ಶ್ರೀಮತಿ ಸುಪ್ರಿಯಾ ಅಗರ್‌ವಾಲ್ ಅವರ ಉದಾರ ಮಾತುಗಳಿಗೆ ನಾನು ಕೃತಜ್ಞ, ಇಂದಿನ ಚರ್ಚೆಯ ವಿಷಯವಾದ ‘ನಾನು’ (self) ಕುರಿತು ಡಾ.ಜಸ್ಬೀರ್‌ ಜೈನ್ ಮಾತನಾಡಿದ್ದಾರೆ. ಅವರು ಹೇಳಿದ ವಿಷಯವನ್ನೇ ನಾನು ವಿಸ್ತರಿಸುತ್ತೇನೆ.

ನನ್ನ ಮಾತುಗಳನ್ನು ನಾನು ಸ್ಥೂಲ ನಿಲುವೊಂದರಿಂದ ಆರಂಭಿಸಲು ಬಯಸುತ್ತೇನೆ. ನಾನು ‘ನನ್ನ’ ಬಗ್ಗೆ ಅಸ್ಮಿತೆಯ ಬಗ್ಗೆ ‘ನಾನು’ ಆಗಿ ಯೋಚಿಸಬಹುದು ಇಲ್ಲವೇ ‘ಆತ್ಮ’ವಾಗಿ ಯೋಚಿಸಬಹುದು. ನಾನು ನನ್ನ ಬಗ್ಗೆ ‘ನಾನು’ ಎಂದು ಯೋಚಿಸಿದಾಗ ಸಾರ್ಥಕತೆಯನ್ನು ಪಡೆಯಲು ಬಯಸುತ್ತೇನೆ. ಇಲ್ಲವೇ ನನ್ನ ಬಗ್ಗೆ ನಾನು ‘ಆತ್ಮ’ ಎಂದು ಗ್ರಹಿಸಿದರೆ ಈ ಲೌಕಿಕ ಪಾಶದಿಂದ ಬಿಡುಗಡೆ ಪಡೆಯಲು ಹವಣಿಸುತ್ತೇನೆ. ಭಾರತದಲ್ಲಿ ಈ ಎರಡೂ ಶೋಧಗಳಿವೆ. ಸಾರ್ಥಕತೆಯ ಶೋಧವೆಂದರೆ ಈ ಜಗತ್ತಿನ ಅನುಭವಗಳನ್ನು ಕುರಿತ ನನ್ನ ಹಸಿವು, ಆಸೆ ಎಲ್ಲವೂ ಈ ಜೀವನದಲ್ಲಿಯೇ ಸಾಧಿತವಾಗಬೇಕು. ಅಥವಾ ನನ್ನನ್ನು ನಾನು ‘ಆತ್ಮ’ವೆಂದು ಗ್ರಹಿಸಿದರೆ ಆಸೆ ಮತ್ತು ಭ್ರಮನಿರಸನಗಳ ಸತತ ಚಕ್ರದಲ್ಲಿ ಈ ಜೀವನವನ್ನು ನಾನು ಕಳೆಯಬೇಕಾಗಿಲ್ಲ. ಅನಿರೀಕ್ಷಿತವಾಗಿಯೋ ಅಥವಾ ವರದಿಂದಲೋ ಅರಿವಿನ ಅಮೃತ ಮುಹೂರ್ತವೊಂದು ನನಗೆ ದೊರಕಿದರೆ ಈ ಭವಕೇಶಪಾಶ ಪ್ರಪಂಚದಿಂದ  ಮುಕ್ತನಾಗಬಹುದು. ರಮಣ ಮಹರ್ಷಿಗಳು ಹೇಳುವಂತೆ ಇಂಥದೊಂದು ನಿಮಗೆ ಒದಗಿದಾಗ ಇಡೀ ಪ್ರಕ್ರಿಯೆ ಎಷ್ಟು ಸರಳವಾದುದು ಮತ್ತು ಬದುಕಿನ ಯಾವ ಘಳಿಕೆಯಲ್ಲಾದರೂ ಅದು ಒದಗಿಬಿಡಬಹುದು ಎನ್ನುವುದು ತಿಳಿಯುತ್ತದೆ. ಡಬ್ಲ್ಯು ಬಿ ಯೇಟ್ಸ್ ಈ ಸಾರ್ಥಕ್ಯ ಮತ್ತು ಬಿಡುಗಡೆ ಎರಡಕ್ಕೂ ಹಂಬಲಿಸಿದ. ಅವನೊಳಗಿನ ಈ ಎರಡರ ಘರ್ಷಣೆಯಲ್ಲಿಯೇ ಆತ ಶ್ರೇಷ್ಠ ಕಾವ್ಯವನ್ನು ರಚಿಸಿದ. (ಕೆಲವು ಪದ್ಯಗಳಲ್ಲಿ ಯೂರೋಪ್ ಮತ್ತು ಏಷ್ಯಾಗಳ ನಡುವಿನ ಮುಖಾಮುಖಿಯಾಗಿಯೂ ಈ ದ್ವಂದ್ವದ ಅಭಿವ್ಯಕ್ತಿ ಇದೆ).

ಇಲ್ಲಿಯವರೆಗೂ ಹೇಳಿದ್ದಕ್ಕೆ ಇನ್ನೊಂದನ್ನೂ ನಾನು ಸೇರಿಸಬೇಕು. ನನ್ನ ಭಾಷೆ ಕನ್ನಡದಲ್ಲಿ self ಮತ್ತು soulಗಳನ್ನು ಖಚಿತವಾಗಿ ವಿಂಗಡಿಸುವ ಪದಗಳನ್ನು ಗುರುತಿಸುವುದು ನಿಜಕ್ಕೂ ಕಷ್ಟ. ಏಕೆಂದರೆ ಕನ್ನಡದಲ್ಲಿ ಈ ಎರಡನ್ನೂ ಆತ್ಮ ಎಂದು ಕರೆಯಲಾಗುತ್ತದೆ.

ಆದರೆ ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ನಮಗೆ ಆಧುನಿಕ ಯೂರೋಪಿನ ಸಾಹಿತ್ಯದ ವರವೋ, ಅನಿವಾರ್ಯವಾದ ಸಮಸ್ಯೆಯೋ ಎಂದು ಹೇಳಲಾಗದ ಸ್ಥಿತಿ ಎಲ್ಲಿ ಬಂದಿತೆಂದರೆ ನಾನು ‘ನನ್ನನ್ನು’ (me) ‘ಆತ್ಮ’ವಾಗಿ ನೋಡುವುದಕ್ಕೆ ಬದಲು ‘ನಾನು’ ಆಗಿ ನೋಡುವ ಪರಿಕಲ್ಪನೆಯನ್ನು ಪಡೆದದ್ದರಲ್ಲಿ.

ಇದು ಮೊದಲನೆಯ ಅಂಶ.

ನಾನು ಮಂಡಿಸಬೇಕೆಂದಿರುವ ಎರಡನೆಯ ಅಂಶ ಇದು. ಯೂರೋಪಿಯನ್ ಸಾಹಿತ್ಯದಲ್ಲೂ ಇದನ್ನು ನಾವು ನೋಡಬಹುದು. ನಾನು ವಿದ್ಯಾರ್ಥಿಯಾಗಿದ್ದಾಗ ಬೆಳೆದು ಲೇಖಕನಾದಾಗಲೂ ಕೂಡಾ ಶೆಲ್ಲಿಯ ದೊಡ್ಡ ಅಭಿಮಾನಿ. ಟ್ಯಾಗೋರ್ ಕೂಡಾ ಶೆಲ್ಲಿಯನ್ನು ಮೆಚ್ಚಿದ್ದರು. ಆತನಿಗೆ ಅದ್ವೈತದ ಮನಸ್ಸಿದ್ದ ಹಾಗೆ ಕಾಣುತ್ತದೆ. ಉದಾಹರಣೆಗೆ ಲೀವಿಸ್‌ನ ವಿದ್ಯಾರ್ಥಿಯಾಗಿದ್ದ ನನ್ನ ಆಧ್ಯಾಪಕರು Ode to west End ಪದ್ಯವನ್ನು ಖಂಡಿಸುತ್ತಾ ಹೇಳಿದ್ದರು: ‘ಶೆಲ್ಲಿ ಆತ್ಮರತ ಮತ್ತು ಭಾವುಕ’. ಆ ಪದ್ಯದ ಪ್ರಸಿದ್ಧವಾದ I fali upon the throns of life, I bleed ಎಂಬ ಸಾಲನ್ನು ಕಟುವಾಗಿ ಟೀಕಿಸುತ್ತ ಹೇಳಿದ ಮಾತಿದು. ನಾನು ಹೇಳಿದೆ ‘ಅಲ್ಲ, ಅದು ಹಾಗಲ್ಲ. ನನಗನ್ನಿಸುವುದು ಶೆಲ್ಲಿ ಆತ್ಮದ ಈ ದುರದೃಷ್ಟಶಾಲಿ ಅವತಾರವನ್ನು ದೇಹದಿಂದ ಬಂಧಿತವಾಗಿರುವಂತೆ ನೋಡುತ್ತಾನೆ. ವಿಶ್ವದೊಂದಿನ ತಾದ್ಯಾತ್ಮಕ್ಕೆ ಈ ನಾನು ಎಂಬ ದೇಹ ಅಡ್ಡಿಯಾಗಿದೆ. ಆದ್ದರಿಂದ I fall upon the throns of life, I bleed ಎಂದು ಹಲಬುತ್ತಾನೆ. ಇದೊಂದು ಪ್ರಾರ್ಥನೆ. ‘ದೇವರೇ ಈ ವಿಶ್ವದೊಂದಿಗೆ ನಾನು ಒಂದಾಗಲು ಅನುವಾಗುವಂತೆ ನನ್ನನ್ನು ಈ ದೇಹದಿಂದ ಬಿಡುಗಡೆಗೊಳಿಸು.’ (ನನಗಿದನ್ನು ಹೊಳೆಯಿಸಿದ್ದು ಗತಿಸಿದ ಗೆಳೆಯ ಪೋಲಂಕಿ ರಾಮಮೂರ್ತಿ).

(ವಾಲ್ಟ್‌ವಿಟ್‌ಮನ್‌ಗೆ ಕೂಡಾ ‘ನಾನು’ ಎನ್ನುವುದು ಸಮಸ್ತ ವಿಶ್ವದೊಂದಿಗೆ ಒಂದಾಗಬೇಕಾದಂಥದೇ ಆಗಿತ್ತು)

ಅಥವಾ ಕೀಟ್ಸ್‌ ಸತ್ತಾಗ ಶೆಲ್ಲಿ ಬರೆದ ಕೆಲವು ಅತ್ಯುತ್ತಮ ಸಾಲುಗಳನ್ನು ನಾವು ನೋಡಬಹುದು ‘ಜೀವನ ಬಹುಬಣ್ಣಗಳ ಗಾಜುಗೋಳ, ಅದು ಶಾಶ್ವತದ ಬೆಳಕನ್ನು ಮರೆಮಾಚುವಂತೆ ವರ್ಣರಂಜಿತಗೊಳಿಸುತ್ತದೆ,’ ಅವನು ಉಪಯೋಗಿಸುವ ಶಬ್ದ ದ್ವಂದಾರ್ಥವನ್ನು ಏಕಕಾಲಕ್ಕೆ ಮಿಂಚಿಸುವಂತಹುದು ‘stains the white radians of eternity’ Stained glass ಕಿಟಕಿಗಳಿಂದ ಬರುವ ಬೆಳಕು ಮುದಗೊಳಿಸುವ ಮಾಯೆಯದೂ ಹೌದು; ಬೆಳಕಿನ ನಿಜದ ಪ್ರಖರತೆಯನ್ನು ಮಬ್ಬುಗೊಳಿಸುವುದೂ ಹೌದು.

ವಿದ್ಯಾರ್ಥಿಯಾಗಿದ್ದಾಗ ಈ ಸಾಲುಗಳು ನನಗೂ ಪೋಲಂಕಿರಾಮಮೂರ್ತಿಗೂ ರೋಮಾಂಚಕಾರಿಯಾಗಿದ್ದವು. ಯಾಕೆಂದರೆ ಜೀವನ ಸುಂದರವಾಗಿ ‘ಕಾಣಿಸು’ತ್ತದೆ, ಯಾಕೆಂದರೆ ಅದು ‘ಮಾಯೆ’. ಅದು ಬಹುಬಣ್ಣಗಳ ಗಾಜುಗೋಳ. ಅದರ ಎರಡೂ ಅರ್ಥಗಳಲ್ಲಿ ಅದು ಮಬ್ಬಿನಿಂದ ಕೂಡಿದ್ದು. ಸುಂದರ ಆದರೂ ಅಸ್ಪಷ್ಟ. ಶಾಶ್ವತದ ಕಾಂತಿಯನ್ನು ನೀವು ನೋಡಲು ಅದು ಬಿಡುವುದಿಲ್ಲ. ಶೆಲ್ಲಿ ಮತ್ತು ಅದ್ವೈತವನ್ನು ಕುರಿತ ನನ್ನ ಅನುರಕ್ತಿಗೆ ವಿರುದ್ಧವಾಗಿ ನನ್ನನ್ನು ಬಹುವಾಗಿ ಕಲಕಿದ ನನ್ನ ವಿದ್ಯಾರ್ಥಿ ದಿನಗಳಲ್ಲಿ ಓದಿದ ಕೀಟ್ಸ್‌ನನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಕೀಟ್ಸ್‌ತನ್ನದೊಂದು ಪತ್ರದಲ್ಲಿ ‘ಆತ್ಮ ಸೃಷ್ಟಿಯ ಕಣಿವೆ’ ಎನ್ನುವ ಅರ್ಥದ ಮಾತೊಂದನ್ನು ಬರೆಯುತ್ತಾನೆ. A vale of soul-making. ಇದಕ್ಕೆ ಪರ್ಯಾಯವಾಗಿ ನಾವು ವರ್ಡ್ಸ್‌‌ವಥ್‌ನಂತೆಯೂ ಮಾತನಾಡಬಹುದು. ‘ನಾನು ಈ ಜಗತ್ತಿಗೆ ಬಂದದ್ದೇ ಒಂದು ಆತ್ಮವಾಗಿ. ದೇವರ ಮನೆಯಿಂದ ನಾವು ಪ್ರಜ್ವಲ ಮೋಡಗಳು ತೇಲುವಂತೆ ಬಂದಿದ್ದೇವೆ. ಈ ಜಗತ್ತಿನಲ್ಲಿ ಬೆಳೆಯುವ ಪ್ರಕ್ರಿಯೆಯಲ್ಲಿ ನಾನು ಮಾಯೆಯಿಂದ ಆವೃತ್ತವಾಗಿ ‘ನಾನು’ ಆಗಿದ್ದೇನೆ. Like trailing clouds of glory do we come from God who is our home.

* * *

ಈಗ ನಾನೇನು ಯೋಚಿಸಬೇಕು?

ನಾನು ಶೆಲ್ಲಿಗಿಂತ ಕೀಟ್ಸ್‌ನ ಜತೆಯಲ್ಲಿದ್ದೇನೆ. ಸಾರ್ಥಕ್ಯವನ್ನು ಪಡೆಯುವುದರ ಕಡೆಗೆ ಹೆಚ್ಚು ವಾಲಿದ್ದೇನೆ. ನಾವು ಬಹುತೇಕ ಲೇಖಕರು ಈ ಬಗೆಯ ಮನೋವಿನ್ಯಾಸದಲ್ಲಿರುತ್ತೇವೆ.

ಈಗ ಇಲ್ಲಿ ಇನ್ನೊಂದು ವಿಚಾರವಿದೆ. ಸೃಜನಶೀಲ ಪ್ರಕ್ರಿಯೆಯಲ್ಲಿರುವ ‘ನಾನು’ – ಇದು ಹೇಗೆ ಸೃಷ್ಟಿಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ? ಇದನ್ನು ಕುರಿತಂತೆ ಇರುವ ಎಲಿಯಟ್‌ನ ಸಿದ್ಧಾಮತ ರೊಮ್ಯಾಂಟಿಕರು ಮತ್ತು ವಿಕ್ಟೋರಿಯನ್ನರಿಗೆ ವಿರುದ್ಧವಾಗಿದೆ. ಇದು ಪ್ರಾಚೀನ ಸೌಂದರ್ಯ ಮೀಮಾಂಸೆಗೆ ಹತ್ತಿರವಾಗಿದೆ ಎನ್ನುವುದು ಬಹು ಮುಖ್ಯವಾದುದು.

ವೈಯಕ್ತಿಕ ‘ನಾನು’ ಎನ್ನುವುದು ಆತನ ಮಟ್ಟಿಗೆ ಕೇವಲ ವೇಗವರ್ಧಕ ಮಾತ್ರ. ಈ ವೇಗವರ್ಧಕ ತಾನು ಬದಲಾಗುವುದಿಲ್ಲ. ಆದರೆ ಬದಲಾವಣೆಯನ್ನು ಸಾಧ್ಯ ಮಾಡುತ್ತದೆ. ಕವಿಯಲ್ಲಿರುವ ಸೃಜನಶೀಲ ‘ಪ್ರಕ್ರಿಯೆ’ ಯ ವೇಗವನ್ನು ಅದು ವರ್ಧಿಸುತ್ತದೆ.

ಆದ್ದರಿಂದಲೇ ಆತ ‘ಕಲೆಯ ವಸ್ತುನಿಷ್ಠ ಸಿದ್ಧಾಂತ’ವನ್ನು ಪ್ರತಿಪಾದಿಸಿದ್ದು. ಈ ಸಿದ್ಧಾಂತ ನಮ್ಮ ಘನ ಭಾರತೀಯ ಕಾವ್ಯ ಮೀಮಾಂಸೆಯ ‘ವಿಭಾವ’ಕ್ಕೆ ತುಂಬ ಹತ್ತಿರವಾಗಿದೆ. ವಿಭಾವವಿಲ್ಲದೆ ಸೃಷ್ಟಿ ಕ್ರಿಯೆಯೇ ಸಾಧ್ಯವಿಲ್ಲ. ವಿಭಾವವೇ ಎಲಿಯಟ್‌ನ  ‘Objective correlative’.

ಎಲ್ಲ ಸಾಹಿತ್ಯವನ್ನು ನೋಡುವ ಒಂದು ಕ್ರಮ ಇದು. ಇದಕ್ಕೆ ವಿರುದ್ಧವಾಗಿ ನಾನು ಯಾರನ್ನು ಯೋಚಿಸಬಹುದು? ನಾನು ಬ್ಲೇಕ್‌ನನ್ನು ಚಿಂತಿಸುತ್ತೇನೆ. ಅವನು ಹೇಳುವುದು: ‘ಇದು ನನ್ನದು, ನನ್ನದು ಮಾತ್ರವಲ್ಲ.’

ಜಸ್ಬೀರ್‌ ಜೈನ್ ಅಥೆಂಟಿಸಿಟಿ ಎನ್ನುವ ಪದವನ್ನು ಬಳಸಿದರು. ‘ಇದು ನನ್ನದು, ನನ್ನದು ಮಾತ್ರವಲ್ಲ’ ಎನ್ನುವ ಗ್ರಹಿಕೆ ಒಬ್ಬ ಬರೆಹಗಾರನ ಬರೆವಣಿಗೆಗೆ ಅಥೆಂಟಿಸಿಟಿಯ ಗುಣವನ್ನು ತರುತ್ತದೆ. ನಾನು ಬರೆಯುವುದು ನನ್ನದಾದ್ದರಿಂದ ಅದು ಅಧಿಕೃತವಾದದ್ದೇ ಆದರೂ ಅದು ಕೇವಲ ನನ್ನದು ಮಾತ್ರವಲ್ಲ.. ಅಂದರೆ ಕೇವಲ ವ್ಯಕ್ತಿಗತವಾದುದಲ್ಲ. ಅದು ಇತರ ಎಲ್ಲರಿಗೂ ಸೇರಿದ್ದು. ಬರೆವಣಿಗೆಯಲ್ಲಿ ‘ನಾನು’ ವಿನ ಒಳಗೊಳ್ಳುವಿಕೆಯನ್ನು ಒಪ್ಪುವ ಬ್ಲೇಕ್‌ನಿಗೆ ನಾನು ಹತ್ತಿರ. ಕಥೆಗಾರನಾಗಿ ನನ್ನ ಇನ್ನೊಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಕೆಲವು ಸಮಯ ‘ನಾನು’ ಬರೆಯುತ್ತಿರುವುದು ಕೇವಲ ವ್ಯಕ್ತಿಗತವಾಗಿರುವುದಿಲ್ಲ ಎನ್ನುವುದೊಂದು ಅಪೂರ್ವ ಆಕಸ್ಮಿಕ. ಐತಿಹಾಸಿಕವಾಗಿ ಕೆಲವು ‘ಪಿತೂರಿಗಳೂ’ ಘಟಿಸಿಬಿಟ್ಟಿರುತ್ತವೆ. ನಾನದನ್ನು ‘ಪಿತೂರಿ’ ಎಂದೇ ಒತ್ತುಕೊಟ್ಟು ಕರೆಯುತ್ತಿದ್ದೇನೆ. ಏಕೆಂದರೆ ಇತಿಹಾಸದ ಕೆಲವು ಆಕಸ್ಮಿಕಗಳಿಂದ ನನ್ನದೆಂದು ‘ನಾನು’ ತಿಳಿದದ್ದು ‘ನನ್ನದು’ ಮಾತ್ರ ಆಗಿರುವುದಿಲ್ಲ.

ಇಷ್ಟಾಗಿಯೂ ನನ್ನದೆಂದು ‘ನಾನು’ ತಿಳಿದಿದ್ದನ್ನು ಬರೆಯಬಹುದು. ಇಂಗ್ಲಿಷ್ ಸಾಹಿತ್ಯದಲ್ಲಿ ಡಿ.ಎಚ್. ಲಾರೆನ್ಸ್‌ ‘ಸನ್ಸ್ ಅಂಡ್ ಲವರ್ಸ್‌’ ಕೃತಿಯನ್ನು ಬರೆದಾಗ ಆದದ್ದು ಅದೇ. ಅರವತ್ತರ ದಶಕದಲ್ಲಿ ನಾನು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದೆ. ನಂತರ ನನಗೆ ಆಪ್ತ ಗೆಳೆಯರೂ ಆದ ಮಾರ್ಟಿನ್ ಗ್ರೀನ್ ಅಲ್ಲಿ ನನಗೆ ಅಧ್ಯಾಪಕರಾಗಿದ್ದರು. ಶ್ರಮಿಕ ವರ್ಗದಿಂದ ಬಂದಿದ್ದ ರಿಚರ್ಡ್‌ಹಾಗಾರ್ಟ್ ನನ್ನ ಇನ್ನೊಬ್ಬ ಅಧ್ಯಾಪಕರಾಗಿದ್ದರು. ರಿಚರ್ಡ್ ಹಗಾರ್ಟ್ ಏನಾದರೂ ಆತ್ಮಚರಿತ್ರೆ ಬರೆದಿದ್ದರೆ ‘ಸನ್ಸ್ ಅಂಡ್ ಲವರ‍್ಸ್‌’ಗೆ ಹತ್ತಿರವಾಗಿರುತ್ತಿತ್ತು. ತಾಯಿಯೊಂದಿಗಿನ ಆತನ ಸಂಬಂಧದಲ್ಲಿ ಇದನ್ನು ತಿಳಿಯಬಹುದು. ಆಕೆ ಸಿಗರೇಟು ತರಲು ಮಗನನ್ನೇ ಕಳುಹಿಸುತ್ತಿದ್ದಳು (ಅಗ್ಗದ ಸಿಗರೇಟುಗಳನ್ನು ಆಕೆ ದುಬಾರಿ ಸಿಗರೇಟ್ ಪ್ಯಾಕ್‌ನಲ್ಲಿ ಇಡುತ್ತಿದ್ದಳು.) ಕೆಳವರ್ಗದಿಂದ ಬಂದವರಲ್ಲಿ, ಅವರು ಮೇಲೇರಲು ಬಯಸುವಾಗ ಒಂದು ವಿಧದ ಡಾಂಭಿಕತೆ ಕಾಣಿಸಿಕೊಳ್ಳುತ್ತದೆ. ಇದು ಅತಿಯಾದಾಗ ಆಗುವುದು ಮುಜುಗರ; ಹೇಳಿಕೊಳ್ಳಲಾಗದ ಮುಜುಗರ.

ನಲವತ್ತು ಮತ್ತು ಐವತ್ತರ ದಶಕದಲ್ಲಿ ‘ಸ ನ್ಸ್‌ಅಂಡ್ ಲವರ್ಸ್‌’ ಓದಿದವರಿಗೆ ಅದೊಂದು ದಟ್ಟವಾದ ತಮ್ಮ ಸ್ವಂತದ್ದೇ ಎನ್ನಿಸುವ ಅನುಭವವನ್ನು ಕೊಟ್ಟಿತು. ಅದರ ಓದುಗ ವರ್ಗದಲ್ಲಿ ಶ್ರಮಿಕ ವರ್ಗದ ಬುದ್ಧಿಜೀವಿಗಳು, ಯುವಕರು, red-brick ವಿಶ್ವವಿದ್ಯಾಲಯಗಳಿಂದ ಉತ್ಪಾದಿತರಾದ ದೊಡ್ಡ ಸಂಖ್ಯೆಯ ಜನ, ಮಾಧ್ಯಮಿಕ ಶಾಲೆಗಳ ಉಪಾಧ್ಯಾಯರು – ಎಲ್ಲರೂ ಇದ್ದರು. ಸನ್ಸ್ ಅಂಡ್ ಲವರ‍್ಸ್‌ನಲ್ಲಿ ಲಾರೆನ್ಸ್ ಬರೆದದ್ದು ಲಾರೆನ್ಸ್‌ನ ‘ನಾನೇ’ ಆದರೂ ಅದು ಕೇವಲ ಅವನ ‘ನಾನು’ ಮಾತ್ರ ಆಗಿರಲಿಲ್ಲ. ವರ್ಗ ಸಂಬಂಧಗಳನ್ನು ಮುರಿದು ಜೀವನದಲ್ಲಿ ಮೇಲೆ ಬರುತ್ತಿದ್ದ ಅಸಂಖ್ಯಾತ ಯುವಕರ ‘ನಾನು’ ಕೂಡಾ ಆಗಿತ್ತು. ಕೆಲವು ಪಠ್ಯಗಳಿಗೆ ಹೀಗಾಗುತ್ತದೆ. ಐವತ್ತು-ಅರವತ್ತರ ದಶಕದಲ್ಲಿ ಬರೆದ ನನ್ನದೇ ಕೆಲವು ಬರೆವಣಿಗೆಗಳಲ್ಲಿ ನಾನು ಸೃಷ್ಟಿಸಿದ ಕೆಲವು ಸಂಗತಿಗಳು ಅನೇಕರ ‘ನಾನು’ ಆದದ್ದನ್ನು ಇಲ್ಲಿ ಹೇಳಬಹುದು. ಇದು ನಿರ್ಮಲ್ ವರ್ಮರಿಗೆ ಆಗಿರಬಹುದು, ಭಾರತದ ಅನೇಕ ಬರೆಹಗಾರರಿಗೆ ಆಗಿರಬಹುದು. ಇದು ಉದ್ದೇಶಪೂರ್ವಕವಾಗಿ ಆದದ್ದಲ್ಲ. ಅದೃಷ್ಟವಶಾತ್ ಎನ್ನುವಂತೆ ಆಕಸ್ಮಿಕವಾಗಿ ಇದು ಘಟಿಸುತ್ತದೆ. ಇಲ್ಲದೇ ಹೋದಲ್ಲಿ ನಿಮಗೆ ವಿಚಿತ್ರವಾದ, ಒಂದೇ ಎನ್ನಬಹುದಾದ ‘ನಾನು’ ಒಂದಿದ್ದು ಅದನ್ನು ಮಾತ್ರ ನೀವು ಬರೆದು, ಮನಶ್ಶಾಸ್ತ್ರದ ಅತಿಗೆ ಅದನ್ನು ಒಯ್ದಾಗ ಅದು ಕೇವಲ ಕೇಸ್ ಹಿಸ್ಟರಿ ಆಗಿಬಿಡುತ್ತದೆ. ಆದ್ದರಿಂದ ನಾನುವಿನ ಬಗೆಗೆ ಬರೆದದ್ದು ಕೇಸ್ ಹಿಸ್ಟರಿಯೂ ಆಗಿಬಿಡಬಹುದಾದ ಅಪಾಯ ಕೂಡಾ ಇಲ್ಲಿದೆ.

ಮೈಸೂರಿನ ರೀಜನಲ್ ಕಾಲೇಜಿನಲ್ಲಿ ನಾನು ವಿಭಾಗದ ಮುಖ್ಯಸ್ಥನಾಗಿದ್ದಾಗ ಅಲ್ಲಿನ ಪಠ್ಯಕ್ರಮವನ್ನು ಪುನರ್‌ರೂಪಿಸಿದೆ. ಆ ಪಠ್ಯಕ್ರಮದಲ್ಲಿ ಬೆಳವಣಿಗೆಯ ಬಗೆಗೆ ಇರುವ ಕಾದಂಬರಿಗಳನ್ನು ಸೇರಿಸಿದೆ. ನನಗನ್ನಿಸುತ್ತದೆ ಯಾರಾದರೂ ಅಧ್ಯಾಪಕರಾಗ ಬೇಕೆಂದು ಬಯಸಿದರೆ ಅವರು ಬೆಳವಣಿಗೆಯ ಬಗೆಗಿನ ಕಾದಂಬರಿಗಳನ್ನು ಹೆಚ್ಚಾಗಿ ಓದಬೇಕೆಂದು. ನಾನು ಅಲ್ಲಿ ಅಮೆರಿಕದ ಬಹುಜನಪ್ರಿಯ ಕಾದಂಬರಿ ‘ಕ್ಯಾಚರ್ ಇನ್ ದ ರೈ’ಯನ್ನು ಸೇರಿಸಿದೆ. ಈ ಕಾದಂಬರಿ ನನ್ನೆಲ್ಲ ವಿದ್ಯಾರ್ಥಿಗಳಲ್ಲೂ ಪರಿವರ್ತನೆಯನ್ನೇ ತಂದಿತು. ಇಡೀ ತರಗತಿ ಇದರಿಂದ ವೈಚಾರಿಕವಾಗಿ ಪ್ರಭಾವಿತವಾಯಿತು. ಅವರು ಹೆಚ್ಚು ಪ್ರಾಮಾಣಿಕರೂ ಆತ್ಮಶೋಧಕರೂ ಮತ್ತು ಒಳಬದುಕಿನ ಬಗ್ಗೆ ಎಚ್ಚರವನ್ನು ಪಡೆದ ವಿದ್ಯಾರ್ಥಿಗಳೂ ಆದರು. ಭಾರತದಲ್ಲಿ ವಿಧೇಯತೆ ಒಂದು ಗುಣ. ಒಬ್ಬ ವಿದ್ಯಾರ್ಥಿ ವಿಧೇಯನಾಗಿದ್ದರೆ ಅಧ್ಯಾಪಕರು ಆ ವಿದ್ಯಾರ್ಥಿ ಬಹು ಒಳ್ಳೆಯವನೆಂದು ತಿಳಿಯುತ್ತಾರೆ. ನೀವು ವಿಧೇಯರಾಗಿದ್ದರೆ ನಿಮ್ಮ ಮುಖ್ಯಸ್ಥ ನೀವು ಒಳ್ಳೆಯವರೆಂದು ತಿಳಿಯುತ್ತಾನೆ. ‘ಕ್ಯಾಚರ್‌ಇನ್ ದ ರೈ’ ಇದೆಲ್ಲವನ್ನು ಬದಲಾಯಿಸಿತು.

ಇನ್ನೊಂದು ವಿಚಾರವನ್ನು ಹೇಳಿ ನಾನು ನಿಲ್ಲಿಸುತ್ತೇನೆ. ೧೯೩೦ರ ಯೂರೋಪಿನಂತೆ ಕಷ್ಟದ ದಿನಗಳು ಎದುರಾದಾಗ ನಾವು ಬರೆಯುತ್ತಿರುವುದಕ್ಕೆ ಏನೂ ಮಹತ್ವವೇ ಇಲ್ಲ ಎಂದು ಅನ್ನಿಸಿಬಿಡಬಹುದು. ಏಕೆಂದರೆ ಹಿಟ್ಲರ್‌ ಅಧಿಕಾರದಲ್ಲಿ ಮೇಲಕ್ಕೇರುತ್ತಿದ್ದಂತೆಯೇ ವರ್ಣದ್ವೇಷವೆನ್ನುವುದು ಸಮುದಾಯದ ತುಂಬೆಲ್ಲಾ ಹಬ್ಬಿ ಒಂದು ಬಗೆಯ ದುಷ್ಟ ಹುಚ್ಚುತನ ಆವರಿಸಿಕೊಂಡಿತು. ಇಂಥ ಹೊತ್ತಿನಲ್ಲಿ ನಿಮಗೆ ನಿಮ್ಮ ‘ನಾನು’ವಿಗೆ ಏನೂ ಅರ್ಥವೇ ಇಲ್ಲ ಎಂದು ಅನ್ನಿಸಿಬಿಡಬಹುದು. ಇಂಥ ಹೊತ್ತಿನಲ್ಲಿಯೇ ಕ್ರಿಸ್ಟೋಫರ್ ಇಷರ್‌ವುಡ್‌ಹೇಳಿದ್ದು ‘ನಾನೊಂದು ಕ್ಯಾಮೆರಾ. ನಾನು ‘ನಾನು’ ಅಲ್ಲ. ನಾನು ನನ್ನ passive ‘ನಾನು’ವಿನಿಂದ ನನಗೆ ಕಾಣುತ್ತಿರುವುದನ್ನು ಸೆರೆಹಿಡಿಯುತ್ತೇನೆ ಅಷ್ಟೆ’. ಜಾರ್ಜ್‌ಆರ್ವೆಲ್‌ನಂತಹ ರಾಜಕೀಯ ಹೋರಾಟಗಾರನಾಗಿ ಸಕ್ರಿಯವಾಗಿದ್ದ ಅವನ ‘ನಾನು’ ಕೂಡಾ ಕಾದಂಬರಿಕಾರನಾಗಿ ಅಸಹಾಯಕ. ಆತ ಹೇಳಿದ ‘ನಿಮ್ಮ ಸುತ್ತ ಘಟಿಸುತ್ತಿರುವುದನ್ನು ಗಮನಿಸಿ ಮತ್ತು ದಾಖಲಿಸಿ.’ ನೀವು ಆತನ Wigan pier ಅಥವಾ ಸ್ಪೇನಿನ ನಾಗರಿಕ ಯುದ್ಧದ ಬಗೆಗೆ ಬರೆದಿರುವ ಅತ್ಯುತ್ತಮ ಕೃತಿಯನ್ನು ಓದಿದರೆ ಪತ್ರಿಕಾ ಬರೆವಣಿಗೆಯೂ ಕ್ರಿಯಾಶೀಲವಾಗುವ ಬಗೆಯನ್ನು ಕಾಣಬಹುದು. Malraux ಕೂಡಾ ಇದನ್ನು ಮಾಡಿದ್ದಾನೆ. ಆದರೆ ಕುತೂಹಲಕರವಾದ ಅಂಶವೆಂದರೆ ಕ್ಯಾಮೆರಾ ಕೂಡಾ ತನಗೆ ಬೇಕಾದ ಕೋನವನ್ನು ಆರಿಸಿಕೊಳ್ಳುತ್ತದೆ. ಬೇರೆಯದನ್ನು ಆರಿಸಿಕೊಳ್ಳಬಹುದಾದರೂ ಆ ಆಯ್ಕೆಯಾದ ಕೋನವನ್ನೇ ನೀವು ಒಪ್ಪಿಕೊಳ್ಳುತ್ತೀರಿ. ಕ್ಯಾಮೆರಾಗೆ ಕೂಡಾ ‘ನಾನು’ ಇದೆ. ಆದರೆ ಅದರ ‘ನಾನು’ ಬ್ಲೇಕ್‌ನಲ್ಲಿ ಆಗುವಂತೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವುದಿಲ್ಲ. ಎರಡು ಪದ್ಯಗಳನ್ನು ತೆಗೆದುಕೊಳ್ಳೋಣ.

ಬ್ಲೇಕನ್‌ ‘ಲಂಡನ್‌’ ಎಲಿಯಟ್‌ನ ‘ವೇಸ್ಟ್‌ಲ್ಯಾಂಡ್’. ಎಲಿಯಟ್‌ನ ಕವಿತೆ ಸಂಗತಿಗಳನ್ನು ಒಟ್ಟು ಮಾಡುವ, ವೇಗವರ್ಧಕ ಕ್ರಿಯಾಶೀಲವಾಗಿರುವ ಮಾದರಿಯಲ್ಲಿದ್ದರೆ, ಬ್ಲೇಕ್‌ನ ಕವಿತೆಯಲ್ಲಿ when I roamed from street to street ಎಂಬಲ್ಲಿ ‘ನಾನು’ ಕಾಣುವುದರಲ್ಲಿ ಒಳಗೊಂಡು ಸಂಕಟಪಡುವ ‘ನಾನು’ ಕೂಡ ಆಗಿರುವುದರಿಂದ ಅದೊಂದು ಶ್ರೇಷ್ಠ ಕವಿತೆಯಾಗಿದೆ. ಎಲಿಯಟ್‌ನ ಪದ್ಯಕ್ಕೆ ಹೋಲಿಸಿದರೆ ಇದೊಂದು ಸಣ್ಣ ಪದ್ಯ. ಆದರೆ ಆತ ಅಲ್ಲಿ ವರ್ಣಿಸುತ್ತಿರುವುದೂ ಒಂದು ಬಂಜರು ಭೂಮಿಯನ್ನೇ. (ಈ ಒಳನೋಟಕ್ಕಾಗಿ ನಾನು ಎಫ್‌.ಆರ್. ಲೀವಿಸ್‌ಗೆ ಆಭಾರಿಯಾಗಿದ್ದೇನೆ.)

ಆದರೆ ಕುತೂಹಲಕಾರಿ ಸಂಗತಿಯೆಂದರೆ ಇತರ ದಾರ್ಶನಿಕರಂತೆ ಬ್ಲೇಕ್‌ಕೂಡಾ ದೈವ ಅದನ್ನು ತನಗೆ ಹೇಳಿ ಬರೆಯಿಸಿತೆಂದು ಹೇಳುತ್ತಾನೆ. ಆದರೆ ನಾವು ಮರೆಯ ಬಾರದ ಸಂಗತಿ ಎಂದರೆ ದೈವ ನಿರ್ದೇಶಿಸಿದ್ದನ್ನು ಕವಿ ಕರ್ಮಿಯಾದ ಬ್ಲೇಕ್ ತಿದ್ದುವುದು ಕೂಡ ಅಗತ್ಯವಾಗಿತ್ತು ಎನ್ನುವುದು!

(೨೦೦೭, ಜೈಪುರ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ)
ಅನುವಾದ : ಎಂ.ಎನ್. ಆಶಾದೇವಿ

* * *