೫೦ ದಶಕದ ಕೊನೆಯಲ್ಲಿ ಎಂದು ನೆನಪು ನನಗೆ. ಲಂಕೇಶರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್‌ ಆನರ್ಸ್ ಓದುತ್ತಿದ್ದರು. ನಾನು ಅಷ್ಟೊತ್ತಿಗಾಗಲೇ ಮೇಷ್ಟ್ರಾಗಿದ್ದೆ. ಮೊದಲು ಹಾಸನ ನಂತರ ಶಿವಮೊಗ್ಗ. ಶಿವಮೊಗ್ಗದಲ್ಲಿ ಲಂಕೇಶ್ ವಿದ್ಯಾರ್ಥಿಯಾಗಿದ್ದರು. ಸುಮತ್ರೀಂದ್ರ ನಾಡಿಗ, ಲಂಕೇಶ್, ನಿಸಾರ್ ಅಹಮದ್‌ರ ಕೆಲವು ಪದ್ಯಗಳನ್ನು ಆಯ್ದು ಜೆ.ಪಿ. ರಾಜರತ್ನಂ ಸೆಂಟ್ರಲ್ ಕಾಲೇಜಿನಿಂದ ಹೊಸ ಬರಹ ಎಂದು ಪ್ರಕಟ ಮಾಡಿದ್ದನ್ನು ಓದಿದ್ದೆ. ಅದರಲ್ಲಿ ಲಂಕೇಶ್‌ರದ್ದೊಂದು ಪದ್ಯವಿತ್ತು. ಇದರ ಸಾಲುಗಳು ನನಗೆ ಇವತ್ತೂ ನೆನಪಿದೆ. ಏಕೆಂದರೆ ಲಂಕೇಶ್‌ರಿಗೆ ಅದ್ಭುತವಾದ ಕನ್ನಡ ಭಾಷೆಯ ಸೌಭಾಗ್ಯ ಒದಗಿತ್ತು. ಭಾಷೆಯನ್ನು ಹೊಸ ಹೊಸ ರೀತಿಯಲ್ಲಿ ಬಳಸುವುದು ತುಂಬಾ ಚಿಕ್ಕ ವಯಸ್ಸಿನಿಂದಲೇ ಅವರಿಗೆ ಸಾಧ್ಯವಾಗಿತ್ತು.

ಅವರದ್ದೊಂದು ಪದ್ಯ ‘ಜೋಗದ ಜಲಪಾತ’ ನೆನಪಾಗುತ್ತಿದೆ. ಇಡೀ ಪದ್ಯ ನೆನಪಿಲ್ಲ. ನೆನಪಿದ್ದದ್ದನ್ನು ಹೇಳಬಲ್ಲೆ. ‘ತಿಳಿ ನೀಲಿಯ ಶೇರ್ವಾನಿಯ ಮುದುಕ ಬಡಿದ ಮದ್ದಳೆ. ಅವಳು ಕುಣಿಯುತ್ತಿದ್ದಳೆ’. ನನಗೆ ಇದು ಬಹಳ ಇಷ್ಟವಾಗಿದ್ದು ಏಕೆಂದರೆ, ಅಲ್ಲಿ ಮುದುಕ ಬಡಿದ ಮದ್ದಳೆ ಎಂಬಲ್ಲಿ ಬಡಿದ ಎಂಬುದನ್ನು ಕ್ರಿಯಾಪದವಾಗಿಯೂ ಉಪಯೋಗಿಸಬಹುದು. ಒಬ್ಬ ಮುದುಕ ಇದ್ದಾನೆ. ಅವನು ಮದ್ದಳೆ ಬಡಿಯುತ್ತಿದ್ದಾನೆ, ಆತ ತಿಳಿನೀಲಿಯ ಶೇರ್ವಾನಿಯನ್ನು ತೊಟ್ಟಿದ್ದಾನೆ, ಇದು ಆಕಾಶವನ್ನು ನೆನಪು ಮಾಡುತ್ತದೆ. ಇವಳು ಕುಣಿಯುತ್ತಿದ್ದಳೆ. ಅಥವಾ ಇದನ್ನು ಇನ್ನೊಂದು ರೀತಿಯಾಗಿಯೂ ಓದಬಹುದು. ತಿಳಿನೀಲಿಯ ಶೇರ್ವಾನಿಯ ಮುದುಕ ಬಡಿದ ಮದ್ದಳೆ. ಇಲ್ಲಿ ಬಡಿದ ಪದವನ್ನು ವಿಶೇಷಣವನ್ನಾಗಿಯೂ ಉಪಯೋಗಿಸಬಹುದು. ಹಾಗಾದಲ್ಲಿ ಇಡೀ ಶಬ್ದ ಮುದುಕ ಬಡಿದ ಮದ್ದಳೆಯಾಗಿ ಕಾಣಿಸುತ್ತದೆ. ಅವಳೂ ಕುಣಿಯುತ್ತಿರುವಂತೆ ಕಾಣುತ್ತದೆ. ನಾನಿದನ್ನು ಲಂಕೇಶರಿಗೋ ಅಥವಾ ಸ್ನೇಹಿತರಿಗೊ ಹೇಳಿದ್ದೆ.

ಒಂದು ದಿನ ನನ್ನನ್ನು ಅವರ ಸೆಂಟ್ರಲ್ ಕಾಲೇಜ್ ಹಾಸ್ಟೆಲ್‌ನ ರೂಮಿಗೆ ಕರೆದರು. ನಾನು ಹೋಗುತ್ತೀನಿ ಎಂತಲೆ ಅದನ್ನು ಸ್ವಚ್ಛವಾಗಿಟ್ಟು ಊದುಬತ್ತಿ ಹಚ್ಚಿಟ್ಟಿದ್ದರೆಂದು ನೆನಪಿದೆ. ನಾನು ಅವರಷ್ಟೆ ಚಿಕ್ಕವನು. ಅವರೂ ಚಿಕ್ಕವರು. ಹೀಗೆ ಅಭಿಮಾನದಿಂದ ನನ್ನ ಅವರ ಸ್ನೇಹ ಶುರುವಾಯಿತು. ಅಭಿಮಾನದಿಂದ ಶುರುವಾದದ್ದು ನಂತರ ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು, ಚರ್ಚೆಗಳು ಬೆಳೆದವು.

ರೂಮಿನಲ್ಲಿ ಅವರು ನನ್ನ ಕಥೆಗಳ ಬಗ್ಗೆ ಮಾತನಾಡಿದರು. ಅವರು ಅದನ್ನು ಓದಿದ್ದರು. ನನ್ನ ತಾಯಿ, ಹುಲಿಯ ಹೆಂಗರುಳು ಇತ್ಯಾದಿ ಕುರಿತು ಮಾತನಾಡಿದರು. ಅಡಿಗರು ಆ ಕಥೆಗೆ ಬರೆದಿದ್ದ ಮುನ್ನುಡಿ ಅವರಿಗೆ ಬಹಳ ಇಷ್ಟವಾಯಿತು. ಹಾಗಾಗಿ ನಾವು ಒಂದು ತರ ಹೊಸಲೋಕಕ್ಕೆ ಸೇರುವ ಮುನ್ಸೂಚನೆಗಳೆಲ್ಲ ಅಲ್ಲಿತ್ತು. ಯಾಕೆಂದರೆ ನಾವು ಕೆಲವರು ಬರೆದಿದ್ದು ಕೆಲವರಿಗೆ ಇಷ್ಟವಾಗುತ್ತಿತು. ನನ್ನ ಜೊತೆಗೆ ಪಿ. ಶ್ರೀನಿವಾಸರಾವ್ ಎಂದು ಒಬ್ಬರಿದ್ದರು. ನನ್ನ ಸಹಪಾಠಿ. ಬಳಿಕ ಅವರು ಲಂಕೇಶರು ಆತ್ಮೀಯರಾದರು. ಶ್ರೀನಿವಾಸರಾವ್‌ರ ಸಹೋದರಿಯನ್ನು ಸುಮತೀಂದ್ರ ನಾಡಿಗರು ಮದುವೆಯಾಗಿದ್ದರು. ಅವರು ಕೂಡ ಹೆಚ್ಚಿಗೆ ಜೊತೆಯಲ್ಲಿದ್ದರು. ಒಬ್ಬೊಬ್ಬರಿಗೆ ಕೆಲವು ವಿಷಯಗಳು ಇಷ್ಟವಾಗುತ್ತಿತ್ತು. ಕೆಲವು ಇಷ್ಟವಾಗುತ್ತಿರಲಿಲ್ಲ. ಆದರೆ ಯಾರಿಗ್ಯಾರೂ ಹೊಗಳಿಕೊಂಡು ತಿರುಗುತ್ತಿರಲಿಲ್ಲ. ಒಬ್ಬರನ್ನೊಬ್ಬರು ತುಂಬಾ ಆಳವಾಗಿ ಓದಿಕೊಂಡು, ನೆನಪಿಟ್ಟುಕೊಂಡು, ಅದರ ಚರ್ಚೆ ಮಾಡುತ್ತಿದ್ದರು. ಬಹಳ ಆರೋಗ್ಯಕರವಾದ ವಾತಾವರಣವಿತ್ತು. ಪ್ರತಿಯೊಂದು ಹೊಸದಕ್ಕೂ ನಾವು ಸ್ಪಂದಿಸುತ್ತಿದ್ದೆವು. ನಾನಾಗ ಲೋಹಿಯಾರನ್ನು ಓದಲು ಶುರುಮಾಡಿದ್ದೆ. ಲೋಹಿಯ ಓದಿದ್ದನ್ನು ಲಂಕೇಶರಿಗೆ ಹೇಳುತ್ತಿದ್ದೆ. ಲಂಕೇಶ್ ಆಗಲೇ ಆಧುನಿಕನಾಗಿದ್ದರು. ಐರೋಪ್ಯ ನಾಗರೀಕತೆಯಲ್ಲಿ ತುಂಬಾ ಒಲವಿದ್ದವರಾಗಿ ಕಾಣಿಸುತ್ತಿದ್ದರು. ಆದರೆ ಆತ ಹಳ್ಳಿ ಹುಡುಗ. ಅವರ ನೆನಪುಗಳು, ಅನುಭವಗಳು ಎಲ್ಲ ಹಳ್ಳಿಯವು.

ಲಂಕೇಶ್ ಮಾತನಾಡುವಾಗ ವಾಕ್ಯಗಳನ್ನು ಪೂರ್ತಿ ಮಾಡುತ್ತಿರಲಿಲ್ಲ. ಅವಸರ ಅವಸರವಾಗಿ ಮಾತನಾಡುತ್ತಿದ್ದರು. ನಂತರ ಲಂಕೇಶರನ್ನು ಗೋಪಾಲಗೌಡರಿಗೆ ಪರಿಚಯ ಮಾಡಿಕೊಟ್ಟೆ. ಒಂದು ದಿನ ಗೋಪಾಲಗೌಡರು ನನ್ನಲ್ಲಿ ಬಂದು, ‘ಏs ಅನಂತು, ಇವನು ಮುಂದೊಂದು ದಿನ ಬಹಳ ಮುಂದೆ ಹೋಗುತ್ತಾನೆ. ಅವನಲ್ಲಿ ಅಸಾಧಾರಣ ಪ್ರತಿಭೆ ಇದೆ. ಇದು ಹಳ್ಳಿಯಿಂದ ಬಂದಿರುವುದು. ಈಗ ಪಟ್ಟಣದತ್ತ ಮುಖ ತಿರುಗಿದೆ. ಮುಂದೇನಾಗುವುದೊ ಗೊತ್ತಿಲ್ಲ’ ಎಂದರು. ಬಹಳ ಮುಂಚೆಯೇ ಲಂಕೇಶರ ಪ್ರತಿಭೆಯನ್ನು ಗುರುತಿಸಿದ ನನ್ನ ಸ್ನೇಹಿತರಲ್ಲಿ ಅಡಿಗರು, ಗೋಪಾಲಗೌಡರು ಪ್ರಮುಖರು.

ಲಂಕೇಶ್ ವರ್ತಮಾನಕ್ಕೆ ತೀವ್ರವಾಗಿ ಪ್ರತಕ್ರಿಯಿಸಿ ಚೀಪ್ ಆಗುತ್ತಿದ್ದರು ಎಂದು ನನಗೆ ಅನಿಸುತ್ತಿತ್ತು. ನಾನು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಪಾಂಪಸ್ ಆಗುತ್ತಿರುವೆ ಅನ್ನುವುದು ಲಂಕೇಶರ ಆರೋಪವಾಗಿತ್ತು. ಈ ಆರೋಪ ಪ್ರತ್ಯಾರೋಪಗಳು ನಮ್ಮಿಬ್ಬರ ಆರೋಗ್ಯಕ್ಕೆ ಅಗತ್ಯವೂ ಆಗಿತ್ತು. ನಾ ಹೇಳಿದ್ದು ಅವರಿಗೆ, ಅವರು ಹೇಳಿದ್ದು ನನಗೆ ಒಳಗೆಲ್ಲೋ ಕೇಳಿಸಿಕೊಂಡಂತಿತ್ತು. ಅದರಲ್ಲೊಂದು ಸಂಭ್ರಮವೂ ಇತ್ತು.

ಒಮ್ಮೆ ನಾನು ಅವರು ಒಟ್ಟಿಗೆ ಒಂದು ಬಾರಿನಲ್ಲಿ ಬಿಯರ್ ಕುಡಿಯುತ್ತಾ ಕುಳಿತಿದ್ದೆವು. ಆಗ ನಾನು ಎಸ್ತರಳನ್ನು ಮದುವೆಯಾಗುವ ಸಾಧ್ಯತೆಯನ್ನು ಹೇಳಿದೆ. ಅದಕ್ಕವರು ‘ಹೇ ಹಾಗೆಲ್ಲ ಮಾಡಬೇಡಿ. ತರಲೆ ಗಿರಲೆ ಆಗುತ್ತದೆ. ನಮ್ಮ ಜಾತಿಯಲ್ಲೆ ಮದುವೆಯಾಗುವುದು ಕ್ಷೇಮ’ ಎಂದಿದ್ದರು. ನಂತರ ಹಾಗಂದದ್ದಕ್ಕೆ ಅವರಿಗೇ ನಾಚಿಕೆಯಾಗಿ ಆ ಬಗ್ಗೆ ಒಂದು ಕಥೆ ಕೂಡ ಬರೆದಿದ್ದರು ಎನಿಸುತ್ತದೆ. ಲಂಕೇಶರಿಗೆ ಆ ವಯಸ್ಸಿನಲ್ಲಿ ಸಣ್ಣತನದ ಬಗ್ಗೆ ಪ್ರಿಯಾಕ್ಯುಪೇಶನ್ ಇತ್ತು. ತನ್ನಲ್ಲಿ ಒಂದು ಅಲ್ಪತನವಿದೆಯೋ ಎಂಬ ಅನುಮಾನ. ಅದಕ್ಕೆಯೇ ಲಂಕೇಶ್ ಒಬ್ಬ ಒಳ್ಳೆಯ ಲೇಖಕನಾಗುತ್ತಾ ಹೋದ್ದು. ಏಕೆಂದರೆ ಎಲ್ಲರಿಗೂ ತನ್ನದೇ ಆದ ಮುಜುಗರದ ಬಗ್ಗೆ ತೆರೆದುಕೊಳ್ಳುವ ಧೈರ್ಯವಿರುವುದಿಲ್ಲ. ಅಂಥವರು ಬಹಳ ಕಡಿಮೆ. ಯಾರೂ ತನ್ನ ಮುಜುಗರದ ಬಗ್ಗೆ ಬರೆಯುವುದಿಲ್ಲ. ಆದರೆ ಲಂಕೇಶ್‌ಗೆ ತನ್ನ ಸಣ್ಣತನದ ಬಗ್ಗೆ, ಮುಜುಗರದ ಬಗ್ಗೆ ಬರೆದುಕೊಳ್ಳುವುದು ಸಾಧ್ಯವಾಯಿತು.

ಅವರ ಆರಂಭದ ಕಥೆಗಳಲ್ಲಿ ‘ಗಿಳಿಯು ಪಂಜರದೊಳಿಲ್ಲ’ ನನಗೆ ಬಹಳ ಇಷ್ಟವಾಯಿತು. ಆಗ ನಾನವರಿಗೆ ಹೇಳಿದ್ದೆ. ನಿಮಗೆ ಆಳವಾದ ನೈತಿಕ ಪ್ರಜ್ಞೆ ಇದೆ ಎಂದು. ಯಾರು ಕೂಡ ಲಂಕೇಶರಿಗೆ ಹಾಗೆ ಹೇಳುತ್ತಿರಲಿಲ್ಲ. ನೀವು ಆಧುನಿಕರು ನಿಮಗೇನು ನೈತಿಕತೆ ಇಲ್ಲ, ಏನು ಬೇಕಾದರೂ ಬರೆಯುತ್ತೀರಿ ಎಂಬ ಕಾಲದಲ್ಲಿ, ನಿಜವಾದ ನೈತಿಕ ಪ್ರಜ್ಞೆ ಹುಟ್ಟುವುದು ಈ ರೀತಿಯ ತಳಮಳದಿಂದ. ಯಾವುದೇ ತಳಮಳವಿಲ್ಲದೆ ಆಳವಾದದ್ದು ಬರುವುದಿಲ್ಲ ಎಂದು ನನಗೆ, ಲಂಕೇಶರಿಗೆ ಮತ್ತು ಅಡಿಗರಿಗೆ ಗೊತ್ತಿತ್ತು. ಅದು ನಮ್ಮನ್ನೆಲ್ಲ ಒಟ್ಟುಗೂಡಿಸಿದ ಅಂಶ. ಅದನ್ನು ಲಂಕೇಶ್ ತೀವ್ರವಾಗಿ ಬಳಸುತ್ತಿದ್ದರು. ಅದಕ್ಕೆ ಅವರಲ್ಲೊಂದು… ಒಂದು ನಿರಾಸಕ್ತಿಯ ಗುಣವಿತ್ತು….

ಅವರ ನಾಟಕ ‘ತೆರೆಗಳು’. ಅಲ್ಲಿ ಯಾರು ಶಿಕ್ಷೆಗೆ ವಿಧಿಯಾಗುತ್ತಾನೊ ಅವನನ್ನು ಮೂರು ಜನರು ದಾಳಿ ಮಾಡುತ್ತಾರೆ. ಹರಿದು ಚೂರುಚೂರು ಮಾಡಿಹಾಕುತ್ತಾರೆ. ಆದರೆ ಕೊನೆಯಲ್ಲಿ ಚೂರು ಚೂರು ಮಾಡಹೊರಟವರ ವಿರುದ್ಧವೇ ನಾಟಕ ತಿರುಗುತ್ತದೆ. ಭಾವನೆಗಳೇ ತಿರುಗು ಮುರುಗಾಗುತ್ತವೆ. ಇದೊಂದು ರೀತಿಯ ಜೀವಂತಿಕೆ. ನಾನವರಿಗೆ ‘ನಿನ್ನಲ್ಲಿ ಸ್ಥಾಯಿ ಗುಣ ಕಡಿಮೆ. ಸಂಚಾರಿ ಗುಣ ಹೆಚ್ಚು’ ಎಂದು ಹೇಳುತ್ತಿದ್ದೆ. ಇದನ್ನು ನಾವು ಕಾವ್ಯದ ಭಾಷೆಯಲ್ಲಿ ಸಂಚಾರಿ ಭಾವ ಅಥವಾ ವ್ಯಭಿಚಾರಿ ಭಾವ ಎಂತಲೂ ಕರೆಯುತ್ತೇವೆ. ಲಂಕೇಶರಲ್ಲಿ ಈ ಸಂಚಾರಿ ಭಾವ ಬಹಳ ಅರ್ಥಗರ್ಭಿತವಾಗಿತ್ತು. ಆದರೆ ಕೆಲವರಲ್ಲಿ ಸ್ಥಾಯಿ ಭಾವ ಅದೆಷ್ಟು ಬಲವಾಗಿರುತ್ತಿತ್ತು ಎಂದರೆ ಅವರು ಸ್ಥಾಯಿಯಾಗಿಯೇ ಇದ್ದು ಬಿಡುತ್ತಿದ್ದರು. ಅದರಲ್ಲಿ ಜೀವಂತಿಕೆಯೇ ಇರುತ್ತಿರಲಿಲ್ಲ. ನಮಗೆ ಈ ಎರಡು ಅಪಾಯಗಳೂ ಗೊತ್ತಿತ್ತು. ತುಂಬಾ ಸಂಚಾಇಯಾಗುವ ಅಪಾಯ ಅಥವಾ ಅರವಿಂದರನ್ನೊ ಇನ್ಯಾರನ್ನೋ ಹಿಡಿದುಕೊಂಡು ಸ್ಥಾಯಿಯಾಗುವ ಅಪಾಯ.

ಬಹಳಷ್ಟು ಜನ ಅರವಿಂದರನ್ನು ಅಥವಾ ಮಾರ್ಕ್ಸ್‌‌ರನ್ನು ಹಿಡಿದುಕೊಂಡು ಸ್ಥಾಯಿಯಾಗಿ ಬಿಡುತ್ತಿದ್ದರು. ಸ್ಥಾಯಿಯಾಗುವುದು ಸುಲಭ. ಹಾಗೆಯೇ ಸ್ಥಾಯಿಯಾಗುವ ಸ್ಥಿತಿಯನ್ನು ಪಡೆಯುವುದು ಕಷ್ಟವೂ ಹೌದು. ಲಂಕೇಶರ ಅತ್ಯುತ್ತಮ ಕಥೆಗಳಲ್ಲಿ ಸಂಚಾರಿಯನ್ನು ಮೀರಿದ ಸ್ಥಾಯಿ ಬರುತ್ತದೆ ಎಂದು ನನ್ನ ಅನಿಸಿಕೆ. ಎಷ್ಟೇ ಜಗಳ ವಾಡಿಕೊಂಡರೂ ಇದನ್ನು ನಾನು ಲಂಕೇಶರಿಗೆ ಹೇಳಬಲ್ಲವನಾಗಿದ್ದೆ. ಅದಕ್ಕವರು ‘ಹೇ ಬಿಡ್ರಿ ನಿಮ್ಮದೊಂದು ಕಥೆ ಕೂಡ ಕಾದಂಬರಿ ಇದ್ದ ಹಾಗೆ ಇರುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

(www.kendasampige.com, ಮಾರ್ಚ್ ೨೦೦೮)

* * *