ಬಾಲ್ಯದ ಅರಿಯುವ ಬೆರಗು
(
ಇನ್ನೂ ಬರೆಯದ ಆತ್ಮಕಥೆಯ ಪ್ರಾರಂಭದ ಪುಟಗಳು)

ಬಹು ಹಿಂದಿನ ನನ್ನ ಸ್ಮೃತಿಯೇನೆಂದು ಈಗ ನೆನೆದರೆ ಮನೆಯ ಮುಂದಿನ ಕಳ್ಳಿಬೇಲಿದಾಟಿ ಅದಕ್ಕೆ ಮುಖಮಾಡಿ ನಿಂತಿದ್ದೇನೆ. ಬೆಳಗಿನ ಝಾವ. ನನ್ನ ಬೆನ್ನ ಹಿಂದೆ ಇಲ್ಲೇ ಎನ್ನುವಷ್ಟು ಹತ್ತಿರದಲ್ಲಿ ಕಾಡಿದೆ. ಅಲ್ಲಿಂದ ಸೂರ್ಯ ಏರಿ ಬರುತ್ತಿದ್ದಾನೆ. ಬೇಲಿಗೆಂದು ಬೆಳೆಸಿದ ಕಳ್ಳಿಗಿಡದ ದಪ್ಪ ಎಲೆಯೊಂದನ್ನು ಕಿತ್ತಿದ್ದೇನೆ. ಅದರ ತೊಟ್ಟಿನಿಂದ ಬಿಳಿಯ ಹಾಲು ಒಸರುತ್ತಿದೆ. ಈ ಹಾಲು ಕೈಗೆ ಸೋಂಕದಂತೆ ನಾಜೂಕಾಗಿ ಕಳ್ಳಿಯ ಎಲೆಯನ್ನು ಅದರ ಬೆನ್ನಿಗೆ ಅರ್ಧವಾಗುವಂತೆ ಮಡಿಸಿ ಮುರಿದಿದ್ದೇನೆ. ಎಲೆ ಒಡೆದುಕೊಂಡಲ್ಲಿ ಬೆಳ್ಳಗಿನ ಹಾಲು ಆಟದಲ್ಲಿ ಬಿದ್ದು ಮೊಣಕಾಲಿಗಾದ ಗಾಯದಲ್ಲಿ ಜಿನುಗುವ ರಕ್ತದಂತೆ ಮೂಡತೊಡಗುತ್ತದೆ. ಕೊಂಚ ಕಾಯುತ್ತೇನೆ. ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ ಒಡೆದುಕೊಂಡ ತುದಿಗಳಲ್ಲಿ ಎಲೆಯನ್ನು ಹಿಡಿದು ನಿದನಿಧಾನವಾಗಿ, ಒಳಮುಖವಾಗಿ ನೂಕುತ್ತೇನೆ. ಒಸರಿದ ಹಾಲು ನಾನು ನೂಕುವ ಸಮಾಧಾನದಲ್ಲಿ ತೆಳುವಾದ ಕನ್ನಡಿಯಾಗಲು ಶುರುವಾಗುತ್ತದೆ. ಅದೊಂದು ಇನ್ನು ನೂಕಿದರೆ ಒಡೆದು ಹೋಗಬಲ್ಲ ಕಣ್ಣಿನಾಕಾರದ ಮಿನುಗುವ ಕನ್ನಡಿಯಾಗುತ್ತದೆ.

ತೆಳುವಾದ ಸೂಕ್ಷ್ಮವಾದ ಈ ಕನ್ನಡಿ ಮೇಲೆ ಬೆನ್ನ ಹಿಂದಿನ ಕಾಡಿನಿಂದ ತೂರಿ ಬರುವ ಸೂರ್ಯನ ಎಳೆಕಿರಣಗಳು ಬೀಳಬಲ್ಲಂತೆ ನಾಜೂಕಾಗಿ ಓರೆಯಾಗುತ್ತೇನೆ. ಅಪರೂಪಕ್ಕೆ ಕನ್ನಡಿ ಕಿರಣಗಳನ್ನು ಸಂಪರ್ಕಿಸಿ ಬಣ್ಣಗಳಲ್ಲಿ ಮಿನುಗುತ್ತದೆ. ನಾನು ಸಂಭ್ರಮಿಸುತ್ತಿದ್ದಂತೆ ಕನ್ನಡಿ ಇದ್ದಕ್ಕಿದ್ದಂತೆ ಒಡೆದುಹೋಗಿ, ಗಾಯದಿಂದ ಸೋರುವ ಬಿಲಿಯ ಅಂಟಂಟಿನ ಎಲೆಯ ಸಿಂಬಳವಾಗುತ್ತದೆ. ನಾನು ಪೆಚ್ಚಾದರೂ ಬಿಡುವುದಿಲ್ಲ. ಮತ್ತೆ ಹೊಸ ಎಲೆಗಳನ್ನು ಕಿತ್ತು ಕನ್ನಡಿ ಮಾಡಲು ಯತ್ನಿಸುತ್ತೇನೆ. ಕನ್ನಡಿಯಾದರೂ ಅದು ಮೊದಲ ಸಾರಿಯಂತೆ ಸೂರ್ಯನಕಿರಣಗಳನ್ನು ಒದಗಿಸಿಕೊಳ್ಳುವುದಿಲ್ಲ ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಚಾವಡಿಗೆ ಬಂದ ಅಮ್ಮ ‘ಕಳ್ಳಿಹಾಲು ಜೋಕೆ. ಕಣ್ಣಿನ ಹತ್ತಿರ ಅದನ್ನು ಮುರೀಬೇಡ’ ಎಂದು ಗದರಿಸುತ್ತಾರೆ.

* * *

ಅಂಗಳದಲ್ಲಿನ ದಾಳಿಂಬೆ ಗಿಡವೂ ನೆನಪಾಗುತ್ತದೆ – ಅಜ್ಜಯ್ಯ ಹೇಳುತ್ತಿದ್ದ ದಾಳಿಂಬೆ ರಾಕ್ಷಸನ ಕಥೆಯಿಂದಾಗಿ. ಪ್ರಪಂಚದಲ್ಲೆಲ್ಲ ಒಂದೇ ಒಂದು, ಹಣ್ಣುಬಿಡದ ಋತುವಿನಲ್ಲೂ ಒಂದೇ ಒಂದು ಹಣ್ಣುಬಿಡುವ ದಾಳಿಂಬೆ ಗಿಡ. ಅಪರೂಪದ ಈ ಮರವನ್ನು ಕಾಯುವ ಏಕಾಕ್ಷನಾದ ಒಬ್ಬ ರಾಕ್ಷಸ. ದೂರದ ಒಂದಾನೊಂದು ಊರಿನಲ್ಲಿ ಒಬ್ಬ ರಾಜಕುಮಾರಿ. ಅವಳು ಬಸುರಿ. ಈ ಬಸುರಿಯ ಬಯಕೆಯೆಂದರೆ ದಾಳಿಂಬೆ ತಿನ್ನಬೇಕೆಂದು. ದಾಳಿಂಬೆ ಬಿಡದ ಋತುವಿನಲ್ಲಿ ಈ ಬಯಕೆ ರಾಜಕುಮಾರಿಯ ಏಕಮಾತ್ರ ಬಯಕೆಯಾಗಿಬಿಡುತ್ತದೆ. ಅದು ತೀರದ ಹೊರತು ಅವಳು ಉಳಿಯುವುದಿಲ್ಲವೆಂದು ಹೆದರಿ ಅವಳ ಪ್ರೀತಿಯ ರಾಜಕುಮಾರ ಏಳೇಳು ಸಮುದ್ರಗಳನ್ನು ದಾಟಿಯಾದರೂ ದಾಳಿಂಬೆಯನ್ನು ತರುತ್ತೇನೆಂದು ಹೊರುಡುತ್ತಾನೆ. ಹೊರಟವನು ಏಳೇಳು ಸಾಗರಗಳನ್ನು ಮಂತ್ರಕಂಬಳಿಯ ಮೇಲೆ ಕೂತು ದಾಟಿ ಈ ದಾಳಿಂಬೆ ಗಿಡವನ್ನು ಅವನ ಜೊತೆ ಹಾರಿ ಬಂದ ಉದ್ದ ಕೊಕ್ಕಿನ ಹಕ್ಕಿಯೊಂದರ ಸಹಾಯದಿಂದ ಹೇಗೋ ಪತ್ತೆಮಾಡುತ್ತಾನೆ. ಪತ್ತೆಯಾದ ಮೇಲೆ ಏಕಾಕ್ಷನಾದರೂ ನಿದ್ದೆಯನ್ನೇ ಮಾಡದ ರಾಕ್ಷಸನ ಕಣ್ಣುತಪ್ಪಿಸಿ ಈ ದಾಳಿಂಬೆಯನ್ನು ಕೀಳಲು ರಾಜಕುಮಾರ ಒಬ್ಬ ಅಡಗೂಲು ಅಜ್ಜಿಯ ಸಹಾಯದಿಂದ ಏನೇನೋ ಹೊಂಚಿ ಏನೇನೋ ಸಾಮ ದಾನ ಭೇದ ದಂಡ ಉಪಾಯಗಳನ್ನು ಮಾಡಿ, ಅಂತೂ ಕೊನೆಗೆ ದಾಳಿಂಬೆಯನ್ನು ಪಡೆದು ತನ್ನ ಮುದ್ದಿನ ರಾಜಕುಮಾರಿಯ ಎದುರು ನಿಂತವನೇ……

ಅಜ್ಜಯ್ಯ ಪ್ರತಿಸಾರಿ ಅದೇ ಕಥೆ ಹೇಳುವಾಗ ರಾಜಕುಮಾರನಿಗೆ ಹೊಳೆಯುತ್ತಿದ್ದ ಉಪಾಯಗಳು ಮಾತ್ರ ಭಿನ್ನವಾಗಿರುತ್ತಿದ್ದವು.

ಆಗ ನಾನೇನು ಯೋಚಿಸುತ್ತಿದ್ದೆನೊ? ಈ ನಮ್ಮ ದಾಳಿಂಬೆ ಗಿಡದ ಬುಡದಲ್ಲೂ ಒಬ್ಬ ರಾಕ್ಷಸನಿರಬಹುದೆ? ಕತ್ತಲಾದ ಮೇಲೆ ಅವನು ಬರಬಹುದೆ? ರಾಜಕುಮಾರನ ಹಾಗೆ ನಾನೂ ನಿದ್ದೆಬಾರದಂತೆ ಬೆರಳಿಗೆ ಗಾಯಮಾಡಿಕೊಂಡು ಅದರ ಮೇಲೊಂದು ಹುಳಿನಿಂಬೆಹಣ್ಣನ್ನು ಕೊಯ್ದು ಟೋಪಿಯಂತೆ ಇಟ್ಟು ರಾಕ್ಷಸ ಪ್ರತ್ಯಕ್ಷನಾಗಲು ಉರಿಯುತ್ತ ಕಾಯಬಹುದೆ? ಅಜ್ಜಯ್ಯ ನಗುವರು. ನಾನೊಬ್ಬ ವಯಸ್ಕನೆಂಬಂತೆ ವಿರಿಸುವವರು. ‘ನಾನು ಗಾಯತ್ರಿ ಜಪ ಮಾಡೋದಲ್ಲವೆ ನಿತ್ಯ? ಯಾವ ರಾಕ್ಷಸನಿಗೂ ಈ ಆಸುಪಾಸಿನಲ್ಲಿ ಬರುವ ದಮ್ಮಿದೆಯೊ ನೋಡುವೆ?’

ಪಾಣಿಪಂಚೆಯನ್ನ ಮಂಡಿಯತನಕ ಕಚ್ಚೆಹಾಕಿ ಉಟ್ಟು, ಹಣೆಯಮೇಲೆ ಅಂಗಾರ ಹಾಕಿ ಬರಿಮೈಯಲ್ಲೇ ಇರುತ್ತಿದ್ದ ಅಜ್ಜಯ್ಯ ಕೈಯಲ್ಲೊಂದು ಕತ್ತಿಯನ್ನು ಯಾವಾಗಲೂ ಹಿಡಿದಿರುತ್ತಿದ್ದರು. ಮನೆಗೆ ನುಗ್ಗುತ್ತಿದ್ದ ಕಾಡನ್ನು ಸವರಿ ಸವರಿ ಹಿಮ್ಮೆಟ್ಟಿಸುತ್ತಿರುವುದೇ ಅವರ ನಿತ್ಯದ ಕೆಲಸ. ಕೊಟ್ಟಿಗೆಗೆ ದನ ಸೇರಿಲ್ಲವೆಂದೋ, ಮಗುವಿಗೆ ಹುಷಾರು ತಪ್ಪಿದೆಯೆಂದೋ ಕೇಳಿಕೊಂಡು ಬಂದವರಿಗೆ ಚೀಲದಿಂದ ಕವಡೆ ತೆಗೆದು ಮಂತ್ರಿಸಿ ಎಣಿಸಿ ನಿಮಿತ್ಯ ಹೇಳುವ, ಆಗೀಗ ಅದೃಷ್ಟಲೋಕದ ವಕ್ತಾರನಾಗುವ, ಇನ್ನೊಂದು ಮಾರ್ಯಾದೆಯ ಕೆಲಸ. ನೆರೆಹೊರೆಯವರು ಮೈ ಸರಿಯಿಲ್ಲ ಎಂದು ಬಂದರೆ ಪೂರ್ವಾರ್ಜಿತವಾಗಿ ತಿಳಿದುಕೊಂಡ ರಹಸ್ಯ ಗಿಡಮೂಲಿಕೆಗಳ ಕಷಾಯ ಮಾಡಿ ಕೊಡುವ ವೈದ್ಯರೂ ನನ್ನ ಅಜ್ಜಯ್ಯ. ತನ್ನ ಬಲವಿರುವುದೆಲ್ಲ ಗಾಯತ್ರಿ ಜಪದಲ್ಲಿ ಎನ್ನುವುದು ಅವರಿಗೆ ಗೊತ್ತಿದ್ದ ಏಕಮಾತ್ರ ಜಂಬದ ಮಾತು.

ಅಮ್ಮ ನನ್ನನ್ನು ಹೆತ್ತದ್ದು ಅವರ ಹದಿನೈದನೇ ವಯಸ್ಸಿನಲ್ಲಿರಬೇಕು. ಅವರೂ ಬಸುರಾಗುವುದು, ಬಸುರಾಗಿ ಬಯಸುವುದು ನೆನಪಾಗುತ್ತದೆ. ಅಕ್ಕಿ ಅರಿಸುತ್ತ ಕೂತಾಗ ಬಯಕೆಯಾಗಿ ಅಕ್ಕಿಯಲ್ಲಿಇರುವ ಪುಟಾಣಿ ಮಣ್ಣಿನ ಕಪ್ಪು ಕಾಳುಗಳನ್ನು ಗೊತ್ತಾಗದಂತೆ ಆಚೀಚೆ ನೋಡಿ ಬಾಯಿಗೆ ಹಾಕಿಕೊಳ್ಳುವರು. ಅಥವಾ ನಮ್ಮ ಒಕ್ಕಲಾಗಿದ್ದ ಗಂಗಿಯಿಂದ ಗುಟ್ಟಾಗಿ ಹೊಗೆಸೊಪ್ಪು ಪಡೆದು ಸುಣ್ಣದಲ್ಲಿ ಅದನ್ನು ತಿಕ್ಕಿ ಬಾಯಲ್ಲಿ ಇಟ್ಟುಕೊಳ್ಳುವರು. ಹೀಗೆ ಕೊಂಚ ಉಬ್ಬಿದ ಕೆನ್ನೆಯಲ್ಲಿದ್ದಾಗ ಅಮ್ಮ ಬಹು ಪ್ರಸನ್ನಳು. ಅಜ್ಜಯ್ಯ ತನ್ನ ಹೊಗೆಸೊಪ್ಪನ್ನು ಮರೆತವರಂತೆ ಅಮ್ಮ ತೆಗೆದುಕೊಳ್ಳಲಿ ಎಂದು ನಾಗಂದಿಗೆಯಲ್ಲಿ ಇಡಲು ಶುರು ಮಾಡಿದ ಮೇಲೆ ಗಂಗಿಗೂ ಅದರಲ್ಲಿ ಪಾಲಿರುತ್ತ ಇತ್ತು. ಅಜ್ಜಯ್ಯನಿಗಿದ್ದ ಡಿಕಾಕ್ಷನ್ ಕಾಫಿ ಚಪಲ ತೀರಲು ಅಮ್ಮನನ್ನು ಕೇಳುವುದೇ ಬೇಡ. ಅಜ್ಜಯ್ಯನ ನಂತರ ಅದರ ಚರಟದ ಕಾಫಿ ಕುಡಿಯುವುದು ಅಮ್ಮನ ಚಟ.

* * *

ದೀಪಾವಳಿ ಹಬ್ಬದ ಜೊತೆಯೇ ಸಾವಿನ ಒಂದು ನೆನಪು. ಫರ್ಲಾಂಗಿಗೂ ಆಚೆ ಕೇಳಿಸುವಂತೆ ಹಾಕುವಾಗ ತೆಗೆಯುವಾಗ ಕಿರುಚುವ, ಬೆಳಿಗ್ಗೆ ತೆರೆದಾದ ಮೇಲೆ ರಾತ್ರೆ ಮಾತ್ರ ಮುಚ್ಚುವ ಬಾಗಿಲನ್ನು ಯಥಾಪ್ರಕಾರ ಅಜ್ಜಯ್ಯ ಮುಚ್ಚಿದ ಮೇಲೆ ಅವರ ಮಗ್ಗುಲಲ್ಲಿ ನಾನು ನಿದ್ದೆ ಹೋಗಿದ್ದೇನೆ. ನಾಳೆ ಬೆಳಿಗ್ಗೆ ದೀಪಾವಳಿಯೆಂದು ಸೂರ್ಯನಿಗಿಂತ ಮುಂಚೆ ಏಳಬೇಕು. ಎದ್ದು ಮಣೆ ಮೇಲೆ ಕೂತು ಅಮ್ಮನಿಂದ ಧೂರ್ವೆಯಲ್ಲಿ ಅಲ್ಲಿ ಇಲ್ಲಿ ಎಣ್ಣೆಮುಟ್ಟಿಸುವ ಎಣ್ಣೆ ಶಾಸ್ತ್ರ ಮಾಡಿಸಿಕೊಂಡು, ಮೈಗೆಲ್ಲ ಎಣ್ಣೆ ಬಳಿದುಕೊಂಡು, ಚಂಡುಹೂವಿನಿಂದ ಅಲಂಕೃತವಾದ ಹಂಡೆಯಿಂದ ಬಿಸಿ ಬಿಸಿ ನೀರನ್ನು ಚೊಂಬಿನ ಮೇಲೊಂದು ಚೊಂಬಿನಂತೆ ತಲೆಯ ಮೇಲೆ ಕುಕ್ಕಿಸಿಕೊಂಡು ಎರೆಸಿಕೊಳ್ಳಬೇಕು. ಇದು ನಿತ್ಯದ ಸ್ನಾನವಲ್ಲ-ಅಭ್ಯಂಜನ! ತಂಪಾದ ಮತ್ತಿಸೊಪ್ಪಿನ ನೋಳಿಗೆ ಕಣ್ಣು ಉರಿಸುವ ಸೀಗೆ ಪುಡಿಯನ್ನು ಬೆರಸಿ, ಅಳಿಸಿ, ನಗಿಸಿ, ಕುಣಿಸಿ, ಬೆವರಿಸಿ, ಕಚಕುಳಿಯಾಗುವಂತೆ ಕಂಕುಳು ತೊಡೆಸಂದಿಗಳಲ್ಲಿ ಹುಟ್ಟಿಸಿದ ಅಮ್ಮನಿಗೆ ಮುಟ್ಟಲು ಅವಕಾಶ ಮಾಡಿಕೊಡುವ ಅಭ್ಯಂಜನ ಇದು.

ಈ ಅಭ್ಯಂಜನದ ಬೆಳಗು ಈ ದಿನ ಆಗದೇ ಹೋಯಿತು. ನಡುರಾತ್ರೆಯ ನಿದ್ದೆಯನ್ನು ಅಂಗಳದಲ್ಲಿ ಜೀ ಜೀ ಎನ್ನುವ ಮೆಟ್ಟುಗಳ ಶಬ್ದ ಭಂಗಗೊಳಿಸಿತು. ಮತ್ತೆ ಬಾಗಿಲು ತಟ್ಟಿದ ಶಬ್ದ. ಅಜ್ಜಯ್ಯ ಬಾಗಿಲನ್ನು ಪ್ರಯಾಸಪಟ್ಟು ಎಳೆಯುವಾಗ ಅದು ಕಿರುಚುವ ಶಬ್ದ. ಮತ್ತೆ ಒಂದು ಕ್ಷಣ ಯಾವ ಸದ್ದೂ ಇಲ್ಲ.

ಥಟ್ಟನೇ ನಾನು ಯಾವತ್ತೂ ಮರೆಯದಹಾಗೆ ಅಜ್ಜಯ್ಯ ‘ನಾರಾಯಣ ನಾರಾಯಣ’ ಎಂದರು. ಅವರು ಕಂಗಾಲಾದಾಗ ಅವರ ಬಾಯಿಂದ ಹೊಮ್ಮಿದ ಈ ನಾರಾಯಣನೇ ಇಂದಿಗೂ ನನ್ನ ನಾರಾಯಣ.

* * *

ಎಲ್ಲೋ ದೂರದ ಹೊದಲ ಎಂಬಲ್ಲಿ ನನ್ನ ಅಮ್ಮನ ಅಣ್ಣ ನರಸಿಂಹಮಾವ ಅದೇ ವರ್ಷ ಮದುವೆಯಾದ ತನ್ನ ಹೆಂಡತಿಯ ಮನೆಯಲ್ಲಿ ಸತ್ತನೆಂಬ ಸುದ್ದಿಯನ್ನು ರಾತ್ರೋರಾತ್ರೆ ಕಾಡಿನ ದಾರಿಯಲ್ಲಿ ಉರಿಯುವ ದೊಂದಿ ಬೀಸಿಕೊಂಡು ಕಪ್ಪು ಕಂಬಳಿ ಹೊದ್ದು ಬಂದವರು ಹೇಳಿದ್ದರು.

ನರಸಿಂಹಮಾವನಿಗೆ ಹಠಹಿಡಿದು ತನಗೆ ಬೇಕಾದವರ ಮನೆಯಿಂದ ನನ್ನ ಅಜ್ಜಯ್ಯನೇ ಮಾಡಿಸಿದ ಮದುವೆಯಿದು. ಅಮ್ಮ ಅಜ್ಜಯ್ಯರ ನಡುವೆ ಕಿರಿಕಿರಿ ಪ್ರಾರಂಭವಾಯಿತು. ಮದುವೆಯಾಗದಿದ್ದರೆ ಅಣ್ಣ ಉಳಿಯುತ್ತಿದ್ದನೋ ಏನೋ? ಈ ಮಾತನ್ನು ಕೇಳೀ ಕೇಳೀ ತನ್ನ ಗಾಯಿತ್ರಿಜಪದ ಬಲದಲ್ಲೂ ಜ್ಯೋತಿಷ್ಯದ ಜ್ಞಾನದಲ್ಲೂ ಅಜ್ಜಯ್ಯನಿಗಿದ್ದ ನಂಬಿಕೆಗೆ ಆಘಾತವಾಗಿರಬಹುದೆ? ಅಮ್ಮನ ಹತ್ತಿರ ಕೇಳಿದರೆ ಮಾತ್ರ ಕಾಫಿ ಅಜ್ಜಯ್ಯನಿಗೆ ಇನ್ನು ಮುಂದೆ. ಆದರೆ ಅಜ್ಜಯ್ಯ ತಾನಾಗಿಯೇ ಕೇಳರು. ನನ್ನ ತಂದೆಯೋ? ಶಾನುಭೋಗರಲ್ಲವೆ? ಸದಾ ಸಂಚಾರಿ. ಕೇರಳದ ಕಡೆಯ ಜೋಲುವ ಬೆಂಡೋಲೆಯ ನನ್ನ ಅಜ್ಜಿ, ಅಮ್ಮನ ಅತ್ತೆ. ಎಲ್ಲ ಅತ್ತೆಯರಂತೆ ಅವರಿಗೆ ಅಮ್ಮ ಕೂತರೂ ತಪ್ಪು. ನಿಂತರೂ ತಪ್ಪು. ಅಜ್ಜಯ್ಯನಿಗೆ ಬೇಡದ ಹೆಂಡತಿ. ಸಿಡುಕಿ. ಸೋಮಾರಿ. ಅಪ್ಪನಿಗೂ ಹುಟ್ಟಿದಾಗ ಮೊಲೆಯುಣಿಸಲಿಲ್ಲವೆಂಬ ಖ್ಯಾತಿಯ ಹೆಂಗಸು. ಆದರೆ ಅವರು ಹಬ್ಬದ ದಿನಗಳಲ್ಲಿ ಮಾಡುತ್ತಿದ್ದ ಕೇರಳದ ಕಡೆಯ ಅಕ್ಕಿ ಪಾಯಸ ಮಾತ್ರ ಎಲ್ಲರಿಗೂ ಇಷ್ಟ.

ಏನಾದರೂ ಕುಶಾಲಿನ ಮಾತು ಕೇಳಬೇಕೆಂದರೆ ಹಾಳೆ ಟೋಪಿ ಹಾಕಿ ಕೈಯಲ್ಲಿ ಕತ್ತಿ ಹಿಡಿದು ನಮ್ಮ ಒಕ್ಕಲು ಗಂಗಿ ಮನೆಯ ಅಂಗಳದಲ್ಲಿ ದಾಳಿಂಬೆ ಗಿಡದ ಅಡಿ ಬಂದು ಕೂತಾಗ. ಹೊಗೆಸೊಪ್ಪು ಉಜ್ಜುತ್ತ ಗುಟ್ಟಾಗಿ ಅಮ್ಮನಿಗೂ ಒಂದಿಷ್ಟನ್ನು ದಾಟಿಸಿದಾಗ.

ಕಿರಿಕಿರಿಯಾದಾಗ ಅಜ್ಜಯ್ಯ ಸೌದೆ ತರಲೆಂದು ಕಾಡಿಗೆ ಕತ್ತಿ ಹಿಡಿದು ನಡೆದು ಬಿಡುವುದು. ಬರುವೆನೆಂದು ಹಠಹಿಡಿದು ನಾನೂ ಪುಟಾಣಿ ಹೆಜ್ಜೆಗಳಲ್ಲಿ ನೆಗೆಯುತ್ತ ಅವರ ಹಿಂದೆ ಓಡೋಡಿ ಸೇರಿಕೊಳ್ಳುವುದು. ಅಮ್ಮನಿಗೆ ನಾನು ಹೀಗೆ ಅಜ್ಜಯ್ಯನ ಜೊತೆ ಪಟ್ಟಾಂಗ ಮಾಡುತ್ತ ಅಲೆಯುವುದು ಇಷ್ಟವಾಗದೆ ಏನಾದರೂ ನೆವದಲ್ಲಿ ನಾನು ಕಾಡುಹರಟೆಯಲ್ಲಿ ಕಾಲ ಕಳೆಯುತ್ತ ಅಕ್ಷರ ತಿದ್ದುತ್ತಿಲ್ಲವೆಂದು ಅಜ್ಜಯ್ಯನ ಎದುರೇ ಬಯ್ಯುವುದು. ಒಂದು ದಿನ ಹೇಳಿಯೇ ಬಿಟ್ಟರು; ‘ಹಿರಿಯರೇ ಹೀಗೆ ದಾರಿಮಾಡಿಕೊಟ್ಟರೆ ಏನು ಗತಿ? ನನ್ನ ಮಗನೂ ಶ್ರಾದ್ಧದ ಊಟಕ್ಕೆ ಕಾದಿರುವ ಬ್ರಾಹ್ಮಣನಾಗಬೇಕೆ?’ ಎಂದು ಬಿಟ್ಟರು. ಅದು ನನ್ನ ಅಪ್ಪನ ದೂರು ಕೂಡ ಎಂಬಂತೆ.

ಇಬ್ಬರನ್ನೂ ಪ್ರೀತಿಸುತ್ತಿದ್ದ ನಾನು ಇಬ್ಬರನ್ನೂ ಮೆಚ್ಚಿಸಲೆಂದು ಕ್ರಮೇಣ ಸುಳ್ಳು ಹೇಳುವುದನ್ನು ಕಲಿತೆ.

* * *

ಈ ರಗಳೆ ರಂಪಾಟಗಳ ನಡುವೆಯೂ ಒಂದು ದಿವ್ಯವೆನ್ನಿಸುವ ನೆನಪು. ಈಗಲೂ ಹೇಳಿಕೊಳ್ಳಲು ಸಂಕೋಚವಾಗುವ, ಹೇಳುವ ಕ್ರಮದಲ್ಲಿ ಎಲ್ಲಿ ಆಯ ತಪ್ಪಿ ಹೆಚ್ಚೋ ಕಡಿಮೆಯೋ ಮಾಡಿ ಈ ಮಿಣುಕುವ, ಆಗೀಗ ಮನಸ್ಸು ಜಡಗೊಂಡಾಗ ಇಣುಕುವ, ನೆನಪನ್ನು ಅತಿಗೊಳಿಸಿಯೋ ಸಾಮಾನ್ಯಗೊಳಿಸಿಯೋ ಕಳೆದುಕೊಂಡೇನೆಂಬ ಆತಂಕ. ಈಗ ಬರೆಯಲು ಕೂತಾಗಲೂ ನಾನು ಬರೆದ ಹಿಂದಿನ ವಾಕ್ಯ ಕಾಣುವಂತೆ  ಚೆಂದವಾಯಿತೇನೋ ಎನ್ನುವ ಸಂಶಯ. ಈ ಘಟನೆಯ ಜೊತೆ ಏನೇನೋ ಹೆಣೆದು ಕಥೆಮಾಡಿಕೊಂಡು ಲೇಖಕನೆಂಬ ಕೀರ್ತಿಗೆ ಹಿಂದೆ ಒಳಗಾಗಿದ್ದರ ನೆನಪು ಕೂಡ.

ಯಾವ ಭಾಷೆಯೂ ಮಾತಿಗೆ ಅತೀತವೆನ್ನಿಸುವುದನ್ನು ಯಥಾವತ್ ಹೇಳಬೇಕೆಂಬ ಹಠವೂ, ಈ ಮೂಲಕ ತನ್ನ ಮಾತಿನ ಮೋಡಿಯಿಂದ ಇನ್ನೊಂದು ಮನಸ್ಸನ್ನು ಗೆಲ್ಲಬೇಕೆಂಬುದೂ ತನ್ನ ಭಾವಲೋಕದ ಅನುರಕ್ತಿಯನ್ನೇ ಅಧಿಕಾರ ಮಾಡಿಕೊಳ್ಳುವ ಅಹಮಿಕೆಯೇನೊ! ಸಿಕ್ಕ ಅವಕಾಶವನ್ನು ಬಿಟ್ಟುಕೊಡದೆ ಬಳಸಿಕೊಳ್ಳುವ ಉಪಾಯಗಳ ಶೋಧ ಸದಾ ಬರಹಗಾರನ ಒಳ ಮನಸ್ಸಿನಲ್ಲಿ ಹೊಂಚುತ್ತ ಇರುತ್ತದೇನೊ? ಮೈಮರೆಯಲಾರದವನು ಮೈಮರೆತವನಂತೆ ಕಾಣುವ ಬೆಡಗು ಇದೇನೊ!

ಮಾವ ಸತ್ತ ಮಾರನೇ ವರ್ಷದ ದೀಪಾವಳಿ. ಮನೆಯಲ್ಲೊಂದು ಮಗುವಿದೆಯಲ್ಲವೆ ಎಂದು ಬಚ್ಚಲಿನ ಹಂಡೆಗೂ ಹೆಬ್ಬಾಗಿಲಿನ ಹೊಸಲಿಗೂ ಶೃಂಗಾರ. ನನ್ನನ್ನು ಬಿಟ್ಟರೆ ಮಾವ ಸತ್ತ ಶೋಕದಲ್ಲಿ ಇನ್ನು ಯಾರೂ ಎರೆದುಕೊಳ್ಳರು. ಆರತಿ ಎತ್ತಿ ಎಣ್ಣೆ ಶಾಸ್ತ್ರಮುಗಿಸಿ ಬಚ್ಚಲೊಲೆಯ ಧಗಧಗಿಸುವ ಬೆಂಕಿ ಎದುರು ಎಣ್ಣೆಹಚ್ಚಿದ ಮೈಯನ್ನು ಕಾಯಿಸಿಕೊಳ್ಳಲು, ಹೀಗೆ ಕೊಂಚ ಹೊತ್ತು ಎಣ್ಣೆಹೀರಲು ಅಪರೂಪಕ್ಕೆ ಬೆಂಕಿ ಎದುರು ಬಿಟ್ಟು ಅಮ್ಮ ನನ್ನನ್ನು ಎರೆದರು. ಹಂಡೆಗೆ ಹತ್ತಿದ ಕರಿಯನ್ನು ಬೆರಳಿನಲ್ಲಿ ತೆಗೆದು ದೃಷ್ಟಿಯಾಗದಿರಲಿ ಎಂದು ನನ್ನ ಹಣೆಗೆ ಹಚ್ಚಿದರು. ಅಮ್ಮನ ಪ್ರಕಾರ ಹಕ್ಕಿಗಳ ಕಣ್ಣಿಗೆ ಬಿದ್ದೂ ಮಕ್ಕಳಿಗೆ ದೃಷ್ಟಿಯಾಬಹುದಂತೆ.

ನನಗಿನ್ನೂ ಚೌಲವಾಗದೇ ಇದ್ದುದರಿಂದ ಹುಡುಗಿಯರ ಉದ್ದ ಕೂದಲು ನನಗೆ ಇತ್ತು. ಅಮ್ಮ ನನಗೆ ಜಡೆ ಹೆಣೆದು ರಂಜದ ಹೂ ಮುಡಿಸಿ ಗಂಗಿಗೆ ತೋರಿಸಿ ನಗೆಯಾಡುವುದೂ ಇತ್ತು. ಗಂಗಿ ನನಗೆ ತನ್ನದೃಷ್ಟಿಯಾಗದಿರಲಿ ಎಂದು ಬೆರಳುಗಳನ್ನು ತಲೆಗೆ ಗಟ್ಟಿಯಾಗಿ ಮಡಚಿ ಲಟಿಕೆ ತೆಗೆಯುತ್ತಿದ್ದಳು.

ಎರೆದಾದ ಮೇಲೆ ನೀರು ಹೀರಲೆಂದು ಪಾಣಿಪಂಚೆಯನ್ನು ತಲೆ ಸುತ್ತಿ, ಬೆಳ್ಳಿಯ ಉಡುದಾರಕ್ಕೆ ಲಂಗೋಟಿ ಹಾಕಿ ‘ಕಂಬಳಿ ಹೊದ್ದು ಮಲಗಿಕೋ. ಚೆನ್ನಾಗಿ ಮೈ ಬೆವರಲಿ’ ಎಂದರು ಅಮ್ಮ. ನಾನು ಅವರ ಮಾತು ಕೇಳುವವನೆ? ಓಡೋಡಿ ಸೂರ್ಯ ಹುಟ್ಟುವುದನ್ನು ನೋಡಲೆಂದು ಅಂಗಳಕ್ಕೆ ಬಂದೆ.

ಸೂರ್ಯ ಹುಟ್ಟಿ ದೂರದ ಬೆಟ್ಟದಿಂದ ಕಾಣಿಸಿಕೊಳ್ಳುವ ಡವಗುಡುವ ನಿರೀಕ್ಷೆಯ ಮೌನ. ಆಕಾಶಕ್ಕೆ ನನ್ನ ಮುಖ ಎತ್ತಿದ ನೆನಪು. ಆಗ ಕಂಡದ್ದೇನು? ಹಾರುವ ಬೆಳಕಿನ ಎರಡು ಪುಂಜಗಳೆ? ಒಂದರ ಪಕ್ಕ ಇನ್ನೊಂದು- ಅವು ಹಕ್ಕಿಗಳೆ? ಉಜ್ವಲ ಮುಖದವು ಕೇವಲ ಹಕ್ಕಿಗಳೆ? ಅಜ್ಜಯ್ಯ ವರ್ಣಿಸುತ್ತಿದ್ದ ಅಶ್ವಿನೀ ದೇವತೆಗಳೆ?

ಅಮ್ಮನನ್ನೂ ಅಜ್ಜಯ್ಯನನ್ನೂ ಕೂಗಿ ಕರೆದು ತೋರಿಸಿದೆ. ನನಗೆ ಕಂಡದ್ದು ಅವರಿಗೆ ಯಾಕೆ ಕಾಣಿಸಲಿಲ್ಲ? ನಾನೂ ಕೂಗಿದ ಪರಿಗೆ ಚಕಿತರಾಗಿದ್ದ ಅಮ್ಮ ಅಜ್ಜಯ್ಯರು ‘ಸೀತ ಆದೀತು. ತಲೆಯಿನ್ನೂ ಆರಿಲ್ಲ. ಒಳಗೆ ನಡಿ’ ಎಂದು ಗದರಿಸಿದರು.

ಏನನ್ನು ಕಂಡೆನೋ, ಕಂಡದ್ದನ್ನು ಏನೆಂದು ಆಗ ಭಾವಿಸಿಕೊಂಡವನು ನೆನಪಿನಲ್ಲಿ ಅದನ್ನು ಉಜ್ವಲಗೊಳಿಸಿಕೊಳ್ಳುತ್ತ ಹೋದೆನೋ, ಮತ್ತೆ ಮತ್ತೆ ನನ್ನ ಜೀವ ಒಣಗುವ ಕ್ಷಣಗಳಲ್ಲಿ ಉಜ್ವಲಗೊಳಿಸಿಕೊಂಡದ್ದನ್ನು ಹೀಗೆ ಅಲೌಕಿಕಗೊಳಿಸಿಕೊಂಡೆನೋ…. ತಿಳಿಯದು.

* * *

ಕಾಡುಕೊಂಪೆಯಲ್ಲಿದ್ದ ನಾಡು ಹೆಂಚಿನ ಮಳೆಗಾಲದಲ್ಲಿ ಸೋರುವ ಈ ಮನೆಯ ನೆನಪಿಗೆ ಹತ್ತಿಕೊಂಡೇ ಹುಲಿಯ ನೆನಪು ನನಗೆ. ಕಾಡಿನಲ್ಲಿ ಕೊಟ್ಟಿಗೆ ಸೇರದ ದನ ಹುಡುಕಿಕೊಂಡೇ ಸದಾ ಉರಿಯುವ ಬಚ್ಚಲೊಲೆಯ ಸೌದೆಗಾಗಿಯೋ ಅಜ್ಜಯ್ಯನ ಜೊತೆ ಅವರ ಕೇರಳದ ದಿನಗಳ ಕಥೆಗಳನ್ನು ಕೇಳಿಸಿಕೊಳ್ಳುತ್ತ ನಡೆಯುವಾಗ ಇಗೋ ಎಂದು ಬಗ್ಗಿ ಹುಲಿ ನಡೆದಾಡಿದ ಹೆಜ್ಜೆಯನ್ನು ಅವರು ತೋರಿಸುವುದಿತ್ತು. ಒಂದೊಂದು ರಾತ್ರೆ ಕೊಟ್ಟಿಗೆಯಲ್ಲಿ ಮಲಗಿದ ದನಗಳು ಎದ್ದು ನಿಂತು ನಡುಗುವಾಗ ಅವುಗಳ ಕೊರಳಿಗೆ ಕಟ್ಟಿದ ಗಂಟೆಗಳು ಸದ್ದು ಮಾಡತೊಡಗಿ ಅಮ್ಮನಿಗೂ ಅಜ್ಜಯ್ಯನಿಗೂ ಎಚ್ಚರವಾಗುತ್ತಿತ್ತು. ನನ್ನ ಅಪ್ಪ ಮನೆಯಲ್ಲಿ ಇಲ್ಲದಿದ್ದರೆ ಅಜ್ಜಯ್ಯ ಲಾಟೀನುಹಿಡಿದು ಹೊರಹೋಗಿ ಕೊಟ್ಟಿಗೆಯ ಬಾಗಿಲುಗಳನ್ನು ಭದ್ರಮಾಡಿ, ದನಗಳಿಗೆ ಸಮಾಧಾನ ಹೇಳಿ, ಮನೆಯಬಾಗಿಲು ಹಾಕಿ ನಿದ್ದೆಮಾಡದೆ ಕೂತಿರುತ್ತಿದ್ದೆವು. ಮೊದಲು ದನಗಳಿಗೆ ಕೇಳಿದ ಹುಲಿಯ ಘರ್ಜನೆ ಕ್ರಮೇಣ ನಮಗೂ ಕೇಳುತ್ತಿತ್ತು. ಅಜ್ಜಯ್ಯ ಭಯನಿವಾರಣೆಗೆಂದು ನನ್ನಿಂದ ಅರ್ಜುನ ನಾಮಸ್ಮರಣೆ ಮಾಡಿಸುತ್ತ ಇದ್ದರು: ಅರ್ಜುನ ಫಾಲ್ಗುಣೋ ಪಾರ್ಥ ಕಿರೀಟೀ ಶ್ವೇತವಾಹನಃ.

* * *

ಈ ಮನೆಯಲ್ಲಿ ನಾನಾದ ಮೇಲೆ ನನಗೊಬ್ಬ ತಮ್ಮ ಹುಟ್ಟಿದ. ದಿನ ತುಂಬುದಕ್ಕಿಂತ ಮುಂಚೆ ಹುಟ್ಟಿದವನು ಈ ವೆಂಕಟೇಶ. ಸಣಕಲ, ಆದರೆ ಹೊಟ್ಟಬಾಕ. ತಿಂದದ್ದು ಮಾತ್ರ ಮೈಗೆ ಹತ್ತುತ್ತಿರಲಿಲ್ಲ. ವಿನಾಕಾರಣ ಬೆಚ್ಚುತ್ತಿದ್ದ ವೆಂಕಟೇಶನನ್ನು ನಮ್ಮ ಕೊಂಪೆ ಮನೆಗೂ ಕರಡಿ ಆಡಿಲು ಬಂದವನೊಬ್ಬನಿಗೆ ಕೊಟ್ಟು ಚೀರುತ್ತಿದ್ದ ಎಳೆಯನನ್ನು ಕರಡಿಯ ಮೇಲೆ ಕೂರಿಸಿ ಅವನಿಗೆ ಅದರಿಂದ ಖುಷಿಯಾಗುವಷ್ಟು ಕಾಲ ಸುತ್ತಿಸಿದ್ದರು. ನನಗೂ ಆಮೇಲೆ ಕರಡಿ ಸವಾರಿಯಾಗಿತ್ತು.

ಮೈಗೆ ಹತ್ತದಂತೆ ತಿನ್ನುವ ಅವನ ಹೊಟ್ಟೆಬಾಕತನವನ್ನು ಗುಣಪಡಿಸಿದ್ದು ರಾವು ಬಿಡಿಸುವ ಮೂಲಕ. ರಾವು ಬಿಡಿಸುವುದು ಎಂದರೆ ಎಲ್ಲರ ಜೊತೆ ಅವನನ್ನು ಊಟಕ್ಕೆ, ವಿಶೇಷವಾಗಿ ಒಂದು ಮಣೆಯ ಮೇಲೆ, ಅವನೊಬ್ಬ ವಿಶೇಷ ಅತಿಥಿ ಎಂಬಂತೆ ಕೂರಿಸಿದ್ದಾಯಿತು. ಅವನೆದುರು ದೊಡ್ಡದೊಂದು ಕುಡಿಬಾಳೆ ಎಲೆಯ ಸುತ್ತ ರಂಗೋಲಿ ಹಾಕಿ ಅವನಿಗೆ ಪ್ರಿಯವಾದದ್ದನ್ನು ಬಡಿಸಿದ್ದಾಯಿತು. ಅವನು ತಿಂದ, ತಿಂದ, ತಿಂದ, ತಿನ್ನುತ್ತಲೇ ಇದ್ದ ಎಂಬುದನ್ನು ಅವನ ಹೊಟ್ಟೆಯಲ್ಲಿ ಅಡಗಿರುವ ಅಗ್ನಿಗೆ ನಾವು ಹಾಕುತ್ತಿರುವ ಹವಿಸ್ಸು ಎನ್ನುವಂತೆ, ಅಂದರೆ ಹಾಗೆ ತಿನ್ನುವ ಅವನ ಹಸಿವು ಅವನಿಗೆ ದೃಷ್ಟಿಯಾಗದಂತೆ, ಭಾವಿಸುತ್ತ ಅಮ್ಮ ಬಡಿಸುತ್ತಲೇ ಹೋದರು. ಇನ್ನು ತಿನ್ನಲಾರೆ ಎಂದು ವೆಂಕಟೇಶ ಗೋಗರೆದರೂ ಕೇಳದೆ ಇನ್ನಷ್ಟು ಇನ್ನಷ್ಟು ಇನ್ನೊಂದು ಚೂರು ಮಾತ್ರ ಎಂದು ಅವನ ಒಳಗಿನ ಅಗ್ನಿಯನ್ನು ಒತ್ತಾಯಿಸಿದ್ದಾಯಿತು. ಎಲ್ಲರ ಊಟ ಮುಗಿದಮೇಲೂ ನಡೆಸಿದ ರಾವು ಬಿಡಿಸುವ ಈ ನಮ್ಮ ಆಹುತಿಯಿಂದ ಸುಸ್ತಾಗಿ ವೆಂಕಟೇಶ ಬೆವರಿ ಅಳಲು ಶುರುಮಾಡಿದ. ಅಂದಿನಿಂದ ಅವನ ರಾವು ಬಿಟ್ಟಿತು.

ವೆಂಕಟೇಶ ಸಾವಿನ ಸನ್ನಿಧಿಯಲ್ಲಿ ಯಾವತ್ತೂ ನಮ್ಮನ್ನು ಇರುವಂತೆ ಮಾಡಿದ್ದ. ಇದ್ದಕ್ಕಿದ್ದಂತೆ ಮೂರ್ಛೆ ಬೀಳುವನು. ಅವನು ವಿಲವಿಲ ಒದ್ದಾಡುವುದು ನೋಡಿದರೆ ಭಯವಾಗುವುದು. ಅಮ್ಮ ಅವನ ಕೈಯಲ್ಲಿ ಕಬ್ಬಿಣದ ಬೀಗದ ಕೈ ಕೊಟ್ಟು ಕಾಯುವಳು. ತಣ್ಣೀರನ್ನು ಅವನ ಮೈಮೇಲೆ ಎರಚುವಳು. ಅವನು ಕ್ರಮೇಣ ಎಚ್ಚರವಾಗಿ ಏನೂ ಆಗದಿದ್ದವನಂತೆ ಎದ್ದು ಕೂರವನು.

ಒಮ್ಮೆ ಮೂರ್ಛೆಹೋದವನು ಎಚ್ಚರಾಗಲೇ ಇಲ್ಲ. ನಮ್ಮ ಕೊಂಪೆಮನೆಯಿಂದ ಕಾಡಿದಾರಿಯಲ್ಲಿ ಹೋದರೆ ಒಂದು ಹಳ್ಳಿ ಪೋಸ್ಟ್ ಆಫೀಸು. ಅಲ್ಲೊಬ್ಬರು ವೆಂಕಟೇಶಯ್ಯ ಎಂಬ ಹೆಸರಿನ ಪೋಸ್ಟ್ ಮಾಸ್ಟರ್. ನಮ್ಮ ಕೊಂಪೆಗೆ ಜಗತ್ತಿನ ಸಂಪರ್ಕವನ್ನು ದಿನಕ್ಕೊಮ್ಮೆ ತರುವ ಬಸ್ಸಿನಲ್ಲಿ ಸರ್ಕಾರ ತಲುಪಿಸುವ ಪೋಸ್ಟ್ ಬ್ಯಾಗನ್ನು ಅದರ ಮೇಲಿನ ಸರ್ಕಾರದ ಅಧಿಕೃತತೆಯ ಅರಗಿನ ಸೀಲನ್ನು ಪರೀಕ್ಷಿಸಿ, ಒಡೆದು, ಚೀಲ ಬಿಚ್ಚಿ ಅದರಿಂದ ಕಾಗದಗಳನ್ನು ತೆಗೆದು ಜೋಡಿಸಿ, ತಲುಪಿದ ದಿನದ ಮುದ್ರೆ ಹಾಕಿ, ಕಾದಿರುವ ಹಳ್ಳಿಯವರಿಗೆ ಹಂಚುವುದು ಇವರ ಕೆಲಸ; ಓದಲು ಬಾರದವರಿಗೆ ಎಂತ ಮೋಡಿ ಬರವಣಿಗೆಯನ್ನಾದರೂ ಕಣ್ಣುಗಳನ್ನು ಕಿರಿದುಮಾಡಿ ನೆಟ್ಟಿ ನೋಡುತ್ತ ಓದಿಹೇಳುವುದು ಇವರ ಕಾಯಕ, ಎರಡೂ ನಮಗೆ ಗಹನವಾದ ಬೆರಗಿನದು. ತೇಜಸ್ವಿಯವರ ಕಥೆಯಲ್ಲಿ ಬರುವಂತಹ ಪೋಸ್ಟ್  ಆಫೀಸು ಇದು. ಆದರೆ ಅದರ ಮಾಸ್ಟರ್ ಮಾತ್ರ ಆಧುನಿಕ ತೆವಲು ಬೆರಗಿನವರಲ್ಲ; ಜಮೀನುದಾರರಾದ, ದುಡಿಮೆಯ ಅಗತ್ಯವಿಲ್ಲದ, ಮನೆಯಲ್ಲಿ ಜನಕೂಡಿದಾಗ ಭಾರತ ಓದುವ ಒಬ್ಬ ಸದ್ಗೃಹಸ್ಥ. ಈ ವೆಂಕಟೇಶಯ್ಯನವರನ್ನು ನನ್ನ ತಂದೆಯವರು ಹೋಗಿ ಕರೆದುಕೊಂಡು ಬಂದರು. ಸಾವನ್ನ ಗೆಲ್ಲುವ ಮೃತ್ಯುಂಜಯ ಜಪಮಾಡುವುದರಲ್ಲಿ ಇವರು ಪ್ರಸಿದ್ಧರು.

ವೆಂಕಟೇಶಯ್ಯ ಮನೆಗೆ ಬಂದವರು ಒಂದೂ ಮಾತಾಡದೆ, ತಣ್ಣೀರು ಸ್ನಾನ ಮಾಡಿ, ಒದ್ದೆ ಪಾಣಿಪಂಚೆಯುಟ್ಟು, ನಡುಮನೆಯ ಬಾಗಿಲಿನ ಎದುರು ಯಮನನ್ನು ಅಡ್ಡಕಟ್ಟಿ ನಿಲ್ಲಿಸುವಂತೆ ಮಣೆಯ ಮೇಲೆ ಕೂತು ಆಚಮನ ಮಾಡಿ, ತಮ್ಮ ತೊಡೆಯ ಮೇಲೆ ಎಚ್ಚರತಪ್ಪಿದ ವೆಂಕಟೇಶನನ್ನು ಮಲಗಿಸಿಕೊಂಡು ಕಣ್ಣು ಮುಚ್ಚಿ ಮೃತ್ಯುವನ್ನು ಗೆಲ್ಲುವ ಜಪವನ್ನು ಶುರುಂಆಡಿದರು. ಎದುರು ಉರಿಯುವ ನಂದಾದೀಪಕ್ಕೆ ತೈಲ ತೀರದಂತೆ ಅಮ್ಮ ಕಾದಿದ್ದು ಗಿಂಡಿಯಿಂದ ಹಸುವಿನ ತುಪ್ಪವನ್ನು ಸುರಿಯುತ್ತ ಕೂತರು. ಅಜ್ಜಯ್ಯ ಇನ್ನೊಂದೆಡೆ ಗಾಯಿತ್ರಿ ಜಪ ಮಾಡುತ್ತ ಕೂತರು. ಅಪ್ಪ ಮನೆಯ ಅಂಗಳದಲ್ಲಿ ಅತ್ತಿಂದಿತ್ತಿ ಓಡಾಡುತ್ತಲೇ ಇದ್ದರು.

ವೆಂಕಟೇಶಯ್ಯನವರು ನನ್ನ ತಮ್ಮನ ಮುಚ್ಚಿದ ಕಣ್ಣು ಬಿಚ್ಚುವ ತನಕ ತಮ್ಮ ಕಣ್ಣನ್ನೂ ಬಿಚ್ಚಲಿಲ್ಲ. ಅಂಚೆ ಚೀಲವನ್ನು ತರುವ ಬಸ್ಸು ಬಂದಿತು. ಹೋಯಿತು. ಘನ ಸರ್ಕಾರದ ಎಗ್ಗೇ ಅವರಿಗೆ ಇರಲಿಲ್ಲ. ಈ ಕಾರಣವಾಗಿ ಅವರು ತಮ್ಮ ಪೋಸ್ಟ್ ಆಫೀಸಿನ ಕೆಲಸ ಕಳೆದುಕೊಂರೆಂದು ಕೇಳಿದ್ದೇನೆ.

ಅವರ ಜಪವಾಗುತ್ತಿದ್ದಂತೆ, ಅವರೇ ಕಣ್ಣುಸನ್ನೆ ಮಾಡಿ ಅಮ್ಮನಿಂದ ಬಳೆ ಓಡುಗಳನ್ನು ನಂದಾದೀಪದಲ್ಲಿ ಕಾಯಿಸಿ ಪಡೆದು, ಕ್ಷಣ ಕಣ್ಣುತೆರೆದು, ಬಳೆಯ ಕಾಯ್ದ ತುದಿಯಿಂದ ಎಚ್ಚರತಪ್ಪಿದ ನನ್ನ ತಮ್ಮನ ಹೊಟ್ಟೆಯಮೇಲೆ ಚುಟಿಕೆ ಹಾಕುತ್ತ ಇದ್ದರು. ಹತ್ತಾರು ಚುಟಿಕೆ ಹಾಕಿದರೂ ಸುಟ್ಟ ಜಾಗದಲ್ಲಿ ಗುಳ್ಳೆಗಳು ಏಳುತ್ತ ಇದ್ದವೇ ಹೊರತು ನನ್ನ ತಮ್ಮ ಕಣ್ಣು ಬಿಡಲೇ ಇಲ್ಲ. ಕೋಣನ ಮೇಲೆ ಕಿರೀಟಧಾರಣೆ ಮಾಡಿ ಕೂತು ಕಾಯುತ್ತಿದ್ದ ಯಮಧರ್ಮರಾಯ ಹೊಸಿಲು ದಾಟಲೂ ಇಲ್ಲ.

ಅನಂತಕಾಲದಲ್ಲಿ ಜರುಗುತ್ತಿದೆಯೆಂದು ಭಾಸವಾಗುವ ಯಮನನ್ನು ಗೆಲ್ಲುವ ಈ ವಿಧಿಮುಗಿದದ್ದು ನನ್ನ ತಮ್ಮ ಕಣ್ಣುಗಳನ್ನು ತೆರೆದ ಮೇಲೆ. ವೆಂಕಟೇಶಯ್ಯ ಆಚಮನ ಮಾಡಿ ಎದ್ದರು. ಬಿಚ್ಚಿಟ್ಟ ಅವರ ಮೈಲಿಗೆಯ ಶುಭ್ರ ಪಂಚೆಯನ್ನು ಕಚ್ಚೆಹಾಕಿ ಉಟ್ಟು, ಚಿನ್ನದ ಗುಂಡಿಗಳನ್ನು ತೂತುಗಳಲ್ಲಿ ತೂರಿಸಿ ಕಂಠದ ತನಕ ಮುಚ್ಚುವ ಅವರ ಅಂಗಿಯನ್ನು ಧರಿಸಿ, ಮತ್ತೆ ವೇಷಾಂತರಗೊಂಡು ಲೌಕಿಕರಾಗಿ ಚಾವಡಿಯಲ್ಲಿ ಕೂತವರನ್ನು ಅಮ್ಮ ಅವಲಕ್ಕಿ ಉಪ್ಪಿಟ್ಟು ಕಾಫಿ ಕೊಟ್ಟು ಉಪಚರಿಸಿರು. ಹಸಿದಿದ್ದ ಪುಣ್ಯಾತ್ಮ ತನ್ನ ಮಗುವನ್ನು ಉಳಿಸಿ ತಾನು ಕೊಟ್ಟ ಫಲಾಹಾರವನ್ನು ಸ್ವೀಕರಿಸುವುದನ್ನು ಅಮ್ಮ ಕೃತಜ್ಞತೆಯಿಂದ ನೋಡುತ್ತ ಬಾಗಿಲಿಗೊರಗಿ ನಿಂತಳು. ನನ್ನ ತಮ್ಮ ಹಾಲು ಕುಡಿದು ಚಿಗುರಿಕೊಂಡ.

ಈ ನನ್ನ ತಮ್ಮನಿಗೆ ಎಡಗೈಮುಂದು. ನಾನು ಹೋದ ಮಾಧ್ಯಮಿಕ ಶಾಲೆಗೆ ಇವನೂ ಹೋದದ್ದು; ಅಲ್ಲಿ ಇವನುಸಹಪಾಠಿಗಳ ಹೀರೋ. ಕುಣಿಸುವಷ್ಟು ಖಾರದ ಜೀರಿಗೆ ಮೆಣಸಿನ ಕಾಯಿಯನ್ನು ಇವನು ಖುಷಿಯಾಗಿ ಜಗಿದು ತಿನ್ನುವುದೊಂದು ಬೆರಗು ಹುಟ್ಟಿಸುವ ಮ್ಯಾಜಿಕ್ ಶೋ ಆಗಿರುತ್ತಿತ್ತು. ಇವನಿಗೆ ಸ್ನೇಹಿತರಲ್ಲದವರು ಊರಲ್ಲಿಯೇ ಇರಲಿಲ್ಲ.

ನನ್ನ ತಂದೆಯೋ-ಅವರ ಹಲವು ವೇಷಾಂತರಗಳಲ್ಲಿ ಈಗ ಶಾನುಭೋಗಿಕೆ ಬಿಟ್ಟು ತೀರ್ಥಹಳ್ಳಿ ಪೇಟೆ ಸೇರಿ ಮಠವೊಂದರ ಏಜೆಂಟ್ ಆದವರು- ತಮ್ಮ ಶೋಕಿಗಾಗಿ ಒಂದು ಡಬ್ಬಿ ಕ್ಯಾಮರಾ ಕೊಂಡಿದ್ದರು. ವೆಂಕಟೇಶ ಇದರಿಂದ ಫೋಟೋ ತೆಗೆಯುವುದು ಮಾತ್ರವಲ್ಲದೆ ಫೋಟೋ ರೀಲನ್ನು ಶಾಸ್ತ್ರೋಕ್ತವಾಗಿ ಡಾರ್ಕ್ ರೂಮಿನಲ್ಲಿ ತೊಳೆದು ಪ್ರಿಂಟ್ ಮಾಡುವುದನ್ನೂ ಕಲಿತಿದ್ದ.

ಸದಾ ಇನ್ನೇನಾದರೂ ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತಿದ್ದ ಲಕ್ಷಾಧಿಪತಿಯಾಗಬೇಕೆಂದು ಆ ಕಾಲದ ಕ್ರಾಸ್ ವರ್ಡ್ ಪಸಲ್‌ಗಳನ್ನು ಭರ್ತಿಮಾಡಿ ಇಡೀ ತಿಂಗಳು ತನ್ನ ಗೆಲುವಿಗಾಗಿ ಕಾಯುತ್ತಿದ್ದ, ಕೊಂಪೆಯಲ್ಲಿ ಶಾಪಗ್ರಸ್ತ ಅಜ್ಞಾತವಾಸಿಯಂತಿದ್ದ ನನ್ನ ಅಪ್ಪ ಕೇವಲ ಶಾನುಭೋಗರಾಗಿದ್ದಾಗಲೂ ಮುಖ ಕ್ಷೌರವನ್ನು ತಾವೇ ಮಾಡಿಕೊಳ್ಳುತ್ತಿದ್ದವರು. ವ್ಯಾಲೆಟ್ ಬ್ಲೇಡನ್ನು ಒಂದು ಚರ್ಮದ ಉದ್ದನೆಯ ಬೆಲ್ಟಿಗೆ ಜೋಡಿಸಿ, ಕಾಲಿನ ಬೆರಳಿನಲ್ಲಿ ಅದರ ಒಂದು ತುದಿಯನ್ನು ಸಿಕ್ಕಿಸಿ, ಎಡಗೈನಲ್ಲಿ ಅದರ ಇನ್ನೊಂದು ತುದಿ ಹಿಡಿದು ಬ್ಲೇಡನ್ನು ಬೆಲ್ಟಿನ ಒಳಕ್ಕೆ ತೂರಿಸಿ ಮೇಲೆ ಮೇಲಕ್ಕೂ ಕೆಳ ಕೆಳಕ್ಕೂ ಪಟಾ ಪಟಾ ಹಲವು ಸಾರಿ ಚಲಿಸಿ ಅದು ಹರಿತವಾಗುವಂತೆ ಮಾಡಿ ಬ್ರಷ್ಷಿನಲ್ಲಿ ಮುಖದ ತುಂಬ ಸೋಪಿನ ನೊರೆ ಮಾಡಿಕೊಂಡು ಕನ್ನಡಿ ಎದುರು ಕೂತು ಇವರು ಮಾಡಿಕೊಳ್ಳುವ ಕ್ಷೌರವನ್ನು ನೋಡಲೆಂದೇ ಅಕ್ಕಪಕ್ಕದ ಹಳ್ಳಿಯವರು ಬರುತ್ತಿದ್ದರು. ಅಪ್ಪ ಕಾಶಿಯಲ್ಲೂ ಆಮೇಲೆ ದೆಹಲಿಯಲ್ಲೂ ಇದ್ದು ಏನೇನೋ ಮಾಡಿ, ಶೀಘ್ರಕೋಪಿಯಾದ್ದರಿಂದ ಯಾರ ಸೇವೆಯನ್ನೂ ಬಹುಕಾಲ ಮಾಡದವರಾಗಿ ಕೊಂಪೆ ಸೇರಿದ್ದರು. ಬಾಲ್ಯದಲ್ಲಿ ಯಾವ ಶಾಲೆಗೂ ಹೋಗದೆ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದ ಇವರು ಅಜ್ಜಯ್ಯನಿಗೆ ಗೊತ್ತಾಗದಂತೆ ಖಾಸಗಿಯಾಗಿ ಕಲಿತು ಲಂಡನ್ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಮುಗಿಸಿದ್ದರು. ಲೌಕಿಕವನ್ನೂ ವೈದಿಕವನ್ನೂ ಕ್ರಾಪುತಲೆಯಲ್ಲಿ ಇಣುಕುವ ಜುಟ್ಟು ಮಾಡಿಕೊಂಡ, ಸಿಗರೇಟನ್ನುಮುಷ್ಟಿಯಲ್ಲಿ ಹಿಡಿದು ದಮ್ಮೆಳೆಯುವ ಇವರ ಸಾಹಸ ಜೀವನವನ್ನು ಮತ್ತೆ ಬರೆಯುವುದಿದೆ.

ನಾನು ಮುಂದೆ ಓದಲು ಹೋದೆ. ಆದರೆ ನನ್ನ ತಂದೆಗೆ ನನ್ನ ತಮ್ಮನನ್ನು ಕಾಲೇಜಲ್ಲಿ ಓದಿಸಲು ಆಗಲಿಲ್ಲ. ಬಲು ಬುದ್ಧಿವಂತನಾದ ವೆಂಕಟೇಶನನ್ನು, ನಾನು, ಹಾಸನದಲ್ಲಿ ಕಾಲೇಜಿನಲ್ಲಿ ಉಪನ್ಯಾಸಕನಾದ ಮೇಲೆ ಎಂಜಿನಿಯರ ಡಿಪ್ಲೊಮಾ ಮಾಡಿಸಿದೆ. ಎಷ್ಟು ಬುದ್ಧಿವಂತ ಅವನೆಂದರೆ ಡಿಪ್ಲೊಮಾ ಮುಗಿಯುತ್ತಿದ್ದಂತೆ ಇವನು AMIE ಎಂಬ ಕಷ್ಟದ ಎಂಜಿನಿಯರಿಂಗ್ ಪರೀಕ್ಷೆಗೆ ತಾನೂ ಕೂರುವುದು ಮಾತ್ರವಲ್ಲದೆ ಅವನ ಸಹಪಾಠಿಗಳಿಗೂ ಅದನ್ನು ಕಲಿಸಲು ಶುರುಮಾಡಿದ.

ನಾನೂ ಅವನೂ ಕೂಡಿ ನಮ್ಮ ಮನೆಯಲ್ಲಿನ ಧಾರಾಳದಿಂದಾಗಿಯೂ, ನಮ್ಮ ಅಪ್ಪನ ಸಾಹಸಗಳಿಂದಾಗಿಯೂ ನಮಗೆ ಒದಗಿದ್ದ ಬಡತನವನ್ನು ನೀಗಿಸುವ ಸಂಕಲ್ಪ ಮಾಡಿದ್ದೆವು. ಮೊದಲನೆಯದಾಗಿ ನಮಗಿದ್ದ ಒಬ್ಬಳೇ ತಂಗಿಯ ಮದುವೆ ಮಾಡುವುದಿತ್ತು. ಈ ನಡುವೆಯೇ ಸಮಾಜವಾದಿಯಾಗಿ, ನನ್ನ ಅಪ್ಪನನ್ನೂ ಸಮಾಜವಾದಿ ಮಾಡಿ ಜಾತಿಹೊರಗೆ ಮದುವೆಯಾಗಲೇ ಬೇಕಾಗುವಂತೆ ಕೇವಲ ಹದಿನೇಳು ವಯಸ್ಸಿನ ವಿದ್ಯಾರ್ಥಿನಿಯೊಬ್ಬಳ ಜೊತೆ ಪ್ರೇಮವಾಗುವ ಸಖ್ಯಬೆಳೆಸಿ ಕೊಂಚ ಅಪರಾಧಿ ಭಾವನೆಯಲ್ಲಿ ನಾನು ಸಂಕಟ ಮತ್ತು ಉಮೇದುಗಳ ಗಂಟಾಗತೊಡಗಿದ್ದೆ.

ಇವೆಲ್ಲವೂ ಗೊತ್ತಿದ್ದ ವೆಂಕಟೇಶ ಕೇರಳಕ್ಕೆ ಕೆಲಸದ ಮೇಲೆ ಹೋದ-ಮೊದಲು ಟ್ರೈನಿಂಗಿಗಾಗಿ. ನನ್ನ ಸಾಹಸಿ ಅಜ್ಜನಿದ್ದ ಕೊಚ್ಚಿಯಲ್ಲೇ ಕೆಲಸ ಹಿಡಿದ. ಒಂದು ದಿನ ತನಗೆ ಇನ್ನೂ ಹೆಚ್ಚು ಸಂಬಳದ ಕೆಲಸ ಕಲ್ಕತ್ತದಲ್ಲಿ ಸಿಗಬಹುದೆಂದೂ, ಆಗ ಕಲ್ಕತ್ತಕ್ಕೆ ಹೋಗಲು ಹಣ ಬೇಕಾಗಬಹುದೆಂದೂ, ಈ ಕುರಿತು ಅವನು ಕಳುಹಿಸುವ ಟೆಲಿಗ್ರಾಂ ಸಿಕ್ಕಿದ್ದೇ ನಾನು ಟೆಲಿಗ್ರಾಂ ಮನಿಯಾರ್ಡರ್ ಮಾಡಬೇಕೆಂದೂ ಹೇಳಿದ್ದ. ಆ ದಿನಗಳಲ್ಲಿ ಟೆಲಿಫೋನೆಂಬುದನ್ನು ನಾನು ಕೈಯಲ್ಲಿ ಹಿಡಿದದ್ದೇ ನನಗೆ ನೆನಪಿಲ್ಲ.

ಹಾಸನದ ನನ್ನ ಮನೆಯಲ್ಲಿ ನಾನು ಏನೋ ಓದುತ್ತ, ಎದುರಿಗಿದ್ದ ನನ್ನ ಆಗಿನ ಚಪಲವಾದ ಅಕ್ವೇರಿಯಮ್‌ನಲ್ಲಿ ಮೀನುಗಳು ಆಡುವುದನ್ನು ನೋಡುತ್ತ ಕೂತಿದ್ದೆ ನನಗೊಂದು ಟೆಲಿಗ್ರಾಂ ಬಂತು. ಅಷ್ಟರಲ್ಲಿ ನಾನು ಮಿತ್ರರಿಂದ ಸಾಲಮಾಡಿ ಒಂದಿಷ್ಟು ಹಣ ಒಟ್ಟುಮಾಡಿ ಅವನಿಗೆ ಕಳುಹಿಸಲೆಂದೂ , ಹತ್ತಿರದ ಗೋಣಿಬೀಡಿನಲ್ಲಿ ಮಾರನೇ ದಿನವೋ, ಅಥವಾ ಅದರ ಮಾರನೆ ದಿನವೋ ನಡೆಯಲಿರುವ ನನ್ನ ಜೊತೆಯೇ ಓದಿದ ನನ್ನ ಸೋದರ ಮಾವನ ಮದುವೆಗೆ ನನ್ನ ಖರ್ಚಿಗೆಂದೂ ಇಟ್ಟಿದ್ದೆ. ನನ್ನ ತಾಯಿಗೆ ನಾನು ಹುಟ್ಟಿದ ನಂತರ ನನ್ನ ಅಜ್ಜಿಗೆ ಇವನು ಹುಟ್ಟಿದ್ದು ಹೀಗಾಗಿ ನನ್ನ ಅಮ್ಮನ ಮೊಲೆ ಮಾತ್ರ ನಾನು ಕುಡಿದದ್ದಲ್ಲ; ನನ್ನ ಅಜ್ಜಿಯ ಮೊಲೆಯನ್ನೂ ನಾನು ಕುಡಿದಿದ್ದೆ. ಅವರನ್ನು ನಾನು ಕರೆಯುವುದು ಅಮ್ಮಮ್ಮ ಎಂದು. ಮದುವೆಗೆ ಎಲ್ಲ ಸಿದ್ಧತೆ ನಡೆದು ನನ್ನ ತಂದೆ ತಾಯಿಯೂ ತೀರ್ಥಹಳ್ಳಿಯ ಎಲ್ಲ ನೆಂಟರಿಷ್ಟರೂ ಗೋಣಿಬೀಡಿಗೆ ಬಂದು ಇಳಿದಿದ್ದರು. ಈ ಗೋಣೀಬೀಡಿನ ಸುಬ್ರಹ್ಮಣ್ಯ ದೇವಾಲಯದಲ್ಲೇ ನನ್ನ ಅಜ್ಜಯ್ಯನೂ ಲಂಡನ್ ಮೆಟ್ರಿಕ್ಯುಲೇಶನನ್ನು ಕದ್ದು ಓದಿ ಪಾಸಾಗುವ ಮುನ್ನ ನನ್ನ ತಂದೆಯೂ ಪೂಜೆ ಮಾಡಿಕೊಂಡು ಇದ್ದುದು.

ಟೆಲಿಗ್ರಾಂ ಬಿಚ್ಚಿದೆ. ಅದು ಹಣಕ್ಕಾಗಿ ವೆಂಕಟೇಶ ಕಳುಹಿಸಿದ ತಂತಿಯಾಗಿರಲಿಲ್ಲ. ‘ವೆಂಕಟೇಶ ಸತ್ತುಹೋದ. ಕೂಡಲೇ ಬನ್ನಿ’ ಎಂದು ಅವನ ಗೆಳೆಯರು ಕೊಚ್ಚಿಯಿಂದ ಕಳುಹಿಸಿದ ತಂತಿಯಾಗಿತ್ತು.

ಈ ಗೆಳೆಯರಲ್ಲಿ ಕೆಲವರು ನಮ್ಮ ಮನೆಯಲ್ಲಿ ವೆಂಕಟೇಶನ ಜೊತೆ ಊಟಮಾಡಿ ಬೆಳೆದವರು. ಅವರಿಗೆ ನಾನು ಬರುವೆನೆಂದು ತಂತಿ ಕಳುಹಿಸಿ ಕ್ಷಣ ಇನ್ನೇನೂ ತೋಚದೆ ಕೂತೆ. ಗಾಜಿನ ಅಕ್ವೇರಿಯಂನಲ್ಲಿ ಎಲ್ಲ ಮೀನುಗಳೂ ಚೈತನ್ಯಪೂರ್ಣವಾಗಿ ಚಲಿಸುತ್ತ ಇದ್ದುದನ್ನು ನಾನು ಸಾವನ್ನು ಅರಿಯಲಾರದವನಂತೆ ನಿಬ್ಬೆರಗಾಗಿ ನೋಡುತ್ತ ಕೂತೆ. ನನ್ನನ್ನು ಆಗ ಬಾಧಿಸತೊಡಗಿದ್ದು ವೆಂಕಟೇಶ ಸತ್ತದ್ದು ಮಾತ್ರವಲ್ಲ. ಮದುವೆಗೆ ಬಂದವರಿಗೆ ಈ ವಿಷಯ ತಿಳಿಸಿ ಮದುವೆ ನಿಲ್ಲಿಸುವುದು ಹೇಗೆ? ಕೊಚ್ಚಿಗೆ ನನ್ನ ತಾಯಿ ತಂದೆಯರನ್ನು ಕರೆದುಕೊಂಡು ಹೋಗಬೇಕೆ? ಬಾರದೆ? ಎಂಬುದು. ಯೋಚಿಸುವಾಗ ಅಸಾಧ್ಯವೆನ್ನಿಸುವುದು ಈಜೀವಕ್ಕೆ ಆಪತ್ತಿನಲ್ಲಿ ಸಾಧ್ಯವಾಗಿಬಿಡುವುದೂ, ನಾವು ಏನನ್ನಾದರೂ ಒಪ್ಪಿಕೊಂಡು ಜೀವನ ಯಥಾಪ್ರಕಾರ ಸಾಗುತ್ತದೆ ಎಂಬುದೂ ಒಂದು ಸೋಜಿಗವೆ.

ನನ್ನ ಎಲ್ಲ ಗೆಳೆಯರೂ ಸುದ್ದಿ ತಿಳಿದು ಬಂದರು. ಹೋಗಲೊಂದು ಕಾರು ಗೊತ್ತುಮಾಡಿದರು. ಆಗಿನ ನನ್ನ ಪ್ರೀತಿಯ ವಿದ್ಯಾರ್ಥಿನಿ, ಹದಿನೇಳು ಇನ್ನೂ ತುಂಬದ ಎರಡು ಜಡೆಯ ಹುಡುಗಿ ಎಸ್ತರ್ ಬಂದವಳೇ ಅಲ್ಲಿ ಇರುವ ಯಾರನ್ನೂ ಲೆಕ್ಕಿಸದೆ, ಮುಗ್ಧವಾಗಿ, ಸರಳವಾಗಿ ತನ್ನ ಶೋಕದಲ್ಲಿ ನನ್ನನ್ನು ತಬ್ಬಿ ಸಂತೈಸಲು ಯತ್ನಿಸಿದಳು. ನಾನುಅವಳನ್ನು ಮುಂದೆ ಮದುವೆಯಾಗುವುದು ಈ ಕ್ಷಣದಲ್ಲೇ, ಸಾವಿನ ಸಮ್ಮುಖದಲ್ಲೇ ಮಾಡಿದ ನನ್ನ ಅಂತರಂಗದ ನಿಶ್ಚಯವಾದಂತಾಯಿತು. ಸಂಸಾರ ತಾಪತ್ರಯಗಳಲ್ಲಿ ಮುಳುಗಿರುವ, ನನ್ನನ್ನೂ ಮುಳುಗಿಸುವಂತೆ ಕೆಲವೊಮ್ಮೆ ಕಿರಿಕಿರಿ ಮಾಡಿ ಕಾಡುವ ನನ್ನ ಹೆಂಡತಿ ಈಗಲೂ ನನಗೊಬ್ಬ ಹುಡುಗಿಯಾಗಿಬಿಡುವುದು ಆ ಕ್ಷಣವನ್ನು ನೆನೆದಾಗ.

ವೆಂಕಟೇಶನಿಗೆ ನಮ್ಮ ಇಬ್ಬರ ನಡುವಿನ ಪ್ರೀತಿಯ ಸಂಬಂಧ ಗೊತ್ತಿತ್ತು. ನಮ್ಮ ಮದುವೆ ಸಾಧ್ಯವಾಗಲು ಮನೆಯ ಜವಾಬ್ದಾರಿಯನ್ನು ತಾನು ಹೊರಬೇಕೆಂಬುದು ಅವನ ಉದ್ದೇಶವಾಗಿತ್ತು. ಆದರೆ ಅದನ್ನು ತನ್ನ ಸಾವಿನಿಂದ ಗಟ್ಟಿಮಾಡಿಟ್ಟುಹೋದ.

ಕೊಚ್ಚಿಗೆ ಹೋದ ನನಗೂ ನನ್ನ ತಂದೆಗೂ ವೆಂಕಟೇಶನ ಗೆಳೆಯರ ಅವನು ಸತ್ತ ಬಗೆಯನ್ನು ವಿವರಿಸಿದರು. ತಮ್ಮ ತಪ್ಪಿಲ್ಲವೆಂದು ಅವರು ಸಮರ್ಥಿಸಿಕೊಳ್ಳಲು ಯತ್ನಿಸುವುದನ್ನು ನೋಡಿ ನನಗೆ ಖೇದವಾಯಿತು. ಅವನಿಗೆ ಬಂದಿದ್ದ ಜ್ವರ ಟೈಫಾಯಿಡ್ ಎಂಬುದು ತಿಳಿಯದೇ ಸದಾ ಸ್ನೇಹಮಯಿಯೂ ಧಾರಾಳಿಯೂ ಆದ ನನ್ನ ತಮ್ಮ ಕಲ್ಕತ್ತಕ್ಕೆ ಅವರನ್ನೆಲ್ಲ ಬಿಟ್ಟು ಹೋಗುವ ಮುಂಚೆ ಒಂದು ಬೀಳ್ಕೊಡುಗೆ ಔತಣವನ್ನು ಏರ್ಪಡಿಸಿದ. ಊಟ ಮಾಡಲಾರೆನೆಂದು ಹೇಳಿಕೊಳ್ಳಲಾರದ ಸಂಕೋಚದಲ್ಲಿ ಮೈಯುರಿಸುವ ಜ್ವರದಲ್ಲೇ ಅವರ ಜೊತೆ ಊಟಮಾಡಿದ. ಜಠರದಲ್ಲಿ ತಿಂದದ್ದು ವಿಷಯವಾಯಿತು. ತನಗೆ ಗುಣವಾಗುತ್ತದೆ ಎಂದು ಭ್ರಮಿಸಿದವನು ಸೋದರಮಾವನ ಮದುವೆಗೆ ವಿಘ್ನವಾಗದಿರಲಿ ಎಂದು ಯಾರಿಗೂ ತನ್ನ ಕಾಯಿಲೆ ತಿಳಿಸದಂತೆ ವಚನೆ ಪಡೆದು ಆಸ್ಪತ್ರೆ ಸೇರಿದ. ಬದುಕಲು ಹೋರಾಡುತ್ತ, ಸನ್ನಿಯಲ್ಲಿ ನನ್ನನ್ನು ಕರೆಯುತ್ತ ಸತ್ತ.

ಅವನನ್ನು ಆದಿ ಶಂಕರರ ಕಾಲಡಿ ಕ್ಷೇತ್ರದಲ್ಲಿ ಸಂಸ್ಕಾರ ಮಾಡಿ ಮುಗಿಸುವ ತನಕ ನನ್ನ ಅಪ್ಪ ಕಣ್ಣೀರು ಹಾಕಲಾರದಷ್ಟು ಮಂಕಾಗಿದ್ದರು. ‘ಅವನದೇನಾದರು ಸಾಮಾನು ಇದ್ದರೆ ಹೋಗಿ ತೆಗೆದುಕೊಂಡು ಬಾ’ ಎಂದರು.

ನನ್ನ ಅಪ್ಪ ಹುಟ್ಟಿದ್ದು ಮತ್ತು ಅವರ ಆರೇಳು ವರ್ಷಗಳನ್ನು ಕಳೆದದ್ದು ಅಜ್ಜಯ್ಯನ ಜೊತೆ ಕೇರಳದಲ್ಲಿ. ಅಲ್ಲಿ ನನ್ನ ಅಜ್ಜಯ್ಯ ಅರ್ಚಕರಾಗಿದ್ದರು. ಜಾನಕಿ ಎನ್ನುವ ನಾಯರ್ ಜಾತಿಯ ಮಹಿಳೆ ಜೊತೆ ಅವರಿಗೆ ಸಂಬಂಧವಿತ್ತಂತೆ. ಅವಳೇ ನನ್ನ ಅಜ್ಜಯ್ಯನಿಗೆ ಇನ್ನೊಂದು ಉಡುಪಿಕಡೆಯ ಕೇರಳದಲ್ಲಿ ನೆಲಸಿದ ನನ್ನ ಅಜ್ಜಿಯನ್ನು ಮದುವೆ ಮಾಡಿಸಿದ್ದಂತೆ. ತನಗೆ ಹುಟ್ಟಿದ ಮಗುವಿನ ಜೊತೆ ನನ್ನ ಅಪ್ಪನಿಗೂ ಮೊಲೆ ಕೊಟ್ಟು ಬೆಳಸಿದ್ದಂತೆ. ಅವಳು ಜಡ್ಡಿಯೊಬ್ಬಳ ಶ್ರೀಮಂತ ಕುಟುಂಬದ ಮಹಿಳೆಯಂತೆ. ಆಗಿನ ಕೇರಳ ಪದ್ಧತಿಯಂತೆ ಬ್ರಾಹ್ಮಣನಾದ ನನ್ನ ಅಜ್ಜಯ್ಯನ ಜೊತೆ ಸಂಬಂಧಮಾಡಿದ್ದಂತೆ. ಇತ್ಯಾದಿಯಾಗಿ ಎಲ್ಲವೂ ಕಾಡಿನೊಳಗಿನ ಸೌದೆತರುವಾಗ ನನಗೆ ನನ್ನ ಅಜ್ಜಯ್ಯ ಹೇಳಿದ್ದ ಅವರ ಸಾಹಸದ ಕಥೆಗಳು. ಜೋಲಾಡುವ ಓಲೆಯ ತನ್ನ ಹೆಂಡತಿಯನ್ನು ಅವರು ವಿಶ್ವಾಸದಲ್ಲಿ ಮಾತಾಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ಅಜ್ಜಿ ಮಾತ್ರ ಅಜ್ಜಯ್ಯನ ಗಮನ ಸೆಳೆಯಲು ಕೇರಳದ ಪದ್ಧತಿಯಂತೆ ‘ಪಿನ್ನೇ’ ಎನ್ನುವುದು ಇತ್ತು. ಊಟಮಾಡುವಾಗ ಇರುವೆಯೋ ಗೊದ್ದವೋ ಬಾಳೆಲೆ ಹತ್ತಿರ ಸುಳಿದರೆ ಕೋಪದಲ್ಲಿ ಸರಸ್ವತಮ್ಮ ಎನ್ನುವ ಈ ಅಜ್ಜಿ ನಮಗೆ ಅಚ್ಚರಿಯಾಗುವಂತೆ ಮಲೆಯಾಳಿ ಭಾಷೆಯಲ್ಲಿ ತೊಲಗು ತೊಲಗು ಎಂದು ಗೊದ್ದವನ್ನು ಬಯ್ಯುವುದು.

ಅಜ್ಜಯ್ಯ ಅವರ ಜೀವಸಖಿಯೆಂದರೆ ಅವರು ನೋಡಲಾರದಷ್ಟು ದೂರದಲ್ಲಿದ್ದ, ಅಜ್ಜಯ್ಯನಷ್ಟೇ ವಯಸ್ಸಿನವರಾದ್ದರಿಂದ ಹಣ್ಣುಹಣ್ಣು ಮುದುಕಿಯಾಗಿದ್ದ, ಚಿನ್ನದ ಪಟ್ಟಿತೊಟ್ಟು ನೀರು ಜಡೆಯಲ್ಲಿರುತ್ತ ಇದ್ದ ಕೇರಳದ ಜಾನಕಿಯೇ. ಅವರು ಹೇಳುತ್ತ ಇದ್ದ ಕಥೆಗಳ ದಮಯಂತಿ, ದ್ರೌಪದಿಯರಂತೆ ಜಾನಕಿಯೂ ನನ್ನ ಮನೋಲೋಕವನ್ನು ಆಳಿದ ನಾರೀಮಣಿಗಳಲ್ಲಿ ಒಬ್ಬಳು.

ತನ್ನ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದ ನನ್ನ ತಂದೆ ಕೇರಳದ ತನ್ನ ಬಾಲ್ಯ ಕುರಿತಾಗಿ ಏನು ಭಾವಿಸುತ್ತಿರಬಹುದು, ಏನು ನೆನೆಯುತ್ತಿರಬಹುದು ಮತ್ತೆ ಕೇರಳಕ್ಕೆ ಮಗನ ಸಾವಿನಿಂದಾಗಿ ಬಂದವರು ಎಂಬುದು ನನಗೆ ತಿಳಿಯಲಿಲ್ಲ. ಅವರು ಮೌನವಾಗಿಬಿಟ್ಟಿದ್ದರು. ತಂದೆಯ ಆದೇಶದಂತೆ ವೆಂಕಟೇಶ ವಾಸವಾಗಿದ್ದ ಅವನ ರೂಮಿಗೆ ಹೋಗಿ ಅವನ ಬಟ್ಟೆಬರೆಗಳನ್ನುಅವನ ಪೆಟ್ಟಿಗೆಯಲ್ಲಿ ತುಂಬುವಾಗ ಅವನು ಬರೆದ, ಆದರೆ ಅಂಚೆಗೆ ಹಾಕದಿದ್ದ ಒಂದು ಕಾಗದ ಕಣ್ಣಿಗೆ ಬಿತ್ತು. ಇದರಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು. ತಾನು ಕಲ್ಕತ್ತಕ್ಕೆ ಹೋದನಂತರ ತನ್ನ ತಂಗಿಗೆ ಮದುವೆಯಾದ ನಂತರ ನಿನ್ನನ್ನು ಮದುವೆಯಾಗುತ್ತೇನೆ; ಅಲ್ಲಿಯವರೆಗೆ ಕಾದಿರು ಎಂದು ಅವನು ಕೊಚ್ಚಿಯಲ್ಲಿ ಪ್ರೀತಿಸುತ್ತಿದ್ದ ಹುಡುಗಿಯೊಬ್ಬಳಿಗೆ ಬರೆದಿದ್ದ. ಅವಳು ಯಾರೆಂದು ನನಗೆ ಗೊತ್ತಾಗಲಿಲ್ಲ. ನಾನು ಕೇವಲ ಕುತೂಹಲದಲ್ಲಿ ತಿಳಿಯಲೂ ಯತ್ನಿಸಲಿಲ್ಲ.

ನನ್ನ ಅಜ್ಜಯ್ಯ ನನ್ನ ತಮ್ಮ ಮತ್ತು ನಾನು ಜಡವಾಗದ ಸಂಸಾರದ ಪ್ರೀತಿಗಾಗಿ ಹಾತೊರೆದವರೆ? ಉಡುಪಿಯಲ್ಲಿ ತನ್ನ ಬಾಲ್ಯ ಕಳೆದ ಅಜ್ಜಯ್ಯನೂ ತನ್ನ ಸೋದರನ ವರ್ತನೆಯಿಂದ ಬೇಸರಗೊಂಡು, ಮನೆಯೆದುರಿನ ಹುಣಿಸೇಮರದಿಂದ ಅದರ ಹಣ್ಣನ್ನು ಕಿತ್ತು ಮೂಟೆ ಮಾಡಿ, ರಾತ್ರಾನುರಾತ್ರೆ ಮನೆ ತೊರೆದು, ಹೊತ್ತು ನಡೆದ ಮೂಟೆಯನ್ನು ಮಂಗಳೂರಿನಲ್ಲಿ ಮಾರಿ, ಸೊಂಟದಲ್ಲಿ ಸುತ್ತಿದ ಧೋತ್ರದಲ್ಲಿ ಗಳಿಸಿದ ನಾಣ್ಯಗಳನ್ನು ಜೋಪಾನಮಾಡಿ ನಡೆದೂ ನಡೆದೂ ಕೇರಳಕ್ಕೆ ಹೋದವರು. ನನ್ನ ಅಪ್ಪನೂ ತೀರಾ ಕಿರಿಕಿರಿಯಾದಾಗ ಮನೆ ಬಿಟ್ಟುಹೋಗಿ ಸನ್ಯಾಸಿಯಾಗುತ್ತೇನೆಂದು ಹೇಳುತ್ತಿದ್ದವರು.

ಆದರೆ ಇಂತಹ ಗಂಡಸರ ಹುಚ್ಚಾಟಗಳನ್ನು ಹೇಗೋ ಸಹಿಸಿಕೊಂಡು ಸಂಸಾರದ ನಿರ್ವಹಣೆ ಮಾಡಿದವಳೆಂದರೆ ನನ್ನ ಅಮ್ಮ. ಎಷ್ಟೋ ನಾನು ಪ್ರೀತಿಸುವ ಗೌರವಿಸುವ ಹೆಂಗಸರು ತಮ್ಮ ಸಂಸಾರವನ್ನೂ ಆ ಮೂಲಕ ಈ ಪ್ರಪಂಚವನ್ನೂ ಸ್ವಸ್ಥವಾಗಿಟ್ಟು ಕಾಪಾಡುವುದು ಹೀಗೆ. (ನನ್ನ ಹೆಂಡತಿಯೂ ನನ್ನ ತಾಯಿಯ ಹಾಗೆಯೇ ಎಂದು ಈಗ ನಾನು ಹೇಳಬಯಸುವುದನ್ನು ಅವಳು ಓದಿ ಹೆಚ್ಚಿಕೊಂಡು, ಅವಳಿಗೆ ತೆವಲಿನಂತೆ ಕಾಣುವ ಹಲವು ಆಸೆಗಳ ನನ್ನನ್ನು ಹಂಗಿಸದಿದ್ದರೆ ಸಾಕು!).

ಮಗನ ಸಾವಿನಿಂದ ದುಃಖತಪ್ತಳಾಗಿದ್ದ ಆ ನನ್ನ ತಾಯಿಗೆ ವೆಂಕಟೇಶನ ಬಯಕೆ ಯಾವುದಾಗಿತ್ತೆಂದು ಹೇಳಲಿಲ್ಲ. ಏನೇನೋ ಹುಚ್ಚಿನ ನಾನು ಮಾಡದ್ದನ್ನು ವೆಂಕಟೇಶ ಮಾಡಿಯಾನೆಂದು ಅವಳು ಬಯಸಿದ್ದಳು.

ಜೀವಕ್ಕಂಟಿಕೊಂಡು, ಶನಿಮಹಾತ್ಮೆಯನ್ನು ಇಳಿಗಾಲದಲ್ಲಿ ಓದಿಕೊಂಡು, ವರ್ಷಕ್ಕೊಮ್ಮೆ ವೆಂಕಟೇಶ ಸತ್ತ ದಿನ ಯಾವನಾದರೂ ಒಬ್ಬ ಬಡಹುಡುಗನಿಗೆ ಊಟ ಹಾಕಿ ಕೈತುಂಬ ದಕ್ಷಿಣೆಕೊಟ್ಟು ಕಳುಹಿಸುತ್ತಿದ್ದ ಅವಳು ತೀರಿಕೊಂಡಾದಮೇಲೆ ಈಗ ಬರೆಯುತ್ತಿದ್ದೇನೆ.

(ಪ್ರಜಾವಾಣಿ ದೀಪಾವಳಿ ವಿಶೇಷಾಂಕ೨೦೦೬)

* * *