ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ಪರಿಸರ – ಚತುರ್ವಿಧ ರಂಗಗಳಲ್ಲಿ ಸಾಕಷ್ಟು ಕೃಷಿಗೈದು ಹುಲುಸಾದ ಬೆಳೆ ಬೆಳೆದು ‘ಕನ್ನಡದ ಕಣಜ’ ತುಂಬಿರುವ ಶ್ರೀ ಸದಾನಂದ ಕನವಳ್ಳಿಯವರು ಕರ್ನಾಟಕ ಕಂಡ ಅಪೂರ್ವ ವಿದ್ವಾಂಸರಲ್ಲೊಬ್ಬರು. ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರು ತಾಲೂಕಿನ ಹಿರೇಮುಗದೂರ ಗ್ರಾಮದ ರೈತಾಪಿ ಕುಟುಂಬದಲ್ಲಿ; ೧೯೩೫ರ ಸೆಪ್ಟೆಂಬರ್‍ ೧೯ ರಂದು. ತಂದೆ ವೀರಪ್ಪ, ತಾಯಿ ವೀರಮ್ಮ. ಡಾ.ವಿ. ಕೃ. ಗೋಕಾಕ ಹಾಗೂ ಪ್ರೊ. ಅರಮ್ಯಾಂಡೊ ಮೆನೆಜಸ್‌ರಂತಹ ಮಹಾಮೇಧಾವಿಗಳ ಶಿಷ್ಯರಾಗಿ ಕರ್ನಾಟಕ ಕಾಲೇಜಿನಿಂದ ಇಂಗ್ಲೀಷ್‌ ಮಾನಸ ಶಾಸ್ತ್ರದಲ್ಲಿ ಬಿ.ಎ. (೧೯೫೬), ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲೀಷ್‌ನಲ್ಲಿ ಎಂ.ಎ. (೧೯೫೮) ಪದವಿ ಪ್ರಾಪ್ತಿ.

ಪಿ.ಸಿ. ಜಾಬಿನ್‌. ವಿಜ್ಞಾನ ಕಾಲೇಜು ಹುಬ್ಬಳ್ಳಿ, ವಿಜಯ ಕಾಲೇಜು ಹಾಗೂ ಎ.ಎಸ್‌.ಪಿ. ಕಾಮರ್ಸ್ ಕಾಲೇಜು ವಿಜಾಪೂರಗಳಲ್ಲಿ ೮ ವರ್ಷ (೧೯೫೮ ರಿಂದ ೧೯೬೬) ಉಪನ್ಯಾಸಕರಾಗಿ, ಕೊಪ್ಪಳ ಗವಿ ಸಿದ್ದೇಶ್ವರ ಕಾಲೇಜು ಹಾಗೂ ಲಕ್ಷ್ಮೀಶ್ವರದ ಮುನ್ಸಿಪಲ್‌ ಆರ್ಟ್ಸ್ ಕಾಲೇಜಿನಲ್ಲಿ ೨೫ ವರ್ಷ (೧೯೬೬-೧೯೯೧) ಪ್ರಾಚಾರ್ಯರಾಗಿ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ೩ ವರ್ಷ (೧೯೯೧-೯೩) – ಹೀಗೆ ೩೬ ವರ್ಷಗಳ ಸುದೀರ್ಘ ವೃತ್ತಿ. ಕಾಲೇಜು ಅಧ್ಯಾಪನ ದಿನಗಳಲ್ಲಿ ಕನ್ನಡ ಸಾಹಿತ್ಯ ದಿಗ್ಗಜರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಅವರ ದರ್ಶನ, ಹಿತ ನುಡಿ ಕೇಳಿಸಿದ್ದು ಅವರ ವಿದ್ಯಾರ್ಥಿ ಪ್ರೀತಿಗೆ ನಿದರ್ಶನ.

ಅವರು ಇದುವರೆಗೆ ರಚಿಸಿದ ಒಟ್ಟು ಕೃತಿಗಳು ೨೭. ಅವುಗಳಲ್ಲಿ ೧೩ ಸ್ವತಂತ್ರ, ೧೦ ಅನುವಾದ ಮತ್ತು ೪ ಸಂಪಾದಿತ. ಸ್ವತಂತ್ರ ಕೃತಿಗಳಲ್ಲಿ ದೇಶಭಕ್ತ ಕೌಜಲಗಿ ಶ್ರೀನಿವಾಸರಾಯರು, ನಾಟಕ ಸಾರ್ವಭೌಮ ಶಿರಹಟ್ಟಿ ವೆಂಕೋಬರಾಯರು, ನಾಟಕ ರತ್ನ ಗುಬ್ಬಿ ವೀರಣ್ಣ, ಗಾಯಯೋಗಿ ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ ಮನಸೂರ, ಸವಾಯ್‌ ಗಂಧರ್ವ, ಹುಕ್ಕೇರಿ ಬಾಳಪ್ಪ ಕರ್ನಾಟಕದ ಹಿಂದೂಸ್ಥಾನಿ ಸಂಗೀತಗಾರರು, ಒಲಂಪಿಕ್ಸ್ ನಡೆದು ಬಂದ ದಾರಿ, ಕಿತ್ತಿಕೊ ಹಚ್ಚಿಕೊ ಸತ್ಯಾಗ್ರಹ, Quest for Justice (The story of Environmental Struggle), Mallikarjuna Mansur, Karnataka’s Hindustani Musicians; ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳಲ್ಲಿ ವಾಣಿಜ್ಯ ಮತ್ತು ಬ್ಯಾಂಕಿಂಗ್‌, ರೊಮಿಲಾ ಥಾಪರ, ಇಂಡಿಯಾ, ಭೀಮಸೇನ ಜೋಶಿ; ವ್ಯಕ್ತಿ ಮತ್ತು ಸಂಗೀತ, ರಾಬರ್ಟ್ ಸೆವೆಲ್‌ರ; ಮರೆತು ಹೋಗಿರುವ ಮಹಾ ಸಾಮ್ರಾಜ್ಯ ವಿಜಯನಗರ, ಮಿಥಿಲೆಯನ್ನಾಳಿದ ಕರ್ನಾಟಕರು, ಹಿಮಾಚಲವನ್ನಾಳಿದ ಸೇನರು, ಎಚ್‌. ಹೆರಸ್‌ರ ವಿಜಯನಗರದ ಆರಂಭಿಕ ಇತಿಹಾಸ, ಡಾ.ಎಸ್‌. ಶೆಟ್ಟರ್; ಸಾವಿಗೆ ಆಹ್ವಾನ; ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಕೃತಿಗಳು, ಡಾ. ಎಂ. ಎಂ. ಕಲಬುರ್ಗಿ ಅವರ: Kannada Onomastics; ಇಂಗ್ಲೀಷಿನಿಂದ ಹಿಂದಿಗೆ ಅನುವಾದಿಸಿದ ಕೃತಿಗಳು, ಡಾ. ಶೆಟ್ಟರ್ ಅವರ ಶ್ರವಣಬೆಳ್ಗೊಳ; ಸಂಪಾದಿತ ಕೃತಿಗಳು ಪುಲಿಗೆರೆ, ವೀರಶೈವ ಸಾಹಿತ್ಯ ಸಮೀಕ್ಷೆ, ವ್ಯಾಸಂಗ, ಮಹಾ ಮಾರ್ಗ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯ ಸುಮಾರು ೨೦೦ ಲೇಖನಗಳು ಪ್ರಕಟಗೊಂಡಿವೆ.

ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಧಾರವಾಡ ಕ.ವಿ.ವಿ. ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಖಾಸಗಿ ಕಾಲೇಜುಗಳ ಪ್ರಾಚಾರ್ಯರ ಹಾಗೂ ಆಡಳಿತ ಮಂಡಳಿ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದ್ದಾರೆ. ಧಾರವಾಡದ ಸಿತಾರ ರತ್ನ ರಹಿಮತಖಾನ್‌ ಸಮಿತಿ, ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷರಾಗಿ, ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್‌ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರ ಸಾಹಿತ್ಯ ಕಾಯಕಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ (ಕಲಾ ವಿಮರ್ಶೆಗೆ) (೧೯೯೧-೯೨) ಪ್ರಶಸ್ತಿ ಹಾಗೂ ರಾಣಿಬೆನ್ನೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ (೧೯೯೬), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ. ನಿವೃತ್ತರಾಗಿ ಧಾರವಾಡದಲ್ಲಿ ನೆಲೆಸಿರುವ ಶ್ರೀ ಸದಾನಂದ ಕನವಳ್ಳಿಯವರಿಗೆ ಸದಾ ಸಾಹಿತ್ಯ ಸಂಗೀತದ್ದೇ ಚಿಂತನೆ.