ಟೀವಿಯಲ್ಲಿ ಇತ್ತೀಚೆಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಜಾಹೀರಾತನ್ನು ನೀವೂ ನೋಡಿರಬಹುದು. ಯಾವುದೋ ಪೇಯವನ್ನು ಕುಡಿದ ಮಕ್ಕಳು ವಿಜ್ಞಾನಿಗಳಾಗುವಷ್ಟು ಬುದ್ಧಿವಂತರಾಗುತ್ತಾರೆ ಎಂದು ಜಾಹೀರಾತು ಪ್ರಚಾರ ಮಾಡುತ್ತಿದೆ.  ಪೇಯ ಕುಡಿದರೆ ಬುದ್ಧಿ ಹೆಚ್ಚುತ್ತದೋ ಇಲ್ಲವೋ, ಒಟ್ಟಾರೆ ಆ ಜಾಹೀರಾತು ವಿಜ್ಞಾನಿಗಳ ಬಗ್ಗೆ ಜನತೆ ಇಟ್ಟಿರುವ ಗೌರವವನ್ನು ಎತ್ತಿ ತೋರಿಸುತ್ತಿದೆ. ನಿಜ. ಜಗತ್ತಿನ ವಿವಿಧ ವಿದ್ಯಮಾನಗಳ ಬಗ್ಗೆ ಪೂರ್ವಾಗ್ರಹವಿಲ್ಲದ ತನಿಖೆ ಮಾಡಿ ಸತ್ಯಾಂಶವನ್ನು ಬಯಲಿಗೆಳೆಯುವ ಪ್ರಪಂಚ ಎನ್ನುವುದು ಸಾಮಾನ್ಯ ನಂಬಿಕೆ. ಪ್ರಯೋಗ-ಪರೀಕ್ಷೆಗಳ ವಿಜ್ಞಾನ ಲೋಕದಲ್ಲಿ ಮೋಸದಾಟಗಳು ನಡೆಯುವುದಿಲ್ಲ ಎನ್ನುವುದೂ ತಪ್ಪೇ! ಆದರೆ ಅವು ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಜರುಗುತ್ತವೆ ಎನ್ನುವುದು ಎಲ್ಲರ ನಂಬಿಕೆ. ವಿಜ್ಞಾನಿಗಳ ಆಶಯವೂ ಕೂಡ. ಆದರೆ ವಾಸ್ತವ ಹಾಗಿರಲಿಕ್ಕಿಲ್ಲ ಎನ್ನುವುದಕ್ಕೆ  ಕಳೆದ ವಾರದ ಸೈನ್ಸ್ ಸಂಚಿಕೆಯನ್ನು ಉದಾಹರಣೆಯನ್ನಾಗಿ ನೀಡಬಹುದು. ಅಮೆರಿಕೆಯ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಯಾದ ಸೈನ್ಸ್ ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ಮೂರು ಸುದ್ದಿಗಳು ವಿಜ್ಞಾನ ಜಗತ್ತಿನಲ್ಲಿ ಜರುಗುತ್ತಿರುವ ಮೋಸದಾಟದ ವಿವಿಧ ಮಗ್ಗುಲುಗಳನ್ನು ಎತ್ತಿ ತೋರಿಸುತ್ತಿವೆ. ಪಿಎಲ್ಓಎಸ್ ಮೆಡಿಸಿನ್ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಮತ್ತೊಂದು ಸುದ್ದಿ ತ್ಯಾಗ, ಕಷ್ಟ ಸಹಿಷ್ಣುತೆಯ ಪ್ರತೀಕವೆನ್ನಿಸಿದ ವೈದ್ಯಕೀಯ ಕ್ಷೇತ್ರದಲ್ಲಿಯೂ ಇಂತಹ ಮೋಸದಾಟ ನಡೆಯುತ್ತಲೇ ಇದೆ ಎಂದು ಎಚ್ಚರಿಸುತ್ತಿದೆ.

ಮೊದಲನೆಯ ಸುದ್ದಿ ಕ್ಯಾನ್ಸರ್ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಕ್ಯಾನ್ಸರ್ ಒಂದು ಮಾರಕ ರೋಗ ಎನ್ನುವ ಜನರ ನಂಬಿಕೆಗೆ ಇಂಬುಕೊಟ್ಟು ವಿವಿಧ ಔಷಧಿ ಕಂಪೆನಿಗಳು ನೂರಾರು ಔಷಧಿಗಳನ್ನು ತಯಾರಿಸಿ ಪರೀಕ್ಷಿಸುತ್ತಿವೆಯಷ್ಟೆ. ಹೊಸ, ಹೊಸ ಔಷಧಗಳನ್ನು ಸಂಶೋಧಿಸಿ, ತಯಾರಿಸಿ ಅವುಗಳ ಮಾರಾಟದಿಂದ ತಮ್ಮ ಲಾಭ ಹೆಚ್ಚಿಸಿಕೊಳ್ಳುವ ಸ್ಪರ್ಧೆಯಲ್ಲಿ ಪ್ರಪಂಚದ ಎಲ್ಲ ಕಂಪೆನಿಗಳೂ ಪಾಲ್ಗೊಳ್ಳುತ್ತಿವೆ. ಸಂಶೋಧನೆಗಾಗಿ ವಿವಿಧ ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನಾಲಯಗಳಲ್ಲಿರುವ ವಿಜ್ಞಾನಿಗಳಿಗೆ ಅನುದಾನವನ್ನೂ ನೀಡುತ್ತವೆ.  ವಿಜ್ಞಾನಿಗಳ ಸಂಶೋಧನೆಗಳ ಫಲಿತಾಂಶದ ಫಲವನ್ನು ಉಳಿದವರೆಲ್ಲರಿಗಿಂತಲೂ ಮುಂದಾಗಿ ಅನುದಾನ ನೀಡಿದ ಕಂಪೆನಿಗಳು ಅನುಭವಿಸುತ್ತವೆ. ಪ್ರಯೋಗಗಳನ್ನು ಆಧರಿಸಿದ ಸಂಶೋಧನೆಗಳು ಸದಾ ನಿರೀಕ್ಷಿತ ಫಲವನ್ನೇ ನೀಡುತ್ತವೆ ಎಂದು ಆಶಿಸುವುದು ತಪ್ಪಷ್ಟೆ! ತಾವು ನೀಡಿದ ಅನುದಾನ ಕೆಲವೊಮ್ಮೆ ಹೊಳೆಯಲ್ಲಿ ತೊಳೆದ ಹುಣಿಸೆ ಹಣ್ಣಿನಷ್ಟೆ ಫಲಪ್ರದವಾಗಬಹುದು ಎನ್ನುವುದೂ ಕಂಪೆನಿಗಳಿಗೆ ತಿಳಿಯದ ವಿಷಯವಲ್ಲ. ಹಾಗಿದ್ದರೂ ಅಮೆರಿಕೆಯ ವಾಷಿಂಗ್ಟನ್ನಲ್ಲಿರುವ ಆಂಕೊನೋಮ್ ಎನ್ನುವ ಕಂಪೆನಿ ಪ್ರತಿಷ್ಠಿತ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿ ರಾಬರ್ಟ್ ಗೆಟ್ಜೆನ್ಬರ್ಗ್ ತಮಗೆ ಮೋಸ ಮಾಡಿದ್ದಾರೆಂದು ಕೋರ್ಟಿನಲ್ಲಿ ಖಟ್ಲೆ ಹೂಡಿದೆ. ಕ್ಯಾನ್ಸರ್ ಕೋಶಗಳನ್ನು ದೇಹದ ಇತರೇ ಕೋಶಗಳಿಂದ ಪ್ರತ್ಯೇಕಿಸಿ ಗುರುತಿಸಬಲ್ಲ ವಿಶೇಷ ತಂತ್ರವೊಂದರ ಅಭಿವೃದ್ಧಿಗೆಂದು ಕಂಪೆನಿ ಗೆಟ್ಜೆನ್ಬರ್ಗ್ರವರಿಗೆ ಲಕ್ಷಾಂತರ ಡಾಲರುಗಳಷ್ಟು ಅನುದಾನ ನೀಡಿತ್ತು. ಗೆಟ್ಜೆನ್ಬರ್ಗ್ರವರೂ ಪ್ರಾಸ್ಟೇಟ್ ಗ್ರಂಯ ಕ್ಯಾನ್ಸರ್ ಸುಳುಹು ನೀಡುವ ಇಪಿಸಿಎ ಎನ್ನುವ ಕಜೈವಿಕಗುರುತನ್ನುಕಿ ಪತ್ತೆ ಮಾಡಿರುವುದಾಗಿ ವರದಿ ನೀಡಿದ್ದರು. ಕ್ಯಾನ್ಸರ್ನ ಆರಂಭಾವಸ್ಥೆಯಲ್ಲಿಯೇ ಈ ಪ್ರೋಟೀನ್ನ ಕುರುಹು ರಕ್ತದಲ್ಲಿ ದೊರೆಯುತ್ತದೆ ಎಂದು ಗೆಟ್ಜೆನ್ಬರ್ಗ್ ಹೇಳಿದ್ದರು. ಅಲ್ಲದೆ ಈ ಪ್ರೋಟೀನ್ನ ಇರವನ್ನು ನೂರಕ್ಕೆ ನೂರರಷ್ಟು ನಿಖರವಾಗಿ ಪತ್ತೆ ಹಚ್ಚುವ ತಂತ್ರಗಳ ವಿವರಗಳನ್ನೂ ಕಂಪೆನಿಗೆ ನೀಡಿದ್ದರು. ಆದರೆ ಈ ವರದಿ, ವಿವರಗಳೆಲ್ಲವೂ ಕಹಾದಿ ತಪ್ಪಿಸುವಂತಹವುಕಿ ಎಂದು ಕಂಪೆನಿ ಖಟ್ಲೆ ಹೂಡಿದೆ. ಈ ಹಿಂದೆಯೂ ವಿಜ್ಞಾನಿಗಳು ಮತ್ತು ಕಂಪೆನಿಗಳ ನಡುವಣ ವಿವಾದ ಕೋರ್ಟು ಮೆಟ್ಟಿಲು ಹತ್ತಿದ್ದಕ್ಕೆ ಹಲವು ಉದಾಹರಣೆಗಳು ಇದ್ದುವಾದರೂ, ವಿಜ್ಞಾನಿಯು ನಡೆಸಿರುವ ಸಂಶೋಧನೆಯೇ ಮೋಸ ಎಂದು ಖಟ್ಲೆ ಹೂಡಿದ್ದು ಇದೇ ಮೊದಲು.

ಸೈನ್ಸ್ ಪ್ರಕಟಿಸಿರುವ ಮತ್ತೊಂದು ಸುದ್ದಿ ಸಂಶೋಧನೆಯ ಕಳ್ಳತನದ್ದು! ಸುಪ್ರಸಿದ್ಧ ರಾಸಾಯನಿಕ ಕಂಪೆನಿ ಡುಪಾಂಟ್ ತನ್ನದೇ ಕಂಪೆನಿಯ ವಿಜ್ಞಾನಿಯೊಬ್ಬನ ವಿರುದ್ಧ ಕಳ್ಳತನದ ಆರೋಪ ಮಾಡಿ ಖಟ್ಲೆ ಹೂಡಿದೆ. ಇದು ಚೀನಾ ಮೂಲದ ವಿಜ್ಞಾನಿಗಳ ವಿರುದ್ಧ ಈ ಕಂಪೆನಿ ಹೂಡಿರುವ ಎರಡನೆಯ ಖಟ್ಲೆ. ಕೆಲವು ವರ್ಷಗಳ ಹಿಂದೆಯೂ ತನ್ನ ಮಾಜಿ ಸಿಬ್ಬಂದಿಗಳಲ್ಲೊಬ್ಬನಾದ ಗ್ಯಾರಿ ಮಿನ್ ಎನ್ನುವ ಚೀನೀಯ ಕಂಪೆನಿಯ ಸಂಶೋಧನೆಯ ವಿವರಗಳನ್ನು ಕದ್ದು ಸ್ವದೇಶಕ್ಕೆ ಸಾಗಿಸಿದ್ದ ಎಂದು ಖಟ್ಲೆ ಹೂಡಿತ್ತು. ತಪ್ಪಿತಸ್ಥನೆಂದು ಮಿನ್ ಒಪ್ಪಿಕೊಂಡು ಹದಿನೆಂಟು ತಿಂಗಳು ಜೈಲುವಾಸವನ್ನೂ ಅನುಭವಿಸಿದ್ದ. ಇದೀಗ ಕಂಪೆನಿಯ ಮತ್ತೊಬ್ಬ ಸಿಬ್ಬಂದಿ ಹಾನ್ ಮೆಂಗ್ ಎಂಬಾತ ಅಮೆರಿಕೆಯ ಡೆಲಾವೇರೆಯಲ್ಲಿರುವ ಸಂಶೋಧನಾಲಯದಿಂದ ಆರ್ಗಾನಿಕ್ ಎಲ್ಇಡಿಗಳ ಸಂಶೋಧನೆಯ ವಿವರಗಳನ್ನು ಕದ್ದು ಚೀನಾ ಮೂಲದ ಮತ್ತೊಂದು ಕಂಪೆನಿಗೆ ಮಾರಲು ಸಿದ್ಧನಾಗಿದ್ದನೆಂದು ಡುಪಾಂಟ್ ಆರೋಪಿಸಿದೆ. ಸಂಶೋಧನಾಲಯದಲ್ಲಿದ್ದ ಅವನ ಕಂಪ್ಯೂಟರಿಗೂ ಚೀನಾದ ಕಂಪೆನಿಗೂ ಕಳ್ಳ ಸಂಪರ್ಕವಿತ್ತೆಂದು ಡುಪಾಂಟ್ ಹೇಳಿಕೊಂಡಿದೆ. ಡುಪಾಂಟ್ನ ರಹಸ್ಯ ದಾಖಲೆಗಳಲ್ಲಿ ಹಲವು ಮೆಂಗ್ನ ಕಂಪ್ಯೂಟರ್ನಲ್ಲಿ ಪತ್ತೆಯಾಗಿದ್ದು, ಆತ ಚೀನಾದ ಪೀಕಿಂಗ್ ವಿಶ್ವವಿದ್ಯಾನಿಲಯದಲ್ಲಿ ತಾನು ಕೈಗೊಂಡಿರುವ ಸಂಶೋಧನೆಗಳಿಗೆ ಸ್ಪರ್ಧಿಯಾಗುವಂತಹ ಯೋಜನೆಯನ್ನು ನಿರೂಪಿಸುತ್ತಿದ್ದ ಎನ್ನುವುದು ಡುಪಾಂಟ್ನ ಆರೋಪಗಳಲ್ಲೊಂದು.

ಮೂರನೆಯ ಸುದ್ದಿ ಕಳ್ಳತನದ್ದಲ್ಲ, ಕೊಟ್ಟ ಮಾತಿಗೆ ತಪ್ಪಿ ನಡೆದದ್ದು. ಏಕಾಂಗಿಯಾಗಿ ಸಂಶೋಧನೆ ನಡೆಸುವ ಕಾಲ ಮರೆಯಾಗಿ ಎಷ್ಟೋ ಕಾಲವಾಯಿತು. ಈಗ ತಂಡಗಳ ಒಗ್ಗಟ್ಟಿನ ಪ್ರಯೋಗಗಳ ಕಾಲ. ದೇಶ, ವಿದೇಶಗಳಲ್ಲಿನ ವಿಜ್ಞಾನಿಗಳ ತಂಡಗಳು ಒಂದರೊಡನಿನ್ನೊಂದು ಸಹಕರಿಸಿ ಪ್ರಯೋಗಗಳನ್ನು ನಡೆಸುತ್ತವೆ. ಫಲಿತಾಂಶಗಳನ್ನು ಒಟ್ಟಾಗಿ ಪ್ರಕಟಿಸುತ್ತವೆ. ಯಾರೊಬ್ಬರೂ ಆ ಫಲಿತಾಂಶದಲ್ಲಿ ತಾನು ಮೇಲು ಎಂದೋ, ಮೊದಲಿಗನೆಂದೋ ಹೇಳುವುದೂ ತಪ್ಪಾಗುತ್ತದೆ. ಮನುಷ್ಯರ ಮಾನಸಿಕ ಚಟುವಟಿಕೆಗಳು ಮತ್ತು ಜೀನ್ಗಳ ನಡುವಣ ಸಂಬಂಧ ಕುರಿತೂ ಇಂತಹ ಒಂದು ಅಂತರ್ರಾಷ್ಟ್ರೀಯ ಪ್ರಯತ್ನ ನಡೆದಿದೆ. ಈ ಪ್ರಯತ್ನದಲ್ಲಿ ಜೊತೆಗೂಡಿದ ಎಲ್ಲರೂ ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಅಮೆರಿಕೆಯಲ್ಲಿರುವ ಡೇಟಬೇಸ್ ಒಂದರಲ್ಲಿ ಸಂಗ್ರಹಿಸುತ್ತಾರೆ. ಯಾರು ಬೇಕಾದರೂ ಆ ವಿವರಗಳ ವಿಶ್ಲೇಷಣೆ ಮಾಡಬಹುದು. ಆದರೆ ಅದಕ್ಕೆ ಮುನ್ನ ಕನಿಷ್ಟ ಒಂದು ವರ್ಷವಾದರೂ ಕಾಯಬೇಕು. ಅಮೆರಿಕೆಯ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನಿ ಲಾರಾ ಬೈರೂತ್ ತಮ್ಮ ಸಂಶೋಧನೆಗಳ ವಿವರಗಳನ್ನು ಈ ಡೇಟಬೇಸ್ನಲ್ಲಿ ದಾಖಲಿಸಿದ್ದರು. ಅಚ್ಚರಿ ಏನೆಂದರೆ ಅವರ ಸಂಶೋಧನೆಯ ವಿವರಗಳು ದಾಖಲಾಗಿ ಆರು ತಿಂಗಳಾಗುವುದರೊಳಗೇ ಯೇಲ್ ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರಜ್ಞರೊಬ್ಬರು ಅದರ ವಿಶ್ಲೇಷಣೆ ಮಾಡಿ ಪ್ರಬಂಧವೊಂದನ್ನು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ (ಪಿಎನ್ಎಎಸ್) ಪ್ರಕಟಿಸಿದ್ದಾರೆ. ಇದು ಸಹೋದ್ಯೋಗಿಗಳಿಗೆ ಮಾಡಿದ ವಿಶ್ವಾಸಾತ ಎಂದು ದೂರಿದ್ದಾರೆ.  ಪಿಎನ್ಎಎಸ್ ಪತ್ರಿಕೆ ಆ ಪ್ರಬಂಧವನ್ನು ಹಿಂಪಡೆದಿದೆ, ಅಂದರೆ ಅದು ಪ್ರಕಟವಾಗಲೇ ಇಲ್ಲ ಎಂದು ಪರಿಗಣಿಸುವಂತೆ ಸೂಚನೆಯನ್ನು ನೀಡಿದೆ.

ಈ ಎಲ್ಲ ವಿವಾದಗಳಿಂದಲೇ ಏನೋ, ಅಮೆರಿಕೆಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರಮುಖ ಪತ್ರಿಕೆಯಾದ ಪಿಎನ್ಎಎಸ್ ಅಕಾಡೆಮಿಯ ಸದಸ್ಯರುಗಳಿಗೆ ನೀಡಿದ್ದ ಕೆಲವು ಸವಲತ್ತುಗಳನ್ನು ಕಡಿಮೆ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಹಿಂದೆ ಅಕಾಡೆಮಿಯ ಸದಸ್ಯರುಗಳು ಶಿಫಾರಸು ಮಾಡಿದ ಹಾಗೂ ಬರೆದ ಪ್ರಬಂಧಗಳನ್ನು ಈಗಾಗಲೇ ಪರಾಮರ್ಶೆಗೊಳಗಾದವೆಂದು ಪರಿಗಣಿಸಿ, ಆದ್ಯತೆಯ ಮೇರೆಗೆ ಪ್ರಕಟಿಸಲಾಗುತ್ತಿತ್ತು. ಸದಸ್ಯರುಗಳ ಮಿತ್ರರುಗಳು ಪರಾಮರ್ಶೆಯ ಪ್ರಕ್ರಿಯೆಯನ್ನು ಮೀರಿ ಪ್ರಬಂಧಗಳನ್ನು ಪ್ರಕಟಿಸಲು ಸದಸ್ಯರುಗಳ ಈ ಸವಲತ್ತಿನ ದುರುಪಯೋಗ ಮಾಡುತ್ತಿದ್ದರೆಂದು ಪತ್ರಿಕೆ ಭಾವಿಸಿದೆ. ಇದರಿಂದಾಗಿ ವಿಶ್ವಾಸಾರ್ಹವಲ್ಲದ ಪ್ರಬಂಧಗಳೂ ಪ್ರಕಟವಾಗುತ್ತಿದ್ದು, ಅನಂತರ ಅವುಗಳನ್ನು ಹಿಂಪಡೆಯಬೇಕಾಗುತ್ತಿತ್ತೆಂದು ಪತ್ರಿಕೆ ಹೇಳಿಕೊಂಡಿದೆ.