ಈಗ ನೋಡುವಾಗ ನನ್ನ ಬರವಣಿಗೆ ಅತಿ ಸಣ್ಣ ಆದರೂ ನಿಗೂಢವಾದ ಮತ್ತುಕ್ಷುಲ್ಲಕ ಅನಿಸಬಹುದಾದ ಒಂದು ಸಂಗತಿಯಿಂದ ಆರಂಭವಾಯಿತು. ಹಾಗೆ ನೋಡಿದರೆ ಈ ಲೇಖನದ ತಲೆಬರಹ “ಸಾಹಿತ್ಯದೊಂದಿಗಿನ ನನ್ನ ಏಳು ದಶಕಗಳ ಸಂಬಂಧ” ಎಂದಿರಬೇಕಿತ್ತು. ನನಗೀಗ ಎಪ್ಪತ್ತೈದು ವರ್ಷ. ಬಹಳವೆಂದರೆ ನಾನು ಐದು ವರ್ಷದವನಾಗಿದ್ದಾಗ ನಾನು ಆಡಿದ ಒಂದು ಸರಳ ಮಾತಿನಿಂದ ನಾನು ಪ್ರಸಿದ್ಧನಾಗಿಬಿಟ್ಟೆ. ನಿಜವಾಗಿ ನಾನು ಅದನ್ನು ಹೇಳಿದೆನೆ? ನನ್ನ ಬಗೆಗಿನ ಅವಳ ಪ್ರೀತಿಯಲ್ಲಿ ನಮ್ಮಮ್ಮ ನಾನು ಆಡಿದ ಈ ಮಾತನ್ನು ಮತ್ತೆ ಮತ್ತೆ ಹೇಳುತ್ತಿದ್ದರು. (ತನ್ನ ಎಂಬತ್ತಾರನೆಯ ವಯಸ್ಸಿನಲ್ಲಿ ಮೂರು ವರ್ಷಗಳ ಹಿಂದೆ ಆಕೆ ತೀರಿಕೊಂಡರು.) ನಾನು ಆಕೆಯ ಹಿರಿಯ ಮಗ. ತುಂಬ ಜಾಣತನದ, ಕಿವಿಗೆ ಇಂಪಾದ ಆ ಮಾತುಗಳನ್ನು ನಾನು ಆಡಿದ್ದೆನೆಂಬುದು ಆಕೆಗೆ ತುಂಬ ಸಂತೋಷವನ್ನೂ, ಹೆಮ್ಮೆಯನ್ನೂ ಸಹಜವಾಗಿಯೇ ಉಂಟು ಮಾಡಿತ್ತು.

ಕ್ಷುಲ್ಲಕವಾಗಿ ಕಾಣಿಸುವ ಆ ವಾಕ್ಯವನ್ನು ಸಂದರ್ಭದ ಹಿನ್ನೆಲೆಯಲ್ಲಿ ನೋಡದಿದ್ದರೆ ಯಾವ ಅರ್ಥವನ್ನೂ ಕೊಡಲಾರದು. ಹಳ್ಳಿಯ ಮಧ್ಯದಲ್ಲಿದ್ದ ನಮ್ಮ ಹೆಂಚಿನ ಮನೆಗೆ ಬರುತ್ತಿದ್ದ ಆ ಹೆಂಗಸಿನ ಹೆಸರು ಅಬ್ಬಕ್ಕ. ನಮ್ಮ ಮನೆಯಂತೆಯೇ ದೊಡ್ಡದಾದ ಕನಿಷ್ಠ ಪಕ್ಷ ಒಂದು ಕಿಲೋಮೀಟರ್‌‌ನಷ್ಟಾದರೂ ಅಂತರದಲ್ಲಿರುತ್ತಿದ್ದ ಪ್ರತಿ ಮನೆಗೂ ಒಂದು ಹಳ್ಳಿ ಹೆಸರಿರುತ್ತಿತ್ತು. ಈ ದೊಡ್ಡ ಮನೆಗಳ ಸುತ್ತಮುತ್ತ ಆ ಜಮೀನುದಾರರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರ ಗುಡಿಸಿಲುಗಳಿರುತ್ತಿದ್ದವು. ಅವರಲ್ಲಿ ಒಬ್ಬಳು ಅಬ್ಬಕ್ಕ. ತನ್ನ ಅವಳಿ ಮಕ್ಕಳನ್ನು ಎರಡೂ ಕಂಕಳುಗಳಲ್ಲಿ ಅವಳು ಎತ್ತಿಕೊಂಡು ಬರುತ್ತಿದ್ದುದು ನನಗೆ ನೆನಪಿದೆ. ಅವು ಅವಳ ಕುತ್ತಿಗೆಗೆ ಜೋತು ಬಿದ್ದಿರುತ್ತಿದ್ದವು. ಅಬ್ಬಕ್ಕ ಎಣ್ಣೆ ಹಚ್ಚಿ ಬಿಗಿಯಾಗಿ ಬಾಚಿರುತ್ತಿದ್ದ ತಲೆಯಲ್ಲಿ ಮಲ್ಲಿಗೆ ಹೂವನ್ನು ಮುಡಿದಿರುತ್ತಿದ್ದಳು. ಹಣೆಯಲ್ಲಿ ದೊಡ್ಡ ಕುಂಕುಮ, ಗಲ್ಲದ ತುಂಬ ಅರಿಶಿನ. ಆಕೆಯ ಕರುಣೆ ತುಂಬಿದ ಆದರೂ ತುಂಟತನದ ನಗುವಿನ ಮುಖ, ಆಕೆ ಮುಡಿದಿದ್ದ ಮಲ್ಲಿಗೆ ಹೂವಿನ ಪರಿಮಳ, ನನ್ನ ತಾಯಿಯೊಂದಿಗೆ ಆಕೆ ಹಂಚಿಕೊಳ್ಳುತ್ತಿದ್ದ ತಂಬಾಕು, ಈ ಎಲ್ಲವೂ ನನಗೆ ನೆನಪಿದೆ.

ಆಕೆ ನನಗೆ ಪರಿಚಿತಳಾಗಿದ್ದೂ ನಿಗೂಢವೂ ಆಗಿದ್ದಳು. ಈ ಸಾಧಾರಣ, ನಗುಮುಖದ ಸ್ನೇಹಮಯಿ ಕೆಲಸದ ಹೆಣ್ಣುಮಗಳು ನನ್ನ ತಾಯಿಯೊಂದಿಗೆ ಕೊನೆಯಿಲ್ಲದ ಗಾಸಿಪ್‌ಗಳಲ್ಲಿ ಮುಳುಗಿರುತ್ತಿದ್ದಳು. ಆಕೆಯ ಶ್ರೀಮಂತ, ಬಡ ಸಂಬಂಧಿಕರು, ಮುರಿದ ಮದುವೆಗಳು ಹಾಗೂ ಗರ್ಭಪಾತಗಳು, ಆಕೆಯ ದಾರಿ ತಪ್ಪಿದ, ಆದರೂ ಅವಳಲ್ಲಿ ಅನುರಕ್ತನಾದ ಗಂಡ, ಸದಾ ಅವಳಿಗೆ ಜೋತುಬಿದ್ದಿರುತ್ತಿದ್ದ ಅವಳಿಗೆ ಅಡುಗೆ ಮಾಡಲು ಬಿಡದ ಮಕ್ಕಳು ಇವುಗಳ ಬಗ್ಗೆ ಸತತ ಮಾತನಾಡುತ್ತಿದ್ದ ಈ ಹೆಣ್ಣು ಕೆಲವು ರಾತ್ರಿಗಳಲ್ಲಿ ಪರಿವರ್ತಿತಳಾಗಿ ಬಿಡುತ್ತಿದ್ದಳು. ವಾರಕ್ಕೊಮ್ಮೆ ಎನ್ನುವಂತೆ ಆಕೆ ಅವಳ ನೆರೆಹೊರೆಯವರು ಬಂದು ಪೂಜಿಸುತ್ತಿದ್ದ ದೇವಿಯಾಗಿಬಿಡುತ್ತಿದ್ದಳು. ಆಗ ಅವಳು ತನ್ನ ಕೈಯಲ್ಲಿ ಅಡಿಕೆ ಸಿಂಗಾರದ ಹೂವುಗಳನ್ನು ಹಿಡಿದು ಅವುಗಳನ್ನು ಗಾಳಿಯಲ್ಲಿ ಬೀಸುತ್ತಿದ್ದಳು. ಅವಳ ಕಣ್ಣುಗಳು ಮುಚ್ಚಿರುತ್ತಿದ್ದವು. ಇಲ್ಲವೆ ಶೂನ್ಯ ಆಕಾಶದಲ್ಲಿ ನೆಟ್ಟಿರುತ್ತಿದ್ದವು. ಅವಳ ಎದುರಿಗೆ ಗೌರವಪೂರ್ವಕವಾಗಿ ಹಚ್ಚಿಟ್ಟ ಕೊಳ್ಳಿಗಳ ಬೆಳಕಿನಲ್ಲಿ ಆಗ ತಾನೇ ತೊಳೆದ ಕೂದಲುಗಳು ಅವಳ ಭುಜದ ಮೇಲೆ ಮಿಂಚುತ್ತಿದ್ದವು. ಅವಳ ಹಣೆ ಕುಂಕುಮದಿಂದ ಮತ್ತು ಇಡೀ ಮುಖ ಅರಿಶಿಣದಿಂದ ತುಂಬಿರುತ್ತಿತ್ತು. ಅವಳ ಇಡೀ ದೇಹ ಲಯಬದ್ಧವಾಗಿ ಹೊಯ್ದಾಡುತ್ತಿತ್ತು. ಮತ್ತು ಹಾಗೆ ಹೊಯ್ದಾಡುವಾಗ  ಅವಳು ಹೂಂಕರಿಸುತ್ತಿದ್ದಳು. ಜನ ಅವಳು ಪ್ರತಿದಿನದ ಅಬ್ಬಕ್ಕನಲ್ಲ ಎನ್ನುವಂತೆ ಅವಳ ಕಾಲಿಗೆ ಬೀಳುತ್ತಿದ್ದರು. ಆ ಘಳಿಗೆಯಲ್ಲಿ ಅವಳು ಕೆಳಜಾತಿಯ ಹೆಣ್ಣಾಗಿ ಉಳಿದಿರುತ್ತಿರಲಿಲ್ಲ, ಬದಲಿಗೆ ನಿಮ್ಮ ಕಳೆದುಹೋದ ಹಸುವನ್ನು ಎಲ್ಲಿ ಹುಡಕಬೇಕೆಂದು ಹೇಳುವ, ನಿಮ್ಮ ಮಗುವಿಗೆ ಮದ್ದು ಎಲ್ಲಿ ಸಿಗುತ್ತದೆಂದು ಹೇಳುವ, ಹೆಂಡತಿಯ ಕರ್ತವ್ಯದಿಂದ ವಿಮುಖಳಾಗಿರುವ ಎಳೆಯ ಸೊಸೆಯನ್ನು ಹೇಗೆ ಸರಿ ಮಾಡಬೇಕೆಂದು ಹೇಳುವ “ದೇವಿ”ಯಾಗಿ ಬಿಡುತ್ತಿದ್ದಳು. ಸ್ವತಃ ಪುರೋಹಿತರಾಗಿದ್ದ, ಕವಡೆಗಳನ್ನು ಹಾಕಿ ಶುಭ ಸಮಾರಂಭಗಳಿಗೆ ಸರಿಯಾದ ದಿನ, ನಕ್ಷತ್ರಗಳನ್ನು ಹುಡುಕಿಕೊಡುತ್ತಿದ್ದ ನನ್ನ ತಾತ ಕೂಡ ನನ್ನನ್ನು ಅವರ ಭುಜದ ಮೇಲೆ ಕೂರಿಸಿಕೊಂಡು ಈ ಅಬ್ಬಕ್ಕನಿಗೆ ಸಾಕ್ಷಿಯಾಗುತ್ತಿದ್ದರು. “ದೇವಿ ಆವಾಹನೆಯಾದಾಗ ಅವಳಲ್ಲೊಂದು ಶಕ್ತಿಯಿರುತ್ತದೆ. ಅದು ನನ್ನಲ್ಲಿಲ್ಲ!”, ಎಂದು ಅವರು ಹೇಳುತ್ತಿದ್ದರು.

ಇಂಥ ಒಂದು ರಾತ್ರಿಯ ನಂತರ ಅಬ್ಬಕ್ಕ ಎಂದಿನಂತೆ ನನ್ನ ತಾಯಿಯ ಹತ್ತಿರ ಕೆಲಸಕ್ಕೆ ಬಂದಳು. ನನಗಿರುವ ಶಬ್ದಭಂಡಾರದ ವರದ ಕಥೆಯನ್ನು ನಮ್ಮ ತಾಯಿ ಶುರು ಮಾಡುತ್ತಿದ್ದುದೇ ಹೀಗೆ. ನಮ್ಮ ಮನೆಯ ಹಿತ್ತಲಿನಲ್ಲಿನ ದಾಳಿಂಬೆಯ ಮರದ ಕೆಳಗೆ ಕಂಕುಳಲ್ಲಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಆಕೆ ನಿಂತಿದ್ದಳು. ನಾನು ಬಾವಿಯ ಪಕ್ಕದಲ್ಲಿ ನಿಂತಿದ್ದವನು ಈ ವಾಕ್ಯವನ್ನು ಹೇಳಿದೆ”. ಅಬ್ಬಕ್ಕನ್ನ ಗುಬ್ಬಕ್ಕ ಕಚ್ಚಿಕೊಂಡು ಹೋಯ್ತು.” ಅಬ್ಬಕ್ಕನಿಗೆ ನನ್ನ ಈ ಬಾಲಭಾಷೆಯ ಪ್ರಾಸವಾಕ್ಯವನ್ನು ಕೇಳಿ ಎಷ್ಟು ಸಂತೋಷವಾಯಿತೆಂದರೆ ನನ್ನ ಬಾಯಿಯ ತುಂಬ ತುಂಬಿಕೊಂಡಿದ್ದ ಅರ್ಧ ಅಗಿದಿದ್ದ ತಂಬಾಕನ್ನು- ಅದು ನಿಜವಾದ ತ್ಯಾಗವೇ ಆಗಿತ್ತು-ಅಲ್ಲೇ ಹತ್ತಿರದಲ್ಲಿದ್ದ ಚರಂಡಿಗೆ ಉಗಿದಳು-ಅವಳಿಗೆ ನನ್ನನ್ನು ತಬ್ಬಿ ಮುತ್ತು ಕೊಡಬೇಕಾಗಿತ್ತು. ಇಷ್ಟಕ್ಕೂ ನಾನು ಹೇಳಿದ್ದಾದರೂ ಏನು? ಅಬ್ಬಕ್ಕ ಮತ್ತು ಗುಬ್ಬಕ್ಕ ಎಂಬ ಸರಳ ಪ್ರಾಸವಷ್ಟೇ! ಅಬ್ಬಕ್ಕ ದೊಡ್ಡದು ಮತ್ತು ಗುಬ್ಬಕ್ಕ ಸಣ್ಣದು. ಆದರೆ ನಾನು ನನ್ನ ಕಲ್ಪನೆಯಲ್ಲಿ ಸಣ್ಣ ಗುಬ್ಬಕ್ಕ ಬೀಜ ಮತ್ತು ಕ್ರಿಮಿಕೀಟಗಳನ್ನು ಹಿಡಿಯುತ್ತಿದ್ದ ಕೊಕ್ಕಿನಲ್ಲಿ ದೊಡ್ಡ ಅಬ್ಬಕ್ಕನನ್ನು ಹಿಡಿದಳು. ಎನ್ನುವಂತೆ ಮಾಡಿದ್ದೆ. ದೇವಿಯಾಗಬಲ್ಲ ಅಬ್ಬಕ್ಕನ ಅತಿಮಾನುಷ ದೃಷ್ಟಿಗೆ ನಾನು ಸಣ್ಣ ಹಕ್ಕಿ ಅವಳನ್ನು ಕರೆದೊಯ್ಯುವ ಅದ್ಭುತಸಾಧ್ಯತೆಯನ್ನು ಹೊಂದಿಸುವ ಪ್ರಯತ್ನಿಸಿದ್ದೆನೆ? ಬಹುಶಃ ನಾನುಇದನ್ನು ಒಂದು ವಿಚಾರವಾಗಿಯಲ್ಲ, ಪ್ರಾಸದ ಶುದ್ಧ ಆನಂದಕ್ಕಾಗಿ ಮಾಡಿದ್ದೆನೇನೋ.

ನನ್ನ ತಾಯಿಯ ಪ್ರೀತಿ ಮತ್ತು ಹೆಮ್ಮೆಗೆ ನಾನು ಕೃತಜ್ಞ. ನನಗೆ ಆಶ್ಚರ್ಯವಾಗುತ್ತದೆ, ಈಗಲೂ ನಾನು ಒಂದು ವಾಕ್ಯವನ್ನು ಹೊಂದಿಸಲು ಮತ್ತು ಸರಿಯಾದ ಪ್ರಾಸವನ್ನು ನನ್ನ ಗದ್ಯದಲ್ಲಿ ಪಡೆಯಲು ಮತ್ತು ಹೀಗೆ ಮಾಡುವುದರ ಮೂಲಕವೇ ನನ್ನ ಬರವಣಿಗೆಗೆ ಅಪರಿಚಿತ ಮೂಲಗಳಿಂದ ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಉದ್ದೇಶಿಸಿರದ ಅರ್ಥಗಳನ್ನು ಪಡೆಯಲು ಪ್ರಯತ್ನಿಸುವುದಿಲ್ಲವೇ? ನಿಮ್ಮ ಭಾಷೆಯಲ್ಲಿ ನಿಮಗಿದು ಸಿಕ್ಕಾಗ ಅದೊಂದು ಆಕಸ್ಮಿಕವಾಗಿ ಸಿಕ್ಕ ವರದಂತೆ. ಇದನ್ನು ನೀವು ನಿಮ್ಮ ಜನರಾಡುವ ನಿಮ್ಮಭಾಷೆಯಲ್ಲಿ ಮಾತ್ರ ಪಡೆಯಲು ಸಾಧ್ಯ. ನಿಜವಾಗಿ ಇದೊಂದು ಆದಿಮಮೂಲ. ನೀವು ನಿಮ್ಮ ಅರ್ಥದಲ್ಲಿ ಎಷ್ಟೇ ಬುದ್ಧಿವಂತರಾಗಿದ್ದರೂ, ನಾಜೂಕಾಗಿದ್ದರೂ ಈ ಆದಿಮ ಮಾಂತ್ರಿಕವರವನ್ನು ನೀವು ಕಳೆದುಕೊಂಡರೆ ನೀವು ಕವಿಯಾಗಲಾರಿರಿ. ನೀವು ಕೇವಲ ತಾತ್ವ್ತಿಕರಾಗಬಹುದು. ನಮ್ಮ ಶ್ರೇಷ್ಠ ಕವಿಗಳು ಬೇಂದ್ರೆ ಅಡಿಗ ಮತ್ತು ಕಂಬಾರ-ಅವರು ಈ ಶಬ್ದಲೀಲೆಯ ವರಪುತ್ರರು. ಆದರೆ ಒಬ್ಬ ಬರಹಗಾರನಾಗಿ ನನಗೆ ಗೊತ್ತಿದೆ-ಇದನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಉದ್ದೇಶ ಪೂರ್ವಕವಾಗಿ ಮಾಡಲಾಗುವುದಿಲ್ಲ.

ನಾವಿದ್ದದ್ದು ಕಾಡಿನ ಮಧ್ಯದ ಮನೆಯಲ್ಲಿ. ಚಂದ್ರನಿಲ್ಲದ ರಾತ್ರಿಗಳಲ್ಲಿ ಇದು ಭಯ ಹುಟ್ಟಿಸುತ್ತಿತ್ತು. ನಾನೊಬ್ಬನೇ ಹೋಗಲಾಗದ ಮನೆಯ ಹಲವು ಮೂಲೆಗಳಿದ್ದವು. ಕೆಲವೊಮ್ಮೆ ರಾತ್ರಿಗಳಲ್ಲಿ ಹುಲಿಯ ಗರ್ಜನೆ ನಮಗೆ ಕೇಳಿಸುತ್ತಿತ್ತು. ಕೊಟ್ಟಿಗೆಯಲ್ಲಿರುತ್ತಿದ್ದ ಹಸುಗಳಿಗೆ ನಮಗಿಂತ ಮೊದಲೇ ಇದು ತಿಳಿದು ಅವುಗಳ ಆತಂಕ ಅವುಗಳ ಕುತ್ತಿಗೆಗೆ ಕಟ್ಟಿದ್ದ ಗಂಟೆಗಳ ಶಬ್ದದ ಮೂಲಕ ನಮಗೆ ತಿಳಿಯುತ್ತಿತ್ತು. ನನ್ನ ತಾತ ಮತ್ತು ತಾಯಿ ಭಯದಿಂದ ನನ್ನನ್ನು ಪಾರು ಮಾಡಲು ಅರ್ಜುನನ ನಾಮಧೇಯಗಳನ್ನು ಹೇಳಿಸುತ್ತಿದ್ದರು-ಅರ್ಜುನ, ಫಲ್ಗುಣೋ, ಪಾರ್ಥ, ಕಿರೀಟಿ, ಶ್ವೇತವಾಹನಾಃ. ಮರುದಿನ ಮುಂಜಾನೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಹುಲಿಯನ್ನು ಮುಖಾಮುಖಿಯಾಗಬೇಕಾದ ಹಳೆಯ ಕಥೆಗಳನ್ನು ಹೇಳುತ್ತಿದ್ದರು. ಅವುಗಳಿಗೆ ತೊಂದರೆ ಮಾಡುವ ಉದ್ದೇಶ ನಿಮಗಿರದಿದ್ದರೆ ಅವೂ ನಿಮಗೆ ತೊಂದರೆ ಮಾಡುವುದಿಲ್ಲ ಮತ್ತು ಅವು ನಿಮ್ಮನ್ನು ನೋಡುವಾಗ ಹೆದರಿಕೊಳ್ಳದಿದ್ದರೂ ನಿಮಗೆ ತೊಂದರೆಯಿಲ್ಲ. ಇದೇ ಬಗೆಯ ಕಥೆಗಳು ನಾಡಹಂಚಿನ ಮನೆಯ ಮಾಡಿನ ನಡುವೆ ತೆವಳುತ್ತಿದ್ದ ಹಾವುಗಳ ಬಗೆಗೂ ಇದ್ದವು.

ಯಾವುದು ನನ್ನ ಅತ್ಯಂತ ಹಳೆಯ ನೆನಪು-ನನ್ನನ್ನು ಪ್ರೀತಿಸಿದವರು ಕೊಟ್ಟ ನೆನಪಲ್ಲ, ನನ್ನದೇ ನೆನಪು? ನಮ್ಮ ಮನೆ ಕಾಡಿನಿಂದ ಕೆಲವೇ ಗಜಗಳ ಅಂತರದಲ್ಲಿತ್ತು. ನನ್ನ ತಾತ ಪ್ರತಿದಿನವೂ ಎಂಬಂತೆ ಕೈಯಲ್ಲೊಂದು ಕೊಡಲಿಯನ್ನು ಹಿಡಿದು ಹೊಸ ಗಿಡಮರಗಳನ್ನು ಸವರುತ್ತಿದ್ದರು, ಕಾಡು ಮನೆಯನ್ನು ಆಕ್ರಮಿಸಬಾರದು ಎನ್ನುವ ಎಚ್ಚರದಿಂದ. ಮಳೆಗಾಲದಲ್ಲಿ ಸತತ ಮಳೆ ಸುರಿಯುತ್ತಿದ್ದಾಗ ಮನೆಯಲ್ಲಿ ಸೋರದ ಭಾಗವನ್ನು ನಾವು ಹುಡುಕಬೇಕಾಗುತ್ತಿತ್ತು. ಮಳೆಗಾಲ ಶುರುವಾಗುವುದಕ್ಕೆ ಮುಂಚೆಯೇ ಕೆಲಸದವರು, ಸಂಬಂಧಿಕರು ನಮಗೆ ಒಣಗಿದ ಸೌದೆಯನ್ನು ಸಂಗ್ರಹಿಸಲು ಮತ್ತು ಅಕ್ಕಿ ಬೇಳೆ, ಜೋಣಿ ಬೆಲ್ಲ ಮೊದಲಾದವುಗಳನ್ನು ಶೇಖರಿಸಲು ಸಹಾಯ ಮಾಡುತ್ತಿದ್ದರು. ಕಾಡಿನ ಹಲಸಿನ ಹಣ್ಣು ಅದರ ಬೆಳವಣಿಗೆಯ ಎಲ್ಲ ಅವಸ್ಥಾಂತರಗಳಲ್ಲೂ ಕಾಯಿಯಿಂದ ಹಿಡಿದು ವಾಸನೆ ಬರುವ ಹಣ್ಣಾಗುವ ತನಕ ಆಹಾರ ಪದಾರ್ಥವಾಗಿ ಬಳಕೆಗೆ ಒದಗುತ್ತಿತ್ತು. ಎಮ್ಮೆಗಳೂ ಕೂಡ ಗಾಳಿಯಲ್ಲೇ ಈ ಹಣ್ಣಿನ ವಾಸನೆಯನ್ನು ಹಿಡಿದು, ಸದಾ ಹಸಿದಿರುತ್ತಿದ್ದ ಮಕ್ಕಳ ಜೊತೆಗೆ ತಾವೂ ಈ ಹಣ್ಣನ್ನು ಬಯಸುತ್ತಿದ್ದವು. ನಾವು ಬಚ್ಚಲ ಕೋಣೆಯ ಎದುರಿಗೆ ಹಾಕಿದ ಬೆಂಕಿಯ ಎದುರು ಕೂತು ಕೈಗಳನ್ನು ಚಾಚಿ ಬೆಂಕಿ ಕಾಯಿಸುತ್ತಿದ್ದೆವು. ಆ ಸುರಿಮಳೆಯಲ್ಲಿ ಬೆಂಕಿಯ ಸುತ್ತ ಕೂತವರನ್ನು ಬಿಟ್ಟರೆ ಇನ್ನೇನೂ ಕಾಣುತ್ತಿರಲಿಲ್ಲ. ನಾವು ಅದೇ ಹಳೆಯ ಕಥೆಗಳನ್ನು ಕೆಲವು ಬದಲಾವಣೆಗಳೊಂದಿಗೆ ಕೇಳುತ್ತಿದ್ದವರ ಕಣ್ಣುಗಳ ಮಿಂಚಿನಿಂದ ಸ್ಫೂರ್ತಿ ಪಡೆದು ಸುಟ್ಟ ಹಲಸಿನ ಬೀಜಗಳನ್ನು ಆಸೆಯಿಂದ ತಿನ್ನುತ್ತಾ ಹೇಳಿಕೊಳ್ಳುತ್ತಿದ್ದೆವು.

ಮನೆಯ ಹಿರಿಯರಿಗೆ ಮಾತ್ರ ಗೊತ್ತಿದ್ದ ಹೆಸರಿನ, ಔಷಧಿಯ ಗುಣವುಳ್ಳ ಸೊಪ್ಪುಗಳನ್ನು ಬೇಯಿಸಿ ಊಟದಲ್ಲಿ ವ್ಯಂಜನಗಳಾಗಿ ಬಳಸಲಾಗುತ್ತಿತ್ತು. ಬೇಸಿಗೆಯಲ್ಲಿ ನಮ್ಮಮ್ಮ ಮಳೆಗಾಲದ ದಿನಗಳಿಗೆಂದು ಅನೇಕ ತಿಂಡಿ ಪದಾರ್ಥಗಳನ್ನು ಒಣಗಿಸಿಡುತ್ತಿದ್ದರು. ಹಪ್ಪಳ, ಹಣ್ಣುಗಳು ಇತ್ಯಾದಿ. ಬೇಸಿಗೆಯಲ್ಲಿ ನಾವು ಮಳೆಗಾಲಕ್ಕಾಗಿ ಹಂಬಲಿಸಿದರೆ ಮಳೆಗಾಲ ನಮ್ಮನ್ನು ಬೇಸಿಗೆಗಾಗಿ ಹಂಬಲಿಸುವಂತೆ ಮಾಡುತ್ತಿತ್ತು. ಬೇಸಿಗೆಯ ಸುಗ್ಗಿಯಲ್ಲಿ ಬ್ಯಾರಿ ಮುಸ್ಲಿಮರು ನಗರದಿಂದ ಪದಾರ್ಥಗಳನ್ನು ಹಳ್ಳಿಯ ವಸ್ತುಗಳಿಗೆ ಬದಲಾಯಿಸಿ ಕೊಳ್ಳಲು ಬರುತ್ತಿದ್ದರು. ಬಣ್ಣದ ಬಟ್ಟೆಗಳು ಮತ್ತು ಟೋಪಿಗಳನ್ನು ಹಾಕುತ್ತಿದ್ದ ಅವರ ಚಪ್ಪಲಿಗಳು ನನ್ನನ್ನು ಆಕರ್ಷಿಸುತ್ತಿದ್ದವು. ಒಬ್ಬ ಸ್ನೇಹಮಯಿ ಬ್ಯಾರಿಯನ್ನು ಒಂದುಜೊತೆ ಚಪ್ಪಲಿಯನ್ನು ಹಾಕಿಕೊಳ್ಳಲು ಕೇಳಿದ್ದು ಮತ್ತು ಅದರ ಮುಂದಿನ ವರ್ಷದಲ್ಲಿ ನನ್ನ ಮೊಟ್ಟಮೊದಲ ಚಪ್ಪಲಿಗಳನ್ನುಕೊಡುಗೆಯಾಗಿ ಪಡೆದಿದ್ದು ನನಗೆ ನೆನಪಿದೆ. ಆ ಬ್ಯಾರಿ ಒಂದು ಹಳೆಯ ವೃತ್ತಪತ್ರಿಕೆಯ ಮೇಲೆ, ಒಂದು ವರ್ಷದ ಹಿಂದೆ ಪಡೆದ ಅಳತೆಯ ಆಧಾರದ ಮೇಲೆ ನನ್ನ ಸರಿಯಾದ ಅಳತೆಯನ್ನು ಊಹಿಸಿ ಚಪ್ಪಲಿಯನ್ನು ತಂದಿದ್ದ. ಆ ಬ್ಯಾರಿಗಳು ಗರಿಗರಿಯಾದ ಸಿಹಿ ಮತ್ತು ಕಲ್ಲುಸಕ್ಕರೆಯನ್ನು ಪೇಪರುಗಳಲ್ಲಿ ಸುತ್ತಿ ಕೊಡುತ್ತಿದ್ದರು. ಅವರು ಇರುತ್ತಿದ್ದ ನಗರಗಳ ಬಗೆಗೆ ಕಥೆಗಳನ್ನು ಹೇಳುತ್ತಿದ್ದರು. ಹೀಗೆ ಸುತ್ತಿಕೊಟ್ಟ ಯಾವ ವೃತ್ತಪ್ರತಿಕೆಯನ್ನೂ ಬಿಸಾಡುತ್ತಿರಲಿಲ್ಲ, ಅವುಗಳಲ್ಲಿದ್ದ ಸುದ್ದಿಯನ್ನು ಮತ್ತೆ ಮತ್ತೆ ಓದಿತ್ತಿದ್ದೆವು ಮತ್ತು ಮನೆಯಲ್ಲಿದ್ದ ಹಳೆಯ ಪುಸ್ತಕಗಳಿಗೆ ರಟ್ಟು ಹಾಕಲು ಅವುಗಳನ್ನು ಬಳಸುತ್ತಿದ್ದೆವು.

ಕಾಡಿನಿಂದ ಬಂದು ಹಾದು ನಮ್ಮ ಮನೆಯ ಜಗಲಿಯ ಮೇಲೆ ಬೀಳುತ್ತಿದ್ದ ಕಿರಣಗಳ ಮೊದಲ ಸೂರ್ಯ ನನ್ನ ಗೆಳೆಯ, ಆ ಕಿರಣಗಳಲ್ಲಿ ನಾನು ಬಿಸಿಲು ಕಾಯಿಸುತ್ತಿದ್ದೆ. ನನ್ನ ತೀರ ಮೊದಲ ನೆನಪು ಇದು. ಕಳ್ಳಿಗಿಡದ ದಪ್ಪ ಹಾಗು ಹಸಿರಿನ ಎಲೆಯನ್ನು ಕಡ್ಡಿಯಿಂದ ನಾನು ಮುರಿಯುತ್ತಿದ್ದೆ. ನಿಧಾನವಾಗಿ ಅದನ್ನು ಹಿಂದಕ್ಕೆ ಒತ್ತಿ ಬಾಗಿಸುತ್ತಿದ್ದೆ. ಎಲೆಯ ಆ ಒತ್ತಿ ಬಾಗಿಸಿದ ಭಾಗದಿಂದ ಬಿಳಿಯ ಅಂಟು ದ್ರವವೊಂದು ಒಸರುತ್ತಿತ್ತು. ನೀವು ನಿಧ ನಿಧಾನವಾಗಿ ಅದರ ಕೊನೆಯನ್ನು ಒತ್ತಿದಾಗ ಆ ಬಿಳಿಯ ಅಂಟು ದ್ರವ ಮಸೂರದಂತಾಗುತ್ತಿತ್ತು. ಇದೊಂದು ಅತಿ ನಾಜೂಕಿನ ಸವಾಲು. ಯಾಕೆಂದರೆ ಅದು ಯಾವಾಗ ಬೇಕಾದರೂ ಮುರಿದುಹೋಗಬಹುದು. ನೀವು ಅದೃಷ್ಟವಂತರಾಗಿದ್ದರೆ ಅದು ಮುರಿಯುವುದಿಲ್ಲ. ಇದಾದ ಮೇಲೂ ನೀವು ಅದೃಷ್ಟಕ್ಕಾಗಿ ಕಾಯಬೇಕು, ಅದನ್ನು ಸೂರ್ಯನ ಕಿರಣಗಳಿಗೆ ಒಡ್ಡಬೇಕು. ಆಗ ನಿಮ್ಮ ಅಂಗೈ ಮೇಲೆ ಬಣ್ಣಗಳ ಪವಾಡವೊಂದು ಘಟಿಸುತ್ತದೆ. ಎಷ್ಟು ಆರ್ತ ಭಾವದಲ್ಲಿ, ಇನ್ನಿಲ್ಲದ ತಾಳ್ಮೆ ಮತ್ತು ಏಕಾಗ್ರತೆಯಲ್ಲಿ ನಾನಿದನ್ನು ಮಾಡುತ್ತಿದ್ದೆ ಮತ್ತು ಅದರ ಬಗ್ಗೆ ನನಗೆ ಎಷ್ಟು ಹೆಮ್ಮೆಯಾಗುತ್ತಿತ್ತು ಎನ್ನುವುದು ನನಗಿನ್ನೂ ನೆನಪಿದೆ. ಕವನಗಳನ್ನು ಕಟ್ಟುವಾಗ ಪದಗಳ ಜೊತೆಯಲ್ಲಿ ಆಡಿದಂತೆ, ಕೆಲಸ ಮಾಡಿದಂತೆಯೇ ಅಲ್ಲವೆ ಇದೂ ಕೂಡ?

ನಾನು ಇದರಲ್ಲಿ ತೊಡಗಿದ್ದಾಗ ನಮ್ಮಮ್ಮ ಗಮನಿಸಿ ನಾನು ಹುಷಾರಾಗಿರುವಂತೆ ಹೇಳುತ್ತಿದ್ದರು. ಯಾಕೆಂದರೆ ಆ ಬಿಳಿಯ ರಸ ಕಣ್ಣುಗಳಿಗೆ ಕೆಟ್ಟದ್ದು, ನಾನು ಅದನ್ನು ಒತ್ತುವಾಗ ಅದು ನನ್ನ ಕಣ್ಣಿಗೆ ಸಿಡಿದೀತು ಎನ್ನುವ ಭಯದಲ್ಲಿ. ಮುಂಜಾನೆಯ ಮಂಜಿನಿಯ ನನಗೆ ನೆಗಡಿಯಾದೀತು ಎನ್ನುವ ಆತಂಕದಲ್ಲಿ.

ನನ್ನ ಮೊದಲ ವಿದ್ಯಾಭ್ಯಾಸ ನಡೆದದ್ದು ಶಾಲೆಯಲ್ಲಲ್ಲ. ಯಾಕೆಂದರೆ ಅದು ಬಹು ದೂರದಲ್ಲಿತ್ತು. ಹೀಗಾಗಿ ನಮ್ಮಮ್ಮ ನಮ್ಮ ಮನೆಯ ವರಾಂಡಾದ ಎದುರಿಗಿನ ಹಲಸಿನ ಮರದ ಬುಡದಲ್ಲಿ ನೆಲದಲ್ಲಿ ಹರಡಿದ ಮರಳಿನ ಮೇಲೆ, ನನ್ನ ತೋರು ಬೆರಳಿನಲ್ಲಿ ಬರೆಸಲು ಪ್ರಾರಂಭಿಸಿದರು. ನನ್ನ ಮೊದಲ ವರ್ಣ ಸರಸ್ವತಿ ದೇವಿಯ ಪ್ರಾರ್ಥನೆಯಿಂದ ಆರಂಭವಾಯಿತು. ನನ್ನ ತಂದೆ ಮತ್ತು ತಾತ, ನನ್ನ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿದರು. ನನ್ನ ತಂದೆ ಓದಿ ಒಂದು ಪದ್ಯ, ಆ ಪದ್ಯವನ್ನು ಓದುವಾಗ ಅವರ ಕಣ್ಣಿನಲ್ಲಿದ್ದ ನೀರು ನನಗೆ ಈಗಲೂ ನೆನಪಿದೆ. ನನ್ನ ತಾಯಿ ಅತ್ತದ್ದು. ಕೊನೆಗೆ ಆ ದೇವಿ ಅಬ್ಬಕ್ಕೆ ಅತ್ತದ್ದನ್ನು ಕೂಡ ನಾನು ನೋಡಿದ್ದೆ. ಈ ಪದ್ಯವನ್ನು ಓದುವ ಸಮಯದಲ್ಲಲ್ಲದೆ ಬೇರಾವ ಸಂದರ್ಭದಲ್ಲೂ ನನ್ನ ತಂದೆ ಅತ್ತದ್ದನ್ನು ನಾನು ನೋಡಿಲ್ಲ. ಆ ಪದ್ಯ ಗೋವಿನ ಹಾಡು.ಲ ಆ ಪದ್ಯ ಆರಂಭವಾಗುವುದು ಆಕಾಶದಲ್ಲಿರುವ ಕ್ಯಾಮರಾ ಇಡೀ ಜಗತ್ತನ್ನು ಅದರ ಸಮಸ್ತ ವಿಸ್ತಾರದಲ್ಲಿ ಹಿಡಿಯುತ್ತಿದೆಯೇನೋ ಎನ್ನುವಂತೆ ಆರಂಭವಾಗಿ ನಂತರ, ಲಾಂಗ್ ಶಾಟಿನಿಂದ ಕ್ಲೋಸಪ್ಪಿಗೆ ಮುಂದುವರೆಯುತ್ತದೆ. ಜಗತ್ತಿನ ಮಧ್ಯದಲ್ಲಿರುವುದು ಕರ್ನಾಟಕ, ಅದರಲ್ಲಿ ಕಾಳಿಂಗನೆಂಬ ಗೊಲ್ಲನಿದ್ದಾನೆ. ಅವನು ಎಲ್ಲ ಗೋಮಾತೆಯರನ್ನೂ ಕರೆಯುತ್ತಾನೆ. ಅವರ ಹೆಸರುಗಳಾದರೂ ಎಂತಹವು? ಗಂಗೆ, ಗೌರಿ, ತುಂಗಭದ್ರೆ. ಅದರಲ್ಲಿ ಎರಡು ನದಿಗಳೆಂದು ನನ್ನ ತಂದೆ ಹೇಳುತ್ತಿದ್ದರು.

ಪುಣ್ಯಕೋಟಿ ಎನ್ನುವ ಹಸು ಆಕಸ್ಮಿಕವಾಗಿ ಹುಲಿಯ ಕೈಗೆ ಸಿಕ್ಕಿ ಕೊಳ್ಳುತ್ತದೆ. ಆ ಹುಲಿಗೆ ಹಸಿವಾಗಿದೆ. ತನ್ನ ಎಲ್ಲೆಯೊಳಗೆ ಬಂದದ್ದನ್ನು ತಿನ್ನುವುದು ಹುಲಿಯ ಧರ್ಮ. ಪುಣ್ಯಕೋಟಿ ಹುಲಿಯ ಹಸಿವೆಯನ್ನು ಹಿಂಗಿಸಲು ಸಿದ್ಧ. ಆದರೆ ಹಸಿದಿರುವ ತನ್ನ ಕರುವಿಗೆ ಹಾಲೂಡಿಸಿ ಬರಲು ಅನುಮತಿ ಕೇಳುತ್ತದೆ.

ಕಾಯುತ್ತಿದ್ದ ಹುಲಿಗೆ ಇದನ್ನು ನಂಬಲಾಗುವುದಿಲ್ಲ. ಪುಣ್ಯಕೋಟಿ ಹಸು ತನ್ನ ಬಿಸಿ ರಕ್ತ, ಶಕ್ತ ಮಾಂಸಖಂಡಗಳು, ಮೆದುವಾದ ಮಾಂಸದ ತನ್ನನ್ನು ಇಡಿಯಾಗಿ ಹುಲಿಗೆ ಒಪ್ಪಿಸಿಕೊಳ್ಳಲು ಸಿದ್ಧವಾಗಿ ತನ್ನೆದುರಿಗೆ ನಿಂತಿರುವುದನ್ನು ಕಂಡು ಹುಲಿಯ ಹೃದಯಲ್ಲಿ ದಿಢೀರನೆ ಬದಲಾವಣೆಯಾಗುತ್ತದೆ. ನಮ್ಮ ಅನಾಮಧೇಯ ಕನ್ನಡ ಕವಿಗೆ ಹುಲಿಯ ಹೃದಯ ಬದಲಾಗಬಹುದು, ಅದರ ಸ್ವಭಾವ ಬದಲಾಗಲಾರದು ಎನ್ನುವ ಸತ್ಯ ಗೊತ್ತಿತ್ತು. ಸಂಸ್ಕೃತ ಮೂಲದಲ್ಲಿ ಹೃದಯ ಪರಿವರ್ತನೆಯ ನಂತರ ಹುಲಿ ತಪಸ್ವಿಯಾಗಿ ಬಿಡುತ್ತದೆ. ಆದರೆ ನಮ್ಮ ಕನ್ನಡದ ಕವಿ ವಾಸ್ತವವಾದಿ. ಆದ್ದರಿಂದಲೇ ಅದು ಬೆಟ್ಟದ ಮೇಲಿಂದ ಬಿದ್ದು ಸಾಯುವಂತೆ ಮಾಡುತ್ತಾನೆ.

ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸುವ ಶ್ರೇಷ್ಠ ಕವನಗಳಲ್ಲಿ ಇದೊಂದು-ಹಸಿದ ಹುಲಿಯ ಮೇಲೆ ವಿಜಯ ಸಾಧಿಸುವ ಹಸುವಿನದು. ಇದೊಂದು ಸರ‍್ರಿಯಲ್ ಪದ್ಯ. ಸರ‍್ರಿಯಲ್ ಗಾಂಧೀವಾದಿ ಪದ್ಯ ಎಂದು ಹೇಳುವುದೇ ಹೆಚ್ಚು ಸರಿ.

ಈ ಪದ್ಯ ಗೊತ್ತಾದಾಗಿನಿಂದ ನನ್ನ ಮಟ್ಟಿಗೆ ಕರ್ನಾಟಕ ಜಗತ್ತಿನ ಮಧ್ಯದಲ್ಲಿದೆ. ಯಾವ ಭಾಷೆಯೂ ಅದಕ್ಕಿರುವ ಭೌಗೋಳಿಕ ಆವರಣದಿಂದ ಪ್ರಾದೇಶಿಕ ಚೌಕಟ್ಟಿಗೆ ಸೀಮಿತವಾಗುವುದು ಸಾಧ್ಯವಿಲ್ಲ. ಕವಿರಾಜಮಾರ್ಗಕಾರ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿರುವ, ಕನ್ನಡವನ್ನು ಮಾತನಾಡುವ ಜನ ಆ ಭಾಷೆಯ ಮೂಲಕವೇ ಕಟ್ಟಿಕೊಂಡ ಜನಪದದ ಬಗ್ಗೆ ವ್ಯಾಖ್ಯಾನಿಸುತ್ತಾನೆ (ಸಂಕ್ಷಿಪ್ತವಾಗಿ ಹೇಳುವುದಾದರೆ ಭಾಷೆಗಿರುವ ಅನುಭಾವದ ಮತ್ತು ಅಮೂರ್ತ ನೆಲೆ. ನನ್ನ ಗತಿಸಿದ ಗೆಳೆಯ ಕೆ.ವಿ. ಸುಬ್ಬಣ್ಣ ಇದರ ಬಗೆಗೆ ಸೂಕ್ಷ್ಮವಾಗಿ ಧ್ಯಾನಿಸಿ ಬರೆದ ಕೃತಿಯನ್ನು ಸಾಹಿತ್ಯ ಅಕಾಡಮಿಯು ಗೌರವಿಸಿದೆ.)

ನನ್ನ ಭಾಷೆಯ ಹಿಂದಿನ ಯಾವ ಲೇಖಕನೂ ಸಂಸ್ಕೃತದಂತಹ ಕಾಸ್ಮಾಪಲಿಟನ್ ಭಾಷೆಯಲ್ಲಿ ಬರೆಯಲಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ತಾನು ಸೀಮಿತ ಎಂದು ಯೋಚಿಸಲಿಲ್ಲ. ನಮ್ಮ ಮೊದಲ ಕವಿ ಪಂಪನಿಗೆ ಕಾಳಿದಾಸ ಗೊತ್ತಿತ್ತು ಮತ್ತು ಆತನನ್ನು ಪಂಪ ಮೆಚ್ಚಿಕೊಂಡದ್ದು ಆತನಿಗಿಂತ ಚೆನ್ನಾಗಿ ಬರೆಯುವ ಆಸೆಯಲ್ಲಿ. ಹನ್ನೆರಡನೆಯ ಶತಮಾನದ ನಮ್ಮ ವಚನಕಾರರು ಸ್ವತಂತ್ರ ನೆಲೆಯ ಚಿಂತಕರು ಹಾಗೂ ಆಧ್ಯಾತ್ಮಿಕ ಗುರುಗಳು. ಉಪನಿಷತ್ತುಗಳಿಗೆ ಸಂವಾದಿಯಾದ ಶೋಧವನ್ನು ಅವರದೇ ದಾರಿಯಲ್ಲಿ ಮಾಡಿದವರು. ನಮ್ಮ ಕಾಲದ ಕವಿ ಕುವೆಂಪು ಜಗತ್ತಿನ ಮಹಾಕವಿಗಳೆಲ್ಲರನ್ನೂ ಸ್ಮರಿಸುತ್ತಾ ‘ರಾಮಾಯಣ’, ‘ಕವಿ ಕುವೆಂಪು’ ಅವರನ್ನು ಸೃಷ್ಟಿಸಿದೆ ಎಂದು ಹೇಳುತ್ತಾರೆ. ಕನ್ನಡದಲ್ಲಿರುವುದೆಲ್ಲ ಜಾಗತಿಕ ಸಾಹಿತ್ಯ ಎಂದು ಕರೆಯುವುದಕ್ಕೆ ಯೋಗ್ಯವಾದುದು ಎಂದಲ್ಲ ನಾನು ಹೇಳುತ್ತಿರುವುದು. ಯಾವ ಭಾಷೆಯಲ್ಲೂ ಈ ಬಗೆಯ ಹೆಗ್ಗಳಿಕೆಗಾಗಿ ಪ್ರಯತ್ನಿಸುವುದು ವ್ಯರ್ಥವೇ. ಕನ್ನಡ ಭಾಷೆಯನ್ನು ಅಪೂರ್ವ ಮತ್ತು ವಿಸ್ತಾರ ಜಗತ್ತಿನ ಒಂದು ಭಾಗ ಎಂದು ಹೇಳುತ್ತಿರುವಾಗ ಕವಿರಾಜಮಾರ್ಗಕಾರನಲ್ಲಿ ವಿನಯ ಮತ್ತು ಆತ್ಮವಿಶ್ವಾಸದ ಎರಡೂ ಗುಣಗಳಿವೆ.

ನನ್ನ ಪ್ರಾರಂಭಿಕ ವರ್ಷಗಳ ಬಗ್ಗೆ ಈಗ ಹಿಂದಿರುಗಿ ನೋಡಿದಾಗ ನನ್ನ ಬಾಲ್ಯದ ದಿನಗಳನ್ನು ಕಳೆದ ದೊಡ್ಡ ಹಳ್ಳಿಯಲ್ಲಿ (ನನ್ನ ಮಾಧ್ಯಮಿಕ ಮತ್ತು ಹೈಸ್ಕೂಲು ವಿದ್ಯಾಭ್ಯಾಸದ ವರ್ಷಗಳು) ಒಬ್ಬ ಬರಹಗಾರನಾಗಲು ನನಗೆ ಅವಶ್ಯಕವಾದದ್ದೆಲ್ಲವೂ ಅಲ್ಲಿತ್ತೆಂದೇ ಅನಿಸುತ್ತದೆ. ೧೯೪೦ ರ ದಶಕದಲ್ಲಿ ವಯಸ್ಕ ಶಿಕ್ಷಣ ಸಮಿತಿಯು ‘ಪುಸ್ತಕ ಪ್ರಪಂಚ’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ನಮ್ಮ ಹಳ್ಳಿಯ ಗ್ರಂಥಾಲಯಕ್ಕೆ ಬರುತ್ತಿದ್ದ ಅದನ್ನು ನಾನು ತಪ್ಪಿಸದೇ ಓದುತ್ತಿದ್ದೆ. ಆದರೆ ನನಗೆ ಮರೆಯಲಾಗದ ಸಂದರ್ಭವೆಂದರೆ ಕಾರಂತರ ‘ಚೋಮನದುಡಿ’ ಹಾಗೂ ಕುವೆಂಪುರವರ ‘ಕಾನೂರು ಹೆಗ್ಗಡತಿ’ಯನ್ನು ಓದಿದ್ದು.

ನನ್ನ ನಂಬಿಕೆಯೆಂದರೆ ನಿಮ್ಮ ಭೂತಕಾಲದ ಒಂದು ಭಾಗವನ್ನು, ಅಂಶವನ್ನು ತೀವ್ರವಾಗಿ ದ್ವೇಷಿಸಲು ಕಲಿತಾಗ ಮಾತ್ರ ಭುತವನ್ನು ನಿಮಗೆ ಪ್ರೀತಿಸುವುದು ಸಾಧ್ಯವಾಗುತ್ತದೆ. ನಾನು ಬೆಳೆದದ್ದು ಮಲೆನಾಡಿನ ಸಹ್ಯಾದ್ರಿ ಮಲೆಘಟ್ಟದ, ತುಂಗಾನದಿಯ ದಂಡೆಯ ಮೇಲಿನ ಅಗ್ರಹಾರವೊಂದರಲ್ಲಿ. ಯಾಕೆಂದರೆ ಓದಿನ ಬಗೆಗೆ ಸ್ವಯಂಪ್ರೇರಣೆಯುಳ್ಳ ನನ್ನ ತಂದೆ ಗಾಂಧಿಯವರ ‘ಹರಿಜನ’ ಪತ್ರಿಕೆಯನ್ನು ತರಿಸಿ ತಮ್ಮ ಸ್ನೇಹಿತರಿಗೆಲ್ಲ ಅದನ್ನು ಓದುತ್ತಿದ್ದರು. ನನ್ನ ತಾತನಂತೆ ವೈದಿಕ ಬ್ರಾಹ್ಮಣರಾಗಿರದೆ ಲೌಕಿಕ ಬ್ರಾಹ್ಮಣರಾಗಿದ್ದರು. ಖಚಿತವಾಗಿ ಹೇಳುವುದಾದರೆ ತಮ್ಮ ಮನೋವಿನ್ಯಾಸದಲ್ಲಿ ಇವರು ಲೌಕಿಕ ಮತ್ತು ಅಲೌಕಿಕಗಳ ನಡುವೆ ಇದ್ದವರು. ಅವರಿಗೆ ಜುಟ್ಟೂ ಇತ್ತು, ಕ್ರಾಪೂ ಇತ್ತು ಎನ್ನುವುದು ಅವರ ಸಾಂಪ್ರದಾಯಿಕ ಮತ್ತು ಲೌಕಿಕ ಜಗತ್ತುಗಳ ಪ್ರಾತಿನಿಧಿಕ ಸ್ವರೂಪ. ನನ್ನ ತಂದೆಯ ಪ್ರೀತಿಯ ಮತ್ತು ಎಚ್ಚರದ ಕಣ್ಣುಗಳಲ್ಲಿ ಬೆಳೆದ ನಾನು ನೋಡನೋಡುತ್ತಿದ್ದಂತೆಯೇ ಅವರು ಕ್ರಾಪಿನ ಮನುಷ್ಯರಾದರು. ಇಷ್ಟಾಗಿಯೂ ತಮ್ಮ ವಿಷಾದದ ಘಳಿಗೆಗಳಲ್ಲಿ ವಿಷ್ಣು ಸಹಸ್ರ ನಾಮವನ್ನು ಅದರೆಲ್ಲ ವಿಧಿವಿಧಾನಗಳೊಂದಿಗೆ, ನೆಲದ ಮೇಲೆ ಕೆಂಪು ಮತ್ತು ಹಳದಿಯ ರಂಗೋಲಿಗಳ ಸಮೇತವಾಗಿಯೇ ಅವರು ಓದುತ್ತಿದ್ದರು.

ನಾನು ಬೆಳೆದ ಜಗತ್ತಿನಲ್ಲಿ ಜಾತಿ ಪದ್ಧತಿ ಮತ್ತು ಶ್ರೇನೀಕರಣಗಳು ಕಲ್ಲಿನಷ್ಟು ಸ್ಥಾವರ, ಶಾಶ್ವತ ಮತ್ತು ದೈವ ನಿರ್ಮಿತ ಎಂದು ನಂಬಲಾಗುತ್ತಿತ್ತು. ನಾನು ಕಾರಂತರ ಕಾದಂಬರಿಯನ್ನು ಓದಿದೆ, ಅದು ನನ್ನನ್ನು ಬದಲಾಯಿಸಿತು. ಇಂತಹ ಬದಲಾವಣೆಗಳು ಕೇವಲ ರಾಜಕೀಯ ಆಯಾಮದವಲ್ಲ, ಅವುಗಳಿಗೆ ಒಂದು ಆಧ್ಯಾತ್ಮಿಕ ಆಯಾಮವೂ ಇರುತ್ತದೆ. ಅದು ನಿಮ್ಮ ಇಡೀ ಜಗತ್ತನ್ನು ಬದಲಿಸುತ್ತದೆ. ಇದರ ಪರಿಣಾಮ ಸರಳ ಮತ್ತು ಘನ. ನಮ್ಮ ದನದ ಕೊಟ್ಟಿಗೆಯನ್ನು ಸ್ವಚ್ಛಮಾಡಲು ದಿನಾ ಬೆಳಿಗ್ಗೆ ಬರುತ್ತಿದ್ದ, ತನ್ನ ಮೌನದಲ್ಲಿ ಅದೃಶ್ಯನಾಗಿದ್ದ ಅಸ್ಪೃಶ್ಯ ದಿಢೀರನೆ ನನಗೆ ಒಳಲೋಕವನ್ನು ಹೊಂದಿರುವ ವ್ಯಕ್ತಿಯಾಗಿ ಮಾರ್ಪಟ್ಟ ಚೋಮನ ಹಾಗೆ ಇವನೂ ಕೂಡ ಆಳವಾದ ಒಳವ್ಯಕ್ತಿತ್ವವನ್ನು ಹೊಂದಿದ್ದಾನೆ ಮತ್ತು ನಾನು ಅದರಿಂದ ಹೊರಗೆ ಉಳಿದಿದ್ದೇನೆ ಎಂದು ನಾನು ಯೋಚಿಸಿದೆ. ಇದರಿಂದ ಕಳೆದುಕೊಂಡಿರುವವನು ನಾನು ಮತ್ತು ಖಂಡಿತವಾಗಿಯೂ ಇದು ದೈವ ನಿಯಾಮಕವಲ್ಲ, ಮನುಷ್ಯ ನಿರ್ಮಿತ. ನನ್ನ ತಂದೆ ಧಾರ್ಮಿಕಮಠವೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನನಗೆ ಮಠ ಚೈತನ್ಯದ ಕತ್ತಲೆ ಮತ್ತು ದಮನಕಾರಿ ಪ್ರಭುತ್ವದ ಸಂಕೇತವಾಗಿ ಕಂಡಿತು. ಮಠದ ಪರವಾಗಿ ನನ್ನ ತಂದೆ ಕೋರ್ಟಿಗೆ ಹೋಗಿ ಬಡ ಗೇಣೀದಾರರ ವಿರುದ್ಧ ಡಿಕ್ರೀ ತರುತ್ತಿದ್ದರು. ಹೀಗೆ ಮಾಡಿದ್ದರ ಬಗ್ಗೆ ಬಹುದಿನಗಳವರೆಗೆ ಅಶಾಂತರಾಗಿ ಇರುತ್ತಿದ್ದರು.

ಈ ಹೊಸ ತಿಳುವಳಿಕೆಯೊಂದಿಗೆ ಕುವೆಂಪುರವರ ಕಾದಂಬರಿಯ ಕಾರ್ಯ ಕ್ಷೇತ್ರವೂ ನಾನಿದ್ದ ಮಲೆನಾಡಿನ ದಟ್ಟ ಹಸುರಿನ ಮಲೆಘಟ್ಟದ ವಾತಾವರಣವನ್ನು ನಾನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು. ತುಂಗಾನದಿಯನ್ನು ದಾಟಲು ಕುವೆಂಪು ಕಾದಂಬರಿಯ ನಾಯಕ ಬಳಸುವ ಸೇತುವೆಯಂತಹ ಕಲ್ಲನ್ನು ನನ್ನ ತಾಯಿಯ ಮನೆಗೆ ಹೋಗಲು ಶಾಲಾಹುಡುಗನಾಗಿದ್ದಾಗ ನಾನೂ ಬಳಸುತ್ತಿದ್ದೆ. ಅಗ್ರಹಾರದ ಮನೆಯ ಮೂಲೆಯೊಂದರಲ್ಲಿ ಒಬ್ಬನೇ ಆ ಕಾದಂಬರಿಯನ್ನು ಓದುತ್ತಿದ್ದ ನನಗೆ ಆ ಕಾದಂಬರಿಯಲ್ಲಿ ಬರುವ ಮಳೆಗಾಲದ ಗುಡುಗು ಮಿಂಚುಗಳು ಅದೇ ಬೆರಗಿನೊಂದಿಗೆ ನನ್ನ ಅನುಭವಕ್ಕೆ ದಕ್ಕಿದವು. ಶ್ರೇಷ್ಠ ಕಲ್ಪನಾಶಕ್ತಿಯ ಸಾಹಿತ್ಯ ಯಾವಾಗಲೂ ಸ್ವಾತಂತ್ರ್ಯ ಮತ್ತು ಹಗಲುಗನಸಿಗೆ  ಆಹ್ವಾನ ನೀಡುತ್ತದೆ. ಕುವೆಂಪು ಕಾದಂಬರಿಯ ನಾಯಕ ಹೂವಯ್ಯ ಕೂಡ ಕಾಡಿನಿಂದಾವೃತವಾದ ಮಲೆನಾಡಿನ ಮನೆಯ ಉಪ್ಪರಿಗೆಯಲ್ಲಿ ಕುಳಿತು ನಾಗರಿಕತೆಯಿಂದ ಬಹುದೂರದಲ್ಲಿ ಅರ್ನಾಲ್ಡ್ ಮತ್ತು ವರ್ಡ್ಸ್ ವರ್ಥ್‌ನನ್ನು ಓದುತ್ತಾನೆ. ಬಹುತೇಕ ಇದು ಸರ‍್ರಿಯಲ್ ಘಟನೆ. ಲೇಖಕ ಈ ಮೂಲಕ ನಮಗಾಗಿ ಎರಡು ಭಿನ್ನ ಕಾಲಗಳನ್ನು ಮತ್ತು ಭಿನ್ನ ಜಗತ್ತುಗಳನ್ನು ತೆರೆಯುತ್ತಾರೆ. ಅಸ್ತಿತ್ವದಲ್ಲಿ ನಿಜವಾದ ಮತ್ತು ಭ್ರಾಮಕವೂ ಆದ ಜಗತ್ತುಗಳು ಇವು.

ಇಂದು ನಾನೇನಾಗಿದ್ದೇನೋ ಅದನ್ನು ಸಾಧ್ಯವಾಗಿಸುವಲ್ಲಿ ನನ್ನ ಈ ಮೊದಲ ಅನುಭವಗಳು ನನಗೆ ತುಂಬ ಮುಖ್ಯ. ಈಗ ನಾನು ಹೈಸ್ಕೂಲು ಹುಡುಗನಂತೆ ನನ್ನ ದಿನಚರಿಯ ವಿವರಗಳನ್ನು ವರ್ಣಿಸುತ್ತೇನೆ. ಬೆಳಿಗ್ಗೆ ಮುಂಜಾನೆಯೇ ಎದ್ದು ತುಂಗಾ ನದಿಯಲ್ಲಿ ಸ್ನಾನ ಮಾಡಿ ಸಾಂಪ್ರದಾಯಿಕ ಸಂಸ್ಕೃತ ಶಾಲೆಗೆ ಹೋಗುತ್ತೇನೆ. ಅಲ್ಲಿ ನನ್ನಂತೆಯೇ ಅಗ್ರಹಾರದ ಕೆಲವು ಹುಡುಗರು ಸಂಸ್ಕೃತ ವ್ಯಾಕರಣ ಮತ್ತು ಕಾಳಿದಾಸನ ರಘುವಂಶದ ಕೆಲವು ಅಧ್ಯಾಯಗಳನ್ನು ಅಭ್ಯಾಸ ಮಾಡುತ್ತೇವೆ. ನಂತರ ನಾನು ಶರ್ಟೊಂದನ್ನು ತೊಟ್ಟು ಬರಿಗಾಲಿನಲ್ಲಿ ಆ ಸಣ್ಣ ಪಟ್ಟಣದ ಹೈಸ್ಕೂಲಿಗೆ ಹೋಗುತ್ತೇನೆ. ಕಾಡಿನ ದಾರಿಯಲ್ಲಿ ನಾವು ಹುಡುಗರು ನಡೆಸುತ್ತಿದ್ದ ಸಾಹಸೋದ್ಯೋಗಗಳಿಂದಾಗಿ ಕೆಲವೊಮ್ಮೆ ಶಾಲೆಗೆ ತಲುಪಲು ಒಂದು ಘಂಟೆಗೂ ಹೆಚ್ಚು ಕಾಲ ಹಿಡಿಯುತ್ತಿತ್ತು ಶಾಲೆಯಲ್ಲಿ ದೂರದ ಊರುಗಳಿಂದ ಬಂದಿದ್ದ ಅದಕ್ಕಿಂತ ಮುಖ್ಯವಾಗಿ ಬೇರೆ ಜಾತಿಯ ಉಪಾಧ್ಯಾಯರು ನಮಗಿದ್ದರು. ನನ್ನ ಸಹಪಾಠಿಗಳಲ್ಲೂ ಇತರ ಜಾತಿಯವರಿದ್ದರು.

(ಇಲ್ಲಿ ನಾನು ಕೊಂಚ ಹೊರಳಲು ಅವಕಾಶ ಮಾಡಿಕೊಡಿ. ಸಾಮಾನ್ಯ ಶಾಲೆಗಳು ಮತ್ತು ವಿದ್ಯಾಭ್ಯಾಸದಲ್ಲಿನ ಸಮಾನತೆಯನ್ನು ನಾನು ಎಂದಿನಿಂದಲೂ ಹೇಳುತ್ತಿದ್ದೇನೆ. ನಾನೊಬ್ಬ ಬರಹಗಾರನಾಗಿದ್ದು ಮಠದಲ್ಲಿನ ಸಂಸ್ಕೃತ ಸಾಂಪ್ರದಾಯಿಕ ಶಾಲೆಗೆ ಹೋಗುವಾಗ ನಾನು ಹಾಕಿ ಕೊಳ್ಳುತ್ತಿದ್ದ ‘ಮೈಲಿಗೆ’ ಶರ್ಟಿನಿಂದ. ದುಬಾರಿ, ವಿಶೇಷ ಖಾಸಗಿ ಶಾಲೆಗಳು ಉಳ್ಳವರಿಗೆ ಮತ್ತು ನಿರ್ಲಕ್ಷಿತ ಸರ್ಕಾರಿ ಶಾಲೆಗಳು ಬಡವರಿಗೆ ಎನ್ನುವ ಇವತ್ತಿನ ಸಂದರ್ಭದಲ್ಲಿ ನಾವು ಇದನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಕೊನೆಯ ಪಕ್ಷ ಹತ್ತನೆಯ ತರಗತಿಯವರೆಗಾದರೂ ಮಾತೃ ಭಾಷೆಯ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ಮಾಡುವುದರಿಂದ, ಆಕೆಯ/ಅವನ ಮನೋವಿನ್ಯಾಸದ ತಳಹದಿಯ ಬೆಳವಣಿಗೆಗೆ ಸಹಾಯಕವಾಗುತ್ತದೆ. ಇಂಗ್ಲಿಷ್‌ಮಾಧ್ಯಮದಲ್ಲಿ ಓದುವವರು ನಮ್ಮವರೇ ಆದ ಬಡವರ ಜೀವನದಿಂದ, ಅವರ ಶ್ರೀಮಂತ ಜೀವಂತ ಸಂಸ್ಕೃತಿಗಳಿಂದ ಹೊರಗೇ ಉಳಿಯುತ್ತಾರೆ. ನನ್ನ ಅಭಿಪ್ರಾಯದಲ್ಲಿ ಇದನ್ನು ಬೌದ್ಧಿಕವಾಗಿ ಒಪ್ಪದಿದ್ದರೂ ನಮ್ಮಲ್ಲಿ ಬಹುತೇಕರು ತಪ್ಪಿತಸ್ಥರೇ, ಯಾಕೆಂದರೆ ಇದೊಂದು ಅಪರಾಧ. ಒಂದು ದೇಶವಾಗಿ ನಾವು ಸಾರ್ತ್ರೆ ಹೇಳುವಂತೆ ‘ಬ್ಯಾಡ್ ಫೇಥ್‌ನಲ್ಲಿ ಬದುಕುವುದಕ್ಕೆ ಒಗ್ಗಿ ಹೋಗಿದ್ದೇವೆ.’)

ನನ್ನ ಬದುಕಿನ ನಿಜವಾದ ಶಾಲೆ ಭಿನ್ನವಾಗಿತ್ತು. ಅದು ನನ್ನ ಮನೆಯ ಹಿತ್ತಿಲು. ಅಲ್ಲಿ ನನ್ನ ಅಜ್ಜನಿಗೆ ಮಾತ್ರ ಗೊತ್ತಿದ್ದ ಗಿಡಮೂಲಿಕೆಗಳಿದ್ದವು. (ನಾನು ದೊಡ್ಡವನಾದ ಮೇಲೆ ನನಗೆ ಅವುಗಳನ್ನು ತೋರಿಸಿಕೊಡುವುದಾಗಿ ತಾತ ಹೇಳುತ್ತಿದ್ದರು.) ನನ್ನ ತಾಯಿ ಮತ್ತು ಹಳ್ಳಿಯ ಇತರ ಹೆಂಗಸರು ಬಳಸುತ್ತಿದ್ದ ಎಂದೂ ಬತ್ತದ ಬಾವಿ ಆ ಹಿತ್ತಲಿನಲ್ಲಿತ್ತು. ಅಲ್ಲಿ ಎಲ್ಲ ಹೆಂಗಸರಿಗೂ ಹಂಚಿಕೊಳ್ಳಲೂ ಏನಾದರೊಂದು ಗಾಸಿಪ್ ಇದ್ದೇ ಇರುತ್ತಿತ್ತು. ನನ್ನ ತಾಯಿ ಉಳಿದಿದ್ದ ಆಹಾರ ಪದಾರ್ಥವನ್ನು ಇತರ ಎಲ್ಲ ಜಾತಿಯ ಹೆಣ್ಣು ಮಕ್ಕಳಿಗೆ ಹಂಚುತ್ತಿದ್ದರು. ಗಂಡಸರ ಬಳಿ ಹೇಳಿಕೊಳ್ಳಲಾಗದಿದ್ದ ದೇಹದ ಖಾಯಿಲೆಗಳು ಮತ್ತು ಊರಿನ ‘ಗೌರವಸ್ಥರ’ ಲೈಂಗಿಕ ಸಂಬಂಧಗಳ ಬಗ್ಗೆ, ಕಟ್ಟಾ ಸಂಪ್ರದಾಯವಾದಿಗಳಾದ ಅಗ್ರಹಾರದವರೂ ಇದರಲ್ಲಿ ಸೇರಿರುವುದರ ಬಗ್ಗೆ ಅವರ ಮಾತನಾಡಿಕೊಳ್ಳುತ್ತಿದ್ದರು. ಸಹ್ಯಾದ್ರಿಯ ಮಲೆಗಳ ಅಡಿಯಲ್ಲಿ ಕರಾವಳಿಯಿಂದ ಸೂಕ್ತ ಅಂತರದಲ್ಲಿ, ಹಿನ್ನೀರಿನಲ್ಲಿ ಸುರಕ್ಷಿತವಾಗಿ ಅಡಗಿದ್ದ ನಮ್ಮ ಅಗ್ರಹಾರ ನಿಜವಾಗಿಯೂ ಭೂಗತ ಲೋಕವೇ ಆಗಿತ್ತು. ಈ ಗಾಸಿಪ್‌ಗಳನ್ನು ನಾನೇನಾದರೂ ಕೇಳದೇ ಇರುತ್ತಿದ್ದರೆ, ಮನುಯ ಸಂಬಂಧಗಳಲ್ಲಿರುವ ತೋರಿಕೆ ಮತ್ತು ವಾಸ್ತವದ ಅಂತರವನ್ನು ಪ್ರತಿಬಿಂಬಿಸುವ ಕಥೆಗಾರನಾಗಿರುತ್ತಿರಲೇ ಇಲ್ಲ. ಯಾರನ್ನು ಪ್ರಭಾವಶಾಲಿಗಳೆಂದು ತಿಳಿದಿರುತ್ತೇವೋ ಅವರ ಹುಸಿತನಗಳನ್ನು ತಿಳಿಯುವುದು ಒಂದು ರೀತಿಯಲ್ಲಿ ಬಿಡುಗಡೆಯೇ.

ನನ್ನ ಕೆಲವು ಉಪಾಧ್ಯಾಯರು ಆಧುನಿಕರಾಗಿದ್ದರು. ವೈಚಾರಿಕರೂ ಆಗಿದ್ದರು. ನಮ್ಮ ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸುವುದು ಪದವೀಧರರಲ್ಲಿ ಫ್ಯಾಷನಬಲ್ ಆಗಿತ್ತು. ಭಗವದ್ಗೀತೆ-ಅಷ್ಟು ಸುದೀರ್ಘವಾದ ವಾಗ್ವಾದ ಯುದ್ಧಭೂಮಿಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ ಎಂಉದ ಅಧ್ಯಾಪಕರೊಬ್ಬರು ಹೇಳುತ್ತಿದ್ದುದು ನನಗೆ ನೆನಪಿದೆ. ನಮ್ಮ ಪ್ರಾಚೀನ ವಿದ್ವತ್ತಿನಲ್ಲಿ ನಂಬಿಕೆಯಿದ್ದ ವಾತಾವರಣದಲ್ಲಿ ಬೆಳೆಯುತ್ತಿದ್ದ ಹುಡುಗನಾಗಿದ್ದ ನನ್ನಲ್ಲಿ ಇವು ಗೊಂದಲವನ್ನು ಹುಟ್ಟಿಸುತ್ತಿದ್ದವು. ಅಗ್ರಹಾರದಲ್ಲಿ ಅನಾರೋಗ್ಯಪೀಡಿತರಾಗಿದ್ದವರಿಗೆ ಬೇರೆ ಬೇರೆ ಬಣ್ಣದ ಬಾಟಲುಗಳಲ್ಲಿ ನಾನು ಔಷಧಿಯನ್ನು ಒಯ್ಯುತ್ತಿದ್ದೆ. ಇಡೀ ಹಳ್ಳಿಯಲ್ಲಿರುವ ತಾಯಂದಿರ ಸಲುವಾಗಿ ನಾವು ಹುಡುಗರು ಈ ಕೆಲಸವನ್ನು ಹಂಚಿಕೊಳ್ಳುತ್ತಿದ್ದೆವು. ಡಾಕ್ಟರ್ ಶಾಪಿನಲ್ಲಿ ನೀಟಾಗಿ ಬಟ್ಟೆ ಧರಿಸಿ ಕ್ಷೌರ ಮಾಡಿಕೊಂಡ ವ್ಯಕ್ತಿಯೊಬ್ಬ ತಾನು ಓದಿದ್ದನ್ನು ನಮ್ಮೊಂದಿಗೆ ಮಾತನಾಡುತ್ತಾ ಬಾಟಲುಗಳಿಗೆ ಬಣ್ಣದ ದ್ರವಗಳನ್ನು ತುಂಬಿಸುವುದಕ್ಕಾಗಿ ನಾವು ಕಾಯುತ್ತಿದ್ದೆವು. ಆತ ಭೂಮಿಯನ್ನು ಗೇಣಿಗೆ ಕೊಟ್ಟ ಜಮೀನದ್ದಾರ ಕುಟುಂಬಕ್ಕೆ ಸೇರಿದವನಾಗಿದ್ದ ಮತ್ತು ಬರ್ನಾರ್ಡ್ ಷಾ, ವಾಲ್ಟೇರ್ ಮತ್ತು ಮಿಲ್ ಇವರನ್ನು ಓದಿದವನಾಗಿದ್ದ. ಆತನ ಬಳಿ ಡೈನಮೋದ ಸಹಾಯದಿಂದ ನಡೆಯುತ್ತಿದ್ದ ರೇಡಿಯೋ ಕೂಡ ಇತ್ತು, ನಮ್ಮ ತಾಲ್ಲೂಕಿಗೆ ಇನ್ನೂ ವಿದ್ಯುಚ್ಛಕ್ತಿ ಬಂದಿರಲಿಲ್ಲ. ಈತನ ಬಗೆಗೂ, ತನ್ನ ಹೆಸರನ್ನು ಶ್ರೀನಿವಾಸ್‌ನಿಂದ ಸಿನ್ಹಾ ಎಂದು ಇಂಗ್ಲೀಷೀಕರಣ ಮಾಡಿಕೊಂಡ, ರೇಡಿಯೋದಲ್ಲಿ ಬಿ.ಬಿ.ಸಿಯಲ್ಲಿ ಬರುವ, ಬ್ರಿಟಿಷ್ ಉಚ್ಚಾರಣೆಯನ್ನು ರೂಢಿಸಿಕೊಂಡ ಕಥೆಗಳು ಚಾಲ್ತಿಯಲ್ಲಿದ್ದವು.

ಎಷ್ಟೋ ವರ್ಷಗಳ ನಂತರ ನನಗೆ ಇಂಗ್ಲೆಂಡಿನಲ್ಲಿ ಓದಲು ಕಾಮನ್ ವೆಲ್ತ್ ಸ್ಕಾಲರ್‌ಷಿಪ್ ಸಿಕ್ಕಿದೆ ಎಂದು ಹೇಳಿದಾಗ ಆತ ‘ನೀನು ಹಾರುತ್ತಿದ್ದೀಯ?’ಎಂದು ಕೇಳಲಿಲ್ಲ. ಬದಲಿಗೆ ‘ಸರಿಯಾಗಿ’ ಕೇಳಿದ, “ವೆನ್ ಆರ್ ಯು ಎಂಪ್ಲೆನಿಂಗ್?”. ನಾನು ನೀರಧ್ ಚೌಧರಿಯನ್ನು ಓದಿದಾಗ ಈತನನ್ನು ನೆನಪಿಸಿಕೊಂಡೆ. ಈತನ ಹಾಗಿರುವವನೊಬ್ಬ ನನ್ನ ಭಾರತಿಪುರ ಕಾದಂಬರಿಯ ಮುಖ್ಯ ಪಾತ್ರಗಳಲ್ಲೊಂದು.

ಸಿನ್ಹಾನ ಮಾತುಗಳನ್ನೆಲ್ಲ ಕೇಳಿದ್ದಾದ ಮೇಲೆ ನಾವು ಕೆಲವು ಬ್ರಾಹ್ಮಣ ಹುಡುಗರು ತಮಗೆ ದಕ್ಷಿಣೆಯಲ್ಲಿ ಸಿಕ್ಕಿದ ಹಣದಲ್ಲಿ ಉಳಿಸಿದ ಕೆಲವು ಆಣೆಗಳಲ್ಲಿ ದಾರಿ ಬದಿಯ ಅಂಗಡಿಯೊಂದರಲ್ಲಿ ಕೊಂಡ ಕಡಲೆಬೀಜವನ್ನು ಮೆಲ್ಲುತ್ತಾ ಲೋಕಾಭಿರಾಮವಾಗಿ ಮನೆಯ ಕಡೆ ಸಾಗುತ್ತಿದ್ದೆವು. ಕಡಲೆಕಾಯಿಯನ್ನು ಸುಲಿಯುತ್ತ ಹುರಿದ ಆ ಬೀಜಗಳನ್ನು ಮೆಲ್ಲುತ್ತ ಸಿನ್ಹಾ ಹೇಳಿದುದರ ಬಗೆಗೆ ನಮ್ಮೊಳಗೇ ವಾದ ಹೂಡುತ್ತಿದ್ದೆವು. ಕೆಲವು ಸಂಜೆಗಳಲ್ಲಿ ಅಥವಾ ರಜಾದಿನಗಳಲ್ಲಿ ನಾವು ಪಟ್ಟಣದಿಂದ ಬಂದಿದ್ದ ಆರ್ಯಸಮಾಜದವರು ಮತ್ತು ನಮ್ಮ ಸಾಂಪ್ರದಾಯಿಕ ಸಂಸ್ಕೃತ ಪಂಡಿತರ ನಡುವೆ ನಡೆಯುತ್ತಿದ್ದ ಗಂಭಿರ ವಾಗ್ವಾದಗಳನ್ನೂ ಆಲಿಸುತ್ತಿದ್ದೆವು. ಭೂಮಿ ಚಪ್ಪಟೆಯಾಗಿದೆಯೋ ಅಥವಾ ದುಂಡಗಿದೆಯೋ ಮತ್ತು ಭೂಮಿ ಸೂರ್ಯನ ಸುತ್ತ ಸುತ್ತುತ್ತದೆಯೋ ಅಥವಾ ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೋ ಎನ್ನುವ ವಾಗ್ವಾದವನ್ನು ಕೇಳಿದ್ದು ನೆನಪಾಗುತ್ತಿದೆ. ಗ್ರಹಣಗಳು ಹೇಗಾಗುತ್ತವೆ ಮತ್ತು ಅಂಥ ಸಹಜ ಪ್ರಾಕೃತಿಕ ಘಟನೆಗಳಿಗೆ ಧಾರ್ಮಿಕ ಅರ್ಥಗಳನ್ನು ಯಾಕೆ ಹಚ್ಚಬೇಕು ಎನ್ನುವುದರ ಬಗೆಗೂ ಚರ್ಚೆಗಳು ನಡೆಯುತ್ತಿದ್ದವು. ಎಲ್ಲೋ ನಾನೊಮ್ಮೆ ಹೇಳಿದ್ದೆ. “ನಾನು ಗೆಲಿಲಿಯೋನ ಸಮಕಾಲೀನ ನಾಗಬಹುದಿತ್ತು!”, ಎಂದು.

ನಮ್ಮ ಚರ್ಚೆಗಳ ಹಿನ್ನೆಲೆಯಲ್ಲಿ ಯಾವಾಗಲೂ ಗಾಂಧಿ ಹೇಳಿದ್ದು ಮತ್ತು ಮಾಡಿದ್ದು ಇರುತ್ತಲೇ ಇತ್ತು. ಅದರಲ್ಲಿ ಬಹುಪಾಲು ಇರುತ್ತಿದ್ದುದು ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗುವುದರ ಬಗೆಗಲ್ಲ. ಬದಲಿಗೆ ಅಸ್ಪೃಶ್ಯರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದು ಸರಿಯೋ ಎನ್ನುವುದರ ಬಗ್ಗೆ. ಹಳ್ಳಿಯ ಕೆಲವು ಹಿರಿಯರು ಯೋಚಿಸುತ್ತಿದ್ದುದು ಗಾಂಧಿ ಕಾಲದ ಕೊನೆಗೆ ಬಂದ ಕಲಿಪುರುಷ ಎಂದು. ಅವರು ನನ್ನ ತಂದೆ ಹೇಳುತ್ತಿದ್ದ ಕಲ್ಕಿ ರಕ್ಷಕ ಶಕ್ತಿ ಎಂಬುದನ್ನು ಒಪ್ಪುತ್ತಿರಲಿಲ್ಲ. ಈಗಲೂ ನನಗೆ, ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನು ತಿಳಿದ ಹಾಗೆ ಗಾಂಧಿ ‘ಮಹಾತ್ಮ’ರೆಂದೇ ಅನಿಸುತ್ತದೆ. ಯಾಕೆಂದರೆ ಮೊದಲ ದರ್ಜೆ ಬೋಗಿಯಿಂದ ವರ್ಣೀಯನೆಂದು ತಳ್ಳಲ್ಪಟ್ಟ ಗಾಂಧಿ ತನಗಾದ ಅವಮಾನದ ಬಗೆಗೆ ಮಾತ್ರ ಕೋಪಗೊಳ್ಳಲಿಲ್ಲ. ಬದಲಿಗೆ ನಮ್ಮವರನ್ನೇ ನಾವು ಹೇಗೆ ಅವಮಾನಸುತ್ತೇವೆ ಎನ್ನುವುದನ್ನು ಅರ್ಥ ಮಾಡಿಕೊಂಡರು. ನಮ್ಮ ತಲೆಮಾರಿಗೆ ಗಾಂಧಿಯಿಂದ ಬಂದದ್ದು ಈ ಆತ್ಮದರ್ಶಕ ಪ್ರಜ್ಞೆ. ನಾವು ಈ ಭಾರತವನ್ನು ಫಿರಂಗಿಯವರಿಂದ ಬಿಡುಗಡೆಗೊಳ್ಳಬೇಕಾದ ದೇಶವಾಗಿಯೂ, ಸುಧಾರಣೆ ಮತ್ತು ಪುನರುಜ್ಜೀವನಕ್ಕೊಳಗಾಗಬೇಕಾದ ಸಮುದಾಯವಾಗಿಯೂ ಚಿಂತಿಸುವುದನ್ನು ಕಲಿತೆವು.

ಒಮ್ಮೆ ನಮ್ಮ ತಾಲ್ಲೂಕು ಪ್ಲೇಗ್ ರೋಗಕ್ಕೆ ತುತ್ತಾಯಿತು. ಶಾಲೆಗಳು ಮುಚ್ಚಿದ್ದವು. ಸಣ್ಣ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ನಮ್ಮ ಸಂಬಂಧಿಕರು ನಮ್ಮ ಜೊತೆ ಇರಲು ಅಗ್ರಹಾರಕ್ಕೆ ಬಂದರು. ವೈದ್ಯರು ನಮಗೆಲ್ಲ ರೋಗನಿರೋಧಕ ಚುಚ್ಚುಮದ್ದನ್ನು ಹಾಕಿದರು. ಆದರೆ ವೈದ್ಯರು ಅಸ್ಪೃಶ್ಯರು ವಾಸಿಸುತ್ತಿದ್ದ ಬೆಟ್ಟದ ಮೇಲಕ್ಕೆ ಹೋಗಲೇ ಇಲ್ಲ. ಅವರು ಅಸ್ಪೃಶ್ಯರೂ ಹೌದು. ಅದೃಶ್ಯರೂ ಹೌದು. ಯಾವಾಗ ಅವರ ಕೆಲವು ಗಂಡಸರು ಮತ್ತು ಹೆಂಗಸರು ನಮ್ಮ ದನದ ಕೊಟ್ಟಿಗೆಗಳನ್ನು ಶುದ್ಧ ಮಾಡಲು ಬರಲಿಲ್ಲವೋ ಆಗಲೇ ನಮಗೆ ಗೊತ್ತಾದದ್ದು, ಅವರೂ ಪ್ಲೇಗ್‌ನಿಂದ ಸಾಯುತ್ತಿದ್ದಾರೆ ಎಂದು. ಕೆಲವೊಮ್ಮೆ ಗುಡಿಸಲಿನಲ್ಲಿದ್ದ ಅಷ್ಟೂ ಜನ ತೀರಿಕೊಂಡಾಗ ಗುಡಿಸಿಲಿಗೆ ಬೆಂಕಿ ಹಚ್ಚಲಾಗುತ್ತಿತ್ತು.

ಆ ದಿನಗಳಲ್ಲಿ ಸೈನ್ಯದಿಂದ ನಮ್ಮ ಅಗ್ರಹಾರಕ್ಕೆ ಬಂದಿದ್ದ ಯುವಕನೊಬ್ಬನನ್ನು ನಾನು ಮೆಚ್ಚಲು ಆರಂಭಿಸಿದೆ. ಆತ ನಮಗೆ ಹೊಚ್ಚ ಹೊಸದಾದ ಜಗತ್ತೊಂದನ್ನೇ ತಂದಿದ್ದ. ಹಠವಾದಿ ಬ್ರಾಹ್ಮಣ ಬದುಕಿನ ಮಿತಿಗಳಿಂದ, ನಿಷೇಧಗಳಿಂದ ಮುಕ್ತವಾದ ಜಗತ್ತು ಅದು. ಆತ ತನ್ನ ಸಾಂಪ್ರದಾಯಿಕ ಕುಟುಂಬದ ವಿರುದ್ಧ ಬಂಡೆದ್ದು ಸೈನ್ಯವನ್ನು ಸೇರಿದ್ದ. ಆತ ಮರಳಿ ಬಂದದ್ದು ಆತನ ಮನೆಯವರಿಗೆ ಸಂತೋಷವನ್ನೇ ತಂದಿತ್ತು. ಶಾಸ್ತ್ರಬದ್ಧವಾಗಿ ಪಂಚಗವ್ಯದಿಂದ ಆತನನ್ನು ಶುದ್ಧಿಗೊಳಿಸಿ ವಾಪಸ್ಸು ಜಾತಿಯ ಮಡಿಲಿಗೆ ಸೇರಿಸಿಕೊಳ್ಳಲಾಗಿತ್ತು. ಆತ ಶಾಲೆಗೆ ಹೋಗದವರಿಗಾಗಿ ಫುಟ್ ಬಾಲ್ ಕ್ಲಬ್ಬೊಂದನ್ನು ಶುರು ಮಾಡಿದ. ಸೈನ್ಯದಲ್ಲಿದ್ದಂತೆಯೇ ನಮಗೆ ತರಬೇತಿಯನ್ನೂ ನೀಡಿದ. ನಾವು ಕೆಲವರು ಸುಭಾಷ್ ಚಂದ್ರಬೋಸರನ್ನು ಆರಾಧಿಸುತ್ತಿದ್ದವರು ಈ ಯುವಕನನ್ನೂ ಮೆಚ್ಚಿಕೊಳ್ಳಲು ಆರಂಭಿಸಿದೆವು. ನಾವು ಭೂಗೋಳದ ತರಗತಿಯಲ್ಲಿ ಭಾರತದ ಭೂಪಟದಲ್ಲಿ ಮಾತ್ರ ಗುರುತಿಸಲು ಕಲಿತಿದ್ದ ಸ್ಥಳಗಳನ್ನು ಆತ ನೋಡಿದ್ದ. ಹರಿಜನ ಕಾಲೋನಿಯಿಂದ ಒಬ್ಬ ಯುವತಿ ಬಂದು ನಮ್ಮಕೊಟ್ಟಿಗೆಗಳನ್ನು ಶುದ್ಧಗೊಳಿಸುತ್ತಿದ್ದಳು, ನನಗೆ ಗೊತ್ತಿರುವ ಅತ್ಯಂತ ಸುಂದರವಾದ ಯುವತಿಯಿವಳು ಎನ್ನುವ ಆಲೋಚನೆಯನ್ನು ನಾನು ಹತ್ತಿಕ್ಕಲಾರದವನಾಗಿದ್ದೆ. ಖಂಡಿತವಾಗಿ ಸಂಪ್ರದಾಯದ ಬಂಧನಗಳಾಚೆಗೂ ಈ ಬಗೆಯ ಭಾವಗಳು ಹುಟ್ಟುವ ವಯಸ್ಸಿನವನಾಗಿದ್ದೆ ನಾನು. ಮಹರ್ಷಿ ಪರಾಶರ ಮೀನಿನ ವಾಸನೆಯ ಮತ್ಸ್ಯಗಂಧಿಯಲ್ಲಿ ನೋಡಿದ ಘಳಿಗೆಯಲ್ಲೇ ಅನುರಕ್ತನಾಗಲಿಲ್ಲವೇ? ಮಹಾಭಾರತದ ಕರ್ತೃ ಸದ್ಯೋಜಾತನಾಗಿ ಹುಟ್ಟಿದ್ದು ಈ ಮಿಲನದಿಂದ. ಬಹುತೇಕ ಶ್ರೇಷ್ಠ ಭಾರತೀಯ ಪಠ್ಯಗಳಲ್ಲಿ ಮತ್ತು ಭಕ್ತಿ ಕಾವ್ಯದಲ್ಲಿಯೂ ಕೂಡ ಶೃಂಗಾರ ಮತ್ತು ಅನುಭಾವಗಳು ಒಟ್ಟೊಟ್ಟಿಗೇ ಇರುತ್ತವೆ.

ನಮ್ಮ ಈ ಮಾಜಿ ಸೈನಿಕ ಯುವಕ ಈಕೆಯೊಂದಿಗೆ ಗುಪ್ತ ಸಂಬಂಧವನ್ನು ಹೊಂದಿದ್ದ. ಇದೂ ಕೂಡ ನಾನು ಊಹಿಸಿದ್ದು. ಆಕೆಯ ಕೇರಿಯಲ್ಲಿ ಜನ ಸಾಯಲು ಪ್ರಾರಂಭಿಸಿದಾಗ ನನಗೆ ಗೊತ್ತಾಯಿತು ಆಕೆ ಇದ್ದಕ್ಕಿದ್ದಂತೆ ಮಾಯವಾಗಿ ಬಿಟ್ಟಿದ್ದಾಳೆ ಎಂದು. ಎಲ್ಲರೂ ಹೇಳಿದರು, ಆಕೆ ತಾನೂ ಸಾಯಬಹುದೆಂಬ ಭಯದಿಂದಲೇ ಓಡಿಹೋದಳೆಂದು.

ಸಿನಿಕತನದಲ್ಲಿ, ಸದಾ ಭುವ್ಯಾಜ್ಯಗಳಲ್ಲೇ ಮುಳುಗಿ ಹೋದ, ಧಾರ್ಮಿಕ ವಿಚಾರಗಳನ್ನು ಚೆನ್ನಾಗಿ ತಿಳಿದಿದ್ದ ಹಳ್ಳಿಯ ಹಿರಿಯರು ದೇವರು ಗಾಂಧಿಯನ್ನು ಅನುಸರಿಸುತ್ತಿರುವ, ದೇವಸ್ಥಾನವನ್ನು ಪ್ರವೇಶಿಸುತ್ತಿರುವ ಅಸ್ಪೃಶ್ಯರ ಮೇಲೆ ಕೋಪ ಗೊಂಡು ಪ್ಲೇಗಿನ ಮೂಲಕ ಶಿಕ್ಷಿಸುತ್ತಿದ್ದಾನೆ ಎಂದು ವಾದಿಸುತ್ತಿದ್ದರು. ನಾನು ಮಾತ್ರ ಕೊನೇ ಪಕ್ಷ ನನ್ನ ಸಹಪಾಠಿಗಳ ಜೊತೆಯಲ್ಲಾದರೂ ವಾದಿಸುತ್ತಿದ್ದೆ, ಇದು ಮೂರ್ಖ ಮತ್ತು ಅನೀತಿಯದ್ದು ಎಂದು. ಅಸ್ಪೃಶ್ಯರೆನ್ನುವ ಕಾರಣಕ್ಕೆ, ಚುಚ್ಚುಮದ್ದನ್ನು ಪಡೆಯದ ಕಾರಣಕ್ಕಾಗಿಯೇ ಅವರು ಸಾಯುತ್ತಿದ್ದಾರೆ ಎಂದು ನಾನು ವಾದಿಸುತ್ತಿದ್ದೆ. ಆ ಹುಡುಗಿ ಓಡಿ ಹೋದಾಗ ನಾನೊಂದು ಕಥೆಯನ್ನೂ ಬರೆದಿದ್ದೆ.

ನಾನು ಈ ಕಥೆಯನ್ನು ಅಗ್ರಹಾರದಲ್ಲಿ ಪ್ರಸಾರವಾಗುತ್ತಿದ್ದ ಹಸ್ತಪ್ರತಿ ಪತ್ರಿಕೆಗೆ ಬರೆದಿದ್ದೆ. ಇದನ್ನು ನಾನು ‘ತರಂಗಿಣಿ’ ಎಂದು ಕರೆದಿದ್ದೆ. ನಾವು ಮೂರು ಭಾಷೆಗಳಲ್ಲಿನ ಲೇಖನಗಳನ್ನು ಹಾಕುತ್ತಿದ್ದೆವು. ಕನ್ನಡ, ಸಂಸ್ಕೃತ ಮತ್ತು ಹೊಸದಾಗಿ ಕಲಿತ ಇಂಗ್ಲಿಷ್. ಓಡಿ ಹೋದ ಹುಡುಗಿಯ ಬಗ್ಗೆ ರೂಪಕಾತ್ಮಕವಾದ ಕಥೆಯನ್ನು ನಾನು ಬರೆದಿದ್ದೆ.

ಇದನ್ನು ನಾನು ರೂಪಕಾತ್ಮಕವಾಗಿಯೇ ಬರೆಯಬೇಕಾಗಿತ್ತು. ಏಕೆಂದರೆ ನನಗೆ ಗೊತ್ತಿರುವುದು ನಮ್ಮ ಹಿರಿಯರಿಗೆ ತಿಳಿಯುವುದು ನನಗೆ ಬೇಡವಾಗಿತ್ತು. ಎಲ್ಲ ಕಾಲದಲ್ಲಿಯೂ ರೂಪಕಗಳು ಬರಹಗಾರರಿಗೆ ಅಡಗುತಾಣಗಳಾಗಿಯೇ ಕೆಲಸ ಮಾಡುತ್ತವೆ. ಜಾರ್ ದೊರೆಗಳ ರಷ್ಯಾದಲ್ಲಿ ಬರೆಯುತ್ತಿದ್ದ ದಾಸ್ತೋವಸ್ಕಿಯಂತಹ ಲೇಖಕರ ಮಟ್ಟಿಗಂತೂ ಇದು ತೀರ ನಿಜ. ರಾಜಕುಮಾರನ ಸ್ಪರ್ಶದಿಂದ ಎಚ್ಚರಗೊಂಡ, ಮಲಗಿದ ರಾಜಕುಮಾರಿಯ ಕಥೆಯನ್ನು ನಾನು ಮತ್ತೆ ಹೊಸದಾಗಿ ಬರೆದೆ. ಆಗಿನಿಂದ ಸ್ಪರ್ಶ ನನ್ನ ಥೀಮ್‌ಗಳಲ್ಲೊಂದಾಯಿತು.

ಈಗ ನಾವು ಕಾಲದಲ್ಲಿ ಮುಂದೆ ಹೋಗಿ ನಂತರ ನನ್ನ ಯೌವ್ವನದ ದಿನಗಳಿಗೆ ಮರಳಬೇಕು. ಇದು ನಡೆದದ್ದು ಅರವತ್ತರ ದಶಕದಲ್ಲಿ. ಆಗ ನಾನು ಬರ್ಮಿಂಗ್ ಹ್ಯಾಂನಲ್ಲಿ ಸಂಶೋಧನಾವಿದ್ಯಾರ್ಥಿ. ನನ್ನ ಮಾರ್ಗದರ್ಶಕರಾಗಿದ್ದವರು ಪ್ರಸಿದ್ಧ ಕಾದಂಬರಿಕಾರ ಹಾಗೂ ವಿಮರ್ಶಕ, ಮಾಲ್ಕಂ ಬ್ಯ್ರಾಡ್‌ಬರಿ. ಆತ ನನ್ನದೇ ವಯಸ್ಸಿನವರು. ಅವರ ತಿಳುವಳಿಕೆ, ಕುತೂಹಲ  ಮತ್ತು ತೆರೆದ ಮನಸ್ಸನ್ನು ನಾನು ಮೆಚ್ಚಿಕೊಂಡಿದ್ದೆ. ನಾವಿಬ್ಬರೂ ಒಟ್ಟಿಗೇ ಯೂನಿವರ್ಸಿಟಿ ಫಿಲ್ಮ್‌ಸೊಸೈಟಿಯಲ್ಲಿ ಬರ್ಗ್‌ಮನ್ನನ ‘ಸೆವೆಂತ್ ಸೀಲ್‌’ ಸಿನಿಮಾ ನೋಡಿದೆವು. ಆ ಸಿನಿಮಾದಲ್ಲಿ ಸಬ್ ಟೈಟಲ್‌ಗಳಿರಲಿಲ್ಲ. ನೀವು ಅರ್ಥ ಮಾಡಿಕೊಂಡ ಅಥವಾ ಅಪಾರ್ಥ ಮಾಡಿಕೊಂಡ ಸಂಗತಿಗಳೇ ಚೋದಕಗಳೂ ಸೃಷ್ಟಿಶೀಲವೂ ಆಗಿಬಿಡುತ್ತವೆ. ಆ ಸಿನಿಮಾ ನನಗೆ ಅಷ್ಟೇನೂ ಅರ್ಥವಾಗಲಿಲ್ಲ. ಮಧ್ಯಯುಗೀನ ಯುರೋಪ್‌ನ ನಂಬಿಕೆಯ ಪತನವನ್ನು ಅದರ ನಿಗೂಢ ‘ಅನ್ಯವನ್ನು’ ಧರ್ಮಯುದ್ಧದ ನೆಲೆಯಲ್ಲಿ ಮುಖಾಮುಖಿಯಾದ ವಸ್ತು ಆ ಸಿನಿಮಾದ್ದು.

ಸಿನಿಮಾ ನೋಡಿದ ನಂತರ ಸ್ಟೂಡೆಂಟ್ ಯೂನಿಯನ್ ಬಾರಿನಲ್ಲಿ ಬಿಯರ‍ನ್ನು ಹೀರುತ್ತಾ ಪ್ರೊಫೆಸರ್ ಬ್ಯ್ರಾಡ್‌ಬರಿಯವರಿಗೆ ನಾನು ಹೇಳಿದೆ, ಯುರೋಪಿನವನೊಬ್ಬ ತನ್ನ ಮಧ್ಯಯುಗವನ್ನು ಮತ್ತೆ ಕಟ್ಟಿಕೊಳ್ಳುವುದನ್ನು ಸಂಶೋಧನೆ ಮತ್ತು ಕಲಿಯುವಿಕೆಯ ಮೂಲಕ ಮಾಡಬೇಕು. ಆದರೆ ನನ್ನ ಮಟ್ಟಿಗೆ ಅದು ಸದ್ಯದ್ದೇ ಆಗಿದೆ. ನನ್ನ ಸಂಬಂಧಿಕರಲ್ಲಿ ಮತ್ತು ನನ್ನ ಕೆಲವು ಆಳವಾದ ಭಾವಗಳಲ್ಲಿ ಅದು ನನ್ನ ವರ್ತಮಾನದ ಜತೆಯಲ್ಲಿಯೂ ಇದೆ. ನನ್ನ ಮದುವೆ ನನ್ನ ಅಜ್ಜಿಯ ಹಳೆಯ ದೃಷ್ಟಿಕೋನದಲ್ಲಿಯೂ ನಡೆಯಬಹುದಿತ್ತು ಮತ್ತು ನಾನು ಆಧುನಿಕ ಜಗತ್ತಿನ ವ್ಯವಸ್ಥೆಯ ಆಫೀಸೊಂದರಲ್ಲಿಯೂ ಕೆಲಸ ಮಾಡಬಹುದಿತ್ತು. ನಾನು ಒಂದೇ ಕಾಲದಲ್ಲಿ ಅನೇಕ ಜಗತ್ತುಗಳಲ್ಲಿ ಇರಬಲ್ಲೆ. ನಮ್ಮ ಪ್ರಜ್ಞಾವಲಯದಲ್ಲಿ ಅನೇಕ ಶತಮಾನಗಳು ಒಟ್ಟಿಗೇ ಇರಬಲ್ಲವು. ಯಾಕೆಂದರೆ ಯುರೋಪಿನಂತೆ ನಮ್ಮ ಇತಿಹಾಸ ಸರಳರೇಖೆಯ ಚಲನೆಯದಲ್ಲ.

ಚಾಸರ್ ತೀರ್ಥಯಾತ್ರೆಯ ಸಂದರ್ಭವೊಂದರಲ್ಲಿ ಹೇಳುವ ಕ್ಯಾಂಟರ್ ಬರಿ ಕಥೆಗಳು, ಕೈಗಾರಿಕೀರಣಕ್ಕೊಳಗಾಗಿರುವ ಲಂಡನ್ನಿನ ಬಗ್ಗೆ ಡಿಕನ್ಸ್ ಬರೆಯುವಷ್ಟೇ ಮತ್ತು ಕಮೂವಿನ ಅನುಭಾವಿಕ ಪ್ರಶ್ನೆಗಳಷ್ಟೇ ಕ್ಯಾಂಟರ್ ಬರಿ ಟೇಲ್ಸ್ ನಮಗೆ ಸಮಕಾಲೀನ.

ಇದಾದ ನಂತರ ನಾನು ನನ್ನ ಹೈಸ್ಕೂಲಿನ ದಿನದ ಬಗ್ಗೆ ಯೋಚಿಸುತ್ತಿದ್ದೆ. ಸಿನ್ಹಾನನ್ನುಕ್ಲಿನಿಕ್‌ನಲ್ಲಿ ಭೇಟಿಯಾಗುವುದು ಮತ್ತು ಅಧ್ಯಾಪಕರು ಭಗವದ್ಗೀತೆಯನ್ನು ಟೀಕಿಸುವುದು, ಗೆಲಿಲಿಯೋ ತುಂಬ ಹಿಂದೆಯೇ ಸಿದ್ಧ ಮಾಡಿ ತೋರಿಸಿದ ಸಂಗತಿಯ ಬಗ್ಗೆ ವಾಗ್ವಾದವೊಂದನ್ನು ಕೇಳುವುದು. ಬ್ಯ್ರಾಡ್ ಬರಿ ಹೇಳಿದರು, ಈ ಎಲ್ಲವನ್ನೂ ದರ್ಶಿಸುವ ದಾರಿಯೊಂದನ್ನು ನನ್ನ ಸೃಜನಶೀಲ ಬರವಣಿಗೆಯಲ್ಲಿ ನಾನು ಹುಡುಕಬೇಕೆಂದು.

ನನ್ನ ಸಂಶೋಧನಾಪ್ರಬಂಧದ ಮುಂದಿನ ಅಧ್ಯಾಯದ ಬರವಣಿಗೆಯನ್ನು ನಿಧಾನ ಮಾಡಲು ಇದು ಒಳ್ಳೆಯ ನೆವವಾಗಿ ನನಗೆ ಸಿಕ್ಕಿತು. ತಕ್ಷಣವೇ ನನಗೆ ನಾನು ಮತ್ತೆ ಹೊಸದಾಗಿ ಬರೆದ, ನಿದ್ರಿಸುತ್ತಿರುವ ರಾಜಕುಮಾರಿಯ ಕಥೆಯನ್ನು ನಾನು ಹಸ್ತಪ್ರತಿ ಪತ್ರಿಕೆಯಲ್ಲಿ ಜಾಣತನದಲ್ಲಿ ಹೊಸದಾಗಿ ಹೇಳಿದ್ದು ನೆನಪಾಯಿತು. ಒಂದು ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಾನು ನನ್ನ ಕಾದಂಬರಿ ‘ಸಂಸ್ಕಾರ’ ವನ್ನು ಬರೆದೆ.

ಆ ಕಾದಂಬರಿ ನನ್ನಿಂದ ಬರೆಸಿಕೊಂಡಿತು ಎನ್ನುವುದನ್ನು ನಾನು ಹೇಳಲೇ ಬೇಕು. ಇಂಗ್ಲೆಂಡಿನಲ್ಲಿ ಸತತವಾಗಿ ಇಂಗ್ಲಿಷ್‌ನಲ್ಲಿ ಮಾತಾಡಿ ಆಯಾಸಗೊಂಡಿದ್ದ ನಾನು ಕನ್ನಡದಲ್ಲಿ ಬರೆಯಲು ಕುಳಿತ ಕೂಡಲೇ ನನ್ನ ಬಾಲ್ಯದ ಮತ್ತು ಹದಿಹರೆಯದ ನೆನಪುಗಳು ಜೀವಂತಗೊಂಡವು. ಅವುಗಳಲ್ಲಿ ಬಹುತೇಕವು ನನ್ನ ಮನೆಯ ಹಿತ್ತಲಿನ ಪಿಸುಮಾತಿನ ರಹಸ್ಯಗಳೂ ಇದ್ದವು, ಜಗುಲಿಯಲ್ಲಿ ಪುರಾಣದ ಕಥೆಗಳ ನೈತಿಕ ನೆಲೆಗಳನ್ನು ನಿರಂತರವಾಗಿ ವಾಚಿಸುತ್ತಿದ್ದ ಗಂಡಸರೂ ನನ್ನ ಬಳಿ ಹಿಂತಿರುಗಿ ಬಂದರು ಮತ್ತು ನನ್ನ ಕಾದಂಬರಿಯ ಪಾತ್ರಗಳು ತಾವಾಗಿಯೇ ಕಾದಂಬರಿಯನ್ನು ಪ್ರವೇಶಿಸಿದವು. ನನ್ನ ಭಾಷೆಯ ಎಲ್ಲ ಮುಖ್ಯ ಲೇಖಕರೂ ನಿಶ್ಯಬ್ಧವಾಗಿಯೇ ತಮ್ಮ ಶಕ್ತಿಯನ್ನು ನನಗೆ ತಿಳಿಸಿಕೊಟ್ಟರು. ಇಲ್ಲಿ ನಾನು ಇನ್ನೊಂದು ಅಂಶವನ್ನೂ ಸೇರಿಸಬೇಕು. ನನ್ನ ಎಲ್ಲ ಮೊದಲ ಕಥೆಗಳಲ್ಲೂ ಘಟಶ್ರಾದ್ಧದಂತಹ ಕಥೆಯೂ ಸೇರಿದಂತೆ ನಾನು ನವ್ಯ ಪರಂಪರೆಯನ್ನು ಅಂತರ್ಗತಗೊಳಿಸಿಕೊಂಡ ಹಾಗೂ ಆಧುನಿಕ ಯುರೋಪಿಯನ್ ಮತ್ತು ಇಂಗ್ಲಿಷ್ ಲೇಖಕರಿಗೆ ತೆರೆದುಕೊಂಡ ಗೋಪಾಲಕೃಷ್ಣ ಅಡಿಗರ ಶ್ರೇಷ್ಠ ಕಾವ್ಯವಾಗಿತ್ತು.

ಐವತ್ತರ ದಶಕದಲ್ಲಿ ನಾನು ನವ್ಯ ಲೇಖಕನಾಗುವುದಕ್ಕಿಂತ ಮೊದಲು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ನನ್ನ ಹೈಸ್ಕೂಲು ಮುಗಿದ ಮೇಲೆ ಮೈಸೂರಿಗೆ ಬರುವುದಕ್ಕಿಂತ ಮುಂಚೆ ನಾನು ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಂದ ಪ್ರಭಾವಿತನಾಗಿದ್ದೆ ಮತ್ತು ಸಮಾಜವಾದಿ ಕಾರ್ಯಕರ್ತನಾಗಿದ್ದೆ. ನನ್ನ ಬದುಕಿನ ಅತ್ಯಂತ ಮುಖ್ಯವಾದ ದಿನಗಳವು. ನನ್ನ ತಂದೆ ಕೂಡ ಅಷ್ಟು ಹೊತ್ತಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು. ನಮ್ಮದೊಂದು ಪ್ರಿಂಟಿಂಗ್ ಪ್ರೆಸ್ ಕೂಡ ಇತ್ತು ಆಗ. ಈಗ ಪ್ರಸಿದ್ಧವಾಗಿರುವ ಕಾಗೋಡು ರೈತ ಸತ್ಯಾಗ್ರಹದ ರೂಪುರೇಷೆಗಳು ನಮ್ಮ ಮನೆಯಲ್ಲಿಯೂ ರೂಪುಗೊಂಡಿದ್ದವು. ನನ್ನ ತಂದೆ ತಾಯಿಗಳು ಕೂಡ ಇದರಲ್ಲಿ ಭಾಗವಹಿಸುವಂತೆ ಮಾಡಿದ್ದೆ. ಸೋಶಲಿಯಲಿಸ್ಟ್ ನಾಯಕರು ಮತ್ತು ಕಾರ್ಯಕರ್ತರಿಗೆ ಅಡುಗೆ ಮಾಡುವುದರಿಂದ ಹಿಡಿದು ಬಡಿಸುವಷ್ಟರ ಮಟ್ಟಿಗೆ ನಮ್ಮ ತಾಯಿ ಸಾಂಪ್ರದಾಯಿಕ ಅಡುಗೆ ಕ್ರಮದಿಂದ ಹೊರ ಬಂದಿದ್ದರು. ಆಗ ನಮಗೆ ರೈತಾಪಿ ವರ್ಗದಿಂದಲೇ ಬಂದ ಶಾಂತವೇರಿ ಗೋಪಾಲಗೌಡರ ಪ್ರಭಾವೀ ನಾಯಕತ್ವವಿತ್ತು. ಅವರು ಕವಿಯಂತೆ ನಾಟಕೀಯವಾಗಿ ಮಾತನಾಡಿದರೂ ಸಾಮಾನ್ಯ ಜನ ಮತ್ತು ರೈತಾಪಿ ವರ್ಗದವರು ಅವರನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರಲ್ಲಿ ನಿಜವಾಗಿ ರಾಜಕಾರಣಿ ಮತ್ತು ಅಧ್ಯಾಪಕನ ವ್ಯಕ್ತಿತ್ವಗಳು ಮೇಳೈಸಿದ್ದವು. ತಮ್ಮ ಭಾಷಣಗಳಲ್ಲಿ ಅವರು ಹಿಂದಿನ ಮತ್ತು ಸಮಕಾಲೀನ ಕನ್ನಡ ಕಾವ್ಯ ಮತ್ತು ಇತರ ಬರವಣಿಗೆಗಳನ್ನು ಬಳಸಿಕೊಳ್ಳುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ತೀರಿಕೊಳ್ಳುವ ತನಕವೂ ಅವರು ನನ್ನ ಓದುಗವರ್ಗದಲ್ಲಿಯೇ ಅತ್ಯಂತ ಪ್ರಭಾವಶಾಲಿಗಳಾಗಿದ್ದರು.

ಆ ದಿನಗಳು ನಮ್ಮ ನಡುವೆ ರಾಜಕೀಯ ತಾತ್ವಿಕತೆಯ ಬಗ್ಗೆ ತೀವ್ರವಾದ ಚರ್ಚೆಗಳು ನಡೆಯುತ್ತಿದ್ದ ದಿನಗಳೂ ಆಗಿದ್ದವು. ಆಗ ಶಿವಮೊಗ್ಗ ನಗರದಲ್ಲಿ ಎಂ.ಎನ್. ರಾಯ್‌ರವರ ಅನುಯಾಯಿಗಳಾಗಿದ್ದ ಕೆಲವು ಬದ್ಧ ಟ್ರೇಡ್ ಯೂನಿಯನ್ ನಾಯಕರು ಮತ್ತು ಬುದ್ಧಿಜೀವಿಗಳು ಇದ್ದರು. ಗೋಪಾಲಗೌಡ ಅವರಿಗೆ ಲೋಹಿಯಾ ಮತ್ತು ಬಿಹಾರದ ರಮಾನಂದನ್ ಮಿಶ್ರ ಅವರ ಪರಿಚಯವಿತ್ತು. ನಾವು ಜಾತಿ ಎನ್ನುವುದು ಭಾರತದಲ್ಲಿ ಒಂದು ವಾಸ್ತವ ಮತ್ತು ಜಮೀನ್ದಾರಿ ಪದ್ಧತಿಯನ್ನು ಕೊನೆಗಾಣಿಸಲು ರೈತರನ್ನು ಸಂಘಟಿಸಬೇಕು ಎಂದು ವಾದಿಸುತ್ತಿದ್ದೆವು. ಕಾಗೋಡು ಸತ್ಯಾಗ್ರಹ ಇದರ ಫಲಿತಾಂಶವಾಗಿತ್ತು. ಲೋಹಿಯಾ ಬಂದು ಇದರಲ್ಲಿ ಭಾಗವಹಿಸಿ ಕಾಗೋಡಿನಲ್ಲಿ ಬಂಧಿತರಾದರು. ಈ ಹೋರಾಟದಲ್ಲಿ ತೊಡಗಿಸಿಕೊಂಡು ಕಾರಣಕ್ಕಾಗಿ ನಾನು ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಫೇಲಾದರೂ ಕಲಿತದ್ದು ಬಹಳಷ್ಟಿತ್ತು. ಸಾಹಿತ್ಯ ಮತ್ತು ರಾಜಕಾರಣವನ್ನು ಬೆಸೆಯುವ ಶಕ್ತಿ ಬೆಳೆದದ್ದು ಈ ಕಾಲಘಟ್ಟದಲ್ಲಿ. ರಮಾನಂದನ್ ಮಿಶ್ರ ಅವರ ಮಾರ್ಗದರ್ಶನದಲ್ಲಿ ನಾನು ರೈತರಿಗೆ ಸಂಬಂಧ ಪಟ್ಟ ಅನೇಕ ಕರಪತ್ರಗಳನ್ನು ಮತ್ತು ಕಿರುಹೊತ್ತಿಗೆಗಳನ್ನು ಬರೆದೆ. ಆ ದಿನಗಳಲ್ಲಿ ನಾನು ಹೆಚ್ಚಾಗಿ ಓದಿದ್ದು ಗೋರ್ಕಿಯನ್ನು. ಶೆಲ್ಲಿಯ ಬಗೆಗಿನ ಪ್ರೀತಿ ಬೆಳೆದದ್ದೂ ಇದೇ ಕಾಲದಲ್ಲಿ. ಪ್ರೇಮ್ ಚಂದ್ ಮತ್ತು ಅಬ್ಬಾಸರನ್ನು, ಕನ್ನಡದ ಪ್ರಗತಿಶೀಲ ಲೇಖಕರಾದ ಅನಕೃ ಮತ್ತು ತರಾಸುರವನ್ನು ಓದಿದ್ದು ಆಗಲೇ. ಜೆಪಿ ಅರವಿಂದರನ್ನು ಭಾರತೀಯ ಸಮಾಜವಾದವನ್ನು ಅವರ ಆಧ್ಯಾತ್ಮಿಕ ಒಳನೋಟಗಳಿಂದ ಸಮೃದ್ಧಗೊಳಿಸುವಂತೆ ಆಹ್ವಾನಿಸಿದ್ದು, ನನಗೆ ಅದರ ಬಗ್ಗೆ ಸಹಮತವಿಲ್ಲದ್ದು ನೆನಪಾಗುತ್ತಿದೆ. ನಾವು ಲೋಹಿಯಾ ಕಡೆಗಿದ್ದೆವು. ಅವರಂತೆಯೇ ಸ್ಟ್ಯಾಲಿನ್ ವಾದವನ್ನು ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸದಿರುವ ಕಮ್ಯೂನಿಸ್ಟರ ನಿಲುವನ್ನು ವಿರೋಧಿಸುತ್ತಿದ್ದೆವು.

ನಾನೂ ಕೂಡ ಸಮಾಜವಾದಿ ವಾಸ್ತವವಾದದ ಬಗ್ಗೆ ತಾತ್ವಿಕವಾಗಿ ಮೆಚ್ಚಿಕೊಂಡರೂ ಅದರ ಬಗ್ಗೆ ಹಲವು ಪ್ರಶ್ನೆಗಳಿದ್ದ ವೈರುದ್ಧ್ಯಗಳ ನಿಲುವುಗಳನ್ನು ಹೊಂದಿದ್ದೆ. ಆಗ ನಾನು ಸಾಹಿತ್ಯದಲ್ಲಿ ಸಮಾಜವಾದಿ ನಿಲುವುಗಳನ್ನು ಪ್ರತಿಪಾದಿಸುತ್ತಿದ್ದಕ್ಕಿಂತ ಹೆಚ್ಚಾಗಿ ಸಮಾಜವಾದದ ವಕ್ತಾರರಾಗಿದ್ದ ನಿರಂಜನರ ಆಪ್ತ ಪ್ರಭಾವಕ್ಕೆ ಒಳಗಾಗಿದ್ದೆ. ಆ ಕಾಲದಲ್ಲಿ ನಾನು ಬರೆದ ಭಾವುಕ, ಅಪಕ್ವ ಬರವಣಿಗೆಯನ್ನು ನನ್ನ ಮುಂದಿನ ಯಾವ ಪ್ರಕಟಿತ ಕೃತಿಗಳಲ್ಲೂ ಸೇರಿಸಿಕೊಂಡಿಲ್ಲ.

ನಂತರವೇ ನಾನು ಅದಮ್ಯ ಸೃಜನಶೀಲ ಪ್ರಕ್ರಿಯೆಗೆ ನನ್ನನ್ನು ಒಪ್ಪಿಸಿಕೊಳ್ಳುವುದನ್ನು ಕಲಿತೆ. ಇದಾದ ನಂತರ ನನ್ನ ವ್ಯಕ್ತಿತ್ವದ ಅಪಕ್ವತೆ ಮತ್ತು ಅಭಿಪ್ರಾಯಪೂರಿತವಾದ ‘ಸ್ವ’ಗಳು ನಿಧಾನವಾಗಿ ತಮ್ಮ ಮಹತ್ವವನ್ನು ಕಳೆದುಕೊಳ್ಳಲಾರಂಭಿಸಿದವು. ಈಗ ಹಿಂದಿರುಗಿ ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ನನ್ನ ಇಪ್ಪತ್ತರ ವಯಸ್ಸಿನಲ್ಲಿ ಮುಗ್ಧ ರೊಮ್ಯಾಂಟಿಕ್ ಮತ್ತು ಆದರ್ಶದ ಗುಂಗಿನಲ್ಲಿ ಇಂಥದ್ದನ್ನೆಲ್ಲ ಹೇಗೆ ಬರೆದೆ ಎಂದು. ಇದು ನನ್ನ ಸೃಜನಶೀಲ ಬರವಣಿಗೆಯ ಮಟ್ಟಿಗೆ ಮಾತ್ರ ನಿಜವಲ್ಲ. ಆಶ್ಚರ್ಯಕರವಾಗಿ ನಾನು ಆ ಕಾಲದ್ಲಿ ಬರೆದ ಅಡಿಗರ ಹೊಸ ಕಾವ್ಯದ ಬಗೆಗಿನ ವಿಮರ್ಶಾ ಲೇಖನದ ಮಟ್ಟಿಗೂ ನಿಜ. ಆಗ ನಾನು ನನ್ನ ಎಂ.ಎ. ಯನ್ನು ಮುಗಿಸಿ ಒಂದು ಅರೆಪಟ್ಟಣದಲ್ಲಿ ತಾತ್ಕಾಲಿಕ ಉಪನ್ಯಾಸಕವಾಗಿ ಕೆಲಸ ಮಾಡುತ್ತಿದ್ದೆ.

ಅರೆಪಟ್ಟಣ ಶಿವಮೊಗ್ಗದಿಂದ ನಾನು ಮೈಸೂರಿಗೆ ನನ್ನ ಆನರ್ಸ್‌ಮಾಡಲು ಬಂದೆ. ತೀವ್ರ ಲೀವಿಸ್ ವಾದಿಯಾಗಿದ್ದ, ಯುವಕರೂ ಆಕರ್ಷಕ ವ್ಯಕ್ತಿತ್ವದವರೂ ಆಗಿದ್ದ ಪ್ರೊಫೆಸರ್ ಸಿ.ಡಿ. ನರಸಿಂಹಯ್ಯನವರ ವಿದ್ಯಾರ್ಥಿಯಾಗುವ ಸದವಕಾಶ ನನಗೆ ಸಿಕ್ಕಿತು. ಅವರು ಆಗ ತಾನೇ ಕೇಂಬ್ರಿಡ್ಜಿನಿಂದ ಹಿಂದಿರುಗಿದ್ದರು. ಎಫ್.ಆರ್. ಲೀವಿಸ್ ಅಲ್ಲಿ ಅವರಿಗೆ ಗುರುಗಳಾಗಿದ್ದರು. ಒಬ್ಬ ಸಮಾಜವಾದಿಯಾಗಿ ನಾನು ಲೀವಿಸರ ಆಧುನಿಕತಾವಾದ, ಎಲಿಯಟ್ಟಿನ ಸಾಂಪ್ರದಾಯಿಕ ರಾಯಲಿಸ್ಟ್ ಮತ್ತು ಮಾರ್ಗಕಾವ್ಯದೃಷ್ಟಿಕೋನಗಳ ಬಗ್ಗೆ ಚಿಕಿತ್ಸಕ ದೃಷ್ಟಿಯನ್ನು ಹೊಂದಿದವನಾಗಿದ್ದೆ. ನಿರಂಜನರು ನನಗೆ ಆಧುನಿಕ ಕಾವ್ಯವನ್ನು ಕುರಿತ ನನ್ನ ವಿರೋಧವನ್ನು ಮತ್ತು ಶೆಲ್ಲಿಯನ್ನು ಕುರಿತ ಮೆಚ್ಚುಗೆಯನ್ನು ಕುರಿತು ಕೆಲವು ಲೇಖನಗಳನ್ನು ಬರೆಯುವಂತೆ ಕೇಳಿದರು. ನನ್ನವಿದ್ಯಾಭ್ಯಾಸಕ್ಕೆ ಬೇಕಾದ ಹಣ ಕೊಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾನು ಬಹುತೇಕ ಸಮಯವನ್ನು ಬಡ ವಿದ್ಯಾಥಿಗಳ ಸಲುವಾಗಿ ಇರುತ್ತಿದ್ದ ಫ್ರೀ ಹಾಸ್ಟೆಲ್‌ಗಳಲ್ಲಿ ಕಳೆಯುತ್ತಿದ್ದೆ. ಆದರೂ ನಾನು ನನ್ನದೇ ರೀತಿಯಲ್ಲಿ ತುಂಬ ಸಂತೋಷವಾಗಿಯೂ ಇದ್ದೆ. ಯಾಕೆಂದರೆ ನನ್ನ ಸ್ನೇಹಿತ ಕೆ.ವಿ. ಸುಬ್ಬಣ್ಣ ಹಳೆಗನ್ನಡ ಸಾಹಿತ್ಯಕಮ್ಕೆ ನನ್ನನ್ನು ಪರಿಚಯವಿಸಿದರು. ನನ್ನ ಇನ್ನೊಬ್ಬ ಸ್ನೇಹಿತ ಶಂಕರನಾರಾಯಣ ಭಟ್ಟ. ಆತನೊಂದಿಗೆ ನಾನು ಭೂಸುಧಾರಣೆಯ ಬಗ್ಗೆ ಕೊನೆಯಿಲ್ಲದಂತೆ ಚರ್ಚಿಸುತ್ತಿದ್ದೆ. ಆತ ಒಬ್ಬ ಜಮೀನ್ದಾರನಾಗಿದ್ದೂ ಒಬ್ಬ ಸಮಾಜವಾದಿಯಾಗಿದ್ದ. ನನ್ನ  ಸ್ನೇಹಿತರು ನನ್ನ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ನಿಜವಾಗಿ ನಾನು ಸಮಾಜವಾದಿಯ ಜೀವನವನ್ನೇ ಆಗ ನಡೆಸುತ್ತಿದ್ದೆ. ಯಾಕೆಂದರೆ ಹಣ ಯಾರ ಬಳಿ ಇದೆ ಎನ್ನುವುದು ಮುಖ್ಯವಾಗುತ್ತಿರಲಿಲ್ಲ. ಅದನ್ನು ನಾವೆಲ್ಲರೂ ಹಂಚಿಕೊಳ್ಳುತ್ತಿದ್ದೆವು.

ಗೋಪಾಲಕೃಷ್ಣ ಅಡಿಗರು ತಮ್ಮ ಕಾವ್ಯ ಶೈಲಿಯಲ್ಲಿ ತೀವ್ರ ಬದಲಾವಣೆಗೆ ಒಳಗಾಗುತ್ತಿದ್ದ ಕಾಲ ಅದು. ಕರ್ನಾಟಕದ ಇನ್ನಾವ ಲೇಖಕರೂ ತಮ್ಮ ಯಶಸ್ವೀ ಭೂತಕಾಲದ ಬಗ್ಗೆ ಅಡಿಗರಷ್ಟು ಚಿಕಿತ್ಸಕ ದೃಷ್ಟಿಕೋನದವರಲ್ಲ. ಅವರು ಬೇಂದ್ರೆ ಕುವೆಂಪು ಹಾಗೂ ಪುತಿನ ಅವರಷ್ಟೇ ಖ್ಯಾತ ಕವಿಗಳ ಪರಂಪರೆಗೆ ಸೇರಿದವರು. ಇಷ್ಟಾಗಿಯೂ ಅಡಿಗರು ತಮ್ಮ ಮೊದಲ ಘಟ್ಟದ ಬರವಣಿಗೆಯನ್ನು ತಿರಸ್ಕರಿಸಿದವರು. ನಾನು ಅಡಿಗರನ್ನು ಕುರಿತೂ ವಿಮರ್ಶಾತ್ಮಕವಾಗಿದ್ದೆ. ಯಾಕೆಂದರೆ ಬರಹಗಾರನಾಗಿ ಅವರು ಯಶಸ್ಸು ಪಡೆದ ಮೊದಲ ಘಟ್ಟದಲ್ಲಿ ಕಮ್ಯೂನಿಸಮ್ಮಿನ ಬಗೆಗೆ ಸ್ವಲ್ಪ ಆಸಕ್ತಿ ಹೊಂದಿದವರಾಗಿದ್ದರೂ, ನಂತರ ರಾಜಕೀಯವಾಗಿ ಅವರು ರಷ್ಯಾ ಮತ್ತು ಸ್ಟ್ಯಾಲಿನ್ ಪ್ರಣೀತ ಚಿಂತ್ರನಾಕ್ರಮಗಳ ವಿರೋಧಿಯಾಗಿದ್ದರು. ಎಲ್ಲ ಕ್ರಾಂತಿಗಳ ಬಗೆಗೂ ಅವರಲ್ಲಿ ಅನುಮಾನಗಳಿದ್ದವು.

ನಾಟಕೀಯ ಬದಲಾವಣೆಯೊಂದಕ್ಕೆ ನಾನು ಒಳಗಾದದ್ದು ನೆನಪಾಗುತ್ತಿದೆ. ತಾತ್ತ್ವಿಕವಾಗಿ ಅಡಿಗ ಮತ್ತು ಎಲಿಯಟ್ಟರನ್ನು ವಿರೋಧಿಸಿದ್ದರೂ ಒಂದು ಸಂಜೆ ನಾನು ಅಡಿಗರ ಹೊಸ ಕವನಗಳನ್ನು ಮತ್ತು ಎಲಿಯಟ್‌ರ “ಪ್ರೆಲ್ಯೂಡ್ಸ್” ಅನ್ನು ಓದಿದೆ. ಅವು ನನ್ನನ್ನು ಆಳವಾಗಿ ಕಲಕಿದವು ಮತ್ತು ನನ್ನಲ್ಲಿ ಗೊಂದಲ ಹುಟ್ಟಿತು. ನನ್ನ ಸಾಹಿತ್ಯಿಕ ಸಂವೇದನೆ ನನ್ನೆಲ್ಲ ಅಭಿಪ್ರಾಯಗಳನ್ನೂ ಮೀರಿತು ಮತ್ತು ನಿರಂಜನಿರಿಗೆ ನಾನು ಕೊಟ್ಟಿದ್ದ ಎಲ್ಲ ಲೇಖನಗಳನ್ನು ವಾಪಸ್ಸು ಪಡೆದೆ. ಮೈಸೂರಿನ ಕಾಫಿ ಹೌಸಿನಲ್ಲಿ ಅಡಿಗರನ್ನು ಭೇಟಿಯಾಗತೊಡಗಿದೆ ಮತ್ತು ನನ್ನ ಅಂತರಂಗವನ್ನು ಅವರೊಂದಿಗೆ ಹಂಚಿಕೊಳ್ಳಲಾರಂಭಿಸಿದೆ. ತರಗತಿಯಲ್ಲಿ ನಾವು ಎಲಿಯೆಟ್, ಯೇಟ್ಸ್ ಮತ್ತು ಪೌಂಡರ ಬಗೆಗೆ ಮಾತನಾಡಿದರೆ, ಕಾಫಿ ಹೌಸಿನಲ್ಲಿ ಅಡಿಗರು ಬರೆದ ಕಾವ್ಯವನ್ನು ಅವರು ಬರೆದಂತೆಯೇ ಓದಲಾರಂಭಿಸಿದೆ. ನನಗೆ ನೆನಪಿದೆ, ಅಡಿಗರು ಅವರ ಕೋಟಿನ ಜೇಬಿಗೆ ಕೈ ಹಾಕಿ ಅವರ ನೀಟಾದ ಕೈಬರಹದಲ್ಲಿ ಬರೆದ ಹಾಳೆಯನ್ನು ತೆರೆಯುತ್ತಿದ್ದುದನ್ನು ನಾನು ಎಷ್ಟು ಕುತೂಹಲದಿಂದ ಕಾಯುತ್ತಿದ್ದೆನೆನ್ನುವುದು. ಸಂಕೋಚದಲ್ಲಿಯೇ ಅವರು ಆ ಪದ್ಯಗಳನ್ನು ಓದಲು ಕೊಡುತ್ತಿದ್ದರು. ಅವರೆಂದೂ ತಮ್ಮ ಪದ್ಯಗಳನ್ನು ವಿವರಿಸುತ್ತಿರಲಿಲ್ಲ. ಮಾತ್ರವಲ್ಲ, ಅವರ ಕೆಲವು ಪದ್ಯಗಳನ್ನು ನಾನು ಇಷ್ಟ ಪಡದಿದ್ದಾಗ ವಾದಿಸುತ್ತಲೂ ಇರಲಿಲ್ಲ. ಅವರ ‘ಭೂತ’ ಕವನ ಮೊದಲ ಬಾರಿಗೆ ಓದಿದಾಗ ನನಗೆ ಮಚ್ ಅಡೊ ಅಬೌಟ್ ನಥಿಂಗ್ ಎನ್ನುವಂತೆ ಕಂಡಿತ್ತು. ಅದನ್ನು ಅವರಿಗೆ ಹೇಳಿಯೂ ಹೇಳಿದೆ. ಅವರು ಸುಮ್ಮನೆ ನಕ್ಕು ಪದ್ಯವನ್ನು ಜೇಬಿನೊಳಗಿಟ್ಟುಕೊಂಡರು. ಕೆಲವು ತಿಂಗಳುಗಳ ನಂತರ ನಾನು ಸ್ನಾನ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಆ ಕವನದ ಕೆಲವು ಸಾಲುಗಳು ನೆನಪಾದವು. ಹಾಗೆ ನೋಡಿದರೆ ಅವರ ಕವನದ ಸಾಲುಗಳು ಸಾಮಾನ್ಯವಾಗಿ ನೆನಪಿನಲ್ಲಿ ಉಳಿಯುವಂಥವೇ- ಕವನದ ಅರ್ಥ ನನಗೆ ಹೊಳೆಯಿತು. ತಕ್ಷಣ ನಾನು ಆ ಪದ್ಯವನ್ನು ಕುರಿತು ನನಗನ್ನಿಸಿದ್ದರ ಬಗ್ಗೆ ಅವರಿಗೊಂದು ಪತ್ರವನ್ನು ಬರೆದೆ. ಆಗ ನಾನು ಶಿವಮೊಗ್ಗದಲ್ಲಿ ಅಧ್ಯಾಪಕನಾಗಿದ್ದೆ. ಅಡಿಗರು ಅಂತಹ ಕವನಗಳ ಸಂಕಲನ ‘ಭೂಮಿಗೀತ’ ಕ್ಕೆ ಮುನ್ನುಡಿಯೊಂದನ್ನು ಬರೆಯಲು ಸಾಧ್ಯವೇ ಎಂದು ಕೇಳಿದರು. ಆ ಸಂಕಲನದ ಪದ್ಯಗಳು ಈಗ ಕನ್ನಡದ ಶ್ರೇಷ್ಠ ಕವನಗಳಾಗಿವೆ, ಅವುಗಳೊಂದಿಗೆ ನಾನೂ ಬೆಳೆದಿದ್ದೇನೆ. ಅಡಿಗರು ರಾಜಕೀಯ ಪ್ರಶ್ನೆಗಳ ಬಗೆಗೆ ಖಚಿತವಾದ ನಿಲುವುಗಳನ್ನು ಹೊಂದಿದ್ದರು. ನೆಹರು ನಾಯಕತ್ವದಲ್ಲಿ ದೇಶ ಹಿಡಿದಿರುವ ಹಾದಿಯನ್ನು ಕುರಿತಂತೆ ತೀವ್ರ ಅಸಂತುಷ್ಟರಾಗಿದ್ದರು. ಒಟ್ಟಿನಲ್ಲಿ ಅಡಿಗರು ರಾಜಾಜಿಯವರ ನಿಲುವಿನ ಪರವಾಗಿದ್ದೂ ಲೋಹಿಯರವರ ಬರವಣಿಗೆಗಳನ್ನು ಮೆಚ್ಚಬಲ್ಲವರಾಗಿದ್ದರು. ಲೋಹಿಯರವರ ‘ಇತಿಹಾಸ ಚಕ್ರ’ ವನ್ನು ಕನ್ನಡಕ್ಕೆ ಅನುವಾದಿಸಿದ್ದೂ ಅಡಿಗರೇ. ಮೈಸೂರಿನ ಕಾಫಿ ಹೌಸಿನಲ್ಲಿ ನಾವು ಲೋಹಿಯಾರವನ್ನು ಭೇಟಿಯಾಗುತ್ತಿದ್ದೆವು.

ಅಡಿಗರ ಸಂಪ್ರದಾಯಪರವಾದ ಆಸಕ್ತಿ ನನ್ನನ್ನು ಹೆಚ್ಚು ಬಾಧಿಸಲಿಲ್ಲ. ಯಾಕೆಂದರೆ ಎಲಿಯಟ್ ಮತ್ತು ಯೇಟ್ಸ್‌ರಂತೆ ಇವರೂ ಕೂಡ ಭಾಷೆ ವಿಚಾರವನ್ನು ಕೇವಲ ಹೇಳುವುದಕ್ಕೆ ಬದಲಾಗಿ ರೂಪಕವಾಗಿ, ಪ್ರತಿಮೆಯಾಗಿ ಅಭಿನಯಿಸುವ ಬಗೆಯನ್ನು ಶೋಧಿಸುತ್ತಿದ್ದರು. ಗೇಯ ಕಾವ್ಯದಲ್ಲಿ ಬಹುಪಾಲು ಇರುವುದು ಶಬ್ದಗಳ ದುಂದು ಎಂದು ಅವರಿಗೆ ಅನಿಸುತ್ತಿತ್ತು. ಒಂದು ಕಾಲದಲ್ಲಿ ತಾವು ಬಳಸಿದ್ದನ್ನು ಅವರು ತಿರಸ್ಕರಿಸಿದರು. ಕಾವ್ಯವೆನ್ನುವುದು ಅವರ ಮಟ್ಟಿಗೆ ವರ್ಡ್ಸ್ವರ್ಥ್ ಹೇಳುವಂತೆ ತೀವ್ರ ಭಾವಗಳ ಸತತ ಪ್ರವಾಹವನ್ನು ಉಕ್ಕಿಸಿ ಹರಿಸುವ ಕ್ರಿಯೆಯಾಗಿ ಉಳಿಯಲಿಲ್ಲ. ಬದಲಿಗೆ ವ್ಯಕ್ತಿಯೊಬ್ಬನ ಆತ್ಮದ ಕುಲುಮೆಯಲ್ಲಿ ಶುದ್ಧವಾಗುವಂಥದ್ದು ಮಾತ್ರ ಕಾವ್ಯವಾಯಿತು.

ಅಡಿಗರ ಸುತ್ತ ಒಂದು ಅನೌಪಚಾರಿಕ ಗುಂಪು ಕಟ್ಟಿಕೊಂಡೆವು. ಸಾರ್ವಜನಿಕವಾಗಿ ಆಗಿನ್ನೂ ಬಹುಮುಖ್ಯ ಲೇಖಕರೆಂದು ಗುರುತಿಸಲಾಗದಿದ್ದ, ನಮಗೆ ಬಹುಮುಖ್ಯರೆಂದು ಕಂಡ ಕೆಲವರು ರಾಮಚಂದ್ರ ಶರ್ಮ, ಎ.ಕೆ. ರಾಮಾನುಜನ್, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ಶಂಕರ ಮೊಕಾಶಿ ಪುಣೇಕರ್, ಕೀರ್ತಿನಾಥ ಕುರ್ತಕೋಟಿ, ಲಂಕೇಶ್, ತೇಜಸ್ವಿ, ಸದಾಶಿವ, ಟಿ.ಜಿ. ರಾಘವ ಮತ್ತು ರಾಜಲಕ್ಷ್ಮಿ ಎನ್. ರಾವ್. ಅನೇಕ ವಿಷಯಗಳಲ್ಲಿ ಕಾವ್ಯಶಿಲ್ಪದ ಪ್ರಶ್ನೆಯೂ ಸೇರಿದಂತೆ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ನಮ್ಮೆಲ್ಲರಲ್ಲೂ ಸಮಾನವಾದ ನಂಬಿಕೆಯೊಂದಿತ್ತು. ಅದೆಂದರೆ ಸಾಹಿತ್ಯ ಸೃಷ್ಟಿಯೆನ್ನುವುದು ಭಾಷೆಯಲ್ಲಿ ನಡೆಸುವ ಆಳವಾದ ಆತ್ಮದರ್ಶಕ ಶೋಧ. (ಮಿಕಾಶಿ ಮತ್ತು ಕುರ್ತಕೋಟಿ ನಮ್ಮ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ತೇಜಸ್ವಿ ಕೂಡ ತಮ್ಮ ವಸ್ತು ಮತ್ತು ನಿರೂಪಣೆಯ ಆಯ್ಕೆಯಲ್ಲಿ ಭಿನ್ನವಾಗಿದ್ದರು.) ಜನಪ್ರಿಯ ಸಾಹಿತ್ಯ ಸೃಷ್ಟಿಸುವ ಜಗತ್ತು ಭಾವುಕವಾದುದು. ಸಂಭ್ರಮಾಚರಣೆಯದು ಮತ್ತು ರೆಟರಿಕಲ್ ಆದುದು ಎಂದು ನಾವು ತಿಳಿದಿದ್ದೆವು. ವೈಯಕ್ತಿಕವಾಗಿ ನಾನು ನನ್ನದೇ ಸ್ಮೃತಿಕೋಶ ಮತ್ತು ಸ್ಥಾಪಿತ ಗ್ರಹಿಕೆಗಳಿಂದಾಗಿ ಇವರೆಲ್ಲರಿಗಿಂತ ಭಿನ್ನವಾಗಿದ್ದೆ. ಆದರೆ ಇವರೆಲ್ಲರಿಂದಲೂ ನಾನು ಕಲಿತೆ. ಲಂಕೇಶ್ ತನ್ನ ಸಾಹಿತ್ಯಿಕ ಶೈಲಿಯಲ್ಲಿ ಸದ್ಯೋಜಾತರಾದವರು. ಇವರು ತಮ್ಮ ವೈಯಕ್ತಿಕ ಬೆಳವಣಿಗೆಯ ಮುಜುಗರಗಳ ಬಗೆಗೆ ಪ್ರಾಮಾಣಿಕವಾಗಿ ಬರೆಯುತ್ತಿದ್ದರು. ನವ್ಯ ಸಾಹಿತ್ಯಿಕ ಜಗತ್ತು ಹೊದ್ದಿದೆ ಎಂದು ಇವರು ತಿಳಿದ ಮುಖವಾಡಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ವಿಮರ್ಶಕರೂ ಆಗಿದ್ದರು. ಇದು ಆ ಕಾಲದ ಸಾಹಿತ್ಯಿಕ ವ್ಯವಸ್ಥೆಯ ಅಧಿಕಾರಸ್ಥರು ವಿರೋಧಿಸಿದ ಚಳುವಳಿಯೂ ಆಗಿತ್ತು. (ನಾನು ಮೇಲೆ ಹೆಸರಿಸಿದ ಎಲ್ಲರೂ ತಮ್ಮನ್ನು ತಾವು ನವ್ಯರೆಂದು ಒಪ್ಪಿಕೊಳ್ಳುವವರೇನಲ್ಲ.) ಈ ಗಂಭೀರ ಸಾಹಿತ್ಯಿಕ ಅಭ್ಯಾಸಿಗಳು ಮತ್ತು ಪ್ರಯೋಗಶೀಲರ ನಡುವೆ ಇನ್ನೆರಡು ಪ್ರತಿಭೆಗಳು ಪ್ರವೇಶಿಸಿದವು. ಕಂಬಾರ ಮತ್ತು ಪ್ರಯೋಗಶೀಲರ ನಡುವೆ ಇನ್ನೆರಡು ಪ್ರತಿಭೆಗಳು ಪ್ರವೇಶಿಸಿದವು. ಕಂಬಾರ ಮತ್ತು ಗಿರೀಶ್ ಕಾರ್ನಾಡ್‌ಒಬ್ಬರು ಇನ್ನೊಬ್ಬರಿಗಿಂತ ಭಿನ್ನ. ಕನ್ನಡದ ಯಾವ ಸಾಹಿತ್ಯಕ ಚಳುವಳಿಯೂ, ಐವತ್ತು ಅರವತ್ತರ ದಶಕದಲ್ಲಾದಂತೆ ಇಷ್ಟು ವ್ಯಕ್ತಿಗತ ಧ್ವನಿಗಳನ್ನು ಸೃಷ್ಟಿಸಲಿಲ್ಲ. ಸಣ್ಣ ಕಥೆಗಳಲ್ಲಿ ನಾನೇ ನಡೆಸಿದ ಪ್ರಯೋಗಗಳಲ್ಲಿ ಸಾಹಿತ್ಯ ಮೀಮಾಂಸಕ ಹಾಗೂ ಪ್ರಸಿದ್ಧ ಸರೋದ್ ವಾದಕ ರಾಜೀವ್ ತಾರಾನಾಥರ ನಿರ್ಣಾಯಕ ಪ್ರಭಾವಿದೆ. ಅಡಿಗರ ಮೂಲಕ ನನಗೆ ಮಲೆಯಾಳಂ ಸಾಹಿತ್ಯದ ಶ್ರೇಷ್ಠ ಲೇಖಕ ಎಂ.ಗೋವಿಂದನ್ನರ ಪರಿಚಯವಾಯಿತು. ಅವರು ಚೆನ್ನೈನಲ್ಲಿರುತ್ತಿದ್ದರು. ಅವರಿಂದ ಇನ್ನೂ ಅನೇಕರು ನಮಗೆ ಪರಿಚಯವಾದರು. ಭಾರತದ ಮುಖ್ಯ ಲೇಖಕರಾದ ದಿವಂಗತ ಓ.ವಿ.ವಿಜಯನ್, ದಿವಂಗತ ಜಿ. ಅರವಿಂದನ್, ನಮ್ಮ ಕಾಲದ ಪ್ರಮುಖ ಕವಿಗಳಲ್ಲೊಬ್ಬರಾದ ದಿವಂಗತ ಅಯ್ಯಪ್ಪ ಫಣಿಕ್ಕರ್, ಚೆಕಾವ್‌ನ ಕಥೆಗಳಂತಹ ಸಿನಿಮಾಗಳನ್ನು ನಿರ್ದೇಶಿಸುತ್ತಿರುವ ಅಡೂರು ಗೋಪಾಲಕೃಷ್ಣ ಮತ್ತು ಅನುರಕ್ತ ಕವಿ ಕಡಮನಿಟ್ಟ ರಾಮಕೃಷ್ಣನ್. ನಾನು ಸೋಶಿಯಲಿಸ್ಟ್ ನಾಯಕ ಗೋಪಾಲಗೌಡರ ಬಳಿ ಅಡಿಗರ ಬಗ್ಗೆ ಮಾತನಾಡಿದೆ, ಗೋಪಾಲಗೌಡರು ಕಮಲೇಶ್ ಮತ್ತು ಲೋಹಿಯಾರವರ ಬಳಿ ಅಡಿಗರ ಬಗ್ಗೆ ಮಾತನಾಡಿದರು ಮತ್ತು ಕಮಲೇಶ್ ನನಗೆ ಭಾರತದ ಮುಖ್ಯ ಬರಹಗಾರ ಮತ್ತು ಚಿಂತಕ ನಿರ್ಮಲ್ ವರ್ಮಾರವರನ್ನು, ಮತ್ತು ಭೋಪಾಲನ್ನು ನಮ್ಮ ಸಾಂಸ್ಕೃತಿಕ ರಾಜಧಾನಿಯಾಗಿ ಮಾಡಿದ ಅಶೋಕ್ ವಾಜಪೇಯಿಯವರನ್ನು ಪರಿಚಯಿಸಿದರು. ಲೋಹಿಯಾ ಅವರು ನನ್ನ ಕಾದಂಬರಿ ಸಂಸ್ಕಾರದ ಬಗ್ಗೆ ತೆಲುಗು ಕವಿ ಪಟ್ಟಾಭಿರಾಮರೆಡ್ಡಿ ಅವರ ಬಳಿ ಮಾತನಾಡಿದರು. ಅವರು ಅದನ್ನು ಸಿನಿಮಾ ಮಾಡಿದರು. ನನ್ನ ಕಾದಂಬರಿಯನ್ನು ಹಸ್ತಪ್ರತಿಯಲ್ಲೇ ನೋಡಿದ ಗಿರೀಶ್ ಕಾರ್ನಾಡ್ ಅದನ್ನು ಚಿತ್ರಕಲಾವಿದ ವಾಸುದೇವ್‌ಗೆ ಮತ್ತು ಆಸ್ಟ್ರೇಲಿಯಾದ ಕ್ಯಾಮೆರಾಮ್ಯಾನ್ ಟಾಮ್‌ಕೊವಾನ್‌ಗೆ ತೋರಿಸಿದರು. ಮತ್ತು ಇವೆಲ್ಲವೂ ಒಟ್ಟಾಗಿ ಒಂದು ಚಳುವಳಿಯೇ ಆಯಿತು. ಭಾರತೀಯ ಭಾಷೆಗಳ ಬರಹಗಾರರಲ್ಲಿ ಕೆಲಸ ಮಾಡುವುದು ಈ ಗ್ರೇಪ್ ವೈನ್. ನನಗೆ ಕಮಲೇಶರ ಮೂಲಕ ನಾಮವಾರ್ ಸಿಂಗ್ ಪರಿಚಯವಾದರು. ನಾಮವಾರ್ ಸಿಂಗ್ ಹಿಂದಿಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸಿದರು. ಇಂಥದ್ದೇ ಇನ್ನೊಂದು ಬಳಗ ಸೃಷ್ಟಿಯಾದದ್ದು ಎಮರ್ಜೆನ್ಸಿಯ ವಿರೋಧದಲ್ಲಿ.

ಹಲವು ಭಾಷೆಗಳಲ್ಲಿರುವ ಭಾರತೀಯ ಸಾಹಿತ್ಯ ನನ್ನ ಮಟ್ಟಿಗೆ ಒಂದೇ. ಯಾಕೆಂದರೆ ಯಾಕಾಗಿ ನಾನು ಸರಿರಾತ್ರಿ ಹೊತ್ತಿನಲ್ಲಿ ನಿರ್ಮಲ್ ವರ್ಮಾರಿಗೆ ಫೋನ್ ಮಾಡಿ ಅವರ ಕಥೆಯೊಂದರಿಂದ ನಾನು ಎಷ್ಟು ಕಲಕಿದೆನೆಂದು ಹೇಳಲು ಬಯಸುತ್ತೇನೆ? ದಿಲೀಪ್ ಚಿತ್ರೆ ಮತ್ತು ನಾನು ಹೊಸದೊಂದನ್ನು ಓದಿ ರೋಮಾಂಚಿತರಾದಾಗಲೆಲ್ಲ ಪದೇ ಪದೇ ಇದನ್ನು ಮಾಡುತ್ತೇವೆ. ಮಹಾಶ್ವೇತಾದೇವಿ ಮತ್ತು ಬಾಲಚಂದ್ರ ನೆಮಾಡೆ ಯವರ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾಳಜಿಗಳನ್ನು ನಾನು ಹಂಚಿ ಕೊಳ್ಳುತ್ತೇನೆ. ನನ್ನ ಯುವ ಗೆಳೆಯ ಮತ್ತು ಚಿಂತಕ ಹಾಗೂ ಸಾಹಿತ್ಯ ವಿಮರ್ಶಕ ಜಿ.ಎನ್. ದೇವಿ ಇವರೆಲ್ಲರ ಕೃತಿಗಳಿಗೆ ಅವಶ್ಯಕವಾದ ತಾತ್ತ್ವಿಕ ಚೌಕಟ್ಟೊಂದನ್ನು ರೂಪಿಸಿಕೊಟ್ಟಿದ್ದಾರೆ. ಗತಿಸಿದ ನನ್ನ ಗೆಳೆಯ ಶಾಂತಿನಾಥ ದೇಸಾಯರ ಜೊತೆಗಿನ ಬೆಚ್ಚನೆಯ ನೆನಪುಗಳನ್ನು ಜಿ.ಎನ್.ದೇವಿಯವರೊಂದಿಗೆ ಹಂಚಿಕೊಳ್ಳುವ ನಾನು ಅವರಿಂದ ಭಿನ್ನವಾಗಬಹುದು, ವಾದವನ್ನೂ ಮಾಡಬಹುದು. ಗುಜರಾತಿಯ ಮುಖ್ಯ ಧ್ವನಿಗಳಲ್ಲೊಂದಾದ ಸಿತಾಂಶು ಯಶಶ್ಚಂದ್ರ ನನ್ನ ಬದುಕನ್ನು ಪ್ರವೇಶಿಸಿದ್ದು ಅವರ ಪ್ರಖರ ವ್ಯಂಗ್ಯ ಕವನವೊಂದರ ಮೂಲಕ. ಅರವತ್ತರ ದಶಕದಲ್ಲಿ ಪೂನಾದಲ್ಲಿ ಪ್ರಭಾಕರ ಪಾಧ್ಯೆ ಆಯೋಜಿಸಿದ್ದ ಸೆಮಿನಾರೊಂದರಲ್ಲಿ ನಾನು ಅವರನ್ನು ಭೇಟಿಯಾದದ್ದು. ಈ ಐತಿಹಾಸಿಕ ಸೆಮಿನಾರ್‌ನಲ್ಲಿ ಭಾಗವಹಿಸಲು ಯುವ ಲೇಕಕರು ಟ್ರೇನು ಮತ್ತು ಬಸ್ಸುಗಳಲ್ಲಿ ಬಂದಿದ್ದರು. ಕೆಲವು ತಿಂಗಳುಗಳ ಹಿಂದೆ ಪ್ರಸನ್ನ ಕನ್ನಡಕ್ಕೆ ಅನುವಾದಿಸಿದ ಉದಯ ಪ್ರಕಾಶರ ಕಥೆಯೊಂದನ್ನು ಓದಿದೆ. (‘ದೇಶ ಕಾಲ’ದಲ್ಲಿ ಪ್ರಕಟವಾಗಿದೆ.) ಭಾರತೀಯ ಭಾಷೆಗಳು ಇನ್ನೂ ಸ್ವತಂತ್ರ ಮತ್ತು ಶಕ್ತ ಧ್ವನಿಗಳನ್ನು ಸೃಷ್ಟಿಸುತ್ತಿವೆ ಎಂದು ನನಗೆ ಸಾರ್ಥಕಭಾವವೊಂದು ಹುಟ್ಟಿತು. ಇಂಗ್ಲಿಷ್‌ನಲ್ಲಿ ಈ ಬಗ್ಗೆಯ ಕೃತಿಗಳು ಬರುವುದು ನಿಜಕ್ಕೂ ಅಪರೂಪ. (ಅಮಿತಾವ್ ಘೋಷ್, ರಾಜಾರಾವ್, ಆರ್.ಕೆ.ನಾರಾಯಣ್ ಮತ್ತು ಶಶಿ ದೇಶಪಾಂಡೆಯಂತಹ ನಾನು ಮೆಚ್ಚುವ ಕೆಲವು ಲೇಖಕರ ಅಪವಾದಗಳನ್ನು ಬಿಟ್ಟು) ಮತ್ತು ಈ ಬಗ್ಗೆಯ ಬರವಣೆಗೆಗಳು ಬರುವುದು ಗ್ರಾಮೀಣ ಮತ್ತು ನಗರ ಅನುಭವಗಳು ಮತ್ತು ದೇಸಿ ಪರಂಪರೆಯಲ್ಲಿ ದಟ್ಟ ಬೇರುಗಳಿರುವವರಿಂದ ಮಾತ್ರ ಈ ಬಗೆಯ ಬರಹಗಾರ ಏಕಕಾಲಕ್ಕೆ ಎರಡು ಜಗತ್ತುಗಳಲ್ಲಿರುತ್ತಾನೆ. ಆಧುನಿಕ ಪಶ್ಚಿಮ ಮತ್ತು ಕಾಲಾತೀತವಾದ ಸಾಂಪ್ರದಾಯಿಕ ಭಾರತ. ಈ ಬಗ್ಗೆ ಈ ಬರಹಗಾರರು ಆಳವಾಗಿ ಬರೆಯುತ್ತಾರೆ. ಯಾಕೆಂದರೆ ಇವರು ರಫ್ತು ಮಾಡುವ, ಕೋಮುವಾದಿ ಸಾಂಪ್ರದಾಯಿಕರ ನಡುವೆ ಖ್ಯಾತಿ ಪಡೆಯುವ ಉದ್ದೇಶವಿರದ ಅಥವಾ ಜಾಗತಿಕ ಭಾರತೀಯ ಬರಹಗಾರರ ಮಾರುಕಟ್ಟೆ ದೃಷ್ಟಿಕೋನವಿರದವರು. ಕನ್ನಡದಲ್ಲಿ ಬರೆಯುವ ನನ್ನಂಥ ಲೇಖಕರು ನನ್ನ ಗತಿಸಿದ ಗೆಳೆಯ ಕೆ.ವಿ. ಸುಬ್ಬಣ್ಣ ಸಹ್ಯಾದ್ರಿಯ ಮಡಿಲಿನ ಹಳ್ಳಿಯೊಂದರಲ್ಲಿ ಸೃಷ್ಟಿಸಿರುವ ವೇದಿಕೆಯಲ್ಲಿ ಇಡೀ ಜಗತ್ತನ್ನು ಮುಖಾಮುಖಿಯಾಗಬಹುದು. ಸ್ನೇಹಿತರಾದ ಅಶಿಶ್ ನಂದಿ, ಶಿವ ವಿಶ್ವನಾಥನ್ ಮತ್ತು ಶಮಿಕ್ ಬಂದೋಪಾಧ್ಯಾಯ ಅಲ್ಲಿಗೆ ಬರುತ್ತಾರೆ. ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಆಸಕ್ತಿಯಿರುವ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಯುವಕ ಯುವತಿಯರು ಪ್ರತಿ ವರ್ಷವೂ ಅಲ್ಲಿಗೆ ಬರುತ್ತಾರೆ ಮತ್ತು ಇವರೊಂದಿಗೆ ಚರ್ಚಿಸುತ್ತಾರೆ. ಭಾಷೆಯೆನ್ನುವುದು ಇಲ್ಲೊಂದು ಸಂಗತಿಯೇ ಅಲ್ಲ. ಯಾಕೆಂದರೆ ನಮ್ಮ ಸಭೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡಗಳು ಯಾಜಮಾನ್ಯದ ಸಂಬಂಧವನ್ನು ಕಳೆದುಕೊಂಡಿವೆ.

ವಸ್ತುವೊಂದರಲ್ಲಿ ನಾನು ಮಗ್ನನಾಗಿ ಅದನ್ನು ಹೇಗೆ ಹೇಳುವುದೆಂದು ನನಗೆ ತಿಳಿಯದಿದ್ದಾಗ ರೂಪಕಗಳು ನನಗೆ ವರಗಳಂತೆ ಒದಗಿ ಬರುತ್ತವೆ. ಈ ರೂಪಗಳ ಬೇರು ಇರುವುದು ನನ್ನ ಮೊದಲ ಗ್ರಾಮೀಣ ಅನುಭವಗಳಲ್ಲಿ. ಆದರೆ ಅವು ನನ್ನ ವಯಸ್ಕ ಆಧುನಿಕ ಜೀವನದಲ್ಲೂ ಬೆಳೆದಿವೆ. ಹಿಂದೆ ಹೋಗಿ ಸಂದರ್ಭವೊಂದನ್ನು ನೆನಪಿಸಿಕೊಳ್ಳುತ್ತೇನೆ. ಅಗ್ರಹಾರದ ಮಠದಲ್ಲಿ ನಾನು ಹೋಗುತ್ತಿದ್ದ ಸಂಸ್ಕೃತ ಪಾಠಶಾಲೆಗೆ ನಾನು ಹೋಗುತ್ತಿದ್ದಾಗ ಅಪರಿಗ್ರಹ ವ್ರತವನ್ನು ಕೈಗೊಂಡಿದ್ದ ಉಪಾಧ್ಯಾಯರಿದ್ದರು. ಅವರು ದಿನಕ್ಕೆ ಒಂದೇ ಊಟ, ಅದೂ ಕೆಲವು ತುತ್ತುಗಳು ಮಾತ್ರ ಮಾಡುತ್ತಿದ್ದುದು. ಎರಡೇ ಬಟ್ಟೆಗಳು ಅವರ ಬಳಿ ಇದ್ದದ್ದು. ಒಂದು ಮುಂಡು ಮತ್ತು ಒಂದು ಅಂಗವಸ್ತ್ರ. ಅವುಗಳನ್ನು ಅವರು ಪ್ರತಿದಿನ ತೊಳೆದು ತುಂಗಾ ನದಿಯ ಮರಳಿನ ಮೇಲೆ ಒಣಗಿಸುತ್ತಿದ್ದರು. ರಾತ್ರಿಯಾದಾಗ ಅವರು ದೀಪದ ಎದುರು ನಿಂತು ಆ ದೀಪ ಆರುವ ತನಕ ಸಂಸ್ಕೃತ ಪುಸ್ತಕಗಳನ್ನು ಓದಿ ನೆಲದ ಮೇಲೆ ಮಲಗುತ್ತಿದ್ದರು. ಯಾವುದನ್ನೂ ಎಂದೂ ಅವರು ಆಸೆಯಿಂದ ನೋಡಿದ್ದಿಲ್ಲ. ಅವರು ಕಾಳಿದಾಸನ ಶಾಕುಂತಲವನ್ನು ನನಗೆ ಪಾಠ ಮಾಡುತ್ತಿದ್ದಾಗ ಅದರಲ್ಲಿ ಬರುವ ಶೃಂಗಾರದ ಭಾವಗಳನ್ನು ಹೇಗೆ ಅನುವಾದಿಸುತ್ತಿದ್ದರೆಂದು ನಾನು ಬೆರಗುಗೊಳ್ಳುತ್ತಿದ್ದೆ. ಒಮ್ಮೆ ಒಬ್ಬ ಅಷ್ಟೇನೂ ಸಮಚಿತ್ತವಿಲ್ಲದ ವ್ಯಕ್ತಿಯೊಬ್ಬ ಬಂದು ಇವರನ್ನು ಇವರು ಹೊದ್ದಿದ್ದ ಅಂಗವಸ್ತ್ರವನ್ನು ಕೇಳಿದ. ಗುರುಗಳು ಹೇಳಿದರು, ಹೊಸದಲ್ಲದ ಅದನ್ನು ಹೇಗೆ ಕೊಡುವುದು ಎಂದು. ಆ ಮನುಷ್ಯ ಹೇಳಿದ, ಹೊಸದೋ ಹಳೆಯದೋ ಅವನಿಗೆ ಅದರ ಅವರ್ಶಯಕತೆ ಇದೆ ಎಂದು. ನನ್ನ ಅಧ್ಯಾಪಕರು ಅದನ್ನು ಆತನಿಗೆ ಕೊಟ್ಟು ಮುಂದಿನ ಯುಗಾದಿಯ ತನಕ ಅಂಗವಸ್ತ್ರವಿಲ್ಲದೇ ಅಧ್ಯಾಪಕರು ಅದನ್ನು ಆತನಿಗೆ ಕೊಟ್ಟು ಮುಂದಿನ ಯುಗಾದಿಯ ತನಕ ಅಂಗವಸ್ತ್ರವಿಲ್ಲದೇ ಇದ್ದರು. ಹೊಸ ಅಂಗವಸ್ತ್ರ ಅವರಿಗೆ ಸಿಗುತ್ತಿದ್ದುದು ಮುಂದಿನ ಯುಗಾದಿಗೆ ಮಾತ್ರ.

ಆ ದಿನಗಳಲ್ಲಿ ಅಸ್ಪೃಶ್ಯತೆ ಆಗಿನ್ನೂ ಬಳಕೆಯಲ್ಲಿದ್ದ ಕಾರಣಕ್ಕಾಗಿ ನಾನು ಧರ್ಮದ ಕಟು ಟೀಕಾಕಾರನಾಗಿದ್ದೆ. ಆದರೆ ಈ ಯುವ ತೇಜಸ್ವಿ ಉಪಾಧ್ಯಾಯರು ನನಗೊಂದು ಒಗಟಾಗಿದ್ದರು. ಅವರ ಮನಸ್ಸಿನಲ್ಲಿ ಏನಿತ್ತೆಂದು ನನಗೆ ಗೊತ್ತಿರಲಿಲ್ಲ. ಆದರೆ ಒಂದು ದಿನ ಅವರು ಅಶ್ವತ್ಥದ ಎಲೆಯೊಂದನ್ನು ಕಿತ್ತು ಮೇಲಿನಿಂದ ಆಜ್ಞೆಯೊಂದನ್ನು ಪಡೆಯಲು ಅದನ್ನು ಬೀಳಿಸಿದರು. ಹಿಂದಿನ ದಿನ ಇದನ್ನು ಅವರು ನನಗೆ ಮಾಡುವೆನೆಂದು ಹೇಳಿದ್ದರು. ಅದು ಯಾವ ಮಗ್ಗುಲಿನಲ್ಲಿ ಬಿದ್ದಿತೆನ್ನುವುದು ಅವರಿಗೆ ಮೇಲಿನಿಂದ ಬಂದ ಸೂಚನೆಯಾಗುತ್ತಿತ್ತು. ಕೆಳಗೆ ಬಿದ್ದ ಎಲೆ ಹೇಳಿತು, “ಹೋಗು!”. ಅವರು ನನ್ನ ಕಡೆ ನೋಡಿ ನಕ್ಕು ಆಶೀರ್ವದಿಸಿ ಹಿಮಾಲಯದ ಕಡೆಗೆ ಹೊರಟು ಹೋದರು. ಅವರು ಹಾಗೆಯೇ ಕಣ್ಮರೆಯಾದರು.

ಬರ್ಮಿಂಗ್ ಹ್ಯಾಂನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಾನು ಸಂಸ್ಕಾರ ಬರೆದ ಸುಮಾರಿನಲ್ಲಿಯೇ “ಕ್ಲಿಪ್ ಜಾಯಿಂಟ್” ಎನ್ನುವ ಕಥೆಯನ್ನೂ ಬರೆದೆ. ನನ್ನ ನಾಯಕ ಲಂಡನ್ನಿನ ವೇಶ್ಯಾವಾಟಿಕೆಯ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾಗ ಅಗ್ರಹಾರದ ಈ ಸನ್ಯಾಸಿಯ ಬಗ್ಗೆ ಯೋಚಿಸುತ್ತಾನೆ.

ಇಂಗ್ಲೆಂಡಿನಲ್ಲಿ ನಾನು ರಿಚರ್ಡ್ ಹಗಾರ್ಟ್ ಅವರನ್ನು ಅಧ್ಯಾಪಕರಾಗಿ ಪಡೆಯುವ ಮತ್ತು ಡೇವಿಡ್ ಲಾಡ್ಜ್ ಅವರನ್ನು ನನ್ನ ಮಾರ್ಗದರ್ಶಕರಾಗಿ ಪಡೆಯುವ ಅದೃಷ್ಟವಂತನಾಗಿದ್ದೆ. ಅಲ್ಲಿನ ಸೆಂಟರ್ ಫಾರ್ ದ ಸ್ಟಡಿ ಆಪ್ ಕಾಂಟೆಂಪೊರರಿ ಕಲ್ಚರ್ ಸಂಸ್ಥೆಯಲ್ಲಿ ನಾನು ಸಕ್ರಿಯನಾಗಿದ್ದೆ. ಸ್ಟೂವರ್ಟ್ ಹಾಲ್‌ರು ಈ ಸೆಂಟರ್ ನಲ್ಲಿ ಇದ್ದರು. ಮತ್ತು ರೇಮಂಡ್ ವಿಲಿಯಮ್ಸ್ ಪದೇ ಪದೇ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಲೋಹಿಯಾ ಅವರ ಪ್ರಭಾವ ನನ್ನನ್ನು ಈ ಶ್ರೀಮಂತ ಸಾಂಸ್ಕೃತಿಕ ಬದ್ಧತೆಯ ಸೋಶಿಯಲಿಸ್ಟ್ ವಾತಾವರಣದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವುದನ್ನು ಸಾಧ್ಯ ಮಾಡಿತು.

ಭಾರತಕ್ಕೆ ಹಿಂದಿರುಗಿ ಬಂದ ಮೇಲೆ ನನಗೆ ತಿಳಿದದ್ದು: ನನ್ನ ಕಾದಂಬರಿ ‘ಸಂಸ್ಕಾರ’, ಇಂಗ್ಲೆಂಡ್ ಮತ್ತು ನನ್ನ ಹಳ್ಳಿಯಲ್ಲಿ ನೆಲೆ ಇರುವ ‘ಕ್ಲಿಪ್ ಜಾಯಿಂಟ್’ ಕಥೆ, ಭೂವ್ಯಾಜ್ಯದ ಫ್ಯೂಡಲ್ ಹಿನ್ನೆಲೆಯ ‘ಮೌನಿ’ ಕಥೆ, ಹಾಗು ನನ್ನ ಲೇಖನಗಳು ಹೊಸ ಜ್ಞಾನವನ್ನು ಸೃಷ್ಟಿಸುವುದರಲ್ಲಿ ಕನ್ನಡದ ಮಹತ್ವ ಮತ್ತು ಇಂಗ್ಲೀಷಿನ ಯಾಜಮಾನ್ಯವನ್ನು ಕುರಿತ ನನ್ನ ವಿರೋಧ, ಇವು ಇತರ ಬರೆಹಗಾರರನ್ನು ಆಕರ್ಷಿತ ಅವರ ಕಾಳಜಿಗಳೂ ಆದವು. ಅವರಲ್ಲಿ ಕೆಲವರು ಇಂದು ಕನ್ನಡದ ಅತ್ಯುತ್ತಮ ಬರಹಗಾರರಾಗಿದ್ದಾರೆ.

ಆದರೆ ನನಗೊಂದು ಸಮಸ್ಯೆಯಿತ್ತು. ನನ್ನ ಕಾದಂಬರಿ ಸಂಸ್ಕಾರದ ಬರವಣಿಗೆ ನನ್ನ ಮಟ್ಟಿಗೆ ಒಂದು ಮಾಂತ್ರಿಕ ಕ್ರಿಯೆಯಾಗಿತ್ತು. ಅದಕ್ಕೆ ಸಿಕ್ಕ ಯಶಸ್ಸು ಮತ್ತು ತೊಂದರೆಗಳೇ ಒಂದು ಅಡ್ಡಿಯೂ ಆಯಿತು. ಮುಂದೆ ಬಹುಕಾಲದ ತನಕ ಇನ್ನೊಂದು ಕಾದಂಬರಿಯನ್ನು ಬರೆಯುವುದು ನನಗೆ ಸಾಧ್ಯವಾಗಲಿಲ್ಲ. ನನ್ನ ಪ್ರಭಾವದಲ್ಲಿ ನಾನೇ ಮುಳುಗಿಹೋದಂತಿತ್ತು. ಕೆಲವು ವರ್ಷಗಳ ನಂತರ ಇದರಿಂದ ಚೇತರಿಸಿಕೊಂಡೆ. ಸೆಂಟರ್ ಫಾರ್ ದ ಸ್ಟಡಿ ಆಫ್‌ಕಾಂಟೆಂಪರರಿ ಕಲ್ಚರ್‌ನ ಪ್ರಭಾವ ನನ್ನ ಪುನರ್ಶೋಧಕ್ಕೆ ಸಹಾಯ ಮಾಡಿತು, ನಾನು ‘ಭಾರತಿಪುರ’ ಕಾದಂಬರಿಯನ್ನು ಬರೆದೆ.

ಹಲವು ವಿಮರ್ಶಕರು ಈ ಕಾದಂಬರಿ ಅಪ್ರಾಸಂಗಿಕವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ನನಗೆ ಹಾಗನ್ನಿಸಿಲ್ಲ. ನನಗನ್ನಿಸುವುದು ನನ್ನ ಪರಂಪರೆಯನ್ನು ಒಳ ವಿಮರ್ಶಕನಾಗಿ ವಿರೋಧಿಸುವುದರ ಮೂಲಕವೇ ನಾನು ನನ್ನ ಪರಂಪರೆಯ ಬಗೆಗಿನ ಆಳ ಬೇರುಗಳನ್ನು ಶೋಧಿಸಿದ್ದೇನೆ ಎಂದು. ಕಾದಂಬರಿ ವಾಸ್ತವವಾದಿ ಪರಂಪರೆಗೆ ಸೇರಿಲ್ಲ. ಇದಕ್ಕೊಂದು ವಾಸ್ತವವಾದಿ ದೇಹವಿದೆ. ಅದೇ ಹೊತ್ತಿನಲ್ಲಿ ಇದು ರೂಪಕಾತ್ಮಕವೂ ಹೌದು. ಕಾದಂಬರಿ ನಡೆಯುವುದು ಸಣ್ಣ ಪಟ್ಟಣವೊಂದರ ದೇವಸ್ಥಾನದಲ್ಲಿ. ಕಾದಂಬರಿಯ ನಾಯಕ ಈ ದೇವಸ್ಥಾನದ ಮುಖ್ಯ ಪೋಷಕರಲ್ಲಿ ಒಬ್ಬ. ಅವನು ಇಂಗ್ಲೆಂಡಿನ ವಿಧ್ಯಾಭ್ಯಾಸವನ್ನು ಮುಗಿಸಿ ಬಂದ ನಂತರ, ದೇವಸ್ಥಾನದ ದೇವರು ಮಂಜುನಾಥನನ್ನು ನಿಗೂಢ ಬೆರಗಿನಿಂದ ಮುಕ್ತಗೊಳಿಸುವ ತನಕವೂ ತಾನು ಅವಾಸ್ತವ ಮತ್ತು ಅನಧಿಕೃತ ಎಂದು ಆತ ತಿಳಿಯುತ್ತಾನೆ. ಆ ಇಡೀ ಬಡ ಊರಿನ ಅರ್ಥ ವ್ಯವಸ್ಥೆ ನಿಂತಿರುವುದೇ ಭಕ್ತರಿಂದ ಸಂಗ್ರಹಿತವಾಗುವ ಹಣದ ಮೇಲೆ. ಮಂಜುನಾಥನ ಬಗೆಗಿನ ಬೆರಗಿನ ಮೂಲ ಇರುವುದು ಯಾವ ಅಸ್ಪೃಶ್ಯನೂ ಆ ದೇವಸ್ಥಾನವನ್ನು ಪ್ರವೇಶಿಸಬಾರದು ಮತ್ತು ಪ್ರವೇಶಿಸಿದರೆ ದೇವರು ಅವರನ್ನು ಶಿಕ್ಷಿಸುತ್ತಾನೆ ಎಂಬ ನಂಬಿಕೆಯ ಮೇಲೆ. ನನ್ನ ನಾಯಕ ಅಸ್ಪೃಶ್ಯರ ದೇವಸ್ಥಾನ ಪ್ರವೇಶದ ಚಳುವಳಿಯೊಂದನ್ನು ಕಟ್ಟಲು ಪ್ರಾರಂಭಿಸುತ್ತಾನೆ. ನಾಯಕ ಜಗನ್ನಾಥ ಕೂಡ ದೇವಸ್ಥಾನದ ಈ ಪ್ರಭಾವಳಿಯಲ್ಲಿಯೇ ಬೆಳೆದು ಬಂದವನು. ಆದ್ದರಿಂದ ಅವನ ಹೋರಾಟ ಕೇವಲ ಸಂಸ್ಥೆಯ ವಿರುದ್ಧವಲ್ಲ, ತನ್ನ ವಿರುದ್ಧವೇ. ನಾಯಕ ತನ್ನ ಸಾಂಪ್ರದಾಯಿಕ ಜಮೀನ್ದಾರಿ ಮನೆಯಲ್ಲಿರುವ ಸಾಲಿಗ್ರಾಮವನ್ನು ಅಸ್ಪೃಶ್ಯರು ಮೊದಲು ಮುಟ್ಟಲಿ ಎಂದು ತೀರ್ಮಾನಿಸುತ್ತಾನೆ.

ಕಾದಂಬರಿಯಿಂದ ಒಂದು ಭಾಗವನ್ನು ನಾನು ಉದ್ಧರಿಸುತ್ತೇನೆ.

‘ಆಡಬೇಕಾದ ಮಾತುಗಳೆಲ್ಲಾ ಗಂಟಲಲ್ಲೇ ಹೂತವು. ಇದು ಯಃಕಶ್ಚಿತ್ ಪದಾರ್ಥ ಮುಟ್ಟಿ: ನನ್ನ ಜೀವನವನ್ನೇ ಕೈಯಲ್ಲಿ ಹಿಡಿದು ಒಡ್ಡಿದ್ದೇನೆ ಮುಟ್ಟಿ: ನನ್ನ ಅಂತರಂಗದ ಆಯಸ್ಥಳವನ್ನು ಮುಟ್ಟಿ: ಸಂಜೆ ಅರ್ಚನೆಯ ಹೊತ್ತಿದು ಮುಟ್ಟಿ ಎಂದೂ ಆರದ ದೀಪ ಅಲ್ಲಿ ಬರಿದೇ ಉರಿಯುತ್ತಿದೆ. ಹಿಂದೆ ನಿಂತವರು ಎಷ್ಟು ಋಣಾನುಬಂಧಗಳನ್ನು ಜ್ಞಾಪಿಸುತ್ತಾ ಜಗ್ಗುತ್ತಿದ್ದಾರೆ. ಯಾವುದಕ್ಕಾಗಿ ಕಾದಿದ್ದೀರಿ. ನಾನು ಏನು ಒಡ್ಡಿದ್ದೇನೆ. ಪ್ರಾಯಶಃ ಹೀಗೆ: ನಾನು ಇಗೋ ಇದು ಬರಿ ಕಲ್ಲು ಎಂದು ಒಡ್ಡಿದ್ದರಿಂದಲೇ ಇದು ಶಾಲಿಗ್ರಾಮ. ಒಡ್ಡಿದ್ದನ್ನು ನೀವು ಮುಟ್ಟಿದರೆ ಅವರಿಗೆಲ್ಲ ಇದು ಕಲ್ಲಾಗುತ್ತದೆ. ಈ ನನ್ನ ಆರ್ತತೆ ಶಾಲಿಗ್ರಾಮವಾಗುತ್ತದೆ; ನಾನು ಒಡ್ಡಿದ್ದರಿಂದ ನೀವು ಮುಟ್ಟಿದ್ದರಿಂದ ಅವರೆಲ್ಲ ನೋಡಿದ್ದರಿಂದ ಈ ಕಪ್ಪಾಗುತ್ತಿರುವ ಸಂಜೆಯಲ್ಲಿ ಕಲ್ಲು ಶಾಲಿಗ್ರಾಮವಾಗಲಿ, ಶಾಲಿಗ್ರಾಮ ಕಲ್ಲಾಗಲಿ. ಕಾಡು ಹಂದಿ ಬರಲಿ, ಹುಲಿ ಬರಲಿ ಹೆದರದೇ ಇರುವ ಪಿಳ್ಳ, ಮುಟ್ಟು ಆಮೇಲೆ ದೇವಸ್ಥಾನದ ಹೊಸಲು ದಾಟುವ ಒಂದೇ ಒಂದು ಹೆಜ್ಜೆ; ಶತಮಾನಗಳು ಪಲ್ಲಟವಾಗುತ್ತದೆ. ಈಗ ಮುಟ್ಟಿ, ಕಲಿಯಿರಿ, ಮುಟ್ಟಿ, ಕಲಿಯಿರಿ, ಮುಟ್ಟಿ, ಎಷ್ಟು ಸುಲಭ, ಮುಟ್ಟಿ.

ಕೈ ಬೆವರುತ್ತಿತ್ತು. ಹೊಲೆಯರು ಬೆಪ್ಪಾಗಿ ಹಿಂದೆ ಸರಿದರು. ತನ್ನ ಆರ್ತತೆಯನ್ನೆಲ್ಲ ಇವು, ಅವರು, ಸಂಜೆ ತಿರಸ್ಕರಿಸಿದ್ದವು. ಜಗನ್ನಾಥ ತನಗೆ ಸಾಧ್ಯವಾದ ವಿವೇಕದಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ. ಅವನಿಗೆ ಗೊತ್ತು: ಕಳ್ಳರನ್ನು ಹಿಡಿಯಲೆಂದು ಮಂತ್ರಿಸಿದ ಕಾಯಿ ಮುಟ್ಟಿಸುವುದನ್ನು ಇವರು ನೋಡಿದ್ದಾರೆ. ತಟ್ಟೆಯ ಮೇಲೆ ಕೆಂಪು ಮಂತ್ರಾಕ್ಷತೆ; ಅದರ ಮೇಲೆ ಜುಟ್ಟು ಕುಂಕುಮವಿರುವ ಕಾಯಿ ಮುಖದಂತೆ ನೋಡುತ್ತ ಎಲ್ಲರಿಂದ ಮುಟ್ಟಿಸಿಕೊಂಡು ಕೊನೆಗೆ ತನ್ನ ಎದುರೇ ಬಂದಾಗ ಹೇಗೆ ನರಗಳು ಉಬ್ಬಿ, ಉಸಿರು ಕಟ್ಟಿ ಮೂರ್ಛೆ ಹೋಗುವವರಿದ್ದಾರೆ ಎಂಬುದನ್ನಿವರು ನೋಡಿದ್ದಾರೆ. ಸಿಂಗಾರ ಹಿಡಿದು ಕುಂಕುಮ ಬಳೆದುಕೊಂಡು ಥತ್ತರ ಕಂಪಿಸುತ್ತ ಶಿಕ್ಷೆ ವಿಧಿಸುವ ಭೂತರಾಯ, ಈ ಒಡ್ಡಿರುವ ಮುಹೂರ್ತದಲ್ಲಿ ಅವರಿಗೆ ಪ್ರತ್ಯಕ್ಷವಾಗಿದ್ದಾನೆ.

“ಇದು ಬರಿ ಕಲ್ಲು ಮುಟ್ಟಿ ನೋಡಿ, ನಿಮಗೇ ಗೊತ್ತಾಗುತ್ತೆ. ಹೀಗೆ ಆಡಿದರೆ ನೀವು ಪೆದ್ದರಾಗೇ ಉಳೀತೀರಿ”

ಜಗನ್ನಾಥ ಪ್ರತಿನಿತ್ಯದ ತನ್ನ ಉಪಾಧ್ಯಾಯನ ಧಾಟಿಯಲ್ಲಿ ಅವರಿಗೆ ಸಮಾಧಾನ ಹೇಳಿದ. ಥಟ್ಟನೆ ಏನನ್ನಿಸಿತೋ ಹೊಲೆಯರಿಗೆ, ಒಟ್ಟಾಗಿ ಹಿಮ್ಮೆಟ್ಟಿದವು. ಭೀತಿಯಿಂದ ವಿಕಾರವಾದ ಮುಖವನ್ನು ಹೊತ್ತು ನಿಲ್ಲಲಾರದೆ, ಓಡಲಾರದೆ ಒದ್ದಾಡಿದವು. ಮುಟ್ಟುವ ಮುಹೂರ್ತಕ್ಕಾಗಿ ಆರ್ತನಾಗಿ ಕಾಮಿಸಿದ ಜಗನ್ನಾಥನಲ್ಲಿ ಇದ್ದಕ್ಕಿದ್ದಂತೆ ರೋಷ ಉಕ್ಕಿತು. ಕೋಪದಿಂದ ಕಂಪಿಸುವ ಸ್ವರದಲ್ಲಿ ‘ಹೂಂ, ಮುಟ್ಟಿ’ ಎಂದ. ಒಡೆಯ ಬರುವುದನ್ನು ಕಂಡು ಕಂಗಾಲಾದ ಹೊಲೆಯರು ಹಿಂದಕ್ಕೆ ಸರಿದವು. ಜಗನ್ನಾಥನ ಭಾವನೆಗಳೆಲ್ಲ ಈಗ ಕ್ರೂರವಾಗಿಬಿಟ್ಟವು. ಎದುರಿಗಿದ್ದ ಹೊಲೆಯರು ಅತ್ಯಂತ ಹೇಸಿಗೆ ಹುಟ್ಟಿಸುವ ಹೊಟ್ಟೆ ಹೊಸೆಯುವ ಜಂತುಗಳಂತೆ ಕಂಡವು.

ಅವಡು ಕಚ್ಚಿ ಮೆತ್ತಗೆ ಹೇಳಿದ “ಏ ಪಿಳ್ಳ ಮುಟ್ಟು, ಹೂಂ ಮುಟ್ಟು”

ಪಿಳ್ಳ ಕಣ್ಣು ಬಿಡುತ್ತಾ ನಿಂತ. ಇಷ್ಟು ದಿನ ತಾನು ಹೇಳಿದ್ದೆಲ್ಲಾ ಜಗನ್ನಾಥನಿಗೆ ವ್ಯರ್ಥವೆನಿಸಿತು. ಭೀಕರವಾದ ಧ್ವನಿಯಲ್ಲಿ ಕಿರುಚಿದ “ಮುಟ್ಟು, ಮುಟ್ಟು, ಹೂಂ ಮುಟ್ಟು”

ಜಗನ್ನಾಥನ ಗಂಟಲಿನಿಂದ ಬಂದ ಧ್ವನಿ ಕೆರಳಿದ ಪಶು ಮಾಡುವ ಸದ್ದಿನಂತಿತ್ತು. ಅವನಿಗೇ ತನ್ನನ್ನು ಹರಿದು ಬರುತ್ತಿದ್ದ ಸದ್ದು ಕೇಳಿ ದಿಗಿಲಾಯಿತು. ಕ್ರೌರ್ಯವೊಂದಲ್ಲದೆ ಬೇರೆ ಎಲ್ಲ ಭಾವನೆಗಳೂ ಮಾಯವಾದವು. ಭೂತರಾಯನಿಗಿಂತ ಭಯಂಕರವಾಗಿ ಹೊಲೆಯರಿಗೆ ಕಾಣಿಸಿಕೊಳ್ಳುತ್ತಾ ‘ಮುಟ್ಟಿ ಮುಟ್ಟಿ ಮುಟ್ಟಿ’ ಎಂದು ಅರಚಲು ಆರಂಭಿಸಿದ, ಈ ಅಮುಕುವ, ತಿವಿಯುವ ಸದ್ದಿನಿಂದ ಕಂಗಾಲಾದ ಹೊಲೆಯರು ಯಾಂತ್ರಿಕವಾಗಿ ಮುಂದೆ ಬಂದು ಜಗನ್ನಾಥ ಒಡ್ಡಿದ್ದನ್ನು ಮುಟ್ಟಿದ ಶಾಸ್ತ್ರ ಮಾಡಿ ಹಿಂದೆ ಸರಿದು ನಿಂತರು.

ಕ್ರೌರ್ಯ ದುಃಖಗಳಿಂದ ನಿರ್ಬಲನಾದ ಜಗನ್ನಾಥ ಶಾಲಿಗ್ರಾಮವನ್ನು ಅಲ್ಲೇ ಎಸೆದ. ನಿಗರಿ ನಿಂತಿದ್ದ ಒಂದು ಆರ್ತತೆ ವಿಕಾರವಾಗಿ ಕೊನೆಯಾಗಿತ್ತು, ಹೊಲೆಯರನ್ನು ಅಸ್ಪೃಶ್ಯರೆಂದು ಕಾಣುವ ಚಿಕ್ಕಗಿರುವ ಮಾನವೀಯ ಭಾವನೆಯನ್ನೂ ತಾನೂ ಒಂದು ಕ್ಷಣ ಕಳೆದುಕೊಂಡಿದ್ದೆ. ಹೊಲೆಯರು ಅರ್ಥಹೀನ ವಸ್ತುಗಳಾಗಿ ತನಗೆ ಕಂಡವು. ಜಗನ್ನಾಥ ಮುಖ ತಗ್ಗಿಸಿ ನಿಂತಿದ್ದ. ಹೊಲೆಯರು ಹೊರಟು ಹೋದದ್ದು ಅವನಿಗೆ ತಿಳಿಯಲಿಲ್ಲ. ಸುತ್ತ ಮುತ್ತಲೂ ಯಾರೂ ಇಲ್ಲವೆನ್ನುವುದು ಅವನಿಗೆ ಗೊತ್ತಾದಾಗ ಕತ್ತಲಾಗಿತ್ತು. ತನ್ನ ಬಗ್ಗೆ ಅಸಹ್ಯ ಪಡುತ್ತಾ ಹಾಗೆಯೇ ಅಲೆದಾಡಿದ. ಮುಟ್ಟಿದಾಗ ಅವುಗಳೂ ನಾನೂ ಇರುವ ಮಾನವೀಯತೆಯನ್ನೂ ಕಳೆದುಕೊಂಡು ಸತ್ತೆವಲ್ಲ; ಇದಕ್ಕೆ ಕಾರಣ ತನ್ನ ಒಳಗಿದೆಯೋ ಅಥವಾ ಸಮಾಜದಲ್ಲೇ ಇದೆಯೋ ಎಂದು ತಿಳಿಯಲಾರದೆ ಬಹಳ ಹೊತ್ತು ಮಂಕಾಗಿ ಓಡಾಡಿ ಮನೆಗೆ ಬಂದ.

ಈ ಕಾದಂಬರಿಯ ನಂತರ ಬರೆದದ್ದು ಇದು. ಇದೊಂದು ರಾಜಕೀಯ ಕಾದಂಬರಿ. ಆದರೆ ಕೇವಲ ರಾಜಕೀಯ ಕಾದಂಬರಿ ಅಲ್ಲ. ಬರೆಯುವಾಗ ನನಗೆ ಅಪಾರ ತೃಪ್ತಿಯನ್ನು ಕೊಟ್ಟ ಕಾದಂಬರಿ ಇದು. ಇದನ್ನು ಬರೆಯುವಾಗ ನಿಧಾಣವಾಗಿ ನಾನು ಐತಿಹಾಸಿಕ ಕಾಲ ಮತ್ತು ಅವಕಾಶವನ್ನು (ಸ್ಪೇಸ್) ಪ್ರವೇಶಿಸಿದೆ. ಈ ಕಾದಂಬರಿಯ ಬಹುಪಾಲು ನಡೆಯುವುದು ನಗರ ಪ್ರದೇಶದಲ್ಲಿ. ಈ ಕಾದಂಬರಿ ಕೂಡ ನನ್ನ ಕಾಳಜಿಗಳನ್ನು ಸಮಸ್ಯಾತ್ಮಕಗೊಳಿಸುತ್ತದೆ. ವಾಸನಾಮಯ ಜೀವನದ ಒತ್ತಾಯಗಳು, ನಮ್ಮ ಕಾಲದ ರಾಜಕೀಯ ಸವಾಲುಗಳು ಮತ್ತು ಅನುಭಾವಿಕ ಜಗತ್ತು, ಈ ಎಲ್ಲವೂ ಈ ಕಾದಂಬರಿಯಲ್ಲಿವೆ. ನನ್ನ ಕೃತಿಯ ಬಗ್ಗೆ ನಾನೇ ಹೀಗೆ ಮಾತನಾಡುವುದು ಆತ್ಮಪ್ರತ್ಯಯ ಎನಿಸುತ್ತದೆ. ನನ್ನ ಮುಂದಿನ ಎರಡು ಕಾದಂಬರಿಗಳು ‘ಭವ’ ಮತ್ತು ‘ದಿವ್ಯ’. ಇವುಗಳನ್ನು ವರ್ಣಿಸುವುದು ನನಗೆ ಕಷ್ಟ. ನನ್ನ ಹಿಂದಿನ ಕೃತಿಗಳಲ್ಲಿ ಶೋಧಿಸಿದ ಜಗತ್ತನ್ನು ಪುನಃ ಸಂದರ್ಶಿಸಿ ಜಗತ್ತಿನ ವಿವರಗಳನ್ನು ಮಾನವಾನುಕಂಪದ ಹೊಸ ಬೆಳಕಿನ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ.

ಒಟ್ಟಿನಲ್ಲಿ ನನಗನ್ನಿಸುವುದು ನನ್ನ ಬರವಣಿಗೆಗಳು ಧಾರ್ಮಿಕ ಬದುಕಿನ ವಿಮರ್ಶೆಯೂ ಹೌದು. ಅದು ವಿಮರ್ಶೆಯೇ! ಖಂಡನೆಯೂ ಅಲ್ಲ. ಸಂಭ್ರಮಾಚರಣೆಯೂ ಅಲ್ಲ. ನನ್ನ ‘ಭಾರತಿಪುರ’ ಮತ್ತು ‘ಅವಸ್ಥೆ’ ಕಾದಂಬರಿಗಳು ರಾಜಕೀಯ ಅರ್ಥಗಳನ್ನು ಹೊಂದಿರುವಂತೆಯೇ, ಆಧುನಿಕತೆ ಮತ್ತು ಪರಂಪರೆಯ ವಿಮರ್ಶೆಗಳೂ ಆಗಿವೆ. ಈ.ಎಂ. ಫಾಸ್ಟರ್ ಹೇಳುತ್ತಾನೆ. “ಕೇವಲ ಹೊಂದಿಸು!”. ನಾನು ನನ್ನವೇ ಆದ ಅಭಿಪ್ರಾಯಗಳಿಂದ ದೂರ ಹೋದಾಗ ಮಾತ್ರ ನಿಜವಾಗಿ ಸೃಜನಶೀಲವಾಗಿದ್ದೇನೆಂದು ಮತ್ತು ಅನೂಹ್ಯ ಸಂಪರ್ಕಗಳನ್ನು ಬರವಣಿಗೆಯ ಪ್ರಕ್ರಿಯೆಯಲ್ಲಿ ಸಾಧಿಸುತ್ತೇನೆ ಎಂದು ಅನಿಸುತ್ತದೆ. ಇದು ಎಚ್ಚರದ ತನ್ಮಯತೆಯನ್ನು ಅಪೇಕ್ಷಿಸುತ್ತದೆ. ಇದರ ಇನ್ನೊಂದು ಹೆಸರೇ ವಿನಯ.

ನನ್ನ ಹೈಸ್ಕೂಲು ದಿನಗಳಲ್ಲಿ ನಮ್ಮ ತಾಯಿಯ ಹಳ್ಳಿಯಲ್ಲಿ ಒಬ್ಬ ವಿಚಿತ್ರ ಸಾಧುವಿನಂತಿದ್ದ ಸಂಸಾರಿಯನ್ನು ನಾನು ಭೇಟಿ ಮಾಡುತ್ತಿದ್ದೆ. ಭಾರತದ ತುಂಬೆಲ್ಲ ತೀರ್ಥಯಾತ್ರೆ ಮಾಡಿ ಬಂದಿದ್ದ ಹಿಂದಿ ಮತ್ತು ಇಂಗ್ಲಿಷ್‌ಗಳನ್ನು ಬಲ್ಲ ಆದರೆ ಹಳ್ಳಿಯ ದೇವಸ್ಥಾನದ ಅರ್ಚಕನಾಗಿ ಸರಳ ಜೀವನವನ್ನು ನಡೆಸುತ್ತಿದ್ದ ವ್ಯಕ್ತಿ ಈತ. ಈತನೂ ಕೂಡ ಸಂತ ಗ್ರಹಸ್ಥನ ರೀತಿಯಲ್ಲಿ ಅಪರಿಗ್ರಹವನ್ನು ಪಾಲಿಸುತ್ತಿದ್ದ. ಈತ ನನ್ನನ್ನು ಕಾಡಿಗೆ ಕರೆದೊಯ್ಯುತ್ತಿದ್ದ. ಕೆಲವೊಮ್ಮೆ ಆವೇಶ ಬಂದಾಗ ರಾಮಕೃಷ್ಣ ಪರಮಹಂಸರು ಮತ್ತು ಶಿವಾನಂದರಂತೆ ಭಜನೆಗಳನ್ನು ಹಾಡುತ್ತಿದ್ದ.

ಒಮ್ಮೆ ನನಗೆ ಆತ ಶಿವಾನಂದರ ಇಂಗ್ಲಿಷ್ ಪುಸ್ತಕವನ್ನು ಕೊಟ್ಟರು. ಆ ದಪ್ಪರಟ್ಟಿನ ಪುಸ್ತಕಕ್ಕೆ ವೃತ್ತಪತ್ರಿಕೆಯ ಹೊದಿಕೆಯಿತ್ತು. ಹುಡುಗ ಸಹಜ ಕುತೂಹಲದಲ್ಲಿ ನಾನುಆ ಹೊದಿಕೆಯನ್ನು ತೆಗೆದು ನೋಡಿದರೆ ಅಲ್ಲಿ ಹತ್ತು ರೂಪಾಯಿಯ ನೋಟಿತ್ತು. ತನಗೆ ಸದ್ಯಕ್ಕೆ ಬಳಕೆಗೆ ಬಾರದ ಯಾವುದನ್ನೂ ಇಟ್ಟುಕೊಳ್ಳದಿದ್ದ ಈತ ಯಾಕೆ ಈ ಹಣವನ್ನು ಇಟ್ಟುಕೊಂಡಿದ್ದಾನೆಂದು ನನಗೆ ಆಶ್ಚರ್ಯವಾಯಿತು. ನಾನು ಈತನನ್ನು ಪರೀಕ್ಷಿಸಲು ಹತ್ತು ರೂಪಾಯಿಯನ್ನು ಇಟ್ಟುಕೊಂಡು ಪುಸ್ತಕವನ್ನು ಮರಳಿಸಿದೆ. ಈತ ಎಂದೂ ನನ್ನನ್ನು ಆ ಹಣ ಕೇಳಲಿಲ್ಲ. ಆ ಕಳ್ಳತನದ ರಹಸ್ಯವೇ ನನ್ನನ್ನು ಅನುಭಾವಿಯಾಗುವುದರಿಂದ ಪಾರು ಮಾಡಿತೆಂದು ನಾನು ಯೋಚಿಸುತ್ತಿದ್ದೆ. ನಾನು ಕದ್ದ ಹತ್ತು ಯಾಗುವುದರಿಂದ ಪಾರು ಮಾಡಿತೆಂದು ನಾನು ಯೋಚಿಸುತ್ತಿದ್ದೆ. ನಾನು ಕದ್ದ ಹತ್ತು ರೂಪಾಯಿ ಮತ್ತು ಅದರ ರಹಸ್ಯ ನನ್ನನ್ನು ಅವನಿಂದ ಬಿಡುಗಡೆಗೊಳಿಸಿತು. ಇಲ್ಲದೇ ಹೋದಲ್ಲಿ ನಾನು ಬಸುರಿಯಾದ ವಿಧವೆಯಾದ ಹೆಣ್ಣಿನ ವಿರುದ್ಧದ ಅಸೀಮ ಕ್ರೌರ್ಯ ಮತ್ತು ಸೂಕ್ಷ್ಮ ಬಾಲಕನ ‘ಘಟಶ್ರಾದ್ಧ’ ದಂತಹ ಕಥೆಯನ್ನು ಹೇಗೆ ಬರೆಯುತ್ತಿದ್ದೆ?

ಜಗತ್ತಿನ ಎಲ್ಲ ದೊಡ್ಡ ಧರ್ಮಗಳಲ್ಲೂ ಈ ಅಕಾರಣವಾದ ಹಿಂಸೆ ಅವುಗಳ ಒಂದು ಭಾಗವಲ್ಲವೆ? ಹೇಗೆ ಈ ಅಲೌಕಿಕ ಭಕ್ತ ಇಂಥ ವಾಸ್ತವಗಳನ್ನು ಮರೆಯಲು ಸಾಧ್ಯ? ಇಷ್ಟಾಗಿಯೂ ಆತ ನನ್ನನ್ನು ಕಾಡಿದ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಆತನನ್ನು ಪುನಃ ನೋಡಿದೆ. ಹಳ್ಳಿಯ ತನ್ನ ಹೆಂಚಿನ ಮನೆಯಲ್ಲಿ ಶಾಂತನಾಗಿ ಕೂತು ತಕಲಿಯನ್ನು ಹಿಡಿದು ಯಜ್ಞೋಪವೀತವನ್ನು ಮಾಡುತ್ತಿದ್ದ. ನನ್ನನ್ನು ನೋಡಿ ನಾನು ಅದೇ ಹಳೆಯ ಬಾಲಕನೇನೋ ಅನ್ನುವಂತೆ ನಕ್ಕ. ನನ್ನ ಕಳ್ಳತನದ ಬಗ್ಗೆ ಹೇಳಿ ಹಣವನ್ನು ವಾಪಸ್ಸು ಮಾಡುತ್ತೇನೆಂದು ನಾನು ಯೋಚಿಸಿದೆ. ಆದರೆ ಮಾಡಲಿಲ್ಲ. ಈ ಘಟನೆ ನನ್ನ ಭಾರತೀಪುರದಲ್ಲಿದೆ.

ಕೋಮುವಾದಿ ಧರ್ಮದ ಜೊತೆಗಿನ ನನ್ನ ವಿರೋಧ, ಜಾಗತೀಕರಣಕ್ಕೊಳಗಾಗುತ್ತಿರುವ ನನ್ನ ಸಮಾಜವಾದಿ ಕಾಳಜಿಗಳು ಮತ್ತು ನಾವು ದ್ವೇಷಿಸುತ್ತಿರುವ ಜಾಗತೀಕರಣಕ್ಕೊಳಗಾದ ಬಂಡವಾಳಶಾಹಿಯು ಗುಪ್ತವಾಗಿ ನಾವು ಬಯಸುತ್ತಿರುವುದನ್ನು ಒಳಗೊಂಡಿರುತ್ತದೆ ಎನ್ನುವ ಎಚ್ಚರದಲ್ಲಿ ನಾನು ನನ್ನ ರಾಜಕೀಯ ಮತ್ತು ಧಾರ್ಮಿಕ ಕಾಳಜಿಗಳೊಂದಿಗೆ ಬದುಕನ್ನು ಮುಂದುವರಿಸಿದ್ದೇನೆ. ಬಹುತೇಕ ಸಂದರ್ಭಗಳಲ್ಲಿ ನಾವು ಆಧುನಿಕ ಪಶ್ಚಿಮ ನಾಗರಿಕತೆಯ ಜೊತೆಯಲ್ಲಿ ‘ಬ್ಯಾಡ್‌ಫೇಥ್‌’ನಲ್ಲಿ ಬದುಕುತ್ತಿರುತ್ತೇವೆ. ‘ಸೂರ್ಯನ ಕುದುರೆ’ ಕಥೆಯಲ್ಲಿ ನಮ್ಮೊಳಗಿರುವ ದ್ವಂದ್ವಗಳಿಗೆ ಒಂದು ರೂಪವನ್ನು ಹುಡುಕುವುದರಲ್ಲಿ ನಾನು ಯಶಸ್ವಿಯಾಗಿದ್ದೇನೆ.

ಈ ದೀರ್ಘ ಕಥೆಯನ್ನು ಎಂಭತ್ತರ ದಶಕದಲ್ಲಿ ನಾನು ಹೇಗೆ ಬರೆದೆ ಎನ್ನುವುದನ್ನು ಹೇಳುತ್ತೇನೆ. ಮಾರ್ಕ್ಸ್‌ನ ಬರವಣೆಗೆಯೊಂದನ್ನು ನಾನು ಓದುತ್ತಿದ್ದೆ. ‘ವಿಲೇಜ್ ಈಡಿಯಸಿ’ಯ ಬಗ್ಗೆ ಬರೆದ ಭಾಗ ಅದು. ಉತ್ಪಾದನೆಯ ವಿಧಾನ ಮತ್ತು ಉತ್ಪಾದನೆಗಳ ಸಂಬಂಧಗಳಲ್ಲಿ ಘರ್ಷಣೆ ಮತ್ತು ಬದಲಾವಣೆಗಳಿಲ್ಲದೆ ಇತಿಹಾಸ ಮುಂದೆ ಚಲಿಸುವುದಿಲ್ಲ ಎನ್ನುವುದು ಮಾರ್ಕ್ಸ್‌ನ ವಾದ. ಸೃಜನಶೀಲ ಬರಹಗಾರನಾಗಿ ನನ್ನ ನಿಲುವು ಮತ್ತು ಗಾಂಧಿಯ ವಿಕೇಂದ್ರೀಕರಣದಲ್ಲಿ ನಂಬಿಕೆಯಿದ್ದ ವ್ಯಕ್ತಿಯಾಗಿ ನನಗೆ ಇದೊಂದು ಸವಾಲಾಗಿ ಕಂಡಿತು.

ನಾನು ನನ್ನ ರೂಮಿನಲ್ಲಿ ಪುಟ್ಟ ಮಗಳೊಂದಿಗೆ ಕೂತಿದ್ದೆ. ಅವಳು ಚೇರಿನ ಮೇಲೆ ಬಂದು ಕುಳಿತ ಹಸಿರು ಮಿಡತೆಯನ್ನು ನೋಡಿ ಅದೇನೆಂದು ಕೇಳಿದಳು. ನಾನು ಹೇಳಿದೆ, ನಾವು ಅದನ್ನು ಸೂರ್ಯನ ಕುದುರೆ ಎಂದು ಕರೆಯುತ್ತೇವೆ ಎಂದು. ತಕ್ಷಣವೇ ನನಗೆ ಅನ್ನಿಸಿದ್ದು ಕ್ರಿಮಿಗೆ ಎಂಥಾ ಹೆಸರು! ಜಗತ್ತಿನ ಪ್ರಾಣಿಗಳನ್ನು ಮತ್ತು ಆಕಾಶದ ಸೂರ್ಯನನ್ನು ಸಂಪರ್ಕಿಸುವ ಪದ. ಇಂಥ ಪದ ನನ್ನ ಭಾಷೆಯಲ್ಲಿ ಬಂದದ್ದು ವಿಲೇಜ್ ಈಡಿಯಸಿಯ ಬದುಕಿನಲ್ಲಿರುವ ರೈತರಿಂದ. ತಕ್ಷಣವೇ ನನಗೆ ನೆನಪಾದದ್ದು ಬಾಲ್ಯಕಾಲ. ಜ್ಯೋತಿಷ್ಯದ ವಿದ್ಯಾರ್ಥಿ, ದೇವಿಯ ಉಪಾಸಕನೊಬ್ಬ ನನ್ನ ತಂದೆಯ ಬಳಿ ಮಾರ್ಗದರ್ಶನಕ್ಕಾಗಿ ಬಂದಿದ್ದ. ಆತ ನಾನು ಪ್ರೀತಿಸಿದ ಜನರಿಗೆ ಅಭ್ಯಂಜನ ಮಾಡಿಸುತ್ತಿದ್ದ ಮತ್ತು ಆತನ ಆಧುನಿಕನಾದ, ಕಾಲೇಜಿನ ಪ್ರಿನ್ಸಿಪಾಲರನ್ನೇ ಹೊಡೆದ ಮಗ ಇವೆಲ್ಲವೂ ಸೇರಿಕೊಂಡು ಬೇರೆ ಇನ್ನೇನೋ ಆಗಿಬಿಟ್ಟವು, ನಾನು ಕಥೆ ಬರೆದಾಗ. ಇಂತಹ ಬರವಣಿಗೆಯ ಹಿಂದೆ ಶ್ರಮ ಮತ್ತು ಮಾಂತ್ರಿಕತೆ ಎರಡೂ ಇರುತ್ತವೆ. ನನಗೆ ಯಾವಾಗಲೂ ಅನ್ನಿಸುವುದು ನಾನು ಚೆನ್ನಾಗಿ ಬರೆಯುವುದು ನನ್ನ ಅಭಿಪ್ರಾಯಗಳನ್ನು ದಾಟಿ ಹೋದಾಗ ಮಾತ್ರ. ಆಗ ಘಟನೆಗಳು ತಾವಾಗಿಯೇ ಅಪರಿಚಿತ ಮೂಲಗಳಿಂದ ವರಗಳಂತೆ ಒದಗಿ ಬರುತ್ತವೆ. ಈ ಕಥೆ ಆಧುನಿಕತೆ ಮತ್ತು ಜಾಗತೀಕರಣದ ವಿಮರ್ಶೆ ಮತ್ತು ಅದರ ಆಚೆಗಿನದೂ ಎಂದು ನಾನು ತಿಳಿದಿದ್ದೇನೆ.

ನಾನು ಸತತವಾಗಿ ಕಾಲ ಮತ್ತು ಅವಕಾಶದಲ್ಲಿ ಹಿಂದಕ್ಕೂ ಮುಂದಕ್ಕೂ ಚಲಿಸಿದ್ದೇನೆ. ನನ್ನ ಈ ಪುನರಾವಲೋಕನದಲ್ಲಿಯೂ ಮಾಡಿರುವ ಹಾಗೆ. ಮಗುವಾಗಿ ಕಾಡಿನಿಂದ ಆವೃತವಾದ ಒಂಟಿ ಮನೆಯಲ್ಲಿದ್ದಾಗ ನನಗೆ ಸಾವಿನ ಮೊದಲ ಅನುಭವವಾದದ್ದು. ಒಂದು ನಕ್ಷತ್ರಖಚಿತ ಮಧ್ಯರಾತ್ರಿಯಲ್ಲಿ ಉರಿಯುವ ಕೊಳ್ಳಿಗಳನ್ನು ಹಿಡಿದ ನಾಲ್ಕು ಜನ ಬಂದು ನಮ್ಮನ್ನು ಏಳಿಸಿದರು. ಆತಂಕಿತರಾದ ನನ್ನ ತಾತ, ದೊಡ್ಡ ಭಾರವಾದ ಶಬ್ದ ಮಾಡುತ್ತಿದ್ದ ಬಾಗಿಲನ್ನು ತೆರೆದರು. ಬಂದವರು ಹೇಳಿದ್ದನ್ನು ಕೇಳಿ ನನ್ನ ತಾತ “ನಾರಾಯಣ” ಎಂದು ಉದ್ಗರಿಸಿದ ರೀತಿ ನನಗೆ ಇನ್ನೂ ನೆನಪಿದೆ. ಇದಾದ ನಂತರ ಎಲ್ಲರೂ ಮೌನವಾದರು. ನಾರಾಯಣ ಎಂದು ಉದ್ಗರಿಸುತ್ತ ನನ್ನ ತಾತ ಪ್ರತಿಕ್ರಿಯಿಸಿದ್ದು ನನ್ನ ಸೋದರ ಮಾವನ ಸಾವಿಗೆ. ಮರುದಿನ ದೀಪಾವಳಿ ಹಬ್ಬ. ನಾವೆಲ್ಲರೂ ದೀಪಾವಳಿ ಹಬ್ಬದ ಸಂಭ್ರಮವನ್ನು ಮುಂಜಾನೆಯ ಎಣ್ಣೆ ಸ್ನಾನ ಮೂಲಕ ಆಚರಿಸಲು ಸಿದ್ಧರಾಗುತ್ತಿದ್ದೆವು.

ನನ್ನ ತಾಯಿಗೆ ಇದು ಭರಿಸಲಾಗದ ದುಃಖ. ಕೆಲವೇ ತಿಂಗಳ ಹಿಂದೆ ನನ್ನ ತಾತನ ಆಸೆಯಂತೆ ಆಕೆಯ ತಮ್ಮನ ಮದುವೆಯಾಗಿತ್ತು. ಮತ್ತು ನನ್ನ ಸೋದರಮಾವ ಸತ್ತಿದ್ದು ಆತನ ಹೆಂಡತಿಯ ಮನೆಗೆ ಮೊದಲ ದೀಪಾವಳಿಯನ್ನು ಆಚರಿಸಲು ಹೋದಾಗ. ನನ್ನ ತಾಯಿ ಆ ಕಟ್ಟ ನಕ್ಷತ್ರದ ಹುಡುಗಿಗೆ ತನ್ನ ತಮ್ಮನನ್ನು ಮದುವೆ ಮಾಡಿಸಿದ ತಾತನನ್ನು ದೂಷಿಸಲು ಪ್ರಾರಂಭಿಸಿದರು. ಇದು ಅವರಿಬ್ಬರ ವಿಚಾರರಾಹಿತ್ಯಕ್ಕೆ ಸಂಬಂಧ ಪಟ್ಟಾದ್ದಾರೂ, ಮಗುವಾಗಿ ಅವರಿಬ್ಬರನ್ನೂ ಪ್ರೀತಿಸುತ್ತಿದ್ದ ನಾನು ತುಂಬ ಸಂಕಟಕ್ಕೊಳಗಾದೆ. ಸೌದೆ ತರಲೋ ಅಥವಾ ಹಳ್ಳಿಯ ದೇವತೆಯೊಂದಕ್ಕೆ ಪೂಜೆ ಸಲ್ಲಿಸಲೋ ಹೋಗುವಾಗ ಭುಜದ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ತಾತನಿಂದ ಎಲ್ಲ ಪುರಾಣದ ಕಥೆಗಳನ್ನೂ ನಾನು ಪಡೆದಿದ್ದೆ. ಮುಂದಿನ ದೀಪಾವಳಲಿ ಹಬ್ಬ ಒಂಟಿತನದಿಂದ ಮಂಕಾಗಿತ್ತು. ಏಕೆಂದರೆ ಮನೆಯಲ್ಲಿ ನನ್ನನ್ನು ಬಿಟ್ಟು ಯಾರೂ ಎಣ್ಣೆ ಸ್ನಾನ ಮಾಡಲಿಲ್ಲ. ವಿಲಕ್ಷಣ ದುಃಖದಲ್ಲಿ ನಾನು ಬಿಸಿನೀರಿನ ಸ್ನಾನವಾದ ತಕ್ಷಣ ನನ್ನ ತಾಯಿಯ ಕಣ್ಣು ತಪ್ಪಿಸಿ ಹೊರಗೆ ಓಡಿ ಹೋದೆ. ಏಕೆಂದರೆ ಕೂದಲು ಒದ್ದೆಯಿದ್ದಾಗ ಚಳಿಯಲ್ಲಿ ನಾನು ಹೊರಗೆ ಹೋಗುವಂತಿರಲಿಲ್ಲ.

ಏನಾಯಿತು ಎನ್ನುವುದರ ಬಗೆಗೆ ಈಗಲೂ ನನಗೆ ಗೊಂದಲವಿದೆ. ನಾನು ತಲೆಯೆತ್ತಿ ಆಕಾಶವನ್ನು ನೋಡಿದೆ. ಕಾಡಿನಲ್ಲಿ ಹುದುಗಿದ್ದ ಕ್ಷಿತಿಜದಲ್ಲಿ ಉದಯಿಸುತ್ತಿದ್ದ ಸೂರ್ಯನ ಮಬ್ಬು ಬೆಳಕಿನ ಆಕಾಶವನ್ನು ನಾನು ನೋಡಿದೆ. ನಾಣು ಹಾರುತ್ತಿರುವ ದೇವದೂತನಂತಹ ವಸ್ತುವನ್ನು ನೋಡಿದೆನೆ? ಸಂಭ್ರಮಾತಿಶಯದಲ್ಲಿ ನಾನು ತಾತ ಮತ್ತು ಅಮ್ಮ ಇಬ್ಬರನ್ನೂ ಕರೆದು ಹಾರುತ್ತಿರುವ ವಸ್ತುವಿನ ಕಡೆಗೆ ತೋರಿಸಿದೆ. ಅವರು ನನ್ನನ್ನು ನೋಡಿ ನಕ್ಕರು. “ನಿನ್ನ ತಲೆಯ ಮೇಲೆ ತುಂಬ ಬಿಸಿ ನೀರು ಬಿದ್ದಿದೆ!”, ಎಂದರು ಅವರು.

ನಾನು ನೋಡಿದ್ದು ಏನನ್ನು? ನಾನು ನಿಜವಾಗಿ ಏನನ್ನಾದರೂ ನೋಡಿದೆನೆ? ಇದರ ಬಗ್ಗೆ ವಸ್ತುವಿವರಗಳಲ್ಲಿ ಏನನ್ನಾದರೂಹೇಳಲು ನನಗೆ ಮುಜುಗರವಾಗುತ್ತದೆ. ನನ್ನ ಕಥೆ ‘ಕಾರ್ತೀಕ’ ಇದನ್ನುಕುರಿತದ್ದು. ಈ ಕಥೆ ನನ್ನ ಜಾತಿ ಮತ್ತು ಧರ್ಮದ ಹೊರಗೆ ಮದುವೆಯಾದ ನಾನು ಪ್ರೀತಿಸಿದ ಮತ್ತು ದ್ವೇಷಿಸಿದ ಸಾಂಪ್ರದಾಯಿಕ ಜಗತ್ತಿನ ಜೊತೆಗಿನ ಘರ್ಷಣೆಯನ್ನೂ ಹೇಳುತ್ತದೆ.

ನನ್ನ ಓದುಗರ ತಾಳ್ಮೆಗೆ ನಾನು ಕೃತಜ್ಞನಾಗಿರಬೇಕು. ಬರಹಗಾರ ಮತ್ತು ಓದುಗನ ನಡುವೆ ಆಪ್ತೆಯಿದ್ದಾಗ ಮಾತ್ರ ಈ ಬಗೆಯ ವೈಯಕ್ತಿಕ ನಿರೂಪಣೆಗಳು ಸಲ್ಲುತ್ತವೆ. ಕೆಲವು ವರ್ಷಗಳ ಹಿಂದಾಗಿದ್ದರೆ ಇದನ್ನು ನಾನು ಬರೆಯುತ್ತಲೇ ಇರಲಿಲ್ಲವೇನೋ. ಯಾಕೆಂದರೆ ಆಗ ನನಗೆ ಎಲಿಯಟ್ಟನ ವಸ್ತುನಿಷ್ಠ ಸಿದ್ಧಾಂತದಲ್ಲಿ ನಂಬಿಕೆಯಿತ್ತು. ಯಾತನೆಗೊಳಗಾಗುವ ಮತ್ತು ಸೃಷ್ಟಿಸುವ ವ್ಯಕ್ತಿಗಳು ಬೇರೆ ಬೇರೆ. ಆದರಿಂದ ತನ್ನ ಕೃತಿಯೊಂದರಲ್ಲಿ ಲೇಖಕ ವೇಗವರ್ಧಕವಾಗಿ ಇರುತ್ತಾನೆ. ಬ್ಲೇಕ್ ಮತ್ತು ನಮ್ಮ ಬೇಂದ್ರೆ ರೂಪಕವನ್ನು ಅಂತಃಸತ್ವದಿಂದ ನೇಯುವ ಬಲೆಯಂತೆ ನೋಡುತ್ತಾರೆ. ಇದು ಘಟಿಸಿದಾಗ ಲೇಖಕನಿಗೆ ಆಶ್ಚರ್ಯವಾಗುತ್ತದೆ ಮತ್ತು ನಾನು ಅದೃಷ್ಟವಂತ ಎನಿಸುತ್ತದೆ. ಇದಾದಾಗ ಮಾತ್ರ ಬರಹಗಾರನಿಗೆ ಬ್ಲೇಕನ ಜತೆ “ಇದು ನನ್ನದು, ನನ್ನದು ಮಾತ್ರವಲ್ಲ!” ಎಂದು ಹೇಳಲು ಸಾಧ್ಯವಾಗುತ್ತದೆ. ನನ್ನ ಓದುಗರಲ್ಲಿ ಇಂಥ ಭಾವವೊಂದನ್ನು ಮೂಡಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆಯೇ?

ನಿಜಕ್ಕೂ ನಾನು ನನ್ನ ಆತಂಕ ಮತ್ತು ಭಯಗಳನ್ನು ಹಂಚಿಕೊಳ್ಳಬಹುದು. ಒಂದು ಭಾಷೆ ಕೊನೆಗೂ ಉಳಿಯುವುದು ಆ ಭಾಷೆಯನ್ನು ಮಾತ್ರ ಆಡುವವರಿಂದ. ಆದರೆ ಈಗ ನಾವು ಲಿಖಿತ ಸಾಹಿತ್ಯ ಎಂದು ಕರೆಯುತ್ತಿರುವುದು ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುವವರಿಂದ ಬೆಳೆದಿರುವಂಥದ್ದು. ಪ್ರಭುತ್ವ ಮತ್ತು ಆರ್ಥಿಕ ಪ್ರಭುತ್ವಗಳ ಯಾಜಮಾನ್ಯವು ಭಾಷೆಗಳ ನಡುವಿನ ಯಾಜಮಾನ್ಯಕ್ಕೂ ಕಾರಣವಾಗುತ್ತದೆ. ಆದರೆ ಒಂದನ್ನು ನಾವು ನೆನಪಿಡಬೇಕು. ಸಂಸ್ಕೃತದಿಂದ ಕನ್ನಡಕ್ಕೆ ಯಾವತ್ತೂ ಆತಂಕವಿರಲಿಲ್ಲ. ಸಾವಿರ ವರ್ಷಗಳ ಹಿಂದೆ ಕವಿರಾಜಮಾರ್ಗದ ಶ್ರೀವಿಜಯ ಸೀಮಿತ ಭೌಗೋಳಿಕತೆಯಲ್ಲೂ ಕನ್ನಡ ಪ್ರತ್ಯೇಕ ವ್ಯಕ್ತಿತ್ವವನ್ನು ಪಡೆಯಬಲ್ಲದು. ಮಾತ್ರವಲ್ಲ, ಇಡೀ ಜಗತ್ತನ್ನೇ ಪ್ರತಿಫಲಿಸಬಲ್ಲದು ಎಂದು ತಿಳಿದಿದ್ದ. ಗಣತಂತ್ರ ಭಾರತೀಯ ವ್ಯವಸ್ಥೆಯಲ್ಲಿ ಇದು ನಮ್ಮ ಆಸೆ ಕೂಡ. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬಿಟ್ಟುಕೊಡದೇ ನಾವು ಭಾರತೀಯರಾಗಬಲ್ಲೆವು. ಆದರೆ ಈಗ ಜಾಗತೀಕರಣದ ಜಗತ್ತಿನ ಕಾಸ್ಮಪೊಲೈಟ್ ಸಂಸ್ಕೃತಿ ಭಾರತೀಯ ಭಾಷೆಗಳನ್ನು ಅಂಚಿಗೆ ತಳ್ಳುತ್ತಿದೆ. ನಿಜ, ಈ ಭಾಷೆಗಳು ಸಾಯುವುದಿಲ್ಲ. ಕೋಟ್ಯಾಂತರ ಜನ ಈ ಕಾಸ್ಮಾಪಾಲಿಟನ್ ನಾಗರೀಕತೆಯಿಂದ ಹೊರಗಿದ್ದಾರೆ. ಆದರೆ ನನಗೆ ನನ್ನ ಭಾಷೆ ಸಂಸ್ಕೃತಿ ಕಾವ್ಯದ ಹಾಗೂ ಕಥೆಯ ಶ್ರೀಮಂತ ಪರಂಪರೆಯನ್ನು ಕೊಟ್ಟ ಈ ಜನರಿಗೇನಾಗುತ್ತಿದೆ? ವಿಶೇಷ ಆರ್ಥಿಕ ವಲಯಗಳನ್ನು ರೂಪಿಸುವುದರ ಸಲುವಾಗಿ ಕುತಂತ್ರದಿಂದಲೋ ಹಿಂಸಾತ್ಮಕವಾಗಿಯೋ ರೈತರ ಫಲವತ್ತಾದ ಭೂಮಿಯನ್ನು ಕಸಿಯಲಾಗುತ್ತಿದೆ. ಅವರ ಮೂಲ ಜೀವನೋ ಪಾಯದ ಮಾರ್ಗವಾದ ಕೃಷಿ ನಿಧಾನವಾಗಿ ಸಾಯುತ್ತಿದೆ ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ದುಬಾರಿ ಖಾಸಗಿ ಶಾಲೆಗಳಲ್ಲಿ ಮಾಧ್ಯಮವಾಗಿ ಬಳಸದೇ ಇರುವುದರಿಂದ ಭಾರತೀಯ ಭಾಷೆಗಳು ಜ್ಞಾನ ಸೃಷ್ಟಿಯಿಂದ ಹೊರಗುಳಿಯುತ್ತಿವೆ. ಎಲ್ಲ ರೀತಿಯ ಖಾಸಗಿ ಶಾಲೆಗಳು ಅಣಬೆಗಳಂತೆ ಏಳುತ್ತಿವೆ. ಬಡವರೂ ಕೂಡ ಇತರ ಎಲ್ಲ ತ್ಯಾಗಗಳನ್ನು ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸಲು ಬಯಸುತ್ತಾರೆ. ನನ್ನಂಥ ಲೇಖಕರು ಪರಂಪರೆಯ ವಿರುದ್ಧ ಹೋರಾಡುತ್ತ ಆಧುನಿಕ ನಾಗರೀಕತೆಯಿಂದ ಆಕರ್ಷಿತರಾದಾಗ ಅದನ್ನು ನಾವು ಎಂಥ ಮುಗ್ಧತೆಯಲ್ಲಿ ಸೃಜನಶೀಲರಾಗಿ ಮಾಡಿದೆವು. ಆದರೆ ಇಂದಿನ ಭಾರತೀಯ ಭಾಷೆಗಳು ಜಾಗತೀಕರಣದ ಹಿಡಿತದಿಂದ ಪಾರಾಗಿ ಕ್ರಿಯಾಶೀಲ ಚಿಂತನೆ ಮತ್ತು ಜ್ಞಾನದ ವಾಹಕಗಳಾಗಿ ಉಳಿಯಬಲ್ಲವೆ? ಅವುಗಳಿಗೆ ಭವಿಷ್ಯವಿದೆಯೇ? ಕನ್ನಡ ಸಾಹಿತ್ಯ ಚರಿತ್ರೆ ಅದರ ಆರಂಭದಿಂದಲೂ ಪರಂಪರೆಯ ಮೌಲ್ಯಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ ಹಾಗೂ ಒಳ ವಿಮರ್ಶಕರಾದ ಬರಹಗಾರರನ್ನು ಹೊಂದಿದೆ. ಹನ್ನೆರಡನೆಯ ಶತಮಾನದ ವಚನಕಾರರು ಹಾಗು ನಂತರದ ದಾಸರು, ಶೂದ್ರರು ಹಾಗು ಮಹಿಳೆಯರಿಗೆ ಸ್ವಾಯತ್ತತೆಯನ್ನು ನೀಡಿದರು. ಸಮಸ್ತ ವಿಶ್ವಕ್ಕೆ ತುಂಬ ಹೊಸದೇನನ್ನೋ ಕೊಡುತ್ತಿದ್ದೇವೆಂದು ಅವರು ಎಂದೂ ತಿಳಿಯಲಿಲ್ಲ. ತಮ್ಮಷ್ಟಕ್ಕೆ ತಾವೇ ಅವರೊಂದು ಜಗತ್ತಾಗಿದ್ದರು. ನನ್ನಂತಹವರು ಕನ್ನಡದಲ್ಲಿ ನಾವೇ ವಿಶ್ವವೆಂದು ತಿಳಿದು ಬರೆದದ್ದು ಮತ್ತು ಸಮಸ್ತ ವಿಶ್ವಕ್ಕೆ ತಿಳಿದವರೆಂದು ತಿಳಿದೂ ಕೂಡ. ಸೋದ್ಧಿಶ್ಯವಾಗಿಯಲ್ಲ, ಅಪ್ರಜ್ಞಾಪೂರ್ವಕವಾಗಿ.

ಬರಹಗಾರನಾಗಿ ನಾನು ಬಹುದಿನಗಳಿಂದ ನನ್ನ ಬರವಣಿಗೆಯ ಬಗ್ಗೆ ತಮ್ಮ ವಿಮರ್ಶೆಯನ್ನು ಮಾಡುವ ಪ್ರಯತ್ನ ನಡೆಸಿದ್ದೇನೆ. ಇತ್ತೀಚಿನ ದಿನಗಳಲ್ಲಿಯಂತೂ ಇನ್ನೂ ಹೆಚ್ಚಾಗಿ ಮಾಡುತ್ತಿದ್ದೇನೆ. ನನಗೆ ವಯಸ್ಸಾಗುತ್ತಿರುವುದರಿಂದ, ಸಾಹತ್ಯದ ಸತ್ಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಆಸೆಯಿಂದ. ನನ್ನ ಕಥೆಗಳಾದ “ಜರತ್ಕಾರು”, “ಅಕ್ಕಯ್ಯ”, ಮತ್ತು “ಬೇಟೆ ಮತ್ತು ಬೆಳೆ”, ಇವುಗಳನ್ನು ವಿವರಿಸುವುದು ನನಗೆ ಕಷ್ಟ. ನಾನು ನನ್ನ ಪೂರ್ವನಿಲುವುಗಳಿಂದ ಹೊರಬರದಿದ್ದರೆ ಈ ಕಥೆಗಳನ್ನು ಬರೆಯುವುದೇ ಸಾಧ್ಯವಾಗುತ್ತಿರಲಿಲ್ಲ. ನಾನು ತಾತ್ವಿಕಗೊಳಿಸುತ್ತೇನೆ, ತುಂಬ ಮಾತನಾಡುತ್ತೇನೆ, ಒಬ್ಬ ಬರಹಗಾರ ಹೇಳಬಹುದ್ದಾದಕ್ಕಿಂತ ಹೆಚ್ಚಿನದನ್ನು ಹೇಳುತ್ತೇನೆ. ಆದರೆ ಇದರಲ್ಲಿ ನಾನು ಸೋತಾಗ ನಾನು ಅದೃಷ್ಟವಂತನಾದರೆ ನಾನು ಇಂಥ ಕಥೆಗಳನ್ನೂ ಕವನಗಳನ್ನೂ ಬರೆಯುತ್ತೇನೆ.

ಜಾಗತೀಕರಣದ ಆಕ್ರಮಣ, ಹಣ ಮತ್ತು ಕೀರ್ತಿಯನ್ನು ಕುರಿತ ವಿವೇಕಹೀನ ಹಂಬಲ ಮತ್ತು ಪಶ್ಚಿಮದ ಆಕರ್ಷಣೆ ಈ ಎಲ್ಲದರ ನಡುವೆಯೂ ನಮ್ಮಲ್ಲಿ ಕೆಲವು ಯುವ ಕ್ರಿಯಾಶೀಲ ಬರಹಗಾರರಿದ್ದಾರೆ. ಉದಾಹರಣೆಗೆ ದಲಿತ ಬರಹಗಾರರಲ್ಲಿ ನಿಜವಾದ ಹೊಸ ಬರವಣಿಗೆ ಪ್ರಯೋಗಶೀಲವಾದ ಬರವಣಿಗೆ ಕೂಡ ಇದೆ. ತಮ್ಮ ಸ್ಥಿತಿಗಳನ್ನು ಬೌದ್ಧ ಅನುಭಾವಿಕ ಚೌಕಟ್ಟಿನಲ್ಲಿ ಇಟ್ಟು ನೋಡುವುದರ ಮೂಲಕ ಕನ್ನಡ ಬರವಣಿಗೆಗೇ ಒಂದು ಹೊಸ ಆಯಾಮವನ್ನು ಇವರು ತಂದಿದ್ದಾರೆ. ಅವರ ದುಃಖ, ಅವರ ಅನುಭೂತಿ ಮವರ ವ್ಯಗ್ರತೆ ಎಲ್ಲವೂ ಒಟ್ಟಿಗೇ ಅಭಿವ್ಯಕ್ತವಾಗಿವೆ. ಕನ್ನಡ ಬರವಣಿಗೆಗೆ ಇದು ಬಹು ದೊಡ್ಡ ಕೊಡುಗೆ. ಕೆಲವು ಲೇಖಕಿಯರಿಗೆ ನಿತ್ಯ ಮತ್ತು ಶಾಶ್ವತಗಳು ಅಮೂರ್ತ ಭಿನ್ನಗಳಲ್ಲ. ಬದಲಿಗೆ ಸದ್ಯತನದವು. ಇವು ನಮ್ಮ ಅನುಭವದ ಕ್ಷಿತಿಜಗಳನ್ನೇ ವಿಸ್ತರಿಸಿವೆ. ಮಾತನಾಡದಿದ್ದವರು ಈಗ ಮಾತನಾಡು ಆರಂಭಿಸಿದ್ದಾರೆ.

ಹನ್ನೆರಡನೆಯ ಶತಮಾನದ ಅಕ್ಕಮಹಾದೇವಿ, ಆ ಕಾಲದ ನೆನಪು ಮಾತ್ರವಲ್ಲ, ಬದಲಿಗೆ ಅನೇಕ ಲೇಖಕಿಯರು ಬರವಣಿಗೆಯಲ್ಲಿ ಕ್ರಿಯಾಶೀಲವಾಗಿರುವ ಶಕ್ತಿಯಾಗಿದ್ದಾರೆ. ಅದೇ ಕಾಲದ ಬಸವ ಕೂಡ ಅಂಬೇಡ್ಕರ್ ಮತ್ತು ಬುದ್ಧನ ಜತೆ ದಲಿತ ಬರಹಗಾರರ ಸ್ಪೂರ್ತಿಯಾಗಿದ್ದಾನೆ. ಹನ್ನೆರಡನೆಯ ಶತಮಾನದ ವಚನ ಪರಂಪರೆಯ ನಂತರ ಭಿನ್ನ ಜಾತಿಗಳಿಗೆ ಸೇರಿದ ಜನ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ನಮ್ಮ ಕಾಲದಲ್ಲೂ ಕೂಡ ಕರ್ನಾಟಕದ ಭಿನ್ನ ಪ್ರದೇಶ ಮತ್ತು ಜಾತಿಗಳಿಂದ ಬಂದ ಬರಹಗಾರರಿದ್ದಾರೆ. ನಮ್ಮ ನಾಗರಿಕತೆಯ ಹಿತ್ತಿಲು ಈಗ ಈ ಪ್ರಾಚೀನವಾಗಿದ್ದೂ ಆಧುನಿಕವಾಗಿರುವ ಭಾಷೆಯಲ್ಲಿ ತನ್ನನ್ನು ತಾನು ಸ್ಪಷ್ಟ ಮಾಡಿಕೊಳ್ಳುತ್ತಿದೆ.

ವೈಯಕ್ತಿಕ ತುರ್ತಿನಲ್ಲಿ ತಮ್ಮದೇ ದಾರಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಆಶ್ಚರ್ಯಕರವಾಗಿ ಆಧುನಿಕ ಜಾಗತಿಕ ವ್ಯವಸ್ಥೆಯಲ್ಲಿ ವೃತ್ತಿನಿರತವಾಗಿರು ಹಲವು ಯುವಕರು ಕಾಸ್ಮೋಪಾಲಿಟನ್ ಜಗತ್ತನ್ನು ಅವುಗಳ ಸಮಸ್ಯೆಗಳನ್ನು ಶೋಧಿಸುವ ಮೂಲಕವೇ ಸಮೃದ್ಧ ಪಠ್ಯಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಕೆಲವರು ಈ ಪಶ್ಚಿಮದಲ್ಲಿದ್ದರೂ ಅವರ ಬಾಲ್ಯವನ್ನು ಹಳ್ಳಿಗಳಲ್ಲಿ ಮತ್ತು ಯೌವ್ವನವನ್ನು ಸಣ್ಣ ಪಟ್ಟಣಗಳಲ್ಲಿ ಮತ್ತು ವಿದ್ಯಾಭ್ಯಾಸವನ್ನು ಸಾಮಾನ್ಯ ಶಾಲೆಗಳಲ್ಲಿ ಪಡೆದಿರುವುದು ಇತ್ತೀಚಿನ ವರ್ಷಗಳ ಅತ್ಯುತ್ತಮ ಸಣ್ಣ ಕಥೆಗಳನ್ನು ಬರೆಯುವುದಕ್ಕೆ ಸಹಾಯ ಮಾಡಿವೆ. ಇಲ್ಲೊಂದು ವಿಷಯವನ್ನು ನಾನು ಹೇಳಬೇಕು. ನಾನು ಯಾವಾಗಲೂ ಮಾಡಬೇಕೆಂದು ಹಂಬಲಿಸಿದ್ದು ಆದರೆ ಮಾಡಲಾಗದ್ದನ್ನು ಈ ಲೇಖಕರು ಮಾಡಿದ್ದಾರೆ. ಒಂದು ಜೀವಂತ ಸಾಹಿತ್ಯ ಪರಂಪರೆಯಲ್ಲಿ ಲೇಖಕರು ತಮ್ಮ ಭಿನ್ನದೃಷ್ಟಿಕೋನಗಳು, ತಾತ್ತ್ವಿಕ ನಿಲುವುಗಳು ಹಾಗು ಭಿನ್ನ ಶೈಲಿಗಳ ಜತೆಯಲ್ಲಿಯೂ ಒಂದು ಸಾವಯವ ಸಮುದಾಯವನ್ನು ಕಟ್ಟುತ್ತಾರೆ ಮತ್ತು ಏಕಚಿತ್ರವೊಂದನ್ನು ಕಟ್ಟುವುದರಲ್ಲಿ ನಿರತರಾಗಿರುತ್ತಾರೆ. ಹಿಂದಿನ ಬರಹಗಾರರ ಬಗೆಗೆ ಮತ್ತು ನಾನು ಹೇಳಲಾಗದ್ದನ್ನು ಹೇಳುತ್ತಿರುವ ಯುವ ಬರಹಗಾರರ ಬಗೆಗೂ ನನಗೆ ಹೀಗೇ ಅನಿಸುತ್ತದೆ.

(೨೦೦೭ರ ಫೆಬ್ರವರಿ ೨೧ರಂದು ದಿಲ್ಲಿಯ ಸಾಹಿತ್ಯ ಅಕಾದೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸ.)
ಅನುವಾದ : ಎಂ.ಎಸ್.ಆಶಾದೇವಿ

* * *