ದಲಾಯ್ ಲಾಮಾ ಕುರಿತು ಬರೆಯಲು ಹೊರಟ ಈ ಕ್ಷಣ ನನಗೆ ನೆಪಾಗುವುದು ಗತಿಸಿರುವ ನನ್ನ ಇಬ್ಬರು ಗೆಳೆಯರಾದ ರಾಮಚಂದ್ರ ಗಾಂಧಿ ಮತ್ತು ನಿರ್ಮಲ್ ವರ್ಮ ಜತೆಯಲ್ಲಿ ನಡೆಸಿದ ಚರ್ಚೆಗಳು.

ನಾವಿಂದು ಚಿಂತಿಸುವ ಮಾದರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಭಾರತೀಯ ರಾಜಕೀಯ ಚಿಂತಕರನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿಸಬಹುದು. ಒಂದು ಗಾಂಧೀವಾದಿಗಳದ್ದು ಮತ್ತೊಂದು ನೆಹರೂವಾದಿಗಳದ್ದು ಎಂದು ಒಮ್ಮೆ ನಾನು ಹೇಳಿದ್ದು ನೆನಪಾಗುತ್ತಿದೆ. ಈ ದೃಷ್ಟಿಯಿಂದ ನೋಡಿದರೆ ಭಾರತದ ಕಮ್ಯುನಿಸ್ಟರೂ ಮೂಲತಃ ನೆರಹರೂವಾದಿಗಳು. ಇದೇ ಪರಿಕಲ್ಪನೆಯನ್ನು ಮತ್ತೊಂದು ಚರ್ಚೆಯ ಸಂದರ್ಭದಲ್ಲಿ ಇನ್ನೊಂದು ರೀತಿಯಲ್ಲಿ ಮಂಡಿಸಿದ್ದೆ. ‘ಭಾರತವನ್ನು ಬ್ರಿಟಿಷ್ ಆಡಳಿತದಿಂದ ವಿಮೋಚಿಸಲು ಹೋರಾಡಿದ ನೆಹರು ಭಾವನಾತ್ಕವಾಗಿ ಪಶ್ಚಿಮದ ವಿರೊಧಿ. ಆದರೆ ಬೌದ್ಧಿಕವಾಗಿ ನೆರಹು ಪಶ್ಚಿಮದ ಉತ್ಪನ್ನವೇ ಆಗಿದ್ದರು. ಇದಕ್ಕೆ ತದ್ವಿರುದ್ಧವಾಗಿ ಗಾಂಧಿ ಯಾವತ್ತು ಭಾವನಾತ್ಮಕವಾಗಿಯುರೋಪಿನ ವಿರೋಧಿಯಾಗಿರಲಿಲ್ಲ. ಆದರೆ ಬೌದ್ಧಿಕವಾಗಿ ಅವರು ಪಾಶ್ಚಿಮಾತ್ಯ ಚಿಂತನಾ ವಿಧಾನಗಳ ವಿರೋಧಿಯಾಗಿದ್ದರು.’

ಈ ಪರಿಕಲ್ಪನೆಗಳ ಸಂಪೂರ್ಣವಾಗಿ ನನ್ನವೇ ಎಂದು ಹೇಳಲು ಸಾಧ್ಯವಿಲ್ಲ. ಇವುಗಳ ಮೂಲ ಡಾ. ಲೋಹಿಯಾ ಅವರ ರಾಜಕೀಯ ತಾತ್ವಿಕತೆಯ ಪರಿಕಲ್ಪನೆಗಳಲ್ಲಿವೆ. ಲೋಹಿಯಾ ಕೂಡಾ ನೆಹರೂರಂತೆಯೇ ಪಶ್ಚಿಮವನ್ನು ಅಭಿಮಾನಿಸಿದವರು. ಆದರೆ ಅವರದನ್ನು ಕಳಚಿಕೊಂಡು ಗಾಂಧೀವಾದಿಯಾದವರು. ನಾನೂ ನೆಹರೂ ಯುಗದ ಸೃಷ್ಟಿಯೇ ಎಂಬುದನ್ನು ನೆನಪಿಟ್ಟುಕೊಂಡೇ ಇವನ್ನೆಲ್ಲಾ ಹೇಳುತ್ತಿದ್ದೇನೆ. ನನ್ನಜೀವನ ವಿಧಾನ, ನನ್ನೊಳಗಿರುವ ಅಭಿಲಾಷೆಗಳೆಲ್ಲವೂ ನೆಹರೂ ಯುಗದವೇ. ಆದರೆ ನಾನು ನನ್ನ ವಿರುದ್ಧವೇ ಮಾತನಾಡಬೇಕಾದ ಅಗತ್ಯವೂ ನನಗಿದೆ. ಇದರ ಮೂಲಕ ಗಾಂಧಿ ಕನಸಿನ ನವ ಭಾರತಕ್ಕೆ ದಾರಿಯನ್ನು ಮಾಡಿಕೊಡಬೇಕಿದೆ.

ನಮ್ಮ ನಡುವೆ ಗಾಂದಿ ಹೇಗೆ ಜೀವಿಸಿದ್ದಾರೆ? ಅವರು ನಮ್ಮ ರೈತರು, ಕೊಳೆಗೇರಿ ನಿವಾಸಿಗಳು ನಡೆಸುತ್ತಿರುವ ಅಹಿಂಸಾತ್ಮಕ ಹೋರಾಟಗಳಲ್ಲಿ, ಮೇಧಾ ಪಾಟ್ಕರ್ ಅವರ ಭಾವೋಜ್ವಲ ಮಾತು ಹಾಗೂ ಕೃತಿಯಲ್ಲಿ ಮತ್ತು ಆದಿವಾಸಿಗಳನ್ನು ನಿರ್ವಸಿತ ರನ್ನಾಗಿಸುವ ಬುದ್ಧಿಹೀನ ಅಭಿವೃದ್ಧಿಯನ್ನು ವಿರೋಧಿಸುವ ಎಲ್ಲರ ಕೆಲಸಗಳಲ್ಲಿ ಇಂದು ಗಾಂಧಿ ಬದುಕಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ನನ್ನ ಮನಸ್ಸಿಗೆ ಬರುತ್ತಿರುವುದು ದಲಾಯ್ ಲಾಮ ನೇತೃತ್ವ ನೀಡಿರುವ ಟಿಬೆಟ್‌ನ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗಾಗಿ ನಡೆಯುತ್ತಿರುವ ಅಹಿಂಸಾತ್ಮಕ ಹೋರಾಟ. ಗಾಂಧೀಜಿ ಈ ಹೋರಾಟದಲ್ಲಿ ಜೀವಂತವಾಗಿದ್ದಾರೆ.

ಇದರ ಜೊತೆಗೇ ಮತ್ತೊಂದು ವ್ಯಂಗ್ಯವನ್ನೂ ಇಲ್ಲಿ ಹೇಳಲೇ ಬೇಕಾಗಿದೆ. ಗಾಂಧೀಜಿ ಜನಸಾಮಾನ್ಯರ ಹಾಸ್ಯದ ಮಾತುಗಳಲ್ಲೂ ಬದುಕಿದ್ದಾರೆ. ಹೆಚ್ಚು ಕಷ್ಟಪಡದೆ ಪರೀಕ್ಷೆಯಲ್ಲಿ ಪಾಸಾದವನನ್ನು ‘ಗಾಂಧಿ ಪಾಸ್’ ಎನ್ನುತ್ತೇವೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಭ್ರಷ್ಟ ಮಾರ್ಗಗಳನ್ನು ಅನುಸರಿಸುವವರೂ ತಾವು ಸೋತಾಗ: ‘ಈ ಕಾಲದಲ್ಲಿ ಮಹಾತ್ಮಾ ಗಾಂಧಿ ಎಲೆಕ್ಷನ್‌ಗೆ ನಿಂತಿದ್ದರೂ ಸೋಲುತ್ತಿದ್ದರು’ ಎಂಬ ಸಿನಿಕ ಹೇಳಿಕೆ ನೀಡುತ್ತಾರೆ.

ಕೋಟಿನ ಗುಂಡಿಗೆ ಕೆಂಪು ಗುಲಾಬಿ ಸಿಕ್ಕಿಕೊಳ್ಳುತ್ತಿದ್ದ ನೆಹರೂ ಒಂದು ತಲೆಮಾರಿನ ಆಧುನಿಕತೆಯ ಅಭಿಲಾಷೆಯನ್ನು ಪ್ರತಿನಿಧಿಸುತ್ತಿದ್ದರು. ಗಾಂಧಿ ಇದೇ ಹೊತ್ತಿನಲ್ಲಿ ಪಶ್ಚಿಮಕ್ಕೊಂದು ಪರ್ಯಾಯವನ್ನು ಹುಡುಕುವ ಕನಸನ್ನು ಪ್ರತಿನಿಧಿಸಿದ್ದರು. ಸಮಾಜವಾದಿಗಳಾದ ನಾವು ಅವರಿಬ್ಬರ ನಡುವಣ ವ್ಯತ್ಯಾಸವನ್ನು ಅರ್ಥ ಮಾಡಿ ಕೊಂಡದ್ದೇ ಹೀಗೆ. ರಾಮಚಂದ್ರ (ರಾಮು) ಗಾಂಧೀಗೆ ರಮಣ ಮಹರ್ಷಿಗಳ ಅದ್ವೈತ ಗಾಂಧೀಜಿಯ ಕರ್ಮಯೋಗದಷ್ಟೇ ಮುಖ್ಯವಾಗಿತ್ತು. (ನೌಖಾಲಿಯ ಪಾದಯಾತ್ರೆಯಲ್ಲಿ ಬಹಳ ದೊಡ್ಡ ರೂಪಕ.) ಅವರು ಯಾವಾಗಲೂ ನೆಹರೂರನ್ನು ತಮ್ಮ ಉತ್ತರಾಧಿಕಾರಿಯೆಂದು ಆರಿಸಿಕೊಂಡದ್ದು ಗಾಂಧಿಯ ದೂರದೃಷ್ಟಿಯ ‘ಉಪಾಯ’ವಾಗಿತ್ತು ಎಂದು ವಾದಿಸುತ್ತಿದ್ದರು. ಅವರ ಅಭಿಪ್ರಾಯದಲ್ಲಿ ಗಾಂಧಿಯ ಉತ್ತರಾಧಿಕಾರಿಯಾಗಿ ಬಂದ ನೆಹರು ಒಂದು ತಲಮಾರಿನ ಆಧುನಿಕ ನಾಗರಿಕತೆಯ ಅಭೀಪ್ಸೆಯನ್ನು ಪ್ರತಿನಿಧಿಸುತ್ತಿದ್ದರು. ಈ ಅಭೀಪ್ಸೆಯನ್ನು ಅಷ್ಟು ಸುಲಭದಲ್ಲಿ ಕಡೆಗಣಿಸಲು ಸಾಧ್ಯವಿರುವಂಥದ್ದಾಗಿರಲಿಲ್ಲ. ಹಾಗೆಯೇ ನೆಹರು ಆಧುನಿಕನಾಗರಿಕತೆ ಕುರಿತಂತೆ ತಮಗಿದ್ದ ಹ್ಯಾಮ್ಲೆಟಿಯನ್ ಅನಿಶ್ಚಿತತೆಯಲ್ಲೇ ಗಾಂಧಿ ‘ಕನಸಿ’ಗೂ ಒಂದು ಅವಕಾಶ ಕಲ್ಪಿಸಿ ಕೊಡುವುದು ಸಾಧ್ಯವೆಂದು ಚಿರಕಾಲದ ರಾಜಕಾರಣದಲ್ಲಿ ಸಂಭವಿಸಬಹುದಾದ ಸತ್ಯದ ಅವಧಾನಿಗಳಾದ ಗಾಂಧಿ ನಂಬಿದ್ದರು. ಗಾಂಧಿ ಒಂದು ವೇಳೆ ಸರದಾರ್ ಪಟೇಲ್ ಅಥವಾ ರಾಜಾಜಿಯನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆರಿಸಿಕೊಂಡಿದ್ದರೆ ಅಂದಿನ ಅಶಾಂತ ಭಾರತ ಈ ಆಯ್ಕೆಯನ್ನೇ ನಿರಾಕರಿಸಿಬಿಡುವ ಸಾಧ್ಯತೆ ಇತ್ತು. ಹೀಗೆ ಗಾಂಧೀ ಒಂದು ‘ಉಪಾಯ’ (ಉಪ+ಆಯ=ಸತ್ಯಕ್ಕೆ ಹತ್ತಿರವಾಗುವ ಕ್ರಮ) ಮಾಡಿ ನೆಹರೂರನ್ನು ಆರಿಸಿಕೊಂಡರು.

ರಾಮೂ ಗಾಂಧಿ, ನೆಹರೂಗೆ ಗಾಂಧೀಜಿಯ ಜತೆಗಿದ್ದ ಬಂಧಕ್ಕೆ ಉದಾಹರಣೆಯಾಗಿ ನೀಡುತ್ತಿದ್ದ ಘಟನೆ ಇದು: ದಲಾಯ್ ಲಾಮಾ ಭಾರತದಲ್ಲಿ ರಾಜಕೀಯ ಆಶ್ರಯ ಕೇಳಿದಾಗ ನೆಹರೂಗೆ (ಚೀನಾದ ಕಮ್ಯುನಿಸ್ಟ್ ಆಡಳಿತದ ಬಗ್ಗೆ ಅವರಿಗೆ ಒಲವಿದ್ದರೂ) ಗಾಂಧಿ ನೆನಪಾಗಿ ದಲಾಯ್ ಲಾಮಾಗೆ ಆಶ್ರಯ ನೀಡುವುದು ಆಧ್ಯಾತ್ಮಿಕ ಬದ್ಧತೆಯೆನಿಸಿರಬಹುದು.

ದಲಾಯ್‌ಲಾಮಾ ನಮ್ಮ ಮಟ್ಟಿಗೆ ಏನನ್ನು ಪ್ರತಿನಿಧಿಸುತ್ತಾರೆ ಎಂಬುದಕ್ಕೆ ಸಂಬಂಧಿಸಿದಂತೆ ನಮ್ಮ ಕಾಲದ ಶ್ರೇಷ್ಠ ಹಿಂದೀ ಲೇಖಕ ನಿರ್ಮಲ್ ವರ್ಮಾ ಅನೇಕ ಬಾರಿ ಚರ್ಚಿಸಿದ್ದರು. ದಲಾಯ್ ಲಾಮಾಗೆ ಸಂಬಂಧಿಸಿದ ಒಂದು ಘಟನೆಯಂತೂ ದಲಾಯ್ ಲಾಮಾ ಕುರಿತಂತೆ ನಾನು ಬರೆದ ಕವಿತೆಯೊಂದರಲ್ಲಿ ರೂಪಕವಾಗಿದೆ.

ಟಿಬೆಟ್‌ನ ಈ ಮಹಾ ಸನ್ಯಾಸಿ ದಿಲ್ಲಿಯಲ್ಲಿ ಟಿಬೆಟ್‌ನ ಸ್ವಾಯತ್ತತೆಗೆ ಸಂಬಂಧಿಸಿದಂತೆ ತನ್ಮಯನಾಗಿ ಮಾತನಾಡುತ್ತಿದ್ದರು. ಅವರ ಮಾಮೂಲು ಶೈಲಿಯಲ್ಲಿ ಸರಿಯಾದ ಇಂಗ್ಲಿಷ್ ಪದಕ್ಕಾಗಿ ಹುಡುಕುತ್ತಾ ನಗುತ್ತಿದ್ದರು. ಅವರನ್ನು ಕೇಳುತ್ತಿದ್ದವರಿಗೆ ಇಂಗ್ಲಿಷ್ ಮತ್ತೆ ಹುಟ್ಟುತ್ತಿದ್ದೆಯೇನೋ ಎಂದು ಭಾವಿಸುವಂಥ ವಾತಾವರಣ ಅದು. ಜಗತ್ತಿನ ಅತಿ ಪ್ರಾಚೀನ ಮತ್ತು ವಿಶಿಷ್ಟವಾದ ನಾಗರಿಕತೆಯ ವಿರುದ್ಧ ಚೀನಾದ ರಾಷ್ಟ್ರೀಯವಾದಿ ಹಿಂಸೆಯನ್ನು ವಿವರಿಸಲು ತಾವು ನಡೆಸುತ್ತಿರುವ ಹೋರಾಟದ ಮಧ್ಯೆಯೇ ಆ ಸನ್ಯಾಸಿ ಮನದುಂಬಿ ನಗುತ್ತಲೂ ಇದ್ದರು. ಹೀಗೆ ಮಾತನಾಡುತ್ತಿರುವಾಗ ಅವರ ಉಡುಪಿನ ಮೇಲೊಂದು ಇರುವೆ ಕಾಣಿಸಿಕೊಂಡಿತು. ದಲಾಯ್‌ಲಾಮ ಮಾತು ನಿಲ್ಲಿಸಿ ಅದನ್ನು ಎಚ್ಚರಿಕೆಯಿಂದ ಎತ್ತಿಕೊಂಡು ತನ್ನೆದುರು ಇದ್ದ ಮೇಜಿನ ಮೇಲೆ ಬಿಟ್ಟು ಮಗುವಿನಂತೆ ನಕ್ಕು, ಟಿಬೆಟ್‌ನ ಸ್ವಾಯತ್ತತೆಯ ಕುರಿತ ತಮ್ಮ ಮಾತನ್ನು ಮುಂದುವರಿಸಿದರು. ಒಂದು ಸಣ್ಣ ಇರುವೆಗೂ ಸ್ಥಳವಿದೆ ಎಂಬುದು ನನ್ನನ್ನು ಗಾಢವಾಗಿ ತಟ್ಟಿತು. ಇಂಥ ಬೌದ್ಧ ಸನ್ಯಾಸಿ ಕೊನೆಯಲ್ಲಿ ಗೆಲ್ಲಲೇ ಬೇಕು ಎನಿಸಿತು.

ನನ್ನ ಅಭಿಪ್ರಾಯಗಳನ್ನು ಸಮರ್ಥಿಸುವ ಮತ್ತೊಂದು ಘಟನೆಯನ್ನೂ ಇಲ್ಲಿ ಹೇಳಬೇಕು. ಇದೂ ನನ್ನ ಕವಿತೆಯಲ್ಲಿ ಮೂಡಿ ಬಂದಿದೆ. ನಾನು ಭಾರತೀಯ ಲೇಖಕರ ನಿಯೋಗದಲ್ಲಿ ಚೀನಾಕ್ಕೆ ಹೋಗಿದ್ದೆ. ಬೀಜಿಂಗ್ ವಿಮಾನ ನಿಲ್ದಾಣದಲ್ಲಿಳಿದು ನಾವು ಇಳೀದುಕೊಳ್ಳಲು ವ್ಯವಸ್ಥೆ ಮಾಡಿದ್ದ ಹೊಟೇಲ್‌ನ ಕಡೆಗೆ ಹೋಗುವಾಗ ದಾರಿಯಲ್ಲಿ ಅನೇಕ ಸೇನಾ ಟ್ಯಾಂಕ್‌ಗಳಿಗೆ ಸುತ್ತುವರಿದಿದ್ದ ಸಣ್ಣ ಮಕ್ಕಳನ್ನುಎತ್ತಿಕೊಂಡಿದ್ದ ತಾಯಂದಿರು ಕಂಡರು. ಅವರೆಲ್ಲಾ ತಿಯಾನ್ಮೆನ್ ಚೌಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಏನೂ ಮಾಡಬೇಡಿರೆಂದು ಟ್ಯಾಂಕ್‌ಗಳಲ್ಲಿದ್ದ ಸೈನಿಕರನ್ನು ಕೇಳಿಕೊಳ್ಳುತ್ತಿದ್ದರು. ತೀವ್ರವಾಗಿ ಮನಸ್ಸನ್ನು ಕಲಕಿದ ದೃಶ್ಯವಿದು. ಕೆಲವು ಹೆಣ್ಣುಮಕ್ಕಳಂತೂ ಟ್ಯಾಂಕ್‌ಗಳ ಮೇಲೆ ಹತ್ತಿ ಸೈನಿಕರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಸೈನಿಕರು ಏನೂ ಮಾಡಲಾಗದೆ ಪೆಚ್ಚು ಪೆಚ್ಚಾಗಿ ಎತ್ತೆತ್ತಲೋ ನೋಡುತ್ತಿದ್ದರು.

ನಾವು ಹೊಟೇಲ್ ತಲುಪಿ ರಾತ್ರಿಯೂಟ ಮಾಡಿದೆವು. ನಮ್ಮ ದುಭಾಷಿ ಕೂಡಾ ಒಬ್ಬಳು ತಾಯಿಯೇ. ಆಕೆ ಹೊರಗೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸೂಚನೆ ಕೊಟ್ಟಳು. ಕಮ್ಯುನಿಸ್ಟ್ ಏಕಾಧಿಪತ್ಯದಲ್ಲಿ ವಿರುದ್ಧ ಸಿಡಿದೆದ್ದಿರುವ ಚೀನಾದ ವಿದ್ಯಾರ್ಥಿಗಳು ತಿಯಾನ್ಮೆನ್ ಚೌಕದಲ್ಲಿ ಅಮೆರಿಕದಲ್ಲಿರುವಂಥ ಸ್ಟಾಚ್ಯು ಆಫ್ ಲಿಬರ್ಟಿಯನ್ನು ಸ್ಥಾಪಿಸಿದ್ದರು. ಸ್ಟಾಚ್ಯು ಆಫ್ ಲಿಬರ್ಟಿಯ ಆಯ್ಕೆ ನನಗೆ ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತಿತ್ತು. ಅಮೆರಿಕ ಸರಕಾರ ವಿಯಟ್ನಾಂನ ಬಡಪಾಯಿ ಜನತೆಯ ಜತೆಗೆ ಅನಗತ್ಯವಾಗಿ ಒಂದು ದೊಡ್ಡ ಯುದ್ಧವನ್ನು ನಡೆಸಿತು. ಅಮೆರಿಕಾದ ಹುನ್ನಾರಗಳನ್ನು ಅರಿಯದ ತಿಯಾನ್ಮೆನ್‌ಚೌಕದಲ್ಲಿ ಧರಣಿ ಕುಳಿತಿದ್ದ ಯುವಕರೆಲ್ಲಾ ನನಗೆ ಯುವ ಕನಸುಗಾರರಂತೆ ಕಾಣಿಸುತ್ತಿದ್ದರು. ವ್ಯಂಗ್ಯವೆಂದರೆ ಮಾವೋತ್ಸೇ ತುಂಗನಂಥ ನಾಐಕ ಆರಂಭಿಸಿದ ಲಾಂಗ್ ಮಾರ್ಚ್ ಅಮೆರಿಕದ ಸ್ವರ್ಗೀಯ ಪಾನೀಯವಾದ ಕೋಕಾಕೋಲಾವನ್ನು ಕುಡಿಯುವುದರಲ್ಲಿ ಕೊನೆಗೊಳ್ಳುತ್ತದೆ ಎಂಬ ಭಾವವನ್ನು ಹುಟ್ಟಿಸುವಂತೆ ಈಗಿನ ಚೀನಾದ ಆಡಳಿತಗಾರರು ವರ್ತಿಸುತ್ತಿದ್ದಾರೆ.

ಆ ದಿನಕ್ಕೆ ಹಿಂದಿರುಗೋಣ: ಬೀಜಿಂಗ್‌ನ ಪಂಚತಾರಾ ಹೋಟೇಲುಗಳ ಒಳಗಾಗಲೇ ಚೀನೀ ಸೇನಾ ಟ್ಯಾಂಕ್‌ಗಳು ಹಲವಾರು ವಿದ್ಯಾರ್ಥಿಗಳನ್ನು ಕೊಂದ ಸುದ್ದಿ ಪಿಸುಮಾತಿನಲ್ಲೇ ಹರಡಿಬಿಟ್ಟಿತ್ತು. ನಾವು ಟಿ.ವಿ. ಸೆಟ್‌ಗಳನ್ನು ಆನ್‌ಮಾಡಿದರೆ ಪ್ರಸಾರವಾಗುತ್ತಿದ್ದ ಸರಕಾರೀ ಚಾನೆಲ್‌ಒಂದು ಚೀನಾದ ಯಾವುದೋ ಮೂಲೆಯಲ್ಲಿದ್ದ ಜನಪದ ಸಂಸ್ಕೃತಿಯ ವೈಶಿಷ್ಟ್ಯದ ಬಗೆಗಿನ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುತ್ತಿತ್ತು. ಮಾರನೇ ದಿನ ನಾವು ರಸ್ತೆಗಳಲ್ಲಿ ರಕ್ತದ  ಕಲೆಗಳನ್ನು ಕಂಡೆವು.

ಚೀನಾದ ಪ್ರಮುಖ ಉರ್ದು ವಿದ್ವಾಂಸರೊಬ್ಬರು ನಮ್ಮನ್ನು ಭೇಟಿಯಾಗಲು ಬಂದರು. ನಮ್ಮ ತಂಡದಲ್ಲಿದ್ದ ಉರ್ದು ಬರೆಹಗಾರರ ಜತೆ ಮಾತನಾಡಿದ ಅವರು ‘ಸೇನಾ ಕಾರ್ಯಾಚರಣೆಯ ವಿರುದ್ಧ ಉರ್ದುವಿನಲ್ಲಿ ಬರೆದಿದ್ದೇನೆ. ನಾನು ಚೀನೀ ಭಾಷೆಯಲ್ಲಿ ಬರೆದದ್ದನ್ನು ಚೀನಾದಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಭಾರತದ ಉರ್ದು ಲೇಖಕರು ಇದನ್ನು ಓದಿ ನೆನಪಿಟ್ಟುಕೊಂಡರೆ ಸಾಕು. ಭಾರತದಲ್ಲಿ ಮೌಖಿಕ ಸಂಸ್ಕೃತಿ ಇನ್ನೂ ಉಳಿದಿರುವುದರಿಂದ ಇದು ನೆನಪಿನಲ್ಲಿ ಉಳಿಯಬಹುದು’ ಎಂದರು.

ನಮ್ಮ ಸಂಸ್ಕೃತಿಯ ಬಗ್ಗೆ ಅವರಿಗಿದ್ದು ನಂಬಿಕೆಯನ್ನು ಕಂಡು ನನಗೆ ಎದೆತುಂಬಿ ಬಂತು.

ಯುವಕರ ಕಗ್ಗೊಲೆಗೆ ನಾವು ರೈಟರ್ಸ್ ಬಿಲ್ಡಿಂಗ್‌ನಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ ಮರುದಿನ ಭಾರತಕ್ಕೆ ಹಿಂದಿರುಗಿದೆವು.; ನಾವು ಚೀನಾವನ್ನು ಬಿಡುವ ಮೊದಲು ಯುವ ರಾಜತಾಂತ್ರಿಕನೊಬ್ಬ ಹೇಳಿದ ಮಾತನ್ನು ಮಾತ್ರ ನನಗೆ ಮರೆಯಲು ಸಾಧ್ಯವಿಲ್ಲ. ಇದು ನನ್ನ ದಲಾಯ್ ಲಾಮಾ ಕವಿತೆಯಲ್ಲೂ ಇದೆ. ಭಾರತದಲ್ಲಿ ನಾವು ಮಹಾತ್ಮಾ ಗಾಂಧಿ ತಮ್ಮ ಜೀವನದ ಉದ್ದಕ್ಕೂ ಎತ್ತಿ ಹಿಡಿದ ಒಂದು ಹೇಳಿಕೆ ‘ಸತ್ಯಮೇವ ಜಯತೇ’. ಚೀನಾದ ರಾಜತಾಂತ್ರಿಕ ಹೇಳಿದ್ದು. ಚೀನಾದ ಕಮ್ಯುನಿಸ್ಟರು ನಂಬಿದ್ದು ಇದಕ್ಕೆ ನೇರ ವಿರುದ್ಧವಾದ ಮಾತು ‘ಯಾವುದು ಗೆಲ್ಲುತ್ತದೆಯೋ ಅದು ಸತ್ಯವಾಗುತ್ತದೆ’.

ದಲಾಯ್ ಲಾಮಾ ಟಿಬೆಟ್‌ನ ಸಮಸ್ಯೆ ಕುರಿತ ಮಾತಿನಲ್ಲಿ ಮುಳುಗಿರುವಾಗಲೂ ಅವರ ಪ್ರಜ್ಞೆಯಲ್ಲಿ ಇರುವೆಗೂ ಒಂದು ಅವಕಾಶವಿದೆ. ಅದರಿಂದಾಗಿಯೇ ನಾನು ನನ್ನ ಕವಿತೆಯಲ್ಲಿ ಹೇಳಿದೆ-ಸತ್ಯಮೇವ ಜಯತೇ.

* * *

ತಿಯಾನ್ಮೆನ್ ಚೌಕದ ಪ್ರಕರಣದ ನಡೆದ ಕೆಲವು ವರ್ಷಗಳ ನಂತರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಭಾರತೀಯ ಲೇಖಕರ ನಿಯೋಗವೊಂದನ್ನು ಚೀನಾಕ್ಕೆ ಕರೆದೊಯ್ದಿದ್ದೆ. ನಾವು ಭೇಟಿಯಾಗುವ ಎಲ್ಲಾ ಮುಖ್ಯ ಲೇಖಕರ ಜತೆಗೆ ನಿಯೋಗದಲ್ಲಿದ್ದ ಎಲ್ಲಾ ಲೇಖಕರ ಪರವಾಗಿ ಕೆಲವು ಮಾತುಗಳನ್ನು ಹೇಳುವುದಕ್ಕೆ ನಾನು ಅನುಮತಿಯನ್ನೂ ಪಡೆದಿದ್ದೆ. ಔಪಚಾರಿಕ ಮಾತುಗಳ ನಂತರ ನಾನು ಹೇಳುತ್ತಿದ್ದ ಮಾತುಗಳಿವು: ‘ನಾವು ಹೇಳುತ್ತಿರುವುದಕ್ಕೆ ನೀವು ಪ್ರತಿಕ್ರಿಯಿಸಬೇಕಾಗಿಲ್ಲ. ‘ರಾಷ್ಟ್ರೀಯ’ವಾದ (nationalism) ನಮ್ಮನ್ನು ಕೆಲವೊಮ್ಮೆ ಅಸಹನೆಯತ್ತ ಕೊಂಡೊಯ್ಯಬಹುದು. ಅದರಲ್ಲೂ ಮಾರ್ಕ್ಸ್‌‌ವಾದೀ ತಾತ್ವಿಕತೆಯಂತೂ ನಮ್ಮ ಎಲ್ಲಾ ಸಮಸ್ಯೆಗಳಿಗೂ-ನೈತಿಕ ಇಟ್ಟುಕೊಂಡಿರುವುದರಿಂದ ಸಮಸ್ಯೆ ಮತ್ತಷ್ಟು ಸೂಕ್ಷ್ಮವಾದುದು. ಆದರೆ ಬರೆಹಗಾರರಾದ ನಿಮಗೆ ಪ್ರಾಚೀನ ಜ್ಞಾನವನ್ನು ಕಾಪಾಡಿದ ಟಿಬೆಟ್‌ನಂಥ ನಾಗರಿಕತೆಯ ಅಗತ್ಯವಿದೆ. ಇದು ನಿಮ್ಮ ಸ್ವಂತದ ಸಮಸ್ಯೆಗಳ ನಿವಾರಣೆಗೂ ಅಗತ್ಯವಾಗಿರಬಹುದು. ಹಾಗೆಯೇ ಬೌದ್ಧ ಮತದಿಂದ ನೀವು ಆಧ್ಯಾತ್ಮಿಕ ಒಳನೋಟಗಳನ್ನು ಪಡೆಯಬಹುದು. ಆದ್ದರಿಂದ ನಿಮ್ಮ ಸರಕಾರ ಆಧುನೀಕರಣದ ಮೂಲಕ ಟಿಬೆಟ್‌ನ ನಾಗರಿಕತೆಯನ್ನು ನಾಶ ಮಾಡಲು ತೋರಿಸುತ್ತಿರುವ ಉತ್ಸಾಹಕ್ಕೆ ನೀವು ತಡೆಯೊಡ್ಡಬೇಕು. ನಾನೊಬ್ಬ ಭಾರತೀಯನಾಗಿ ನಮ್ಮ ಕೇಂದ್ರ ಸರಕಾರ ಭಾರತದ ಬಹು ಸಂಸ್ಕೃತಿ, ಬಹು ಭಾಷೆಗಳನ್ನು ನಾಶ ಮಾಡುವ ಕೆಲಸಕ್ಕೆ ಮುಂದಾದರೆ ಅದನ್ನು ತಡೆಯುತ್ತೇನೆ’.

ಕೆಲವು ಲೇಖಕರು ನನ್ನ ಮಾತುಗಳಿಗೆ ಬೆಂಬಲ ಸೂಚಿಸಿದ್ದು ಅವರು ಕೈಕುಲುಕಿದ ಬಗೆಯಲ್ಲೇ ನನಗೆ ಅರ್ಥವಾಯಿತು. ಹೆಚ್ಚಿನವರು ತಥಾಕಥಿತ ಸಾಂಸ್ಕೃತಿಕ ಕ್ರಾಂತಿಯಿಂದ ತೊಂರೆಗೊಳಗಾದವರೇ.

ಇದಾದ ಮೇಲೇ ನಾನು ನಿರ್ಮಲ್ ವರ್ಮಾ ಜತೆಗೆ ದಲಾಯ್ ಲಾಮಾರನ್ನು ಭೇಟಿಯಾದೆ. ಅದೊಂದು ಮರೆಯಲಾಗದ ಭೇಟಿ. ಗೆಳೆಯ ನಿರ್ಮಲ್ ವರ್ಮಾ ಮಾತಿನ ಮಧ್ಯೆ ‘ನಾವು ಭಾರತೀಯರು ನಿಮಗೆ ಸಾಕಷ್ಟು ಸಹಾಯ ಮಾಡಲಿಲ್ಲ ಅನ್ನಿಸುತ್ತದೆ. ನೀವು ಅಮೆರಿಕದಲ್ಲಿ ಆಶ್ರಯ ಪಡೆದಿದ್ದರೆ, ನಿಮ್ಮ ಟಿಬೆಟ್  ಹೋರಾಟಕ್ಕೆ ಒಳ್ಳೆಯದಾಗುತ್ತಿತ್ತೇನೋ?’ ಎಂದರು. ಇದಕ್ಕೆ ದಲಾಯ್ ಲಾಮಾ ತಕ್ಷಣ ಪ್ರತಿಕ್ರಿಯಿಸಿದರು. ‘ಛೆ ಛೆ. ಅದು ಹಾಗಲ್ಲ. ನಾನು ಅಮೆರಿಕದಲ್ಲಿ ಆಶ್ರಯ ಪಡೆದಿದ್ದರೆ ಎಲ್ಲಾ ಟಿಬೆಟನ್ ಬೌದ್ಧರನ್ನು ಕಳೆದುಕೊಳ್ಳುತ್ತಿದ್ದೆ. ನಾವೆಲ್ಲಾ ಅಮೆರಿಕೀಕರಣಕ್ಕೆ ಒಲಗಾಗುತ್ತಿದ್ದೆವು. ಭಾರತ ನಮ್ಮ ತಾಯಿ. ಆಕೆ ನಮ್ಮನ್ನು ನಾವು ಹೇಗಿದ್ದೆವು ಹಾಗೆಯೇ ಉಳಿಸಿಕೊಂಡಳು.’

(ಇಂಗ್ಲಿಷ್ನಿಂದ ಅನುವಾದಎನ್..ಎಂ. ಇಸ್ಮಾಯಿಲ್)
kendasampige.com

* * *