ವರ್ಡ್ಸ್‌ವರ್ಥ್ ಮತ್ತು ಆತನ ಸ್ನೇಹಿತ ಕೋಲ್ರಿಜ್‌ ಇಬ್ಬರೂ ಸೇರಿ ಲಿರಿಕಲ್ ಬ್ಯಾಲೆಡ್ಸ್‌ ಎನ್ನುವ ಕವನ ಸಂಕಲನವನ್ನು ಪ್ರಕಟಿಸುವುದರ ಮೂಲಕ ಒಂದು ಹೊಸ ಕ್ರಾಂತಿ ಮಾಡಿದರು. ಈ ಇಬ್ಬರ ಮನೋಧರ್ಮಗಳೂ ಬೇರೆ ಬೇರೆ. ಯಾವ ದೊಡ್ಡ ಸಾಹಿತ್ಯ ಚಳವಳಿ ನೋಡಿದರೂ ಕೆಲವರು ಒಟ್ಟಿಗೆ ಇರುವ ಹಾಗೆ ಕಂಡರೂ ಅವರು ದೊಡ್ಡ ಕವಿಗಳಾದರೆ ಮನೋಧರ್ಮದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಒಟ್ಟಾರೆ ಸಮಾನ ಯುಗಧರ್ಮದಲ್ಲಿ ಅವರು ಪಾಲುದಾರರಾಗಿರುತ್ತಾರೆ. ಸಾಹಿತ್ಯದ ವಿದ್ಯಾರ್ಥಿಗಳು ಕುತೂಹಲ ಕಳೆದುಕೊಳ್ಳದಂತೆ ಎಚ್ಚರದಲ್ಲಿ ಈ ವ್ಯತ್ಯಾಸಗಳನ್ನು ಗಮನಿಸಬೇಕು. – ಅನೇಕ ಸಲ ಸಮಾನವಾದದ್ದನ್ನು ನೋಡುತ್ತೇವೆ, ಅಸಮಾನವಾದದ್ದನ್ನು ನೋಡುವುದಿಲ್ಲ. ಅಸಮಾನವಾದದ್ದನ್ನು ನೋಡುವ ಉಮೇದಿನಲ್ಲಿ ಸಮಾನವಾದದ್ದನ್ನು ನೋಡುವುದಿಲ್ಲ.

ನಮ್ಮಲ್ಲಿ ಬೇಂದ್ರೆ ಇದ್ದಾರೆ. ಕುವೆಂಪು ಇದ್ದಾರೆ. ಪುತಿನ ಇದ್ದಾರೆ. ಮೂವರೂ ಒಂದೇ ಕಾಲದಲ್ಲಿ ದೊಡ್ಡ ಕವಿಗಳು. ಆದರೆ ಮೂರು ಜನ ಒಬ್ಬರ ಹಾಗೆ ಒಬ್ಬರಲ್ಲ. ಅವರ ಮನೋಧರ್ಮಗಳಲ್ಲಿ ಅಷ್ಟೊಂದು ವ್ಯತ್ಯಾಸ. ಆದರೆ ಅವರಿಗೆ ಸಮಾನವಾದದ್ದು; ಆ ಕಾಲದ ಧರ್ಮ, ಯುಗ ಧರ್ಮ. ಆ ಯುಗ ಧರ್ಮವನ್ನು ಬೇರೆ ಬೇರೆ ಕವಿಗಳು ಬೇರೆ ಬೇರೆ ರೀತಿಯಲ್ಲಿ ಸ್ವೀಕರಿಸುತ್ತಾರೆ. ಅದರ ಜೊತೆಗೆ ಬೇರೆ ಬೇರೆ ಹೇಳಿದ ಹಾಗೆ ಕಂಡರೂ ಎಲ್ಲರೂ ಕೂಡಿ ಯಾವುದೋ ಒಂದನ್ನು ಹೇಳುತ್ತಾರೆ ಎನಿಸುತ್ತದೆ. ನನ್ನ ಸ್ನೇಹಿತ ಶಾಂತಿನಾಥ ದೇಸಾಯಿ ಹೇಳುತ್ತಿದ್ದಂತೆ – ‘ನಾವೆಲ್ಲ ಬೇರೆ ಬೇರೆ ಬಗೆಯ ಲೇಖಕರು, ಎಲ್ಲರೂ ಕೂಡಿ ಯಾವುದೋ ಒಂದು ಕೆಲಸ ಮಾಡುತ್ತಿರುತ್ತೇವೆ. ನಾನು ಮಾಡದೇ ಇದ್ದಿದನ್ನು ನೀನು ಮಾಡುತ್ತಿರುತ್ತೀಯ, ನೀನು ಮಾಡದೇ ಇದ್ದದ್ದನ್ನ ನಾನು ಮಾಡುತ್ತಿರುತ್ತೇನೆ. ಹಾಗಾಗಿ ಆ ಯುಗಕ್ಕೆ ಬೇಕಾದ ಎಲ್ಲವೂ ಅವರ ಮುಖಾಂತರ ಲಭ್ಯವಾಗುತ್ತದೆ.’

೨೦ನೇ ಶತಮಾನದ ಕನ್ನಡ ಸಾಹಿತ್ಯ ನೋಡಿದರೆ ಎಷ್ಟು ವೈವಿಧ್ಯಮಯ ಲೇಖಕರು ಬಂದಿದ್ದಾರೆ ಅಂತ ಗೊತ್ತಾಗುತ್ತದೆ. ನಮ್ಮಲ್ಲಿ ಇದ್ದ ಎಲ್ಲಾ ಪರಂಪರೆಗಳನ್ನು ಉಪಯೋಗಿಸಿಕೊಳ್ಳುವವರಿದ್ದರು. ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ಅಲ್ಲಿ ಬರೆಯುತ್ತಿದ್ದ ವಿಮರ್ಶಕರು ಹೆಚ್ಚು ಕನ್ನಡ ಪಂಡಿತ ಪರಂಪರೆಗೆ ಸೇರಿದವರು. ಆಧುನಿಕ ವಿದ್ಯಾಭ್ಯಾಸ ಪಡೆದಿದ್ದರೂ ಇಂಗ್ಲಿಷ್‌ನಲ್ಲಿರುವ ವಿಚಾರಗಳಲ್ಲಿ ಉದಾಸೀನರು. ಮೈಸೂರಿಗೆ ಬಂದರೆ ಬಿ.ಎಂ. ಶ್ರೀಕಂಠಯ್ಯನವರು ಇಂಗ್ಲಿಷ್‌ಪ್ರೊಫೆಸರ್ ಆಗಿದ್ದು ಕನ್ನಡದಲ್ಲಿ ಪಾಠ ಮಾಡುತ್ತಿದ್ದರು. ಅವರು ಇಂಗ್ಲಿಷ್ ಪದ್ಯಗಳನ್ನು ಪಾಠ ಮಾಡುತ್ತಲೇ ಅವನ್ನು ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದರು ಅಂತ ಕೇಳಿದ್ದೆ. ಅವರ ಸುತ್ತಮುತ್ತ ಬಂದ ಕುವೆಂಪು, ವಿಸೀ, ಮುಂತಾದವರು ಪಾಶ್ಚಾತ್ಯ ಸಾಹಿತ್ಯಕ್ಕೆ ಹೆಚ್ಚು ಮನ ತೆರೆದವರು. ಧಾರವಾಡದ ಕಡೆ ಹೋದರೆ ಗೆಳೆಯರ ಬಳಗದಲ್ಲಿ ಬೇಂದ್ರೆ, ಮಧುರ ಚೆನ್ನರು ಅನುಭಾವ ಪರಂಪರೆಯ ನಮ್ಮ ಜಾನಪದಕ್ಕೆ ಹೆಚ್ಚು ಸ್ಪಂದಿಸುತ್ತಾ ಬೇರೆ ರೀತಿಯಲ್ಲಿಯೇ ಆ ಯುಗಧರ್ಮವನ್ನು ರೂಪಿಸಿದ್ದಾರೆ.

* * *

ನಾನಿಲ್ಲಿ ಸಮಾನ ಅಂಶಗಳಿರುವ ಕೆಲವು ಪದ್ಯಗಳನ್ನು ನಿಮಗೆ ಪರಿಚಯಿಸುತ್ತೇನೆ. ಇವೆಲ್ಲವುಗಳಲ್ಲಿರುವ ಸಮಾನ್ಯವಾದ ವಿಷಯವೆಂದರೆ ‘ದುಃಖ’. ಇಂಗ್ಲಿಷ್‌ನಲ್ಲಿ ನಮಗೆ ವಿಶೇಷ ಅರ್ಥಗಳನ್ನು ಹೊಮ್ಮಿಸುವ ‘ದುಃಖ’ ಪದವಿಲ್ಲ. ಗೌತಮ ಬುದ್ಧ ಆ ಶಬ್ದವನ್ನು ಉಪಯೋಗಿಸಿದಾಗ ದುಃಖ ಅಂದರೆ ಏನೋ ಒಂದು ವೈಯಕ್ತಿಕವಾದ ತರಲೆ, ತಾಪತ್ರಯವಾಗಿ ಉಳಿಯಲಿಲ್ಲ. ದುಃಖ ಅಂದರೆ ಇಡೀ ಜಗತ್ತಿನ ಜೀವನದ ಮೂಲದಲ್ಲಿಯೇ ಇರುವ ಸ್ಥಿತಿಯಾಯಿತು.

ಇದನ್ನು ವಿವರಿಸಲು ಬೇರೆ ಬೇರೆ ಶಬ್ದಗಳಿವೆ. ವಿಷಾದ ಎಂಬುದು ಒಂದು; ವ್ಯಾಕುಲ ಅನ್ನುವ ಶಬ್ದ ಇನ್ನೊಂದು. ನಾವು ‘melancholy’ ಎಂಬುದನ್ನು ಬಹುಶಃ ವ್ಯಾಕುಲ ಅನ್ನಬಹುದು. ಆದರೆ ವಿಷಾದ ಅನ್ನೋ ಶಬ್ದವನ್ನು ಬಹಳ ಘನವಾದ ಅರ್ಥದಲ್ಲಿ ಉಪಯೋಗಿಸಿದ ಒಂದು ಪಠ್ಯ ಇದೆ. ಅದೇ ಭಗವದ್ಗೀತೆ. ಅದರ ಮೊದಲನೆಯ ಅಧ್ಯಾಯದಲ್ಲಿ ಅರ್ಜುನ ಇದ್ದಕ್ಕಿದ್ದ ಹಾಗೆಯೇ ತನ್ನ ನೆಂಟರಿಷ್ಟರನ್ನು ನೋಡಿ, ನಾನು ಯುದ್ಧ ಮಾಡುವುದಿಲ್ಲ ಅನ್ನುತ್ತಾನೆ. ಯಾಕೆ ಮಾಡಬೇಕು ಯುದ್ಧವನ್ನು? ಏನು ಪ್ರಯೋಜನ ಅದರಿಂದ? ಎಂದು ಕೇಳುತ್ತಾನೆ. ಆ ಅಧ್ಯಾಯ ಕೊನೆಯಾಗುವಾಗ ಅದನ್ನು ವಿಷಾದಯೋಗ ಅಂತ ಗೀತಾಕಾರ ಹೆಸರಿಸುತ್ತಾನೆ. ಅಂದರೆ ಅರ್ಜುನ ಇರುವ ಸ್ಥಿತಿ ವಿಷಾದ ಯೋಗದ ಸ್ಥಿತಿ. ಯೋಗ ಅನ್ನುವುದು ಕೂಡ ನಮ್ಮೊಳಗಿರುವ ಯಾವುದೋ ಆಳವನ್ನು ನಾವು ಮುಟ್ಟಿ, ಅದಕ್ಕೆ ಹತ್ತಿರವಾಗುವುದು. ಅಲ್ಲಿ ಅರ್ಜುನ ಆ ವಿಷಾದಯೋಗದ ಸ್ಥಿತಿಯಲ್ಲಿ ಇರುವುದರಿಂದಲೇ ಅವನಿಗೆ ಹೊಸದೇನನ್ನೋ ಕಲಿಯುವುದು ಕೂಡ ಸಾಧ್ಯವಾಗುತ್ತೆ. ಈ ವಿಷಾಧಯೋಗವೂ ಶುದ್ಧವಾದ ಸಂವೇದನೆಯಲ್ಲ. ತನ್ನವರನ್ನು ಕೊಲ್ಲಬಾರದು ಎನ್ನುವ ವ್ಯಾಮೋಹ ಅದರಲ್ಲಿ ಕಾಣದಂತೆ ಅಡಗಿದೆ. ಅದನ್ನು ಅರ್ಜುನನಿಗೆ ಕಾಣಿಸುವವನು ಕೃಷ್ಣ. ಈ ಸಂವಾದ ತರುವ ತೀವ್ರತೆ ಕಲಿಕೆಗೆ, ಹೊಸ ಅನುಭವಕ್ಕೆ ಅಗತ್ಯವಾದ ಒಂದು ಸ್ಥಿತಿ.

ಈ ಬಗೆಯಲ್ಲಿ ಚುರುಕುಗೊಂಡ ದುಃಖವನ್ನು ವಿಷಾದಯೋಗ ಎಂದು ಗೀತೆ ಕರೆಯುವುದು. ಜೀವನದ ಅರ್ಥ ಏನು? ಯಶಸ್ಸಿನ ಅರ್ಥವೇನು? ಎಂದು ಅರ್ಜುನ ಕೇಳುತ್ತಾನೆ ವ್ಯಾಮೋಹದಲ್ಲೂ; ಜ್ಞಾನಾರ್ಥಿಯಾಗಿ ಈ ಪ್ರಶ್ನೆಗಳನ್ನು ಅರ್ಜುನ ಕೇಳುತ್ತಾನೆ- ಇದು ಗಮನಿಸಬೇಕಾದ್ದು. (ಗೀತೆಯಲ್ಲಿ ವಿಶ್ವರೂಪ ದರ್ಶನ ಪಡೆದ ಅರ್ಜುನ, ಮಹಾಭಾರತದಲ್ಲಿ ಮುಂದೆ ಅವನ ಸ್ವಭಾವ ಕರ್ಮಗಳಿಗೆ ಅನುಸಾರವಾಗಿಯೇ ನಡೆದುಕೊಳ್ಳುತ್ತಾನೆ. ‘ಯಥೇಚ್ಚಸಿ ತಥಾ ಕುರು’ ದರ್ಶನದ ನಂತರ ಭಗವಂತನೇ ಹೇಳುವ ಮಾತು ಇದು. ‘ನಿನಗೆ ಇಷ್ಟಬಂದಂತೆ ನಡೆದುಕೊ’)

ಎಲ್ಲಾ ಮುಖ್ಯ ಕವಿಗಳೂ ವಿಷಾದಯೋಗದ ಅನುಭವ ಪಡೆದವರು. ಅವರು ಅನುಭವಿಸುವ ಪಾಡಿಗೆ ಅವರು ಒಂದು ಆಕೃತಿ ಒದಗಿಸಿಕೊಡುತ್ತಾರೆ. ವಡ್ಸ್‌ವರ್ತ್‌ನ ಎಲ್ಲ ಪದ್ಯಗಳಲ್ಲೂ ಒಂದು ಆಕೃತಿ ಇದೆ. ಇದೊಂದು ಬಗೆಯ ‘ಡಬಲ್ ಎಕ್ಸ್‌ಪೋಜರ್’ ಅನ್ನಬಹುದು. ಚಿತ್ರದ ಮೇಲೊಂದು ಚಿತ್ರ. ಕಾಣಲು ಆರಿಸಿಕೊಂಡಿದ್ದರೆ ಹಿಂದೆ ಮಸುಕು ಮಸುಕಾದ ಇನ್ನೊಂದು ಚಿತ್ರ. ಕಾಣುವಿಕೆಯಲ್ಲಿ ಸ್ಪಷ್ಟವೆನಿಸಿದ್ದು ಇನ್ನೊಮ್ಮೆ ಮಸುಕು ಎನ್ನಿಸಬಹುದು. ಬೆಂಕಿ ಪೊಟ್ಟಣದಂತೆ ಇದ್ದೂ ಅದೇ ಕಾಲದಲ್ಲಿ ಆಮೆಯಂತೆ ಕಾಣಿಸುವ ಕಾವ್ಯ ಭಾಷಾ ಪ್ರಯೋಗದ ಬಗ್ಗೆ ಗದ್ಯದ ಖಚಿತತೆಗೂ ಬದ್ಧತೆಗೂ ತನ್ನನ್ನು ಒಡ್ಡಿಕೊಂಡು ಸಾರ್ತ್ರ್ ಮಾತನಾಡುತ್ತಾನೆಂದು ನೆನಪು.

* * *

ಈ ಪ್ರಕ್ರಿಯೆಯಲ್ಲಿ ತರ್ಕಮಾತ್ರ ಇರುವುದಿಲ್ಲ; ಕಾಣುವಿಕೆಯ aura.- ಪ್ರಭೆ ಇರುತ್ತದೆ. ನಿತ್ಯದಲ್ಲಿ ಕಾಣುವ ನಿಜಕ್ಕೂ ಮೀರಿದ ನಿಜ ಇದ್ದಕ್ಕಿದ್ದಂತೆ ಹೊಮ್ಮುವ ಈ ವಿಸ್ಮಯದಲ್ಲಿ aura ಇರುತ್ತದೆ; ಆದರೆ ಕ್ಷಣಿಕವಾದ ಈ ವಿಸ್ಮಯ ಮರೆಯಾಗಿಬಿಡುವ ವಿಷಾದ- ಎರಡೂ ಕಾವ್ಯದ ತಿರುಳು. ಥಟ್ಟನೇ ಸತ್ಯದರ್ಶನವಾಗುವ epiphany- ಎಪಿಫನಿ – Wordsworth, Joyce, Blake ರಲ್ಲಿ ಕಾಣುವುದು ಉಂಟು. ಹಾಗೆಯೇ ನಿತ್ಯದ ಸಾಧಾರಣದ ಬೆಳಕಿನಲ್ಲಿ ಇದು ಮರೆಯಾಗುವ ವಿಷಾದವೂ ಉಂಟು. ಎರಡೂ ‘ಡಬಲ್ ಎಕ್ಸ್‌ಪೋಷರ್ ಆಗಿ ನಮಗೆ ಎದುರಾಗುತ್ತವೆ.

* * *

ಈ ಅನುಭವ ಬೆಟ್ಟದ ಪ್ರದೇಶದಲ್ಲಿರುವವರಿಗೆ ವಿಶೇಷವಾಗಿ ಆಗುತ್ತೆ ಅಂತ ಕೋಲ್ರಿಜ್ ಒಂದು ಕಡೆ ಹೇಳುತ್ತಾನೆ. ನೀವು ಬೆಟ್ಟ ಹತ್ತುವಾಗ ತುಂಬಾ ಮಂಜು ಮುಸುಕಿದ್ದರೆ, ಬಿಸಿಲು ಬೀಳುತ್ತಾ ಇದ್ದರೆ ನಾವು ನಮ್ಮ ರೂಪವನ್ನೇ ನೆರಳಾಗಿ ಮುಂದೆ ಕಾಣುತ್ತಾ ಅದರ ಸುತ್ತ ಒಂದು ಪ್ರಭಾವಳಿಯನ್ನು ಕಾಣುತ್ತೇವೆ. ನಾವು ಬರೀ ಮೈ ಅಲ್ಲದೆ, ಇನ್ನೇನೋ ಅನ್ನುವ ಹಾಗೆ. ಎಲ್ಲ ಕವಿಗಳಿಗೂ ಈ ವಿಸ್ಮಯವಿದೆಯಲ್ಲ, ಅದು ಬಹಳ ಮೂಲಭೂತವಾದ್ದು. ವಿಸ್ಮಯ ಇಲ್ಲದೇ ಇರುವವನು ಕವಿ ಆಗುವುದೇ ಇಲ್ಲ. ಹಾಗೆಯೇ ಬಹಳ ದೊಡ್ಡ ಕಾದಂಬರಿಕಾರನಿಗೂ ಕೂಡ ಅವನ ಹಿಂದೆ ಒಂದು ವಿಸ್ಮಯ ಇಲ್ಲದೇ ಇದ್ದರೆ, ಎಲ್ಲವೂ ತನಗೆ ಗೊತ್ತಿದೆ ಅಂತ ತಿಳಿದುಕೊಳ್ಳುವವನಾದರೆ ಅವನು ಬರೀ Essay ಬರೆಯುತ್ತಾನೆ.

ವರ್ಡ್ಸ್‌ವರ್ಥ್‌‌ನ ಸಮಸ್ಯೆ ಇದು: ‘ನನಗೆ ಬಾಲ್ಯದಲ್ಲಿದ್ದ ವಿಸ್ಮಯ ಯಾಕೆ ಈಗ ಹೋಯ್ತು? ಯಾಕೆ ಈಗ ಇಲ್ಲ?’ ಆವತ್ತಿನ ಉತ್ಸಾಹ ಇಲ್ಲ, ಲವಲವಿಕೆ ಇಲ್ಲ, ಆದರೆ ಆಗ ಇಲ್ಲದ ಒಂದು ವಿವೇಕ ನನ್ನಲ್ಲಿ ಬಂದಿದೆ. ಅದು ನನ್ನನ್ನು ಇಂದಿಗೂ ಕಾಪಾಡ್ತಾ ಇದೆ. ಆವತ್ತಿನ ಹಾಗೆ ನನ್ನ ಮನಸ್ಸು ಚಿಮ್ಮದೇ ಇರಬಹುದು. ಚಿಮ್ಮುವ ಶಕ್ತಿಯನ್ನು ಅದು ಕಳೆದುಕೊಂಡಿದೆ. ಆದರೆ ಅದು ಒಂದು ರೀತಿಯ ನೆಮ್ಮದಿಯ ಸ್ಥಿತಿಯನ್ನು ಪಡೆಯಬಲ್ಲದು. ಕಳೆದು ಹೋದ ವಿಸ್ಮಯವನ್ನು ನೆಮ್ಮದಿಯ ಕೃತಜ್ಞತೆಯಲ್ಲಿ ನೆನೆಯಬಹುದು ಎಂದು ವರ್ಡ್ಸ್‌ವರ್ತ್ ಹೇಳ್ತಾನೆ.

ಇದು ಕೇವಲ ‘ಪಟ್ಟುಕೊಳ್ಳುವ’ ಸಮಾಧಾನವೆ? ಹೊಂದಿಕೊಂಡುಹೋಗುವ ಮನಸ್ಸಿನ ಮುಪ್ಪು ಇರಬಹುದೆ ಎಂಬ ಸಂಶಯವೂ ಅವನನ್ನು ಕಾಡುತ್ತದೆ. ವಿಸ್ಮಯ, ವಿವೇಕಗಳ ಎರಡು ಸ್ಥಿತಿಗಳೂ ವಿಷಾದಯೋಗದ ಮಜಲುಗಳಾಗಿ ಕಾಣಿಸಿಕೊಳ್ಳುತ್ತವೆ.

ಕ್ರೋಲ್ರಿಜ್ ಅದಕ್ಕಿಂತ ಭಿನ್ನ.

O Lady! we receive but what we give,
And in our life alone does Nature live:
Ours is her wedding-garment, ours her shroud!
And would we aught behold, of higher worth,
Than that inanimate cold world allowed
To the poor loveless ever-anxious crowd,
Ah! from the soul itself must issue forth
A light, a glory, a fair luminous cloud
Enveloping the Earth-
And from the soul itself must there be sent
A sweet and potent voice, of its own birth,
Of all sweet sounds the life and element !

ನಿಸರ್ಗದ ಎದುರು ನಾನು ವಿಸ್ಮಿತ ಅಂದರೆ ಅದು ಇರೋದು ನಿಸರ್ಗದಲ್ಲಿ ಅಲ್ಲ; ನನ್ನಲ್ಲೇ ಎಂದು ಅವನ ಮತ. ನನ್ನ ಒಳಗಿಂದ ಹೊರಗೆ ನೋಡ್ತೀನಿ. ನನ್ನ ಒಳಗಡೆನೇ ಆ ಶಕ್ತಿ ಕುಂದಿ ಹೋಗಿಬಿಟ್ಟರೆ ಹೊರಗೆ ಏನೂ ಕಾಣಿಸೊಲ್ಲ. ಹೊರಗಿರುವುದೆಲ್ಲ ಒಂದು ರಸಹೀನ ನಿತ್ಯ ವಸ್ತು ಮಾತ್ರ. ಆದ್ರೆ ವರ್ಡ್ಸ್‌ವರ್ಥ್‌ಗೆ ಅಲ್ಲೇ ಏನೋ ಇದೆ, ಅದು ದೇವರ ಸೃಷ್ಟಿ ಅಂತ ಅನಿಸುತ್ತೆ.

೧೯ನೇ ಶತಮಾನದ ಕವಿಗಳಲ್ಲಿ ಪ್ರತಿಯೊಬ್ಬ ದೊಡ್ಡ ಕವಿಯೂ ಅವರ ಕ್ರಿಶ್ಚಿಯನ್ ಮತದ ಆಲೋಚನೆಗಿಂತ ಭಿನ್ನ ಆಲೋಚನೆ ಮಾಡುತ್ತಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಪೂರ್ವಜನ್ಮ ಮತ್ತು ಪುನರ್ಜನ್ಮ ಅನ್ನೋದಿಲ್ಲ. ಪೂರ್ವಜನ್ಮ ಮತ್ತು ಪುನರ್ಜನ್ಮ ಇರೋದು ಭಾರತೀಯ ಯೋಚನೆಯಲ್ಲಿ ಮತ್ತು ಕೆಲವು ಟ್ರೈಬಲ್ ಧರ್ಮಗಳ ಯೋಚನೆಯಲ್ಲಿ ಮಾತ್ರ ಬೌದ್ಧರಿಗೂ ಪುನರ್ಜನ್ಮ ಇದೆ, ಜೈನರಿಗೂ ಇದೆ, ವೈದಿಕ ಯೋಚನೆಯಲ್ಲೂ ಇದೆ. ಕ್ರಿಶ್ಚಿಯಾನಿಟಿ, ಇಸ್ಲಾಂನಲ್ಲಿ ಅದಿಲ್ಲ. ಆದರೆ ವರ್ಡ್ಸ್‌ವರ್ತ್‌ಗೆ ಒಂದು ನಂಬಿಕೆ ಇತ್ತು. ನಾನು ಹುಟ್ಟುವಾಗಿನಿಂದ ಕಳೆದುಕೊಳ್ಳುತ್ತಾ ಹೋದ ದೈವಸಾನ್ನಿಧ್ಯದ ಸ್ಮೃತಿಗಳೆಲ್ಲವೂ ನಾನು ಬೆಳೆಯುತ್ತಾ ಬೆಳೆಯುತ್ತಾ ಸಾವಿಗೆ ಹತ್ತಿರವಾಗ್ತಾ ಹೋದ ಹಾಗೆ ಇನ್ನಷ್ಟು ಕಳೆದುಕೊಳ್ಳುತ್ತಾ  ಹೋಗುತ್ತೇನೆ. ಅಂದರೆ ಶೈಶವಾವಸ್ಥೆ ಎಂಬುದು ದೈವಕ್ಕೆ ಅತ್ಯಂತ ಹತ್ತಿರವಾದ ಒಂದು ಸ್ಥಿತಿ.

Like trailing clouds of glory
Do we come from God
Who is our home

ಇಂಗ್ಲಿಷ್‌ನಲ್ಲಿ ಹೋಂ ಅನ್ನೋ ಶಬ್ದ ಬಹಳ ಮುಖ್ಯವಾದದ್ದು. ಹೋಂ ಅಂದ್ರೆ ಹೌಸ್ ಅಲ್ಲ, ಹೋಂ ಅಂದ್ರೆ ‘ತವರು’. ನಾವು ನಿಧಾನಕ್ಕೆ ತವರಿನಿಂದ ದೂರವಾಗುತ್ತಾ ಬೆಳೆದು ಆರ್ಡಿನರಿ ಆಗಿಬಿಡ್ತೇವೆ. ಮತ್ತೆ ನಮ್ಮನ್ನು ಪುನಶ್ಚೇತನಗೊಳಿಸುವುದು ಪ್ರಕೃತಿ. ಆ ಪ್ರಕೃತಿಯ ಜೊತೆಯ ಒಡನಾಟದಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೋ ಅದನ್ನು ಮತ್ತೆ ಗಳಿಸುತ್ತಾ ಹೋಗುತ್ತೇವೆ.

ಆದರೆ ಪ್ರಕೃತಿ ದೇವರಾಗಲಾರದು – ಕೊನೆಗೂ ಈ ಕವಿ ಕ್ರೈಸ್ತನೇ. ಪ್ರಕೃತಿಯನ್ನು ಅವನು ‘ಸಾಕು ತಾಯಿ’ ಎಂದು ಕರೆಯುತ್ತಾನೆ. ಸೂಫಿಗಳಷ್ಟು ಈ ಕ್ರೈಸ್ತಕವಿಗಳು ಅದ್ವೈತಿಗಳಲ್ಲ.

ಬ್ರೌನಿಂಗ್ ಅಂತ ಒಬ್ಬ ಕವಿ ಇವರ ನಂತರ ಬರುತ್ತಾನೆ. ಅವನಂತೂ ವಯಸ್ಸಾಗುವ ಪ್ರಕ್ರಿಯೆಯನ್ನು ಗಳಿಸಿಕೊಳ್ಳುವ ಪ್ರಕ್ರಿಯೆ ಎಂಬು ಭಾವಿಸುತ್ತಾನೆ. ಕಳೆದುಹೋದದ್ದನ್ನು ಗಳಿಸಿಕೊಳ್ಳುವ ಪ್ರಕ್ರಿಯೆ ಎಂದು ಅವನು ಹೇಳುತ್ತಾನೆ. ಅವನ ಒಂದು ಪದ್ಯದ ಇದೆ.

Grow old along with me
the best is yet to be
the last of life for which the first was made….

ಈ ಕಾಲದ ಪ್ರಗತಿಯ ಸರಳ ಕಲ್ಪನೆ ವರ್ಡ್ಸ್‌ವರ್ಥ್‌‌ಗೆ ವಿರುದ್ಧವಾದುದು. ನನ್ನ ಜೊತೆಗೆ ನೀನೂ ಮುದುಕ ಆಗು. ಅತ್ಯುತ್ತಮವಾದ್ದು ಇನ್ನೂ ಕಾದಿದೆ ಇನ್ನೂ ಕಾದಿದೆ. ಹೀಗೆ ಬ್ರೌನಿಂಗ್ ಒಳಗಡೆ ಯಾವ ಯಾತನೆಯೂ ಇಲ್ಲದೆ ಯಾವ ವಿಷಾದವೂ ಇಲ್ಲದೆ ಯಾವ ಅನುಮಾನವೂ ಇಲ್ಲದೆ ಸಾರುತ್ತಾನೆ. ಇವನನ್ನು ರೋಬಸ್ಟ್ ಆದ ಕವಿ, ಗಟ್ಟಿಮುಟ್ಟಾದ ಕವಿ ಅನ್ನುವವರು ಇದ್ದಾರೆ. ವಿಕ್ಟೋರಿಯನ್ ಕಾಲದ ಪ್ರಭುತ್ವಕ್ಕೆ ಈ ಆಶಾವಾದ ಲಾಭದಾಯಕವೂ ಆಗಿತ್ತು – ಸಾಮ್ರಾಜ್ಯದ ವಿಸ್ತರಣೆಯ ಕಾಲ ಅದು ಬ್ರಿಟನ್ನಿಗೆ. ವಿಮರ್ಶಕನೊಬ್ಬ (ಲೀವಿಸ್) ಹೇಳುತ್ತಾನೆ- ಅವನು ಕೊಂಚ ಕಡಿಮೆ ‘ರೋಬಸ್ಟ್’ ಆಗಿದ್ದರೆ ಹೆಚ್ಚ ‘ಸೆನ್ಸಿಟಿವ್’ ಆಗಿರುತ್ತಿದ್ದ ಎಂದು.

ಬಹಳ ಜಾನಾಗಿ ಬಿಟ್ಟರೂ ಸ್ಪಂದನಶೀಲತೆ ಇರುವುದಿಲ್ಲ. ನಂಬಿಕೆಗಳು ಬಂಡೆ ಗಲ್ಲಿನಂತೆ ಗಟ್ಟಿಮುಟ್ಟಾಗಿದ್ದರೂ ಸ್ಪಂದನಶೀಲತೆ ಇರುವುದಿಲ್ಲ. ಹೀಗೆ ವರ್ಡ್ಸ್‌ವರ್ಥ್ ಸೇರಿ ಎಲ್ಲ ರೊಮ್ಯಾಂಟಿಕ್ ಕವಿಗಳೂ ಕ್ರಿಶ್ಚಿಯನ್ ಮತವನ್ನು ಸಾರಾಸಗಟಾಗಿ ನಂಬಿದ ವರಾಗಿದ್ರೆ ಅವರಲ್ಲಿ ಸ್ಪಂದನಶೀಲತೆಯ ಮಿಡಿತ ಇರುತ್ತಿರಲಿಲ್ಲ. ಅವರು ಯಾರೋ ಹೇಳಿದ್ದನ್ನೇ ಹೇಳುವ ಪಾದ್ರಿಗಳಾಗಿಬಿಡುತ್ತಾ ಇದ್ದರು. ಭಾರತೀಯ ಕವಿಗಳ ಬಗ್ಗೆಯೂ ಇದು ನಿಜವೇ. ವೇದದಲ್ಲಿ ಹೇಳಿದ್ದು ನಿಜ ಎಂದು ಮತ ಶ್ರದ್ಧೆಗಾಗಿ ತಿಳಿದುಬಿಟ್ಟಿದ್ದರೆ ಯಾವ ವೈದಿಕನೂ ಬಹಳ ದೊಡ್ಡ ಕವಿಯಾಗುವುದು ಕಷ್ಟವೇನೋ? ವೀರಶೈವ ಧರ್ಮದಲ್ಲಿ ಹೇಳಿದ್ದೇ ಸತ್ಯ ಅಂತ ತಿಳಿದುಬಿಟ್ಟು ಅಂತಿಮ ಸತ್ಯ ಗೊತ್ತಾಗಿಬಿಟ್ಟಿದೆ ಎಂದುಕೊಂಡರೆ ನೀವೇನೂ ಮಾಡಬೇಕಾದ್ದಿಲ್ಲ. ಹಾಗೆ ಅರವಿಂದರು ಏನೋ ಹೇಳಿದ್ದಾರೆ, ಅದು ನನಗೆ ದೊರಕಿತು ಅಂತ ನೀವು ತಿಳಿಯೋದಾದರೆ ಮತ್ತೇನೂ ನೀವು ಹುಡುಕ ಬೇಕಾಗಿಲ್ಲ. ಆ ಹುಡುಕಾಟ ಶುರುವಾಗೋದು ಯಾವಾಗ ಅಂದ್ರೆ ಮನಸ್ಸು ಅನುಮಾನದಲ್ಲಿರುವಾಗ, ಆತಂಕದಲ್ಲಿರುವಾಗ, ಮೊದಲೇ ಹೇಳಿದ ಹಾಗೆ ವಿಷಾದ ಯೋಗದ ಸ್ಥಿತಿಯಲ್ಲಿರೋವಾಗ. ಎಲ್ಲ ದೊಡ್ಡ ಕವಿಗಳೂ ಆ ರೀತಿಯ ವಿಷಾದ ಯೋಗದ ಸ್ಥಿತಿಯಲ್ಲಿದ್ದೇ ಮಾತನಾಡುತ್ತಾ ಇದ್ದಾರೆ. ಅದು ಇಲ್ಲದೇ ಇರುವ ಸ್ಥಿತಿ ಅಂದರೆ ಬ್ರೌನಿಂಗ್‌ನದು.

ಆದರೆ ವರ್ಡ್ಸ್‌ವರ್ತ್‌ನ ಗುಣ ಏನೆಂದರೆ, Tintern Abbey… ಓದಿ ನೋಡಿ, Not for this do I mourn nor murmur ಎನ್ನುವ ಒಂದು ಸಾಲಿದೆ. ಯಾವಾಗಲೂ ಕವಿಗಳು ತಮ್ಮ ವಾಕ್ಯದಲ್ಲಿ ಹೇಳುವುದೇ ಒಂದು ಅರ್ಥ ಆಗುವುದೇ ಇನ್ನೊಂದು. ಮೇಲೆ ಹೇಳಿದ ಸಾಲಿನಲ್ಲಿ mourn ಶಬ್ದವಿದೆ, ಅಂದರೆ ದುಃಖಪಡುವುದು. ನಾನಿದಕ್ಕೆ ದುಃಖಪಡುತ್ತಾ ಇಲ್ಲ ಅನ್ನೋವಾಗ ದುಃಖಪಡುತ್ತಿದ್ದಾನೆ ಅಂತ ನಮ್ಮ ಕಿವಿಗೆ ಅನ್ನಿಸುತ್ತೆ. ಯಾಕೆಂದರೆ ನಾವು ಯಾವುದನ್ನಾದರೂ ಬಹಳ ಗಟ್ಟಿಯಾಗಿ ಹೇಳೋದು ಯಾವಾಗ ಅಂದರೆ ಅದರ ಬಗ್ಗೆ ನಮಗೆ ಅನುಮಾನ ಇದ್ದಾಗ. ನಾವು ಕಾಡಿನಲ್ಲಿ ಒಟ್ಟಿಗೆ ಹೋಗುತ್ತಿದ್ದಾಗ ‘ನನಗೇನು ಹೆದರಿಕೆ ಆಗ್ತಾ ಇಲ್ಲಪ್ಪ’ ಅಂತ ಯಾರಾದರೂ ಅಂದರೆ ಅವನಿಗೆ ಹೆದರಿಕೆ ಆಗುತ್ತಿದೆ ಎಂದು ನಾವಂದುಕೊಳ್ಳುತ್ತಿದ್ದೆವು.

ವರ್ಡ್ಸ್‌ವರ್ಥ್ ಬಹಳ ದೊಡ್ಡ ಕವಿ ಏಕೆಂದರೆ, ನನಗೆ ಕಳೆದುಹೋಯ್ತು ನಿಜ. ಆದರೆ ನಿನ್ನಲ್ಲಿ ಅದು ಇದೆ ಅನ್ನುತ್ತಾನೆ. ಇಲ್ಲಿ ನೀನು ಯಾರೆಂದರೆ ವರ್ಡ್ಸ್‌ವರ್ಥ್‌ನ ತಂಗಿ. ಅವಳಿನ್ನೂ ಚಿಕ್ಕವಳು. ಇವನು ತಾನು ಕಳೆದುಕೊಂಡಿರುವುದನ್ನು ಅವಳಲ್ಲಿ ನೋಡುತ್ತಾ ಇದ್ದಾನೆ. ಈ ನೋಡುವಿಕೆಯಿಂದ ಅವನು ಮತ್ತೆ ಕಳೆದದ್ದನ್ನು ಅವಳ ವಿಸ್ಮಯದ ಕಣ್ಣುಗಳ ಮೂಲಕ ಪಡೆಯುತ್ತಾನೆ.

  • ಇದು ಕೋಲ್ರಿಜ್‌ಗೂ ಸಾಧ್ಯವಿಲ್ಲ. ವರ್ಡ್ಸ್‌ವರ್ಥ್ ಕೋಲ್ರಿಜ್‌ಗಿಂತ ದೊಡ್ಡ ಕವಿ. ಎಲ್ಲಿ ಅಂದರೆ ಅವನು ಈ ರೀತಿಯ ಒಂದು ಮಾನವೀಯವಾದ ಸಂಬಂಧಗಳ ಕಲ್ಪನೆಯಿಂದ ತಾನು ಕಳೆದುಕೊಂಡದ್ದನ್ನು ತನ್ನ ತಂಗಿಯಲ್ಲಿ ಉಳಿದಿರುವುದನ್ನು ಕಂಡು ಸಂತೋಷ ಪಡುವುದರಲ್ಲಿ.
  • ನಾವೆಲ್ಲರೂ ಬಹುಶಃ ಒಂದು ರೀತಿಯ ಸ್ಪಂದನಶೀಲತೆಯನ್ನು ಯಾಕೆ ಉಳಿಸಿ ಕೊಳ್ಳುತ್ತೇವೆ ಅಂದರೆ ನಮ್ಮ ಮಕ್ಕಳಲ್ಲಿ ಅದನ್ನು ನೋಡುತ್ತೇವೆ. ಯುವಕ-ಯುವತಿಯರಲ್ಲಿ ನೋಡುತ್ತೆವೆ. ಇಲ್ಲದೇ ಹೋದರೆ ಹೊಟ್ಟೆಕಿಚ್ಚುಪಡುತ್ತಿದ್ದೆವು. ಕರುಬುತ್ತಾ ಇರುವವನು ಸಿನಿಕ್ ಆಗುತ್ತಾನೆ.

ಸಾತತ್ಯದ ನಿರಂತರತೆ ಎನ್ನುವುದು ನಮಗೆ ಸಾಧ್ಯವಾಗೋದು ಬರೀ ನಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಅಲ್ಲ, ಒಟ್ಟು ಜೀವದಲ್ಲಿ. ಅದರಿಂದಲೇ immortality ಅಂದರೆ ನಾನು ಸಾಯೋದಿಲ್ಲ ಎಂದರ್ಥವಲ್ಲ; ನನ್ನ ನಂತರವೂ ಈ ಪ್ರಪಂಚ ಹೀಗೇ ಮುಂದುವರಿಯುತ್ತದೆ; ಈ ವಿಸ್ಮಯ ಮರುಕಳಿಸುತ್ತಲೇ ಇರುತ್ತದೆ; ಜೀವಜಾಲದ ಪ್ರಾಣಶಕ್ತಿ ಪುನರ್ಭವಿಸುತ್ತ ಪುನಶ್ಚೇತನಗೊಳ್ಳುತ್ತಲೇ ಇರುತ್ತದೆ ಎಂದು.

ಬುದ್ಧನ ‘ಕರುಣಾ’ ಕಾಣುವುದು ಇದನ್ನೇ…. ಉಪನಿಷತ್ತು ಸಾರುವುದು ಇದನ್ನೇ. ಝೆನ್ ಅನುಭಾವದ ಅತಾರ್ಕಿಕ ಒಗಟಿನ ಮೂಲ ಇರುವುದು ಈ ಕಾಣ್ಕೆಯಲ್ಲೇ. ಈ ‘ಕರುಣಾ’ ತರುವ ವಿಸ್ತಾರದಲ್ಲಿ. ಸೂಫಿಸಂತರು ಹೇಳುವ ಕಥೆಗಳಲ್ಲಿ ಲೋಕದಲ್ಲೇ ಜಡದಲ್ಲೇ ಚೈತನ್ಯದ ದರ್ಶನವಾಗುತ್ತದೆ.

ಭಾಗವತದ ಮೊದಲಲ್ಲಿ ವೇದವ್ಯಾಸರು ವೈರಾಗ್ಯ ವಶನಾಗಿ ಮನೆತೊರೆದ ಮಗನನ್ನು ಪುತ್ರವ್ಯಾಮೋಹದಲ್ಲಿ ಹಲುಬುತ್ತ ಕೂಗಿಕರೆದಾಗ ಸುತ್ತಲಿನ ಬೆಟ್ಟಗುಡ್ಡಗಳು ಓ ಎಂದು ಉತ್ತರಿಸಿದವು ಎನ್ನುವಾಗ ಈ ಭಾವದ ಉತ್ಕಟ ಅಭಿವ್ಯಕ್ತಿಯಿದೆ.

ಪುನಶ್ಚೇತನ ಅಂದಾಗ ಮುಖ್ಯವಾಗೋದು ಸಾವು. ಸಾವಿಲ್ಲದೆ ಪುನಶ್ಚೇತನಗೊಳ್ಳುವುದೆಂಬುದು ಇಲ್ಲ. ಅಡಿಗರು ‘ಹದ್ದು’ ಪದ್ಯದಲ್ಲಿ ಹೇಳುತ್ತಾರೆ, ಇಡೀ ಪ್ರಪಂಚದ ಎಲ್ಲಾ ಕೆಟ್ಟ ಜನರೂ ಒಂದಲ್ಲಾ ಒಂದು ದಿನ ಸಾಯ್ತಾರೆ. ಒಳಿತಿಗೆಷ್ಟೋ ಕೆಡುಕಿಗೂ ಮಿತಿಗಳು ಇವೆ. (ಮೇಲಿಂದ ಮೇಲೆ ಎರಗಿ ಸಾಯಿಸುವ ಹದ್ದು+ನಮ್ಮ ಗಡಿಗಳನ್ನು ಗುರುತಿಸುವ ಹದ್ದು)

ಹಿಟ್ಲರ್ ಸತ್ತ, ಸ್ಟಾಲಿನ್ ಸತ್ತ, ಮಾವೋ ಸತ್ತ. ಇಂತಹ ಜನ ಸಾಯದೇ ಇದ್ದಿದ್ದರೆ ಇಲ್ಲಿ ಮತ್ತೆ ಇನ್ನೊಂದು ಸತ್ಯದ ಸಾಧ್ಯತೆಗೆ ಅವಕಾಶವೇ ಇರುತ್ತಿರಲಿಲ್ಲ. ಹಾಗಾಗಿ ಸಾವನ್ನು ಪುನಶ್ಚೇತನಕ್ಕೆ ಒಂದು ಹೆಜ್ಜೆಯಾಗಿ, ಸ್ಥಿತಿಯಾಗಿ ನೋಡುತ್ತಾರೆ.

ನನಗೆ ತಕ್ಷಣಕ್ಕೆ ನೆನಪಿಗೆ ಬರೋದು ಟ್ಯಾಗೋರ್‌ರ ಒಂದು ಸಣ್ಣ ವಚನ. ಇಲ್ಲಿ ಎಂಥಾ ಅದ್ಭುತವಾದ ಪ್ರತಿಮೆಯನ್ನು ಅವರು ನಮಗೆ ಕೊಡುತ್ತಾರೆಂದರೆ ಅದನ್ನು ಮರೆಯಲು ಸಾಧ್ಯವಿಲ್ಲ. ತಾಯಿ, ಮಗುವಿಗೆ ಹಾಲು ಉಣಿಸುವಾಗ ಒಂದು ಮೊಲೆಯನ್ನು ಉಣಿಸುತ್ತಿರುತ್ತಾಳೆ. ಉಣಿಸುವಾಗಲೇ ಮೊಲೆ ಬರಿದಾಗದಂತೆ ಮಗುವನ್ನು ತೊಡೆಯಿಂದ ಎತ್ತಿ ಇನ್ನೊಂದು ಮೊಲೆಯ ದಿಕ್ಕಿಗೆ ಮಗುವನ್ನು ಬದಲಿಸುತ್ತಾಳೆ. ಈ ಅಂತರದಲ್ಲಿ ಮಗು ಅಳುತ್ತದೆ. ಆದರೆ ಇನ್ನೊಂದು ಮೊಲೆಯಿಂದ ಹಾಲುಣಿಸಲು ತೊಡಗಿದಾಗ ಮಗು ನೆಮ್ಮದಿ ಪಡುತ್ತದೆ. ಹಾಗೆಯೇ ಸಾವು ಮತ್ತು ಜೀವ ತಾಯಿಯ ಎರಡು ಮೊಲೆಗಳು.

* * *

ಅಡಿಗರ ‘ಕೂಪ ಮಂಡೂಕ’ ಪದ್ಯವನ್ನು ಈ ಸಂದರ್ಭದಲ್ಲಿ ನೆನೆಯಲು ಬಯಸುತ್ತೇನೆ. ಅತಿ ತಾರ್ಕಿಕತೆಯಲ್ಲಿ ತನ್ನ ಸೃಜನಶೀಲತೆಯನ್ನು ಕಳೆದುಕೊಂಡ ಕೋಲ್ರಿಜ್ಜನ Dejection-an ode ಎನ್ನುವ ಗಾಢವಾದ ವಿಷಾದದ ಸ್ವರೂಪ ಅಡಿಗರ ಪದ್ಯದಲ್ಲಿ ಇನ್ನೂ ಹೆಚ್ಚು ಮೂರ್ತವಾಗಿ ಮೈತಾಳಿದೆ.

ಕೂಪ ಮಂಡೂಕ ಬರೆದ ಹೊತ್ತಿನಲ್ಲಿ ಅಡಿಗರು ಮೈಸೂರಿನಲ್ಲಿದ್ದರು. ನಾನೂ ಅಲ್ಲಿಯೇ ಇದ್ದೆ. ನಮ್ಮಿಬ್ಬರ ಮಧ್ಯೆ ಬಹಳ ಆತ್ಮೀಯತೆ ಇತ್ತು. ಆ ದಿನ ನನಗೆ ಇನ್ನೂ ನೆನಪಿದೆ. ಒಂದು ದಿನ ಅವರು ನಿತ್ಯದಂತೆ ಕಾಫಿಹೌಸ್‌ಗೆ ಬಂದಿದ್ದರು; ಕೈಯಲ್ಲೊಂದು ತರಕಾರಿ ಕೊಂಡು ತುಂಬಿಕೊಳ್ಳುವ ಚೀಲ. ಕಾಫಿ ಹೌಸ್‌ಗೆ ನಾವೆಲ್ಲ ಸ್ನೇಹಿತರೂ ಹೋಗಿ ಒನ್-ಬೈ-ಟೂ ಕಾಫಿ ಕುಡಿದು ಚರ್ಚೆ ಮಾಡುತ್ತಿದ್ದೆವು.

ಕಾಫಿ ಕುಡಿದು ಆಮೇಲೆ ಅವರು ಬಸ್ ಹತ್ತಿಕೊಂಡು ಸೇಂಟ್ ಫಿಲೋಮಿನಾ ಕಾಲೇಜಿಗೆ ಹತ್ತಿರದಲ್ಲಿ ಇದ್ದ ಬಡಾವಣೆಗೆ ಹೋಗುವವರು.

ಆ ದಿನಗಳಲ್ಲಿ ಅವರು ತಮ್ಮ ಕಾವ್ಯದ ಬಗ್ಗೆ ಯಾವತ್ತೂ ತಾವೇ ಮಾತಾಡಿದವರಲ್ಲ. ತಾವು ಬರೆದಿದ್ದನ್ನು ನಮಗೆಲ್ಲ ಓದಲಿಕ್ಕೆ ತಂದು ಕೊಡುತ್ತಿದ್ದರು – ಅಷ್ಟೆ. ಹಾಗೇ ಒಂದು ದಿನ ಬಸ್ಸಿಗೆ ಕಾಯುತ್ತಾ ಇದ್ದಾಗ, ಅವರು ನನ್ನ ಹತ್ತಿರ ‘ನನಗೆ ಇನ್ನು ಮುಂದೆ ಪದ್ಯ ಬರೆಯೋಕೆ ಆಗೊಲ್ಲ. ಯಾವ ರೀತಿಯ ಸೃಜನಶೀಲ ಒಳ ಭಾವನೆಗಳೂ ನನ್ನಲ್ಲಿಲ್ಲ’ ಅಂದರು. ಅದಾಗಿ ಹದಿನೈದು ದಿನಗಳ ನಂತರ ಒಂದು ಪದ್ಯ ಓದಲು ಕೊಟ್ಟರು. ಅದೇ ‘ಕೂಪ ಮಂಡೂಕ.’ ಸೃಜನಶೀಲತೆ ಮಾಯವಾದದ್ದರ ಬಗ್ಗೆಯೇ ಸೃಜನಶೀಲ ವಾದ ವಿಷಾದ ಯೋಗ ಈ ಪದ್ಯದಲ್ಲಿ ಇದೆ.

ಕವಿಯಾಗಬೇಕೆಂಬ ಹಠಯೋಗಿ ಕವಿಗಳು ಸುಳ್ಳು ಸುಳ್ಳೇ ವಿಷಾದ ಬರೆದುಕೊಳ್ಳುತ್ತಿರುತ್ತಾರೆ. ಸುಳ್ಳು ಸುಳ್ಳೇ ದುಃಖಗಳ ಬಗ್ಗೆ ಹೇಳುತ್ತಿರುತ್ತಾರೆ. ನನಗೆ ಗೊತ್ತಿರುವ ಬಹಳ ಒಳ್ಳೆಯ ಕವಿಗಳೆಲ್ಲರೂ ಹೀಗೆ ದಿಟ್ಟಿಸಿ ನೋಡುವವರು. ನನ್ನ ಸಮಕಾಲೀನರಲ್ಲಿ ಅದು ಯಾರ್ಯಾರಿಗಿತ್ತೋ ಅವರನ್ನೆಲ್ಲ ನಾನು ಗೌರವಿಸುತ್ತಾ ಇದ್ದೆ. ಇಲ್ಲದೇ ಇದ್ದರೆ ನಾವೆಲ್ಲ ಎಷ್ಟು ಸಾಮಾಜಿಕರೆಂದರೆ, ಸಾಮಾಜಿಕರಾಗಿದ್ದಾಗ ಒಂದು ಸಾಮಾಜಿಕವಾದ ನಗು ಇರುತ್ತೆ ನಮಗೆ, ಸಾಮಾಜಿಕವಾದ ಒಳ್ಳೆಯ ಮಾತುಗಳಿರುತ್ತವೆ. ಸಾಮಾಜಿಕವಾದ ಹೊಂದಿಕೆಗಳಿರುತ್ತವೆ. ಆದರೆ ಕಾವ್ಯ ಎಂದರೆ ಒಂಟಿಯಾಗೋದು. ಸಂಪೂರ್ಣ ಒಂಟಿಯಾಗಿ ನೋಡೋದು ಒಂದು ಮತ್ತು ನಾವಿದನ್ನು ಇನ್ಯಾರಿಗೋ ಹೇಳುತ್ತಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲದಂತೆ ಹೇಳಿಕೊಳ್ಳೋದು. ಬಹಳ ಒಳ್ಳೆಯ ಕವನ ಅಂತ ಅನಿಸೋದು ಬರಿಯ ಹೇಳಿದ್ದಾಗಿರೋದಿಲ್ಲ, ಅದು ಹೇಳಿಕೊಂಡದ್ದಾಗಿರುತ್ತೆ. ಹೇಳಿದ್ದೂ ಆಗಿರುತ್ತೆ, ಹೇಳಿಕೊಂಡದ್ದೂ ಆಗಿರುತ್ತೆ. ಬರೀ ಹೇಳಕೊಂಡದ್ದಾದರೆ ನಮಗೆ ಗೊತ್ತಾಗದೇ ಹೋಗಬಹುದು. ಬರೀ ಹೇಳಿದ್ದಾದರು ಅದು ಪ್ಲ್ಯಾಟ್‌ಫಾರ್ಮ್‌‌ನಲ್ಲಿ ಹೇಳೋಕೆ ಅಂತ ಮಾಡಿಕೊಂಡಿದ್ದಾಗಿರುತ್ತದೆ. ಅದು ಹೇಳಿಕೊಂಡಿದ್ದು, ನಿನಗೇ ನೀನು ಹೇಳಿ ಕೊಂಡಿದ್ದು, ಏಕಾಕಿತನದಲ್ಲಿ ಕಂಡುಕೊಂಡಿದ್ದು, ದಿಟ್ಟಿಸಿ ನೋಡಿದ್ದು, ನೋಡಿ ಬರೆದದ್ದು. ಅಡಿಗರು ಆವೊತ್ತು ಬಸ್‌ಗೆ ಕಾಯುತ್ತಿದ್ದಾಗ ಹೇಳಿದ್ದರಲ್ಲ ‘ನಾನಿನ್ನು ಬರೆಯೊಲ್ಲ’ ಅಂತ? ಅದನ್ನು ಅವರು ಅನುಭವಿಸಿ ಬರೆದದ್ದು. ಪೂರ್ಣವಾಗಿ ಅನುಭವಿಸಿ ಬರೆದಾಗ ಅವರಿಂದ ಈ ಕಾವ್ಯ ಸಾಧ್ಯವಾಯಿತು. ಆ ಪದ್ಯ ಹೀಗಿದೆ :

ನೀನೆಲ್ಲಿ ಈಗ
ಹೆಗಲಿಗೆ ಹೆಗಲು ಕೊಟ್ಟವನು
ಹಾಯೆಂದುರುಟುರುಟು ಊದಿದವನು
ದಾರಿಯುದ್ದಕ್ಕೂ ರಹದಾರಿ ಗಿಟ್ಟಿಸಿ
ದಿಲ್ಲಿ ದೀಪಾಂತರಕ್ಕೆ ಕೈಕೊಟ್ಟ ಸಖನು
ನಟ್ಟನಡುದಾರಿ ತೇಗುವ ತೋಟದೊಳಗಡೆಗೆ
ಮೂಗುಮತ ಕೂಡಿದ ತಂಗೊಳಗು ತಡಿಗೆ
ಟಾಂಗು ಕೊಟ್ಟು ಕಮಂಗಿ ಕಣ್ಣು ಬಿಡುವಷ್ಟಕ್ಕೆ
ಕಂಬಿಕಿತ್ತೆ ವಿಶಾಲ ನೀಲದೆಡೆಗೆ…
ಮೈಯೇರಿ ಇಲ್ಲಿ ಬಿದ್ದಿದ್ದೇನೆ…
ಹೂವು ಗಿಡ ಬಳ್ಳಿ ಮರ ಪೊದೆ ಪೊಟರೆ
ಮುಖ ತಿರುಗಿಸುತ್ತಾ ಕಿಲಕಿಲ ನಗುತ್ತವೆ
ಸುತ್ತಮುತ್ತಲು…. ಪಹರೆ
ಎಲೆ ಹಳದಿ ತಿರುಗಿದೀ ಹಲಸು ನಿಂತಿದೆ ಹಲವ
ಹದ ಬಿಸಿಲು….

ಇಲ್ಲಿ ಚಾಲೇಷ ಅಂತ ಒಂದು ಮಾತು ಬರುತ್ತದೆ. ಇಲ್ಲಿ ಇಬ್ಬರು ಗೆಳೆಯರಿದ್ದಾರೆ. ಆ ಇನ್ನೊಬ್ಬ ಇವನಲ್ಲಿ ಇರುವವನೂ ಹೌದು, ಹೊರಗಿನವನೂ ಹೌದು. ಅವನು ಹೊರಗಿನವನು, ಸದಾ ಇರುವವನು ಅಥವಾ ದೇವರೋ? ಅಥವಾ ನನ್ನೊಳಗೇ ಇರುವವನೋ?, ಇದ್ದು ಕೈಕೊಟ್ಟು ಹೋಗುವವನೋ. ಇವೆಲ್ಲ ಡಬಲ್ ಎಕ್ಸ್‌ಪೋಷರ್ ಅಂದೆನಲ್ಲ, ಹಾಗೆ. ಅದಕ್ಕೆ ಕವಿತೆಯನ್ನು ಓದುವ ಶಕ್ತಿಯನ್ನು ನಾವು ಕಾಪಾಡಿಕೊಳ್ಳಬೇಕು, ಪಡೆದುಕೊಳ್ಳಬೇಕು. ಮನಸ್ಸು ಯಾವ ತೀರ್ಮಾನಕ್ಕೂ ಬರದೇ ಇದ್ದ ಹಾಗೆ ಸ್ವೀಕರಿಸುವ ಸ್ಥಿತಿ ನಮಗೆ ಬರಬೇಕು. ನಾವು ಒಂದೊಂದು ಸಲ ತೀರಾ ತಿಳಿದವರಂತೆ ತಿಳಿದು ಕೊಂಡರೆ ಕಷ್ಟವಾಗಿಬಿಡುತ್ತದೆ. ಅಡಿಗರ ಕಾವ್ಯವನ್ನು ಆಸ್ವಾದಿಸುವಾಗ ನಾವು ಬಹಳಷ್ಟು ಪಡೆದುಕೊಳ್ಳುತ್ತೇವೆ. ನಮ್ಮೊಳಗೆ ನಾವು ನೋಡಿಕೊಳ್ಳುವುದಕ್ಕೆ ಆಗುತ್ತೆ.

ಅಡಿಗರ ಈ ಕಾವ್ಯದಲ್ಲಿ ಹುಡುಗರು ಆಟ ಆಡುವ ಸಂದರ್ಭ ಬರುತ್ತದೆ. ಟಕ್ಕಾ-ಟಕ್ಕಿ ಅಂತ. ಇವೆಲ್ಲ ಆಟದ ಚಿತ್ರಗಳು. ‘ಹೆಗಲಿಗೆ ಹೆಗಲ ಕೊಟ್ಟು…’, ಹಾಗೆಯೇ ‘ಹಾಯೆಂದುರುಟುರುಟು…’ ನಾನು ಅಡಿಗರ ಬಗ್ಗೆ ಬರೆಯುವಾಗ ಒಂದು ಶಬ್ದವನ್ನು ಉಪಯೋಗಿಸಿದ್ದೆ. ಅಡಿಗರ ಭಾಷೆಯಲ್ಲಿ ಭಾವಾಭಿನಯ ಆಗುತ್ತೆ ಅಂತ. ಭಾವದ ಅಭಿನಯ ಆಗುತ್ತೆ. ಭಾವ ಅಭಿನಯೀತವಾಗುತ್ತೆ. ನಾಟಕೀಯವಾಗಿರುತ್ತೆ. ಆದರೆ ಈಗ ಪದ್ಯಗಳನ್ನು ಹಾಡೋರು ಹೆಚ್ಚಾಗಿ, ನಮಗೆ ಶಬ್ದಗಳಿಗಿರುವ ಸಂಗೀತವೇ ಕರೆತು ಹೋಗುತ್ತಿದೆ. ಅದಕ್ಕೆ ನಾನು ಈ ಕ್ಯಾಸೆಟ್ ಯುಗ ಬಂದ ನಂತರ ಕಾವ್ಯ ಏನು ಅನ್ನೋದು ನಮಗೆ ಮರೆತುಹೋಗಿಬಿಡುತ್ತೆ. ನಿಜವಾದ ಕಾವ್ಯ ಯಾವುದು ಎಂದರೆ ಕಾವ್ಯದ ಒಳಗೆ ಒಂದು ಸಂಗೀತವಿರುತ್ತೆ.

ಕಾವ್ಯಕ್ಕೆ ಒಂದು ರೀತಿಯ ಸಮಗ್ರತೆ ಇರುತ್ತೆ. ಕವಿಯ ಕಣ್ಣಳತೆಯಲ್ಲಿ, ಕಿವಿಯಳತೆಯಲ್ಲಿ ಬರುವ ಎಲ್ಲ ಚಿತ್ರಗಳೂ ಇಲ್ಲಿ ಬರುತ್ತೆ. ವಿಷಾದ ಯೋಗವಾಗಿ ಕಾವ್ಯ ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಮಾಡುವುದರ ಬಗ್ಗೆ ನಾನು ಹೇಳಿರುವುದು ಏನೇನೂ ಸಾಲದು.

(ಬೆಂಗಳೂರು ವಿಶ್ವವಿದ್ಯಾಲಯ, ೨೦೦೫)

* * *