‘ಸದಾ ಎನ್ನ ಹೃದಯದಲ್ಲಿ
ವಾಸ ಮಾಡೋ ಶ್ರೀ ಹರೀ…’

ಆಗಲಪ್ಪ ಆಗಲಿ ; ನೀ ಕರೆದ ಮೇಲೆ
ಇಲ್ಲ ಅನ್ನುವುದುಂಟೆ ? ಅಯ್ಯಾ ಭಕ್ತ
ಬಾಡಿಗೆ ಎಷ್ಟು ? ನಿನ್ನ ಆ ಹೃದಯದಲ್ಲಿ
ಕೋಣೆಗಳೆಷ್ಟು ? ದೀಪ, ನಲ್ಲಿ, ಬಾತ್ ರೂಂ.
ಎಲ್ಲ ಸರಿಯಾಗಿವೆಯೊ ? ಈಚೀಚೆಗಂತೂ
ಬಾಡಿಗೆಗೆ ಮನೆ ದೊರಕುವುದು ಕಷ್ಟ.
ಧಾರಾಳವಾಗಿ ನೀ ಕರೆದೆ ಅಂತಂದು, ನಾ ಬಂದು
ವಾಸ ಮಾಡಿದ ಮೇಲೆ, ಬಾಡಿಗೆಯ ಬಗ್ಗೆ
ತಕರಾರು ಬೇಡ. ಕೋರ್ಟು-ಕಛೇರಿ
ನಾನು ಕಂಡವನಲ್ಲ. ಯೋಚನೆ ಮಾಡು
ಆಮೇಲೆ ಬೇಕಾದಂತೆ, ರಾಗ-ತಾನ-ಪಲ್ಲವಿ-
ಯಲ್ಲಿ ಭಜನೆ ಮಾಡು.