ಸದಾಶಿವ ಬ್ರಹ್ಮೇಂದ್ರಪ್ರಸಿದ್ಧ ವಾಗ್ಗೇಯಕಾರರು. ಯೋಗಿಗಳಾಗಿ, ಎಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ಬದುಕಿದ ಮಹಾ ಜ್ಞಾನಿಗಳು. “ಭಜರೇ ಗೋಪಾಲಂ’, “ಮಾನಸ ಸಂಚರರೆ’, ’ಗಾಯಕಿ ವನಮಾಲಿ’ ಮೊದಲಾದ ಇವರ ರಚನೆಗಳು ಇಂದಿಗೂ ಜನಪ್ರಿಯವಾಗಿವೆ.

ಸದಾಶಿವ ಬ್ರಹ್ಮೇಂದ್ರ

 

ತಮಿಳುನಾಡನ್ನು ಕಲೆಯ ತೌರೂರೆಂದು ಕರೆಯುವು ದುಂಟು. ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪಕಲೆಗೆ ಈ ನಾಡಿನಲ್ಲಿ ಹಿಂದಿನಿಂದಲೂ ಹೆಚ್ಚಿನ ಪ್ರೋತ್ಸಾಹವು ದೊರೆಯುತ್ತಿದೆ. ಇಲ್ಲಿ ಆಳಿದ ಹಲವು ರಾಜ ಮನೆತನಗಳು ಶಿಲ್ಪಕಲೆಯನ್ನು ಪ್ರೋತ್ಸಾಹಿಸುತ್ತ ಬಂದವು. ತಮಿಳುನಾಡಿನ ಉದ್ದಕ್ಕೂ ನೂರಾರು ಶ್ರೇಷ್ಠವಾದ ದೇವಾಲಯಗಳನ್ನು ಇವರು ಕಟ್ಟಿಸಿದರು. ಶಿಲಾಮಯವಾದ ಈ ದೇವಾಲಯಗಳೆಲ್ಲ ಸುಂದರವಾದ ಕಲಾಕೃತಿಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ಆಳಿದ ರಾಜರುಗಳ ಆಸ್ಥಾನಗಳಲ್ಲಿ ಕವಿಗಳು ಮಹಾಕಾವ್ಯಗಳನ್ನು ರಚಿಸುತ್ತ ಇದ್ದುದುಂಟು. ಹಾಗೆಯೇ ಶಾಸ್ತ್ರೀಯ ನೃತ್ಯವನ್ನು ಇಲ್ಲಿಯ ರಾಜಮಹಾರಾಜರು ಹಿಂದಿನಿಂದಲೂ ಬೆಳೆಸಿಕೊಂಡು ಬಂದರು. ಶಾಸ್ತ್ರೀಯ ಸಂಗೀತಕ್ಕೂ ತಮಿಳುನಾಡು ಅಷ್ಟೇ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು ತಮಿಳುನಾಡಿನ ಮಹಾರಾಜರುಗಳ ಆಶ್ರಯದಲ್ಲಿ ಇದ್ದುಕೊಂಡು ಸಂಗೀತ ಕಲೆಯನ್ನು ಅಭಿವೃದ್ಧಿ ಪಡಿಸಿದರು.

ಭಾರತದಲ್ಲಿ ಎರಡು ಸಂಗೀತ ಪದ್ಧತಿಗಳಿವೆ. ಒಂದು ದಕ್ಷಿಣಾದಿ, ಇನ್ನೊಂದು ಉತ್ತರಾದಿ, ದಕ್ಷಿಣಾದಿ ಸಂಗೀತವನ್ನು ಕರ್ನಾಟಕ ಸಂಗೀತವೆಂದೂ ಕರೆಯುತ್ತಾರೆ. ಉತ್ತರಾದಿಯನ್ನು ಹಿಂದುಸ್ಥಾನಿ ಸಂಗೀತವೆಂದೂ ಕರೆಯುತ್ತಾರೆ. ಕರ್ನಾಟಕ ಸಂಗೀತ ಪದ್ಧತಿಯು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲಿ ಬಳಕೆಯಲ್ಲಿದೆ. ಹಿಂದುಸ್ಥಾನಿಯು ಉತ್ತರ ಭಾರತದಲ್ಲಿ ಬಳಕೆಯಲ್ಲಿದೆ. ಈ ಸಂಗೀತ ಪದ್ಧತಿಗಳು ಬೇರೆ ಬೇರೆಯಾದರೂ ಇವುಗಳಲ್ಲಿ ಹೆಚ್ಚಿನ ವ್ಯಾತ್ಯಾಸವೇನಿಲ್ಲ. ಎರಡೂ ಶ್ರೇಷ್ಠವಾದ ಸಂಗೀತ ಪದ್ಧತಿಗಳೆ. ಯಾರೂ ಕೇಳಬಹುದಾದ, ಕೇಳಿ ತಲೆದೂಗಬಹುದಾದ ರಾಗಗಳು ಈ ಎರಡೂ ಪದ್ಧತಿಗಳಲ್ಲಿವೆ.

ತಮಿಳುನಾಡಿನಲ್ಲಿ ಕರ್ನಾಟಕ ಸಂಗೀತದ ಅಭಿಮಾನಿಗಳು ಹೆಚ್ಚು. ಕರ್ನಾಟಕ ಸಂಗೀತ ಪದ್ಧತಿಯನ್ನು ಬೆಳೆಸಿದ ಹಲವಾರು ವಾಗ್ಗೇಯಕಾರರು, ಸಂಗೀತಗಾರರು ತಮಿಳುನಾಡಿನಲ್ಲಿ ಹುಟ್ಟಿದ್ದಾರೆ. ಶ್ರೀ ತ್ಯಾಗರಾಜರು, ಶ್ರೀ ಮುತ್ತುಸ್ವಾಮಿ ದೀಕ್ಷಿತರು, ಶ್ರೀ ಶ್ಯಾಮಾಶಾಸ್ತ್ರಿಯವರು, ಸ್ವಾತಿ ತಿರುನಾಳ ಮಹಾರಾಜರು, ಇತರ ಅನೇಕರು ಕರ್ನಾಟಕ ಸಂಗೀತದ ಬೆಳವಣಿಗೆಗೆ ಕಾರಣರು. ಇವರಲ್ಲಿ ಸದಾಶಿವ ಬ್ರಹ್ಮೇಂದ್ರರು ಕೂಡ ಒಬ್ಬರು.

ಸಂತ ಕವಿ ವಾಗ್ಗೇಯಕಾರರು

ಸದಾಶಿವ ಬ್ರಹ್ಮೇಂದ್ರರು ಹದಿನೆಂಟನೇ ಶತಮಾನದಲ್ಲಿ ಪ್ರಸಿದ್ಧರಾದ ಒಬ್ಬ ಸಂತರು. ಇವರು ಕವಿಗಳೂ ಹೌದು. ವಾಗ್ಗೇಯಕಾರರೂ ಹೌದು. ವಾಗ್ಗೇಯಕಾರರೆಂದರೆ ಹಾಡಲು ಅನುಕೂಲವಾಗುವಂತಹ ಹಾಡುಗಳನ್ನು ರಚಿಸುವವರು. ಸದಾಶಿವ ಬ್ರಹ್ಮೇಂದ್ರರು ಕೂಡ ಸಂಸ್ಕೃತದಲ್ಲಿ ಹಲವು ಕೀರ್ತನೆಗಳನ್ನು ರಚಿಸಿ ಹಾಡಿರುತ್ತಾರೆ. ಇವರು ರಚಿಸಿದ ಕೀರ್ತನೆಗಳು ಇಂದಿಗೂ ಸಂಗೀತಗಾರರ ನಾಲಿಗೆಯ ಮೇಲೆ ನಲಿಯುತ್ತಿವೆ.

ಸದಾಶಿವ ಬ್ರಹ್ಮೇಂದ್ರರು ಪುದುಕೋಟೆ ಸಂಸ್ಥಾನದ ದೊರೆಯಾಗಿದ್ದ ವಿಜಯ ರಘುನಾಥ ತೊಂಡಮಾನ್ ಎಂಬುವವನ ಕಾಲದಲ್ಲಿ ಬದುಕಿದ್ದರೆಂದು ಹೇಳಲಾಗಿದೆ. ದೊರೆ ವಿಜಯ ರಘುನಾಥ ತೊಂಡಮಾನ್ ೧೭೩೦ ರಿಂದ ೧೭೬೯ರ ವರೆಗೆ ಪುದುಕೋಟೆ ಸಂಸ್ಥಾನದ ದೊರೆಯಾಗಿದ್ದನು.

ತಿರುವಿಸನ್ನಾಲುರ್

ತಮಿಳುನಾಡಿನ ತಿರುವಿಸನ್ನಾಲುರ್ ಎಂಬ ಊರು ಶ್ರೀ ಸದಾಶಿವ ಬ್ರಹ್ಮೇಂದ್ರರು ಹುಟ್ಟಿದ ಸ್ಥಳ. ಇವರ ತಂದೆಯವರ ಹೆಸರು ಮೋಕ್ಷಂ ಸೋಮಸುಂದರಂ. ಈ ಕಾರಣದಿಂದಾಗಿ ಶ್ರೀ ಸದಾಶಿವ ಬ್ರಹ್ಮೇಂದ್ರರನ್ನು ಮೋಕ್ಷಂ ಎಂಬ ಅಡ್ಡ ಹೆಸರಿನಿಂದಲೂ ಜನ ಕರೆಯುತ್ತಿದ್ದರು. ಇವರ ನಿಜವಾದ ಹೆಸರು ಶಿವರಾಮ. ಶಿವರಾಮ ಕೃಷ್ಣ ಎಂಬ ಹೆಸರೂ ಕೂಡ ಇವರಿಗೆ ಇತ್ತೆಂದು ಕೆಲವು ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. ಇವರ ಮಾತೃಭಾಷೆಯು ತೆಲುಗು ಎಂಬುದಾಗಿ ತಿಳಿದುಬಂದಿದೆ.

ಮೇಲೆ ಹೇಳಿರುವಂತೆ ಈ ಪ್ರದೇಶವು ಶಾಸ್ತ್ರೀಯ ಸಂಗೀತಕ್ಕೆ ಹೆಸರುವಾಸಿಯಾಗಿತ್ತು. ದೇವಾಲಯಗಳಲ್ಲಿ ದೇವರ ಉತ್ಸವಗಳ ಸಮಯದಲ್ಲಿ ತಪ್ಪದೆ ಸಂಗೀತ ಸೇವೆಯು ನಡೆಯುತ್ತಿತ್ತು. ಅಂದು ಕೂಡ ದೇವಸ್ಥಾನಗಳಲ್ಲಿ ಸಂಗೀತವನ್ನು ಹೇಳುವುದು, ಸಂಗೀತ ವಾದ್ಯಗಳನ್ನು ನುಡಿಸುವುದು ದೇವರ ಆರಾಧನೆಯ ಒಂದು ಪ್ರಮುಖ ಅಂಗವಾಗಿತ್ತು. ಊರ ತರುಣರೆಲ್ಲ ಸೇರಿ ಭಜನಾ ಮಂಡಳಿಗಳನ್ನು ಮಾಡಿ ಕೊಂಡಿರುತ್ತಿದ್ದರು. ಈ ಭಜನಾ ಮಂಡಳಿಗಳು ದೇವಸ್ಥಾನಗಳಲ್ಲಿ ಭಜನಾ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದವು.

ಭಜನೆಗಳ ಆಕರ್ಷಣೆ

ಚಿಕ್ಕಂದಿನಲ್ಲೇ ಶಿವರಾಮನು ಈ ಭಜನಾ ಮಂಡಳಿಗಳಿಂದ ಆಕರ್ಷಿತನಾದನು. ಭಜನೆಗಳಲ್ಲಿ ಉತ್ಸಾಹದಿಂದ ಪಾಲುಗೊಳ್ಳುತ್ತಿದ್ದನು. ದೇವಾಲಯಗಳಲ್ಲಿ ನಡೆಯುವ ಸಂಗೀತವು ಕೂಡ ಅವನನ್ನು ತನ್ನೆಡೆಗೆ ಸೆಳೆದು ಕೊಂಡಿತು. ಸಂಗೀತ ಸೇವೆ ನಡೆಯುವಲ್ಲೆಲ್ಲ ಶಿವರಾಮನು ಹೋಗಿ ಕುಳಿತು ಸಂಗೀತವನ್ನು ಆಲಿಸತೊಡಗಿದನು. ಹಿರಿಯರು ಸಂಗೀತವನ್ನು ಕುರಿತು ಚರ್ಚೆ ಮಾಡುವುದು ಸಾಮಾನ್ಯ ವಿಷಯವಾಗಿತ್ತು. ಇದು ಇಂತಹ ರಾಗ, ಇದು ಇಂತಹ ರಾಗ ಎಂದೆಲ್ಲಾ ಹಿರಿಯರು ಮಾತನಾಡಿ ಕೊಳ್ಳುತ್ತಿದ್ದರು. ಹೀಗಾಗಿ ಶಿವರಾಮನು ರಾಗಗಳನ್ನು ಗುರುತಿಸುವುದರಲ್ಲಿ ಪರಿಣತನಾದನು. ಸಂಗೀತವು ಅವನ ಪ್ರೀತಿಯ ವಿಷಯವಾಯಿತು. ಜೊತೆಗೆ ಅವನಲ್ಲಿ ದೈವ ಭಕ್ತಿಯೂ ಹೆಚ್ಚತೊಡಗಿತು. ಸಂಗೀತವು ಶಿವರಾಮನನ್ನು ದೈವಿಕ ವಿಚಾರಗಳ ಕಡೆಗೆ ಕರೆದೊಯ್ದಿತು. ಅವನಿಗೆ ದೊರಕಿದ ಸಂಸ್ಕೃತ ವಿದ್ಯಾಭ್ಯಾಸವು ಅವನಿಗೆ ಈ ವಿಷಯದಲ್ಲಿ ಮತ್ತೂ ಸಹಾಯ ಮಾಡಿತು.

ಗುರುಗಳು

ಶಿವಜ್ಞಾನಪುರಂ ಎಂಬ ಊರಿನಲ್ಲಿ ವಾಸವಾಗಿದ್ದ ಶ್ರೀ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಪರಮ ಶಿವೇಂದ್ರ ಸರಸ್ವತಿ ಅನ್ನುವವರು ಶಿವರಾಮನಿಗೆ ಗುರುಗಳಾಗಿ ದೊರೆತರು. ಅವರ ಸಹವಾಸದಲ್ಲಿ ಹಲವು ವರ್ಷಗಳನ್ನು ಶಿವರಾಮನು ಕಳೆದನು. ವೇದ ಉಪನಿಷತ್ತುಗಳ ಅರ್ಥವನ್ನು ಗುರುಗಳ ಮೂಲಕ ತಿಳಿದುಕೊಂಡನು. ವೇದಾಂತ ವಿಚಾರಗಳನ್ನು ಅರಿತುಕೊಂಡನು. ಸಂಗೀತ ಶಾಸ್ತ್ರವನ್ನು ಅಭ್ಯಾಸ ಮಾಡಿದನು. ಯೋಗ ವಿದ್ಯೆಯನ್ನು ಕೂಡ ಕಲಿತನು. ಸಾಮಾನ್ಯರಿಗೆ ಯಾವುದು ತುಂಬಾ ಕಷ್ಟಕರವೆನಿಸುತ್ತಿತ್ತೋ ಅದು ಶಿವರಾಮನಿಗೆ ಸುಲಭವಾಗುತ್ತಿತ್ತು. ಬೇರೆಯವರಿಗೆ ಕಬ್ಬಿಣದ ಕಡಲೆಯಾದುದು ಶಿವರಾಮನಿಗೆ ಕಲ್ಲು ಸಕ್ಕರೆಯಾಗುತ್ತಿತ್ತು. ಕಲಿಯಬೇಕೆಂಬ ಉತ್ಸಾಹ, ಅರಿಯಬೇಕೆಂಬ ಕಾತರ ಅವನನ್ನು ಮುನ್ನಡೆಸುತ್ತಿದ್ದವು. ಯಾವುದನ್ನೇ ಆಗಲಿ ಸಾಧಿಸಬೇಕೆಂಬ ಛಲ ಅವನದು. ಶಿವರಾಮನು ಅಳುಕದೆ, ಅಂಜದೆ ವಿದ್ಯೆ ಕಲಿಯ ಲಾರಂಭಿಸಿದನು.

ಪ್ರೌಢವಯಸ್ಕರಾದಂತೆ ಶಿವರಾಮರು ಎಲ್ಲರ ಗೌರವಕ್ಕೆ ಆದರಕ್ಕೆ ಪಾತ್ರರಾದರು. ದೊಡ್ಡ ವಿದ್ವಾಂಸರೆಂದು ಎಲ್ಲರಿಂದಲೂ ಕರೆಸಿಕೊಂಡರು. ಪುದುಕೋಟೆಯ ಮಹಾರಾಜರು ಅರಮನೆಯ ಉಪಾಧ್ಯಾಯರನ್ನಾಗಿ ಇವರನ್ನು ನೇಮಿಸಿಕೊಂಡರು.

ಕೀರ್ತನೆಗಳ ರಚನೆ

ಇಷ್ಟು ಹೊತ್ತಿಗಾಗಲೇ ಶಿವರಾಮರು ಕವಿಯಾಗಿ, ಪಂಡಿತರಾಗಿ ಜನಪ್ರಿಯರಾಗಿದ್ದರು. ಸಂಸ್ಕೃತ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸತೊಡಗಿದ್ದರು. ಇವುಗಳನ್ನು ಹಾಡಲು ಅನುಕೂಲವಾಗುವಂತೆ ತಾವೇ ಸ್ವರ ಪ್ರಸ್ತಾರ ಹಾಕಿ ಇಂಥ ಕೀರ್ತನೆಯನ್ನು ಇಂಥ ರಾಗದಲ್ಲಿ ಹಾಡಬಹುದು ಎಂದು ಸೂಚಿಸುತ್ತಿದ್ದರು. ಸಾಮಾನ್ಯ ಭಜನೆಗಳೆಲ್ಲ ಕ್ರಮೇಣ ಶಾಸ್ತ್ರೀಯ ಹಾಡುಗಳಿಗೆ ದಾರಿ ಮಾಡಿಕೊಟ್ಟಿದ್ದವು.  ಆದ್ದರಿಂದ ಇವರ ಕೀರ್ತನೆಗಳು ಎಲ್ಲರಿಗೂ ಹಿಡಿಸುತ್ತಿದ್ದವು.

ಅಲ್ಲದೆ ವೇದ-ಉಪನಿಷತ್ತುಗಳಲ್ಲಿ ಹೇಳಿರುವ ವಿಷಯಗಳನ್ನು ಶಿವರಾಮರು ತಮ್ಮ ಕೀರ್ತನೆಗಳ ಮೂಲಕ ತಿಳಿಸಿ ಹೇಳುವ ಯತ್ನವನ್ನು ಮಾಡಿದರು. ದೇವರ ಆರಾಧನೆ, ಆತ್ಮಜ್ಞಾನ ವಿಷಯ, ಶ್ರೀಕೃಷ್ಣನ ಲೀಲೆಗಳು, ಶ್ರೀರಾಮನ ಮಹಿಮೆ, ಬ್ರಹ್ಮ-ಜೀವರ ಸಂಬಂಧ ಈ ವಿಷಯವಾಗಿ ಅವರು ಕೀರ್ತನೆಗಳನ್ನು, ಶ್ಲೋಕಗಳನ್ನು ರಚಿಸಿದರು. ಅವರ ಈ ರಚನೆಗಳು ಸರಳವಾಗಿರುತ್ತಿದ್ದವು. ಸುಂದರವಾಗಿರುತ್ತಿದ್ದವು. ಎಲ್ಲರಿಗೂ ಅರ್ಥವಾಗುವಂತೆ ಇರುತ್ತಿದ್ದವು. ಈ ಕೀರ್ತನೆಗಳು ಬೇಗನೆ ಎಲ್ಲೆಲ್ಲೂ ಜನಪ್ರಿಯವಾದವು. ಈ ಭಕ್ತಕವಿಯನ್ನು ಎಲ್ಲ ಜನ ಕೂಡಲೇ ಗುರುತಿಸಿದರು.

ಸಂನ್ಯಾಸ

ಇದೇ ಸಮಯದಲ್ಲಿ ಇವರ ಕೌಟುಂಬಿಕ ಜೀವನದಲ್ಲಿ ಒಂದು ಘಟನೆ ನಡೆಯಿತು. ಈ ಘಟನೆಯು ಅವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತು.

ಸಂಗೀತ – ವೇದಾಂತಗಳನ್ನು ಅವರು ಪ್ರೀತಿಸ ಲಾರಂಭಿಸಿದ ಮೇಲೆ ಅವರಿಗೆ ಸಾಂಸಾರಿಕ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿಯು ಉಳಿಯಲಿಲ್ಲ. ಕೀರ್ತನೆಗಳನ್ನು ರಚಿಸುವುದರಲ್ಲಿಯೇ ಅವರು ಸಂತೋಷವನ್ನು ಕಾಣುತ್ತಿದ್ದರು. ದೇವರನ್ನು ಕುರಿತು ವಿಚಾರ ಮಾಡುವುದರಲ್ಲಿಯೇ ಅವರಿಗೆ ಆನಂದವು ಸಿಗುತ್ತಿತ್ತು. ಹೀಗಾಗಿ ತಮ್ಮ ಮನೆ ಮತ್ತು ತಮ್ಮ ಸಂಬಂಧಿಕರ ಬಗ್ಗೆ ಅವರಿಗಿದ್ದ ಒಲವು ಕಡಿಮೆ ಯಾಗತೊಡಗಿತು.

ಇದೇ ಸಮಯದಲ್ಲಿ ಅವರ ಮಾವನು ಅವರನ್ನು ತಾತ್ಸಾರದಿಂದ ಕಾಣತೊಡಗಿದನು. ಸಂಗೀತದ ಗುಂಗಿನಲ್ಲಿಯೇ ಇರುತ್ತಿದ್ದ ಇವರನ್ನು ಆತ ಹಗುರವಾಗಿ ಕಂಡನು. ದೇವರ ಭಕ್ತಿಯಲ್ಲಿ ಮೈಮರೆಯುತ್ತಿದ್ದ ಇವರು ಮಾವನ ದೃಷ್ಟಿಯಲ್ಲಿ  ಸಣ್ಣವರಾಗಿ ಹೋದರು. ಕುಟುಂಬಕ್ಕೆ ಸಂಬಂಧಪಟ್ಟ ಒಂದು ಕಾರ್ಯದಲ್ಲಿ ಇವರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟರು. ಶಿವರಾಮರಿಗೆ ಇದರಿಂದ ಅವಮಾನವಾಯಿತು.  ಅವರು ತುಂಬಾ ನೊಂದರು. ಕುಟುಂಬದ ಜೊತೆಗೆ ಇರುವ ತಮ್ಮ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ನಿರ್ಧರಿಸಿದರು. ಈ ಕಾರ್ಯಕ್ಕೆ ತಮ್ಮ ಗುರುಗಳ ಆಶೀರ್ವಾದವನ್ನು ಕೋರಿದರು.  ಹಾಗೂ ಒಂದು ದಿನ ತಾವು ಸಂನ್ಯಾಸಿಗಳಾಗುವುದಾಗಿ ಸಾರಿದರು.

ಅಂತೆಯೆ ಶಿವರಾಮರು ಸಂನ್ಯಾಸ ದೀಕ್ಷೆಯನ್ನು ಪಡೆದರು. ಲೌಕಿಕವಾದ ಎಲ್ಲ ಆಡಂಬರಗಳನ್ನು ತೊರೆದರು. ಆಹಾರ, ಉಡಿಗೆ ತೊಡಿಗೆಯಲ್ಲಿ ಸರಳತೆ ಬಂದಿತು. ಅವರು ಮನಸ್ಸಿನ ಮೂಲಕ ಎಂದೋ  ದೇವರನ್ನು ಕಂಡಿದ್ದರು. ಈಗ ಸರಳತೆಯ ಮೂಲಕ, ಸುಖವನ್ನು ತ್ಯಜಿಸಿ, ದೇವರನ್ನು ಕಾಣಲು ಹೊರಟರು. ಪ್ರಪಂಚದ ಎಲ್ಲರನ್ನೂ ಪ್ರೀತಿಸಿ ದೇವರನ್ನು ಒಲಿಸಿಕೊಳ್ಳಲು ಬಯಸಿದರು.

ಸದಾಶಿವ ಬ್ರಹ್ಮೇಂದ್ರ

ಇವರು ಸಂನ್ಯಾಸಿಯಾದುದು ಪರಿಚಿತರಿಗೆ ಸಂತಸದ ವಿಷಯವಾಯಿತು. ಇವರನ್ನು ಸಂನ್ಯಾಸಿಗಳೆಂದು ಅವರು ಒಪ್ಪಿಕೊಂಡರು. ಇದೇ ಸಮಯದಲ್ಲಿ ಕಂಚಿ ಕಾಮಕೋಠಿ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯರು “ಸದಾಶಿವ ಬ್ರಹ್ಮೇಂದ್ರ’ ಎಂಬ ಹೆಸರಿನಿಂದ ಇವರನ್ನು ಕರೆದು ಸನ್ಮಾನಿಸಿದರು. ಶಿವರಾಮ ಎಂಬ ಹೆಸರು ಅಂದಿನಿಂದ ಮಾಯವಾಯಿತು. ಸದಾಶಿವ ಬ್ರಹ್ಮೇಂದ್ರ ಎಂಬ ಹೆಸರೇ ಜನಜನಿತವಾಯಿತು.

ಇವರು ಬ್ರಹ್ಮಜ್ಞಾನವನ್ನು ತಿಳಿದುಕೊಂಡಿದ್ದರು. ಅದನ್ನು ತಮ್ಮ ಕೀರ್ತನೆಗಳ ಮೂಲಕ, ಗ್ರಂಥಗಳ ಮೂಲಕ ಜಗತ್ತಿಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದರು. ಆದ್ದರಿಂದ ಸದಾಶಿವ ಬ್ರಹ್ಮೇಂದ್ರ ಎಂಬ ಹೆಸರು ಇವರಿಗೆ ತುಂಬಾ ಸೂಕ್ತವೆಂದು ಹಲವರು ಅಭಿಪ್ರಾಯಪಟ್ಟರು.

ಶಿವರಾಮ ಸದಾಶಿವ ಬ್ರಹ್ಮೇಂದ್ರರಾಗಿ ಪರಿವರ್ತಿತ ರಾದ ಮೇಲೆ ಅವರು ಬೇರೊಂದು ರೀತಿಯಲ್ಲಿ ಬದುಕಲಾ ರಂಭಿಸಿದರು. ಪ್ರಪಂಚದ ಎಲ್ಲ ಸುಖ – ಭೋಗಗಳನ್ನು ಬಿಟ್ಟರು. ಇಲ್ಲಿಯ ನೋವು – ಸಂತೋಷಗಳಿಂದ ಮುಕ್ತರಾದರು. ತಪಸ್ಸೇ ಅವರ ಜೀವನದ ಪರಮ ಗುರಿಯಾಯಿತು.

ಮೌನವ್ರತ

ಸದಾಶಿವ ಬ್ರಹ್ಮೇಂದ್ರರು ಕಾಡುಮೇಡುಗಳನ್ನು ಅಲೆಯುತ್ತ ಹೊರಟರು. ಅವರು ಚಿಂತೆಯನ್ನು ತೊರೆದರು. ಕರುಣೆ, ಸಮತಾಭಾವ, ಸಹೋದರ ಪ್ರೇಮಗಳು ಅವರ ಪಾಲಿಗೆ ಉಳಿದವು. ಇಂದ್ರಿಯಗಳನ್ನು ತಮ್ಮ ಹಿಡಿತದಲ್ಲಿ ಇರಿಸಿ ಕೊಂಡರು. ಅವರ ಅಂಗೈ ಅವರ ಪಾಲಿಗೆ ಭಿಕ್ಷಾಪಾತ್ರೆ ಯಾಯಿತು. ಈ ಎಲ್ಲವುಗಳ ಜೊತೆಗೆ ಮೌನವ್ರತವೂ ಸೇರಿಕೊಂಡಿತು.

ಒಂದು ಸಾರಿ ಇವರ ಗುರುಗಳು ಇತರ ಪಂಡಿತರೊಡನೆ ತರ್ಕ ಮಾಡುತ್ತಿದ್ದರು. ಗಹನವಾದ ಒಂದು ವಿಷಯ ವಾದವಿವಾದವು ಒಳ್ಳೆಯ ಬಿರುಸಿನಿಂದ ಸಾಗಿತ್ತು. ಬ್ರಹ್ಮೇಂದ್ರರು ಕೂಡ ಅಲ್ಲಿಯೇ ಇದ್ದರು. ಇವರೂ ಕೂಡ ತರ್ಕಕ್ಕೆ ತೊಡಗಿದಾಗ ಗುರುಗಳಿಗೆ ಸಿಟ್ಟು ಬಂದಿತು. ’ನೀನು ಮಾತನಾಡಬೇಡ. ಮೌನದಿಂದಿರು’ ಎಂದು ಗುರುಗಳು ಬ್ರಹ್ಮೇಂದ್ರರಿಗೆ ಆಜ್ಞೆ ಮಾಡಿದರು. ಬ್ರಹ್ಮೇಂದ್ರರಿಗೆ ತಮ್ಮ ತಪ್ಪಿನ ಅರಿವಾಯಿತು. ತಿಳಿದವರೊಡನೆ ವಾದಮಾಡಲು ಹೋಗಬಾರದಿತ್ತು ಎಂದು ಅವರು ಪಶ್ಚಾತ್ತಾಪ ಪಟ್ಟರು. ಗುರುಗಳು ಮೌನದಿಂದಿರು ಎಂದು ಹೇಳಿದ್ದನ್ನೇ ಆಜ್ಞಾವಾಕ್ಯ ಎಂಬಂತೆ ಸ್ವೀಕರಿಸಿದರು, ಆಗ ಮೌನವಾದ ಬ್ರಹ್ಮೇಂದ್ರರು ಜೀವನದ ಉದ್ದಕ್ಕೂ ಮೌನವಾಗಿಯೇ ಇರುವ ಹಟತೊಟ್ಟರು. ತಮ್ಮ ಮೌನವ್ರತವನ್ನು ಮುಂದುವರಿಸಿ ಕೊಂಡು ಹೋದರು.

ಆದರೆ ತಪಸ್ಸನ್ನು ಆಚರಿಸುವಾಗ ಅವರ ಈ ಮೌನವ್ರತವೇ ಅವರಿಗೆ ತೊಡಕಾಯಿತು. ವಿವಿಧ ಬಗೆಯ ಕಿರುಕುಳಗಳನ್ನು ಅವರು ಸಹಿಸಬೇಕಾಯಿತು. ಬೇರೆ ಸಮಯಗಳಲ್ಲೂ ಅವರು ಈ ವ್ರತದಿಂದಾಗಿ ನೋವಿಗೆ ಈಡಾದರು.

ವ್ರತನಿಷ್ಠೆಯ ಪರೀಕ್ಷೆಗಳು

ಒಂದು ದಿನ ಬ್ರಹ್ಮೇಂದ್ರರು ನದಿಯ ದಂಡೆಯ ಮೇಲೆ ಕುಳಿತು ತಪಸ್ಸು ಮಾಡುತ್ತಿದ್ದರು. ಅವರಿಗೆ ಇಹಲೋಕದ ಪರಿವೆಯೇ ಇರಲಿಲ್ಲ. ಆ ದಾರಿಯಲ್ಲಿ  ಓರ್ವ ಕಟ್ಟಿಗೆ ಮಾರುವವನು ಹಾದು ಹೋಗುತ್ತಿದ್ದನು. ಅವನ ತಲೆಯ ಮೇಲೆ ದೊಡ್ಡದೊಂದು ಕಟ್ಟಿಗೆ ಹೊರೆ ಇತ್ತು. ಈ ತಪಸ್ವಿಯು ಅವನಿಗೆ ಭಿಕ್ಷುಕನಂತೆ, ಹುಚ್ಚನಂತೆ ಕಂಡನು. ಆಗ ಅವನು ತನ್ನ ತಲೆಯ ಮೇಲಿನ ಕಟ್ಟಿಗೆ ಹೊರೆಯನ್ನು ತಂದು ಇವರ ತಲೆಯ ಮೇಲೆ ಇರಿಸಿದನು. ಅವನಿಗೂ ಕೊಂಚ ವಿಶ್ರಾಂತಿ ಬೇಕಿತ್ತು. ಅವನು ದೂರ ನಿಂತು ಈ ತಮಾಷೆಯನ್ನು ನೋಡಬಯಸಿದನು. ತಪಸ್ಸಿಗೆ ಕುಳಿತ ಸಂನ್ಯಾಸಿ! ಅವನ ತಲೆಯ ಮೇಲೊಂದು ಕಟ್ಟಿಗೆ ಹೊರೆ! ಅವನು ನಕ್ಕನು. ಮರುಕ್ಷಣದಲ್ಲಿ ಅವನ ಕುಚೇಷ್ಟೆಯು ಮಾಯವಾಯಿತು. ಕಟ್ಟಿಗೆಯ ಹೊರೆ ತನ್ನ ತಲೆಯ ಮೇಲಿರುವಂತೆಯೇ ಅವನಿಗೆ ಭಾಸವಾಯಿತು. ತಾನು ಆ ಕೆಲಸವನ್ನು ಮಾಡಬಾರದಿತ್ತು ಎಂದು ಅವನು ಪೇಚಾಡಿಕೊಂಡನು. ಓಡಿಬಂದು ಆ ಕಟ್ಟಿಗೆ ಹೊರೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ತನ್ನ ಮನೆಯ ದಾರಿ ಹಿಡಿದನು. ಬ್ರಹ್ಮೇಂದ್ರರ ತಪಸ್ಸಿಗೆ ಮಾತ್ರ ಏನೇನೂ ಭಂಗ ಬಂದಿರಲಿಲ್ಲ.

ಇನ್ನೊಂದು ದಿನ ಸದಾಶಿವ ಬ್ರಹ್ಮೇಂದ್ರರು ಎಲ್ಲೆಲ್ಲೋ ಸುತ್ತಾಡಿ ಬಂದರು. ಮೇಲೆ ಸುಡುವ ಸೂರ್ಯ, ಕೆಳಗೆ ಕಾದ ನೆಲ. ಒಂದು ಹೊಲದ ಅಂಚಿನಲ್ಲಿ ನಡೆದು ಅವರು ಸಾಗಿದ್ದರು. ಹೊಲದಲ್ಲಿ ಕೊಯಿಲು ಮುಗಿದಿತ್ತು. ಬತ್ತ ಬಡಿದು ಬರಿದಾದ ಹುಲ್ಲನ್ನು ಒಂದು ಮರದಡಿಯಲ್ಲಿ ರಾಶಿ ಹಾಕಿದ್ದರು. ಅಲ್ಲಿ ಸ್ವಲ್ಪ ನೆರಳಿತ್ತು. ಬ್ರಹ್ಮೇಂದ್ರರು ಅತ್ತ ಹೋದವರೇ ಹುಲ್ಲಿನ ಮೇಲೆ ಉರುಳಿಕೊಂಡರು. ಆಯಾಸವಾಗಿದ್ದುದರಿಂದ ಒಳ್ಳೆಯ ನಿದ್ದೆ ಬಂದಿತು. ಹೊಲದ ಒಡೆಯ ದೂರದಿಂದ ನೋಡಿದ.

“ನೋಡ್ರೋ ಯಾವನೋ ಕಳ್ಳ ಹುಲ್ಲು ಕದಿಯಲು ಬಂದಿದ್ದಾನೆ’ ಎಂದು ಅವನು ತನ್ನ ಆಳುಗಳಿಗೆ ಹೇಳಿದ. ಆಳುಗಳು ದೊಣ್ಣೆ ಹಿಡಿದು ಬಂದರು. ಹಿಂದೆ ಮುಂದೆ ನೋಡದೆ ದೊಣ್ಣೆ ಬೀಸಿದರು. ಹಾಂ ಹೂಂ ಎಂದು ಬ್ರಹ್ಮೇಂದ್ರರು ನರಳಲಿಲ್ಲ. ಅವರು ನಿದ್ದೆ ಮಾಡುತ್ತಲೇ ಇದ್ದರು. ದೊಣ್ಣೆ ಹಿಡಿದ ಆಳುಗಳೇ ಸಾಕಾಗಿ, ಕೈಸೋತು ಹೊರಟು ಹೋದರು.

ಹೀಗೆ ಎಷ್ಟೇ ಹಿಂಸೆಯಾದರೂ ಬ್ರಹ್ಮೇಂದ್ರರು ಯಾರಮೇಲೂ ಕೋಪಿಸಿಕೊಳ್ಳುತ್ತಿರಲಿಲ್ಲ. ನಿಂದಿಸುತ್ತಿರಲಿಲ್ಲ. ಇವರನ್ನು ಹಿಂಸೆಗೆ ಒಳಪಡಿಸಿದವರೇ ಆನಂತರ ತಮ್ಮ ತಪ್ಪನ್ನು ಅರಿತು ಇವರಲ್ಲಿ ಕ್ಷಮೆ ಕೋರುತ್ತಿದ್ದರು.

ಕಾವೇರಿಯ ಪ್ರವಾಹದಲ್ಲಿ

ಈ ಕಾಲದಲ್ಲೇ ಇನ್ನೊಂದು ಘಟನೆಯು ನಡೆಯಿತು ಎಂದು ಭಕ್ತರು ಹೇಳುತ್ತಾರೆ. ಕಾವೇರಿ ನದಿ ತೀರದ ಕೊಡುಮುಡಿ ಎಂಬಲ್ಲಿ ಸದಾಶಿವ ಬ್ರಹ್ಮೇಂದ್ರರು ಮರಳ ದಂಡೆಯ ಮೇಲೆ ತಪಸ್ಸಿಗೆ ಕುಳಿತಿದ್ದರು. ಮಳೆಗಾಲ ಪ್ರಾರಂಭವಾಯಿತು. ಕಾವೇರಿ ನದಿಯಲ್ಲಿ ನೆರೆ ಉಕ್ಕಿ ಬಂದಿತು. ನೀರು ಏರತೊಡಗಿತು. ಬ್ರಹ್ಮೇಂದ್ರರಿಗೆ ಸುತ್ತಲಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಇರಲಿಲ್ಲ. ದೇವರ ಧ್ಯಾನದಲ್ಲಿ ಅವರು ಅಷ್ಟೊಂದು ಮಗ್ನರಾಗಿದ್ದರು. ಅವರು ಕುಳಿತ ಮರಳಿನ ದಿಬ್ಬ ಮುಳುಗಿತು. ಅವರನ್ನು ನೀರು ಸುತ್ತುವರಿಯಿತು. ಉಕ್ಕಿ ಬಂದ ನೀರಿನಲ್ಲಿ ಅವರು ಮುಳುಗಿ ಹೋದರು. ಮೂರು ತಿಂಗಳವರೆಗೆ ಸತತವಾಗಿ ಮಳೆ ಸುರಿಯಿತು. ಕಾವೇರಿ ತುಂಬಿ ಹರಿದಳು.

ಮೂರು ತಿಂಗಳ ನಂತರ ಸಹಜವಾಗಿ ನೆರೆ ಇಳಿಯಿತು. ನದಿಯಲ್ಲಿಯ ನೀರು ಕಡಿಮೆಯಾಯಿತು. ತಪಸ್ಸಿಗೆ ಕುಳಿತಿದ್ದ ಬ್ರಹ್ಮೇಂದ್ರರು ಏನೂ ಆಗಿಲ್ಲ ಎಂಬಂತೆ ಎದ್ದು ಹೋದರು. ಪ್ರವಾಹ ಬಂದದ್ದು, ನೀರಿನಲ್ಲಿ ಅವರು ಮುಳುಗಿದ್ದು ಅವರಿಗೆ ಗೊತ್ತೇ ಆಗಲಿಲ್ಲ. ಅವರು ಯೋಗವಿದ್ಯೆಯನ್ನು ಬಲ್ಲವ ರಾಗಿದ್ದರು. ಆದ್ದರಿಂದ ಇದು ಸಾಧ್ಯವಾಯಿತೆಂದು ಹೇಳುತ್ತಾರೆ. ಈ ಘಟನೆಯ ನಂತರ ಇವರಿಗೆ ಜೀವನ್ಮುಕ್ತರೆಂಬ ಹೆಸರು ಬಂದಿತು. ಇವರಲ್ಲಿ ಜನರಿಗಿದ್ದ ಗೌರವವೂ ಕೂಡ ಹೆಚ್ಚಾಯಿತು.

ಶಿವನಾಮವೇ ಪುಷ್ಪ

ಸದಾಶಿವ ಬ್ರಹ್ಮೇಂದ್ರರು ಮಹಾ ದೈವಭಕ್ತರಾಗಿದ್ದರು. ಇವರ ದೈವಭಕ್ತಿ ಎಷ್ಟಿತ್ತು ಎಂಬ ಬಗ್ಗೆ ಜನರು ಹೇಳುತ್ತಿದ್ದ ಇನ್ನೊಂದು ಕತೆಯನ್ನು ಇಲ್ಲಿ ಉದಾಹರಿಸಬಹುದು.

ಒಂದು ದಿನ ಸದಾಶಿವ ಬ್ರಹ್ಮೇಂದ್ರರು ಊರಿನ ಶಿವ ದೇವಾಲಯದ ಎದುರು ನಿಂತಿದ್ದರು. ಒಳಗಡೆ ಪೂಜೆ ನಡೆಯುತ್ತಿತ್ತು. ಗರ್ಭಗುಡಿಯ ಕಡೆ ಮುಖಮಾಡಿ ನಿಂತ ಇವರು ಶಿವನ ನಾಮವನ್ನು ಉಚ್ಚರಿಸುತ್ತಿದ್ದರು. ಇವರು ಶಿವನಾಮವನ್ನು ಉಚ್ಚರಿಸಿದಾಗೆಲ್ಲ ಒಂದೊಂದು ಹೂವಿನ ಪಕಳೆ ಒಳಗಿನ ಶಿವಲಿಂಗದ ಮೇಲೆ ಬೀಳುತ್ತಿತ್ತಂತೆ. ಇದೊಂದು ದಂತಕತೆಯೇ ಇರಬಹುದು. ಆದರೆ ಬ್ರಹ್ಮೇಂದ್ರರು ಭಕ್ತಿಯಿಂದ ಜಪಿಸುತ್ತಿದ್ದ ಶಿವ ನಾಮವು ಹೂವಿನ ಆಕಾರ ಪಡೆದು ದೇವರಿಗೆ ಸಮರ್ಪಿತವಾಗುತ್ತಿತ್ತು ಎಂಬ ಈ ಕಲ್ಪನೆ ಎಷ್ಟೊಂದು ಸುಂದರ!

ಮಕ್ಕಳಲ್ಲಿ ಪ್ರೀತಿ

ಅವರು ಪ್ರಪಂಚದ ಸಂಬಂಧವನ್ನು ತ್ಯಜಿಸಿದ್ದರೂ ಇಲ್ಲಿಯ ಜನರ ಮೇಲೆ, ಮಕ್ಕಳ ಮೇಲೆ ಅವರಿಗೆ ಪ್ರೀತಿ ಇದ್ದೇ ಇತ್ತು. ಬಡ ಮಕ್ಕಳ ಬಗ್ಗೆ ಅವರಿಗಿದ್ದ ದಯಾಪೂರ್ಣ ಹೃದಯದ ಪರಿಚಯ ಮಾಡಿಕೊಡುವ ಒಂದು ಕತೆ ಹೀಗಿದೆ.

ಮಧುರೆಯಲ್ಲಿ ಅಂದು ವೃಷಭ ವಾಹನ ಮಹೋತ್ಸವ. ವಿಜೃಂಭಣೆಯಿಂದ ನಡೆಯುವ ಒಂದು ದೊಡ್ಡ ಉತ್ಸವ ಇದು. ಕೆಲ ಬಡಮಕ್ಕಳು ಅಲ್ಲಿಗೆ ಹೋಗಲು ಆಗಲಾರದ ಸ್ಥಿತಿಯಲ್ಲಿ ಇರುವುದನ್ನು ಬ್ರಹ್ಮೇಂದ್ರರು ಕಂಡರು.

ಆ ಮಕ್ಕಳ ನಿರಾಶೆ ಬ್ರಹ್ಮೇಂದ್ರರ ಮನಸ್ಸನ್ನು ಕಲಕಿತು. ಮಕ್ಕಳನ್ನು ಕರೆದು – “ನೀವೆಲ್ಲಾ ಕಣ್ಣು ಮುಚ್ಚಿಕೊಳ್ಳಿ’ ಎಂದು ಬ್ರಹ್ಮೇಂದ್ರರು ಹೇಳಿದರು. ಮಕ್ಕಳು ಕಣ್ಣು ಮುಚ್ಚಿಕೊಂಡರು. ಮರುಕ್ಷಣದಲ್ಲಿ ಬ್ರಹ್ಮೇಂದ್ರರು “ಈಗ ಎಲ್ಲರೂ ಕಣ್ಣು ತೆರೆಯಿರಿ’ ಅಂದರಂತೆ. ಮಕ್ಕಳು ಕಣ್ಣು ತೆರೆದಾಗ ನಿಜಕ್ಕೂ ಅವರು ಮಧುರೆಯಲ್ಲಿ ಆ ಉತ್ಸವದ ನಡುವೆ ಇದ್ದರು.

ಬ್ರಹ್ಮೇಂದ್ರರು ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಬಂದರು. ಮಕ್ಕಳಿಗೆ ದೇವರ ಪ್ರಸಾದ ದೊರೆಯಿತು. ಮಕ್ಕಳು ಜಾತ್ರೆಯಲ್ಲೆಲ್ಲ ಓಡಾಡಿದರು. ಅವರಿಗೆ ಆಟಿಗೆಗಳು, ಬಟ್ಟೆ, ತಿಂಡಿ ಪದಾರ್ಥಗಳು ಸಿಕ್ಕವು. ಅಲ್ಲೆಲ್ಲ ತಿರುಗಾಡಿದ ಮೇಲೆ ಬ್ರಹ್ಮೇಂದ್ರರು ಮಕ್ಕಳನ್ನು ಕುರಿತು, ’ಎಲ್ಲ ಕಣ್ಣುಮುಚ್ಚಿಕೊಳ್ಳಿ’ ಅಂದರಂತೆ. ಮಕ್ಕಳು ಕಣ್ಣು ಮುಚ್ಚಿಕೊಂಡವು. ಕಣ್ಣು ತೆರೆಯಿರಿ ಎಂದಾಗ ಮಕ್ಕಳೆಲ್ಲ ತಮ್ಮೂರಿನಲ್ಲಿ ಇದ್ದರು.

ಇಂತಹ ಹಲವು ಕತೆಗಳು ಸದಾಶಿವ ಬ್ರಹ್ಮೇಂದ್ರರ ಸುತ್ತ ಹಬ್ಬಿಕೊಂಡಿವೆ. ಈ ಕತೆಗಳೆಲ್ಲ ನಿಜವಿಲ್ಲದಿರಬಹುದು. ಆದರೆ ಬ್ರಹ್ಮೇಂದ್ರರ ಗುಣ ಸ್ವಭಾವಗಳ ಪರಿಚಯವನ್ನು ಈ ಕತೆಗಳು ನಮಗೆ ಮಾಡಿಕೊಡುತ್ತವೆ.

ತಮ್ಮ ಗುರುಗಳಲ್ಲಿ ಬ್ರಹ್ಮೇಂದ್ರರಿಗೆ ಪೂಜ್ಯ ಭಾವನೆ ಇತ್ತು. ಅವರು ತಮ್ಮ ಕೀರ್ತನೆಗಳಲ್ಲಿ, ಕೃತಿಗಳಲ್ಲಿ ಗುರುಗಳನ್ನು ಕೊಂಡಾಡಿದ್ದಾರೆ.

“ಸಮುದ್ರವು ಹೇಗೆ ಚಂದ್ರನನ್ನು ನೋಡಿ ಸಂತಸದಿಂದ ಉಕ್ಕಿ ಬರುತ್ತದೋ ಹಾಗೆಯೇ ನಾನು ನನ್ನ ಗುರುಗಳ ಸನ್ನಿಧಿಯಲ್ಲಿ ಸಂತಸದಿಂದ ಉಕ್ಕಿ ಹರಿಯುತ್ತೇನೆ’ ಎಂದು ಸದಾಶಿವ ಬ್ರಹ್ಮೇಂದ್ರರು ಒಂದು ಕಡೆ ಹೇಳಿಕೊಂಡಿದ್ದಾರೆ.

ಅಲ್ಲದೆ ತಾವು ತಮ್ಮ ಗುರುಗಳ ಮೂಲಕವೇ ಸಕಲ ಜ್ಞಾನವನ್ನು ಪಡೆದದ್ದಾಗಿ ಅವರು ಹೇಳಿದ್ದಾರೆ. ರಾಮಾವತಾರ ಕೃಷ್ಣಾವತಾರಗಳ ಹಿಂದಿನ ತತ್ವ ತಮಗೆ ಅರ್ಥವಾದದ್ದೇ ತಮ್ಮ ಗುರುಗಳಿಂದ, ಎಂದು ಅವರು ತಿಳಿಸಿದ್ದಾರೆ. ತಾವು ಬರೆದ ಕೀರ್ತನೆಗಳಲ್ಲಿ ಕೂಡ ತಮ್ಮ ಗುರುಗಳ ಅಂಕಿತನಾಮವನ್ನು ಸ್ಮರಿಸಿಕೊಂಡಿದ್ದಾರೆ.

’ಷಹಾಜಿ ರಾಜಪುರಂ’

ಸದಾಶಿವ ಬ್ರಹ್ಮೇಂದ್ರರ ಕಾಲದಲ್ಲಿಯೇ ತಂಜಾವೂರು ಸಂಸ್ಥಾನವು ಮರಾಠಾ ರಾಜರ ಆಳ್ವಿಕೆಗೆ ಒಳಪಟ್ಟಿತು. ಈ ರಾಜರು ಕಲೆ ಮತ್ತು ಸಂಸ್ಕೃತಿಗಳಿಗೆ ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದರು. ಇವರ ಆಸ್ಥಾನಗಳಲ್ಲಿ ಪ್ರಸಿದ್ಧ ಕವಿಗಳು, ಸಂಗೀತಗಾರರು, ವಾಗ್ಗೇಯಕಾರರು, ಆಶ್ರಯವನ್ನು ಪಡೆದಿದ್ದರು.

ಹದಿನೆಂಟನೇ ಶತಮಾನದ ಆರಂಭದಲ್ಲಿ ಷಹಾಜಿ ಮಹಾರಾಜರು ತಂಜಾವೂರಿನ ದೊರೆಯಾದರು. ಇವರು ಸ್ವತಃ ಕವಿಗಳಾಗಿದ್ದರು. ಕಲಾವಿದರಿಗೆ ಪ್ರೋತ್ಸಾಹದಾತರಾಗಿದ್ದರು. ಇವರಿಗೆ ಸಕಲ ಭಾಷಾಭೂಷಿತ, ಸಂಗೀತ ಭರತ ಸಂಭಾರಿತ, ಸಂಗೀತ ತಂತ್ರಪ್ರಿಯ ಮುಂತಾಗಿ ಬಿರುದುಗಳು ಇದ್ದವು. ಇವರು ’ಪಲ್ಲಕಿ ಸೇವಾ ಪ್ರಬಂಧಂ’ ಎಂಬ ಸಂಗೀತಮಯ ನಾಟಕವನ್ನು ಬರೆದಿದ್ದಾರೆ. ಈ ಷಹಾಜಿ ಮಹಾರಾಜರು ಸದಾಶಿವ ಬ್ರಹ್ಮೇಂದ್ರರ ಅಭಿಮಾನಿಗಳಾಗಿದ್ದರು. ಬ್ರಹ್ಮೇಂದ್ರರ ಬಗ್ಗೆ ಇವರಲ್ಲಿ ಪೂಜ್ಯವಾದ ಅಭಿಪ್ರಾಯ ಇತ್ತು. ಇವರು ಬ್ರಹ್ಮೇಂದ್ರರಿಗೆ ಇಡೀ ಒಂದು ಊರನ್ನೇ ಜಹಗೀರನ್ನಾಗಿ ನೀಡಿದ್ದರೆಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಸದಾಶಿವ ಬ್ರಹ್ಮೇಂದ್ರರಿಗೆ ’ಷಹಾಜಿ ರಾಜಪುರಂ’ ಎಂಬ ಬಿರುದು ಬಂತೆಂದು ಹೇಳಲಾಗಿದೆ.

ಈ ಲೋಕ ಬಿಟ್ಟರು

ಜನ ಸಾಮಾನ್ಯರಿಂದ, ಪಂಡಿತರಿಂದ, ರಾಜ ಮಹಾರಾಜರುಗಳಿಂದ ಸದಾಶಿವಬ್ರಹ್ಮೇಂದ್ರರು ಗೌರವಿ ಸಲ್ಪಟ್ಟರು. ಆದರೂ ಅವರು ಈ ಎಲ್ಲ ಗೌರವ ಕೀರ್ತಿಯನ್ನು ದೂರವಿಟ್ಟರು. ವೃದ್ಧಾಪ್ಯದಲ್ಲಿ ಬ್ರಹ್ಮೇಂದ್ರರು ಹುಚ್ಚರಂತೆ ಅಲೆಯತೊಡಗಿದರು. ಇವರ ನಡವಳಿಕೆಯಿಂದ ಅಪರಿಚಿತರು ಇವರನ್ನು ಮೂಕರೆಂದು ತಿಳಿದರು. ಇವರು ಕಿವುಡರಿರ ಬೇಕೆಂದು ಹಲವರು ಅಭಿಪ್ರಾಯಪಟ್ಟರು. ತಿನ್ನಲು ಬೇರೇನೂ ದೊರಕದೇ ಇದ್ದಾಗ ಮರದ ಎಲೆಗಳನ್ನು ತಿನ್ನುತ್ತಾ ಕಾಲ ಕಳೆದರು. ಕಾವೇರಿ ನದಿಯ ದಡದಲ್ಲಿ ಮೌನವಾಗಿ ಅಲೆಯುತ್ತಿದ್ದರು. ಕೊನೆಗೊಂದು ದಿನ ಇವರು ಕಾರೂರಿಗೆ ಏಳುಮೈಲಿ ದೂರದಲ್ಲಿರುವ ನೇರೂರು ಎಂಬ ಸ್ಥಳದಲ್ಲಿ ಮೃತರಾದರು. ಈ ನೇರೂರು ಕಾವೇರಿ ನದಿ ತೀರದ ಒಂದು ಊರು. ಇವರ ಅಭಿಮಾನಿಗಳು ಈ ಸ್ಥಳದಲ್ಲಿ ಇವರ ಸಮಾಧಿಯನ್ನು ಕಟ್ಟಿಸಿದರು.

ಪುದುಕೋಟೆಯ ರಾಜರು ಈ ಸಮಾಧಿಯ ಬಳಿ ಜೂನ್ ತಿಂಗಳ ಅಂತ್ಯದಲ್ಲಿ ಅಂದರೆ ಜೇಷ್ಠ ಶುದ್ಧ ದಶಮಿಯಂದು ಇವರ ದಿನಾಚರಣೆಯನ್ನು ವೈಭವದಿಂದ ಆಚರಿಸಿಕೊಂಡು ಬರುತ್ತಿದ್ದರು. ಇಂದಿಗೂ ಈ ಆಚರಣೆಯು ನಡೆದುಕೊಂಡು ಬಂದಿದೆ.

ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದ ನರಸಿಂಹ ಭಾರತೀ ಸ್ವಾಮಿಗಳು ಸದಾಶಿವ ಬ್ರಹ್ಮೇಂದ್ರರನ್ನು ಕುರಿತು “ಸದಾಶಿವೇಂದ್ರ ಸ್ತುತಿ” ಎಂಬ ನಲವತ್ತೈದು ಆರ್ಯ ಶ್ಲೋಕಗಳ ಒಂದು ಕೃತಿಯನ್ನು ರಚಿಸಿದ್ದಾರೆ. ಇದನ್ನು ಇವರು ಸದಾಶಿವಬ್ರಹ್ಮೇಂದ್ರರ ಸಮಾಧಿಯ ಹತ್ತಿರ ಹಾಡಿದರೆಂದು ಪ್ರತೀತಿ ಇದೆ.

ಸದಾಶಿವ ಬ್ರಹ್ಮೇಂದ್ರರು ಬರೆದ ಕೀರ್ತನೆಗಳು ಕಾಲಕ್ರಮೇಣ ಜನರಿಗೆ ಮರೆತು ಹೋಗಲಾರಂಭಿಸಿದವು. ಆದರೆ ಈ ಶತಮಾನದ ಆರಂಭದಲ್ಲಿ ಅವು ಮತ್ತೆ ಬೆಳಕಿಗೆ ಬಂದವು. ಶಮ್ಮಂಗುಡಿ ಶ್ರೀನಿವಾಸ ಅಯ್ಯರ್ ಎಂಬ ಖ್ಯಾತ ಸಂಗೀತಗಾರರು ಸದಾಶಿವಬ್ರಹ್ಮೇಂದ್ರರ ಕೀರ್ತನೆಗಳನ್ನು ಹಾಡಿ ಎಲ್ಲೆಲ್ಲೂ ಜನಪ್ರಿಯಗೊಳಿಸಿದರು. ಅಲ್ಲದೆ ಸದಾಶಿವ ಬ್ರಹ್ಮೇಂದ್ರರ ಹಲವು ಕೃತಿಗಳಿಗೆ ಇವರೇ ಸುಶ್ರಾವ್ಯವಾದ ರಾಗಗಳನ್ನು ಹೊಂದಿಸಿ ಹಾಡಿದರು. ಆ ಮೂಲಕ ಈ ಕೃತಿಗಳೂ ಸಂಗೀತಾಭಿಮಾನಿಗಳಿಗೆ ಪರಿಚಯವಾಗುವಂತೆ ಮಾಡಿದರು.

‘ಪರಮಹಂಸ’

ವಾಗ್ಗೇಯಕಾರರು ತಮ್ಮ ಕೀರ್ತನೆಗಳ ಕೊನೆಯಲ್ಲಿ ಒಂದು ಅಂಕಿತನಾಮವನ್ನು ಹಾಕುವುದು ಒಂದು ಪದ್ಧತಿ. ಪುರಂದರದಾಸರು, ತ್ಯಾಗರಾಜರು ತಮ್ಮ ಹೆಸರುಗಳನ್ನೇ ತಮ್ಮ ಕೀರ್ತನೆಗಳ ಕೊನೆಯಲ್ಲಿ ಹಾಕಿಕೊಂಡಿದ್ದಾರೆ. ಆದರೆ ಇನ್ನು ಕೆಲವರು ತಮ್ಮ ಗುರುಗಳ ಇಲ್ಲವೆ ತಾವು ನಂಬಿದ ಆರಾಧ್ಯ ದೈವದ ಹೆಸರುಗಳನ್ನು ಬಳಸಿಕೊಂಡಿದ್ದಾರೆ. ಮುತ್ತುಸ್ವಾಮಿ ದೀಕ್ಷಿತರು ಗುರುಗುಹ ಎಂಬ ಅಂಕಿತವನ್ನು, ಸ್ವಾತಿ ತಿರುನಾಳರು ಪದ್ಮನಾಭ, ಸರಸಿಜನಾಭ, ವಾರಿಜನಾಭ ಎಂಬ ಅಂಕಿತಗಳನ್ನು ಸೂಚಿಸಿದ್ದಾರೆ. ಸದಾಶಿವ ಬ್ರಹ್ಮೇಂದ್ರರು ‘ಹಂಸ’ ‘ಪರಮಹಂಸ’ ಎಂಬ ಅಂಕಿತನಾಮದಲ್ಲಿ ಕೀರ್ತನೆಗಳನ್ನು ಬರೆದಿದ್ದಾರೆ. ‘ಬ್ರಹ್ಮೇಂದ್ರ’ ಎಂಬ ಅಂಕಿತನಾಮವನ್ನು ಕೂಡ ಕೆಲವೆಡೆ ಬಳಸಿದ್ದಾರೆ.

ಸದಾಶಿವ ಬ್ರಹ್ಮೇಂದ್ರರು ಬ್ರಹ್ಮಸೂತ್ರ ಹಾಗೂ ಯೋಗ ಸೂತ್ರಗಳ ಮೇಲೆ  ವಿಮರ್ಶೆಗಳನ್ನು ಬರೆದಿರುತ್ತಾರೆ. ಶಿವ ಮಾನಸ ಪೂಜಾ, ಆತ್ಮ ವಿದ್ಯಾ ವಿಲಾಸ ಇವರ ಎರಡು ಜನಪ್ರಿಯ ಕೃತಿಗಳು. ‘ಗುರುರತ್ನಮಾಲಾ’ ಎಂಬುದು  ಇವರ ಇನ್ನೊಂದು ಕೃತಿ. ಇವರು ಹಲವು ಕೀರ್ತನೆಗಳನ್ನು ಬರೆದಿದ್ದು, ಅವೆಲ್ಲ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಜನಜನಿತವಾಗಿವೆ.

ಅಪ್ಪಯ್ಯ ದೀಕ್ಷಿತರೆಂಬುವವರು ಹದಿನಾರನೇ ಶತಮಾನದ ಮಹಾ ವಿದ್ವಾಂಸರು. ಇವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಶಂಕರ ವೇದಾಂತದ ವಿವಿಧ ವ್ಯಾಖ್ಯಾನಗಳ ಸಂಕಲನವಾದ ‘ಸಿದ್ಧಾಂತ ಲೇಶ ಸಂಗ್ರಹ’ ಎಂಬ ಅಮೂಲ್ಯ ಗ್ರಂಥವನ್ನು ಇವರು ಬರೆದಿರುತ್ತಾರೆ. ಈ ಗ್ರಂಥದ ಮೇಲೆ ಸದಾಶಿವ ಬ್ರಹ್ಮೇಂದ್ರರು ‘ಸಿದ್ಧಾಂತ ಕಲ್ಪವಲಿ’ ಎಂಬ ಗ್ರಂಥವನ್ನು ರಚಿಸಿದ್ದಾರೆ.

‘ಶಿವ ಮಾನಸ ಪೂಜಾ’

ಸದಾಶಿವ ಬ್ರಹ್ಮೇಂದ್ರರು ರಚಿಸಿದ ಒಂದೆರಡು ಕೃತಿಗಳ ಪರಿಚಯವನ್ನು ಈಗ ಮಾಡಿಕೊಳ್ಳೋಣ. ಒಬ್ಬ ಕವಿ ತನ್ನ ಕೃತಿಗಳ ಮೂಲಕವೇ ಬದುಕುತ್ತಾನೆ  ಅನ್ನುವ ಮಾತು ತುಂಬಾ ಅರ್ಥಪೂರ್ಣವಾದುದು. ಏಕೆಂದರೆ ಅವನು ಬರೆದ ಕೃತಿಯೊಂದೇ ಮುಂದಿನ ಜನಾಂಗಕ್ಕೆ ಉಳಿಯುತ್ತದೆ. ಅವನ ಜೀವನಚಿತ್ರ ಕ್ರಮೇಣ ಮಸುಕಾಗಿ ಮರೆತು ಹೋಗುತ್ತದೆ. ಇಲ್ಲವೆ ಅಂತೆಕಂತೆಗಳ ರೂಪ ಪಡೆದು ಅದೊಂದು ಕತೆಯಾಗಿ ಬಿಡುತ್ತದೆ. ಆ ವ್ಯಕ್ತಿ ರಚಿಸಿದ ಕೃತಿಗಳು ಮಾತ್ರವೇ ಅವನ ಹಿರಿಮೆಯನ್ನು ಸಾರುತ್ತ ಉಳಿದಿರುತ್ತವೆ. ವ್ಯಕ್ತಿಯ ಕಾವ್ಯ ಪ್ರತಿಭೆ, ಕಲ್ಪನಾಶಕ್ತಿ ಅವನ ಕೃತಿಯಲ್ಲಿ ಅಮರವಾಗಿ ಉಳಿಯುತ್ತವೆ.

ಸದಾಶಿವ ಬ್ರಹ್ಮೇಂದ್ರರು ‘ಶಿವ ಮಾನಸ ಪೂಜಾ’ ಎಂಬ ಮೂವತ್ತು ಶ್ಲೋಕಗಳ ಕಿರು ಕೃತಿಯೊಂದನ್ನು ಬರೆದಿದ್ದಾರೆ. ಆಡಂಬರದ ಪೂಜೆಗಿಂತ ಮಾನಸಿಕ ಪೂಜೆಯಿಂದಲೇ ಶಿವನನ್ನು ಒಲಿಸಿಕೊಳ್ಳುವುದು ಸಾಧ್ಯವೆಂದು ಅವರು ಈ ಕೃತಿಯಲ್ಲಿ ಹೇಳುತ್ತಾರೆ.

ನಾವು ಶಿವನನ್ನು ವಿಶ್ವವ್ಯಾಪಿ ಎಂದು ಕರೆಯುತ್ತೇವೆ. ಆದರೆ ಅವನಿಗಾಗಿ ಒಂದು ಪೀಠವನ್ನು ಸಜ್ಜು ಮಾಡುತ್ತೇವೆ. ಅವನಿಗೆ ಸ್ನಾನ ಮಾಡಿಸಿ, ಆಭರಣಗಳನ್ನು ತೊಡಿಸುತ್ತೇವೆ. ಈ ನಮ್ಮ ವರ್ತನೆಯನ್ನು ಕಂಡು ಬ್ರಹ್ಮೇಂದ್ರರು ಹೇಳುತ್ತಾರೆ-

‘ಎಲ್ಲೆಲ್ಲೂ ವ್ಯಾಪಿಸಿರುವ ನಿನಗೆ ಇಲ್ಲಿ ಯಾವ ಬಗೆಯಲ್ಲಿ ಪೀಠವನ್ನು ಸಿದ್ಧಪಡಿಸಲಿ? ವಿಶ್ವವ್ಯಾಪಿಯಾಗಿರುವ ನಿನ್ನ ಕೈಕಾಲುಗಳನ್ನು ತೊಳೆಯಲು ಇಲ್ಲಿ ಎಂತು ನೀರನ್ನು ತರಲಿ?’

‘ಸದಾ ಶುದ್ಧನಾಗಿರುವ ನಿನಗೆ ಸ್ನಾನದ ಆವಶ್ಯಕತೆ ಇದೆಯೇ? ದಿಕ್ಕುಗಳನ್ನೇ ಅಂಬರ (ಬಟ್ಟೆ)ವಾಗಿ ಉಳ್ಳ ನಿನಗೆ ಬೇರೆ ಆಭರಣಗಳು ಬೇಕೆ?’

‘ಫಲಪುಷ್ಟಗಳನ್ನು ನನಗೆ ಹೇರಳವಾಗಿ ಕೊಟ್ಟಿರುವಿ. ನಾನು ನಿನ್ನನ್ನು ಕೇವಲ ಒಂದು ಕಮಲದ ಹೂವಿನಿಂದ ಪೂಜಿಸಲೆ?’

ಹೀಗೆ ಫಲಪುಷ್ಪಗಳನ್ನು ದೇವರಿಗೆ ಅರ್ಪಿಸುವುದರ ಬಗ್ಗೆ ಬ್ರಹ್ಮೇಂದ್ರರು ಹೇಳಿ, ಮುಂದೆ ದೇವಸ್ಥಾನಗಳಲ್ಲಿ ಹಾಡು ನರ್ತನಗಳ ಮೂಲಕ ದೇವರ ಆರಾಧನೆಯನ್ನು ಮಾಡುವುದನ್ನು ಕುರಿತು ನುಡಿಯುತ್ತಾರೆ:

‘ತ್ರಿಪುರಾಂತಕನಾದ ನೀನು ಮಹಾನಟ ಶೇಖರ ನಾಗಿರುವಾಗ ನಿನ್ನ ಎದಿರು ನರ್ತಿಸಲೆ? ಸಂಗೀತಕ್ಕೆ ಮೂಲವಾದ ಸಾಮವೇದವನ್ನು ಉಪದೇಶಿಸಿದ ನಿನ್ನ ಎದಿರು ಹಾಡಲೆ?’

‘ಕೈಯಲ್ಲಿ ಡಮರುಗವನ್ನು ಹಿಡಿದಿರುವ ನಿನ್ನ ಎದಿರು ಬೇರೆ ವಾದ್ಯವನ್ನು ಬಾರಿಸಲು ಯಾರಿಗಾದರೂ ಧೈರ್ಯ ಬಂದೀತೆ? ಎಲ್ಲೆಲ್ಲೂ ವ್ಯಾಪಿಸಿರುವ ನಿನಗೆ ಪ್ರದಕ್ಷಿಣೆಯನ್ನು ಹಾಕಲು ಯಾರಿಂದಾದರೂ ಸಾಧ್ಯವಾದೀತೆ?’

‘ಓ ಶಂಕರ, ಎಲ್ಲ ಕಡೆಯಿಂದಲೂ ನನ್ನನ್ನು ಸುತ್ತುವರೆದಿರುವಿ. ನಿನ್ನ ಎದಿರು ನಾನು ಉದ್ದಂಡ ನಮಸ್ಕಾರ ಹಾಕುವುದು ಹೇಗೆ?’

‘ಶಬ್ದಗಳಿಗೆ ಎಟುಕದ ನಿನ್ನನ್ನು ಬಾಯಿ ಮಾತಿನಿಂದ ಹೊಗಳುವುದು ಹೇಗೆ?’

ಈ ಕೃತಿಯಲ್ಲಿ ಪ್ರಾಪಂಚಿಕ ವಸ್ತುಗಳಿಂದ ದೇವರನ್ನು ಪೂಜಿಸುವುದರಲ್ಲಿ ಅರ್ಥವಿಲ್ಲ ಅನ್ನುತ್ತಾರೆ ಸದಾಶಿವ ಬ್ರಹ್ಮೇಂದ್ರರು. ಶಿವನನ್ನು ಶಬ್ದಗಳಿಂದ ಸ್ತುತಿಸುವುದು, ನೀರಿನಿಂದ ಸ್ನಾನ ಮಾಡಿಸುವುದು, ಅವನನ್ನು ದೈಹಿಕವಾಗಿ ನಮಸ್ಕರಿಸುವುದು ಎಲ್ಲವೂ ಅರ್ಥಹೀನ. ಶಿವನ ಆಕಾರವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿಕೊಳ್ಳಬೇಕು. ಇಲ್ಲವೆ ಶಿವನಲ್ಲಿ ನಾವು ಆಶ್ರಯ ಪಡೆಯಬೇಕು.  ಇದೇ ಶಿವ ಮಾನಸ ಪೂಜೆ. ಅವರು ಕೀರ್ತನೆಯಲ್ಲಿ ಹೇಳುತ್ತಾರೆ.

‘ಶಿರದಲ್ಲಿ ಚಂದ್ರನನ್ನು ಧರಿಸಿರುವ, ಸಗರ ಚಕ್ರವರ್ತಿಯ ಮಕ್ಕಳ ಪಾಪವನ್ನು ತೊಳೆದ ಗಂಗೆಯನ್ನು ಮುಡಿಯಲ್ಲಿ ಧರಿಸಿರುವ, ಸದಾ ಕಣ್ಣುಗಳಿಂದ ದಯೆಯನ್ನು ಸೂಸುತ್ತಿರುವ ಶಂಕರನೇ, ನಿನ್ನ ನಿಷ್ಕಂಳಕ ಆಕಾರವು ನನ್ನ ಮನಸ್ಸಿನಲ್ಲಿ ಮೂಡಿರಲಿ.’

‘ಗಜಚರ್ಮಾಂಬರಧಾರಿಯಾದ, ಬೆಳ್ಳಿ ಬೆಟ್ಟದ ಒಡೆಯನಾದ, ಹಾವುಗಳನ್ನೇ ಆಭರಣವಾಗುಳ್ಳ, ಉಮೆಯನ್ನು ತನ್ನ ಅರ್ಧದೇಹದಲ್ಲಿ ಧರಿಸಿರುವ’ ಶಂಕರನ ಆಶ್ರಯದಲ್ಲಿ ತಾನು ಇರುವುದಾಗಿ ಅವರು ಹೇಳುತ್ತಾರೆ,

ಅವರು ಶಿವನಲ್ಲಿ ಬೇಡಿಕೊಳ್ಳುತ್ತಾರೆ.

‘ಬಾಲಚಂದ್ರನನ್ನೇ ಕಿರೀಟವನ್ನಾಗಿ ಹೊಂದಿರು ವವನೆ, ನಾನು ಯಾವ ಒಂದು ಉಡುಗೊರೆಯನ್ನೂ ನಿನ್ನಲ್ಲಿ ಕೇಳುವುದಿಲ್ಲ. ದೇವಾ, ಆತ್ಮಾನಂದವನ್ನು ಮಾತ್ರ ನನಗೆ ದಯಪಾಲಿಸು.’

ಇಷ್ಟೆಲ್ಲಾ ಹೇಳಿದ ನಂತರ ಅವರು ಶಿವನಲ್ಲಿ ಮೊರೆ ಇಡುತ್ತಾರೆ:-

“ದೇವರೆ, ನಾನು ಬಾಲಿಶತನದಿಂದಾಗಲಿ, ದೈವನಿಷ್ಠೆ ತೊರೆದಾಗಲಿ, ಬಂದ ವಿಪತ್ತಿನಿಂದ ದಿಗ್ಭ್ರಮೆಗೊಂಡಾಗಲಿ, ಅಜ್ಞಾನದಿಂದಾಗಲಿ, ಏನೇ ಅನುಚಿತವಾದ ಶಬ್ದಗಳನ್ನು ನುಡಿದಿದ್ದೇ ಆದಲ್ಲಿ, ಅವುಗಳನ್ನು ನಿನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ.”

ಶಿವನಲ್ಲಿ ಅವರಿಗೆ ಅಪಾರ ನಂಬಿಕೆ. ಅವನು ಸರ್ವ ಶಕ್ತನಾಗಿದ್ದರೆ, ಅವನನ್ನು ನಂಬಿದ ತನ್ನ ಆಸೆಗಳೆಲ್ಲ ನೆರವೇರುತ್ತವೆ ಎಂಬುದು ಅವರ ದೃಢ ವಿಶ್ವಾಸ.

“ನೀನು ವಿಶ್ವನಾಥನಾಗಿದ್ದರೆ, ವೇದ ಆಗಮ ಪುರಾಣಗಳೆಲ್ಲ ಸತ್ಯವೆನ್ನುವುದಾದರೆ, ನಿನ್ನ ಭಕ್ತರ ಮೇಲೆ ನಿನಗೆ ದಯೆ ಇರುವುದೇ ಹೌದಾದರೆ, ನನ್ನಾಸೆಗಳೆಲ್ಲ ನೆರವೇರಿದವು ಎಂದೇ ನಾನು ತಿಳಿಯುತ್ತೇನೆ.”

ಸದಾಶಿವ ಬ್ರಹ್ಮೇಂದ್ರರು ಶಿವನನ್ನು ಮಾನಸಿಕವಾಗಿ ಹೀಗೆ ಆರಾಧಿಸುತ್ತಾರೆ. ಅವನ ಕೃಪೆಗೆ ಪಾತ್ರರಾಗುತ್ತಾರೆ.

ಆತ್ಮ ವಿದ್ಯಾ ವಿಲಾಸಂ

“ಆತ್ಮ ವಿದ್ಯಾ ವಿಲಾಸಂ” ಎಂಬ ಇನ್ನೊಂದು ಕೃತಿಯಲ್ಲಿ ಅರವತ್ತೆರಡು ಸಂಸ್ಕೃತ ಶ್ಲೋಕಗಳಿವೆ.

ಪ್ರಾರಂಭದಲ್ಲಿ ದೇವರಿಗೆ, ತಮ್ಮ ಗುರುಗಳಾದ ಪರಮ ಶಿವೇಂದ್ರರಿಗೆ ನಮಿಸಿದ್ದಾರೆ. ಪರಮಶಿವೇಂದ್ರರಿಂದ ತಮಗೆ ದೊರಕಿದ ಜ್ಞಾನವನ್ನು ಕುರಿತು ಕೆಲವು ಮಾತುಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

“ಪ್ರಾಪಂಚಿಕ ಸುಖಭೋಗಗಳಲ್ಲಿ ಮುಳುಗಿರು ವವನು ದೇವರ ಕೃಪೆಯಿಂದ ಆತ್ಮನನ್ನು ಅರ್ಥಮಾಡಿಕೊಂಡರೆ ಪರಮಯೋಗಿಯಾಗಿ ಮೆರೆಯಬಲ್ಲನು”.

“ಮಾಯೆಯ ಪ್ರಭಾವಕ್ಕೆ ಒಳಗಾಗಿ ಸಾವಿರ ಕನಸುಗಳನ್ನು ಕಾಣುತ್ತ ಮಲಗಿದ್ದವನು ಗುರುವಿನ ಮಾತನ್ನು ಕೇಳಿ ಎಚ್ಚೆತ್ತರೆ ಪರಮಾನಂದವನ್ನು ಕಾಣಬಲ್ಲನು”.

“ಯೋಗಿಯಾದವನು ಶಾಂತ ಚಿತ್ತನಾಗಿ, ಮರದ ನೆರಳಿನಲ್ಲಿ ಆಶ್ರಯವನ್ನು ಪಡೆದು, ಅಂಗೈಯನ್ನು ಭಿಕ್ಷಾಪಾತ್ರೆಯಂತೆ ಚಾಚಿ, ನಿರ್ಲಿಪ್ತನಾಗಿ,  ಪರಮಾನಂದವನ್ನು ಪಡೆಯುತ್ತಾನೆ.”

“ಸತ್ಯಾಸತ್ಯದ ಜ್ಞಾನವನ್ನು ಪಡೆದ ಯೋಗಿಯು, ನದಿ ದಂಡೆಯ ಮೇಲಿನ ಪೊದೆಯನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡು ಶಾಂತಿಯಿಂದ ಇದ್ದು ಬಿಡುತ್ತಾನೆ.”

“ಇವನ ಪಾಲಿಗೆ ಬರಿದಾದ ಭೂಮಿಯೇ ಮೆದುವಾದ ಹಾಸಿಗೆಯಾಗುತ್ತದೆ. ಬೀಸುವ ಗಾಳಿಯೇ ಚಾಮರಸೇವೆಯಾಗುತ್ತದೆ. ಪೂರ್ಣ ಚಂದ್ರನೇ ಅರಮನೆಯ ದೀಪವಾಗುತ್ತಾನೆ”

“ಈ ಯೋಗಿರಾಜನು ನದಿಯಲ್ಲಿಯ ಶಿಲಾಫಲಕದ ಮೇಲೆ ಶಾಂತನಾಗಿ ಮಲಗುತ್ತಾನೆ. ಈ ಶಿಲಾಫಲಕದ ಸುತ್ತ ನದಿಯ ತಿಳಿಜಲವು ಹರಿಯುತ್ತಿರುತ್ತದೆ. ತಂಗಾಳಿಯು ಬೀಸುತ್ತಿರುತ್ತದೆ.”

“ಮೌನಿಯಾದ ಯೋಗಿಯು ಅಂತರಂಗ ಧ್ಯಾನಿಯಾಗಿದ್ದುಕೊಂಡು, ಅಂಗೈ ಮೇಲೆ ಇರಿಸಿದ ಭಿಕ್ಷೆಯನ್ನು ಸ್ವೀಕರಿಸಿ ಹುಚ್ಚನ ಹಾಗೆ ಬೀದಿ ಬೀದಿ  ಅಲೆಯುತ್ತಿರುತ್ತಾನೆ.”

“ಯೋಗಿಯು ಯಾರನ್ನೂ ಗೌರವಿಸುವುದಿಲ್ಲ. ಅಗೌರವದಿಂದ ಕಾಣುವುದೂ ಇಲ್ಲ. ತೇದ ಗಂಧದಂತೆ ಅವನ ಹೃದಯವು ಸದಾ ತಂಪಾಗಿದ್ದು ದಯೆಯು ಅವನಿಂದ ಉಕ್ಕಿ ಹರಿಯುತ್ತಿರುತ್ತದೆ.”

“ಯೋಗಿಯು ಏನನ್ನೂ ನೋಡುವುದಿಲ್ಲ. ಮಾತನಾಡುವುದಿಲ್ಲ. ಅವನಿಗೆ ಏನೊಂದೂ ಕೇಳಿಸುವುದಿಲ್ಲ. ಅವನು ಪರಮಾನಂದದಿಂದ ಅಚಲವಾದ ಮರದ ತುಂಡಿನಂತೆ ಇದ್ದು ಬಿಡುತ್ತಾನೆ.”

“ಯೋಗಿಯು ಯಾವುದನ್ನೂ ಕೆಟ್ಟದ್ದೆಂದು ದೂರ ಮಾಡುವುದಿಲ್ಲ. ಯಾವುದನ್ನೂ ಒಳ್ಳೆಯದೆಂದು ಸ್ವೀಕರಿಸುವುದಿಲ್ಲ. ಇದೆಲ್ಲವೂ ಆ ವಿದ್ಯೆಯ ಪ್ರಭಾವವೆಂದು ತಿಳಿದು ಎಲ್ಲದರಿಂದಲೂ ನಿರ್ಲಿಪ್ತನಾಗಿ ಆತ ಉಳಿಯುತ್ತಾನೆ.”

ಹೀಗೆ ಯೋಗಿಯಾದವನು ಅಂತರಂಗ ಜ್ಞಾನವನ್ನು ಪಡೆಯುತ್ತಾನೆ. ಅವನು ಯಾರನ್ನೂ ಅವಲಂಬಿಸಿ ಕೊಂಡಿರುವುದಿಲ್ಲ. ಅವನಿಗೆ ಯಾವುದೇ ಬಂಧನ ಇರುವುದಿಲ್ಲ. ಅವನು ಭೇದ ಭಾವಗಳನ್ನು ಅರಿಯ. ಅಂತಿಮವಾಗಿ ಅವನು ಪರಮಹಂಸನೇ ಆಗುತ್ತಾನೆ ಎಂದು ಸದಾಶಿವ ಬ್ರಹ್ಮೇಂದ್ರರು “ಆತ್ಮ ವಿದ್ಯಾ ವಿಲಾಸ” ದಲ್ಲಿ ಹೇಳಿರುತ್ತಾರೆ.

“ಆತ್ಮ ವಿದ್ಯಾ ವಿಲಾಸ”ವು ಅವರ ಕತೆಯೆ. ಅವರು ಪ್ರಾಪಂಚಿಕ ಸಂಬಂಧಗಳನ್ನು ಕಳೆದುಕೊಂಡು ಪರಮಹಂಸ ರಾದದ್ದು ಹೇಗೆ ಎಂಬುದನ್ನು ಅವರೇ ಇಲ್ಲಿ ವರ್ಣಿಸಿದ್ದಾರೆ. ಅವರು ಗುರುಗಳಿಂದ ಜ್ಞಾನೋಪದೇಶ ಪಡೆದದ್ದು, ಸಂನ್ಯಾಸಿಯಾಗಿ ಕಾಡು-ಮೇಡು ಅಲೆದದ್ದು, ಮರಳ ದಂಡೆಯ ಮೇಲೆ ತಪಸ್ಸಿಗೆ ಕುಳಿತದ್ದು, ಹುಚ್ಚನಾಗಿ ತಿರುಗಾಡಿದ್ದು, ಇದರಿಂದ ಅವರಿಗೆ ದೊರೆತ ಪರಮಾನಂದ, ಎಲ್ಲವನ್ನೂ ಅವರು ಈ ಶ್ಲೋಕಗಳಲ್ಲಿ ಬರೆದಿದ್ದಾರೆ.

“ಆತ್ಮ ವಿದ್ಯಾ ವಿಲಾಸ” ಸದಾಶಿವ ಬ್ರಹ್ಮೇಂದ್ರರು ಬರೆದ ಕೃತಿಯೂ ಹೌದು. ಅವರು ಬದುಕಿ ತೋರಿಸಿದ ಮಾರ್ಗವೂ ಹೌದು.  ತಿರುವಸನ್ನಾಲೂರಿನಲ್ಲಿ ಹುಟ್ಟಿದ ಓರ್ವ ಬಾಲಕ ಶಿವರಾಮನು ಸದಾಶಿವ ಬ್ರಹ್ಮೇಂದ್ರರಾದ ಕಥೆ ಅದರಲ್ಲಿದೆ. ಯಾವ ಕಾರಣದಿಂದ ಸದಾಶಿವ ಬ್ರಹ್ಮೇಂದ್ರರು ಸಕಲರಿಂದ  ಪೂಜಾರ್ಹರಾದರು ಎಂಬ ಪ್ರಶ್ನೆಗೂ ಕೂಡ ಇಲ್ಲಿ ಉತ್ತರವಿದೆ.

ಸದಾಶಿವ ಬ್ರಹ್ಮೇಂದ್ರರು ಕರ್ನಾಟಕ ಸಂಗೀತ ಪದ್ಧತಿಯನ್ನು ಬಲ್ಲವರು. ಕರ್ನಾಟಕ ಸಂಗೀತದ ಹಲವು ರಾಗಗಳನ್ನು ಅಭ್ಯಾಸ ಮಾಡಿದವರು. ಹೀಗೆಂದೇ ಕರ್ನಾಟಕ ಸಂಗೀತದ ಬಗ್ಗೆ ಮಾತನಾಡುವ, ಬರೆಯುವ ಎಲ್ಲರೂ ಅವರ ಹೆಸರನ್ನು ಹೇಳಿಯೇ ಹೇಳುತ್ತಾರೆ. ಇವರು ಹಲವು ಸುಂದರ ಕೀರ್ತನೆಗಳನ್ನು ರಚಿಸಿದ್ದಾರೆ. ಭಜನೆಯ ರೂಪದಲ್ಲಿ ಇರುವ ಈ ಕೀರ್ತನೆಗಳಿಗೆ ತಕ್ಕ ರಾಗಗಳನ್ನು ಅವರೇ ಸೂಚಿಸಿದ್ದಾರೆ.

ಕೆಲವು ಹಾಡುಗಳು

ಅವರ ಇಪ್ಪತ್ತಮೂರು ಕೀರ್ತನೆಗಳಲ್ಲಿ ಎಲ್ಲವೂ ಜನಪ್ರಿಯವಾಗಿವೆ. ಖ್ಯಾತ ಸಂಗೀತಗಾರರು ಇವುಗಳನ್ನು ಹಾಡುತ್ತ ಬಂದಿದ್ದಾರೆ.

“ಸ್ಮರ ವಾರಂವಾರಮ್-ಚೇತಃ ಸ್ಮರ ನಂದ ಕುಮಾರಮ್” ಎಂಬುದು ಕಾಪಿರಾಗದಲ್ಲಿ ರಚಿಸಲಾಗಿರುವ ಒಂದು ಕೀರ್ತನೆ. ಇದರಲ್ಲಿ ಅವರು ಹಾಲು ಬೆಣ್ಣೆಯನ್ನು ಕದಿಯುತ್ತ ಗೋಕುಲ ಬೃಂದಾವನಗಳಲ್ಲಿ ಅಲೆಯುತ್ತಿದ್ದ ಕೃಷ್ಣನನ್ನು ಸ್ಮರಿಸುತ್ತಾರೆ. ಮಧುರವಾಗಿ ಕೊಳಲನ್ನು ಊದುವ, ತನ್ನ ಕ್ರೀಡಾ ವಿನೋದಗಳಿಂದ ವಿಶ್ವವನ್ನು ಸೃಷ್ಟಿಮಾಡುವ, ನಾಶಗೈಯುವ, ಹಲವು ಅಸುರರನ್ನು ಕೊಂದ ಕೃಷ್ಣನನ್ನು ‘ನೆನೆನೆನೆ, ನನ್ನ ಮನವೆ’ ಅನ್ನುತ್ತಾರೆ ಅವರು.

ಸುರುಟಿರಾಗದ “ಬ್ರೂಹಿ ಮುಕುಂದೇತಿ-ರಸನೇ, ಬ್ರೂಹಿ ಮುಕುಂದೇತಿ” ಕೂಡ ಕೃಷ್ಣನ ಅವತಾರಗಳನ್ನು ಕೊಂಡಾಡುತ್ತದೆ. ಕಂಸನಂತಹ ಹಲವರು ದುಷ್ಟರನ್ನು ಕೊಂದದ್ದು ಈ ಕೀರ್ತನೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ನವರೋಜರಾಗದ “ಮಾನಸ ಸಂಚರರೆ ಬ್ರಹ್ಮಣಿ ಮಾನಸ ಸಂಚರರೆ” ಕೂಡ ಕೃಷ್ಣನನ್ನು ಕುರಿತ ಕೀರ್ತನೆ.

“ಗಾಯಕಿ ವನಮಾಲಿ, ಮಧುರಂ ಗಾಯಕಿ ವನಮಾಲಿ” ಎಂಬ ಗೀತೆ ಕೃಷ್ಣನು ಮಧುರವಾಗಿ ಹಾಡುವುದನ್ನು ಹೇಳುತ್ತದೆ. ಯಮುನೆಯ ತೀರದಲ್ಲಿ ಋಷಿಗಳು ಶಾಂತವಾಗಿ ತಪಸ್ಸನ್ನು ಆಚರಿಸುವಲ್ಲಿ, ಮಲಯ ಮಾರುತನು ಸುಗಂಧಿತನಾಗಿ, ಮಂದವಾಗಿ ಬೀಸುತ್ತಿರುವಲ್ಲಿ ವನಮಾಲಿಯಾದ ಕೃಷ್ಣನು ಹಾಡುತ್ತಿದ್ದಾನೆ.

“ಕೋಗಿಲೆಯೇ ಮೊದಲಾದ ಹಕ್ಕಿಗಳು ಕಲರವ ಗೈಯುತ್ತಿರುವಲ್ಲಿ, ಕುಂತಲ (ತಲೆಗೂದಲು) ದಂತೆ ಮೋಡಗಳು ತೇಲುತ್ತಿರುವಲ್ಲಿ, ಕೃಷ್ಣನು ಹಾಡುತ್ತಿದ್ದಾನೆ.

“ಈ ಕೃಷ್ಣನು ಸುಂದರನಾಗಿದ್ದಾನೆ. ತುಲಸಿ ಮಾಲೆಯನ್ನು ಧರಿಸಿದ್ದಾನೆ. ಬ್ರಹ್ಮನಿಂದ ಪೂಜಿಸಲ್ಪಟ್ಟ ವನಾಗಿದ್ದಾನೆ. ಅವನು ಹಾಡುತ್ತಿದ್ದಾನೆ”

ಕುಂತಲವರಾಳಿ ರಾಗದ ಈ ಗೀತೆಯು ಒಂದು ಸುಂದರ ದೃಶ್ಯ ಕಾವ್ಯದಂತಿದೆ. ಕೃಷ್ಣನು ಹಾಡಿ ನಲಿದ ಆ ಮೋಹಕ ತಾಣದ ವರ್ಣನೆ ಇದರಲ್ಲಿ ಕಣ್ಣಿಗೆ ಕಟ್ಟುವಂತಿದೆ.

ಅಂತೆಯೇ ಕೃಷ್ಣನು ಗೋಕುಲದಲ್ಲಿ ಆಡುವುದನ್ನು ಇನ್ನೊಂದು ಗೀತೆಯು ಬಣ್ಣಿಸುತ್ತದೆ. ಯದುನಾಥನನ್ನು ಭಜಿಸುವ ಮತ್ತೂ ಒಂದು ಕೀರ್ತನೆ ಇದೆ.

ಶ್ರೀರಾಮನನ್ನು ಕುರಿತು ಸದಾಶಿವ ಬ್ರಹ್ಮೇಂದ್ರರು ರಚಿಸಿದ ಹಲವು ಕೀರ್ತನೆಗಳಿವೆ. ಮೋಹನ ರಾಗದ “ಭಜರೇ ರಘುವೀರಮ್ ಮಾನಸ ಭಜರೇ ರಘುವೀರಮ್” ಕೀರ್ತನೆಯಲ್ಲಿ ಶ್ರೀರಾಮನ ಮಹಿಮೆಯನ್ನು ಕೊಂಡಾಡಿದ್ದಾರೆ. “ಪಿಬರೇ ರಾಮ ರಸಮ್ ರಸನೇ” ಅನ್ನುವುದರಲ್ಲಿ ರಾಮನಾಮಾಮೃತದ ಪಾನವನ್ನು ಮಾಡಿರೆಂದು ಅವರು ಭಕ್ತರಿಗೆ ಕರೆ ನೀಡುತ್ತಾರೆ.

“ಖೇಲತಿ ಮಮ ಹೃದಯೇ ರಾಮಃ ಖೇಲತಿ ಮಮ ಹೃದಯೇ” ಎಂಬ ಪದ್ಯದಲ್ಲಿ ಶ್ರೀ ರಾಮನು ತಮ್ಮ ಹೃದಯದಲ್ಲಿ ನಲಿಯುವುದರ ಚಿತ್ರಣವನ್ನು ಅವರು ನೀಡಿದ್ದಾರೆ. ರಾಮನು ಮೋಹವೆಂಬ ಸಮುದ್ರದ ಆಚೆಗೆ ಕರೆದೊಯ್ದು, ಅಸುರರನ್ನು –  ರಾಗದ್ವೇಷಗಳನ್ನು ನಾಶಪಡಿಸುತ್ತಾನೆಂದು ಹೇಳುತ್ತಾರೆ.

‘ಖೇಲತಿ ಪಿಂಡಾಂಡೇ,’ ‘ನಹಿರೆ ನಹಿ ಶಂಕಾ,’ ’ಸರ್ವಂಬ್ರಹ್ಮಮಯಂ’ ಮೊದಲಾದ ಇನ್ನೂ ಹಲವು ರಚನೆಗಳಿವೆ. ಇವುಗಳನ್ನು ನಿರ್ಗುಣಪದಗಳೆಂದು ಕರೆಯುತ್ತಾರೆ.

ಬ್ರಹ್ಮಾನುಭವದ ನಿರೂಪಣೆ

ತಮ್ಮ ಗುರುಗಳಾದ  ಪರಮಶಿವೇಂದ್ರರ ಕೃಪೆಯಿಂದ ತಮಗೆ ಬ್ರಹ್ಮಾನುಭವ ಸಿಕ್ಕಿತೆಂದು ಸದಾಶಿವ ಬ್ರಹ್ಮೇಂದ್ರರು ಹೇಳಿಕೊಂಡಿದ್ದಾರೆ. ಈ ಬ್ರಹ್ಮಾನುಭವವನ್ನು ಕುರಿತು ಅವರು ಎರಡು ಕೀರ್ತನೆಗಳನ್ನು ರಚಿಸಿದ್ದಾರೆ. ಒಂದು ‘ಪೂರ್ಣ ಬೋಧೋಽಹಂ’ ಇನ್ನೊಂದು ‘ಆನಂದ ಪೂರ್ಣ ಬೋಧೋಽಹಂ, ಸದಾನಂದ ಪೂರ್ಣ ಬೋಧೋಽಹಂ’

ನಾನೇ ಪರಿಪೂರ್ಣ ಜ್ಞಾನ. ನಾನೇ ಅಂತರಾತ್ಮ. ನಾನೇ ಬ್ರಹ್ಮ, ನಾನು ಅಮರ, ನಾನು ನಿರ್ಭೀತ, ನಾನು ಏಕಮೇವಾದ್ವಿತೀಯ ಎಂದು ಅವರು ಈ ಗೀತೆಗಳಲ್ಲಿ ಹಾಡಿದ್ದಾರೆ.

ಹಿಂದೋಳ ರಾಗದ “ಭಜರೇ ಗೋಪಾಲಂ” ಎಂಬ ಕೀರ್ತನೆ ತುಂಬಾ ಜನಾದರಣೀಯವಾಗಿದೆ. ಅದರ ಪೂರ್ಣ ಪಾಠವನ್ನು ಇಲ್ಲಿ ಕೊಡಲಾಗಿದೆ.

‘ಭಜರೇ ಗೋಪಾಲಂ’

ಭಜರೇ ಗೋಪಾಲಂ, ಮಾನಸ, ಭಜರೇ ಗೋಪಾಲಂ,
ಭಜಗೋಪಾಲಂ ಭಜಿತ ಕುಚೇಲಂ
ತ್ರಿಜಗನ್ ಮೂಲಂ ದಿತಿಸುತ ಕಾಲಂ
ಆಗಮಸಾರಂ ಯೋಗ ವಿಚಾರಂ
ಭೋಗಶರೀರಂ ಭುವನಾಧಾರಂ
ಕದನ ಕಠೋರಂ ಕಲುಶವಿದೂರಂ
ಮದನ ಕುಮಾರಂ ಮಧು ಸಂಹಾರಂ
ನತ ಮಂದಾರಂ ನಂದ ಕಿಶೋರಂ
ಹತ ಚಾಣೂರಂ ಹಂಸ ವಿಹಾರಂ

ಸದಾಶಿವ ಬ್ರಹ್ಮೇಂದ್ರರ ಈ ರಚನೆಯನ್ನು ಕನ್ನಡದಲ್ಲಿ ಸರಳವಾಗಿ ಹೀಗೆ ಅನುವಾದಿಸಬಹುದು.

ಗೋಪಾಲನನ್ನು ಭಜಿಸು ಓ ನನ್ನ ಮನಸ್ಸೇ
ಗೋಪಾಲನನ್ನು ಭಜಿಸು.

ಗೋಪಾಲನನ್ನು ಭಜಿಸು ಅವನೇ ಮೂರೂ ಲೋಕಕ್ಕೆ ಮೂಲಾಧಾರನು. ಅಸುರರಿಗೆ ಮೃತ್ಯುವು, ಕುಚೇಲನಿಂದ ಭಜಿಸಲ್ಪಟ್ಟವನು.

ಅವನೇ ವೇದಗಳ ಸಾರನು, ಯೋಗ ವಿಚಾರನು
ಭೋಗ ಶರೀರನು, ಲೋಕಕ್ಕೆ ಆಧಾರನು.

ಅವನೇ ಪಾಪವನ್ನು ನಿವಾರಿಸುವವನು, ಅಜ್ಞಾನವನ್ನು ಹೋಗಲಾಡಿಸುವವನು, ಮದನನು ಈತನ ಕುಮಾರನು, ಮಧುವೆಂಬ ರಕ್ಕಸನನ್ನು ಕೊಂದವನು.

ಅವನೇ ಗೋಪಾಲಕನಾದ ನಂದನ ಮಗನು. ಭಕ್ತರಿಗೆ ಎಲ್ಲವನ್ನೂ ನೀಡುವ ಮಂದಾರವೂ ಅವನೆ, ಚಾಣೂರನನ್ನು ಹತ ಮಾಡಿದವನೂ ಅವನೆ. ಪರಮ ಹಂಸನೂ ಅವನೆ.

ಗೋಪಾಲನನ್ನು ಭಜಿಸು, ಓ ನನ್ನ ಮನಸ್ಸೇ
ಗೋಪಾಲನನ್ನು ಭಜಿಸು.

ಈ ಹಲವು ಕೃತಿಗಳ ಮೂಲಕ ಸದಾಶಿವ ಬ್ರಹ್ಮೇಂದ್ರರು ಅಮರರಾಗಿ ಉಳಿದಿದ್ದಾರೆ. ಸಂಸ್ಕೃತ ಕವಿಗಳಲ್ಲಿ, ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಪ್ರಮುಖರಾಗಿ ಸದಾಶಿವ ಬ್ರಹ್ಮೇಂದ್ರರು ಖ್ಯಾತಿಯನ್ನು ಪಡೆದಿದ್ದಾರೆ.