ನಮ್ಮ ದೇಶದವನ್ನು ಬ್ರಿಟಿಷರ ಆಡಳಿತದಿಂದ ಬಿಡುಗಡೆ ಮಾಡಲು ನಡೆದ ದೊಡ್ಡ ಹೋರಾಟಕ್ಕೆ, ಅಂದರೆ  ಭಾರತೀಯ ಸ್ವಾತಂತ್ರ್ಯ ಸಮರಕ್ಕೆ ಕ್ರಾಂತಿಕಾರಿಗಳ ಕೊಡುಗೆ ದೊಡ್ಡದು. ಅಂತಹ ವೀರ ಕ್ರಾಂತಿಕಾರಿಗಳ  ನಿರ್ಮಾಣದಲ್ಲಿ ಬಂಗಾಳದ ಕೊಡುಗೆ ಇನ್ನೂ ದೊಡ್ಡದು.

ನಮ್ಮ ದೇಶಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಬಂದಿತು. ದೇಶವನ್ನು ಬಿಡುಗಡೆ ಮಾಡುವ ಪ್ರಯತ್ನ ಒಂದು ನೂರು ವರ್ಷಗಳಿಗೂ ಮೊದಲೇ ಪ್ರಾರಂಭವಾಗಿತ್ತು. ೧೮೫೭ರಲ್ಲಿ  ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ಬಳಿಕ ದೇಶದ ಹಲವು ಕಡೆಗಳಲ್ಲಿ ಅನೇಕ ಮಹಾಪುರುಷರು ಜನರ ಮಾನಸಿಕ ಜಾಡ್ಯವನ್ನು ತೊಲಗಿಸಲು ಮುಂದಾದರು. ಬಂಗಾಳದಲ್ಲಿ ಶ್ರೀ ರಾಮಕೃಷ್ಣಪರಮಹಂಸರು ಸ್ವಾಮಿವಿವೇಕಾನಂದರು ಮತ್ತು ರಾಜಾರಾಮ ಮೊಹನರಾಯ್ ಮೊದಲಾದವರು ಜನರ ಮೇಲೆ ವಿಶ್ವಾಸ ಪ್ರಭಾವ ಬೀರಿದರು.  ಅವರ ಬೋಧನೆಗಳಿಂದಾಗಿ ನಮ್ಮ ಜನರು ಸ್ವಾಭಿಮಾನಿಗಳಾದರು. ಗುಲಾಮಗಿರಿಯಲ್ಲಿದ್ದ ತಮ್ಮ ಸ್ಥಿತಿಯನ್ನು ಗುರುತಿಸಿಕೊಂಡರು.  ಅವರಲ್ಲಿಯೇ ದೇಶಭಕ್ತಿ ಉಕ್ಕಿತು.

ರಾಜರಾಮ ಮೋಹನರಾಯ ಅವರು ಬ್ರಹ್ಮಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಮೂಲಕ ಜನರ  ಅಜ್ಞಾನವನ್ನು ತೊಲಗಿಸಲು ಹಾಗೂ ಸಮಾಜಕ್ಕೆ ಅಂಟಿಕೊಂಡಿದ್ದ ಕೆಲವು ದುಷ್ಟ ಪದ್ಧತಿಗಳ ಕಳಂಕವನ್ನು ತೊಳೆಯಲು ಬಹುವಾಗಿ ಶ್ರಮಿಸಿದರು. ಬ್ರಹ್ಮಸಮಾಜದಲ್ಲಿ ರಾಜನಾರಾಯಣ ಭೋಸ್ ಎಂಬ ನಾಯಕರೊಬ್ಬರಿದ್ದರು. ಬಂಗಾಳದಲ್ಲಿ ಕ್ರಾಂತಿಮಾರ್ಗವನ್ನು ಮೊದಲು ಪ್ರಚಾರ ಮಾಡಿದವರು ರಾಜನಾರಾಯಣ ಭೋಸ್. ಕ್ರಾಂತಿಮಾರ್ಗವನ್ನು ಅನುಸರಿಸಿದವರು, ಸದೇಧ ಸ್ವಾತಂತ್ರ್ಯಕ್ಕಾಗಿ ಹಿಂಸೆಯನ್ನು ಬಳಸುವುದು ತಪ್ಪಲ್ಲ ಎಂದು ನಂಬಿದ್ದರು.  ಬಾಂಬ್ ಹಾಕುವುದು, ತೀರ ಕ್ರೂರವಾಗಿ ಅಥವಾ ಅನ್ಯಾಯವಾಗಿ ನಡೆದುಕೊಂಡವರನ್ನು ಕೊಲ್ಲುವುದು ಇಂತಹ ಕೆಲಸಗಳನ್ನು ಕೈಗೊಂಡು ತಾವೂ ಅಪಾಯವನ್ನು ಎದುರಿಸುತ್ತಿದ್ದರು. ಅವರನ್ನು ಬಂಗಾಳದ ಕ್ರಾಂತಿಯ ಜನಕ ಎಂದು ಕರೆಯುತ್ತಾರೆ.

ಅರವಿಂದರ ಅಜ್ಜ:

ರಾಜನಾರಾಯಣ ಬೋಸ್ ರಾಜರಾಮ ಮೋಹನಯರಾಯರಷ್ಟೆ ಕೀರ್ತಿವಂತರು. ಮಹರ್ಷಿ ಅರವಿಂದ ಘೋಷರು ರಾಜನಾರಾಯಣ ಬೋಸ್ ಅವರ ಮೊಮ್ಮಗ (ಅಂದರೆ ಮಗಳ ಮಗ). ಅರವಿಂದರು ಆಶ್ರಮ ಕಟ್ಟಿಕೊಂಡು ಅಧ್ಯಾತ್ಮಿಕ ಸಾಧನೆಗೆ ತೊಡಗುವ ಮುಂಚೆ ದೊಡ್ಡ ಕ್ರಾಂತಿಕಾರಿಯಾಗಿದ್ದರು.  ಅರವಿಂದರ ತಮ್ಮ ಬಾರೀಂದ್ರಕುಮಾರ ಘೊಷ್ ಕೂಡಾ ಕ್ರಾಂತಿಕಾರಿ.ಅವರು ಮತ್ತು ಸ್ವಾಮಿ ವಿವೇಕಾನಂದರ ತಮ್ಮ ಭೂಪೇಂದ್ರನಾಥದತ್ತರು “ಯುಗಾಂತರ” ಎಂಬ ಪತ್ರಿಕೆಯನ್ನು ಹೊರಡಿಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಯುದ್ಧದ ಕಹಳೆಯನ್ನು ಊದಿದರು. ಆ ದಿನಗಳಲ್ಲಿ ಬ್ರಿಟಿಷರಿಗೆ “ಯುಗಾಂತರ: ಎಂದರ ಎಲ್ಲಿಲ್ಲದ ದ್ವೇಷ ಮತ್ತು ಭಯ. ಏಕೆಂದರೆ ಅದನ್ನು ಓದಿದರೆ ಎಂತಹ ಹೇಡಿಯಾದರೂ ದೇಶಪ್ರೇಮಿಯಾಗಿ “ವಂದೇಮಾತರಂ” ಎಂದು ಘೋಷಿಸಿ ಕೈಯಲ್ಲಿ ಬಂದೂಕು ಹಿಡಿದು ಹೋರಾಟಕ್ಕೆ ಇಳಿಯುತ್ತಿದ್ದ.

ರಾಜನಾರಾಯಣ ಬೋಸರಿಗೆ ಅಭಯಚರಣ ಬೋಸ್ ಎಂಬ ಒಬ್ಬ ತಮ್ಮ ಇದ್ದರು.ಅವರು ಮಿಡ್ನಾಪೂರ (ಮೇದಿನಿಪುರ) ಕೋಲಿಜಿಯೆಟ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಅಭಯ ಚರಣರಿಗೆ ಐದು ಮಂದಿ ಗಂಡು ಮಕ್ಕಳು ಮತ್ತು ಐದು ಮಂದಿ ಹೆಣ್ಣು ಮಕ್ಕಳು. ಐವರು ಗಂಡು ಮಕ್ಕಳಲ್ಲಿ ಒಬ್ಬರಾದ ಸತ್ಯೇಂದ್ರನಾಥ ಬೋಸ ೧೮೮೨ರ ಜುಲೈ೩೦ರಂದು ಹುಟ್ಟಿದರು.

ದೊಡ್ಡಪ್ಪನ ದಾರಿ :

ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎಂಬ ಮಾತು ಸುಳ್ಳೂ. ಧೀರರ ಮನೆತನದಲ್ಲಿ ಹುಟ್ಟಿದ ಸತ್ಯೇನ್ ಧೀರ ಮಾತ್ರವಲ್ಲ ವೀರನೂ ಆಗಿ ಬೆಳೇದ. ಮನೆಯ ವಾತಾವರಣ ಆತನ ಧೀಮಂತ ಸ್ವಭಾವವನ್ನು ಬೆಳಗಿಸುವಂತೆಯೇ ಇತ್ತು. ಬುದ್ಧಿ ತಿಳಿದಾಗಿನಿಂದ ಆತನ ಕಿವಿಗೆ ಬೀಳುತ್ತಿದ್ದುದು ವೀರಪುರುಷನ ಕಥೆಗಳು, ಮಹಾಪುರುಷರ ತ್ಯಾಗ, ಬಲಿದಾನಗಳು ವೃತಾಂತಗಳು, ಅವುಗಳೊಂದಿಗೆ  ಕಾಣುತ್ತಿದ್ದುದು ದೊಡ್ಡಪ್ಪ ರಾಜನಾರಾಯಣರು ಮತ್ತು ಅವರ ಸಹಕಾರಿಗಳ ಸಾಹಸ ಕೆಲಸಗಳು. ಅವರು ದೊಡ್ಡಧ್ಯೇಯ ಸಾಧನೆಗಾಗಿ ಹೊರಟಿದ್ದಾರೆಂಬುವುದು ಆತನಿಗೆ ಅಗಲೇ ಗೊತ್ತಿತ್ತು.  ಬುದ್ಧಿ ಬೆಳೆದಂತೆ ತಾನೂ ಅವರ ದಾರಿ ಹಿಡಿದು ಅವರೆಲ್ಲರಿಗಿಂತಲೂ ಮಿಗಿಲಾಗಿ ಭಾರ‍ತ ಮಾತೆಯನ್ನು ಪರಕೀಯರ ಬಂಧನದಿಂದ ಬಿಡಿಸಬೇಕೆಂಬ ಆಕಾಂಕ್ಷೆ ಬಲವಾತಗೊಡಗಿತು. ದೊಡ್ಡಣ್ಣ ಜ್ಞಾನೇಂದ್ರನಾಥ ಆಗಲೇ ದೊಡ್ಡಪ್ಪನ ಮಾರ್ಗದರ್ಶನದಲ್ಲಿ ಸಾಗಿ ಕ್ರಾಂತಿಕಾರಿಯಾಗಿ ಬಿಟ್ಟಿದರು. ಸತ್ಯನ್ ಗೆ ಅಣ್ಣನೇ ಮೊದಲಗುರು.

ಸತ್ಯೇಂದ್ರರದು ವಿದ್ಯಾವಂತರ ಮನೆತನ. ಸತ್ಯೇಂದ್ರರಲ್ಲಿ ದೇಶಭಕ್ತಿಯಷ್ಟೆ ವಿದ್ಯೆಯಲ್ಲಿ ಆಸಕ್ತಿಯೂ ಬಲವಾಗಿತ್ತು. ಸತ್ಯೇಂದ್ರರು  ಆರು ವರ್ಷಗಳಿರುವಾಗಲೇ ಅಂದರೆ ೧೮೮೮ರಲ್ಲಿ ತನ್ನ ತಂದೆಯೇ ಮುಖ್ಯೋಪಾಧ್ಯಾಯರಾಗಿದ್ದ ಮಿಡ್ನಾಪೂರ ಕೊಲಿಜಯೆಟ್ ಹೈಸ್ಕೂಲ್ ಸೇರಿದರು.

ತರಗತಿಯಲ್ಲಿ ಸತ್ಯನ್ ಮೊದಲಿಗರಾಗಿದ್ದರು. ೧೮೯೭ರಲ್ಲಿ ಎಂಟ್ರೇನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ  ಉತ್ತೀರ್ಣರಾದರು. ೧೮೯೯ರಲ್ಲಿ “ಫಸ್ಟ ಆರ್ಟ್ಸ” ಪರೀಕ್ಷೆಯಲ್ಲಿಯೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಪದವಿಧರರಾಗುವ ಆಸೆಯಿಂದ ಕಲ್ಕತ್ತದ ಸಿಟಿ ಕಾಲೇಜ್ ಸೇರಿದರು.

ಆದರೆ ದುರದೃಷ್ಟದಿಂದ ಸತ್ಯೇನ್ರ ಆಶೆ ಈಡೇರಲಿಲ್ಲ.  ಅವರ ಅರೋಗ್ಯ ಕೆಟ್ಟಿತ್ತು. ಕಾಲೇಜಿಗೆ ಹೋದರೂ ತೀವ್ರ ಅನಾರೋಗ್ಯದಿಂದ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಅನಂತರ ಅವರಿಗೆ ಪುನಃ ಪರೀಕ್ಷೆಗೆ ಕುಳಿತು ಯತ್ನಿಸಲು ಮನಸ್ಸಾಗಲಿಲ್ಲ. ಕಲಿತ್ತಿದ್ದು ಸಾಕು,ಎಲ್ಲಿಯಾದರೂ ಕೆಲಸಕ್ಕೆ ಸೇರಿ ಅದರ ಜೊತೆಯಲ್ಲಿಯೇ ದೇಶ ಸೇವೆ ಮಾಡೋಣ ಎಂದು ಯೋಚಿಸಿದರು.  ಅವರಿಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಒಂದು ಕೆಲಸವೂ ಸಿಕ್ಕಿತು. ಸತ್ಯೇಂದ್ರರು ಬುದ್ಧಿವಂತರು, ಪ್ರಮಾಣಿಕರು, ಚೆನ್ನಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ಕಚೇರಿಯಲ್ಲಿ ಬಹುಬೇಗ ಮೇಲಿನವರ ಹಾಗೂ ಸಹದ್ಯೋಗಿಗಳ ಮೆಚ್ಚಿಗೆಗೆ ಪಾತ್ರರಾದರು.

ಇಪ್ಪತ್ತು ವರ್ಷದ ಯುವಕರಾಗುವಷ್ಟರಲ್ಲಿ ಸತ್ಯೇನ್ ಬಹಳಷ್ಟು ವಿಷಯಗಳನ್ನು ತಿಳೀದುಕೊಂಡಿದ್ದರು. ಅವರು ಎಷ್ಟೊಂದು ವಿಷಯಗಳನ್ನು ತಿಳಿದುಕೊಂಡಿದ್ದರು ಎಂದರೆ ಅವರು ಪದವೀಧರರಲ್ಲ ಎಂದು ಯಾರು ನಂಬುವಂತೆಯೇ ಇರಲಿಲ್ಲ. ಸ್ವಭಾವತ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಅವರದು. ಚುರುಕಾದ ಬುದ್ಧಿಯಂತೂ ಹುಟ್ಟುವಾಗಲೇ ಬಂದಿತ್ತು. ಇನ್ನೇನಾಗಬೇಕು? ಕೆಲಸ ಮಾಡುತ್ತಿದ್ದ ಕಡೆ ಮೇಲಿನ ಅಧಿಕಾರಿಗಳ ವಿಶ್ವಾಸ ಗಳಿಸಿದ್ದ ಸತ್ಯೇಂದ್ರರು ಮೇಲಿನ ಕೆಲಸವನ್ನು ದೊರಕಿಸಿಕೊಳ್ಳಬೇಕು. ಸಂಬಳ ಹೆಚ್ಚು ಮಾಡಿಕೊಳ್ಳಬೇಕು, ಎಂಬ ಯೋಚನೆಗಳನ್ನು ಮಾಡಲೇ ಇಲ್ಲ. ಇರುವ ಎಲ್ಲ ಶಕ್ತಿಗಳನ್ನು ದೇಶಕ್ಕೋಸ್ಕರವೇ ಉಪಯೋಗಿಸಬೇಕು ಎಂಬ ಬಯಕೆಯೊಂದೇ ಸತ್ಯೇಂದ್ರರದು.

ಮಿಡ್ನಾಪೂರದಲ್ಲಿ ಯುಗಾಂತರ:

೧೯೦೨ರಲ್ಲಿ ಜತೀನ್ ಬ್ಯಾನರ್ಜಿ ಎಂಬುವರು (ಮುಂದೆ ಇವರು ಸನ್ಯಾಸಿಯಾಗಿ ಸ್ವಾಮಿ ನಿರಾಲಂಬ ಎಂದು ಹೆಸರಾದರು) ಲಕ್ಕತ್ತ ಮತ್ತು ಮಿಡ್ನಾಪೂರದಲ್ಲಿ ರಹಸ್ಯ ಕ್ರಾಂತಿಕಾರಿ ಸಂಸ್ಥೆಗಳನ್ನು ಆರಂಭಿಸಿದರು. ಆಗ ಬರೋಡಾದಲ್ಲಿದ್ದ ಅರವಿಂದ ಘೋಷರು ಅವರನ್ನು ಅಲ್ಲಿಗೆ ಕಳಿಸಿದ್ದರು.  ಅರವಿಂದರು ತಮ್ಮ ಬಾರೀಂದ್ರ ಮತ್ತು ಸ್ವಾಮಿ ವಿವೇಕಾನಂದರ ತಮ್ಮಭೂಫೇಂದ್ರ ಆರಂಭಿಸಿದ್ದ “ಯುಗಾಂತರ:” ಪತ್ರಿಕೆಯ ಹೆಸರನ್ನೇ ಮುಂದೆ ಈ ಸಂಸ್ಥೆಗಳಿಗೆ ಇಡಲಾಯಿತು. “ಯುಗಾಂತರ” ಮಾತ್ರವಲ್ಲದೇ ಅನುಶೀಲನ ಸಮಿತಿ, ಭ್ರಾತೋ ಸಮಿತಿ, ಸೆರ್ಕ್ಯುಲರ್ ವಿರೋಧಿ ಸಮಿತಿ ಮೊದಲಾದ ಇತರೆ ಹಲವು ಸಂಸ್ಥೆಗಳು ಆಗ ನಾಡಿನ ತರುಣದಲ್ಲಿ ದೇಶಭಕ್ತಿಯ ಅಗ್ನೀಯನ್ನು ಪ್ರಜ್ವಲಿಸಿ ಅವರು ಶಸ್ತ್ರ ಹಿಡಿದು ಹೋರಾಡಲು ಆಣಿಗೊಳಿಸುತ್ತಿದ್ದವು.

ಮಿಡ್ನಾಪೂರದಲ್ಲಿ ಕ್ರಾಂತಿಕಾರಿ ಚಟುವಟಿಕೆ ಆರಂಭವಾಯಿತೆಂದರೆ ಅದರ ಆಧಾರಶಕ್ತಿ, ಸತ್ಯೇನರ ದೊಡ್ಡಪ್ಪ ರಾಜನಾರಾಯಣರೇ. “ಯುಗಾಂತರ”ಕ್ಕೆ ಅವರೇ ಅಲ್ಲಿ ಆಶ್ರಯ ನೀಡಿದರು. ತಮ್ಮ ಬಳಿ ಬಂದವರ ಸ್ವಭಾವವನ್ನೂ ಸಾಮರ್ಥ್ಯವನ್ನೂ ಬೇಗನೇ ತಿಳಿದುಕೊಳ್ಳುತ್ತಿದ್ದರು. ಯಾಔ ಕೆಲಸಕ್ಕಾದರೂ ಸಮರ್ಥರಾದವರನ್ನು ಆರಿಸುವ ಶಕ್ತಿ ಅವರಿಗಿತ್ತು. ಕ್ರಾಂತಿಯ ಕೆಲಸಕ್ಕೆ ಅವರು ಒಳ್ಳೆಯ ಹುಡುಗರನ್ನೇ ಆರಿಸುತ್ತಿದ್ದರು.  ಅವರ ಮನಸ್ಸಿನಲ್ಲಿ ಧ್ಯೇಯದ ಬೀಜವನ್ನು ಬಿತ್ತುತ್ತಿದ್ದರು. ನಿಷ್ಠೆಯನ್ನು ಬೆಳೆಸುತ್ತಿದ್ದರು. ದುರ್ಗುಣಗಳು ಬೆಳೆದು ಅವರನ್ನು ದಾರಿ ತಪ್ಪಿಸದಂತೆ ಎಚ್ಚರಿಕೆಯಿಂದ ಕಾಯುತ್ತಿದ್ದರು.

ಸರಿ, ಮಿಡ್ನಾಪೂರದಲ್ಲಿ ರಾಜನಾರಾಯಣರ ಹಿರಿತನದಲ್ಲಿ “ಯುಗಾಂತರ”ದ ಶಾಖೆ ಆರಂಭವಾಯಿತು. ಅವರ  ಪ್ರೀತಿಯ ಶಿಷ್ಯ ಹೇಮಚಂದ್ರದಾಸ್ ಕನುಂಗೋ ಈ ಗುಂಪಿನ ನಾಯಕನಾದ. ಸತ್ಯೇನ್ ಅವರ ನೆಚ್ಚಿನ ಸಹಕಾರಿಯಾದರು. ಇನ್ನೇನು! ಕೆಲಸ ಬಿರುಸಿನಿಂದ ಮೊದಲಾಯಿತು. ಯುಗಾಂತರದ ಬಳಗ ಬೇಗ ಬೇಗನೇ ಬೆಳೆಯತೊಡಗಿತು.

ಕ್ರಾಂತಿಯ ಕಲ್ಪನೆ :

ಸ್ವಾತಂತ್ರ್ಯ ಹೋರಾಟ ಎಂದರೇನು? ಸುಮ್ಮನೆ ಬ್ರಿಟಿಷರನ್ನು ಓಡಿಸಬೇಕು ಎಂಬ ಭಾವನೆಯನ್ನು ನಾಲ್ಕಾರು ಹುಡುಗರಲ್ಲಿ ಬೆಳೆಸಿ ಅವರಿಂದ ದಂಗೆ ಮಾಡಿಸಿದರೆ ಸಾಕೇ? ಎಲ್ಲದಕ್ಕಿಂತ ಮೊದಲು ಅವರಿಗೆ ನಮ್ಮ ದೇಶ ವೆಂದರೇನು? ಎಂಬುವುದರ ಕುರಿತು ಸರಿಯಾದ ಕಲ್ಪನೆ ಮೂಡಿಸಬೇಕು. ನಮ್ಮ ದೇಶ ಎಷ್ಟು ದೊಡ್ಡದು, ಅದರ ಪರಿಸರ ಹೇಗಿದೆ, ಇಲ್ಲಿನ ಸಮಾಜದ ಸ್ಥಿತಿಗತಿಗಳೇನು ಎಂಬುವುದರ ವಿವರಗಳು ಅವರಿಗೆ ತಿಳಿದಿರಬೇಕು. ಹಾಗಿದ್ದರೆ ಮಾತ್ರ ದೇಶದ ಮೇಲೆ ಪ್ರೀತಿ ಹಾಗೂ ಕೆಲಸದಲ್ಲಿ ಶ್ರದ್ದೇ ಬೆಳೆಯುತ್ತದೆ. ಅದರೊಂದಿಗೆ ಸಮಕಾಲೀನ ರಾಜಕೀಯ ಪರಿಸ್ಥಿತಿಯೂ ಗೊತ್ತಿರಬೇಕು.

ಯುಗಾಂತರವು ಇದೆಲ್ಲವನ್ನೂ ಅರ್ಥಮಾಡಿಕೊಂಡಿತು. ತರುಣರು ದೇಶಸೇವೆಗೆ ಮುಡಿಪಾಗಲು ಅಗತ್ಯವಾದ ಶಿಕ್ಷಣವನ್ನು ಕೊಡಲು ವ್ಯವಸ್ಥೆ ಮಾಡಿತ್ತು. ಈ ದೇಶದ ಚರಿತ್ರೆ, ಸಂಸ್ಕೃತಿ ಇವನ್ನು ಅವರಿಗೆ ಪರಿಚಯ ಮಾಡಿಕೊಡುತ್ತಿತ್ತು.  ಭಗವದ್ಗೀತೆಯನ್ನ ಪರಿಚಯ ಮಾಡಿಕೊಡುತ್ತಿತ್ತು.  ವಿವೇಕಾನಂದರು, ಬಂಕಿಮಚಂದ್ರರು, ಇಂತಹ ಧೀಮಂತರ , ದೇಶಭಕ್ತರ ಬರಹಗಳನ್ನು ಈತರುಣರು ಓದುವುದಕ್ಕೆ, ಓದಿದುದನ್ನು ಚರ್ಚೆ ಮಾಡುವುದಕ್ಕೆ ಅವಕಾಶಗಳನ್ನು ಕಲ್ಪಿಸಿತ್ತು. ಜಗತ್ತಿನ ಚರಿತ್ರೆಯಲ್ಲಿ ಗುಲಾಮಗಿರಿಯನ್ನು ಅನುಭವಿಸಿದ ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯಕ್ಕಗಿ ಹೇಗೆ ಹೋರಾಡಿದವು ಎಂಬುವುದನ್ನು ಆ ರಾಷ್ಟ್ರಗಳ ಚರಿತ್ರೆಯನ್ನು ಅಭ್ಯಾಸ ಮಾಡಿ ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಿತ್ತು.

ಬಂಕಿಮ ಚಂದ್ರರು ಬರೆದಿದ್ದ “ಆನಂದಮಠ” ಕಾದಂಬರಿಯೆಂದರೆ ಕ್ರಾಂತಿಕಾರಿಗಳಿಗೆ ಬಹು ಪ್ರೀತಿ. ಅದರಲ್ಲಿದ್ದ “ವಂದೇ ಮಾತರಂ” ಅವರ ನೆಚ್ಚಿನ ಗೀತೆ. “ವಂದೇ  ಮಾತರಂ” ಶಬ್ದ ಅವರ ಪರಮ ಪ್ರೀಯ ಘೋಷಣೆ.

 

ಸತ್ಯೆಂದ್ರನಾಥ-ಯುವಕ್ರಾಂತಿಕಾರಿಗಳೊಂದಿಗೆ ಚರ್ಚೆ:

ವಿಭಜನೆಯ ಕುತಂತ್ರ :

ಇಷ್ಟು ಹೊತ್ತಿಗೆ ಬಂಗಾಳದ ಜನಕ್ಕೆ ಸಿಡಿಲೆರಗುವಂತಹ ಕೆಲಸವೊಂದನ್ನು ಬ್ರಿಟಿಷರ ಆಳರಸರು ಮಾಡಿದರು. ಬಂಗಾಳ ಬಹುದೊಡ್ಡ ಪ್ರಾಂತ. ಅದರ ಪಶ್ಚಿಮ ಭಾಗದಲ್ಲಿ ಹಿಂದೂಗಳು, ಪೂರ್ವಭಾಗದಲ್ಲಿ ಮುಸಲ್ಮಾನರೂ ಹೆಚ್ಚು ಸಂಖ್ಯೆಯಲ್ಲಿದ್ದರು. ಫಲವತ್ತಾದ ಭೂಮಿ, ಸಂಪದ್ಭರಿತವಾದ ನಾಡು. ದಿನಕಳೆದಂತೆ ಅದರ ಮೂಲೆ ಮೂಲೆಗಳಿಂದಲೂ ದೇಶಭಕ್ತರು “ವಂದೇ ಮಾತರಂ” ಎಂದು ಗರ್ಜಿಸುತ್ತಾ ಜೀವಂತ ಫಿರಂಗಿಗಳಂತೆ ತಮ್ಮ ಸಾಮ್ರಾಜ್ಯದ ಕೋಟೆಯ ಮೆಲೆ ಎರಗುತ್ತಿದ್ದುದು ಬ್ರಿಟಿಷರಿಗೆ ದೊಡ್ಡ ತಲೆನೋವಾಗಿತ್ತು.

೧೯೦೫ರಲ್ಲಿ ಬ್ರಿಟಿಷ್ ಪ್ರಭುಗಳು ಬಂಗಾಳವನ್ನು ಎರಡು ತುಂಡು ಮಾಡಿದರು. ಜನರನ್ನು ಧರ್ಮದ ಹೆಸರಿನಲ್ಲಿ ಒಡೆದು ಸ್ವಾತಂತ್ರ್ಯ ಸಮರವನ್ನು ವಿಫಲಗೊಳಿಸುವುದೇ ಇದರ ಹಿಂದಿನ ಉದ್ದೇಶವೆಂಬುವುದು ಬಂಗಾಳಿಗಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಗೊತ್ತಾಯಿತು. ಭಾರತೀಯರೆಲ್ಲರೂ ಬಂಗಾಳದ ವಿಭಜನೆಯನ್ನು ಪ್ರಬಲವಾಗಿ ವಿರೋಧಿಸಿದರು. ಅದರ ವಿರುದ್ಧ ಎಲ್ಲೆಡೆ ಸತ್ಯಾಗ್ರಹ ಮೆರವಣಿಗೆ ಹರತಾಳಗಳನ್ನು ಮಾಡಿದರು. ಪೋಲಿಸರ ಲಾಠಿಯ  ಏಟು ತಿಂದರು, ಸೆರೆಮನೆಗೆ ಹೋದರು, ಕೆಲವರು ಪ್ರಾಣವನ್ನೂ ಸಹ ಅರ್ಪಿಸಿದರು.

೧೯೦೫ರ ಬಂಗಾಳ ವಿಭಜನಾ ವಿರೊಧಿ ಅಂದೋಲನವು ಗುಪ್ತ ಕ್ರಾಂತಿಕಾರಿ ಚಟುವಟಿಕೆಗಳಿಗೆ ಭಾರೀ ಪ್ರೋತ್ಸಾಹ ನೀಡಿತು. “ಯುಗಾಂತರ”, “ಅನುಶೀಲನ ಸಮಿತಿ” ಮೊದಲಾದ ಸಂಘನೆಗಳು ಬೇರುಗಳೂ ಎಲ್ಲ ಕಡೆಗಳಲ್ಲಿಯೂ ಹರಡಿದವು. ಹೇಮಚಂದ್ರರ ಮತ್ತು ಸತ್ಯೇಂದ್ರರ ಶ್ರಮದಿಂದ ಮಿಡ್ನಾಪೂರ ಗುಂಪು ಬಹಳ ದೊಡ್ಡದಾಗಿಯೂ ಸಮರ್ಥವಾಗಿಯೂ ಬೆಳೇದಿತ್ತು.  ಅವರು ಕೈತೋರಿಸಿದರೆ ಬೆಂಕಿಯ  ಮೇಲೆ ಬೇಕಾದರೂ ನೆಗೆಯಲು ತುದಿಗಾಲ ಮೇಲೆ ನಿಂತಿದ್ದ ಸಾಹಸೀ ತರುಣರ ತಂಡವೊಂದು ತಯಾರಾಗಿತ್ತು.

ದೇಶಭಕ್ತಿಯ ಅಂಗಡಿ ದೇಶಭಕ್ತರ ಕಾರ್ಖಾನೆ:

ದೇಶ ಕಾರ್ಯಕ್ಕೆ ಹೊಸಬರನ್ನು ಆಕರ್ಷಿಸಲು ಸತ್ಯೇನ್ ತನ್ನದೇ ಅದ ಉಪಾಯಗಳನ್ನು ಹುಡುಕತೊಡಗಿದರು.ಕೆಲವು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು, ಛಾತ್ರ ಭಂಡಾರ: ಎಂಬ ಸಂಸ್ಥೆಯೊಂದನ್ನು ಆರಂಭಿಸಿದರು.  “ಛಾತ್ರ ಭಂಡಾರ” ಸ್ವದೇಶಿ ವಸ್ತುಗಳ ಮಾರಾಟದ ಮಳಿಗೆ. ಅದನ್ನು ನಡೆಸುತ್ತಿದ್ದವರು ಛಾತ್ರರು. ಅಂದರೆ ವಿದ್ಯಾರ್ಥಿಗಳು. ಇದಕ್ಕಿಂತ ಮುಖ್ಯವಾಗಿ ಅದು ದೇಶವಿಮೋಚನೆಯ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಆರಿಸುವ ಕೇಂದ್ರವಾಗಿತ್ತು. ಅಲ್ಲಿಗೆ ಹೆಚ್ಚಾಗಿ ವಿದ್ಯಾರ್ಥಿಗಳು ಹಾಗೂ ತರುಣರು ಬರುತ್ತಿದ್ದರು. ಅವರೊಂದಿಗೆ ಸ್ನೇಹ ಬೆಳೆಸಿ ಕ್ರಮೇಣ ಅವರಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸಿ ಅವರಿಗೆ ಕ್ರಾಂತಿಯ ದೀಕ್ಷೆಯನ್ನು ಕೊಡಿಸುವ ಕೆಲಸವನ್ನು ಛಾತ್ರ ಬಂಡಾರದ ಕಾರ್ಯಕರ್ತರು ಮಾಡುತ್ತಿದ್ದರು.

ಛಾತ್ರಭಂಡಾರದ ಎರಡನೇ ಹಂತವಾಗಿ ಸತ್ಯೇನ್ ಸಣ್ಣ ಕೈಮಗ್ಗದ ಕಾರ್ಖಾನೆಯೊಂದನ್ನು ಆರಂಭಿಸಿದರು. ಛಾತ್ರ ಬಂಡಾರದಲ್ಲಿ ಆಯ್ಕೆಯಾದ ತರುಣರಿಗೆ ಇಲ್ಲಿ ಕೆಲಸ ಕೊಡಲಾಗುತ್ತಿತ್ತು. ಅಂದರೆ ದೆಶದ ಬಿಡುಗಡೆಗಾಗಿಯೇ ಬಾಳುವ ವ್ರತತೊಟ್ಟವರಿಗೆ ಅದು ನೆಲೆಯಾಯಿತು. ಹೀಗೆ ಸತ್ಯೇಂದ್ರರ ಅಂಗಡಿಯಲ್ಲಿ ಸಿಗುತ್ತಿದ್ದ ಅಮೂಲ್ಯ ವಸ್ತು ದೇಶಭಕ್ತಿ. ಅವರ ಕಾರ್ಖಾನೆಯಲ್ಲಿ ತಯ್ಯಾರಾಗುತ್ತಿದ್ದ ಅತ್ಯಮೂಲ್ಯ ವಸ್ತು ಎಂದರೆ ವೀರಕ್ರಾಂತಿಕಾರಿಗಳು.

ಇಂತಹ ವೀರತರುಣರಲ್ಲಿ ಒಬ್ಬ ಖುದೀರಾಮ ಬೋಸ್, ಅವರು ಕಿಂಗ್ಸ ಫರ್ಡ ಎಂಬ ದುಷ್ಟ ಬ್ರಿಟಿಷ ನ್ಯಾಯಾಧಿಕಾರಿಯನ್ನು ಬಾಂಬೆಸೆದು ಕೊಲ್ಲಲ್ಲು ಯತ್ನಿಸಿದ. ಆ  ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಬಾಂಬ್ ಹೊಡೆತದಂತಹ ಅಘಾತವುಯಂಟು ಮಾಡಿದ. ತಾನು ಧೈರ್ಯದಿಂದ ನೇಣುಗಂಬವನ್ನೇರಿ *೧೯೦೮) ಅಮರನಾದ. ಈ ಖುದೀರಾಮ ಬೋಸ ಸತ್ಯೇಂದ್ರರ ಶಿಷ್ಯ. ಛಾತ್ರಭಂಡಾರದ ಮೂಲಕವೇ ಅವನನ್ನು ಆರಿಸಿ  ಕೈಮಗ್ಗದ ಕಾರ್ಖಾನೆಯಲ್ಲಿ ನೇಮಕ ಮಾಡಲಾಗಿತ್ತು.

ಮಿಡ್ನಾಪೂರ ವಸ್ತು ಪ್ರದರ್ಶನ:

೧೯೦೬ರಲ್ಲಿ ಮಿಡ್ನಾಪೂರದಲ್ಲಿ ಕೃಷಿ ಹಾಗೂ ಕೈಗಾರಿಕ ವಸ್ತು ಪ್ರದರ್ಶನವೊಂದನ್ನು ಬ್ರಿಟಿಷ್ ಸರಕಾರವು ಏರ್ಪಡಿಸಿತ್ತು. ಬ್ರಿಟಿಷ್ ಪ್ರಭುಗಳು ಭಾರತೀಯರಿಗೆ ಏನೂ ಅನ್ಯಾಯ ಮಾಡುತ್ತಿಲ್ಲ. ಭಾರತೀಯರು ಮುಂದೆ ಬರಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಭಾವನೆ ಹುಟ್ಟಿಸುವಂತಹ ಚಿತ್ರಗಳು ಮತ್ತು ಬೊಂಬೆಗಳನ್ನು ಅಲ್ಲಿ ಪ್ರದರ್ಶಿಸಿದ್ದರು.

ಅಧಿಕಾರಿಗಳಿಗೆ ಸತ್ಯೆಂದ್ರರ ನಿಜವಾದ ನಿಲುವು ತಿಳಿದಿರಲಿಲ್ಲ. ಸತ್ಯೆಂದ್ರರ ಕಾರ್ಖಾನೆಗೂ ಅದರಲ್ಲಿ ಭಾಗವಿಸಲು ಕರೆ ಬಂತು. ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ದೃಷ್ಟಿಯಿಂದ ಸತ್ಯೇನ್ ಆ ಕರೆಯನ್ನು ಒಪ್ಪಿಕೊಂಡರು. ಅವರ ಯೋಗ್ಯತೆಯನ್ನು ಅರಿತುಕೊಂಡಿದ್ದ ಪ್ರದರ್ಶನದ ವ್ಯವಸ್ಥಾಪಕರು ಅವರನ್ನು ವಸ್ತು ಪ್ರದರ್ಶನದ ಸಹಾಯಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು.

ಸಹಾಯಕ ಕಾರ್ಯದರ್ಶಿಯ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಸತ್ಯೇನ್ ಮೇಲಿನವರ ಮೆಚ್ಚುಗೆಗೆ ಪಾತ್ರರಾದರು. ಅದರೊಂದಿಗೆ ಜನರಲ್ಲಿ ಸ್ವಾಭಿಮಾನ ಕೆರಳಿಸುವಂತಹ ಇನ್ನೊಂದು ಕೆಲಸವನ್ನೂ ಅಷ್ಟೇ ಕೌಶಲ್ಯದಿಂದ ನಿರ್ವಹಿಸಿದರು. ಅದು ತುಂಬಾ ಸ್ವಾರಸ್ಯವಾಗಿದೆ.

ಬ್ರಿಟಿಷರು ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದರ ಉದ್ದೇಶವೇನೆಂಬುವುದನ್ನು ಜನರಿಗೆ ಮನವರಿಕೆ ಮಾಡಬೇಕೆಂದು ಸತ್ಯೇನ್ ಬಳಗದವರು ಮೊದಲೇ ಯೋಚಿಸಿದ್ದರು.  ಅದಕ್ಕಾಗಿ, ಬ್ರಿಟಿಷರು ಬಗೆಯುತ್ತಿದ್ದ ನಾನಾ ಅನ್ಯಯಗಳನ್ನು ವಿವರಿಸಿ ಅವುಗಳನ್ನೆಲ್ಲ ಮರೆ ಮಾಚುವುದೇ ವಸ್ತು ಪ್ರದರ್ಶನದ ನಿಜವಾದ ಉದ್ದೇಶವೆಂದು ತಿಳಿಸುವ ಕರಪತ್ರವೊಂದನ್ನು ಮುದ್ರಿಸಲಾಗಿತ್ತು. ಆ ಕರಪತ್ರಕ್ಕೆ “ಸೋನಾರ್ ಬಾಂಗ್ಲಾ” (ಚಿನ್ನದ ಬಂಗಾಳ) ಎಂಬ ಶಿರೊನಾಮೆ ನೀಡಲಾಗಿತ್ತು. ಭಾರತೀಯರ ಮೈನವಿರೇಳಿಸುವ, ಬ್ರಿಟಿಷರ ಸಿಂಹಸ್ವಪ್ನವಾದ ದಿವ್ಯ ಮಂತ್ರ “ವಂದೇ ಮಾತರಂ” ಸಹ ಅದರಲ್ಲಿತ್ತು. ವಸ್ತು ಪ್ರದರ್ಶನ ನೋಡಲು ಬರುವ ಜನರಿಗೆ ಕರಪತ್ರ ಹಂಚುವ ಕೆಲಸವನ್ನು ಸತ್ಯೇನ್ ಖುದೀರಾಮನಿಗೆ ಒಪ್ಪಿಸಿದರು.

ಖುದೀರಾಮ ಗುರುವಿಗೆ ತಕ್ಕ ಶಿಷ್ಯ. ಇಂತಹ ಅವಕಾಶಕ್ಕಾಗಿಯೇ ಕಾದಿದ್ದ. ಎಲ್ಲರಿಗೂ ರಾಜರೋಷವಾಗಿ ಕರಪತ್ರಗಳನ್ನು ಹಂಚಿದ. ಅದನ್ನು ಓದಿದ ಜನರಿಗೆ ಸ್ವಾಭಿಮಾನ ಉಕ್ಕೇರಿತು. ಬ್ರಿಟಿಷರ ಕುತಂತ್ರ ತಿಳಿದುಕೋಪದಿಂದ ಉರಿಯತೊಡಗಿದರು. ಮರುಕ್ಷಣವೇ ಅವರ ಕಂಠಗಳಿಂದ ಚಿಮ್ಮಿದ “ವಂದೇಮಾತರಂ” ಕೂಗು ಮುಗಿಲು ಮುಟ್ಟಿತು. ಪೋಲಿಸರು ಜನರನ್ನು ಲಾಠಿಗಳಿಂದ ಹೊಡೆದರು. ಖುದೀರಾಮನನ್ನು ಹಿಡಿದು ನ್ಯಾಯಾಲಯಕ್ಕೆ ಒಯ್ದರು. ಸತ್ಯೇನ್ ಶಿಷ್ಯನನ್ನೂ ಬಿಟ್ಟುಕೊಡಲಿಲ್ಲ. ನ್ಯಾಯಾಲಯದಲ್ಲಿ ಕೆಲವರು ಸಾಕ್ಷಿಗಳನ್ನು ಹಾಜರುಪಡಿಸಿ ಖುದೀರಾಮನನ್ನು ಬಿಡಿಸಿದರು. ಅಧಿಕಾರಿಗಳಿಗೆ ಇದು ಅರ್ಥವಾಯಿತು. ಆದರೆ ಅವರಿಗೆ ದುಃಖವಾಗಲಿಲ್ಲ, ಬದಲಾಗಿ ಆನಂದವಾಯಿತು.  ಏಕೆಂದರೆ ಇನ್ನು ದಿನವಡೀ ದೇಶದ ಕೆಲಸವನ್ನೇ ಮಾಡಬಹುದಲ್ಲವೆಂದು.

ಸತ್ಯೇನ್ ಈಗ ಗೂಡಿನಿಂದ ಹೊರಬಿದ್ದ ಹಕ್ಕಿಯಂತಾದರು. ತನ್ನ ಬಳಗವನ್ನು ಬಲಪಡಿಸುವ ಹಾಗೂ ವಿಸ್ತ್ಗರಿಸುವ ಕೆಲಸದಲ್ಲಿಯೇ ನಿರತರಾದರು. ಕ್ರಾಂತಿಕಾರಿಗಳಿಗೆ ಅಯುಧಗಳು-  ಮುಖ್ಯವಾಗಿ ಬಾಂಬುಗಳು ಬೇಕಾಗಿದ್ದವು. ಆದುದರಿಂದ ಇಷ್ಟು ಹೊತ್ತಿಗೆ ಮಿಡ್ನಾಪೂರದ ಕ್ರಾಂತಿಕಾರಿ ನಾಯಕ ಹೇಮಚಂದ್ರದಾಸ್, ಕನುಂಗೋ ಬಾಂಬು ತಯ್ಯಾರಿಸುವ ವಿದ್ಯೆಯನ್ನು ಕಲಿಯಲು  ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಗೆ ತೆರಳಿದಾಗ ಅವನ ಸ್ಥಾನವನ್ನು ತುಂಬುವ ಹೊಣೆ ಸತ್ಯೇಂದ್ರರದಾಯಿತು. ಈಗ ಮಿಡ್ನಾಪೂರ ಜಿಲ್ಲೆಯ ಸತ್ಯೇಂದ್ರರೇ ನಾಯಕರಾದರು.

 

ಸೆರೆಮನೆಯಲ್ಲಿ ಸತ್ಯೇಂದ್ರನಾಥರು

ಎಲ್ಲೆಲ್ಲೂ ಕ್ರಾಂತಿಯ ಕೂಗು :

ಮುಂದಿನ ದಿನಗಳಲ್ಲಿ ಬಂಗಾಳದಲ್ಲೆಡೆ ಕ್ರಾಂತಿಯ ಕೂಗು ಮೊಳಗತೊಡಗಿತು. ಹಲವು ತರದ ಕುತಂತ್ರ, ಅನ್ಯಾಯದ ಮಾರ್ಗಗಳಿಂದ ಭಾರತದ ಒಡೆತನವನ್ನು ಕಿತ್ತುಕೊಂಡಿದ್ದ ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಬಿಡುಗಡೆ ಮಾಡಲು ಶಸ್ತ್ರ ಹಿಡಿದು ಹೋರಾಡುವುದೊಂದೇ ಮಾರ್ಗ ಎಂಬುವುದು ತೀವ್ರವಾದಿಗಳ ಅಭಿಪ್ರಾಯವಾಗಿತ್ತು.  ಆದರೆ ಎಲ್ಲರಿಗೂ ಈ ಮಾರ್ಗ ಹಿಡುಸುತ್ತಿರಲಿಲ್ಲ.  ಇದರ ಬದಲಿಗೆ ಶಾಂತ ರೀತಿಯ ಪ್ರತಿಭಟನೆಯನ್ನೇ ತೋರಿ ಸ್ವಾತಂತ್ರ್ಯ ಪಡೆಯಲು ಸಾಧ್ಯವೆಂಬ ಅಭಿಪ್ರಾಯದ ಸೌಮ್ಯವಾದಿಗಳು ಇದ್ದರು.

ಒಂದು ಸಾವಿರ ವರ್ಷದಿಂದ ಭಾರತ ಒಬ್ಬರಲ್ಲ, ಮತ್ತೊಬ್ಬ ವಿದೇಶಿ ಆಕ್ರಮಣಕಾರರ ದಾಳಿಗೆ ತುತ್ತಾಗಿತ್ತು. ಸ್ವಾತಂತ್ರ್ಯವನ್ನು ಕಳೆದುಕೊಂಡ ಜನ ಜಡರಾಗಿದ್ದರು. ಇಂತಹವರಿಗೆ ಅಹಿಂಸೆಯನ್ನು ಉಪದೆಶಿಸಿದರೆ ಇವರು ದೇಶಕ್ಕಾಗಿಯ ಹೋರಾಡುವುದಿಲ್ಲ. ಅವರಲ್ಲಿ ಧೈರ್ಯವನ್ನು ಕಾರ್ಯಶೀಲತೆಯನ್ನು ತುಂಬಬೇಕು ಎಂದು ಕ್ರಾಂತಿಕಾರರ ದೃಢನಂಬಿಕೆ. ಅವರ ಅಭಿಪ್ರಾಯವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿದ್ ಹಲವರ ಮೇಲೂ ಪ್ರಭಾವವನ್ನು ಬೀರಿತು. ಅವರೂ ಭಾರತಕ್ಕೆ ಸ್ವಾತಂತ್ರ್ಯ ಬರಬೇಕಾದರೆ ಕ್ರಾಂತಿ ಮಾರ್ಗವೇ ಮಾರ್ಗ ಎಂದರು.

೧೯೦೭ರಲ್ಲಿ ಮಿಡ್ನಾಪೂರದಲ್ಲೊಂದು ರಾಜಕೀಯ ಸಮ್ಮೆಳನವು ಜರುಗಿತು. ಸಮ್ಮೆಳನದ ಸ್ವಾಗತ ಸಮಿತಿಯ ಮೇಲೆ ಸೌಮ್ಯವಾದಿಗಳ ಪ್ರಭಾವ ಇದ್ದಿತು.  ಕ್ರಾಂತಿಕಾರಿಗಳು ಸತ್ಯೇಂದ್ರರ ನಾಯಕತ್ವದಲ್ಲಿ ಸಮಿತಿಯ ಧೋರಣೆಯ ವಿರುದ್ಧ ಮತಪ್ರದರ್ಶನ ನಡೆಸಿದರು. ಈ ಪ್ರತಿಭಟನೆಯ ಪರಿಣಾಮವಾಗಿ ಸಮ್ಮೇಳನ ಇಬ್ಭಾಗವಾಯಿತು.

ಅದೇ ವರ್ಷ ಗುಜರಾತಿನ ಸೂರತ್ ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನ ನಡೆಯಿತು.  ಅಲ್ಲಿ ಕ್ರಾಂತಿವಾದಿಗಳಿಗೂ ಸೌಮ್ಯವಾದಿಗಳಿಗೂ ಭಾರೀ ತಿಕ್ಕಾಟ ನಡೆಯಿತು.  ಲೋಕಮಾನ್ಯ ಬಾಲಗಂಗಾದರ ತಿಲಕ್, ಅರವಿಂದ ಘೊಷ್, ಮೊದಲಾದವರು ಕ್ರಾಂತಿಮಾರ್ಗದ ಪ್ರತಿಪಾದಕರಾಗಿದ್ದರು. ಸತ್ಯೇನ್  ಕೂಡಾ ಅಧಿವೇಶನದಲ್ಲಿ ಭಾಗವಹಿಸಿ ಕ್ರಾಂತಿಯ ಪರವಾಗಿ ವಾದಿಸಿದರು.  ಬಲಶಾಲಿಗಳು ಶಾಂತಿಯ ಮಾತನ್ನು ಆಡಿದರೆ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ದುರ್ಬಲರು ಶಾಂತಿ, ಅಹಿಂಸೆ ಮೊದಲಾದ ಮಾತುಗಳನ್ನು ಆಡಿದರೆ ಬರೀ ನಗೆಪಾಟಲಾಗುತ್ತದೆ. ಯಾವುದೇ ನೀತಿ, ತತ್ವಗಳಿಲ್ಲದೇ ಹೆಜ್ಜೆ ಹೆಜ್ಜೆಗೂ ಅನ್ಯಾಯವನ್ನೇ ಮಾಡುವ ಬ್ರಿಟಿಷರ ಬಗ್ಗೆ ಅಹಿಂಸಾಧೋರಣೆ ಅನುಸರಿಸುವುದು ಬುದ್ಧಿ ವಂದಿಕೆಯ ಲಕ್ಷಣವೇ?” ಎಂದು ಪ್ರಶ್ನಿಸಿದರು.   ಕೊನೆಗೆ ಕ್ರಾಂತಿವಾದಿಗಳೇ ಗೆದ್ದರು. ಅಧಿವೇಶನ ಅಲ್ಲಿಗೆ ಮುಗಿಯಿತು.

ಕಿಂಗ್ಸ ಫರ್ಡರ ಕೊಲೆ ಯೋಜನೆ:

ಬಂಗಾಳದ ಕ್ರಾಂತಿಕಾರಿ ಅಂದೋಲನದ ಶಕ್ತಿ ಮೊದಲು ಪ್ರಕಟವಾದುದು ೧೯೦೮ರಲ್ಲಿ. ದೇಶಭಕ್ತರಿಗೆ ಹಿಂಸೆ ಕೊಡುವುದರಲ್ಲಿ ಕಿಂಗ್ಸ ಫರ್ಡ ಎಂಬ ಕ್ರೂರ ನ್ಯಾಯಾಧೀಶ ಪ್ರವೀಣನಾಗಿದ್ದ. ಅವನು ಸುಶೀಲಕುಮಾರ್ ಸೇನ್ ಎಂಬ ಎಳೆಯ ವಯಸ್ಸಿನ ದೇಶಭಕ್ತನಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ.ಇದರಿಂದ ಕ್ರಾಂತಿಕಾರಿಗಳು ರೊಚ್ಚಿಗೆದ್ದರು. ಅವನನ್ನು ಮುಗಿಸಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಮಿಡ್ನಾಪೂರದಿಂದ ಮುಜಾಫರಪುರಕ್ಕೆ ಬಡ್ತಿ ಹೊಂದಿ ವರ್ಗವಾಗಿದ್ದ ಕಿಂಗ್ಸಫರ್ಡನನ್ನು ಬಾಂಬ್ ಎಸೆದು ಕೊಲ್ಲುವ ಯೋಜನೆ ಹಾಕಲಾಯಿತು. ಕಿಂಗ್ಸ ಫರ್ಡ ಕೊಲೆ ಯೋಜನೆಯ ಶಿಲ್ಪ ಸತ್ಯೇನ್. ಆ ಕೆಲಸಕ್ಕೆ ಖುದೀರಾಮ ಬೋಸ್ ಮತ್ತು ಪ್ರಫುಲ್ಲಕುಮಾರ ಚಾಕಿಯನ್ನು ಆರಿಸಿದ್ದು ಕೂಡಾ ಸತ್ಯೇಂದ್ರರೇ.

ಕಿಂಗ್ಸಫರ್ಡನನ್ನು ಯಾರು, ಎಲ್ಲಿ ಮತ್ತು ಹೇಗೆ ಕೊಲ್ಲುವುದೆಂಬುವುದನ್ನು ಚರ್ಚಿಸಲು ಕ್ರಾಂತಿಕಾರಿಗಳು ಗುಟ್ಟಿನಲ್ಲಿ ನಡೆಸಿದ ಸಭೆಯುಲ್ಲಿ ಖುದೀರಾಮನನ್ನು ಆರಿಸಲಾಯಿತು. ” ಈ ಕೆಲಸವನ್ನು ನೀನು ಸಾಧಿಸಬಲ್ಲೇಯಾ?” ಎಂದು ಸತ್ಯೆಂದ್ರರು ಕೆಳಿದಾಗ “ಗುರುದೇವ, ನಿಮ್ಮ ಕೃಪೆಯಿದ್ದರೆ ಸಾಧಿಸುತ್ತೇನೆ. ಬದುಕಿ ಉಳಿದರೆ ಬಂದು ನಿಮ್ಮ ಚರಣಗಳಲ್ಲಿ ತಲೆಯಿಡುವೆ” ಎಂದು ಹೇಳಿದ ಖುದೀರಾಮ, ದೇಶಭಕ್ತ ತರುಣರ ಹೃದಯವನ್ನು ಸತ್ಯೇನ್ ಆಗಲೇ ಎಷ್ಟು ದೊಡ್ಡ ಸ್ಥಾನ ಪಡೆದಿದ್ದರು ಎಂದರೆ ಇದರಿಂದ ಅರ್ಥಮಾಡಿಕೊಳ್ಳಬಹುದು. ಆ ಸಭೆಯಲ್ಲಿ ಸ್ವತಃ ಅರವಿಂದ ಘೋಷರೂ ಹಾಜರಿದ್ದರು.

೧೯೦೮ರ ಏಪ್ರೀಲ್ ೩೦ ರಂದು ಖುದೀರಾಮ ಬೋಸ್ ಮತ್ತು ಪ್ರಫುಲ್ಲಕುಮಾರ ಚಾಕಿ ಕಿಂಗ್ಸ ಫರ್ಡನನ್ನು ಯಮಲೋಖಕ್ಕೆ ಅಟ್ಟಲು ಸಿದ್ಧರಾಗಿ ಮುಜಾಫರಪುರ ತಲುಪಿದರು. ರಾತ್ರಿ ಕಿಂಗ್ಸ ಫರ್ಡನ ಮನೆಯ ಬಳಿ ಅವರು ಅಡಗಿಕೊಂಡರು. ಅವನ ಮನೆಯಿಂದ ಗಾಡಿಯೊಂದು ಹೊರಟಿತು.  (ಆ ಕಾಲದಲ್ಲಿ ಇನ್ನೂ ಕಾರುಗಳ ಬಳಕೆ ಇರಲಿಲ್ಲ) ಕಾಯುತ್ತಿದ್ದ ಕ್ರಾಂತಿಕಾರಿಗಳು ಗಾಡಿಯಲ್ಲಿ ಕಿಂಗ್ಸ ಫರ್ಡನೇ  ಇದ್ದ ಎಂದುಕೊಂಡರು. ಖುದೀರಾಮ ಅದರ ಮೇಲೆ ಬಾಂಬ್ ಎಸೆದ. ಬಾಂಬ್ ಕೂಡ ಸ್ಪೋಟಿಸಿತ್ತು. ಆದರೆ ಗಾಢಿಯಲ್ಲಿ ಕಿಂಗ್ಸ ಫರ್ಡ ಇರಲಿಲ್ಲ. ಅವನ ಮನೆಗೆ ನೆಂಟರಾಗಿ ಬಂದಿದ್ದ ಕೆನಡಿ ಎಂಬ ವಕೀಲರ ಪತ್ನಿ, ಪುತ್ರಿ ಮತ್ತು ಅವರ ಸೇವಕಿ  ಇದ್ದರು ಅವರು ಬಾಂಬ್ ಸ್ಪೋಟದಿಂದ  ಸತ್ತರು.

ಈ ಪ್ರಕರಣದಲ್ಲಿ ಪ್ರಫುಲ್ಲಕುಮಾರ ಚಾಕಿ ಪೋಲಿಸರಕೈಗೆ ಸಿಗದೆ ತಾನೇ ಗುಂಡುಹಾರಿಸಿಕೊಂಡು ಸತ್ತ.  ಖುದೀರಾಮ ಸಿಕ್ಕಿಬಿದ್ದ. ಅವನನ್ನು ಗಲ್ಲಿಗೇರಿಸಿಕೊಂಡು ಸತ್ಯ. ಖುದೀರಾಮ ಸಿಕ್ಕಿ ಬಿದ್ದ. ಅವನನ್ನು ಗಲ್ಲಿಗೇರಿಸಿ ಕೊಂದರು. ಖುದೀರಾಮನಂತರ ಪರಾಕ್ರಮಿ ಮತ್ತು ಸಹಕಾರಿಯನ್ನುಕಳೆದುಕೊಂಡು ಸತ್ಯೇನ್ ಕೆರಳಿದರು. ಇದಕ್ಕಿಂತ ದೊಡ್ಡ ಸಾಹಸಮಾಡಿ ನಷ್ಟವನ್ನು ತುಂಬಬೇಕೆಂದು ನಿರ್ಧರಿಸಿ ಶಸ್ತ್ರ ಸಂಗ್ರಹ ಹಾಗೂ ಕ್ರಾಂತಿಯ ಸೇನೆಯಸಂಘಟನೆಯಲ್ಲಿ  ಹೆಚ್ಚುಕಾಲ ಕಳೆಯತೊಡಗಿದರು.

ಬೆನ್ನು ಹತ್ತಿದ ಬೇತಾಳಗಳು :

ಕ್ರಾಂತಿಕಾರಿಗಳ ಜೀವನ ಕಠೋರವಾಗಿತ್ತು. ಕ್ರಾಂತಿಯ ದೀಕ್ಷೆ ತೆಗೆದುಕೊಂಡವರು ಎಂದೆಂದೂ ರಹಸ್ಯ ಪಾಲಿಸುವ, ಪ್ರಮಾಣಿಕವಾಗಿ ನಡೆದುಕೊಳ್ಳೂವ ಮತ್ತು ನಾಯಕರ ಆಜ್ಞೆಯನ್ನು ಎದುರಾಡದೆ ಪಾಲಿಸುವ ಬಗ್ಗೆ  ಉಗ್ರ ಪ್ರತಿಜ್ಞೆ ಮಾಡಬೇಕಾಗಿತ್ತು. ಬಳಗದ ಸದಸ್ಯರು ಪ್ರತಿದಿನವೂ ಹಲವು ಕಠೋರ ನಿಯಮಗಳನ್ನು ಪಾಲಿಸಬೇಕಾಗಿತ್ತು. ತಮ್ಮ ಓಡಾಟದ ಸುಳಿವು ಯಾರಿಗೂ ಸಿಕ್ಕದಂತೆ ಎಚ್ಚರಿಕೆ ವಹಿಸಬೇಕಾಗುತ್ತಿತ್ತು. ಇಷ್ಟೆಲ್ಲ ಎಚ್ಚರಿಕೆ ವಹಿಸಿದರೂ ಅದು ಹೇಗೋ ಪೋಲಿಸರಿಗೆ ಅವರ ಚಲನವಲನಗಳು ಗೊತ್ತಾಗಿಬಿಡುತ್ತಿದ್ದವು. ಪೋಲಿಸರು ಅವರನ್ನು ಗುಪ್ತವಾಗಿ ಹಿಂಬಾಲಿಸುತ್ತಿದ್ದರು. ಕೆಲವು ಬಾರಿ ಅವರೇ ಕ್ರಾಂತಿಕಾರಿಗಳ ಹಿತೈಷಿಗಳಂತೆ, ಇನ್ನು ಕೆಲವು ಬಾರಿ ಪ್ರಾಮಾಣಿಕ ದೇಶಭಕ್ತರಂತೆ ನಟಿಸಿ ಗುಟ್ಟು ತಿಳಿದುಕೊಳ್ಳುತ್ತಿದ್ದರು.  ಇನ್ನು ಕೆಲವೊಮ್ಮೆ ಯಾರಿಗಾದರೂ ಏನಾದರೂ ಸಣ್ಣ ಪುಟ್ಟ ಆಸೆ ತೋರಿಸಿ ತಮ್ಮ ಕೆಲಸ  ಮಾಡಿಕೊಳ್ಳುತ್ತಿದ್ದರು.

ಪೋಲಿಸರಿಗೆ ಸತ್ಯೆನ ಮೇಲೆ ಅನುಮಾನ ಮೂಡಿತು. ಬೆನ್ನು ಹತ್ತಿ ಬೇತಾಳನಂತೆ ಅವರನ್ನು ಹಿಂಬಾಲಿಸಿದರು. ಮಿಡ್ನಾಪೂರ  ಯುಗಾಂತರ ಗುಂಪಿಗೆ ಸತ್ಯೇಂದ್ರ ನಾಯಕ ಎಂಬ ಶಂಕೆ ದಿನಕಳೆದಂತೆ ಅವರಿಗೆ ಬಲವಾಯಿತು.

ಸತ್ಯೇನ್ ವಿರುದ್ಧ ಅನೇಕ ಬಗೆಯ ಆರೋಪಗಳನ್ನು ಹೊರಿಸುವ ರಹಸ್ಯ ದಾಖಲೆಗಳನ್ನು ನಿರ್ಮಿಸಲು ಪೋಲಿಸರು ತೊಡಗಿದರು.ಆದರೆ ಬೆಟ್ಟು ಮಾಡಿ ತೋರಿಸುವಂತಹ ಯಾವ ಆರೋಪವು ಅವರ ಬಳಿ ಇರಲಿಲ್ಲ.

ದಿನಕಳೆದಂತೆ ದೇಶದ ವಾತಾವರಣ ಬಿಸಿಯಾಗತೊಡಗಿತು.  ಬಂಗಾಳದ ಜನರೆಲ್ಲರೂ ಸರಕಾರಿ ಅಧಿಕಾರಿಗಳನ್ನು ಪೋಲಿಸರನ್ನು ಹುಚ್ಚು ನಾಯಿಗಳಂತೆ ದೂರವಿಡತೊಡಗಿದರು.  ಎಲ್ಲಿ ಹೋದರೂ ಎಲ್ಲರ ಬಾಯಲ್ಲಿಯೂ ಕೇಳಿಬರುತ್ತಿದ್ದ ಶಬ್ದ ಒಂದೇ ವಂದೇ ಮಾತರಂ! ಅದನ್ನು ಕೇಳಿದಾಗಲೆಲ್ಲ ಪೋಲಿಸರಿಗೆ ಬ್ರಿಟಿಷ ನಿಷ್ಠ ಅಧಿಕಾರಿಗಳಿಗೂ ಎದೆಯಲ್ಲಿ ಚೂರಿಯ ಅಲಗು ಹೊಕ್ಕಂತಾಗುತ್ತಿತ್ತು.

ಜನರ ಈ ತಿರಸ್ಕಾರದೊಡನೆ ಪೋಲಿಸ ಅಧಿಕಾರಿಗಳಿಗೆ ಮತ್ತೊಂದು ಸಂಕಟ ಪ್ರಾಪ್ತವಾಗಿತ್ತು.  ಸರಕಾರ ಅವರಿಗೆ, “ಕ್ರಾಂತಿಕಾರರ ಚಟವಟಿಕೆಗಳು ಹೆಚ್ಚಾಗುತ್ತಿವೆ, ನೀವೇನು ಮಾಡುತ್ತಿದ್ದೀರಿ? ಅವರನ್ನ ಹಿಡಿಯಲು ಅ ನಿಮ್ಮ ಕೈಯಲ್ಲಾಗುವುದಿಲ್ಲವೇ? ಎಂದು ಮತ್ತೇ ಮತ್ತೇ ಕೆಳುತ್ತಿತ್ತು. ಏನಾದರೂ ಮಾಡಿ ದೇಶಭಕ್ತರ ಹುಟ್ಟಡಗಿಸಲೇಬೇಕು ಎಂದು ನಿರ್ಧರಿಸಿದರು. ಅವರ ಬೇಟೆಯ ಮೊದಲ ಗುರಿ ಸತ್ಯೇನ್.

ಕಳ್ಳರ ನ್ಯಾಯ ಪೊಳ್ಳಿನ ನೆಪ :

ಸತ್ಯೆಂದ್ರರು ಮನಸ್ಸಾ ಮಾಡಿದ್ದರೆ ಬಂಧನದಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅನಂತರ ತಲೆಮರೆಸಿಕೊಂಡು ಇರಬೇಕಾಗುತ್ತಿತ್ತು. ಇದು ಅವರಿಗೆ ಒಪ್ಪಿಗೆಯಾಗಲಿಲ್ಲ.ತಮ್ಮ ಚಟುವಟಿಕೆಗಳನ್ನು ಸ್ವಲ್ಪವೂ ಕಡಿಮೆಯಾಗಲಿಲ್ಲ. ಕೊನೆಗೊಂದು ದಿನ ಅವರನ್ನು ಪೋಲಿಸರು ಬಂಧಿಸಿಯೇ ಬಿಟ್ಟರು.  ಅಣ್ಣನ ಹೆಸರಿನಲ್ಲಿ ಲೈಸನ್ಸ್ ಇದ್ದ ಬಂದೂಕನ್ನು  ತನ್ನಬಳಿ ಇರಿಸಿಕೊಂಡಿದ್ದ ಎಂಬ ಆರೋಪ ಹೊರಿಸಿ ಸತ್ಯೆಂದ್ರನನ್ನು ನ್ಯಾಲಯದ ಕಟ್ಟೆ ಹತ್ತಿಸಿದರು.

ಬ್ರಿಟಿಷರು ಆಳುತ್ತಿದ್ದಾಗ ಈ ದೇಶದಲ್ಲಿದ್ದ ಜನರಿಗೆ ಬ್ರಿಟೀಷ ನ್ಯಾಯಾಲಯ ಅಣ್ಣನ ಕೋವಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಎಂಬ ಕಾರಣಕ್ಕಾಗಿ ಸತ್ಯೇನ್ ಗೆ ಎರಡು ತಿಂಗಳು ಶಿಕ್ಷೆ ವಿಧಿಸಿತು. ಅವರನ್ನು ಮಿಡ್ನಾಪೂರ ಜೈಲಿನಲ್ಲಿ ಇಡಲಾಯಿತು.

ಸತ್ಯೇನ್ ಸೆರೆಮನೆಗೆ ಹೋದರೂ ಅವನ ಶಿಷ್ಯರೂ, ಒಡನಾಡಿಗಳೂ ಸುಮ್ಮನಿರಲಿಲ್ಲ. ಎಷ್ಟೇ ಆಗಲಿ ಅವರು ಸತ್ಯೇಂದ್ರನಿಂದ ಶಿಕ್ಷಣ ಪಡೆದವರಲ್ಲವೇ ! ಎಂತಹ ಪರಿಸ್ಥಿತಿ ಬಂದರೂ ದೇಶಸೇವೆಯನ್ನು ಸ್ವಾತಂತ್ರ್ಯದ ಹೋರಾಟವನ್ನು ನಿಲ್ಲಿಸುವ ಯೋಚನೆಯೇ ಅವರಿಗೆ ಬರುತ್ತಿರಲಿಲ್ಲ. ಮುಂದೆ ಹೋರಾಟಕ್ಕೆ ಭರದಿಂದ ಸಿದ್ಧತೆ ಮಾಡತೊಡಗಿದರು. ಇಲ್ಲೊಬ್ಬ ಅಧಿಕಾರಿಯನ್ನು ಕೊಲ್ಲುವುದು ಅಲ್ಲೊಂದು ಬಾಂಬು ಹಾಕುವುದು  ಇಷ್ಟು ಸಾಲದು ಎಂದು ಅವರಿಗನ್ನಿಸಿತು. ಇಡೀ ದೇಶದಲ್ಲಿ ಪರಿಣಾಮ ಬೀರುವಂತಹ ಕೆಲಸ ಮಾಡಬೇಕು, ಬ್ರಿಟಿಷ್ ಸರಕಾರಕ್ಕೆ ಪ್ರಬಲವಾದ ಹೊಡೆತ ಕೊಡಬೇಕು ಎಂದು ಅವರು ತೀರ್ಮಾನಿಸಿದರು. ಇದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಲು ಪ್ರಾರಂಭಿಸಿದರು.

ಅಲೀಪುರ ಬಾಂಬ್ ಪ್ರಕರಣ :

ದೇಶಭಕ್ತರ ಮೇಲೆ ಪೋಲಿಸರ ಬಲೆ ವ್ಯಾಪಕವಾಗಿ ಹರಡಿಕೊಂಡಿತು. ಎಲ್ಲೆಂದರಲ್ಲಿ ಹಠಾತ್ ದಾಳಿಗಳು ಆಗತೊಡಗಿದವು. ಕಲ್ಕತ್ತದ ಅಲೀಪುರ ಮುರಾರಿಪುಕುರ್ ರಸ್ತೆಯ ೩೪ನೇ ಸಂಖ್ಯೆಯ ಕಟ್ಟಡದ ಮೇಲೊಂದು ದಿನ ಹಠಾತ ದಾಳಿ ನಡೆಯಿತು. ಪೋಲಿಸರಿಗೆ ಬೇಕಾದ ಬಹುದೊಡ್ಡ ಬೇಟೆ ಅಲ್ಲಿತ್ತು.

ಅಲೀಪುರದಲ್ಲೊಂದು ದೊಡ್ಡ ಬಾಂಬ್ ಕಾರ್ಖಾನೆಯೇ ಪತ್ತೆಯಾಯಿತು. ಬೇಕೆಂದಾಗ ಸ್ಪೋಟಿಸಬಹುದಾಗಿದ್ದ ಬಾಂಬುಗಳು ಹಾಗೂ ಡೈನಮೈಟ ಬತ್ತಿಗಳು ಸಿಕ್ಕಿದವು. ಈ ದಾಳಿ ದೇಶ ವಿಮೋಚನಾ ಹೋರಾಟಕ್ಕೆ ಬಿದ್ದ ಒಂದು ದೊಡ್ಡ ಹೊಡೆತ. ಇದರಲ ಸಂಬಂಧವಾಗಿ ಅರವಿಂದ ಘೋಷ್, ಬಾರೀಂದ್ರ  ಮತ್ತು ಹೇಮಚಂದ್ರರನ್ನು ಇನ್ನೂ ಮೂವತ್ತೊಂದು ಮಂದಿಯನ್ನು ಬಂಧಿಸಲಾಯಿತು. ಇದೇ ಮುಂದೆ ಅಲಿಪುರ ಬಾಂಬ್ ಪಿತ್ತೂರಿ ಪ್ರಕರಣ” ಎಂದು ಪ್ರಸಿದ್ಧವಾಯಿತು.

ಇಷ್ಟು ಹೊತ್ತಿಗೆ ಸತ್ಯೆಂದ್ರರು ಎರಡು ತಿಂಗಳ ಶಿಕ್ಷೆ ಅನುಭವಿಸಿ ಮುಗಿಸಿದ್ದರು. ನ್ಯಾಯವಾಗಿ ಅವರನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಪೋಲಿಸಿನವರು ಅವರನ್ನು ಅಲೀಪೂರ ಪಿತೂರಿ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ ಅಲೀಪುರ ಸೆರೆಮನೆಗೆ ವರ್ಗಾಯಿಸಿದರು. ಅಲೀಪುರ ಪ್ರಕರಣದ ವಿಚಾರಣೆ  ಒಂದು ವರ್ಷ ಪೂರ್ತಿ ಸಾಗಿತ್ತು. ಕೆಂಬ್ರಿಜ್ ನಲ್ಲಿ ಅರವಿಂದರ ಸಹಪಾಠಿಯಾಗಿದ್ದ ಬೀಚ್ ಕ್ರಾಫ್ಟ್ ಎಂಬಾತನೇ ನ್ಯಾಯಾಧೀಶನಾಗಿದ್ದ.

ಗೋಸ್ವಾಮಿಯ ದ್ರೋಹ :

ನಮ್ಮ ದೇಶದಲ್ಲಿ ಮಾತೃಭೂಮಿಯ ಗೌರವಕ್ಕೋಸ್ಕರ ಪ್ರಾಣವನ್ನು ಅರ್ಪಿಸಿದ ವೀರರಂತಂತೆಯೇ ದುಡ್ಡಿಗೋಸ್ಕರ ದೇಶಕ್ಕೆ ಎರಡು ಬಗೆದ ದ್ರೋಹಿಗಳಿಗೆ ಕಡಿಮೆಯನಿಲ್ಲ.  ಸ್ವಂತ ಲಾಭಕ್ಕಾಗಿಯೇ, ವೈಯುಕ್ತಿಕ ಹಗೆಯಿಂದಲೋ ಶತ್ರುಗಳಿಗೆ ಸಹಾಯ ಮಾಡುವ ದೇಶದ್ರೋಹಿಗಳನ್ನು ನಮ್ಮ ಚರಿತ್ರೆಯಲ್ಲಿ ಕಾಣುತ್ತೇವೆ.

ಅಲೀಪುರ ಪ್ರಕಣದಲ್ಲಿಯೂ ಒಬ್ಬ ದೇಶದ್ರೋಹಿ ಸೇರಿಕೊಂಡಿದ್ದ. ಸೆರೆಮನೆಯ ಗೋಡೆಗಳನ್ನು ನೋಡುತ್ತಿದ್ದಂತೆಯೇ ಅವನಿಗೆ ಯಮಲೋಕದ ನೆನಪಾಗಿರಬೇಕು. ಆ ಹೇಡಿಯ ಹೆಸರು ನರೇನ್ ಗೋಸ್ವಾಮಿ ಎಂದು. ಆತ ಏನು ಮಾಡಿದ ಗೊತ್ತೇ? ತಾನು ಸರಕಾರದ ಪರ ಸಾಕ್ಷಿ ಹೇಳುತ್ತೇನೆ, ದೇಶಭಕ್ತರ ಎಲ್ಲರ  ಚಟುವಟಿಕೆಗಳನ್ನು ಸರಕಾರಕ್ಕೆ ತಿಳಿಸುತ್ತೇನೆ ಎಂದು ಮುಂದೆ ಬಂದ. ಹೀಗೆ ಮಾಡುವವರಿಗೆ ನ್ಯಾಯಾಲಯದ ಭಾಷೆಯಲ್ಲಿ “ಮಾಫೀ ಸಾಕ್ಷಿ” ಗಳು ಎನ್ನುತ್ತಾರೆ. ಬ್ರಿಟಿಷ್ ಸರಕಾರಕ್ಕೆ ಬಹಳ ಸಂತೋಷವಾಯಿತು.  ೧೯೦೮ರ ಜೂನ್ ೩೦ರಂದು ಅವನಿಗೆ ಕ್ಷಮಾದಾನ ಮಾಡಲಾಯಿತು.

ನರೇನ್ ಸಾಕ್ಷಿ ಹೇಳಿದರೆ ದೇಶಭಕ್ತರಿಗೆ ಅಪಾಯವಿತ್ತು. ಏಕೆಂದರೆ ಅವನಿಗೆ ಅವರ ಎಲ್ಲ ರಹಸ್ಯ ಚಟುವಟಿಕೆಗಳು ಗೊತ್ತಿದ್ದವು. ಮಿತ್ರರಿಗೆ ಹಾಗೂ ತಾಯಿ ನಾಡಿಗೆ ದೊಡ್ಡ ದ್ರೋಹ ಬಗೆದಿದ ಅವನು ಮುಂದೆ ಅದಕ್ಕಿಂತಲೂ ದೊಡ್ಡ ಪಾತಕ ಮಾಡದೆ ಇರಲಾರ. ಅಷ್ಟು ಮಾತ್ರವಲ್ಲದೇ ಅವನಿಂದಾಗಿ ಅವನಂತಹ   ಇತೆ ದುಷ್ಟರಿಗೂ ದೇಶ ದ್ರೋಹ ಮಾಡುವ ಧೈರ್ಯ ಬರುತ್ತದೆ. ಹೀಗಾಗಿ ಅವನ್ನು ಉಳಿಯಗೊಡಬಾರದು, ಸಾಕ್ಷ್ಯ ಹೇಳುವ ಮೊದಲೇ ಅವನನ್ನು ಕೊಂದು ದೇಶಭಕ್ತರ ಮೇಲಿನ ಕಳಂಕವನ್ನು ಅಳಿಸಿ ಹಾಕಬೇಕುಎಂದು ಕ್ರಾಂತಿ ವೀರರು ಸಂಕಲ್ಪ ಮಾಡಿದರು.

ಹೇಮಚಂದ್ರ ದಾಸ್ ಕನುಂಗೋ ಮತ್ತು ಸತ್ಯನ್  ಈ ಕುರಿತು ತೀವ್ರವಾಗಿ ಯೋಚಿಸಿದರು.  ಈ ಕೆಲಸವನ್ನು ತಾವೇ ಮಾಡಬೇಕೆಂದು ಅವರು ನಿರ್ಧರಿಸಿದರು.

ಹಲಸಿನ ಹಣ್ಣಿನೊಳಗೆ ಯಮನ ದೂತ:

ಈ ದೇಶಭಕ್ತರೆಲ್ಲರೂ ಸೆರಮನೆಯೊಳಗಿದ್ದರು. ಅವರ ಬಳಿ ಯಾವ ಆಯುಧವೂ ಇರಲಿಲ್ಲ. ಅವರ ಮೇಲೆ ಸದಾ ಸರ್ಪಕಾವಲು ಇತ್ತು. ಎಲ್ಲ ಆಯುಧಗಳಿಗಿಂತ ಹರಿತವಾದ ಬುದ್ಧಿ ಮತ್ತು ದಢಸಂಕಲ್ಪ  ಇದ್ದುದರಿಂದ ಅವರಿಗೆ ಆಯುಧ ಪಡೆಯುವುದು ಏನು ಕಷ್ಟವಾಗಲಿಲ್ಲ.

ಯಮಲೋಕದಂತಹ ಸೆರೆಮನೆಯೊಳಗಿದ್ದರೂ ಕಾವಲಿನವರ ಕಣ್ಣು ತಪ್ಪಿಸಿ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ವಿದ್ಯೆ ಇವರಿಗೆ ಗೊತ್ತಿತ್ತು. ಕಲ್ಕತ್ತೆಯ ಸಮೀಪದ ಫ್ರೆಂಚರ ವಸಾಹತಾಗಿದ್ದ ಚಂದ್ರನಗರದಲ್ಲಿ ಶ್ರೀ ಚಂದ್ರ ಘೋಷ್ ಮತ್ತು ಬಸಂತಕುಮಾರ ಬ್ಯಾನರ್ಜಿ ಎಂಬುವರಿದ್ದರು. ಅವರು ಕ್ರಾಂತಿಕಾರಿಗಳ ತಂಡದವರೇ. ಸತ್ಯೆಂದ್ರ ಮತ್ತು ಕನುಂಗೋ ಹೇಗೋ ಅವರಿಗೆ ಸುದ್ಧಿ ಮುಟ್ಟಿಸಿದರು. ತಮಗೆ ಎರಡು ರಿವಾಲ್ವಾರ‍್ಗಳು ಬೇಕು ಎಂದು. ಅವರು ಆರೋಪಿಗಳನ್ನು ನೋಡಲು ಅವರ ಹತ್ತಿರ ನೆಂಟರಂತೆ ನಟಿಸಿ ಬಂದರು. ಬರುವಾಗ ಅವರಿಗೆ ಕೊಡಲು ಒಂದು ದೊಡ್ಡ ಹಲಸಿನ ಹಣ್ಣನ್ನು ತಂದಿದ್ರು. ಅದರೊಳಗೆ ಎರಡು ರಿವಾಲ್ವಾರ‍್ಗಳನ್ನು ಅಡಗಿಸಿಟಿದ್ದರು. ಅವು ಸತ್ಯೇನ್ ಮತ್ತು ಹೇಮಚಂದ್ರರ ಅವರ ಕೈ ಸೇರಿದವು.

 

ಸತ್ಯೇಂದ್ರನಾಥರು ಗುಂಡು ಹಾರಿಸಿದರು.

ಪಾಲು ಬೇಕೆಂದು ಕಾಡಿದ ಕನ್ನಯ್ಯ :

ಗೋಸ್ವಾಮಿಯನ್ನು ಮುಗಿಸುವ ಯೋಝನೆ ಅವರೊಬ್ಬಗೊಳಗೆ ಉಳಿಯಲಿಲ್ಲ. ಅವರ್ ಇನ್ನೊಬ್ಬ ಸಹವಾಸಿ ಕನ್ನಯ್ಯಲಾಲ್ ದತ್ತನಿಗೆ ಅದು ಗೊತ್ತಾಯಿತು.  ಕನ್ನಯ್ಯಲಾಲ್, ಗೋಸ್ವಾಮಿಯನ್ನು ಕೊಲ್ಲುವ ಕೆಲಸದಲ್ಲಿ ತನಗೂ ಪಾಲು ಕೊಡಬೇಕೆಂದು ಸತ್ಯೆಂದ್ರರನ್ನು ಕಾಡತೊಡಗಿದ. ಒಬ್ಬ ದೇಶಧ್ರೋಹಿಯನ್ನು ಕೊಂದು ಕೈಗಳನ್ನು ಪವಿತ್ರ ಮಾಡಿಕೊಳ್ಳುತ್ತೇನೆ ಎಂದ. ಹೇಮಚಂದ್ರ, ಸತ್ಯೇನ್ ಇಬ್ಬರು ಇದಕ್ಕೆ ಒಪ್ಪಿದರು.

ಇನ್ನು ಆದಷ್ಟು ಜಾಗ್ರತೆ ಕೆಲಸವನ್ನು ಮುಗಿಸಬೇಕೆಂದು ಮೂವರು ನಿರ್ಧರಿಸಿದರು. ಗೋಸ್ವಾಮಿಯನ್ನು ಎಲ್ಲಿ ಹಿಡಿಯುವುದು, ಯಾವ ಬಾಗಿಲಿನಿಂದ ಯಮಲೋಕಕ್ಕೆ  ಅಟ್ಟುವುದು ಎಂಬುವುದನ್ನು ಕುರಿತು ತೀವ್ರ ಸಮಾಲೋಚನೆ ನಡೆಯಿತು.

ವರವಾದ ಕಾಯಿಲೆ :

ಇಷ್ಟು ಹೊತ್ತಿಗೆ ದೇಔರ ದಯೆ ಎಂಬಂತೆ ಸತ್ಯೆನ್ ಕಾಯಿಲೆ ಬಿದ್ದರು. ಅವರನ್ನು ಸೆರಮನೆಯ ಆಸ್ಪತ್ರೆಗೆ ಸೇರಿಸಿದರು. ಇದು ಮುಂದಿನ ಕೆಲಸಕ್ಕೆ ಬಹಳ ಅನುಕೂಲವಾಯಿತು. “ನನಗೆ ಸೆರಮನೆವಾಸ ಸಾಕಾಗಿ ಹೋಗಿದೆ. ಹೇಗಾದರೂ ಒಮ್ಮೆ ಬಿಡುಗಡೆಯಾಗಿ ಬದುಕಿಕೊಂಡರೆ ಸಾಕುಕ. ಮಾಫಿ ಸಾಕ್ಷಿಯಾಗಲು ನಾನು ಸಿದ್ಧ. ಅದಕ್ಕೋಸ್ಕರ ನೀನು ನನಗೆ ಸಹಾಯ ಮಾಡಬೇಕು. ದಯವಿಟ್ಟು ನನ್ನನ್ನು ಭೇಟಿಯಾಗು” ಎಂದು ಸತ್ಯೇನ್ ಆಸ್ಪತ್ರೆಯಿಂದ ಗೋಸ್ವಾಮಿಗೆ ಪತ್ರ ಬರೆದರು. ಈಗ ತೋಳ ಹಳ್ಳಕ್ಕೆ ಬಿತ್ತು ! ಗೋಸ್ವಾಮಿ ಈ ಬಲೆಗೆ ಬಿದ್ದ.

೧೯೦೮ರ ಅಗಸ್ಟ್ ೩೦ ರಂದು ಸಂಜೆ ಕನ್ನಯ್ಯಲಾಲ್ ವಿಪರೀತ ಹೊಟ್ಟೆಯ ನೋವು ಬಂದಂತೆ ನಟಿಸಿದ. ಅವನ ನರಳಾಟ, ಹೊರಳುವಿಕೆ ನೋಡಿ ಸೆರೆಮನೆಯ ಅಧಿಕಾರಿಗಳು ನಿಜವೆಂದು ನಂಬಿದರು. ಅವನನ್ನು ಆಸ್ಪತ್ರೆಗೆ ಸೇರಿಸಲೇಬೇಕಾಯಿತು.  ಹಲಸಿನ ಹಣ್ಣಿನೊಳಗೆ ಅಡಗಿಕೊಂಡು ಬಂದಿದ್ದ ಎರಡು ರಿವಾಲ್ವಾರ್ಗಳು ಈಗ ಒಂದೇ ಕಡೆ ಸೇರಿ ಬೇಟೆಯನ್ನು ಎದುರು ನೋಡತೊಡಗಿದವು.

ಸಾವಿನ ಬಾಯಿಗೆ ನುಗ್ಗಿದ ದ್ರೋಹಿ :

ಮರುದಿನ ಅಂದರೆ ಅಗಸ್ಟ್ ೩೧ ರಂದು ಬೆಳಿಗ್ಗೆ ಗೋಸ್ವಾಮಿ ಸತ್ಯೇಂದ್ರರನ್ನು ನೋಡಲು ಆಸ್ಪತ್ರೆಗೆ ಬಂದ. ಒಬ್ಬ ಆಂಗ್ಲೋ ಇಂಡಿಯನ್ ಕೈದಿ ವಾರ್ಡರ್ ಅವನೊಟ್ಟಿಗಿದ್ದ. ಗೋಸ್ವಾಮಿಯನ್ನು ಆಸ್ಪತ್ರೆಯಿಂದ ನೇರವಾಗಿ ಯಮಧರ್ಮನ  ಬಳಿಗೆ ಕಳಿಸಲು ಸತ್ಯೇನ್ ಕಾದು ಕುಳಿತ್ತಿದ್ದರು.

ಗೋಸ್ವಾಮಿ ಆಸ್ಪತ್ರೆಯೊಳಗೆ ಪ್ರವೇಶಿಸಿದವನೇ ಡಿಸ್ಪೆನ್ಸರಿ ಕೋಣೆಯತ್ತ ಹೆಜ್ಜೆ ಹಾಕತೊಡಗಿದ. ಹಸಿದ ಹುಲಿಯಂತೆ ಸತ್ಯೇನ್ ಅವನಕಡೆಗೆ ನುಗ್ಗಿದರು. ಕೈಯಲ್ಲಿದ್ದ ರಿವಾಲ್ವಾರ್ ಕೂಡಲೇ ಗರ್ಜಿಸಿತು. ಗುಂಡೇಟು ತಿಂದ ಗೋಸ್ವಾಮಿ ಆರ್ತನಾದ ಮಾಡುತ್ತಾ ಓಡಿದ.  ಓಡಿದಾದರೂ ಎಲ್ಲಿಗೆ ? ಕನ್ನಯ್ಯಲಾಲ್ನ ವಾರ್ಡಿಗೆ. ಸತ್ಯೇನ ಹೊಡೆದ ಗುಂಡಿನಿಂದ ಅವನು ಸತ್ತಿತದ್ದರೆ ಕನ್ನಯ್ಯಲಾಲನಿಗೆ ಬಹಳ ನಿರಾಶೇಯಾಗುತ್ತಿತ್ತು. ಕನ್ನಯ್ಯಲಾಲ್ ತಾನು ಸಿದ್ದ ಮಾಡಿಟ್ಟಿದ್ದ ರಿವಾಲ್ವಾರ‍್ನ್ನು ಗುರಿಯಿಟ್ಟು ಕುದುರೆ ಒತ್ತಿಯೇ ಬಿಟ್ಟ. ಗುರಿ ತಪ್ಪಲಿಲ್ಲ.

ಆದರೂ ಗೋಸ್ವಾಮಿ ಸಾಯಲಿಲ್ಲ. ಮಾಳಿಗೆ ಮೆಟ್ಟಿಲು ಸಾಲಿನ ಹಿಂಬದಿಗೆ ಓಡಿದ. ಸತ್ಯೇನ್, ಕನ್ನಯ್ಯ ಇಬ್ಬರೂ ಅವನನ್ನು ಓಡಿಸಿಕೊಂಡು ಹೋದರು.ರಿವಾಲ್ವಾರ್‌ಗಳು ಖಾಲಿಯಾಗುವ ತನಕವೂ ಗುಂಡಿನ ಮಳೆಗರೆದರು. ಆಸ್ಪತ್ರೆಯ ಬಾಗಿಲೆದುರಿಗೆ ಚರಂಡಿಯಲ್ಲಿ ಗೋಸ್ವಾಮಿ ಸತ್ತು ಬಿದ್ದ. ದೇಶಧ್ರೋಹಿಗೆ ತಕ್ಕ ಶಿಕ್ಷೆ ಆಯಿತು.

ಇಷ್ಟು ಹೊತ್ತಿಗೆ ಇಡೀ ಸೆರಮನೆಯಲ್ಲಿ ಕೋಲಾಹಲವಾಗಿತ್ತು. ಕೈದಿಗಳು, ವಾರ್ಡುರುಗಳು ಓಡಿ ಬಂದು ಇಬ್ಬರನ್ನೂ ಹಿಡಿದು ನಿರಾಯುಧರನ್ನಾಗಿ ಮಾಡಿದರು. ಅವರಿಗೇನೋ ಹೆದರಿಕೆ ಆಗಲಿಲ್ಲ. ಅವರ ಕೆಲಸವು ಆಗಿತ್ತು. ವಂದೇ ಮಾತರಂ ಎಂಬ ಧನಿ ಎತ್ತಿ ಹೋ ಕೂಗಿದರು. ಆ ಕಡೆಯಿಂದ ಉಳಿದ ದೇಶಭಕ್ತರು ಅದೇ ಕೂಗಿನಿಂದ ಓಗೊಟ್ಟರು.

ಮುಂದಿನ ಪರಿಣಾಮ ಎಂತಹದೆಂಬುವುದನ್ನು ಎಲ್ಲರೂ ಮೊದಲೇ ನಿರೀಕ್ಷಿಸಿದ್ದರು.ಹಾಗೆಯೇ ಆಯಿತು. ಸತ್ಯೇನ್ ಕನ್ನಯ್ಯ ಇಬ್ಬರದೂ ವಿಚಾರಣೆ ಆಯಿತು. ಇಬ್ಬರಿಗೂ ಮರಣದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ಕೀರ್ತಿಯೊಂದೇ ಉಳಿವುದು :

ದೇಶಭಕ್ತರು ಎಂದೂ ಸಾವಿಗೆ ಹೆದರುವುದಿಲ್ಲ. ಸತ್ಯೇನ್ ಮತ್ತು ಕನ್ನಯ್ಯ ಇಬ್ಬರೂ ಸಾವಿನಲ್ಲಿ ಆಸದೃಶ್ಯ ಧೈರ್ಯ ತೋರಿದರು.

ಕನ್ನಯ್ಯನನ್ನು ೧೯೦೮ರ ನವೆಂಬರ ೧೦ ರಂದು ಗಲ್ಲಿಗೇರಿಸಿದರು. ಅದರ ಹಿಂದಿನ ದಿನ ಅಲ್ಲಿದ್ದ ಐರೋಪ್ಯ ಜೈಲರ್ ಕೇಳೀದ, “ಕನ್ನಯ್ಯ ಇದುವರೆಗೆ ನೀನು ಮುಗುಳನಗುತ್ತ ಇದ್ದೀಯ. ಆದರೆ ನಾಳೆ ನಿನ್ನತುಟಿಗಳು ಕಲ್ಲಿದ್ದನಂತೆ ಕಪ್ಪಾಗಿ ಹೋಗಲಿವೆ. ಏನು ಹೇಳ್ತಿಯಾ?” ಆಗ ಕನ್ನಯ್ಯ ಮಾತನಾಡಲಿಲ್ಲ. ಮರುದಿನ ಗಲ್ಲಿಗೆ ಹಾಕಲು ಕರೆತಂದು ಕಣ್ಣುಕಟ್ಟಿ, ಇನ್ನೇನು ಕೊರಳಿಗೆ ಹಗ್ಗ ಬಿಗಿಯಿಬೇಕು ಅನ್ನುವಷ್ಟರಲ್ಲಿ ಕನ್ನಯ್ಯ ಆಜೈಲರ ಕಡೆಗೆ ತಿರುಗಿ “ಈಗ ಹೇಗೆ ಕಾಣ್ತಿದ್ದೇನೆ?” ಎಂದು ಕೇಳಿದ. “ಇಂತಹ ವೀರರಿಗೆ ಜನ್ಮವಿತ್ತ ದೇಶವೇ ಧನ್ಯ” ಎಂದು ಆ ಅಧಿಕಾರಿ ಅನಂತರ ಮೋತಿಲಾಲ್ ಘೋಷ್ ಎಂಬ ಕ್ರಾಂತಿ ಲೇಖಕನೊಂದಿಗೆ ಹೇಳಿದ.

ಅಳುವ ಅಮ್ಮನನ್ನು ನೋಡಲೊಲ್ಲೆ !

ಸತ್ಯೇಂದ್ರರನ್ನು ನೋಡಲು ಅವರ  ತಾಯಿ ಬಂದರು. ಸೆರೆಮನೆಯ ಅಧಿಕಾರಿಗಳ ಮುಂದೆ ಅಳುವುದಾದರೆ ಆಕೆ ನನ್ನನ್ನು ನೋಡಲು ಬರುವುದೇ ಬೇಡ ಎಂದರು ಸತ್ಯೇನ್. ಅಳುವುದಿಲ್ಲ ಎಂದು ತಾಯಿ ವಚನಕೊಟ್ಟ ಬಳಿಕವೇ ಅವರನ್ನು ನೋಡಲು  ಒಪ್ಪಿದರು.

ತಾಯಿಗೆ ಮಗ ಸಾಯುವವನಲ್ಲ ಎಂಬ ದುಃಖ, ಅವನು ಹೇಗಾದರೂ ಉಳಿದರೆ ಸಾಕು ಎಂಬ ಕಾತುರ. ಮಗ ಕ್ಷಮಾದಾನ ಕೇಳಿ ಬಿಡುಗಡೆಯಾಗಬೇಕೆಂದು ತಾಯಿ ಒತ್ತಾಯ ಮಾಡಿದಳು. ಸತ್ಯೇನ್ ಮೊದಲು ಅದಕ್ಕೆ ಒಪ್ಪಲಿಲ್ಲ. ಅವರ ಸಂಗಾತಿ ಹೇಮಚಂದ್ರ ಅವರೊಡನೆ ವಾದಿಸಿದ. ಸತ್ಯೆಂದ್ರರಂತಹ ನಾಯಕರು ಉಳಿದರೆ ದೇಶದ ಸ್ವಾತಂತ್ರ್ಯಕ್ಕಾಗಿ ಎಷ್ಟೂ ಕೆಲಸ ಮಾಡಬಹುದು ಎಂದು ಒತ್ತಾಯ ಮಾಡಿದ. ಸತ್ಯೇಂದ್ರರು ಕೊನೆಗೆ ಹೇಮಚಂದ್ರನ ಒತ್ತಾಯದಿಂದ ಒಪ್ಪಬೇಕಾಯಿತು. ಹೇಮಚಂದ್ರ ಎಲ್ಲ ಅಪರಾಧವನ್ನು ತನ್ನ ಮೇಲೆ ಹೊರಿಸಿಕೊಂಡ. ಆದರೆ ಪ್ರಯೋಜನವಾಗಲಿಲ್ಲ. ಕ್ಷಮಾಭಿಕ್ಷೆಯ ಅರ್ಜಿ ತಿರಸ್ಕೃತವಾಯಿತು. ಸತ್ಯೇಂದ್ರರಿಗೆ ಬಹಳ ಸಂತೋಷವಾಯಿತು.

೧೯೦೮ರ ನವೆಂಬರ್ ೨೧ರಂದು ಸತ್ಯೇಂದ್ರು ಕೊನೆಯ ಬಾರಿ ಸೂರ್ಯನನ್ನು ನೋಡಿದರು. ಪ್ರಶಾಂತ ಮುಖ ಮುದ್ರೆಯಿಂದ ಗಲ್ಲು ಕಂಬ ಏರಿದರು.

ಹೆಣಕ್ಕೂ ಹೆದರಿದರು:

ಸತ್ಯೇನ್ ಶಾಂತರಾಗಿ ಸತ್ತರು. ಆದರೂ ಬ್ರಿಟಿಷರಿಗೆ ಎಲ್ಲಿಲ್ಲದ ಭೀತಿ. ಸತ್ತ ಮೇಲೂ ಸೇಡು ತೀರಿಸಿಕೊಂಡಾನೆಂಬ ಹೆದರಿಕೆ. ಅವನ ಶವನನ್ನು ನೋಡಿದರೆ ಜನಗು ಭುಗಿಲೆದ್ದಾರೆಂಬ ಸಂಶಯ.ಅದಕ್ಕಾಗಿ ಶವವನ್ನು ಮನೆಯವರಿಗೆ ಒಪ್ಪಿಸಲೇ ಇಲ್ಲ. ಕೊನೆಗೆ ಸತ್ಯೆಂದ್ರರ ಸಂಬಂಧಿ ಅವಿನಾಶ ಚಂಧ್ರರಾಯ್ ಅವರು ಮಧ್ಯಸ್ಥಿಕೆ ನಡೆಸಿದರು.  ಸೆರಮನೆಯೊಳಗೆ ಶವಸಂಸ್ಕಾರ ಮಾಡುವುದಾದರೆ ಅಡ್ಡಿಯಿಲ್ಲ ಎಂದು ಪ್ರಖ್ಯಾತ ಬ್ರಹ್ಮಸಮಾಜ ನಾಯಕ ಹಾಗೂ ಪೊರೋಹಿತರು ಸತ್ಯೆಂದ್ರರ ಅಂತ್ಯಕ್ತಿಯೆಗಳನ್ನು ನೆರವೇರಿಸಿದರು. ಸತ್ಯೇಂದ್ರರ ಭೌತಿಕ ದೇಹವನ್ನು ದಹಿಸಿದ ಅಗ್ನೀಯ ಜ್ವಾಲೆಗಳು ಗಗನಕ್ಕೇರುತ್ತಿದ್ದಂತೆ “ವಂದೇ ಮಾತರಂ” ಎಂದು ಸೆರೆಮನೆಯಲ್ಲಿದ್ದ ದೇಶಭಕ್ತರ ಘೊಷಣೆ ಮುಗಿಲು ಮುಟ್ಟಿತು.

ಅಲೀಪುರ ಬಾಂಬ್ ಮೊಕದ್ದಮೆಯಲ್ಲಿ ಬಾರೀಂದ್ರಕುಮಾರ ಘೊಷ್,  ಉಲ್ಲಾಸಕರ ದತ್ತ, ಉಪೇಂದ್ರನಾಥ ಬ್ಯಾನರ್ಜಿ ಮೊದಲಾದ ಹಲವು ನಾಯಕರಿಗೆ ಸೆರಮನೆವಾಸದ ಶಿಕ್ಷೆಯಾಯಿತು. ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ಗಳಿಸಿದ ಈ ಪ್ರಕರಣದಲ್ಲಿ ಅಸ್ತಂಗತವಾದ ದೊಡ್ಡ ನಕ್ಷತ್ರ ಸತ್ಯೆಂದ್ರನಾಥ ಬೋಸ್,

ಗಲ್ಲಿಗೇರಿದಾತ ಸತ್ಯಂದ್ರನಾಥ ಬೋಸರಿಗೆ ಇಪ್ಪತ್ತಾರು ವರ್ಷ. ಸಾಮಾನ್ಯವಾಗಿ ಒಬ್ಬ ಮನುಷ್ಯ ಒಂದು ಕೆಲಸವನ್ನು ಸಂಪಾದಿಸಿಕೊಂಡು ಜೀವನವನ್ನು ಪ್ರಾರಂಭಿಸುವ ವಯಸ್ಸು. ಈ ವಯಸ್ಸಿಗೆ  ಸತ್ಯೇಂದ್ರರ ಬಾಳೆ ಮುಗಿದುಹೋಯಿತು. ಆ ವಯಸ್ಸಿಗಾಗಲೇ ಸ್ವಾತಂತ್ರ್ಯದ ಹೋರಾಟಗಾರರ ತಂಡಕ್ಕೆ ನಾಯಕರಾಗಿದ್ದರು. ಐದಾರು ವರ್ಷಗಳನ್ನು ದೇಶ ಸೇವೆಯಲ್ಲಿಯೇ ಕಳೆದಿದ್ದರು. ಯಾವ ಕ್ಷಣದಲ್ಲಾದರೂ ಪೋಲಿಸರ ಕೈಗೆ ಸಿಕ್ಕಬಹುದು, ಸೆರೆಮನೆಗೆ ಹೋಗಬೇಕಾಗಬಹುದು ಎಂಬ ಅಪಾಯದಲ್ಲಿಯೇ ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡಿ ದೇಶಕ್ಕೆ ಸೇವೆ ಸಲ್ಲಿಸಿದರು.

ಸತ್ಯೇಂದ್ರನಾಥ ಬೋಸರು, ಅವರ ಶಿಷ್ಯ ಖುದೀರಾಮ ಭೋಸರು ಇಂತಹವರ ಸಾಹಸದಿಂದ, ಭಾರತೀಯರು ಹೇಡಿಗಳು ಎಂದು ಭಾವಿಸಿದ ಬ್ರಿಟಿಷರು ಕಣ್ಣು ಬಿಡುವಂತಾಯಿತು, ಬೆರಗಾಗುವಂತಾಯಿತು.

ಇಪ್ಪತ್ತಾರು ವರ್ಷಕ್ಕೆ ಸಾವನಪ್ಪಿಪದ ಅವರು ಶತಮಾನಗಳ ಕಾಲ ಈ ನಾಡಿನ ದೇಶಭಕ್ತರಿಗೆ ಸ್ಪೂರ್ತಿಯ ನೆಲೆಯಾಗಿ ಬೆಳಗಾಗುತ್ತಾರೆ.