ನಾಗಮಂಗಲದ ಎಲ್ಲ ನನ್ನ ಸ್ನೇಹಿತರೇ, ಇಷ್ಟರ ತನಕ ಒಬ್ಬೊಬ್ಬರೂ ಆಡಿದ ಮಾತಿನಲ್ಲೂ ನಾನು ನಾಗಮಂಗಲದ ಸಾಂಸ್ಕೃತಿಕ ವಿಶಿಷ್ಟತೆಯನ್ನು ಅವರ ಭಾಷೆಯಲ್ಲಿ ಆ ಮಾತಿನ ಹದದಲ್ಲಿ ಕಂಡೆ. ಮನಸ್ಸಿಗೆ ಬಹಳ ಸಂತೋಷವಾಯಿತು. ಮೊದಲೇ ನಾವು ನೋಡಿದ ನೃತ್ಯ- ‘ಹಚ್ಚೇವು ಕನ್ನಡದ ದೀಪ’- ಎಷ್ಟೋ ಸಾರಿ ನಾನು ನೋಡಿದ್ದೇನೆ. ಆದರೆ ಇವತ್ತು ಥಟ್ಟನೆ ನನಗೆ ಈ ಹಾಡಿನ ವಿಶೇಷತೆಯೊಂದು ತಿಳಿಯಿತು. ಇಲ್ಲಿ ‘ಹಚ್ಚೇವು’ ಎಂದು ಹೇಳಲಾಗಿದೆಯೇ ಹೊರತು ‘ನಾನು ಹಚ್ಚುತ್ತೇನೆ’ ಎಂದಲ್ಲ, ಇಲ್ಲಿರುವ ಧ್ವನಿ ‘ನಾವೆಲ್ಲಾ ಹಚ್ಚುತ್ತೇವೆ’ ಎಂಬುದು. ಇದು ಒಂದು ಸಮುದಾಯದ ಪ್ರಾರ್ಥನೆ. ಕನ್ನಡವೆಂಬ ಒಂದು ಸಮುದಾಯ ಅಥವಾ ಕನ್ನಡ ಎಂದು ತನ್ನನ್ನು ಗುರುತಿಸಿಕೊಳ್ಳುವ ಒಂದು ಸಮುದಾಯ ಮಾಡುವ ಪ್ರಾರ್ಥನೆ. ನಾವು ನಿಜವಾದ ಭಾರತೀಯ ಪ್ರಜೆಗಳಾಗುವುದು ಕನ್ನಡ ಸಮುದಾಯದ ಪ್ರಜೆ ಎಂದು ಗುರುತಿಸಿ ಕೊಂಡಾಗ. ಕುವೆಂಪು ಅವರು ಅದಕ್ಕಾಗಿಯೇ ಭಾರತವನ್ನೂ ಕನ್ನಡವನ್ನೂ ಒಟ್ಟಾಗಿ ಸೇರಿಸಿ ನಮ್ಮ ನಾಡಗೀತೆಯನ್ನು ಕೊಟ್ಟಿದ್ದಾರೆ.

ಕನ್ನಡ ನಾಡಿನ ವೈಶಿಷ್ಟ್ಯವೇನೆಂದರೆ ಅದು ಯಾವತ್ತೂ ತನ್ನ ವೈಶಿಷ್ಟ್ಯವನ್ನು ಮರೆಯದೇ ಭಾರತೀಯವೂ ಆಗುವುದು. ನಾವು ಕನ್ನಡಿಗರೆಂದೂ ಭಾರತೀಯರೆಂದೂ ಸಾವಿರಾರು ವರ್ಷಗಳಿಂದಲೂ ಭಾವಿಸುತ್ತಾ ಬಂದಿದ್ದೇವೆ. ಇದು ಕೆಲವು ಕಾಲ ಅಸ್ಸಾಂನಲ್ಲಿ ಸಾಧ್ಯವಾಗಲಿಲ್ಲ. ದೇಶಕ್ಕೆ ಗಂಡಾಂತರ ಬಂತು. ಕೆಲಕಾಲ ಈ ಭಾವನೆ ಪಂಜಾಬ್‌ನಲ್ಲಿ ಸಾಧ್ಯವಾಗಲಿಲ್ಲ. ಆಗಲೂ ದೇಶಕ್ಕೆ ಗಂಡಾಂತರ ಬಂತು. ತಮಿಳುನಾಡಿನಲ್ಲಿ ಇದು ಸಾಧ್ಯವಿಲ್ಲ ಎಂದು ಹೇಳುವವರು ಇದ್ದರು. ಅವರು ಸೋತು ಹೋದರು. ಇಲ್ಲದೇ ಇದ್ದರೆ ಈ ವಿಷಯದಲ್ಲೂ ದೇಶಕ್ಕೆ ಗಂಡಾಂತರ ಎದುರಾಗುತ್ತಿತ್ತು. ಕನ್ನಡ ಯಾವತ್ತೂ ದೇಶಕ್ಕೆ ಗಂಡಾಂತರ ತರುವ ದಾರಿಯಲ್ಲಿ ಹೋಗಲೇ ಇಲ್ಲ. ಇದು ನಮ್ಮ ಸಾಧನೆ. ಈ ಸಾಧನೆಯ ಹಿಂದೆ ಏನೇನಿದೆ ಎಂಬುದನ್ನು ಶೋಧಿಸುವುದು ಇವತ್ತಿನ ನನ್ನ ಮಾತಿನ ಮುಖ್ಯ ಉದ್ದೇಶ.

ಮೊದಲನೆಯದಾಗಿ ನಾವು ನೆನಪು ಮಾಡಿಕೊಳ್ಳಬೇಕಾದದ್ದು ಶ್ರೀವಿಜಯನನ್ನು. ಇವತ್ತು ಕನ್ನಡಕ್ಕೆ ‘ಶಾಸ್ತ್ರೀಯ’ ಸ್ಥಾನಮಾನ ಸಿಕ್ಕಿದೆ. ಇಲ್ಲಿ ‘ಶಾಸ್ತ್ರೀಯ’ ಎಂಬ ಪದಕ್ಕಿಂತ ‘ಅಭಿಜಾತ’ ಎಂಬ ಶಬ್ದವೇ ಹೆಚ್ಚು ಉತ್ತಮ ಎನಿಸುತ್ತದೆ. ಯಾಕೆಂದರೆ ಪ್ರಪಂಚದ ಎಲ್ಲಾ ಭಾಷೆಗಳೂ ಶಾಸ್ತ್ರೀಯವೇ, ಎಲ್ಲವಕ್ಕೂ ಒಂದು ವ್ಯಾಕರಣವಿರುತ್ತದೆ. ಈಗ ತುಳುವಿನಂಥ ಭಾಷೆಯಿಂದ ಆರಂಭಿಸಿ ಗಿರಿಜನರು ಆಡುವ ಭಾಷೆಯ ತನಕದ ಯಾವುದನ್ನು ತೆಗೆದುಕೊಂಡರೂ ಅದಕ್ಕೊಂದು ನಿಯಮವಿರುತ್ತದೆ, ಒಂದು ಶಾಸ್ತ್ರ ವಿರುತ್ತದೆ. ಈ ನಿಯಮಗಳು ಇಲ್ಲದಿರುವ ಭಾಷೆಗಳೇ ಇಲ್ಲ. ಈ ಎಲ್ಲಾ ಶಾಸ್ತ್ರವಿರುವ ಭಾಷೆಗಳ ನಡುವೆ ಕನ್ನಡ ಅಭಿಜಾತ.

ಮೊದಲಿನಿಂದ ನಾನು ಕನ್ನಡವನ್ನು ಏನ್ಶಿಯೆಂಟ್ ಅಂಡ್ ಅಲೈವ್ ಎಂದು ಕರೆಯಬೇಕೆಂದು ಹೇಳುತ್ತಿದ್ದೆ. ಇದನ್ನು ನಾನು ಇಂಗ್ಲಿಷ್ ಅಧ್ಯಾಪಕನೆಂಬ ನೆಲೆಯಲ್ಲೇ ವಿವರಿಸಬೇಕು. ಇಂಗ್ಲಿಷ್ ಭಾಷೆ ಇಂದು ಜಗತ್ತಿನ ಬಹಳ ಮುಖ್ಯ ಭಾಷೆಗಳಲ್ಲಿ ಒಂದು. ಅದರಲ್ಲಿ ೪೫೦-೫೦೦ ವರ್ಷಗಳ ಹಿಂದೆ ಚಾಸರ್ ಎಂಬವನೊಬ್ಬ ಬರೆಯುತ್ತಿದ್ದ. ಆ ಚಾಸರ್‌ನನ್ನು ಇಂದು ಓದಲು ಹೊರಟರೆ ಅರ್ಥವಾಗುವುದಿಲ್ಲ. ಅದು ಯಾವುದೋ ಇಂಗ್ಲಿಷ್‌ನಲ್ಲಿದೆ. ಅದನ್ನು ಮತ್ತೆ ಆಧುನಿಕ ಇಂಗ್ಲಿಷ್‌ಗೆ ಭಾಷಾಂತರ ಮಾಡಿಕೊಂಡೇ ಅರ್ಥ ಮಾಡಿಕೊಳ್ಳಬೇಕು. ಆದರೆ ಒಂದು ಸಾವಿರ ವರ್ಷದ ಹಿಂದಿನ ಪಂಪನನ್ನು ನಮ್ಮ ಡಾ. ಬಸವರಾಜು ಅವರು ಗುರುತಿಸಿ, ಕಲ್ಪಿಸಿ ಕೊಡುವಂಥ ಪುಸ್ತಕದಲ್ಲಿ ಓದಿದರೆ ಈಗಿನ ನಾವು ಕೂಡಾ ಅದರ ಶೇಕಡಾ ಅರವತ್ತರಷ್ಟನ್ನು ಅರ್ಥ ಮಾಡಿಕೊಳ್ಳಬಹುದು.

ಸಾವಿರ ವರ್ಷದ ಹಿಂದಿನ ಪಂಪನ ಮಾತಿರಲಿ. ಕುಮಾರವ್ಯಾಸನನ್ನಂತೂ ಎಲ್ಲರೂ ಅರ್ಥ ಮಾಡಿಕೊಳ್ಳಬಹುದು. ಕುಮಾರವ್ಯಾಸನ ಕಾಲದ ಒಬ್ಬ ಕವಿಯನ್ನು ಆಧುನಿಕ ಯೂರೋಪಿನ ಯಾರೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲಾರರು. ಅವರ ಹಿಂದಿನ ಭಾಷೆ ಅವರಿಗೆ ಒದಗದ ಭಾಷೆ. ಅಲ್ಲಿ ಒಂದು ಸಾತತ್ಯ ಇಲ್ಲ. ನಮ್ಮ ಭಾಷೆಗೆ ಒಂದು ಸಾತತ್ಯ ಇದೆ. ಅದು ಸುಮಾರು ಒಂದು ಸಾವಿರ ವರ್ಷಗಳ ಸಾತತ್ಯ. ಆದ್ದರಿಂದಲೇ ಇದು ಅಭಿಜಾತ. ಇಂಥ ಸಾತತ್ಯವನ್ನು ನಾವು ಕಾಣುವುದು ಲ್ಯಾಟಿನ್‌ನಲ್ಲಿ, ಸಂಸ್ಕೃತದಲ್ಲಿಯೂ ಈ ಸಾತತ್ಯವಿದೆ. ಆದರೆ ಇವುಗಳು ಈಗ ಯಾರ ಭಾಷೆಯಾಗಿಯೂ ಉಳಿದಿಲ್ಲ. ಇವುಗಳನ್ನು ಕಲಿತು ನಾವು ಓದಬೇಕಷ್ಟೆ. ಈ ಕಾರಣದಿಂದ ಇವೂ ಕ್ಲಾಸಿಕಲ್ ಭಾಷೆಗಳು. ನಮ್ಮದು ಬರೇ ಈ ಅರ್ಥದ ಕ್ಲಾಸಿಕಲ್ ಅಲ್ಲ. ಇವತ್ತಿಗೂ ಬದುಕಿ ಉಳಿದಿರುವ, ಹಿಂದಿನದು ಇವತ್ತಿಗೂ ಅರ್ಥವಾಗುವ ಜೀವಂತ ಭಾಷೆ. ಬಸವಣ್ಣನನ್ನು ನಾವು ಈಗಲೂ ನಮ್ಮ ನಡುವಿನ ಕವಿಯಂತೆ ಓದಿಕೊಳ್ಳಬಹುದು. ಪುರಂದರದಾಸರು ನಮ್ಮ ನಡುವಿನ ಇನ್ನೊಬ್ಬ ಹಾಡುಗಾರನಂತೆ ಕಾಣಿಸುತ್ತಾರೆ. ಯಾರೂ ಇವರನ್ನು ಭಾಷಾಂತರ ಮಾಡಬೇಕಾಗಿಲ್ಲ. ಕನ್ನಡಕ್ಕೆ ಅಂಥದ್ದೊಂದು ಸಾತತ್ಯವಿದೆ. ಇದಕ್ಕೆ ಪ್ರಪಂಚದಲ್ಲೇ ಬಹಳ ದೊಡ್ಡ ಸ್ಥಾನ ಮೊದಲಿನಿಂದಲೇ ಸಿಗಬೇಕಾಗಿತ್ತು. ಸಿಕ್ಕಿದೆ ಕೂಡಾ.

ಒಂದು ಸಾವಿರ ವರ್ಷದ ಹಿಂದೆ ಪ್ರಭುತ್ವದಲ್ಲಿ ಇರುವವರು ಮತ್ತು ವಿದ್ಯಾವಂತರು ಉಪಯೋಗಿಸುತ್ತಿದ್ದ ಭಾಷೆಗಳೆಂದರೆ ಯೂರೋಪಿನಲ್ಲಿ ಲ್ಯಾಟಿನ್, ಭಾರತದಲ್ಲಿ ಸಂಸ್ಕೃತ. ಯೂರೋಪಿನಲ್ಲಿ ಲ್ಯಾಟಿನ್ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿತ್ತೆಂದರೆ ನ್ಯೂಟನ್ ತನ್ನ ಸಿದ್ಧಾಂತಗಳನ್ನು ವಿವರಿಸಿದ್ದು ಲ್ಯಾಟಿ‌‌ನ್‌ನಲ್ಲಿ. ಯಾಕೆಂದರೆ ಯೂರೋಪ್‌ನಲ್ಲಿರುವ ಇತರ ಭೌತಶಾಸ್ತ್ರಜ್ಞರಿಗೆ ಅರ್ಥವಾಗುವುದಕ್ಕೆ ಲ್ಯಾಟಿನ್ ಅಗತ್ಯ ಎಂದು ಭಾವಿಸಿದ್ದ. ಹಾಗೆಯೇ ಭಾರತದಲ್ಲಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಸಂಸ್ಕೃತದಲ್ಲಿ ಬರೆದದ್ದೂ ಇದೇ ಕಾರಣಕ್ಕೆ. ತಮ್ಮ ಬರೆವಣಿಗೆ ಇಡೀ ಭಾರತಕ್ಕೆ ಅರ್ಥವಾಗಬೇಕು ಎಂಬುದು ಅವರ ಅಭಿಲಾಷೆಯೂ ಆಗಿತ್ತು. ಇಡೀ ಯೂರೋಪಿಗೆ ಅರ್ಥವಾಗಬೇಕು ಎಂಬ ಭ್ರಮೆಯನ್ನು ಮೊದಲು ಕಳಚಿಕೊಂಡವನು ಡಾಂಟೆ ಎಂಬ ಇಟಾಲಿಯನ್ ಕವಿ. ನಾನು ಲ್ಯಾಟಿನ್‌ನಲ್ಲಿ ಬರೆಯುವುದಿಲ್ಲ ಜನ ಭಾಷೆಯಾದ ಇಟಾಲಿಯನ್‌ನಲ್ಲಿ ಬರೆಯುತ್ತೇನೆ ಎಂದ. ಡಾಂಟೆ ಈ ಮಾತನ್ನು ಹೇಳುವುದಕ್ಕೆ ಬಹಳ ಮೊದಲೇ ನಮ್ಮ ಶ್ರೀವಿಜಯ ಅಥವಾ ನೃಪತುಂಗ ಕವಿರಾಜ ಮಾರ್ಗದಲ್ಲಿ ಹೇಳಿದ್ದಾನೆ.

ಇವತ್ತು ಕನ್ನಡ ನುಡಿಯ ಬಗ್ಗೆ ಮಾತನಾಡುವಾಗ ನಾವೆಲ್ಲಾ ನೆನಪಿಸಿಕೊಳ್ಳಬೇಕಾದದ್ದು ಈ ಸಾವಿರ ವರ್ಷಗಳಿಂದ ಸತತವಾಗಿ – ಸಶಕ್ತವಾಗಿ ಉಳಿದುಬಂದಿರುವ, ಎಲ್ಲಕಾಲಕ್ಕೂ ಮಿಡಿಯಬಲ್ಲ ಬದಲಾವಣೆಗಳನ್ನು ಒಳಗೊಂಡೂ ತನ್ನ ಸ್ವರೂಪವನ್ನು ಕೆಡಿಸಿಕೊಳ್ಳದೇ ಇರುವ ಕನ್ನಡ ಶ್ರೀಮಂತಿಕೆಯನ್ನು. ಅದನ್ನು ನೀವು ಇವತ್ತು ಆಚರಿಸುತ್ತಿದ್ದೀರಿ. ಕನ್ನಡವೆಂದರೆ ಏನು ಎಂಬುದನ್ನು ಹೇಳುವುದಕ್ಕೆ ಶ್ರೀವಿಜಯ ‘ಕನ್ನಡದೊಳ್‌ ಭಾವಿತಮಾದ ಜನಪದಂ’ ಎಂದ. ‘ಹಚ್ಚೇವು ಕನ್ನಡದ ದೀಪ’ ಎಂದು ಹೇಳುವವರು ಇವರೇ – ನಾವೆಲ್ಲಾ ಕನ್ನಡದವರು ಎಂದು ತಿಳಿದುಕೊಂಡಿರುವ ಜನಪದರು. ಶ್ರೀವಿಜಯ ಕನ್ನಡಕ್ಕೊಂದು ಗಡಿಯನ್ನು ಕೊಟ್ಟಿದ್ದಾನೆ-ಕಾವೇರಿಯಿಂದ ಗೋದಾವರಿಯವರೆಗೆ. ಸಂಸ್ಕೃತಕ್ಕೆ ಹೀಗೊಂದು ಗಡಿಯಿಲ್ಲ. ಅದು ಎಲ್ಲಾದರೂ ಆಡಬಹುದಾದ ಭಾಷೆ. ಲ್ಯಾಟಿನ್‌ಗೂ ಹೀಗೊಂದು ಗಡಿ ಇರಲಿಲ್ಲ. ಅದು ಎಲ್ಲಾದರೂ ಅಡಬಹುದಾದ ಭಾಷೆ. ಆದರೆ ಇವು ಧೀಮಂತರು ಮಾತ್ರ ಆಡಬಹುದಾದ ಭಾಷೆಗಳೇ ಹೊರತು ಸಾಮಾನ್ಯರೂ ಆಡಬಹುದಾದ ಭಾಷೆಗಳಲ್ಲ. ಕನ್ನಡ ಸಾಮಾನ್ಯರೂ ಆಡಬಹುದಾದ ಭಾಷೆ. ಒಂದು ಸಾವಿರ ವರ್ಷದ ಹಿಂದೆ ಯೂರೋಪಿನಲ್ಲೂ ಭಾರತದಲ್ಲೂ ಎಲ್ಲರಿಗೂ ಗೊತ್ತಿರುವ ಧೀಮಂತ ಭಾಷೆಯನ್ನು ಬಿಟ್ಟು ಜನಸಾಮಾನ್ಯರ ಭಾಷೆಯಲ್ಲಿ ಬರೆಯಬೇಕು ಎನ್ನುವ ಒಂದು ಅಂತಃಸ್ಫುರಣ ಬಂದದ್ದೇ ಒಂದು ಕ್ರಾಂತಿಕಾರಿ ವಿದ್ಯಮಾನ.

ಶ್ರೀವಿಜಯ ಕನ್ನಡದಲ್ಲಿ ಬರೆದ ನೂರಾರು ವರ್ಷಗಳ ನಂತರ ಇಟಾಲಿಯನ್‌ನಲ್ಲಿ ಡಾಂಟೆ ಬರೆದ, ಇಂಗ್ಲಿಷ್‌ನಲ್ಲಿ ಶೇಕ್ಸ್‌ಪಿಯರ್‌ ಬರೆದ. ಜಗತ್ತಿನ ಮಹಾ ಪ್ರಸಿದ್ಧವಾದ ನಾಟಕಗಳನ್ನು ಶೇಕ್ಸ್‌ಪಿಯರ್ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಕಾಲದಲ್ಲಿ ಇಂಗ್ಲೆಂಡಿನ ಅತ್ಯಂತ ಧೀಮಂತ ಮತ್ತು ಶ್ರೀಮಂತ ಜನರು ಮಾತನಾಡುತ್ತಾ ಇದ್ದದ್ದು ಇಂಗ್ಲಿಷನ್ನಲ್ಲ. ಅವರು ಹೆಚ್ಚು ಫ್ರೆಂಚ್ ಮಾತನಾಡುತ್ತಿದ್ದರು. ಆದ್ದರಿಂದಲೇ ಇಂಗ್ಲಿಷ್‌ನಲ್ಲಿರುವ ಪ್ರಾಣಿಗಳ ಹೆಸರುಗಳೆಲ್ಲಾ ಇಂಗ್ಲಿಷ್‌ನಲ್ಲೇ ಇದ್ದರೂ ಅವುಗಳ ಮಾಂಸದ ಹೆಸರುಗಳು ಇಂಗ್ಲಿಷ್‌ನಲ್ಲಿಲ್ಲ. ಏಕೆಂದರೆ ಪ್ರಾಣಿಗಳನ್ನು ಸಾಕುತ್ತಿದ್ದವರು ಇಂಗ್ಲಿಷ್‌ನ್ನು ಮಾತನಾಡುತ್ತಿದ್ದ ರೈತಾಪಿ ಜನರು, ಮಾಂಸವನ್ನು ತಿನ್ನುತ್ತಿದ್ದವರು ಅಧಿಕಾರರೂಢರಾದವರು. ಅಷ್ಟರ ಮಟ್ಟಿಗೆ ಇಂಗ್ಲಿಷ್‌ ಅಲ್ಲಿ ‘ಕಳಪೆ’ಯಾಗಿತ್ತು. ಇಂತಹಾ ಕಾಲದಲ್ಲಿ ಒಬ್ಬ ಶೇಕ್ಸ್‌ಪಿಯರ್ ಹುಟ್ಟಿಕೊಂಡ. ಆದರೆ ನಮ್ಮ ಭಾರತದಲ್ಲಿ ಪಂಪ ತನ್ನ ಕೃತಿ ಭಾರತವನ್ನು ಬರೆಯುವಾಗ ವೇದವ್ಯಾಸ ಬರೆದ ಮಹಾಭಾರತವನ್ನು ಅರಗಿಸಿಕೊಂಡು ತನ್ನದೇ ಭಾರತವಾಗಿ ಮಾಡಿಕೊಂಡು ಬರೆದ. ಅವನು ಕೃಷ್ಣನನ್ನು ಹೀರೋ ಮಾಡಲಿಲ್ಲ. ಪಂಪನಿಗೆ ಅರ್ಜುನ ನಾಯಕ. ಪಂಪ ಭಾರತವನ್ನು ಓದಿದರೆ ಭಾರತದಲ್ಲಿ ಹರಿಯುವ ನದಿಗಳೆಲ್ಲಾ ಕನ್ನಡದ ಭಾರತದೊಳಗೂ ಹರಿಯುತ್ತವೆ. ಇದರ ಜತೆಗೇ ಕನ್ನಡದ ನದಿಗಳೂ ಹರಿಯುತ್ತವೆ. ಹೀಗೆ ಕನ್ನಡ ಎನ್ನುವುದು ಪ್ರಪಂಚವನ್ನು ನಾವು ಪಡೆಯುವ ಒಂದು ಕನ್ನಡಿ ಆಯಿತು. ಸದಾ ಕನ್ನಡಿಯಾಗಿ ಉಳಿಯಬೇಕಾದದ್ದು ಕನ್ನಡ. ಅದು ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿ, ಜಗತ್ತನ್ನು ನಾವು ನೋಡುವ ಕನ್ನಡಿ ಮತ್ತು ಇದು ಕನ್ನಡಿ ಮಾತ್ರ ಅಲ್ಲ ಒಂದು ದೀಪವೂ ಹೌದು-ಹುಡುಕುವ ದೀಪ, ನೋಡಿಕೊಳ್ಳುವ ಕನ್ನಡಿ.

ಕನ್ನಡದ ಎಚ್ಚರ ಎಂದರೆ ಹುಡುಕುವ ದೀಪವೂ ಇರಬೇಕು. ನೋಡಿಕೊಳ್ಳುವ ಎಚ್ಚರವೂ ಇರಬೇಕು. ಅದು ಇದ್ದರೆ ಮಾತ್ರ ಕನ್ನಡ ಹೀಗೆ ಪ್ರಪಂಚವನ್ನು ತನ್ನ ಒಳಗೆ ಒಳಗೊಳ್ಳುವ ಹಾಗೆ ಬೆಳೆಯುತ್ತದೆ. ಬಿಎಂಶ್ರೀ ನಮ್ಮವರು ಎನ್ನುತ್ತೇವೆ. ಬಿಎಂಶ್ರೀ ಲಯದಲ್ಲಿ ಒಂದು ಬದಲಾವಣೆಯನ್ನು ಮಾಡುವುದರ ಮುಖಾಂತರ ಇಂಗ್ಲಿಷ್‌ ಸಾಹಿತ್ಯದ ಅತ್ಯುತ್ತಮ ಕೃತಿಗಳನ್ನು ಕನ್ನಡದೊಳಕ್ಕೆ ತರಲು ಅನುವು ಮಾಡಿಕೊಂಡರು.  ಕುವೆಂಪು ಅವರಂಥ ಲೇಖಕರು ಬರೆವಣಿಗೆಗೆ ಬೇಕಾದ ಲಯವನ್ನು ಕನ್ನಡಕ್ಕೆ ತಂದು ಕೊಟ್ಟರು. ಕನ್ನಡದ ಶಕ್ತಿ ಏನು ಅಂದರೆ ಈ ಸ್ವೀಕರಿಸುವ ಶಕ್ತಿ. ನನ್ನ ಗೆಳೆಯ ಸುಬ್ಬಣ್ಣ ಒಂದು ಮಾತು ಬರೆಯುತ್ತಾರೆ. ತಮಿಳು ಕೂಡಾ ಕನ್ನಡದ ಹಾಗೆ ಪ್ರಾಚೀನವಾದ ಭಾಷೆ. ಈ ಪ್ರಾಚೀನವಾದ ಭಾಷೆಯಲ್ಲಿ ಬರೆವಣಿಗೆ ಬಂದದ್ದು ಕನ್ನಡದಲ್ಲಿ ಬರೆವಣಿಗೆ ಬಂದ ನಂತರ. ಬರೆವಣಿಗೆಗೆ ಮೊದಲು ಬಳಕೆಯಾದದ್ದು ಕನ್ನಡ, ಆ ಮೇಲೆ ತಮಿಳು. ಕನ್ನಡದಲ್ಲಿ ಬರೆವಣಿಗೆ ಮೊದಲುಗೊಂಡಾಗ ನಾವು ಬ್ರಾಹ್ಮಿಲಿಪಿಯಿಂದ ಕನ್ನಡಕ್ಕೆ ಅಗತ್ಯವಲ್ಲದ ಅಕ್ಷರಗಳನ್ನೂ ಕೂಡಾ ತೆಗೆದುಕೊಂಡೆವು. ಐವತ್ತೆರಡು ಅಕ್ಷರಗಳನ್ನೂ ನಾವು ನಮ್ಮದೆಂದು ಸ್ವೀಕರಿಸಿದೆವು. ತಮಿಳಿನವರು ಹೀಗೆ ಮಾಡಲಿಲ್ಲ. ಅವರು ತಮಿಳಿಗೆ ಬೇಕಾದ ಅಕ್ಷರಗಳನ್ನು ಮಾತ್ರ ಸ್ವೀಕರಿಸಿದರು. ಆದ್ದರಿಂದ ಇವತ್ತು ತಮಿಳಿನಲ್ಲಿ ‘ಕ್ಲಿಂಟನ್‌’ ಎಂದು ಬರೆಯುವುದು ಬಹಳ ಕಷ್ಟ ಅದು ‘ಕ್ಲಿಂಡನ್’ ಎಂದು ಬರೆದು ‘ಕ್ಲಿಂಟನ್’ ಎಂದು ಓದಿಕೊಳ್ಳಬೇಕು. ಗಾಂಧಿ ಎಂದು ಬರೆಯಲು ಸಾಧ್ಯವಿಲ್ಲ. ‘ಕಾಂತಿ’ ಎಂದು ಬರೆದು ‘ಗಾಂಧಿ’ ಎಂದು ಓದಿಕೊಳ್ಳಬೇಕು. ಆದರೆ ಕನ್ನಡದಲ್ಲಿ ಯಾವ ಶಬ್ದವನ್ನಾದರೂ ಬರೆಯಬಹುದು. ಎಲ್ಲಾ ರೀತಿಯ ಉಚ್ಚಾರಣೆಗಳಿಗೆ ಅಗತ್ಯವಾದ ಅಕ್ಷರಗಳೂ ನಮ್ಮಲ್ಲಿವೆ.

ಇದರರ್ಥವೇನು ಎಂದರೆ ತಮಿಳು ತಮಿಳುನಾಡಿಗೆ ಬೇಕಾದಷ್ಟನ್ನು ಸ್ವೀಕರಿಸುವಂತಹಾ ತನ್ನ ಭಾಷೆಯ ಒಳಗಿನ ಹಟವನ್ನು ಬಿಟ್ಟುಕೊಡದ ಆದರೆ ದಿವ್ಯವಾದ ಸ್ವರೂಪವನ್ನು ಪಡೆದ ಭಾಷೆಯಾಗಿ ಉಳಿಯಿತು. ಆದರೆ ಕನ್ನಡ ತನ್ನೊಳಗೆ ಯಾವ ಭಾಷೆಯ ಯಾವ ಪದವನ್ನಾದರೂ ಸ್ವೀಕರಿಸಬಲ್ಲಂಥ ಶಕ್ತಿಯನ್ನು ಗಳಿಸಿಕೊಂಡಿತು. ತನ್ನನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಮಾತ್ರ ತಮಿಳು ಬೆಳೆಸಿಕೊಂಡರೆ, ಕನ್ನಡ ತನ್ನನ್ನು ಉಳಿಸಿಕೊಳ್ಳುವುದರ ಜತೆ ತನ್ನನ್ನು ವಿಸ್ತರಿಸಿಕೊಳ್ಳಬಲ್ಲ ಶಕ್ತಿಯನ್ನು ಪಡೆಯಿತು. ಆದ್ದರಿಂದಲೇ ಸಂಸ್ಕೃತದಲ್ಲಿ ಇರುವುದೆಲ್ಲವೂ ಕನ್ನಡದಲ್ಲಿಯೂ ಲಭ್ಯವಾಯಿತು. ಕಾಳಿದಾಸ ಅಲ್ಲೊಂದು ಕಥನ ಕಾವ್ಯವನ್ನು ಬರೆದರೆ ‘ಗಿರಿಜಾ ಕಲ್ಯಾಣ’ವನ್ನು ಇಲ್ಲಿ ಹರಿಹರ ಬರೆದ. ನಮ್ಮ ಮಧ್ಯಯುಗದಲ್ಲಂತೂ ನಾನು ಈಗ ಹೇಳುತ್ತಿರುವ ಪ್ರಕ್ರಿಯೆ ಬಹಳ ಚುರುಕಾಯಿತು. ನಾವು ದೇವರ ಹತ್ತಿರ ಮಾತನಾಡುವುದಕ್ಕೆ ಸಂಸ್ಕೃತವನ್ನು ಬಳಸುತ್ತಿದ್ದೆವು. ಜನರ ಬಗ್ಗೆ, ಅವರ ಸುಖ-ದುಃಖದ ಬಗ್ಗೆ ಮಾತನಾಡುವುದಕ್ಕೆ ನಾವು ಕನ್ನಡವನ್ನು ಬಳಸಿದೆವು. ಆದರೆ ಆಧ್ಯಾತ್ಮಿಕವಾದ ತನ್ನ ಆಲೋಚನೆಗೆ ಬುದ್ಧ ಎರಡು ಸಾವಿರ ಐದುನೂರು ವರ್ಷಗಳ ಹಿಂದೆಯೇ ಮಹಾಜನರ ಭಾಷೆಯನ್ನು ಬಿಟ್ಟು ಜನಭಾಷೆಯನ್ನು ಸ್ವೀಕರಿಸಿದ. ಜಗತ್ತಿನಲ್ಲಿ ನಡೆದ ಮೊದಲನೇ ದೊಡ್ಡ ಕ್ರಾಂತಿ ಎಂದರೆ ಜನಭಾಷೆಯಲ್ಲಿ ಆಧ್ಯಾತ್ಮಿಕವಾದುದನ್ನು, ಆಳವಾದುದನ್ನು ಇವತ್ತಿಗೂ ಉಳಿದಿರುವಂಥ ತಾತ್ವಿಕತೆಯನ್ನು ಬುದ್ಧ ಹೇಳಿದ್ದೇ ಇರಬೇಕು. ಆಮೇಲೆ ಪ್ರಾಕೃತವನ್ನು ಜೈನರು ಬಳಸಿದರು. ಆಮೇಲಿನಿಂದ ದೇವರ ಜತೆ ಮಾತನಾಡುವುದಕ್ಕೂ ನಮ್ಮ ವಚನಕಾರರು ಕನ್ನಡವನ್ನು ಬಳಸಿದರು. ನಮ್ಮ ದಾಸರೂ ಕೂಡಾ ಕನ್ನಡವನ್ನು ಬಳಸಿಯೇ ದೇವರ ಜತೆ ಸಂವಾದ ಮಾಡಿದರು. ಯಾವುದು ಕೇವಲ ಜನರು ಮಾತ್ರ ಬಳಸುವ ಭಾಷೆಯಾಗಿತ್ತೋ ಅದು ದೇವರ ಜತೆಯೂ ಮಾತನಾಡುವ ಭಾಷೆಯಾಯಿತು. ಆ ಕಾಲದಿಂದ ಅಂದರೆ ಸುಮಾರು ಹನ್ನೆರಡನೇ ಶತಮಾನದಿಂದ ಕನ್ನಡ ಹಿಂದಕ್ಕೆ ನೋಡದೆಯೇ ಬೆಳೆದು ವಿಸ್ತಾರವಾಯಿತು.

ಇದಕ್ಕೆ ಒಂದು ತತ್ವ ಇದೆ. ಇದನ್ನು ನಾನು ಇಂಡಿಯಾದಲ್ಲಿ ಎಲ್ಲಿ ಹೋದರೂ ಮಾತನಾಡಿದ್ದೇನೆ. ಎಲ್ಲಾ ಭಾಷೆಯವರು, ತಮಿಳರು ಮರಾಠಿಗರೂ ಕೂಡಾ ನಾನು ಹೇಳಿದ್ದನ್ನು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಮಾತೃಭಾಷೆ ಎನ್ನುವ ಶಬ್ದಕ್ಕೆ, ಯೂರೋಪಿನಲ್ಲಿ ಮಾತೃಭಾಷೆ ಎನ್ನುವ ಶಬ್ದಕ್ಕೆ ಇರುವ ಅರ್ಥ ಇಲ್ಲ. ಯೂರೋಪಿನಲ್ಲಿ ಇರುವುದು ಮಾತೃಭಾಷೆ ಒಂದೇ. ಇಂಗ್ಲೆಂಡ್‌ನಲ್ಲಿ ಒಂದು ಜೋಕ್ ಇದೆ. ‘ಅವನು ಇಂಗ್ಲಿಷ್‌ನಲ್ಲಿ ಹೇಳುತ್ತಾನೆ. ಅರ್ಥವಾಗದೇ ಇದ್ದರೆ ಅದನ್ನೇ ಇನ್ನೂ ಗಟ್ಟಿಯಾಗಿ ಇಂಗ್ಲಿಷ್‌ನಲ್ಲಿ ಹೇಳುತ್ತಾನೆ.’ ಅವರಿಗೆ ಇನ್ನೊಂದು ಭಾಷೆ ಇದೆ ಎನ್ನುವುದೇ ಗೊತ್ತಿರುವುದಿಲ್ಲ. ಆದರೆ ಭಾರತ ಯಾವತ್ತೂ ಬಹುಭಾಷಾ ವಲಯದ ಜಗತ್ತು. ನೀವು ಉಡುಪಿಗೆ ಬನ್ನಿ, ಅಲ್ಲಿ ತುಳು ಮಾತನಾಡುವವರಿದ್ದಾರೆ, ಬ್ಯಾರಿ ಮಾತನಾಡುವವರಿದ್ದಾರೆ, ಕೊಂಕಣಿ ಮಾತನಾಡುವವರಿದ್ದಾರೆ, ಕನ್ನಡ ಮಾತನಾಡುವವರಿದ್ದಾರೆ. ಗುಲ್ಬರ್ಗದಲ್ಲೂ ಹೀಗೆಯೇ. ಶ್ರೀವಿಜಯನ ಕಾಲದಲ್ಲೂ ಹೀಗೆಯೇ ಇದ್ದಿರಬೇಕು. ಆದ್ದರಿಂದಲೇ ಅವನು ಸಾವಿರ ಹೆಡೆಗಳಿರುವ ಕನ್ನಡ ಎನ್ನುತ್ತಾನೆ. ಅವನ ಕಾಲದಲ್ಲಿಯೂ ಒಂದು ಕನ್ನಡವಿರಲಿಲ್ಲ. ಇದರಲ್ಲಿ ಅವನು ಒಂದು ಕನ್ನಡವನ್ನು ಆರಿಸಿಕೊಳ್ಳುವಾಗಲೂ ರಾಜಧಾನಿಯ ಕನ್ನಡ ಬೇಕು ಎನ್ನುವುದಿಲ್ಲ. ಅವನು ಬನವಾಸಿಯ ಕನ್ನಡವನ್ನು ಆರಿಸಿಕೊಳ್ಳುತ್ತಾನೆ. ನೀವು ಕೂಡಾ ಬೆಂಗಳೂರಿನ ಕನ್ನಡವನ್ನು ನಿಮ್ಮ ಕನ್ನಡ ಎಂದುಕೊಂಡರೆ ನಿಮ್ಮ ಕನ್ನಡ ಉಳಿಯುವುದಿಲ್ಲ. ಬೆಂಗಳೂರಿನ ಆಕರ್ಷಣೆ ನಿಮಗೆ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಮಾಡುವುದಕ್ಕೆ ಇಂದು ನಿಮ್ಮನ್ನು ಉತ್ತೇಜಿಸಿದಂತೆ ಸದಾ ಉತ್ತೇಜಿಸುತ್ತಾ ಇರಬೇಕು. ನಿಮ್ಮಲ್ಲಿ ಅದ್ಭುತವಾದ ನಾಟಕೋತ್ಸವವನ್ನು ಮಾಡುತ್ತೀರಿ. ಇದರಲ್ಲಿ ಅಖಿಲ ಕರ್ನಾಟಕ ಮಟ್ಟದಿಂದ ಬಂದಿರುವ ಪ್ರೇರಣೆ ಇದೆ. ಆದರೆ ಬೆಂಗಳೂರಿನ ಕೆಲವು ಪ್ರೇರಣೆಗಳನ್ನು ನೀವು ತೆಗೆದುಕೊಳ್ಳಬೇಡಿ. ಕನ್ನಡ ನಾಡು ಕನ್ನಡ ನಾಡಾಗಿಯೇ ಉಳಿಯಬೇಕಾದರೆ ಅದಕ್ಕೆ ಬೆಂಗಳೂರಿನ ಪ್ರೇರಣೆಗಳಿರಬಾರದು. ಬೆಂಗಳೂರಿಗೆ ಸ್ವಲ್ಪ ನಾಗಮಂಗಲದ ಪ್ರೇರಣೆ ಇದ್ದರೆ ಒಳ್ಳೆಯದು. ನನಗೆ ತೀರ್ಥಹಳ್ಳಿಯ ಪ್ರೇರಣೆಯಿಂದ ನನ್ನ ಕನ್ನಡ ಉಳಿದಿದೆ.

ಯಾವುದು ನೈಜವಾಗಿ ಸ್ಥಳೀಯವೊ, ಅದು ಮಾತ್ರ ಸರ್ವದೇಶೀಯವೂ ಆಗಿರುತ್ತದೆ. ಕೇವಲ ಸರ್ವದೇಶೀಯವಾದದ್ದು ಫೈವ್ ಸ್ಟಾರ್ ಹೊಟೇಲಿನಂತಿರುತ್ತದೆ. ಸ್ಥಳೀಯವಾಗಿಯೇ ಸರ್ವದೇಶೀಯವಾಗಿರುವಂಥದ್ದು ಕನ್ನಡದಂಥ ಭಾರತೀಯ ಭಾಷೆಗಳ ಸಂದರ್ಭದಲ್ಲಿ ಸಾಧ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ನನ್ನದೊಂದು ಥಿಯರಿ ಇದೆ. ನಾವು ಮಾತೃಭಾಷೆ ಎಂಬ ಪ್ರಯೋಗದ ಬದಲಿಗೆ ‘ಮನೆ ಮಾತು’, ‘ಬೀದಿ ಮಾತು’, ಮತ್ತು ‘ಅಟ್ಟದ ಮಾತು’ ಎಂಬ ಪರಿಕಲ್ಪನೆಗಳನ್ನು ಉಪಯೋಗಿಸಬೇಕು. ‘ಮನೆ ಮಾತು’ ಎಂದರೆ ಮನೆಯಲ್ಲಿ ಆಡುವ ಮಾತು. ನಮ್ಮಲ್ಲಿ ಕನ್ನಡದಲ್ಲಿ ಬಹಳ ಚೆನ್ನಾಗಿ ಬರೆಯುವವರು, ಕನ್ನಡವನ್ನು ಬಹಳ ಚೆನ್ನಾಗಿ ಆಡುವವರಿದ್ದಾರೆ. ಅವರ ಮನೆಗೆ ಹೋದರೆ ತೆಲುಗು ಮಾತನಾಡುತ್ತಿರುತ್ತಾರೆ. ಮಾಸ್ತಿಯವರ ಮನೆಗೆ ಹೋದರೆ ಅವರು ತಮಿಳು ಮಾತನಾಡುತ್ತಿರುತ್ತಾರೆ, ಬೇಂದ್ರೆಯವರ ಮನೆಗೆ ಹೋದರೆ ಅವರು ಮರಾಠಿ ಮಾತನಾಡುತ್ತಿರುತ್ತಾರೆ. ಬಹಳ ಜನ ಮನೆಯಲ್ಲಿ ಉರ್ದು ಮಾತನಾಡುತ್ತಿರುತ್ತಾರೆ. ಆದರೆ ಅವರು ಕನ್ನಡದಲ್ಲಿ ಬರೆಯುತ್ತಾರೆ. ಈ ಮನೆ ಮಾತು ಸಾಂಸ್ಕೃತಿಕ ಅಗತ್ಯವಾಗಿರುತ್ತದೆ; ಹೆಣ್ಣು ತರುವುದಕ್ಕೆ, ಹೆಣ್ಣು ಕೊಡುವುದಕ್ಕೆ, ಒಂದು ಆಪತ್ತೆಗಾಗಿ. ಉಡುಪಿಯಲ್ಲಿ ಇದು ತುಳುವಾಗಿದ್ದರೆ, ಬೆಂಗಳೂರಿನ ಮುಸ್ಲಿಮರ ಮಧ್ಯೆ ಅದು ಉರ್ದುವಾಗಿರಬಹುದು, ಮಂಗಳೂರಿನ ಮುಸ್ಲಿಮರಲ್ಲಿ ಅದು ಬ್ಯಾರಿ ಆಗಿರಬಹುದು. ಹಾಗೆಯೇ ಅಟ್ಟದ ಮಾತು ಎಂಬುದೊಂದಿದೆ. ಹಿಂದೆ ಅದು ಸಂಸ್ಕೃತವಾಗಿತ್ತು. ಈಗ ಅದು ಇಂಗ್ಲಿಷ್ ಆಗಿದೆ. ಆದರೆ ಬೀದಿಯ ಮಾತು ಅಥವಾ ಜನರ ಮಾತು ಅಥವಾ ಸ್ಥಳೀಯ-ಪ್ರಾಂತೀಯ ಮಾತು ಅದು ನಮ್ಮ ಸೃಜನಶೀಲತೆಗೆ ಅಗತ್ಯವಾದದ್ದು. ಆದ್ದರಿಂದ ನಾವು ಭಾರತದಲ್ಲಿ ಒಂದು ಭಾಷೆಯ ಮೇಲೆ ಪ್ರೀತಿ ಇದ್ದರೆ ಉಳಿದ ಭಾಷೆಗಳನ್ನು ಬಿಡಬೇಕು ಎಂದು ಯಾರಿಗೂ ಹೇಳಲೇಬಾರದು. ಎಷ್ಟೋ ದೊಡ್ಡ ಸಂಸ್ಕೃತ ಕವಿಗಳು ಮನೆಯಲ್ಲಿ ಬೇರೆ ಯಾವುದೋ ಭಾಷೆಯನ್ನು ಮಾತನಾಡುತ್ತಿದ್ದರು. ಕರ್ನಾಟಕದ ಅನೇಕ ಪ್ರಮುಖ ಲೇಖಕರು ಮನೆಯಲ್ಲಿ ಯಾವ ಭಾಷೆಯನ್ನು ಮಾತನಾಡುತ್ತಿದ್ದರೂ ಕನ್ನಡದಲ್ಲಿ ಬರೆಯುತ್ತಿದ್ದರು, ಬರೆಯುತ್ತಿದ್ದಾರೆ.

ಇದು ಯೂರೋಪಿನಲ್ಲಿ ಸಾಧ್ಯವಾಗುವುದಿಲ್ಲ. ಇದು ಭಾರತದ ವೈಶಿಷ್ಟ್ಯ. ಆದ್ದರಿಂದಲೇ ಭಾರತದಲ್ಲಿ ಎಲ್ಲ ಭಾಷೆಗಳೂ ಉಳಿದುಕೊಂಡಿವೆ. ಈ ಎಲ್ಲಾ ಭಾಷೆಗಳಿಗೂ ಅವಕ್ಕೇ ಆದ ಕೆಲವು ಕ್ರಿಯೆಗಳು, ಅನುಕೂಲಗಳು ಇವೆ. ಹಾಗೆಯೇ ಈ ಎಲ್ಲಾ ಭಾಷೆಗಳನ್ನೂ ಮಾತನಾಡುವ ಜನ ಕನ್ನಡವನ್ನೂ ಮಾತನಾಡುವುದರಿಂದ ಆ ಎಲ್ಲಾ ಭಾಷೆಗಳ ಒಳಗಿರುವ ಪ್ರೇರಣೆಗಳು ಕನ್ನಡದೊಳಕ್ಕೆ ಬರುತ್ತವೆ. ಇದಕ್ಕೆ ಒಂದು ಉದಾಹರಣೆಯಾಗಿ ಶಿವರಾಮ ಕಾರಂತರ ‘ಚೋಮನ ದುಡಿ’ಯನ್ನು ತೆಗೆದುಕೊಳ್ಳಬಹುದು. ಬಹಳ ಒಳ್ಳೆಯ ಮತ್ತು ಮುಖ್ಯವಾದ ಕಾದಂಬರಿ. ನೀವು ಅದನ್ನು ಓದಿದ್ದರೆ ಅಲ್ಲಿರುವ ಪಾತ್ರಗಳೆಲ್ಲಾ ಯಾವ ಭಾಷೆ ಮಾತನಾಡುತ್ತಿರಬಹುದು ಎಂದು ಯೋಚಿಸಿ ನೋಡಿ. ಅವೆಲ್ಲಾ ಮಾತನಾಡುತ್ತಿರುವುದು ತುಳುವನ್ನು. ಚೋಮ, ಚೋಮನ ಮಕ್ಕಳೆಲ್ಲಾ ತುಳುವಿನಲ್ಲಿ ಮಾತನಾಡುತ್ತಿರುತ್ತಾರೆ. ಕಾರಂತರು ಅದನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಾಗೆಯೇ ಯಶವಂತ ಚಿತ್ತಾಲರು ಕೊಂಕಣಿ ಮಾತಾಡುವ ಪಾತ್ರಗಳನ್ನು ಕನ್ನಡದಲ್ಲಿ ಬರೆದರು. ಅಂದರೆ ಕನ್ನಡ ಎನ್ನುವುದು ಕರ್ನಾಟಕದ ಕೊಂಕಣಿಯನ್ನು, ತುಳುವನ್ನು, ಬ್ಯಾರಿ ಭಾಷೆಯನ್ನು ತನ್ನ ಒಳಗೆ ತೆಗೆದುಕೊಳ್ಳಬಲ್ಲ ಭಾಷೆ. ಹೀಗೆ ತೆಗೆದುಕೊಂಡಾಗ ಅವುಗಳನ್ನು ನಾಶ ಮಾಡದಂತೆ ತನ್ನೊಳಗೆ ತೆಗೆದುಕೊಳ್ಳಬಹುದಾದ ಮಾತೃಗುಣ ಅದಕ್ಕಿದೆ. ಅಮೆರಿಕವೂ ಹೀಗೆ ಎಲ್ಲವನ್ನೂ ತನ್ನೊಳಕ್ಕೆ ತೆಗೆದುಕೊಳ್ಳುತ್ತದೆ. ಆದರೆ ಮೂಲದ ಅಸ್ಮಿತೆಯನ್ನೇ ನಾಶ ಮಾಡಿ ತನ್ನೊಳಕ್ಕೆ ತೆಗೆದುಕೊಳ್ಳುತ್ತದೆ. ಕನ್ನಡ ಇಲ್ಲಿಯ ತನಕ ಶ್ರೀಮಂತವಾಗಿರುವುದೇ ಈ ರೀತಿಯ ಪಡೆಯುವ, ಕೊಡುವ ಇಬ್ಬಗೆಯ ಸಾಮರ್ಥ್ಯವನ್ನು ಉದಾರವಾಗಿ ಉಳಿಸಿಕೊಂಡಿರುವುದರಿಂದ. ಕನ್ನಡ ಅದನ್ನು ಯಾವತ್ತೂ ಕಳೆದುಕೊಳ್ಳಬಾರದು ಎಂಬುದು ನನ್ನ ಬಹಳ ಮುಖ್ಯವಾದ ಕಳಕಳಿ.

ನಮ್ಮ ಭಾರತದ ಸಂಸ್ಕೃತಿ ಹಲವು ದಾರಗಳು ಹೆಣೆದುಕೊಂಡಿರುವ ಸಂಸ್ಕೃತಿ. ಅದರಲ್ಲಿರುವ ಪ್ರತಿಯೊಂದು ದಾರಕ್ಕೂ ಅದರದ್ದೇ ಆದ ಬಣ್ಣ, ಬೆಡಗು ಇದೆ. ಆದ್ದರಿಂದ ದಾರ ತನ್ನ ಬಣ್ಣ ಮತ್ತು ಬೆಡಗನ್ನು ಕಳೆದುಕೊಂಡರೆ ಹೆಣೆಗೆಯೂ ತನ್ನ ಬೆಡಗನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಭಾರತವನ್ನು ಒಂದೇ ಭಾಷೆಯ, ಒಂದೇ ಧರ್ಮದ ಒಂದೇ ರೀತಿ ಆಲೋಚನೆ ಮಾಡುವ ದೇಶವಾಗಿ ಮಾಡಿಬಿಟ್ಟರೆ ಇದು ಒಂದು ದೊಡ್ಡ ನಾಗರಿಕತೆಯಾಗಿ ಉಳಿಯುವುದಿಲ್ಲ. ನಮ್ಮಲ್ಲಿ ಇಬ್ಬರು ಮಹಾ ಚಿಂತಕರಿದ್ದರು. ಒಬ್ಬರು ಗಾಂಧೀಜಿ ಮತ್ತೊಬ್ಬರು ಟ್ಯಾಗೋರ್. ಅವರಿಬ್ಬರು ಈ ನೇಷನ್ ಎನ್ನುವ ಶಬ್ದವನ್ನು ಭಾರತದ ಸಂದರ್ಭದಲ್ಲಿ ಉಪಯೋಗಿಸುವುದಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡುತ್ತಿದ್ದರು. ಏಕೆಂದರೆ ಯೂರೋಪ್‌ನಲ್ಲಿ ನೇಷನ್ ಎಂದರೆ ಒಂದೇ ಭಾಷೆ ಇರಬೇಕು. ಒಂದೇ ಜನಾಂಗವಿರಬೇಕು. ಒಂದೇ ಬಣ್ಣದವರಿರಬೇಕು. ಇಂಥ ನೇಷನ್‌ಗಳು ಎರಡು ಮಹಾಯುದ್ಧಗಳಲ್ಲಿ ಒಬ್ಬರನ್ನೊಬ್ಬರು ಸಾಯಿಸಿದರು. ಜರ್ಮನ್ನರು ಬ್ರಿಟಿಷರನ್ನು ಸಾಯಿಸಿದರು, ಬ್ರಿಟಿಷರು ಜರ್ಮನ್ನರನ್ನು ಕೊಂದರು, ಫ್ರೆಂಚರು ಇಟಾಲಿಯನ್ನರನ್ನು ಸಾಯಿಸಿದರು. ಗಾಂಧಿಗೆ ಇಂತಹಾ ನೇಷನ್ ಬೇಕಾಗಿರಲಿಲ್ಲ. ಆದ್ದರಿಂದ ಗಾಂಧೀಜಿ ಭಾರತವನ್ನು ಒಂದು ನಾಗರಿಕತೆ ಎಂದು ಕರೆದರು. ಇದು ನಾಗರಿಕತೆಯಾದ್ದರಿಂದ ಹಲವು ಭಾಷೆಗಳು, ಹಲವು ಧರ್ಮಗಳ, ಹಲವು ರೀತಿಯ ರುಚಿಗಳ ನಾಡು ಭಾರತ. ನಾವು ಬದುಕುಳಿಯುವುದಕ್ಕೂ ಇದು ಬೇಕು.

ಬೇರೆ ದೇಶಗಳ ಜತೆ ಹೋಲಿಸಿಕೊಂಡಾಗ ನಮಗೆ ಇದು ಅರ್ಥವಾಗುತ್ತದೆ. ಉದಾಹರಣೆಗೆ ಅಮೆರಿಕದಲ್ಲಿ ಬ್ರೆಡ್‌ಗೆ ಕ್ಷಾಮ ಬಂದರೆ ಏನು ಮಾಡಬೇಕು ಎಂದು ಅವರಿಗೆ ಗೊತ್ತಾಗುವುದಿಲ್ಲ. ನಮ್ಮಲ್ಲಿ ಹಾಗಲ್ಲ, ಅಕ್ಕಿ ತಿನ್ನುವವರು, ರಾಗಿ ತಿನ್ನುವವರು, ಗೋಧಿ ತಿನ್ನುವರು, ಜೋಳ ತಿನ್ನುವವರೆಲ್ಲಾ ಇದ್ದಾರೆ. ಒಂದು ಬಗೆಯ ಎಣ್ಣೆ ಹೋದರೆ ನೂರಾರು ಬಗೆಯ ಬೇರೆ ಎಣ್ಣೆಗಳಿವೆ. ಒಳ್ಳೆಣ್ಣೆ ಇಲ್ಲವಾದರೆ ಎಳ್ಳೆಣ್ಣೆ ಇದೆ, ಕೊಬ್ಬರಿ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿವೆ. ಭಾರತವನ್ನು ಬೇರೆ ಬೇರೆ ಬೆಲ್ಟ್‌ಗಳಾಗಿಯೂ ನಾವು ನೋಡಬಹುದು. ಇದು ಕೋಕೊನಟ್ ಬೆಲ್ಟ್‌, ಇದು ಸಾಸಿವೆ ಎಣ್ಣೆ ಬೆಲ್ಟ್, ಇದು ರಾಗಿ ಬೆಲ್ಟ್‌, ಇದು ಜೋಳದ ಬೆಲ್ಟ್ ಹೀಗೆ. ನಮ್ಮಲ್ಲಿ ಹಲವು ಬಗೆಯ ಆಹಾರಗಳು, ಹಲವು ಬಗೆಯ ಧರ್ಮಗಳು, ಬದುಕಿನ ವಿಧಾನಗಳಿವೆ.  ಈ ಬಹುತ್ವವೇ ಭಾರತದ ಶಕ್ತಿ. ಅದರೊಳಗೇ ಒಂದು ದೊಡ್ಡ ಶಕ್ತಿ ಎಂದರೆ ಕನ್ನಡ. ಈ ಎಲ್ಲಾ ಬಹುತ್ವಗಳನ್ನೂ ಒಗ್ಗೂಡಿಸುವ ಒಂದು ಕಲ್ಪನೆಯಾಗಿ ಕನ್ನಡವಿರಬೇಕು. ಅಂದರೆ ರಾಗಿ ತಿನ್ನುವವರು, ಜೋಳ ತಿನ್ನುವವರು, ನಮಾಜು ಮಾಡುವವರು, ಚರ್ಚ್‌‌ನಲ್ಲಿ ಪ್ರಾರ್ಥನೆ ಮಾಡುವವರು, ಪ್ರಾರ್ಥನೆಯನ್ನೇ ಮಾಡದೇ ಇರುವವರು, ದೇವರನ್ನು ನಿರಾಕಾರ ಎಂದು ತಿಳಿಸಿದವರು, ನಿರ್ಗುಣ ಎಂದು ಭಾವಿಸುವರು, ಸಗುಣ ಎಂದು ಅಂದುಕೊಂಡವರು ಎಲ್ಲರೂ ತಮಗೆ ಬೇಕಾದ ಹಾಗೆ ಅಂದುಕೊಂಡಿರಲಿ. ಆದರೆ ಅವೆಲ್ಲವನ್ನೂ ಕನ್ನಡದ ಒಳಗೆ ತಿಳಿದುಕೊಂಡಿರಲಿ. ಅದಕ್ಕೆ ‘ಹಚ್ಚೇವು ಕನ್ನಡದ ದೀಪ…’. ನಾವೆಲ್ಲರೂ ಸೇರಿ ಒಂದು ಸಮುದಾಯವಾಗಿ ನಾವಿದನ್ನು ಹಚ್ಚುತ್ತೇವೆ.

ಈಗ ಕನ್ನಡದ ಮತ್ತೊಂದು ಪ್ರಶ್ನೆಯ ಬಗ್ಗೆ ಹೇಳುತ್ತೇನೆ. ಇಷ್ಟರವರೆಗೆ ಕನ್ನಡಕ್ಕೆ ಒಂದು ಅಪಾಯವಿದ್ದದ್ದು ಜಾಗತೀಕರಣದಿಂದ. ಎಲ್ಲಾ ಬೆಂಗಳೂರಿಗೆ ಹೋಗುವುದಕ್ಕೆ ಆರಂಭಿಸಿದರು. ಇದನ್ನು ಒಂದು ಉದಾಹರಣೆಯ ಜತೆಗೆ ವಿವರಿಸಲು ಪ್ರಯತ್ನಿಸುತ್ತೇನೆ. ನಮ್ಮ ಹಿಂದಿನವರು ಅಂದರೆ ರಾಜ-ಮಹಾರಾಜರು, ಪಾಳೇಗಾರರು ಒಳ್ಳೆಯ ಕೆಲಸ ಅಂದರೆ ಏನು ಮಾಡುತ್ತಿದ್ದರು? ಕೆರೆಗಳನ್ನು ಕಟ್ಟಿಸುತ್ತಿದ್ದರು, ಸಾಲು ಮರಗಳನ್ನು ನೆಡಿಸುತ್ತಿದ್ದರು. ನಾವೆಲ್ಲಾ ಶಾಲೆಯಲ್ಲಿ ಚರಿತ್ರೆ ಓದುವಾಗ ಒಳ್ಳೆಯ ರಾಜನ ಬಗ್ಗೆ ಯಾವ ಪ್ರಶ್ನೆ ಬಂದರೂ ನಮ್ಮದೊಂದು ಸಿದ್ಧ ಉತ್ತರ ಇರುತ್ತಿತ್ತು. ಅವನು ಸಾಲು ಮರಗಳನ್ನು ನೆಡಿಸಿದ, ದೇವಸ್ಥಾನಗಳನ್ನು ಕಟ್ಟಿಸಿದ, ಅವನು ಕೆರೆ ಕಟ್ಟೆಗಳನ್ನು ಮಾಡಿದ ಎಂಬುದು ಈ ಉತ್ತರದ ಬಹುಮುಖ್ಯ ಭಾಗ. ಈಗ ಒಂದು ಸರಕಾರ ಏನು ಮಾಡಿದೆ ಎಂಬ ಪ್ರಶ್ನೆ ಬಂದರೆ ಸಾಲುಮರಗಳನ್ನು ಕಡಿದು, ರಸ್ತೆಗಳನ್ನು ಅಗಲ ಮಾಡಿದರು. ಕೆರೆಗಳನ್ನೆಲ್ಲಾ ಮುಚ್ಚಿಸಿ ನಿವೇಶನಗಳನ್ನಾಗಿ ಮಾಡಿ ಮಾರಿದರು ಎಂದು ಹೇಳಬೇಕಾಗುತ್ತದೆ. ಇದು ಜಾಗತೀಕರಣದ ಪ್ರೇರಣೆಯಿಂದ ನಡೆಯುತ್ತಿರುವ ನಗರೀಕರಣದ ಒಂದು ಕ್ರಮ. ಕನ್ನಡ ನಾಶವಾಗುವುದು ಈ ರೀತಿಯ ನಗರೀಕರಣದಿಂದ. ಈ ನಗರೀಕರಣದಿಂದ ಕನ್ನಡವನ್ನು ಉಳಿಸಬೇಕೆಂದರೆ ನಾವು ನಮ್ಮ ಕೈಗಾರಿಕೆಗಳು ಮತ್ತು ಬೇಸಾಯಗಳ ಮಧ್ಯೆ ಒಂದು ಸಮತೋಲನವನ್ನು ಸಾಧಿಸಬೇಕು.

ಸೆನ್ಸೆಕ್ಸ್‌ ಏರಿಳಿಯುವುದರಿಂದ ಹೃದಯದ ಬಡಿತವು ಏರಿಳಿಯುವುದು ಯಾರಿಗೆ? ಯಾರಿಗೆ ಹಣ ಎನ್ನುವುದು ನಿಜವಾಗಿ ಒಂದು ನಿಜ ಮೊತ್ತವಾಗದೆ ಕಾಲ್ಪನಿಕವಾದ ಬ್ಯಾಂಕಿನಲ್ಲಿ ಇರಬಹುದಾದ, ಒಬ್ಬರಿಂದೊಬ್ಬರಿಗೆ ದಾಟಿಸಬಹುದಾದ, ಎಲೆಕ್ಟ್ರಾನಿಕಲೀ ವ್ಯವಹಾರ ಮಾಡಬಹುದ ಒಂದು ಮೊತ್ತವೋ ಅವರಿಗೆ ಸೆನ್ಸೆಕ್ಸ್ ಬಹಳ ಮುಖ್ಯ. ಈಗ ಅದು ಇಳಿದು ಹೋಗಿದೆ. ಎಲ್ಲರ ಕೆಲಸಗಳೂ ಕಳೆದು ಹೋಗುತ್ತಿವೆ. ಗಣಿಗಾರಿಕೆ ಬತ್ತಿಯೇ ಹೋಯಿತು. ಅದರಿಂದ ನನಗಾದ ಸಂತೋಷ ಇನ್ನಾವುದರಿಂದಲೂ ಆಗಿಲ್ಲ. ಗಣಿಗಾರಿಕೆ ಹೀಗೆ ಹಿನ್ನಡೆ ಕಾಣದೇ ಹೋಗದಿದ್ದರೆ ನಮ್ಮ ಎಲ್ಲಾ ಸಂಪತ್ತನ್ನೂ ನಾವು ಬೇರೆ ದೇಶಗಳಿಗೆ ಮಾರಿಬಿಡುತ್ತಿದ್ದೆವು. ಕನ್ನಡದ ಭೂಮಿಯ ಒಳಗಿರುವ ಸಂಪತ್ತನ್ನು ನಾವು ನಮ್ಮ ಮಕ್ಕಳಿಗಾಗಿ ಕಾದಿಡಬೇಕು. ಇವತ್ತಿಲ್ಲದಿದ್ದರೆ ನಾಳೆ ನಮ್ಮ ಉಪಯೋಗಕ್ಕೆ ಬರುತ್ತದೆ. ಅಮೆರಿಕದಲ್ಲಿ ಪೆಟ್ರೋಲ್ ಇದೆ. ಅವರದನ್ನು ಮುಟ್ಟಲು ಹೋಗುವುದಿಲ್ಲ. ನಮ್ಮ ಮೊಮ್ಮಕ್ಕಳಿಗೆ ಬೇಕು ಎಂದು ಕಾದಿರಿಸುತ್ತಾರೆ.

ನೀವು ನಾಗಮಂಗಲದಲ್ಲಿ ಸಮಸ್ಯೆಗಳಿವೆ ಎಂದು ಹೇಳುತ್ತಿದ್ದೀರಿ. ಮಳೆ ಬಿದ್ದರೆ ಉಂಟು, ಬೀಳದೇ ಇದ್ದರೆ ಇಲ್ಲ ಎಂಬುದು ನಿಮ್ಮ ಸಮಸ್ಯೆ. ವರುಣರಾಯನ ಕೃಪೆಯ ಮೇಲೆ ನಿಂತಿರುವ ಒಂದು ಸಮಾಜ ಕೆಲವು ಸಾರಿ ಕ್ಷಾಮವನ್ನು ಎದುರಿಸಬಹುದು ಆದರೆ ಅದು ಬದುಕಿ ಉಳಿಯುತ್ತದೆ. ಆದರೆ ಸೆನ್ಸೆಕ್ಸ್‌ ಮೇಲೆ ನಿಂತಿರುವ ಸಮಾಜ ಉಳಿಯುವುದಿಲ್ಲ. ಆದ್ದರಿಂದ ಮಳೆಯ ಮೇಲೆ ಆಧಾರಿತವಾದ ಆರ್ಥಿಕತೆ ಸೆನ್ಸೆಕ್ಸ್‌ ಮೇಲೆ ಆಧಾರಿತವಾದ ಆರ್ಥಿಕತೆಗಿಂತ ಉತ್ತಮ ಎಂಬುದು ನನ್ನ ನಿಲುವು. ಮಳೆಯನ್ನೇ ಆಧಾರವಾಗಿಟ್ಟುಕೊಂಡಿದ್ದರೆ ಮಳೆ ಬಂದಾಗ ನೀರನ್ನು ಉಳಿಸಿಟ್ಟುಕೊಳ್ಳಬೇಕು. ಮಳೆ ನೀರಿನ ಕೊಯ್ಲು ಮಾಡುವ ಅನೇಕ ವಿಧಾನಗಳು ಇವತ್ತು ನಮಗೆ ತಿಳಿದಿವೆ. ನಮಗಿಂತ ಹೆಚ್ಚು ಇದು ನಮ್ಮ ಹಿಂದಿನವರಿಗೆ ತಿಳಿದಿತ್ತು. ಬ್ರಿಟಿಷರು ಕರ್ನಾಟಕದಲ್ಲಿ ಎಲ್ಲೆಲ್ಲಿ ಗೋಮಾಳಗಳನ್ನು ಮಾಡಬಹುದು, ಎಲ್ಲೆಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಬಹುದು, ಅದಕ್ಕೆ ಬೇಕಾದ ಗುಂಡಿಗಳನ್ನು ಎಲ್ಲೆಲ್ಲಿ ತೆಗೆಯಬೇಕು, ನೀರು ಹೇಗೆ ಹರಿಯುತ್ತದೆ ಎಂಬುದರ ಬಗ್ಗೆ ಒಂದು ದೊಡ್ಡ ವೈಜ್ಞಾನಿಕವಾದ ಸಮೀಕ್ಷೆಯನ್ನು ಕೈಗೊಂಡಿದ್ದರಂತೆ. ಇದರ ಫಲಿತಾಂಶ ಬಂದಾಗ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿಯೇ ಎಲ್ಲೆಲ್ಲಿ ನೀರು ನಿಲ್ಲಬೇಕೋ ಅಲ್ಲಿ ನಿಲ್ಲುವ ಹಾಗೆ, ಎಲ್ಲೆಲ್ಲಿ ಕೆರೆಗಳಿರಬೇಕೋ ಅಲ್ಲಿ ಕೆರೆಗಳಿರುವಂಥ ವ್ಯವಸ್ಥೆ ಆಗಿತ್ತು ಎಂಬುದು ಅವರಿಗೆ ತಿಳಿಯಿತು. ವರುಣನ ಕೃಪೆಯಿಂದ ಬದುಕುವ ಪ್ರಪಂಚ ಆಕಾಶಕ್ಕೂ ಮತ್ತು ಭೂಮಿಗೂ ಒಂದು ರೀತಿಯ ಸಂಬಂಧವನ್ನು ಇಟ್ಟುಕೊಂಡಿರಬೇಕಾಗುತ್ತದೆ. ಅದು ತಾಯಿ-ಮಕ್ಕಳ ಸಂಬಂಧದಂತೆ ಪವಿತ್ರವಾದ ಸಂಬಂಧ. ಇದು ಸೆನ್ಸೆಕ್ಸ್ ಆಧಾರಿತವಾದ ಅರ್ಥವ್ಯವಸ್ಥೆಯಂತೆ ನಮ್ಮನ್ನು ಮುಳುಗಿಸುವುದಿಲ್ಲ. ಆಗ ಕನ್ನಡವೂ ಮುಳುಗುವುದಿಲ್ಲ. ಅಂದರೆ ಕನ್ನಡಕ್ಕೂ ಬೇಸಾಯಕ್ಕೂ ಸಂಬಂಧವಿದೆ. ಈ ಕನ್ನಡಕ್ಕೂ ಜ್ಞಾನಕ್ಕೂ ಸಂಬಂಧವಿದೆ.

ನಮ್ಮ ಭಾಷೆ ‘ಅಭಿಜಾತ’ ಎಂದು ಕೇಂದ್ರ ಸರಕಾರ ಗುರುತಿಸಿರುವುದರಿಂದ ನಮಗೆ ಅದೆಷ್ಟೋ ದುಡ್ಡು ಬರುತ್ತದೆಯಂತೆ. ಇದನ್ನು ಖರ್ಚು ಮಾಡುವುದಕ್ಕೆ ನನ್ನದೊಂದು ಸೂಚನೆಯಿದೆ. ನಾನು ಕೇರಳದಲ್ಲಿ ಕುಲಪತಿಯಾಗಿದ್ದಾಗ ನಾನಿದ್ದ ಊರು ಕೊಟ್ಟಾಯಂನಲ್ಲಿ ಒಂದು ಸಮೀಕ್ಷೆ ನಡೆಸಿ ಎಷ್ಟು ಜನ ಓದು-ಬರೆಹ ತಿಳಿಯದವರಿದ್ದಾರೆ ಎಂದು ಅರಿಯಲು ಪ್ರಯತ್ನಿಸಿದೆವು. ಸಮೀಕ್ಷೆಯ ಫಲಿತಾಂಶಗಳಂತೆ ಸುಮಾರು ೨೭೬ ಮಂದಿ ಇದ್ದಾರೆ ಎಂಬುದು ತಿಳಿಯಿತು. ನಾನು ಒಂದು ಸಾವಿರ ವಿದ್ಯಾರ್ಥಿಗಳದ್ದೊಂದು ಪಡೆ ಮಾಡಿ ೨೭೬ ಜನರನ್ನು ಹುಡುಕಿ ಒಂದು ನೂರು ದಿನದಲ್ಲಿ ಎಲ್ಲರೂ ಅಕ್ಷರಸ್ಥರಾಗುವಂತೆ ಮಾಡಿದೆವು. ಅದಾದ ನಂತರ ಇಡೀ ಕೇರಳದಲ್ಲಿ ಒಂದು ಆಂದೋಲನ ನಡೆಯಿತು. ಇಂದು ಕೇರಳದಲ್ಲಿ ನಿರಕ್ಷರರೇ ಇಲ್ಲ. ಕನ್ನಡಕ್ಕೆ ಅಭಿಜಾತ ಭಾಷೆಯ ಸ್ಥಾನಮಾನ ಬಂದದ್ದನ್ನು ನೆವವಾಗಿಟ್ಟುಕೊಂಡು ಇನ್ನು ಐದು ವರ್ಷದಲ್ಲಿ ಕರ್ನಾಟಕದ ಎಲ್ಲರಿಗೂ ಅಕ್ಷರದ ಅರಿವಿರುವಂತೆ ಮಾಡುವ ಒಂದು ದೊಡ್ಡ ಚಳವಳಿ ನಡೆಯಬೇಕು. ಅದಕ್ಕೆ ಅಭಿಜಾತ ಭಾಷೆಯ ಸ್ಥಾನದ ಹೆಸರಿನಲ್ಲಿ ನಮಗೆ ದೊರೆಯುತ್ತಿರುವ ಹಣ ಈ ಸಾಕ್ಷರತಾ ಆಂದೋಲನಕ್ಕೆ ಬಳಕೆಯಾಗದೆ ಇನ್ನಾವುದಕ್ಕೋ ಬಳಕೆಯಾದರೆ ಅದು ದುರುಪಯೋಗವಾದಂತೆ.

ಕನ್ನಡ ಎಷ್ಟು ಶಕ್ತಿಯುತವಾದ ಭಾಷೆಯೆಂದರೆ ನಾನು ನನ್ನ ಅತ್ಯುತ್ತಮವಾದ ಚಿಂತನಾ ಪುಸ್ತಕವನ್ನು ಕನ್ನಡದಲ್ಲಿ ಬರೆಯಬಲ್ಲೆ. ಬರೆದದ್ದು ಇಂಗ್ಲಿಷ್‌ಗೆ ಅನುವಾದ ಗೊಳ್ಳುವುದಾದರೆ ಇಂಗ್ಲಿಷ್‌ನವರಿಗೆ ಬೇಕಾದಂಥ ಒಂದು ಪುಸ್ತಕವನ್ನು ನಾನು ಕನ್ನಡದಲ್ಲೇ ಬರೆಯಬಲ್ಲೆ. ನಾವು ಬರ್ಮಿಗಂನಲ್ಲಿ ಓದಿದೆ. ನನಗೆ ಅಲ್ಲಿಯೇ ಒಬ್ಬ ಶಿಕ್ಷಕನಾಗುವ ಎಲ್ಲಾ ಸಾಧ್ಯತೆಗಳಿತ್ತು. ನನ್ನನ್ನು ಅವರು ಕೇಳಿದರೂ ಕೂಡಾ. ಆದರೆ ನಾನು ಇಲ್ಲ ನಾನು ಮೈಸೂರಿಗೆ ಹೋಗಿ ಅಲ್ಲಿಯೇ ನಾನು ಪಾಠ ಮಾಡುತ್ತೇನೆಂದು ಕನ್ನಡವನ್ನು ಆಯ್ದುಕೊಂಡೆ. ಇದನ್ನು ಮಾಡಿದ್ದು ಕೇವಲ ಕನ್ನಡ ಪ್ರೀತಿಯಿಂದಲ್ಲ. ಇಂಗ್ಲಿಷ್‌ಗೆ ಇರುವ ಎಲ್ಲ ಸಾಧ್ಯತೆಗಳೂ ಇನ್ನೂ ಅಪಾರವಾದ ಮಟ್ಟದಲ್ಲಿ ಕನ್ನಡಕ್ಕಿದೆ ಎಂಬುದು ನನಗೆ ಗೊತ್ತಿದೆ. ಏಕೆಂದರೆ ಕನ್ನಡಕ್ಕೆ ತಾನು ಪಡೆಯಬಹುದಾದ ಭಾಷೆಗಳು ಅದರ ಅಕ್ಕಪಕ್ಕದಲ್ಲಿಯೇ ಬೇಕಾದಷ್ಟಿವೆ. ಆಮೇಲೆ ನಮ್ಮಲ್ಲಿ ಗೋಚರವಾದ ಜ್ಞಾನವಷ್ಟೇ ಅಲ್ಲದೆ ಅಗೋಚರವಾದ ಒಂದು ಜ್ಞಾನ ಸಂಪತ್ತಿದೆ. ಅದು ಜಾನಪದದಲ್ಲಿರುವ ಜ್ಞಾನ ಸಂಪತ್ತು. ಅಲ್ಲೊಂದು ವೈದ್ಯಕೀಯ ಪದ್ಧತಿ ಇದೆ. ಕಷ್ಟಕಾಲದಲ್ಲಿ ಊಟಕ್ಕೇನು ಮಾಡಬೇಕು ಎಂಬ ಜ್ಞಾನ ಕೂಡಾ ಇಂಥದ್ದೇ. ಇದು ನನ್ನ ತಾಯಿಗೆ ಗೊತ್ತಿತ್ತು. ಮನೆಯಲ್ಲಿ ಏನೂ ಇಲ್ಲದೇ ಇದ್ದರೆ ಹೇಗಾದರೂ ಒಂದುರುಚಿಯಾದ ಅಡುಗೆಯನ್ನು ಮಾಡುವುದು ಹೇಗೆ ಎಂಬುದು ಅವರಿಗೆ ತಿಳಿದಿರುತ್ತಿತ್ತು.

ನಮ್ಮ ಇಂಥ ಜ್ಞಾನದ ಫಲವಾಗಿಯೇ ಕನಕದಾಸರು ರಾಗಿಯ ಕಥೆಯನ್ನು ಬರೆಯಲು ಸಾಧ್ಯವಾಯಿತು. ಪ್ರಪಂಚದಲ್ಲಿ ವರ್ಗ ಸಂಘರ್ಷದ ಬಗ್ಗೆ ಇಂಥ ಕಥೆ ಇನ್ನೆಲ್ಲೂ ಇಲ್ಲ. ಒಂದು ಸಾರಿ ಅಕ್ಕಿಗೂ ರಾಗಿಗೂ ದೊಡ್ಡ ಜಗಳವಾಗಿಬಿಡುತ್ತದೆ. ಅಕ್ಕಿ ತಾನು ಬೆಳ್ಳಗೆ, ದೇವರಿಗೆ ಮಂತ್ರಾಕ್ಷತೆಯಾಗಿ ನನ್ನನ್ನೇ ಬಳಸುತ್ತಾರೆ, ನೀನು ಕರ‍್ರಗಿದ್ದೀಯಾ ನೀನು ಯಾರಿಗೂ ಬೇಡ ಎಂದು ವಾದಿಸುತ್ತದೆ.

ಆಗ ರಾಗಿಗೆ ಬಹಳ ಸಿಟ್ಟು ಬಂದು ಜಗಳವಾಡಿ ಈ ಜಗಳ ಇತ್ಯರ್ಥಕ್ಕಾಗಿ ಅಕ್ಕಿ-ರಾಗಿಗಳೆರಡೂ ರಾಮನ ಬಳಿಗೆ ಹೋಗುತ್ತವೆ. ರಾಮ ಇಬ್ಬರನ್ನು ಕಾರಾಗೃಹಕ್ಕೆ ಕಳುಹಿಸಿ ಆರು ತಿಂಗಳ ನಂತರ ಬಿಡುಗಡೆ ಮಾಡಿ ತನ್ನ ಬಳಿಗೆ ಕರೆಯಿಸಿಕೊಳ್ಳುತ್ತಾನೆ. ಆಗ ಅಕ್ಕಿ ಮುಗ್ಗುಲಾಗಿರುತ್ತದೆ, ರಾಗಿ ಹಸನಾಗಿಯೇ ಇರುತ್ತದೆ. ನಿಮ್ಮಲ್ಲಿ ಯಾರು ಶ್ರೇಷ್ಠ ಎಂಬುದು ಈಗ ಗೊತ್ತಾಯಿತಲ್ಲಾ ಎಂದು ರಾಮ ತನ್ನ ತೀರ್ಪು ಘೋಷಿಸುತ್ತಾನೆ.

ಐರ್ಲೆಂಡಿನಲ್ಲಿ ಜನ ತಾವು ಡಿಢೀರ್ ಶ್ರೀಮಂತರಾಗಬೇಕೆಂದು ಆಲೂಗಡ್ಡೆ ಬೆಳೆಯಲು ಆರಂಭಿಸಿದರು. ಅದು ಆರಂಭದಲ್ಲಿ ನಿಜವೂ ಆಯಿತು. ಆದರೆ ಆಲೂಗಡ್ಡೆ ಬೆಳೆ ನಾಶವಾದಾಗ ಅವರು ತಮ್ಮ ಆಹಾರ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದರು. ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಾರದು ಎಂದರೆ ನಮ್ಮ ಹಿರಿಯರು ಹೇಳಿಕೊಟ್ಟಿರುವ ಎಂಥ ಕಷ್ಟ ಕಾಲದಲ್ಲೂ ಬದುಕಬಹುದಾದ ಮಾರ್ಗಗಳನ್ನು ನಾವು ಮರೆಯಬಾರದು. ಈ ಜ್ಞಾನ ನಮ್ಮ ತಾಯಂದಿರ ಬಳಿ ಇದೆ. ಇದನ್ನು ಉಳಿಸಿಕೊಂಡರೆ ಕನ್ನಡವೂ ಉಳಿಯುತ್ತದೆ. ಇಲ್ಲದೇ ಇದ್ದರೆ ನಾವು ಕನ್ನಡವನ್ನು ಬಿಟ್ಟು ಹಾಕುತ್ತಿರುತ್ತೇವೆ. ಯಾವುದೋ ಶ್ರೀಮಂತಿಕೆಯನ್ನು ಹುಡುಕಿಕೊಂಡು ಹೋದರೆ ಏನಾಗುತ್ತದೆ. ಇನ್ನು ಸ್ವಲ್ಪವೇ ದಿವಸದಲ್ಲಿ ಅದು ನಿಮ್ಮ ಕಣ್ಣೆದುರೇ ಅನಾವರಣಗೊಳ್ಳಲಿದೆ. ಬಹಳ ಜನ ಹಣ ಸಂಪಾದಿಸುತ್ತೇವೆಂದು ಅಮೆರಿಕಕ್ಕೆ ಹೋದವರು ಹಿಂದಕ್ಕೆ ಬರುತ್ತಿದ್ದಾರೆ.

ಅಮೆರಿಕದ ಅರ್ಥವ್ಯವಸ್ಥೆಯೇ ಭಸ್ಮಾಸುರನ ಕಥೆಯನ್ನು ಹೋಲುವ ಅರ್ಥ ವ್ಯವಸ್ಥೆ. ಅವರ ಅರ್ಥವ್ಯವಸ್ಥೆ ನಿಂತಿರುವುದು ಬಾಂಬುಗಳನ್ನು ಬಂದೂಕುಗಳನ್ನು ಮಾರುವುದರ ಮೇಲೆ. ಅವರೇ ಅಫ್ಘಾನಿಸ್ಥಾನದವರಿಗೆ ಬಂದೂಕುಗಳನ್ನು ಕೊಟ್ಟು ಅವರಿಂದಲೇ ಹೊಡೆಸಿಕೊಳ್ಳುತ್ತಿದ್ದಾರೆ. ಅದನ್ನು ನಾವು ಆದರ್ಶವೆಂದು ಪರಿಭಾವಿಸಿದ್ದೇ ತಪ್ಪು. ನಾವು ಸ್ಥಳೀಯವಾದ ಉಪಾಯಗಳನ್ನು ಮರೆಯಬಾರದು. ವಿವೇಕವನ್ನು ಮರೆಯಬಾರದು. ಇವೆಲ್ಲಾ ಉಳಿಯಬೇಕೆಂದರೆ ನಮ್ಮ ಭಾಷೆಯನ್ನು ಕೈಬಿಡಬಾರದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದ ನೆಪದಲ್ಲಿ ಎಲ್ಲ ಕನ್ನಡಿಗರೂ ಅಕ್ಷರಸ್ಥರಾದರೆ ಜಗತ್ತಿನ ಅಭಿಜಾತ ಭಾಷೆಗಳಲ್ಲಿ ಒಂದಾಗಿದ್ದ ಕನ್ನಡ ಪ್ರಧಾನ ಭಾಷೆಗಳಲ್ಲಿ ಒಂದಾಗುತ್ತದೆ. ಐದು ಕೋಟಿ ಜನಕ್ಕೆ ಓದಲು ಬರೆಯಲು ಗೊತ್ತಿರುವ ಭಾಷೆ ಸಹಜವಾಗಿಯೇ ಪ್ರಧಾನ ಭಾಷೆಯಾಗಲೇಬೇಕಾಗುತ್ತದೆ. ಅಭಿಜಾತ ಭಾಷೆಯೆಂಬ ಹೆಸರಿನಲ್ಲಿ ದೊರೆಯುವ ಹಣವನ್ನು ಸಾಕ್ಷರತೆಗಾಗಿ ಬಳಸಿದರೆ ಐದು ವರ್ಷದೊಳಗೆ ಖಂಡಿತವಾಗಿಯೂ ಕನ್ನಡವನ್ನು ಜಗತ್ತಿನ ಪ್ರಧಾನ ಭಾಷೆಯಾಗಿ ಮಾರ್ಪಡಿಸಬಹುದು.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ನಾನೊಂದು ಸಲಹೆ ಕೊಟ್ಟಿದ್ದೆ. ಅದನ್ನವರು ಕೂಡಲೇ ಒಪ್ಪಿಕೊಂಡಿದ್ದರು. ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಕುವೆಂಪು ಮಾದರಿ ಶಾಲೆಯನ್ನು ಮಾಡಬೇಕು. ಆ ಶಾಲೆಯಲ್ಲಿ ಪ್ರತಿಯೊಂದು ವಿಷಯವನ್ನೂ ಕನ್ನಡದಲ್ಲೇ ಕಲಿಸುವ ಮಾದರಿ ಶಾಲೆ ಅದು. ಆದರೆ ನಾನು ಮೂರು ಭಾಷೆ ಬೇಕು ಎಂದು ಮೊದಲಿಗೇ ಹೇಳಿದ್ದೆನೆಲ್ಲಾ ಅದರಲ್ಲೊಂದಾದ ‘ಅಟ್ಟದ ಮಾತ’ನ್ನೂ ಈ ಶಾಲೆಯಲ್ಲಿ ಕಲಿಸಬೇಕು. ಅಂದರೆ ಇಂಗ್ಲಿಷನ್ನೂ ಈ ಶಾಲೆಗಳಲ್ಲಿ ಕಲಿಸಬೇಕು. ಆದರೆ ಎಲ್ಲಾ ವಿಷಯಗಳನ್ನೂ ಕನ್ನಡದಲ್ಲಿಯೇ ಕಲಿಸಬೇಕು. ನನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿಯೂ ಹೇಳಿದ್ದೆ. ‘ಕನ್ನಡದಲ್ಲಿ ಕಲಿಸಿ ಇಂಗ್ಲಿಷನ್ನೂ ಕಲಿಸಿ’. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕು. ಕನ್ನಡದಲ್ಲಿ ಜ್ಞಾನದ ಸ್ವೀಕಾರವಷ್ಟೇ ನಡೆಯುತ್ತಿದೆ. ಇದರ ಜತೆಗೆ ಕನ್ನಡದಲ್ಲಿಯೇ ಜ್ಞಾನದ ಸೃಷ್ಟಿಯೂ ನಡೆಯಬೇಕು.

ಮತ್ತೆ ನಾನು ಇಂಗ್ಲೆಂಡಿನ ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. ನ್ಯೂಟನ್ ಜ್ಞಾನವನ್ನು ಸೃಷ್ಟಿ ಮಾಡಿದ. ಅದನ್ನಾತ ಮಾಡಿದ್ದು ಲ್ಯಾಟಿನ್‌ನಲ್ಲಿ. ಆಮೇಲೆ ಡಾರ್ವಿನ್ ಕೂಡಾ ಜ್ಞಾನವನ್ನು ಸೃಷ್ಟಿ ಮಾಡಿದ. ಆದರೆ ಅವನು ಅದನ್ನು ಇಂಗ್ಲಿಷ್‌ನಲ್ಲಿ ಸೃಷ್ಟಿಸಿದ. ಅವನ ಒರಿಜಿನ್ ಆಫ್ ಸ್ಪೀಷೀಸ್ ಇರುವುದು ಇಂಗ್ಲಿಷ್‌ನಲ್ಲಿ. ಇದು ಇಂಗ್ಲಿಷ್‌ನಲ್ಲಿ ಬಂದ  ಮೊಟ್ಟ ಮೊದಲ ವೈಜ್ಞಾನಿಕ ಸಿದ್ಧಾಂತವೊಂದರ ಗ್ರಂಥ. ಜ್ಞಾನದ ಸೃಷ್ಟಿಯಾಗುವುದು ಹೇಗೆ? ನಾವೆಲ್ಲಾ ತಿಳಿದುಕೊಂಡಿರುವಂತೆ ನಮ್ಮ ಮಕ್ಕಳು ಇಂಗ್ಲಿಷ್‌ ಕಲಿಯದೇ ಹೋದರೆ ಅವರು ಎಂಜಿನಿಯರಿಂಗ್ ಮಾಡುವುದಿಲ್ಲ, ಮೆಡಿಕಲ್ ಕಲಿಯಲು ಸಾಧ್ಯವಾಗದೇ ಹಿಂದುಳಿದು ಬಿಡುತ್ತಾರೆ. ಈ ಅನಿಸಿಕೆಯಲ್ಲಿ ನಿಜವೂ ಇದೆ ಏಕೆಂದರೆ ಎಲ್ಲಾ ಪರೀಕ್ಷೆಗಳು ಇಂಗ್ಲಿಷ್‌ನಲ್ಲಿಯೇ ನಡೆಯುವುದರಿಂದ ಹೀಗಾಗಲೂ ಬಹುದು. ಆದ್ದರಿಂದ ನಾನು ಸರಕಾರದ ಮುಂದೆ ಇನ್ನೆರಡು ಸಲಹೆಗಳನ್ನಿಟ್ಟಿದ್ದೆ. ಒಂದು ಕನ್ನಡದಲ್ಲಿಯೇ ಕಲಿಸುವ ಒಂದು ಮೆಡಿಕಲ್ ಕಾಲೇಜು ಮಾಡಿ. ಅಲ್ಲಿ ಕಲಿಸುವ ಮಾಧ್ಯಮ ಕನ್ನಡವಾಗಿರಬೇಕು. ಜತೆಗೆ ಅಲ್ಲಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಆಡಿದ ಮಾತು ಅರ್ಥವಾಗಬೇಕು. ಅಂದರೆ ಗ್ರಹಿಕೆಗಾಗಿ ಇಂಗ್ಲಿಷ್‌ ಬೇಕೇಬೇಕು. ಸ್ವಯಂ ಅಭಿವ್ಯಕ್ತಿಗಾಗಿ ಕನ್ನಡ ಬೇಕೇಬೇಕು. ಕರ್ನಾಟಕದಲ್ಲಿ ವೈದ್ಯನಾಗಬೇಕೆಂದು ಬಯಸುವವನು ಕನ್ನಡ ಕಲಿಯಲೇ ಬೇಕು. ಹೀಗೆ ಕಲಿಯದೇ ಇದ್ದವರು ತನ್ನ ರೋಗಿಗಳನ್ನು ಬರೇ ಮೆಷೀನ್‌ಗಳ ಬಳಿ ಕಳುಹಿಸುತ್ತಾರೆ. ಪ್ರತಿಯೊಂದು ಪರೀಕ್ಷೆಗೂ ರೋಗಿ ಹತ್ತಾರು ಸಾವಿರ ರೂಪಾಯಿಗಳನ್ನು ಕೊಟ್ಟು ಅದರ ವರದಿಯನ್ನು ತೆಗೆದುಕೊಂಡು ಹೋದರಷ್ಟೇ ಆ ವೈದ್ಯ ಔಷಧಿ ಕೊಡಲು ಸಾಧ್ಯ. ಈ ರೀತಿಯ ಮೂಕ ಡಾಕ್ಟರುಗಳು ನಮಗೆ ಬೇಡ ಎನ್ನುವುದಾದರೆ ಆ ಡಾಕ್ಟರ್‌ಗಳು ಕನ್ನಡ ಕಲಿಯಬೇಕು. ರೋಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಇದು ಅಗತ್ಯ.

ಈ ರೀತಿಯ ಮೆಡಿಕಲ್ ಕಾಲೇಜುಗಳು ಹೇಗಿರಬೇಕೆಂದರೆ ಬಿಹಾರದ ಒಬ್ಬ ಹುಡುಗ ಕನ್ನಡವನ್ನು ಕಲಿತು ಇಲ್ಲಿ ಸೀಟು ಬೇಕೆಂದು ಅಪೇಕ್ಷಿಸಿದರೆ ಅವನಿಗೆ ಸೀಟು ಕೊಡಬೇಕು. ಅಂದರೆ ಕನ್ನಡ ಬಲ್ಲವರೆಲ್ಲರೂ ಕನ್ನಡಿಗರು ಎಂಬುದು ನಮ್ಮ ಕನ್ನಡದ ವ್ಯಾಖ್ಯೆ ಆಗಬೇಕು. ಇದು ಹೇಗೆಂದರೆ ಹಿಂದೆ ಸೋವಿಯತ್ ರಷ್ಯಾ ಇದ್ದಾಗ ನಮ್ಮ ಎಷ್ಟೋ ವಿದ್ಯಾರ್ಥಿಗಳು ರಷ್ಯನ್ ಭಾಷೆ ಕಲಿತು ಅಲ್ಲಿ ಹೋಗಿ ವೈದ್ಯರಾಗಿ ಬರುತ್ತಿದ್ದರು. ಆದ್ದರಿಂದ ಕನ್ನಡದಲ್ಲಿ ಕಲಿಸುವ ಅತ್ಯುತ್ತಮವಾದ ಮೆಡಿಕಲ್ ಕಾಲೇಜೊಂದಿದ್ದರೆ ತಮಿಳರೂ ಬಿಹಾರಿಗಳೂ ಕನ್ನಡ ಕಲಿತು ಅದಕ್ಕೆ ಸೇರಿಕೊಳ್ಳುತ್ತಾರೆ. ಹಾಗೆಯೇ ಒಂದು ಎಂಜಿನಿಯರಿಂಗ್ ಕಾಲೇಜನ್ನೂ ಮಾಡಬೇಕು. ಮೊದಲಿಗೆ ಇದನ್ನು ಪರೀಕ್ಷಾರ್ಥವಾಗಿ ಮಾಡಿ ಮುಂದೆ ವಿಸ್ತರಿಸಬಹುದು.

ಕನ್ನಡ ಕೇವಲ ಜ್ಞಾನದ ಸ್ವೀಕಾರದ ಭಾಷೆಯಷ್ಟೇ ಅಲ್ಲದೆ ಜ್ಞಾನದ ಸೃಷ್ಟಿಯ ಭಾಷೆಯೂ ಆಗಬಲ್ಲದು ಎಂಬುದನ್ನು ತೋರಿಸಿಕೊಡುವುದಕ್ಕೆ ಇದು ಅಗತ್ಯ ಎನಿಸುತ್ತದೆ. ನನ್ನ ಪ್ರಕಾರ ಕನ್ನಡ ತನ್ನೊಳಗೇ ಒಂದು ವಿಶ್ವ. ನೃಪತುಂಗನೂ ಹಾಗೆಯೇ ಗ್ರಹಿಸಿದ್ದ. ಹಾಗೆಯೇ ಕನ್ನಡವೆಂಬುದು ವಿಶ್ವವನ್ನೇ ತನ್ನಲ್ಲಿ ಪ್ರತಿಬಿಂಬಿಸಿಕೊಂಡಿರುವ ವಿಶ್ವವೂ ಹೌದು. ಇದು ಪ್ರಪಂಚ ನನ್ನೊಳಗಿದೆ, ನಾನು ಪ್ರಪಂಚದ ಒಳಗಿದ್ದೇನೆ ಎಂಬಂಥ ಪರಿಕಲ್ಪನೆ. ಕನ್ನಡಿಗ ಈ ವಿಶಾಲವಾದ ಪ್ರಪಂಚದಲ್ಲಿ, ಬಹು ಭಾಷಾ ಸಮೃದ್ಧಿಯ ಪ್ರಪಂಚದಲ್ಲಿ, ಬಹು ಧರ್ಮಗಳ ಸಮೃದ್ಧಿಯ ಪ್ರಪಂಚದಲ್ಲಿ, ಬಹುಸಂಸ್ಕೃತಿಗಳ ಸಮೃದ್ಧಿಯ ಪ್ರಪಂಚದಲ್ಲಿ ತಾನಿದ್ದೇನೆಂದು ಭಾವಿಸಿಕೊಳ್ಳಬೇಕು. ಹಾಗೆಯೇ ಕನ್ನಡದೊಳ್ ಭಾವಿತಮಾದ ಜನಪದಂ ಇದೆಯೆಲ್ಲಾ ಅದು ಕನ್ನಡದಲ್ಲಿ ಇವೆಲ್ಲವನ್ನೂ ಭಾವಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯಬೇಕು. ಎಲ್ಲರೂ ಅಕ್ಷರಸ್ಥರಾದಾಗ, ವಿದ್ಯಾವಂತರಾದಾಗ ಕೊನೆಪಕ್ಷ ರಾಗಿಯ ಅಂಬಲಿಯನ್ನಾದರೂ ಕುಡಿಯುವಷ್ಟು ಬಲ ಇದ್ದಾಗ- ಏಕೆಂದರೆ ಅದೂ ಇಲ್ಲದೇ ಇರುವ ಸೆನ್ಸೆಕ್ಸ್‌ ಹಾವಳಿಯಿಂದ ಯಾವ ಪ್ರಯೋಜನವೂ ಇಲ್ಲ= ಹೊಸ ರೀತಿಯ ಅಂದರೆ ‘ಸಸ್ಟೈನಬಲ್’ (sustainable) ಆದ ಅಥವಾ ಭೂಮಿ ನಾಶವಾಗದೇ ಇರುವ ಆರ್ಥಿಕತೆಯನ್ನು ನಾವು ಸಾಧಿಸಿದಾಗ ಕನ್ನಡಿಗರ ಜೀವನ ಮಟ್ಟದ ಅಭಿವೃದ್ಧಿಯಾಗುವುದರೊಂದಿಗೆ ಕನ್ನಡದ ಅಭಿವೃದ್ಧಿಯೂ ಆಗುತ್ತದೆ.

ಈಗ ನಮ್ಮೆದುರು ಇರುವುದು ‘ಅಭಿವೃದ್ಧಿಯ’ ಸಾವಲು. ನಾವು ಅಭಿವೃದ್ಧಿಯಾಗುವ ಪ್ರಕ್ರಿಯೆಯಲ್ಲಿ ಓಜೋನ್ ತೂತಾಗಿ ನಾವು ನಾಶವಾಗಬಾರದು. ಹೀಗೆ ನಾಶವಾಗದೇ ಇರುವ ಅಭಿವೃದ್ಧಿ ಹೇಗಾಗಬೇಕು ಎಂಬುದನ್ನು ನಾವು ಮಾತ್ರ ಅಲ್ಲ ಇಡೀ ಜಗತ್ತೇ ಕಲಿಯಬೇಕು. ಇದನ್ನು ಕಲಿಯುವುದಕ್ಕಿಂತ ಮೊದಲು ಕನ್ನಡದ ಕೆಲವು ಜಾಣ್ಮೆಗಳು ಉಳಿದಿದ್ದರೆ ಈ ಕಲಿಕೆಯ ಪ್ರಕ್ರಿಯೆಯಲ್ಲಿ ಅದನ್ನು ಬಳಸಿಕೊಂಡರೆ ಪ್ರಾಯಶಃ ಪ್ರಪಂಚದಲ್ಲಿ ಅಭಿವೃದ್ಧಿ ಎಂಬುದು ಕೇವಲ ಸರಳರೇಖಾತ್ಮಕ ಪ್ರಗತಿಯಾಗದೆ ಜೀವನದ ಗುಣಮಟ್ಟದ ಅಭಿವೃದ್ಧಿಯಾಗುತ್ತದೆ. ಅಭಿವೃದ್ಧಿ ಮತ್ತು ಜೀವನದ ಗುಣಮಟ್ಟ ಮತ್ತು ಶ್ರೀಮಂತಿಕೆಯ ಮಧ್ಯೆ ವ್ಯತ್ಯಾಸವಿದೆ. ಜೀವನದ ಗುಣಮಟ್ಟ ಎನ್ನುವುದು ಒಳ್ಳೆಯದಾಗದೇ ಇದ್ದರೆ, ಮನಸ್ಸಿಗೆ ನೆಮ್ಮದಿ ಇಲ್ಲವಾದರೆ, ಪ್ರೀತಿ ಇಲ್ಲವಾದರೆ, ನಾವೆಲ್ಲಾ ಒಂದು ಜನಪದ ಎಂಬ ಅಭಿಮಾನ ಇಲ್ಲದೇ ಇದ್ದರೆ ಕನ್ನಡ ಬೆಳೆಯಲಾರದು. ನಮ್ಮಂತೆ ಇಲ್ಲದವರನ್ನು ನೋಡಿ ನಾವು ಅಸೈಯೆ ಪಡುವುದರ ಬದಲು ಆಶ್ಚರ್ಯ ಪಡುವುದು ಸಾಧ್ಯವಿದ್ದರೆ, ದೇವರಿಗೆ ಎಷ್ಟು ಮಾರ್ಗಗಳಿದ್ದಾವೆ ಎಂದು ತಿಳಿದು ಆನಂದ ಪಡುವ ಜನಗಳು ನಾವಾಗಬಹುದಾದರೆ, ನಾವು ಮಾತ್ರ ಉತ್ತಮ ಎಂಬ ಸುಳ್ಳು ಅಹಂಕಾರವನ್ನು ನಾವು ಬೆಳೆಸಿಕೊಳ್ಳದೇ ಇದ್ದರೆ ಕನ್ನಡಿಗರಾಗಿ ನಾವು ಬೆಳೆಯುತ್ತೇವೆ.

ಆದ್ದರಿಂದ ಕನ್ನಡಕ್ಕೆ ಬೇರೆಯವರು ಆದರ್ಶರಲ್ಲ. ತಮಿಳರೋ ಮರಾಠರೋ ಏನಾದರೂ ಮಾಡಿದರೆ ನಾವೂ ಹಾಗೆಯೇ ಮಾಡಲೇಬಾರದು. ನಾವು ಇರುವ ಹಾಗೆಯೇ ಇರಬೇಕು. ಏಕೆಂದರೆ ಪ್ರಪಂಚದಲ್ಲಿ ಶಾಶ್ವತವಾದದ್ದು ಮಾತ್ರ ಶಾಶ್ವತವಾಗಿ ಉಳಿಯುತ್ತದೆ, ಸದ್ಯಕ್ಕೆ ಸಲ್ಲುವಂಥದ್ದು ಸದ್ಯಕ್ಕೆ ಸಂದು, ಆಮೇಲೆ ಅದು ಮರೆತು ಹೋಗುತ್ತದೆ. ನಾವು ಯಾರೂ ಸದ್ಯಕ್ಕೆ ಮಾತ್ರ ಸಲ್ಲುವ ಮನುಷ್ಯರಷ್ಟೇ ಆಗಬಾರದು. ತುರ್ತಿನ ಮನುಷ್ಯರಾಗೋಣ, ಶಾಶ್ವತಕ್ಕೆ ಸಲ್ಲುವ ಮನುಷ್ಯರಾಗೋಣ ಎಂದು ಪ್ರಾರ್ಥಿಸಿ ಇಷ್ಟು ಹೊತ್ತು ಹೇಳಿದ್ದಕ್ಕೆ ನಿಮ್ಮನ್ನೆಲ್ಲಾ ವಂದಿಸಿ ನನ್ನ ಮಾತು ಮುಗಿಸುತ್ತೇನೆ.

(ನಾಗಮಂಗಲದ ಕನ್ನಡ ಸಂಘ, ೨೫ ನವೆಂಬರ್ ೨೦೦೮)

* * *