(ಕ್ರಿ.ಶ. ೧೮೯೪ – ೧೯೭೪) (ಬೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ)

ಕ್ವಾಂಟಮ್ ಚಲನವನ್ನಾಧರಿಸಿದ ಸಂಖ್ಯಾ ಶಾಸ್ತ್ರಗಳಲ್ಲಿ ಎರಡು ವಿಧ. ಒಂದು, ಫರ್ಮಿ-ಡಿರ್ಯಾಕ್ ಸಂಖ್ಯಾಶಾಸ್ತ್ರ. ಇನ್ನೊಂದು, ಮೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ. ಇದರಲ್ಲಿ ಎರಡನೆಯ ಸಂಖ್ಯಾಶಾಸ್ತ್ರ ಪದ್ಧತಿಯನ್ನು ಕಂಡು ಹಿಡಿದು ವಿಶ್ವವಿಖ್ಯಾತರಾದ ಭಾರತೀಯ ಭೌತವಿಜ್ಞಾನಿ, ಸತ್ಯೇಂದ್ರನಾಥ ಬೋಸ್.

ಸತ್ಯೇಂದ್ರನಾಥ ಬೋಸ್ ಜನವರಿ ೧, ೧೮೯೪ರಂದು ಕಲ್ಕತ್ತಾದಲ್ಲಿ ಜನಿಸಿದರು. ತಂದೆ ಸುರೇಂದ್ರನಾಥ್ ಇಂಗ್ಲೀಷ್ ಶಿಕ್ಷಣ ಪಡೆದು ಈಸ್ಟ್ ಇಂಡಿಯಾ ರೇಲ್ವೆಯ ಎಂಜಿನೀಯರಿಂಗ್ ವಿಭಾಗದಲ್ಲಿ ಲೆಕ್ಕ ತಪಾಸಿಗನಾಗಿ ಕೆಲಸ ಮಾಡುತ್ತಿದ್ದರು. ತಾಯಿ ಆಮೋದಿನಿ ದೇವಿ. ಐದನೆಯ ವಯಸ್ಸಿನಲ್ಲಿ ಶಾಲೆಗೆ ಸೇರಿದ ಸತ್ಯೇಂದ್ರನಾಥ ಶಾಲೆಯಲ್ಲಿ ಜಾಣ ಹುಡುಗನಾಗಿದ್ದ. ಈತ ಹಿಂದೂ ಸ್ಕೂಲಿನಲ್ಲಿ ಓದುತ್ತಿದ್ದಾಗ ಉಪೇಂದ್ರನಾಥ್ ಬಕ್ಷಿ ಎಂಬ ಶಿಕ್ಷಕರು ಗಣಿತದಲ್ಲಿ ಈತನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದರು. ಅವರ ಪ್ರೋತ್ಸಾಹದಿಂದ ಸತ್ಯೇಂದ್ರನಾಥ್ ಪರೀಕ್ಷೆಯಲ್ಲಿ ಉತ್ತಮ ಗುಣಾಂಕಗಳನ್ನು ಪಡೆದು ಪ್ರೆಸಿಡೆನ್ಸಿ ಕಾಲೇಜು ಸೇರಿದರು. ಇನ್ನೊಬ್ಬ ಖ್ಯಾತ ವಿಜ್ಞಾನಿ ಮೇಘನಾದ ಸಹಾ ಅವರೂ ಅದೇ ಕಾಲೇಜಿಗೆ ಸೇರಿದ್ದರು. ಇಬ್ಬರೂ ಒಳ್ಳೆಯ ಮಿತ್ರರು. ಬಿ‌ಎಸ್‌ಸಿಯಲ್ಲಿ ಸತ್ಯೇಂದ್ರನಾಥ್ ಬೋಸ್ ಮೊದಲನೆಯ ಸ್ಥಾನ ಪಡೆದರೆ ಮೇಘನಾದ ಸಹಾ ಎರಡನೆಯ ಸ್ಥಾನವನ್ನು ಪಡೆದರು. ಎಂಎಸ್‌ಸಿಯಲ್ಲೂ ಅದೇ ಪರಿಣಾಮ. ಇಬ್ಬರೂ ಕಲ್ಕತ್ತಾ ಯುನಿವರ್ಸಿಟಿ ಆಫ್ ಸಯನ್ಸ್‌ನಲ್ಲೇ ‘ಅಪ್ಲೈಡ್ ಮ್ಯಾಥೆಮೆಟಿಕ್ಸ್’ ಲೆಕ್ಚರರುಗಳಾಗಿ ಸೇವೆಗೆ ತೊಡಗಿದರು.

ಸತ್ಯೇಂದ್ರನಾಥ ಬೋಸ್ ಶಾಂತಿ ಮತ್ತು ನಿಶ್ಯಸ್ತ್ರೀಕರಣ ಪ್ರತಿಪಾದಕರು ಕೂಡ ಆಗಿದ್ದರು. ಅವರು ಸೋವಿಯತ್ ಒಕ್ಕೂಟ, ಡೆನ್ಮಾರ್ಕ್, ಚೆಕೊಸ್ಲೊವಾಕಿಯಗಳನ್ನೊಳಗೊಂಡು ಅನೇಕ ದೇಶಗಳಿಗೆ ಭೇಟಿಕೊಟ್ಟರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬ್ರಿಟಿಷರ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು ದೇಶದ ಸ್ವಾತಂತ್ರ್ಯದ ಅವಶ್ಯಕತೆಯನ್ನು ಚೆನ್ನಾಗಿ ಅರಿತಿದ್ದರು. ಅವರು ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ತತ್ವಜ್ಞಾನ, ಕಲೆ, ಸಾಹಿತ್ಯ ಮೊದಲಾದ ವಿಷಯಗಳ್ಲೂ ಆಸಕ್ತಿಯುಳ್ಳವರಾಗಿದ್ದರು.

ವಿಜ್ಞಾನದಲ್ಲಿ ಅವರ ಸೇವೆಯನ್ನು ಮಾನ್ಯಮಾಡಿ ಭಾರತ ಸರಕಾರ ಅವರಿಗೆ ೧೯೫೪ರಲ್ಲಿ ಪದ್ಮವಿಭೂಷಣ ಬಿರುದನ್ನು ನೀಡಿತು.

ಸತ್ಯೇಂದ್ರನಾಥ್ ಬೋಸ್ ೧೯೭೪ರಲ್ಲಿ ನಿಧನ ಹೊಂದಿದರು.