ಇವತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಹೇಗೆ ಸಾಧ್ಯವಾಯಿತು? ಈಗ ಬಿಜೆಪಿಯನ್ನು ವಿರೋಧಿಸುತ್ತ ಇರುವ ಶ್ರೀ ದೇವೇಗೌಡರೂ ಸೇರಿಕೊಂಡಂತೆ ಪಕ್ಷೇತರ ರಾಜಕೀಯ ಚಿಂತಕರಾಗಿ ಬಿಜೆಪಿಯನ್ನು ಅನೈತಿಕವೆಂದು ತಿಳಿಯುವ ನನ್ನಂಥವರ ಪಾಲೂ ಇದರಲ್ಲಿ ಎಷ್ಟು ಇದೆ ಎನ್ನುವುದನ್ನು ಸತ್ಯ ನಿಷ್ಠುರವಾಗಿ ನೋಡುವುದು ಈ ಲೇಖನದ ಉದ್ದೇಶ.

ನನಗೆ ನೆನಪಿದೆ: ಬಹಳ ಹಿಂದೆ ಲೋಹಿಯಾ ಹೇಳಿದ್ದ ಮಾತು: ‘ನಾನು ಪಾಕಿಸ್ತಾನದ ವಿರೋಧಿ; ಆದರೆ ಮುಸ್ಲಿಮರ ಸ್ನೇಹಿತ. ಆರ್.ಎಸ್.ಎಸ್. ಪಾಕಿಸ್ತಾನದ ಪರ; ಆದರೆ ಮುಸ್ಲಿಮರ ಶತ್ರು. ಇಂತಹ ಜಾಣವೆಂದು ಕಾಣುವ ಲೋಹಿಯಾ ಮಾತುಗಳ ಹಿಂದೆ ಅವರು ನಂಬಿದ ತತ್ವ ಇತ್ತು. ಆರ್.ಎಸ್.ಎಸ್. ಮತ್ತು ಪಾಕಿಸ್ತಾನದ ನಾಯಕರು ಮತಾಧಾರಿತ ವ್ಯವಸ್ಥೆಯ ಅಧಿಕಾರವನ್ನು ನಂಬಿದವರು. ತಾತ್ವಿಕವಾಗಿ ಇಬ್ಬರ ನೆಲೆಯೂ ಒಂದೇ. ಆದರೆ ತಾನು ಮತಾಧಾರಿತ ವ್ಯವಸ್ಥೆಯ ವಿರೋಧಿ; ಅದು ಇಸ್ಲಾಂ ಪ್ರಣೀತವಿರಲಿ, ಹಿಂದೂ ಪ್ರಣಿತವಿರಲಿ-ಎರಡೂ ತನ್ನ ಪಾಲಿಗೆ ದುಷ್ಟ ವ್ಯವಸ್ಥೆಗಳೇ. ಲೋಹಿಯಾ ಕೊನೆತನಕ ಹೀಗೆ ನಂಬಿದ್ದವರು; ಆದರೆ ಸದ್ಯದಲ್ಲಿ ಸಲ್ಲುವ ತಂತ್ರಗಾರಿಕೆಯಲ್ಲಿ ಬಿಜೆಪಿ ಬೆಳೆಯಲೂ ಅಪ್ರತ್ಯಕ್ಷವಾಗಿ ಕಾರಣರಾದವರು; ಜಾರ್ಜ್‌ಫರ್ನಾಂಡೀಸರ ಆಲೋಚನಾಕ್ರಮದಲ್ಲಿ, ಮನೋವಿಕಾರವೆನ್ನಿಸುವಷ್ಟು ತೀವ್ರವಾದ ನೆಹರೂ ಸಂತಾನದ ಅವರ ದ್ವೇಷದ ಹಿಂದೆ ಇಡಿಯಾದ ಲೋಹಿಯಾ ಇಲ್ಲದಿರಬಹುದು; ಆದರೆ ವ್ಯಂಗ್ಯಗೊಳಿಸಬಲ್ಲ ಲೋಹಿಯಾ ವಿಚಾರದ ಅಣಕು ಚಿತ್ರ ಜಾರ್ಜ್ ಫರ್ನಾಂಡೀಸರಲ್ಲಿ ಇದೆ. ನಾನು ಹಿಂದೆ ತುಂಬ ಮೆಚ್ಚಿದ್ದವರ ಬಗ್ಗೆ ಒಲ್ಲದ ಮನಸ್ಸಿನಿಂದ ಹೇಳುವ ಮಾತು ಇದು.

ಆದರೆ ತನ್ನ ನೆಹರೂ ವಿರೋಧದಲ್ಲಿ ಲೋಹಿಯಾ ಕಾಂಗ್ರೆಸ್‌ಗೆ ಒಂದು ಪ್ರತಿಪಕ್ಷ ಕಟ್ಟುವುದರಲ್ಲೂ ತೊಡಗಿದವರಾಗಿದ್ದರು. ಅವರ ಮೊದಲಿನ ಹಲವು ಪ್ರಯೋಗಗಳು ಭಾರತದಂತಹ ವಿಶಾಲವಾದ ದೇಶದಲ್ಲಿ ಕತ್ತಲನ್ನು ಅಲ್ಲಲ್ಲಿ ಬೆಳಗುವ ಮಿಣುಕುಹುಳಗಳಾಗಿ ಮಾತ್ರ ಗೋಚರಿಸಿದುವು. ಜನರ ಕಣ್ಣಿಗೆ ಕಾಂಗ್ರೆಸ್ ಒಂದು ಸ್ಥಿರವಾದ ಬದಲಾಗದ ಶಿಲೆಯಂತೆ ಕಾಣುವುದನ್ನು ತಪ್ಪಿಸುವುದು ಹೇಗೆ ಎಂಬ ಚಿಂತನೆಯಲ್ಲಿ ಲೋಹಿಯಾ ತೊಡಗಿದ್ದರು. ಹೀಗೆ ತೊಡಗಿದಾಗ ಅವರಿಗೆ ಸ್ಥೂಲವಾಗಿ ಅನಿಸಿದ್ದು ಹೀಗೆ: ಕಾಂಗ್ರೆಸ್‌ನಲ್ಲಿ ಎಲ್ಲ ಬಗೆಯ ವಿಚಾರದವರೂ ಇದ್ದಾರೆ. ಬಂಡವಾಳ ಶಾಹಿ ಪರವಾದವರು ಇದ್ದಾರೆ, ಸಮಾಜವಾದಿಗಳಿದ್ದಾರೆ, ಹಿಂದೂ ಮತೀಯವಾದಿಗಳಿದ್ದಾರೆ, ಹೀಗೆ ಕಾಂಗ್ರೆಸ್ ಎಲ್ಲವನ್ನೂ ಒಳಗೊಂಡ ಹಿಂದೂ ಧರ್ಮದ ಹಾಗೆಯೇ ಇದೆ. ಗಾಂಧೀಜಿಯವರು ಸಾಯುವ ಮುಂಚೆ ಈ ಕಾಂಗ್ರೆಸ್ಸನ್ನು ಬರಕಾಸ್ತುಗೊಳಿಸಿ; ಬೇರೆ ಬೇರೆ ರಾಜಕೀಯ ಪಕ್ಷಗಳು ತಾವಾಗಿಯೇ ಹುಟ್ಟಿಕೊಳ್ಳಲಿ; ಕಾಂಗ್ರೆಸ್ಸಿಗೆ ಈ ದೇಶವನ್ನು ಆಳುವ ಗೊಡವೆ ಬೇಡ; ಅದು ಉಳಿಯುವುದಾದರೆ ಸಮಾಜ ಸೇವಾ ಸಂಸ್ಥೆಯಾಗಿ ಉಳಿಯಲಿ ಎಂದು ತಮ್ಮ ವಿಲ್‌ನಲ್ಲಿ ಬರೆದಿಟ್ಟಿದ್ದರು. ಅದನ್ನುಕಾಂಗ್ರೆಸ್ ಪಾಲಿಸಿದ್ದಾರೆ; ಸ್ವಾತಂತ್ರ್ಯದ ನಂತರ ನೆಹರು ಅವರದ್ದೇ ಒಂದು ಸಮಾಜವಾದೀ ಚಿಂತನೆಯ ಪಕ್ಷ, ಇರುವ ವ್ಯವಸ್ಥೆಯ ಮುಂದುವರಿಕೆಯಲ್ಲಿ ನಂಬಿಕೆ ಇರುವ ಸರದಾರ್ ಪಟೇಲ್, ಬಾಬೂ ರಾಜೇಂದ್ರ ಪ್ರಸಾದ್, ರಾಜಾಜಿಯಂಥವರದ್ದೇ ಒಂದು conservative ಪಕ್ಷ; ultra conservative ಆದ ಹಿಂದು ಸಾವರ್ಕರ್ ಪ್ರೇರಿತ ರಾಷ್ಟ್ರವಾದೀ ಪಕ್ಷವಾದ ಜನಸಂಘ -ಇಂತಹ ಪಕ್ಷಗಳು ಹುಟ್ಟಿಕೊಂಡು, ಈ ಪಕ್ಷಗಳಲ್ಲಿ ಕಾಂಗ್ರೆಸ್‌ನವರು ತಮ್ಮ ವಿಚಾರಕ್ಕೆ ತಕ್ಕಂತೆ ಹಂಚಿಕೊಂಡು, ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಈಗಿನ ಗೊಂದಲವಿಲ್ಲದೆ ಬೆಳೆಯುತ್ತಿತ್ತೇನೋ?

ಇದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಎಲ್ಲ ವಿಚಾರಗಳನ್ನೂ ಅಧಿಕಾರಕ್ಕಾಗಿ ಬಳಸುವ ಪಕ್ಷವಾಗಿ, ಅನುಕೂಲಕ್ಕೆ ತಕ್ಕಂತೆ ಕೆಲವೊಮ್ಮೆ ಎಡಕ್ಕೂ, ಕೆಲವೊಮ್ಮೆ ಬಲಕ್ಕೂ ಕಣ್ಣು ಮಿಟುಕಿಸುತ್ತಾ ಜನರಲ್ಲಿ ಗರೀಬಿ ಹಠಾವ್ ಭರವಸೆಯನ್ನು ಉಳಿಸಿಕೊಂಡೇ, ಆದರೆ ಅದನ್ನು ಈಡೇರಿಸದೆ ಬೆಳೆದು ಬಂದಿದೆ. ಆದ್ದರಿಂದ ಇಂತಹ ಕಾಂಗ್ರೆಸ್ಸನ್ನು ದೇಶದ ಪರಮಾಧಿಕಾರದಿಂದ ತಪ್ಪಿಸಲು ಬೇರೆ ಬೇರೆ ಬಗೆಗಳಲ್ಲಿ ಯೋಚಿಸುವ ಎಲ್ಲ ಪಕ್ಷಗಳು ತಮ್ಮ ವಿಚಾರದ ವೈವಿಧ್ಯವನ್ನು ಬದಿಗೊತ್ತಿ ಕಾಂಗ್ರೆಸ್ಸನ್ನು ಸೋಲಿಸಲೆಂದೇ ಒಂದು ಒಕ್ಕೂಟವಾಗಬೇಕೆಂದು ಲೋಹಿಯಾ ಪ್ರಯತ್ನಿಸಿದ್ದರು.

ಇದನ್ನು ಅವರು ಒಂದು-Non-Congress ಒಕ್ಕೂಟವೆಂದು ಭಾವಿಸಿದ್ದರು. ನನಗೆ ನೆನಪಿರುವಂತೆ ಆ ಕಾಲದ ಆರ್.ಎಸ್.ಎಸ್. ಪ್ರಮುಖರಾದ ದೀನ್ ದಯಾಳ್ ಉಪಾಧ್ಯಾಯರ ಜತೆ ಒಂದು ಒಪ್ಪಂದಕ್ಕೂ ಬಂದು ಅದನ್ನು ಅವರ Mankindನಲ್ಲಿ ಪ್ರಕಟಿಸಿದ್ದರು. ಈ ಒಪ್ಪಂದದ ಪ್ರಕಾರ ಚುನಾವಣೆಯಲ್ಲಿ ಸಹಕರಿಸುವ ಆರ್.ಎಸ್.ಎಸ್. ಮತ್ತು ಜನಸಂಘ ಎಲ್ಲೂ ಮತೀಯತೆಯನ್ನು ಪ್ರಚೋದಿಸುವ ಕೆಲಸವನ್ನು ಮಾಡತಕ್ಕದ್ದಲ್ಲ. ಕ್ರಮೇಣ ಈ ಬಗೆಯ ಒಪ್ಪಂದಗಳನ್ನು ಲೋಹಿಯಾ ಎಲ್ಲ ಕಾಂಗ್ರೇಸ್ಸೇತರ ಪಕ್ಷಗಳ ಜೊತೆ ಮಾಡಿಕೊಳ್ಳುತ್ತ ಹೋದರು. ಮುಂದೊಂದು ದಿನ ರಾಜಾಜಿಯವರ ಶತಾಬ್ದಿಗೆ ಲೋಹಿಯಾ ತೀರಿಹೋದ ನಂತರ ಬರೆದೊಂದು ಲೇಖನದಲ್ಲಿ ಜಯಪ್ರಕಾಶ್ ನಾರಾಯಣರು, ನೆಹರೂಗೆ ಆ ದಿನಗಳಲ್ಲಿ ನಿಜವಾದ ವಿರೋಧಿಗಳೆಂದರೆ, ಪ್ರತಿ ಪಕ್ಷ ಕಟ್ಟಬಲ್ಲವರಾಗಿದ್ದವರೆಂದರೆ, ಇಬ್ಬರೇ-ರಾಜಾಜಿ ಮತ್ತು ಲೋಹಿಯಾ ಎಂದಿದ್ದರು. (ಆವರ ದೃಷ್ಟಿಯಲ್ಲಿ ಕಮ್ಯುನಿಸ್ಟರು ಕೂಡ ನೆಹರೂ ಪಂಥದವರೇ ಎಂದಿರಬಹುದು.)

ಎಮರ್ಜೆನ್ಸಿಯಲ್ಲಂತೂ ನಾವೆಲ್ಲರೂ ಕೆಲಸ ಮಾಡಿದ್ದು ಸುಸಂಘಟಿತವಾದ ಆರ್.ಎಸ್.ಎಸ್. ಜತೆ. ನನ್ನದೇ ನೆನಪುಗಳನ್ನು ಹೇಳುತ್ತೇನೆ. ಮೈಸೂರಿನಲ್ಲಿ ನಮ್ಮ ಮನೆಗೆ ಒಬ್ಬ ಆರ್.ಎಸ್.ಎಸ್. ಕಾರ್ಯಕರ್ತರು ಬಂದು ನನ್ನನ್ನು ಅಲ್ಲಿ ಇಲ್ಲಿ ಗುಪ್ತ ಸಭೆಗಳಿಗೆ ಕರೆದುಕೊಂಡು ಹೋಗಿ ಮಾತನಾಡಿಸುತ್ತಿದ್ದರು. ಅವರ ಹೆಸರನ್ನು ಜಗನ್ನಾಥ ಎಂದು ಇಟ್ಟುಕೊಂಡಿದ್ದರೆಂದು ನೆನಪು. ಒಂದು ದಿನ ಊಟದ ಹೊತ್ತಿಗೆ ಅವರು ಬಂದಾಗ ನಿಮ್ಮ ಊಟವಾಯಿತೇ ಎಂದು ಕೇಳಿದ್ದೆ. ನನ್ನದೇ ಆದ ಒಂದು ಊಟದ ವ್ಯವಸ್ಥೆಯಿಲ್ಲ. ಆ ಸಮಯದಲ್ಲಿ ಯಾರ ಮನೆಯಲ್ಲಿ ನಾನಿರುತ್ತೇನೋ ಅವರು ಬಡಿಸಿದ ಊಟವನ್ನು ನಾನು ಮಾಡುತ್ತೇನೆ ಎಂದು ವಿನಯದಲ್ಲಿ ಹೇಳಿ ನನ್ನ ಜತೆ ಊಟ ಮಾಡಿದ್ದರು.

ಒಮ್ಮೆ ಇವರು ಭೂಗತರಾಗಿದ್ದ ಸಂಘಪರಿವಾರದ ಸಾಂಸ್ಕೃತಿಕ ವಕ್ತಾರ ಶ್ರೀ ಮಧ್ವರಾವ್ ಅವರನ್ನು ನನ್ನ ಮನೆಗೆ ಕರೆದುಕೊಂಡು ಬಂದರು. ಬುಶ್ ಷರ್ಟ್ ಮತ್ತು ಪ್ಯಾಂಟ್‌ನಲ್ಲಿದ್ದ ಮಧ್ವರಾಯರನ್ನು ನಾನು ಕೂಡಲೇ ಗುರುತಿಸಲು ಸಾಧ್ಯವಾಗಲಿಲ್ಲ. ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬಲ್ಲ ಧಾರಾಳದ ಚಿಂತನಶೀಲತೆಯಲ್ಲಿ ನಮಗೆ ಎದುರಾಗುತ್ತಿದ್ದ ಶ್ರೀ ಮಧ್ವರಾವ್ ‘ನನ್ನಲ್ಲಾದ ಬದಲಾವಣೆಯನ್ನು ಗಮನಿಸಿದಿರಾ?’ ಎಂದರು. ಆಗ ನಾನು ಅವರನ್ನು ಕೇಳಿದ ಪ್ರಶ್ನೆ ಈಗಲೂ ನನಗೆ ಮುಖ್ಯವೆನಿಸುತ್ತದೆ. ಸಾರಾಂಶದಲ್ಲಿ ಹೀಗೆ ಹೇಳಿದ್ದೆ; ‘ನಿಮ್ಮ ಸಂಘ ಪರಿವಾರದ ಇಡೀ ಅಜೆಂಡಾವನ್ನೇ ಇಂದಿರಾಗಾಂಧಿಯವರು ಜಾರಿಗೆ ತಂದಾಗಿದೆ. ಈಗ ನಮ್ಮಲ್ಲಿ ಆಟಂ ಬಾಂಬ್ ಇದೆ. ಆರ್ಯವಿರೋಧಿ ಡಿಎಂಕೆ ಸರಕಾರವನ್ನು ಆಕೆ ವಜಾ ಮಾಡಿದ್ದಾರೆ. ಸಿಕ್ಕಿಂ ಅನ್ನು ಇಂಡಿಯಾಕ್ಕೆ ಸೇರಿಸಿಕೊಂಡಿದ್ದಾರೆ. ಪಾಕಿಸ್ತಾನ ಒಡೆಯಲು ಸಹಕರಿಸಿದ್ದಾರೆ. ಅವರ ಮಗ ಸಂಜಯ್ ಗಾಂಧಿಯ ಮುಖಾಂತರ ಮುಸ್ಲಿಮರ ಸಂತಾನಶಕ್ತಿಯ ಹರಣ ಮಾಡುತ್ತಿದ್ದಾರೆ. ಪೇವ್‌ಮೆಂಟ್‌ನಲ್ಲಿ ವಾಸಿಸುವ ದೀನ ದರಿದ್ರರನ್ನು ಅಟ್ಟಿ ದೆಹಲಿಯನ್ನು ಸುಂದರಗೊಳಿಸುತ್ತಿದ್ದಾರೆ. ನೀವೇನಾದರೂ ಅಧಿಕಾರದಲ್ಲಿದ್ದಿದ್ದರೆ ಇದಕ್ಕಿಂತ ಹೆಚ್ಚು ಮಾಡುವುದು ಏನಿತ್ತು? ಯಾಕೆ ನೀವು ಇಂದಿರಾಗಾಂಧಿಯವರನ್ನು ವಿರೋಧಿಸುತ್ತಾ ಇದ್ದೀರಿ?’

ಈ ಪ್ರಶ್ನೆಗೆ ಅವರ ಹತ್ತಿರ ನೇರವಾದ ಉತ್ತರವಿರಲಿಲ್ಲ. ತಾವು ಸರ್ವಾಧಿಕಾರದ ವಿರೋಧಿ ಎಂದು ಮಾತ್ರ ಅವರು ಹೇಳಲು ಬಯಸಿದರು. (ಈಚೆಗೆ ಆರ್.ಎಸ್.ಎಸ್. ಸರಸಂಘಚಾಲಕರು ವಾಜಪೇಯಿಯವರಿಗಿಂತ ಇಂದಿರಾ ಗಾಂಧಿಯೇ ನಿಜವಾದ ರಾಷ್ಟ್ರ ನಾಯಕಿ ಎಂದದ್ದು ನೆನಪಾಗುತ್ತದೆ)

ತದನಂತರ ನಾನು ದೂರದ ಮಣಿಪುರಕ್ಕೆ ಲೆಕ್ಚರ್ ಮಾಡಲು ಹೋದಾಗ (ಅಂಘಾಗಲ್ ಮೆಮೋರಿಯಲ್ ಲೆಕ್ಚರ್) ಮಧ್ಯರಾತ್ರಿಯಲ್ಲಿ ಕಂಬಳಿಯನ್ನು ಹೊದ್ದುಕೊಂಡು, ಲಾಟೀನು ಹಿಡಿದು ಬಂದ ಕೆಲವರು ಬಾಗಿಲು ತಟ್ಟಿ ನಾವು ಮಧ್ವರಾವ್ ಅವರ ಅಣತಿಯ ಮೇರೆಗೆ ನಿಮ್ಮನ್ನು ನೋಡಲು ಬಂದಿದ್ದೇವೆ ಎಂದು ಮಣಿಪುರದ ಗುಡ್ಡಗಾಡು ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ನನ್ನಿಂದ ಎಮರ್ಜೆನ್ಸಿ ವಿರೊಧಿ ಭಾಷಣ ಮಾಡಿಸಿದ್ದರು. ನಮಸ್ತೇ ಸದಾ ವತ್ಸಲೇ ಹಾಡಿಸಿ ಗಿರಿಜನರ ಜೊತೆ ವೈಷ್ಣವ ಊಟ ಮಾಡಿಸಿದ್ದರು. ಅವರ ಸಂಘಟನೆ ಎಷ್ಟು ವ್ಯಾಪಕವಾದ್ದು ಎಂಬುದು ನನಗಾಗ ಅನುಭವಕ್ಕೆ ಬಂದಿತ್ತು. ಎಮರ್ಜೆನ್ಸಿ ಕೊನೆಗಾಣುವುದೇ ನಮಗೆ ಮುಖ್ಯವಾದ್ದರಿಂದ ನಾವು ಯಾರೂ ಆರ್.ಎಸ್.ಎಸ್‌.ನ ಮೇಲಿನ ನಮ್ಮ ಹಿಂದಿನ ಅನುಮಾನಗಳನ್ನು ಮುಖ್ಯವೆಂದು ಗಣಿಸಲೇ ಇಲ್ಲ. ಜಯಪ್ರಕಾಶ್ ನಾರಾಯನರಂತೂ ‘ಆರ್.ಎಸ್.ಎಸ್. ಅನ್ನು ಫ್ಯಾಸಿಸ್ಟ್ ಎಂದು ನೀವು ಅನ್ನುವುದಾದರೆ ನಾನೂ ಫ್ಯಾಸಿಸ್ಟೇ ಎಂದು ತಿಳಿಯಿರಿ’ ಎಂದು ದುಗುಡದಲ್ಲಿ ಹೇಳಿದ್ದರು.

ಜನಸಂಘ ಆಗಿನ ಕಾಲದಲ್ಲಿ ಒಂದು ಕೇಡರ್ ಮೇಲೆ ಅವಲಂಬಿತವಾದ ಪಕ್ಷವಾಗಿತ್ತು. ಅವರು ದೇಶಾದ್ಯಂತ ಗಳಿಸುತ್ತ ಇದ್ದ ಓಟುಗಳು ಸೀಟುಗಳಾಗಿ ಪರಿವರ್ತಿತವಾಗುತ್ತ ಇರಲಿಲ್ಲ. ಇದೊಂದು ನಮ್ಮ ಪ್ರಜಾಸತ್ತೆಯ ಪ್ಯಾರಾಡಾಕ್ಸ್ ಎನ್ನಬಹುದು. ಜಯಪ್ರಕಾಶ್ ನಾರಾಯಣರ ಚಳವಳಿಯಲ್ಲಿ ಸೇರಿದ್ದರಿಂದ ಅದೊಂದು ಮಾಸ್ ಪಕ್ಷವಾಗಿ ಪರಿವರ್ತಿತವಾಯಿತು. ಮೊರಾರ್ಜಿ ಸರಕಾರದಲ್ಲಿ ಅವರದೂ ಸಿಂಹಪಾಲು ಇತ್ತು. ಅಟಲ್ ಬಿಹಾರಿ ವಾಜಪೇಯಿಯವರು ವಿದೇಶಾಂಗ ಸಚಿವರಾಗಿ ಬಹಳ ಜನರ ಮೆಚ್ಚುಗೆಗೆ ಪಾತ್ರರಾದರು.

ಲೋಹಿಯಾರ ಕನಸು ಕೈಗೂಡಿತ್ತು. ಎಮರ್ಜೆನ್ಸಿಗೆ ಮೊದಲೇ ಉತ್ತರ ಭಾರತದಲ್ಲಿ ಕಾಂಗ್ರೆಸ್ಸೇತರ ಸರಕಾರಗಳು ಅಧಿಕಾರವನ್ನು ಪಡೆದಿದ್ದವು. ಕಾಂಗ್ರೆಸ್ಸೇತರ ಸರಕಾರಗು ಅವರೆಗೆ ಇದ್ದದ್ದು ಮುಖ್ಯವಾಗಿ ಕೇರಳ ಮತ್ತು ಬಂಗಾಳದಲ್ಲಿ ಮಾತ್ರ. ಅದೂ ಕೇಡರ್ ಆಧಾರಿತ ಕಮ್ಯುನಿಸ್ಟ್ ಪಕ್ಷದ ಕಾರಣದಿಂದಾಗಿ. ಅಲ್ಲದೆ ರಾಜಾಜಿಯವರು ಯಾವತ್ತೂ ದ್ರಾವಿಡ ಚಳವಳಿಗೆ ವಿರೋಧಿಯಾಗಿದ್ದವರು. ಡಿಎಂಕೆಯನ್ನು ಅಧಿಕಾರಕ್ಕೆ ತರಲು ತಮ್ಮ ಸಹಾಯವನ್ನು ಮಾಡಿದ್ದರು. ಅಂದರೆ ಈ ಇಡೀ ಕಾಲಘಟ್ಟ ಶಿಲೆಯ ರೂಪದ ಶಾಶ್ವತತೆಯನ್ನು ಪಡೆದಿದ್ದ ಕಾಂಗ್ರೆಸ್ಸನ್ನು ಎಲ್ಲ ಪಕ್ಷಗಳಂತೆ ‘ಇನ್ನೊಂದು ಪಕ್ಷವೆಂದು ಮಾತ್ರ’ ಪರಿವರ್ತಿಸುವ ಕಾರ್ಯವಾಗಿತ್ತು. ಆದರೆ ನಮಗೆ ಯಾರಿಗೂ ಆ ಹುಮ್ಮಸ್ಸಿನ ದಿನಗಳಲ್ಲಿ ಅರಿಯಗೊಡದಂತೆ ಈ ಕಾಂಗ್ರೆಸ್ಸೇತರ ರಾಜಕಾರಣವನ್ನು ತಾನೇ ಬೆಳೆಯುವಂತೆ, ತನಗೆ ಮಾತ್ರ ಸಾಧ್ಯವಾದ ಬಹುಮುಖಗಳ ಸಂಸ್ಥೆಗಳನ್ನು ಕಟ್ಟಿಸದ್ದು ಗದ್ದಲವಿಲ್ಲದೆ ಉಪಯೋಗಿಸಿಕೊಳ್ಳಬಲ್ಲ ಏಕಮೂತ್ರ ಪಕ್ಷ ಆಗಿನಿಂದಲೂ ಸಂಘಪರಿವಾರದ ಪಕ್ಷವೇ.

ನನಗೆ ತಿಳಿದಿರುವಂತೆ ಇದರ ಗುಮಾನಿ ಇದ್ದದ್ದು ಮೊದಲಿನಿಂದ ಮಧುಲಿಮಯೆ ಒಬ್ಬರಿಗೇ. ಇಂದಿರಾಗಾಂಧಿಯ ವಿರುದ್ಧ ಚಿಕ್ಕಮಗಳೂರಿನಲ್ಲಿ ನಾವೆಲ್ಲರೂ ಚುಣಾವಣಾ ಪ್ರಚಾರ ಮಾಡುತ್ತಿದ್ದಾಗ ನಾನು ಲಿಮಯೆ ಅವರನ್ನು ಕೇಳಿದ; ‘ಕಾಂಗ್ರೆಸ್ಸೇತರ ಸರಕಾರವೊಂದು ದೆಹಲಿಯಲ್ಲಿರುವಾಗ ನೀವೇಕೆ ವಿಘ್ನಕಾರಿಯಾದ ಮಾತುಗಳನ್ನು ಆಡುತ್ತಿದ್ದೀರಿ? ಜನಸಂಘದಿಂದ ಜನತಾ ಪಕ್ಷಕ್ಕೆ ಬಂದವರು  dual membership ಅನ್ನು (ಅಂದರೆ ಸಂಘಪರಿವಾರದ ಜತೆಗಿನ ತಮ್ಮಸಂಬಂಧವನ್ನು) ಬಿಡಲೇಬೇಕೆಂದು ನೀವು ಯಾಕೆ ಒತ್ತಾಯ ಮಾಡುತ್ತಿದ್ದೀರಿ?’ ಅದಕ್ಕೆ ಲಿಮಯೆ, ಪಕ್ಷದ ಆಫೀಸಿನಲ್ಲಿ ಮೇಜಿನ ಎದುರು ಕೂತು ಎಲ್ಲ ಲೆಕ್ಕ ಪತ್ರಗಳನ್ನೂ ನೋಡಿಕೊಳ್ಳುತ್ತಿದ್ದ ಒಬ್ಬ ಯುವಕನ ಕಡೆ ಬೊಟ್ಟು ಮಾಡಿ ‘ಈತ ಯಾವ ಪಕ್ಷದವನೆಂದು ನಿನಗೆ ಗೊತ್ತೇ?’ ಎಂದರು. ಅವನು ಜನತಾ ಪಕ್ಷದಲ್ಲಿರುವ ಜನಸಂಘದವನಾಗಿದ್ದ. ಮಧುಲಿಮಯೆ ಮುಂದುವರಿದು ‘ಹೀಗೆ ಒಂದು ಮೇಜಿನ ಎದುರು ಕೂತು ಸತತವಾಗಿ ಕೆಲಸ ಮಾಡುವ ಅಭ್ಯಾಸವಿರುವ ಇವರೇ ಮುಂದೆ ಜನತಾ ಪಕ್ಷವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ಆದರೆ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದರೆ ಅವರನ್ನು ಕೆಳಗಿಳಿಸಬಹುದು. ಇವರು ಅಧಿಕಾರಕ್ಕೆ ಬಂದರೆ ಮತ್ತೆ ಅವರು ಬದಲಾಯಿಸಲಾರದ ಇನ್ನೊಂದು ಶಿಲೆಯಾಗುತ್ತಾರೆ’ ಎಂದಿದ್ದರು.

ಮಧುಲಿಮಯೆಯಿಂದಾಗಿ ಆಗಿನ ಜಾರ್ಜ್‌ಫರ್ನಾಂಡಿಸರು ಜನತಾ ಸರಕಾರ ಪತನವಾಗುವಂತೆ ನೋಡಿಕೊಂಡು ಈಗ ಬಿಜೆಪಿಯ ಒಬ್ಬ ಮೂಕ ಬೆಂಬಲಿಗರಾಗಿ ಪರಿವರ್ತಿತರಾಗಿದ್ದಾರೆ. ಇದೊಂದು ಚರಿತ್ರೆಯ ವಿಪರ್ಯಾಸ-ಇರಲಿ.

ನಮ್ಮಲ್ಲಿ ಹಲವರಿಗೆ ಅಟಲ್ ಬಿಹಾರಿ ವಾಜಪೇಯಿಯವರು ಒಬ್ಬ ದೊಡ್ಡ ಸ್ಟೇಟ್ಸ್‌ಮನ್ ಹಾಗೆ ಕಾಣುತ್ತಿದ್ದಾಗಲೇ ಮಧುಲಿಮಯೆಗೆ ಅನುಮಾನವಿತ್ತೆಂಬುದು ನನಗೆ ಅನಂತರದಲ್ಲಿ ತಿಳಿಯಿತು. ಇಂದಿರಾಗಾಂಧಿಯವರು ಎಮರ್ಜೆನ್ಸಿ ಕಾಲದಲ್ಲಿ ಎಲ್ಲ ಪಾರ್ಲಿಮೆಂಟ್ ಸದಸ್ಯರ ಅವಧಿಯನ್ನು ಒಂದು ವರ್ಷಕ್ಕೆ ಹೆಚ್ಚಿಸಿದ್ದರು. ಆಗ ಜೈಲಿನಲ್ಲಿದ್ದ ಮಧುಲಿಮಯೆ ‘ನನಗೆ ಈ ಅವಧಿಯ ವಿಸ್ತಾರ ಬೇಕಾಗಿಲ್ಲ’ ಎಂದು ಸಂಸತ್ತಿನ ಸದಸ್ಯನಾಗಿ ಇನ್ನೊಂದು ವರ್ಷ ಮುಂದುವರಿಯುವುದನ್ನು ನಿರಾಕರಿಸಿ, ಅವರ ಹೆಂಡತಿ ಚಂಪಾ ಲಿಮಯೆ ಜೈಲಿನಲ್ಲಿ ಅವರನ್ನು ನೋಡಲು ಬಂದಾಗ, ‘ಅಟಲ್‌ಜೀ ದೆಹಲಿಯ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೂ ಈ ಒಂದು ವರ್ಷದ ಮುಂದುವರಿಕೆಯನ್ನು ನಿರಾಕರಿಸಿದರೆ ಇಂದಿರಾಜಿ ನಮ್ಮನ್ನೆಲ್ಲಾ ತಮಗೆ ಬೇಕಾದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿದಾರು. ಇದನ್ನು ಅಟಲ್‌ಜೀಗೆ ಹೇಳು’ ಎಂದಿದ್ದರಂತೆ. ಚಂಪಾ ಲಿಮಯೆ ಅವರೇ ನನಗಿದನ್ನು ಹೇಳಿದರು. ಅಟಲ್ ತಾನು ಹೇಳಿದ್ದನ್ನು ಕೇಳಿಸಿಕೊಂಡು ‘ನಾನು ನನ್ನ ಪಕ್ಷದವರ ಅನುಮತಿಯಿಲ್ಲದೆ ಹೀಗೆ ನಿರಾಕರಿಸಲಾರೆ’ ಎಂದರಂತೆ. ನಾವು ತಿಳಿದಂತೆ ಅಟಲ್ ಜೀಯವರು ಆಗೀಗ ಸ್ಟೇಟ್ಸ್ ಮನ್‌ನಂತೆ ನಡೆದುಕೊಂಡರೂ ಆಪತ್ಕಾಲದಲ್ಲಿ ತಮ್ಮ ಹಿಂದಿನ ಚಡ್ಡಿದಿನಗಳನ್ನು ಮರೆಯಲಾರದವರೇ ಆಗಿ ಉಳಿದಿದ್ದರು. ಗುಜರಾತ್‌ನಲ್ಲಿ ಹತ್ಯಾಕಾಂಡ ನಡೆದಾಗ ನಂತರ ತಮ್ಮ ಮಾತನ್ನೇ ಬದಲಾಯಿಸಿಕೊಂಡರು. ಅವರು ಬಾಬ್ರಿ ಮಸೀದಿಯನ್ನು  ಕೆಡವುದರಲ್ಲಿ ಪಾಲುದಾರರಾಗಿರಲಿಲ್ಲ ಎನ್ನುವುದೂ ಅವರನ್ನು ಮುಂದಿಟ್ಟುಕೊಂಡು ನಮ್ಮಂಥವರ ಬೆಂಬಲ ಪಡೆಯುವುದಕ್ಕೆ ಸಹಕಾರಿಯಾಯಿತು. ಇವರು ಕೇವಲ ‘ಮುಖವಾಡ’ ಸಂಘಪರಿವಾರಕ್ಕೆ ಎನ್ನುವ ಅಪ್ಪಟ ಸಂಘದವರಾದ ಗೋವಿಂದಾ ಚಾರ್ಯರ ಮಾತಿನಲ್ಲಿ ಸತ್ಯವಿರುವಂತೆ ತೋರುತ್ತದೆ. ಇಂತಹ ತಂತ್ರಿಗಳು ಯಾವ ಪಕ್ಷದಲ್ಲೂ ಇರುವಂತೆ ನಾನು ಕಾಣೆ.

ಇಲ್ಲಿ ಕರ್ನಾಟಕದಲ್ಲಿ ಏನಾಯಿತು ನೋಡೋಣ. ರಾಮಕೃಷ್ಣ ಹೆಗಡೆಯವರು ಅಧಿಕಾರಕ್ಕೆ ಬಂದಾಗ ತಮ್ಮ ಸರಕಾರದಲ್ಲಿ ಬಿಜೆಪಿ ಇಲ್ಲದಿದ್ದರೂ ಅವರ ಬೆಂಬಲವನ್ನು ಪಡೆದರು. ವಿ.ಪಿ.ಸಿಂಗ್ ಅಧಿಕಾರ ಹಿಡಿದಾಗ ಅವರೂ ಬಿಜೆಪಿಯ ಬೆಂಬಲವನ್ನು ಪಡೆದರು. ಅಧಿಕಾರ ಹಿಡಿಯುವ ಆತುರದ ಬಿಜೆಪಿ ತಾನು ಬಲವಾಗಲು ಅಡ್ವಾಣಿಯ ಸಾರಥ್ಯದಲ್ಲಿ ರಥಯಾತ್ರೆ ಶುರುಮಾಡಿತು. ಬಾಬರಿ ಮಸೀದಿ ಹಿಂದೂಗಳಿಗೆ ಅವಮಾನ ಕಾರಕವಾದ ಸ್ಮಾರಕವೆಂದು ತನ್ನ ಅಜೆಂಡಾವನ್ನು ಬೆಳೆಸಲು ಶುರು ಮಾಡಿತು. ವಿ.ಪಿ. ಸಿಂಗ್ ಬಹಳ ವರ್ಷಗಳ ಕಾಲದಿಂದ ಸಮಾಜವಾದಿಗಳೆಲ್ಲರೂ ಬಯಸಿದ್ದ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದರು. ಹೀಗೆ ಮಂದಿರಕ್ಕೆ ಮಂಡಲ್ ಎದುರಾದಾಗ ಅಡ್ವಾಣಿ ತಮ್ಮ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಂಡರು.

ಇವೆಲ್ಲಾ ಎಲ್ಲರಿಗೂ ಗೊತ್ತಿರುವ ಚರಿತ್ರೆ. ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಇದು; ಕಾಂಗ್ರೆಸ್‌ಗೆ ಪರ್ಯಾಯವಾದ ಇನ್ನೊಂದು ಪಕ್ಷವನ್ನು ಕಟ್ಟಲು ಹೊರಟವರು ಯಾವತ್ತೂ ಪ್ರಾಮಾಣಿಕವಾಗಿ ಈ ಒಕ್ಕೂಟವನ್ನು ಉಳಿಸಿಕೊಳ್ಳಲು ವಿಫಲರಾದರು. ಯಾಕೆಂದರೆ ದುರ್ಬಲವಾದ ಕಾಂಗ್ರೆಸ್ಸೇತರ ಪಕ್ಷಗಳಿಗೆ ಬಿಜೆಪಿಯ ಜತೆ ಸಂಸಾರ ಮಾಡುವುದು ಯಾವತ್ತಿನಿಂದಲೂ ತೀವ್ರ ಅನುಮಾನ ಹುಟ್ಟಿಸುವ ಕಷ್ಟದ ವಿಷಯವೇ ಆಗಿತ್ತು. ಆದರೂ ಅಧಿಕಾರದ ಲಾಲಸೆ ಎಲ್ಲ ಪಕ್ಷಗಳಿಗೂ ಇರುವುದರಿಂದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಹೊರತಾಗಿ ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಬಿಜೆಪಿ ಜತೆ ರೊಮಾನ್ಸ್ ಮಾಡಿದವರೇ. ದೇವೇಗೌಡರೂ ಇದಕ್ಕೆ ಹೊರತಲ್ಲ. ಕಾಂಗ್ರೆಸ್ ಜತೆ ಮಂತ್ರಿ ಮಂಡಲವನ್ನು ನಡೆಸುತ್ತಿದ್ದ ಜೆಡಿಎಸ್‌ಪಕ್ಷ ಹೇಗೆ ವರ್ತಿಸಿತೆಂದು ನಮಗೆಲ್ಲಾ ಗೊತ್ತಿದೆ. ಕುಮಾರಸ್ವಾಮಿಯವರು ತನಗೆ ಸೆಕ್ಯುಲರಿಸಂ ಅಂದರೆ ಏನೆಂದು ಗೊತ್ತೇ ಇಲ್ಲವೆಂದು ಹೇಳಿ ಬಿಜೆಪಿ ಜತೆ ಸರಕಾರ ಮಾಡಿದರು. ಸರಕಾರದಲ್ಲೇ ಇದ್ದ ಬಿಜೆಪಿ ಹಾಗೂ ಎಲ್ಲಾ ಮಾಧ್ಯಮಗಳೂ ೨೦ ತಿಂಗಳ ನಂತರ ಬಿಜೆಪಿಗೆ ಅಧಿಕಾರದ ಹಸ್ತಾಂತರ ಎಂದು ಮಾತನಾಡಿದರು. ಇದೊಂದು ಅಪಹಾಸ್ಯ. ಯಾಕೆಂದರೆ ಆಗಬೇಕಾಗಿದ್ದದ್ದು ಒಪ್ಪಂದದ ಪ್ರಕಾರ ೨೦ ತಿಂಗಳ ನಂತರ ಮುಖ್ಯಮಂತ್ರಿ ಪದವಿಯ ಹಸ್ತಾಂತರ. ಮುಖ್ಯಮಂತ್ರಿ ಮಂತ್ರಿ ಮಂಡಲದ ಮುಖ್ಯನೇ ಹೊರತು ಇನ್ನೇನೂ ಅವನದೇ ಆದ ವಿಶೇಷವಿಲ್ಲ. ಎಲ್ಲರೂ ಒಪ್ಪಿದ್ದನ್ನೂ ಮಾಡಬೇಕಾದವನು ಅವನು. ಆದ್ದರಿಂದ ಕುಮಾರ ಸ್ವಾಮಿ ಆಡಳಿತದಲ್ಲೂ ಬಿಜೆಪಿಯೇ ಆಡಳಿತ ನಡೆಸಿದೆ. ಅನಂತರ ‘ಮುಮಂ’ ಪದವಿ ಯನ್ನು ಹಸ್ತಾಂತರಮಾಡುವುದಿಲ್ಲವೆಂದು ಕ್ರುದ್ಧರಾಗಿ ಬಿಜೆಪಿ ಬಂಡಾಯವೆದ್ದು ತುಮಕೂರಿನಲ್ಲಿ ಒಂದು ವಿರೋಧಿ ಸಭೆ ನಡೆಸುತ್ತಿರುವಾಗಲೇ, ದಿಢೀರನೆ ಇಲ್ಲ  ನೀವೇ ‘ಮುಮಂ’ ಆಗಬಹುದು ಎಂದು ಹೇಲಿ ಆಸೆ ಹುಟ್ಟಿಸಿ ಯಡಿಯೂರಪ್ಪನವರು ಬೆಂಗಳೂರಿಗೆ ಓಡಿ ಬರುವಂತೆ ಮಾಡಿ, ಅವರನ್ನು ನಿರಾಸೆಗೊಳಿಸಲಾಯಿತು. ಸಾಮಾನ್ಯ ಜನಕ್ಕೆ ಇದು ಅನ್ಯಾಯವೆಂದೂ, ಅಧರ್ಮವೆಂದೂ ಅನ್ನಿಸಿರುವುದು ಸಹಜ. ನನಗೂ ಕೂಡಾ ಆ ಸಮಯದಲ್ಲಿ ಪೇಚಿಗೊಳಗಾದ ಯಡಿಯೂರಪ್ಪನವರ ಬಗ್ಗೆ ವೈಯಕ್ತಿಕವಾಗಿ ಸಹಾನೂಭೂತಿಯೇ ಹುಟ್ಟಿತ್ತು. ಇನ್ನು ಲಿಂಗಾಯತ ಜನಾಂಗಕ್ಕಂತೂ ತಮ್ಮವರಲ್ಲಿ ಒಬ್ಬನನ್ನು ಒಕ್ಕಲಿಗ ಜಾತಿಯವರಾದ ದೇವೇಗೌಡರು ವಂಚಿಸಿದರು ಎಂಬುದು ಖಂಡಿತಾ ನೋವಿಗೂ ಸಿಟ್ಟಿಗೂ ಕಾರಣವಾಗಿರಲೇಬೇಕು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ  ಬರುವುದು ಸಾಧ್ಯವಾದ ಮೇಲೂ ಎಂ.ಎಲ್.ಎ.ಗಳನ್ನು ಗಣಿ ಹಣದಿಂದ ಕೊಂಡು ಹಿಂದೆ ಎಲ್ಲ ಪಕ್ಷಗಳೂ ಮಾಡಿದ್ದಕ್ಕಿಂತಲೂ ಹೆಚ್ಚು ಅಧಿಕವಾಗಿ ಅನೈತಿಕತೆಯಿಂದ ವರ್ತಿಸಿ ನಾವೆಲ್ಲರೂ ತಲೆ ತಗ್ಗಿಸುವಂತೆ ಈ party with a difference ಮಾಡಿದೆ. ಇಷ್ಟೇ ಸಾಲದೆಂಬಂತೆ ಈಗ ಒರಿಸ್ಸಾದಂತೆಯೇ ಇಲ್ಲಿಯೂ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಿದೆ.

ನನ್ನ ಗೆಳೆಯರಾದ ಜೆ.ಎಚ್.ಪಟೇಲರೂ ಅಧಿಕಾರದಲ್ಲಿದ್ದಾಗ ದೇವೇಗೌಡರು ಅವರನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಪಟ್ಟರೆಂದು ತಿಳಿದು ಜೀವಾವಧಿ ಸಮಾಜವಾದಿಯಾಗಿದ್ದ ಪಟೇಲರೂ ಕೂಡಾ ಬಿಜೆಪಿಗೆ ಹತ್ತಿರವಾದರು. ಫರೂಕ್ ಅಬ್ದುಲ್ಲರ ಬೆಂಬಲವೂ, ಫರ್ನಾಂಢೀಸರ ಕುಮ್ಮಕ್ಕೂ ಪಟೇಲರ ಬಾಲಿಶ ತಂತ್ರಗಾರಿಕೆಯ ಹಿಂದೆ ಇತ್ತು. ಆಗಲೂ ಕೂಡಾ ಜಾತಿ ರಾಜಕಾರಣ ಮತೀಯ ರಾಜಕಾರಣದ ಜತೆ ಹೆಣೆದುಕೊಂಡಿತು. ಹೀಗೆ ಜನತಾ ಪರಿವಾರಕ್ಕೆ ಒಂದಿಲ್ಲೊಂದು ರೀತಿಯಿಂದ ಬೆಂಬಲಿಸುತ್ತಾ (ಬಳಸಿಕೊಳ್ಳುತ್ತ) ಬಂದ ಬಿಜೆಪಿ ಈಗ ಜನತಾ ಪರಿವಾರವನ್ನೇ ನುಂಗಿ ಹಾಕಿದೆ. ಸದ್ಯ ಇದರಿಂದ ಎಚ್ಚೆತ್ತುಕೊಂಡು ಮಾತಾಡುತ್ತಿರುವವರು ದೇವೇಗೌಡರು ಮಾತ್ರ. ತನ್ನ ಹಿಂದಿನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವರಂತೆ ಇವರು ಸತತವಾಗಿ ಬಿಜೆಪಿಗೆ ವಿರುದ್ಧವಾದ ದಿಟ್ಟ ರಾಜಕಾರಣದಲ್ಲಿ ತೊಡಗಿದ್ದಾರೆ. ಆದರೆ ಜನರು ಇವರನ್ನು ನಂಬಲು ಹಿಂಜರಿಯುತ್ತಾರೆ. ಆದ್ದರಿಂದ ನಮ್ಮ ಹಿಂದಿನ ಜನತಾದಳದ ಮುಖ್ಯರಲ್ಲೊಬ್ಬರಾದ ದೇವೇಗೌಡರು ತಾನು ಮಾಡಿದ ತಪ್ಪನ್ನೆಲ್ಲಾ ತನ್ನ ಮಗನ ಜತೆಗೇ ನಿಂತು ಸಾರ್ವಜನಿಕವಾಗಿ ಒಪ್ಪಿಕೊಳ್ಳದ ಹೊರತು ನಮ್ಮ ರಾಜಕೀಯದ ಸಂದರ್ಭ ತಿಳಿಯಾಗಲಾರದು.

ಇದೊಂದು ನನ್ನ ಊಹೆ. ಕ್ರಿಶ್ಚಿಯನ್ನರನ್ನು ಹಿಂಸೆಗೆ ಒಳ ಮಾಡಿದರೆ ಸೋನಿಯಾ ಗಾಂಧಿಯ ಮೇಲೆ ತಮ್ಮ ರೊಚ್ಚನ್ನು ತೀರಿಸಿಕೊಂಡಂತೆ ಎಂದು ಸಂಘಪರಿವಾರದ ಒರಟರಲ್ಲಿ ಕೆಲವರು ಭಾವಿಸಿರಲೂ ಸಾಕು. ಯಾಕೆಂದರೆ ಇವರ ಮತ್ತು ಶಿವಸೇನೆಯ ರಾಜಕೀಯವೇ ಹೀಗೆ. ಭಾಷೆ ಮತ್ತು ಮತವನ್ನು ಜನರ ನಂಜೇರುವಂತೆ, ಸಮೂಹ ಸನ್ನಿಗೆ ಕಾರಣವಾಗುವಂತೆ ಬಳಸಿಕೊಳ್ಳುವುದರಿಂದ ಬೆಳೆಯುವಂಥದ್ದು. ನಮ್ಮ ದುರದೃಷ್ಟವೆಂದರೆ ಸದ್ಯಕ್ಕೆ ಅದು ಗೆಲ್ಲುತ್ತಿರುವಂತೆ ಕಾಣುತ್ತದೆ. ಹೀಗೆ ಕಂಡಾಗ ಹಿಂದೆ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರು ಮಾಡಿದ ವಿಚಾರಗಳೆಲ್ಲವೂ ಮರುಪರಿಶೀಲನೆಗೆ ಒಳಗಾಗಬೇಕೆಂದು ಅವರ ಜತೆಗೇ ಬೆಳೆದ ನನಗೆ ಅನ್ನಿಸತೊಡಗಿದೆ.

ಜಯಲಲಿತಾರೂ ಇದಕ್ಕೆ ಹೊರತಲ್ಲ. ಕರುಣಾನಿಧಿಯೂ ಇದಕ್ಕೆ ಹೊರತಲ್ಲ. ಚಂದ್ರಬಾಬು ನಾಯ್ಡುವೂ ಇದಕ್ಕೆ ಹೊರತಲ್ಲ. ಫರೂಕ್ ಅಬ್ದುಲ್ಲಾರೂ ಹೊರತಲ್ಲ. ಆದರೆ ಈ ಎಲ್ಲಾ ಒಕ್ಕೂಟಗಳಿಂದ ಬೆಳೆಯುತ್ತಾ ಹೋದದ್ದು ಬಿಜೆಪಿ ಮಾತ್ರ.

ಲೋಹಿಯಾರವರು ದ್ವಿಜರಲ್ಲದ ಎಲ್ಲ ಜಾತಿಗಳೂ ಒಟ್ಟಾಗಬೇಕೆಂದು ಬಯಸಿದ್ದರು. ಆದರೆ ಬಹಿಆರದಲ್ಲಿ ದಲಿತರು ಜತೆಗಿದ್ದರೆ ಕೂರ್ಮಿಗಳು ಮತ್ತು ಯಾದವರು ಜೊತೆಗಿರುವುದಿಲ್ಲ. ಹೀಗೆ ಲೋಹಿಯಾರು ಶೂದ್ರ ಎಂದು ಗುರುತಿಸುವ ಯಾವ ಜಾತಿಯೂ ತನ್ನನ್ನು ಶೂದ್ರ ಎಂದುಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ ಜಾತಿ ಆಧಾರಿತವಾದ ಕ್ರಾಂತಿಕಾರಕ ಬದಲಾವಣೆ ಅಷ್ಟಿಷ್ಟು ಆಗಿಲ್ಲವೆಂದಲ್ಲ. ಆದರೆ ಎಲ್ಲರೂ ಒಟ್ಟಾಗಿ ವೈದಿಕ ನೆಲೆಗಟ್ಟಿನ ಭಾರತವನ್ನು ಅಲ್ಲಾಡಿಸುವುದು ಸಾಧ್ಯವಾಗಲಿಲ್ಲ. ಲೋಹಿಯಾರ ಪ್ರಯತ್ನಕ್ಕೆ ವಿರುದ್ಧವಾಗಿ ಈಗ ಸಂಘಪರಿವಾರದವರು ಹಲವು ಹಿಂದುಳಿದ ಜಾತಿಗಳನ್ನು, ಗಿರಿಜನರನ್ನು, ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದಾರೆ. ಶಿವಸೇನ, ಭಜರಂಗದಳ, ಶ್ರೀರಾಮ ಸೇನೆ-ಇವೆಲ್ಲವೂ ದ್ವಿಜರ ತೆಕ್ಕೆಯಲ್ಲಿಲ್ಲವೆನ್ನುವಂತೆ ತೋರುತ್ತದೆ-ಅದರ ಸದಸ್ಯರಲ್ಲಿ ಬಹುಪಾಲು ಜನರಂತೂ ಹಿಂದುಳಿದ ಜಾತಿಯವರೇ. ಭಾರತದ ಜಾತಿ ಪ್ರೇರಿತ ರಾಜಕೀಯ ಇತಿಹಾಸದಲ್ಲಿ ಇದೊಂದು ವಿಪರ್ಯಾಸ. ಇದರ ಪೂರ್ಣ ಲಾಭವನ್ನು ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ. ಇವಕ್ಕೆಲ್ಲ ಹೊರತಾಗಿ ಕರ್ನಾಟಕದ ರಾಜಕೀಯದಲ್ಲಿ ನೆನಪುಳಿಯುವಂತೆ ನಡೆದ ಕ್ರಿಯೆಗಳೆಂದರೆ ಎರಡೇ: ದೇವರಾಜ ಅರಸರು ಎಮರ್ಜನ್ಸಿ ಕಾಲದಲ್ಲಿ ಮಾಡಿದ ಮೂಲಭೂತ ಬದಲಾವಣೆಗಳು. (ನಾವು ಆಗ ದೇವರಾಜರ ವಿರೋಧಿಗಳು. ಅರಸರೂ ಭ್ರಷ್ಟಾಚಾರವನ್ನು ರಾಜಕಾರಣಕ್ಕೆ ಬಳಸಿದವರು. ಹಿಂದೆ ರಾಜಕಾರಣಕ್ಕಾಗಿ ಭ್ರಷ್ಟಾಚಾರ ನಡೆದರೆ ಈಗ ಹಣಗಳಿಸುವುದಕ್ಕಾಗಿ ರಾಜಕಾರಣ ನಡೆಯುತ್ತ ಇದೆ. ಇವೆಲ್ಲವರೂ ನಮಗೆ ಎದುರಾಗುವ ಸದ್ಯದ ವಿಪರ್ಯಾಸಗಳು.) ಎರಡನೆಯದು: ನಸೀರ್ ಸಾಬರು ಹೆಗಡೆ ಮಂತ್ರಿಮಂಡಳದಲ್ಲಿ ಇದ್ದಾಗ ಹಳ್ಳಿ ಹಳ್ಳಿಗೂ ಕೊಟ್ಟ ನೀರು ಮತ್ತುಪಂಚಾಯಿತಿ ರಾಜ್ಯದ ಕಲ್ಪನೆ. ಇನ್ನೊಂದು ನಾನು ನೆನೆಯಬೇಕಾದ್ದು ಗೋಪಾಲಗೌಡರ ಕಾಲದಲ್ಲಿ ಧೀಮಂತರೂ ಸಾಮಾನ್ಯರೂ ಸಹಕರಿಸುವಂತೆ ನಡೆದ ಚಳವಳಿಗಳು.

ಬಿಜೆಪಿಯೂ ಮಾಸ್ ಪಕ್ಷವಾಗುತ್ತಿದ್ದಂತೆ ಕಾಂಗ್ರೆಸ್ಸಿನ ಕೆಲವು ‘ಕೆಟ್ಟಗುಣ’ಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್‌ನಾಚುವಷ್ಟು ಭ್ರಷ್ಟಾಚಾರವನ್ನು ಕರ್ನಾಟಕದಲ್ಲಿ ಗಣಿ ಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಮುಖಾಂತರ ಬಿಜೆಪಿ ನಡೆಸುತ್ತಿದೆ. ಈ ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಎಲ್ಲ ಪಕ್ಷಗಳೂ ಇದರಲ್ಲಿ ಪಾಲುದಾರರಾಗಿರುತ್ತವೆ. ಸ್ವಲ್ಪ ಕಡಿಮೆ ಭ್ರಷ್ಟಾಚಾರವೆಂದರೆ ಕಮ್ಯುನಿಸ್ಟರು ಅಧಿಕಾರದಲ್ಲಿರುವ ಬಂಗಾಳ ಮತ್ತು ಕೇರಳದಲ್ಲಿ ಇರಬಹುದು. ಅಲ್ಲೂ ಅಧಿಕಾರದಲ್ಲಿರುವ ಪಕ್ಷ ತಮ್ಮ ಕೇಡರ್‌ಗಳ ಮೂಲಕ ಗೂಂಡಾ ಗಿರಿಯನ್ನು ಮಾಡುವುದಿದೆ. ಬಿಜೆಪಿಯಂತೂ ಇಂತಹ ಗೂಂಡಾಗಳನ್ನು ತಮ್ಮ ಸಂಘಪರಿವಾರದ ಹಲವು ಸಂಸ್ಥೆಗಳ ಮೂಲಕ ಪೋಷಿಸುತ್ತಿದೆ.

ಒಟ್ಟಿನಲ್ಲಿ ಈಗಿನ ರಾಜಕೀಯದಲ್ಲಿ ಯಾವ ವಿಚಾರಗಳೂ ಮುಖ್ಯವಾಗಿಉಳಿದಿಲ್ಲ. ಎಲ್ಲರೂ ಡೆವಲಪ್‌ಮೆಂಟ್ ಬಗ್ಗೆಯೇ ಮಾತನಾಡುತ್ತಾರೆ. ಬಂಗಾಳದಲ್ಲಿ ಅಲ್ಲಿನ ಮುಖ್ಯಮಂತ್ರಿ ಡೆವಲಪ್‌ಮೆಂಟ್‌ಗಾಗಿ ರೈತ ವರ್ಗಕ್ಕೆ ಅನ್ಯಾಯ ಮಾಡಲು ಅಂಜುವುದಿಲ್ಲ. ಮೋದಿ ತನ್ನ ದೇಶದಲ್ಲಿ ನಡೆಯಲು ಅನುವು ಮಾಡಿಕೊಟ್ಟ ಹಿಂಸಾಚಾರದ ಬಗ್ಗೆ ನಾವೀಗ ಮಾತಾಡುವಂತೆಯೇ ಇಲ್ಲ. ಮೋದಿ ಎಂದರೆ ಡೆವಲಪ್‌ಮೆಂಟಿಗೆ ಇನ್ನೊಂದು ಹೆಸರಾಗಿಬಿಟ್ಟಿದ್ದಾನೆ. ನಮ್ಮ ನಾರಾಯಣಮೂರ್ತಿಗಳು, ಟಾಟಾ ಕಂಪೆನಿಯವರು ಎಲ್ಲರೂ ಅವನನ್ನು ಅಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್ಸಿನ ಮನಮೋಹನಸಿಂಗ್‌ರಂತೂ ನಮ್ಮೆಲ್ಲರಿಗೂ ಅತ್ಯಂತ ವಿನಯಶೀಲನೆಂದೂ ಸಾಧು ಸ್ವಭಾವದವರೆಂದೂ ಅನ್ನಿಸಿದರೂ ಕೂಡಾ ಅವರ ಅಜೆಂಡಾವೂ ಡೆವಲಪ್‌ಮೆಂಟೇ. ಚಿದಂಬರಂರವರದ್ದಂತೂ ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನೂ ನಾಶಮಾಡಿ ಖಾಸಗೀಕರಣಗೊಳಿಸುವುದೇ ಆಗಿದೆ. ನೆಹರು ಕಾಲದಲ್ಲಿ ಸೃಷ್ಟಿಯಾದ ಹಲವು ಸಾರ್ವಜನಿಕ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳು ಎಲ್ಲ ಮಿತಿಗಳ ನಡುವೆಯೂ ಭಾರತವನ್ನು ಒಂದು ದೊಡ್ಡ ರಾಷ್ಟ್ರವಾಗಿ ಕಟ್ಟಲು ಬೇಕಾದ ವ್ಯವಸ್ಥೆಗೆ ಬುನಾದಿಯನ್ನು ಹಾಕಿದ್ದವು ಎಂಬುದು ನಮಗೀಗ ಮರೆತೇ ಹೋಗಿದೆ. ಸುಲಭವಾಗಿ ಟ್ರಾನ್ಸಿಸ್ಟರ್‌ಗಳನ್ನು, ಕೆಮರಾಗಳನ್ನು ಎಲ್ಲಾ ಬಗೆಯ ವಿದ್ಯುತ್ ಉಪಕರಣಗಳನ್ನು ಭಾರತದಲ್ಲೇ ಪಡೆಯುವ ಮಧ್ಯಮ ವರ್ಗದ ಕನಸು ನನಸಾಗಿದೆ. ಆದರೆ ಈ ಮಧ್ಯಮ ವರ್ಗದವರ ಮಕ್ಕಳು ಕಾಲ್‌ಸೆಂಟರ್‌ಗಳಲ್ಲಿ ಕೆಲಸ ಪಡೆಯುವಷ್ಟರಲ್ಲೇ ತೃಪ್ತರಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ಡೆವಲಪ್‌ಮೆಂಟ್ ಬದಲಾಗಿ ಭಾರತದ ಕೊನೆಯ ಮನುಷ್ಯನನ್ನು ಮುಟ್ಟಬೇಕೆಂಬ ಆಶಯದ ಸರ್ವೋದಯ ಕಲ್ಪನೆಯನ್ನು ಎಲ್ಲ ಪಕ್ಷಗಳೂ ಬಿಟ್ಟುಕೊಟ್ಟಂತೆ ಕಾಣುತ್ತಿದೆ.

ಈಗ ಬಿಜೆಪಿ ಚುನಾವಣೆಗಾಗಿ ಗಣಿಹಣವನ್ನು + ಓಟ್ ಬ್ಯಾಂಕ್‌ಗಾಗಿ ಮತೀಯ ಹಿಂಸೆಯನ್ನು + ಮೀಡಿಯಾಗಳು ಮೆಚ್ಚುವ ಕಾರ್ಯಕ್ರಮವಾಗಿ ಮಧ್ಯಮ ವರ್ಗವನ್ನು ಗೆಲ್ಲುವ ಡೆವಲಪ್‌ಮೆಂಟ್ ಅನ್ನು-ತನ್ನ ತ್ರಿವಳಿ ಅಜೆಂಡಾ ಮಾಡಿಕೊಂಡಿದೆ. ಇದನ್ನು ತಾತ್ವಿಕವಾಗಿ ವಿರೋಧಿಸಬಲ್ಲವರು ಇನ್ನೂ ಗಾಂಧೀವಾದಿಗಳಾಗಿ ಉಳಿದ ಮೇಧಾ ಪಾಟ್ಕರ್‌ರಂಥವರು ಮಾತ್ರ. ಇವರೇ ಈಗಿನ ಕತ್ತಲಿನಲ್ಲಿ ಬೆಳಗುವ ಮಿಣುಕುಹುಳಗಳು.

ಕೊನೆಯಲ್ಲಿ ಭಸ್ಮಾಸುರನ ಕಥೆಯನ್ನು ನೆನೆಸಿಕೊಂಡು ಈ ವಿಶ್ಲೇಷಣೆಯನ್ನು ಮುಗಿಸುತ್ತಿದ್ದೇನೆ. ಪಾಕಿಸ್ತಾನ ತನ್ನ ದೇಶದ ಉಗ್ರರನ್ನು ಬೆಳೆಸಿತು. ಈಗ ಈ ಉಗ್ರರು ಮುಸ್ಲಿಮರೇ ಆದರೂ ಇಡೀ ಇಸ್ಲಾಮಿಕ್ ನಾಗರಿಕತೆಯನ್ನು ನಾಶ ಮಾಡುವವರಾಗಿ ಬೆಳೆದಿದ್ದಾರೆ. ಈಚೆಗೆ ಮ್ಯಾರಿಯೆಟ್ ಹೋಟೆಲ್‌ನ ಅವರು ನಡೆಸಿದ ದಾಳಿ ಇದಕ್ಕೆ ಉದಾಹರಣೆ. ಸೋವಿಯತ್ ಯೂನಿಯನ್‌ನಿಂದ ಆಫ್ಘಾನಿಸ್ತಾನವನ್ನು ಬಿಡುಗಡೆ ಗೊಳಿಸಲು ಅಮೆರಿಕನ್ನರು ತಾಲಿಬಾನ್ ಅನ್ನು ಬೆಳೆಸಿದರು. ತಾಲಿಬಾನ್ ಅಮೆರಿಕದ ನಾಗರಿಕತೆಗೇ ಮುಳುವಾಯಿತು. ಇಲ್ಲಿ ಬಿಜೆಪಿಯವರು ಭಜರಂಗದಳವನ್ನೂ, ಶ್ರೀರಾಮ ಸೇನೆಯನ್ನೂ, ವಿಶ್ವ ಹಿಂದೂ ಪರಿಷತ್ತನ್ನೂ ತಮ್ಮಹೊಟ್ಟೆಯಲ್ಲೇ ಕಾಪಾಡಿ ಬೆಳೆಸುತ್ತಾ ಹೋದರು. ಈಗ ಅವರೇ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಿದ್ದಾರೆ. ಮುಸ್ಲಿಮರ ಮೇಲೆ ದಾಳಿ ನಡೆಸಿದಾಗ ಕ್ರಿಶ್ಚಿಯನ್ನರು ಸುಮ್ಮನಿದ್ದರು. ಈಗ ಅವರ ಬುಡಕ್ಕೇ ಬಂದಿದೆ. ಮೊನ್ನೆ ಎನ್.ಡಿ.ಟಿ.ವಿಯಲ್ಲಿ ನಡೆದ ಒಂದು ಚರ್ಚೆಯಲ್ಲಿ ನಾನು ಭಾಗವಹಿಸಿದ್ದೆ. ಇಡೀ ಚರ್ಚೆಯನ್ನು ಎನ್.ಡಿ.ಟಿ.ವಿ ಪ್ರಸಾರ ಮಾಡಲಿಲ್ಲ. ಸಂಘಪರಿವಾರದ ನಾಯಕರು ತಮ್ಮ ಪರಿವಾರದ ಸಮೇತ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದರು ಎಂದರೆ ಬಾಯಿಗೆ ಬಂದಂತೆ ತಮ್ಮ ವಿರೋಧಿಗಳನ್ನು ನಿಂದಿಸಿದರು. ನಮ್ಮ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಅವರು ಕ್ರಿಶ್ಚಿಯನ್ನರೆಂಬ ಕಾರಣದಿಂದ ನೀವು ಅಮೆರಿಕನ್ ಏಜೆಂಟ್ ಎಂದು ಕರೆದರು. ನನ್ನನ್ನು ಎಷ್ಟು ಹೀಯಾಳಿಸಿದರೆಂದು ನಾನಿಲ್ಲಿ ಬರಹದಲ್ಲಿ ಹೇಳಿಕೊಳ್ಳುವುದು ಅನುಚಿತವೆನ್ನಿಸುತ್ತದೆ.

ನನಗೊಂದು ಗುಮಾನಿ ಇದೆ. ರೈತ ಚಳವಳಿಯಿಂದಲೂ ಸಂಘಪರಿವಾರದಿಂದಲೂ ಬೆಳೆದು ಬಂದ ಶ್ರೀ ಯಡಿಯೂರಪ್ಪನವರು ಮೋದಿಯಂತೆ ಆಗಲು ಬಯಸಿದರೂ ಸಂಪೂರ್ಣ ಆಗಲಾರದೆ ಈಗ ಕಷ್ಟದಲ್ಲಿದ್ದಾರೆ. ಅವರನ್ನು ಕೆಳಗಿಳಿಸಲೆಂದೇ ಅವರ ಪಕ್ಷದ ಉಗ್ರರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ವಚನಕಾರರ ನಾಡು; ಕುವೆಂಪು ಬೇಂದ್ರೆ ಕಾರಂತರ ನಾಡು. ಇಲ್ಲಿ ಮೋದಿಯಾಗುವುದು ಕಷ್ಟವೆಂದು ನಾನು ಭಾವಿಸುತ್ತಲೇ ಗಾಂಧಿಯೇ ಹುಟ್ಟಿದಲ್ಲಿ ಮೋದಿ ಹುಟ್ಟಿದನಲ್ಲವೆ ಎಂದು ಆಶ್ಚರ್ಯಪಡುತ್ತೇನೆ. ಇದೇ ಶಿವನಿಗೇ ಕಂಟಕಪ್ರಾಯನಾದ ಭಸ್ಮಾಸುರನ ಕತೆ. ಕರ್ನಾಟಕ ಯಡಿಯೂರಪ್ಪನವರನ್ನು ಇಳಿಸಿ ಇನ್ನೊಬ್ಬ ಮೋದಿಗೆ ಕಾದಿದೆಯೇನೊ! ನಮ್ಮ ವಿದ್ಯಾವಂತರಾದ ಹಲವರಿಗೆ ಈಗ ಬೇಕಾಗಿರುವುದು ಸರ್ವಜನಹಿತ ನಿರ್ಲಕ್ಷಿಸಿ ಏನನ್ನಾದರೂ ಮಾಡಬಲ್ಲ, ಮಾಡಿ ಗೆಲ್ಲಬಲ್ಲ ನಾಯಕ. ಅಂಥವರು ಮಾತ್ರ ೨೧ನೇ ಶತಮಾನದಲ್ಲಿ ಭಾರತವನ್ನು ಬಲಿಷ್ಟ ರಾಷ್ಟ್ರವಾಗಿ ಮಾಡಬಲ್ಲರೆಂಬ ಭ್ರಮೆ ಇವರಿಗೆ ಇದೆ. ಆದ್ದರಿಂದ ವಿಚಾರ-ವಿಮರ್ಶೆ-ಚರ್ಚೆ-ಅನುಮಾನಗಳ ಪಿಸುನುಡಿಯ ತೊದಲುಗಳು ಇವರಿಗೆ ರಾಷ್ಟ್ರದ್ರೋಹವಾಗಿ ಕಾಣಿಸತೊಡಗಿದೆ. ದಿನಕ್ಕೆ ಹಲವು ಬಾರಿ ನಮಾಜು ಮಾಡುವ ಮುಸ್ಲಿಮರಂತೂ Developmentನ ಶತ್ರುಗಳಾಗಿ ಕಾಣುತ್ತ ಇದ್ದಾರೆ.

ಹಿಂದೆ ಸಮಾಜವಾದಿಗಳು ಕತ್ತಲಲ್ಲಿ ಮಿಣುಕು ಹುಳುಗಳಿದ್ದಂತೆ ಇದ್ದರು ಎಂದೆ. ನನ್ನ ಉಪಮೆ ಅಷ್ಟು ಸಮರ್ಪಕವಲ್ಲವೇನೋ. ಯಾಕೆಂದರೆ ಗೇನಿ ವಿಮೋಚನಾ ಚಳವಳಿ, ಭಾಷಾ ಚಳವಳಿ, ಸ್ತ್ರೀ ಚಳವಳಿ, ರೈತ ಚಳವಳಿ, ದಲಿತ ಚಳವಳಿ ಹೀಗೆ ಹಲವು ಚಳವಳಿಗಳು ಹುಟ್ಟಿಕೊಂಡ ಕಾಲ ಅದು. ಆದರೆ ಕಾಂಗ್ರೆಸ್ಸಿಗೆ ಪರ್ಯಾಯವಾದ ಪಕ್ಷವಾಗುವ ಹುಡುಕಾಟದಲ್ಲಿ ಈ ಬಗೆಯ ಚಳವಳಿಗಳನ್ನು ಮಾಡಬಲ್ಲವರೆಲ್ಲರೂ ಈಗ ಅಪ್ರಸ್ತುತವಾಗಿಕಾಣತೊಡಗಿದ್ದಾರೆ. ಈಗ ಮುಖ್ಯಮಂತ್ರಿಯೆಂದರೆ ಅವನೊಬ್ಬ CEO  ಇದ್ದಹಾಗೆ- ಅವನು Multinational SEZ ಗಳ ಸುಸೂತ್ರವಾಗಿ ನಡೆಯುವಂತೆ ಅಧಿಕಾರ  ಚಲಾಯಿಸಬಲ್ಲವನಾದಾಗ ಎಫಿಶಿಯಂಟ್ ಆಗಿ ಕಾಣುತ್ತಾನೆ. ನಮ್ಮ ರಾಜಕೀಯ ಚಿಂತನೆಗಳೆಲ್ಲವೂ ಈಗ ಹಿಮ್ಮೆಟ್ಟಿ ಎಕ್ಸ್‌ಪರ್ಟ್‌‌ಗಳ ಆಡಳಿತಕ್ಕೆ ನಾವು ಒಳಗಾಗಿದ್ದೇವೆ. ಈ ನಡುವೆ ವೈಚಾರಿಕತೆಯ ಜಾಗದಲ್ಲಿ, ಹಿಂಸಾಚಾರವನ್ನು ನಂಬುವ ನಕ್ಸಲರು, ಭಜರಂಗ ದಳದವರು ಬಂದು ಕೂತಿದ್ದಾರೆ.

ಸದ್ಯದಲ್ಲಿ ನಾವೇನು ಮಾಡಬೇಕು? ಈ ಲೇಖನದ ಸಂದರ್ಭದಲ್ಲಿ ವಿಪರ್ಯಾಸವೆನ್ನಿಸಬಹುದಾದ ಮಾತನ್ನು ಹೇಳುವ ಧೈರ್ಯ ಮಾಡುತ್ತೇನೆ. ಕಾಂಗ್ರೆಸ್ಸೇತರ ರಾಜಕಾರಣದ ಲೋಹಿಯಾ ಯುಗ ಮುಗಿದಿದೆ. ಈಗ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಲೋಹಿಯಾ ಒಮ್ಮೆ ಹೇಳಿದ್ದನ್ನು ನೆನೆಯುತ್ತೇನೆ. ಸದ್ಯ ಮಾಡಲೇಬೇಕಾದ್ದನ್ನು ಮಾಡದೇ ಶಾಶ್ವತ ಸತ್ಯಗಳ ಮಾತಾಡುವುದು ಒಂದೋ ಹೇಡತಿನವಾಗುತ್ತದೆ; ಅಥವಾ ಕನಸುಗಾರಿಕೆಯಾಗುತ್ತದೆ. ಹಾಗೆಯೇ ಶಾಶ್ವತವಾದ ಮಾನವೀಯ ಮೌಲ್ಯಗಳಾದ ದಯೆ, ಪ್ರೀತಿ, ಅಸಹ್ಯ ಪಡದ ಔದಾರ್ಯ ಇವುಗಳನ್ನು ಮರೆತು ಸದ್ಯ ಗೆಲ್ಲುವುದಕ್ಕೆ ಹೊಂದುವುದೂ ಸಮಯಸಾಧಕ ವಂಚನೆಯಾಗುತ್ತದೆ.

ಕ್ರಿಯೆಯಲ್ಲೇ ವ್ಯಕ್ತವಾಗಬೇಕಾದ ಸತ್ಯವಿದು. ನಿತ್ಯ ಗೃಹಿಣಿಯಂತೆ ಸೇರುತ್ತಲೇ ಇರುವ ಕಸವನ್ನು ಗುಡಿಸುತ್ತಲೇ ಇರಬೇಕಾದ ಕಾಯಕವಿದು.

(ದೇಶಕಾಲ, ಸಂಚಿಕೆ೧೫)

* * *