ನಮ್ಮ ಎಲ್ಲ ಮಾಧ್ಯಮಗಳಲ್ಲೂ ಜನತಾದಳವು (ಜೆಡಿಎಸ್) ಭಾರತೀಯ ಜನತಾಪಕ್ಷಕ್ಕೆ ಅಧಿಕಾರವನ್ನು “ಹಸ್ತಾಂತರ” ಮಾಡುವುದೆಂದು ಕೇಳಿ ಕೇಳಿ ನಾವೆಲ್ಲರೂ ಒಂದು ಸುಳ್ಳಿನಲ್ಲಿ ಪಾಲುದಾರರಾಗುವಂತೆ ಆಗಿದೆ. ನಿಜಕ್ಕೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯೂ ಅಧಿಕಾರಾದಲ್ಲಿ ಇತ್ತು. ಮುಖ್ಯಮಂತ್ರಿಯ ಕೆಲಸ ಹೀಗೆ ಅಧಿಕಾರದಲ್ಲಿರುವ ಎರಡು ಪಕ್ಷಗಳನ್ನೂ ಪ್ರತಿನಿಧಿಸುವುದಲ್ಲದೆ ಇನ್ನೇನು ವೈಯಕ್ತಿಕವಾಗಿ ಹೆಚ್ಚಿನದನ್ನು ಮಾಡಬಹುದಾದ ಸ್ಥಾನ ಅದಲ್ಲ. ಆದ್ದರಿಂದ ಮಾಧ್ಯಮದವರು ಮುಖ್ಯಮಂತ್ರಿಯ ಸ್ಥಾನದ ಹಸ್ತಾಂತರ ಎಂದೇ ಇದನ್ನು ಕರೆಯಬೇಕಾಗಿತ್ತು. ಹೊಸದಾಗಿ ಬರುವ ಮುಖ್ಯಮಂತ್ರಿ ಎರಡು ಪಕ್ಷಗಳ ಒಪ್ಪಿಗೆಯನ್ನು ಪಡೆದು ಎಲ್ಲ ಇಲಾಖೆಗಳನ್ನು ಮರು ಹಂಚಿಕೆ ಮಾಡಬಹುದು ಅಷ್ಟೇ. ಈಗಲೂ ಶ್ರೀ ಯಡಿಯೂರಪ್ಪನವರಿಗೆ ಸಾಧ್ಯವಿರುವುದು ಇಷ್ಟು ಮಾತ್ರ. ಸಾರಾಂಶ ಇದು-ಶ್ರೀ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯೂ ಅಧಿಕಾರದಲ್ಲಿತ್ತು. ಈಗ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಜೆಡಿಎಸ್ ಕೂಡಾ ಅಧಿಕಾರದಲ್ಲಿರುತ್ತದೆ.

ಕೊಟ್ಟ ಮಾತನ್ನು ಪಾಲಿಸದೆ ಇದ್ದಾಗ ಬಹುತೇಕ ಎಲ್ಲರಿಗೂ ಯಡಿಯೂರಪ್ಪನವರ ಬಗ್ಗೆ ಸಹಾನುಭೂತಿ ಹುಟ್ಟಿತೆಂದು ನಾನು ತಿಳಿದಿದ್ದೇನೆ. ಒಬ್ಬ ಆಟೋರಿಕ್ಷಾ ಚಾಲಕನನ್ನು ನಾನು ಕೇಳಿದೆ. ‘ಈಗಿನ ರಾಜಕೀಯದ ಬಗ್ಗೆ ನಿಮಗೇನನ್ನಿಸುತ್ತದೆ?’ ಅದಕ್ಕೆ ಚಾಲಕ ಹೇಳಿದ ‘ಕೊಟ್ಟ ಮಾತಿಗೆ ಯಾರಾದರೂ ತಪ್ತಾರೆಯಾ ಸಾರ್’. ಅವನು ಬಿಜೆಪಿಯ ಸದಸ್ಯ ಆಗಿರಲಿಲ್ಲ.

ಈ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ತಿಳಿದ ನನ್ನಂಥವನೂ ಕೂಡಾ ಮುಖ್ಯಮಂತ್ರಿ ಪದವಿಯ ಹಸ್ತಾಂತರ ಆಗಬೇಕಾದಾಗ ಆಗಿದ್ದರೆ ಹೆಚ್ಚೇನೂ ಹೇಳುವುದು ಇರುತ್ತಿರಲಿಲ್ಲ. ಆದರೆ ಹಾಗಾಗದೆ ಇಪ್ಪತ್ತು ತಿಂಗಳ ಕಾಲ ಮರೆತಿದ್ದ ತಾತ್ವಿಕತೆಯನ್ನು ಮತ್ತೆ ನೆನೆಸಿಕೊಂಡು ಮೈತ್ರಿಯನ್ನು ಎರಡು ಪಕ್ಷಗಳೂ ಒಡೆದುಕೊಂಡು ಮರು ಚುನಾವಣೆಯೇ ಆಗಲಿ ಎಂದು ಘೋಷಿಸುತ್ತಿದ್ದಾಗ ನಾವು ಕೆಲವು ಲೇಖಕರು ರಾಜ್ಯಪಾಲರನ್ನು ಭೇಟಿಯಾಗಿ ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ಕೇಳಿಕೊಂಡೆವು. ಇಪ್ಪತ್ತು ತಿಂಗಳು ಅಧಿಕಾರವನ್ನು ಪರಸ್ಪರ ನಂಬಿಕೆಯಲ್ಲಿ ಮಾಡಲಾಗದವರು ಇನ್ನು ಮುಂದಿನ ಇಪ್ಪತ್ತು ತಿಂಗಳು ಮಾಡಬಹುದೆಂದು ಭರವಸೆ ನಮಗಿರಲಿಲ್ಲ. ಪ್ರತೀ ಜನಪ್ರತಿನಿಧಿಯೂ ತಾನೇ ಅಭದ್ರನೆಂದು ತಿಳಿದಿದ್ದರಿಂದ ಮತ್ತೆ ಒಟ್ಟಾಗುವ ನಿರ್ಣಯಕ್ಕೆ ಅವರು ಬಂದರು. ಬಿಜೆಪಿ ಜೊತೆ ಮರು ಮೈತ್ರಿ ಆಗದಿದ್ದರೆ ಎಷ್ಟೋ ಶಾಸಕರು ಕ್ರಮಬದ್ಧವಾಗಿಯೇ ಪಕ್ಷಾಂತರಿಸಿ ಕಾಂಗ್ರೆಸ್ಸನ್ನು ಸೇರಲೋ ಬಿಜೆಪಿ ಸೇರಲೋ ತಯಾರಾಗಿ ಇದ್ದಿರಲೂಬಹುದು. (ಚಾಣಾಕ್ಷರಾದ ದೇವೇಗೌಡರು ಇದನ್ನು ತಿಳಿಯಲಾರದವರಲ್ಲ) ಅಭದ್ರರಾದವರು ತಮ್ಮ ವಿಧಾನಸಭಾಸದಸ್ಯ ಸ್ಥಾನಕ್ಕೆ ಮಾತ್ರ ಬದ್ಧರಾದವರು ಭದ್ರ ಸರಕಾರವನ್ನು ಕೊಡುವ ಸಾಧ್ಯತೆ ಇಲ್ಲವೆಂದೇ ನಾನು ಈಗಲೂ ತಿಳಿದಿರುವುದು.

ಈ ನಡುವೆ ಎಲ್ಲ ಪಕ್ಷಗಳೂ ವಿಧಾನಸಭೆಯನ್ನು ವಿಸ್ತರ್ಜಿಸಬೇಕೆಂದು ಕೇಳಿದರೂ ಹಾಗೆ ಮಾಡದೆ ಕೇವಲ ರಾಷ್ಟ್ರಪತಿ ಅಧಿಕಾರವನ್ನು ಹೇರಿದಾಗ ಅದರಲ್ಲೂ ಒಂದು ಕುಟಿಲವೆನ್ನಬಹುದಾದ ರಾಜಕಾರಣ ಇತ್ತೆಂದು ತೋರುತ್ತದೆ. ಎಲ್ಲರ ಸ್ನೇಹಿತರಾದ ಪ್ರಕಾಶ್‌ರಂಥವರು ಕಾಂಗ್ರೆಸ್ ಜತೆ ಮರು ಮೈತ್ರಿಗೆ ಪ್ರಯತ್ನ ಮಾಡುವಂತಹ ವಾತಾವರಣ ಸಾಧ್ಯವಾಗಲೆಂದೇ ಕೇಂದ್ರದಲ್ಲಿರುವ ಕಾಂಗ್ರೆಸ್ ಸರಕಾರ ಈ ಉಪಾಯವನ್ನು ಮಾಡಿರಬಹುದು. ಇದರಲ್ಲಿ ಪೆಚ್ಚಾದವರು ಶ್ರೀ ಪ್ರಕಾಶರು. ದೇವೇಗೌಡರ ಬಣವನ್ನು ಬಿಟ್ಟು ಈ ಮರು ಮೈತ್ರಿಯನ್ನು ಮಾಡಿಕೊಳ್ಳಲು ಕಾಂಗ್ರೆಸ್ ಇಷ್ಟಪಟ್ಟಂತೆ ನಮಗೆ ಅನುಮಾನವಾಗುತ್ತದೆ. ಆದ್ದರಿಂದಲೇ ಏನಕೇನ ಅಧಿಕಾರದಲ್ಲಿರಬೇಕೆಂಬ ದೇವೇಗೌಡರ ಕುಟುಂಬ ಇದಾಗದ ಹಾಗೆ ನೋಡಿಕೊಂಡಿತು. ಬಿಜೆಪಿಯ ಜತೆ ಮತ್ತೆ ಸರಕಾರ ಮಾಡುವುದಾಗಿ ಯಾವ ನಾಚಿಕೆಯೂ ಇಲ್ಲದೆ ಒಪ್ಪಿಕೊಂಡಿತು.

ಇವೆಲ್ಲವನ್ನೂ ನೋಡಿದಾಗ ಈಗಿನ ರಾಜಕೀಯ ಅನೈತಿಕ ಮತ್ತು ತತ್ವಹೀನ ಎನಿಸುತ್ತದೆ. ಕೆಲವು ಗಂಟೆಗಳ ಹಿಂದೆ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದ ಪಕ್ಷಗಳು ಒಟ್ಟಾಗಿ ಅಧಿಕಾರಕ್ಕೆ ಈಗ ಬಂದಾಗಿದೆ. ಆದರೆ ಇದನ್ನು ನಾನು ನಿಜದ ಅರ್ಥದಲ್ಲಿ ಅಧಿಕಾರವೆಂದು ತಿಳಿಯುವುದಿಲ್ಲ. ಇಂಗ್ಲಿಷ್‌ನಲ್ಲಿ ಇರುವ Power ಎನ್ನುವುದೇ  ಬೇರೆ, Office ಎನ್ನುವುದೇ ಬೇರೆ. ಜನಶಕ್ತಿ ಬೆನ್ನಿಗಿದ್ದಾಗ ಮಾತ್ರ ಅದು ಪವರ್, ಈಗ ಇವರು ಬಂದಿರುವುದು ಸರಕಾರೋದ್ಯಮ ಮಾಡುವ ಆಫೀಸಿಗೆ. ಜನರ ಹಿತದೃಷ್ಟಿಯಿಂದ Power ಇಲ್ಲದಿದ್ದರೂ Office ನಲ್ಲಿ ಇರುವ ಈ ಎರಡು ಪಕ್ಷಗಳು ಮುಖ್ಯವಾಗಿ ಜನರ ಹೃದಯದಲ್ಲಿರುವ ಈ ಎರಡು ಅಪೇಕ್ಷೆಗಳನ್ನು ಈಡೇರಿಸಬೇಕೆಂದು ಈ ದೇಶದ ಒಬ್ಬ ಪ್ರಜೆಯಾಗಿ ನಾನು ಬಯಸುತ್ತೇನೆ.

೧. ಅದಿರು ರಫ್ತಿನ ಗಣಿಗಾರಿಕೆಯನ್ನು ಬಹಿಷ್ಕರಿಸಬೇಕು. ತೆಗೆದ ಅದಿರನ್ನು ನಾವೇ ಉಕ್ಕು ಮಾಡುವುದು ಸಾಧ್ಯವಿದ್ದರೆ ಮಾತ್ರ ಗಣಿಗಾರಿಕೆ ಮಾಡಬೇಕು. ಇದು ಭೂಗರ್ಭದಲ್ಲಿರುವ ನಮ್ಮ ಸಂಪತ್ತು ನಮ್ಮ ಮೊಮ್ಮಕ್ಕಳ ಮರಿಮಕ್ಕಳ ಕಾಲಕ್ಕೂ ಈ ಸಂಪತ್ತು ಉಳಿದಿರಬೇಕು. ಈಗ ಇದನ್ನು ರಫ್ತು ಮಾಡುವಾಗ ಗಣಿ ಮಾಲೀಕರು ಕೊಡುವ ಲಂಚ, ಸೃಷ್ಟಿ ಮಾಡುವ ಸಂಪತ್ತು ಎಲ್ಲವೂ ಈಗಿನ ದುಷ್ಟ ರಾಜಕಾರಣಕ್ಕೆ ಉಪಯೋಗವಾಗುತ್ತಿದೆ. ಹೀಗೆ ಉಪಯೋಗಿಸುವ ವಲಯದಲ್ಲೇ ಇದ್ದ ಶ್ರೀ ಕುಮಾರಸ್ವಾಮಿ ಕೂಡಾ ಗಣಿಗಾರಿಕೆಯ ಶ್ರೀಮಂತರ ಅವಹೇಳನೆಗೆ ಗುರಿಯಾಗಿದ್ದನ್ನು ನಾವು ನೆನಪಿಡಬೇಕು. ಎಲ್ಲ ಪಕ್ಷದಲ್ಲೂ ಈ ಬಗೆಯ ಗಣಿಗಾರಿಕೆ ನಡೆಸುವ ರಾಜಕೀಯ ಧುರೀಣರಿದ್ದಾರೆ. ಆದರೂ ನಮ್ಮಪರಿಸರವನ್ನು ನಾಶಮಾಡುವ ಈ ಗಣಿಗಾರಿಕೆಯನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಈ ಸರಕಾರವು ಬರುವ ಧೈರ್ಯ ತೋರಬೇಕು.

೨. ಭಾರತೀಯ ಜನರು ತಮ್ಮದೇ ಆದ ಪೂಜಾ ವಿಧಿಗಳನ್ನು ದೈವಿಕ ಕಲ್ಪನೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇಸ್ಲಾಂ, ಸಂಸ್ಕೃತಿಯನ್ನು ಶ್ರೀಮಂತವಾಗಿ ಉಳಿಸಿವೆ. ಆದ್ದರಿಂದ ದತ್ತಪೀಠದ ಬಗ್ಗೆ ಬಿಜೆಪಿಯವರು ಚಕಾರವೆತ್ತಬಾರದು. ಇದು ಈಗ ಮಾಡಿಕೊಂಡಿರುವ ಮೈತ್ರಿಗೂ ಅಗತ್ಯ. ಸಾಮಾನ್ಯ ಜನರ ನೆಮ್ಮದಿಯ ಬದುಕಿಗೂ ಅಗತ್ಯ.

ಕರ್ನಾಟಕ ಯಾವತ್ತಿಗೂ ಗುಜರಾತಿನಂತೆ ಆಗಕೂಡದೆಂಬ ಆಸೆಯಿಂದ ಆಡಿದ ಮಾತುಗಳಿವು. ಕರ್ನಾಟಕಕ್ಕೆ ಅಪೂರ್ವವಾದ ಒಂದು ಇತಿಹಾಸವಿದೆ. ಇದೊಂದು ಮಿನಿ ಇಂಡಿಯಾ. ಎಲ್ಲ ಮತಧರ್ಮಗಳೂ ಹಲವು ಭಾಷೆಗಳೂ ಈ ಕರ್ನಾಟಕದಲ್ಲಿ ಬಾಳುತ್ತಿವೆ. ಯಾವಕಾಲದಲ್ಲಾದರೂ ಶಿಶುನಾಳ ಶರೀಫರು, ಬಸವ-ಅಲ್ಲಮರು, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂದ ವಿಜಯನಗರ ಸಾಮ್ರಾಜ್ಯದ ಪುರಂದರದಾಸರಂಥವರು, ವಿಶ್ವಮಾನವ ಕಲ್ಪನೆಯನ್ನು ಮಾಡಿದ ಕುವೆಂಪುರಂಥವರು, ವಿಶ್ವಮಾನವನಂತೆ ಬಾಳಿದ ಶಿವರಾಮಕಾರಂತರು ಬಾಲಬಹುದಾದ ನಾಡಾಗಿ ಕರ್ನಾಟಕ ಉಳಿಯಬೇಕು. ಶಿವಮೊಗ್ಗದಲ್ಲಿ ರೈತ ಹೋರಾಟದ ಮುಖೇನ ಪ್ರಸಿದ್ಧರಾದ ಮಾನ್ಯ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವ ಈ ೧೯ ತಿಂಗಳಲ್ಲಿ ಈ ಸಾಧ್ಯತೆ ನಾಶವಾಗಿ ನಾವೆಲ್ಲರೂ ಕನ್ನಡಿಗರೆನ್ನಲು ತಲೆತಗ್ಗಿಸುವಂತೆ ಆಗಕೂಡದು.

(೧೨ ನವೆಂಬರ್ ೨೦೦೭)

* * *