ನ್ಯೂಯಾರ್ಕ್‌‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳನ್ನು ಉರುಳಿಸಿದ ಸೆಪ್ಟೆಂಬರ್ ೧೧ರ ಘಟನೆ ನಡೆದ ನಂತರ (೨೦೦೧ ಅಕ್ಟೋಬರ್) ಹಾಂಕಾಂಗ್‌ನ ಯೂನಿವರ್ಸಿಟಿ ಆಫ್ ಚೈನಾದ ಘಟಿಕೋತ್ಸವ ನಡೆಯಿತು. ಇಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದು ಫ್ರೆಂಚ್ ತತ್ವಜ್ಞಾನಿ ಜಾಕೆಸ್ ಡೆರಿಡಾ. ಈ ಹೊತ್ತಿಗಾಗಲೇ ಅಮೆರಿಕ ಸೆಪ್ಟೆಂಬರ್ ೧೧ರ ಘಟನೆಗೆ ಅಲ್‌ಖೈದಾ ಕಾರಣ ಎಂದು ನಿರ್ಧರಿಸಿ ಅಫ್ಘಾನಿಸ್ಥಾನದ ಮೇಲೆ ದಾಳಿಯನ್ನೂ ಆರಂಭಿಸಿತ್ತು. ಈ ಯುದ್ಧಕ್ಕೆ ಯೂರೋಪಿಯನ್ ಯೂನಿಯನ್‌ನ ಸದಸ್ಯರಾಗಿರುವ ಹಲವು ರಾಷ್ಟ್ರಗಳೂ ಬೆಂಬಲ ನೀಡಿದ್ದವು. ಡೆರಿಡಾ ತನ್ನ ಭಾಷಣದಲ್ಲಿ ಈ ವಿಷಯವನ್ನೇ ಪ್ರಸ್ತಾಪಿಸಿ ಬಹುಮುಖ್ಯ ನೈತಿಕ ಪ್ರಶ್ನೆಯೊಂದನ್ನು ಎತ್ತಿದ.

ಯೂರೋಪಿಯನ್ ಯೂನಿಯನ್‌ನ ಸದಸ್ಯತ್ವ ಪಡೆಯುವ ದೇಶಗಳು ಮರಣ ದಂಡನೆ ಎಂಬ ಶಿಕ್ಷೆಯನ್ನು ರದ್ದುಪಡಿಸಿರಬೇಕು. ಹೀಗೆ ಮರಣ ದಂಡನೆಯನ್ನು ರದ್ದುಪಡಿಸಿರುವ ದೇಶದ ಸೈನಿಕನೊಬ್ಬ ಇನ್ನೊಂದು ದೇಶದ ಸೈನಿಕ ಅಥವಾ ನಾಗರಿಕನನ್ನು ಕೊಲ್ಲುವುದು ಹೇಗೆ ಸಾಧ್ಯ? ಎಂಬುದು ಡೆರಿಡಾನ ಪ್ರಶ್ನೆ. ಹಾಂಕಾಂಗ್‌ನಲ್ಲಿ ಈ ಪ್ರಶ್ನೆ ಕೇಳಿದ ಡೆರಿಡಾ ಅದನ್ನು ಅಲ್ಲಿಗೇ ನಿಲ್ಲಿಸಲಿಲ್ಲ. ತನ್ನ ದೇಶಕ್ಕೆ ಹೋದ  ನಂತರವೂ ಇದೇ ಪ್ರಶ್ನೆಯನ್ನಿಟ್ಟುಕೊಂಡು ಮಾತನಾಡಿದ. ಡೆರಿಡಾನ ಬೌದ್ಧಿಕ ಎದುರಾಳಿ ಎಂದು ಎಲ್ಲರೂ ಭಾವಿಸುವ ಜರ್ಮನಿಯ ತಾತ್ವಿಕ ಯರ್ಗನ್ ಹೆಬರ್‌ಮಾಸ್ ಜತೆ ಸೇರಿ ಡೆರಿಡಾ ಒಂದು ಬಹಿರಂಗ ಪತ್ರ ಬರೆದು ಯೂರೋಪಿನ ಚಿಂತಕರು ಯೂರೋಪಿನ ಸಾಕ್ಷಿಪ್ರಜ್ಞೆಗಳಾಗಿಯೂ ಇದ್ದಾರೆಂಬುದನ್ನು ಜಗತ್ತಿಗೇ ಸಾರಿದ.

ಯು.ಆರ್. ಅನಂತಮೂರ್ತಿಯವರು ನಿರಂತರವಾಗಿ ಈ ಬಗೆಯ ನೈತಿಕ ಪ್ರಶ್ನೆಗಳನ್ನು ಭಾರತದ ಸಾಕ್ಷಿಪ್ರಜ್ಞೆಯೆಂಬಂತೆ ನಮ್ಮ ಮುಂದಿಡುತ್ತಲೇ ಇದ್ದಾರೆ. ಅನಂತಮೂರ್ತಿಯವರು ಜೀವನ್ಮರಣದ ಪ್ರಶ್ನೆಗಳೆಂಬಂತೆ ಚರ್ಚಿಸುವ ವಿಷಯಗಳಲ್ಲಿ ಒಂದು ಪುನರಾವರ್ತನೆಯಿದೆ. ಕೋಮುವಾದ, ಸಾಮಾನ್ಯ ಶಾಲೆ, ಜ್ಞಾನ ಸೃಷ್ಟಿಯ ಭಾಷೆಯಾಗಬೇಕಾದ ಕನ್ನಡ, ಪರಿಸರ ಸಂರಕ್ಷಣೆ, ಮಾನವ ಹಕ್ಕುಗಳ ರಕ್ಷಣೆಯಂಥ ವಿಷಯಗಳನ್ನು ಅವರು ಪದೇ ಪದೇ ಪ್ರಸ್ತಾಪಿಸುತ್ತಾರೆ. ಈ ಪ್ರಶ್ನೆಗಳನ್ನು ಎತ್ತುವುದಕ್ಕೆ ಅವರು ತಮ್ಮ ಆತ್ಮಕಥಾತ್ಮಕ ಬರೆಹಗಳಿಂದ ಆರಂಭಿಸಿ ಕಾವ್ಯದ ಕುರಿತು ಚರ್ಚಿಸುವ ಭಾಷಣಗಳ ತನಕದ ಎಲ್ಲ ವೇದಿಕೆಗಳನ್ನೂ ಬಳಸಿಕೊಳ್ಳುತ್ತಾರೆ. ಇದೇಕೆ ಹೀಗೆ?

ಈ ಪ್ರಶ್ನೆಯ ಉತ್ತರ ಹುಡುಕಲು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.  ಎಡ್ವರ್ಡ್ ಸೈದ್ ಏನನ್ನು ಬರೆದರೂ ಪ್ಯಾಲೆಸ್ತೀನ್ ಪ್ರಶ್ನೆಯನ್ನೇ ಪ್ರಸ್ತಾಪಿಸುತ್ತಿದ್ದರೇಕೆ? ಅವರ ಸಾಹಿತ್ಯ ಮೀಮಾಂಸೆಯ ಪಠ್ಯಗಳಿಂದ ಆರಂಭಿಸಿ ರಾಜಕೀಯ ಬರೆಹಗಳ ವರೆಗಿನ ಎಲ್ಲದರಲ್ಲೂ ಪ್ಯಾಲೆಸ್ತೀನ್‌ನ ಕರುಣ ಕಥೆಯೇ ಇರುವುದೇಕೆ? ಅವರು ಹೊಸ ಹೊಸ ಸಂದರ್ಭಗಳಲ್ಲಿ ಅದೇ ಸಮಸ್ಯೆಯನ್ನು ಅನಾವರಣಗೊಳಿಸುವುದೇಕೆ? ನೋಮ್ ಚಾಮ್ಸ್‌ಕಿಯವರ ಎಲ್ಲ ಬರೆಹಗಳಲ್ಲೂ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆ ಕುರಿತ ವಿಮರ್ಶೆಯೇ ಇರುತ್ತದೆ. ಅದೇ ವಿಷಯವನ್ನು ಸಮಕಾಲೀನ ಮಾಹಿತಿಗಳ ಜತೆ ಜನರ ಮುಂದಿಡುವುದೇಕೆ?

ಈ ಎಲ್ಲ ಪ್ರಶ್ನೆಗಳಿಗೂ ಉತ್ತರವೆನಿಸುವಂಥ, ಭಾರತೀಯರಾದ ನಮಗೆ ಸುಲಭದಲ್ಲಿ ಅರ್ಥವಾಗುವ ಒಂದು ಪ್ರಶ್ನೆಯಿದೆ-ಗಾಂಧೀಜಿ ಸದಾ ಚರಕ ತಿರುಗಿಸಿ ನೂಲುತ್ತಿದ್ದುದೇಕೆ? ಇದೊಂದು ಸತತ ಪುನಾರಾವರ್ತನೆಯ ಕ್ರಿಯೆಯಲ್ಲವೇ?

ಗಾಂಧೀಜಿ ಚರಕದ ಪುನರುಜ್ಜೀವನಕ್ಕೆ ಹೊರಟು ತನಗೊಂದು ಚರಕ ಬೇಕು ಎಂದು ಕೇಳಿದಾಗ ಅದೆಲ್ಲೂ ಇರಲೇ ಇಲ್ಲವಂತೆ. ಅವರ ಅನುಯಾಯಿಗಳು ಬಹಳ ಕಷ್ಟಪಟ್ಟು ಹುಡುಕಿದ ನಂತರ ಗುಜರಾತಿನ ಯಾವುದೋ ಹಳ್ಳಿಯಲ್ಲಿ ಅದು ಸಿಕ್ಕಿತಂತೆ. ಈ ಬಗೆಯ ಅತಿಗಳಿಗೆ ಗಾಂಧೀಜಿಯವರು ಹೆಸರಾಗಿದ್ದರಿಂದ ಚರಕಕ್ಕೆ ಮತ್ತೆ ಜೀವ ಕೊಡುವ ಕೆಲಸವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅದೇ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿಬಿಟ್ಟಿತು.

ಅನಂತಮೂರ್ತಿಯವರು ಅವರೇ ಹೇಳಿಕೊಂಡಿರುವಂತೆ ವೈಯಕ್ತಿಕ ಜೀವನದಲ್ಲಿ ರುಚಿಗಳನ್ನು ತ್ಯಜಿಸಿದವರಲ್ಲ. ಆದರೆ ಸಾರ್ವಜನಿಕ ಬುದ್ಧಿಜೀವಿಯಾಗಿ ಗಾಂಧೀಜಿಯಂತೆಯೇ ಕೆಲವು ಅತಿಗಳನ್ನು ನಿರ್ಭಿಡೆಯಿಂದ ಮಾಡಿಬಿಡುತ್ತಾರೆ. ಜೆಡಿಎಸ್‌ ಮತ್ತು ಬಿಜೆಪಿಗಳು ಒಟ್ಟಾಗಿ ಸರ್ಕಾರ ರಚಿಸಿದಾಗ ಅದನ್ನು ಟೀಕಿಸುತ್ತಲೇ ‘ಹೊಸ ಸರ್ಕಾರಕ್ಕೆ ಎರಡಂಶದ ಕಾರ್ಯಸೂಚಿ’ಯೊಂದನ್ನು ಕೊಡುತ್ತಾರೆ. ಚುನಾವಣೆಗಳು ಘೋಷಣೆಯಾದಾಗ ಎಲ್ಲರೂ ರಾಜಕಾರಣಿಗಳ ಬಗ್ಗೆ ಸಿನಿಕ ಮಾತುಗಳನ್ನಾಡುತ್ತಿರುವಾಗ, ‘ಜನತಾ ಪ್ರಣಾಳಿಕೆ’ಯೊಂದನ್ನು ಬರೆದು ದುಡ್ಡಿನಿಂದಲೇ ಚುನಾವಣೆ ಗೆಲ್ಲಲು ಹೊರಟಿರುವ ರಾಜಕೀಯ ಪಕ್ಷಗಳಿಗೂ, ಜನರಿಗೂ ಒಂದು ಪ್ರಣಾಳಿಕೆ ಇರುತ್ತದೆ ಎಂಬುದನ್ನು ನೆನಪಿಸುತ್ತಾರೆ. ಚುನಾವಣೆಯಲ್ಲಿ ಬಿಜೆಪಿ ಗೆದ್ದು ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ‘ನೀವು ಗೆದ್ದದ್ದು ಜನರು ನಿಮಗೆ ಅನ್ಯಾಯವಾಗಿದೆಯೆಂದು ಭಾವಿಸಿದ್ದರಿಂದ’ ಎಂಬುದನ್ನು ನೆನಪಿಸುವ ಪತ್ರ ಬರೆಯುತ್ತಾರೆ. ಚರ್ಚ್‌‌ಗಳ ಮೇಲೆ ದಾಳಿ ನಡೆದ ಹೊತ್ತಿನಲ್ಲಿ ‘ಮತಾಂತರದ ಬಗ್ಗೆ ಚರ್ಚೆಯಾಗಲಿ’ ಎಂದು ಬಹುದೊಡ್ಡ ಸಮೂಹವೊಂದು ಕರ್ಕಶವಾಗಿ ಕಿರುಚುತ್ತಿರುವಾಗಲೇ ‘ಸಬಕೋ ಸನ್ಮತಿ ದೇ ಭಗವಾನ್’ ಎಂದು ಗಾಂಧೀಜಿಯನ್ನೂ ಕುವೆಂಪುವನ್ನೂ ನಾರಾಯಣಗುರುವನ್ನೂ ನೆನಪಿಸಿ ಹಿಂದೂ ಧರ್ಮವೆಂದರೇನೆಂದು ವಿವರಿಸಲು ಪ್ರಯತ್ನಿಸುತ್ತಾರೆ.

ತಮ್ಮ ಈ ನಿಲುವುಗಳನ್ನು ಹೇಳುವುದಕ್ಕೆ ಅವರು ಎಲ್ಲ ವೇದಿಕೆಗಳನ್ನೂ ಬಳಸುತ್ತಾರೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಅವರು ಮಾಡಿದ ಘಟಿಕೋತ್ಸವ ಭಾಷಣ ಇದಕ್ಕೆ ಅತ್ಯುತ್ತಮ ಉದಾಹರಣೆ. ಭಯೋತ್ಪಾದನೆಯನ್ನು ತಡೆಯುವ ಹೆಸರಿನಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಪ್ರಸ್ತಾಪಿಸುವುದಕ್ಕೆ ಅನಂತ ಮೂರ್ತಿಯವರು ಘಟಿಕೋತ್ಸವ ಭಾಷಣದ ಔಪಚಾರಿಕತೆಗಳನ್ನೆಲ್ಲಾ ಮೀರುತ್ತಾರೆ. ಅಷ್ಟೇ ಅಲ್ಲ, ಭಯೋತ್ಪಾದನೆಯ ಆರೋಪದ ಮೇಲೆ ಬಂಧಿತರಾದ ಜಾಮಿಯಾ ಮಿಲ್ಲಿಯಾದ ವಿದ್ಯಾರ್ಥಿಗಳಿಗೆ ಕಾನೂನು ನೆರವು ನೀಡಿದ ಕುಲಪತಿ ಮುಷಿರುಲ್ ಹಸನ್‌ರ ನಿಲುವನ್ನು ಅವರು ದಿಟ್ಟವಾಗಿ ಬೆಂಬಲಿಸುತ್ತಾರೆ.

* * *

ಪ್ರಭುತ್ವದ ಸತತ ಭ್ರಷ್ಟತನ ಜನ ಸಮುದಾಯದಲ್ಲಿ ಒಂದು ಬಗೆಯ ನಿರಾಶೆಯನ್ನು ಸೃಷ್ಟಿಸುತ್ತದೆ. ಇದು ‘ಏನು ಮಾಡಿದರೂ ಎಲ್ಲವೂ ಹೀಗೆಯೇ ಇರುತ್ತದೆ’ ಎಂಬ ಸಿನಿಕತೆಗೆ ಕಾರಣವಾಗುತ್ತದೆ. ಈ ಸಿನಿಕತೆಯನ್ನು ಪ್ರಭುತ್ವ ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಬಳಸುತ್ತದೆ. ಭಯೋತ್ಪಾದಕತೆಯಂಥ ಹಿಂಸೆಗಳಿಂದ ಬೇಸತ್ತ ಜನರು ‘ಪೊಲೀಸ್ ರಾಜ್ ಬಂದರೂ ಸರಿಯೇ’ ಎಂಬ ನಿಲುವಿನತ್ತ ಜಾರುವುದನ್ನು ಪ್ರಭುತ್ವವೂ ಬಯಸುತ್ತಿರುತ್ತದೆ. ಕೋಮುವಾದಿ ಕಾರ್ಯಸೂಚಿಗಳು ಕಾರ್ಯನಿರ್ವಹಿಸುವುದೂ ಹೀಗೆಯೇ. ಮತಾಂತರ, ಭಯೋತ್ಪಾದನೆ, ಆರಾಧನಾ ಸ್ಥಳಗಳಿಗೆ ಸಂಬಂಧಿಸಿದಂತೆ ಸತತ ಹುಯಿಲೆಬ್ಬಿಸಿ ನಿರ್ದಿಷ್ಟ ಸಮುದಾಯಗಳನ್ನು ‘ಅನ್ಯ’ಗೊಳಿಸಲಾಗುತ್ತದೆ. ಇಂಥ ಸವಾಲುಗಳನ್ನು ಎದುರಿಸುವುದಕ್ಕೆ ನಿರಂತರವಾಗಿ ಕೆಲವು ನೈತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಕಾಗುತ್ತದೆ.

ಎಲ್ಲರಿಗೂ ಶಿಕ್ಷಣ ನೀಡುವ ಸಂವಿಧಾನದ ಭರವಸೆಯಿರುವಾಗಲೇ ಉಳ್ಳವರ ಮಕ್ಕಳಿಗೊಂದು ಬಗೆಯ ಶಿಕ್ಷಣ, ಬಡವರಿಗೊಂದು ಬಗೆಯ ಶಿಕ್ಷಣ ಸಿಗುವ ಸ್ಥಿತಿ ಮುಂದುವರಿಯುತ್ತಿರುವಷ್ಟು ಕಾಲವೂ ಸಾಮಾನ್ಯ ಶಾಲೆಯ ಬಗ್ಗೆ ಹೇಳುತ್ತಲೇ ಇರಬೇಕಾಗುತ್ತದೆ. ಕನ್ನಡಕ್ಕೆ ‘ಅಭಿಜಾತ ಭಾಷೆ’ಯ ಸ್ಥಾನ ಸಿಕ್ಕರೆ ಎಲ್ಲವೂ ಸಾಧಿತವಾದಂತೆ ಎಂದು ಜನರೂ ನಂಬತೊಡಗಿದರೆ ಕನ್ನಡ ಜ್ಞಾನ ಸೃಷ್ಟಿಯ ಭಾಷೆಯಾಗಬೇಕೆಂಬುದನ್ನು ನೆನಪಿಸುತ್ತಲೇ ಇರಬೇಕಾಗುತ್ತದೆ. ಭಾರತದ ಎಲ್ಲಾ ವೈವಿಧ್ಯಗಳನ್ನು ಬದಿಗಿಟ್ಟು ‘ಒಂದು ಮಾಡುವವರು’ ಇರುವ ತನಕ ಭಾರತ ವೈವಿಧ್ಯಮಯ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳಿರುವ ಒಂದು ನಾಗರಿಕತೆ ಎಂಬುದನ್ನು ಮರೆತುಹೋಗದಂತೆ ನೋಡಿಕೊಳ್ಳಬೇಕಾಗುತ್ತದೆ. ಗಾಂಧೀಜಿ ಸತತವಾಗಿ ನೂಲುತ್ತಿದ್ದಂತೆ ಅನಂತಮೂರ್ತಿಯವರು ಸತತವಾಗಿ ವೈಚಾರಿಕ ಚರಕವನ್ನು ತಿರುಗಿಸಿ ನೈತಿಕ ಪ್ರಶ್ನೆಗಳೆಂಬ ನೂಲನ್ನು ತೆಗೆಯುತ್ತಲೇ ಇರಬೇಕಾಗುತ್ತದೆ. ಅವರ ವೈಚಾರಿಕೆ ಚರಕ ತಿರುಗುತ್ತಲೇ ಇರಬೇಕಾದುದು ಕೇವಲ ಅವರ ವೈಯಕ್ತಿಕ ತುರ್ತೆಂದು ನಾವು ಭಾವಿಸಬೇಕಾಗಿಲ್ಲ. ಅದು ಜೀವಂತ ಬುದ್ಧಿ ಜೀವಯೊಬ್ಬ ತನ್ನ ಕರ್ತವ್ಯವನ್ನು ನಿರ್ವಹಿಸುವ ಬಗೆ.

* * *

ಈ ಪುಸ್ತಕದಲ್ಲಿರುವ ಬರೆಹಗಳಿಗೆ ನನ್ನ ಪೀಠಿಕೆಯೊಂದರ ಅಗತ್ಯವಿಲ್ಲ. ಹಾಗೆ ನೋಡಿದರೆ ಈ ಪುಸ್ತಕಕ್ಕೆ ನಾನು ಸಂಪಾದಕನಾಗಿರಬೇಕಾದ ಅಗತ್ಯವೂ ಇರಲಿಲ್ಲ. ಅನಂತಮೂರ್ತಿಯವರ ಪ್ರೀತಿಯಿಂದ ನಾನಿಲ್ಲಿ ಸಂಪಾದಕನಾಗಿದ್ದೇನಷ್ಟೆ. ಅವರ ಮಾತುಗಳನ್ನು ಅಕ್ಷರಕ್ಕಿಳಿಸಿ ಅಧ್ಯಾಯಗಳನ್ನಾಗಿ ಜೋಡಿಸುವುದನ್ನು ಹೊರತುಪಡಿಸಿ ಬೇರೇನನ್ನೂ ನಾನು ಮಾಡಿಲ್ಲ. ಹೀಗೆ ಅಧ್ಯಾಯಗಳನ್ನು ಜೋಡಿಸುವುದರಲ್ಲಿ ಒಂದು ಸ್ಥೂಲ ಕ್ರಮವಿದೆ.

ಅನಂತಮೂರ್ತಿಯವರ ಎಲ್ಲ ಭಾಷಣಗಳು ಮತ್ತು ಬರೆಹಗಳಲ್ಲಿ ಆತ್ಮಕಥೆಯೂ ಸಾಹಿತ್ಯವೂ ರಾಜಕೀಯವೂ ಸಾಂಸ್ಕೃತಿಕ ವಿಶ್ಲೇಷಣೆಯೂ ಒಟ್ಟಾಗಿಯೇ ಇರುತ್ತವೆ. ಅವರ ಬರೆಹಗಳನ್ನು ಅವುಗಳ ಹೂರಣಕ್ಕನುಗುಣವಾಗಿ ವಿಂಗಡಿಸಲು ಹೊರಟರೆ ಎಲ್ಲ ಬರೆಹಗಳೂ ಎಲ್ಲ ವಿಭಾಗದಲ್ಲಿಯೂ ಸಲ್ಲುತ್ತವೆ. ಇದರ ಅರಿವಿದ್ದೂ ಪುಸ್ತಕವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದೇನೆ. ಮೊದಲ ಭಾಗದಲ್ಲಿ ಆತ್ಮಕಥಾತ್ಮಕವಾದ ಬರೆಹಗಳಿವೆ. ಎರಡನೆಯ ಭಾಗದಲ್ಲಿ ರಾಜಕೀಯ ಬರೆಹಗಳಿವೆ. ಮೂರನೆಯ ಭಾಗದಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಡಿದ ಭಾಷಣಗಳಿವೆ. ನಾಲ್ಕನೆಯ ಭಾಗದಲ್ಲಿ ವಿವಿಧ ಸಮಾರಂಭಗಳಲ್ಲಿ ಮಾಡಿದ ಭಾಷಣಗಳಿವೆ. ಮೊದಲೇ ಹೇಳಿದಂತೆ ಇದು ಓದಿನ ಅನುಕೂಲಕ್ಕಾಗಿ ಮಾಡಿದ ಸ್ಥೂಲ ವಿಭಾಗೀಕರಣ ಮಾತ್ರ.

ಇಂಗ್ಲಿಷ್‌ನಲ್ಲಿದ್ದ ಎರಡು ಮುಖ್ಯ ಲೇಖನಗಳನ್ನು ಡಾ. ಆಶಾದೇವಿಯವರು ಅನುವಾದಿಸಿಕೊಟ್ಟು ನನ್ನ ಕೆಲಸವನ್ನು ಸುಲಭಗೊಳಿಸಿದ್ದಾರಷ್ಟೆ ಅಲ್ಲದೆ ಪುಸ್ತಕ ಸಂಪಾದನೆಯೆಂಬ ಕ್ರಿಯೆಯ ಸೂಕ್ಷ್ಮಗಳನ್ನು ಹೇಳಿಕೊಟ್ಟಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಪತ್ರಕರ್ತರಿಗೆ ಸಹಜವಾದ ‘ಡೆಡ್‌ಲೈನ್’ನ ಹೊತ್ತಿಗೆ ಲೇಖನಗಳನ್ನು ಸಿದ್ಧಪಡಿಸುವ ನನ್ನ ದೌರ್ಬಲ್ಯವನ್ನು ಸಹಿಸಿಕೊಂಡಿರುವ ‘ಅಂಕಿತ ಪುಸ್ತಕ’ದ ಪ್ರಕಾಶ್ ಕಂಬತ್ತಳ್ಳಿಯವರಿಗೆ ಕೃತಜ್ಞತೆಗಳನ್ನು ನಾನಿಲ್ಲಿ ಹೇಳಲೇಬೇಕಾಗಿದೆ.

ಅನಂತಮೂರ್ತಿಯವರ ವೈಚಾರಿಕ ಚರಕ ನಿರಂತರವಾಗಿ ತಿರುಗುತ್ತಿರಲಿ ಎಂದು ನಾನು ಮತ್ತೊಮ್ಮೆ ಹಾರೈಸುತ್ತೇನೆ. ಅದು ತಿರುಗಬೇಕಿರುವುದು ಕ್ಷೋಭೆ ತುಂಬಿದ ಈ ಕಾಲಘಟ್ಟದ ಅಗತ್ಯವೂ ಹೌದು.

ಎನ್..ಎಂ. ಇಸ್ಮಾಯಿಲ್

* * *