ಮಾಧ್ಯಮದ ಎಲ್ಲ ಮಿತ್ರರೇ ಮತ್ತು ವೇದಿಕೆಯ ಮೇಲೆ ಇರುವ ಹಿರಿಯರೇ, ವೈ.ಎಸ್.ವಿ. ದತ್ತ ಮಾತನಾಡುತ್ತಾ ನಾನು ಒಬ್ಬರ ಹತ್ತಿರ ಮಾತ್ರ ಮಾತನಾಡುತ್ತಿದ್ದೆ ಎಂದು ಹೇಳಿದರು. ಅದು ಅಷ್ಟು ನಿಜ ಅಲ್ಲ: ನಾನು ಯಾವಾಗಲೂ ದೇವೇಗೌಡರ ಹತ್ತಿರ ಮಾತನಾಡುತ್ತಲೇ ಇದ್ದೆ.

ನನಗೆ ಎರಡು ನೆನಪುಗಳಿವೆ. ಹೆಗಡೆಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಾಗ ದೇವೇಗೌಡರು ಪ್ರಧಾನಿಯಾಗಿದ್ದರು. ನಾನು ಅವರನ್ನು ಸಂಪರ್ಕಿಸಿ ‘ನಿಮ್ಮ ಹತ್ತಿರ ಮಾತನಾಡಬೇಕು’ ಎಂದೆ. ಬೆಳಿಗ್ಗೆ ಆರೂವರೆ ಗಂಟೆಗೆ ನನ್ನನ್ನು ದಿಲ್ಲಿಯ ತಮ್ಮ ಮನೆಯಲ್ಲಿ ಕೂರಿಸಿಕೊಂಡು ಎರಡು ಮೂರು ಗಂಟೆಗಳ ಕಾಲ ನನ್ನ ಜತೆ ಮಾತನಾಡಿದರು. ನಾನು ‘ನೀವು ಮಾಡಿರುವುದು ತಪ್ಪು ಸಾರ್, ನೀವಿದನ್ನು ಮಾಡಬಾರದಿತ್ತು ಅವರೇನೋ ಒಂದಿಷ್ಟು ಗೊಣಗಿಕೊಂಡು ಸುಮ್ಮನಾಗುತ್ತಿದ್ದರು’ ಎಂದಿದ್ದೆ.

ಬೆಂಗಳೂರಿನಲ್ಲಿ ಜೀವರಾಜ್ ಆಳ್ವ ಹೆಗಡೆಯವರಿಗೆ ಸನ್ಮಾನ ಮಾಡುವುದಕ್ಕೆ ಒಂದು ಸಭೆ ಕರೆದಿದ್ದರು. ಅಲ್ಲಿ ನಾನು ಮಾತನಾಡುವಾಗ ‘ನಮ್ಮ ಹಳ್ಳಿಯ ಮುಖಂಡನೊಬ್ಬ ದೇಶದ ಪ್ರಧಾನಿಯಾದಾಗ ನೀವು ಇಷ್ಟು ಸಣ್ಣ ಮಾತನಾಡಬಾರದಿತ್ತು’ ಎಂದು ಹೆಗಡೆಯವರಿಗೆ ಹೇಳಿದ್ದೆ. ಇದನ್ನು ಕೇಳಿಸಿಕೊಂಡ ಹೆಗಡೆಯವರು ಎದ್ದು ನಿಂತು ‘ನಾನು ಮನುಷ್ಯ ಮಾತ್ರದವನಪ್ಪ’ ಎಂದಿದ್ದರು. ನಾನು ಮನುಷ್ಯ ಮಾತ್ರದವನು ಎಂದ ಹೆಗಡೆಯವರ ಬಗ್ಗೆ ನನಗೆ ಏನೂ ಹೇಳಲು ಸಾಧ್ಯವಿಲ್ಲ. ಅದೇ ಹೆಗಡೆಯವರನ್ನು ‘ನಿಮ್ಮ ಮಂತ್ರಿಗಳಲ್ಲೆಲ್ಲಾ ಯಾರು ಬಹಳ ಸಮರ್ಥನಾದ ಮಂತ್ರಿ?’ ಎಂದು ಕೇಳಿದಾಗ ಅವರು ‘ದೇವೇಗೌಡ’ ಎಂದಿದ್ದರು.

ದೇವೇಗೌಡರ ಹತ್ತಿರ ಮಾತನಾಡುವುದಕ್ಕೆ ನನಗೆ ಯಾವಾಗಲೂ ಸಂಪೂರ್ಣ ಅವಕಾಶ ಇತ್ತು. ಹೀಗೆ ಮಾತನಾಡುವುದರಲ್ಲಿ ಒಂದು ಸದ್ಭಾವನೆ ಇತ್ತು. ಜತೆಗೆ ಎಲ್ಲಾ ಗೊಂದಲಗಳೂ ಒಮ್ಮೆ ಸರಿಹೋಗಬಹುದು ಎಂಬ ಆಸೆಯೂ ಇತ್ತು. ನಂತರ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಮತ್ತೊಮ್ಮೆ ನಾನು ದೇವೇಗೌಡರ ಜತೆ ಮಾತನಾಡಿದೆ. ಆಮೇಲೆ ಸಿದ್ಧರಾಮಯ್ಯನವರನ್ನು ಉಚ್ಚಾಟನೆ ಮಾಡಿದಾಗಲೂ ನಾನು ದೇವೇಗೌಡರ ಮನೆಗೆ ಹೋಗಿದ್ದೆ. ‘ಸಿದ್ಧರಾಮಯ್ಯನವರನ್ನು ನೀವು ಉಚ್ಚಾಟನೆ ಮಾಡಬಾರದಿತ್ತು. ಆತನಿಗೆ ಜನಬೆಂಬಲವಿದೆ ಆತನನ್ನು ಇಟ್ಟುಕೊಳ್ಳಬೇಕಾಗಿತ್ತು’ ಎಂದು ವಾದ ಮಾಡಿದೆ. ಅವರೂ ವಾದಿಸಿದರು. ನಮ್ಮ ಇಬ್ಬರ ಮಧ್ಯೆ ಯಾವ ಮುಚ್ಚುಮರೆಯೂ ಇರಲಿಲ್ಲ.

ಈ ರೀತಿಯ ಒಂದು ಪ್ರಾಮಾಣಿಕವಾದ ಸಂಬಂಧವನ್ನು ನಾನು ಹೆಗಡೆ ಅವರ ಜತೆಗೆ ಇಟ್ಟುಕೊಂಡಿದ್ದೆ. ದೇವೇಗೌಡರ ಜತೆಗೂ ಇದೇ ರೀತಿಯ ಸಂಬಂಧವಿತ್ತು. ಗೌಡರು ಹೆಗಡೆಯವರಷ್ಟು ಸಂಕೋಚವನ್ನು ಪಡದೆ ಒರಟಾಗಿ ಪ್ರಾಮಾಣಿಕವಾಗಿ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿಬಿಡುತ್ತಾರೆ. ಆದ್ದರಿಂದ ನಾನು ಅವರ ಬಳಿ ಮಾತನಾಡುತ್ತಲೇ ಇದ್ದೇನೆ. ಕುಮಾರಸ್ವಾಮಿಯವರ ಹತ್ತಿರವೂ ಮಾತನಾಡಬೇಕು ಅಂತಿದ್ದೆ. ಆದರೆ ಅವರು ಒಂದು ಸಾರಿ ‘ಯಾರ್ರೀ ಅನಂತಮೂರ್ತಿ?’ ಎಂದು ಕೇಳಿದ್ದರು. ನಾನು ‘ಅವರಪ್ಪನ ಹತ್ತಿರ ಕೇಳಿದರೆ ಗೊತ್ತಾಗುತ್ತೆ’ ಎಂದಿದ್ದೆ.

ಕುಮಾರಸ್ವಾಮಿ ಯುವಕರಾಗಿದ್ದರಿಂದ ಅವರ ಮಾತಿನಿಂದ ನನಗೆ ಬೇಜಾರೂ ಆಗಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡುತ್ತಿದ್ದ ಕೆಲಸ ನೋಡಿ ನನಗೆ ಸಂತೋಷವಾಗಿತ್ತು. ಹಳ್ಳಿಗೆ ಹೋಗುವುದು, ಅಲ್ಲಿ ಯಾರ ಮನೆಯಲ್ಲಾದರೂ ಇರುವುದು. ಇವನೊಬ್ಬ ಹೊಸ ಕರ್ನಾಟಕ್ಕೆ ಹೊಸ ನಾಯಕನಾಗಿ ಬರುತ್ತಿದ್ದಾನೆ ಎನ್ನುವ ಒಂದು ನಿರೀಕ್ಷೆಯನ್ನು ಅವರು ಹುಟ್ಟಿಸಿದ್ದರು. ಈ ಎಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು ನಾನು ಇಂದು ಮಾತನಾಡುತ್ತೇನೆ.

ಈ ಕಚೇರಿಯಲ್ಲಿ (ಜನತಾದಳ ಕಚೇರಿಯಲ್ಲಿ) ಕುಳಿತುಕೊಂಡು ಕೆಲಸ ಮಾಡುತ್ತಿದ್ದ ದಿನಗಳು ನನಗೆ ನೆನಪಾಗುತ್ತಿವೆ. ಆಗ ಬಿ.ಕೆ. ಚಂದ್ರಶೇಖರ್‌ ಇರುತ್ತಿದ್ದರು. ದತ್ತ ಇರುತ್ತಿದ್ದರು, ರಮೇಶ್ ಬಂದಗದ್ದೆ ಇರುತ್ತಿದ್ದ. ಆಗಲೇ ನಾನು ಜನತಾ ಪ್ರಣಾಳಿಕೆ ಬರೆದದ್ದು. ಬರೆದು, ಓದಿ, ಚರ್ಚಿಸಿ ಉಳಿದವರಿಗೆಲ್ಲಾ ತೋರಿಸಿ ತಿದ್ದಿ ಸುಮಾರು ಹತ್ತು ಹದಿನೈದು ದಿವಸ ಆ ಕೆಲಸವನ್ನೇ ಮಾಡಿದ್ದೆವು. ಆದ್ದರಿಂದ ಈ ಪಾರ್ಟಿ ಆಫೀಸಿಗೂ ನನಗೂ ಒಂದು ಭಾವನಾತ್ಮಕವಾದ ಸಂಬಂಧ ಈಗಲೂ ಇದೆ.

ನನ್ನ ಮನಸ್ಸಿಗೆ ಬಹಳ ಬೇಜಾರಾದದ್ದು ಯಾವಾಗ ಎಂದರೆ ಕುಮಾರಸ್ವಾಮಿಯವರು ಬಿಜೆಪಿ ಜತೆಗೆ ಸೇರಿ ಮಂತ್ರಿ ಮಂಡಲ ಮಾಡಿದಾಗ. ಆಗ ನನ್ನಷ್ಟೇ ದೇವೇಗೌಡರಿಗು ದುಃಖವಾಗಿತ್ತು ಎಂಬುದು ಅವರ ಈ ಪುಸ್ತಕದಿಂದ ತಿಳಿಯುತ್ತದೆ. ಕೆಲವರೆಲ್ಲಾ ‘ಇದು ಅಪ್ಪ ಮಗ ಸೇರಿ ನಡೆಸಿದ ಒಂದು ಮೋಸಗಾರಿಕೆ’ ಎನ್ನುತ್ತಾರೆ. ಆದರೆ ನಾನು ದೇವೇಗೌಡರಿಗೆ ನಿಜವಾಗಿಯೂ ಬೇಸರವಾಗಿತ್ತು, ದುಃಖವಾಗಿತ್ತು ಎಂಬುದನ್ನೇ ನಂಬಲು ಇಷ್ಟಪಡುತ್ತೇನೆ. ದೇವೇಗೌಡರು ನಿಜವಾಗಿಯೂ ಆಗ ಕಷ್ಟ ಪಟ್ಟಿದ್ದಾರೆ ಎಂಬುದು ಅವರು ನಡೆಸಿದ ಪತ್ರವ್ಯವಹಾರದಲ್ಲಿಯೇ ಸ್ಪಷ್ಟವಾಗುತ್ತದೆ.

ಕುಮಾರಸ್ವಾಮಿಯವರು ಬಿಜೆಪಿ ಜತೆ ಮಾಡಿಕೊಂಡ ಮೈತ್ರಿಯ ಬಗ್ಗೆ ಚರ್ಚಿಸುವುದಕ್ಕೆ ಹಿನ್ನೆಲೆಯಾಗಿ ಒಂದು ವಿಷಯವನ್ನು ಹೇಳಿಬಿಡಬೇಕು ಅನ್ನಿಸುತ್ತದೆ. ಲೋಹಿಯಾರವರು ಬಹಳ ಹಿಂದೆಯೇ ಕಾಂಗ್ರೆಸ್ಸೇತರ ಪಕ್ಷವೊಂದು ಬೇಕು ಎಂದರು. ಏಕೆಂದರೆ ಕಾಂಗ್ರೆಸ್‌ನಲ್ಲಿ ಎಲ್ಲಾ ರೀತಿಯ ಚಿಂತನೆ ಮಾಡುವವರಿದ್ದಾರೆ. ಬಂಡವಾಳಶಾಹಿಯ ಪರವಾದವರು, ಕೂಲಿಕಾರರ ಪರವಾಗಿ ಚಿಂತಿಸುವವರು, ರೈತರ ಪರ ಅಲೋಚನೆಗಳುಳ್ಳವರು ಹೀಗೆ ಎಲ್ಲಾ ಬಗೆಯ ಜನರೂ ಇದ್ದಾರೆ. ಜತೆಗೆ ಧರ್ಮದ ರಾಜಕಾರಣ ಮಾಡುವವರೂ ಕಾಂಗ್ರೆಸ್‌ನಲ್ಲಿ ಇದ್ದಾರೆ. ನಾವು ಮಾತ್ರ ಬೇರೆ ಬೇರೆಯಾಗಿ ಹಂಚಿ ಹೋಗಿದ್ದೇವೆ. ಆದ್ದರಿಂದ ನಮಗೆ ಅವರನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಎಲ್ಲಾ ರೀತಿಯ ವೈಚಾರಿಕತೆಯಿಂದ ಕೂಡಿದ ಒಂದು ಕಲ್ಲುಬಂಡೆಯಂತಹಾ ಪಕ್ಷವಾಗಿದೆ. ಅದನ್ನು ಮುರಿಯಬೇಕಾದರೆ ನಾವೂ ಕೂಡಾ ಒಟ್ಟಾಗಬೇಕು ಎಂದರು. ಆ ಆಧಾರದ ಮೇಲೆಯೇ ಈ ಜನತಾ ಪ್ರಯೋಗ ಆರಂಭವಾದದ್ದು.

ಜಯಪ್ರಕಾಶ್ ನಾರಾಯಣರಂತೂ ನೀವು ಅವರನ್ನು (ಜನಸಂಘ) ಫ್ಯಾಸಿಸ್ಟ್ ಎನ್ನುವುದಾದರೆ ನನ್ನನ್ನೂ ಫ್ಯಾಸಿಸ್ಟ್ ಅನ್ನಿ ಎಂದಿದ್ದರು. ನಮ್ಮ ಮಂತ್ರಿ ಮಂಡಲ ಆಯಿತು. ವಾಜಪೇಯಿಯವರಿದ್ದರು. ಆಡ್ವಾಣಿಯವರಿದ್ದರು. ಮೊರಾರ್ಜಿ ಇದ್ದರು. ನಮ್ಮ ಮಧುಲಿಮಯೆ ಅವರಿಗೆ ಮಾತ್ರ ಈ ಪ್ರಯೋಗದ ಬಗ್ಗೆ ಅನುಮಾನ ಇತ್ತು. ಇದು ಬಹಳ ಆಳವಾದ ಅನುಮಾನ. ನನಗೆ ಅವರು ಇದನ್ನು ಹೇಳಿದ್ದರು. ನಾವು ಇಂದಿರಾಗಾಂಧಿಯ ವಿರುದ್ಧ ಪ್ರಚಾರಕ್ಕೆಂದು ಹೋದಾಗ ನಾನು ಮಧು ಅವರನ್ನು ಕೇಳಿದೆ ‘ಈಗೊಂದು ಸರಕಾರ ನಡೆಯುತ್ತಿದೆ. ಇದನ್ನು ಒಡೆಯುವುದಕ್ಕೇಕೆ ನೋಡುತ್ತಿದ್ದೀರಿ?’

ಅವರಿದಕ್ಕೆ ನನ್ನನ್ನು ಹತ್ತಿರ ಕರೆದು ‘ಅಲ್ಲಿ ಮೇಜಿನ ಎದುರು ಎಲ್ಲಾ ಪುಸ್ತಕಗಳನ್ನು, ರಿಜಿಸ್ಟರ್‌ಗಳನ್ನು ಇಟ್ಟುಕೊಂಡು ಲೆಕ್ಕಪತ್ರ ಬರೆಯುತ್ತಾ ಕುಳಿತಿರುವವನು ಯಾರು? ಆತನೊಬ್ಬ ಸ್ವಯಂ ಸೇವಕ. ನಮ್ಮ ಪಕ್ಷವನ್ನು ಅವರು ಹಿಡಿದುಬಿಡುತ್ತಾರೆ. ಒಂದು ಸಾರಿ ಅವರು ಹಿಡಿದರು ಎಂದರೆ ಅವರನ್ನು ಓಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಇಂದಿರಾಗಾಂಧಿ ಮತ್ತೆ ಅಧಿಕಾರಕ್ಕೆ ಬಂದರೆ ಆಕೆಯನ್ನು ಇಳಿಸಬಹುದು’ ಎಂದು ವಿವರಿಸಿದರು.

ಈ ಮಾತು ನನಗೆ ಆಗಲೂ ಹೌದು ಎನಿಸಿತ್ತು. ಈಗ ಅದು ಕಣ್ಣೆದುರೇ ಕಾಣಿಸುತ್ತಿದೆ. ಆ ಭಯದಲ್ಲೇ ನಾನಿವತ್ತು ಮಾತನಾಡುತ್ತಿದ್ದೇನೆ. ಕಲ್ಲು ಬಂಡೆಯಂಥಾ ಕಾಂಗ್ರೆಸ್‌ಗೆ ವಿರುದ್ಧವಾಗಿ ಕಾಂಗ್ರೆಸ್ಸೇತರ ಪಕ್ಷಗಳ ಒಕ್ಕೂಟವನ್ನು ಕಟ್ಟಿ ದೇಶದ ರಾಜಕೀಯವನ್ನು ಚಲನಶೀಲಗೊಳಿಸಬೇಕೆಂದು ಲೋಹಿಯಾ ಹೇಳಿದ್ದರೋ ಅಂಥದ್ದೇ ಸಮಯ ಈಗ ಬಂದಿದೆ. ಅಂದು ಕಾಂಗ್ರೆಸ್ ಇದ್ದ ಜಾಗದಲ್ಲಿ ಇಂದು ಬಿಜೆಪಿ ಇದೆ. ಆದ್ದರಿಂದ ಬಿಜೆಪಿಯೇತರ ಪಕ್ಷಗಳೆಲ್ಲಾ ಒಟ್ಟಾಗಿ ಈ ಕೆಲಸವನ್ನು ಮಾಡಬೇಕಾಗಿದೆ. ಅದು ಕಾಂಗ್ರೆಸ್ಸನ್ನು ವಿರೋಧಿಸಿದ್ದಕ್ಕಿಂತ ಕಷ್ಟದ ಕೆಲಸ.

ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಸರಕಾರವಿದ್ದಾಗ ಒಂದು ಒಳ್ಳೆಯ ಮಂತ್ರಿ ಮಂಡಲವಿತ್ತು. ಅಬ್ದುಲ್ ನಜೀರ್ ಸಾಬ್ ಅದ್ಭುತವಾಗಿ ಕೆಲಸ ಮಾಡುತ್ತಿದ್ದರು. ದೇವೇಗೌಡರು ಒಳ್ಳೆಯ ಕೆಲಸ ಮಾಡುತ್ತಿದ್ದರು. ಆ ಸರಕಾರಕ್ಕೂ ಬಿಜೆಪಿಯ ಬೆಂಬಲವಿತ್ತು. ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರಕಾರವಿದ್ದಾಗಲೂ ಅದಕ್ಕೆ ಬಿಜೆಪಿಯ ಬೆಂಬಲವಿತ್ತು. ದೇವೇಗೌಡರಿಗೂ ಪಟೇಲರಿಗೂ ವೈಮನಸ್ಯ ಹುಟ್ಟಿದಾಗ ಪಟೇಲರು ಬಿಜೆಪಿಯ ಬೆಂಬಲವನ್ನು ಪಡೆದರು. ಆಗ ನಾಣಯ್ಯ ತರಹದವರೆಲ್ಲಾ ವಿಚಲಿತರಾದರು. ಬಿಜೆಪಿ ಹೀಗೆ ಕಾದುಕೊಂಡು ಕುಳಿತಿದೆ. ಅದಕ್ಕಿರುವ ಸಮಾಧಾನ ಅದಕ್ಕಿರುವ ತಾಳ್ಮೆ ಮತ್ತು ಅದಕ್ಕಿರುವ ಉಪಾಯಗಾರಿಕೆ ಬಹಳ ಅದ್ಭುತವಾದದ್ದು. ಹೀಗೆ ಬೆಂಬಲ ನೀಡಿದ ಎಲ್ಲಾ ಸಂದರ್ಭಗಳಲ್ಲಿ ಲಾಭ ಪಡೆದುಕೊಂಡದ್ದು ಬಿಜೆಪಿಯೇ ಹೊರತು ನಾವಲ್ಲ.

* * *

ನಾನು ಸೋಷಿಯಲಿಸ್ಟ್‌ ಆಗಿ ಬೆಳೆದವನು. ಮೊದಲೆಲ್ಲಾ ಐದು ಜನ ಸೋಷಿಯಲಿಸ್ಟರು ಅಸೆಂಬ್ಲಿಯಲ್ಲಿ ಇದ್ದರೆ ಐದು ನೂರು ಜನ ಇದ್ದಷ್ಟು ಶಕ್ತಿ ಇತ್ತು. ಇವತ್ತಿನ ರಾಜಕೀಯ ಎಷ್ಟು ಕೀಳಾಗಿದೆಯೆಂದರೆ ಅದಕ್ಕಿಂತ ಬಹಳ ದೊಡ್ಡ ಸಂಖ್ಯೆಯಲ್ಲಿ ಇಂದು ಅಸೆಂಬ್ಲಿಯಲ್ಲಿ ಸೋಷಿಯಲಿಸ್ಟರಿದ್ದರೂ ಹಳೆಯ ಶಕ್ತಿ ಇಲ್ಲ. ಜನತಾದಳದಲ್ಲಿರುವ ಕೆಲವರು ಕಾಂಗ್ರೆಸ್ಸಿಗೆ ಹೋದರು, ಕೆಲವರು ಬಿಜೆಪಿಗೂ ಹೋದರು. ದೇವೇಗೌಡರೇ ಬೆಳೆಸಿದವರೂ ದೇವೇಗೌಡರನ್ನು ಬಿಟ್ಟು ಹೋದರು. ಇದರಲ್ಲಿ ದೇವೇಗೌಡರ ತಪ್ಪೇನಿರಬಹುದು? ಈತ ಸಹಿಸಿಕೊಳ್ಳಲೇ ಕಷ್ಟವಾಗಿರುವ ಮನುಷ್ಯನೇ? ಈತ ಯಾರನ್ನೂ ನಂಬದ, ಎಲ್ಲರನ್ನೂ ಸಂಶಯದಿಂದ ನೋಡುವ ವ್ಯಕ್ತಿಯೇ? ದೇವೇಗೌಡರಲ್ಲಿ ಯಾರನ್ನು ತಾಳಿಕೊಳ್ಳಲಾಗದ ಒಂದು ದೌರ್ಬಲ್ಯವಿದೆಯೇ? ಎಂಬ ಎಲ್ಲಾ ಪ್ರಶ್ನೆಗಳ ಬಗ್ಗೆ ನಾನು ಸಾಕಷ್ಟು ಬರೆದಿದ್ದೇನೆ. ಈ ಪ್ರಶ್ನೆಗಳನ್ನೆಲ್ಲಾ ಸದ್ಯ ಬದಿಗಿಟ್ಟು ಇಂದಿನ ಸವಾಲನ್ನು ಚಚಿಸಲು ಇಚ್ಛಿಸುತ್ತೇನೆ.

ದೇವೇಗೌಡರ ಜತೆ ನಾವೆಷ್ಟೇ ಜಗಳ ಮಾಡಿದರೂ ಅವರಿಗಿರುವ ಅನುಭವವನ್ನು ಅಲ್ಲಗಳೆಯಲು ಆಗುವುದಿಲ್ಲ. ಅವರಿಗೆ ನಮ್ಮ ಅನುಭವಗಳು ವಿವರ ವಿವರಗಳಲ್ಲಿ ನೆನಪಿದೆ. ಕರ್ನಾಟಕದ ಒಕ್ಕಲಿಗರ ಜಾತಿಯಲ್ಲಿ ಒಂದು ಮೂಲೆಯಲ್ಲಿ ಹುಟ್ಟಿ ಬಂದ ಈ ಮನುಷ್ಯ ದೇಶದ ಪ್ರಧಾನಿಯಾದುದನ್ನು ಕರ್ನಾಟಕ ಎಷ್ಟು ಸಂತೋಷದಿಂದ ಆಚರಿಸಬೇಕಾಗಿತ್ತೋ ಅಷ್ಟು ಸಂತೋಷದಿಂದ ಆಚರಿಸಲಿಲ್ಲ. ಯಾಕೆಂದರೆ ಇಂಗ್ಲಿಷ್ ಪತ್ರಿಕೆಗಳಿಗೆ ಇಂಗ್ಲಿಷನ್ನು ಬಹಳ ಚೆನ್ನಾಗಿ ಮಾತನಾಡಬಲ್ಲ ಹೆಗಡೆಯಂಥವರು ಇಷ್ಟವಾಗುತ್ತಾರೆಯೇ ಹೊರತು ದೇವೇಗೌಡರಂಥವರು ಇಷ್ಟವಾಗುವುದು ಕಷ್ಟ. ನನಗೆ ಭಾರತದ ಪ್ರಜಾಸತ್ತೆ ನಿಜ ಎಂದು ಅನ್ನಿಸದ್ದೇ ದೇವೇಗೌಡರು ನಮ್ಮ ದೇಶದ ಪ್ರಧಾನಿಯಾಗಿ ಕೆಂಪುಕೋಟೆಯಿಂದ ಮಾತನಾಡಿದಾಗ. ಅವರು ಅಲ್ಲಿಂದ ಕನ್ನಡದಲ್ಲಿಯೇ ಮಾತನಾಡಬೇಕಾಗಿತ್ತು ಎಂಬುದು ನನ್ನ ಆಸೆಯಾಗಿತ್ತು.

ದೇವೇಗೌಡರ ನೇತೃತ್ವದಲ್ಲಿದ್ದ ಪಕ್ಷ ಬಿಜೆಪಿಯೊಂದಿಗೆ ಹೋದದ್ದೂ ಸೇರಿದಂತೆ ಅನೇಕ ತಪ್ಪುಗಳಾಗಿವೆ. ತಪ್ಪುಗಳ ವಿವರಗಳು ನಾನು ಬಿಡುಗಡೆ ಮಾಡಿರುವ ಪುಸ್ತಕದಲ್ಲಿವೆ. ಇದರಲ್ಲಿ ಕೆಲ ಮಟ್ಟಿಗೆ ಸ್ವಸಮರ್ಥನೆಯೂ ಇರಬಹುದು. ಈ ಪುಸ್ತಕದಲ್ಲಿ ಕುಮಾರಸ್ವಾಮಿಯವರೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಕಿತ್ತು ಎಂಬುದು ನನ್ನ ಭಾವನೆ.

ಕುಮಾರಸ್ವಾಮಿಯವರು ಕೆಲವೊಮ್ಮೆ ಬಹಳ ಭಾವುಕವಾಗಿ ಮಾತನಾಡಿಬಿಡುತ್ತಾರೆ – ‘ನಾವೆಲ್ಲಾ ಪ್ರಯೋಜನಕ್ಕೆ ಬಾರದವರು. ನಾವೆಲ್ಲಾ ಕೆಟ್ಟುಹೋಗಿದ್ದೇವೆ’ ಎಂಬ ಮಾತುಗಳನ್ನು ಅವರು ಇಂಥ ಹೊತ್ತಿನಲ್ಲಿ ಆಡಿದ್ದಾರೆ. ಅವರು ಹೀಗೆ ನಿರಾಶಾವಾದದ ಮಾತುಗಳನ್ನು ಆಡಬಾರದು. ಕುಮಾರಸ್ವಾಮಿಯವರು ಕೆಟ್ಟು ಹೋಗಬೇಕಾಗಿಲ್ಲ.

* * *

ಲೋಹಿಯಾ ಕೊನೆಯಲ್ಲಿ ಎರಡು ಪುಸ್ತಕಗಳನ್ನು ಬರೆದಿದ್ದರು. ಒಂದು ‘ನಿರಾಶಾಕಿ ಕರ್ತವ್ಯ್‌’. ಮತ್ತೊಂದು ಸೋಷಿಯಲಿಸಂ ಇನ್ ಒನ್ ಹಂಡ್ರಡ್ ಇಯರ್ಸ್‌’. ನಮ್ಮ ದೇಶ ಎಷ್ಟು ಕೆಟ್ಟು ಹೋಗಿದೆಯೆಂದರೆ ನಾವು ಏನೂ ಆಗುವುದಿಲ್ಲ ಎಂಬ ನಿರಾಶೆಯಿಂದಲೇ ಮಾಡಬೇಕಾದ ಕೆಲವು ಕೆಲಸಗಳಿವೆ ಎಂದು ಲೋಹಿಯಾ ಆ ಕಾಲದಲ್ಲಿಯೇ ತಮ್ಮ ನಿರಾಶಾಕಿ ಕರ್ತವ್ಯ್‌‌ದಲ್ಲಿ ಹೇಳಿದ್ದರು. ಎರಡನೇ ಪುಸ್ತಕ ಸೋಷಿಯಲಿಸಂ ಇನ್ ಒನ್ ಹಂಡ್ರಡ್ ಇಯರ‍್ಸ್‌ನಲ್ಲಿ ನೂರು ವರ್ಷದ ನಂತರ ಸಮಾಜವಾದ ಬರುತ್ತದೆ ಎಂಬ ನಿರೀಕ್ಷೆಯೊಂದಿಗೆ ಕೆಲಸ ಮಾಡಬೇಕೆಂದು ಲೋಹಿಯಾ ಹೇಳುತ್ತಾರೆ. ನಾಳೆಯೇ ಸಮಾಜವಾದ ಬರುತ್ತದೆ ಎಂದುಕೊಂಡರೆ ನಾವು ತಪ್ಪುಗಳನ್ನು ಮಾಡುತ್ತೇವೆ. ಅಷ್ಟೇ ಅಲ್ಲ ನಾವು ಮಾಡಿದ್ದೇ ಸಮಾಜವಾದ ಎಂಬ ಭ್ರಮೆಗೆ ಸಿಲುಕಿ ಬಿಡುತ್ತೇವೆ. ಪರಿಣಾಮವಾಗಿ ಜನರಿಗೆ ಮೋಸ ಮಾಡುತ್ತೇವೆ.

ನಾನು ಇಂದು ಇಲ್ಲಿ ಮಾತನಾಡಲು ಬಂದಿರುವುದನ್ನು ನೋಡಿ ಹಲವರು ನೀವು ಜನತಾದಳ ಸೇರಿದಿರೇ ಎಂಬ ಪ್ರಶ್ನೆ ಕೇಳುತ್ತಾರೆ. ದೇವೇಗೌಡರು ಕೇವಲ ಸದ್ಯದ ರಾಜಕಾರಣವನ್ನಷ್ಟೇ ಮಾಡದೆ ಶಾಶ್ವತಕ್ಕೆ ಸ್ಪಂದಿಸಿದರೆ ನಾನು ಯಾವಾಗಲೂ ಜನತಾದಳದವನೇ. ಈಗ ನನ್ನ ಮನಸ್ಸಿಗೆ ದುಃಖವಾಗಿದೆ. ಜನತಾದಳ ಅಲ್ಲಿ ಇಲ್ಲಿ ಯಾರ‍್ಯಾರ ಜತೆಯೋ ಸೇರಿ ತನ್ನ ಪಕ್ಷದ ಸದಸ್ಯರನ್ನು ಬಿಜೆಪಿಗೆ ಕಳೆದುಕೊಂಡು, ಕಾಂಗ್ರೆಸ್ಸಿಗೆ ಕಳೆದುಕೊಂಡು ಬಡವಾಗಿದೆ. ಈ ಸ್ಥಿತಿಯಲ್ಲಿ ನನಗನ್ನಿಸುವುದು ಒಂದು ಹೊಸ ರಾಜಕೀಯ ವರ್ಗವೇ ಬರಬೇಕಾಗಿದೆ. ಕುಮಾರಸ್ವಾಮಿಯಂಥವರು ಹೊಸಬರನ್ನು ಅದರಲ್ಲೂ ಯಾರಿಗೆ ದುಡ್ಡಿನ ಮೇಲೆ ಮೋಹವಿಲ್ಲವೋ ಅವರನ್ನು ಹುಡುಕಿ ಗುರುತಿಸಿ ಪಕ್ಷ ಕಟ್ಟಬೇಕು.

ದೇವೇಗೌಡರು ಪ್ರಧಾನಿಯಾದ ಕೂಡಲೇ ಯೋಚಿಸಿದ್ದು ರೈತನ ಬಗ್ಗೆ. ನಮಗೆ ಕಾರ್ಯಕ್ರಮ ಮುಖ್ಯ. ಹೀಗೆ ಕಾರ್ಯಕ್ರಮದ ಮುಖಾಂತರ ಗುರುತಿಸಿಕೊಳ್ಳಬೇಕು. ನನ್ನ ಒಳ್ಳೆಯ ಸ್ನೇಹಿತರೆಲ್ಲಾ ಇದ್ದದ್ದು ಜನತಾ ಪರಿವಾರದಲ್ಲಿ. ಈಗ ಅವರು ಎಲ್ಲೆಲ್ಲೋ ಇದ್ದಾರೆ. ಅವರೆಲ್ಲಾ ಒಟ್ಟಿಗೆ ಸೇರುವುದಕ್ಕೆ ಸಾಧ್ಯವಿದೆಯೇ? ದೇವೇಗೌಡರ ಕಾರಣದಿಂದಲೇ ಒಟ್ಟಿಗೆ ಸೇರುತ್ತಿಲ್ಲ ಎಂದು ಕೆಲವು ಹೇಳುತ್ತಾರೆ. ಅದು ನಿಜ ಅಲ್ಲ ಎಂದು ನನಗನ್ನಿಸುತ್ತಿದೆ. ಏಕೆಂದರೆ ಇದು ಗೆಲ್ಲುವ ಪಕ್ಷವಾದರೆ ಮತ್ತೆ ಅವರೆಲ್ಲಾ ಇಲ್ಲಿ ಬಂದು ಬಿಡುತ್ತಾರೆ. ಆದ್ದರಿಂದ ಈ ಗೆಲ್ಲುವ ಪಕ್ಷವಾಗುವುದೇ ಒಂದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಆಗ ಯಾರುಬೇಕಾದರೂ ಬಂದು ಸೇರಿಕೊಳ್ಳುತ್ತಾರೆ. ಈ ಸಮಸ್ಯೆಯನ್ನು ಮೀರಿದ ಶುದ್ಧ ರಾಜಕಾರಣವೊಂದು ಕುಮಾರಸ್ವಾಮಿಯವರಿಂದ ಸಾಧ್ಯವಾಗಬೇಕು. ಈ ಬಗೆಯ ಶುದ್ಧವಾದ ರಾಜಕಾರಣಕ್ಕಾಗಿ ನಮ್ಮ ಜನ ಕಾದಿದ್ದಾರೆ.

ನಾನು ಬಹಳ ಟೀಕೆ ಮಾಡಿರುವ ಒಬ್ಬ ವ್ಯಕ್ತಿ ಎಂದರೆ ಎಂ.ಪಿ. ಪ್ರಕಾಶ್. ಅವರು ನನಗೆ ಬಹಳ ಹತ್ತಿರದವರಾಗಿದ್ದರು, ಅದರಿಂದಾಗಿಯೇ  ನಾನು ಅವರನ್ನು ಹೆಚ್ಚು ಟೀಕಿಸಿದೆನೆಂದು ಕಾಣಿಸುತ್ತದೆ. ಪ್ರಕಾಶ್, ಸಿಂಧ್ಯ, ಕುಮಾರಸ್ವಾಮಿ ಎಲ್ಲಾ ಒಟ್ಟಾಗುವುದಕ್ಕೆ ಸಾಧ್ಯವಾದರೆ, ಕಮ್ಯುನಿಸ್ಟರು ಜತೆಗಿದ್ದರೆ-ನಾನು ಯಾವಾಗಲೂ ಒಬ್ಬ ಕಮ್ಯುನಿಸ್ಟ್ ಅಭ್ಯಥಿ ಇದ್ದರೆ ಅವನಿಗೇ ಓಟ್ ಮಾಡುತ್ತೇನೆ, ಅವನಿಲ್ಲದಿದ್ದರೆ ಕಾಂಗ್ರೆಸ್‌ಗೆ ಓಟ್ ಮಾಡುತ್ತೇನೆ ಎಂದು ಹೇಳುತ್ತಿರುತ್ತೇನೆ. – ಪರಿಸ್ಥಿತಿ ಖಂಡಿತವಾಗಿಯೂ ಬದಲಾಗಬಹುದು. ನಾನು ಹೇಳುತ್ತಿರುವ, ಜನ ಕಾಯುತ್ತಿರುವ ಶುದ್ಧ ರಾಜಕಾರಣವನ್ನು ಮತ್ತೆ ಸಾಧ್ಯಮಾಡಿ ತೋರಿಸಬಹುದು.

* * *

ಕಾಂಗ್ರೆಸ್ ಜತೆಗೆ ಎಷ್ಟೇ ಜಗಳವಿದ್ದರೂ ಅದು ನಾಚಿಕೆಗೆಟ್ಟು ಕೋಮುವಾದಿಯಾಗಲಾರದು ಎಂಬ ಭರವಸೆ ಉಳಿದುಕೊಂಡಿತ್ತು. ಈಗ ಆ ಭರವಸೆಯೂ ಉಳಿದಿಲ್ಲ. ಹೈದರಾಬಾದ್‌ನಲ್ಲಿ ಇಪ್ಪತ್ತು ಜನ ಮುಸ್ಲಿಂ ಯುವಕರನ್ನು ಸಂಶಯದ ಮೇಲೆ ಬಂಧಿಸಿ ಆರು ತಿಂಗಳು ಅವರಿಗೆ ಬಗೆ ಬಗೆಯ ಹಿಂಸೆ ಕೊಟ್ಟು ಬಿಡುಗಡೆ ಮಾಡಿದ್ದಾರೆ. ಹೊರಬಂದ ಅವರಿಗೆ ತಮ್ಮ ತಮ್ಮ ಕುಟುಂಬಗಳ ಜತೆಗೇ ಹೊಂದಿಕೊಂಡು ಹೋಗಲಾರದಷ್ಟು ಭಯ ಆವರಿಸಿದೆ. ಅವರ ದೇಹ ಮತ್ತು ಮನಸ್ಸುಗಳನ್ನು ಈ ಮಟ್ಟಿಗೆ ನಾಶ ಮಾಡಿ ಈಗ ಅವರಿಗೆಲ್ಲಾ ‘ಒಂದೊಂದು ಆಟೋರಿಕ್ಷಾ ತೆಗೆದುಕೊಳ್ಳುವುದಕ್ಕೆ ದುಡ್ಡು ಕೊಡುತ್ತೇವೆ’ ಎಂದು ಅಲ್ಲಿನ ಕಾಂಗ್ರೆಸ್ ಸರಕಾರ ಹೇಳುತ್ತಿದೆ.

ದಿಲ್ಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೂ ಹೀಗೆಯೇ ಬಂಧಿಸಲಾಗಿತ್ತು. ಆ ವಿಶ್ವವಿದ್ಯಾಲಯದ ಕುಲಪತಿ ಧೈರ್ಯಮಾಡಿ ವಿದ್ಯಾರ್ಥಿಗಳಿಗೆ ಕಾನೂನು ನೆರವನ್ನು ಒದಗಿಸುತ್ತಿದ್ದಾರೆ. ಅದೇ ವಿಶ್ವವಿದ್ಯಾಲಯದಲ್ಲಿ ನಾನು ಇತ್ತೀಚೆಗೆ ಒಂದು ಘಟಿಕೋತ್ಸವ ಭಾಷಣ ಮಾಡಬೇಕಾಗಿತ್ತು. ಆಗ ಕುಲಪತಿಯನ್ನು ಸಂಪೂರ್ಣವಾಗಿ ಬೆಂಬಲಿಸಿ ಮಾತನಾಡಿದೆ. ಇದಕ್ಕಾಗಿ ನನಗೆ ಅದೆಷ್ಟು ಹೇಟ್ ಮೇಲ್‌ಗಳು ಬರುತ್ತಿವೆ ಎಂದರೆ ನನಗೆ ಇಂಗ್ಲಿಷ್ ಭಾಷೆಯ ಬಗ್ಗೆಯೇ ರೇಜಿಗೆ ಹುಟ್ಟಿಸುತ್ತಿದೆ. ಸಂವೇದನಾ ರಹಿತ ಕಾಗದಗಳನ್ನು ಬರೆಯುವವರೆಲ್ಲಾ ಇಂಗ್ಲಿಷ್‌ನಲ್ಲೇ ಬರೆಯುತ್ತಾರೆ!

ಈಗ ಕನಕದಾಸರನ್ನು ಜನರಿಗೆ ಹತ್ತಿರ ಮಾಡಲು ಸರ್ಕಾರ ದುಡ್ಡು ಕೊಡುತ್ತದೆಯಂತೆ. ಇವರಿಗೆ ಕನಕದಾಸರು ಜನರಿಗೆ ಹತ್ತಿರವಿಲ್ಲ ಎಂದು ಯಾರು ಹೇಳಿದರೋ? ಕನಕದಾಸರು ಹಿಂದೆಯೂ ಈಗಲೂ ಜನರಿಗೆ ಹತ್ತಿರವಾಗಿಯೇ ಇದ್ದಾರೆ. ಅವರನ್ನು ಇಂಗ್ಲಿಷ್‌ಸ್ಕೂಲಿಗೆ ಹೊಗುವ ವಿದ್ಯಾವಂತರಿಗೆ ಹತ್ತಿರ ಮಾಡಬೇಕು ಎಂದು ಯಡಿಯೂರಪ್ಪನವರು ಹೇಳಿದ್ದರೆ ಅದನ್ನು ಒಪ್ಪಬಹುದಿತ್ತೇನೋ. ಆದರೆ ಅವರು ಒಂದು ಜಾತಿಯನ್ನು ಓಲೈಸುವುದಕ್ಕಾಗಿ ಈ ಯೋಜನೆಯನ್ನು ರೂಪಿಸಿದ್ದಾರೆ. ನಾವಿವತ್ತು ಮಠಗಳನ್ನು, ಸಂತರನ್ನು ಎಲ್ಲರನ್ನೂ ನಮ್ಮ ಕೀಳು ರಾಜಕೀಯಕ್ಕಾಗಿ ಬಲಿಕೊಡುತ್ತಿದ್ದೇವೆ.

* * *

ನಾನು ನಿರಾಶಾಕಿ ಕರ್ತವ್ಯ್ ಮತ್ತು ಮುಂದಿನ ನೂರು ವರ್ಷಗಳಲ್ಲಿ ಸಮಾಜವಾದ ಬರುತ್ತದೆ ಎಂಬ ನಂಬಿಕೆ ಇರಬೇಕು ಎಂದೆ. ಇದಕ್ಕೆ ಈಗಿನ ಅಮೆರಿಕಾವೇ ಉದಾಹರಣೆ. ಬಂಡವಾಳಶಾಹಿ ಆರ್ಥಿಕತೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಅದು ಈಗ ಸಮಾಜವಾದಿಯಾಗುತ್ತಿದೆ. ಅದೇ ಹಲವು ಕಂಪನಿಗಳನ್ನು ಅನಿವಾರ್ಯವಾಗಿ ರಾಷ್ಟ್ರೀಕರಣ ಮಾಡಿದೆ.

ಅಮೆರಿಕದಲ್ಲಿ ರೇಗನ್ ನಂತರದ ರಾಜಕಾರಣ ಎಷ್ಟು ಸುಳ್ಳುಗಳಿಂದ ತುಂಬಿ ಕುಲಗೆಟ್ಟಿತ್ತು ಎಂದರೆ ಮನಮೋಹನ್ ಸಿಂಗ್ ಅಲ್ಲಿಗೆ ಹೋಗಿ ಬುಷ್‌ರನ್ನು ಹೊಗಳಿದಾಗ ನನಗೆ ನಾಚಿಕೆ ಆಗಿತ್ತು. ಬುಷ್ ಹತ್ತಿರ ಅವರು ವಿದ್ಯುತ್ ಕೇಳಲು ಹೋಗಿದ್ದರು. ಅವರು ಬುಷ್ ಬಳಿಗೆ ಹೊಗಬೇಕಾಗಿದ್ದ ಗಾಂಧಿಯ ಸರ್ವೋದಯವನ್ನು ಹೇಳುವುದಕ್ಕೆ ಇವತ್ತು ಅಮೆರಿಕಕ್ಕೆ ಬೇಕಾಗಿರುವುದು ಸರ್ವೋದಯ. ಅದು ಅಗತ್ಯವಾಗುವ ಬಡತನ ಅಮೆರಿಕಕ್ಕೆ ಬರಬಹುದು.

ಮನಮೋಹನ್ ಸಿಂಗ್ ಹೊಗಳಿ ಬಂದ ಬುಷ್‌ನ ಪಕ್ಷವನ್ನು ಅಮೆರಿಕ ಆರಿಸಲಿಲ್ಲ. ಅದು ಒಬಾಮನನ್ನು ಆರಿಸಿದೆ. ಪ್ರಜಾತಂತ್ರದ ವಿಚಿತ್ರ ವಿಸ್ಮಯಗಳಲ್ಲಿ ಇದೊಂದು. ಹೆಂಗಸರು, ಯುವಕರು ಒಬಾಮನನ್ನು ಗೆಲ್ಲಿಸಿದರು ಎಂದು ನನ್ನ ಅಮೆರಿಕನ್ ಸ್ನೇಹಿತರು ಹೇಳುತ್ತಾರೆ. ಇದರಲ್ಲಿ ಬಿಳಿಯರು ಮತ್ತು ಕರಿಯರೆಲ್ಲಾ ಸೇರಿದ್ದಾರೆ. ಬುಷ್ ಜತೆ ಈ ಕರಿಯ ವೈಟ್‌ಹೌಸ್‌ನಲ್ಲಿ ನಿಂತಿದ್ದನ್ನು ನೋಡಿದಾಗ ನನಗೆ ದೇವೇಗೌಡರು ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ನಿಂತು ಮಾತನಾಡಿದ್ದನ್ನು ನೋಡಿದಾಗ ಆದಷ್ಟೇ ಸಂತೋಷವಾಯಿತು. ಇದು ಚಲನಶೀಲತೆ. ಅಮೆರಿಕದಲ್ಲಿ ಇದು ಸಾಧ್ಯವಾಯಿತು. ಭಾರತದಲ್ಲಿಯೂ ಇದು ಸಾಧ್ಯವಾಗಬೇಕು. ಆದರೆ ಭಾರತದ ಒಂದು ಅವಗುಣ ಏನೆಂದರೆ ನಮ್ಮ ಸಹನೆಯ ಮಟ್ಟ ಬಹಳ ಹೆಚ್ಚು. ಎಲ್ಲವನ್ನೂ ಸಹಿಸಿ ಸಹಿಸಿಕೊಂಡು ಮುಂದುವರಿದು ಇನ್ನು ಸಹಿಸುವುದು ಸಾಧ್ಯವೇ ಇಲ್ಲ ಎನಿಸಿದಾಗ ಬದಲಾವಣೆಗೆ ಮುಂದಾಗುತ್ತೇವೆ. ಈ ಸಹನೆಯ ಕಟ್ಟೆಯೊಡೆಯುವ ತನಕ ನೀವು ಕಾಯಬೇಕು. ಯಾವ ಅವಸರವನ್ನೂ ಮಾಡಬೇಕಾಗಿಲ್ಲ. ನೀವು ಕೇವಲ ಹತ್ತು ಜನ ಮಾತ್ರ ಆಯ್ಕೆಯಾದರೂ ಹೆದರಬೇಕಾಗಿಲ್ಲ. ಏಕೆಂದರೆ ನಿಮ್ಮ ಜತೆ ಇದ್ದ ಅದೆಷ್ಟು ಜನ ನಿಮ್ಮನ್ನು ಬಿಟ್ಟು ಹೋದರು? ಸಿದ್ಧರಾಮಯ್ಯ ಇಲ್ಲಿದಿದ್ದರೆ ನಾಯಕರಾಗಿರುತ್ತಿದ್ದರು. ಪ್ರಕಾಶ್ ಇಲ್ಲಿರಬೇಕಾಗಿತ್ತು. ಇದೆಲ್ಲಾ ನನ್ನ ಆಸೆಗಳು. ನೀವು ಒಪ್ಪುತ್ತೀರೋ ಬಿಡುತ್ತೀರೋ ಗೊತ್ತಿಲ್ಲ. ನನಗೆ ಇರುವ ಸಂಬಂಧವನ್ನು ಬಳಸಿಕೊಂಡು ನಾವು ಹೇಳಬಹುದಾದ ಮಾತುಗಳಿವು.

* * *

ನಮ್ಮ ಮಾಧ್ಯಮಗಳಿಗೆ ನಾನೊಂದು ವಿನಂತಿ ಮಾಡಿಕೊಂಡಿದ್ದೇನೆ. ಒಬ್ಬನೆ ಮೇಲಿನ ಆರೋಪ ಸಾಬೀತಾಗುವವರೆಗೂ ಅವನ ಹೆಸರನ್ನು ಪ್ರಕಟಿಸಬೇಡಿ. ಯಾರೊ ಒಬ್ಬನನ್ನು ಸಂಶಯದಲ್ಲಿ ಹಿಡಿದರು ಎಂದಾಕ್ಷಣವೇ ಅವನ ಹೆಸರು ಮಾಧ್ಯಮದಲ್ಲಿ ಬಂದು ಅವನು ಆರೋಪಿಯಾಗುವ ಬದಲಿಗೆ ಅಪರಾಧಿಯೇ ಆಗಿಬಿಡುತ್ತಾನೆ. ಇನ್ನು ಹಿಂಸೆ ಕೊಟ್ಟರೆ ಯಾರು ‘ತಪ್ಪೊಪ್ಪಿಕೊಳ್ಳದೆ’ ಇರುತ್ತಾರೆ? ಆಮೇಲೆ ಆರು ತಿಂಗಳ ನಂತರ ಅವನ ಮೇಲಿನ ಅಪರಾಧ ಸಾಬೀತಾಗದೆ ಹೊರ ಬಂದರೂ ಅವನಿಗೆ ಬದುಕಲು ಅವಕಾಶವಿರುವುದಿಲ್ಲ. ಇದೆಲ್ಲಾ ಏನು. ದೇಶದ ಬಂದು ಬಹುದೊಡ್ಡ ಸಮುದಾಯವನ್ನೇ ಹೊರಗಿಟ್ಟು ನಾವು ದೇಶ ಕಟ್ಟುತ್ತೇವೆಯೇ? ಇದು ಮೆಜಾರಿ ಟೇರಿಯನ್ ಸ್ಟೇಟ್ ಆಗುತ್ತೆ. ಹಿಂದೂ ಮೆಜಾರಿಟಿಯನ್ನು ಇಟ್ಟುಕೊಂಡು ದೇಶ ಎನ್ನುವುದು. ಇದು ಭಾರತ ಅಲ್ಲ. ಆದ್ದರಿಂದ ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುವುದು ಯಾವ ಪಕ್ಷವಾದರೂ ಅದರ ಜತೆ ನಾನು ಗುರುತಿಸಿಕೊಳ್ಳುತ್ತೇನೆ. ನನಗೂ ೭೬ ಆಯಿತು. ಈಗ ಗುರುತಿಸಿಕೊಂಡರೆ ಮಾನಸಿಕವಾಗಿಯಷ್ಟೇ ಗುರುತಿಸಿಕೊಳ್ಳಬಹುದು. ಇದರಲ್ಲಿ ಆಸೆ-ಗೀಸೆಗಳಿಲ್ಲ.

ಇಂಥ ಆಸೆ ನನಗೂ ಇತ್ತು. ನಾನು ರಾಜ್ಯಸಭೆಗೆ ಸ್ಪರ್ಧಿಸಿದೆ. ಸೋಲುತ್ತೇನೆ ಎಂದು ತಿಳಿದೇ ಸ್ಪರ್ಧೆಗೆ ಇಳಿದೆ. ಆಗ ನಾನು ಮೊದಲು ಭೇಟಿಯಾದದ್ದು ದತ್ತನನ್ನು. ‘ನಾನು ನಿಂತಿದ್ದೇನೆ, ಜನತಾ ಪಕ್ಷದವನು ನಾನು, ನೀವೆಲ್ಲಾ ಬೆಂಬಲಿಸಬೇಕು’ ಎಂದೆ. ಆಮೇಲೆ ದೇವೇಗೌಡರಲ್ಲಿಗೆ ಹೋದೆ ‘ಐ ಆಂ ಹೆಲ್ಪ್‌ಲೆಸ್’ ಎಂದರು. ಕುಮಾರಸ್ವಾಮಿ ಮತ್ತೇನೋ ಹೇಳಿದರು. ಇವೆಲ್ಲವನ್ನೂ ನಾನು ತಮಾಷೆಯಾಗಿಯೇ ತೆಗೆದುಕೊಂಡ. ನನಗೆ ಚುನಾವಣೆಯಲ್ಲಿ ಗೆಲ್ಲಬೇಕು ಎಂದಿರಲಿಲ್ಲ. ನನಗೆ ಒಂದು ವಿಷಯದತ್ತ ಜನರ ಗಮನ ಸೆಳೆಯಬೇಕಾಗಿತ್ತು. ನನ್ನಂಥವರು ಮುಖ್ಯವಾಗಿ ಮಾಡಬೇಕಗಿರುವ ಕೆಲಸ ಇದುವೇ. ರಾಜಕೀಯ ಪಕ್ಷಗಳು ಮಾಡಲಾಗದೇ ಇರುವ ಈ ಕೆಲಸವನ್ನು ನನ್ನಂಥವರು ಮಾಡಬೇಕು.

ಈಗ ಮುಸ್ಲಿಮರ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಇದಕ್ಕಾಗಿ ನಾನು ಎಷ್ಟು ಬೈಗುಳ ಕೇಳಬೇಕಾಗಿದೆಯೆಂದರೆ ಅದನ್ನು ಹೇಳಿ ಸುಖವಿಲ್ಲ. ಆದರೂ ನಾನು ಮಾತನಾಡುತ್ತೇನೆ. ಗುರುತಿಸಿಕೊಳ್ಳುವುದು ಎಂದರೆ ಹೀಗೆ. ನನಗೆ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳಬೇಕು ಅನ್ನಿಸಿತ್ತು. ಆದರೆ ಮನಮೋಹನ್‌ಸಿಂಗ್ ಹೋಗಿ ಯಾವತ್ತು ಬುಷ್ ಜತೆಗೆ ಅಣು ಒಪ್ಪಂದಕ್ಕೆ ಸಹಿ ಮಾಡಿದರೋ ಅವತ್ತು ನನಗೆ ಕಾಂಗ್ರೆಸ್‌ಬಗ್ಗೆ ಬೇಸರವಾಯಿತು. ಈ ವರ್ಲ್ಡ್‌ಬ್ಯಾಂಕ್ ಮುಂತಾದ ಕಡೆ ಕೆಲಸ ಮಾಡಿದವರು ದೊಡ್ಡ ರಾಜಕಾರಣಿಗಳಾಗಲು ಸಾಧ್ಯವಿಲ್ಲ. ನಮಗೆ ಪ್ರಧಾನಿಯಾಗಿ ಒಬ್ಬ ರಾಜಕಾರಣಿ ಬೇಕು. ನಮಗೆ ತಜ್ಞರು ಬೇಡ.

ಈಗ ಒಳ್ಳೆಯ ಮುಖ್ಯಮಂತ್ರಿಗಳಾಗುವವರೆಲ್ಲಾ ಸಿಇಓಗಳು. ನಮಗೆ ಇವರು ಬೇಡ. ನಮಗೆ ಬೇಕಿರುವುದು ರಾಜಕಾರಣಿಗಳು. ಜನ ಹಿತವನ್ನು ಗ್ರಹಿಸುವವರು ಬೇಕು. ಅದನ್ನು ದೇವೇಗೌಡರು ಮಾಡಿದರೆ ಅವರಿಗೆ ನನ್ನ ಬೆಂಬಲ. ಮಾಡದೇ ಇದ್ದರೆ ವಿರೋಧ ಅಷ್ಟೇ.

ಮತೀಯವಾದದ ಪ್ರಶ್ನೆ ಬಂದಾಗ ಮಾತನಾಡುತ್ತಿರುವ ಒಬ್ಬನೇ ರಾಜಕಾರಣಿ ಎಂದರೆ ದೇವೇಗೌಡರು. ಅದಕ್ಕಾಗಿ ನಾನವರನ್ನು ಅಭಿನಂದಿಸುತ್ತೇನೆ. ಯಾಕೆಂದರೆ ಅಪ್ಪಟ ಹಿಂದೂವಾದವನು ಮತೀಯವಾದವನ್ನು ಖಂಡಿಸಿದರೆ ಅದಕ್ಕೆ ಹೆಚ್ಚಿನ ಬೆಲೆ ಇದೆ. ನಾವು ಕೆಲವರು ಸೆಕ್ಯುಲರ್ ಜನ ನಿಜವಾಗಿಯೂ ಧರ್ಮದಲ್ಲಿ ನಂಬಿಕೆ ಇಟ್ಟವರ ಜತೆ ಸಂವಾದವನ್ನು ಆರಂಭಿಸಬೇಕು. ಅವರನ್ನೂ ಕೂಡಾ ಈ ಮತೀಯವಾದಿಗಳು ಕಲುಷಿತಗೊಳಿಸುತ್ತಾ ಇದ್ದಾರೆ. ಎಲ್ಲಾ ಧರ್ಮಗಳೂ-ಹಿಂದೂ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳೂ ಹಾಳಾಗಿ ಹೋಗುತ್ತಿವೆ- ದೇವರ ಹುಡುಕಾಟವನ್ನೇ ಕೈಬಿಟ್ಟಿವೆ. ಎಲ್ಲ ಧರ್ಮಗಳ ಒಳಗೆ ಇರುವ ತೀವ್ರವಾದಿಗಳು ಧರ್ಮವನ್ನು ಹೈಜಾಕ್ ಮಾಡುವುದಕ್ಕೆ ನೋಡುತ್ತಿದ್ದಾರೆ. ಇದನ್ನೆಲ್ಲಾ ಯಾರಾದರೂ ಮಾತನಾಡಲೇಬೇಕು. ದೇವೇಗೌಡರು ಅದನ್ನು ಮಾಡುತ್ತಿದ್ದಾರೆ. ಮತ್ತು ಅವರು ಮಾಡಿರಬಹುದಾದ ತಪ್ಪನ್ನು ಪ್ರಾಂಜಲ ಮನಸ್ಸಿನಿಂದ ಬರೆದಿದ್ದಾರೆ. ಇನ್ನಷ್ಟು ಪ್ರಾಂಜಲ ಮನಸ್ಸಿನಿಂದ ಎಲ್ಲ ಸತ್ಯವನ್ನೂ ಅವರೊಂದು ದಿನ ಹೇಳಬೇಕು. ಹೆಗಡೆಯವರ ಜತೆಗಿದ್ದದ್ದು ಬೊಮ್ಮಾಯಿ ಜತೆಗಿದ್ದನ್ನು ಎಲ್ಲಾ ಅನುಭವಗಳನ್ನೂ ಅವರು ಹೇಳಬೇಕು.

* * *

ಒಂದು ಕಾಲದಲ್ಲಿ ಅದೇನೂ ಬಹಳ ಹಳೆಯ ಕಾಲವಲ್ಲ ನಮ್ಮ ದೇವೇಗೌಡರು, ಹೆಗಡೆಯವರು, ಬೊಮ್ಮಾಯಿ ರಾಜಕೀಯ ಮಾಡುತ್ತಿದ್ದ ಕಾಲದ ವಿಷಯವಿದು. ಆಗ ರಾಜಕೀಯ ಮಾಡುವುದಕ್ಕೆ ಹಣ ಬೇಕಾಗುತ್ತಿತ್ತು. ಅದಕ್ಕಾಗಿ ಅವರು ಹಣವನ್ನು ಬೇರೆ ಬೇರೆ ಮಾರ್ಗಗಳಿಂದ ಹೊಂದಿಸುತ್ತಿದ್ದರು. ಈಗಿನವರು ಹಾಗಲ್ಲ. ರಾಜಕೀಯ ಮಾಡಲು ಬರುವುದೇ ಹಣ ಮಾಡುವ ಉದ್ದೇಶದಿಂದ.

ಪ್ರಜಾಪ್ರಭುತ್ವ ರಾಜಕಾರಣದಲ್ಲಿ ಪಕ್ಷವನ್ನು ಕಟ್ಟುವುದಕ್ಕೆ ನಿಧಿ ಬೇಕಾಗುತ್ತದೆ. ಈಗ ನಿಧಿಯನ್ನು ಸಂಗ್ರಹಿಸಬಲ್ಲ ಚಾಣಾಕ್ಷತನವಿರುವವನು ನಾಯಕನಾಗುತ್ತಾನೆ. ಅವನು ಪಕ್ಷವನ್ನು ಕಟ್ಟುತ್ತಾನೆ. ಹಣವಂತರಿಂದ ಹಣವನ್ನು ಪಡೆಯುವ ಕ್ರಿಯೆಗೆ ಒಂದು ಅರ್ಥವಿದೆ. ಈಗ ರಾಜಕೀಯ ಮಾಡುವುದೇ ಹಣ ಮಾಡುವುದಕ್ಕೆ. ಈಗ ರಾಜ್ಯ ಸಭೆಗೆ ಹಣವಂತರನ್ನು ಕಳುಹಿಸಲಾಗುತ್ತದೆ. ಈ ತಪ್ಪನ್ನು ದೇವೇಗೌಡರೂ ಮಾಡಿದ್ದಾರೆ. ಇದನ್ನು ಹೆಗಡೆಯವರೂ ಮಾಡಿದ್ದರು.

ದೇವೇಗೌಡರಿಗೆ ಈಗ ನನ್ನಷ್ಟೇ ವಯಸ್ಸಾಗಿದೆ. ನಾವು ಈಗ ಸತ್ಯವನ್ನು ಮಾತನಾಡಬೇಕು. ದೇವೇಗೌಡರಂತೂ ನನ್ನ ಹತ್ತಿರ ಮಾತನಾಡುವಾಗ ಬಹಳ ಪ್ರಾಮಾಣಿಕವಾಗಿ ಮಾತನಾಡುತ್ತಾರೆ. ಕುಮಾರಸ್ವಾಮಿ ಒಂದೊಂದು ಸಾರಿ ಹಾಗೆ ಮಾತನಾಡುತ್ತಾರೆ. ಅವರಿನ್ನೂ ಯುವಕರು. ಅವರಿಗೆ ಲೋಹಿಯಾ ಹೇಳಿದ ನಿರಾಶಾಕಿ ಕರ್ತವ್ಯ್ ಮಾರ್ಗ ದರ್ಶಕವಾಗಬೇಕು. ಯಾವ ಆಸೆಯನ್ನೂ ಇಟ್ಟುಕೊಳ್ಳದೆ ಏನು ಮಾಡಬೇಕೋ ಅದನ್ನು ಮಾಡಬೇಕು. ಪ್ರಾಂಜಲ ಮನಸ್ಸಿನಿಂದ ಸತ್ಯವನ್ನು ಹೇಳುವ ಇಂಥ ಪುಸ್ತಕಗಳು ಹೆಚ್ಚು ಬರಬೇಕು.

ನಾನು ಹೆಗಡೆಯವರಲ್ಲೂ ಇವರನ್ನು ಕೇಳುತ್ತಿದ್ದೆ. ಲೋಕಾಯುಕ್ತ ಮಾಡಿ ಅದಕ್ಕೆ ಪೂರ್ಣ ಅಧಿಕಾರವನ್ನು ಕೊಟ್ಟಿದ್ದರು. ಆರು ತಿಂಗಳ ನಂತರ ಆ ಪೂರ್ಣಾಧಿಕಾರವನ್ನು ಹಿಂದಕ್ಕೆ ತೆಗೆದುಕೊಂಡಿರು. ಆಗ ‘ನೀವು ಅದನ್ನು ಮಾಡಬಾರದಿತ್ತು’ ಎಂದೆ. ಅವರು ‘ತುಂಬಾ ಒತ್ತಡ ಇತ್ತು’ ಎಂದು ಹೇಳಿದರು. ನಾನದಕ್ಕೆ ‘ಇಲ್ಲ ನೀವು ಮಹತ್ವಾಕಾಂಕ್ಷೆಯುಳ್ಳವರು, ಆದ್ದರಿಂದಲೇ ಲೋಕಾಯುಕ್ತದ ಅಧಿಕಾರವನ್ನು ಹಿಂದಕ್ಕೆ ತೆಗೆದುಕೊಂಡಿರಿ’ ಎಂದೆ.

ದೇವೇಗೌಡರು ಮಹಾತ್ವಾಕಾಂಕ್ಷೆಯನ್ನು ಬಿಡಲು ಸಾಧ್ಯವಾದರೆ ಒಳ್ಳೆಯ ರಾಜಕಾರಣ ಮಾಡುತ್ತಾರೆ. ರಾಜಕಾರಣ ಮಾಡುವುದಕ್ಕೆ ಕೇವಲ ಮಹತ್ವಾಕಾಂಕ್ಷೆ ಒಂದೇ ಸಾಕಾಗುವುದಿಲ್ಲ.

(ಜನತಾದಳ ಕಚೇರಿಯಲ್ಲಿ ೧೬ ನವೆಂಬರ್ ೨೦೦೮ ರಂದುಬಿಜೆಪಿ ಸಖ್ಯ ಮತ್ತು ತರುವಾಯಪ್ರಮಾದವೇ ಅಥವಾ ಪ್ರಾಯಶ್ಚಿತ್ತವೇಒಂದು ಪ್ರಾಂಜಲ ಅವಲೋಕನಪುಸ್ತಕ ಬಿಡುಗಡೆಯ ವೇಳೆ ಮಾಡಿದ ಭಾಷಣ.)

* * *