ಮಾನ್ಯ ಕುಲಾಧಿಪತಿಗಳೇ, ಕುಲಪತಿಗಳೇ, ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರೇ, ಶಿಕ್ಷಕರೇ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೇ ಮತ್ತು ವಿದ್ಯಾರ್ಥಿಗಳೇ,

ಮೊದಲಿಗೆ ಈ ಘನವೆತ್ತ ಸಂಸ್ಥೆಯ ಘಟಿಕೋತ್ಸವ ಭಾಷಣ ಮಾಡಲು ನಾನು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಮಹಾತ್ಮಾ ಗಾಂಧಿಯವರು ಸ್ಥಾಪಿಸಿ ಕೊನೆಯ ತನಕವೂ ಈ ಸಂಸ್ಥೆಯ ಕುಲಾಧಿಪತಿಯಾಗಿದ್ದರು. ಈಗ ನಾರಾಯಣ ದೇಸಾಯಿಯವರು ಕುಲಾಧಿಪತಿಯಾಗಿದ್ದಾರೆ. ಅವರ ತಂದೆ ಗಾಂಧೀಜಿ ಮೌನದಲ್ಲಿ ಭಾವಿಸಿದ್ದನ್ನು ಮಾತಿನಲ್ಲಿ ವಿವರಿಸುವಂಥ ಶಕ್ತಿಯಿದ್ದವರು. ಗಾಂಧೀ ಆಶ್ರಮದಲ್ಲಿ ಗಾಂಧೀಜಿಯೇ ಆಟದ ಜತೆಗಾರನಾಗಿದ್ದ ತಮ್ಮ ಬಾಲ್ಯದ ಬಗ್ಗೆ ನಾರಾಯಣ ದೇಸಾಯಿಯವರು ಬರೆದ ಆ ಪುಟ್ಟ ಪುಸ್ತಕವನ್ನು ನಾನು ಓದಿದ್ದೇನೆ. ನಿಮ್ಮ ಈಗಿನ ಕುಲಪತಿ ಸುದರ್ಶನ್ ಅಯ್ಯಂಗಾರ್ ಅವರು ನನ್ನ ಭಾಷೆಯಾದ ಕನ್ನಡದಲ್ಲೇ ಮಾತನಾಡುವ ಮೂಲಕ ನನ್ನನ್ನು ಚಕಿತಗೊಳಿಸಿ ಘಟಿಕೋತ್ಸವ ಭಾಷಣಕ್ಕೆ ನಾನು ಬೇಕೆಂದು ನಾರಾಯಣ ದೇಸಾಯಿ ಬಯಸಿದ್ದಾರೆಂದು ತಿಳಿಸಿದ್ದರು. ಪರಿಣಾಮವಾಗಿ ಸ್ನಾತಕರಾಗುತ್ತಿರುವ ನಿಮಗೆ ಶುಭಾಶಯ ಕೋರಲು ನಾನಿಲ್ಲಿ ನಿಂತಿದ್ದೇನೆ.

ನನ್ನ ಮಾತಿನ ಆರಂಭದಲ್ಲೇ ಈ ವಿಶೇಷ ಸಂದರ್ಭಕ್ಕೆ ನಾನು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ಕೇಳಿದೆ. ನಾನೊಬ್ಬ ಬರೆಹಗಾರ ಮತ್ತು ರಾಜಕೀಯ ಹೋರಾಟಗಾರನಾಗಿ ಜಯಪ್ರಕಾಶ್‌ ನಾರಾಯಣ್ ಮತ್ತು ಡಾ. ಲೋಹಿಯಾ ಅವರ ಪ್ರಭಾವದಿಂದ ಹೆಚ್ಚು ಕಡಿಮೆ ಗಾಂಧೀವಾದಿಯಾಗಿದ್ದೇನೆ. ಆದರೆ ವೈಯಕ್ತಿಕ ಜೀವನದಲ್ಲಿ, ರುಚಿಯಲ್ಲಿ ತಥಾಕಥಿತ ಒಳ್ಳೆಯ ವಸ್ತುಗಳೆಡೆಗಿನ ಆಕರ್ಷಣೆಯಲ್ಲಿ ನಾನು ಗಾಂಧೀಜಿಯ ನಂತರದ ಸೃಷ್ಟಿಯಾದ ಪಂಡಿತ್‌ ನೆಹರು ಅವರ ಯುಗಕ್ಕೆ ಸೇರಿದವನು. ನಾನಿಂದು ನಿಮ್ಮ ಮುಂದೆ ನಿಂತು ಹಿಂದೂಸ್ಥಾನಿಯಲ್ಲಿ ಮಾತನಾಡುವುದರ ಬದಲು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದೇ ಅದಕ್ಕೆ ಸಾಕ್ಷಿ. ನೆಹರು ಅವರನ್ನು ಉತ್ತರಾಧಿಕಾರಿಯನ್ನಾಗಿ ಆರಿಸಿಕೊಂಡ ಮಹಾತ್ಮಾಜಿ, ನೆಹರೂ ಜೀವನದ ವೈಯಕ್ತಿಕ ಒಲವುಗಳು ಮತ್ತು ಅವರ ಆಯ್ಕೆಗಳು ಪಶ್ಚಿಮ ಮುಖಿಯಾಗಿದ್ದವೆಂಬುದನ್ನು ಅರಿತಿದ್ದರೆಂದು ನಾನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ನನಗೆ ಇಲ್ಲೊಂದು ರಹಸ್ಯವಿದೆಯೆಂದು ಭಾಸವಾಗುತ್ತದೆ; ನೆಹರೂ ಅವರನ್ನು ಗಾಂಧೀಜಿ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ದುಕೊಂಡದ್ದನ್ನು ರಾಜಕೀಯವಾಗಿ ವಿವರಿಸಲಾಗಿದೆ. ಬಹಳ ಮಂದಿ ಹೇಳುವಂತೆ ಈ ಆಯ್ಕೆ ಚಾರಿತ್ರಿಕ ಸಂದರ್ಭದ ಅನಿವಾರ್ಯತೆಯಾಗಿತ್ತು. ಹಾಗೆಯೇ ಇದೊಂದು ಜಾಣತನದ ಆಯ್ಕೆಯೂ ಆಗಿತ್ತು. ಹಾಗೆ ನೋಡಿದರೆ ನೆಹರು ಭಾವನಾತ್ಮಕವಾಗಿ anti-Gandhi ಆಗಿರಲಿಲ್ಲ. ಆದರೆ ನೆಹರೂ ಪ್ರಭಾವದಲ್ಲಿ ನಮ್ಮ ನಾಗರಿಕತೆ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯದಿಂದ ದೂರವಾದುದನ್ನು ವಿವರಿಸುವುದು ಹೇಗೆ? ನಾನೂ ಸೇರಿದಂತೆ ನನ್ನ ತಲೆಮಾರಿನ ಹಲವರು ಆಲೋಚನೆ ಮತ್ತು ಸಾಂಸ್ಕೃತಿಕ ಒಲವುಗಳಲ್ಲಿ ನೆಹರೂ ನಾಶ ಮಾಡುವ ‘ಅಭಿವೃದ್ಧಿ’ಯನ್ನು ವಿರೋಧಿಸಲು ಗಾಂಧೀಜಿಯಲ್ಲಿ ಆಶ್ರಯ ಪಡೆಯುತ್ತೇವೆ. (ನೆಹರೂ ಕೂಡಾ ಗಾಂಧೀಜಿಗೆ ಆಧ್ಯಾತ್ಮಿಕವಾಗಿ ಸ್ಪಂದಿಸಿದರಾದರೂ ಸ್ವತಂತ್ರ ಭಾರತದ ಅಭಿವೃದ್ಧಿಗೆ ಅವರ ಕಾರ್ಯಸೂಚಿ ಬೇರೆಯೇ ಆಗಿತ್ತು. ಇದು ಗ್ರಾಮ-ಸ್ವರಾಜ್ಯವಾಗಿರಲಿಲ್ಲ. ಬದಲಿಗೆ ಯೂರೋಪ್ ಮಾದರಿಯ ಪ್ರಬಲ ರಾಷ್ಟ್ರವಾಗಿತ್ತು). ನಮ್ಮೊಳಗಿನ ಈ ದ್ವಂದ್ವ ಭಾವವು ಸಾರ್ತ್ರ್‌ಹೇಳಿದ ‘ಬ್ಯಾಡ್ ಫೈತ್‌’ನಲ್ಲಿ ಕೊನೆಗೊಳ್ಳುತ್ತದೆ. ನಮ್ಮ ಕಾಲದ ಅತ್ಯುತ್ತಮ ಮನಸ್ಸುಗಳಿಗೂ ಪಶ್ಚಿಮದ ನಕಲಿನಂತಿರುವ ವಿನಾಶಕಾರಿ ಅಭಿವೃದ್ಧಿಯ ಬಲೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಾವು ಪಶ್ಚಿಮದ ಬುದ್ಧಿಹೀನ ಅನುಕರಣೆಯ ಅಪಾಯವನ್ನು ಅರಿತಿರುತ್ತೇವೆ. ಈ ಅರಿವೆಂಬುದು ಸಮಾಧಾನದ ವಿಷಯವೇನಲ್ಲ ಎಂಬುದು ನನಗೆ ಗೊತ್ತಿದೆ. ಹಾಗೆಯೇ ನಾವೆಲ್ಲಾ ನಮ್ಮ ನಿಜ ಬದುಕಿನಲ್ಲಿ ಪಾಶ್ಚಿಮಾತ್ಯ ಮಾದರಿಯ ಅಭಿವೃದ್ಧಿಯ ಫಲಾನುಭವಿಗಳು ಎಂಬುದನ್ನು ಮರೆತು ಮಾತನಾಡುತ್ತಿಲ್ಲ.

ನನ್ನ ಘಟಿಕೋತ್ಸವ ಭಾಷಣದಲ್ಲಿ ನಾನು ಇಂದು ಹೇಳುವುದೆಲ್ಲವನ್ನೂ ನಾವು ನಿಜ ಬದುಕಿನಲ್ಲಿ ಇರುವುದಕ್ಕೂ ಮತ್ತು ನಾವು ಏನನ್ನು ನಂಬಿ ಹೇಳಲು ಹೊರಟಿರುವುದಕ್ಕೂ ನಡುವಣ ಅಂತರದ ಕುರಿತ ನೈತಿಕ ಅಳುಕಿನೊಂದಿಗೇ ಹೇಳುತ್ತೇನೆ.

* * *

ಇತ್ತೀಚಿನ ದಿನಗಳಲ್ಲಿ ನಾನು ಮತ್ತೆ ಮತ್ತೆ ಮೂರು ಹಸಿವುಗಳ ಬಗ್ಗೆ ಮಾತನಾಡುತ್ತಿರುತ್ತೇನೆ. ನಾನು ಅವುಗಳನ್ನು ಸಂತ, ತತ್ವಜ್ಞಾನಿ ಸಿಮೋನ್ ವೇಲ್‌ಳ ಭಾಷೆಯಲ್ಲಿ ಆತ್ಮದ ಹಸಿವುಗಳೆಂದು ಕರೆಯುತ್ತೇನೆ. ಇವೆಲ್ಲವೂ ನಮ್ಮ ದೇಶದಲ್ಲಿ ಗಾಂಧೀ ಯುಗದಲ್ಲಿ ಜೀವಂತವಾಗಿದ್ದ ಹಸಿವುಗಳು. ಅವು ಸಮಾನತೆಯ ಹಸಿವು, ದೇವರ ಹಸಿವು ಮತ್ತು ಆಧುನಿಕತೆಯ ಹಸಿವು.

ತೀರಾ ಲೌಕಿಕವಾಗಿರುವ ಸಮಾನತೆಯ ಹಸಿವಿಗೆ ಪರಿಹಾರಗಳು ಇಂದು ನಮ್ಮ ಕೈಯಳತೆಯಲ್ಲೇ ಇವೆ. ಎಲ್ಲರಿಗೂ ಬೇಕಿರುವಷ್ಟು ಆಹಾರ ಮತ್ತು ವಸತಿ ಈಗ ಒಂದು ಕನಸಲ್ಲ. ಇದು ನಮ್ಮ ಕಾಲದಲ್ಲಿ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಬಳುವಳಿ. ಆದರೆ ಸಮಾನತೆ ಎಂಬುದು ಆತ್ಮದ ಹಸಿವಾಗಿದ್ದಾಗ ಅದು ಆಧ್ಯಾತ್ಮದ ಹಸಿವಿನೊಂದಿಗೆ ಸೇರುವ ತನಕವೂ ತಣಿಯುವುದಿಲ್ಲ. ನಮ್ಮ ಕಾಲದ ಮಹಾ ಋಷಿಗಳಿಗೆ ಈ ಎರಡೂ ಹಸಿವುಗಳು ಒಂದಾಗಿ ಕಾಡಿದ್ದವು. ಈ ಎರಡೂ ಹಸಿವುಗಳ ಮೂಲ ಜೀವರಾಶಿಯೇ ಪವಿತ್ರವಾದುದು ಮತ್ತು ಈ ನಶ್ವರ ಜಗತ್ತಿನಲ್ಲಿರುವ ನಮ್ಮ ನಿತ್ಯದ ಅಸ್ತಿತ್ವವು ಅತೀತವಾದ ಅರ್ಥವೊಂದರಿಂದ ಬೆಳಗದೇ ಹೋದರೆ ಅದು ಚಿಟ್ಟು ಹಿಡಿಸುವಂಥದ್ದು ಎಂಬ ಅರಿವಿನಲ್ಲಿದೆ. ಗ್ರಾಹಕ ಸಂಸ್ಕೃತಿಯ ಸ್ವರ್ಗ’ ಅದರ ತುರೀಯಾವಸ್ಥೆಯಲ್ಲಿ ಸುಸ್ತಾಗಿಸುವಷ್ಟು ಜಡ ಮತ್ತು ಯಾಂತ್ರಿಕವಾಗಿರುತ್ತದೆ. ಪಶ್ಚಿಮದ ಎಲ್ಲಾ ಮಹಾನ್ ಬರೆಹಗಾರರೂ ಅವರ ನಾಗರಿಕತೆಯಲ್ಲಿರುವ ವಾಕರಿಕೆ ಬರುವಂಥ ವಾತಾವರಣವನ್ನು ಅನಾವರಣಗೊಳಿಸಿ ತೋರಿಸಿಕೊಟ್ಟಿದ್ದಾರೆ.

ಆದ್ದರಿಂದ ಈ ಎರಡೂ ಹಸಿವುಗಳು ಒಂದೇ ಆಗಿ ಒಬ್ಬನನ್ನು ಬಾಧಿಸಿದಾಗ ಸಾಮಾಜಿಕ ವ್ಯವಸ್ಥೆಯ ಸ್ವರೂಪ, ಮತ-ಧರ್ಮಗಳ ಸ್ವರೂಪ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅನಾವರಣಗೊಳಿಸುತ್ತಿರುವ ಅಭಿವೃದ್ಧಿಯ ಕನಸುಗಳೆಲ್ಲವೂ ಆತನನ್ನು ಅಸ್ವಸ್ಥಗೊಳಿಸುತ್ತವೆ. ಏಕೆಂದರೆ ಈ ಜಗತ್ತು ಕೇವಲ ಮನುಷ್ಯನಿಗಷ್ಟೇ ಸೇರಿದ್ದಲ್ಲ.

ಈ ಎರಡೂ ಹಸಿವುಗಳು ಮಧ್ಯಯುಗದ ನಮ್ಮ ಸಂತ ಕವಿಗಳಾದ ಬಸವನ, ತುಕರಾಮ್, ಕಬೀರ, ಅಕ್ಕಮಹಾದೇವಿಯವರಂತೆ, ತಮ್ಮ ಕಾಲದಲ್ಲೇ ಭಿನ್ನವಾಗಿ ಕಾಲಕ್ಕೆ ಎದುರಾಗಿ ನಿಂತವರಂತೆ, ನಮ್ಮನ್ನೂ ನಮ್ಮ ಕಾಲದಲ್ಲಿ ಭಿನ್ನವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ. ನಮ್ಮದೇ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧಿ, ಮಾರ್ಟಿಲ್ ಲೂಥರ್‌ಕಿಂಗ್, ಅಂಬೇಡ್ಕರ್‌ರಂಥ ಮನಸ್ಸುಗಳು ಇದಕ್ಕೆ ಉದಾಹರಣೆಯಾಗಬಹುದು. ಇಲ್ಲಿ ಕೊಟ್ಟ ಹೆಸರುಗಳೆಲ್ಲವೂ ಯಾದೃಚ್ಛಿಕ ಉದಾಹರಣೆಗಳಷ್ಟೇ. ‘ದೇವರ ಹಸಿವು’ ಎಂಬುದಕ್ಕಿಂತ ಅಧ್ಯಾತ್ಮದ ಹಸಿವು ಬಾಧೆಗೊಳಗಾದವರ ಪಟ್ಟಿಯಲ್ಲಿ ಸಾಂಸ್ಥಿಕ ಧರ್ಮಗಳ ಅತಿದೊಡ್ಡ ಟೀಕಾಕಾರರಾದ ಅಂಬೇಡ್ಕರ್ ಅವರನ್ನೂ ಸೇರಿಸಿಕೊಳ್ಳಲು ಸಾಧ್ಯವಿದೆ. ಆಧುನಿಕತೆಯನ್ನು ಸಂಕೇತಿಸುವ ಪಾಶ್ಚಾತ್ಯ ಉಡುಪಿನಲ್ಲಿದ್ದುಕೊಂಡು ದಲಿತರಿಗೆ ದೊರೆಯಲೇಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಉಗ್ರ ಹೋರಾಟ ಮಾಡಿದ ಅಂಬೇಡ್ಕರ್ ಯಾರಿಗೆ ತಾನೆ ಗೊತ್ತಿಲ್ಲ? ಇದೇ ಅಂಬೇಡ್ಕರ್ ಮುಂದೆ ಕರುಣಾಳುವಾದ ಬುದ್ಧನನ್ನು ತಮ್ಮವನನ್ನಾಗಿ ಮಾಡಿಕೊಂಡರು. ಇದು ಅವರ ಸಾಮಾಜಿಕ ಬದ್ಧತೆಗೆ ವಿರುದ್ಧವಾದ ನಡವಳಿಕೆಯಲ್ಲ. ಇದು ಆ ಬದ್ಧತೆಯನ್ನು ಇನ್ನೊಂದು ಕಾಲಾತೀತ ಆಯಾಮದಲ್ಲಿ ಮುಂದುವರಿಸುವ ಪ್ರಯತ್ನ. ತಲೆ ಬೋಳಿಸಿಕೊಂಡು ಬೌದ್ಧ ಭಿಕ್ಷುವಿನ ಉಡುಪಿನಲ್ಲಿರುವ ಅಂಬೇಡ್ಕರ್‌ರ ಚಿತ್ರವೊಂದಿದೆ. ಇದು ಪಾಶ್ಚಾತ್ಯ ಉಡುಪಿನಲ್ಲಿರುವ ಅಂಬೇಡ್ಕರ್ ಚಿತ್ರದಷ್ಟು ಜನಪ್ರಿಯವಲ್ಲ. ಈ ಎರಡೂ ಚಿತ್ರಗಳು ಎಷ್ಟು ತೀವ್ರವಾಗಿ ಒಂದಕ್ಕೊಂದು ಹೊಂದಿಕೊಂಡಿವೆ ಎಂಬುದನ್ನು ಅರ್ಥಮಾಡಿಕೊಂಡವರಿಗೆ ಮಾತ್ರ ಸಮಾನತೆಯ ಎರಡು ಹಸಿವುಗಳ ತೀವ್ರತೆಯೂ ತಿಳಿಯುತ್ತದೆ. ಲೌಕಿಕವಾದ ಸಮಾನತೆಯ ಹಸಿವನ್ನು ಅಡಗಿಸುವುದಕ್ಕೆ ತೀವ್ರವಾದ ರಾಜಕೀಯ ಹೋರಾಟದ ಅಗತ್ಯವಿದೆ. ಹಾಗೆಯೇ ಆತ್ಮದ ಸಮಾನತೆಯ ಹಸಿವನ್ನು ಅಡಗಿಸುವುದಕ್ಕೆ ನಮ್ಮ ಅಂತರಂಗದೊಳಗೇ ಒಂದು ಹೋರಾಟವನ್ನು ನಡೆಸಬೇಕಾಗುತ್ತದೆ. ಅದರಿಂದಾಗಯೇ ಗಾಂಧೀಜಿ ಮತ್ತು ಅಂಬೇಡ್ಕರ್‌ರ ಮಧ್ಯೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವರು ಒಬ್ಬರಿಗೊಬ್ಬರು ಪೂರಕ. ಆದರೆ ನಾನು ಇದೇ ಮಾತನ್ನು ಪ್ರಬಲವಾದ ರಾಷ್ಟ್ರೀಯ ಪ್ರಭುತ್ವವನ್ನು ಪ್ರತಿಪಾದಿಸುತ್ತಿದ್ದ ವೀರ್ ಸಾವರ್ಕರ್‌ಮತ್ತು ಗ್ರಾಮ ಸ್ವರಾಜ್ಯವನ್ನು ಪ್ರತಿಪಾದಿಸುತ್ತಿದ್ದ ಗಾಂಧೀಜಿಯ ಬಗ್ಗೆ ಹೇಳಲಾರೆ. ಇವೆರಡೂ ಒಂದಾಗಲು ಸಾಧ್ಯವೇ ಇಲ್ಲ. ಅದರ ಸಾಕ್ಷ್ಯಗಳನ್ನು ನಾವು ಬದುಕಿರುವ ಈ ಕ್ಷೋಭೆಯ ದಿನಗಳೇ ಒದಗಿಸುತ್ತಿವೆ.

ಮೂರನೆಯ ಹಸಿವಾದ ಆಧುನಿಕತೆಯ ಹಸಿವಿನಿಂದಾಗಿ ಗಾಂಧೀಜಿ ತನಗೆ ನೆಹರು ಕುರಿತಂತೆ ದಾರ್ಶನಿಕ ಭಿನ್ನಾಭಿಪ್ರಾಯಗಳಿದ್ದರೂ ಅವರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಆರಿಸಿದರು. ಇದನ್ನು ನಾನಿಲ್ಲಿ ವಿವರಿಸಬೇಕು.  ಗಾಂಧೀಜಿ ‘ಆಧುನಿಕ ಪಾಶ್ಚಾತ್ಯ ನಾಗರಿಕತೆ’ಯ ವಿರೋಧಿಯಾಗಿದ್ದರು. ಆದರೆ ಅವರು ಸತ್ಯ ಶೋಧಕನಾಗಿ ‘ಆಧುನಿಕ’ ಪರಿಕಲ್ಪನೆಗಳಿಗೆ ತಮ್ಮನ್ನು ತೆರೆದಿಟ್ಟುಕೊಂಡಿದ್ದರು. ಅವರು ಇಂಗ್ಲಿಷ್ ಸಾಹಿತ್ಯವನ್ನು ಪ್ರೀತಿಸುತ್ತಿದ್ದರು; ಅವರಿಗೆ ಪಾಶ್ಚಾತ್ಯದ ಬಗ್ಗೆ ಭಾವನಾತ್ಮಕ ವಿರೋಧವಿರಲಿಲ್ಲ. ಆದರೆ ನೆಹರು ಅವರ ಆಧುನಿಕತೆ ಸಮಾನತೆಯ ಸಮಾಜವಾದಿ ಅಭೀಪ್ಸೆಯ ಜತೆಗೆ ಸಂಬಂಧ ಹೊಂದಿತ್ತು. ಆದರೆ ಅವರು (ಅವರಿಗಿಂತ ಹೆಚ್ಚಾಗಿ ಅವರ ಉತ್ತರಾಧಿಕಾರಿಗಳು) ಗಾಂಧೀ ಪ್ರಣೀತ ಗ್ರಾಮ ಸ್ವರಾಜ್ಯದ ಆದರ್ಶದಿಂದ ದೂರಹೋಗಿಬಿಟ್ಟರು. ನಾವೀಗ ಉತ್ಸಾಹಿ ಜಾಗತೀಕರಣವಾದಿಗಳಾಗಿ ನಮ್ಮನ್ನು ನಾವು ಅಮೆರಿಕ ಮಾದರಿಯ ಜೀವನ ವಿಧಾನದ ಮಟ್ಟಕ್ಕೆ ‘ಏರಿಸಿಕೊಳ್ಳಲು’ ಒದ್ದಾಡುತ್ತಿದ್ದೇವೆ. ಇದರ ಫಲಿತಾಂಶ ಹೇಸಿಗೆ ಹುಟ್ಟಿಸುವಂಥದ್ದು. ಇದು ಸ್ವಲ್ಪ ಕಟುವಾದ ಶಬ್ದ. ಆದರೆ ಸಣ್ಣ ವರ್ಗವೊಂದರ ಅಸಹ್ಯ ಹುಟ್ಟಿಸುವ ಶ್ರೀಮಂತಿಕೆಯ ನೆರಳಿನಲ್ಲೇ ಇರುವ ಬೃಹತ್ ಬಡತನ ಗಾಂಧೀ ಕಾಲದಲ್ಲಿ ಇದ್ದುದಕ್ಕಿಂತ ಹೆಚ್ಚು ಬರ್ಬರವೂ ಹೀನಾಯವೂ ಆಗಿದೆ. ಕೃಷಿಯನ್ನು ವ್ಯವಸ್ಥಿತವಾಗಿ ಕೊಲ್ಲಲಾಗುತ್ತಿದೆ. ನಾವು ಪ್ರತಿದಿನವೂ ರೈತರ ಆತ್ಮಹತ್ಯೆಗಳ ಸುದ್ಧಿಯನ್ನು ಕೇಳುತ್ತಿರುತ್ತೇವೆ. ಇದರ ವಿರೋಧಾಭಾಸವೆನ್ನುವಂತೆ ಸೆನ್ಸೆಕ್ಸ್ ಮೇಲೇರುತ್ತಿದೆ. ನಾನೊಬ್ಬ ಅರ್ಥಶಾಸ್ತ್ರಜ್ಞನಲ್ಲ. ಆದರೂ ಹೆಚ್ಚುತ್ತಿರುವ ಬಡತನಕ್ಕೂ ಕೆಲವರ ಸಂಪತ್ತಿನ ಹೆಚ್ಚಳಕ್ಕೂ ನಡುವೆ ಸಂಬಂಧವಿದೆಯೆಂದು ನನಗನ್ನಿಸುತ್ತಿದೆ. ಇದು ಮಾರುಕಟ್ಟೆ ಮೂಲಭೂತವಾದ ಪರಿಣಾಮ. ಯಾವ ವಿಚಾರಧಾರೆಯಿಂದ ಯಾವ ರಾಜಕೀಯ ಪಕ್ಷ ಪ್ರಭಾವಿತವಾಗಿದ್ದರೂ ಅವರನ್ನು ಸದ್ಯಕ್ಕೆ ಆಳುತ್ತಿರುವುದು ಮತ್ತು ಮಾರ್ಗದರ್ಶನ ನೀಡುತ್ತಿರುವುದು ಮಾರುಕಟ್ಟೆ ಮೂಲಭೂತವಾದ ಮಾತ್ರ.

ನಮ್ಮ ಆಲೋಚನೆಗಳನ್ನು ಸರಳ ರಾಜಕೀಯ ಪರಿಭಾಷೆಯಲ್ಲಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರು ನಮ್ಮ ವೈಯಕ್ತಿಕ ಬದುಕು ಮತ್ತು ರಾಜಕೀಯ ಹೋರಾಟಗಳನ್ನು ಮೇಲೆ ಹೇಳಿದ ಎರಡು ಹಸಿವುಗಳ ಜತೆ ಬೆಸೆದರು. ಪರಿಣಾಮವಾಗಿ ಸ್ವಾತಂತ್ರ್ಯದ ಮುಂಬೆಳಗಿನಲ್ಲಿ ನಾವು ಕೆಲವು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಇದರಲ್ಲೊಂದು ಅಸ್ಪೃಶ್ಯತೆಯನ್ನು ನಿವಾರಿಸಿ ದಲಿತರಿಗೆ ದೇವಸ್ಥಾನ ಪ್ರವೇಶವನ್ನು ನಿಷೇಧಿಸುವುದನ್ನು ಕಾನೂನುಬಾಹಿರವಾಗಿಸಿದ್ದು. ವರ್ತಮಾನದಲ್ಲಿ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಕಾರಣ ಇದು ಒಂದು ಮತದ ಆಚರಣೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡುವ ಪ್ರಯತ್ನ ಎಂದು ಯಾರಾದರೂ ನ್ಯಾಯಾಲಯಕ್ಕೆ ಹೋಗುವ ಎಲ್ಲ ಸಾಧ್ಯತೆಗಳಿವೆ. (ಇದು ನನ್ನ ಊಹೆಯಷ್ಟೇ. ಇದು ತಪ್ಪಾಗಿರಲಿ ಎಂಬುದು ನನ್ನ ಆಸೆ). ಇನ್ನೊಂದು ನಿರ್ಧಾರ ವಯಸ್ಕರೆಲ್ಲರಿಗೂ ಮತದಾನದ ಹಕ್ಕು ನೀಡಿದ್ದು. ಅಂದಿನ ಇಂಗ್ಲಿಷ್ ಕಲಿತ ಬುದ್ಧಿಜೀವಿ ವರ್ಗ ಮತ್ತು ಸಂಪ್ರದಾಯವಾದಿ ಪಂಡಿತರು ಅಜ್ಞಾನಿ, ನಿರಕ್ಷರ ಜನರಿಗೆ ಮತದಾನ ಹಕ್ಕನ್ನು ನೀಡುವುದು ಒಂದು ದೊಡ್ಡ ತಪ್ಪೆಂದು ಭಾವಿಸಿದ್ದರು. ಅವರು ಈಗಲೂ ಹಾಗೆಯೇ ಅಂದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಪ್ರಜಾಪ್ರಭುತ್ವದ ಇದನ್ನು ಸುಳ್ಳು ಮಾಡಿ ಅಮೆರಿಕದ ಪ್ರಜಾಪ್ರಭುತ್ವಕ್ಕಿಂತ ನಮ್ಮದೇ ಹೆಚ್ಚು ಕಸುವುಳ್ಳ ಪ್ರಜಾಸತ್ತೆ ಎಂದು ಸಾಬೀತು ಮಾಡಿತು. ಜನರ ‘ಸಮಾನತೆಯ ಆಕಾಂಕ್ಷೆ’ಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಹೆಚ್ಚೆಂದರೆ ಅದನ್ನು ತಡ ಮಾಡಬಹುದು, ನಿಷ್ಫಲಗೊಳಿಸಲು ಪ್ರಯತ್ನಿಸಬಹುದಷ್ಟೇ. ದುರದೃಷ್ಟವಶಾತ್ ಈಗ ನಮ್ಮ ರಾಜಕೀಯ ಪಕ್ಷಗಳು ಇದೇ ಕೃತ್ಯದಲ್ಲಿ ತೊಡಗಿಕೊಂಡಿವೆ. ನಮ್ಮ ಸಂವಿಧಾನ ನೀಡಿರುವ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಭರವಸೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರಗಳು ತೋರುತ್ತಿರುವ ಸೋಗಿನ ಬಳಲಿಕೆ ಇದಕ್ಕೆ ಉತ್ತಮ ಉದಾಹರಣೆ. ಸ್ವಾತಂತ್ರ್ಯದ ಮುಂಬೆಳಗಿನಲ್ಲಿ ಕೈಗೊಂಡ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ. ನಮ್ಮ ಇಂಗ್ಲಿಷ್ ಕಲಿತ ಬುದ್ಧಿಜೀವಿಗಳು ದುಃಖಿಸಿದ ಈ ನಿರ್ಧಾರ ಕೂಡಾ ಒಳ್ಳೆಯದೆಂದು ಸಾಬೀತಾಯಿತು. ನಮ್ಮ ಒಕ್ಕೂಟ ವ್ಯವಸ್ಥೆಯನ್ನೂ ನಾವು ಆಧ್ಯಾತ್ಮಿಕವಾಗಿ ಬಡವಾಗದಂತೆ ಕಾಪಾಡಿದ ಸಂಸ್ಕೃತಿಯ ಬಹುತ್ವವನ್ನೂ ಬಲಗೊಳಿಸಲು ಈ ಭಾಷಾವಾರು ಪ್ರಾಂತ್ಯಗಳು ಪೂರಕವಾಗಿ ಕೆಲಸ ಮಾಡಿದವು.

ಗಾಂಧೀಜಿ ಮತ್ತು ಟ್ಯಾಗೋರ್ ಇಬ್ಬರೂ ಒಂದು ಭಾಷೆ. ಒಂದು ಜನಾಂಗ ಮತ್ತು ಒಂದು ಮತ-ಧರ್ಮದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡ ಯೂರೋಪ್ ಮಾದರಿಯ ಪ್ರಬಲ ರಾಷ್ಟ್ರೀಯ ಪ್ರಭುತ್ವದ ಕಟು ವಿಮರ್ಶಕರು. ಭಾರತವೆಂಬುದು ಬಹುಜನರಿರುವ ಬಹುಸಂಸ್ಕೃತಿ, ಬಹುಧರ್ಮಗಳಿರುವ ಒಂದು ನಾಗರಿಕತೆ. ಆದ್ದರಿಂದಲೇ ಇದೊಂದು ವಿಶಿಷ್ಟ ದೇಶ. ಅದೃಷ್ಟವಶಾತ್ ಒಬ್ಬ ತನ್ನ ಭಾಷೆಯನ್ನು ಪ್ರೀತಿಸುವುದು ಮತ್ತು ಪ್ರತಿಪಾದಿಸುವುದು ಭಾರತೀಯವಲ್ಲದೇ ಇರುವ ಗುಣ ಎಂದು ನಾವಿನ್ನೂ ಭಾವಿಸುತ್ತಿಲ್ಲ. ನಾನು ಬೆಳೆದದ್ದು ಗೋವಿನ ಹಾಡನ್ನು ಓದಿಕೊಂಡು. ಇದು ನನ್ನ ರಾಜ್ಯವನ್ನು ಪ್ರಪಂಚದ ನಡುವೆ ಸ್ಥಾಪಿಸುತ್ತದೆ. ದಿಲ್ಲಿ ನಮ್ಮ ಅನುಕೂಲಕ್ಕಾಗಿರುವ ರಾಜಕೀಯ ಕೇಂದ್ರ, ಆದರೆ ಭಾರತ ಮಾತ್ರ ಒಂದು ಬಹು ಕೇಂದ್ರಿತ ನಾಗರಿಕತೆ.

ನಾವಿನ್ನೂ ಮುಂದುವರಿದು ಗಾಂಧೀಜಿ, ವಿನೋಬಾ ಮತ್ತು ಜಯಪ್ರಕಾಶ್ ನಾರಾಯಣ್ ನಮಗೆ ಕಲಿಸಿಕೊಟ್ಟಂತೆ ಅಧಿಕಾರವನ್ನು ಹಳ್ಳಿಗಳ ತನಕ ವಿಕೇಂದ್ರೀಕರಿಸಬೇಕು. ಇಲ್ಲದೇ ಹೋದರೆ ನಮ್ಮ ಆಳುವ ವರ್ಗ ಎಂದಾದರೊಂದು ದಿನ ಏಕಶಿಲೆಯೆಂಥ ರಾಷ್ಟ್ರೀಯ ಪ್ರಭುತ್ವದ ಆಕರ್ಷಣೆಗೆ ಬಿದ್ದು ನಮ್ಮ ಸಂಸ್ಕೃತಿಯ ಬಹುತ್ವ ಅವಗಣನೆಗೆ ಗುರಿಯಾದರೆ ನಾವೂ ಒಡೆದು ಚೂರು ಚೂರಾಗಿಬಿಡಬಹುದು. ನಮ್ಮ ನಾಗರಿಕತೆಯ ಲಕ್ಷಣವನ್ನು ವಿವರಿಸಲು ಮತ್ತೆ ಮತ್ತೆ ಬಳಸುವ ಕ್ಲೀಷೆ ಎನಿಸುವಂಥ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಹೇಳಿಕೆಯಲ್ಲಿ ಘನವಾದ ಸತ್ಯವಿದೆ. ವೈವಿಧ್ಯತೆಗೆ ಹೆಚ್ಚು ಒತ್ತು ದೊರೆತು ಅಗತ್ಯ ಏಕತೆಗೆ ಭಂಗ ಬಂದಾಗ ನಾವು ನಮ್ಮ ಏಕತೆಯ ಕುರಿತು ಅತೀವ ಕಾಳಜಿಯುಳ್ಳವರಾಗಿಬಿಡುತ್ತೇವೆ. ಹಾಗೆಯೇ ಒಂದು ಧರ್ಮ ಅಥವಾ ಭಾಷೆಗೆ ಒತ್ತುನೀಡಿ ಅದರ ಮೂಲಕ ನಮ್ಮ ನಾಗರಿಕತೆಯಲ್ಲಿ ಏಕತೆಯನ್ನು ಸಾಧಿಸಲು ಹೊರಟರೆ ನಮ್ಮ ದೇಶದ ಪ್ರತೀ ಪ್ರಾಂತ್ಯವೂ, ಈ ಪ್ರಾಂತ್ಯದೊಳಗಿರುವ ಭಿನ್ನ ಜನರೂ ತಮ್ಮ ಭಾಷೆ ಮತ್ತು ಧರ್ಮವನ್ನು ಮುಂದಿಟ್ಟುಕೊಂಡು ಪ್ರತ್ಯೇಕತೆಗೆ ತುಡಿಯಲಾರಂಭಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮತ್ತೊಂದು ಅಪಾಯವೆಂದರೆ ತೋರಿಕೆಯ ಶ್ರೇಷ್ಠರ (ಎಲೀಟಿಸ್ಟರು) ಗುಂಪುಗಳು ಪ್ರಬಲವಾಗುತ್ತಿರುವುದು. ಇವುಗಳ ದೃಷ್ಟಿಯಲ್ಲಿ ಜಾಗತೀಕರಣವೆಂದರೆ ಎಲ್ಲ ರೋಗಗಳಿಗೂ ಮದ್ದು. ಸರ್ಕಾರೀ ವೆಚ್ಚವನ್ನು ತಗ್ಗಿಸುವುದು ಹೆಸರಿನಲ್ಲಿ ಉನ್ನತ ಶಿಕ್ಷಣವನ್ನು ವಾಣಿಜ್ಯೀಕರಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ. ರಾಜ್ಯ ಸರಕಾರಗಳ ನಿರ್ವಹಣೆಯಲ್ಲಿರುವ ಅನೇಕ ವಿಶ್ವವಿದ್ಯಾಲಯಗಳಲ್ಲೂ ಈಗ ಡೊನೇಷನ್ ಸೀಟುಗಳಿವೆ. ಪ್ರಾದೇಶಿಕ ಮಾಧ್ಯಮಗಳಲ್ಲಿ ಬೋಧಿಸುವ ಒಳ್ಳೆಯ ಶಾಲೆಗಳು ಎಲ್ಲೆಡೆಯೂ ಕಾಣೆಯಾಗುತ್ತಿವೆ; ಈ ಪ್ರಕ್ರಿಯೆ ಮುಂದುವರಿದರೆ ನಮ್ಮ ಭಾಷೆಗಳಿಗೆ ಅರಿವಿನ ಮಾಧ್ಯಮವಾಗಿ ಯಾವ ಭವಿಷ್ಯವೂ ಇರುವುದಿಲ್ಲ. ನಮ್ಮ ಪ್ರಾದೇಶಿಕ ಭಾಷೆಗಳನ್ನು ಬಲಿಕೊಟ್ಟು ಇಂಗ್ಲಿಷನ್ನು ಬಲಪಡಿಸುವ ಕ್ರಿಯೆ ನಡೆಯುತ್ತಿದೆ. ನಮ್ಮ ಸಾಂಸ್ಕೃತಿಕ ನೆನಪುಗಳ ಖಜಾನೆಯಾಗಿರುವ ನಮ್ಮ ಭಾಷೆಗಳು ಶಿಕ್ಷಿತ ವರ್ಗಕ್ಕೆ ಕೇವಲ ಅಡುಗೆ ಮನೆ ಭಾಷೆಯಾಗಿ ಬಿಡುವ ಅಪಾಯವಿದೆ. ಜಗತ್ತೆಂಬ ಹಳ್ಳಿಯಲ್ಲಿದ್ದೇವೆಂಬ ಭ್ರಮೆಯಲ್ಲಿ ಅಮೆರಿಕ ಯೂರೋಪ್ ಜತೆಗೆ ಸ್ಪರ್ಧಿಸಲು ನಮ್ಮನ್ನು ಸಿದ್ಧಪಡಿಸಿಕೊಳ್ಳಲು ಹೊರಟು ಸಮಾನತೆಯ ಹಸಿವು ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆ ಮತ್ತು  ವೈಶಿಷ್ಟ್ಯಗಳನ್ನು ಮೂಲೆಗುಂಪು ಮಾಡುತ್ತಿದ್ದೇವೆ. ನಾವು ಬರೇ ನಮ್ಮ ಭಾಷೆಗಳನ್ನು ಕಳೆದುಕೊಳ್ಳುತ್ತಿಲ್ಲ. ನಮ್ಮ ಧಾನ್ಯಗಳ ಬೀಜಗಳು, ಜೀವ ವೈವಿಧ್ಯ ಅಷ್ಟೇಕೆ ನಮ್ಮ ನಾಗರಿಕತೆಯನ್ನು ಶ್ರೀಮಂತವಾಗಿಯೂ ವರ್ಣಭರಿತವಾಗಿಯೂ ಇಟ್ಟಿದ್ದ ನಮ್ಮ ಆಹಾರಗಳ ಭಿನ್ನ ರುಚಿಗಳನ್ನೂ ಕಳೆದುಕೊಳ್ಳುತ್ತಿದ್ದೇವೆ.

ಒಂದು ಸಾವಿರ ವರ್ಷಗಳ ಹಿಂದೆ ಲ್ಯಾಟಿನ್ ಇಡೀ ಯೂರೋಪಿನಲ್ಲಿ ಸಂಚರಿಸಿ ಅಲ್ಲಿನ ಮೇಲ್ವರ್ಗಗಳ ಪರಸ್ಪರ ಸಂಪರ್ಕ ಸಾಧ್ಯವಾಯಿತು. ಆದರೆ ಯೂರೋಪಿನ ಎಲ್ಲ ಭಾಷೆಗಳಲ್ಲು ಅಸಾಧಾರಣವಾದುದೇನೋ ಸಂಭವಿಸಿ ಅವು ಶೇಕ್ಸ್‌ಪಿಯರ್‌, ಡಾಂಟೆ, ಟಾಲ್ಸ್‌ಟಾಯ್‌ಮತ್ತು ಡಾರ್ವಿನ್‌ರನ್ನು ಸೃಷ್ಟಿಸಿದವು. ಭಾರತದಲ್ಲಿ ಸಂಸ್ಕೃತವೂ ಅಸಂಖ್ಯ ಭಾಷೆಗಳು ಮತ್ತು ಉಪಭಾಷೆಗಳಿಗೆ ದಾರಿ ಮಾಡಿಕೊಡಬೇಕಾಯಿತು. ನನ್ನ ಭಾಷೆಯಾದ ಕನ್ನಡದಲ್ಲಿ ಸಾವಿರ ವರ್ಷಗಳ ಹಿಂದೆ ನಮ್ಮ ಆದಿಕವಿ ಪಂಪ ಮಹಾಭಾರತವನ್ನು ತನ್ನ ದೃಷ್ಟಿಯಲ್ಲಿ ಪುನರ್‌ವ್ಯಾಖ್ಯಾನಿಸಿದ. ಕರ್ನಾಟಕದ ನದಿ, ತೊರೆಗಳು ಈ ಕಾವ್ಯದಾದ್ಯಂತ ಹರಿದಿವೆ. ಕರ್ನಾಟಕ ಭಾರತದಲ್ಲಿದೆ. ಇದೇ ಹೊತ್ತಿನಲ್ಲಿ ಅದು ಅದರಷ್ಟಕ್ಕೇ ಒಂದು ಜಗತ್ತೂ ಹೌದು. ನಮ್ಮದೇ ಕಾಲಘಟ್ಟದಲ್ಲಿ ಮಹಾತ್ಮರು ಒಂದು ಗುಜರಾತಿ ಹಾಡಾಗಿರುವ ‘ವೈಷ್ಣ ಜನತೋ’ವನ್ನು ಗಾಢವಾಗಿ ತಟ್ಟುವ ರಾಷ್ಟ್ರೀಯ ಹಾಡನ್ನಾಗಿಸಿದರು. ಭಾರತೀಯ ಭಾಷೆಯೊಂದರಲ್ಲಿ ಬರೆಯುತ್ತಿದ್ದ ಟ್ಯಾಗೋರ್ ರಾಷ್ಟ್ರಕವಿಯಾಗಿ ಮಹಾತ್ಮರಿಗೆ ‘ಗುರುದೇವ’ರೂ ಆದರು.

ನಾನು ಈ ಘಟಿಕೋತ್ಸವ ಭಾಷಣವನ್ನು ಇತ್ತೀಚೆಗೆ ಹಿಂದುಸ್ಥಾನ್ ಟೈಮ್ಸ್‌ಗೆ ಬರೆದ ಲೇಖನದ ಕೆಲವು ಸಾಲುಗಳನ್ನು ಉದ್ಧರಿಸಿ ಕೊನೆಗೊಳಿಸುತ್ತೇನೆ. ಪತ್ರಿಕೆಯವರು ಕೇಳಿದ ಭಾರತ ಇಂದಿನಿಂದ ಅರವತ್ತು ವರ್ಷಗಳ ನಂತರ ಅಂದರೆ ೨೦೬೭ ರಲ್ಲಿ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಸಾಲುಗಳನ್ನು ನಾನು ಬರೆದಿದ್ದೆ. ನಾನು ಲೇಖಕನ ಸ್ವಾತಂತ್ರ್ಯವನ್ನು ಬಳಸಿಕೊಂಡು ನಮ್ಮ ಕಲ್ಪನೆಯನ್ನು ಈ ಸಾಲುಗಳಲ್ಲಿ ಹರಿಯಬಿಟ್ಟಿದ್ದೇನೆ.

“ಬಹಳ, ಬಹಳ ಹಿಂದೆ ಮೋಹನದಾಸ್ ಕರಮ್‌ಚಂದ್‌ಗಾಂಧಿ ಎಂಬ ಸಸ್ಯಾಹಾರಿಯೂ ಅಹಿಂಸೆಯ ಪ್ರತಿಪಾದಕರೂ ಆಗಿದ್ದ, ಮನುಷ್ಯನ ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇಟ್ಟಿದ್ದ ವ್ಯಕ್ತಿಯ ಬಳಿ ಪತ್ರಕರ್ತನೊಬ್ಬ ‘ಪಾಶ್ಚಾತ್ಯ ನಾಗರಿಕತೆಯ ಬಗ್ಗೆ ನಿಮಗೇನನ್ನಿಸುತ್ತದೆ?’ ಎಂದು ಪ್ರಶ್ನಿಸಿದಾಗ ವ್ಯಂಗ್ಯವಾಗಿ ‘ಅದೊಂದು ಒಳ್ಳೆಯ ಪರಿಕಲ್ಪನೆ’ ಎಂದು ಉತ್ತರಿಸಿದರು. ನಾವೀಗ ಅಂದರೆ ೨೦೬೭ನೇ ಇಸ್ವಿಯಲ್ಲಿ ಅವರ ಮಾತುಗಳನ್ನು ಮತ್ತೆ ನೆನಪು ಮಾಡಿಕೊಳ್ಳಬೇಕಿದೆ. ಏಕೆಂದರೆ ಕಳೆದ ಇಷ್ಟೂ ಕಾಲವೂ ಆಧುನಿಕ ನಾಗರಿಕತೆಯ ಹೆಸರಿನಲ್ಲಿ ನಾವು ರೂಢಿಸಿಕೊಂಡಿರುವ ಅರ್ಥಹೀನ ಉಪಭೋಗ ಮತ್ತು ಅಭಿವೃದ್ಧಿ ಮಾದರಿಗಳಿಂದ ಪ್ರಪಂಚದ ವಿನಾಶದಂಚಿಗೆ ಬಂದು ನಿಂತಿದೆ. ಗಾಂಧೀಜಿಯ ಭಾರತ ಮತ್ತು ಮಾವೋನ ಚೀನಾಗಳು ಅಮೆರಿಕವನ್ನು ಅನುಕರಿಸಿ ಭೂತಾಪಮಾನ ಏರಿಕೆಯ ಕುರಿತ ಎಲ್ಲ ಎಚ್ಚರಿಕೆಗಳನ್ನೂ ಕಡೆಗಣಿಸಿದವು. ಇಸ್ಲಾಮಿಕ್ ಮತ್ತು ಹಿಂದೂ ಮೂಲಭೂತವಾದಗಳಿದ್ದವೆಂಬುದು ನಿಜ. ಇವುಗಳ ಜತೆಗೇ ಪ್ರಪಂಚದ ಎಲ್ಲಾ ಆಳುವ ವರ್ಗಗಳ ಒಪ್ಪಿಗೆ ಇದ್ದದ್ದು ಮಾರುಕಟ್ಟೆ ಮೂಲಭೂತವಾದಕ್ಕೆ. ಇದರ ಪರಿಣಾಮವಾಗಿ ಭಾರತದ ಜೀವನ ವಿಧಾನವೂ ಸಾಂಸ್ಕೃತಿಕ ನೆನಪುಗಳ ಕೋಶವೂ ಆಗಿದ್ದ ಕೃಷಿ ಬದಿಗೆ ತಳ್ಳಲ್ಪಟ್ಟು ಸತ್ತು ಹೋಯಿತು. ಎಲ್ಲೆಲ್ಲೂ ವಿಶೇಷ ಆರ್ಥಿಕ ವಲಯಗಳು (ಎಸ್ ಇ ಝೆಡ್) ಬೆಳೆದು ನಿಂತವು. ಭಾರೀ ಶ್ರೀಮಂತರಷ್ಟೇ ಉಪಯೋಗ ಪಡೆಯಬಹುದಾಗಿದ್ದ ಆಧುನಿಕ ವೈದ್ಯ ವಿಜ್ಞಾನದಿಂದ ಅವರು ತಮ್ಮ ಆಯಸ್ಸನ್ನೇನೋ ಹೆಚ್ಚಿಸಿಕೊಂಡರು. ಜೀವನದ ಗುಣಮಟ್ಟವನ್ನಲ್ಲ. ೨೦೩೭ರ ವೇಳೆಗೆ ಭಾರೀ ಶ್ರೀಮಂತರ ಕುಟುಂಬಗಳಲ್ಲಿ ಕೆಲವೇ ಕೆಲವು ಯುವಕರಿದ್ದರು. ಕಾರ್ಪೊರೇಟ್ ಹೊಲ-ಗದ್ದೆಗಳಲ್ಲಿ ರಸಗೊಬ್ಬರ ಸುರಿದು ಬೆಳಸಿದ್ದ ಆಹಾರ ಸಾಕಷ್ಟಿತ್ತು, ಆದರೆ ಅದಕ್ಕೆ ರುಚಿ ಇರಲಿಲ್ಲ. ಕಲ್ಲಿದ್ದಲು ಮತ್ತು ಅಣು ವಿದ್ಯುತ್‌ಸ್ಥಾವರಗಳು ಉತ್ಪಾದಿಸುವ ವಿದ್ಯುತ್‌ನಿಂದ ಬಳಕೆಗೆ ಬರುವ ಪ್ರತಿಯೊಂದು ವಸ್ತುವೂ ಹೇರಳವಾಗಿತ್ತು. ಇದರ ಫಲವಾಗಿ ಪ್ರತಿಯೊಂದು ನಗರವೂ ಮತ್ತೊಂದರ ಪಡಿಯಚ್ಚಿನಂತೆ ಕಾಣಿಸುತ್ತಿತ್ತು. ಜನರು ತಿನ್ನುವ ಉಡುವ ವಸ್ತುಗಳೆಲ್ಲವೂ ಜಗತ್ತಿನೆಲ್ಲೆಡೆಯೂ ಒಂದೇ ರೀತಿ ಕಾಣಿಸುತ್ತಿದ್ದವು.

ಹೀಗಾಗಿ ಬದುಕಿನಲ್ಲಿ ದಣಿವು ಮತ್ತು ಏಕತಾನತೆ ಕಾಣಿಸಿಕೊಂಡಿತು. ಇದು ಬಲಿಷ್ಠ ರಾಷ್ಟ್ರದ ಪರಿಕಲ್ಪನೆ ಮತ್ತು ಭೂಮಿಯೊಂದು ಅಕ್ಷಯ ಪಾತ್ರೆಯೆಂಬ ಆಧುನಿಕ ನಾಗರಿಕತೆಯ ಮೂಢನಂಬಿಕೆಯನ್ನು ಪುನರ್ ಪರಿಶೋಧಿಸಬೇಕೆಂಬ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತುರ್ತೊಂದು ಜಗತ್ತಿನ ಎಲ್ಲ ಜನರೊಳಗೂ ಹುಟ್ಟಿಕೊಳ್ಳಲು ಕಾರಣವಾಯಿತು. ಇದರ ಪರಿಣಾಮವಾಗಿ ಸುಮಾರು ೩೦ ವರ್ಷಗಳ ಹಿಂದೆ ಭಾರತ ವಿಕೇಂದ್ರೀಕೃತ ಗ್ರಾಮ ಗಣರಾಜ್ಯಗಳ ಗಾಂಧೀಜಿಯ ಕನಸನ್ನು ಅರ್ಥಮಾಡಿಕೊಳ್ಳಲು ಆರಂಭಿಸಿತು. ಇಂಥ ಗ್ರಾಮ ಗಣರಾಜ್ಯಗಳಿಗೆ ಅಣು ವಿದ್ಯುತ್ ಬೇಕಾಗಿಲ್ಲ ಹಾಗೆಯೇ ಅವನ್ನು ರಕ್ಷಿಸಿಕೊಳ್ಳಲೊಂದು ಸೇನೆಯ ಅಗತ್ಯವೂ ಇಲ್ಲ. ಸಾವಿರಾರು ಗ್ರಾಮ ಗಣರಾಜ್ಯಗಳಿಂದ ತುಂಬಿ ಮುಳ್ಳುಹಂದಿಯಂತಿರುವ ದೇಶದ ಮೇಲೆ ದಾಳಿ ಮಾಡಲು ಯಾರು ತಾನೆ ಧೈರ್ಯಮಾಡುತ್ತಾರೆ?. ನಾವೀಗಲೂ ಈ ಗ್ರಾಮ ಗಣರಾಜ್ಯಗಳು ಒಂದನ್ನೊಂದು ಅವಲಂಬಿಸಿಯೂ ಆಹಾರ ಮತ್ತು ಬಟ್ಟೆಯಂಥ ವಿಷಯಗಳಲ್ಲಿ ಅವು ಸ್ವಾವಲಂಬಿಯಾಗಿರುವಂತೆ ಮಾಡುವುದಕ್ಕೆ ಇನ್ನೂ ಹೋರಾಡುತ್ತಲೇ ಇದ್ದೇವೆ. ಭಾರತದ ಬಡವರು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಅಡುಗೆ ಮಾಡುವ ವಿಧಾನಗಳನ್ನು ಇನ್ನೂ ಉಳಿಸಿಕೊಂಡಿದ್ದರು. ಮೂವತ್ತು ವರ್ಷಗಳ ಹಿಂದೆ ಭಾರತ ಮತ್ತೆ ಚೇತರಿಸಿಕೊಳ್ಳತೊಡಗಿದಾಗ ಇವೆಲ್ಲವನ್ನೂ ಪುನಶ್ಚೇತನಗೊಳಿಸಲಾಯಿತು. ಆಯಸ್ಸನ್ನು ಹೆಚ್ಚಿಸುವುದಕ್ಕಿಂತ ಜೀವನದ ಗುಣಮಟ್ಟಕ್ಕೆ ಆದ್ಯತೆ ದೊರೆತ ಪರಿಣಾಮವಾಗಿ ಆಧುನಿಕ ವೈದ್ಯವಿಜ್ಞಾನ ರೋಗವನ್ನು ಗುಣಪಡಿಸುವ ತನ್ನ ವಿಧಾನಗಳನ್ನು ಬದಲಾಯಿಸಿಕೊಂಡಿತು. ಎಲ್ಲದಕ್ಕಿಂತ ಮುಖ್ಯವಾಗಿ ೨೦೬೭ ರಲ್ಲಿ ವಿಜ್ಞಾನ ರಾಷ್ಟ್ರೀಯ ಪ್ರಭುತ್ವಗಳು ಮತ್ತು ಪ್ರಗತಿ ಕೇಂದ್ರಿತ ತಂತ್ರಜ್ಞಾನಗಳ ಹಿಡಿತದಿಂದ ಮುಕ್ತವಾಗಿ ನಿಜ ಅರ್ಥದ ನಿರ್ಲಿಪ್ತತೆಯಲ್ಲಿ ಸತ್ಯದ ಶೋಧನೆಗೆ ತೊಡಗಿತು. ಗಾಂಧಿ ಮತ್ತು ಐನ್‌ಸ್ಟೈನ್ ಇಬ್ಬರೂ ಚೇತನ ರೂಪಿಗಳಾಗಿ ಇಲ್ಲಿ ಜೀವಂತವಿದ್ದಾರೆ.”

(ಗುಜರಾತ್ ವಿದ್ಯಾಪೀಠದಲ್ಲಿ ಮಾಡಿದ ಘಟಿಕೋತ್ಸವ ಭಾಷಣ, ೧೮ ಅಕ್ಟೋಬರ್ ೨೦೦೮)
ಅನುವಾದ : ಎನ್.ಎ.ಎಂ. ಇಸ್ಮಾಯಿಲ್.

* * *