂದೆ ಬಂಧು ಬಳಗ ಮಿತ್ರರೆಲ್ಲ ನೀ
ಗಾಳಿಯಂತೆ ಸುತ್ತಲಿರುವೆ ಎಮ್ಮ ಉಸಿರು ನೀ
ವಿಶ್ವವೊಂದು ಆಟ ಅದರ ಸುತ್ರಧಾರಿ ನೀ
ಆಟಿಕೆಗಳು ನಾವು ಆಟವಾಡುವಾತ ನೀ ||

ಹಾಲಲಿ ಬೆರತು ಮರೆತ ಬೆಣ್ಣೆಯಂತೆ ನೀ
ಕಾಣುತಿರುವ ವಿಶ್ವದೊಳಗೆ ಕಾಣದಿರುವೆ ನೀ
ರಾಮಕೃಷ್ಣ ಜೀಸಸ್ ಅಲ್ಲಾ ಪರಬ್ರಹ್ಮ ನೀ
ಹಲವು ರೂಪ ನಾಮ ನಿನಗೆ ನಿಜಕ ಒಬ್ಬ ನೀ ||

ಬಣ್ಣ ಬಣ್ಣ ಹೂವು ಹಲವು ಎಲ್ಲ ಸುಂದರ
ನಿನ್ನ ಅಂದ ಬೆಳಗುವೆಡೆಗಳೆಲ್ಲ ಮಂದಿರ
ಇರುಳು ಹರಡಲದುವೆ ಬರುವ ಪೂರ್ಣ ಚಂದಿರ
ಮರುಳು ಮನಕೆ ತಿಳಿವ ತರುವೆ ಶ್ಯಾಮಸುಂದರ ||

ವಿಶ್ವ ನಿನ್ನ ಲೀಲೆ ಎಂಬ ಸತ್ಯವ ತಿಳಿಸು
ಧರ್ಮವನ್ನು ಬಿಡದ ಬದುಕು ಎಮ್ಮದಾಗಿಸು
ಎಲ್ಲರಲ್ಲು ನಿನ್ನ ನೆನವ ಪ್ರೇಮವ ಉಣಿಸು
ಪರಮ ಸುಖವ ಕೊಡುವ ಶಾಸ್ತ್ರಿನೆಲೆಯ ಕರುಣಿಸು ||