ದಿಲ್ಲಿ ವಿಶ್ವವಿದ್ಯಾಲಯದ ಇತಿಹಾಸದ ಆನರ್ಸ್ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡಲಾಗಿರುವ ಪಠ್ಯಗಳಲ್ಲಿ ಎ.ಕೆ. ರಾಮಾನುಜನ್ ಬರೆದಿರುವ ‘ತ್ರೀ ಹಂಡ್ರೆಡ್ ರಾಮಾಯಣಾಸ್-ಫೈವ್ ಎಗ್ಸಾಂಪಲ್ಸ್ ಅಂಡ್ ತ್ರೀ ಥಾಟ್ಸ್ ‌ಆನ್ ಟ್ರಾನ್‌ಸ್ಲೇಷನ್’ ಎಂಬ ಪ್ರಬಂಧವೂ ಒಂದು. ಇದು ಇತಿಹಾಸ ಪಠ್ಯದಲ್ಲಿ ಇರಕೂಡದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿಶ್ವವಿದ್ಯಾಲಯದಲ್ಲಿ ಗದ್ದಲವೆಬ್ಬಿಸಿದರು. ವಿಭಾಗ ಮುಖ್ಯಸ್ಥರನ್ನು ಎಳೆದಾಡಿದರು. ಪುಸ್ತಕವನ್ನು ಹರಿದು ಹಾಕಿದರು. ಇದಕ್ಕೆ ಕನ್ನಡ ಸಾಹಿತ್ಯಿಕ ಲೋಕದಿಂದ ಬಂದ ಪ್ರತಿಕ್ರಿಯೆ ಬಹುತೇಕ ಶೂನ್ಯ. ರಾಮಾನುಜನ್ ನಮ್ಮವರು, ಕನ್ನಡದವರು ಎಂಬ ಕಾರಣಕ್ಕಾದರೂ ಅವರ ಪುಸ್ತಕವನ್ನು ಹರಿದುದಕ್ಕೆ ಕನ್ನಡಾಭಿಮಾನಿಗಳಿಗೆ ಸಿಟ್ಟು ಬರಬೇಕಿತ್ತು. ಅದೂ ಸಂಭವಿಸಲಿಲ್ಲ. ಇದೇಕೆ ಹೀಗಾಯಿತು? ಬಹುಶಃ ನಾವು ಇಂಥ ವರ್ತನೆಗಳಿಗೆ ಒಪ್ಪಿಗೆ ಕೊಡಲು ಆರಂಭಿಸಿದ್ದೇವೆ ಅನ್ನಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥದ್ದು ತುಂಬಾ ನಡೆಯುತ್ತಿದೆ. ರಾಜಶೇಖರ್, ಫನಿರಾಜ್, ಪಟ್ಟಾಭಿಯಂಥ ಕೆಲವರು ಇಂಥದ್ದನ್ನು ವಿರೋಧಿಸುತ್ತಿದ್ದಾರೆ. ಮತ್ತು ಕೆಲವೇ ಕೆಲವು ಸಂಘಟನೆಗಳು ಇದನ್ನು ಬೆಂಬಲಿಸುತ್ತಿವೆ. ಈ ಬಗೆಯ ಹೋರಾಟಗಳೆಲ್ಲಾ ಹಾಸ್ಯಾಸ್ಪದವಾಗಿ ಕಾಣಿಸುವಂಥ ಒಂದು ಕಾಲವೂ ಹತ್ತಿರದಲ್ಲೇ ಇರಬಹುದೇನೋ ಎಂಬ ಭಯ ನನ್ನನ್ನು ಆವರಿಸುತ್ತಿದೆ. ಕಾಫ್ಕಾನ ಬರೆಹದಲ್ಲಿ ಒಬ್ಬ ಹಂಗರ್ ಆರ್ಟಿಸ್ಟ್ ಇದ್ದಾನೆ. ಊರಿಗೆ ಬಂದವರೆಲ್ಲಾ ಅವನನ್ನು ಹೋಗಿ ನೋಡಿ ಬರುತ್ತಿರುತ್ತಾರೆ. ಅಂದರೆ ಅವನೊಬ್ಬ ಪ್ರೇಕ್ಷಣೀಯ ವ್ಯಕ್ತಿ ಆಗಿಬಿಟ್ಟಿರುತ್ತಾನೆ. ನಮ್ಮ ಹೋರಾಟಗಳಿಗೆ, ಹೋರಾಟಗಾರರಿಗೆ ಈ ‘ಪ್ರೇಕ್ಷಣೀಯ ಸ್ಥಿತಿ’ ಬರಬಾರದು ಎಂಬುದು ಲಂಕೇಶ್ ಹುಟ್ಟಿದ ದಿನ ನಾವು ಆಡಲೇಬೇಕಾದ ಮಾತು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಾಜಕೀಯಕ್ಕೆ ಸಂಬಂಧಿಸಿದ ಕೆಲವು ಟಿಪ್ಪಣಿಗಳನ್ನು ಮುಂದಿಡುತ್ತಿದ್ದೇನೆ.

* * *

ವರ್ತಮಾನದ ರಾಜಕೀಯವನ್ನು ವಿಶ್ಲೇಷಿಸಿದರೆ ಎರಡು ಮುಖ್ಯ ಸಂಗತಿಗಳು ಕಾಣಿಸುತ್ತವೆ. ಮೊದಲನೆಯದ್ದು ಎಲ್ಲ ರಾಜಕೀಯ ಪಕ್ಷಗಳೂ ‘ಅಭಿವೃದ್ಧಿ’ಯಲ್ಲಿ ನಂಬಿಕೆ ಇಟ್ಟಿವೆ. ಎಷ್ಟರ ಮಟ್ಟಿಗೆಂದರೆ ಇದು ಅನಿವಾರ್ಯವಾದ ಪ್ರಾಪಂಚಿಕ ಸ್ಥಿತಿ ಎಂದು ಅವು ಭಾವಿಸಿವೆ. ಸ್ವಲ್ಪ ಎಚ್ಚರ ತಪ್ಪಿದರೆ ಎಲ್ಲರಿಗೂ ಹೀಗೆ ಅನ್ನಿಸುವುದಕ್ಕೆ ಶುರುವಾಗುತ್ತದೆ. ಆದರೆ ಬುದ್ಧಿ ಸ್ವತಂತ್ರವಾಗಿ ಕೆಲಸ ಮಾಡುವಾಗ ಮಾತ್ರ ಅನಿವಾರ್ಯವಾಗಿರುವುದಕ್ಕೂ ಒಂದು ಪರ್ಯಾಯ ಇರಬಹುದು ಎನ್ನುವ ಚಿಂತನೆ ಸಾಧ್ಯವಾಗುತ್ತದೆ. ಅಭಿವೃದ್ಧಿ ಅನಿವಾರ್ಯವಾಗಿರುವುದರಿಂದ ಅದನ್ನು ಸಾಧಿಸುವುದಕ್ಕೆ ಒಂದುಮಟ್ಟದ ಇಂಪೀರಿಯಲಿಸಂ ಕೂಡಾ ಬೇಕು ಎಂಬುದು ವರ್ತಮಾನದ ರಾಜಕಾರಣದ ಮತ್ತೊಂದು ನಂಬಿಕೆ. ಹೀಗೆ ಇಂಪೀರಿಯಲಿಸಂ ಪ್ರಗತಿಗೆ ಅತ್ಯಂತ ಅಗತ್ಯ ಎಂಬ ನಂಬಿಕೆ ಬಹಳ ಹಳೆಯದು. ವ್ಯಕ್ತಿಯ ಸ್ವಾತಂತ್ರ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದ ಇಂಗ್ಲೆಂಡಿನ ಜಾನ್ ಸ್ಟುವರ್ಡ್ ಮಿಲ್ ಕೂಡಾ ಭಾರತದಂಥ ದೇಶವನ್ನು ಇಂಗ್ಲೆಂಡ್‌ನಂತಹ ಒಂದು ದೇಶ ಕೆಲವು ಕಾಲದವರೆಗೆ ಆಳಿ ಅಭಿವೃದ್ಧಿಪಡಿಸಬೇಕೆಂದು ಭಾವಿಸಿದ್ದ. ನಮ್ಮ ಸ್ವಾತಂತ್ರ್ಯ ಹೋರಾಟದ ಆರಂಭದ ಕಾಲಘಟ್ಟವನ್ನು ನೋಡಿದರೆ ಇದು ಅರ್ಥವಾಗುತ್ತದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಬಿಡುಗಡೆ ಪಡೆಯಬೇಕು. ಎನ್ನುತ್ತಿದ್ದವರೂ ‘ಬ್ರಿಟಿಷರು ಇರಲಿ ಆದರೆ ನಮಗೆ ಇನ್ನಷ್ಟು ಸ್ವಾತಂತ್ರ್ಯ ಕೊಡಲಿ’ ಎಂದು ಭಾವಿಸಿದ್ದರು. ಸಂಪೂರ್ಣ ಸ್ವಾತಂತ್ರ್ಯವನ್ನು ಕೇಳುವುದು ಈ ಹಳಬರ ಮನಸ್ಸಿಗೆ ಅಪ್ರಾಯೋಗಿಕ ಅನ್ನಿಸುತ್ತಿತ್ತು. ಇಂಥಾ ಹೊತ್ತಿನಲ್ಲಿ ಪ್ರಗತಿಗೆ ಇಂಪೀರಿಯಲಿಸಂನ ಅಗತ್ಯವಿಲ್ಲ ಎಂದು ಮೊದಲು ಹೊಳೆದದ್ದು ಗಾಂಧೀಜಿಗೆ. ಹೀಗೆ ಪ್ರಾಯೋಗಿಕವಲ್ಲದ್ದನ್ನೂ ಆಲೋಚಿಸುವುದಕ್ಕೆ ಸಾಧ್ಯವಿದ್ದಾಗ ಮಾತ್ರ ಪರ್ಯಾಯಗಳು ಹುಟ್ಟಿಕೊಳ್ಳುತ್ತವೆ. ವಿಚಾರ ಜೀವಂತವಾಗಿರುತ್ತದೆ.

ಆದರೆ ಈಗ ನಮ್ಮಲ್ಲಿ ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರವಂತಿಕೆ ಕನಿಷ್ಠ ಮಟ್ಟದಲ್ಲಿದೆ. ಕಮ್ಯುನಿಸ್ಟರೂ ಕೂಡಾ ವಿಶೇಷ ಆರ್ಥಿಕ ವಲಯಗಳನ್ನು (ಎಸ್‌ಇಝಡ್) ಸೃಷ್ಟಿಸಲು ಹೊರಟಿದ್ದಾರೆ. ಅಂದರೆ ಎಸ್‌ಇಝಡ್ ಮಾದರಿ ಟೀಕಿಸುವ ಬಿಜೆಪಿ ಕೂಡಾ ಚೀನಾದ ಹಾದಿಯನ್ನು ತುಳಿಯುವುದಕ್ಕೆ ಸಿದ್ಧವಾಗಿಬಿಟ್ಟಿದೆ. ಇನ್ನು ಕಾಂಗ್ರೆಸ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ.

ಮತ್ತೊಂದು ಕಮ್ಯುನಿಸ್ಟ್ ಕ್ರಾಂತಿ ಕೂಡಾ ಸದ್ದು ಗದ್ದಲವಿಲ್ಲದೆಯೇ ಬಹಳ ಸುಲಭವಾಗಿ ಬಂಡವಾಳಶಾಹಿ ದಾರಿಗೆ ತಿರುಗಿಕೊಳ್ಳುತ್ತಿದೆ. ಇದು ಯಾಕಾಯಿತು. ಎಂಬುದರ ಬಗ್ಗೆ ಇನ್ನು ಕಮ್ಯುನಿಟರು ಸಂಕಟದಿಂದ ಚರ್ಚಿಸಿ ತೀರ್ಮಾನಕ್ಕೆ ಬಂದೇ ಇಲ್ಲ. ರಷ್ಯಾದಲ್ಲಿ ಆದುದನ್ನು ಅಮೆರಿಕನ್ನರ ಹುನ್ನಾರದಿಂದ ಆಯಿತು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅಥವಾ ಚೀನಾದಲ್ಲಿ ಆಗುತ್ತಿರುವುದಕ್ಕೆ ಮುಂದೊಂದು ದಿನ ಅಂಥದ್ದೇ ಉತ್ತರ ಕಂಡುಕೊಳ್ಳುವುದೂ ಅರ್ಥಹೀನವೇ. ರಷ್ಯಾದ ಜನರೂ ಕೂಡಾ ಈಗ ಆಗಿರುವ ಬದಲಾವಣೆಯನ್ನು ಬಯಸಿದ್ದರು ಎಂಬ ಅಂಶವನ್ನು ಮರೆತು ಈ ಬದಲಾವಣೆಯನ್ನು ಚರ್ಚಿಸಬೇಕು.

ಲೆನಿನ್‌ನ ಪ್ರತಿಪಾದಿಸಿದ ತತ್ವಗಳಲ್ಲಿ ಮುಖ್ಯವಾದುದು ‘ವ್ಯಾನ್‌ಗಾರ್ಡ್ ಆಫ್ ಪ್ರೊಲಿಟೆರಿಯೆಟ್’ ಎಂಬುದು. ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ವರ್ಗದ ಮುಂಚೂಣಿಯಲ್ಲಿರುವವರು ಮ್ಯಾನೇಜರ್‌ಗಳಾಗಿ ಬಿಡುತ್ತಾರೆ ಎಂಬುದು ನಮಗೆ ಮತ್ತೆ ಗೊತ್ತಾಯಿತು. ರಷ್ಯಾದಲ್ಲಿ ಆದದ್ದು ಇದುವೇ. ಈಗ ಚೀನಾದಲ್ಲಿ ಆಗಿರುವುದು ಇದೇ. ಹೀಗೆ ಆಗದೇ ಇರುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಮಾರ್ಕ್ಸ್‌ವಾದಿಗಳು ಯೋಚನೆ ಮಾಡದೇ ಇರುವುದರಿಂದ ಅವರಿಗೆ ಪರ್ಯಾಯ ಚಿಂತನೆ ಸಾಧ್ಯವಾಗಿಲ್ಲ. ವರ್ತಮಾನದ ಯಾವ ರಾಜಕೀಯ ಪಕ್ಷವೂ ನಾವು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಪೂರ್ಣ ಪರ್ಯಾಯವಲ್ಲ. ಒಂದು ವೇಳೆ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದರೆ ಕೋಮುವಾದ ಇರುವುದಿಲ್ಲ ಎಂದು ನಾನು ನಂಬುತ್ತೇನೆ. ಆದ್ದರಿಂದಲೇ ನಾನು ಮತ ಚಲಾಯಿಸುವ ಕ್ಷೇತ್ರದಲ್ಲಿ ಒಬ್ಬ ಕಮ್ಯುನಿಸ್ಟ್ ಅಭ್ಯರ್ಥಿ ಇದ್ದರೆ ನಾನು ಅವನಿಗೇ ಓಟ್ ಮಾಡುತ್ತೇನೆ. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಓಟ್ ಮಾಡುತ್ತೇನೆ. ಯಾಕೆಂದರೆ ಕಾಂಗ್ರೆಸ್ ನಾಚಿಕೆಯನ್ನು ಬಿಟ್ಟು ಕೋಮುವಾದಿಯಾಗುವಷ್ಟು ಹಾಳಾಗಿಲ್ಲ. ಇದರರ್ಥ ಕಾಂಗ್ರೆಸ್ಸಿಗರು ಕೋಮುವಾದಿಗಳಾಗುವುದಿಲ್ಲ ಅಥವಾ ಕೋಮುವಾದಿಗಳಾಗಿರಲಿಲ್ಲ ಎಂದಲ್ಲ. ಕೋಮುವಾದಿಯಾಗುವುದಕ್ಕೆ ಒಂದು ಪಕ್ಷವಾಗಿ ಕಾಂಗ್ರೆಸ್‌ಗೆ ನಾಚಿಕೆಯಾಗುತ್ತದೆ ಎಂದಷ್ಟೇ.

ಒಂದು ಕಾಲದಲ್ಲಿ ಬಿಜೆಪಿಗೂ ಇಂಥ ನಾಚಿಕೆಗಳಿದ್ದವು. ಅಯೋಧ್ಯೆಯಲ್ಲಿ ಮಸೀದಿ ಉರುಳಿದಾಗ ಅಡ್ವಾಣಿ ಹೇಳಿದ ಮೊದಲ ಮಾತು ‘ಐ ಫೀಲ್ ಅಶೇಮ್ಡ್ ಆಫ್ ಇಟ್’ ಎಂದು. ಈ ಮಾತನ್ನು ನಾವು ನಿಜ ಎಂದೇ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಕನಿಷ್ಠ ಹೀಗೊಂದು ಮಾತು ಹೇಳಬೇಕು ಎಂದಾದರೂ ಅನ್ನಿಸಿತ್ತು. ಗುಜರಾತ್‌ನಲ್ಲಿ ಸಾವಿರಾರು ಜನರನ್ನು ಕೊಂದ ನರಮೇಧ ನಡೆವಾಗ ಅಧಿಕಾರದಲ್ಲಿ ಇದ್ದ ನರೇಂದ್ರ ಮೋದಿ ಇಂದಿನವರೆಗೂ ‘ಐ ಫೀಲ್ ಅಶೇಮ್ಡ್ ಆಫ್ ಇಟ್’ ಎಂಬರ್ಥದ ಮಾತನ್ನಾಡಿಲ್ಲ. ಆದರೂ ಮೋದಿಯನ್ನು ಜನರು ಮತ್ತೆ ಮತ್ತೆ ಆಯ್ಕೆ ಮಾಡಿ ಅಧಿಕಾರಕ್ಕೆ ತಂದಿದ್ದಾರೆ. ಇದು ಬಿಜೆಪಿಯೊಳಗೇ ಒಂದು ಬದಲಾವಣೆಯನ್ನು ತಂದಿದೆ. ಮಸೀದೀಯನ್ನು ಒಡೆದದ್ದು ನಾಚಿಕೆಯ ವಿಷಯ. ಅವಮಾನದ ವಿಷಯ ಎಂದು ಒಮ್ಮೆಯಾದರೂ ಹೇಳಿದ್ದ, ಜಿನ್ನಾನನ್ನೂ ಮೆಚ್ಚಿಕೊಳ್ಳುವ ಧೈರ್ಯ ಮಾಡಿದ್ದ, ಬೆನಜೀರ್ ಭುಟ್ಟೋ ಜತೆಗೆ ಸಿಂಧಿ ಭಾಷೆಯಲ್ಲೇ ಮಾತನಾಡುವಷ್ಟು ಸಿಂಧಿ ಭಾಷೆಯೂ ಮೇಲೆ ಪ್ರೀತಿಯನ್ನಿಟ್ಟುಕೊಂಡಿದ್ದ ಆಡ್ವಾಣಿ ಕಾಣೆಯಾಗಿ ನರಮೇಧದ ಬಗ್ಗೆಯೂ ನಾಚಿಕೆ ಪಟ್ಟುಕೊಳ್ಳದ ಮೋದಿ ಬಿಜೆಪಿಗೆ ಮುಖ್ಯವಾಗುತ್ತಿದ್ದಾನೆ.

* * *

ಕಮ್ಯುನಿಸ್ಟರಿಗೂ ಕೆಲವು ನಂಬಿಕೆಗಳಿದ್ದವು. ಅದಕ್ಕೆ ವಿರುದ್ಧವಾದುದನ್ನು ಹೇಳುವುದಕ್ಕೆ ಅವರೂ ನಾಚಿಕೊಳ್ಳುತ್ತಿದ್ದರು. ಉದಾಹರಣೆಗೆ ಕೆಲವು ಕ್ಷೇತ್ರಗಳು ಸಾರ್ವಜನಿಕ ಸ್ವಾಮ್ಯದಲ್ಲೇ ಇರಬೇಕು ಎಂಬುದು ಅದರಲ್ಲೊಂದು. ಆದರೆ ಈಗ ಕಮ್ಯುನಿಸ್ಟರೇ ಎಸ್‌ಈಝಡ್ ಮಾಡಲು ಹೊರಟಿದ್ದಾರೆ. ಇವತ್ತು ಇಡೀ ದೇಶದಲ್ಲಿ ಅಭಿವೃದ್ಧಿಯ ವಿಷಯ ಮಾತನಾಡದೇ ಇರುವ ಒಬ್ಬ ಮುಖ್ಯಮಂತ್ರಿ ಅಂದರೆ ಕೇರಳ ಮುಖ್ಯಮಂತ್ರಿಯಾಗಿರುವ ವಿ.ಎಸ್. ಅಚ್ಯುತಾನಂದನ್ ಮಾತ್ರ. ಆದರೆ ಈತನನ್ನು ಕಂಡರೆ ಅವರ ಪಕ್ಷದ ಯಾರಿಗೂ ಆಗುವುದಿಲ್ಲ. ಆದರೆ ಆತ ಓಟುಗಳನ್ನು ಗಳಿಸಿಕೊಡುವುದರಿಂದ ಇನ್ನೂ ಅಧಿಕಾರದಲ್ಲಿ ಇರಲು ಸಾಧ್ಯವಾಗಿದೆ. ಇಂಥ ಒಂದು ನಿರಾಶಾದಾಯಕ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆ ಬಂದಿದೆ. ಇಲ್ಲಿ ಆಯ್ಕೆಗಳು ಬಹಳ ಪರಿಮಿತವಾದುವು. ಆದ್ದರಿಂದ ನಮ್ಮ ಆಯ್ಕೆ ಆರ್ಥಿಕತೆಯಲ್ಲ. ಇಡೀ ದೇಶವನ್ನು ಮತೀಯವಾದಿಯನ್ನಾಗಿ ಮಾಡುವ ಹುನ್ನಾರವನ್ನು ಇಟ್ಟುಕೊಂಡಿರುವ ಪಕ್ಷವನ್ನು ಅಧಿಕಾರಕ್ಕೆ ತರದೇ ಇರುವುದು.

ಮತೀಯವಾದಿ ಪಕ್ಷವನ್ನು ಅಧಿಕಾರಕ್ಕೆ ತರದೇ ಇರುವುದು ಎಂದಾಕ್ಷಣ ಉಳಿದವರ ಬಗೆಗಿನ ನಮ್ಮ ಭಿನ್ನಮತಗಳೆಲ್ಲಾ ಇಲ್ಲವಾದವು ಎಂದುಕೊಳ್ಳಕೂಡದು. ಲಂಕೇಶ್ ತಳೆದ ಒಂದು ರಾಜಕೀಯ ನಿಲುವಿನ ಮೂಲಕವೇ ಇದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಒಂದು ಚುನಾವಣೆಯಲ್ಲಿ ಲಂಕೇಶ್ ತಮ್ಮ ಪತ್ರಿಕ್ರಿಯೆ ಮೂಲಕ ಸೋನಿಯಾರನ್ನು ಬೆಂಬಲಿಸಿದರು. ಆಗ ನನಗೆ ಲಂಕೇಶರ ಈ ನಿರ್ಧಾರದ ಬಗ್ಗೆ ಗೊಂದಲವಿತ್ತು. ಆದರೆ ಈಗ ರಾಜಕೀಯವಾಗಿ ಸರಿಯಾದ ಆಲೋಚನೆ ಲಂಕೇಶರದ್ದಾಗಿತ್ತು ಅನ್ನಿಸುತ್ತದೆ. ಆ ರೀತಿಯ ಧೈರ್ಯವನ್ನು ಇವತ್ತು ಪತ್ರಿಕೆಗಳು ಮತ್ತು ಪಬ್ಲಿಕ್ ಇಂಟಲೆಕ್ಚುವಲ್‌ಗಳು ಮಾಡಬೇಕಾಗಿದೆ. ಹೀಗೊಂದು ನಿರ್ಧಾರ ತೆಗೆದುಕೊಂಡಾಗಲೂ ನಮ್ಮ ಭಿನ್ನಮತಗಳನ್ನು ಉಳಿಸಿಕೊಂಡಿರಲು ಸಾಧ್ಯವಿದೆ. ಇದನ್ನು ಲಂಕೇಶ್ ತೋರಿಸಿಕೊಟ್ಟಿದ್ದರು.

* * *

ರಾಜ್ಯಶಾಸ್ತ್ರದ ಅಧ್ಯಾಪಕರೊಬ್ಬರು ಚೀನಾದ ಬಗ್ಗೆ ಹೇಳುತ್ತಾ ಅಲ್ಲಿ ಆಡಳಿತಾಗಾರರ ಕಾಳಜಿಯೆಲ್ಲಾ ಒಂದೇ ವಿಷಯದ ಬಗ್ಗೆ. ಅದು ‘ಹಾರ್ಮನಿ’ ಅಥವಾ ಸೌಹಾರ್ದ. ಸೌಹಾರ್ದಕ್ಕಾಗಿ ಅವರು ನಡೆಸುವ ಒದ್ದಾಟ ಬಹಳ ಎಂದಿದ್ದರು. ಈ ಸೌಹಾರ್ದವನ್ನು ಹಿಂಸೆಯ ಮುಖಾಂತರವೂ ಸೃಷ್ಟಿಸಲು ಸಾಧ್ಯ. ಜನರಲ್ಲಿ ಭಯವನ್ನು ಹುಟ್ಟಿಸಿದರೂ ಸೌಹಾರ್ದ ಸ್ಥಾಪನೆಯಾಗುತ್ತದೆ. ಆಗ ಆಡಳಿತ ಯಂತ್ರ ಬಹಳ ದಕ್ಷವಾಗಿಯೂ ಸುಲಲಿತವಾಗಿಯೂ ನಡೆಯುತ್ತಿರುವಂತೆ ಕಾಣಿಸತೊಡಗುತ್ತದೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಭಾರತದಲ್ಲಿ ರೈಲುಗಳೆಲ್ಲಾ ಸಮಯಕ್ಕೆ ಸರಿಯಾಗಿ ಓಡಾಡುತ್ತಿದ್ದವು. ಅಧಿಕಾರಿಗಳೆಲ್ಲಾ ಸರಿಯಾದ ಸಮಯಕ್ಕೆ ಆಫೀಸುಗಳಲ್ಲಿ ಇರುತ್ತಿದ್ದರು. ಈ ಬೆಳವಣಿಗೆ ಮಧ್ಯಮ ವರ್ಗದಲ್ಲಿ ಎಲ್ಲವೂ ಸರಿಯಾಗಿಬಿಟ್ಟಿದೆಯಲ್ಲಾ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ. ಗುಜರಾತ್‌ನಲ್ಲೂ ಇಂಥದ್ದೊಂದು ‘ಸೌಹಾರ್ದ’ ಕಾಣಿಸುತ್ತಿದೆ. ಅಲ್ಲಿರುವ ಮುಸ್ಲಿಮರೂ ಕೂಡಾ ಇಲ್ಲಿ ಸಾಕಷ್ಟು ‘ಸೌಹಾರ್ದ’ ಇದೆ. ಈಗಿರುವುದಕ್ಕೆ ಎದುರಾಡದೇ ಸುಮ್ಮನಿರುವದೇ ಒಳ್ಳೆಯದು ಎಂದು ಭಾವಿಸುತ್ತಿದ್ದರೂ ನಾವು ಆಶ್ಚರ್ಯಪಡಬೇಕಾಗಿಲ್ಲ. ಇವತ್ತು ‘ಸೌಹಾರ್ದ’ ಎಂಬುದು ಅತ್ಯುತ್ಕೃಷ್ಟ ಗುಣಮಟ್ಟದಲ್ಲಿ ದೊರೆಯುವುದು ಸಿಂಗಾಪೂರ್‌ನಲ್ಲಿ. ಆದರೆ ಅಲ್ಲಿ ಜೀವಂತಿಕೆಯೇ ಇಲ್ಲ. ಅಲ್ಲಿ ಯಾವ ಚರ್ಚೆಯೂ ನಡೆಯುವುದಿಲ್ಲ. ಮಾನಸಿಕ ಉತ್ಕೃಷ್ಟತೆ ಅಗತ್ಯವಿರುವ ಯಾವ ಕೆಲಸವೂ ಅಲ್ಲಿ ನಡೆಯುವುದಿಲ್ಲ.

ಹಿಂದೆ ಪಶ್ಚಿಮ ಬಂಗಾಳದಲ್ಲಿ ‘ರೆಡ್ ಟೆರರ್’ನ ವಿರುದ್ಧ ಒಂದು ‘ವೈಟ್ ಟೆರರ್’ ಇರಬೇಕೆಂದು ಅಲ್ಲಿನ ಸರಕಾರ ನಿರ್ಧರಿಸಿತ್ತು. ಈ ಚಿಂತನೆ ಈಗ ಇಡೀ ದೇಶಕ್ಕೆ ವ್ಯಾಪಿಸುತ್ತಿದೆ. ಈ ಬಗೆಯ ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆಯ ಮೂಲಕ ‘ಸೌಹಾರ್ದ’ವನ್ನು ಸ್ಥಾಪಿಸಲು ಸರಕಾರಗಳು ಹೊರಡುತ್ತಿವೆ. ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಇದನ್ನು ಮಾಡಬಹುದು. ಇದನ್ನು ನಾಚಿಕೆಯೇ ಇಲ್ಲದೆ ಮಾಡಬಹುದಾದ ರಾಜಕೀಯ ಪಕ್ಷವೆಂದರೆ ಅದು ಮೋದಿ ಮಾದರಿಯ ಬಿಜೆಪಿ. ಇದರ ಬಗ್ಗೆ ನಾವು ಗಾಢವಾಗಿ ಚಿಂತಿಸದೇ ಇದ್ದರೆ ಪ್ರಜಾತಂತ್ರ ಎಂಬುದು ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆಯ ಮುಖಾಂತರ ಎಲ್ಲರನ್ನೂ ತಣ್ಣಾಗಿಗಿಸಿ ‘ಸೌಹಾರ್ದವನ್ನು ಖಚಿತಪಡಿಸುವ ಒಂದು ವ್ಯವಸ್ಥೆ ಆಗಬಹುದು. ಹೀಗಾದಾಗ ಭಾರತ ಈ ತನಕ ಎಷ್ಟು ಸೃಜನಶೀಲವಾಗಿತ್ತೋ ಅಷ್ಟು ಸೃಜನಶೀಲವಾಗಿ ಉಳಿಯುವುದಿಲ್ಲ.

* * *

ಇತ್ತೀಚೆಗೆ ಮಾಧ್ಯಮಗಳಂತೂ ಪ್ರಭುತ್ವದ ಹಿಂಸೆಗೆ ಅಗತ್ಯವಿರುವ ಒಮ್ಮತವನ್ನು ಮೂಡಿಸುವುದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡುತ್ತಿವೆ. ಒಂದು ಕಾಳದಲ್ಲಿ ಎಲ್ಲಾದರೂ ಮತೀಯ ಗಲಭೆ ಸಂಭವಿಸಿದರೆ ಯಾವ ಎರಡು ಕೋಮುಗಳ ಮಧ್ಯೆ ಈ ಗಲಭೆ ಸಂಭವಿಸಿತು ಎಂಬುದನ್ನು ಪತ್ರಿಕೆಗಳು ವರದಿ ಮಾಡುತ್ತಿರಲಿಲ್ಲ. ಈ ವರದಿಗಾರಿಕೆಯ ಮಿತಿಗಳೇನೇ ಇದ್ದರೂ ಅದರಲ್ಲಿ ಅದರಲ್ಲೊಂದು ಸಾಮಾಜಿಕ ಜವಾಬ್ದಾರಿಯ ಅಂಶವಿತ್ತು.

ಒಮ್ಮೆ ಶರದ ಪವಾರ್ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ತಾನು ಸುಳ್ಳಾಡಿದ್ದೆ ಎಂದು ತಪ್ಪೊಪ್ಪಿಕೊಂಡರು. ಸ್ಫೋಟವಾಗಿದ್ದ ಸ್ಥಳಗಳ ಪಟ್ಟಿಗೆ ಮುಸ್ಲಿಮರೇ ಹೆಚ್ಚಾಗಿರುವ ಒಂದು ಸ್ಥಳವನ್ನೂ ಸೇರಿಸಿಕೊಂಡು ಅವರು ಪತ್ರಿಕಾ ಹೇಳಿಕೆ ನೀಡಿದ್ದರಂತೆ. ಮುಸ್ಲಿಮರ ವಿರುದ್ಧ ದಾಳಿಗಳು ಆರಂಭವಾಗಿಬಿಡಬಹುದು ಎಂದು ಸಂಶಯದಿಂದ ಶರದ್ ಪವಾರ್ ಈ ಸುಳ್ಳು ಹೇಳಿದ್ದರಂತೆ. ಆಡಳಿತ ನಡೆಸುತ್ತಿರುವ ವ್ಯಕ್ತಿಯೊಬ್ಬನಿಗೆ ಇದ್ದ ಸಾಮಾಜಿಕ ಜವಾಬ್ದಾರಿಯನ್ನು ಶರದ್ ಪವಾರ್ ಹೀಗೆ ನಿರ್ವಹಿಸಿದ್ದರು. ಒಂದು ಗಲಭೆ ಮತ್ತೊಂದು ಗಲಭೆಗೆ ಪ್ರೇರಣೆಯಾಗಬಾರದು ಎಂಬ ಉದ್ದೇಶ ಅವರದ್ದಾಗಿತ್ತು. ಗುಜರಾತ್‌ನಲ್ಲಿ ಆಡಳಿತಾರೂಢರ ಕಡೆಯಿಂದ ಇಂಥದ್ದೊಂದು ಪ್ರಯತ್ನವೇ ನಡೆಯಲಿಲ್ಲ. ಅಲ್ಲಿ ಆಡಳಿತ ನಡೆಸುತ್ತಿದ್ದವರೇ ಒಂದು ಟೆರರ್ ಸೃಷ್ಟಿಸಿ ಜನರು ಬಾಯಿಮುಚ್ಚಿಕೊಂಡಿರುವಂತೆ ಮಾಡಿದರು. ಅದಕ್ಕೆ ದೇಶವ್ಯಾಪಿಯಾಗಿ ಒಪ್ಪಿಗೆಯೂ ದೊರೆಯಿತು. ಬಹುಶಃ ಹೀಗೆ ಒಪ್ಪಿಗೆ ನೀಡುವವರ ಮನಸ್ಸಿನಲ್ಲಿ ರಾಷ್ಟ್ರ ಭದ್ರವಾಗಬೇಕಾದರೆ ಇಂಥ ಪ್ರಭುತ್ವ ಭಯೋತ್ಪಾದನೆ ಅಗತ್ಯ ಎಂಬ ಭಾವನೆ ಇರಬೇಕು.

* * *

ನಾನು ಚಿಕ್ಕವನಾಗಿದ್ದಾಗ ನಡೆದ ಘಟನೆಯೊಂದು ನೆನಪಾಗುತ್ತಿದೆ. ಯಾರೋ ರಾಷ್ಟ್ರಧ್ವಜವನ್ನು ಸುಟ್ಟು ಹಾಕಿದ್ದ ಸುದ್ದಿ ಅದು. ಇದಕ್ಕೆ ಪ್ರಧಾನಿ ಜನಹರಲಾಲ್ ನೆಹರು ಬಹಳ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಹೀಗೆ ರಾಷ್ಟ್ರಧ್ವಜ ಸುಟ್ಟವರನ್ನು ನಾವು ಸುಡಬೇಕಾಗುತ್ತದೆ ಎಂಬ ಅರ್ಥದ ಮಾತುಗಳನ್ನು ಅವರು ಆಡಿದ್ದರೆನಿಸುತ್ತದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಜಯಪ್ರಕಾಶ್ ನಾರಾಯಣ್ ‘ಬಾವುಟವೂ ಒಂದು ಬಟ್ಟೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಮನುಷ್ಯ ಜೀವ ಅದಕ್ಕಿಂತ ಬೆಲೆಯುಳ್ಳದ್ದು’ ಎಂದಿದ್ದರು. ಯಾವ ರಾಷ್ಟ್ರದಲ್ಲೇ ಆಗಲಿ ಈ ರೀತಿಯ ಮನಸ್ಸಿನ ಸಮತೂಕ ಇರುವವರು ಬೇಕು. ಈ ಸಮತೂಕ ಇಲ್ಲದೇ ಇದ್ದರೆ ಈ ರಾಷ್ಟ್ರಪ್ರೇಮ ಎನ್ನುವುದೂ ಕೂಡಾ ಭಯದಿಂದ ಹುಟ್ಟಿದ ರಾಷ್ಟ್ರಪ್ರೇಮವಾಗುತ್ತದೆ. ರಾಷ್ಟ್ರಪ್ರೇಮ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಇಂಗ್ಲೆಂಡ್‌ನಲ್ಲಿ ಓದುತ್ತಿದ್ದಾಗ ಅಲ್ಲಿದ್ದ ಅನೇಕ ಜನ ಪಾಕಿಸ್ತಾನಿ ಸ್ನೇಹಿತರು ನನಗೆ ಬೆಂಗಳೂರು ಈಗ ಹೀಗಿದೆ, ಎಲ್ಲೆಲ್ಲಿ ಏನೇನಿದೆ ಎಂಬುದನ್ನು ಕೇಳಿಕೊಳ್ಳುತ್ತಿದ್ದರು. ಅವರಿಗೆ ಪ್ರೀತಿ ಇದ್ದದ್ದು ಬೆಂಗಳೂರಿನ ಮೇಲೆ. ರಾಷ್ಟ್ರಪ್ರೇಮ ಅನ್ನುವುದಕ್ಕಿಂತ ದೇಶ ಪ್ರೇಮ ಎಂದು ಗುರುತಿಸಬಹುದಾದ ಮನಸ್ಥಿತಿ ಇದು. ಈ ದೇಶಪ್ರೇಮ ಅಮೂರ್ತವಾದ ರಾಷ್ಟ್ರವನ್ನು ಆಧಾರವಾಗಿ ಇಟ್ಟುಕೊಂಡಿರುವುದಿಲ್ಲ. ಇದು ಜೀವನದ ಭಾಗವೇ ಆಗಿರುವ ಒಂದು ಸ್ಥಳ ಮತ್ತು ಅಲ್ಲಿ ಜೀವನ ಕ್ರಮದ ಮೇಲಿನ ಪ್ರೀತಿಯ ಅಭಿವ್ಯಕ್ತಿಯಾಗಿರುತ್ತದೆ. ಹಾಗೆಯೇ ಭಾರತದಲ್ಲಿ ಇವತ್ತಿಗೂ ಎಷ್ಟೋ ಜನ ಲಾಹೋರ್ ಅಂದರೆ ಪ್ರಾಣ ಬಿಡುವವರಿದ್ದಾರೆ. ಲಾಹೋರ್‌ನಲ್ಲಿ ದಿಲ್ಲಿಯನ್ನು ಬಹಳ ಪ್ರೀತಿಸುವವರಿದ್ದಾರೆ.

* * *

ಟರ್ಕಿಯಲ್ಲಿ ಕುರಾನ್ ಅನ್ನು ಆಧುನಿಕ ಕಾಲಕ್ಕೆ ಅನುಗುಣವಾಗಿ ಪುನರ್ ವ್ಯಾಖ್ಯಾನಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆಯೇ ಪಾಕಿಸ್ತಾನದ ಚುನಾವಣೆಯಲ್ಲಿ ‘ಕಾಶ್ಮೀರ ಸಮಸ್ಯೆ’ ಒಂದು ವಿಷಯವೇ ಆಗಲಿಲ್ಲ. ಪಾಕಿಸ್ತಾನದ ಜನ ತಣ್ಣಗೆ ಒಬ್ಬ ಸರ್ವಾಧಿಕಾರಿಯ ವಿರುದ್ಧ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಮರಳಿ ತಂದರು. ಹಾಗೆ ನೋಡಿದರೆ ಪಾಕಿಸ್ತಾನದ ಸರ್ವಾಧಿಕಾರಿ ಮುಷರಫ್ ಕೂಡಾ ತನ್ನ ದೇಶದಲ್ಲಿ ಒಂದು ಬಗೆಯ ‘ಸೌಹಾರ್ದ’ವನ್ನು ಸೃಷ್ಟಿಸಿದ್ದ. ಪಾಕಿಸ್ತಾನದ ಜನ ಈ ‘ಸೌಹಾರ್ದ’ದ ಭ್ರಮೆಯನ್ನು ಕಳಚಿಕೊಂಡು ಸೃಜನಶೀಲರಾಗಲು ನಿರ್ಧರಿಸಿದರು.

ಮೂಲಭೂತವಾದವನ್ನು ವಿರೋಧಿಸುವ ನಮಗೆ ಈ ಎಲ್ಲಾ ಬೆಳವಣಿಗೆಗಳೂ ಕಾಣಬೇಕು. ಮುಸ್ಲಿಂ ಮೂಲಭೂತವಾದಕ್ಕೆ ಇಸ್ಲಾಮಿಕ್ ರಾಷ್ಟ್ರಗಳಲ್ಲೆ ವಿರೋಧ ಇದೆ ಎಂಬುದನ್ನು ಗಮನಿಸುವುದು ರಾಜಕೀಯವಾಗಿ ಬಹಳ ದೊಡ್ಡ ಅಗತ್ಯ ಮುಸ್ಲಿಂ ಮೂಲಭೂತವಾದದಿಂದ ಮುಸ್ಲಿಮರಿಗೇ ತೊಂದರೆ ಎಂಬುದು ನಮಗೂ ಅರ್ಥವಾದರೆ ನಾವೆಲ್ಲರೂ ಒಟ್ಟಾಗಿ ಹುಡುಕಬೇಕಿರುವ ಶಾಂತಿಯ ನೆಲೆ ಯಾವುದು ಎಂಬುದೂ ಸ್ಪಷ್ಟವಾಗುತ್ತದೆ.

ಈಗ ನಾವು ನೋಡುತ್ತಿರುವ ರಾಜಕಾರಣ ಇಂಥ ಸಂವೇದನೆಗಳನ್ನು ಕಳೆದು ಕೊಂಡಿರುವ ಓಟ್ ಬ್ಯಾಂಕ್ ರಾಜಕಾರಣ. ಹಿಂದೂಗಳ ಓಟುಗಳು ಜಾತಿಗಳಲ್ಲಿ ಒಡೆದು ಹೋಗದೇ ಇರಲಿ ಎಂದು ‘ಹಿಂದುತ್ವ’ ರಾಜಕಾರಣ ಪ್ರಯತ್ನಿಸುತ್ತದೆ. ಇದಕ್ಕೆ ಪ್ರಬಲ ವಿರೋಧವನ್ನೊಡ್ಡುವ ರಾಜಕಾರಣ ಮುಸ್ಲಿಂ ಮತಗಳು ಒಡೆಯದಂತೆ ನೋಡಿ ಕೊಳ್ಳುವ ಉದ್ದೇಶಕ್ಕೆ ಸೀಮತಿವಾಗಿಬಿಡುತ್ತದೆ. ಹೀಗೆ ಧ್ರುವೀಕೃತಗೊಂಡ ವಾತಾವರಣದಲ್ಲಿ ಜನರು ಒಂದು ಬಗೆಯ ಮಂಕಿನಲ್ಲಿ ಮತ ಚಲಾಯಿಸುತ್ತಾರೆ.

ಮೋದಿಯಿಂದ ಗುಜರಾತ್ ಅಭಿವೃದ್ಧಿ ಹೊಂದಿತು ಎಂದು ಗುಜರಾತ್‌ನ ಮಧ್ಯಮ ವರ್ಗ ನಂಬಿದೆ. ಈ ಬಗೆಯ ಒಂದು ಅಭಿವೃದ್ಧಿಯನ್ನು ಮೋದಿ ಸಾಧಿಸಿಯೂ ಇರಬಹುದು. ಈ ಅಭಿವೃದ್ಧಿ ಎನ್ನುವ ವಿಷಯ ಬಹಳ ಸಂಕೀರ್ಣವಾದುದು. ಬೆಂಗಳೂರನ್ನಷ್ಟೇ ನೋಡಿದರೆ ಕರ್ನಾಟಕದ ಅಭಿವೃದ್ಧಿಯಾಗಿದೆ ಎನ್ನಬಹುದು. ಬೆಂಗಳೂರಿನ ಹತ್ತಿರದ ಹಳ್ಳಿಗೆ ಹೋದರೆ ಚಿತ್ರ ಬೇರೆಯೇ ಇರುತ್ತದೆ. ಮೋದಿಯ ಸರಕಾರದ ಬಗ್ಗೆ ಈ ಬಗೆಯ ಒಂದು ವಿಶ್ಲೇಷಣೆ ನಡೆಯಬೇಕು. ಅದೇನೇ ಇದ್ದರೂ ಕಣ್ಣಿಗೆ ಕಾಣುವ ಹಾಗಿನ ಅಭಿವೃದ್ಧಿಯನ್ನು ಸಾಧಿಸಿ ಮೋದಿ ಮಧ್ಯಮ ವರ್ಗವನ್ನು ಮೆಚ್ಚಿಸಿದಂತೆ ಕಾಣಿಸುತ್ತದೆ.

ಗುಜರಾತಿಗಳು ವ್ಯಾಪಾರದಲ್ಲಿ ಬಹಳ ನಿಪುಣರು. ಆಧುನಿಕ ಅಭಿವೃದ್ಧಿಯನ್ನು ತಮಗೆ ಬೇಕಿರುವಂತೆ ಬಳಸಿಕೊಳ್ಳಲು ಅವರಿಗೆ ತಿಳಿದಿದೆ. ಮೋದಿ ಇದನ್ನು ಅರಿತೇ ‘ಅಭಿವೃದ್ಧಿಗೆ’ ಗಮನಹರಿಸಿದಂತೆ ಇದೆ. ಅಭಿವೃದ್ಧಿಯ ಜತೆಗೇ ಮೋದಿ ಪ್ರತಿಪಾದಿಸುವ ಸಿದ್ಧಾಂತವನ್ನೂ ಒಪ್ಪಿಕೊಳ್ಳುತ್ತಿರುವುದು ಹಿಟ್ಲರ್ ಕಾಲದ ಜರ್ಮನಿಯನ್ನು ನೆನಪಿಸುತ್ತದೆ.

ಮೊದಲನೇ ಮಹಾಯುದ್ಧದ ನಂತರದ ಜರ್ಮನಿಯಲ್ಲಿ ಒಂದು ಪ್ಯಾಕ್ ಸಿಗರೇಟ್ ಖರೀದಿಸಲು ಗೋಣಿಚೀಲದಲ್ಲಿ ಹಣ ತುಂಬಿಕೊಂಡು ಹೋಗಬೇಕಿತ್ತು. ಈ ಅವಧಿಯಲ್ಲಿ ಹಿಟ್ಲರ್‌ ‘ಪ್ರಜಾಸತ್ತಾತ್ಮಕ’ವಾಗಿಯೇ ಅಧಿಕಾರಕ್ಕೆ ಬಂದ. ಅಭಿವೃದ್ಧಿಯನ್ನು ಆರಂಭಿಸಿದ. ಇಡೀ ದೇಶದಲ್ಲಿ ‘ಸೌಹಾರ್ದ’ವನ್ನು ಉಂಟು ಮಾಡಿದ. ಆಮೇಲೆ ಯಹೂದ್ಯರನ್ನು ಜರ್ಮನಿಯ ವೈರಿಗಳು ಎಂದು ಪ್ರತಿಪಾದಿಸಿ ಅವರನ್ನು ಕೊಲ್ಲಲು ಆರಂಭಿಸಿದ. ಇಂಥ ಹಿಟ್ಲರ್ ಸಸ್ಯಾಹಾರಿಯೂ, ದಕ್ಷನೂ ಆಗಿದ್ದ.

ಇವನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಚರಿತ್ರೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಬಹುಶಃ ನಮ್ಮಲ್ಲಿ ಅದು ಮರುಕಳಿಸಲಾರದೇನೋ. ನಮ್ಮದು ಎಷ್ಟು ದೊಡ್ಡ ದೇಶವೆಂದರೆ ಒಂದು ಊರಿನ ಸಂಸ್ಕೃತಿ ಮತ್ತೊಂದು ಊರಿನಲ್ಲಿ ಇರುವುದಿಲ್ಲ. ಬಿಜೆಪಿ ಎಲ್ಲ ಕಡೆಯೂ ಗುಜರಾತ್‌ನಲ್ಲಿ ಬೆಳೆದಂತೆಯೇ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮೋದಿ ಒಂದು ರಾಜಕೀಯ ಆದರ್ಶವಾಗುತ್ತಿರುವುದು ನನಗೆ ಭಯ ಹುಟ್ಟಿಸುತ್ತಿದೆ.

(ಲಂಕೇಶ್ ಪತ್ರಿಕೆ, ಮಾರ್ಚ್ ೨೦೦೮)

* * *