ಗಿರೀಶ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ಅವರ ಉಳಿದೆಲ್ಲ ಸಿನಿಮಾಗಳಿಗಿಂತ ಭಿನ್ನವಾದುದು. ಈ ಭಿನ್ನತೆ ಮುಖ್ಯವಾಗಿ ಕಾಣಿಸಿಕೊಳ್ಳುವುದು ಚಿತ್ರ ಕಥನದ ಹೆಣೆಗೆ ಮತ್ತು ವಿನ್ಯಾಸದಲ್ಲಿ. ಒಂದು ಸಿನಿಮಾವನ್ನು ನಾವು ನೋಡುವಾಗ ಮುಂದೇನಾಗುತ್ತದೆ ಎಂಬುದೇ ನಮಗೆ ಮುಖ್ಯವಾದರೆ ನಾವು ನೋಡುವ ಬಗೆ ಬೇರೆ. ಹಾಗೆಯೇ ಮುಂದೇನಾಗುತ್ತದೆ ಎಂಬುದು ಅಮುಖ್ಯವಾದರೆ ನಾವು ನೋಡುವ ಬಗೆ ಬೇರೆ. ಸಸ್ಪೆನ್ಸೇ ಮುಖ್ಯವಾಗಿ ಬಿಟ್ಟರೆ, ನಾಟಕೀಯತೆ ಮುಖ್ಯವಾಗಿ ಸಿನಿಮಾ ತನ್ನ ಶಿಖರ ಸ್ಥಿತಿಯಲ್ಲಿ ಚೂಪಾಗುವ ಚುರುಕಿನಲ್ಲಿ ಪಿರಮಿಡ್‌ನಂತ ಮೇಲೇರುತ್ತದೆ. ಆದರೆ ಆ ಸಿನಿಮಾದಲ್ಲಿ ಮುಂದೇನು ಎನ್ನುವುದು ಅಷ್ಟು ಮುಖ್ಯವಲ್ಲ. ಆದ್ದರಿಂದ ಹೆಣಿಗೆಯಲ್ಲಿ ಒಂದು ಅದ್ಭುತವಾದ ಅಲ್ಲಲ್ಲೇ ಸಲ್ಲುವ ಸಾಂದ್ರತೆ ಇದೆ. ಸಿನಿಮಾದಲ್ಲಿ ನಾವು ಕಾಣವುದೆಲ್ಲ ಮನಸ್ಸಿಗೆ ಇಳಿದು ಕಾಡುತ್ತವೆ. ವೈಚಾರಿಕವಾಗಿಯಲ್ಲ;  ಅನ್ಯೋಕ್ತಿಯನ್ನು (ಅಲಿಗರಿಯನ್ನು) ನಾವು ಬಗೆಯುವ ರೀತಿಯಲ್ಲಿ  ಅಲ್ಲ; ಬದಲಿಗೆ ಕಂಡದ್ದನ್ನೇ ಅದರಲ್ಲಿ ಇಣುಕುವ ಒಳಾರ್ಥವನ್ನು ಹೊಳೆಸಿಕೊಳ್ಳಲೆಂದು, ಕಂಡದ್ದರಲ್ಲಿ ತಂಗುವಂತೆ ಮಾಡುವ ಧ್ಯಾನಶೀಲ ಮನಸ್ಥಿತಿಯಲ್ಲಿ.

ಒಂದು ಒಳ್ಳೆಯ ಪೇಂಟಿಂಗ್ ಅನ್ನು ನಾವು ಅದೊಂದು ಸ್ಥಿರಚಿತ್ರವೆಂಬಂತೆ ನೋಡುತ್ತ ನಮ್ಮೊಳಗೆ ಅದರ ವಿವರಗಳು ಚಲಿಸಿ ಬೆಳೆಯುವುದನ್ನು ಅನುಭವಿಸುತ್ತೇವೆ. ಆದರೆ ಒಂದು ಚಲನಚಿತ್ರದಲ್ಲಿ ನಾವು ನೋಡುವ ಪ್ರತಿ ವಿವರವೂ ಕ್ಷಣ ಮಾತ್ರದವು ಮಾತ್ರ. ಆದರೆ ಹೀಗೆ ಚಲಿಸುವುದಕ್ಕೂ ಒಂದು ಹೊಸ ಅಭಿಜ್ಞಾನದ ಗುಣವನ್ನು ತರಲು ಬಯಸಿದರೆ ಆಗ ಕಥೆಯಲ್ಲಿ ಸಸ್ಪೆನ್ಸ್ ಅಷ್ಟು ಮುಖ್ಯವಾಗಲಾರದು. ನಮ್ಮ ಕಾದಂಬರಿ ಲೋಕದಲ್ಲಿ ಈ ಬಗೆಯ ಒಂದು ಮಹತ್ಕೃತಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’; ಅಂತೆಯೇ ಕೊಂಚ ಮಟ್ಟಿಗೆ ಕಾರಂತರ ‘ಬೆಟ್ಟದ ಜೀವ’, ಅಂದರೆ, ಕೃತಿಯ ‘ಜೊತೆ’ ನಾವು ಇರುತ್ತೇವೆ. ಅದರ ಲಯದಲ್ಲೇ, ಹಗುರಾಗಿ.

ಗುಲಾಬಿ ಟಾಕೀಸ್ ಸಿನಿಮಾದ ಸ್ಥಾಯಿ ಭಾವ ಏನೆಂದು ಕೇಳಿದರೆ ನನಗೆ ಹೊಳೆಯುವ ಉತ್ತರ ಪಾಲನೆ. ಸಿನಿಮಾ ಶುರುವಾಗುವುದೇ ಅವರು ಸಿಗಡಿ ಮೀನನ್ನು ಕೊಳ್ಳುವ ಗದ್ದಲದ ಸಡಗರದಲ್ಲಿ. ಮಾರುವವಳಿಗೂ ಕೊಳ್ಳುವವಳಿಗೂ ನಡೆಯುವ ಸಂಭಾಷಣೆಯಲ್ಲಿ ವ್ಯವಹಾರವೂ ಇದೆ; ಗುಪ್ತವಾಗಿ ಪಾಲನೆಯ ಧ್ವನಿಯೂ ಇದೆ. ಈ ಹೆಂಗಸರು ಬೈದಾಡುವುದು ಜಗಳಾಡುವುದು ಒಬ್ಬೊರನ್ನೊಬ್ಬರು ಮೂದಲಿಸಿಕೊಳ್ಳುವುದು – ಎಲ್ಲವೂ ಒಂದು ಆರ್ಗ್ಯಾನಿಕ್ ಎನ್ನಬಹುದಾದ ಕೆಳಸಮುದಾಯದಲ್ಲಿ ಮಾತ್ರ ಸಾಧ್ಯವಾಗುವ ವಿಚಿತ್ರ ಬಗೆಯ ಬಾಂಧವ್ಯ. ಬೈದಾಡುವುದೂ ಬಾಂಧವ್ಯದ ನೆಚ್ಚಿಕೆಯ ‘ನಟನೆ’ಯೇ.  ಆ ಭಾಷೆಯಲ್ಲಿ ಮಾತ್ರ ಈ ಉಡಾಫೆಯ ನಟನೆಯ ಸಿಟ್ಟು-ಜಗಳ ಸಾಧ್ಯ.

ಅವಳು ಪಡೆದ ಮೀನನ್ನು ತನ್ನದಲ್ಲದ ಸವತಿಯ ಮಗನಿಗೆ ಕದ್ದು ಕೊಡಲು ಹೋಗುತ್ತಾಳೆ. ಇಲ್ಲಿಯೂ ಅದು ಸಾಂಸಾರಿಕ ಜಗಳದಲ್ಲಿ ಕೊನೆಯಾಗುತ್ತದೆ. ಭಂಡನಾದ ಅವಳ ಗಂಡ ದಿಟ್ಟೆಯಾದ ಗುಲಾಬಿಗೆ ತಲಾಖ್ ಹೇಳಿಲ್ಲ. ಇಲ್ಲಿ ಬಸಳುವ ಭಾಷೆ ಹೇಗಿದೆಯೆಂದರೆ ಈ ಯಾವುದೂ ಸ್ಥಾಯಿಯಾದ ದ್ವೇಷದಂತೆ ಕಾಣುವುದಿಲ್ಲ. ಇವೆಲ್ಲವೂ ಸಂಚಾರಿ ಭಾವಗಳೇ. ನಿತ್ಯದ ದೈನಿಕದ (Quotidian) ನಟನೆಗಳೇ. ನೋವು ಸಿಟ್ಟು ತಾಪ- ಎಲ್ಲವೂ ದೈನಿಕರ ಸಾಂಸಾರಿಕ ಸತ್ಯಗಳು. ನಮ್ಮ ಅಂತಃಕರಣ ಗುಲಾಬಿಗೆ ಮಿಡಿಯುತ್ತದೆ. ಅವಳು ಕೂಡ ಖದೀಮಳು ಎನ್ನುವುದನ್ನು ಮರೆಸದಂತೆ ಮಿಡಿಯುತ್ತದೆ. ಲಘು ಅನುಕರಣದ (Low mimetic) ಕಾಮೆಡಿಯಲ್ಲಿ ಮಾತ್ರ ಇದು ಸಾಧ್ಯ. ದೇವನೂರು ಮಹದೇವರು ತಮ್ಮ ಕಥೆಗಳನ್ನು ಈ ಬಗೆಯಲ್ಲೇ ಬರೆಯುತ್ತಾರೆ.

ಈ ಇಡೀ ಸಿನಿಮಾವೇ ಒಂದು ಹೆಂಗಸರ ಲೋಕ. ಅವರೆಲ್ಲರೂ ವ್ಯವಸ್ಥೆಯಲ್ಲಿ ಬಂದಿಯಾದವರಂತೆ ಬದುಕುತ್ತಿರುವ ಹಾಗೆ ಕಂಡರೂ, ಅವರ ಗುಪ್ತ ಒಳ ಮನಸ್ಸಿನಲ್ಲಿ ಅವರು ಕಾಲ್ಪನಿಕವಾಗಿ ಸ್ವತಂತ್ರರು. ಈ ಗುಪ್ತ ಒಳಮನಸ್ಸನ್ನು ಹೊರ ಹಾಕುವುದು ಅವರು ನೋಡುವ ಸಿನಿಮಾ ಮತ್ತು ಸೀರಿಯಲ್ಲುಗಳು. ಚಿತ್ರದ ಆರಂಭದಲ್ಲೇ ಅವಸರದಲ್ಲಿ ಓಡಿಹೋಗಿ ಸಿನಿಮಾ ನೋಡುತ್ತ ಕೂತ ಗುಲಾಬಿಯನ್ನು ಹೆರಿಗೆ ಮಾಡಿಸಲು ಬರಬೇಕೆಂದು ಕರೆಯಲು ಕೆಲವು ಯುವಕರು ಬಂದು ಒತ್ತಾಯಿಸಿದಾಗ ಬರಲೊಲ್ಲೆ ಎಂದು ಹಠಮಾಡುತ್ತಾಳೆ. ಇದೂ ಒಂದು ಸಂಚಾರೀ ಮನಸ್ಥಿತಿ. ಪರರ ಪಾಲನೆಯೇ ತನ್ನ ಜೀವನ ಕ್ರಮವಾದ ಗುಲಾಬಿ, ಒಲ್ಲೆನೆಂದರೂ ಸಿನಿಮಾಬಿಟ್ಟು ಅವರ ಜೊತೆ ಹೋಗಿ, ನರಳುವ ಹೆಣ್ಣನ್ನು ಕಂಡೊಡನೆಯೇ ಸನ್ನದ್ಧಳಾಗಿ, ಒಂದು ಕ್ಷಣದಲ್ಲಿ ಏನೋ ಪೋಲಿ ಮಾತಾಡಿ, ಹೆರಿಗೆಯ ಸಂಕಟದಲ್ಲಿರುವವಳನ್ನು ನಗಿಸಿ, ಹೆರಿಗೆ ಮಾಡಿಸುತ್ತಾಳೆ. ವಿಪರ್ಯಾಸವೆಂದರೆ, ಈ ಪಾಲನೆಯ ಫಲವಾಗಿಯೇ ಅವಳ ಮನೆಯೇ ಒಂದು ಬಣ್ಣದ ಟಿವಿಯ ಟಾಕೀಸ್ ಆಗಿಬಿಡುತ್ತದೆ. ಈ ಟಿವಿ ತರುವ ಸಡಗರ ಮತ್ತು ಬೆರಗು ಆ ದ್ವೀಪದಲ್ಲಿ (ಕುದ್ರ) ವಾಸಿಸುವ ಎಲ್ಲರನ್ನೂ ಜಾತಿ ಮತ ಭೇದವಿಲ್ಲದಂತೆ ಒಟ್ಟಿಗೆ ತರುತ್ತದೆ.

ಗಮನಿಸಬೇಕಾದ್ದು ಇದು: ಭಾರತ ಜಾತಿಯನ್ನು ಹಳ್ಳಿಗಳಲ್ಲಿ ಮೀರುವುದು ಅನಿವಾರ್ಯವಾದ ಬಾಂಧವ್ಯಗಳ ಮೂಲಕ; ಕೆಲವೊಮ್ಮೆ ಹಬ್ಬಗಳ ಆಚರಣೆಯಲ್ಲಿ; ಹಿತ್ತಲಿನಲ್ಲಿ ಹೆಂಗಸರ ನಡುವೆ ನಡೆಯುವ ಗಾಸಿಪ್ಗಳಲ್ಲಂತೂ ಯಾವತ್ತೂ. ಆದರೆ ಪೇಟೆಯಾಗುತ್ತಾ ಹೋದ ಹಳ್ಳಿಯಲ್ಲಿ ಜಾತಿಗಳನ್ನು ಮೀರಬೇಕಾಗಿ ಬರುವುದು ಹೋಟೇಲಿನ ಕಾಫಿ ಚಟದಲ್ಲಿ; ಅಥವಾ ಬಸ್ಸಿನ ಪ್ರಯಾಣದಲ್ಲಿ. ಈ ಗುಲಾಬಿ ಕಥನದಲ್ಲಂತೂ ಒಟ್ಟಾಗಿ ಕೂತು ನೋಡುವ ಸೀರಿಯಲ್ಲುಗಳಲ್ಲಿ ಇದು ಸಂಭವಿಸುತ್ತದೆ. ನೋಡಿದ್ದನ್ನು ಗಾಸಿಪ್ನಂತೆಯೇ ಚರ್ಚಿಸುವ, ತಮ್ಮ ನಿತ್ಯದ ಬದುಕಿಗೆ ಅಲಿಗರಿ (allegory) ಯಾಗಿಯೂ ಕಾಣುವ, ಕಥೆಗಳ ಮೂಲಕ ತಮ್ಮ ಮನಸ್ಸಿನ ತೀಟೆಗಳನ್ನು ಬಯಕೆಗಳನ್ನು ಪೂರೈಸಿಕೊಳ್ಳುವ ಅವಕಾಶವನ್ನು ಸೃಷ್ಟಿಸುವ, ಎಲ್ಲರಂತೆ ತಾವು ಎಂದು ಕೊಳ್ಳುವಂತೆ ಅವರ ಮನಸ್ಸುಗಳನ್ನು ವಿಸ್ತಾರಗೊಳಿಸಬಲ್ಲ ಟೀವಿ ಸೀರಿಯಲ್ಲುಗಳು ಗಿರೀಶ್ ಕಾಸರವಳ್ಳಿಯವರಿಗೆ ನಾಟಕದೊಳಗೊಂದು ನಾಟಕಮಾಡಿ ಎದುರುಬದಿರಾಗಿ ಎರಡು ಕನ್ನಡಿಗಳನ್ನು ಇಡುವ ತಂತ್ರದ್ದು. ಅವರ ಸತ್ಯದ ಕಥೆಯಾದ ಗಿರೀಶರು ಕಟ್ಟಿಕೊಡುವ ಸಿನಿಮಾ, ಜತೆಗೆ ಈ ಸೀರಿಯಲ್ಲುಗಳು ಒಂದಕ್ಕೊಂದು ಹೆಣೆದುಕೊಳ್ಳುತ್ತ, ಯಾವುದು ನಿಜ, ಯಾವುದು ಕಲ್ಪನೆ ಎಂದು ತೀರ್ಮಾನಿಸಲಾಗದಂತಹ ಇನ್ನೊಂದು ನಿಜವನ್ನು ನಾವು ಎದುರಾಗುವಂತೆ ಮಾಡುತ್ತದೆ.

ಸಿನಿಮಾದಂತೆಯೇ ಈ ಸಮುದಾಯವನ್ನು ಕ್ರಮೇಣ ಬದಲಾಗುವಂತೆ ಮಾಡುತ್ತಿರುವ ಇನ್ನೊಂದು ಸಂಗತಿಯೆಂದರೆ; ಅದರ ಮೀನಿನ ವ್ಯಾಪಾರ. ಸಣ್ಣ ಪ್ರಮಾಣದ ವ್ಯಾಪಾರ ದೊಡ್ಡ ಪ್ರಮಾಣದ ವ್ಯಾಪಾರವಾಗುವುದು; ಹುಟ್ಟು ಹಾಕುವ ದೋಣಿ ಯಾಂತ್ರಿಕ ಬೋಟ್ ಆಗುವುದು; ಯಾಂತ್ರಿಕ ಬೋಟ್ ಹಡಗಾಗುವುದು ಇವೆಲ್ಲವುದರ ಮುಖಾಂತರ ಕೋಮು ವೈಷಮ್ಯ ಬೆಳೆಯುವುದು ನಮಗೆ ಗೋಚರವಾಗುತ್ತ ಹೋಗುತ್ತದೆ. ಈವರೆಗೆ ನಾನು ತಿಳಿದಂತೆ ಯಾವ ಸಮಾಜ ಶಾಸ್ತ್ರಜ್ಞನೂ ತಾನು ಕಾಣುವ ಸತ್ಯಕ್ಕೆ ಅಗತ್ಯವಾದ (ಅರ್ಥಧಾರಿಯ ದರ್ಪವಿಲ್ಲದ, ಧೋರಣೆಗಳಾಗದ, ನೈತಿಕ ತೀರ್ಮಾನಗಳಲ್ಲದ) ಧಾಟಿಯಲ್ಲಿ ವಿಷಮಗೊಳ್ಳುತ್ತ ಇರುವಾಗಲೇ ತನ್ನ ಎಂದಿನ ಸಮತೂಕಕ್ಕೆ ಬರಲು ಯತ್ನಿಸುವ ಸಾಮಾನ್ಯ ಸಂಸಾರಿಗಳ ನಿತ್ಯದ ಶ್ರುತಿಯನ್ನು ಗಿರೀಶರು ಆಲಿಸಿದಂತೆ ಆಲಿಸಿ ಬರೆದದ್ದು ನನಗೆ ನೆನಪಿಲ್ಲ.

ಊರಿನ ಎಲ್ಲ ಉತ್ಪಾತಗಳಿಗೂ ಕಾರಣವಾಗುವ ಸುಲೇಮಾನನನ್ನು ನಾವು ನೋಡುವುದೇ ಇಲ್ಲ. ನಾವು ಕಾಣದ ಕಾಪುರುಷ ಅವನು. ಅವನ ಭಂಟನಾದ ಗುಲಾಬಿಯ ಗಂಡನನ್ನು (ಹಲವು ರೀತಿಯಲ್ಲಿ ಈ ಸಮುದಾಯದವನೆ ಆದವನನ್ನು) ಮಾತ್ರ ನಾವು ನೋಡುತ್ತೇವೆ. ತನ್ನವರಿಂದಲೇ ಪೆಟ್ಟು ತಿನ್ನುವವನೂ ಅವನೇ. ಈ ಗುಲಾಬಿಯ ಗಂಡನೂ ತನ್ನ ಇಬ್ಬರೂ ಹೆಂಡಿರನ್ನು ಬಳಸಿ ಓಲೈಸಿ ಬದುಕಬಲ್ಲನೆಂಬುದು ಆ ಸಮುದಾಯವನ್ನು ಅರ್ಥ ಮಾಡಿಕೊಳ್ಳಲು ನಮಗೆ ಮುಖ್ಯ. ಈ ಯಾವ ಘಟನೆಯಲ್ಲೂ ನೈತಿಕ ಎಂದು ಕರೆಯಬಹುದಾದ ಜಡ್ಜಮೆಂಟ್ ಇಲ್ಲವೇ ಇಲ್ಲ. ಇವೆಲ್ಲಾ ಹೀಗೆ ಇದ್ದವು. ಇಲ್ಲಿ ನೋವು, ಸಂಕಟ, ಬಡಿದಾಟ, ಅನ್ಯಾಯ, ಈ ಎಲ್ಲವನ್ನೂ ಮರೆಯಬಲ್ಲ ನಿತ್ಯ ಜೀವನದ ಶ್ರುತಿಯಲ್ಲಿ ಏರಿಳಿಯುವ ಲಯದಲ್ಲಿ ಇವನ್ನು ನಾವು ನಮ್ಮದೇ ಪಾಡು ಎಂಬಂತೆ ಗಮನಿಸುವುದು ಮುಖ್ಯ.

ಹೀಗೆ ಗಮನಿಸಬಲ್ಲ ಸಮಸ್ಥಿತಿಗೆ ಕಾರಣ ಇದು: ಈ ಪ್ರಪಂಚದ ಮೂಲ ಧಾತು ಪಾಲನೆ. ಈ ಪಾಲನೆಯ ಮೂಲಧಾರ ಹೆಂಗಸರು. ಈ ಹೆಂಗಸರಲ್ಲೆಲ್ಲಾ ವಿಶಿಷ್ಟಳು ಗುಲಾಬಿ. ಹೀಗಾಗಿ ಪಾತ್ರರಚನೆಯಲ್ಲಿ ಗುಲಾಬಿಯ ನಿಜವನ್ನು ಎಲ್ಲ ಹೆಂಗಸರಲ್ಲೂ ಅಷ್ಟೋ ಇಷ್ಟೋ ಕಾಣುವಂತೆ ಗಿರೀಶರು ಚಿತ್ರಿಸುತ್ತಾರೆ.

ಇದೂ ಒಂದು ಕಥೆಯಾಗಬೇಕಲ್ಲವೇ? ಇದೊಂದು ನಮ್ಮ ನಿರೀಕ್ಷೆಯ ಸಿನಿಮಾ ಕೂಡಾ ಅಲ್ಲವೇ? ಆದ್ದರಿಂದ ಗುಲಾಬಿಯ ಸಿನಿಮಾದ ಹುಚ್ಚು, ತನ್ನ ಒಳಜೀವನದ ಅಪೇಕ್ಷೆಗಳನ್ನು ಹೇಗಾದರೂ ಪೂರೈಸಿಕೊಳ್ಳಬೇಕೆಂಬ ಅವಳ ವ್ಯಾಮೋಹ ಇನ್ನೊಂದು ಹೆಣ್ಣಿನಲ್ಲಿ ಕುಡಿಯೊಡೆಯುತ್ತದೆ. ಈ ನೇತ್ರ ಗಂಡನಿದ್ದೂ ಅವನ ಸಂಗ ಕಾಣದ ಹೆಣ್ಣು. ಇಲ್ಲಿ ಹಲವು ಹೆಣ್ಣುಗಳಲ್ಲಿ ಇರುವ, (ಪೋಲಿ ಮಾತುಗಳಿಗೆ ನಾಉತ್ತಲೇ ಸ್ಪಂದಿಸುವ_ ರತಿಯ ಅಪೇಕ್ಷೆ ಅತ್ಯಂತ ಸೂಕ್ಷ್ಮವಾಗಿ ಕುಡಿಯೊಡೆಯುವುದನ್ನು ನೇತ್ರಳಲ್ಲಿ ನಾವು ಕಾಣುತ್ತೇವೆ. (ಎಲ್ಲರಿಗಿಂತ ಹೆಚ್ಚಾಗಿ ನೇತ್ರಳಲ್ಲಿ) ಅವಳ ಗುಲಾಬಿಯ ಗಂಡನನ್ನೇ ಬಳಸಿ-ಯಾಕೆಂದರೆ ಇವನು ಮೀನುಗಾರಿಕೆಯಲ್ಲಿ ಯಾವುದೋ ಕಾಣದ ಹೊರ ಪ್ರಪಂಚದ ಸಂಬಂಧಿಟ್ಟುಕೊಂಡವನು-ಓಡಿ ಹೋಗಲು ನೋಡುತ್ತಾಳೆ. ಅವನನ್ನು  ಬಳಸುತ್ತಾಳೆ; ಆದರೆ ಗುಲಾಬಿಗೆ ವಂಚಿಸಿ ಅವನನ್ನು ಕೂಡುವುದಿಲ್ಲ.

ಒಂದು ಸಮುದಾಯದ ಒಳ ಆಸೆಗಳು ಫಲಿಸುವುದೂ, ಆ ಸಮುದಾಯ ಒಡೆದುಕೊಳ್ಳುವುದೂ ಅಭಿನ್ನವೆಂಬಂತೆ ನಮಗೆ ಈ ಸಿನಿಮಾನದಲ್ಲಿ ಎದುರಾಗುತ್ತದೆ. ಇಲ್ಲಿ ಕಾಮ ಬೇರೆಯಲ್ಲ, ಪಾಲನೆ ಬೇರೆಯಲ್ಲ, ಹಸಿವು ಬೇರೆಯಲ್ಲ. ಸಿನಿಮಾ ನೋಡುವಾಗಲೂ ಗುಲಾಬಿ ಏನನ್ನೂ ತಿನ್ನುತ್ತಿರುತ್ತಾಳೆ. ನಮ್ಮ ಪಂಚೇಂದ್ರೀಯಗಳು ಜಾಗೃತವಾಗುವಂತೆ ಅವರಾಡುವ ಮಾತುಗಳನ್ನು ಅವರು ನೋಡುವ ಸಿನಿಮಾಗಳನ್ನು ಅವರು ಹಂಚಿಕೊಳ್ಳುವ ಒಳ ದುಃಖಗಳನ್ನು ಅವರ ಉಪಾಯಗಾರಿಕೆಯನ್ನು ನಾವು ಗಮನಿಸುತ್ತೇವೆ. ಈ ಸಿನಿಮಾದಲ್ಲಿ ನನಗೆ ಮುಖ್ಯವೆನಿಸಿದ್ದು ಒಂದು ಸಮುದಾಯದಲ್ಲಿ ಮೀನಿನ ವ್ಯಾಪಾರದಿಂದಾಗಿ ಪೈಪೋಟಿ ಬೆಳೆದು, ಕ್ರಮೇಣ ಹಿಂದೂ ಮುಸ್ಲಿಂ ಎಂಬ ಭಾವನೆಗಳು ಸಿನಿಮಾದ ಪಾತ್ರಗಳಲ್ಲಿ ಮೂಡುವ ಬಗೆ. ಹೀಗೆ ಮೂಡಿದಾಗಲೂ ಈ ಸಮುದಾಯ ಅದನ್ನು ಗೆಲ್ಲಬಲ್ಲದೆಂಬ ಭರವಸೆಯೂ ಕೇವಲ ಪೊಳ್ಳು ಆಶಾವಾದ ವಾಗದೆ ಬದುಕಿನ ಸತ್ಯಗಳ ಕನ್ನಡಿಯಲ್ಲಿ ನಾವು ಕಾಣುವಂತಾಗುತ್ತದೆ.

ಪಾಲನೆ, ಕಾಮ, ಜಗಳ, ವಾತ್ಸಲ್ಯ ಎಲ್ಲವೂ ಈ ಸಿನಿಮಾದಲ್ಲಿ ಅಪ್ಪಟವೆನಿಸಲು ಕಾರಣ ಇಲ್ಲಿಯ ಪಾತ್ರಗಳು ಮಾತಾಡುವ ಭಾಷೆ. ನಾನು ನೋಡಿದ ಸಿನಿಮಾದಲ್ಲಿ ಇಂಗ್ಲಿಷ್‌ನಲ್ಲಿರುವ ಸಬ್‌ಟೈಟಲ್‌ಗಳು ಎಷ್ಟು ಪ್ರಾಮಾಣಿಕವಾಗಿದ್ದರೂ ಅಲ್ಲಿ ನಡೆಯುತ್ತಿರುವುದರ ಹಿಂದಿನ ಧ್ವನಿಯನ್ನು ಗ್ರಹಿಸಲಾರದು ಎಂದು ನನಗೆ ಅನ್ನಿಸಿತು. ಗುಲಾಬಿ ಟಾಕೀಸ್‌ನ ವಿಷಯಕ್ಕೆ ಬಂದರೆ ಸಬ್ ಟೈಟಲ್‌ಗಳನ್ನು ಇಂಗ್ಲಿಷ್‌ನಲ್ಲಿ ಮಾತ್ರವಲ್ಲ ‘ನಾಗರಿಕ ಕನ್ನಡ’ದಲ್ಲಿ ಪ್ರಕಟಿಸಿದ್ದರೂ ಸಿನಿಮಾದಲ್ಲಿರುವ ಪಾಲನೆ, ತಾಳ್ಮೆ ಮತ್ತು ಪ್ರೇಮದ ಗುಣಗಳು ವ್ಯಕ್ತವಾಗುತ್ತಿರಲಿಲ್ಲ. ಈ ದೃಷ್ಟಿಯಿಂದ ಸಿನಿಮಾದ ಚಿತ್ರೀಕರಣ ಮಾತ್ರವಲ್ಲದೆ ಪಾತ್ರಗಳ ಸಂಭಾಷಣೆಯೂ ಮೇಲ್ನೋಟಕ್ಕೆ ವ್ಯಕ್ತವಾದ ಅರ್ಥವನ್ನು ಮೀರಿದ ಒಂದು ಧ್ವನಿಯನ್ನು ಹೊಮ್ಮಿಸುತ್ತದೆ. ಅಲ್ಲಲ್ಲೇ ತಂಗುತ್ತ ನಾವು ನೋಡುವ ದೃಶ್ಯಗಳು ಹೇಗೆ ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತವೆ ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಕೊಡಲು ಬಯಸುತ್ತೇನೆ.

 • ಗುಲಾಬಿ ಒಂದೆಡೆ ಹೇಳುತ್ತಾಳೆ-ಮೊದಲು ಅದೇ ಸಿನಿಮಾ ಬೇರೇ ಕನಸು. ಈಗ ಅದೇ ಕನಸು ಬೇರೆ ಬೇರೆ ಸಿನಿಮಾ.
 • ಇಲ್ಲಿ ಕಾಣದವ್ಯಾಪಾರಿ ಸುಲೇಮಾನನಂತೆಯೇ, ಹೆಂಗಸರು ತಮ್ಮ ಕಲ್ಪನೆಯಲ್ಲಿ ಹಿಗ್ಗಿಸಿ ಕಾಣುವ, ಆದರೆ ನಾವು ಕಾಣದ ಸೀರಿಯಲ್ ಹೀರೋ ಚಿರಂತನ-ಗುಲಾಬಿಯ ಸಲಿಗೆಯ ಕಲ್ಪನೆಯಲ್ಲಿ ಅವನು ಅನುವಾದಗೊಂಡ ಚೀಂಕ್ರಣ್ಣ, ಈ ಕೆಳ ಸಮುದಾಯದ ಸಹಕರಿಸುವ ಸಮಾಧಾನದ ಲೋಕವನ್ನು ಕೆದಕುವವರೆಂದರೆ ಈ ಇಬ್ಬರು. ಇಬ್ಬರೂ ನಮಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳದವರು.
 • ಇಲ್ಲಿ ಟಿವಿ ಮಾತ್ರ ಬರುವುದಿಲ್ಲ. ಗುಲಾಬಿ ಒಂದು ಪೋಸ್ಟರನ್ನು ಕದ್ದು ತನ್ನ ಗುಡಿಸಲಿಗೆ ಅಂಟಿಸಿಕೊಳ್ಳುತ್ತಾಳೆ. ಈ ವ್ಯಾಮೋಹಗಳೂ ಕೂಡಾ ಅವರ ಬದುಕಿನ ಆಳವಾದ ಹಂಬಲದ ಸೂಚನೆಗಳಾಗುತ್ತವೆ.
 • ದೋಣಿಯ ಮೇಲೆ ಕುಳಿತ ನೇತ್ರ, ದಡದ ಮೇಲಿನ ಗುಲಾಬಿ ತಮ್ಮ ಕಾಮಲೋಕದ ಅನಿಸಿಕೆಗಳನ್ನು ಹೆಂಗಸರು ಮಾತ್ರ ಹಂಚಿಕೊಳ್ಳಬಲ್ಲಂತೆ ಹಂಚಿಕೊಳ್ಳುವುದು.
 • ನಾವು ಮರೆಯಲಾರದ ಇನ್ನೂ ಕೆಲವು ಕ್ಷಣಗಳಿವೆ. ಉದಾಹರಣೆಗೆ ಗುಲಾಬಿ ಮನೆಗೆ ಸಿನಿಮಾ ನೆಪ ಮಾಡಿಕೊಂಡು ಬಂದ ಅವಳ ಗಂಡ ಮೂಸಾನನ್ನು ಅಲ್ಲೇ ರಾತ್ರಿ ಉಳಿಯುವಂತೆ ಮಾಡು ಎಂದು ಒತ್ತಾಯಿಸಿ ಗುಲಾಬಿಯ ಗೆಳತಿ ರತ್ನ ಗುಡಿಸಲಿನಿಂದ ಹೊರಗೆ ಹೋಗುವಾಗ ಒಂದುಹೂವನ್ನು ಎಸೆದು ಹೋಗುತ್ತಾಳೆ. ಹಸಿವಿಗೂ, ಕಾಮಕ್ಕೂ, ಸೌಂದರ್ಯಕ್ಕೂ ಇರುವ ಸಂಬಂಧಗಳೂ ಕೂಡಾ ನಮ್ಮ ಪ್ರಾಣದ ನಿಜಗಳನ್ನು ಹೇಳುವಂತೆ ಇವೆ. ಬೆಳ್ತಕ್ಕಿಯ ರುಚಿ ಎಂಥ ಗಂಡಸರನ್ನಾದರೂ ಗೆಲ್ಲತ್ತೆ ಎಂದು ರತ್ನ ಗುಲಾಬಿಗೆ ಹೇಳಿ ಅಕ್ಕಿಯನ್ನೂ ಮೀನನ್ನೂ ಕೊಡುವುದು ಅಂಥ ಒಂದು ಸಂದರ್ಭ.
 • ಗುಲಾಬಿ ಮೀನನ್ನು ಬೆಕ್ಕಿಗೆ ತಿನ್ನಿಸುತ್ತಾ ತಾನೂ ತಿನ್ನುತ್ತಾ ಟಿ ವಿ ಯಲ್ಲಿ ಪುರಂದರದಾಸರ ‘ಪೋಗಾದಿರಲೋ ರಂಗಾ’ ಹಾಡನ್ನು ಕೇಳಿಸಿಕೊಳ್ಳುವುದು.
 • ನಿತ್ಯದ ಬದುಕು ಜಂಜಾಟವಾಗತೊಡಗಿದಾಗ ತಮ್ಮ ಕಲ್ಪನಾ ಲೋಕವನ್ನು ಹಿಗ್ಗಿಸುವ ಸೀರಿಯಲ್‌ಗಳಿಂದ ಅವರು ದೂರವಾಗುವುದು ಕೂಡ ಗಮನಿಸಬೇಕಾದದ್ದು.
 • ಮರೆಯಲಾಗದ ಪಾಲನೆಯ ಒಂದು ದೃಶ್ಯ; ಗಂಡನ ಗಾಯವಾದ ಬೆನ್ನಿಗೆ ಮದ್ದು ಹಾಕಿ ಕಾಯಿಸಿದ ವೀಳ್ಯದ ಎಲೆಗಳನ್ನುಹಾಯಾಗುವಂತೆ ಗುಲಾಬಿ ಹಚ್ಚುತ್ತ ಹೋಗುವುದು.
 • ಬದಲಾಗುತ್ತಿರುವ ಈ ಕೆಳ ಸಮುದಾಯದಲ್ಲಿ ಗುಲಾಬಿ-ಬೂಬಮ್ಮ ಸಾಹುಕಾರರ ಕಾರಿನಲ್ಲಿ ತನ್ನ ನಿತ್ಯದ ದುಡಿಮೆಯಾದ ಮನೆಗೆಲಸಕ್ಕೆಂದು ಬಂದಿಳಿಯುವುದು.
 • ಕಾರ್ಗಿಲ್ ಯುದ್ಧಕ್ಕಾಗಿ ಮಕ್ಕಳು ದೇಣಿಗೆ ಕೇಳುವಾಗ ಬುರ್ಖಾ ತೊಟ್ಟ ಗುಲಾಬಿಗೆ ಅದೇನೆಂದು ಅತ್ವಾಗದೆ ಬೆಪ್ಪಾಗುವುದು. ‘ಅವುಗಳ ಹತ್ತಿರ ಕೇಳದರೆ ಸಿಗತ್ತಾ’ ಎಂದು ನಾಗರಿಕನಂತೆ ಕಾಣುವ ಒಬ್ಬ ಹೇಳುವುದು.
 • ಮುಗ್ಧವಾದ ಕೆಳ ಸಮುದಾಯದ ಈ ಲೋಕದಲ್ಲಿ ಟಿವಿಯಲ್ಲಿ ಕಾರ್ಗಿಲ್ ಯುದ್ಧದ ವರದಿಗಳು ಪ್ರಸಾರವಾಗುವಾಗ ವಂದೇ ಮಾತರಂ ಹಾಡು ಬರುತ್ತದೆ. ನಿತ್ಯ ದುಡಿಮೆಯ ಜನರ ಸಂಘರ್ಷದ ಕಥನ ಸಂದರ್ಭದಲ್ಲೇ ಇಂಡಿಯಾ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂಗತಿಯೂ ಇನ್ನೊಂದು ಸುದ್ದಿಯಂತೆ ಕಾಣಿಸಿ, ಮಾಯವಾಗುವ ಬಗೆಯಲ್ಲೇ ನಮ್ಮಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿ, ಊರಿನ ಪ್ರೇಮ, ದೇಶ ಪ್ರೇಮದ ನಡುವಿನ ವಿರೋಧದ ವ್ಯಂಗ್ಯಕ್ಕೆ ನಮ್ಮನ್ನು ಗಿರೀಶರು ಎದುರಾಗಿಸುತ್ತಾರೆ. “ಊರು” ಅನುಭವದ ನಿಜ; “ದೇಶ” ಭಾವನಾತ್ಮಕವಾದ ಕಲ್ಪನೆ. ಊರೆಂದು ಕಂಡಾಗ ನಮ್ಮವರಾದವರು, ದೇಶವೆಂದು ಭಾವಿಸಿದಾಗ ಪರಕೀಯರಾಗವು ವ್ಯಂಗ್ಯ ಅರ್ಥವೇ ಆಗದಂತೆ ಬೆಪ್ಪಾಗುವ ಗುಲಾಬಿ ಈ ಕಥನದ ಮಹತ್ವದ ಇಮೇಜು, ನಾವು ಕಳೆದುಕೊಳ್ಳುತ್ತಿರುವ ಮುಗ್ಧ ನೈತಿಕತೆ ಮರುಕಳಿಸುವಂತೆ ಈ ಬೆಪ್ಪುತನ ಚಿತ್ರಿತವಾಗಿದೆ. ಇದೊಂದು ಈ ಕಾಲದ ಮಹತ್ವದ ಕಲಾತ್ಮಕವಾದ, ರಾಜಕೀಯವಾಗಿ ಅರ್ಥಗರ್ಭಿತವಾದ, ಸಾಧನೆಯೆಂದೇ ನಾನು ತಿಳಿದಿದ್ದೇನೆ.
 • ಬಸುರಾಗುವ ಹೆಂಡಿರು ಇರುವ ತನಕ ನಾನು ಇರುತ್ತೀನಿ ಎಂದು ತನ್ನ ಸಮುದಾಯಕ್ಕೆ ಪರಸ್ಥಳೀಯರಾದ, ಮೂರ್ಖರೂ ಆದ, ಹುಂಬರಿಗೆ ಗುಲಾಬಿ ನಿರ್ಭಯ ದಿಟ್ಟೆಯಂತೆ ಹೇಳುವುದರಲ್ಲಿ ಅವಳದೇ ಆದ ತಿಳುವಿನ ವ್ಯಾಖ್ಯಾನವಿದೆ. ಮತೀಯ ದ್ವೇಷ ಅರ್ಥವೇ ಆಗದ ಅವಳ ಬೆಪ್ಪುತನದ ಇನ್ನೊಂದು ಮಗ್ಗುಲೇ ಮಾನವ ಬಾಳ್ವೆಯನ್ನು ಸಾಧ್ಯಗೊಳಿಸುವ ಅವಳದೇ ಆದ ಅರಿವಿನಿಂದ ಹುಟ್ಟಿದ ನಿತ್ಯದ ಈ ಸತ್ಯ.
 • ಗುಲಾಬಿಯನ್ನು ಊರಿನಿಂದ ಅಟ್ಟಲು ಜೈ ಸಂತೋಷಿ ಮಾತಾ ಎನ್ನುವ ಬೋಟ್‌ನಲ್ಲಿ ಅವಳನ್ನು ಕರದೊಯ್ಯುವುದು ನಾನು ಸೂಚಿಸುವ ವ್ಯಂಗ್ಯವನ್ನು ಸೂಕ್ಷ್ಮಗೊಳಿಸುತ್ತದೆ.
 • ಯುವಕರು ಗುಲಾಬಿಗೆ ಔಟ್ ಔಟ್ ಎಂದಾಗ ಆಕೆ ಅವಳ ಭಾಷೆಯಲ್ಲಿ ಅದೇ ಶಬ್ದವನ್ನು ಉಪಯೋಗಿಸಿ ನಿನ್ನ ಹೆರಿಗೆಗೆ ನಾನು ಬರದೇ ಇದ್ದಿದ್ದರೆ ನೀನೇ ಔಟ್ ಆಗ್ತಿದ್ದೆ ಎನ್ನುವುದು. ಅವಳ ಪಾಲನಾತ್ಮಕ ನೈತಿಕತೆಯ ಅಭಿವ್ಯಕ್ತಿಯಾಗುತ್ತದೆ. ಇದು ಯಾವ ಹೇರಿಕೆಯೂ ಇಲ್ಲದೆ ಅತ್ಯಂತ ಸಹಜವಾಗಿ ಸಂಬವಿಸುತ್ತದೆ.
 • ನಿತ್ಯದ ಜಂಜಾಟದಲ್ಲಿ ಮುಳುಗಿದಂತಿರುವ ಗುಲಾಬಿ ತನ್ನ ಸಂಕಟದಲ್ಲಿ ಒಂದು ಸುಂದರವಾದ ರಗ್ಗಿನ ಮೇಲೆ ಕುಳಿತು ಭಕ್ತಿಯಿಂದ ನಮಾಜು ಮಾಡುವುದು, ಅವಳು ಬಯಸುವ ಅತೀತವೊಂದರ ಕೃಪೆಯ ಅರಿವಿನ ಸೂಚನೆಯಾಗುತ್ತದೆ.

ಸಿನಿಮಾ ಹೇಗೆ ಮೊದಲಾಗುತ್ತದೋ ಹಾಗೆಯೇ ಕೊನೆಯಾಗುತ್ತದೆ. ಮೊದಲು ನಾವು ನೋಡುವುದು ಎಷ್ಟು ನಮ್ಮ ಮನಸ್ಸಿನಲ್ಲಿ ನಿಲ್ಲುತ್ತದೋ, ಕೊನೆಯಲ್ಲಿ ನೋಡುವುದೂ ಅಷ್ಟೆ ನಮ್ಮ ಮನಸ್ಸಿನಲ್ಲಿ ನಿಲ್ಲುತ್ತದೆ. ಅವಳೇ ಪ್ರಾಯಶಃ ಹೆರಿಗೆ ಮಾಡಿಸಿದ ತಾಯಿಯ ಮಗನೊಬ್ಬ ಅವಳನ್ನೆತ್ತಿ ಇನ್ನೊಂದು ಊರಿಗೆ ರವಾನಿಸುತ್ತಾನೆ. ಇದು ಎಲ್ಲ ಸಿನಿಮಾಗಳ ಅಂತ್ಯದ ದುರಂತದಂತೆ ನಮಗೆ ಅನ್ನಿಸುವುದಿಲ್ಲ. ಜಪ್ಪಯ್ಯ ಎನ್ನದೆ ಕೂತಲ್ಲೇ ಕೂರುವ, ಎಸೆದ ಪಾತ್ರೆಗಳನ್ನು ಮತ್ತೆ ಒಳಗೆ ತರುತ್ತಲೇ ಕಾದಡುವ ಗುಲಾಬಿಯೂ ಈಗ ಸೋತಿರಬಹುದು. ಆದರೆ ಅವಳು ಸೋತಿರುವುದು ಈಗ ಮಾತ್ರ ಎನಿಸುವಂತೆ ಅವಳಿಗಿರುವ ಬದುಕುವ ಧೈರ್ಯ ಮತ್ತು ಪಾಲನೆಯ ಅಂತಃಕರಣ ಮಾತ್ರ ನಮ್ಮ ಮನಸ್ಸಿನಲ್ಲಿ ಉಳಿದಿರುತ್ತದೆ.

‘ಹೀಗಾಯಿತು, ಆದ್ದರಿಂದ ಆಮೇಲೆ ಹಾಗಾಯಿತು’ ಎಂಬ ತರ್ಕದಲ್ಲಿ ಸಿನಿಮಾವನ್ನು ನಾಟಕೀಯವಾಗಿಯೂ ಸಸ್ಪೆನ್ನಲೂ ಗಿರೀಶರು ಬೆಳಸದೇ ಇರುವುದರಿಂದಲೇ ನಾವು ಸಿನಿಮಾದಿಂದ ಪಡೆಯುವ ಅನುಭವ ಹೀಗೆ ಅನನ್ಯವೆನ್ನಿಸಲು ಸಾಧ್ಯವಾಯಿತು ಎಂದು ಮತ್ತೆ ಒತ್ತಿ ಹೇಳಲು ನಾನು ಬಯಸುತ್ತೇನೆ. ಈ ಪುನರುಕ್ತಿಗೆ ಕಾರಣ, ಈ ಸಿನಿಮಾ ಅರಿಸ್ಟಾಟಲ್ ವಿವರಿಸುವ ಕ್ಯಾಥಾರ್ಸಿನ್‌ನ ಉಮ್ಮಳವನ್ನು ನಮ್ಮಲ್ಲಿ ಉಂಟುಮಾಡಿ ತಣಿಸುವ ನಾಟಕದ ಬಗೆಯದಲ್ಲ ಎಂಬುದನ್ನು ಗುರುತಿಸಲು. ಹೀಗೆ ಗುರುತಿಸಲಾರದ ಪ್ರೇಕ್ಷಕರು ಈ ಕಥೆ ಎತ್ತೆತ್ತಲೋ ಸಾಗುತ್ತ ಫೋಕಸ್ ಕಳೆದುಕೊಳ್ಳುತ್ತದೆ ಎಂದು ಕೊಂಡಾರು ಎಂಬ ಗುಮಾನಿ ನನಗೆ.

ನಾನು ಬೇಕೆಂದೇ ವೈದೇಹಿಯವರ ಅದ್ಭುತವಾದ ಮೂಲ ಕಥೆಗೆ ಈ ಸಿನಿಮಾವನ್ನು ಹೋಲಿಸುತ್ತಿಲ್ಲ. ವೈದೇಹಿಯಿಂದ ಪ್ರೇರಣೆ ಪಡೆದು ಗಿರೀಶರು ತಮ್ಮದೇ ಆದ ಒಂದು ಹೊಸ ಲೋಕವನ್ನು ಸೃಷ್ಟಿಸಿದ್ದಾರೆ.

(ಉದಯವಾಣಿ, ಸಾಪ್ತಾಹಿಕ ಸಂಪದ, ೧೭ ಆಗಸ್ಟ್ ೨೦೦೮)

* * *