ಹೆಚ್.ವೈ. ಶಾರದಾ ಪ್ರಸಾದ್ ಇವರು ನಮಗೆ ಸುಮಾರು ಅರವತ್ತೈದು ವರ್ಷಗಳ ಕೆಳಗೆ ‘ಶೌರಿ’ ಎಂದು ಅಕ್ಷರಗಳಲ್ಲಿ ಕಂಡವರು. ಅವರ ತಂದೆ ವಿದ್ವಾನ್ ಯೋಗಾನರಸಿಂಹ್ನ, ಆಗ ನನ್ನ ತೀರ್ಥಹಳ್ಳಿ ಹೈಸ್ಕೂಲಿನ ಮುಖ್ಯೋಪಾಧ್ಯಾರು. ನನ್ನ ಮೊದಲ ನಿಜವಾದ ಗುರುಗಳು. ಅವರ ಮನೆಗೆ ನೆಹರೂ ಮತ್ತು ಗಾಂಧಿಯವರು ಬರೆದ ಪುಸ್ತಕಗಳನ್ನು ಓದಲೆಂದು ಪಡೆಯಲು ಹೋಗುತ್ತ ಇದ್ದೆ. ಪ್ರತಿ ಪುಸ್ತಕದ ಒಳ ಪುಟದಲ್ಲಿ ‘ಶೌರಿ’ ಎಂಬ ನೀಟಾದ ಸಹಿ ಇರುತ್ತಿತ್ತು. ಶೌರಿ ನನ್ನ ಗುರುಗಳ ಮಗನೆಂದೂ ಈ ಎಲ್ಲ ಪುಸ್ತಕಗಳನ್ನೂ ಕೊಂಡು ಓದಿ ತಂದೆಗೆ  ಕೊಟ್ಟವರೆಂದೂ ಮಾತ್ರ ನನಗೆ ಆಗ ಗೊತ್ತಿದ್ದದ್ದು.

ಈ ‘ಶೌರಿ’ಯೇ ಶಾರದಾ ಪ್ರಸಾದರೆಂದು ತಿಳಿದಮೇಲೆ, (ಭಾರತ ಸ್ವತಂತ್ರ ದೇಶವಾದ ನಂತರ) ಹಲವು ಕಥೆಗಳನ್ನು ಅವರ ಬಗ್ಗೆ ಕೇಳಿದ್ದೆ. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗ ಭಾಗವಹಿಸಿದವರು ಇವರು. ಜೈಲಿಗೆ ಹೋದವರು ಇವರು. ಜೈಲಿನಲ್ಲಿ ಇದ್ದಾಗಲೇ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಪಡೆದು ಇಂಗ್ಲೀಷ್ ಆನರ್ಸ್‌ನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದವರು ಇವರು-ಹೀಗೆ.

ಇವೆಲ್ಲವೂ ಅವರು ಇವರು ಹೇಳಿದ ಕಥೆಗಳು. ಅವರ ತಂದೆ ಎಂದೂ ವೈಯಕ್ತಿಕವಾದ ಯಾವ ಮಾತನ್ನೂ ಆಡುವವರಲ್ಲ. ಶೇಕ್‌ಸ್ಪಿಯರನನ್ನು ನಮ್ಮ ಆ ವಯಸ್ಸಿನಲ್ಲೇ ಓದಿ ವಿವರಿಸುತ್ತ ಇದ್ದ ಸಾವಧಾನದವರು ನಮ್ಮ ಗುರುಗಳು. ಸುಶ್ರಾವ್ಯವಾಗಿ ಗೀತೆಯನ್ನು ಪಠಿಸಿ ನಮಗೆ ಬಾಯಿಪಾಠ ಮಾಡಿಸುತ್ತ ಇದ್ದ ಭಾವುಕರು ಕೂಡ. ಗಾಂಧೀಜಿ ಸತ್ತಾಗ ತಡೆದುಕೊಳ್ಳಲಾರದಂತೆ ಕಣ್ಣೀರಿಡುತ್ತ ಗೀತೆಯ ಸ್ಥಿತಪ್ರಜ್ಞ ವರ್ಣನೆಯನ್ನು ವಿವರಿಸಿದ ಈ ಗುರುಗಳನ್ನು ಮಗನನ್ನು ಹೊಗಳುವ ಮಾತನ್ನು ಆಡಿದವರಲ್ಲ. ಶುಭ್ರವಾದ ಕಚ್ಚೆ ಪಂಚೆಯುಟ್ಟು, ಬಿಳಿ ಪೇಟ ಧರಿಸಿ ಯಾವತ್ತೂ ನಮಗೆ ಎದುರಾಗುತ್ತ ಇದ್ದ ಇವರನ್ನು ಬರಿ ಮೈಯಲ್ಲಿ ಅಕಸ್ಮಾತ್ತಾಗಿ ನಾನು ನೋಡಿದ್ದು ಒಂದು ಭಾನುವಾರ; ತಲೆಗೆ ಎಣ್ಣ ಹಚ್ಚಿ ಹಿತ್ತಲಿನ ಬಿಸಿಲಿನಲ್ಲಿ ಅವರು ಕೂತಿದ್ದಾಗ. ಪೂಜ್ಯಭಾವದಿಂದ ನಾನು ಕಾಣುತ್ತ ಇದ್ದವರು ಮಲೆನಾಡಿನ ಅಭ್ಯಂಜನವನ್ನು ಇಷ್ಟಪಡುವ ನಮ್ಮವರಲ್ಲಿ ಒಬ್ಬನಾಗಿಯೂ ಕಂಡಿದ್ದನ್ನು ಮರೆಯಲಾರೆ.

ಅವರಿಂದ ಸ್ಫೂರ್ತನಾಗಿ ನಾನು ನನ್ನ ಹಳ್ಳಿಯಲ್ಲಿ ಅಕ್ಷರಬಾರದವರಿಗೆ ಅಕ್ಷರ ಕಲಿಸುತ್ತ ಇದ್ದೆ- ಪ್ರತಿ ರಾತ್ರೆ. ಅವರೇ ಕೊಡಿಸಿದ ಲಾಟೀನು, ಸ್ಲೇಟು, ಬಳಪಗಳನ್ನು ಕಲಿಯಲು ಒಲ್ಲದ ಹಳ್ಳಿಗರಿಗೆ ಕೊಟ್ಟು, ಪುಸಲಾಯಿಸಿ, ಗಾಂಧಿ ಕಥೆಗಳನ್ನು ಒಲ್ಲದ ಬ್ರಾಹ್ಮಣರಿಗೆ  ವಿವರಿಸುತ್ತ ಇದ್ದ ಆಗಿನ ಚೋಟುದ್ದದ ಹುಡುಗನನ್ನು ಹುರಿದುಂಬಿಸಿದವರು ಈ ನನ್ನ ಗುರುಗಳು. ಆಗಿನ ನ್ನನ ಏಕಮಾತ್ರ ಸಾಧನೆಯೆಂದರೆ ಮಠದ ಅಡುಗೆ ಭಟ್ಟನೊಬ್ಬ ಅಕ್ಷರ ಕಲಿತು ಶಾಲೆ ಸೇರಿ ಶಾಲಾ ಮಾಸ್ತರನಾಗಿ ಮಠದ ಗುಲಾಮಗಿರಿಯಿಂದ ಪಾರಾದದ್ದು. ನನ್ನ ಗುರುಗಳನ್ನು ಎಣ್ಣೆ ಹಚ್ಚಿಕೊಂಡು ಬಿಸಿಲು ಕಾಯುತ್ತ ಇರುವ ಸ್ಥಿತಿಯಲ್ಲಿ ನಾನು ನೋಡಿದ್ದು ವಯಸ್ಕರ ಶಿಕಷಣದ ತಿಂಗಳ ವರದಿಯನ್ನು ಅವರಿಗೆ ಒಪ್ಪಿಸಲು ಹೋದಾಗ.

ಶಾರದಾ ಪ್ರಸಾದರ ಶೌರ್ಯದ ಕಥೆಗಳಂತೆಯೇ ಕಟ್ಟುನಿಟ್ಟಿನ ಬ್ರಿಟಿಷ್ ಆಡಳಿತದಲ್ಲಿ ಶ್ರದ್ಧೆಯನ್ನು ಇಟ್ಟಿದ್ದ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ರಾಲೋ ಬಗ್ಗೆಯೂ ಹಲವು ಕಥೆಗಳಿದ್ದವು. ತಮಗೆ ರಾಜಕೀಯವಾಗಿ ಎದುರಾದ ಪ್ರಿಯ ವಿದ್ಯಾರ್ಥಿ ಶಾರದಾ ಪ್ರಸಾದರಿಗೆ ಜೈಲಿನಿಂದ ಪರೀಕ್ಷೆ ಬರೆಯಲು ಅವರು ಅನುಮತಿ ಕೊಟ್ಟದ್ದು; ವಿದ್ಯಾರ್ಥಿಯ ಅರ್ಹತೆಗೆ ತಕ್ಕಂತೆ ಮೊದಲನೇ ಸ್ಥಾನ ಬರಲು ಅವರು ಅಡ್ಡಿಯಾಗದೇ ಇದ್ದದ್ದು. ಚಳುವಳಿಯಲ್ಲಿ ವಿದ್ಯಾರ್ಥಿಗಳು ರೋಷಗೊಂಡು ಹಾಸ್ಟೆಲಿನಲ್ಲಿ ತ್ರಿಕೋಣಾಕಾರದ ಅದರ ನೆತ್ತಿಯಲ್ಲಿ ಇದ್ದ ರೋಲೋ ಕ್ಲಾಕ್ ಎಂದೇ ಹೆಸರಾದ ಗಡಿಯಾರವನ್ನು ಒಡೆದಾಗಲೂ ಪೊಲೀಸರನ್ನು ತನ್ನಕ್ಯಾಂಪಸ್ಗೆ ಬರದಂತೆ ತಡೆದು ವಿದ್ಯಾರ್ಥಿಗಳನ್ನು ತಹಬಂದಿಗೆ ತರಲು ತಾನೆ ಮುಂದಾದದ್ದು.. ಇತ್ಯಾದಿ. ನಾನು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕನಾಗಿ ಸೇರಿಯಾದ ಮೇಲೂ ಕಾಲೇಜಿನ ವಿದ್ಯಾರ್ಥಿಗಳು ಯಾವುದಾದರೂ ಆಟದಲ್ಲಿ ಗೆದ್ದರೆ ಇಂಗ್ಲೆಂಡಿನಿಂದ ಪ್ರೊಫೆಸರ್ ರಾಲೋ ತಮ್ಮ ಸಂತೋಷವನ್ನು ಕೇಬಲ್ ಮಾಡುತ್ತ ಇದ್ದರು. ರೋಲೋಕ್ಲಾಕ್ ಇದ್ದ ಜಾಗ ಖಾಲಿಯಾಗಿಯೇ ಉಳಿದು ಅವರನ್ನು ನೆನಪಿಸುವ ಸ್ಮಾರಕವಾಗಿಯೂ, ವಿದ್ಯಾರ್ಥಿ ಸಾಹಸದ ಲೆಜಂಡಾಗಿಯೂ ಉಳಿದಿತ್ತು-ಬಹಳ ಕಾಲ.

ಶಾರದಾ ಪ್ರಸಾದ್ ಪ್ರಧಾನಿ ಸೆಕ್ರಟೇರಿಯಟ್‌ನಲ್ಲಿ ಕೆಲಸ ಮಾಡುತ್ತ ಇಡೀ ನೆಹರೂ ಮನೆತನದ ಹಿತೈಷಿಯಾಗಿ ಕೊನೆತನಕ ಉಳಿದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗೆಯೇ ಈ ಮನೆತನಕ್ಕೆ ಅಷ್ಟು ಹತ್ತಿರವಾಗಿ ಇದ್ದೂ ಕಿಂಚಿತ್ ಏನನ್ನೂ ತನಗಾಗಲೀ ತನ್ನ ಕುಟುಂಬಕ್ಕಾಗಲೀ ಮಾಡಿಕೊಳ್ಳ ಏಕೈಕ ವ್ಯಕ್ತಿ ಇವರೆಂದರೆ ಉತ್ಪ್ರೇಕ್ಷೆಯಾಗಲಾರದು. ಎಂದೂ ಇವರು ಬಾಗಿ ಬಳುಕಿದವರಲ್ಲ; ಪ್ರಾಮಾಣಿಕವಾಗಿ ಇದು ದೇಶಸೇವೆ ಎಂದೇ ತಿಳಿದು ನೆಹರೂ ಮನೆತನದ ಆಳ್ವಿಕೆಗೆ ತನ್ನ ನಿಗದಿತ ವಲಯದಲ್ಲಿ ಸೇವೆ ಮಾಡಿದವರು.

ಆಶ್ಚರ್ಯವೆಂದರೆ ಇದು: ಅಧಿಕಾರದಲ್ಲಿ ಇರುವರ ಕೃಪೆಗಾಗಿ ಅವರು ಅಧಿಕಾರದಲ್ಲಿ ಇರುವ ತನಕ ಅವರ ಸುತ್ತ ಬಾಲಬಡುಕರು, ಹೊಗಳು ಭಟರು, ವಂದಿಮಾಗಧರು ಸುತ್ತುವರಿದಿರುತ್ತಾರೆ. ಆದರೆ ಮೆಚ್ಚಿಸಲೆಂದು ಯಾರನ್ನೂ ಯಾವತ್ತೂ ಹೊಗಳದ, ಅನಗತ್ಯವಾದ ಮಾತನ್ನೇ ಆಡದ ಈ ಧೀರ ಗಂಭೀರ ಮನುಷ್ಯ ನೆಹರೂಗೂ ಬೇಕಾದವರಾಗಿದ್ದರು. ಸ್ವಭಾವದಲ್ಲಿ ಆತಂಕಿಯೆಂದೂ, ಗರ್ವಿಯೆಂದೂ ನಾವೆಲ್ಲ ತಿಳಿದಿದ್ದ ರಹಸ್ಯ ವ್ಯಕ್ತಿತ್ವದವರಾಗಿದ್ದ ಇಂದಿರಾಜೀ ಕೂಡ ಇವರ ನಿಷ್ಠುರ ಸತ್ಯದ ಕಿವಿಮಾತಿಗೆ ಕಿವುಡಂತೂ ಆಗಿರಲಿಲ್ಲ ಎಂದು ಬಲ್ಲವರು ಹೇಳುತ್ತಾರೆ.

ಶಾರದಾ ಪ್ರಸಾದರು ಇಂದಿರಾ ಗಾಂಧಿ ತಂದ ಎಮರ್ಜನ್ಸಿ ದೇಶದ ಅಗತ್ಯವಾಗಿತ್ತು ಎಂದು ಪ್ರಾಮಾಣಿಕವಾಗಿ ನಂಬಿದ್ದವರು. ಆ ಕಾಲ ಮುಗಿದ ಮೇಲೂ ಹೊಸ ಸರ್ಕಾರ ಬಂದ ಮೇಲೂ ಶಾರದಾ ಪ್ರಸಾದರು ಇದನ್ನೇ ಹೇಳುತ್ತಾ ಇದ್ದರು-ನಿರ್ದಾಕ್ಷಿಣ್ಯವಾಗಿ. ನಾನು ಗೌರವಿಸುವ ಇನ್ನಿಬ್ಬರು ಇದೇ ವಾದದವರು: ಬೇಂದ್ರೆ ಮತ್ತು ಮೊಕಾಶಿ. ಶಿವರಾಮ ಕಾರಂತರಾದರೋ ತಮಗೆ ಬಂದ ಪದ್ಮಭೂಷಣವನ್ನೇ ಎಮರ್ಜನ್ಸಿಯಲ್ಲಿ ಕಿತ್ತು ಒಗೆದವರು.

ಆದರೆ ಇದು ಹೇಗೆ ಸಾದ್ಯವಾಯಿತು ನೋಡಿ? ಕಾರಂತರು ದೆಹಲಿಗೆ ಹೋದರೆ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಶಾರದಾ ಪ್ರಸಾದರ ಮನೆಯಲ್ಲೇ, ಅವರ ಮನೆಯ ಒಬ್ಬ ಅಜ್ಜನಂತೆ ಇಳಿದುಕೊಳ್ಳುತ್ತ ಇದ್ದರು. ಇದರಿಂದ ಶಾರದಾ ಪ್ರಸಾದರು ಮುಜುಗರ ಪಡಲೇ ಇಲ್ಲ. ಹೊರಗೆ ಅಡ್ಡಾಡಲು ಕಾರಂತರು ಹೋಗುವಾಗ ಶಾರದಾ ಪ್ರಸಾದರ ಮಕ್ಕಳೂ ಅವರ ಜೊತೆಗೆ ಇರುತ್ತ ಇದ್ದುದು ಉಂಟಂತೆ. ಯಾರೊ ಕಾರಂತರನ್ನು ಒಮ್ಮೆ ಕೇಳಿದರಂತೆ: ‘Are these your grand-children?’ ಅದಕ್ಕೆ ಮಾತಿನಲ್ಲಿ  ಸದಾ ಆಟವಾಡುತ್ತ ಇದ್ದ ಕಾರಂತರು ಹೇಳಿದಂತೆ :  ‘Yes they are ‘grand’ children’.

ಶಾರದಾ ಪ್ರಸಾದರು ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯನ್ನು ಅನುವಾದಿಸಿದರು. ನನ್ನ ಮೌನಿ ಕಥೆಯನ್ನು ಅನುವಾದಿಸಿದರು. ಇಂಗ್ಲಿಷ್, ಕನ್ನಡ-ಎರಡೂ ಭಾಷೆಗಳಲ್ಲು ತುಂಬ ಹಿತವೆನ್ನಿಸುವಂತೆ ಸರಳವಾಗಿ ಬರೆಯಬಲ್ಲವರಾಗಿದ್ದರು. ಸಂಗೀತವನ್ನು ಅವರ ತಂದೆಯವರು ಕೃತಿಕಾರರೂ ಆಗಿದ್ದರಿಂದ ಗಾಢವಾಗಿ ತಿಳಿದವರಾಗಿದ್ದರು. ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತ ಇದ್ದಾಗಲೂ ಕನ್ನಡದಲ್ಲೂ ಇಂಗ್ಲಿಷನಲ್ಲೂ ಸ್ಮರಣೀಯವಾದ ಲೇಖನಗಳನ್ನು ಬರೆದರು. ಆರ್.ಕೆ. ನಾರಾಯಣರ ಹಾಸ್ಯ ಪ್ರವೃತ್ತಿ ಅವರಲ್ಲೂ ಇತ್ತು. ನಾನವರನ್ನು ಈಚೆಗೆ ಕಂಡಾಗಲೆಲ್ಲ ಅವರ ಸ್ಥಿತಿಯ ಬಗ್ಗೆ ಸಹಾನುಭೂತಿಯ ಮಾತಿಗೇ ಅವಕಾಶಕೊಡದಂತೆ ಏನಾದರೂ ಹೇಳಿ ನಗಿಸುತ್ತ ಇದ್ದರು.

ನಾನು ಅವರಿಗಿಂತ ರಾಜಕೀಯ ವಿಷಯಗಳಲ್ಲಿ ಆ ದಿನಗಳಲ್ಲಿ ಭಿನ್ನವಾಗಿ ಯೋಚಿಸುವವನೆಂದು ಅವರಿಗೆ ಗೊತ್ತಿತ್ತು. ಒಮ್ಮೆ ಅವರ ಆಫೀಸಿನಲ್ಲಿ ಕೂತಿದ್ದಾಗ ಪಾರ್ಥಸಾರಥಿಯವರನ್ನು ಕರೆದು ನನ್ನನ್ನು ಅವರು ಆತ್ಮೀಯವಾಗಿ ಪರಿಚಯಿಸುತ್ತ ಹೇಳಿದರು. ‘ಇವರು ಲೋಹಿಯಾ ಅಭಿಮಾನಿ; ನೆಹರೂ ವಿರೋಧಿ’ನಾನು ಬಿಡಲಿಲ್ಲ; ಹೇಳಿದೆ: ‘ಈ ದೇಶದ ರಾಜಕೀಯ ಚಿಂತಕರನ್ನು ಎರಡು ಗುಂಪುಗಳಲ್ಲಿಟ್ಟು ನಾನು ನೋಡುತ್ತೇನೆ; ಒಂದು ನಿಮ್ಮಂತಹ ನೆಹರೂ ವಾದಿಗಳದು. ಇನ್ನೊಂದು ಗಾಂಧಿವಾದಿ ಗಳದು. ನಮ್ಮ ಕಮ್ಯುನಿಸ್ಟರೂ ನಿಜದಲ್ಲಿ ನೆಹರೂವಾದಿಗಳೇ’. ಶಾರದಾ ಪ್ರಸಾದರು ಇಷ್ಟಕ್ಕೆ ನನ್ನನ್ನು ಬಿಡಲಿಲ್ಲ;’ ‘ಗಾಂಧೀಜಿ ನೆಹರೂಗಿಂತ original. ಆದರೆ ಗಾಂಧಿಯನ್ನು ಹೊಸ ಕಾಲದಲ್ಲಿ ಅಗತ್ಯವಿದ್ದಲ್ಲಿ ಬದಲಿಸಿ ಉಳಿಸಿಕೊಂಡವರು ನಮ್ಮ ನೆಹರೂ’.

ಲೋಹಿಯಾ ಎಲ್ಲವನ್ನೂ ಗುಮಾನಿಯಲ್ಲಿ ನೋಡುವ, ನೆಹರೂ ವಿರೋಧದ ವ್ಯಸನದ ಅಸ್ವಸ್ಥ ರಾಜಕಾರಣಿ ಎಂದು ಅವರ ಮತವಾಗಿರಬಹುದೆಂದು ನಾನು ತಿಳಿದಿದ್ದೇನೆ.

ಗಾಂಧಿ ವಿಷಯ ಬಂದದ್ದೇ ಪಾರ್ಥಸಾರಥಿಗಳು ಹೇಳಿದ ಕಥೆಗಳನ್ನು ಅವನ್ನು ಶಾರದಾ ಪ್ರಸಾದರು ತಮಗಿನ್ನೇನೂ ಕೆಲಸವಿಲ್ಲವೆಂಬಂತಹ ಆರಾಮಿನಲ್ಲಿ ಕೇಳಿಸಿ ಕೊಳ್ಳುತ್ತ ಮುಗುಳ್ನಗುತ್ತ ಇದ್ದುದನ್ನೂ ನಾನು ಮರೆಯಲಾರೆ. (ಶಾರದಾ ಪ್ರಸಾದರು ಜೊತೆಗೆ ಇದ್ದಾಗ, ಇಡೀ ಚರಿತ್ರೆಯೇ ಕಥಿತವಾಗುವ ವಾತಾವರಣ ಹೇಗೆ ಸೃಷ್ಟಿಯಾಗುತ್ತ ಇದ್ದಿತೆಂದು ಸೂಚಿಸಲು ಮುಂದಿನ ಕಥೆ ಸ್ಮರಿಸುತ್ತ ಇದ್ದೇನೆ) ವಿಯಟ್ನಾಮ್‌ನಲ್ಲಿ ನಮ್ಮ ರಾಯಭಾರಿಯಾಗಿದ್ದ ಪಾರ್ಥಸಾರಥಿಯವರು ಮೊದಲು ಹೇಳಿದ ಕಥೆ ಇದು:

ಯಾರೋ ವಿಯಟ್ನಾಮಿನ ಕ್ರಾಂತಿಕಾರ ಹೋರಾಟಗಾರನಾದ ಹೋತದ ಗಡ್ಡದ, ಚೂಪು ಮೂತಿಯ ಹೋ ಚಿ ಮಿನ್‌ಗೆ ಹೇಳಿದರಂತೆ. ‘ನೀವು ಮಹಾತ್ಮ ಗಾಂಧಿಯಂತಹ ಮನುಷ್ಯ’. (ಮಾವೋ ಬಗ್ಗೆ ಇದು ನಿಜವಲ್ಲ; ಹೋ ಚಿ ಮಿನ್ ಬಗ್ಗೆ ಇದು ನಿಜವೆಂದು ನನ್ನ ಅಭಿಪ್ರಾಯ-ಇರಲಿ) ಈ ಮಾತಿಗೆ ಹಾಸ್ಯಪ್ರಿಯನಾದ ಹೋ ಚಿ ಮಿನ್ ಥಟ್ಟನೇ ಕೊಟ್ಟ ಉತ್ತರ ‘ಒಂದು ವಿಷಯದಲ್ಲಿ ನಾನು ಗಾಂಧಿಗಿಂತ ಮೇಲು’. ಹೀಗೆ ಅಭಿಮಾನಿಯನ್ನು ತಬ್ಬಿಬ್ಬುಗೊಳಿಸಿ, ಕೊಂಚ ತಡೆದು, ಹೋ ಚಿ ಮಿನ್ ಗಂಭೀರವಾಗಿ ಹೇಳಿದ್ದು ‘ಗಾಂಧೀಗಿಂತ ನಾನು ಹೆಚ್ಚು ಸುಂದರ.’

ಗೊತ್ತಿರುವ ಈ ಕಥೆಗಿಂತ ಇನ್ನೂ ಚೆನ್ನಾದ್ದು ಒಂದು ಇದೆ: ಮನೆಯಲ್ಲಿ ನಾವು ಹಾಕುವಂತಹ ಬಾತ್‌ರೂಮ್ ಚಪ್ಪಲಿಯನ್ನೇ ಹಾಕಿಕೊಂಡು ಎಳೆದಾಡುತ್ತ ನಡೆದು ಬಾಗಿಲನ್ನು ತಟ್ಟಿ ರಾಷ್ಟ್ರದ ಅಧ್ಯಕ್ಷರಾದ ಹೋ ಚಿ ಮಿನ್ ಪಾರ್ಥಸಾರಥಿಯವರ ಕೋಣೆಗೆ ಹೇಳದೆ ಕೇಳದೆ ಬಂದುಬಿಡುತ್ತಿದ್ದರಂತೆ. ಬಂದವರು ಪಾರ್ಥಸಾರಥಿಯವರು ಸೇದುತ್ತ ಇದ್ದ ವಿಲಾಯಿತಿ ಸಿಗರೇಟನ್ನು ಕೇಳಿ ಪಡೆದು ಖುಷಿಯಿಂದ ಸೇದಿ ಹರಟಿ ಹೋಗುತ್ತ ಇದ್ದರಂತೆ. ಒಮ್ಮೆ ಪಾರ್ಥಸಾರಥಿಯವರು ರಾಯಭಾರಿಯ ಸವಲತ್ತಿನಿಂದಾಗಿ ಪಡೆಯುತ್ತ ಇದ್ದ ವಿಲಾಯಿತಿ ಸಿಗರೇಟಿನ ಒಂದು ಕಂತೆಯನ್ನು ಹೋ ಚಿ ಮಿನ್‌ಗೆ ಕೊಟ್ಟರಂತೆ- ‘ನಿಮಗಿದು ಇಷ್ಟವಲ್ಲವೆ?’ ಎಂದು. ಹೋ ಚಿ ಮಿನ್ ನಗುತ್ತ ಹೇಳಿದರಂತೆ: ‘ನನಗೆ ಇದು ಇಷ್ಟವಲ್ಲ. ನಿನ್ನ ಜೊತೆ ಬಂದು ಕೂತು ಸಿಗರೇಟು ಸೇದುವುದು ಮಾತ್ರ ಇಷ್ಟ. ನಾನು ನಿನ್ನ ಕೋಣೆಗೆ ಹರಟಲು ಬರುವುದು ಬೇಡವೆ?’ ಎಂದು ಸಿಗರೇಟನ್ನು ಹಿಂದಿರುಗಿಸಿದರಂತೆ. ಶಾರದಾ ಪ್ರಸಾದರಿಗೂ ಇಂತಹ ಕಥೆಗಳನ್ನು ಹೇಳುವುದು ಕೇಳುವುದು ಇಷ್ಟ. ಅವರ ನೆನಪಿನಲ್ಲಿ ಎಷ್ಟೋ ಕಾರಂತ ಪುರಾಣಗಳು, ಬೇಂದ್ರೆ ಪುರಾಣಗಳು, ನೆಹರೂ ಗಾಂಧಿ ಪುರಾಣಗಳು, ಇದ್ದವರು.

ಅಡಿಗರು ಶಾರದಾಪ್ರಸಾದರ ಕಾಲದಲ್ಲೇ ಮಹಾರಾಜ ಕಾಲೇಜಿನಲ್ಲಿ ಓದುತ್ತ ಇದ್ದವರು. ಅವರ ಕ್ಲಾಸಿನಲ್ಲಿ ಇದ್ದವರಲ್ಲವೆಂದು ತೋರುತ್ತದೆ. ಶಾರದಾ ಪ್ರಸಾದರು ಒಮ್ಮೆ ನನಗೆ ಹೇಳಿದರು: ವಿನಯದಲ್ಲಿ ಅಲ್ಲ; ವಸ್ತುನಿಷ್ಠವಾಗಿ, ನನ್ನ ಸಮಕಾಲೀನರಲ್ಲಿ ಶ್ರೇಷ್ಠವಾದ ಸಾಧನೆಯನ್ನು ಮಾಡಿದವರು ಇಬ್ಬರೇ: ಗೋಪಾಲಕೃಷ್ಣ ಅಡಿಗರು ಮತ್ತು ವೀಣಾ ದೊರೆಸ್ವಾಮಿ ಅಯ್ಯಂಗಾರರು.

ಅವರ ಸಾಹಿತ್ಯ ಜ್ಞಾನವೂ ಅಷ್ಟೆ; ತೂಗಿ ತಿಳಿಯುವ ನಿಷ್ಠುರತೆಯ ಸ್ವಾನುಭವದ ಜ್ಞಾನ ಅದು. ಎ.ಕೆ. ರಾಮಾನುಜನ್ನರೆಂದರೆ ಅವರಿಗೆ ಬಹಳ ಗೌರವ. ಅವರು ತೀರಿ ಕೊಂಡಾಗ ಇಡೀ ದೇಶದ ಮರುಗಿ ಅವರನ್ನು ಕೊಂಡಾಡಿತು. ರಾಮಾನುಜನ್ನರು ದ್ರಾವಿಡ ಭಾರತದ ಬಗ್ಗೆ ಪ್ರಪಂಚದ ಗಮನವನ್ನು ಸಂಸ್ಕೃತ ಮೂಲದ ಭಾರತದ ಬಗ್ಗೆ ಆನಂದಕುಮಾರ ಸ್ವಾಮಿಯವರು (Dance of Siva ಬರೆದವರು) ಸೆಳೆದಂತೆಯೇ ಈ ಕಾಲದಲ್ಲಿ ಸೆಳೆದವರು ಎಂದು ನಾನು ಬರೆದದ್ದು ಅವರಿಗೆ ಸಂತೋಷಕೊಟ್ಟಿತ್ತು. ಆದರೂ ಶಾರದಾಪ್ರಸಾದರು, ಹೀಗೆ ಹೇಳುವ ನಿಮ್ಮ ಧೈರ್ಯ ತನಗಿಲ್ಲ ಎಂಬ ವಿನಯದಲ್ಲಿ, ಸ್ವಲ್ಪ ಆಶ್ಚರ್ಯದಲ್ಲೇ ಕೇಳಿದರು: ‘ಸೃಜನಶೀಲ ಲೇಖಕರಾಗಿ ರಾಮಾನುಜನ್ನರು ಬೇಂದ್ರೆ, ಕಾರಂತ, ಕುವೆಂಪುರಷ್ಟು ಹಿರಿದಾದದ್ದನ್ನು ಸಾಧಿಸಿದವರಂತೆ  ತೋರುವುದಿಲ್ಲ, ಅಲ್ಲವೆ? ಆದರೆ ಅವರಿಗೆ ಸಿಕ್ಕಿರುವ ಗಮನ ಅಪಾರವಾದ್ದು, ಇದು ಯಾಕೆ?’ ಎಂದಿದ್ದರು. ರಾಮಾನುಜನ್ನರ ಖ್ಯಾತಿಯನ್ನು ನಮ್ಮ ಕಾಲದ ಒಂದು ವಿಶಿಷ್ಟವಾದ ಅಗತ್ಯದಿಂದಲೂ ಹುಟ್ಟಿದ ವಿದ್ಯಮಾನವಿದು ಎಂಬಂತೆ ರಾಮಾನುಜನ್ನರನ್ನು ಮೆಚ್ಚುತ್ತಲೇ ನೋಡಬೇಕು ಎಂದು ಅವರಿಗೆ ಅನ್ನಿಸಿತ್ತು. ನನ್ನ ನೋಟವನ್ನು ಅಲ್ಲಗಳೆಯದೆ ಅವರು ತಮ್ಮ ಅನುಮಾನದ ಮೆಚ್ಚುಗೆಯನ್ನು ಸೇರಿಸಿದ್ದರು.

ಕೆಲವು ವರ್ಷಗಳ ಹಿಂದೆ ಅವರೂ ಅವರ ಸೋದರ, ಸೋದರಿಯರೂ ಒಟ್ಟಾಗಿ ಬರೆದ ಒಂದು ಕಿರು ಪುಸ್ತಕವನ್ನು ಪ್ರಕಟಿಸಿದ್ದರು. ಪುರಾಣದ ವ್ಯಕ್ತಿಯಂತೆ ಕಾಣುವ ಅವರ ತಂದೆಯ, ತಾಯಿಯ ಬಗ್ಗೆ ಕುಟುಂಬದ ನೆನಪಾಗಿ, ಏನನ್ನೂ ಮರೆ ಮಾಚದಂತೆ, ಇದೊಂದು ಹೊಸ ಬಗೆಯ ಶ್ರಾದ್ಧ ಕ್ರಿಯೆಯೋ ಎಂಬಂತೆ ಈ ಕಿರು ಪುಸ್ತಕವಿತ್ತು.

ನಿರಕ್ಷರರಾಗಿದ್ದ ಈ ಅಜ್ಜಿ ಮಹಾ ಜಗಳಗಂಟಿ; ಮುನಿಸಿಕೊಂಡರೆ ಮನೆ ಬಿಟ್ಟು ನಂಜನಗೂಡಿನಲ್ಲೋ ಎಲ್ಲೋ ಇದ್ದು ಸಿಟ್ಟು ಇಳಿದ ಮೇಲೆ ಏನು ಆಗಿಲ್ಲವೆಂಬಂತೆ ಹಿಂದಕ್ಕೆ ಬರುತ್ತ ಇದ್ದ ಈ ಅಜ್ಜಿ ಒಂದು ಪಾತ್ರೆಯನ್ನು ತೊಳೆದರೆ ಅದು ಫಳ ಫಳ ಹೊಳೆಯುವಂತಿರಬೇಕು. ನಿತ್ಯ ಪತ್ರಿಕೆಗಳನ್ನು ಮೊಮ್ಮಗಳು ಓದಿ ಹೇಳಬೇಕು; ಒಮ್ಮೆ ಮೊಮ್ಮಗಳು ನೀನೇ ಯಾಕೆ ಓದಿಕೊಳ್ಳಬಾರದು ಎಂದಾಗ ಆ ಸವಾಲನ್ನು ಸ್ವೀಕರಿಸಿ ಓದಲು ಈ ಅಜ್ಜಿ ಕಲಿತು ಬಿಟ್ಟರು. ಈ ಅಜ್ಜಿಗೆ ಅಪಾರವಾದ ಸಂಗೀತದ ಜ್ಞಾನ. ಒಮ್ಮೆ ಅವರು ಎಲ್ಲರೂ ಕಳೆದುಹೋಗಿದೆ ಎಂದು ತಿಳಿದ ಕೃತಿಯೊಂದನ್ನು ಥಟ್ಟನೆ ನೆನಪಿನಿಂದ ಹಾಡಿ ಹಾಗೆಯೇ ಮರೆತು ಬಿಡುತ್ತಾರೆ. ಪ್ರೀತಿಯಿಂದ ಎಷ್ಟೋ ಅಷ್ಟೇ ಅಜ್ಜಿಗೆ ಸಲ್ಲಬೇಕಾದ ನಿಷ್ಠುರತೆಯಿಂದ ಅಜ್ಜಿಯ ರಂಪಗಳನ್ನು ಇಡೀ ಕುಟುಂಬ ಸಹಿಸಿ ನಿರ್ವಹಿಸುತ್ತ ಇದ್ದ ಹಾಸ್ಯಪ್ರಜ್ಞೆ ವಿಲಕ್ಷಣವಾಗಿ ಇಲ್ಲಿ ಚಿತ್ರಿತವಾಗಿದೆ. ಶಾರದಾ ಪ್ರಸಾದರ ಸೋದರ, ಸೋದರಿ ಯರು  ಈ ಅಜ್ಜಿಯನ್ನು ನೆನಸಿಕೊಂಡು-ಕೇವಲ ಸಹಿಸಿಕೊಳ್ಳದೆ ಅವರ ವಿಶಿಷ್ಟತೆಯನ್ನೂ ತಮಗೊದಗಿದ ಪಿತೃದತ್ತ ಪುಣ್ಯವೆಂಬಂತೆ ಮೆಚ್ಚಿಕೊಂಡು-ನಮಗೆ ಆಪ್ತವಾದ ಪಾತ್ರ ಮಾಡುತ್ತಾರೆಂದರೆ ಇದೊಂದು ಅನನ್ಯವಾದ ಗತಿಸಿದ ಕಾಲದ ಚಿತ್ರಣವೆನ್ನಿಸುತ್ತದೆ. ವಸ್ತುವಿನಿಂದ ಮಾತ್ರವಲ್ಲದೆ ಬರವಣಿಗೆಯಲ್ಲಿ ಕಾಣುವುದನ್ನು ಬೆಳಗಿಸಬಲ್ಲ ಹಿತಮಿತದ ಧಾಟಿಯಿಂದಾಗಿ ಇದೊಂದು ಅನನ್ಯವಾದ ದಾಖಲೆ.

ನಾನೀಗ ನೆನಪಿಗೆ ಬಂದದ್ದಷ್ಟನ್ನು ಬರೆಯುತ್ತ ಇದ್ದೇನೆ. ಆದರೆ ಇಲ್ಲಿ ನಾನು ನೆನೆಯಲೇ ಬೇಕಾದ ಒಂದು ಸಂಗತಿಯಿದೆ. ನಾನು ಮೆಚ್ಚಿದವರನ್ನೆಲ್ಲ ಸಂಶಯದಿಂದ, ಇದೊಂದು ಬ್ರಾಹ್ಮಣರ ಗ್ಯಾಂಗಿನ ಹುನ್ನಾರವೆಂಬಂತೆ ಕಂಡು ಶಾರದಾ ಪ್ರಸಾದರನ್ನೂ ಆಗೀಗ ಕುಟುಕುತ್ತ ಇದ್ದ ಗೆಳೆಯ ಲಂಕೇಶರು ಈ ಪುಸ್ತಕವನ್ನು ಓದಿ ಬರೆದ ವಿಮರ್ಶೆ ಅವರ ಅತ್ಯುತ್ತಮ ರಿವ್ಯೂಗಳಲ್ಲಿ ಒಂದೆಂದು ನಾನು ತಿಳಿದಿದ್ದೇನೆ.

* * *

ಎಮರ್ಜನ್ಸಿಯ ಕಾಲ ಇವತ್ತಿಗೂ ನಾವು ದಾಟಿ ಬಂದು ಗಂಡಾಂತರಗಳಲ್ಲಿ ಒಂದೆಂದು ತಿಳಿದಿರುವ ನಾನು ಶಾರದಾ ಪ್ರಸಾದರು ಅದನ್ನು ಸಹಿಸಿದ್ದನ್ನೂ ಮೇಲಿಂದ ಮೇಲೆ ಅದನ್ನು ಸಮರ್ಥಿಸುತ್ತ ಇದ್ದುದನ್ನೂ ನಾನು ಇವತ್ತಿಗೂ ಒಪ್ಪಲಾರದ ಆಶ್ಚರ್ಯದಿಂದ ಕಾಣುತ್ತೇನೆ. ಆದರ ಎಮರ್ಜನ್ಸಿಯನ್ನು ವಿರೋಧಿಸಿದ ನಾವು, ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳೂ ಒಟ್ಟಾಗಬೇಕೆಂಬ ಲೋಹಿಯಾ ವಾದವನ್ನು ಬೆಂಬಲಿಸಿದ ನಾನು, ಈಗ ಮತೀಯವಾದದ ಆಧಾರದ ಮೇಲೆ ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಷ್ಟು ಬಿಜೆಪಿ ಬೆಳೆಯಲು ನಮ್ಮ ಎಮರ್ಜನ್ಸಿ ವಿರೋಧದಿಂದ ಹುಟ್ಟಿಕೊಂಡ ಜನತಾ ಒಕ್ಕೂಟದ ರಾಜಕೀಯವೂ ಕಾರಣವಾಗಿರಬಹುದಲ್ಲವೆ ಎಂದು ಕಿರಿಕಿರಿ ಪಡುತ್ತ ನಾಚುತ್ತೇನೆ.

ವೈಯಕ್ತಿಕವಾಗಿ ಶಾರದಾ ಪ್ರಸಾದರು ನನ್ನ ಮೇಲೆ ಇಟ್ಟಿದ್ದ ವಿಶ್ವಾಸ ಅಪಾರವಾದ್ದು. ೧೯೭೨ನೇ ಇಸವಿಯಲ್ಲಿ ನನಗೆ ಹೋಮಿಬಾಬ ಫೆಲೋಶಿಪ್ ಸಿಕ್ಕಿತು. ಹಿರಿಯರಾದ ಪ್ರಭುಶಂಕರರು, ನನ್ನ ಹಲವು ನಿಲುವುಗಳನ್ನು ಸುತಾರಾಂ ಒಪ್ಪದವರು, ಈ ಫೆಲೋಶಿಪ್ಪಿಗೆ ನಿನ್ನ ಹೆಸರನ್ನು ಕೊಡುತ್ತೀಯ ಎಂದರು. ನನಗೆ ನಾರಾಯಣ ಮೆನನ್‌ರಿಂದ ವಿವರ ಕೇಳಿ ಕಾಗದವೂ ಬಂತು. ಫೆಲೋಶಿಪ್ ಸಿಕ್ಕಿತು. ಬಹಳ ವರ್ಷಗಳನಂತರ ನಮಗೆ ಈ ನಾರಾಯನ ಮೆನನ್ (ಯೇಟ್ಸ್ ಮೇಲೊಂದು ಪುಸ್ತಕ ಬರೆದು ಜಾರ್ಜ್‌ಆರ್ವೆಲ್‌ನ ಮೆಚ್ಚುಗೆ ಗಳಿಸಿದವರು; ಬಿಬಿಸಿಯಲ್ಲಿ ಆರ್ವೆಲ್ ಜೊತೆ ಕೆಲಸಮಾಡಿದವರು) ಹೇಳಿದರು; I am grateful to Sharada Prasad who gave me your name. ಅದೆಷ್ಟು ಬಾರಿ ನಾನು ಶಾರದಾ ಪ್ರಸಾದರನ್ನ ನೋಡಿದ್ದೆನೊ! ಪ್ರತಿ ಸಾರಿಯೂ ನೆಹರೂ ಕಾಲದ ಯಾವುದಾದರೂ ಕಥೆ ಹೇಳುತ್ತ ಇದ್ದರೇ ಹೊರತೂ ಒಮ್ಮೆಯೂ ಅವರು ನನಗೆ ಈ ವಿಷಯ ಹೇಳಿರಲಿಲ್ಲ.

ಆದರೆ ಹೊಮಿಬಾಬಾ ಫೆಲೋಶಿಪ್ ವೇಳೆಯಲ್ಲಿ ನಾನು ಬರೆದ ‘ಭಾರತೀ ಪುರ’ವನ್ನು ಶಾರದಾ ಪ್ರಸಾದರು ಇಷ್ಟಪಡಲಿಲ್ಲ. ಹಾಗೆಂದು ನೇರವಾಗಿ ಹೇಳಿದವರು ‘ಅವಸ್ಥೆ’ಯನ್ನು ಓದಿ ಮೆಚ್ಚಿದರು.

ಎಮರ್ಜನ್ಸಿ ಕಾಲದ ಒಂದು ವೃತ್ತಾಂತದಿಂದಲೇ ಈ ನನ್ನ ಲೇಖನ ಮುಗಿಸುತ್ತೇನೆ. ಜಾರ್ಜ್ ಫರ್ನಾಂಡೀಸರು ಆಗಿನ ನನ್ನ ಹಿರೋ. ಅವರು ಇಲ್ಲಿ ಡೈನಮೈಟ್‌ಗಳನ್ನು ಪ್ರಾಣಹಾನಿಯಾಗದಂತೆ ಸಿಡಿಸಿ, ಆಳುವ ಸರ್ವಾಧಿಕಾರಿ ಇಂದಿರಾಗಾಂಧಿಗೆ ಕಿರುಕುಳವನ್ನಾದರೂ ಕೊಡಬೇಕೆಂಬುದು ಈ ಸಂಚಿನ ಉದ್ದೇಶ. ಈ ಡೈನಮೈಟನ್ನು ದೆಹಲಿಯಲ್ಲಿ ಶೇಖರಿಸಿಕೊಂಡ ನನ್ನ ಗೆಳೆಯನ್ನೊಬ್ಬ ತನ್ನ ಮೇಲೆ ಗುಮಾನಿ ಬರದಿರಲಿ ಎಂದು ಯಾರನ್ನೋ ಹಿಡಿದು ಎಮರ್ಜನ್ಸಿ ಪರ ಒಂದು ಪುಸ್ತಕ ಬರೆಸಿ, ತಾನೇ ಪ್ರಕಟಿಸಿ, ಅದನ್ನು ಇಂದಿರಾಗಾಂಧಿಯಿಂದಲೇ ಬಿಡುಗಡೆ ಮಾಡಿಸಬೇಕೆಂದು ನಿಶ್ಚಯಿಸಿ ನನ್ನ ಮುಖಾಂತರ ಶಾರದಾಪ್ರಸಾದರನ್ನು ಹಿಡಿದು ಇಂದಿರಾಗಾಂಧಿಯವರಿಂದ ಪುಸ್ತಕ ಬಿಡುಗಡೆ ಮಾಡಿಸಿಕೊಂಡ. ಶಾರದಾ ಪ್ರಸಾದರ ನನ್ನ ಮೇಲಿನ ವಿಶ್ವಾಸವನ್ನು-ಆ ದಿನಗಳಲ್ಲಿ ನಾನು ಬಲವಾಗಿ ನಂಬಿದ ಕಾರಣಕ್ಕೂ ಬಳಸಿದ್ದು ಅನೈತಿಕ ಎಂದು ಯಾವಾಗಲೂ ನನ್ನನ್ನು ಬಾಧೀಸಿದೆ. ಆದರೆ ಎಮರ್ಜನ್ಸಿ ಕಾಲದ ಕ್ರೂರ ವೈಪರೀತ್ಯಗಳೂ ಹೀಗೆಯೇ ಶಾರದಾ ಪ್ರಸಾದರನ್ನು ಬಾಧಿಸಿರಬಹುದು. ಆದರೆ ಅವರು ಎಂದೆಂದೂ ನೆಹರೂ ಮನೆತನದ ಬಗ್ಗೆ ತನ್ನ ನಂಬಿಕೆ ಕಳೆದುಕೊಂಡವರಲ್ಲ.

ಈ ನನ್ನ ಆಶ್ಚರ್ಯವನ್ನು ನನಗೆ ಆತ್ಮೀಯರಾದ ಅವರ ತಮ್ಮ ರಾಜಗೋಪಾಲರಲ್ಲಿ ಹಂಚಿಕೊಂಡಿದ್ದೇನೆ. ರಾಜಗೋಪಾಲರೂ ಎಮರ್ಜನ್ಸಿಗೆ ವಿರೋಧಿಗಳೇ; ಆದರೆ ತನ್ನ ಅಣ್ಣನ ಎಲ್ಲ ನಂಬಿಕೆಗಳನ್ನೂ ಗೌರವದಿಂದ ಕಾಣುವವರು.

ಎಮರ್ಜನ್ಸಿಗೂ ಶಾರದಾ ಪ್ರಸಾದರ ಜೊತೆಗಿನ ನನ್ನ ಸ್ನೇಹಕ್ಕೂ ಸಂಬಂಧಿಸಿದಂತೆ ಇನ್ನೊಂದು ಘಟನೆಯನ್ನು ನಾನು ದಾಖಲಿಸಬೇಕು: ಎಮರ್ಜನ್ಸಿಯ ಕೊನೆ ಕೊನೆ ದಿನಗಳಲ್ಲಿ ನಡೆದದ್ದು ಇದು. ಗಾಂಧೀಜಿ ಬಗ್ಗೆ ಹಲವು ಪುಸ್ತಕಗಳನ್ನು ಬರೆದ ಪ್ರಸಿದ್ಧ ಲೇಖಕ ಮಾರ್ಟಿನ್ ಗ್ರೀನ್ ಇಂಗ್ಲೆಂಡಿನಲ್ಲಿ ನನ್ನ ಒಬ್ಬ ಆತ್ಮೀಯರಾದ ಪ್ರಾಧ್ಯಾಪಕರು, ಆನಂತರ ಟಫ್ಟ್ ಎಂಬ ವಿದ್ಯಾಲಯದಲ್ಲಿ ನನ್ನ ಸಹೋದ್ಯೋಗಿಗಳು. ಭಾರತಕ್ಕೆ ಎಮರ್ಜನ್ಸಿ ಕಾಲದಲ್ಲಿ ಅವರು ಬರುವ ಮುಂಚೆ ಜೈಲಿನಲ್ಲಿರುವ ಜಯಪ್ರಕಾಶರನ್ನೂ ತನಗೆ ನೋಡಲು ಅನುಮತಿ ಸಿಕ್ಕೀತೆ ತಿಳಿದು ಬರಿ ಎಂದಿದ್ದರು.

ನಾನು ಶಾರದಾ ಪ್ರಸಾದರಿಗೆ ಕನ್ನಡದಲ್ಲೇ ಒಂದು ದುಗುಡ ದುಮ್ಮಾನ ತುಂಬಿದ ಪತ್ರ ಬರೆದೆ. ಮಾರ್ಟಿನ್‌ಗ್ರೀನ್ ವಿನೋಬಾರನ್ನೂ ಜಯಪ್ರಕಾಶರನ್ನೂ ನೋಡಬೇಕೆಂದು ಇದ್ದಾರೆ. ಜೈಲಿನಲ್ಲಿರುವ ಜಯಪ್ರಕಾಶರನ್ನು ಅವರು ನೋಡಲಾರದೆ ಹೋದರೆ ಭಾರತೀಯನಾಗಿ ನನಗೆ ಅವಮಾನ ಎಂದೋ ಏನೊ ಬರೆದಿದ್ದೆ. ಹೇಳಬೇಕಾದ್ದನ್ನು ಸುಮ್ಮನೇ ಹೇಳದೆ ನನ್ನ ಸಿಟ್ಟು-ಸೆಡವುಗಳನ್ನು ಮುಂದಿಟ್ಟು ಮಾತಾಡುವುದು ನನ್ನ ದೌರ್ಬಲ್ಯ. ಇದನ್ನು ಲೆಕ್ಕಿಸದೆ ಶಾರದಾ ಪ್ರಸಾದರು ಕನ್ನಡದಲ್ಲೇ ಸ್ಪಷ್ಟವಾದ ಅಕ್ಷರಗಳಲ್ಲಿ ಬರೆದ ಕಾಗದ ನನ್ನಲ್ಲಿ ಆಶ್ಚರ್ಯವನ್ನು ಉಂಟುಮಾಡಿತು. ಎಮರ್ಜನ್ಸಿಯನ್ನು ಬರೆದ ಕಾಗದ ನನ್ನಲ್ಲಿ ಆಶ್ಚರ್ಯವನ್ನು ಉಂಟುಮಾಡಿತು. ಎಮರ್ಜನ್ಸಿಯನ್ನು ಕೊನೆಗಾಣಿಸಿ ಜಯಪ್ರಕಾಶರನ್ನು ಜೈಲಿಂದ ಬಿಡುಗಡೆ ಮಾಡುವ ಮುಂಚೆಯೇ ಶಾರದಾ ಪ್ರಸಾದರು ಬರೆದಿದ್ದರು: ಸದ್ಯದಲ್ಲೇ ಜಯಪ್ರಕಾಶರು ಪಂಜರದಿಂದ ಹೊರಬೀಳಲಿದ್ದಾರೆ. ಈ ಭೇಟಿಯನ್ನು ಏರ್ಪಡಿಸಲು ಯೋಗ್ಯನಾದ ವ್ಯಕ್ತಿ ಅಜಿತ ಭಟ್ಟಾಚಾರ್ಯರು, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕರು. ಅವರ ಸಂಪರ್ಕ ವಿಳಾಸ, ದೂರವಾಣಿ ಇತ್ಯಾದಿ ಹೀಗಿದೆ ಇದೊಂದು ಅಫಿಶಿಯಲ್ ಆದ ಆದರೆ ಯಾವ ಅಧಿಕಾರಿಯೂ ಬರೆಯಲು ಅಂಜುವ ಕಾಗದ.

ಮಾರ್ಟಿನ್ ಗ್ರೀನ್‌ಗೆ ಜಯಪ್ರಕಾಶರು ಅಷ್ಟೇನೂ ಪ್ರಿಯರಾಗಲಿಲ್ಲ. ನಾವೆಲ್ಲರೂ ಇಂದಿರಾಜಿ ಸೋತಮೇಲೆ ಜಯಪ್ರಕಾಶರನ್ನು ನೋಡಲು ಹೋದಾಗ ವೀಲ್‌ಛೇರ್ ಮೇಲೆ ಕೂತು ಹೊರಬಂದ ಜಯಪ್ರಕಾಶರು ಹೇಳಿದ ಮಾತನ್ನು ಅವರ ಉದಾತ್ತತೆಗೆ ಸಂಕೇತವೆಂದು ತಿಳಿದೆವು. ಜಯಪ್ರಕಾಶರು ಇಂದಿರಾರನ್ನು ಪ್ರೀತಿಯಿಂದ ಹೀಗೆ ಹರಸಿದರಂತೆ: “I wish you a brighter future than yor past” ಮಾರ್ಟಿನ್ ಗ್ರೀನ್‌ಗೆ ಇದು ನೈನಿಕವೆನ್ನಿಸಲಿಲ್ಲ. ಯಾಕೆಂದರೆ ಇದೇ ಜಯಪ್ರಕಾಶರು ಜೈಲಿನಲ್ಲಿ ಇಂದಿರಾ ಗಾಂಧಿ ತನ್ನ ಆರೋಗ್ಯ ತೀರಾ ಹದಗೆಡಹುವಂತೆ ಹುನ್ನಾರ ಮಾಡಿದರು ಎನ್ನುವ ಅರ್ಥಬರುವ ಮಾತಾಡಿದ್ದರು. ಎರಡರಲ್ಲಿ ಒಂದು ಸತ್ಯವಿರಬೇಕು. ಇಂದಿರಾ ಕ್ರಿಮಿನಲ್ ಆಗಿನಡೆದುಕೊಂಡಿದ್ದರೆ ಅವಳನ್ನುಕ್ಷಮಿಸಬಹುದು-ಗಾಂಧಿಯಂತೆ. ಆದರೆ ರಾಜಕಾರಣದಲ್ಲಿ ಆಕೆ ಹಿಂದಿಲ್ಲದಂತೆ ಅಭಿವೃದ್ಧಿಹೊಂದಲ್ಲಿ ಎನ್ನುವುದು moral confusionನಿಂದ ಬಂದದ್ದು ಎಂದು ಗ್ರೀನ್‌ರ ವಾದ.

ಚರಿತ್ರೆ ವಿಲಕ್ಷಣವಾದ್ದು. ಹಿನ್ನೋಟದಲ್ಲಿ ನಾವು ಕಾಣುವುದು ವ್ಯಂಗ್ಯವನ್ನೋ? ವಿವೇಕವನ್ನೋ? ಇಂದಿರಾಗಾಂಧಿಗೆ ವಿರುದ್ಧವಾಗಿ ಜಯಪ್ರಕಾಶರ ಜೊತೆ ಕೈ ಜೋಡಿಸಿ ಹೋರಾಡಿದ ಆರ್ ಎಸ್‌ಎಸ್‌ನ ಸರಸಂಘ ಚಾಲಕರು ನಿಜವಾದ ರಾಷ್ಟ್ರನಾಯಕಿಯೆಂದರೆ ಇಂದಿರಾಗಾಂಧಿಯೇ ಎಂದು ತಾವೇ ಅಧಿಕಾರಕ್ಕೆ ತಂದ ವಾಜಪೇಯಿಯವರು ಪ್ರಧಾನಿಯಾಗಿದ್ದಾಗಲೇ ಹೇಳಿದರು. ಜಯಪ್ರಕಾಶರು ಈ ದಿನಗಳಲ್ಲಿ ಯಾರಿಗೂ ನೆನಪಾಗುವುದೇ ಇಲ್ಲ. ಶಾರದಾಪ್ರಸಾದರ ಜೊತೆ ಇಂತಹ ವಿಷಯಗಳನ್ನು ಕುರಿತು ಚರ್ಚಿಸಬಹುದಿತ್ತು.

ಶೇಕ್ಸ್‌ಪಿಯರ್ ತನ್ನ ಐತಿಹಾಸಿಕ ನಾಟಕಗಳಲ್ಲಿ ಆದರ್ಶ ದೊರೆಗಾಗಿ ಹುಡುಕುತ್ತಾನೆ. ಅ ವನಿಗೆ ಸಿಗುವುದು ಹೆನ್ರಿ ಎಂಬ ಒಬ್ಬ ನರಿ. ಇವನು ಪೋಲಿ ಪಟಾಲಂಗಳ ಜೊತೆ ತನ್ನ ತಾರುಣ್ಯವನ್ನು ಹೆಂಡದಂಗಡಿಗಳಲ್ಲಿ ಕಳೆದು, ಆಮೇಲೆ ದೊರೆಯಾಗುತ್ತಾನೆ. ತನ್ನಜೀವನಾನುಭವವನ್ನು ಇಂಥವರಿಂದ ಪಡೆದವನೇ ಆದ ಅವನ ಪರಮ ಗೆಳೆಯನಾಗಿದ್ದ ಫಾಲ್ ಸ್ಟಾಪ್ ಎಂಬುವನು ಸಡಗರದಲ್ಲಿ ದೊರೆಯಾದ ತನ್ನ ಗೆಳೆಯನನ್ನು ನೋಡಲು ಬಂದಾಗ ‘ನೀನು ಯಾರೆಂದು ನನಗೆ ಗೊತ್ತೇ ಇಲ್ಲ’ ಎಂದು ಹೇಳಿ ಅವನನ್ನು ಅಟ್ಟುತ್ತಾನೆ. ಇಂತಹ ಹೆ‌ನ್ರಿ ಆದರ್ಶ ದೊರೆಯೂ ಹೌದು. ಜೀವನದ ಎಲ್ಲ ವ್ಯಂಗ್ಯಗಳನ್ನೂ ಸ್ವೀಕರಿಸಬಲ್ಲ ಶೇಕ್ಸ್‌ಪಿಯರ್‌ನ ದರ್ಶನವಿದು.

ಇಂದಿರಾಗಾಂಧಿ ನಮ್ಮೆಲ್ಲರ ಮೆಚ್ಚುಗೆ ಗಳಿಸಿದ ಕೆಲವು ಘಟನೆಗಳಿವೆ. ಬಾಂಗ್ಲಾ ಯುದ್ಧದ ಸಮಯದಲ್ಲಿ ಅವರು ಅಮೇರಿಕಾಕ್ಕೆ ನಿಕ್ಸನ್‌ರನ್ನು ನೋಡಲು ಹೋದಾಗ, ಚೀನದ ಜೊತೆ ಸ್ನೇಹಮಾಡಿದ ನರಿ ನಿಕ್ಸನ್ ಅವರನ್ನು ಗೌರವದಿಂದ ಕಾಣಲಿಲ್ಲವೆಂತೆ. ಇಂದಿರಾಜಿ ಮಾರನೇ ದಿನ ತಾನು ಭೇಟಿಯಾಗಬೇಕಾದ ಸರ್ಕಾರಿ ಮಂದಿಗಳನ್ನು ಬದಿಗಿಟ್ಟು ಪ್ರಾಯಶಃ ಕುಟಿಲ ರಾಜಕಾರಣಿ ನಿಕ್ಸನ್‌ಗೆ ಗೊತ್ತೇ ಇರದಿದ್ದ ಅಮೇರಿಕಾದ ಪ್ರಸಿದ್ಧ ಸಾಹಿತಿ, ಚಿಂತಕಿ ಸುಸಾನ್ ಸೊಂಟಾಗ್ ಜೊತೆ ಬ್ರೇಕ್‌ಫಾಸ್ಟ್ ಮಾಡಿದ ಸುದ್ದಿ ಅಮೆರಿಕಾದ ಎಲ್ಲ ಧೀಮಂತರ ಮೆಚ್ಚುಗೆ ಗಳಿಸಿತು. ನಾನು ಬಲವಾಗಿ ನಂಬಿರುವುದು ಶಾರದಾ ಪ್ರಸಾದರೇ ಈ ಭೇಟಿಯನ್ನು ಏರ್ಪಾಡು ಮಾಡಿರಬಹುದು ಎಂದು.

(ಉದಯವಾಣಿ ಸಾಪ್ತಾಹಿಕ ಸಂಪದ ಸೆಪ್ಟೆಂಬರ್ ೨೦೦೮)

* * *

ನಾನು ಕೇಳಿ ಹೇಳಿದ ಕಥೆಗಳನ್ನು ಶಾರದಾ ಪ್ರಸಾದರ ತಮ್ಮ ರಾಜಗೋಪಾಲರು ತಿದ್ದಿ ಸತ್ಯವನ್ನು ಹೇಳಿದ್ದಾರೆ. ಅವರ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಈ ಮಾಹಿತಿಗಾಗಿ ನಾನು ಕೃತಜ್ಞ. ರಾಜಗೋಪಾಲರ ಈ ಪತ್ರ ಅವರ ಕುಟುಂಬದ ಸತ್ಯನಿಷ್ಠೆತೆಗೊಂದು ನಿದರ್ಶನ.

– ಅನಂತಮೂರ್ತಿ,

ಶೌರಿಯನ್ನು ಕುರಿತ ನಿಮ್ಮ ಲೇಖನ ತುಂಬ ರಸವತ್ತಾಗಿದೆ, ಜೀವಂತವಾಗಿದೆ. ಮೂವರು ಪ್ರಧಾನಿಗಳಿಗೆ ವಾರ್ತಾಸಲಹೆಗಾರರಾಗಿ ಕೆಲಸ ಮಾಡಿದ್ದರು ಎಂಬುದನ್ನೇ ಮತ್ತೆ ಮತ್ತೆ ಹೇಳುವ ನೀರಸ ಲೇಖನಗಳನ್ನು ಓದಿ ಬೇಸತ್ತವರಿಗೆ ಲೇಖನ ಅವರ ಇನ್ನೊಂದು ಮುಖವನ್ನು ಪರಿಚಯ ಮಾಡಿಕೊಡುತ್ತದೆ.

ಶಾರದಾ ಪ್ರಸಾದರ ಬಗ್ಗೆ ಅವರ ವಿದ್ಯಾರ್ಥಿ ದೆಸೆಯಲ್ಲೇ ಹಲವಾರು ಕತೆಗಳು ಹರಡಿದ್ದವು. ಮೈಸೂರು ಯೂನಿವರ್ಸಿಟಿಯ ಲೈಬ್ರರಿಯಲ್ಲಿ ಅವರು ಓದದೇ ಇರುವ ಪುಸ್ತಕವೇ ಇಲ್ಲವಂತೆ ಎಂಬುದೂ ಅಂಥದೊಂದು. ಅದರ ಬಗ್ಗೆ ಕಂಡಿದ್ದನ್ನೆಲ್ಲ ಓದಬೇಕನ್ನ್ಉವಂಥ ಮೂರ್ಖನಲ್ಲ ನಾನು ಎಂದು ನಗೆಯಾಡಿ ಹೇಳಿದ್ದರು. ತಮ್ಮ ಲೇಖನದಲ್ಲೂ ಅಂಥ ಒಂದು ದಂತಕತೆ ಸೇರಿದೆ. ಅವರು ಜೈಲಿನಿಂದಲೇ ಬಿ.. (ಆನರ್ಸ್) ಪರೀಕ್ಷೆ ತೆಗೆದುಕೊಂಡು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು ಎನ್ನುವುದು. (ಇದಕ್ಕೆ ಪ್ರಿನ್ಸಿಪಲ್ ರಾಲೋ ಅಡ್ಡಿ ಬರಲಿಲ್ಲಜೈಲಿನಿಂದಲೇ ಪರೀಕ್ಷೆ ತೆಗೆದುಕೊಳ್ಳುವುದಕ್ಕಾಗಲೀ, ಅವರಿಗೆ ಪ್ರಥಮ ಸ್ಥಾನ ಕೊಡುವುದಕ್ಕಾಗಲೀಎನ್ನುವುದರಿಂದ ಇದು ಮುಖ್ಯವಾಗಿ ರಾಲೋರವರನ್ನು ಹೊಗಳುವ ಕತೆಯಾಗಿದೆ.)

ಅವರ ತಮ್ಮನಾಗಿ ನನಗೆ ತಿಳಿದ ಸಂಗತಿ ಇದು (ಇದನ್ನು ಮನೆಯವರೊಂದಿಗೆ ಕೇಳಿ ಖಚಿತಪಡಿಸಿಕೊಂಡಿದ್ದೇನೆ): ಶಾರದಾ ಪ್ರಸಾದರು ೧೯೪೨ರ ಕ್ವಿಟ್ ಇಂಡಿಯ ಚಳವಳಿ ಸೇರಿ ಕಾಲೇಜು ಬಿಟ್ಟಾಗ ೨ನೇ ಇಂಗ್ಲಿಷ್ ಆನರ್ಸ್ ತರಗತಿಯಲ್ಲಿದ್ದರು. ಅವರಿಗೆ ೧೮ ತಿಂಗಳ ಸಜೆ ವಿಧಿಸಿದ್ದರೂ ಅವರನ್ನು ಅದಕ್ಕಿಂತ ಮುಂಚೆಯೆ ಜೈಲಿನಿಂದ ಬಿಡುಗಡೆ ಮಾಡಿದರು. ೧೯೪೫ರಲ್ಲಿ ಮೂರನೇ ಆನರ್ಸ್ ಮುಗಿಸಿದರು. ಅವರು ಒಬ್ಬ ಉತ್ತಮ ವಿದ್ಯಾರ್ಥಿ ಎಂದು ಹೆಸರು ಪಡೆದಿದ್ದವರು. ಒಂದು ವರ್ಷದ ರಾಜಕೀಯ ಚಟುವಟಿಕೆ ಅವರ ವಿದ್ಯಾರ್ಥಿ ಶಿಸ್ತಿಗೆ ಅಡ್ಡಿಬರಲಿಲ್ಲ. ಪರೀಕ್ಷೆಗೆ ತುಂಬ ಮುತುವರ್ಜಿಯಿಂದ ಓದುತ್ತಿದ್ದರು. ಅವರೂ, ಅವರ ಆನರ್ಸ್ ತರಗತಿಯ ಸಹಪಾಠಿಗಳೂ ಹಲವರು ಸೇರಿ ಜೊತೆಯಾಗಿ ಓದಿ ವಿಷಯಗಳನ್ನು ಚರ್ಚಿಸುತ್ತಿದ್ದುದು ಈಗಲೂ ನನಗೆ ನೆನಪಿಗೆ ಬರುತ್ತದೆ. ಆಗ ಮನೆಗೆ ಹೆಚ್ಚಾಗಿ ಬರುತ್ತಿದ್ದ ಅವರ ಗೆಳೆಯರು: ಶ್ರೀಗಳಾದ ಎಸ್. ಅನಂತನಾರಾಯಣ, ಎಂ.ಎಸ್. ವರದರಾಜನ್, ಎನ್.ವಿ. ಕೃಷ್ಣಮೂರ್ತಿ, ವಿ. ನಾಗರಾಜ ರಾವ್ಇವರುಗಳು ಎಂದು ಜ್ಞಾಪಕ.

ನಿಮ್ಮಂಥ ಪ್ರಮುಖ ಲೇಖಕರೊಬ್ಬರು ಇಂಥ ಕತೆಗಳನ್ನು ತಮ್ಮಲೇಖನದಲ್ಲಿ ಬಳಸಿದಾಗ, ಅದು ಒಂದು ಕತೆಯಷ್ಟೆ ಎಂದು ಹೇಳಿದ್ದರೂ ಜನ ಅದಕ್ಕೆ ಕೊಡಬೇಕಾದ್ದಕ್ಕಿಂತ ಹೆಚ್ಚಿನ ಮನ್ನಣೆ ಕೊಟ್ಟು ಅದನ್ನು ನಿಜ ಎಂದೇ ಪರಿಗಣಿಸುವ ಸಂಭವ ಹೆಚ್ಚು. ವಸ್ತುನಿಷ್ಠತೆಗೆ ತುಂಬ ಬೆಲೆ ಕೊಡುತ್ತಿದ್ದ ಶಾರದಾ ಪ್ರಸಾದರ ಬಗೆಗೇ ಹೀಗಾಗದಿರಲಿ ಎಂದು ಇದನ್ನು ಹೇಳುತ್ತಿದ್ದೇನೆ. ಇಂಥ ಕತೆಗಳಿಲ್ಲದೆಯೇ ಅವರ ಜೀವನ ಸಾಕಷ್ಟು ಸ್ವಾರಸ್ಯದಿಂದ ತುಂಬಿತ್ತು. ನಿಮ್ಮ ಲೇಖನವೇ ತೋರಿಸುವಂತೆ.

– ಎಚ್.ವೈ. ರಾಜಗೋಪಾಲ್
ಮೀಡಿಯಾ, ಪೆನ್ಸಿಲ್ವೇನಿಯಾ, ಯು.ಎಸ್.ಎ.

* * *