ಹುಚ್ಮುಂಡೆಯ ಮದುವೆಯಲ್ಲಿ ಉಂಡ ಜಾಣರೊಂದಿಗೆ
ಇವನು ಕೂಡಿ ಉಣ್ಣಲಿಲ್ಲ.
ಬೆಂದ ಮನೆಯ ಗಳು ಹಿರಿದು, ದಾನಬಂದ ದಟ್ಟಿಯನ್ನು
ಹಿತ್ತಿಲ ಕಡೆ ಒಯ್ದು ನೋಡಿ ಮೊಳ ಹಾಕಲು ಕಲಿಯಲಿಲ್ಲ.
ಬೆರಳು ಸಿಕ್ಕರಷ್ಟೆ ಸಾಕು ಹಸ್ತವನ್ನೆ ನುಂಗಿಬಿಡುವ
ಕಲೆಯನಿವನು ಕಲಿಯಲಿಲ್ಲ.

ಬಿದ್ದವರಿಗೆ ಬಿಸಿನೀರನು ಕೊಟ್ಟು ಎದೆಗೆ ಒದೆಸಿಕೊಂಡ
ತಾನೆ ಬೀಡ ಮಡಿಸಿಕೊಟ್ಟು ಮುಖದ ಮೇಲೆ ಉಗಿಸಿಕೊಂಡ
ಬೆಳ್ಳಗಿರುವುದೆಲ್ಲ ಹಾಲು ಎಂದುಕೊಂಡು ಕುಡಿದೆಬಿಟ್ಟ
ಹೊಳೆವುದೆಲ್ಲ ಚಿನ್ನವೆಂದು ಅದರ ಹಿಂದೆ ಅಲೆದಾಡಿದ
ಇರುಳು ಕಂಡ ಬಾವಿಯಲ್ಲಿ ಹಗಲು ದುಡುಂ ಎಂದು ಬಿದ್ದ
ಇವನು ಶುದ್ಧ ಅಪ್ರಬುದ್ಧ, ಬೆಪ್ಪುತಕಡಿ, ಗಾಂಪರೊಡೆಯ
ಎಂದು ಜನರು ಅಂದರೂ, ಇದ್ದಲ್ಲೇ ಸುಮ್ಮನಿದ್ದ
ಇವನ ಹೆಸರು ಸದಾಸಿದ್ಧ.