ವಿ.ಪಿ. ಸಿಂಗ್‌ರನ್ನು ಎರಡು ಸಾರಿ ನಾನು ಭೇಟಿ ಮಾಡಿದ್ದೆ. ಆ ನೆನಪುಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ನನ್ನ ಗೆಳೆಯ ಅಶೋಕ ವಾಜಪೇಯಿ ಮಧ್ಯಪ್ರದೇಶದ ಸಾಂಸ್ಕೃತಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಅರ್ಜುನ್ ಸಿಂಗ್‌ರು ಮುಖ್ಯಮಂತ್ರಿಯಾಗಿದ್ದರು. ಅಶೋಕ್ ವಾಜಪೇಯಿ ಸ್ವತಃ ಕವಿ. ನನ್ನ ವಾರಿಗೆಯವರಲ್ಲಿ ಅವನ ಹಾಗೆ ಒಂದು ದೊಡ್ಡ ಸಂಸ್ಥೆಯನ್ನು ಕಟ್ಟಬಲ್ಲ ಶಕ್ತಿ ಇದ್ದವರನ್ನು ಕಾಣೆ. ಮುಖ್ಯಮಂತ್ರಿಯ ನಿವಾಸದ ಬಳಿಯಲ್ಲೇ ಆ ನಿವಾಸಕ್ಕಿಂತ ಅದ್ಭುತವಾದ ಒಂದು ಕಟ್ಟಡವನ್ನು ಭಾರತ ಭವನ ಎಂಬ ಹೆಸರಿನಲ್ಲಿ ಕಟ್ಟುವುದು ಅಷ್ಟೇನೂ ಸುಲಭದ ವಿಷಯವಾಗಿರಲಿಲ್ಲ. ಮುಖ್ಯಮಂತ್ರಿಯ ಹಿಂಬಾಲಕರೆಲ್ಲರೂ ತಮ್ಮ ನಾಯಕನ ಬಂಗಲೆಗಿಂತ ಸುಂದರವಾಗಿ ಕಾಣುವ ಇನ್ನೊಂದು ಕಟ್ಟಡ ಸನಿಹದಲ್ಲಿ ಇರಬಾರದೆಂದು ವಿರೋಧಿಸಿದ್ದರು. ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದಲ್ಲಿದ್ದ ಅರ್ಜುನ್ ಸಿಂಗ್‌ರು ಕಲಾವಿದರಿಗೆ ಬೇಕಾದವರು. ಅಶೋಕ್ ವಾಜಪೇಯಿಗೆ ಎಲ್ಲ ಬೆಂಬಲವನ್ನು ಕೊಟ್ಟು ಭಾರತ ಭವನ ನಿರ್ಮಾಣಕ್ಕೆ ಅವರು ಕಾರಣರಾದರು.

ನಮ್ಮೆಲ್ಲರಿಗೂ ಕೆಲವು ವರ್ಷಗಳ ತನಕ ಭಾರತ ಸಂಸ್ಕೃತಿಯ ಕೇಂದ್ರವಿದ್ದದ್ದು ದೆಹಲಿಯಲ್ಲಲ್ಲ,-ಭೋಪಾಲದಲ್ಲಿ. ಮಧ್ಯಪ್ರದೇಶದ ಹಿಂದೀವಾದಿಗಳೆಲ್ಲರ ವಿರೊಧ ವನ್ನೂ ಮೀರಿ ಅಶೋಕ್ ನಮ್ಮ ಬಿ.ವಿ. ಕಾರಂತರನ್ನು, ಜಗತ್ತಿನ ಪ್ರಸಿದ್ಧ ಚಿತ್ರಿಕಾರರಲ್ಲಿ ಒಬ್ಬರಾದ ಸ್ವಾಮಿನಾಥನ್‌ರನ್ನೂ ಈ ಭಾರತ್ ಭವನವನ್ನು ನಡೆಸಲು ಬಳಸಿಕೊಂಡರು. ಇಷ್ಟು ದೊಡ್ಡ ಕಲಾವಿದರಿಗೆ ಮಧ್ಯಪ್ರದೇಶ ಸರಕಾರ ಕೊಡುತ್ತಿದ್ದುದು ಒಬ್ಬ ಕಾಲೇಜು ಅಧ್ಯಾಪಕನ ಸಂಬಳಕ್ಕಿಂತ ಕಮ್ಮಿ. ಆದರೆ ಸ್ವಾಮಿ ಮತ್ತು ಕಾರಂತರು ತಮ್ಮ ಎಲ್ಲ ಪ್ರತಿಭೆಯನ್ನು ಧಾರೆಯೆರೆದು ಭಾರತ್ ಭವನವನ್ನು ಜಗದ್ವಿಖ್ಯಾತ ಮಾಡಿದರು. ಈ ಕಾಲದಲ್ಲೇ ಎಲ್ಲ ದೊಡ್ಡ ಸನ್ಮಾನಗಳು ದಕ್ಷಿಣ ಭಾರತೀಯರಿಗೆ ಬಂದವು.

ನನಗಿನ್ನೂ ನೆನಪಿದೆ. ಮೊದಲ ಕಬೀರ್ ಸನ್ಮಾನಕ್ಕೆ ಕವಿಯೊಬ್ಬನನ್ನು ಆಯ್ಕೆ ಮಾಡಬೇಕಿತ್ತು. ಎಲ್ಲ ಮುಖ್ಯ ಭಾರತೀಯ ಭಾಷೆಗಳ ಪ್ರತಿನಿಧಿಗಳು ಬಂದಿದ್ದರು. ಇವರೆಲ್ಲರೂ ತಮ್ಮ ತಮ್ಮ ಭಾಷೆಯ ಕವಿಗಳಿಗೆ ಮೊದಲನೆ ಕಬೀರ್ ಸನ್ಮಾನ ಬರಬೇಕೆಂದು ಆಸೆ ಪಡುವುದು ಸಹಜವೇ. ನಾಲ್ಕೈದು ಮುಖ್ಯ ಕವಿಗಳ ಹೆಸರುಗಳು ಶಾರ್ಟ್‌ಲಿಸ್ಟ್ ಆದವು. ಅದರಲ್ಲಿ ಅಡಿಗರ ಹೆಸರನ್ನು ನಾನು ಸೂಚಿಸಿದ್ದೆ. ಹೆಚ್ಚು ಚರ್ಚೆಯ ಅಗತ್ಯವೇ ಇಲ್ಲದಂತೆ ಬಂಗಾಳಿ, ಹಿಂದಿ, ಮರಾಠಿ ಭಾಷೆಯ ಪ್ರತಿನಿಧಿಗಳು ಅಡಿಗರ ಹೆಸರನ್ನು ಎತ್ತಿಕೊಂಡರು. ಈ ಬಗೆಯ ವಸ್ತುನಿಷ್ಠತೆ ಸಾಧ್ಯವಾಗುವಂತೆ ಅಶೋಕ ವಾಜಪೇಯಿ ಭಾರತ ಭವನವನ್ನು ನಡೆಸಿದರು.

ಭಾರತಭವನದ ರೂಪುರೇಷೆಗಳನ್ನು ಶ್ರೇಷ್ಠತೆಯ ಹುಡುಕಾಟಕ್ಕೆ ಅಡ್ಡಬರದಂತೆ, ಅಶೋಕ ವಾಜಪೇಯಿಗೆ ಸಹಕಾರ ಕೊಡುತ್ತ ಇದ್ದವರಲ್ಲಿ ಮುಖ್ಯರು: ತನ್ನ ಉದ್ದ ಗಡ್ಡದಲ್ಲೂ, ಕತ್ತಿಗಿಳಿದ ಕೂದಲಿನಲ್ಲೂ, ತಾತ್ವಿಕ ತೀವ್ರತೆಯಲ್ಲೂ ಋಷಿಯಂತೆ ಕಾಣುತ್ತ ಇದ್ದ, ಮುಂಡು ಪಂಚೆಯುಟ್ಟೇ ಇರುತ್ತ ಇದ್ದ ಕಲಾವಿದ ಸ್ವಾಮಿನಾಥನ್ ಮತ್ತು ನಮ್ಮ ಬಿ.ವಿ.ಕಾರಂತರು. ಈ ಇಬ್ಬರು ಕಲಾವಿದರು ನಿತ್ಯಜೀವನದಲ್ಲಿ ನಿಯಮಾತೀತರು. ಅನಾರ್ಕಿಸ್ಟರು ಎನ್ನಲೂಬಹುದು. ಇದೊಂದು ವಿಪರ್ಯಾಸ. ಯಾಖೆಂದರೆ ತಮ್ಮ ಕಲಾಕೃತಿಗಳ ಸಂಯೋಜನೆಯಲ್ಲಿ ಗಟ್ಟಿಮುಟ್ಟಾದ ಸುಸಂಬದ್ಧ ಆಕೃತಿಗಳನ್ನು ಸೃಷ್ಟಿಸಬಲ್ಲ ಸೃಜನಶೀಲರು ತಮ್ಮ ವೈಯಕ್ತಿಕ ಜೀವನದಲ್ಲಿ ನಿಯಮಾತೀತರಾಗಿರುತ್ತಾರೆ. ಯಾವ ಅಂಕೆಗೂ ದಾಕ್ಷಿಣ್ಯಕ್ಕೂ ಒಳಪಡದ ಅರಾಜಕರಾಗಿರುತ್ತಾರೆ. ಕಂಡದ್ದನ್ನು ಕಂಡಂತೆ ಯಾರಿಗಾದರೂ ಹೇಳಿಬಿಡುವ ಶಿಷ್ಟಾಚಾರಗಳಿಗೆ ಒಳಪಡದ ಧೀರನೆಂದರೆ ನಾವೆಲ್ಲರೂ ‘ಸ್ವಾಮಿ’ ಎಂದು ಕರೆಯುವ ಈ ಸ್ವಾಮಿನಾಥನ್. ಇಂತವರ ಜೊತೆ ಅಧಿಕಾರಿಯಾಗಿದ್ದರೂ ಅಶೋಕ್ ವಾಜಪೇಯಿ ಸ್ವತಃ ಕವಿಯೂ ಅವರ ಜತೆ ತಾನೊಬ್ಬ ಅಧಿಕಾರಿಯೆಂಬುದನ್ನು ಮರೆತು ಕಾಲ ಕಳೆಯುತ್ತಿದ್ದ. ಅಷ್ಟೇ ಅಲ್ಲ ನಾವೆಲ್ಲರೂ ಯಾವುದಾದರೂ ಸೆಮಿನಾರಿಗೆ ಹೋದರೆ ನಾವು ಇಳಿದುಕೊಳ್ಳುತ್ತಿದ್ದ ಚೀಪಾದ ಹೊಟೇಲಿಗೆ ಸ್ವತಃ ಅರ್ಜುನ್ ಸಿಂಗ್‌ರು ಬಂದು ನಮ್ಮನ್ನು ಸ್ವಾಗತರಿಸುತ್ತಿದ್ದರು.

ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದೊಡನೆ ಸ್ವಾಮಿನಾಥನ್ ಮತ್ತು ಕಾರಂತರಂಥವರು ಅವರಿಗೆ ಹಿಂದೂ ಸಂಸ್ಕೃತಿಯ ವೈರಿಗಳಾಗಿ ಕಂಡರು. ಭಾರತ ಭವನಕ್ಕಿದ್ದ ಸ್ವಾತಂತ್ರ್ಯವನ್ನು ಕಿತ್ತುಕೊಂಡರು. ಆಗ ದೆಹಲಿಯ ಕಲಾವಿದರ ಬಳಗ ನನ್ನನ್ನು ಮುಕವಾಣಿಯಾಗಿ ಮಾಡಿಕೊಂಡು ವಿ.ಪಿ. ಸಿಂಗರ ಹತ್ತಿರ ದೂರು ಹೇಳುವುದೆಂದು ನಿಶ್ಚಯಿಸಿತು.

ಈ ನನ್ನ ಗೆಳೆಯ ಕಲಾವಿದರು ಪ್ರಧಾನಿ ಕೊಟ್ಟ ಹೊತ್ತಿಗೆ ಹಾಜರಾಗಲೇ ಇಲ್ಲ. ನಾನೊಬ್ಬನೇ ಅವರಿಗಾಗಿ ಕಾದು ಕೂತಿದ್ದೆ. ವಿ.ಪಿ.ಸಿಂಗರು ನನ್ನನ್ನು ಒಳ ಬರಲು ಹೇಳಿದರು. ಅವರ ಅಂಗಳದಲ್ಲಿ ನನ್ನ ಜತೆ ಅಲೆದಾಡುತ್ತಾ ವಿಷಯವೇನೆಂದು ಕೇಳಿದರು. ನಾನು ನಮ್ಮ ಬಳಗದವರು ಬರುವುದು ಹೊತ್ತಾಯಿತೆಂದು ಅವರಲ್ಲಿ ಕ್ಷಮೆಯನ್ನು ಕೇಳಿದೆ. ವಿ.ಪಿ. ಸಿಂಗರು ನಸುನಗುತ್ತ ಹೇಳಿದರು: ‘ನೀವು ಹೇಳಿದರೆ ನನಗೆ ಸಾಕು’. ಬಿಜೆಪಿ ಸರಕಾರ ಹೇಗೆ ಒಂದು ದೊಡ್ಡ ಸಂಸ್ಥೆಯನ್ನು ಸರಕಾರಕ್ಕೆ ಅಧೀನಗೊಳಿಸಿ ನಾಶ ಮಾಡುತ್ತಿದೆ ಎಂದು ನಾನು ವಿವರಿಸಿದೆ. ನನ್ನ ಮಾತನ್ನು ಮಗ್ನರಾಗಿ ಕೇಳಿಸಿ ಕೊಂಡ ವಿ.ಪಿ. ಸಿಂಗರು ಹೇಳಿದರು ‘ಇವತ್ತು ಸಂಜೆಯೇ ನಾನು ಮಧ್ಯಪ್ರದೇಶದ ಮುಖ್ಯಮಂತ್ರಿಯ ಜತೆ ಮಾತನಾಡುತ್ತೇನೆ’

ಬಿಜೆಪಿಯ ಬೆಂಬಲದಿಂದಲೇ ವಿ.ಪಿ.ಸಿಂಗರು ಪ್ರಧಾನಿಯಾದದ್ದಲ್ಲವೇ? ಆದ್ದರಿಂದ ಹೆಚ್ಚೇನೂ ಅವರಿಗೆ ಹೇಳಲಾಗಲಿಲ್ಲ. ನಾನು ಈ ಭೇಟಿಯಲ್ಲಿ ಎಂದೆಂದಿಗೂ ಮರೆಯಲಾರದಂತೆ ಗಮನಿಸಿದ್ದು ವಿ.ಪಿ.ಸಿಂಗರ ನಡತೆಯಲ್ಲಿದ್ದ ಒಂದು ವಿಶೇಷವನ್ನು ಅವರು ತುಂಬ ನಾಚಿಕೆಯ ಮನುಷ್ಯ ಎಂಬುದನ್ನು.

ಸಾರ್ವಜನಿಕ ಜೀವನದಲ್ಲಿ ಹಲವು ವರ್ಷಗಳ ಕಾಲ ಮುಖ್ಯವಾಗಿ ಇದ್ದವರು ಗತ್ತಿನ ಮನುಷ್ಯರಾಗಿರುತ್ತಾರೆ. ಸಹಜವಾಗಿ ಕೆಳದನಿಯಲ್ಲಿ ಮಾತಾಡುವುದನ್ನೂ ಮರೆತು ಬಿಟ್ಟಿರುತ್ತಾರೆ. ವಿ.ಪಿ.ಸಿಂಗರಂತೆ ತಮ್ಮ ನಾಚಿಕೆ ಸ್ವಭಾವನ್ನು ಉಳಿಸಿಕೊಂಡಿರುವುದು ಅಪರೂಪ. ಗುಂಪಿನಲ್ಲಿ ಇದ್ದೂ ತನ್ನ ಒಳಗಿನ ಅನುಸಂಧಾನವನ್ನು ಕಳೆದುಕೊಳ್ಳದವರಲ್ಲಿ ಮಾತ್ರ ಈ ನಾಚಿಕೆ ಉಳಿದಿರುತ್ತದೆ.

ಎರಡನೆಯ ಬಾರಿ ನಾನು ವಿ.ಪಿ. ಸಿಂಗರನ್ನು ಭೇಟಿಯಾದದ್ದು ಅವರು ಅಧಿಕಾರವನ್ನು ಕಳೆದುಕೊಂಡ ನಂತರ. ಆ ದಿನಗಳಲ್ಲಿ ನಾನು ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದೆ. ಅಂಬೇಡ್ಕರ್ ಬಗ್ಗೆ ಮಾತನಾಡಲು ಸಿಂಗ್‌ರನ್ನು ಆಮಂತ್ರಿಸಿದ್ದೆ. ಸಿಂಗ್‌ರು ಬಂದರು. ಅವರು ಇಳಿದುಕೊಂಡಿದ್ದ ಸರಕಾರೀ ಟಿ.ಬಿ.ಗೆ ಬೆಳಗಿನ ಉಪಹಾರಕ್ಕೆಂದು ನನ್ನನ್ನು ಆಹ್ವಾನಿಸಿದರು. ನಾನೂ ನನ್ನ ಹೆಂಡತಿಯೂ ಅಲ್ಲಿಗೆ ಹೋದಾಗ ಬೊಮ್ಮಾಯಿಯವರು ಅವರ ಜತೆ ಇದ್ದರು.

ಸಿಂಗ್‌ರು ತುಂಬ ಗೌರವದಿಂದ ನನ್ನ ಹೆಂಡತಿಯನ್ನು ಉಪಚರಿಸುತ್ತಾ ಉಪಹಾರವನ್ನು ಅವರೇ ಒತ್ತಾಯಪಡಿಸಿ ಬಡಿಸುತ್ತಿದ್ದಾಗ ನಾನು ಅವರನ್ನು ನೇರವಾಗಿ ಒಂದು ಪ್ರಶ್ನೆ ಕೇಳಿದೆ.

‘ನೀವು ಬಹಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದವರು, ಪ್ರಾಕ್ಟಿಕಲ್ ಆಗಿ ಕಾಂಗ್ರೆಸ್ ಈ ದೇಶವನ್ನು ಆಳುತ್ತಾ ಬಂದಿದೆ, ತನಗೆ ಚಾರಿತ್ರಿಕವಾಗಿ ಅಸಾಧ್ಯವಾದುದನ್ನು ಮಾಡುವ ರಿಸ್ಕ್ ಅನ್ನು ಅದು ತೆಗೆದುಕೊಂಡಿದ್ದು ಕಡಿಮೆ. ಇಂದಿರಾಗಾಂಧಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಬ್ಯಾಂಕನ್ನು ರಾಷ್ಟ್ರೀಕರಿಸಿದರು. ನೀವು ಕೂಡಾ ಈಗ ಮಂಡಲ್ ಕಮಿಷನ್‌ನ ವರದಿಯನ್ನು ಜಾರಿ ಮಾಡಿದ್ದು ಹೀಗೆಯೇ ಪವರ್ ಪಾಲಿಟಿಕ್ಸ್ ಗಾಗಿ ಇರಬಹುದಲ್ಲವೇ? ಲೋಹಿಯಾ ಬಗ್ಗೆ ಈ ದಿನಗಳಲ್ಲಿ ನೀವು ಮಾತಾಡುತ್ತಿರುವ ಹಾಗೆ ಹಿಂದೆಂದೂ ಮಾತಾಡಿರಲಿಲ್ಲ ಯಾಕೆ?’

ಈ ಪ್ರಶ್ನೆಯನ್ನು ಕೇಳಿದ ನಂತರ ಬಹಳ ಕಾಲ ವಿ.ಪಿ. ಸಿಂಗರು ಏನನ್ನೂ ಹೇಳಲಿಲ್ಲ. ತನ್ನ ಕತ್ತನ್ನೆತ್ತಿ ಉಪಹಾರ ಮಾಡುವುದನ್ನು ನಿಲ್ಲಿಸಿ ಚಿಂತಾಮಗ್ನರಾದರು. ನಾನು ಅವರ ಉತ್ತರವನ್ನು ನಿರೀಕ್ಷಿಸುತ್ತ ಕೂತಿದ್ದೆ. ತುಂಬ ನಿಧಾನವಾಗಿ ಯಾವ ಕೃತಕವಾದ ಗತ್ತು ಇಲ್ಲದ ವಿನಯದಲ್ಲಿ ಸಿಂಗ್‌ರು ಹೇಳಿದರು.

‘ಇದು ಪವರ್ ಪಾಲಿಟಿಕ್ಸ್‌ಗಾಗಿ ಮಾತ್ರ ನಾನು ಮಾಡಿದ್ದೆಂದು ತಿಳಿಯಕೂಡದು. ಭಾರತದ ರಾಜಕಾರಣಿಗಳು ಬಹಳ ಕಾಲದಿಂದ ನೆಹರು ಕಾಲದ ನಂತರದಲ್ಲಿ ತಾತ್ವಿಕವಾಗಿ ಯೋಚನೆ ಮಾಡಿದ್ದೇ ಇಲ್ಲ. ಆದ್ದರಿಂದ ನನ್ನ ಪದವಿಯನ್ನು ಕಾಯ್ದುಕೊಳ್ಳುವುದರ ಬದಲಾಗಿ ಇಷ್ಯೂ ಬೇಸ್ಟ್ ಪಾಲಿಟಿಕ್ಸ್ ಮಾಡಬೇಕು ಎಂದು ನನಗೆ ಅನ್ನಿಸಿತು.’

ಇದಕ್ಕೆ ನಾನೇನೂ ಉತ್ತರಿಸಲಿಲ್ಲ. ಯಾಕೆಂದರೆ ಅವರು ಮಾಡಿದ ಕೆಲಸವನ್ನು ಒಪ್ಪಿದವನು ನಾನು ಎಂಬುದು ಅವರಿಗೆ ಗೊತ್ತಿದ್ದಿರಬೇಕು. ಆದ್ದರಿಂದ ನಾವಿಬ್ಬರೂ ವಾದದ ಸಂದರ್ಭದಲ್ಲಿ ಮಾತನಾಡುತ್ತಿರಲಿಲ್ಲ. ವಿ.ಪಿ. ಸಿಂಗರು ಮತ್ತೆ ಮೌನವಾಗಿ ಇನ್ನೊಂದು ಮಾತು ಹೇಳಿದರು.

‘ನಮ್ಮ ಪಕ್ಷ ಮಾತ್ರವಲ್ಲ. ಎಲ್ಲ ಪಕ್ಷಗಳು ಮುಂದಿನ ದಿನಗಳಲ್ಲಿ ಹಿಂದುಳಿದ ಜಾತಿಗಳಿಗೆ ಅಧಿಕಾರವನ್ನು ಕೊಡುವ ರಾಜಕೀಯವನ್ನು ಮಾಡಲೇಬೇಕಾದ ಕಾಲ ಬರುತ್ತದೆ. ಆದರೆ ಒಂದು ವಿಷಯ ಮಾತ್ರ ನನಗೆ ಅಪಾರವಾದ ದುಃಖವನ್ನು ತಂದಿತು. ಅರುಣ್ ಶೌರಿಯವರು ತಮ್ಮ ವಿರೋಧದಲ್ಲಿ ಮೇಲು ಜಾತಿಯ ಯುವ ಜನರೆಲ್ಲರೂ ದಂಗೆಯೇಳುವಂತೆ ಮಾಡಿ ಕೆಲವರು ಸಾಯಬೇಕಾಗಿ ಬಂತಲ್ಲ ಅದು ನನಗೆ ದುಃಖದ ವಿಷಯ. ಚರಿತ್ರೆ ಮುಂದಕ್ಕೆ ಹೋಗದಂತೆ ಅಡ್ಡಗಾಲು ಹಾಕುವವರು ಅನ್ಯಾಯ ಮಾಡುತ್ತಾರೆ. ಆದರೆ ಸೋಲುತ್ತಾರೆ ಎಂದು ನಾನು ತಿಳಿದಿದ್ದೇನೆ….’

* * *

ಕೆಲವು ವರ್ಷಗಳ ನಂತರ ಐ.ಕೆ.ಗುಜ್ರಾಲ್ ಪ್ರಧಾನಿಯಾಗಿದ್ದಾಗ ನನಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಿದ್ದರು. ಆದರೆ ನಾನು ಇದನ್ನು ಪಡೆದದ್ದು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ. ನಮಗೆಲ್ಲರಿಗೂ ಆ ಸಂಜೆ ಒಂದು ಭೋಜನವನ್ನು ಏರ್ಪಡಿಸಿದ್ದರು. ನಾನು ಮತ್ತು ನನ್ನ ಹೆಂಡತಿ ಕೂತಿದ್ದ ಟೇಬಲ್‌ಗೆ ಶ್ರೀ ಅಡ್ವಾಣಿಯವರು ಬಂದು ಊಟಕ್ಕೆ ಕುಳಿತರು. ಅಡ್ವಾಣಿಯವರಿಗೆ ನಾಟಕವೆಂದರೆ ಸಂಗೀತವೆಂದರೆ ಇಷ್ಟವೆಂದು ನನಗೆ ಗೊತ್ತಿತ್ತು. ಅಲ್ಲದೆ ಅವರು ಬಹಳ ಸೌಜನ್ಯದಿಂದ ವರ್ತಿಸುವ ನಾಯಕ. ನನ್ನ ಹೆಂಡತಿಯ ಕಡೆ ನೋಡಿ ಕನ್ನಡದಲ್ಲಿ ಎರಡು ಮಾತಾಡಿದರು. ನಾನು ಆಶ್ಚರ್ಯ ಪಟ್ಟೆ. ಬೆಂಗಳೂರಿನ ಜೈಲಿನಲ್ಲಿದ್ದಾಗ ತುರ್ತು ಪರಿಸ್ಥಿತಿಯಲ್ಲಿ ನಾನು ಕನ್ನಡವನ್ನು ಕಲಿತದ್ದು ಎಂದು ನಕ್ಕರು. ನಾನು ಅವರನ್ನು ಕೇಳಿದೆ ‘ಬೆನಜೀರ್ ಭುಟ್ಟೋ ನಿಮ್ಮನ್ನು ಭೇಟಿಯಾದಾಗ ನೀವು ಸಿಂಧಿಯಲ್ಲಿ ಅವರ ಜತೆ ಮಾತನಾಡಿದಿರಾ?’. ಅಡ್ವಾಣಿಯವರ ಮುಖ ಅರಳಿತು. ‘ಸಿಂಧಿಯನ್ನು ಮಾತಾಡುವವರ ಜತೆ ನಾನು ಸಿಂಧಿಯಲ್ಲೇ ಮಾತಾಡುವುದು. ಬೆನಜೀರ್ ನನಗಿಂತ ಚೆನ್ನಾಗಿ ಸಿಂಧಿ ಮಾತಾಡುತ್ತಾರೆ.’

ಹೀಗೇ ನಾವು ಲೋಕಾಭಿರಾಮವಾಗಿ ಮಾತಾಡುತ್ತಿದ್ದಾಗ ಆಡ್ವಾಣಿ ನನಗೆ ಅಚ್ಚರಿಯಾಗುವಂತೆ ಒಂದು ಮಾತು ಹೇಳಿದರು.

‘ಭಾರತ ಬದಲಾಗಿಬಿಟ್ಟಿದೆ. ಈಗ ಎಲ್ಲರೂ ಜಾತಿಯ ಬಗ್ಗೆ ಯೋಚಿಸುವಂತಾಗಿದೆ. ಇದಕ್ಕೆ ಕಾರಣ ವಿ.ಪಿ.ಸಿಂಗರೇ. ನೋಡಿ, ನಾನು ಯಾವತ್ತೂ ಕಲ್ಯಾಣ್ ಸಿಂಗರನ್ನು ಹಿಂದುಳಿದ ಜಾತಿಯವನೆಂದು ತಿಳಿದಿದ್ದೇ ಇಲ್ಲ. ಅವರೂ ನನ್ನ ಹಾಗೆಯೇ ಸಂಘದ ಇನ್ನೊಬ್ಬ ಕಾರ್ಯಕರ್ತರೆಂದೇ ತಿಳಿದಿದ್ದೇ. ಆದರೆ ಈಗ ಅವರು ಮಂಡಲ್ ಕಮಿಷನ್ ನಿಂದ ನಮೂದಿತವಾದ ಜಾತಿಯವರೆಂದು ತಿಳಿದು ನಾವೆಲ್ಲರೂ ರಾಜಕೀಯ ಮಾಡಬೇಕಾಗಿ ಬಂದಿದೆ.’

ಥಟ್ಟನೇ ನನಗಾಗ ನೆನಪಾದದ್ದು ವಿ.ಪಿ. ಸಿಂಗರು ಹೇಳಿದ ಮಾತು. ‘ಯಾವ ರಾಜಕೀಯ ಪಕ್ಷವೂ ಇನ್ನು ಮುಂದೆ ಹಿಂದುಳಿದ ಜಾತಿಗಳ ಆಶಯಗಳನ್ನು ಕಡೆಗಣಿಸಿ ಈ ದೇಶವನ್ನು ಆಳುವಂತಿಲ್ಲ.’

ನನಗೆ ಪ್ರಿಯರಾದ ಇನ್ನಿಬ್ಬರ ಮಾತಿನಿಂದ ಈ ಸ್ಮೃತಿಯನ್ನು ಮುಗಿಸುತ್ತೇನೆ. ವ್ಯಾಲ್ಯೂ ಬೇಸ್ಡ್ ಪಾಲಿಟಿಕ್ಸ್ ಬಗ್ಗೆ ಮಾತಾಡುತ್ತಿದ್ದ ಸೂಕ್ಷಜ್ಞರೂ ಸಜ್ಜನರೂ ಆದ ರಾಮಕೃಷ್ಣ ಹೆಗಡೆಯವರು ವಿ.ಪಿ.ಸಿಂಗರ ಧೋರಣೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಒಂದು ಮಾತನ್ನು ನನಗೆ ಹೇಳಿದರು.

‘ನೋಡು, ನಮ್ಮ ವಿಧಾನಸಭೆಯ ಅಧಿಕಾರಿಗಳಲ್ಲಿ ಇರುವವರಲ್ಲಿ ಹೆಚ್ಚುಪಾಲು ಜನ ಮೇಲ್ಜಾತಿಯವರು. ಇದಕ್ಕೆ ವಿನಾಯಿತಿ ಎಂದರೆ ರಿಸರ್ವೇಷನ್ ಮುಖಾಂತರ ಅನಿವಾರ್ಯವಾಗಿ ಮೇಲಕ್ಕೆ ಬಂದ ಕೆಲವು ದಲಿತ ಅಧಿಕಾರಿಗಳು ಮಾತ್ರ. ಇವರಲ್ಲಿ ಕೆಲವರು ಒಳ್ಳೆಯ ಅಧಿಕಾರಿಗಳೂ ಕೂಡಾ. ಆದರೆ ಇಡೀ ವಿಧಾನಸಭೆಯಲ್ಲಿ ಕ್ಷೌರಿಕರ ಜಾತಿಯವನೋ, ಕುಂಬಾರನೊ, ಬಡಗಿಯೊ, ನೇಕಾರನೋ, ಅಥವಾ ಹೆಚ್ಚು ಜನರ ಓಟಿನ ಬಲವಿಲ್ಲದ ಅಸಂಖ್ಯಾತ ಇತರ ಜಾತಿಗಳಲ್ಲಿ ಯಾವೊಬ್ಬನೊ ಐಎಎಸ್ ಅಧಿಕಾರಿಯಾಗಿ ಇರುವುದು ತುಂಬಾ ಅಪರೂಪ. ವಿ.ಪಿ. ಸಿಂಗರ ನಿರ್ಧಾರದಿಂದಾಗಿ ಈ ಎಲ್ಲಾ ಜಾತಿಗಳ ಮುಖಗಳೂ ಇನ್ನೂ ಮುಂದೆ ಅಧಿಕಾರದ ಸ್ಥಾನದಲ್ಲಿರುವುದನ್ನು ಕಾಣುವಂತಾಗುತ್ತದೆ. ನಮ್ಮ ಪ್ರಾಚೀನ ಭಾರತ ಆಧುನಿಕವಾಗುವುದು ಇಂತಹ ಕಾರ್ಯಕ್ರಮಗಳ ಮೂಲಕ ಮಾತ್ರ. ಸದ್ಯದಲ್ಲಿ ನಮಗೆ ಈ ರಿಸವೇರ್ಶಷನ್‌ನಿಂದ ಗೊಂದಲ ಉಂಟಾಗಬಹುದು. ಹಿಂದೆ ಇದ್ದಿದ್ದು ಕುವ್ಯವಸ್ಥೆ. ಇದನ್ನು ಸರಿಪಡಿಸುವ ಪ್ರಕ್ರಿಯೆಲ್ಲಿ ಅವ್ಯವಸ್ಥೆ ನಮಗೆದುರಾಗಬಹುದು. ಆದರೆ ಇಂತಹಾ ಅವ್ಯವಸ್ಥೆಯನ್ನು ಎದುರಿಸದ ಹೊರತು ನಾವು ಸುವ್ಯವಸ್ಥೆಯನ್ನು ಈ ದೇಶದಲ್ಲಿ ತರಲಾರೆವು.’

ವಿ.ಪಿ. ಸಿಂಗ್ ಒಬ್ಬರೇ ನಮ್ಮ ಈ ಕಾಲದಲ್ಲಿ ತಾತ್ವಿಕವಾದ ರಾಜಕಾರಣವನ್ನು ಮಾಡಿದವರು. ಅವರ ಕಾವ್ಯದಲ್ಲೂ ಅವರ ಚಿತ್ರಕಲೆಯಲ್ಲೂ ಒಬ್ಬ ಏಕಾಕಿಯಾದ ಚಿಂತನ ಶೀಲನನ್ನು ನಾವು ಕಾಣಬಹುದು. ಆದರೆ ಇಂದಿಗೂ ವಿ.ಪಿ. ಸಿಂಗರನ್ನು ದ್ವೇಷಿಸುವವರು ನಮ್ಮೊಡನೆಯೇ ಇದ್ದಾರೆ, ಅಧಿಕಾರದ ಸ್ಥಾನದಲ್ಲಿರುವವರೂ, ಪತ್ರಿಕೆಗಳನ್ನು ನಡೆಸುವವರೂ ಅವರೇ ಆಗಿದ್ದಾರೆ ಎಂಬುದು ವಿ.ಪಿ.ಸಿಂಗರ ಚೈತನ್ಯದ ಕಾಷಾಯಗುಣ ಪಡೆದ ಜೀವಂತಿಕೆಗೆ ಸಾಕ್ಷಿ.

ಅಂಬೇಡ್ಕರ್, ಲೋಹಿಯಾರ ನಂತರ ನಾನು ತುಂಬ ಗೌರವಿಸುವ ದ್ರಷ್ಟಾರ ವಿ.ಪಿ. ಸಿಂಗರು. ಜನಜಂಗುಳಿಯ ನಡುವೆ ಇದ್ದೂ ತಮ್ಮ ನಾಚಿಕೆಯನ್ನು ಕಳೆದುಕೊಳ್ಳದಂತೆ, ದಿಟ್ಟನಾಗಿ ಕೊನೆತನಕ ಬಾಳಿದವರು ವಿ.ಪಿ.ಸಿಂಗರು. ಮೂತ್ರಪಿಂಡದ ಕಾಯಿಲೆಯಿಂದಲೂ, ಕ್ಯಾನ್ಸರ್‌ನಿಂದಲೂ ಬಳಲುತ್ತಲೇ ಕ್ರಿಯಾಶೀಲರೂ ಆಗಿದ್ದ ಈ ಸಿಂಹ ರಾಜಮನೆತನಕ್ಕೆ ಸೇರಿದವರು ಎಂಬುದು ಭಾರತದ ಪ್ರಜಾತಂತ್ರದ ಹೆಗ್ಗಳಿಕೆ.

ಮುಂಬಯಿಯಲ್ಲಿ ಭಯೋತ್ಪಾದಕರ ಕ್ರೌರ್ಯದ ಅಟ್ಟಹಾಸದ ಸಂದರ್ಭದಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರ್ಪೊರೇಟ್ ಬಂಡವಾಳಶಾಹಿಗಳ ಜೊತೆ ಕೂಡಿ ಪೊಲಿಸ್ ರಾಜ್ಯದ ಸೃಷ್ಟಿಗೆ ಅಗತ್ಯವಾದ ಭಯೋತ್ಪಾದನೆಯಲ್ಲಿ ತೊಡಗಿದ್ದಾಗ ವಿ.ಪಿ. ಸಿಂಗರು ಸುದ್ದಿಯಾಗದಂತೆ ಕೊನೆಯುಸಿರೆಳೆದರು.

(www.kenadasampige.com, ಡಿಸೆಂಬರ್ ೨೦೦೮)

* * *