ಮಾನ್ಯ ಕುಲಾಧಿಪತಿಗಳೇ, ಕುಲಪತಿಗಳೇ, ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರೇ, ಶಿಕ್ಷಕರೇ ಮತ್ತು ವಿದ್ಯಾರ್ಥಿಗಳೇ,

ಈ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುವುದು ನನ್ನ ಮಟ್ಟಿಗೆ ಗೌರವದ ಸಂಗತಿ. ಈ ಮಾತನ್ನು ನಾನು ಹೇಳುತ್ತಿರುವುದು ಇಂಥ ಸಂದರ್ಭಗಳ ಮಾತಿನ ಔಪಚಾರಿಕ ಪೀಠಿಕೆಯಾಗಿ ಅಲ್ಲ. ನಾನಿದನ್ನು ಅಕ್ಷರಾರ್ಥದಲ್ಲಿ ಹೇಳುತ್ತಿದ್ದೇನೆ. ಇದು ನಮ್ಮಂಥವರಿಗೆಲ್ಲಾ ಕಠಿಣವಾದ ಕಾಲಘಟ್ಟ ಈ ಕಷ್ಟಕಾಲದಲ್ಲಿಯೂ ಸರಿಯಾಗಿ ವರ್ತಿಸುವ ಧೈರ್ಯವನ್ನು ಈ ವಿಶ್ವವಿದ್ಯಾಲಯದ ಕುಲಪತಿ ತೋರಿಸಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ ಯಾವುದೇ ಸಂಸ್ಥೆಯ ಮುಖ್ಯಸ್ಥ ತೆಗೆದುಕೊಳ್ಳಬಹುದಾದ ಸಹಜ ನಿರ್ಧಾರ ಇದಾಗಿತ್ತು. ಆದರೆ ಅವರ ಮೇಲೆ ನಡೆದ ವಾಗ್ದಾಳಿಯನ್ನು ಕಂಡಾಗ ನನಗೆ ಈ ಕುಲಪತಿಗಳು ನಮ್ಮ ಸಂವಿಧಾನ ಪ್ರತಿಪಾದಿಸಿದ ಆದರ್ಶಗಳನ್ನು ಎತ್ತಿಹಿಡಿಯುವುದನ್ನಲ್ಲದೆ ಬೇರೇನನ್ನೂ ಮಾಡಿಲ್ಲ ಎಂದು ಹೇಳಬೇಕೆನಿಸುತ್ತದೆ. ಏಕೆಂದರೆ ಸಾಮಾನ್ಯ ಮನುಷ್ಯರಾರೂ ಭಯೋತ್ಪಾದಕರನ್ನು ಸಮರ್ಥಿಸಲು ಸಾಧ್ಯವಿಲ್ಲ.

ಮುಸ್ಲಿಮರ ಮಿತ್ರ, ಹಿಂದೂಗಳ ಶತ್ರು ಎಂಬ ಭಾವನೆಯಿಂದಾಗಿಯೇ ಗಾಂಧೀಜಿ ಕೊಲೆಗೀಡಾದರು ಎಂಬುದನ್ನು ನಾವು ಮರೆಯದಿರೋಣ, ವಾಸ್ತವದಲ್ಲಿ ಗಾಂಧೀಜಿ ಹಿಂದೂಗಳ ಮತ್ತು ಮುಸ್ಲಿಮರ ಹಿಂಸಾತ್ಮಕ ಕ್ರಿಯೆಗಳ ವಿರುದ್ಧ ಹೋರಾಡುತ್ತಿದ್ದರು. ಆಡಳಿತಾರೂಢರಾಗಿದ್ದ ತಮ್ಮ ಅನುಯಾಯಿಗಳು ಪಾಕಿಸ್ತಾನಕ್ಕೆ ಕಾನೂನುಬದ್ಧವಾಗಿ ಕೊಡಬೇಕಾಗಿದ್ದುದನ್ನು ಕೊಡುವುದಕ್ಕೂ ಅವರು ಉಪವಾಸ ಕೂರಬೇಕಾಯಿತು. ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ನಾಯಕರ ಕರ್ಕಶ ಕಿರುಚಾಟಗಳನ್ನು ಕೇಳಿದರೆ ನಾಥೂರಾಮ್ ಗೋಡ್ಸೆಯ ಚಿಂತನಾ ವಿಧಾನ ನಮ್ಮ ದೇಶದಲ್ಲಿನ್ನೂ ಜೀವಂತವೂ ಪ್ರಭಾವಶಾಲಿಯೂ ಆಗಿದೆಯೆಂದು ಯಾರಾದರೂ ಭಾವಿಸಿಬಿಡಬಹುದು. ನಾವು ಕೇವಲ ಭಯೋತ್ಪಾದಕರ ಅಮಾನವೀಯತೆಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರೆ ಸಾಕಾಗುವುದಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಜಕೀಯ ಹುನ್ನಾರಗಳನ್ನೂ ಕೊನೆಗೊಳಿಸಬೇಕಾಗಿದೆ.

ನಾನು ಓದಿದ್ದು ಮೈಸೂರು ವಿಶ್ವವಿದ್ಯಾಲಯದ ಮಹಾರಾಜಾ ಕಾಲೇಜಿನಲ್ಲಿ ಈ ಕಾಲೇಜಿಗೊಬ್ಬರು ಬ್ರಿಟಿಷ್ ಪ್ರಿನ್ಸಿಪಾಲರಿದ್ದರು. ದಂತಕತೆಯಾಗಿಬಿಟ್ಟಿರುವ ಈ ಪ್ರಿನ್ಸಿಪಾಲರು ಕ್ವಿಟ್ ಇಂಡಿಯಾ ಚಳವಳಿಯ ಕಾಲದಲ್ಲೂ ತಮ್ಮ ಅನುಮತಿಯಿಲ್ಲದೆ ಪೊಲೀಸರು ಕ್ಯಾಂಪಸ್‌ನೊಳಕ್ಕೆ ಕಾಲಿಡಬಾರದೆಂಬ ನಿಯಮವನ್ನು ಪಾಲಿಸಿದವರು. ಅವರ ಈ ನಿಲುವು ತಲೆಮಾರಿನಿಂದ ತಲೆಮಾರಿಗೆ ಕತೆಯಂತೆ ಹರಿದುಬಂದಿದೆ. ‘ತಪ್ಪು ಮಾಡಿರುವ’ ವಿದ್ಯಾರ್ಥಿಗಳೂ ತಮ್ಮ ರಕ್ಷಣೆಯಲ್ಲಿರುವವರೆಂದು ಭಾವಿಸಿದ್ದ ಅವರು ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳೂ ವಿಶ್ವವಿದ್ಯಾಲಯದ ಮುಖ್ಯಸ್ಥರ ರಕ್ಷಣೆಯಲ್ಲಿರುತ್ತಾರೆ. ಆದ್ದರಿಂದ  ಅವರು ಪಾಲಕನ ಪಾತ್ರವನ್ನು ವಹಿಸಬೇಕೆಂಬ ಅಭಿಪ್ರಾಯ ಹೊಂದಿದ್ದರು. ಈ ಅಂಶವನ್ನು ಬಹಳ ಚೆನ್ನಾಗಿ ವಿವರಿಸಿರುವ ಗೆಳೆಯ ಮತ್ತು ಬರೆಹಗಾರ ಮುಕುಲ್ ಕೇಶವನ್ ಅವರನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ಎನಿಸುತ್ತದೆ.

‘ನನ್ನ ಮಗನೂ ಇನ್ನು ಒಂದೋ ಎರಡೋ ವರ್ಷದಲ್ಲಿ ವಿಶ್ವವಿದ್ಯಾಲಯವೊಂದಕ್ಕೆ ಕಲಿಯಲು ಹೋಗಬಹುದು. ದುರ್ದೈವವಶಾತ್‌ ಅವನೂ ಯಾವುದಾದರೊಂದು ಕಾರಣಕ್ಕೆ ಪೊಲೀಸ್ ರಿಮಾಂಡ್‌ನಲ್ಲಿ ಇರಬೇಕಾಗಬಹುದು (ಕೊಲೆ, ಸಶಸ್ತ್ರ ದರೋಡೆ, ಶಿಕ್ಷಕರ ಮೇಲಿನ ದಾಳಿ, ವಂಚನೆ), ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ನನ್ನ ಸ್ಥಾನದಲ್ಲಿ ನಿಂತು ಅವನನ್ನು ನೋಡಿಕೊಳ್ಳಬೇಕೆಂದು ನಾನು ನಿರೀಕ್ಷಿಸುತ್ತೇನೆ. ವಿಶ್ವವಿದ್ಯಾಲಯದ ಮುಖ್ಯಸ್ಥರು ಠಾಣಾಧಿಕಾರಿಯ ಜತೆ ಸಂಪರ್ಕವಿಟ್ಟುಕೊಂಡು ಆತನಿರುವ ಕರಾಳ ಪರಿಸ್ಥಿತಿಯಲ್ಲೂ ಅವನಿಗೆ ಇರಬಹುದಾದ ಹಕ್ಕುಗಳನ್ನು ಖಾತರಿಪಡಿಸಿಕೊಳ್ಳಬೇಕು. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಅಗತ್ಯವಿರುವ ವಕೀಲರನ್ನು ನೇಮಿಸಬೇಕು. ಒಂದು ವೇಳೆ ಅವನು ಮಾಡಿದ ಅಪರಾಧ ಇಂಥ ಅವಕಾಶವನ್ನು ಒದಗಿಸದೇ ಇದ್ದರೆ ಅವನನ್ನು ಕನಿಷ್ಠ ನ್ಯಾಯಾಂಗ ಬಂಧನಕ್ಕೆ ವರ್ಗಾಯಿಸುವಂತೆ ನೋಡಿಕೊಳ್ಳಬೇಕು. ಭಾರತದ ಮಟ್ಟಿಗೆ ಪೊಲೀಸರ ವಶದಲ್ಲಿರುವುದು ಭಯ ಹುಟ್ಟಿಸುವ ಬಂಧಿತ ಸ್ಥಿತಿ. ನ್ಯಾಯಾಂಗ ಬಂಧನದಲ್ಲಿ ಖೈದಿಯನ್ನು ನಡೆಸಿಕೊಳ್ಳುವ ವಿಧಿ ವಿಧಾನಗಳು ಪೊಲೀಸ್ ರಿಮ್ಯಾಂಡ್‌ಗೆ ಅನ್ವಯಿಸುವುದಿಲ್ಲ. ಪೊಲೀಸರು ತಮ್ಮ ಲಾಕ್-ಅಪ್‌ಗಳಲ್ಲಿ ಶಂಕಿತರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದಾದ ವಾತಾವರಣವಿದೆ. ಅಪಕೀರ್ತಿಗೆ ಹೆದರಿ ಅಥವಾ ಭಯೋತ್ಪಾದನೆಯ ಕಳಂಕದಿಂದ ದೂರವಿರುವ ಉದ್ದೇಶದಿಂದ ತಮ್ಮ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದಾಕ್ಷಣ ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವ ವಿಶ್ವವಿದ್ಯಾಲಯ ಒಂದು ಕುಬ್ಜ ಮತ್ತು ತುಚ್ಛ ಸಂಸ್ಥೆಯಾಗಿರುತ್ತದೆ. ಇದು ನಾಗರಿಕರ ಗೌರವ ಮತ್ತು ಪಾಲಕರ ನಂಬಿಕೆ ಅನರ್ಹ.’

ಪ್ರೊ. ಮುಷಿರುಲ್ ಹಸನ್ ಒಬ್ಬ ಕುಲಪತಿಯಾಗಿ ಈ ವಿಶ್ವವಿದ್ಯಾಲಯದ ಮಹತ್ ಪರಂಪರೆಯ ಪರವಾಗಿ ನಿಂತಿದ್ದಾರೆ. ಈ ವಿಶ್ವವಿದ್ಯಾಲಯದ ಸ್ಥಾಪಕರಲ್ಲಿ ಕೇವಲ ವಸಾಹತುಶಾಹಿ ವಿರೋಧಿ ಇಸ್ಲಾಮೀ ಕ್ರಿಯಾಶೀಲತೆಯಾದ ಖಿಲಾಫತ್‌ನ ತಾತ್ವಿಕತೆಯಿಂದ ಪ್ರಭಾವಿತರಾಗಿದ್ದವರಷ್ಟೇ ಇರಲಿಲ್ಲ. ಇವರ ಜತೆಗೆ ಕ್ರಾಂತಿಕಾರಿ ರಾಜಕೀಯವನ್ನು ಪ್ರತಿಪಾದಿಸುತ್ತಿದ್ದ, ಪಾಶ್ಚಾತ್ಯ ಶಿಕ್ಷಣ ಪಡೆದಿದ್ದ ಮುಸ್ಲಿಂ ಬುದ್ಧಿಜೀವಿಗಳೂ ಇದ್ದರು. ಗುರುದೇವ ರವೀಂದ್ರನಾಥ ಟ್ಯಾಗೋರ್ ಮತ್ತು ಮಹಾತ್ಮಾ ಗಾಂಧೀಜಿ ಈ ಸಂಸ್ಥೆಯನ್ನು ಆಶೀರ್ವದಿಸಿದ್ದೂ ನನ್ನ ಮಟ್ಟಿಗೆ ಬಹಳ ಮುಖ್ಯ. ಈ ಇಬ್ಬರೂ ಯೂರೋಪ್ ಪ್ರಣೀತ ಪ್ರಬಲ ಮತ್ತು ಕೇಂದ್ರೀಕೃತವಾಗಿರುವ, ‘ಒಂದು ದೇಶ, ಒಂದು ಭಾಷೆ, ಒಂದು ಜನಾಂಗ’ ಎಂಬ ಆದರ್ಶದ ಮೇಲೆ ನಿಂತಿರುವ ರಾಷ್ಟ್ರೀಯತೆಯನ್ನು ಅನುಮಾನದಿಂದ ನೋಡಿದ್ದರು. ಮಾತ್ರವಲ್ಲ ಅವರ ದೃಷ್ಟಿಯಲ್ಲಿ ಭಾರತವೆಂಬುದು ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳಿಂದ ಕೂಡಿದ ಒಂದು ಅದ್ವೈತೀಯ ಏಕತೆ ಹೊಂದಿರುವ ದೇಶವಾಗಿತ್ತು.

ನಮ್ಮ ಕಾಲಘಟ್ಟದಲ್ಲಿ ಎದುರಾಗಿರುವ ಅತಿ ದೊಡ್ಡ ಸವಾಲು ಯಾವುದೆಂಬುದನ್ನು ಸ್ಪಷ್ಟಪಡಿಸಲು ಮತ್ತೊಮ್ಮೆ ಮುಕುಲ್ ಕೇಶವನ್ ಅವರನ್ನು ಉಲ್ಲೇಖಿಸಲು ಬಯಸುತ್ತೇನೆ.

‘ಜನರು, ಪೊಲೀಸರು ಮತ್ತು ರಾಜಕೀಯ ಪಕ್ಷಗಳು ‘ಮುಸ್ಲಿಮರು ಅಪರಾಧಿಗಳು’ ಎಂಬ ಪೂರ್ವಗ್ರಹೀತ ಕಥನವನ್ನು ಒಪ್ಪಿಕೊಳ್ಳತೊಡಗಿದರೆ ಅವರು ಈ ಅಸಾಧಾರಣವಾದ ಗಣರಾಜ್ಯವನ್ನು ಒಂದು ಸಾಧಾರಣ, ಅಸಹ್ಯ ಹುಟ್ಟಿಸುವ ಬಹುಸಂಖ್ಯಾತ ಪ್ರಭುತ್ವವನ್ನಾಗಿ ಪರಿವರ್ತಿಸುವ ಅಪಾಯದಲ್ಲಿರುತ್ತಾರೆ.’

ನನ್ನ ಕೆಲವು ಮುಸ್ಲಿಂ ಗೆಳೆಯರು ಇತ್ತೀಚೆಗೆ ಅನುಭವಿಸುತ್ತಿರುವ ಸಂಕಟಗಳೆಂಥವು ಎಂಬುದು ನನಗೆ ಗೊತ್ತು. ಇದಕ್ಕೆ ಮಾಧ್ಯಮಗಳೇ ಬಹುಮುಖ್ಯ ಕಾರಣ. ಭಯೋತ್ಪಾದನೆಯ ಸಂಶಯದಲ್ಲಿ ಯಾವ ಬಂಧನಗಳು ನಡೆದರೂ ನೀವು ಕೇಳುವುದು ಒಂದು ಮುಸ್ಲಿಂ ಹೆಸರು. ಆಮೇಲೆ ಬಂಧಿತರು ‘ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಲಾಗುತ್ತದೆ. ಪೊಲೀಸರ ಹಿಂಸೆಗೆ ಎಡೆಯಾಗಿ ತಪ್ಪೊಪ್ಪಿಕೊಳ್ಳದವರು ಯಾರು? ನನ್ನನ್ನೂ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಪಡಿಸಿದರೆ ನಾನೂ ಕೂಡಾ ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುತ್ತೇನೇನೋ? ಈ ತಥಾಕಥಿತ ‘ತಪ್ಪೊಪ್ಪಿಗೆ’ಗೆ ನ್ಯಾಯಾಲಯದಲ್ಲಿ ಯಾವುದೇ ಬೆಲೆಯಿಲ್ಲ. ಆದರೆ ಬಂಧಿತರು ಅಪರಾಧಿಗಳಲ್ಲ ಎಂದು ನಾವು ಅರಿಯುವ ಹೊತ್ತಿಗೆ ಆಗಬಾರದ ಅನಾಹುತ ಸಂಭವಿಸಿರುತ್ತದೆ. ಒಬ್ಬ ಮುಸ್ಲಿಂ ಬಂಧನಕ್ಕೊಳಗಾದನೆಂದೋ ಇಲ್ಲವೇ ‘ಎನ್‌ಕೌಂಟರ್‌’ನಲ್ಲಿ ಕೊಲ್ಲಲ್ಪಟ್ಟನೆಂದೋ ನಮಗೆ ಪ್ರತಿದಿನವೂ ತಿಳಿಸುವ ಕ್ರಿಯೆ ಒಂದು ರೀತಿಯಲ್ಲಿ ನಮ್ಮ ಮನಸ್ಸಿನ ಮೇಲೆ ನಡೆಯುವ ದಾಳಿ. ಅದು ತಪ್ಪಿಸಬಹುದಾಗಿದ್ದ ಎನ್‌ಕೌಂಟರ್ ಆಗಿತ್ತೇ? ಎಂಬುದಂತೂ ನಮಗೆ ತಿಳಿಯುವುದಿಲ್ಲ. ಇಷ್ಟಕ್ಕೂ ಸತ್ತವರು ಎದ್ದು ಬಂದು ನಿಜಕ್ಕೂ ಏನು ಸಂಭವಿಸಿತೆಂದು ಹೇಳಲು ಸಾಧ್ಯವೇ? ಒಂದು ಪಾರದರ್ಶಕ ತನಿಖೆಯ ಮುಖಾಂತರ ಸಾಬೀತಾಗುವ ತನಕ ಪ್ರತೀ ಎನ್‌ಕೌಂಟರನ್ನೂ ಒಂದು ಕೊಲೆಯೆಂದೇ ಪರಿಗಣಿಸಬೇಕೆಂದು ಸಂವಿಧಾನ ಹೇಳುತ್ತದೆ. ನಮ್ಮ ರಾಷ್ಟ್ರೀಯ ಪ್ರಭುತ್ವ ಈ ಸಾಂವಿಧಾನಿಕ ಬದ್ಧತೆಯನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿರುವಂತೆ ಕಾಣಿಸುವುದಿಲ್ಲ. ಸಮೂಹ ಸನ್ನಿಯನ್ನು ಸೃಷ್ಟಿಸುತ್ತಿರುವಷ್ಟು ಕಾಲ ಎಲ್ಲವೂ ಸರಿ.

ನನ್ನ ರಾಜ್ಯ ಕರ್ನಾಟಕದಲ್ಲಿ ಪ್ರತಿದಿನವೂ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದ ‘ಮಾಸ್ಟರ್-ಮೈಂಡ್‌’ಗಳನ್ನು ಬಂಧಿಸುತ್ತಿರುತ್ತಾರೆ. ಈ ಬಂಧನವೆಂಬ ಕತೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರೆ ನಮ್ಮ ದೇಶಪ್ರೇಮವೇ ಪ್ರಶ್ನಾರ್ಹವಾಗುವುದರ ಜತೆಗೆ ನಾವು ರಾಷ್ಟ್ರದ್ರೋಹಿಗಳು ಆಗಿಬಿಡುತ್ತೇವೆ. ಇದು ಖಂಡಿತವಾಗಿಯೂ ಫ್ಯಾಸಿಸಂನ ನಾಂದಿ ಗೀತೆ.

ನಾನೊಬ್ಬ ನಾಗರಿಕನೆಂಬ ನೆಲೆಯಲ್ಲಿ ನನ್ನದೊಂದು ಪ್ರಶ್ನೆ ಇದೆ: ಸಂಶಯದ ಆಧಾರದಲ್ಲಿ ಬಂಧನಕ್ಕೊಳಗಾದವರ ಹೆಸರುಗಳನ್ನು ಅವರ ಮೇಲಿನ ಆರೋಪಗಳು ಸಾಬೀತಾಗುವ ಮೊದಲೇ ಮಾಧ್ಯಮಗಳೇಕೆ ಪ್ರಕಟಿಸಬೇಕು? ಒಂದು ನಾಗರಿಕ ಸಮಾಜದಲ್ಲಿ ಕೆಲವು ಸಂಯಮಗಳು ಅಗತ್ಯ. ಹೀಗೆ ಹೆಸರುಗಳನ್ನು ಪ್ರಕಟಿಸುವುದರಿಂದ ಅವರು ಅಪರಾಧ ಮುಕ್ತರಾದರೂ ಅವರಿಗಂಟಿಕೊಂಡಿರುವ ಕಳಂಕ ಉಳಿದೇ ಇರುತ್ತದೆ. ನನ್ನಂಥ ಅನೇಕರು ನಾವೊಂದು ದುಃಸ್ವಪ್ನಗಳಿಂದ ಬಾಧಿತವಾದ ಕಾಫ್ಕಯಿಸ್ಕ್‌ ಜಗತ್ತಿನಲ್ಲಿದ್ದೇವೆಯೇ ಎಂದು ಭಾವಿಸಲಾರಂಭಿಸಿದ್ದಾರೆ.

ಇಡೀ ದೇಶವೇ ನರವಿಕಲ್ಪಕ್ಕೆ ಗುರಿಯಾದಂತೆ ಕಾಣಿಸುತ್ತಿದೆ. ಆಡಳಿತ ನಡೆಸುವವರು ತಮ್ಮ ದಕ್ಷತೆಯನ್ನು ಸಾಬೀತು ಮಾಡಬೇಕಾಗಿದೆ. ಆದ್ದರಿಂದ ಅವರು ತಮಗೆ ತೋಚಿದ ಯಾರನ್ನೋ ಬಂಧಿಸಿ ನಾಗರಿಕರಲ್ಲಿ ಸುರಕ್ಷೆಯ ಭ್ರಮೆಯೊಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬುದು ನನಗಿರುವ ಸಂಶಯ. (ಅಧಿಕಾರದಲ್ಲಿರುವ ಅಥವಾ ವಿರೋಧ ಪಕ್ಷಗಳಾಗಿರುವ ರಾಜಕೀಯ ಪಕ್ಷಗಳೆಲ್ಲವೂ ಅಧಿಕಾರ ಹಿಡಿಯುವ ಅಪೇಕ್ಷೆಯಿಂದ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುತ್ತವೆ.)

ಈ ‘ಸುರಕ್ಷಿತ ಮತ್ತು ಸುಭದ್ರ’ತೆಯ ಭಾವನೆ ಕೇವಲ ಕ್ಷಣಿಕ ಭ್ರಮೆಯಷ್ಟೇ. ಏಕೆಂದರೆ ಮರುದಿನವೇ ಮತ್ತೊಂದು ಭಯೋತ್ಪಾದಕ ದಾಳಿ ಮತ್ತು ಮತ್ತಷ್ಟು ಮುಸ್ಲಿಮರ ಬಂಧನದ ಸುದ್ದಿಗಳನ್ನು ಕೇಳಲು ಆರಂಭಿಸಿರುತ್ತೇವೆ. ಅವರ ಬಳಿ ಇವೆಯೆನ್ನಲಾದ ಬಾಂಬ್ ತಯಾರಿಕೆಗೆ ಬಳಸುವ ಅಪಾಯಕಾರಿ ಸ್ಫೋಟಕ ಸಾಮಗ್ರಿಗಳನ್ನೂ ನಮ್ಮ ಟಿ.ವಿ. ಚಾನೆಲ್‌ಗಳು ತೋರಿಸುತ್ತವೆ. ನಾವು ಈ ಟಿ.ವಿ. ಚಾನೆಲ್‌ಗಳ ‘ಬ್ರೇಕಿಂಗ್ ನ್ಯೂಸ್‌’ಗಳನ್ನು ನಂಬುತ್ತೇವೆಯೇ? ಬಹುಶಃ ಇದರ ಉತ್ತರ ಹೌದು ಮತ್ತು ಇಲ್ಲ. ನಂಬಿಕೆ ಮತ್ತು ಸಂಶಯಗಳ ನಡುವೆ ಒಡೆದು ಹೋಗಿರುವ ನಾವು ಟಿ.ವಿ. ಚಾನೆಲ್ ಗಳಿಗಿರುವ ಅತಿರಂಜಕತೆಯ ಅಗತ್ಯ ಮತ್ತು ಟಿಆರ್ಪಿಗಾಗಿನ ಹೋರಾಟವನ್ನು ಗುರುತಿಸಬಲ್ಲವರಾಗಿದ್ದೇವೆ. ಆದರೂ ಇದು ನನ್ನಂಥ ಸಾಮಾನ್ಯ ಪ್ರಜೆಗಳಿಗೆ ಮಾನಸಿಕ ಹಿಂಸೆ. ನಮ್ಮ ಮಕ್ಕಳು ಸುರಕ್ಷಿತವಾಗಿ ಶಾಲೆಯಿಂದ ಹಿಂದಿರುಗಬೇಕೆಂಬ ಅಪೇಕ್ಷೆ ನಮಗೂ ಇಲ್ಲವೇ?

ಪೊಲೀಸರೂ ಕೂಡಾ ಇದೇ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಅಪರಾಧಿಗಳನ್ನು ಆದಷ್ಟು ಬೇಗ ಹಿಡಿಯಿರೆಂದು ತಮ್ಮ ರಾಜಕೀಯ ಪ್ರಭುಗಳು ರೇಗುತ್ತಿರುವುದರಿಂದ ಅವರೂ ಒತ್ತಡದಲ್ಲಿದ್ದಾರೆ. ಅಮಾನವೀಯ ಭಯೋತ್ಪಾದಕರಾದರೋ ‘ಇಸ್ಲಾಂ’ ಎಂಬ ಪದವನ್ನೇ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಜತೆಗೆ ಅವರಿಗೆ ನಮ್ಮ ದೇಶದ ಗುಪ್ತಚರ ಜಾಲ ಎಷ್ಟು ದುರ್ಬಲವೆಂಬುದು ಗೊತ್ತಿದೆ. ನಮ್ಮ ಪ್ರಭುತ್ವ ಭಯೋತ್ಪಾದಕರ ಹಿತಾಸಕ್ತಿಯನ್ನು ಕಾಪಾಡುವಂತೆ ಮುಸ್ಲಿಂ ಹೆಸರಿನ ಪ್ರತಿಯೊಬ್ಬನನ್ನೂ ಬಂಧಿಸುತ್ತಿದೆ. ಮುಸ್ಲಿಮರ ನೈತಿಕ ಸ್ಥೈರ್ಯದ ಅಡಿಪಾಯವನ್ನೇ ಕೆದಕುತ್ತಿರುವ ಈ ಬಗೆಯ ಪ್ರಭುತ್ವದ ಕ್ರಮಗಳಲ್ಲಿ ಭಯೋತ್ಪಾದಕರ ಭರವಸೆಗಳು ಅಡಗಿವೆ. ಪ್ರಭುತ್ವದ ಹಿಂಸೆಗೆ ಗುರಿಯಾದವರು ತಮ್ಮನ್ನು ಸೇರಿಕೊಳ್ಳಬಹುದು ಇಲ್ಲವೇ ಕನಿಷ್ಠ ತಮಗೆ ನೈತಿಕ ಬೆಂಬಲ ನೀಡಬಹುದೆನ್ನುವುದು ಭಯೋತ್ಪಾದಕರ ನಿರೀಕ್ಷೆ. ಈ ಭಯೋತ್ಪಾದಕರು ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲೂ ದಾಳಿಗಳನ್ನು ನಡೆಸುತ್ತಿದ್ದಾರೆ. ಇದು ತನ್ನನ್ನು ಸೃಷ್ಟಿಸಿದವನನ್ನೇ ನಾಶ ಮಾಡಲು ಹೊರಟ ಭಸ್ಮಾಸುರನ ಕತೆಯಂಥ ಸ್ಥಿತಿ. ಇದು ಅಮೆರಿಕದ ಮಟ್ಟಿಗೂ ನಿಜ. ಜಗತ್ತಿನ ಯಜಮಾನಿಕೆಗಾಗಿ ಅದು ಅನುಸರಿಸಿದ ನೀತಿಯ ಪರಿಣಾಮವನ್ನು ಅದೇ ಎದುರಿಸಬೇಕಾಗಿ ಬಂದಿದೆ. ಒಂದರ್ಥದಲ್ಲಿ ಅಮೆರಿಕ ತನ್ನ ಕರ್ಮಗಳಿಗೆ ಫಲವನ್ನು ಅನುಭವಿಸುತ್ತಿದೆ.

ಹೀಗೆ ಅಲ್ಪಸಂಖ್ಯಾತರು ನಮ್ಮ ದೇಶದ ಮುಖ್ಯವಾಹಿನಿಯಿಂದ ದೂರವಾಗುತ್ತಿದ್ದಾರೆ. ನೀವು ಮುಸ್ಲಿಮನಾಗಿದ್ದರೆ ಬೆಂಗಳೂರೆಂಬ ಐ.ಟಿ. ನಗರದಲ್ಲಿ ಮಧ್ಯಮ ವರ್ಗದವರು ವಾಸಿಸುವ ಪ್ರದೇಶದಲ್ಲೊಂದು ಬಾಡಿಗೆ ಮನೆ ದೊರೆಯುವುದೂ ಕಷ್ಟ. ನಿಮ್ಮ ಹೆಸರು ಕೇಳುತ್ತಿದ್ದಂತೆಯೇ ಅವರು ‘ಮನೆಯನ್ನು ಈಗಾಗಲೇ ಬಾಡಿಗೆ ಕೊಟ್ಟಿದ್ದೇವೆ’ಎಂದು ನಯವಾಗಿ ಸಾಗಹಾಕುತ್ತಾರೆ.

ಚುನಾವಣೆಗಳು ಹತ್ತಿರಬರುತ್ತಿರುವ ಈ ಹೊತ್ತಿನಲ್ಲಿ ಹಿಂದೂ ಗಲಭೆಕೋರರು-ಇಸ್ಲಾಮಿಕ್ ಮೂಲಭೂತವಾದಿಗಳಿಗಿಂತ ಭಿನ್ನರಾಗಿರುವ ಹಿಂದೂ ಕೋಮುವಾದಿಗಳನ್ನು ಗುರುತಿಸುವುದಕ್ಕೆ ಇದೇ ಸರಿಯಾದ ಪದ ಎಂಬುದು ಸಂಘಪರಿವಾರದ ದೃಷ್ಟಿಕೋನ-ಚರ್ಚ್‌‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.

ಹಿಂದೂ ಮತ್ತು ಮುಸ್ಲಿಮರಲ್ಲಿರುವ ನಿಜವಾದ ಆಸ್ತಿಕರು ಧರ್ಮಶ್ರದ್ಧೆಯೊಂದಿಗೆ ಕರುಣೆಯನ್ನೂ ಹೊಂದಿರುವವರು. ಇಲ್ಲದಿದ್ದರೆ ನಮ್ಮದೇಶದಲ್ಲಿ ಗೊಂದಲ ಮತ್ತು ಅರಾಜಕತೆಯಷ್ಟೇ ಇರುತ್ತಿತ್ತು.

ನಾವೆಲ್ಲಾ ಅಂದರೆ ಮುಸ್ಲಿಮರು ಮತ್ತು ಮುಸ್ಲಿಮೇತರರೆಲ್ಲಾ ಇಸ್ಲಾಮಿನ ಮೂಲ ಭೂತ ತತ್ವಗಳ ಆಶಯಗಳನ್ನು ಅರಿಯುವ ಶೋಧನೆಯೊಂದನ್ನು ಆರಂಭಿಸುವ ಕಾಲ ಬಂದಿದೆ. ಇದು ಇಸ್ಲಾಮಿನ ತಿರುಳನ್ನು ಅರ್ಥ ಮಾಡಿಕೊಳ್ಳಲು ಹೇಗೆ ಅಗತ್ಯವೊ ಹಾಗೆಯೇ ಇಸ್ಲಾಮ್ ಮತ್ತು ಪ್ರಪಂಚದ ಎಲ್ಲೆಡೆ ಇರುವ ಮುಸ್ಲಿಮರನ್ನು ಮತಾಂಧರಿಂದ ಮುಕ್ತಗೊಳಿಸುವುದಕ್ಕೂ ಅಗತ್ಯ. ಜತೆಗೆ ಪಾಶ್ಚಾತ್ಯ ಮಾಧ್ಯಮಗಳು ಇಸ್ಲಾಮನ್ನು ವಿಕೃತವಾಗಿ ಚಿತ್ರಿಸುವುದನ್ನು ತಪ್ಪಿಸಿ ಇಸ್ಲಾಮ್ ಒಂದು ಧರ್ಮ ಮತ್ತು ತಾತ್ವಿಕತೆಯಾಗಿ ಎಷ್ಟು ಚಲನಶೀಲ ಎಂಬುದನ್ನು ಜಗತ್ತಿಗೆ ತೋರಿಸಿಕೊಡುವುದಕ್ಕೂ ಈ ಶೋಧನೆ ಬೇಕು. ಮ್ಯಾಕ್ಸಿಂ ರೋಡಿನ್‌ಸನ್, ಎಡ್ವರ್ಡ್‌ಸೈದ್, ಮೊಹಮ್ಮದ್ ಅರಾಕೌನ್, ಝಿಯಾವುದ್ದೀನ್ ಸರ್ದಾರ್, ಆಲಂ ಖುಂದ್‌ಮಿರಿ, ಮೌಲಾನಾ ವಹೀದುದ್ದೀನ್ ಖಾನ್ ಮತ್ತು ಅಸ್ಘರ್‌ಅಲಿ ಇಂಜಿನಿಯರ್‌ತರಹದ ಮಹಾ ವಿದ್ವಾಂಸರು ಮತ್ತು ಹೋರಾಟಗಾರರು ಈ ಕೆಲಸವನ್ನು ಈಗಾಗಲೇ ಮಾಡಿದ್ದಾರೆ. ಎಲ್ಲರೂ ಇಂಥ ಪ್ರಯತ್ನಗಳನ್ನು ಮುಂದುವರಿಸಿದರಷ್ಟೇ ಇಸ್ಲಾಮಿನ ಕುರಿತಂತೆ ಹರಡಲಾಗುತ್ತಿರುವ ಸಿದ್ಧ ಮಾದರಿಗಳು ಮತ್ತು ತಪ್ಪು ಕಲ್ಪನೆಗಳನ್ನು ಎದುರಿಸುವುದಕ್ಕೆ ಸಾಧ್ಯ.

ನಿಜ ಅರ್ಥದ ಜಾತ್ಯತೀತರು ಮತ್ತು ಮತೀಯ ಮೂಲಭೂತವಾದಿಗಳೆಂಬ ತಪ್ಪು ಗ್ರಹಿಕೆಗೆ ಗುರಿಯಾಗಿರುವ ಸಾಂಪ್ರದಾಯಿಕ ಆಸ್ತಿಕರ ನಡುವಣ ಅಂತರವನ್ನು ಇಲ್ಲದಂತಾಗಿಸುವುದು ಈ ಹೊತ್ತಿನ ಅಗತ್ಯಗಳಲ್ಲಿ ಒಂದು. ನಿಜವಾದ ಜಾತ್ಯತೀತರು ಮತ್ತು ಧರ್ಮದಲ್ಲಿ ಅಪಾರ ನಂಬಿಕೆ ಇರುವವರ ನಡುವಣ ಸಂಘರ್ಷಗಳನ್ನು ನಿವಾರಿಸುವುದು ಎಲ್ಲರಿಗೂ ಒಳ್ಳೆಯದೇ. ನಮ್ಮ ಇಂದಿನ ಬಿಕ್ಕಟ್ಟಿಗೆ ಇಂಥದ್ದೊಂದು ಆಯಾಮವೂ ಇದೆ. ಇದನ್ನು ಈಗಲೇ ನಿವಾರಿಸಿಕೊಳ್ಳದಿದ್ದರೆ ಸಿದ್ಧಮಾದರಿಗಳು ಮತ್ತು ಪೂರ್ವಾಗ್ರಹಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಾಗದಂತೆ ಮಾಡಿಬಿಡುತ್ತವೆ.

ಕ್ರಿಶ್ಚಿಯನ್ನರ ಪರವಾಗಿ ಮಾತನಾಡುವುದಕ್ಕೆ ಪಾಶ್ಚಾತ್ಯ ಜಗತ್ತಾದರೂ ಇದೆ. ಆದರೆ ಭಾರತೀಯ ಮುಸ್ಲಿಮರಿಗೆ ಯಾರೂ ಇಲ್ಲ. ಊಳಿಗಮಾನ್ಯ ಪ್ರಭುತ್ವವಿರುವ ಮುಸ್ಲಿಮ್ ರಾಷ್ಟ್ರಗಳ ಬೆಂಬಲದೊಂದಿಗೆ ಅಮೆರಿಕದ ಅಧ್ಯಕ್ಷ ಬುಷ್ ಮುಸ್ಲಿಮರ ವಿರುದ್ಧವೇ ಒಂದು ಕ್ರುಸೇಡ್ ಆರಂಭಿಸಿಬಿಟ್ಟಿದ್ದಾರೆ.

ಗಾಂಧೀಜಿ, ರಮಣ ಮತ್ತು ಪರಮಹಂಸರಂಥವರ ಪ್ರಭಾವಗಳಿಗೆ ಒಳಗಾಗಿ ಸಾಂಸ್ಥಿಕ ಧರ್ಮಗಳ ಪರಿಧಿಯಾಚೆಗೆ ಹೋಗಿ ಆಧ್ಯಾತ್ಮವನ್ನು ಹುಡುಕಿಕೊಳ್ಳುತ್ತಿದ್ದ ನನ್ನಂಥ ಹಿಂದೂಗಳೂ ಈಗ ಬೆದರಿಕೆಗೆ ಗುರಿಯಾಗಿದ್ದಾರೆ. ಸೃಷ್ಟಿಕರ್ತನಾದ ದೇವರ ಅಗತ್ಯವೇ ಇಲ್ಲದಂತೆ ಚಿಂತಿಸಿದ ಬುದ್ಧನಂಥವರಿಂದ ಕಟ್ಟಲ್ಪಟ್ಟಿದ್ದ ೨೦೦೦ ವರ್ಷಗಳಷ್ಟು ಹಳೆಯ ಹಿಂದೂ ನಾಗರಿಕತೆ ಬಹುಸಂಖ್ಯಾತ ಪ್ರಭುತ್ವದ ಸಿನಿಕ ಬೆಂಬಲಿಗರಿಂದ ನಾಶವಾಗುತ್ತಿದೆ.

ರಾಜಕೀಯ ಪಕ್ಷಗಳ ಸಿನಿಕ ಲೆಕ್ಕಾಚಾರವೊಂದಿದೆ. ಇದು ಕೆಲವು ಪಕ್ಷಗಳಲ್ಲಿ ಹೆಚ್ಚು ಪ್ರಭಾವಶಾಲಿ ಇನ್ನು ಕೆಲವು ಪಕ್ಷಗಳಲ್ಲಿ ಇದರ ಪ್ರಭಾವ ಕಡಿಮೆ. ಇದರಂತೆ ಭಾರತೀಯರನ್ನು ಕೋಮು ಆಧಾರದ ಮೇಲೆ ಒಡೆದರೆ ಸುರಕ್ಷಿತ ಓಟ್ ಬ್ಯಾಂಕ್‌ಗಳನ್ನು ಸೃಷ್ಟಿಸಬಹುದು. ಜಾತಿ ಆಧಾರದ ಮೇಲೆ ಒಡೆಯಲು ಹೊರಟರೆ ಒಂದು ಸುರಕ್ಷಿತ ಹಿಂದೂ ಔಟ್ ಬ್ಯಾಂಕ್ ರೂಪುಗೊಳ್ಳುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟ ಮತ್ತು ಅದಕ್ಕೂ ಮೊದಲಿನ ದಿನಗಳಲ್ಲಿ ಅನೇಕ ಸುಧಾರಣಾವಾದೀ ಆಂದೋಲಗಳು ಹುಟ್ಟಿಕೊಂಡು ಹಿಂದೂಗಳಲ್ಲಿದ್ದ ಜಾತೀಯತೆಯನ್ನು ನಿವಾರಿಸಲು ಮತ್ತು ಅವರನ್ನು ಒಂದುಗೂಡಿಸಲು ಪ್ರಯತ್ನಿಸಿದ್ದವು. ಈ ಪ್ರಯತ್ನ ಮಾಡಿದವರಲ್ಲಿ ಬಹಳ ಮುಖ್ಯರು ಕೇರಳದ ನಾರಾಯಣ ಗುರು. ಅವರು ಅರೆ ಅಸ್ಪೃಶ್ಯರಾಗಿದ್ದ ಈಳವ(ಈಡಿಗ) ಸಮುದಾಯಕ್ಕೆ ಆತ್ಮವಿಶ್ವಾಸವನ್ನು ತುಂಬಿದರು. ಗುರು ಸ್ವತಃ ಮಹಾ ಅದ್ವೈತಿ. ಅವರ ದೃಷ್ಟಿಯಲ್ಲಿ ಶಂಕರಾಚಾರ್ಯರ ಹೃದಯ ಪರಿವರ್ತನೆ ಮಾಡಿದ ಚಾಂಡಾಲ ಮಾರುವೇಷದಲ್ಲಿದ್ದ ಶಿವನಲ್ಲ; ಅವನು ಅಕ್ಷರಾರ್ಥದ ಚಾಂಡಾಲ. ಅವರೊಂದು ರೀತಿಯಲ್ಲಿ ‘literalist’ ಅದ್ವೈತಿ. ೧೨ನೇ ಶತಮಾನದ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಮತ್ತು ಮುಕ್ತ ಆಧ್ಯಾತ್ಮಿಕತೆಯ ಹುಡುಕಾಟದ ವಚನ ಚಳವಳಿ ನಡೆಯಿತು. ವಚನ ಚಳವಳಿಯ ಪ್ರಮುಖರಲ್ಲಿ ಒಬ್ಬನಾದ ಬಸವ ಕಲ್ಲಿನಿಂದ ನಿರ್ಮಾಣಗೊಂಡ ಸ್ಥಾವರೀಯವಾದ ದೇಗುಲಕ್ಕಿಂತ ನಶ್ವರವಾದ ದೇಹವನ್ನೇ ಜೀವಂತ ದೇವರಿರುವ ದೇಗುಲವೆಂದ. ಅವನು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿ ಬ್ರಾಹ್ಮಣ ಹೆಣ್ಣನ್ನು ಅಸ್ಪೃಶ್ಯನಿಗೆ ಮದುವೆ ಮಾಡಿಸಿ ತೋರಿಸಿಕೊಟ್ಟ. ಅಷ್ಟೇಕೆ ಗಾಂಧೀಜಿ ಕೂಡಾ ಹಿಂದೂ ಧರ್ಮದ ಸುಧಾರಣೆಗೆ ಶ್ರಮಿಸಿದವರು.

ಅಂದು ಸಮಾನತೆಗೂ, ಸಾಮಾಜಿಕ ನ್ಯಾಯಕ್ಕೂ ಬೇಕಾಗಿದ್ದ ಹಿಂದೂ ಐಕ್ಯ ಈಗ ಬಳಕೆಯಾಗುತ್ತಿರುವುದು ನಮ್ಮ ಗಣರಾಜ್ಯವನ್ನು ಒಂದು ಬಹುಸಂಖ್ಯಾಕ ಪ್ರಭುತ್ವವನ್ನಾಗಿಸುವುದಕ್ಕೆ. ಈ ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸುವ ಕ್ರಿಯೆಯಲ್ಲಿ ಯಾವುದೇ ಆಧ್ಯಾತ್ಮಿಕ ಉದ್ದೇಶಗಳಿಲ್ಲದಿರುವುದು ಸ್ಪಷ್ಟವಾಗಿದ್ದರೂ ಹಬ್ಬಗಳು ಮತ್ತು ತೀರ್ಥಯಾತ್ರೆಗಳ ಪ್ರದರ್ಶನವಿದೆ. ಬಾಬಾಬುಡನ್‌ಗಿರಿಯಲ್ಲಿ ನಡೆಯುವ ದತ್ತಮಾಲೆ ಇದಕ್ಕೊಂದು ಉದಾಹರಣೆ.

ಗಾಂಧೀಜಿಯವರು ಸ್ಥಾಪಿಸಿ ಕೊನೆಯತನಕವೂ ಕುಲಾಧಿಪತಿಯಾಗಿದ್ದ ಗುಜರಾತ್‌ ವಿದ್ಯಾಪೀಠದಲ್ಲಿ ನಾನು ಕಳೆದ ವರ್ಷ ಘಟಿಕೋತ್ಸವ ಭಾಷಣ ಮಾಡಬೇಕಾಯಿತು. ಆ ಸಂದರ್ಭದಲ್ಲಿ ನಾನು ಸಾಂಸ್ಥಿಕ ಧರ್ಮಗಳ ಪರಿಧಿಯನ್ನು ಮೀರಿದ ಯಥಾರ್ಥ ಆಧ್ಯಾತ್ಮದ ಹುಡುಕಾಟದ ಬಗ್ಗೆ ಮಾತನಾಡಿದೆ. ಇದು ಮೂರು ಹಸಿವುಗಳ ಸಂಗತಿ-ನಾನಿವನ್ನು ಸಂತ ತತ್ವಜ್ಞಾನಿ ಸಿಮೋನ್ ಮೇಲ್‌ಳ ಭಾಷೆಯಲ್ಲಿ ಆತ್ಮದ ಹಸಿವುಗಳು ಎಂದು ಕರೆಯುತ್ತೇನೆ-ನಾವು ಗಾಂಧೀ ಯುಗದ ಭಾರತದಲ್ಲಿ ಜೀವಂತವಾಗಿದ್ದವು. ಒಂದು ಸಮಾನತೆಯ ಹಸಿವು, ಎರಡು ಆಧ್ಯಾತ್ಮದ ಹಸಿವು ಮತ್ತು ಮೂರನೆಯದ್ದು ಆಧುನಿಕತೆಯ ಹಸಿವು. ಭಾರತದಲ್ಲಿರುವ ನನ್ನಂಥ ಎಲ್ಲ ಲೇಖಕರೂ ಈ ಮೂರು ಹಸಿವುಗಳಿಂದ ಸ್ಫೂರ್ತಿ ಪಡೆದರು.

ತೀರಾ ಲೌಕಿಕವಾಗಿರುವ ಸಮಾನತೆಯ ಹಸಿವಿಗೆ ಪರಿಹಾರಗಳು ಇಂದು ನಮ್ಮ ಕೈಯಳತೆಯಲ್ಲೇ ಇವೆ. ಆದರೆ ಸಮಾನತೆಯ ಹಸಿವು ಆತ್ಮದ ಹಸಿವೂ ಆದಾಗ ಅದರ ಪರಿಹಾರ ಸುಲಭವಲ್ಲ. ಎಲ್ಲಾ ಕಾಲದ ಋಷಿಗಳಿಗಾದಂತೆ ಸಮಾನತೆ ಹಸಿವಿನ ಜತೆಗೆ ಅಧ್ಯಾತ್ಮದ ಹಸಿವೂ ಸೇರಿದರಷ್ಟೇ ಆತ್ಮದ ಸಮಾನತೆಯ ಹಸಿವನ್ನು ತಣಿಸುವ ಮಾರ್ಗ ಕಾಣಿಸುತ್ತದೆ. ಈ ಎರಡೂ ಹಸಿವುಗಳ ಮೂಲವಿರುವುದು ಲೌಕಿಕ ಜಗತ್ತಿಗೂ ಒಂದು ದೈವೀಕ ಆಯಾಮವಿಲ್ಲದೇ ಹೋದರೆ ಅದು ಬರೇ ಬರಡು ಎಂಬ ಅರಿವಿನಲ್ಲಿ, ಗ್ರಾಹಕ ಸಂಸ್ಕೃತಿಯಿಂದ ತುಂಬಿ ತುಳುಕುವ ಸ್ವರ್ಗ ಸುಸ್ತಾಗುವಷ್ಟು ಯಾಂತ್ರಿಕವೆನಿಸಿಬಿಡಬಹುದು. ಪಶ್ಚಿಮದ ಎಲ್ಲಾ ಮಹಾನ್ ಬರೆಹಗಾರರೂ ಅವರ ನಾಗರಿಕತೆಯಲ್ಲಿರುವ ವಾಕರಿಕೆ ಬರುವಂಥ ವಾತಾವರಣವನ್ನು ಅನಾವರಣಗೊಳಿಸಿ ತೋರಿಸಿಕೊಟ್ಟಿದ್ದಾರೆ.

ಆದ್ದರಿಂದ ಈ ಎರಡೂ ಹಸಿವುಗಳು ಒಂದೇ ಆಗಿ ಒಬ್ಬನನ್ನು ಬಾಧಿಸಿದಾಗ ಸಾಮಾಜಿಕ ವ್ಯವಸ್ಥೆಯ ಸ್ವರೂಪ, ಮತ-ಧರ್ಮಗಳ ಸ್ವರೂಪ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅನಾವರಣಗೊಳಿಸುತ್ತಿರುವ ಅಭಿವೃದ್ಧಿಯ ಕನಸುಗಳೆಲ್ಲವೂ ಆತನನ್ನು ಅಸ್ವಸ್ಥಗೊಳಿಸುತ್ತವೆ. ಏಕೆಂದರೆ ಈ ಜಗತ್ತು ಕೇವಲ ಮನುಷ್ಯನಿಗಷ್ಟೇ ಸೇರಿದ್ದಲ್ಲ.

ಈ ಎರಡೂ ಹಸಿವುಗಳು ಮಧ್ಯಯುಗದ ನಮ್ಮ ಸಂತ ಕವಿಗಳಾದ ಬಸವ, ತುಕಾರಾಮ್, ಕಬೀರ, ಅಕ್ಕಮಹಾದೇವಿಯವರಂಥ ಸಂವೇದನೆಗಳನ್ನು ರೂಪಿಸಿತು. ನಮ್ಮದೇ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಂಬೇಡ್ಕರ್ ರಂಥ ಮನಸ್ಸುಗಳನ್ನು ರೂಪಿಸಿದ್ದೂ ಈ ಎರಡು ಹಸಿವುಗಳೇ. ಇಲ್ಲಿ ಕೊಟ್ಟ ಹೆಸರುಗಳೆಲ್ಲವೂ ಯಾದೃಚ್ಛಿಕ ಉದಾಹರಣೆಗಳಷ್ಟೇ. ಈ ಪಟ್ಟಿಯನ್ನು ಇನ್ನೂ ಉದ್ದಕ್ಕೆ ಬೆಳೆಸಬಹುದು. ‘ದೇವರ ಹಸಿವು’ ಎಂಬುದಕ್ಕಿಂತ ಅಧ್ಯಾತ್ಮದ ಹಸಿವು ಎಂಬ ಪ್ರಯೋಗವೇ ಸರಿ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಅಧ್ಯಾತ್ಮದ ಹಸಿವಿನ ಬಾಧೆಗೊಳಗಾದವರ ಪಟ್ಟಿಯಲ್ಲಿ ಸಾಂಸ್ಥಿಕ ಧರ್ಮಗಳ ಅತಿದೊಡ್ಡ ಟೀಕಾಕಾರದ ಅಂಬೇಡ್ಕರ್‌ ಅವರನ್ನೂ ಸೇರಿಸಿಕೊಳ್ಳಲು ಸಾಧ್ಯವಿದೆ. ಆಧುನಿಕತೆಯನ್ನು ಸಂಕೇತಿಸುವ ಪಾಶ್ಚಾತ್ಯ ಉಡುಪಿನಲ್ಲಿದ್ದು ಕೊಂಡು ದಲಿತರಿಗೆ ದೊರೆಯಲೇಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಉಗ್ರ ಹೋರಾಟ ಮಾಡಿದ ಅಂಬೇಡ್ಕರ್ ಯಾರಿಗೆ ತಾನೆ ಗೊತ್ತಿಲ್ಲ? ಇದೇ ಅಂಬೇಡ್ಕರ್ ಮುಂದೆ ಕರುಣಾಳುವಾದ ಬುದ್ಧನನ್ನು ತಮ್ಮವನನ್ನಾಗಿ ಮಾಡಿಕೊಂಡರು. ಇದು ಅವರ ಸಾಮಾಜಿಕ ಬದ್ಧತೆಗೆ ವಿರುದ್ಧವಾದ ನಡವಳಿಕೆಯಲ್ಲ. ಇದು ಆ ಬದ್ಧತೆಯನ್ನು ಇನ್ನೊಂದು ಕಾಲಾತೀತ ಆಯಾಮದಲ್ಲಿ ಮುಂದುವರಿಸುವ ಪ್ರಯತ್ನ. ತಲೆ ಬೋಳಿಸಿಕೊಂಡು ಬೌದ್ಧ ಭಿಕ್ಷುವಿನ ಉಡುಪಿನಲ್ಲಿರುವ ಅಂಬೇಡ್ಕರ್‌ರ ಚಿತ್ರವೊಂದಿದೆ. ಇದು ಪಾಶ್ಚಾತ್ಯ ಉಡುಪಿನಲ್ಲಿರುವ ಅಂಬೇಡ್ಕರ್‌ಚಿತ್ರದಷ್ಟು ಜನಪ್ರಿಯವಲ್ಲ. ಈ ಎರಡೂ ಚಿತ್ರಗಳು ಎಷ್ಟು ತೀವ್ರವಾಗಿ ಒಂದಕ್ಕೊಂದು ಹೊಂದಿಕೊಂಡಿವೆ ಎಂಬುದನ್ನು ಅರ್ಥಮಾಡಿಕೊಂಡವರಿಗೆ ಮಾತ್ರ ಸಮಾನತೆಯ ಎರಡು ಹಸಿವುಗಳ ತೀವ್ರತೆಯೂ ತಿಳಿಯುತ್ತದೆ. ಲೌಕಿಕವಾದ ಸಮಾನತೆಯ ಹಸಿವನ್ನು ಅಡಗಿಸುವುದಕ್ಕೆ ತೀವ್ರವಾದ ರಾಜಕೀಯ ಹೋರಾಟದ ಅಗತ್ಯವಿದೆ. ಹಾಗೆಯೇ ಆತ್ಮದ ಸಮಾನತೆಯ ಹಸಿವನ್ನು ಅಡಗಿಸುವುದಕ್ಕೆ ನಮ್ಮ ಅಂತರಂಗದೊಳಗೇ ಒಂದು ಹೋರಾಟವನ್ನು ನಡೆಸಬೇಕಾಗುತ್ತದೆ. ಅದರಿಂದಾಗಿಯೇ ಗಾಂಧೀಜಿ ಮತ್ತು ಅಂಬೇಡ್ಕರ್‌ರ ಮಧ್ಯೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವರು ಒಬ್ಬರಿಗೊಬ್ಬರು ಪೂರಕ. ಆದರೆ ನಾನು ಇದೇ ಮಾತನ್ನು ಪ್ರಬಲವಾದ ರಾಷ್ಟ್ರೀಯ ಪ್ರಭುತ್ವವನ್ನು ಪ್ರತಿಪಾದಿಸುತ್ತಿದ್ದ ವೀರ್ ಸಾವರ್ಕರ್ ಮತ್ತು ಗ್ರಾಮ ಸ್ವರಾಜ್ಯವನ್ನು ಪ್ರತಿಪಾದಿಸುತ್ತಿದ್ದ ಗಾಂಧೀಜಿಯ ಬಗ್ಗೆ ಹೇಳಲಾರೆ. ಇವೆರಡೂ ಒಂದಾಗಲು ಸಾಧ್ಯವೇ ಇಲ್ಲ. ಅದರ ಸಾಕ್ಷ್ಯಗಳನ್ನು ನಾವು ಬದುಕಿರುವ ಈ ಕ್ಷೋಭೆಯ ದಿನಗಳೇ ಒದಗಿಸುತ್ತಿವೆ.

ನಾನು ಸ್ಪಷ್ಟಪಡಿಸಲು ಬಯಸುವ ಕೊನೆಯ ಅಂಶ ಇದು : ಗುಜರಾತ್‌ನಲ್ಲಿ ನಡೆದ ಹಿಂಸೆ ಮತ್ತು ಅದು ಉಂಟುಮಾಡಿದ ಆಳವಾದ ಗಾಯಗಳ ನಂತರವೂ ಈ ದೇಶ ಗಾಂಧೀಜಿಯ ಗುಜರಾತನ್ನು ಮುಸ್ಲಿಮರ ಮಟ್ಟಿಗೆ ದುಃಸ್ವಪ್ನವನ್ನಾಗಿ ಬದಲಾಯಿಸುವುದರಲ್ಲಿ ನರೇಂದ್ರ ಮೋದಿಯ ಪಾತ್ರವನ್ನು ಮರೆತಂತೆ ಕಾಣಿಸುತ್ತಿದೆ. ಆತನೀಗ ಅಭಿವೃದ್ಧಿಯನ್ನು ನಂಬಿರುವವರ ಹೀರೋ. ಅಭಿವೃದ್ಧಿಯ ಬಗ್ಗೆ ಮಾತನಾಡುವ ಎಲ್ಲ ರಾಜಕೀಯ ಪಕ್ಷಗಳು, ಉದ್ಯಮಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಹು ಸಂಖ್ಯಾಕ ಪ್ರಭುತ್ವ ಆಪ್ಯಾಯಮಾನ ಎನಿಸುತ್ತಿದೆ. ಏಕೆಂದರೆ ಭಿನ್ನಾಭಿಪ್ರಾಯವನ್ನು ಮಟ್ಟ ಹಾಕಲು ಸಾಧ್ಯವಿರುವ ಪ್ರಭುತ್ವವೇ ಅಭಿವೃದ್ಧಿಗೆ ಅಗತ್ಯ ಎಂಬುದು ಅವರಿಗೆ ತಿಳಿದಿದೆ. ದೇಶದ ಕಟ್ಟಕಡೆಯ ಬಡವನನ್ನೂ ತಲುಪುವ ಗಾಂಧೀಜಿ ಪ್ರತಿಪಾದಿಸಿದ ಸರ್ವೋದಯದ ಆರ್ಥಿಕತೆಯ ಬಗ್ಗೆ ಯಾವ ರಾಜಕೀಯ ಪಕ್ಷವೂ ಮಾತನಾಡುತ್ತಿಲ್ಲ. ರೈತರ ಆತ್ಮಹತ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ-ರೈತರ ಸಾವು ಸೆನ್ಸೆಕ್ಸನ್ನು ಬಾಧಿಸುವುದಿಲ್ಲವಲ್ಲ!

ಮಹತ್ ಪರಂಪರೆಯಿರುವ ಈ ವಿಶ್ವವಿದ್ಯಾಲಯದಿಂದ ಸ್ನಾತಕರಾಗುತ್ತಿರುವ ಎಲ್ಲರೂ ಈ ದೇಶದ ಪ್ರಜೆಗಳಾಗಿ ಎಲ್ಲ ವರ್ಗಗಳ ಕಲ್ಯಾಣದ ಪರಿಕಲ್ಪನೆಗೆ ಅಭಿವೃದ್ಧಿಯನ್ನು ಹೇಗೆ ಜೋಡಿಸುವುದು ಎಂಬುದರ ಬಗ್ಗೆ ಚಿಂತಿಸಬೇಕು. ಅಭಿವೃದ್ಧಿಯನ್ನು ಅನಿಯಂತ್ರಿತ ಉಪಭೋಗದಿಂದಲೂ, ಎಲ್ಲ ಬಗೆಯ ಭಿನ್ನಾಭಿಪ್ರಾಯವನ್ನು ಮಟ್ಟ ಹಾಕುವ ಬಹುಸಂಖ್ಯಾಕರು ಆಳುವ ನಿರಂಕುಶ ಪ್ರಭುತ್ವದಿಂದಲೂ, ವಿಮೋಚಿಸುವ ಅಗತ್ಯವಿದೆ.

ದಯವಿಟ್ಟು ನಾನು ಹೇಳಿದ್ದನ್ನು ಕ್ಲೀಷೆಗಳಿಂದ ತುಂಬಿದ ಉಪದೇಶಗಳೆಂದು ಭಾವಿಸದಿರಿ; ಅಮೆರಿಕದ ಮಾದರಿಯ ಅಭಿವೃದ್ಧಿ ಮತ್ತು ಗ್ರಾಹಕ ಸಂಸ್ಕೃತಿಯನ್ನು ಅನುಸರಿಸಿ ಇಂದು ಪ್ರಪಂಚ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ; ನಮ್ಮ ದುರಾಸೆಯಿಂದ ಪ್ರೇರಿತವಾದ ಗ್ರಾಹಕ ಸಂಸ್ಕೃತಿಯಿಂದ ದೊಡ್ಡದೊಂದು ಪರಿಸರ ವಿನಾಶ ನಮ್ಮೆದುರು ಅನಾವರಣಗೊಳ್ಳುತ್ತಿದೆ; ನಮ್ಮ ಸಮಾಜಗಳಲ್ಲಿ ಹಿಂಸೆಯನ್ನು ಪ್ರತಿಹಿಂಸೆಯಿಂದ ನಿಯಂತ್ರಿಸುವುದು ಯಾವತ್ತೂ ಸಾಧ್ಯವಾಗಿಲ್ಲ. ಗಾಂಧೀಜಿಯವರಿಗೆ ಅಹಿಂಸೆ ಮತ್ತು ಸತ್ಯದಲ್ಲಿದ್ದ ನಂಬಿಕೆ ಕೇವಲ ಒಂದು ಆದರ್ಶ ಮಾತ್ರವಲ್ಲ. ಅಥವಾ ನಾವು ಹಲವಾರು ಅನುಕೂಲ ಸಿಂಧುವಾಗಿ ಅಂದುಕೊಳ್ಳುವಂತೆ ಇದು ವೈಯಕ್ತಿಕ ಮಟ್ಟದಲ್ಲಿ ಪ್ರಾಯೋಗಿಕವೆನಿಸುವಂಥ ಸಂವೇದನಾಶೀಲ ಹಾದಿಯೂ ಅಲ್ಲ. ಇದು ರಾಷ್ಟ್ರೀಯ ಪ್ರಭುತ್ವಗಳಿಗೂ ಅನ್ವಯಿಸುವ ಪ್ರಾಯೋಗಿಕ ಮಾರ್ಗ.

ನನ್ನ ವೈಯಕ್ತಿಕ ಕಾತರ ಮತ್ತು ತಲ್ಲಣಗಳಿಂದ ಆಡಿದ ಈ ಮಾತುಗಳನ್ನು ಕೇಳಿದ ನಿಮಗೆಲ್ಲರಿಗೂ ಧನ್ಯವಾದಗಳು. ಘಟಿಕೋತ್ಸವದಂಥ ಸಂದರ್ಭಕ್ಕೆ ಸೂಕ್ತವೆನಿಸುವ ವಿದ್ವತ್ಪೂರ್ಣ ಭಾಷಣವೊಂದನ್ನು ಮಾಡಲಾಗದ ನನ್ನನ್ನು ಕ್ಷಮಿಸಿ.

(೩೦ ಅಕ್ಟೋಬರ್ ೨೦೦೮ ರಂದು ನಡೆದು ದಿಲ್ಲಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಡಿದ ಘಟಿಕೋತ್ಸವ ಭಾಷಣ.)
ಅನುವಾದ : ಎನ್. ಎ.ಎಂ. ಇಸ್ಮಾಯಿಲ್.

* * *