ಕರ್ನಾಟಕ ಹೈಕೋರ್ಟ್ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಒಂದು ತೀರ್ಪು ನೀಡಿದೆ. ಇದು ಸರಕಾರದಿಂದ ಅನುದಾನ ಪಡೆಯದೇ ಶಾಲೆಗಳನ್ನು ನಡೆಸುವವರಿಗೆ ತಮಗೆ ಬೇಕಾದಂತೆ ಶಾಲೆಗಳನ್ನು ನಡೆಸಲು ಹಕ್ಕು ಇದೆಯೇ ಇಲ್ಲವೇ ಎಂಬುದನ್ನು ಮಾತ್ರ ಪರಿಗಣಿಸಿ ನೀಡಿದ ತೀರ್ಪು. ಆದರೆ ಇಲ್ಲಿರುವುದು ಹಕ್ಕಿನ ಪ್ರಶ್ನೆ ಅಲ್ಲ. ಶಿಕ್ಷಣ ನೀತಿಯ ಪ್ರಶ್ನೆ. ಆದುದರಿಂದ ಕರ್ನಟಕ ಸರ್ಕಾರ ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡಿರುವುದು ಸರಿಯಾಗಿದೆ.

‘ಮಾತೃಭಾಷೆ’ ಎಂಬ ಪ್ರಯೋಗ ಭಾರತದ ಸಂದರ್ಭದಲ್ಲಿ ಗೊಂದಲಗಳನ್ನು ಸೃಷ್ಟಿಸಬಹುದಾದ ಒಂದು ಪಾರಿಭಾಷಿಕ. ಈ ಕಾರಣದಿಂದಾಗಿಯೇ ನಾನು ಮಾತೃ ಭಾಷೆಯೆಂಬ ಪ್ರಯೋಗದ ಬದಲಿಗೆ ‘ಮನೆ ಮಾತು’ ಎಂಬ ಪದವನ್ನು ಬಳಸುತ್ತೇನೆ. ಮನೆ ಮಾತಿನಂತೆಯೇ ‘ಬೀದಿಯ ಮಾತು’ ಮತ್ತು ‘ಅಟ್ಟದ ಮಾತು’ಗಳೂ ಇವೆ. ಇವೆಲ್ಲವೂ ನಮ್ಮ ನಿತ್ಯದ ಬಳಕೆಯಲ್ಲಿ ಇರುವಂಥವು. ಬಳಕೆಯ ಸಂದರ್ಭಗಳು ಮಾತ್ರ ಬೇರೆ ಬೇರೆ. ಮನೆ ಮಾತು ಮನೆಯೊಳಗಿನ ಮಾತು. ಬೀದಿ ಮಾತು ನಿತ್ಯದ ವ್ಯವಹಾರಕ್ಕೆ ಬಳಕೆಯಾಗುವ ಮಾತು. ಅಟ್ಟದ ಮಾತು ಎಂಬುದು ಹೊರಜಗತ್ತಿನ ಜತೆಗೆ ಸಂಪರ್ಕಕ್ಕೆ ಅಗತ್ಯವಿರುವ ಭಾಷೆ.

ನನ್ನ ಅನೇಕ ಗೆಳೆಯರ ಮನೆ ಮಾತು ತೆಲುಗು. ಡಿ.ಆರ್. ನಾಗರಾಜ್‌ರದು ತೆಲುಗು, ಅಗ್ರಹಾರ ಕೃಷ್ಣಮೂರ್ತಿಯವರದು ತೆಲುಗು. ನನ್ನ ತಾಯಿಯದು ತುಳು. ಚಿತ್ತಾಲರದು ಕೊಂಕಣಿ. ಕನ್ನಡದ ಅನೇಕ ಹಿರಿಯ ಲೇಖಕರ ಮನೆ ಮಾತು ಕೂಡಾ ಕನ್ನಡವಾಗಿರಲಿಲ್ಲ. ಗೋವಿಂದ ಪೈಗಳ ಮನೆ ಮಾತು ಕೊಂಕಣಿ, ಮಾಸ್ತಿಯವರದ್ದು ತಮಿಳು, ಬೇಂದ್ರೆಯವರದ್ದು ಮರಾಠಿ. ಹೀಗೆ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಆದರೆ ಇವರೆಲ್ಲರಿಗೂ ಬೀದಿ ಮಾತು ಕನ್ನಡವಾಗಿತ್ತು. ಇವರೆಲ್ಲರೂ ಅಭಿವ್ಯಕ್ತಿಗೆ ಕನ್ನಡವನ್ನೇ ಆರಿಸಿಕೊಂಡರು.

ಇನ್ನು ಅಟ್ಟದ ಮಾತಿನ ವಿಷಯಕ್ಕೆ ಬಂದರೆ ಒಂದು ಕಾಲದಲ್ಲಿ ನಮಗೆ ಸಂಸ್ಕೃತ ಅಟ್ಟದ ಮಾತಾಗಿತ್ತು. ಟಿಪ್ಪುಕಾಲದಲ್ಲಿ ಪರ್ಷಿಯನ್ ಭಾಷೆಗೆ ಅಟ್ಟದ ಮಾತಿನ ಸ್ಥಾನ ದೊರೆಯಿತು. ಈಗ ಇಂಗ್ಲಿಷ್‌ಗೆ ಆ ಸ್ಥಾನ ದೊರೆತಿದೆ. ಮನೆ ಮಾತು ಮತ್ತು ಬೀದಿ ಮಾತಿನಷ್ಟೇ ಅಟ್ಟದ ಮಾತೂ ಅಗತ್ಯವಾದುದೇ. ನಾವು ಒಂದು ಸ್ವತಂತ್ರವಾದ ದೇಶ ಎಂಬ ಮಾತ್ರಕ್ಕೆ ಜಗತ್ತಿನ ಜತೆ ಸಂಪರ್ಕ ಇಟ್ಟುಕೊಳ್ಳದೇ ಇರಲು ಸಾಧ್ಯವಿಲ್ಲ. ಬೇರೆ ಬೇರೆ ಕಡೆ ಇರುವ ಅರಿವನ್ನು ಗ್ರಹಿಸುವುದಕ್ಕೂ ಇಂಥದ್ದೊಂದು ಭಾಷೆ ಅಗತ್ಯ. ಈ ಸೂಕ್ಷ್ಮ ಕವಿರಾಜಮಾರ್ಗಕಾರನಿಗೇ ಗೊತ್ತಿತ್ತು. ಆದ್ದರಿಂದಲೇ ಅವನು ದೇಸಿ ಮತ್ತು ಮಾರ್ಗದ ಪರಿಕಲ್ಪನೆಗಳನ್ನು ಹೇಳಿದ್ದಾನೆ.

ಬೋಧನಾ ಮಾಧ್ಯಮದ ವಿಷಯವನ್ನು ಚರ್ಚಿಸುವಾಗಲೂ ನಾವು ಈ ಎಲ್ಲಾ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡೇ ಮಾತನಾಡಬೇಕು. ನಾವು ಮೊದಲು ಕಲಿಯುವುದು ಮನೆ ಮಾತಿನಲ್ಲಿ. ಈ ಕಲಿಕೆಯ ನಂತರದ್ದು ನಡೆಯುವುದು ಬೀದಿ ಮಾತಿನಲ್ಲಿ. ಜಗತ್ತನ್ನು ನಾವು ಅರ್ಥ ಮಾಡಿಕೊಳ್ಳುವುದೇ ಬೀದಿ ಮಾತಿನ ಮುಖಾಂತರ. ಇದೇ ಮಾತು ಶಾಲೆಯಲ್ಲೂ ಇರಬೇಕು. ನಾವು ಶಾಲೆಯಲ್ಲಿ ಕಲಿಯುವಷ್ಟನ್ನೇ ಶಾಲೆ ಮತ್ತು ಮನೆಯಿಂದ ಹೊರಗಿರುವ ಜಗತ್ತಿನಿಂದ ಕಲಿಯುತ್ತಿರುತ್ತೇವೆ. ಅಂದರೆ ಜನರ ಜತೆಗಿನ ಸಂಸರ್ಗದಿಂದ ಕಲಿಯುತ್ತಿರುತ್ತೇವೆ ಎಂದರ್ಥ.

ಕರ್ನಾಟಕದಲ್ಲಿರುವ ಮಗುವೊಂದು ಮನೆಯಲ್ಲಿ ಇಂಗ್ಲಿಷ್‌ ಮಾತನಾಡುತ್ತಿದ್ದರೂ ಅದು ತನ್ನ ಸುತ್ತಲಿನ ಸಮುದಾಯದಿಂದ ಏನನ್ನಾದರೂ ಕಲಿಯಬೇಕೆಂದಿದ್ದರೆ ಅದಕ್ಕೆ ಕನ್ನಡ ಗೊತ್ತಿರಬೇಕು. ಕನ್ನಡದ ಒಂದು ಮಗು ತಮಿಳುನಾಡಿನಲ್ಲಿ ಇದ್ದರೆ ಅದು ತನ್ನ ಸುತ್ತಲಿನ ಸಮುದಾಯದಿಂದ ಕಲಿಯುವುದು ತಮಿಳಿನ ಮೂಲಕವೇ ಹೊರತು ಮನೆಯಲ್ಲಿ ಆಡುವ ಕನ್ನಡದಿಂದಲ್ಲ. ನಮ್ಮ ಶಿಕ್ಷಣ ನೀತಿ ರೂಪುಗೊಳ್ಳಬೇಕಾಗಿರುವುದು ಈ ತರ್ಕದ ನೆಲೆಗಟ್ಟಿನಲ್ಲಿ.

* * *

ಜಗತ್ತಿನ ಎಲ್ಲ ಶಿಕ್ಷಣ ತಜ್ಞರೂ ಬೋಧನಾ ಮಾಧ್ಯಮದ ವಿಷಯದಲ್ಲಿ ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ. ಎಲ್ಲ ತಜ್ಞರೂ ಮಕ್ಕಳು ಪ್ರತಿನಿತ್ಯ ಆಡುವ ಭಾಷೆಯಲ್ಲೇ ಅವರು ಎಲ್ಲ ವಿಚಾರಗಳನ್ನೂ ಗ್ರಹಿಸಬೇಕು ಎನ್ನುತ್ತಾರೆ. ಮಕ್ಕಳು ತಮಗೆ ತಿಳಿಯದ ಭಾಷೆಯಲ್ಲಿ ಕಲಿಯಲು ಹೊರಟಾಗ ಅವರು ಕೇವಲ ಅನುಕರಣಶೀಲರಾಗುತ್ತಾರೆ. ಪರಿಣಾಮವಾಗಿ ಅವರಿಗೆ ಕಲಿಯುತ್ತಿರುವ ವಿಷಯ ಆಪ್ತವಾಗುವುದಿಲ್ಲ. ಆಪ್ತವಾಗದ ವಿಷಯದ ಆಳಕ್ಕೆ ಇಳಿಯಲು ಯಾರೂ ಮುಂದಾಗುವುದಿಲ್ಲ.

ಎರಡು ವರ್ಷಗಳ ಹಿಂದೆ ಒರಿಸ್ಸಾದ ಭುವನೇಶ್ವರದಲ್ಲಿರುವ ಇನ್ಸ್‌ಟಿಟ್ಯೂಟ್ ಆಫ್ ಫಿಸಿಕ್ಸ್‌ಗೆ ಒಂದು ವಿಶೇಷ ಉಪನ್ಯಾಸ ನೀಡಲು ಹೋಗಿದ್ದೆ. ಅಲ್ಲಿ ಭೇಟಿಯಾದ ಹಿರಿಯ ಭೌತವಿಜ್ಞಾನಿಯೊಬ್ಬರು ಭಾರತೀಯ ವಿಜ್ಞಾನಿಗಳ ಮಿತಿಯ ಬಗ್ಗೆ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ‘ನಮ್ಮಲ್ಲಿ ಹಲವರು ಸ್ವತಂತ್ರವಾಗಿ ಯೋಚಿಸುವುದಿಲ್ಲ. ಒಂದು ರೀತಿಯಲ್ಲಿ ನಮ್ಮದು ಎರಡನೇ ದರ್ಜೆಯ ಮನಸ್ಸುಗಳು. ಪ್ರಾಯಶಃ ನಾವು ಚಿಕ್ಕ ವಯಸ್ಸಿನಲ್ಲಿ ವಿಜ್ಞಾನದ ವಿಷಯಗಳನ್ನು ನಮಗೆ ಆಪ್ತವಾದ ಭಾಷೆಯಲ್ಲಿ ಕಲಿತಿಲ್ಲದಿರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. ಇದರಿಂದಾಗಿ ನಮ್ಮ ಆಲೋಚನಾ ಕ್ರಮದಲ್ಲಿ ನಮ್ಮದೇ ಎಂದು ಹೇಳಿಕೊಳ್ಳುವಂಥ ಅನನ್ಯತೆ ಇಲ್ಲ’.

ಬೋಧನಾ ಮಾಧ್ಯಮ ಯಾವುದಾಗಿರಬೇಕು ಎಂಬ ಪ್ರಶ್ನೆಗೆ ಈ ವಿಜ್ಞಾನಿಯ ಮಾತು ಸರಿಯಾದ ಉತ್ತರ ನೀಡುತ್ತಿದೆ ಎಂಬುದು ನನ್ನ ಅನಿಸಿಕೆ. ಬೋಧನಾ ಮಾಧ್ಯಮಕ್ಕೂ ಕಲಿಕೆಯ ಸೂಕ್ಷ್ಮಗಳಿಗೂ ಇರುವ ಸಂಬಂಧವನ್ನು ಗಮನದಲ್ಲಿಟ್ಟುಕೊಂಡೇ ಬೋಧನಾ ಮಾಧ್ಯಮ ಕುರಿತ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳಬೇಕಾಗಿದೆ.

* * *

ನಮ್ಮಲ್ಲಿ ಎರಡು ಬಗೆಯ ಶಾಲೆಗಳಿವೆ. ಒಂದು ಭಾರೀ ಶುಲ್ಕ ಪಡೆದು ‘ಇಂಗ್ಲಿಷ್ ಕಲಿಸುವ’ ಪ್ರತಿಷ್ಠಿತ ಶಾಲೆಗಳು. ಮತ್ತೊಂದು ಬಡವರ ಮಕ್ಕಳು ಶಿಕ್ಷಣ ಪಡೆಯುವ ಸರಕಾರೀ/ಅನುದಾನಿತ ಕನ್ನಡ ಶಾಲೆಗಳು. ಈ ಶೈಕ್ಷಣಿಕ ವಾತಾವರಣ ಮಕ್ಕಳನ್ನು ಹಿಂಸಿಸುತ್ತಿದೆ. ಪಾಲಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಕ್ಕೆ ಅನುಗುಣವಾಗಿ ಮಕ್ಕಳನ್ನೂ ಒಡೆದು ಶಿಕ್ಷಣ ನೀಡುವ ವ್ಯವಸ್ಥೆ ರೂಪುಗೊಂಡಿದೆ. ಒಂದೇ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಪಾಲಕರು ಉಳ್ಳವರಾಗಿದ್ದರೆ ತಥಾಕಥಿತ ಪ್ರತಿಷ್ಠಿತ ಶಾಲೆಗೂ, ಬಡವರಾಗಿದ್ದರೆ ಸರಕಾರೀ ಶಾಲೆಗೂ ಹೋಗುತ್ತಿದ್ದಾರೆ. ಪ್ರತಿಷ್ಠಿತ ಶಾಲೆಗಳು ತಮ್ಮ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡು ಪಾಲಕರನ್ನು ಶೋಷಿಸುತ್ತಿವೆ. ಸರಕಾರೀ ಶಾಲೆಗಳು ಅರಿವುಳ್ಳ ಪಾಲಕರ  ಮೇಲ್ವಿಚಾರಣೆಯಿಲ್ಲದೆ ಗುಣಮಟ್ಟದಲ್ಲಿ ಸೊರಗುತ್ತಿವೆ.

ಈ ಸಮಸ್ಯೆಯನ್ನು ನಿವಾರಿಸುವುದಕ್ಕೆ ಇರುವ ಏಕೈಕ ಮಾರ್ಗ ಸಾಮಾನ್ಯ ಶಾಲೆಗಳ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವುದು. ಹತ್ತನೇ ತರಗತಿಯ ತನಕ ಎಲ್ಲಾ ಮಕ್ಕಳಿಗೂ ಸಮಾನ್ಯ ಶಾಲೆಯಲ್ಲಿ ಸಮಾನ ಶಿಕ್ಷಣ ದೊರೆಯಬೇಕು. ಅಷ್ಟರವರೆಗೆ ಬೆಳೆದ ಮನಸ್ಸು ಮುಂದೆ ಯಾವ ಭಾಷೆಯನ್ನಾದರೂ ಕಲಿಯಲು ಸಿದ್ಧವಾಗಿರುತ್ತದೆ. ಭಿನ್ನವರ್ಗಗಳ ಮಕ್ಕಳು ಒಂದೆಡೆ ಕಲಿಯುವುದರಿಂದ ಮಕ್ಕಳ ಮನಸ್ಸು ಅರಳುತ್ತದೆ.

* * *

ಬೋಧನಾ ಕೌಶಲ್ಯಕ್ಕೆ ಸಂಬಂಧಿಸಿದಂತೆ ರವೀಂದ್ರನಾಥ ಟ್ಯಾಗೋರ್ ಒಂದು ಘಟನೆಯನ್ನು ಹೇಳಿದ್ದಾರೆ. ಸುಮಾರು ಹದಿನೆಂಟು ವರ್ಷದ ಯುವಕನೊಬ್ಬ ಶಾಂತಿನಿಕೇತನಕ್ಕೆ ಅಧ್ಯಾಪಕನಾಗಿ ಬಂದನಂತೆ. ಆತ ಎಷ್ಟು ಉತ್ಸಾಹಿ ಎಂದರೆ ಮಕ್ಕಳಿಗೆ ಅರ್ಥವಾಗಲಿ ಆಗದೇ ಇರಲಿ ತನಗೆ ಗೊತ್ತಿರುವ ಎಲ್ಲವನ್ನೂ ಮಕ್ಕಳಿಗೆ ಹೇಳುತ್ತಿದ್ದನಂತೆ. ಬ್ರೌನಿಂಗ್ ಇಷ್ಟವೆಂದು ಬ್ರೌನಿಂಗ್‌ನ ಬಗ್ಗೆ ತನಗೆ ತಿಳಿದಿರುವುದನ್ನೆಲ್ಲಾ ಅವನು ಮಕ್ಕಳೆದುರು ಇಡಲು ಪ್ರಯತ್ನಿಸುತ್ತಿದ್ದನಂತೆ.

ಟ್ಯಾಗೋರ್ ಅವರ ಅಭಿಪ್ರಾಯದಂತೆ ಮಕ್ಕಳು ಈತನಿಂದ ಕಲಿತಷ್ಟು ಇನ್ಯಾರಿಂದಲೂ ಕಲಿಯಲಿಲ್ಲವಂತೆ. ಮಕ್ಕಳಿಗೆ ಇಷ್ಟು ಮಾತ್ರ ಕಲಿಯಲು ಸಾಧ್ಯ ಎಂದು ತಿಳಿದವನು ಮಕ್ಕಳಿಗೆ ಏನನ್ನೂ ಕಲಿಸುವುದಿಲ್ಲ. ತನಗೆ ಇಷ್ಟವಾದುದನ್ನೆಲ್ಲಾ ಹೇಳುವವನು ತನ್ನ ಮಿತಿಗೆ ಮೀರಿದ್ದನ್ನೂ ಕಲಿಸುತ್ತಿರುತ್ತಾನೆ. ಮಕ್ಕಳು ಹೀಗೆ ಶಿಕ್ಷಕ ಹೇಳಿದ್ದನ್ನೆಲ್ಲಾ ಅರ್ಥ ಮಾಡಿಕೊಳ್ಳುತ್ತಾರೆಂದೇನೂ ಭಾವಿಸಬೇಕಾಗಿಲ್ಲ. ಆದರೆ ಅವರ ಮನಸ್ಸು ಚುರುಕಾಗುತ್ತದೆ, ಅರಳುತ್ತದೆ. ಬ್ಲೇಕ್ ಕವಿಯ ಒಂದು ಮಾತಿದೆ : You don’t know enough if you don’t know more than enough.

ಸಾಮಾನ್ಯ ಶಾಲೆಗಳಲ್ಲಿ ಇರುವ ಅನುಕೂಲಗಳಲ್ಲಿ ಇದೂ ಒಂದು. ಅಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳಿರುವಂತೆಯೇ ಅಷ್ಟು ಬುದ್ಧಿವಂತರಲ್ಲದ ವಿದ್ಯಾರ್ಥಿಗಳೂ ಇರುತ್ತಾರೆ. ಶಿಕ್ಷಕ ತನಗೆ ಗೊತ್ತಿರುವುದನ್ನೆಲ್ಲಾ ಹೇಳುವುದರ ಮೂಲಕ ಬುದ್ಧಿವಂತರ ಜತೆಗೆ ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿಗಳೂ ಕಲಿಕೆಯಲ್ಲಿ ತೊಡಗಿಕೊಳ್ಳುವ ಹಾಗೆ ಮಾಡುತ್ತಾನೆ. ಹೀಗೆ ಕಲಿಯುವ ಆಸೆಯನ್ನು ಹುಟ್ಟಿಸುವುದೇ ಶಿಕ್ಷಣ ಕ್ರಮದಲ್ಲಿ ಬಹಳ ಮುಖ್ಯ. ಕಲಿಯುವ ಆಸೆ ಹುಟ್ಟುವುದಕ್ಕೆ ಅವರು ಯಾವ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಅವರ ಕಲಿಕೆಯ ಭಾಷೆಯೂ ಬಳಕೆಯ ಭಾಷೆಯೂ ಒಂದೇ ಆಗಿದ್ದರೆ ಅವರ ಕಲಿಕೆಯ ಆವರಣ ಶಾಲೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸುತ್ತದೆ.

ಸದ್ಯದ ನಮ್ಮ ಶೈಕ್ಷಣಿಕ ವಾತಾವರಣದಲ್ಲಿ ಇದು ಸಂಭವಿಸುತ್ತಿಲ್ಲ. ಇದೇ ತೊಂದರೆಯನ್ನು ಒಂದು ಕಾಲದಲ್ಲಿ ಇಂಗ್ಲೆಂಡ್ ಎದುರಿಸಿತ್ತು. ಭಾಷೆಯ ವಿಷಯದಲ್ಲಿ ಅಲ್ಲ, ಗುಣಮಟ್ಟದ ವಿಷಯದಲ್ಲಿ. ಆಗ ಸಾಮಾನ್ಯ ಶಾಲೆಗಳ ಪರಿಕಲ್ಪನೆಯನ್ನೇ ಹೋಲುವ ‘ನೈಬರ್‌ಹುಡ್ ಸ್ಕೂಲ್’ ಪರಿಕಲ್ಪನೆಯನ್ನು ಆಚರಣೆಗೆ ತರಲು ಹೆಣಗಿತು. ವರ್ಗಸಮಾಜವೇ ಆಧಾರವಾದ ಬ್ರಿಟಿಷ್ ವ್ಯವಸ್ಥೆ ಸತತವಾಗಿ ಬದಲಾಗಲು ಪ್ರಯತ್ನಿಸುತ್ತಲೇ ಬಂದಿದೆ. ಆರ್ನಾಲ್ಡ್, ರೇಮಂಡ್ ವಿಲಿಯಮ್ಸ್ ಎಲ್ಲರೂ ವರ್ಗ ಮೀರಲು ಹೋರಾಡಿದ ಧೀಮಂತರು. ಥ್ಯಾಚರ್ ಕಾಲದಲ್ಲಿ ಇವೆಲ್ಲ ಬದಲಾಯಿತು. ಇಂಗ್ಲೆಂಡ್ ಕಳೆಗುಂದಿತು.

ಅಮೆರಿಕದಲ್ಲಿ ಕೆನಡಿ ಅಧಿಕಾರಿದಲ್ಲಿದ್ದಾಗ ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿದ್ದ ಕರಿಯರು ಮತ್ತು ಬಿಳಿಯರನ್ನು ಒಂದುಗೂಡಿಸಲು ಸ್ಕೂಲ್ ಬಸ್ಸಿಂಗ್ ಆರಂಭಿಸಿ ಕರಿಯರ ಶಾಲೆಗೆ ಬಿಳಿಯರನ್ನು ಬಿಳಿಯರ ಶಾಲೆಗೆ ಕರಿಯರನ್ನೂ ಕಳುಹಿಸುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿದ. ಇದಕ್ಕೆ ಬಿಳಿಯರಿಂದ ಬಹಳ ವಿರೋಧ ವ್ಯಕ್ತವಾದರೂ ಕೆನಡಿ ಅದಕ್ಕೆ ಮಣಿಯಲಿಲ್ಲ. ಅದರ ಫಲ ಇಂದು ಕಾಣಿಸುತ್ತಿದೆ. ಈಗ ಕರಿಯರೂ ಅಮೆರಿಕದ ಮುಖ್ಯವಾಹಿನಿಯಲ್ಲಿದ್ದಾರೆ. ಒಬಾಮಾ ಇಂದು ಅಮೆರಿಕದ ಅಧ್ಯಕ್ಷನಾಗುವ ಸಾಧ್ಯತೆ ಇದೆ. ಹಾಗೆ ನೋಡಿದರೆ ನಮ್ಮಲ್ಲಿ ಈ ಸಾಧ್ಯತೆ ಇಲ್ಲಿಯ ತನಕವೂ ಇತ್ತು. ದೇವೇಗೌಡರು ಪ್ರಧಾನಿಯಾದರು. ಹಳ್ಳಿಗಾಡಿನಿಂದ ಬಂದವರೇ ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಲಾಲೂ ಪ್ರಸಾದ್ ಯಾದವ್ ಕೂಡಾ ಪ್ರಧಾನಿಯಾಗಬಹುದು. ಈ ಸಾಧ್ಯತೆ ಇನ್ನೂ ಗಟ್ಟಿಯಾಗಬೇಕಾದರೆ, ಗಾಢವಾಗಬೇಕಾದರೆ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ದೊರೆಯಬೇಕು.

ದೊಡ್ಡ ದೊಡ್ಡ ಸ್ಥಾನಗಳಿಗೇರಿದ ಲಾಲೂ, ದೇವೇಗೌಡ, ಕೆ.ಆರ್. ನಾರಾಯಣನ್, ವೀರಪ್ಪ ಮೊಯ್ಲಿ ತರಹದವರೆಲ್ಲರೂ ಇಂಥ ಸಾಮಾನ್ಯ ಶಾಲೆಗಳಿಂದಲೇ ಬಂದವರು. ಆದರೆ ಇನ್ನು ಮುಂದಿನ ಜನಾಂಗವನ್ನು ನಾವು ಹೀಗಾಗದಿರುವಂತೆ ರೂಪಿಸುತ್ತಿದ್ದೇವೆ. ಉಳ್ಳವರಿಗೊಂದು ಶಾಲೆ, ಇಲ್ಲದವರಿಗೊಂದು ಶಾಲೆಯೆಂಬ ವ್ಯವಸ್ಥೆಯನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೇವೆ. ಇದು ಅಪಾಯದ ಸಂಗತಿ.

ಕರ್ನಾಟಕ ಹೈಕೋರ್ಟ್ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು ಕೂಡಾ ಈ ಅಪಾಯವನ್ನು ಹೆಚ್ಚಿಸುತ್ತಿರುವುದು ವಿಷಾದನೀಯ ಸತ್ಯ. ಶಾಲೆ ನಡೆಸುವವರ ಹಕ್ಕಿನ ಬಗ್ಗೆ ಕೊಟ್ಟ ಈ ತೀರ್ಪು ಶಿಕ್ಷಣದ ವ್ಯಾಪಾರೀಕರಣವನ್ನು ಉತ್ತೇಜಿಸುತ್ತದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಎಲ್ಲೆಡೆ ಸರಕಾರದ ಅನುದಾನವನ್ನು ನಿರೀಕ್ಷಿಸುವ ‘ಇಂಗ್ಲಿಷ್ ಕಲಿಸುವ’ ಶಾಲೆಗಳು ಹುಟ್ಟಿಕೊಳ್ಳುತ್ತವೆ. ಇಂಗ್ಲಿಷ್‌ನ ವ್ಯಾಮೋಹವಿರುವ ಮಧ್ಯಮ ವರ್ಗ ಈ ಶಾಲೆಗಳಿಗೆ ದುಡ್ಡನ್ನೂ ಕೊಡುತ್ತದೆ. ಅನುದಾನ ಬಯಸದೆ ಶಾಲೆಗಳನ್ನು ಆರಂಭಿಸುವವರಿಗೆ ವ್ಯಾಪಾರವಾಗುತ್ತದೆ. ಸಮಾಜ ಮಾತ್ರ ಒಡೆಯುತ್ತದೆ.

* * *

ಕರ್ನಾಟಕದ ಸಂದರ್ಭದಲ್ಲಿ ಬೋಧನಾ ಮಾಧ್ಯಮದ ಕುರಿತ ಚರ್ಚೆಗೆ ಇನ್ನೂ ಒಂದು ಆಯಾಮವಿದೆ. ಇದು ಬಹುತೇಕ ಭಾರತೀಯ ಭಾಷೆಗಳೆಲ್ಲವೂ ಅನುಭವಿಸುತ್ತಿರುವ ತೊಂದರೆ. ಎ.ಕೆ. ಆಂಟನಿ ಕೇರಳದ ಮುಖ್ಯಮಂತ್ರಿಯಾಗಿದ್ದಾಗ ಸರಕಾರೀ ಶಾಲೆಗಳಿಗೆ ಸೇರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿಯನ್ನು ನೇಮಿಸಿದ್ದರು. ಈ ಸಮಿತಿಯ ನೇತೃತ್ವದ ಹೊಣೆ ನನ್ನದಾಗಿತ್ತು. ನಾವು ಕೇರಳಾದ್ಯಂತ ಸಂಚರಿಸಿ ಶಾಲೆಗಳನ್ನು ಪರಿಶೀಲಿಸಿದಾಗ ನಮಗೆ ತಿಳಿದುಬಂದ ವಿಷಯಗಳು ಮೂರು.

೧. ಸರಕಾರೀ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳಿದ್ದವು.

೨. ಒಳ್ಳೆಯ ಶಿಕ್ಷಕರೂ ಇದ್ದರು.

೩. ಇಷ್ಟೆಲ್ಲಾ ಇದ್ದರೂ ಪಾಲಕರು ಮಕ್ಕಳನ್ನು ಸರಕಾರೀ ಶಾಲೆಗೆ ಕಳುಹಿಸಲು ಸಿದ್ಧರಿರಲಿಲ್ಲ.

ಪಾಲಕರ ಈ ನಿಲುವಿಗೆ ಕಾರಣವನ್ನು ಕಂಡುಕೊಂಡಾಗ ಸರಕಾರೀ ಶಾಲೆಗಳು ಎದುರಿಸುತ್ತಿರುವ ನಿಜವಾದ ಸಮಸ್ಯೆ ತಿಳಿಯಿತು. ಸರಕಾರೀ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದಿಲ್ಲ ಎಂಬುದು ಪಾಲಕರಿಗೆ ಇದ್ದ ದೊಡ್ಡ ಸಮಸ್ಯೆ. ಪರಿಣಾಮವಾಗಿ ಅವರು ಇಂಗ್ಲಿಷ್ ಕಲಿಸುವ ಆದರೆ ಕೆಟ್ಟದಾಗಿರುವ ಖಾಸಗಿ ಶಾಲೆಗಳಿಗೆ ಭಾರೀ ಪ್ರಮಾಣದ ಶುಲ್ಕ ಕೊಟ್ಟು ಮಕ್ಕಳನ್ನು ಸೇರಿಸುತ್ತಿದ್ದರು. ಸಮಿತಿ ಈ ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ವಿಶ್ಲೇಷಿಸಿ ಪರಿಹಾರ ಮಾರ್ಗವಾಗಿ ಸರಕಾರೀ ಶಾಲೆಗಳಲ್ಲೂ ಮಕ್ಕಳಿಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬ ಸಲಹೆ ನೀಡಿತು. ಇದಕ್ಕೆ ಖಾಸಗಿ ಶಾಲೆಗಳ ವಲಯದಿಂದ ಬಹಳ ವಿರೋಧ ಬಂತು. ಅವರ ವ್ಯಾಪಾರ ಕುಸಿಯುತ್ತದೆ ಎಂಬ ಕಾರಣದಿಂದ.

ರಸ್ತೆಬದಿಯ ಹೋಟೆಲಿನ ಇಡ್ಲಿ ರುಚಿಕರವಾಗಿದ್ದರೂ, ಅದಕ್ಕಿಂತ ಐವತ್ತು ಪಟ್ಟು ಹೆಚ್ಚು ಹಣತೆತ್ತು ಪೆಡಸಾದ ಇಡ್ಲಿಯನ್ನು ಫೈವ್ ಸ್ಟಾರ್ ಹೋಟೆಲುಗಳಲ್ಲಿ ತಿನ್ನುವ ಸ್ನಾಬ್‌ಗಳ ಆಯ್ಕೆಯಂತೆಯೇ ಈ ಖಾಸಗೀ ಶಾಲೆಗಳನ್ನು ನಮ್ಮ ಆಧುನಿಕ ಶ್ರೀಮಂತರು ಆಯ್ಕೆ ಮಾಡುವುದು.

ಕರ್ನಾಟಕದ ಸಮಸ್ಯೆಯೂ ಬಹುಶಃ ಇಂಥದ್ದೇ. ಇಲ್ಲಿಯೂ ಪಾಲಕರಿಗೆ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂಬ ಆಸೆ ಇದೆ. ವರ್ತಮಾನದ ಸಾಮಾಜಿಕ ಸ್ಥಿತಿಯಲ್ಲಿ ಅತ್ಯಂತ ಸಹಜವಾದ ಆಸೆ. ಪಾಲಕರ ಮನಸ್ಸಿನಲ್ಲಿ ಇಂಥದ್ದೊಂದು ಆಸೆಯನ್ನು ಹುಟ್ಟಿಸುವಂಥ ಶೈಕ್ಷಣಿಕ ವಾತಾವರಣ ಕಳೆದ ಹಲವು ವರ್ಷಗಳಿಂದ ಸರಕಾರದ ಒತ್ತಾಸೆಯಿಂದಲೇ ಸೃಷ್ಟಿಯಾಗಿದೆ.

ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು? ಶಾಲೆ ನಡೆಸುವವರ ಹಕ್ಕಿನ ಕುರಿತ ತೀರ್ಮಾನಗಳನ್ನು ಮಾಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ನಾವು ರೋಗಿಯ ತಿನ್ನುವ ಹಕ್ಕಿನ ಪ್ರಶ್ನೆಗಳನ್ನಿಟ್ಟುಕೊಂಡು ಚರ್ಚಿಸುವುದಿಲ್ಲ. ರೋಗಿಗೆ ತಿನ್ನುವ ಹಕ್ಕಿದೆ ಎಂಬ ಕಾರಣಕ್ಕೆ ಅವನ ರೋಗ ಉಲ್ಬಣಿಸಲು ಕಾರಣವಾಗುವಂಥದ್ದನ್ನು ತಿನ್ನಬಹುದೆಂಬ ನಿರ್ಧಾರಕ್ಕೂ ಬರುವುದಿಲ್ಲ. ಶಿಕ್ಷಣ ನೀತಿಗೆ ಸಂಬಂಧಿಸಿದ ವಿಷಯವೂ ಅಷ್ಟೇ. ಸಾಮಾಜಿಕ ಆರೋಗ್ಯಕ್ಕೆ ಯಾವುದು ಅಗತ್ಯವೋ ಅದನ್ನು ನೀತಿಯನ್ನಾಗಿ ಅಂಗೀಕರಿಸಬೇಕಾಗುತ್ತದೆ. ಈ ನಿರ್ಧಾರ ಪಾಲಕರ ‘ಹಕ್ಕು’ ಮತ್ತು ಶಾಲೆ ನಡೆಸುವವರ ‘ಹಕ್ಕು’ಗಳನ್ನು ಕೆಲಮಟ್ಟಿಗೆ ಮೊಟಕುಗೊಳಿಸಿದಂತೆ ಸದ್ಯಕ್ಕೆ ಭಾಸವಾದರೂ ವಾಸ್ತವದಲ್ಲಿ ಪಾಲಕರೂ, ಶಾಲೆ ನಡೆಸುವವರೂ ಎಲ್ಲರೂ ಇರುವ ಸಮಾಜದ ಅನಾರೋಗ್ಯವನ್ನು ಅದು ಪರಿಹರಿಸುತ್ತಿರುತ್ತದೆ.

* * *

ಈ ದೃಷ್ಟಿಯಿಂದ ಒಂದು ಮಧ್ಯಮ ಮಾರ್ಗವನ್ನು ತುಳಿಯಲು ಸಾಧ್ಯವಿದೆ. ಎಲ್ಲ ಮಕ್ಕಳಿಗೂ ಮಾತನಾಡುವುದಕ್ಕೆ ಬೇಕಾದ ಇಂಗ್ಲಿಷ್ ಕಲಿಸಬೇಕು. ಇಂಗ್ಲಿಷ್ ಕಲಿಸುವ ಕ್ರಿಯೆಯಲ್ಲಿ ಅತಿದೊಡ್ಡ ತಪ್ಪು ಸಂಭವಿಸುತ್ತಿರುವುದೇ ಈ ವಿಷಯದಲ್ಲಿ. ಇಂಗ್ಲಿಷ್ ಭಾಷೆ ಗೊತ್ತಿಲ್ಲದೇ ಇಂಗ್ಲಿಷ್ ಅಕ್ಷರಗಳನ್ನು ಕಲಿತು ಅದನ್ನು ಓದಲು ಹೊರಡುವುದರಲ್ಲಿ ಅರ್ಥವಿಲ್ಲ. ಇಂಗ್ಲಿಷ್‌ನದ್ದು ಸ್ಪೆಲ್ಲಿಂಗ್‌ನ ಬರೆಹ. ಕನ್ನಡದಂತೆ ಧ್ವನಿ ಚಿಹ್ನೆಗಳ ಬರೆಹವಲ್ಲ. ಆದ್ದರಿಂದ ಇಂಗ್ಲಿಷ್ ಮಾತನಾಡಲು ಕಲಿಸದೆ ಅದನ್ನು ಓದಲು ಕಲಿಸುವುದು ಅವೈಜ್ಞಾನಿಕ.

ಹೀಗೆ ಇಂಗ್ಲಿಷನ್ನು ಮಾತನಾಡುವುದಕ್ಕೆ ಕಲಿಸುವುದರಿಂದ ಇಂಗ್ಲಿಷ್ ಕೂಡಾ ಒಂದು ಕಚ್ಚಾ ಭಾಷೆ ಅನ್ನಿಸಿಕೊಳ್ಳುತ್ತದೆ. ಕರಾವಳಿಯ ಮಕ್ಕಳು ಕೊಂಕಣಿ, ತುಳು ಕನ್ನಡಗಳನ್ನು ಏಕಕಾಲದಲ್ಲಿ ಕಲಿಯುತ್ತಾರೆ. ಕರ್ನಾಟಕದ ಹಲವೆಡೆ ಈ ರೀತಿಯ ಬಹುಭಾಷಾ ವಾತಾವರಣವಿದೆ. ಈ ವಾತಾವರಣಕ್ಕೆ ಇಂಗ್ಲಿಷ್ ಕೂಡಾ ಸೇರಿಕೊಳ್ಳುತ್ತದೆ. ಹೀಗೆ ಇಂಗ್ಲಿಷ್ ಎಲ್ಲರೂ ಬಲ್ಲ ಸಂಗತಿಯಾದರೆ, ತಪ್ಪು ಮಾಡಿಯೂ ಮಾತನಾಡುವುದಕ್ಕೆ ಸಾಧ್ಯವಾಗುವುದಾದರೆ ಅದು ಸರಿಹೋಗುತ್ತದೆ. ಅದರ ಬಗೆಗಿನ ವ್ಯಾಮೋಹವೂ ಹೋಗುತ್ತದೆ. ನಾವು ಯಾವುದನ್ನು ಇಂಗ್ಲಿಷ್ ಎಂದು ಕಲಿಯುತ್ತೇವೋ ಅದನ್ನು ಕಚ್ಚಾಭಾಷೆಯಾಗಿ ಮಾತ್ರ ಹೇಳಬಹುದು. ಅಮೆರಿಕದಲ್ಲಿ, ಆಸ್ಟ್ರೇಲಿಯಾದಲ್ಲಿ ಅದನ್ನು ಕಚ್ಚಾ ಭಾಷೆಯಾಗಿ ಮಾತನಾಡುತ್ತಾರೆ. ಹೀಗೆ ಹಲವು ಇರುವ ಹಲವು ಇಂಗ್ಲಿಷ್‌ಗಳಿಗೆ ನಮ್ಮದೂ ಒಂದು ಸೇರಿಕೊಳ್ಳಲಿ.

ಪ್ರಾಥಮಿಕ ಹಂತದಲ್ಲಿ ಹೀಗೆ ಮಾತನಾಡಲು ಕಲಿಯುವ ಮಕ್ಕಳಿಗೆ ಮುಂದಿನ ಹಂತದಲ್ಲಿ  ವಿಜ್ಞಾನ ವಿಷಯಗಳನ್ನು ಇಂಗ್ಲಿಷ್‌ನಲ್ಲಿಯೇ ಬೋಧಿಸಲೂ ಪ್ರಯತ್ನಿಸಬಹುದು. ಇದರಿಂದಾಗಿ ಅವರು ಮುಂದೆ ಇಂಗ್ಲಿಷ್‌ನಲ್ಲೇ ಕಲಿಯುವುದಕ್ಕೆ ಸಿದ್ಧರಾಗಬಹುದು. ಇಂಗ್ಲಿಷ್‌ನಲ್ಲಿ ಇರುವ ಜ್ಞಾನ ಭಂಡಾರವನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಅದನ್ನು ಬಳಸಿಕೊಳ್ಳುವುದಕ್ಕೆ ನಮಗೆ ಇಂಗ್ಲಿಷ್‌ನ ಅರಿವಿದ್ದೇ ಇರಬೇಕು.

* * *

ನಾವು ಈಗ ಕಲಿಸುತ್ತಿರುವ ಇಂಗ್ಲಿಷ್‌ನಲ್ಲಿ ಇರುವ ಬಹುದೊಡ್ಡ ತೊಂದರೆ ಎಂದರೆ ಅದು ಜ್ಞಾನದ ವಿಸ್ತರಣೆಗೆ ಬಳಕೆಯಾಗದೇ ಇರುವುದು. ಚೆನ್ನಾಗಿ ಇಂಗ್ಲಿಷ್ ಗೊತ್ತಿರುವ ವಿದ್ಯಾರ್ಥಿ ತನ್ನ ಪದವಿಪೂರ್ವ ಶಿಕ್ಷಣ ಮುಗಿಸಿದ ತಕ್ಷಣ ಕಾಲ್ ಸೆಂಟರ್‌ಗೆ ಸೇರಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಬಿ.ಎ. ಬಿಎಸ್‌ಸಿಯಂಥ ಪದವಿಗಳನ್ನು ಪಡೆದ ಇಂಗ್ಲಿಷ್ ಬಲ್ಲವರಲ್ಲಿ ಹಲವರು ತಮ್ಮ ಶಿಕ್ಷಣವನ್ನು ಮುಂದುವರಿಸುವುದಿಲ್ಲ. ಅವರ ಇಂಗ್ಲಿಷ್ ಜ್ಞಾನಕ್ಕೆ (ಜ್ಞಾನಕ್ಕಿಂತ ಹೆಚ್ಚಾಗಿ ಉಚ್ಛಾರಣೆಗೆ) ಸಿಗುವ ಕೆಲಸವೊಂದಕ್ಕೆ ಸೇರಿಕೊಂಡುಬಿಡುತ್ತಾರೆ. ಈ ದೃಷ್ಟಿಯಲ್ಲಿ ನೋಡಿದರೆ ಒಂದು ಕಾಲದಲ್ಲಿ ನಮ್ಮ ಅರಿವಿನ ವಿಸ್ತರಣೆ ಕಾರಣವಾದ ಇಂಗ್ಲಿಷ್ ನಮ್ಮ ಅರಿವಿಗೆ ಮಿತಿಯನ್ನು ಹೇರುವ ಕಂಟಕವಾಗುತ್ತಿದೆ.

ಖಾಸಗಿ ಶಾಲೆಗಳನ್ನು ನಡೆಸುವವರ ‘ಹಕ್ಕಿನ ಪ್ರತಿಪಾದನೆ’ಯಾಗಿ ಕಲಿಸಲಾಗುವ ಇಂಗ್ಲಿಷ್‌ಗೆ ವ್ಯಾಪಾರೀಕರಣದ ಲಾಭಗಳಷ್ಟೇ ಮುಖ್ಯವಾಗುತ್ತಿದೆಯೇ ಹೊರತು ಅದರಲ್ಲಿರುವ ಜ್ಞಾನದ ಲಾಭ ಮುಖ್ಯವಾಗುತ್ತಿಲ್ಲ. ಇಂಗ್ಲಿಷ್‌ನಿಂದ ಜ್ಞಾನದ ಲಾಭವೂ ಆಗಬೇಕಾದ ನಮ್ಮ ಭಾಷೆಯನ್ನು ನಾವು ಸರಿಯಾಗಿ ಕಲಿತಿರಬೇಕು. ಜತೆಗೆ ಇಂಗ್ಲಿಷನ್ನು ಗ್ರಹಿಕೆಗಾಗಿ ಕಲಿತಿರಬೇಕು.

ಮ್ಯಾಕ್ಸ್‌ಮುಲ್ಲರ್ ಸಂಸ್ಕೃತದ ಎಲ್ಲಾ ಗ್ರಂಥಗಳನ್ನು ಭಾಷಾಂತರಿಸಿದ. ನಮ್ಮ ಸಂಸ್ಕೃತ ಪಂಡಿತರಂತೆ ಅವನಿಗೆ ಸಂಸ್ಕೃತ ಮಾತನಾಡುವುದಕ್ಕೆ ಗೊತ್ತಿತ್ತೋ ಇಲ್ಲವೋ? ಆದರೆ ಅವನಿಗೆ ಗ್ರಹಿಕೆಗೆ ಅಗತ್ಯವಿರುವ ಸಂಸ್ಕೃತ ಗೊತ್ತಿತ್ತು. ಅಭಿವ್ಯಕ್ತಿಗೆ ಬೇಕಾದ ಸಂಸ್ಕೃತ ಗೊತ್ತಿರಲಿಲ್ಲ. ನಾವೂ ಗ್ರಹಿಕೆಗೆ ಬೇಕಾದ ಇಂಗ್ಲಿಷ್ ಕಲಿಯಬೇಕು. ಅವಶ್ಯವಿದ್ದವರು ಅದನ್ನು ಅಭಿವ್ಯಕ್ತಿಗೆ ಬಳಸುತ್ತಾರೆ. ಇಲ್ಲದೇ ಇದ್ದವರು ಅದನ್ನು ಗ್ರಹಕೆಯ ಮಟ್ಟದಲ್ಲಿ ಬಳಸುತ್ತಾರೆ. ಅದರಿಂದ ಪಡೆಯಬಹುದಾದ ಲಾಭವನ್ನು ಪಡೆಯುತ್ತಾರೆ.

* * *

ಈಗ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕೇವಲ ಒಂದು ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಇದನ್ನು ಕಲಿಯುವವರು ಶೇಕಡಾ ೩೫ರ ಪಾಸ್ ಮಾರ್ಕ್ ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಇದನ್ನು ಬದಲಾಯಿಸುವುದಕ್ಕೆ ಕನ್ನಡವನ್ನು ಜ್ಞಾನದ ವಿಷಯವನ್ನಾಗಿಯೂ ಬದಲಾಯಿಸಬೇಕು. ಮಾನವಿಕ ವಿಷಯವನ್ನು ಕನ್ನಡ ಮಾಧ್ಯಮದಲ್ಲಿಯೇ ಬೋಧಿಸುವ ನಿಯಮವೊಂದನ್ನು ಈಗಿಂದೀಗಲೇ ಎಲ್ಲ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲೂ ಜಾರಿಗೆ ತರಬೇಕು. ಚರಿತ್ರೆ, ಭೂಗೋಳ ಅಥವಾ ಸಮಾಜ ಶಾಸ್ತ್ರವನ್ನು ಕನ್ನಡದಲ್ಲೇ ಹೇಳಿಕೊಡಬೇಕು. ಇದರಿಂದ ಕನ್ನಡ ಕೇವಲ ಜ್ಞಾನದ ಸ್ವೀಕಾರದ ಭಾಷೆಯಾಗಿ ಮಾತ್ರ ಉಳಿಯದೆ ಜ್ಞಾನ ಸೃಷ್ಟಿಯ ಭಾಷೆಯಾಗಿಯೂ ಬೆಳೆಯುತ್ತದೆ.

ಒಂದು ಕಾಲದಲ್ಲಿ ಇಂಗ್ಲಿಷರು ಜ್ಞಾನದ ಸ್ವೀಕಾರಕ್ಕಾಗಿ ಜರ್ಮನ್, ಲ್ಯಾಟಿನ್‌ಗಳನ್ನು ಕಲಿಯುತ್ತಿದ್ದರು. ಆಮೇಲೆ ಇಂಗ್ಲಿಷ್‌ನಲ್ಲೇ ಜ್ಞಾನದ ಸೃಷ್ಟಿ ಆಯಿತು. ಮೊದಲು ಇಂಗ್ಲಿಷ್‌ನಲ್ಲಿ ಜ್ಞಾನದ ಸೃಷ್ಟಿಯನ್ನು ಮಾಡಿದವನು ಡಾರ್ವಿನ್. ಅವನಿಗಿಂತ ಸ್ವಲ್ಪ ಮುಂಚೆ ನ್ಯೂಟನ್ ಲ್ಯಾಟಿನ್‌ನಲ್ಲಿ ಬರೀತಾ ಇದ್ದ. ಡಾರ್ವಿನ್ ಇಂಗ್ಲಿಷ್‌ನಲ್ಲಿ ಜ್ಞಾನದ ಸೃಷ್ಟಿಯನ್ನು ಮಾಡಿ ಇಡೀ ಇಂಗ್ಲೆಂಡ್ ಬದಲಾಗುವಂತೆ ಮಾಡಿದ. ಇಂದಿಗೂ ವೈಜ್ಞಾನಿಕ ಪುಸ್ತಕಗಳಲ್ಲಿ ಬಹಳ ಗಾಢವಾದ ಪರಿಣಾಮ ಬೀರುವ ಪುಸ್ತಕವೆಂದರೆ ಡಾರ್ವಿನ್‌ನ ಒರಿಜಿನ್ ಆಫ್ ಸ್ಪೀಷೀಸ್.

ಕರ್ನಾಟಕದಲ್ಲಿ ಕನ್ನಡಕ್ಕೂ ನಾವು ತಿನ್ನುವ ಅನ್ನಕ್ಕೂ ಸಂಬಂಧವಿರಬೇಕು; ಬಹುರಾಷ್ಟ್ರೀಯ ಕಂಪನಿಗಳೂ ಕರ್ನಾಟಕದಲ್ಲಿ ಉದ್ಯಮ ಮಾಡಲು ಬಯಸುವುದಾದರೆ, ಉಳಿದ ಭಾಷೆಗಳ ಜೊತೆ ಕನ್ನಡವನ್ನೂ ಅವರು ಬಳಸಬೇಕೆಂಬ ನಿಯಮವಿರಬೇಕು; ಕನ್ನಡಬಲ್ಲವರಿಗೆ ಉದ್ಯೋಗದಲ್ಲಿ ಅರ್ಹತೆಗೆ ಅನುಗುಣವಾಗಿ ಅವಕಾಶ ಕೊಡಲೇ ಬೇಕೆಂಬ ನಿಯಮವಿರಬೇಕು. ಫ್ರೆಂಚ್ ಗೊತ್ತಿಲ್ಲದಾತ ಫ್ರಾನ್ಸ್‌ನಲ್ಲಿ ಹೆಚ್ಚು ಕಾಲ ಯಾವುದೇ ಉದ್ಯೋಗದಲ್ಲಿ ತೊಡಗಿದ್ದು ಬದುಕಲಾರ. ಕರ್ನಾಟಕವೂ ಹೊಸ ಜ್ಞಾನವನ್ನು ಸೃಷ್ಟಿಸಬಲ್ಲ ಯೋಗ್ಯತೆ ಪಡೆದ ಭಾಷೆಯೆಂಬುದು ಇಲ್ಲಿ ಬದುಕುವವರಿಗೆ ಮನದಟ್ಟಾಗುವಂತೆ, ಕನ್ನಡ ಅವರಿಗೆ ಪ್ರಿಯವಾಗುವಂತೆ ಮಾಡುವ ಸನ್ನಿವೇಶವನ್ನು ನಾವು ಸೃಷ್ಟಿಸಬೇಕು.

ಕರ್ನಾಟಕ ಸರ್ಕಾರ ಕೂಡಲೇ ಮಾಡಬಹುದಾದ್ದು ಇದು. ಕನ್ನಡ ಮಾಧ್ಯಮದಲ್ಲಿ ಕಲಿಸುವ, ಇಂಗ್ಲಿಷನ್ನೂ ಜ್ಞಾನದ ಗ್ರಹಿಕೆಗೆ ಬಳಸುವ ಒಂದು ಮೆಡಿಕಲ್ ಕಾಲೇಜನ್ನೂ, ಒಂದು ಇಂಜಿನಿಯರಿಂಗ್‌ಕಾಲೇಜನ್ನೂ ಸ್ಥಾಪಿಸಬೇಕು. ಇವು ಗುಣಮಟ್ಟದಲ್ಲಿ ಎಷ್ಟು ಉತ್ತಮವಾಗಿರಬೇಕೆಂದರೆ, ಉತ್ತರ ಭಾರತೀಯನೊಬ್ಬ ಕನ್ನಡ ಕಲಿತು ಈ ಕಾಲೇಜುಗಳಿಗೆ ಸೇರುವುದು ಸಾಧ್ಯವಾಗಿರಬೇಕು. ಮೆಡಿಕಲ್ ಡಿಗ್ರಿಯಲ್ಲವೇ? ಕನ್ನಡ ಕಲಿತೇ ಕಲಿಯುತ್ತಾರೆ.

ಯಾಕೆ ಸಾಧ್ಯವಿಲ್ಲ? ನಮ್ಮಲ್ಲಿ ಎಷ್ಟು ಜನ ರಷ್ಯಾಕ್ಕೆ ಹೋಗಿ ಆರು ತಿಂಗಳಲ್ಲಿ ರಷ್ಯನ್ ಕಲಿತು ಅಲ್ಲಿಂದ ಡಾಕ್ಟರ್ ಆಗಿ ಸ್ವದೇಶಕ್ಕೆ ಮರಳಿಲ್ಲ?

ನಮ್ಮ ರಾಷ್ಟ್ರದ ಇನ್ನೊಂದು ಭಾಷೆ ಕನ್ನಡ.

(ಉದಯವಾಣಿಸಾಪ್ತಾಹಿಕ ಸಂಪದ, ೧೩ ಜುಲೈ ೨೦೦೮).

* * *