ರಾಗ-ತಾಳ

ಪಾಹಿಮಾಂಗುರು ರೇಣುಕ | ನೀನೇ ಅನೇಕ || ಪ || ಪಾಹಿ || ಪಾಹಿ ಶ್ರೀಗುರುವರನೆ | ಜಯ ಜಯ || ಪಾಹಿ ಭಜಕೋದ್ಧರನೆ | ಜಯ ಜಯ || ಪಾಹಿ ಪಾವನ ಚರಿತ | ಜಯ ಜಯ || ಮಹಿಮದ್ಗುರು | ರೇವಣ ಜಯತು || ೧ || ಪ || ಪಾಹಿ || ಪ್ರಥಮಕಾರಕ | ದ್ವಿತಿಯ ದಂಡವು ತೃತಿಯ | ಕುಂಡಲ ಅರ್ಧ ಚಂದ್ರಾಕೃತಿಯೆ | ಏಕಾಕ್ಷರ ಸ್ವರೂಪದಿ | ಪ್ರತಿತಿಯಾದನೆ ಪರಮಪುರುಷ || ೨ || ಪ || ಪಾಹಿ || ಸೃಷ್ಟಿಸಿದೆ ಹರ ಹರಿ ಆಜಾದ್ಯರ | ಸೃಷ್ಟಿ ಸ್ಥಿತಿ ಲಯಗಳಿಗೆ ಗುರುವೇ | ದ್ರಿಷ್ಟಿತ್ರಯ ನಾನಿನ್ನ ಪಾದವ || ನೆಷ್ಟು ವಿಧದಿಂದೊರ್ಣಿಸಲಿ ಪ್ರಭು || ೩ || ಪ || ಪಾಹಿ || ಗುರುವೆ | ಬ್ರಹ್ಮವು ಗುರುವೆ | ವಿಷ್ಣುವು ಗುರುವೆ ಗೌರೀ | ನಾಥನೆನುತಲಿ | ವರೆವಶೃತಿ ಮತದಂತೆ | ನಿಮ್ಮಯ ಚರಣ | ಕಮಲವ | ನಂಬಿ ಭಜಿಪರ || ೪ || ಪಾಹಿ || ನಗುರೋರ ಧಿಕಂ | ಎನುತ ಮೋದದಿ | ಪೊಗಳುತಿರೆ ಮೂಮೂರ್ತಿಗಳು ಮಿಗೆ | ನಿಗಮಗೋಚರ ನಿನ್ನ | ಪಾದವ ಪೊಗಳಲೆನ್ನಿಂದಳವೆ ಶ್ರೀಗುರು || ೫ || ಪ || ಪಾಹಿ || ಧರೆಯೊಳಗೆ ಮೆರೆಯುತಿಹ | ರಂಭಾಪುರದೊಳಗೆ ನೆಲಸಿರುವ | ಶ್ರೀಗುರು ತರಳ ಜ್ಞಾನಾನಂದಗೊಲಿದನೆ | ಪರಮ ಪರತರ | ಮೋಕ್ಷದಾಯಕ || ಪ || ಪಾಹಿಮಾಂಗುರುರೇಣುಕ || ನೀನೇ ಅನೇಕ.

ಗುರುವೆ ಪೂಜಿಪೆ ನಿಮ್ಮಯ ಚರಣಗಳನ್ನು | ಗುರುವೆ ಭಜಿಪೆ ನಿಮ್ಮಯ ಗುರುವೆ || ಪ || ಶ್ರೀಮದ್ಗುರುವೆ ಕಾರಣ ಗುರುವೆ | ವಿಹಿತದ ಗುರುವೆ ಪಾವನ | ಗುರುವೆ ಜ್ಞಾನವನೊರೆದು | ಮುಕುತಿಯ ಕರುಣಿಸುವ | ವರದೇವ ಗುರುವೇ || ೧ || ಶ್ವಾನುಭವ ಸಿದ್ಧಾಂತವೆಂಬ ಶಿವಾನುಭಾವವ ಪೇಳ್ದ ಶ್ರೀಗುರು ಜ್ಞಾನಮೂರುತಿ | ನಿನ್ನ ಪಾದ ಧ್ಯಾನಕಧಿಕವದುಂಟೆ ಶ್ರೀ ಮದ್ಗುರುವೇ || ೨ || ಪ || ಪೂಜಿಪೆ || ಹಿಂದು ಮುಂದೇನೊಂದು ತೋರದ | ಮಂದ ಭಾಗ್ಯತೆಯಾಗಿ ವೃಷಭಲದಿಂದ | ನಿಮ್ಮನು ಪಿಡಿಯೆ ಬಲುದಯದಿಂದ | ದೀನನ ಪೊರೆದ ಶ್ರೀಮದ್ಗುರುವೇ || ೩ || ಗುರುವೆ ಗುರುವಿನ ಗುರುವೆ ವರಸುರ ತರುವೆ | ಭಜಕರ ಪೊರೆವ ಬಿರುದನು ಧರಿಸಿ ಮೆರೆಯುವ ಪರಮ ಪಾವನ | ದುರಿತವನು ಹರಗೈದ ಶ್ರೀಮದ್ಗುರುವೆ || ೪ || ಪ || ಪೂಜೆ || ಅರಿವೆ ಗುರು ವೆಂದೊರೆದು | ಸೌಕ್ಯವ ಕರುಣಿಸುವ ವರಗುರುವೆ ನಿಮ್ಮಯ್ಯ | ಸ್ಮರಣೆ ಮರೆಯದ ತೆರದಿ ಮತಿಯನು | ಕರುಣಿಪುದು ಭಜಕನಿಗೆ ಶ್ರೀಮದ್ಗುರುವೆ || ೫ || ಪ || ಪೂಜಿ || ಧರೆಯೊಳಗೆ ಅತ್ಯಧಿಕವೆನುತಲಿ | ಮರೆವ ರಂಭಾಪುರದಿ ನೆಲಸುತೆ ಹರುಷದಿಂ | ಧಾರುಣಿಯ ಭಜಕರ ಪೊರೆಯಲೈದಿದ ಪರಮ ಶ್ರೀಮದ್ಗುರುವೆ | ಪೂಜಿಪೆ ನಿಮ್ಮಯ ಚರಣಗಳನ್ನ ಗುರುವೆ ಭಜಿಪೆ ನಿಮ್ಮಯ || ೬ ||

ರಾಗ-ತಾಳ-ಆದಿತಾಳ

ಪರಮ ಶ್ರೀಗುರುವಿನ ಚರಣವ ಭಜಿಪರ ಜ್ಞಾನಕೆ ಬೆಲೆಯುಂಟೆ | ಘನಶಿವಾಯ ಎನುತ ಭಜಿಪರಿಗೆ || ಜನನಮರಣಮುಂಟೆ || ಪ-೧ || ಪರಮ ಜ್ಞಾನಕೆ ಕರ್ಮದ ನೆನೆವುಂಟೆ ಸುಜ್ಞಾನಕ್ಕೆ ಹಲವಂಗಗಳುಂಟೆ || ಸ್ವಾನುಭವ ಸಿದ್ಧಾಂತಕೆ ಹೋಲುವ | ನಾನಾ ಶಾಸ್ತ್ರಮುಂಟೆ || ೨ || ಭಾನುವಿಗೆ | ತಮವಿರಲುಂಟೆ | ಸುರಧೇನುವಿಗೆ | ಬರಬರಲುಂಟೆ | ಆನೆಯನೇರಿದ | ಮನುಜಗೆ | ಬೊಗಳುವ || ಸ್ವಾನನ ಭಯ ಮುಂಟೆ || ೩ || ವರರಂಭಾಪುರ ಕಧಿಕುಂಟೆ || ಗುರು ಮಂತ್ರಕ್ಕೆ | ಸರಿಸಮನುಂಟೆ || ವರಗುರು ರೇವಣ ಸಿದ್ಧನ | ಭಜಿಪಗೆ || ಮರಳಿ ಸಂಸ್ಕೃತಿಯ | ಭಯಮುಂಟೆ || ಪರಮ ಶ್ರೀಗುರುವಿನ ಚರಣವ ಸ್ಮರಿಪರ || ೪ ||

ರಾಗ-ತಾಳ-ಆದಿತಾಳ

ಪಾದವೆ ಗತಿ ನಮಗೆ | ಸದ್ಗುರುವರನ | ಪಾದವೆ ಗತಿ ನಮಗೆ || ಪ-೧ || ವಾದಿ ಭೀಕರ ಭವ | ಬಾಧೆರಹಿತನಾದ | ವೇದಗೋಚರ ಜಗದಾದಿ ಮೂರ್ತಿಯ ಘನ || ೨ || ಕರಣ ಕಾರ್ಯಗಳಿಂಗೆ | ನಿರುತ ಸಾಕ್ಷಿಕನಾಗಿ | ಧರೆಯೊಳು ಮೆರೆಯುವ || ಓಂ ಶಿವಾಯನಾ || ೩ || ಧರೆಯೊಳ್ಕೊಲ್ಲಿಯ ಪಾಕಿ ಪುರದೊಳುಧ್ಬವಿಸೂತೆ | ನೆರೆಜ್ಞಾನಾಧ್ಧಾರಕೆ ವರರಂಭಾಪುರದಿ ನಿಂದಾ ಪಾದವೇ ಗತಿ ನಮಗೆ | ಸದ್ಗುರುವರನ ಪಾದವೆ ಗತಿ ನಮಗೆ ||

ರಾಗ-ತಾಳ-ಆದಿತಾಳ

ಇದೆ ದಿವ್ಯ ನಾಮ | ಸುನಾಮ ಇದೆ ದಿವ್ಯ | ಸದಮಲ ಮುಕುತಿಯ ಮುದದಿಂ ಪಡೆಯಲ್ಕಿದೆ || ೧ || ಅಣೋರಣೀಯಾನ್ಮಹತೊಮಹೀಯ | ಅಣು ತೃಣಕಾಷ್ಟದೊಳಿಹ ಗುರು ರಾಯ | ಅಣುಮಹತ್ತಿನೊಳಿಹೆ ನೆಂಬುದಕೆ ತೃಣಯನಾಗಿ ರೇಣುಕನೆನುತೈದಿದ || ೨ || ಪಾಮರರನು ವಾಮರರನು ವಾವನಮಂಗೈಯ್ಯಲು ತಾ ಮಹವಾಕ್ಯವನುಸರಿಸಿ | ಆ ಮಹ ಘನತತ್ವ ಮಸಿ ಎಂಬುದಕೆ ಈ ಮಹಿಮನೆ ಅಷ್ಠಾಕ್ಷರಿ ಎನಿಸಿದ || ೩ || ಪಿಡಿದ ತನುವಿನವ ಗುಣವ ಕೆಡಿಸಿ ಕೈಯ್ಯ ಪಿಡಿದು ತನ್ನಂತೆಯೆ ಪಾಳ್ಪನಿವ | ಪೊಡವಿಗಧಿಕ ರಂಭಾಪುರದಿ ಮೆರೆದು | ಜಗದೊಡೆಯನೆನಿಸಿ ಸುಜ್ಞಾನವನರುಹಿದ ಇದೆ ದಿವ್ಯ ನಾಮ ಸುನಾಮ || ೪ ||

ರಾಗ-ತಾಳ-ಆದಿತಾಳ (ಮಂಗಳಾರತಿ)

ಜ್ಞಾನದ ಜ್ಯೋತಿಯ ಬೆಳಗುವೆನು | ಸುಜ್ಞಾನದ ಜ್ಯೋತಿಯ ಬೆಳಗುವೆನು || ಪ || ಸ್ವಾನುಭವದಿ ಕೂಡಿ ತಾನೆ ತಾನೆನಿಸಿದ | ಜ್ಞಾನ ಶ್ರೀ ಗುರುವಿನ ಧ್ಯಾನವ ಮಾಡುತ || ೧ || ಅರಿವನು ಕರುಣಿಸಿ ಮರವೆಯ | ತರಿಯುತೆ ಪರತರ ಮುಕುತಿಯ ಕರುಣಿಸಿದಗೆ || ೨ || ಪರಮಪುರುಷನಿಗೆ ಪಾವನ ಚರಿತಗೆ | ದುರಿತಗಳೆಲ್ಲವ ತರಿದವಗೆ || ೩ || ಧರೆಯೊಳು ವರರಂಭಾಪುರದೊಳು ನೆಲಸಿಹ | ಪರಮಪಾವನ ಶ್ರೀಗುರುರೇಣುಕಗೆ | ದಿವ್ಯಜ್ಞಾನದ ಜ್ಯೋತಿಯ ಬೆಳಗುವೆನು | ಮೋಕ್ಷಜ್ಞಾನದ ಜ್ಯೋತಿಯ ಬೆಳಗುವೆನು ||

ರಾಗ-ತಾಳ-ಅಟ್ಟತಾಳ

ಏನು ಭಯವಣ್ಣಾ ಮರ್ತ್ಯದೊಳೆಮಗೆ | ಏನು ತಾನೇ ಶ್ರೀಗುರು ಕೊಟ್ಟ ಜ್ಞಾನವೆಂಬುವ ಕಣ್ಣಾ || ೧ || ಮರೆದಿರ್ದ ತನ್ನ ತಾನರಿಯೆ | ಮುಕ್ತಿಯು ಎಂದು ಅರಿವಿನ ಕುರುಹ | ಶ್ರೀಗುರುರಾಯನಿತ್ತ ಮೇಲೆ || ೨ || ಭವಮಾಲೆ ತೊಲಗಿತು ಭಯವೆಲ್ಲ ಪೋಯಿತು | ಜವನ ಸೆರೆಯು ತಪ್ಪಿ ಅವನಿಯೊಳ್ನಿಂದಮೇಲೆ || ೩ || ಸುರತರು ಮೊಲಾದ ಸುರವಸ್ತುಗಳಿಗೆಲ್ಲ | ಪೆರತಾದ ಶ್ರೀಗುರುವರನಡಿದೊರೆತಮೇಲೆ || ೪ || ಕರಣಶುದ್ಧಿಗಳಿಂದ ವರಸಿದ್ಧಿ ಪಡೆಯುತೆ | ನರಜನುಮದ ಪಾಪ ಪರಿಹರವಾದಮೇಲೆ || ೫ || ಜರಮೃತಿಯೊಳು ಸಿಲ್ಕಿ ಕೊರಗಿರ್ದ ಮನವದು | ಗುರು ರೇಣುಕರ ದಿವ್ಯ ಚರಣ ದೊಳ್ಬೆರೆದಮೇಲೆ ಏನು ಭಯವಣ್ಣಾ ||

ರಾಗ-ತಾಳ-ಆದಿತಾಳ

ಏನೆಂದು ಕರೆಯಲಿ ನಿನ್ನ | ಸಮ್ಯಜ್ಞಾನವ ಪೇಳ್ದೆನ್ನ | ಪರಮ ಪಾವನ || ಪ-೧ || ದೇವನೆನ್ನಲೆ ಮಹದೇವ ನೆನ್ನಲೆ | ನಿಜದೇವನೆನ್ನಲೆ | ಗುರುದೇವ ನೆಂದೆನೆಲೆ || ದೇವರ ದೇವ ಶ್ರೀಕಾಮಾಣಿ ಮದ್ಗುರು ದೇವ ಸಂಜೀವ | ಮಜ್ಜೀವ ಸದ್ಗುರು ರೇವ || ೨ || ಜ್ಞಾನಿಯನ್ನಲೆ | ಸಮ್ಯಜ್ಞಾನಿಯನ್ನಲೆ ದಿವ್ಯ ಜ್ಞಾನಿಯನ್ನಲೆ | ಘನ ಮೌನಿ ಯೆಂದೆನಲೆ || ಜ್ಞಾನಿಗಳರಸ ಪ್ರಾಣೇಶ ಮದ್ಗುರು ಮೂರ್ತಿ | ದೀನಸುಜ್ಞಾನವ ಹರಿದು ಕೈವಿಡಿದನ || ೩ || ಧರೆಯೊಳ್ಕೊಲ್ಲಿಯಪಾಕಿ ಪುರದಿಂದಲೈತಂದು | ಹರಷದಿ ವರರಂಭಾಪುರದಿ ನಿಂದು ಮರೆಹೊಕ್ಕ ಭಕ್ತರ ಕರವ ಪಿಡಿದು ತವ || ಚರಣದೊಳ್ಬೆರಸಿದ ವರಗುರು ಸಂಪನ್ನ || ಏನೆಂದು ಕರೆಯಲಿ ನಿನ್ನ ||

ರಾಗ-ತಾಳ-ಆದಿತಾಳ

ಜ್ಞಾನೋಪದೇಶವಾಯಿತಮ್ಮ | ತಾ ತನ್ನ ತಿಳಿವ || ಅ-ಪ || ಜ್ಞಾನೋ || ಏನೊಂದಿಲ್ಲದೆ ತಾನಿಲ್ಲೆನಿಸದೆ ಜ್ಞಾನ ಚಿದಾನಂದ ಧ್ವಯವೆನಿಸಿದ || ೧ || ದುರಿತಕರ್ಮಂಗಳನೆಲ್ಲವಂ ತರಿದು | ಕರ್ಮಂಗಳನೆಸಗಿ ನೆರೆಪುಣ್ಯಗಳಿಸುವೇನೆಂಬುದ ಮರೆದು | ಸುರಲೋಕದೊಳಗಿನ | ವರ ರಂಭಾಪುರಿ ಮೊದಲಾದ | ಭೋಗವ ತೊರೆದು | ಕರಣ ಧರ್ಮದುರ | ವಣೆಗಳ ಖಂಡ್ರಿಸಿ | ನಿರುತವು ಗುರುವಿನ | ಚರಣದೊಳ್ಬೆರೆದಿಪ || ೨ || ಪ || ಜ್ಞಾ || ಯೋಗ ಮಾರ್ಗಂಗಳ ನೆಲ್ಲವನರಿದು | ನಿರ್ಗುಣ ರಾಜ | ಯೋಗವೆಂಬುದರೊಳು | ಚಿತ್ತವು ಬಲಿದು | ಹಿರಿಯೋಕ್ತಿ ಎಂಬ ಆಗಮಂಗಳ | ಅರ್ಥವ ನೀನೆರೆ ತಿಳಿದು | ನೀಗಿ ವಿಷಯ ಸುಖ ಭೋಗಗಳನು | ಶಿವಯೋಗವೆಂಬ | ಸುಖ ಭೋಗದಿನಲಿವ || ೩ || ಪ || ಜ್ಞಾ || ಅರಿವುಳ್ಳ ಶ್ರೀಗುರು ದೊರಕಿದ ನಮ್ಮ | ಆ ಅನಾದಿಯಾದ | ಪರವಸ್ತು ಗುರು ರೇಣುಕನಿವನಮ್ಮ | ಸೌಂಜ್ಞೆಯೊಳೆನ್ನ | ವರ ಜ್ಞಾನಾಗ್ನಿ | ಯೊಳು ಸುಟ್ಟನಮ್ಮ | ಮರು ಕ್ಷಣದಲಿಯದೆ | ನಾನದೆನೆಂಬುವ | ಉರುತರ ಜ್ಞಾನಾನಂದದಿ | ನಲಿವ ಮೆರೆವ | ಜ್ಞಾನೋಪದೇಶವಾಯಿತಮ್ಮ || ೪ ||

ರಾಗ-ತಾಳ-ಆದಿತಾಳ

ಬಾಬಾ ಬಾಬಾ ಬಾ ಗುರುರಾಯ | ಬಾ ಬಾ ತ್ರೈಜಗದಾಚಾರ‍್ಯ | ಬಾ ಪಾವನ್ನ | ಬಾ ಸಂಪನ್ನ | ಬಾ ಬಾ ಎನ್ನಯ | ಹೃದಯದ ರನ್ನ || ೧ || ಪ || ಬಾ || ಪರಮ ಪುರುಷ ಬಾ | ಪಾವನ ಚರಿತ ಬಾ | ದುರಿತ ಹರನೆ ಬಾ | ದಯಾಕರ ಬಾ | ಸ್ಮರಿಸುವ ಭಜಕರ | ಪೊರೆವ ಬಿರುದುಗಳ | ಧರಿಸಿ ಮೆರೆವ ಶ್ರೀಗುರು ಪರಮಾತ್ಮ || ೨ || ಪ || ಬಾಬಾ || ಕರುಣಾಕರನೆ ಬಾ | ಕಾಮಿತ ಫಲನೆ ಬಾ | ಆ ಮಹಾಘನ | ಮಹಿಮಾಜ್ವಲ ಬಾ | ಕಾಮಿಸಿರುವೆನೈ | ಸ್ವಾಮಿಯೇ | ನಿನ್ನ ನೋಡೆ ಪ್ರೇಮವ | ನಿರಿಸುತೆ ನೀಮೈದೋರಿ || ೩ || ಪ || ಆವದೇಶದೊಳಿರ್ಪೆಯೋ ಗುರುವರ | ಆವರಾಜ್ಯಮಂ ಪಾಲಿಸುವೆ | ದೇವ ನೀನಿಲ್ಲದ | ಠಾವೊಂದಿರ್ಪುದೆ | ದೇವರ ದೇವ ಬಾ | ರಂಭಾಪುರ ನಿಲಯ ||ಪ|| ಬಾಬಾ ಬಾಬಾ | ಬಾ ಗುರುರಾಯಾ ಬಾಬಾ ತ್ರೈಜಗದಾಚಾರ‍್ಯ ||

ರಾಗ-ತಾಳ-ಅಟ್ಟತಾಳ (ಮಂಗಳ)

ಗುರು ವೀರ ರೇವಣಸಿದ್ಧ ಸಮರ್ಥ | ಬೆಳಗುವೆನಾರತಿಯ | ಜಯಾ ಜಯಾ | ಬೆಳಗುವೆನಾರತಿಯ || ೧ || ಪರಮತತ್ತ್ವ ಘನ ರಹಸ್ಯ ಮೂಲವ ತ್ವರಿತದಿ ಬೋಧಿಸಿದೆ | ಗುರುವರ ತ್ವರಿತದಿ ಬೋಧಿಸಿದೆ | ಮರವೆಯ ಮೂಲವ ತರಿಯುತೆ ಮೋಕ್ಷವ | ಹರುಷದಿ | ಕರುಣಿಸಿದೆ | ಗುರುವರ ಹರುಷದಿ | ಕರುಣಿಸಿದೆ || ೨ || ವರಮೋಕ್ಷಕೆ ಶಿವತತ್ತ್ವ ರಹಸ್ಯವ ನೊರೆಯಲು | ನೀ ಪ್ರಭುವು | ಗುರುವರ ಮರೆಯಲು | ನೀ ಪ್ರಭುವು | ಧರಣಿಯೊಳೀಪರಿ | ಪರಮ ರಹಸ್ಯವನೊರೆವರು ದುರ್ಲಭವು | ಗುರುವರವರೆದರು | ದುರ್ಲಭವು || ೩ || ಗುರು ವೀರ ವರ ಜ್ಞಾನವನುದ್ಧರಿಸೆ | ಗುರುವರ ರಂಭಾಪುರದಿ ನಿಂದೆ ಮರೆಯದೆ ನಿನ್ನನು | ಸ್ಮರಿಸುವ ಭಜಕರಿವರ ಮೃತಿಗಳ ಕೊಂದೆ ಗುರುವೀರ ರೇವಣ || ೪ ||

ರಾಗ-ತಾಳ-ಅಟ್ಟತಾಳ

ಸದ್ಗುರು ದರುಶನ ನಮಗಾಯಿತು ನೋಡಿರಿ | ಗುರುವಾರದ ಶುಭ ದಿವಸದಲಿ | ದುರಿತ ದೋಷಗಳು ತೊಲಗಿಪೋದವು | ಗುರುರೇಣುಕನಡಿ | ಕಮಲದಲಿ || ೧ || ವರವೇದಂಗಳ ಸನುಮತವೆಲ್ಲವರ | ಕರುಣದಿ ತಾನೊರೆದ | ದುರಿತವು ತೊಲಗಿತು | ಜರಮೃತಿ ಇವೆಂದ್ಹರಸುತ್ತೆಮ್ಮ ಪೊರೆದ || ೨ || ಇಷ್ಟಪ್ರಾಣಭಾವದದೈಕ್ಯತೆಯ | ಗುಟ್ಟನು ಬೋಧಿಸಿದ ಅಷ್ಟಾಕ್ಷರಿ | ಗುಟ್ಟೈವಿಧವರ್ಣಿಸಿ | ಹುಟ್ಟು ಸಾವು ಕೊಡವಿದಾ || ೩ || ಸದ್ಗುರು || ಧರೆಯೊಳ್ಕೊಲ್ಲಿಪಾಕಿಯ ಪುರದಿಂದ್ಹರುಷದೊಳೈತಂದಾ | ಕರುಣದಿ ಭಕ್ತರ ಪೊರೆಯಲು ರಂಭಾಪುರದೊಳು ತಾನಿಂದ | ಸದ್ಗುರುದರುಷನ ನಮಗಾಯಿತು | ನೋಡಿರಿ || ೪ ||

(೪೩ನೇ ತತ್ತ್ವ) ರಾಗ-ತಾಳ-ಅಟ್ಟತಾಳ

ಗುರುಬಂದ ಹರ ಬಂದ, ಶಿವ ಬಂದ | ಮನೆಗೆ | ಗುರುವೇ ರೇವಣಸಿದ್ಧ | ತಾಬಂದ ಮನೆಗೆ | ಗುರು || ೧ || ಎಂದು ಬಾರದ ಗುರು | ಇಂದು ತಾ ಬಂದಾ ಆನಂದಪದವಿಯು ನಿಮಗಾಗಲೆಂದು || ೨ || ಮುಕ್ಕಣ್ಣ ಶಿವತಾನು ಭಿಕ್ಷಕೆ ಬಂದಾ ಭಿಕ್ಷಾವ ನೀಡಿರಿ ಮೋಕ್ಷ ನಿಮಗೆಂದಾ || ೩ || ಚಿನ್ನದ ಅವಿಗೆ ರನ್ನಾದ ಬೆತ್ತ ಹೊನ್ನೀನ ಜೋಳಿಗೆ ಧರಿಸಿ ತಾ ಬಂದಾ || ೪ || ಕುಂಟು ಕುರುಡರಿಗೆಲ್ಲ | ಕಣ್ಕಾಲ ತಂದಾ ಇಂಥಾ ಬರಡ ಗೋವಿನ ಹಾಲ ತಾ ಕರೆದುಂಡಾ || ೫ || ಹಸುಮಕ್ಕಳನು ನೋಡಿ ನಸುನಗೆ ಬೀರಿ | ಹಸನಾಗಿ ಮುದ್ದಿಪ ಶ್ರೀಗುರು ಬಂದಾ || ೬ || ಗುರು | ಕರೆದು ಭಕ್ತರಿಗೆಲ್ಲ | ವರಮೋಕ್ಷ ಕೊಡುವ | ಪರಮ ಪಾವನನಾದ ಗುರುಮೂರ್ತಿ ಬಂದಾ || ೭ || ಧರೆಯೊಳ್ಕೊಲ್ಲಿಪಾಕಿಪುರದಿಂದ ಬಂದ | ಹರುಷದಿ ಭಕ್ತರ ಪೊರೆಯಲು ರಂಭಾಪುರದೊಳು | ತಾ ನಿಂದಾ | ಗುರು ಬಂದ ಹರ ಬಂದ ಶಿವ ಬಂದ ಮನೆಗೆ || ೮ ||

ರಾಗ-ತಾಳ-ಆದಿತಾಳ

ಬಾರಮ್ಮ ಗುರುಸೇವೆ ಮಾಡುವ | ನಿತ್ಯ ಭೂರಿ ಬ್ರಹ್ಮಾನಂದ ಪೊಂದುವ || ಪ-೧ || ಎಂದಿಗಾದರು ಸಾವು ತಪ್ಪದು | ಗುರು ಹೊಂದದೆ ನಿಜಮುಕ್ತಿ ದಕ್ಕದು || ಸುಂದರ ತನುವಿದು ನಿಲ್ಲದು | ಮೋಹ ಬಂಧನದಿಂ ಸುಖವಿಲ್ಲದು || ೨ || ಗಂಗಾಯಮುನೆ ಸ್ನಾನ ಗೈಯುವ | ಅಲ್ಲಿ ಭಂಗಾರ ಮಹಲಿನೊಳಾಡುವ || ಹಿಂಗದೆ ಕಳೆ ಬಿಂದು ನೋಡುವ | ನಿತ್ಯ ಮಂಗಳ ವಾದ್ಯವ ಕೇಳುವ || ೩ || ವರ ಹಂಸಕಲ್ಪವನೇರುವ ಬ್ರಹ್ಮಪುರದೊಳುಯ್ಯಾಲೆಯ ನಾಡುವ | ನೆರೆ ಸೂಕ್ಷ್ಮದ್ವಾರವ ತೆರೆಯುವ || ಅಲ್ಲಿ ಪರಮಾತ್ಮನೊಳು | ಕೂಡಿ ಸುಖಿಸುವ || ೪ || ಜೀವಭಾವನೆ ಭ್ರಾಂತಿ ಅಳಿವುದು | ಆತ್ಮ ಭಾವನೆ ಸ್ಥಿರವಾಗಿ ನಿಲ್ಲುವುದು | ಸಾವು ಹುಟ್ಟೆಂಬುವುದಳಿಯುವುದು || ನಿತ್ಯಾ ಕೈವಲ್ಯಾನಂದವೆ | ನಿಲ್ಲುವುದು || ೫ || ನಿತ್ಯ ಗುರು ಸಂಜೀವನ ಸೇರುವ ಚಿತ್ತ ವೃತ್ತಿಗಳೆಲ್ಲವನಳಿಯುವ |

ಸತ್ತು ಚಿತ್ತಾನಂದ ವಸ್ತುವ ಸೇರಿ ಮುಕ್ತಿರಾಜ್ಯದಿ ಮನೆ ಮಾಡುವ || ಪ || ಬಾರಮ್ಮ ಗುರು ಸೇವೆ ಮಾಡುವ ||

ರಾಗ-ತಾಳ-ಅಟ್ಟತಾಳ

ಹಿಡಿ ಹಿಡಿ ಹಿಡಿ ಗುರು ಪಾದವ್ವಾ || ತಂಗಿ ಹುಡುಗುತನದ ಬುದ್ಧಿ ಸಾಕವ್ವಾ || ಬಿಡದೆ ಪಾಪಕಂಜಿ ನಡಿಯವ್ವಾ | ಮುಕ್ತಿ ಪಡೆದು ಪಾವನಳಾಗಬೇಕವ್ವಾ || ವ-೧ || ಏನು ಕಿಂಚಿತ ಪುಣ್ಯ ನಿಂದವ್ವಾ | ಇಂತಾ ಮಾನವ ಜನ್ಮಕ್ಕೆ ಬಂದೆವ್ವಾ || ಹೀನವಶದಲಿರೆ ಕುಂದವ್ವಾ | ಮುಕ್ತಿ ರಾಜ್ಯದೊಳಗೆ ಇರೆ ಚಂದವ್ವಾ || ೨ || ಕೆಟ್ಟ ಮಾತಿನಲೇನು ಫಲವವ್ವಾ | ನಿಜ ನಿಷ್ಠೆವಂತರ ಸಂಗ ವಳಿತವ್ವಾ || ಅಷ್ಟಪಾಠಗಳೆಲ್ಲ ಕಳಿಯವ್ವಾ | ನಿಜನಿಷ್ಟೆ ಹಿಡಿದು ಭವ ಗೆಲಿಯವ್ವಾ || ೩ || ಆಡಿಕೊಂಡದು ಎಲ್ಲ ಬರದವ್ವಾ | ನೀ ತಿಳಿದುಕೊಂಬುದು ನಿನ್ನಲಿಹುದವ್ವಾ || ಬಿಡದೆ ಭಜಿಸು ಗುರು ರೇಣುಕ ನವ್ವಾ | ಮುಕ್ತಿ ಪಡೆದು ಧನ್ಯಳು ನೀನಾಗವ್ವಾ || ಪ || ಹಿಡಿ ಹಿಡಿ ಹಿಡಿ ||

ಬಾರಕ್ಕ ನಾವಿಬ್ಬರ‍್ಹೋಗೋಣ ಬಾ | ವರ ವೀರ ಸದ್ಗುರು ಸೇವೆ | ಮಾಡೋಣ ಬಾ ಬಾ || ಪ || ಕಾರಣ ಪುರುಷ ಕರುಣ ಸಾಗರನೀತ ಸಾರಿ ಕೈಪಿಡಿದೆಮ್ಮ ಪೊರೆವನು ಬಾಬಾ || ೧ || ಕಾಮಿತ ಫಲಗಳ ಕೊಡುವನು ಬಾ ಬಹು | ಪ್ರೇಮದಿಂದೆಮ್ಮನ್ನು ಪೊರೆವನು ಬಾ | ಆ ಮಹಘನ ತತ್ತ್ವಮಸಿ ವಾಕ್ಯವನೆ ಪೇಳಿ ಸಾಮವೇದವ | ಪೂರ್ತಿಗೊಳಿಪನು ಬಾ ಬಾ || ೨ || ಪ || ಹಿಂದಣ ಪಾಪವ | ಸುಡುವನು ಬಾ | ನಮಗಿಂದು ಸು ಸೌಖ್ಯವ | ಕೊಡುವನು ಬಾ | ಒಂದು ನಿಮಿಷ ಮಾತ್ರಹೊಂದಿ | ಅಗಲದಿರೆ ಚಂದದ ಮುಕುತಿಯ | ಕರುಣಿಪ ಬಾ ಬಾ || ೩ || ಪ || ದೇಹವ ಗುಡಿಯಾಗಿ ಮಾಳ್ಪನು ಬಾ | ನಮ್ಮ ಭಾವ ಗದ್ದುಗೆಯಾಗಿ ಹೂಡ್ವನು ಬಾ | ಸೋಹಂ ಎನಿಪ ದೇವನಲ್ಲಿ ತೋರುವ ಗುರುದೇವ | ನಂಘ್ರಿಯ ನಾವು ಪೂಜಿಸೋಣ ಬಾ ಬಾ || ೪ || ಪ || ಬಯಲ ಬಂಗಲವಾಗಿ ಮಾಳ್ಪನು | ಬಾ ನಮ್ಮ ತವರೂರು ಕಡೆ ಎಂದು ಪೇಳ್ವನು ಬಾ ಬಯಲನ್ನು ಬೆಳಗುವ ಬ್ರಹ್ಮಾವ | ನೊಡಗೂಡಿ ಬಯಲು ಬಂಗಲದಲ್ಲಿ | ಸುಖಿಸೋಣ ಬಾ ಬಾ || ೫ || ಪ || ವರ ರಂಭಾಪುರಿಯನ್ನೇ ಸೇರೋಣ ಬಾ | ಅಲ್ಲಿ ಗುರುರೇಣುಕರ ಪಾದ ನೋಡೋಣ ಬಾ | ಗುರು ಮಂತ್ರದಿಂದಷ್ಟ | ವಿಧದರ್ಚನೆಯ ಮಾಡಿ ಪರತರ | ಮುಕುತಿಯ ಪಡೆಯೋಣ ಬಾ ಬಾ || ಪ || ೬ ||

ರಾಗ-ಮೋಹನ, ತಾಳ-ಆದಿತಾಳ

ಶ್ರೀಗುರುವೇ ರೇಣುಕಾಚಾರ‍್ಯ | ನೀ ಎನ್ನ ಪಾಹಿ ಗುರುವರ‍್ಯ || ೧ || ಪ || ಶ್ರೀಗುರುವೆ | ದೇವನೆಂದೆನಿಸಿ ಮೆರೆದೆ ಗುರು | ದೇವನೆಂದೆನಿಸಿ | ಈ ಜಗದ ಜೀವಿಗಳ ಪೊರೆದೆ | ನೀದಯದಿ ಸುಜ್ಞಾನದುಪದೇಶಿಶಿ || ೨ || ಪ || ಶ್ರೀಗುರುವೆ || ವೇದ ಸನು ಮತವಾ ಮೇದಿನಿಗೆ | ಭೋದಿಸಿದೆ ದೇವಾ ಹೇ ದೇವಾ | ಆದಿ ಮಂಧ್ಯಾಂತ್ಯಕ್ಕನಾದೀಯಾದ ಗುರುದೇವಾ || ೩ || ಪ || ಶ್ರೀ ಗುರುವೇ ಎಲ್ಲು ತುಂಬಿರುವೇ ರಂಭಾಪುರದಲ್ಲಿ ನೆಲಸಿರುವೇ | ಶ್ರೀಗುರುವೇ ಬಲ್ಲಿದನೆ ಪ್ರಭುವೆ ರೇಣುಕ ಎನ್ನನಲ್ಲ ಸುರತರುವೇ || ಪ || ಶ್ರೀಗುರುವೇ ರೇಣುಕಾಚಾರ‍್ಯ ನೀ ಎನ್ನ ಪಾಹಿ ಗುರುವರ‍್ಯಾ ||

ರಾಗ-ತಾಳ-ಅಟ್ಟತಾಳ

ಏನ ಗಳಿಸಿನ್ನೇನ ತಿಳಿದಿನ್ನೇನು ಫಲವಣ್ಣಾ – ಗುರುವಿನ ಧ್ಯಾನವಿಲ್ಲದ ನರನ ಜನ್ಮವು ವ್ಯರ್ಥ ಕಾಣಣ್ಣಾ || ಪ-೧ || ಏನು ಇಲ್ಲದ ಬಯಲಿನೊಳು ತಾನೇನು ಕಾರಣ ಮಾದುದೀ ಜಗ | ಏನು ಇದರ ಸ್ವರೂಪವೆಂಬುದ ಮೊದಲು ತಿಳಿಯಣ್ಣಾ || ಜ್ಞಾನ ಗುರುವಿನ ಪದವ ಪಿಡಿದು ಸ್ವಾನುಭವ ಸಿದ್ಧಾಂತವೆಂಬುವ | ಶಿವಾನುಭವವ ತಿಳಿಯೆ ಸಾರ್ಥಕ ಜನ್ಮಕಹುದಣ್ಣಾ || ೨ || ಹುಟ್ಟು ಸಾವಿನ ಬೀಜವ್ಯಾವುದು ಮೊಟ್ಟ ಮೊದಲದನರಿದು | ಅದನು ಸುಟ್ಟು ಜ್ಞಾನಾಗ್ನಿಯೊಳು ನೀನೇ ಬೆಳಗಬೇಕಣ್ಣಾ || ಇಷ್ಠಪ್ರಾಣವು ಭಾವವೆಂಬುವ ಗುಟ್ಟನರಿಯುತೆ | ಗುರು ಪದಾಬ್ಜದಿ ನಿಷ್ಠೆಯಿಂದಿರೆ ಶ್ರೇಷ್ಣನೆನಿಸುವ ಮುಕ್ತ ನೀನಣ್ಣಾ || ೩ || ಹಿಂದೆ ಮಾಡಿದ ಸುಕೃತ ಪುಣ್ಯದಿ ಬಂದೆ ಶ್ರೇಷ್ಠಾಂಗದಲಿ | ಮಾನವ ಮುಂದೆ ಜನಿಸದ ತೆರದಿ ಜ್ಞಾನವ ಪಡೆಯಬೇಕಣ್ಣಾ || ಬಂಧಮೋಕ್ಷಗಳೆಂಬೊ ವೆರಡರ ಸಂದು ತಿಳಿಯಲು ಗುರು ಕಟಾಕ್ಷದಿ ಬಂಧವನು | ಕಳೆದುಳಿದು ಮೋಕ್ಷವ ಪಡೆವೆ ಕೇಳಣ್ಣಾ || ೪ || ಅರಿಯದಿರಲೀ ತತ್ವದರ್ಥವ ನರಕ ಯಾತನೆ ಕೊನೆಗು ತಪ್ಪದು | ತರಿಯೆ ಸಂಚಿತವನ್ನ ಅಷ್ಟಾಕ್ಷರಿಯನರಿಯಣ್ಣಾ || ಪರಮ ಗುರುವಿನ ಪದವ ಪಿಡಿದು ಅರಿಯೆ ನಿನ್ನನು ನೀನು | ಗುರುಣಾಂ ಗುರುವೆನಿಸಿ ಇಹಪರದಿ ಸೌಖ್ಯವ ಪಡೆವೆ ಕೇಳಣ್ಣಾ || ೫ || ಅರಿಯಲೀ ತತ್ವಾರ್ಥನು ನೀ ಧರೆಗನಾದಿಯ ಮೂರ್ತಿ ಎನಿಸುವ | ಪರಮ ಸದ್ಗುರುವರನ ಕುರುಹನು ಪೇಳ್ವೆ ಕೇಳಣ್ಣಾ || ಧರಣಿಯೊಳು ಮೆರೆಯುತಿಹ ರಂಭಾಪುರದಿ | ಶ್ರೀಗುರುರೇಣುಕಾರ‍್ಯನ ಚರಣ ಕಮಲವ ಪಿಡಿಯೆ ಸತ್ಯದಿ ಮುಕ್ತಿಯಹುದಣ್ಣಾ || ಪ || ಏನ ಗಳಿಸಿನ್ನೇನ ತಿಳಿದಿನ್ನೇನು ಫಲವಣ್ಣಾ ||

ರಾಗ-ತಾಳ-ಆದಿತಾಳ

ದಯಮಾಡು ಎನ್ನ ಶ್ರೀಗುರುವೇ ನಿನ್ನ ದಯವ ಬೇಡುವೆನಯ್ಯ | ರೇಣುಕಾ ಪ್ರಭುವೇ | ದಯವಮಾಡೈ | ಭಜಕರಕ್ಷಕ ದಯವ ಮಾಡೈ | ಕುಜನ ಶಿಕ್ಷಕ ದಯಮಾಡೆನಗೊಲಿದು ಪಾಲಿಸು | ಭಯನಿವಾರಣ ಭಕ್ತವತ್ಸಲ || ೧ || ಹಿಂದೆ ಭಕ್ತರನೇಕರುಗಳ ಮುದದಿಂದ ಪಾಲಿಸಿದಂತೆ | ನೀನೇ ದಯಾಳು ಹಿಂದಣ ತವ ಚರಿತೆಗಳ | ಮುದದಿಂದ ಕೇಳಲ್ಕೆ ಆಚರಿತೆಯು ಬಹಳಾ | ತಂದೆ ನಿನ್ನಯ ಮಹಿಮೆಗಳ ಒಂದೊಂದು ಬಣ್ಣಿಸಲೆನಗೆ ಅಳವೇ ಒಂದನು ನಾನರಿಯೆ ನೀ ಕೃಪೆಯಿಂದ ದಯಮಾಡೆನಗೊಲಿದು ಬೇಗ || ೨ || ಯುಗಯುಗದೊಳಗು ನೀನೆಯಂತೇ ಸರ್ವಯುಗಕೆಲ್ಲಾ ಮೊದಲು ನಿಷ್ಕಳ ನೀನೆಯಂತೇ | ಅಗಣಿತವಹ ಭಕ್ತರಂತೇ | ಈ ಜಗಕೆಲ್ಲಾ ಘನಮಹಾ ವಾಕ್ಯವಾ | ಪೇಳ್ದೆಯಂತೇ ನಿಗಮಗೋಚರ ನಿನ್ನ ಘನಪದವಿಗಳವನು | ಏನೆಂದು ಪೊಗಳಲಿ ಬಗೆಯದೆನ್ನೊಳು ಪಕ್ಷಪಾತವ ಮೈದೋರೊ ಬೇಗಾ || ೩ || ವೀರಪೀಠೇಶ ನೀನಂತೇ ಮೆರೆವ ವೀರಪೀಠದಿ ಪೂಜೆ ಕೈಗೊಳ್ವೆಯಂತೆ | ಕಾರಣ ಗುರುವು ನೀನಂತೇ ಮುಕ್ತಿ ಸೇರಲು ತವಪದ ಒಂದೇ ಸಾಕಂತೇ || ೪ || ಧಾರುಣಿಯ ಭಜಕರನು ಪಾಲಿಸೆ ಸಾರಿ ರಂಭಾಪುರದಿ ನೆಲಸಿಹ ವೀರಪೀಠೇಶ್ವರನೆ ನಿನ್ನಯ ಕೋರಿ ಭಜಿಪನ | ಪೊರೆಯೊಬೇಗಾ || ೫ || ದಯಮಾಡೊ ||

ರಾಗ-ತಾಳ-ಅಟ್ಟತಾಳ

ಪರಿಣಯವಾದೆ ನಮ್ಮ ಸದ್ಗುರುರಾಯನ | ಪರಿಣಯವಾದೆನೆ ಗುರು ರೇಣುಕಾರ‍್ಯನಾ | ಮರಣವಿಲ್ಲದ ವರ ದೊರಕಿತು ಸುಕೃತಾದಿ || ೧ || ದುರಿತಾವ ತರಿದಾವನ | ಈ ಜನ್ಮವ | ಪರಮಪಾವನ ಗೈದವನಾ | ಅರಿಯೆ ನಿನ್ನನು ನೀನು ಜರಮೃತಿ ಇಲ್ಲೆಂಬಾ ಕುರುಹುಗಳೆಲ್ಲಾವ | ಕರುಣಾದಿ ವರೆದಾನಾ || ೨ || ನಯನಾದಿ ನಯನಂಗಳ | ತೋರುತಾಪಾಲ ನಯನದ | ಕುರುಹುಗಳ ದಯದಿ ತೋರಿಸಿ ಸರ್ವಮಯನು ನೀ | ನಿನಗೆಮ್ಮ ಭಯವಿಲ್ಲವೆನುತಲಿ | ಜಯಘೋಷವ ನೊರೆದನ || ೩ || ವರರಂಭಾಪುರ | ವರನ ಸದ್ಗುರುವೆಂದು ಧರೆಯೊಳು ಮೆರೆಯುವನ | ವರ ಜ್ಞಾನಭಂಡಾರದರಸುತನವ ನಿತ್ತು ಮರಳಿ ಜನ್ಮಿಸದಂತೆ ಪೊರೆದ ಶ್ರೀಗುರುವರನಾ || ೪ || ಪರಿಣಯ ||

ರಾಗ-ತಾಳ-ಅಟ್ಟತಾಳ

ನೋಡಿದ್ಯಾ ಸಖಿ ನೋಡಿದ್ಯಾ | ನೋಡುವ ನೋಟದಿ | ನೋಡಿದ್ಯಾ ಸಖಿ ನೋಡಿದ್ಯಾ || ೧ || ನೋಡಿ || ಅರಿವೆ ಸ್ವಯಂಜ್ಯೋತಿ ಅರಿತು ನಿನ್ನನು ನೀನು ವರ ಜ್ಞಾನಾಕಾಂತೆಯಾಗಿರು | ಎಂದ ಮಾರ್ಗವಾ || ೨ || ನೋಡಿ || ಕೋಟಿ ಸೂರ‍್ಯರು ಮೂಡಿದಂತೆ ತೋರುವ ನಿನ್ನ ನೀಟಾದ ನೋಟದ ಕೂಟದ ಅಚಲವ || ೩ || ನೊಡಿ || ಧರೆಯೊಳಧಿಕ | ರಂಭಾ ಪುರದೊಳು ನೆಲಸಿಹ ಗುರು ರೇಣುಕರು ಕೊಟ್ಟ | ಅರಿವಿನ ಮಾರ್ಗವ || ಪ || ನೋಡಿ ದ್ಯಾಸಖಿ ನೋಡಿದ್ಯಾ ||

ರಾಗ-ತಾಳ-ಅಟ್ಟತಾಳ

ಶ್ರೀಗುರುವೇ ದಯಮಾಡು | ದಯಮಾಡು | ಕನಿಕರದಿ ನೋಡು ಪ || ಅ || ಶ್ರೀಗುರುವೆ ದಯಮಾಡು ಭವ ಭಯರೋಗವನು ನೀಗಾಡು | ನೀಕೃಪೆಯಾಗಿ ಸೌಖ್ಯವ ನೀಡು | ನಾಸಿರ ಬಾಗಿಹೆನು | ದರುಷನವ ಕೊಡು ಕೊಡು || ೧ || ಪ || ಶ್ರೀ ಸಂಗದಲಿ ದುಸ್ಸಂಘವೆಂದೆನಿಪ | ಸಂಗವನು ಕೊಡದೆ ನಿಸ್ಸಂಗಿ ಎನ್ನಿಸು ಎನ್ನ ಗುರು ದೇವ | ಸಂಗವಿದ್ದರು ಸತ್ಯವಂತರ | ಸಂಗದೊಳಗೆನ್ನಿರಿಸಿ | ಪೊರೆಯಯ್ಯಾ ಮಂಗಳಾಂಗನೆ ನಿನ್ನ | ಘನ ಪಾಂದಗಳಿಗೆ | ವಂದಿಪೆನು ರೇಣುಕಾ || ೨ || ಪ || ಶ್ರೀ ಪಾಶವೆಂಟನು ಕಡಿದು | ಗುರುಪಿಡಿದು ಅಷ್ಟಾಕ್ಷರಂಗಳ ಧ್ಯಾನದಲಿ | ಚಿತ್ತವನು ವಳ ಶಳದು ಈಶ ತ್ರೈಜಗದೀಶ ಗುರುರೇವೇಶ | ಪೊರೆಯಂದಾಮಹಾ ನಿಧಿ ಧ್ಯಾಸದಲಿ ಬೆಳಗುತಿಹಸತ್ಸಹವಾಸವನು | ಸಾರ್ವದವು ಕೊಡು ಕೊಡು || ೩ || ಪ || ಶ್ರೀ ಕೆಡುವದೀತನು ವೆಂದು | ಯೋಚಿಸದೆ | ನುಡಿ ಬದ್ಧವಿಲ್ಲದೆ ನಡೆನುಡಿಗಳೊಂದಾಗಿ ಸಮನಿಸದೆ | ಕೆಡಿಸಿತನುವನು ವಿರತಿ ಬಲಿಸದೆ ನಡೆಯೊಳಗೆ ವಂಚಿಸುತ | ಕೆಡುತಿಹ ಕಡು ದುರಾತ್ಮಕರೊಡನೆ ಬೆರೆವುದ | ಕೊಡದಿರೈ ರಂಭಾಪುರೀಶನೆ || ಪ || ಶ್ರೀಗುರುವೆ ದಯ ||

ರಾಗ-ಬೇಹಾಗ್, ತಾಳ-ಆದಿತಾಳ

ಜಯ ಜಯ ಶ್ರೀಗುರು ರೇವ ಸಂಜೀವ || ೧ || ಪ || ಜಯ ಜಯ ಶರಣರ ಹೃದಯಾದಿ ದೇವ || ೨ || ಪ || ಜಯ ಆಗಮಧ್ಯಾಯನೇ ಯೋಗಿಜನ | ವಂದಿತನೆ ಬಾಗಿ ಶಿರವ ತವ ಚರಣ | ದೊಳೆರಗುವ ತರಳನ | ಪೊರೆವುದು ಭರವಸೆ ಯನಗೆ || ೩ || ಪ || ಜಯ ವಂದೆರಡಾರೆಂಟು ವರ್ಣದ ಮನುಗಳ ಚಂದವ ನರುಹಿದೆ | ಸುಂದರ ಮೂರುತಿ ಗುರುಸಂಜೀವ || ಪ || ಜಯ ಜಯ ಶ್ರೀಗುರು ರೇವ ಸಂಜೀವ ||

ರಾಗ-ತಾಳ-ಆದಿತಾಳ

ಕಾಂತಾಮಣಿ ಕರೆದು ಕರೆದು ತಾರೆನ್ನಾತ್ಮ | ಜ್ಞಾನಾನಂದನ || ೧ || ಪ || ಕಾಂತಾ || ಉದಯಕಾಲದೊಳೆದ್ದು ಅವರನು ಮುದದಿ | ಧ್ಯಾನವ ಮಾಳ್ಪೆನು ಚದುರೆ ಎನಗೆ ಮೋಕ್ಷವುಂಟು ಕನಸು ಎಂಬ ಕತ್ತಲೆಯ | ಪಾರುಮಾಡಿದ ಧೀರ ಸಂಜೀವನ | ಎನ್ನಾತ್ಮ ಜ್ಞಾನಾನಂದನಾ || ೨ || ಬಾಲ್ಯತನದಲಿ ಗುರು ತಾಯಿಯಂದದಿ ಹಾಲನೆರೆದು | ಜೀವಭ್ರಾಂತಿಯ ಬಿಡಿಸಿದ ಪರಮಾತ್ಮನ || ೩ || ಅರ್ಧ ರಾತ್ರೆ ಸಮಯದಲ್ಲಿ ನಿದ್ರೆಗೈಯ್ಯುತಲಿರ್ಧೆನೆ | ಮುದ್ದು ಜಂಗಮ ರೂಪ ತಾಲಿ || ಗುರು ತಂದೆಯಂದದಿ ಆತ್ಮಭಾವನೆ ತೋರಿ | ಇದ್ದು ಮಾಯವಾದನೆ || ಪ || ಕಾಂತಾಮಣಿ ಕರೆದು ತಾರೆನ್ನಾತ್ಮ ಜ್ಞಾನಾನಂದನ ||

ರಾಗ-ತಾಳ-ಅಟ್ಟತಾಳ

(ಶ್ರೀಗುರುಸ್ತೋತ್ರ ಷಟ್ಪದಿ)

ಮನವ ಜೈಸಲಿಬೇಕು ಎಂದಡೆ | ತನಗೆ ತಮ್ಮಪ್ಪನಿಗೆ ಅಳವೇ | ಮನವು ವಿಶ್ವಾಕಾರಮಾಗಿದೆ ಮಾಯೆ ಯೆನು ಕೂಡಿ || ಮನವ ಜ್ಞಾನಾಗ್ನಿಯಲಿ ಸುಟ್ಟಡೆ | ತನಯ ಮೊಳೆಯದೆನುತ್ತು || ವರ ಜ್ಞಾನವ ನರುಹಿದ ಗುರುವೆ | ರೇವಣಸಿದ್ಧ ಶರಣಾರ್ತಿ || ೧ || ವಿದ್ಯೆ ಗಡಿ ಮಿತಿಯುಂಟು ಬುದ್ಧಿಗಡಿ ಮಿತಿ ಇಲ್ಲ | ಬುದ್ಧಿವಂತರಿದ ತಿದ್ದಿಕೊಂಬುದು | ಗುರುಮುಖದಿ ನೋಡಿ || ಗುರುವಿಗಿಮ್ಮಿಗಿಲಿಲ್ಲ | ಆ ಸದ್ಗುರುವಲ್ಲದಿನ್ನು ಬೇರಿಲ್ಲ | ಗುರುವೆ ಸರ‍್ವಾಧಾರವೇ ಮನಕೆ || ೨ ||

(೫೯ನೇ ತತ್ತ್ವ) ರಾಗ-ತಾಳ-ಅಟ್ಟತಾಳ

ಮನವ ನಿಲ್ಲು ಔಷಧವ ಕೊಡು ಗುರುವೇ | ರೇಣುಕನೇ ಪ್ರಭುವೆ || ಅ-ಪ || ಮನವ ನಿಲಿಸಲು ಭವಗಳೆಲ್ಲವು ತನಗೆ ತಾನೇ | ಪಾರಿಪೋಪವು ಎನುತ ಕೋರುತ್ತಿರುವೆ ನದರಿಂ || ಚಿನುಮಯನೆ ನೀ ಬೇಗ | ಕರುಣಿಸಿ || ೧ || ಹೀನಜನರೊಳು ಕೂಡಿ ನಲಿದಾಡಿ ಭಕ್ತಿಯನು ತೊರೆದು | ಜ್ಞಾನಹೀನರ ಕೂಡಿ ಒಡನಾಡಿ ಭಾನುಕೋಟಿ ಪ್ರಕಾಶ ತವಪದ ಧ್ಯಾನ ಪಾರಾಯಣವ ಮರೆದು | ಕೋಣನಂದದಿ ತಿರುಗಿ ತಿರುಗಿ ನಾನಾ ವಿಧ ದುಃಖದಲಿ ಮುಳುಗುವ || ೨ || ಹಿಂದೆಬಹ ದುಃಖಗಳ ಕಾಣದಲೆ ಈ ವಿಷಯ ಸುಖದಲಿ ನೊಂದು ಹೋಗುವೆನೆಂದು ಅರಿಯದಲೆ | ಚಂದದಿಂದಿಹುದೆಂದು ಜಗದಾನಂದದೊಳು ಹೊರಳಾಡಿ ನಿಮ್ಮಯ | ಸುದರಂಘ್ರಿಯ ಮರೆದು ಕೋಡಗನಂದದಲಿ ಥಕಥಕನೆ ಕುಣಿಯುವ || ೩ || ದುರಿತ ಹರನಾದೆನ್ನ ಗುರುರಾಯ ಘನ ಶಿವಾಯ | ಕರುಣಾಕರ ಜಯ ರೇಣುಕಾಚಾರ‍್ಯ ಪರಮಪುರುಷನೆ ಧರೆಯೊಳಿರುತಿಹ || ಕೊರತೆ ಎಲ್ಲವ ತರಿದು ಜಾಗ್ರತೆ ನಿರುತ ಸಂಜಿವನನು ನಿನ್ನಯ ಚರಣಕೆರಕವಮಾಡಿ ದಯದಿಂ || ಪ || ಮನವ ನಿಲು ಔಷಧವ ಕೊಡು ಗುರುವೇ ||

ರಾಗ-ತಾಳ-ಅಟ್ಟತಾಳ

ಮನವ ನಿಲಿಸುವ ಮದ್ದ ಕರುಣಿಸಿದ | ಗುರುರಾಯನೊಲಿದು || ಪ || ಮನವ ನಿಲಿಸುವ ಮದ್ದು ಭಕ್ತರ ಸವಿನುಡಿಗೆ ಘನ ಮದ್ದು | ಸುಖವನು ಭವಿಪನಿಗೆ ಶರಹದ್ದು || ಇಲ್ಲಿಗೆ ಜನನ | ಮರಣವೇ ರದ್ದು ಎಂಬೀ ಮನ || ೧ || ಮರದು ಬಂದೀ ಮರ್ಥ್ಯಲೋಕದಲಿ ನರನಾಗಿ ಜನಿಸಿ | ದುರಿತ ಕರ್ಮಗಳೆ ಸಗಿ ಬಹುವಿಧದಿ ಮರ ಮರಳಿ ಜನಿಸುತ್ತೆ || ಬಡತನವೆರಸಿ ಬಹು ವಿಧ ಕೊರಗಿ ದುಃಖಿಪ ಉರುದರಿದ್ರದ ವ್ಯಥೆಯನಿದು | ಪರಿಹರಿಸುವದು ಎಂದೆನುತ ಮೋದದಿ || ೨ || ಅವನಿಯೊಳಗತಿ ಪಾಪವನು ಗೈದು | ದುಃಖದಲಿ ಕೊರಗಿ ಭವದಿ ಮುಳುಗಿಹ ಹೀನ ಮಾನವಗೆ || ಜವನ ಸೆರೆಯನು ಬಿಡಿಸಿ ಜಾಗ್ರತೆ ಜವದಿ ಕಾಯಲು ಶ್ರೇಷ್ಠಮಾದುದು ಭುವನದೊಳು ಘನತತ್ವ ಮಸಿಯೆ ಪ್ರವಿಮಲಾನಂದಾತ್ಮವೆನುತಲಿ || ೩ || ಆದಿಮಧ್ಯಾಂತಗಳ ಮೂಲವಿದು ಘನ ಮಹಾವಾಯವು | ಮೋದದಿಂ ಸರ‍್ವರೊಳು ತುಂಬಿಹುದು || ಮೇಧಿನಿಯೊಳಾರಾ ದೊಡೆಯು ಇದ ಸಾಧಿಸಲ್ಕಿಹ ಪರದ ಸೌಖ್ಯವ ಆದರದಿ | ತಾ ಕೊಡುವದೆನುತ ಅನಾದಿ ಗುರು ರೇಣುಕನು ಕೃಪೆಯಿಂ || ಪ || ಮನವ ನಿಲಿಸುವ ಮದ್ದ ಕರುಣಿಸಿದ ||

ರಾಗ-ತಾಳ-ಆದಿತಾಳ

ಪೋಗುವೆಯಾ ಮಗಳೆ | ಗಂಡನ ಮನೆಗೆ ಪೋಗುವೆಯಾ ನೀನು || ಪ-೧ || ಹುಟ್ಟಿದ ಮನೆಗೆ ಕೀರ್ತಿಯ ತರಲು | ಮೆಟ್ಟಿದ ಮನೆಯೊಳು ಸುಗುಣೆಯು ಎನಿಸಿ | ಸೃಷ್ಟಿಯೊಳಾದರ್ಶಸತಿಯು ಎಂದೆನಿಸುತಾ ಶ್ರೇಷ್ಠಮಾದ ಕೀರ್ತಿಯ ತರಲು || ೨ || ಅತ್ತೆ ಮಾವರಿಗೆ ಅತಿ ಪ್ರೀತಿಯಲಿ ಅತ್ತಿಗೆ ನಾದಿನಿಯರ ಸಖತನದಲ್ಲಿ | ಮತ್ತೆ ಪತಿಗೆ ಮಾರುತ್ತರ ವೀಯದೆ ಉತ್ತಮ ಸತಿ ಎನಿಸುತ್ತೆ ಮೆರೆಯಲು || ೩ || ಕಾಮನಪಾಶ ಕಡಿಕಡಿದಿಡುತೆ ಶ್ರೀಮತಿ ಇವಳೆಂದೆನಿಸಿಕೊಳುತೆ | ಸ್ವಾಮಿ ಶ್ರೀಗುರು ರೇಣುಕರನು ಧ್ಯಾನಿಸಿ ಆ ಮಹಾ ಮೋಕ್ಷವ ಪಡೆದಾನಂದಿಸಿ ಸುಖಿಸಲು || ಪ || ಪೋಗುವೆಯಾ ಮಗಳೇ ಗಂಡನ ಮನೆಗೆ ಪೋಗುವೆಯಾ ನೀನು ||

ರಾಗ-ತಾಳ-ಅಟ್ಟತಾಳ

ಬೋಧಿಸೆನ್ನಯ ಗುರುವೇ ನಿನ್ನಯ್ಯ ಘನಪಾದವ ನಂಬಿರುವೆ || ಪ || ವೇದಂಗಳಿಗೆ ಮೋದಲಾದೀಯ | ಮೂರ್ತಿಯೆ | ನೀ ದಯಮಾಡಿ ಅನಾದೀಯ ಗುರುವರ್ಯ | ಮೂರ್ತಿಯೆ ನೀ ದಯಮಾಡಿ ಅನಾದೀಯ ಗುರುವರ‍್ಯ || ೧ || ಸೃಷ್ಟಿಗೆ | ಮೊದಲಾವುದು | ಇರ್ದುದು ಮತ್ತೀ | ಸೃಷ್ಟಿತಾನೆಂತಾದುದು | ಸೃಷ್ಟಿಯು | ಆವಸ್ವರೂಪದಿಂದಾದುದು | ದ್ರಿಷ್ಟಿತ್ರಯನೆ | ದಯವಿಟ್ಟು ನೀನಿದನೆಲ್ಲ || ೨ || ಆದಿಯೊಳ್ವೇದಂಗಳ | ಸೃಷ್ಟಿಯಗೈದ | ವೇದದಂತರ್ಗತಗಳ | ವೇದಂಗಳಿಮ್ಗೈದ | ಸೃಷ್ಟಿ ಸ್ಥಿತಿ ಲಯಂಗಳ | ವೇದಂಗಳೆನ್ನೋಳಿರುತಿರ್ಪ | ಭಾಗಂಗಳ || ೩ || ನಿರ್ಮಲೋದಕವೆಂಬುವ | ತೀರ್ಥದಿ ಮಿಂದು ಕರ್ಮವ | ಕಳೆದುಳಿವ | ಮರ್ಮವ ತಿಳುಹಿಸಿ ಕರ್ಮರಹಿತಮಾದ | ನಿರ್ಮಲ ಮನಸಿನ ನೀಲದನುಭವವನ್ನ || ೪ || ಧರೆಯೊಳಗೇಳುಕೋಟಿ | ಮಹಮಂತ್ರೆಗಳ್ಮೆರೆವ ವೆನ್ನುತ ಕೇಳಿಹೆ ಮರಳಿ ಜನ್ಮಕೆ ತರುವ | ತಿರುಮಂತ್ರವರುಹದೆ | ವರಮೋಕ್ಷ ಕೊಡುವಂತ ಗುರು ಮಂತ್ರವನು ದಯದಿ || ೫ || ವರನಿಷ್ಕಳವ ಸೇರಲು | ಸೋಪಾನಂಗಳ್ಮೆರೆವವು ಪದಿಮೂರೆಂದು ವರೆಯುವ ಶ್ರುತಿನಂಬಿ ನೆರೆಭ್ರಾಂತನಾದೆನ್ನ ಶಿರದಮೇಲ್ಕರವಿಟ್ಟು ಹರಸಿ ಆ ವಿವರವ || ೬ || ಇಷ್ಟ ಪ್ರಾಣವು ಭಾವ ಗುಟ್ಟನು | ಪೇಳಿ ಮುಟ್ಟಲಾಗದ ಲಿಂಗವ | ನಿಷ್ಠೆಯಿಂ | ಪೂಜಿಪ ಗುಟ್ಟನ್ನು | ತಿಳುಹಿಸಿ ಸೃಷ್ಠಿಯೊಳೆನ್ನು ಶ್ರೇಷ್ಠನೆಂದೆನಿಸಲು || ೭ || ಮರಳಿ ಜನ್ಮಿಸದಂದದಿ ಈ ಜನ್ಮವ ಪರಮಪಾವನ ಗೈಯಲು | ಗುರು ರೇಣುಕನೆ ನಿನ್ನ ಚರಣದೊಳ್ಬೆರೆಯುವ | ಅರಿವಿತ್ತೀ ತರಳನ ಪೊರೆ ರಂಭಾಪುರನಿಲಯ | ಬೋಧಿಸೆನ್ನಯ ಗುರುವೆ | ನಿನ್ನಯ ಘನಪಾದವ ನಂಬಿರುವೆ || ೮ ||

ರಾಗ-ತಾಳ-ಅಟ್ಟತಾಳ (ಮಂಗಳಾರತಿ)

ಮಂಗಳಂ | ಗುರು | ರೇಣುಕಾಚಾರ್ಯರಿಗೆ | ಜಯ ಮಂಗಳಂ | ಮುಕ್ತಾಂಗಿಯರಸನಿಗೆ ಮಂಗಳಂ || ೧ || ವರಯೋಗನಿಷ್ಠೆಯೊಳ್ನಿರತನೆಂದೆನಿಸಿರ್ದ ನೆರೆಪುಣ್ಯಪುರುಷ | ಅಗಸ್ತ್ಯನಿಗೆ | ಕರುಣಿಸಿ | ಶಿವತತ್ತ್ವದುಪದೇಶವನು ಗೈದ | ವರಜಗದ್ಗುರು ರೇಣುಕಾರಾಧ್ಯರಿಗೆ || ೨ || ಹಿರಿಯನಾಗ್ನೆಯ | ಪೂರ್ತಿಗೊಳಿಸೆ ವಿಭೀಷಣ | ಗುರುವೆ ಎನ್ನಿಷ್ಟಾವ | ಸಲಿಸೆನಲು | ಶರಣನ ಮನಪೂರ್ತಿ ಮುಕ್ಕೋಟಿ ಲಿಂಗವ ಕರುಣಿಸಿ ಕರಕಿತ್ತ ಗುರುವರ್ಯಗೆ || ೩ || ಮೂರು | ಕೋಟಿ ಲಿಂಗಕೆ | ಒಂದೆಸಾರಿ | ಪೂಜೆಯಗೈಯ್ಯಬೇಕೆನ್ನಲು | ತೋರಿ ಒಂಭತ್ತುಕ್ಕೋಟಿ | ಗುರುರೂಪವನು | ಒಂದೇಸಾರಿ ಪೂಜೆಯಗೈದ ಗುರುವೀರಗೆ || ೪ || ಮಂಗಳ | ಪರಮಪಾವನ | ಜಗದ್ಗುರು ಶಂಕರಾರ್ಯಗೆ | ಚಂದ್ರವರಮೌಳೇಶ್ವರ ಲಿಂಗವ | ಹರಸಿ ತಾ ಕರಕಿತ್ತು | ದ್ವಾದಶ ಸಾಹಸ್ರ ಚರಲಿಂಗ ಮಾಧ್ಯಕ್ಷನಾದವಗೆ || ೫ || ಮಂಗಳ || ಗೋರಕ್ಷನ ಗರ್ವವ ಮುರಿದು ಯಕ್ಷಮಿಥುನರ ಘೋರ ರಾಕ್ಷಸರೂಪಗಳನು ಸುಟ್ಟು | ಸಾರಿ ಕಂಚಿಗೆ ಅಳ್ಳಾಡ್ನಾಥನ ಗುರುರ್ವಿಷ್ಣು ಗುರುರೇವ ಮಹೇಶ | ಗುರುಸಾಕ್ಷಾತ್ಪರಬ್ರಹ್ಮ ಗುರುವರ‍್ಯಗೆ ನರರಿಂಗೆ ಜ್ಞಾನವನೊರೆದು ಪಾವನಗೈವ ಗುರುಕುಲದೊಳಗ್ರ ಗಣ್ಯನಿಗೆ || ೭ || ವರಜ್ಞಾನೋದ್ಧಾರಕ್ಕೋಸುಗ ಕೊಲ್ಲಿಪಾಕಿಯೋಳ್ಮೆರೆವ | ಸೋಮನಾಥೇಶ್ವರಲಿಂಗದಿ ಗುರು ರೇಣುಕಾಚಾರ್ಯನೆಂಬೊ ನಾಮದೊಳವ ತರಿಸಿ ಜ್ಞಾನಾನಂದಗರಿವಿತ್ತಗೆ || ೮ || ಮಂಗಳಂ ಗುರು ರೇಣುಕಾಚಾರ್ಯರಿಗೆ ಜಯಮಂಗಳಂ ಮುಕ್ತಾಂಗಿಯರಸನಿಗೆ || ಮಂಗಳಂ ||