|| ಓಂ ||
|| ಪರಮಾತ್ಮಶಿವೋಹಂ ||

ಸದ್ಗುರುಜ್ಞಾನಾನಂದರ ಒಂದನೇತತ್ವ ನಿಜಗುಣರ ಒಂದನೇ ತತ್ವದಂತೆ ಮಟ್ಟು

ರಾಗ-ನಾದನಾಮಕ್ರಿಯೆ ಅಟ್ಟತಾಳ

ಶ್ರೀ ಗುರುವಿನ ಕೃಪೆಯಾಗೆ ನರನ ಭವರೋಗನಿವಾರಣಮಾಗುವದು ಇರುಳ್ಹಗಲೆನ್ನದೆ ಧರೆಯ ಭೋಗಂಗಳ | ನೆರೆ ಚಿಂತಿಸುತ್ತೆ ಹರಿಯುವ ಚಿತ್ತವ | ಧರೆಯ ಭೋಗವು ಸ್ವಪ್ನದಂತೆ ತೋರಿಸಿ ನರನ | ಹರಿವ ಚಂಚಲ ಚಿತ್ತವನ್ನೇ ಕಿತ್ತಿಡುವ ಪ || ೧ || ಶ್ರೀಗುರು

ಪರಿ ಪರಿ ರೂಪು ನಾಮಗಳ ಭಾವಿಸಿ ನಾನಾ | ಪರಿ ಪರಿ ದೇವರೆನ್ನುತೆ ಭಿನ್ನಪ | ನರನೆ ಈಶ್ವರನೊಬ್ಬ ಮೆರೆವ ಸರ್ವರೊಳೆಂದು ಬೆರಸುತೆ ಮನವ ಈಶ್ವರನೊಳು ಬೆಳಗಿಪ || ೨ || ಪ || ಶ್ರೀ ||

ಮೂರು ಮೂರ್ತಿಗಳ ರೂಪವೆ ಓಂ. ಆ. ಉ. ಊ. ಐ. ಮ. ಸೇರಿ ಬೆಳಗುವುದು | ಸರ್ವರೊಳೆಂಬುವ | ತೋರಿ ಸೃಷ್ಟಿಸ್ಥಿತಿ ಕರ್ತೃ ಸಂಹಾರದಿ || ತೂರಿ ಅಭಿಮಾನವೆಂಬುದ | ಕೊಂದುಬಿಡುವ || ೩ || ಪ|ಶ್ರೀ|ಇಷ್ಟಲಿಂಗದಿ. ಭಾವ ನೆಟ್ಟಾನೆ ನಿಂದೊಡೆ | ಬಿಟ್ಟೋಡುವವು | ಭವ ಪಾಶಂಗಳು || ಇಷ್ಟಾ ಪ್ರಾಣವು ಭಾವ | ವಟ್ಟು ಗೂಡಲು ಜನ್ಮ ಸುಟ್ಟು ಪೋಪುದು ಎಂದಾ ಗುಟ್ಟು ಬೋಧಿಸುವ || ೪ || ಪ || ಶ್ರೀ || ಕರೆದು ಪಕ್ಕಕೆ ತನ್ನಂ ತೆಸಗಿ | ಅರಿವೆ ಗುರು | ನಿರತ ಕನೆಂಬಾಚಾರ ವರೆ ಶಿ | ಷ್ಯನು ವರ ಮನ ಲಯ ಮಾಡದೆ | ಜ್ಞಾನ | ನಿತ್ಯಾನ್ಯಾಬೆರೆದೇನು | ವೀರ ಪೀಠೇಶನೊಳೆನ್ನೆಂಬಾ || ೫ || ಶ್ರೀಗುರುವಿನ ಕೃಪೆಯಾಗೆ ನರನಭವ | ರೋಗನಿವಾರಣಮಾಗುವದು ||

(೨ನೇ ತತ್ತ್ವ) ರಾಗ-ಮೋಹನ ಅಟ್ಟತಾಳ

ಎಲ್ಲರಂತವನಲ್ಲೆ ಎನ್ನ ಗುರುವು ಬಲ್ಲಿದನೆ ಪ್ರಭುವು || ಅ.ಪ || ಎಲ್ಲರಂತವನಲ್ಲ ಕೇಳಮ್ಮ ಎಲ್ಲವನು ಎನ್ನಲ್ಲೆ ತೋರಿ ಎಲ್ಲು ಹೋಗದಂತೆ ಮಾಡಿಟ್ಟಾ ಜನ್ಮವನೆ ಸುಟ್ಟಾ || ೧ || ಎಲ್ಲ | ನೋಡು ಪ್ರಣವ ಸ್ವರೂಪ ನೀನೆಂದ ತಾನೈದು ವಿಧದಿ ಕೂಡಿ ಧರೆಯೊಳು ತುಂಬಿರುವದೆಂದ ಇದ್ದ ನೋಡ ಸೃಷ್ಠಿಯ ನೋಡಿದಂದದಿ ಭಾಸವಹುದೆಂದ ಈ ರೂಪಿನಿಂದ ಕೂಡಿ ಹಂಸನ ಹೂಡಿ ಸೂಸ್ತ್ರವ ನೋಡಿ ಆಪೋಜ್ಯೋತಿ ತೇಜವ ಮಾಡಿದನ ಶ್ರೀಗುರುವು ಎನ್ನೆಂದ ಅದು ನೀನೆ ಎಂದ || ೨ || ಎಲ್ಲ ಆದಿ ಅಂತ್ಯಗಳನ್ನೇ ಭೇದಿಸಿದ ಅತ್ಮಾಕುಷ್ಟಾ ದ್ವಾದಶಾಂಗುಲ ದಂತ್ಯ ತೋರಿಸಿದವರ ಮೋಕ್ಷಮಾರ್ಗದ ಹಾದಿ ಇದು ತತ್ಪದವ ನೋಡೆಂದ ಅದು ನೀನೆ ಎಂದ | ಹಾದಿನಾಲ್ಕರ ನಡುವೆ ಶೋಭಿಪ ವೇದಿಕೆಯ ಮೇಲೇರಿ ಶ್ರೀಗುರು ಪಾದದಲ್ಲಿ ನೀ ಬೆರೆದು ಸುಖಿಸೆಂದ ಎರಡಿಲ್ಲವೆಂದ || ೩ || ಎಲ್ಲ | ಆರು ವರ್ಗವ ಹರಿದು ಬಿಸುಡೆಂದ | ಕರ ವಾಕ್ಕು ಕಚ್ಚೆಯ ಮೂರು ಗುಣಗಳ ಬಿಗಿದು ಹಿಡಿ ಎಂದ | ಆರಾರ‍್ಲೆ ಮೂವತ್ತಾರು ತತ್ವದ ಮೂಲವರಿ ಯೆಂದ | ಬಲು ಸಿಟ್ಟಿನಿಂದ ಮೂರು ಕರಣವು ಶುದ್ಧಿ ಇಲ್ಲದೆ | ನೂರುಕಾಲವು ತಪವ ಗೈದಡು ತೋರದಾತ್ಮಾನಂದ ಸುಖವೆಂದ ಜೋಪಾನವೆಂದ || ೪ || ಎಲ್ಲ | ಕಾರಣದ ಗುರುವರನೆ ಬೇಕೆಂದ | ಆವ ದೇವ ಗುರುವು ಅಪಾರ ಮಹಿಮನು ವಿಹಿತನವನೆಂದ | ಆ ಗುರುವಿನಿಂದ ಘೋರ ಭವ ದುರಿತಗಳು ಹರವೆಂದ ಅರಿದಾತನಿಂದ | ಆರು ಲಿಂಗವ ಮೂರು ಮಾಡಿ ಮೂರು ಲಿಂಗವನೊಂದುಗೂಡಿ | ಸೇರಿ ನೀನಾಸ್ಥಲದಿ ಬೆಳಗೆಂದ ಘನ ಪದವಿದೆಂದ || ೫ || ಎಲ್ಲ | ತನ್ನ ತಾನೇ ತಿಳಿಯಬೇಕೆಂದ | ತಾ ತನ್ನ ತಿಳಿದರೆ ಭಿನ್ನ ಭಾವಗಳಳಿವುದದರಿಂದ | ನೀ ನಿನ್ನ ತಿಳಿವುದೆ | ಎನ್ನ ಮತವಿದು | ಇದೆಯೆ | ಘನವೆಂದ | ತಿಳಿದರಿವಿನಿಂದ | ಭಿನ್ನವಳಿಯುತೆ | ನಿನ್ನ ತಿಳಿದರೆ | ಚನ್ನ ಶ್ರೀಗುರುವಪ್ಪೆ ನೀನೆ | ನಿನ್ನ ಜನ್ಮಕ್ಕಿದೆಯೆ ಕಡೆ ಎಂದ | ನಿಜ ಪದವಿದೆಂದ || ೬ || ಎಂಟು ಪದಗಳ ಸೊಂಟ ಮುರಿ ಎಂದ | ವಣ ಪೊಂಟು ಮಾತಿನ | ಗಂಟುಗಳ್ಳರ ತಂಟಿ ಬೇಡೆಂದ | ನೀನಂಟಿಕೊಂಡರೆ ಗಂಟಕತ್ತರಿಸುವರು ತಿಳಿ ಎಂದ | ಮತಿಯಿರಲಿ ಎಂದ | ತುಂಟರೈವರ ಸೆರೆಯೊಳಿರುಸತೆ | ಎಂಟು ಅಕ್ಷರಗಳನ್ನು ಪಠಿಸುತೆ | ಕಂಟಕೊಬ್ಬನ ಕಳೆದು ನಡೆ ಎಂದ ನಿರ್ಗುಣವಿದೆಂದ || ೭ || ಎಲ್ಲ | ಮರವೆ ದೋಷವು ಹರಿದುಹೋಯ್ತೆಂದ | ಅದನರಿಯೆ ನಿನ್ನಯ ಅರಿವೆ ಕಾರಣವಾಯ್ತು ತಿಳಿ ಎಂದ | ಆ ಅರಿವೆ ನೀನು ಬರಿದೆ ಭ್ರಮೆಯೊಳು ಬ್ರಮಿಸಬೇಡೆಂದ | ಕಟುವಾಕ್ಯದಿಂದಾ ಅರಿವಿಗಾಶ್ರಯಮಾದ ಶ್ರೀಗುರುವರನೆ ರೇಣುಕನೆನುತ | ತನ್ನೊಳು ಬೆರಸಿ ಮುಕ್ತಾಂಗನೆಯು ನೀನೆಂದ | ಗುರುಜ್ಞಾನಾನಂದಾ || ಪ || ಎಲ್ಲರಂತವನಲ್ಲೆ ಎನ್ನ ಗುರುವು ಬಲ್ಲಿದನೆ ಪ್ರಭುವು ||

(೩ನೇ ತತ್ತ್ವ) ರಾಗ-ನಾದನಾಮಕ್ರಿಯೆ ಅದಿತಾಳ

ಆಧಾರವ ಬಿಡಬೇಡಮ್ಮಿ | ಗುರುಪಾದದೊಳಗೆ | ಮನವಿರಲಮ್ಮಿ || ಸಾಧಿಪ ಮೋಹನ | ನಿನ್ನ ಕೆಡಿಸೆ ಅವನ್ಹಾದಿಗೆ | ನೀ ಹೋಗಬೇಡಮ್ಮಿ || ಅ.ಪ || ಆಧಾರ || ಹಿಂದೆ ಮಾಡಿದ ಪುಣ್ಯ ಫಲವಮ್ಮಿ | ಜ್ಞಾನಾನಂದದ ಸುಖವನು ಪಡೆದಮ್ಮಿ | ಮಂದಬುದ್ಧಿ ತರವಲ್ಲ ಕೇಳು | ನೀ ನೊಂದೂ ದುಃಖಿಪೆ ಇದ ತಿಳಿಯಮ್ಮಿ || ೧ || ಮಾರ್ಗತಪ್ಪಿ ನಡೆಬೇಡಮ್ಮಿ | ದುರ್ಮಾರ್ಗ ತನವು | ತರವಲ್ಲಮ್ಮಿ || ದುರ್ಗಿ ಬೆನಕವೆಂದೆರಡಿರೆ ಆ ಅಪವರ್ಗವು ದೊರಕದು ತಿಳಿಯಮ್ಮಿ || ೨ || ಜ್ಞಾನಶಕ್ತಿ ಎನಿಸಿದೆಯಮ್ಮಿ | ಹೀನಜನಕೆ ಬಹು ಕಣ್ಣುರಿಯಮ್ಮಿ | ಜ್ಞಾನಿಯ ಮತ ಮುಕ್ತಾಂಗಿಯ ಪಥವಿದು | ಸ್ವಾನುಭವಕೆ ಸಮ್ಮತವಮ್ಮಿ || ೩ || ಗುರು ಎಲ್ಲೆಲ್ಲಿಯು ತುಂಬಿಹನಮ್ಮಿ | ನಿನ್ನಲ್ಲಿಯುತಾ ನೆಲಸಿಹನಮ್ಮಿ | ನಾ ಬಲ್ಲೆನೆಂಬೊ ಹಮ್ಮುಳಿದರೆ ಯವನಿದ್ದಿಲ್ಲ ದಂತಾಗುವನಮ್ಮಿ || ೪ || ಅರಿವು ಇರ್ದಡೆ ಏನುಫಲವಮ್ಮಿ | ತಕ್ಕ ವಿರತಿಯು ಜೊತೆಯೊಳು ಬೇಕಮ್ಮಿ | ಎರಡೆಂಬುದಿಲ್ಲ ಗುರು ರೇಣುಕನೊಳು | ಅರಿವಿಗೆ ಶಿರವೇ ಫಣವಮ್ಮಿ || ೫ || ಆಧಾರವ ಬಿಡಬೇಡಮ್ಮಿ | ಗುರು ಪಾದದೊಳಗೆ ಮನವಿರಲಮ್ಮಿ ||

ರಾಗ-ಧನ್ಯಾಸಿ; ತಾಳ-ಅಟ್ಟತಾಳ

ಮನವೇ ಮರೆಯದಿರು ಗುರುವ | ನಮ್ಮ ಚಿನ್ಮಯನಾದ ರೇವಣಸಿದ್ಧ ಪ್ರಭುವ ||ಅ-ಪ|| ಘನಗುಣಭರಿತನಾಗಿಹನ | ಕ್ರೂರಮನಜನನ್ನ ಧ್ವಂಶವ ಮಾಡಿಟ್ಟವನ | ಮನುಮುನಿಗಳ ಮೀರಿದವನ | ದಿವ್ಯ ಘನತತ್ವ ಮಸಿ ವಾಕ್ಯಾರ್ಥವನೆ ಭೋದಿಪನ || ೧ || ಮನವೇ | ವೇದಗಳಿಗೂ ಅಂತರ್ಗತ ಪರವಾದಿ ಭೀಕರನಾಗಿ ಮೆರೆವ ಸಾಹಸನ | ಸಾಧುಶೇಖರನೆನಿಸಿದನ | ದಿವ್ಯಪಾದವೆಂದೆನಿಸುತ್ತೆ ಮೆರೆವ ಪಾವನನಾ || ೨ || ಮನವೇ | ವರ ರಂಭಾಪುರದಿ ನೆಲಸಿಹನ | ಮುಕ್ತಿ ತರುಣಿಯೊಡನೆ ಕೂಡಿ ನಲಿವ ಚಿದ್ಘನನಾ | ಗುರುವಿನ ಗುರುವೆನಿಸಿದನ ಸಣ್ಣ ತರಳ ಜ್ಞಾನಾನಂದ ಗುರುವ ನರುಹಿದನ || ೩ || ಮನವೇ ಮರೆಯದಿರು ಗುರುವ ||

ರಾಗ-ಶಂಕರಾಭರಣ ಅಟ್ಟತಾಳ

ಮರೆಯುವದೆಂದಿಗೋ ಶ್ರೀಗುರು ನಿನ್ನ ಮರೆಯುವದೆಂದಿಗೋ || ಅ-ಪ || ಮರೆವುದೆಂದಿಗೊ ನಿನ್ನ ಅರಿವಿತ್ತ ಪಾವನಚರಿತನಾಗಿಹ | ಶ್ರೀ ಮದ್ಗುರುವೇ ರೇವಣಸಿದ್ಧಾ || ೧ || ಮರೆ || ದುರಿತದೊಳಗೆ ಬಿದ್ದು ನರಳುತಿರ್ದಗೆ | ದಿವ್ಯ ಸ್ಥಿರಸುಖ ಪದವಿತ್ತಾ ಕರುಣಸಾಗರ ನಿನ್ನ || ೨ || ಮರೆ || ಗಣನೆಯಿಲ್ಲದೆನ್ನಾವ ಗುಣಗಳನೆಣಿಸದೇ | ಕ್ಷಣದಿ ಜ್ಞಾನವ ಪೇಳ್ದ ತ್ರಿಣಯ ನಿನ್ನಯ ಪದವ || ೩ || ಮರೆ || ಧರೆಯೊಳಧಿಕ ರಂಭಾಪುರದೊಳು ನೆಲಸುತೆ ತರಳ ಜ್ಞಾನಾನಂದಗರಿವಿತ್ತ ನಿನ್ನನ್ನು | ಮರೆಯುವದೆಂದಿಗೊ ||

ರಾಗ-ಕಾನಡ ಆದಿತಾಳ

ಗುರುರಾಯ ಸದ್ಗುರುರಾಯ || ತವ ಚರಣದ ಕರುಣವ ತೋರಯ್ಯಾ || ಅ.ಪ || ಮರೆದು ಬಂದೆನು ನರ ಜನುಮಕ್ಕೇ ಗುರಿಯಾದೆನು | ಜನಿ ಮರಣಕ್ಕೇ ಅರವಿತ್ತು ಪೊರೆವ ಭವತರಿವುದೆಕೆ | ಗುರು ರೇಣುಕ ನಿನ್ನ ಮೊರೆಹೊಕ್ಕೇ || ೧ || ಬಲ್ಲಿದರೆಂಬೊರ ನೋಡಿದೆನು || ಅವರಲ್ಲಿ ವಿಚಾರವ ಮಾಡಿದೆನು | ಸಲ್ಲದವರ ಬಿಟ್ಟರಸಿದೆನು | ಘನನಲ್ಲಾ ನಿನ್ನಯ ಪದ ಸೇರಿದೆನು || ೨ || ಪಿಡಿದಿಹುದೆನ್ನನು ಭವಶರಧೀ | ಕಡೆಯಗಾಲಕ್ಕೆ ಬಂದು ನೀದೊರದಿ || ಬಿಡಿಸುತೆ ಭವವನು ನೀ ದಯದೀ | ಕಡೆಹಾಯಿಸೊ ಕರುಣಾ ಶರಧಿ || ೩ || ತನ್ನನ್ನು ತಾತಿಳಿಯುವ ವಿಧವ ಮನ್ನಿಸಿ ಒರೆಯೈ ಗುರುದೇವ | ಚನ್ನಿಗನೆಣಿಸದೆನ್ನವ ಗುಣವ ಸಂಪನ್ನಾ ಪೊರೆಯೊ ಪಿಡಿದೆನು ಪದವ || ೪ || ಕ್ಷಿತಿಯೊಳು ರಂಭಾಪುರಿ ವಾಸ | ಅಲ್ಲಿ ಯತಿಗಳ ಕೂಟವೆ ಕೈಲಾಸಪತಿಯೆ | ರೇವಣಸಿದ್ಧ ಕೊಡುವೆಸನಾಮತಿಯೊಳು | ಮಾಡುವ ತವಧ್ಯಾಸ || ೫ || ಗುರುರಾಯ | ಸದ್ಗುರುರಾಯ ತವ ಚರಣದ | ಕರುಣವ | ತೋರಯ್ಯಾ || ೬ ||

ರಾಗ-ಕಾನಡ ಆದಿತಾಳ

ನೆನೆ ಮನವೆ ನೀ ನೆನೆ ಮನವೇ | ಘನ ಗುರು ಪಾದವ | ಮರೆತಿರುವೇ ||ಅ-ಪ|| ನೆನೆ ಮನ || ಹುಟ್ಟಿಸಿದವ ತಾ ಹೊಣೆಗಾರ | ಸೃಷ್ಟಿಯ | ಪೊರೆವನು ಘನ ಧೀರಾ || ನಿಷ್ಠೆಯೊಳಿರೆ ನಿನಗಿಷ್ಟದ | ವಸ್ತುವ ಕಟ್ಟಿ ತಂದು | ಕೊಡುವನು | ಗುರು ವೀರ || ೧ || ನೆನೆಮ || ಭವರೋಗಕೆ ಇವ | ಘನವೈದ್ಯಾ | ಭುವನಗಧಿಕ | ರೇಣುಕಾರಾಧ್ಯ | ತವ ಪಾದವೆ ಗತಿ ಎಂದು | ನಂಬಿದವರಿಗೆ | ಭುವಿಯೊಳು | ಮುಕುತಿಯ | ರಾಜ್ಯವೆ ಸಾಧ್ಯಾ || ಪ || ನೆನೆ || ಅರಿವೆಂಬುದೆ ಘನ ಸಿರಿ ನಿನಗೇ | ಮರೆಯೆ ದುಃಖ | ಇಹಪರದೊಳಗೆ || ಗುರು ರೇಣುಕ ನಡಿ ಕೃಪೆ | ನಿನಗೊದಗಲು || ಅರಿಯೆನಿದಕೆ | ಸಮ ಧರೆಯೊಳಗೆ || ೩ || ಪ || ನೆನೆ ಮನವೇ | ನೀ ನೆನೆ ಮನವೇ | ಘನ ಗುರು | ಪಾದವ ಮರೆತಿರುವೇ ||

ರಾಗ-ನಾದನಾಮಕ್ರಿಯೆ ಅಟ್ಟತಾಳ

ಶ್ರೀಗುರುವಿನ ಪಾದ | ಪೂಜೆ ಮಾಡುವ ಜ್ಞಾನಾ || ಯೋಗಿಣಿಯರೆ ಬನ್ನಿ ಮುದದಿಂದ

|| ಅ-ಪ || ಶ್ರೀಗುರು || ವರನಿರ್ಮಲೋದಕದಲಿಮಿಂದು | ಭಸಿತಾವ ಧರಿಸುತ್ತೇ | ವಿಧಿಯಿಂದ ಷಡ್ಲಿಂಗಕೇ | ಉರುತರದಿಷ್ಟಾಪ್ರಾಣವು ಭಾವವನು ಕೂಡಿ ತ್ವರಿತದಿಂದಲಿ ಶಿವಪೂಜೆಯ ಮುಗಿಸುತ್ತೆ || ೧ || ಶ್ರೀಗುರು || ಗುರುಪಾದಕಗ್ಗಣಿ ಅರಿಶಿನ ವಿಭೂತಿ | ವರಗಂಧ | ಕುಂಕುಮ ಪತ್ತ್ರೇ | ಅಕ್ಷತೆಯಾ ಪರಿಮಳಮಾದ | ದೂಪವ | ಕೊಂಡು | ನಮ್ಮ ಶ್ರೀ ಗುರುಪಾದ ದೆಡೆಗೆ ಸಂತಸದಿಂದಾಗಮಿಸುತ್ತೇ || ೨ || ಧರೆಯೊಳಧಿಕ ರಂಭಾಪುರದೊಳು ನೆಲಸಿಹ ಪರಮಸದ್ಗುರು ರೇಣುಕರ ಪಾದಕ್ಕೆ || ಗುರುಮಂತ್ರದಿಂದಷ್ಟವಿಧ ಅರ್ಚನೆಯ | ಮಾಡಿ | ಸಿರಸಹಿತಲಿ ವಂದನೆಗಳನರ್ಪಿಸುತೆ || ೩ || ಶ್ರೀಗುರುವಿನ ಪಾದಪೂಜೆ ಮಾಡುವ | ಜ್ಞಾನಾ ||

ರಾಗ-ತಾಳ ಆದಿತಾಳ

ಜ್ಞಾನೀಯ ಲಕ್ಷಣವಿಂತಿರಬೇಕು | ಅಜ್ಞಾನವ | ಸುಟ್ಟು | ಬೂದಿಯ ಮಾಡಿದ || ಅ-ಪ || ಜ್ಞಾನ || ಮಾತಿನೊಳಗೆ ಮಾತಾಡಲಿ ಬೇಕು | ಖ್ಯಾತಿ ಘಟದಿ ಮಠಮಾಡಿರಬೇಕು | ಜ್ಯೋತಿಯೊಳಗೆ ಜ್ಯೋತಿ ಬೆಳಗಬೇಕು | ಗುರುನಾಥನ ಓದೊಳಗೋದಲಿಬೇಕು || ೧ || ಕಾರಣಜ್ಯೋತಿಯ ನೋಡಬೇಕು | ಮಹಕಾರಣವೆ ತಾನಾಗಿರಬೇಕು | ತೋರುವುದೆಲ್ಲ ತಾನೆಯಾಗಿ ತಾ ಬೇರೆ ಸಾಕ್ಷಿಕನಂತಿರಬೇಕು || ೨ || ಹೊರಗಿನ ಮಾಯೆಯ ಮುರಿಯಬೇಕು | ತನ್ನೊಳಗಿನ ಮಾಯೆಯನರುಹಿರಬೇಕು | ಮರವೆಯ ಮೂಲವ ಮುರಿತು ತನ್ನ ಅಂತರವನು ತಾನೇ ತಿಳಿದಿರಬೇಕು || ೩ || ಅರಿವು ಎಂಬುದನರಿಯಬೇಕು ಆ ಆರಿವೆ ಮೂರುವಿಧವೆಂದರಿಯಬೇಕು | ಅರಿವು ಭ್ರಾಂತಿ ಬರಿಯರಿವು ತನ್ನ ನಿಜದರಿವನ್ನರಿವನೆ ತಾನೆನಬೇಕು || ೪ || ವರರಂಭಾಪುರಿ ಸೇರಲಿಬೇಕು | ಘನಶಿವಾಯ ಎನುತಿರಬೇಕು | ವರಗುರು ರೇವಣಸಿದ್ಧನ ಪಾದದಿ ಬೆರಸಿ ಮನವ ಸ್ಥಿರಗೊಳಿಸಿರಬೇಕು || ೫ ||

ರಾಗ-ತಾಳ-ಅಟ್ಟತಾಳ

ಮಾಡುಗುರು ಪದ | ಪೂಜೆ ಮುದದಿಂದ | ಹೇ ಮಂಕು ಮನವೆ ಪ || ೧ || ಕೂಡಿ ಶರಣ ರೊಳಾಡಿ | ಗುರುಪದ | ನೋಡಿ ಸುಕೃತವ ಬೇಡಿ ಪಾವನ ಮಾಡಿ | ಜನ್ಮವ ಸೌಖ್ಯದೊಳು || ಮುಳುಗಾಡಿ ಆನಂದದೊಳು ಮನವೇ || ೨ || ಪ || ಮಾಡು || ದುರಿತಹರಗುರು ವರನ | ಸೇರುತ್ತೇ || ತತ್ವಾರ್ಥವರಿತು ಭರದಿ ಸಾಂಖ್ಯ ವಿಚಾರ ಮುಗಿಸುತ್ತೇ || ಪರಮಗುರು | ಆಚಾರ ಜಂಗಮ ಮೆರೆವ ಶಿವ ಪ್ರಸಾದವಲ್ಲದೆ | ಉರು ಮಹಾಲಿಂಗದಲಿ ಹರತಾ ಬೆರೆದಿರುವ ಪರಿಯರಿತು ಮನವೇ || ೩ || ಪ || ಮಾ || ಕಾಯದಲಿ ಗುರುಸೇವೆ ಮಾಡುತ್ತೆ | ಸಾರ‍್ಪದವು ನಿನ್ನಯ | ಜಿಹ್ವೆಯಲಿ | ಗುರುಮಂತ್ರ ಜಪಿಸುತ್ತೇ || ಕಾಯಕರಣ ಸಜ್ಜೆ ಮಾಡಿ ಜೀವಕಾಯವ ಲಿಂಗ ಮಾಡಿ | ಭಾವ ಪುಷ್ಪದಿ ಪೂಜೆ ಮಾಡಿ || ದೇವರೇ ನೀನಾಗಿ | ಮನಮನವೇ || ೪ || ಪ  || ಮಾಡು ಧರೆಯೊಳ್ರಂಭಾಪುರವ ಸೇರುತ್ತೇ | ಮತ್ಸರಕೆ ಒಮ್ಮೆ ಪರಮ ಗುರು ಶರಣರೊಳು ನಲಿಯುತ್ತೇ | ಘನ ಶಿವಾಯ ಓಂ ಘನ ಶಿವಾಯ | ಓನ್ನಮೊ ಘನ ಶಿವಾಯ | ಪರಮ ಪಾವನ ರೇಣುಕ ಗುರುವರ್ಯ ಪಾಹಿ ಮಮೆನುತ | ಮನವೇ || ೫ || ಪ || ಮಾಡುಗುರುಪದ || ಪೂಜೆ ಮುದದಿಂದ ||

(೧೦ನೇ ತತ್ವ) ರಾಗ-ತಾಳ-ಅಟ್ಟತಾಳ

ನಿನ್ನೊಳಗೆ ನೀ ತಿಳಿವುದೆಲೆ | ಮನವೇ ಮರೆದಿಹುದು ತರವೇ || ಪ || || ಆ || || ೧ || ನಿನ್ನ ತಿಳಿ ಮರದೀ | ಪ್ರಪಂಚವ ನಿನ್ನ ತಿಳಿದಡೆ ನಿನಗು ದೈವಕು | ಭಿನ್ನವೆಂಬುದಿಲ್ಲ. ವದರಿಂ ದೆನ್ನ ಮಾತಮಾತನು ನಂಬಿ ಧೃಡದಿಂ || ೨ || || ಪ || ನಿನ್ನೊಳಗೆ || ನೂತನದ ಮಾತಲ್ಲ ಪೇಳುವದು | ಈ ಆತ್ಮ ನಗರಕೆ ನೀತಿ ಕೋವಿದರಾಜ ನೀನಹುದು | ಪಾತಕಕೆ ನೀಕೈಯ್ಯ | ಹಚ್ಚಲು ಜ್ಞಾತಿಮೋಹನ ನಿನ್ನ | ರಾಜ್ಯವ | ಘಾತ ಕತ್ವದಿ | ಕಸಿದು ಕೊಂಬುವರ್ | ಪ್ರೀತಿಯಿಂದೀ ಮಾತಲಾಲಿಸಿ || ೩ || || ಪ || ನಿನ್ನೊಳ || ಇದ್ದ ಮಾತಿದ್ದಂತೆ ಪೇಳುವೆನು || ಶ್ರೀಗುರುವು ರೇವಣಸಿದ್ಧತಾ ಪೇಳಿಹ | ವಿಚಾರವನು | ಶ್ರದ್ಧೆಯೇ | ಋತು ಆ ಮಹಾಘನ | ಬದ್ಧ ಮಾದುಪದೇಶ | ವೀರ‍್ಯವು | ಶುದ್ಧ ಜ್ಞಾನವೆ | ಗರ್ಭ ಪುಟ್ಟಿದ | ಮುದ್ದು ಭಶಿಶು | ಆನಂದವೆಂಬುದ || ೪ || ಪ || ನಿನ್ನೊ || ಹಂಬಲಿಸಿ. ಸ್ವೇಚ್ಛೆಯಲಿ | ನಡೆಬೇಡ | ಗುರುವರನ | ದಿವ್ಯ ಪದಾಂಬುಜವ | ನೆನೆಯದಲೆ | ಕೆಡಬೇಡ | ನಂಬಿದವರನು | ಪೊರೆವೆ | ನಾನೆಂತೆಂಬ | ಬಿರುದನು | ಧರಿಸಿ-ಮೆರೆಯುವ | ಕುಂಭಿಣಿ ಪತಿಯಾದ | ಶ್ರೀಗುರುವೆಂಬ ಘನ ರಂಭಾಪುರೀಶನ || ೫ || ನಿನ್ನೊಳಗೆ ನೀ ತಿಳಿವುದೆಲೆಮನವೇ ||

ರಾಗ-ತಾಳ-ಅಟ್ಟತಾಳ

ಗುರುರಾಯನೊಲಿದ | ಮೇಲಮ್ಮ | ಈ ಧರಣಿಯ | ಭ್ರಮಣೆಗಳಿರ ಬಾರದಮ್ಮ || ಪ || || ೧ || ಗುರುರಾಯ || ಹಿಂದಣ ಸುಕೃತವಿದಮ್ಮ | ಗುರು ಬಂದು | ತನ್ನಂತೆನ್ನ ಗೈದ ಕಾಣಮ್ಮ | ಬಂಧನ ಹರವಾಯಿತಮ್ಮ | ಮುಕ್ತಿಯೊಂದೆ | ಸಾಕಿನ್ನೇನು | ಬೇಡಕಾಣಮ್ಮ || ೨ || ಗುರು || ನುಡಿದಂತೆ | ನಡೆಯಬೇಕಮ್ಮ | ಬಲು ಧೃಡ ಚಿತ್ತ ವಿರಬೇಕು | ಮನದೊಳಗಮ್ಮ | ನುಡಿಯೊಳೊಂಚಿಸ | ಬಾರದಮ್ಮ | ಈ ಒಡಲಿಗೆ ಕಡುಕಷ್ಟ | ಕೊಡರುವದಮ್ಮ || ೩ || || ಗುರು || ರಂಭಾಪುರದೊಳಿಹನಮ್ಮ | ಈ ಕಂಭಿಣಿ ಪೊರೆವ ರೇಣುಕ ನಿವನಮ್ಮ | ನಂಬಿದವರ | ಪ್ರೀಯನಮ್ಮ | ಗುರುವೆಂಬುರೊಳಗಿವ | ನಗ್ರೇಶನಮ್ಮ | ಗುರುರಾಯನೊಲಿದಮೇಲಮ್ಮ ||

ರಾಗ-ತಾಳ-ಅಟ್ಟತಾಳ

ಎಂತಹ ಪುರುಷ ದೊರಕಿದನಮ್ಮ | ಎನ್ನ ಚಿಂತೆಗಳೆಲ್ಲ | ಬೈಲಾದವಮ್ಮ || ಪ || ಎಂತಪುರುಷ || ಮುಕ್ತಿಕಾಂತನೆನಿಸಿ ಮೆರೆವಂತೆ ಸದ್ಗುರುವೆನ್ನ ಅಂತರಂಗದಿ ನಿಂತ || ೧ || ವರಹಂಸಕಲ್ಪವ ನೇರಿಸಿದ | ಬ್ರಹ್ಮಪುರದೊಳುಯ್ಯಾಲೆಯ ನಾಡಿಸಿದ ನೆರೆಸೂಕ್ಷ್ಮದ್ವಾರವ ತಾತೆರೆದ ಅಲ್ಲಿ ಪರವಸ್ತು ನೀನಾಗೆಂದನು ತೊರೆದ || ೨ || ಎಂತ || ಎರಡು ಕಣ್ಗಳನೊಂದು ಮಾಡಿದನೆ ಅಲ್ಲಿ ಗುರು ಮಹಲಿಂಗಕ್ಕೇ ಗುರಿಯಿತ್ತನೆ ಅರಿ ನೀನು | ಅದೆ ನಾನೆಂದರಿವಿತ್ತನೆ | ಮುಕ್ತಿತರುಣಿ ನೀನೆಂದು ತನ್ನೊಳ್ಬೆರಸಿದನೆ || ೩ || ಎಂತ || ಕೊಲ್ಲಿಪಾಕಿಯಿಂ | ತಾನೈದಿದ || ರಂಭಾಪುರದೊಳ್ವೀರ | ಪೀಠ ಸ್ಥಾಪಿಸಿದ ಗುರುವರ | ಎನಗಾಗಿ ಚಿತ್ತೈಸಿದ | ತನ್ನ ವರಜ್ಞಾನ | ಮುದ್ರೆಯ ಕರುಣಿಸಿದ || ೪ || ಎಂತ ಪುರುಷ ದೊರಕಿದನಮ್ಮ ||

ರಾಗ-ತಾಳ-ಅಟ್ಟತಾಳ

ಗುರುಬಿಟ್ಟನ್ನಿರಲಾರೆನೆ || ಸಂಜೀವಸದ್ಗುರು ಬಿಟ್ಟನ್ನಿರಲಾರೆನೆ || ಪ || ಗುರು ಬಿಟ್ಟಿರಲು ಮುಂದೆ ನರಕಾವು ತಪ್ಪದು | ಪರಮ ಪಾವನನಾದ ವರ ಜ್ಞಾನಾನಂದ ಶ್ರೀ || ೧ || ತನ್ನ ರೂಪವ ನೋಡೆಂದ | ತೋರುತಲೆನ್ನ ಭಿನ್ನ ಭಾವನೆಯ ಕೊಂದ | ಮುನ್ನಿ ಜಗಚ್ಛಾಯವನ್ನೆಲ್ಲ ಬೆಳಗಿಪ ಚಿನ್ಮಯ ಪಾದವ ಹೃದಯದೊಳಿರಿಸೆಂದ || ೨ || ಭೇದವಾದವ ಬಿಡಿಸಿದ | ಸತ್ಯದಿ ಮೋದವಾದ ಬ್ರಹ್ಮವ ತೋರಿದ | ಆದಿ ಅಂತ್ಯಗಳನ್ನೇ ಶೋಧಿಸಿ ತತ್ವದ ಹಾದಿಯನರುಪಿದ ವೇದಮೂರ್ತಿಯಾದ || ೩ || ನೆನಸಿದಾಗಲೆ ಬರುವ ಸದ್ಭಕ್ತರ ಮನದೊಳು ನೆಲಸಿರುವ | ಕನಸಿನಲ್ಲಿಯು ಬಂದು ಕರುಣ ರಸವ ಬೀರಿ ಘನ ಕೃಪೆ ದೋರುವ | ಚಿನುಮಯಾತ್ಮಕನಾದ || ೪ || ಆರು ಲಿಂಗವ ತೋರಿದ | ಆರನು ಕೂಡಿ ಮೂರು ಲಿಂಗವ ಮಾಡಿದ || ಮೂರು ತಾನೊಂದಾದ ದಾರಿಯ ತೋರಿಸಿ | ವೀರ ಶ್ರೀಗುರು ಪದದಿ ಸೇರಿ ನೀ ಸುಖ ಸೆಂದ || ೫ || ಗುರುರೇವ ನೊರ ಪುತ್ರನ | ಸಂಜೀವ ಸದ್ಗುರುವೆಂದು ಮೆರೆಯುವನ ಕರುಣಾದಿ ಭಕ್ತರ ಕರೆದು | ಜ್ಞಾನವ ಪೇಳಿ ವರಮೋಕ್ಷ ಕೊಡುವಂತ ಪರಮ ದಯಾಳು ಶ್ರೀ || ಪ || ಗುರು ಬಿಟ್ಟನ್ನಿರಲಾರೆನೆ.

ರಾಗ-ತಾಳ-ಅಟ್ಟತಾಳ

ಬಿಡದಿರು ಎನ್ನ ಕೈಯ್ಯ ಶ್ರೀಗುರುರಾಯ || ಪ || ಬಿಡದಿರೆನ್ನಯ ಕೈಯ್ಯ || ಬೇಡಿಕೊಂಬೆನು ಜೀಯ ಕೊಡು ಕೊಡು ಕೊಡು ಗುರುವೆ | ಕೊಡು ದಿವ್ಯ ಮತಿಯ || ೧ || ಜನಿಮರಣದ ದುಃಖವ | ತಾಳಲು ಕಷ್ಟ ಜನನಿ ಗರ್ಭ ನಿವಾಸವ || ನೆನಸಿಕೊಂಡೆಡೆ ಎನ್ನ ತನುವು ತಲ್ಲಣಿಪುದು | ಘನ ಮಹಿಮನೆ ಎನ್ನ ಜನನವನ್ಹರಿಸೈಯ್ಯ || ೨ || ಘೋರ ಪಾತಕಸಂಹಾರ | ಹೃದಯೇಶ್ವರ | ವೀರತ್ರೈಜಗದೋದ್ಧಾರ | ಕಾರುಣ್ಯನಿಧಿ ಕಾರ್ಯಕಾರಣ ಮೂರ್ತಿಯೆ | ವೀರ ಗುರುವೆ ನೀ ಮೈದೋರಿ ಪಾಲಿಸೊ ಪ್ರಿಯ || ೩ || ಧರೆಯೊಳ್ರಂಭಾಪುರಿಯಾ | ಸದ್ಗುರುವಾದ | ಗುರು ರೇಣುಕನೆ ನಿನ್ನಯ | ಚರಣವಲ್ಲದೆ ಬೇರೊಂದರಿಯೆ | ನೀನರಿಯೆಯಾ | ಕರುಣಿ ನಿನೊರೆಂತೆಮ್ಮನ್ನ ಪೊರೆವರಾರೆನ್ನಾರ್ಯಾ|| ಪ || ಬಿಡದಿರು ||

ರಾಗ-ತಾಳ-ಅಟ್ಟತಾಳ

ಗುರುಮಾರ್ಗ ಪಿಡಿದ ಮೇಲೆ ಪತಿವ್ರತವೆಂಬ ಬಿರುದ ಸಾಧಿಸಲೇಬೇಕು || ೧ || ಪರಪತಿಯ ಆಜ್ಞೆಯೊಳು ತನ್ನನ್ನರಿತು ಪಾವನವಾದ ಜನ್ಮವೆ ದುರುಳ ವೇದಾಂತಿಗಳ ಮಾರ್ಗಕೆ | ಹರಿಯಗೊಡದೆಲೆ ಹೀನಮನವ || ೨ || ಗುರುಮಾರ್ಗ ಗುರುಪೇಳಿದಂದದಲಿ | ಪತಿಸೇವೆಯ ಮರೆಯದಂದದಿ ನಡೆಸುತೆ ವಿರತಿ ಭಕ್ತಿಯು ಜ್ಞಾನಶಾಂತಿಯು | ಪರಮ ಪ್ರೀತಿಯೊಳೊಂದನಾದರು ತೊರೆಯದಂದದಿ ನಿರತರೆನಿಸುತೆ | ಶರಣಜನರೆಂದೆನಿಸಿಕೊಳುತಲಿ || ೩ || ತರಿಯು ತ್ತಷ್ಟಮದಂಗಳ ಷಡ್ವರ್ಗಗಳ ತರಿದಿಚ್ಛೆ ಅನಿಚ್ಛೆಗಳ | ಕರಣ ಮೂರರ ಶುದ್ಧಿಯಿಂದಲಿ ಉರುವ ಸಿದ್ಧಿಯ ಪಡೆದು ಮರ್ತ್ಯದ | ನರರ ತಾಪವ ಹರಿವ ಶಕ್ತಿಯ ಗುರುವರನ ಚರಣದಲಿ | ಪಡೆಯುತಲಿ ಮನವೇ || ೪ || ಗುರು ಮಾರ್ಗ ಮಾನಾಭಿಮಾನಂಗಳ ಸದ್ಗುರು ನಿನ್ನಧೀನವೆಂದವಗೊಪ್ಪಿಸಿ | ಸ್ನಾನ ಜಪ ತಪ ಮೌನ ನುತಿ ಸಂಧಾನವೆಲ್ಲವು ಪರಮಗುರುವಿನ | ಧ್ಯಾನ ಒಂದನ್ನರಿತು | ಸಮ್ಯಜ್ಞಾನವನು ಪಡೆದಿರ್ಪ ಮನವೇ || ೫ || ಗುರುವರ‍್ಯ ನುಪದೇಶದಿ ಅರಿಯದೆ ಗೈದ ದುರಿತವೆಲ್ಲವು ಪೋದವು || ಅರಿದರಿದು ತಾ ಗೈದ ಪಾಪವು | ಎರಕವಾಗುತೆ | ನರಕಕೆಳೆವುದು | ಮೆರೆಮೆರೆವ | ಮಹಿಮೆಯು ಮಾಯ ವಪ್ಪುದು | ಕೊರತೆಗಳು ತಾ ತಪ್ಪವದರಿಂ || ೬ || ವರ ಹೃತ್ಕಮಲಮಧ್ಯದಿ ರಂಭಾಪುರೀ ಗುರು ರೇಣುಕರ ಪೂಜಿಸಿ | ಪರಮಜ್ಞಾನವ ನೊರೆದ ಶ್ರೀಗುರುವರನೆ || ನಿನ್ನಯ ಚರಣಕಮಲವ ಮರೆಯದಂದದಿ ಮತಿಯ ಕರುಣಿಸಿ ಪೊರೆಯೆನುತ ಬೇಡುತಲಿ ಮನವೇ || ೭ || ಗುರು ಮಾರ್ಗವಿಡಿದಮೇಲೆ ||

ರಾಗ-ತಾಳ-ಅಟ್ಟತಾಳ

ಜ್ಞಾನಶಕ್ತಿಯೆ ಕೇಳ್ದೆಯಾ | ಶ್ರೀಗುರುವರನ ಜ್ಞಾನಾನಂದದ ಬೋಧೆಯ || ಜ್ಞಾನಶಕ್ತಿಯೆ ಕೇಳಿದಿಯಾ | ತಾನೇ ತನ್ನರಿವ ಸುಜ್ಞಾನವೆಂಬುವ ಆ ಮಹಾಘನ ಸ್ವಾನುಭಾವವನೊರೆದಪರಿಯ || ೧ || ವರ ನಿರ್ಮಲೋದಕದಿ ಮಜ್ಜನಗೈದು ತರುಣಿಯೆ ಭಸಿತವಿಡೆ | ಪರಮಗುರು ಆಚಾರ ಜಂಗಮ ಮೆರೆವ ಶಿವಪ್ರಸಾದ ಲಿಂಗಕೆ ಧರಿಸಿ ಗುರು ಮಹಲಿಂಗ ಕರ್ಚಿಪ ಪರಿಯ ಸಾಂಗದೊಳೊರೆದ ಪರಿಯ || ೨ || ಜೀವ ಭ್ರಾಂತಿಯ ಬಿಡಿಸೆ ಈ ಜನ್ಮಕ್ಕೆ ವಿದೇಹಮುಕ್ತಿಯು ಎನ್ನಿಸೆ | ಜೀವ ಪರಮನೊಳೈಕ್ಯ ಮತ್ತಾ ಜೀವಶಿವನೊಳಗೈಕ್ಯವಲ್ಲದೆ | ಜೀವಬ್ರಹ್ಮನೊಳೈಕ್ಯವೆಂಬುವ ಭಾವವನು ತಾನೊರೆದ ಪರಿಯ || ೩ || ಧರೆಯೊಳ್ರಂಭಾಪುರಿಯ ಸದ್ಗುರುವಾದ ಗುರು ರೇಣುಕರ ಕೃಪೆಯ ಅರಿವೆ ಗುರು | ವಾಚಾರ್ಯ ಶಿಷ್ಯನು ವರ ಮನವ ಲಯ ಮಾಡೆ ಜ್ಞಾನವು ನಿರುತ ನಾನಿಹೆನೆಂಬ ಮತಿಯ | ಉರುವ ಮೋಕ್ಷ ವಿಧಾನ ಪರಿಯ || ಜ್ಞಾನಶಕ್ತಿಯೆ ಕೇಳ್ದೆಯಾ ||

ರಾಗ-ತಾಳ-ಅಟ್ಟತಾಳ

ಪ್ರೀತಿ ಇದೆ ಜೀವನ ಜ್ಯೋತಿ | ಸದ್ಗುರುವಿನ ಮೇಲಣ ಪ್ರೀತಿ || ಇದೆ ಜೀವನ ಜ್ಯೋತಿ || ಪ || ಪಾತಕರಾಶಿಯ ತರಿದಡೆ ಶ್ರೀಗುರುನಾಥನ | ಮನದೊಳು ಮರೆಯದೆ ಪಠಿಸುವ || ೧ || ಪ್ರೀತಿ ಮರೆದು ತನ್ನನೆ ನರನೆನಿಸಿರಲು ವರ ಪುಣ್ಯ ಬಲದಿ ಪರಮಸದ್ಗುರು ವರದರುಶನ ಕೊಡಲು ಚರಣಂ ಗಳಿಗೆರಗಿ | ದುರಿತಾರ್ರೀ ಶ್ರೀಗುರು ಪೊರೆ ಎಂದೆನಲು ಅರುಹಿ | ತ್ರಿವಿಧದಿಂ ತನ್ನಂತೆಸಗುತೆ | ಗುರುಣಾಂ ಗುರುವೆಂದೊರೆದ ಶ್ರೀಗುರುವಿನ || ೨ || ಅದು ನೀನೇ ನೀನೇ ಅದು ಎನ್ನುತಲಿ ಘನತತ್ವಮಸಿಯು ವದರಾಲು | ಆ ಘನ ಸಾಮವೇದದಲಿ ವರ ರಾಜಯೋಗದ ವಿಧಿಯೇ ಇದ ನೀ ನೋಡೆನ್ನುತಲಿ || ಮುದದಿಂ ಗುರುಶ್ರುತಿ ಸ್ವಾನುಭವಕೆ ತಂದು | ಸದಮಲಜ್ಞಾನವ ವಿಧಿಸಿದ ಗುರುವಿನ || ೩ || ಅರಿವೇ ಗುರುವಲ್ಲದೆ ಬೇರೇನಿಹುದು ಈ ಧರೆಯೋಳ್ ಸಚರಾಚರದೊಳ್ ತಾ ತುಂಬಿತುಳುಕುತಿಹುದು | ಆ ಅರುವಿನ ಬಲದಿ ಧರೆಯೋಳ್ | ಈ ಸರ್ವವು | ಬೆಳಗುತಿಹುದು | ಅರಿವ ನರಿವ ನಿಜದರಿವನೆ | ತಾನೆಂದರುಹಿದ | ಶ್ರೀಮದ್ಗುರು ರೇಣುಕನೊಳು | ಪ್ರೀತಿ ಇದೇ ಜೀವನ ಜ್ಯೋತಿ || ೪ ||

ರಾಗ-ತಾಳ-ಅಟ್ಟತಾಳ

ಕೆಡುತೀ ನೀ ಕೆಡುತೀ | ಕೆಡುತಿ ಕೆಡುತಿ ನೀ ಕೆಟ್ಟ ಗರತೀ || ಅ-ಪ || ಛಾಯದ ಮಂತ್ರವ ಮಾಯದಿ ಬೀರುತಿ | ಇಹದ ಸುಖಕೆ ನೀ ಕಂಗೆಡುತೀ | ಕಾಯವ ಕೆಡಿಸಿ ನೀ ಬಾಯ್ಬಾಯ್ ಬಿಡುತೀ || ೧ || ಪರಮ ಪ್ರಸಾದವೆ | ಎನಗಾಗಿದೆ ಎನ್ನುತೀ | ತಿರುಪೆಯ ಗುರುವೆಂದುರುತರ ದೂರುತಿ | ಮರಳಿ ಪ್ರಸಾದಕೆ ಕರ | ಜೋಡಿಸುತೀ || ೨ || ಗಣನೆಗೆ ಬಾರದ ಮಣಿ ಮಾತಾಡುತಿ | ಅಣಕಿಸಿ ಶರಣರ ನಡತೆಯ ದೂರುತಿ | ಇನಯ ರೇಣುಕ ನಿನಗೊಲಿವನೆ ಗರತೀ || ೩ || ಕೆಡುತೀ ನೀ ಕೇಡುತೀ ||

ರಾಗ-ತಾಳ-ಅಟ್ಟತಾಳ

ಘನ ಪಂಚಾಕ್ಷರಿ ಮಂತ್ರ ಸದ್ಗುರು | ಪುತ್ರರಿಗಿದು ಜಪಸೂತ್ರ || ಪ || ಅರಿತರೆ ಗುರುಮುಖದಿಂದಿದರರ್ಥವ ತಿಳಿದರೆ ಪರತರ ಮುಕ್ತಿ | ಸ್ವತಂತ್ರ || ೧ || ಘನ || ವೇದಗಳಿಗೆ ಇದು ಮೂಲ | ಪರವಾದಿಗಳಿಗೆ ಎದೆ ಶೂಲ || ಸಾಧಿಸಲಿದರರ್ಥಂಗಳ ಸಾಂಗದಿ | ಮೇದಿನಿಯೊಳು ಸುಖಲೋಲಾ || ೨ || ಅಷ್ಟಾಕ್ಷರಿಗೆ ಸಹಾಯ ಘನ ಶ್ರೇಷ್ಠ ಮುಕ್ತಿಗುಪಾಯ || ಅಷ್ಟಾಕ್ಷರಿ ಗುಟ್ಟೈದು ವಿಧಂಗಳ | ನಿಷ್ಠೆಯೊಳರಿದಡೆ ಅವ ಗುರುರಾಯ || ೩ || ಘನ || ಮರವೆಯ ಮೂಲವ ಸುಟ್ಟು | ಸದ್ಗುರು ಪಾದದಿ ಮನವಿಟ್ಟು || ಸ್ಮರಿಸೆಲೊ | ಘರ‍್ವವ ಬಿಟ್ಟಿದು | ನಮ್ಮಯ || ಗುರು ರೇಣುಕರ | ಗುಟ್ಟು || ಪ || ಘನ ಪಂಚಾಕ್ಷರಿಮಂತ್ರ ಸದ್ಗುರು ಪುತ್ರರಿಗಿದು ಜಪಸೂತ್ರ ||

ರಾಗ-ತಾಳ-ಅಟ್ಟತಾಳ

ಕಂಡೆನಮ್ಮ ಕಣ್ಣಿನಲ್ಲಿ ಕಾರಣಾತ್ಮನ | ಭೂಮಂಡಲವ ಬೆಳಗಿಪ ಅಖಂಡ ತೇಜನ ನಾನು

|| ಪ-೧ || ಕಂಡೆನ | ಬಣ್ಣವೇಳ ದಾಂಟಿತೋರ್ಪ ಸಣ್ಣ ದ್ವಾರವನ್ನೇ ಪೊಕ್ಕು | ಕಣ್ಣಿಗೆ ಕಣ್ಣಾದ ಜ್ಞಾನಗಣ್ಣ ತೆರೆಯುತೇ ನಾನು || ೨ || ಕಂಡೆ | ಪರಮ ಜೀವರ ಪರಿಯ | ತಿಳಿದೆ ತುರಿಯ ಬ್ರಹ್ಮಾವೆಂಬುಭಯವರಿದೆ || ಮರವೆ ಎಂಬುದು ಮುರಿದು | ಅರಿವಿನ ಕುರುಹ ಕಂಡೆ ನಾನು || ೩ || ನಂಬಿದವರ ಪೊರೆಯುವೆನೆಂತೆಂಬ ಬಿರುದ ಧರಿಸಿ ಮೆರೆವ | ರಂಭಾಪುರವರನಾ || ೪ || ಕಂಡೆನಮ್ಮ ಕಣ್ಣಿನಲ್ಲಿ ಕಾರಣಾತ್ಮನಾ ||

ರಾಗ-ತಾಳ-ಆದಿತಾಳ

ಭಜಿಸೆಲೊ ಘನ ಪಂಚಾಕ್ಷರಿಯ | ನಿಜಗುಣ ಜ್ಞಾನದ ಗುರು ಸಿರಿಯ || ಪ || ಉತ್ತಮ ಮಾರ್ಗವ ತೋರುವದು | ಘನ ತತ್ವ ಮಸಿಯ ಮಹಾ ವಾಕ್ಯವಿದು || ೧ || ಚಿತ್ತಕೆ ಶಾಂತಿಯ ನೀಡುವುದು | ಅದು ನಿತ್ಯದ ಮುಕುತಿಯ ಕರುಣಿಪುದು || ೨ || ದುರಿತಗಳೆಲ್ಲವರ ತರಿಯುವುದು | ಅದು ಮರವೆಯ ಮೂಲವ ಮುರಿಯುವೆದು || ಕೊರತೆಗಳೆಲ್ಲವ ಹರಿಸುವದು | ಅದು ಪರತರ ಸುಖವನು ಕರುಣಿಪುದು || ೩ || ಬೆರಸುತೆ ಓಂ ತ್ವಂ ಪದಗಳನು ಘನ ಪಂಚಾಕ್ಷರಿ ನುಡಿ ನೀನು | ಗುರುವಿನ ಗುರು ರೇಣುಕ ತಾನು || ಹರುಷದಿ ಮುಕುತಿಯ ಕರುಣಿಪನು || ೪ || ಭಜಿಸೆಲೊ ಘನ ಪಂಚಾಕ್ಷರಿಯ ||

ರಾಗ-ತಾಳ-ಅಟ್ಟತಾಳ

ಕಣ್ಣಾಬಿಡು ತನ್ನ ತಿಳಿದು ಜನ್ಮ ಸಾರ್ಥಕವಾಗುವ || ಪ-೧ || ಕಣ್ಣಾಬಿಡು ಹುಟ್ಟಿದ ಮಾನವ ಜನ್ಮದಿ ಮನುಜಾಶ್ರೇಷ್ಠನೆನಿಸೆ | ನೀ ಇಹಪರದೊಳಗೆ || ಇಷ್ಟ ಪ್ರಾಣ ಭಾವವನೊಡಗೂಡುತೆ | ನಿಷ್ಠೆಯಿಂದ ಶಿವ ಪೂಜೆಯ ಮಾಡುವ || ೨ || ಪರಿಪರಿ ರೂಪದಿ ನರ ಜನುಮದಲಿ | ಮರಳಿ ಮರಳಿ ನೀ ಬಂದೀ ಭವದಲಿ || ಉರುತರ ದುಃಖವ ಪಡುವದಕಿಂತಲು | ವರಮ ಶ್ರೀಗುರುವಿನ ಚರಣದಿ ಬೆರೆಯುವ || ೩ || ಧರೆಯೊಳು ಮೆರೆಯುವ ರಂಭಾಪುರಿಯ ಪರಮ ಶ್ರೀಗುರುವರ ರೇಣುಕನಡಿಯ | ಚರಣವ ಭಜಿಸುತೆ ಹರುಷದಿ ಮುಕುತಿಯ ತರುಣಿಯ ಬೆರೆದಾನಂದದಿ ಸುಖಿಸುವ || ೪||

ರಾಗ-ತಾಳ-ಅಟ್ಟತಾಳ (ಮಂಗಳಾರತಿ)

ಮಟ್ಟು-ಭಕ್ತಪೋಶನನ || ಏಕಶಿಲಾಪುರಿವಾಸ ಸೀತಾ ರಾಮಾ | ರಾಮಾ ||

ಪರಮಮಂಗಳನಾಮ ರೇಣುಕ ಗುರುವೇ ಗುರುವೇ | ನಿನ್ನ ಚರಣಗಳನು ಮರೆಯಹೊಕ್ಕೇ ಗುರುವೇ ಗುರುವೇ || ಪ-೧ || ಕಾಮಿತಾರ್ಥ ಫಲ ಪ್ರಧಾತಾ ಗುರುವೇ ಗುರುವೆ | ಗುರುಸ್ವಾಮಿ ಎನ್ನ ಭವವ ತರಿದ ಗುರುವೇ ಗುರುವೇ || ೨ || ದುರಿತದೂರ ನಿಗಮ ಸಾರ ಗುರುವೇ ಗುರುವೇ | ನಿನ್ನ ಸ್ಮರಿಪ ಭಜಕರಘವಿನಾಶ ಗುರುವೇ ಗುರುವೇ || ೩ || ಧರೆಯೊಳಧಿಕ ರಂಭಾಪುರದ ಗುರುವೇ ಗುರುವೇ | ಎನ್ನ ಮರೆಯದಂತೆ ಹರಸಿ ಪೊರೆಯೋ ಗುರುವೇ ಗುರುವೇ || ೪ ||

ರಾಗ-ತಾಳ-ಅಟ್ಟತಾಳ

ಎಚ್ಚರಿಕೆ ಎಚ್ಚರಿಕೆ ಎಲೆ ಹೀನ ಮನವೇ | ತುಚ್ಛ ಲೌಕಿಕವನು ನೆಚ್ಚಿ ನೀ ಕೆಡುವೇ || ಪ-೧ || ಸ್ವಚ್ಛ ಗಂಧವ ಪೂಸಿ ಅದರಮೇಲ್ಬಚ್ಚಲ ರೊಚ್ಚೆಯನು ಹಚ್ಚುವರೇ | ಜ್ಞಾನವಿದ್ದವರು ನಿಚ್ಚಳದ ಜ್ಞಾನವನು ನೀ ಪಡೆದು ಗುರುಮುಖದಿ ಇಚ್ಛಾ ಅನಿಚ್ಛೆಗಳ ಭ್ರಮಿಸಿ ನೀ ಕೆಡುವೇ || ೨ || ಭ್ರಮಿಸುತ್ತ ಪೋದಂತೆ ಭ್ರಮಣೆ ತೀರದು ಕಂಡ್ಯಾ | ಭ್ರಮಣೆ ದೈವೇಚ್ಛೆಯಾಗಿರೆ ಸುಖವು ನೀ ಕಂಡ್ಯಾ || ಭ್ರಮೆ ಸ್ವೇಚ್ಛೆಮಯವಾಗಿ ಬಹುಮಂದಿ ಕೆಟ್ಟಿಹರು | ಯಮನಿಂಗೆ ಕರುಣವಿಲ್ಲವು ಇದನು ನೀ ಕಂಡ್ಯಾ || ೩ || ಪಾಪ ಪುಣ್ಯಗಳೆಂಬ ರೂಪು ದೋರಲ್ಕೆ ಯಮಭೂಪನಂ ಶ್ರೀಗುರುವೇ ಗೈದಿಹನು ಕಂಡ್ಯಾ | ನೀ ಪಾಪಿಯಾಗಿ ಆ ಯಮನ ಸೇರ‍್ವದಕ್ಕಿಂತ ಆ ಪರಮ ಗುರುವರನ ನೀ ಸೇರು ಕಂಡ್ಯಾ || ೪ || ಕೆರೆಯುತಿರೆ ಗಜಕರ್ಣ ಹರುಷವೇರಿಸುತಿಹುದು | ಉರಿ ಹತ್ತೆ ಹಲ್ಲಹಲ್ಲ ಕಿರಿಸುತ್ತಲಿಹುದು || ಅರಿತು ನೋಡಿದರೆ ಈ ಧರೆಯ ಭೋಗವು ಅದರ ಪರಿಯಂತೆ | ಕೊರತೆಯೊಳು ತೊರೆದಿಪುದು ಕಂಡ್ಯಾ || ೫ || ವಿರತಿ ಭಕ್ತಿಯು ಜ್ಞಾನಪರಿಪೂರ್ಣವಾಗಿರಲಿ ಗುರುಚರಣದಲಿ ಮನವು ಎರಕವಾಗಿರಲಿ | ಗುರುವಿಂಗೆ ಗುರುವು ಶ್ರೀಗುರುವು ರಂಭಾಪುರಿಯಾ ಗುರು ರೇಣುಕನೆ ಆದಿ ಗುರುವು ನೀ ಕಂಡ್ಯಾ || ಪ || ಎಚ್ಚರಿಕೆ ಎಚ್ಚರಿಕೆ ಎಲೆ ಹೀನ ಮನವೇ ||

ರಾಗ-ತಾಳ-ಅಟ್ಟತಾಳ

ತಿಳಿಯೊ ಮನವೆ ನಿಜವೆ | ನಿನ್ನೊಳು ಬೆಳಗುವ ಘನ ಗುರುವ || ಪ ||ಒಳಗ್ಹೊರಗೆಲ್ಲಿಯು ಬೆಳಗುವ ಗುರುವನು | ತಿಳಿದಡೆ ಪಡೆಯುವೆ ಘನಸುಖವ || ೧ || ಒಂದನೆರಡು ಮಾಡಿ ಎರಡನೊಂದಾಗಿಯೆ ಕೂಡಿ | ಒಂದರೊಳೈದ್ಲಿಪ್ಪತ್ತೈದನು ಮುಂದೆ ಮುವತ್ತಾರೆನಿಸಿದ ಪ್ರಭುವ || ೨ ||  ತಿಳಿಯೊ ಅರಸುತೆ ಗುರುಗಳನು ಅರಿಯುತೆ ವರಶೃತಿಮಗಳನ ಮರಳಿ ಸಂಶಯವು ಬಾರದೆ ತೆರದೊಳು | ವರೆವ ಶ್ರೀಗುರುವಿನ ಚರಣವ ಪಿಡಯುತೆ || ೩ || ಧರೆಯೊಳು ತಾ ಮರೆವ ರಂಭಾಪುರದೊಳು ನೆಲಸಿರುವ | ಪರಮ ಶ್ರೀ ಗುರುವಿನ ಚರಣವ ಪಿಡಿದರೆ ಗುರು ಶೃತಿ ಸ್ವಾನುಭವಕೆ ತಂದುಕೊಡುವ || ಪ || ತಿಳಿಯೋ ಮನವೆ ನಿಜವ ನಿನ್ನೊಳು | ಬೆಳಗುವ ಘನ ಗುರುವ ||

ರಾಗ-ತಾಳ-ಅಟ್ಟತಾಳ

ಜ್ಞಾನವಿರಬೇಕು ಮನದೊಳು ಧ್ಯಾನಿಸುತ್ತಿರಬೇಕು | ದೀನಪಾಲ ಗುರುವರನು ಮರೆಯದೆ || ಧ್ಯಾನ ಜ್ಞಾನ ಸಮನೆನಿಸಿ ಶೋಭಿಸುವ || ೧ || ಜ್ಞಾನ || ಸೃಷ್ಟಿ-ಸ್ಥಿತಿ-ಲಯವ | ಕ್ರಮದಿಂದರುಪುವ | ಅಷ್ಟಾಕ್ಷರಿ | ಯೊಳಗಡಗಿರುವ ಶ್ರೇಷ್ಠಮಾದ ತ್ರೈಲಿಂಗವ ಕೊಡುತೆ | ನಿಷ್ಠೆಯಿಂದ ಶಿವಪೂಜೆಯ ಮಾಡುವ || ೨ || ಜ್ಞಾನ || ದೃಷ್ಟಿಯ ಕಣ್ಣಿನೊಳಿಟ್ಟು ಅಚಲದ ಗುಟ್ಟಿನ ಮಾರ್ಗದ ಗುರುತರಿದು | ನೆಟ್ಟನೆ ಗಮಿಸುತೆ ಮುಕ್ತಿ ತರುಣಿಯಳ | ಪಟ್ಟದರಸ ನೆಂದೆನಿಸ ಶೋಭಿಸುವ || ೩ || ಜ್ಞಾನ || ಅರಿವನು ಕರುಣಿಸಿ ಜರೆ ಮರಣಂಗಳ ಹರಿಯುತೆ ಮೋಕ್ಷವ | ಕರುಣಿಸಿದ ವರ-ರಂಭಾಪುರೀ ಗುರು | ರೇಣುಕನಡಿ ಚರಣವ | ಬೆರೆದಾನಂದದಿ ಸುಖಿಸುವ || ಪ || ಜ್ಞಾನವೀರಬೇಕು ಮನದೊಳು ಧ್ಯಾನಿಸುತಿರಬೇಕು ||

ರಾಗ-ತಾಳ-ಅಟ್ಟತಾಳ

ಕಡೆಯುಗ ಕಲಿಯಿದು ದೃಢದಿಂ | ಗುರುವರನಡಿಪಿಡಿಯುತೇ ಮುಕ್ತಿ ಪಡೆ ಮನವೆ || ಪ || ಕಡೆ || ಪೊಡವಿಯೊಳಿಹ ಗುರು ವಡಲೊಳಗಡಗಿರೆ | ವಡೆಯನ ವರೆದೊಡೆ ನೀ ಕೆಡುವೇ || ೧ || ಕಡೆ || ಪಡೆಯದೆ ಗುರುವನು ಮಡಿಯೆ | ನೀ ಮುಂದಕೆ ಪೊಡವಿಯೊಳಿಹ ಸರ್ವ ವಡಲೊಳಗೆ || ಮಡಿ ಮಡಿದ್ಹುಟ್ಟುತೆ ಕಡುತರ ದುಃಖದ | ಕಡಲಿನೊಳಗೆ ಕಾಲಿಡುವೆ ಹೇ ಮನವೇ || ೨ || ಕಡೆ || ಮೂರು ಯುಗದಿ ಸುಖತೋರದ ಮುಕುತಿಗೆ ಸೇರಬಹುದು | ಕಲಿಯುಗದೊಳಗೆ ಪಾರ ಮಹಿಮಗುರು ವರನನ್ನು ಮರೆದರೆ | ಘೋರ ದುಃಖಕೆ ಗುರಿಯಾಗುವೆ ಮನವೇ || ೩ || ಕಡೆ || ಧರೆಯೊಳು ವರರಂಭಾಪುರ ದೊಳು ನೆಲಸಿಹ | ಪರಮ ಸದ್ಗುರು ರೇಣುಕರಡಿಗೆ || ಶಿರವನು ಬಾಗಿ ನಿನ್ನರಿವ ನರಿಯೆ | ಮುಕ್ತಿ ತರುಣಿಯೊಡನೆ ನೀನಿರುವೆ ಮನವೇ || ಪ || ಕಡೆ ಯುಗ ಕಲಿಯಿತು ||

ರಾಗ-ತಾಳ

ಶ್ರೀಗುರು ಮಾಂ ಪಾಹಿ | ಕೃಪಾಂ ದೇಹಿ || ಶ್ರೀ || ಶ್ರೀಗುರುವೆ | ಜಯ ಜಯತು | ಜಯ ಭವ ರೋಗ ದೂರನೆ | ಭಕ್ತವತ್ಸಲ ಆಗಮಾಧ್ಯಾಯಕನೆ | ನೀ ಕೃಪೆಯಾಗಿ ತವಪದ | ಮಹಿಮೆದೋರಿ || ೧ || ಶ್ರೀ || ದೇಶವ ಸುತ್ತುತಿರೆ ಭಯ ಮಾಡೋನ | ವಾಸವ ಮಾಡುತಿರೆ ಕಾಶಿಯೊಳಗಿರೆ | ಭೂಸುರನ ಗೃಹ ವಾಸವಾಗಿರೆ ಸ್ವಪಚನ | ಗೃಹ ವಾಸ ವಾಗಿರೆ | ರೇವಣ ಸಿದ್ಧೇಶ ಗುರು ನೀ ಕೈಯ್ಯ ಬಿಡದೆ || ೨ || ಶ್ರೀ || ಆವಕಾರ್ಯದೊಳಿರಲಿ ಸದ್ಗುರು ನಿನ್ನ ಸೇವೆ ಸಲ್ಲಿಸುತಿರಲಿ | ಆವ ಕಾಲದೊಳಾವ ಠಾವಿನೊಳಾವ | ವಿಧದೊಳು ನೋವು ಬಂದರು | ರೇವಣಸಿದ್ದೇಶ ಗುರುಎನ್ನ ಭಾವದಲಿ | ನೀನೆಲಸಿ ಸತತ || ೩ || ಶ್ರೀ ಮುದ್ದು ಪಾದವ ನಂಬಿದ | ಭಕ್ತರ ಭಿಷ್ಠ ಸಿದ್ಧಿ ದಾಯಕನಾಗಿಹ ಸಿದ್ಧ ಸಿದ್ಧರಿಗೆಲ್ಲ | ಘನಮಹ ಸಿದ್ಧನಾಗಿಹ ಗುರುವೆ ರೇವಣಸಿದ್ಧ ಎನ್ನಯ ಮನದ ಬಯಕೆಯ | ಸಿದ್ದಿಸುತೆ ರಂಭಾಪುರೀಶನೆ || ಶ್ರೀ ಗುರು ಮಾಂಪಾಹಿ ಕೃಪಾಂದೇಹಿ ||

ರಾಗ-ತಾಳ-ಆದಿತಾಳ

ಜಯ ಜಯ ಶ್ರೀಗುರು ರೇಣುಕ ಪಾಹಿ | ಜಯ ಜಯ ಮಮ ಭೀಷ್ಠಂ ದೇಹಿ ದೇಹಿ || ೧ || || ಪ || ಜಯ | ಭಕ್ತಿಂ ದೇಹಿ | ಶಕ್ತಿಂದೇಹಿ | ರಕ್ತಿ ರಹಿತ ವಿರಕ್ತಿಂದೇಹಿ | ಧ್ಯಾನಂ ದೇಹಿ | ಜ್ಞಾನಂದೇಹಿ | ಸ್ವಾನುಭವಾತ್ಮ ಸುಜ್ಞಾನಾಂದೇಹಿ || ೨ || ಜಯ | ಬುದ್ಧಂದೇಹಿ | ವಿದ್ಯಾಂದೇಹಿ | ಮುದ್ದು ಮಂತ್ರಕೆ | ತವ ಸಿದ್ಧಿಂದೇಹಿ || ೩ || ಜಯ | ಅಘಸಂಹಾರ | ಜಗದಾಧಾರ | ನಿಗಮಗೋಚರಮಾಗಿ | ಪಾಹಿ | ಪಾಹಿ | ಕುಂಭಿಣಿ | ಭಕ್ತಕುಟುಂಬಿಗ ಮದ್ಗುರು | ರಂಭಾಪುರ ನಿಲಯಮಾಂ | ಪಾಹಿ | ಪಾಹಿ || ೪ ||