ಇದು ಜನತಾ ಪ್ರಣಾಳಿಕೆ ಕರಡು. ಓದಿ. ನಿಮಗೇನಾದರೂ ಸೇರಿಸಬೇಕನ್ನಿಸಿದರೆ ಅದನ್ನು ಪ್ರತಿಕ್ರಿಯೆಯಾಗಿ ದಾಖಲಿಸಿ.

೧. ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು; ನಮ್ಮ ಎಲ್ಲ ರಾಜಕೀಯ ಪಕ್ಷಗಳನ್ನು ಈ ಗಣಿಗಾರಿಕೆ ಭ್ರಷ್ಟಗೊಳಿಸಿದೆ.

೨. ಎಲ್ಲ ಮಕ್ಕಳಿಗೂ ಹತ್ತನೆಯ ಇಯತ್ತೆಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆ (Common School) ಗಳಲ್ಲಿ ಸಮಾನ ಶಿಕ್ಷಣ ದೊರೆಯಬೇಕು. ಮಕ್ಕಳಲ್ಲಿ ಭೇದವೆಣಿಸಬಾರದು.

೩. ನಮ್ಮ ನಗರಗಳು ಬೆಳೆಯುವಾಗ ವೃದ್ಧರಿಗೂ, ಮಕ್ಕಳಿಗೂ, ಅಂಗವಿಕಲರಿಗೂ ಈ ನಗರಗಳಲ್ಲಿ ಬದುಕುವುದು ಆಹ್ಲಾದಕರವಾಗಿರುವಂತೆ ಬೆಳೆಸಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನಗಳು, ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶಗಳು, ಸೈಕಲ್‌ನಲ್ಲಿ ಓಡಾಡವವರಿಗೆ ಅವರದೇ ಮಾರ್ಗಗಳು ಇರಬೇಕು.

೪. ಬಡಪಾಯಿಗಳಾದರೂ ಆತ್ಮಗೌರವ ಕಳೆದುಕೊಳ್ಳದ ಅಲ್ಪಸಂಖ್ಯಾತ ಜನ ಸಮುದಾಯದವರಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣವನ್ನು ಕೊಡಬೇಕು. ಅವರಿಗೆ ಮೀಸಲಾತಿ ಇರಬೇಕು.

೫. ಈಗಾಗಲೇ ಮೀಸಲಾತಿಯ ಸೌಲಭ್ಯ ಪಡೆದವರ ಮಕ್ಕಳಿಗೆ ಮೀಸಲಾತಿ ಬೇಕಾಗಿಲ್ಲ; ಬದಲಾಗಿ ಆ ವರ್ಗಗಳ ಸಮುದಾಯದಲ್ಲಿ ಈ ವರೆಗೆ ಏನೂ ಸಿಗದವರಿಗೆ ಈ ಮೀಸಲಾತಿಯನ್ನು ನೀಡಬೇಕು.

೬. ವೋಟುಗಳನ್ನು ಗಿಟ್ಟಿಸಿಕೊಳ್ಳಲು ಕೋಮು, ಜಾತಿ ಮತ್ತು ಭಾಷೆಗಳ ನಡುವೆ ವೈಷಮ್ಯವನ್ನು ಉದ್ದೇಶಪೂರ್ವಕವಾಗಿ ಬೆಳೆಸುವ ಮಾಧ್ಯಮಗಳ ಲಾಭಕೋರ ತನದ ಹವಣಿಕೆಗಳಿಗೂ ರಾಜಕಾರಣಿಗಳ ನಿರ್ಬಂಧಗಳಿರಬೇಕು.

೭. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ವಿಶೇಷ ಆರ್ಥಿಕ ವಲಯ (ಎಸ್‌ಇಜಡ್) ಗಳಿಗಾಗಿ ರೈತರಿಂದ ಪಡೆದುಕೊಳ್ಳುವುದನ್ನು ನಿಲ್ಲಿಸಬೇಕು.

೮. ರೈತರಿಗೆ ತಾವು ಬೆಳೆದದ್ದನ್ನು ಮಾರುವಾಗ ಅವರು ಬೆಳೆದುದಕ್ಕೆ ಯೋಗ್ಯವಾದ ಬೆಲೆ ಸಿಗುವಂತಾಗಬೇಕು.

೯. ದೊಡ್ಡ ದೊಡ್ಡ ಮಾಲು (malls) ಗಳ ಬದಲು ಹಲವು ವ್ಯಾಪಾರಿಗಳು ನಡೆಸುವ ಸಣ್ಣ ಪುಟ್ಟ ದೊಡ್ಡ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು.

೧೦. ಈ ಭೂಮಂಡಲದ ಶಾಖವನ್ನು ಹೆಚ್ಚಿಸುತ್ತ ಎಲ್ಲ ಜೀವಿಗಳಿಗೂ ಮೃತ್ಯು ಪ್ರಾಯವಾದ ಅಮೆರಿಕನ್ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲೂ ವ್ಯಕ್ತವಾಗಬೇಕು.

೧೧. ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯುತ್ತಿಗೂ, ಜಲ ಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನದ ಲೋಕದಲ್ಲಿ ಆದ್ಯತೆ ಇರುವಂತೆ ನೋಡಿಕೊಳ್ಳಬೇಕು.

ಕೊನೆಯದಾಗಿ ಒಂದು ಮಾತು: ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಜನಹಿತ ನಿರ್ಲಕ್ಷಿಸುವ ಜಗತ್ತಿನ ಮಾರುಕಟ್ಟೆಯಲ್ಲಿ ಸಲ್ಲುವಂತಹ ಆರ್ಥಿಕನೀತಿಯನ್ನೇ ಅನುಸರಿಸುತ್ತ ಇವೆ. ಈ ರಾಜಕಿಯ ಪಕ್ಷಗಳ ಸದಸ್ಯರಲ್ಲೇ ಯಾರು ವೈಯಕ್ತಿವಾಗಿ ಭ್ರಷ್ಟರಲ್ಲವೋ, ತಮ್ಮ ಪಕ್ಷದ ಒಳಗೇ ಮೇಲಿನ ಕಾರ್ಯಕ್ರಮಗಳಿಗಾಗಿ ಶ್ರಮಿಸಬಲ್ಲರೋ ಅಂಥವರಿಗೆ ಮಾತ್ರ ವೋಟನ್ನು ಕೊಡಬೇಕು.

( ಏಪ್ರಿಲ್ ೨೦೦೮)

* * *