ಮೊದಲಿಗೆ ಮಲಯಾಳಂನಲ್ಲಿ ಮಾತನಾಡಲು ಆಗದೇ ಇರುವುದಕ್ಕೆ ಕ್ಷಮೆ ಕೇಳಿಬಿಡುತ್ತೇನೆ. ಬೌದ್ಧಿಕ ಅಗತ್ಯಕ್ಕೆ ಮಾತನಾಡುವ ಮಲಯಾಳಂ ನನಗೆ ಅರ್ಥವಾಗುತ್ತದೆ. ಆದರೆ ಮಲಯಾಳಂನಲ್ಲಿಯೇ ಪ್ರತಿಕ್ರಿಯಿಸಲು ನನಗೆ ಸಾಧ್ಯವಿಲ್ಲ. ನನ್ನನ್ನಿಲ್ಲಿ ಮಾತನಾಡುವುದಕ್ಕೆ ಕರೆದಿರುವುದು ನನಗೆ ಸಿಕ್ಕ ಅತಿದೊಡ್ಡ ಗೌರವ ಎಂದು ಭಾವಿಸುತ್ತೇವೆ. ವೀರೇಂದ್ರ ಕುಮಾರ್ ಮೊದಲೊಮ್ಮೆ ನನ್ನನ್ನಿಲ್ಲಿಗೆ ಕುಲಪತಿಯನ್ನಾಗಿಸಿ ಕರೆತಂದಿದ್ದರು. ನಾವಿಬ್ಬರೂ ಭೇಟಿಯಾದಾಗ ನಾವು ರಾಜಕೀಯದ ಬಗ್ಗೆ ಚರ್ಚಿಸುತ್ತೇವೆಂಬುದು ನಿಜ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಅವರ ಬರೆಹ, ನನ್ನ ಬರೆಹ ಹಾಗೆಯೇ ಜಗತ್ತಿನೆಲ್ಲೆಡೆಯ ಸಾಹಿತ್ಯದ ಕುರಿತು ನಾವು ಮಾತನಾಡುತ್ತೇವೆ. ಆದ್ದರಿಂದ ವೀರೇಂದ್ರ ಕುಮಾರ್ ನನಗೊಬ್ಬ ಬರೆಹಗಾರ ಗೆಳೆಯನೂ ಹೌದು. ನನ್ನ ಹಳೆಯ ಗೆಳೆಯರು, ಗೋವಿಂದನ್ ಅವರ ಗೆಳೆಯರು, ಎನ್.ಪಿ. ಮಹಮ್ಮದ್, ನಾನಿಲ್ಲಿಗೆ ಬಂದಾಗಲೆಲ್ಲಾ ಸಿಗುವ ಚಂದ್ರನ್ ಸೇರಿದಂತೆ ನನ್ನ ಪರಿಚಯವಿರುವ, ನನ್ನನ್ನು ಓದಿರುವ ಅನೇಕರು ಇಲ್ಲಿದ್ದಾರೆ. ಹೌದು, ನನ್ನನ್ನು ಓದಿ ಪರಿಚಯವಿರುವ ಅನೇಕರು ಇಲ್ಲಿದ್ದಾರೆ. ಏಕೆಂದರೆ ನನಗೆ ನನ್ನ ಕನ್ನಡ ಪ್ರಕಟಣೆಗಳಿಗಿಂತ ಹೆಚ್ಚಿನ ಹಣ ಮಲಯಾಳಂ ಪ್ರಕಟಣೆಗಳಿಂದಲೇ ಬರುತ್ತದೆ.

ನಾನು ಮೊದಲೇ ಹೇಳಿದೆ; ನಾನು ಮೊದಲು ಇಲ್ಲಿಗೆ ಬಂದದ್ದು ವಿಶ್ವವಿದ್ಯಾಲಯವೊಂದರ ಕುಲಪತಿಯಾಗಿ. ನನಗಿವತ್ತು ಬಹಳ ಸಂತೋಷವೂ ಆಗುತ್ತಿದೆ. ಏಕೆಂದರೆ ರಾಜನ್ ಗುರುಕ್ಕಳ್ ಈಗ ಕುಲಪತಿಯಾಗಿದ್ದಾರೆ. ಇವರನ್ನು ಮಹಾತ್ಮಾ ಗಾಂಧಿ ವಿಶ್ವ ವಿದ್ಯಾಲಯಕ್ಕೆ ಕರೆತರಲು ನಾನು ಬಹಳ ಕಷ್ಟಪಟ್ಟು ಕೊನೆಗೆ ಯಶಸ್ವಿಯಾಗಿದ್ದೆ. ಇದು ನನ್ನ ಮಟ್ಟಿಗೆ ಧನ್ಯತೆಯ ಕ್ಷಣ. ವಿಶ್ವವಿದ್ಯಾಲಯದ ಮಹತ್‌ ಪರಂಪರೆ ಮುಂದುವರಿಯುತ್ತಿದೆ.

* * *

ಬಷೀರ್ ಎಂಬ ಮಹಾ ಲೇಖಕನ ಕುರಿತಂತೆ ನನ್ನ ಕೆಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನಿಲ್ಲಿಗೆ ಬಂದಿದ್ದೇನೆ. ನಾನು ಅವರನ್ನು ಒಮ್ಮೆ ಭೇಟಿಯಾಗಿದ್ದೆ. ಆ ಭೇಟಿ ನನಗೆ ವಿವರ ವಿವರಗಳಲ್ಲಿ ನೆನಪಿದೆ. ನಾನು ಅವರ ಮನೆಗೆ ಹೋದೆ. ಅವರು ಎಂದಿನಂತೆ ವರಾಂಡದಲ್ಲಿ ಅಂಗಿಯನ್ನೂ ಹಾಕದೆ ಕುಳಿತಿದ್ದರು. ಅವರನ್ನು ನೋಡಿದ್ದೇ ನನಗೆ ರಮಣ ಮಹರ್ಷಿ ನೆನಪಾದರು. ಅವರ ಹಾಸ್ಯಪ್ರಜ್ಞೆಯಂತೂ ಅಸಾಧಾರಣ. ನನ್ನನ್ನು ಸ್ವಾಗತಿಸಿ ಶಿವರಾಮ ಕಾರಂತರ-ಕನ್ನಡದ ಒಬ್ಬ ಮಹತ್ವದ ಲೇಖಕಿ-ಬಗ್ಗೆ ಕೇಳಿದ ಮೇಲೆ ಅವರು ಹೇಳಿದ್ದನ್ನು ನಾನೆಂದಿಗೂ ಮರೆಯಲಾರೆ.

ಬಷೀರ್ ತಮ್ಮ ಹೆಂಡತಿಯನ್ನು ಕರೆದರು ‘ಹೊರಗೆ ಬರಬೇಡ. ನೀನಿನ್ನೂ ಯುವತಿ. ಇಲ್ಲಿ ಕೆಲವು ಯುವಕರಿದ್ದಾರೆ. ನಾನು ಮುದುಕ, ಅವರನ್ನು ನಾನು ನಂಬಲಾರೆ. ಆದರೆ ಸ್ವಲ್ಪ ಟೀ ಕೊಡು.’

ಅವರ ಮನೆಗೆ ನಾನೊಬ್ಬ ಅಪರಿಚಿತ. ಆದರೆ ಅವರು ನನ್ನನ್ನು ಮಾತನಾಡಿಸಿದ ಬಗೆಯಲ್ಲಿ ನನಗವರು ಎಷ್ಟೋ ಕಾಲದಿಂದ ಪರಿಚಿತರೆಂದು ಅನ್ನಿಸಿಬಿಡುವಂತಿತ್ತು. ಬಷೀರ್‌ರ ಈ ಗುಣವಂತೂ ಅಸಾಧಾರಣವಾದದ್ದು. ವೈಕಂ ಮಹಮ್ಮದ್ ಬಷೀರ್‌ರನ್ನು ನನ್ನ ವಲಯದಲ್ಲಿ ಒಬ್ಬ ಮುಖ್ಯ ಲೇಖಕನಾಗಿ ಪ್ರತಿಬಿಂಬಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಇದು ಎಪ್ಪತ್ತರ ದಶಕದ ಆರಂಭದ ಮಾತು. ಇದಕ್ಕೆ ಸಂಬಂಧಿಸಿದಂತೆ ಒಂದು ಘಟನೆ ಇದೆ. ಇದು ನಾನು ಷಿಕಾಗೋದಲ್ಲಿದ್ದಾಗ ನಡೆದದ್ದು. ರಾಮಾನುಜನ್‌ರ ಮನೆಯಲ್ಲಿ ಏರ್ಪಡಿಸಲಾಗಿದ್ದ ಔತಣದಲ್ಲಿ ನಾನು ನೊಬೆಲ್ ವಿಜೇತ ಸಾರ್ ಬೆಲ್ಲೋರನ್ನು ಭೇಟಿಯಾದೆ. ಮಾತಿನ ಮಧ್ಯೆ ಸಾಲ್ ಬೆಲ್ಲೋ ‘ಒಂದು ಕುತೂಹಲಕಾರಿ ಭಾರತೀಯ ಕಥೆಯನ್ನು ಹೇಳಿ’ ಎಂದರು. ನಾನು ಏನು ಹೇಳಬೇಕೆಂದು ಯೋಚಿಸಿ ಕೊನೆಗೆ ‘ಪಾತುಮ್ಮನ ಆಡು’ ಕಾದಂಬರಿಯ ಕತೆ ಹೇಳಿದೆ. ಈ ಕತೆಯಲ್ಲಿ ಎಲ್ಲರೂ ನಿರೂಪಕವನ್ನು ಶೋಷಿಸುತ್ತಾರೆ. ತಂಗಿಯ ಆಡು ಕೂಡಾ ಅವನ ಹಸ್ತಪ್ರತಿಗಳನ್ನು ತಿಂದು ಹಾಕಿಬಿಡುತ್ತದೆ. ಈ ಕತೆ ಏಕೆ ಅಸಾಧಾರಣವಾದುದೆಂದರೆ ಯಾವ ಯೂರೋಪಿಯನ್‌ಗೆ ಕೂಡಾ ಬಷೀರ್‌ಗಿದ್ದ ಹಾಸ್ಯ ಪ್ರಜ್ಞೆ ಮತ್ತು ಕರುಣೆಯ ಜತೆ ಇಂಥದ್ದೊಂದು ಕಾದಂಬರಿ ಬರೆಯಲು ಸಾಧ್ಯವಿಲ್ಲ. ಯೂರೋಪಿಯನ್ ಇದನ್ನು ಬರೆದರೆ ಅದೊಂದು ಕಾಫ್ಕಯಿಸ್ಕ್ ಆದ, ದುಃಸ್ವಪ್ನಗಳಿಂದ ತುಂಬಿದ ನೇತ್ಯಾತ್ಮಕ ಕತೆಯಾಗಿಬಿಡುತ್ತಿತ್ತು. ಕಾಫ್ಕಾನ ಬಹಳ ಕಥೆಗಳು ಒಳ್ಳೆಯವು. ಅವು ಮಹತ್ವದ ಕತೆಗಳೆಂಬುದರಲ್ಲಿ ಅನುಮಾನವಿಲ್ಲ. ಆದರೆ ಅವೆಲ್ಲವೂ ಮನುಷ್ಯನ ಒಳ್ಳೆಯತನದ ಬಗ್ಗೆ ಗಾಢವಾದ ಸಂಶಯಗಳುಳ್ಳ ಮನಸ್ಥಿತಿಯ ಪ್ರತಿಬಿಂಬಗಳು. ಆದರೆ ‘ಪಾತುಮ್ಮನ ಆಡು’ ವಿನಂಥ ಕತೆಗೆ ಬಷೀರ್‌ರ ಕಥನ ವಿಧಾನ ನಿಲ್ಲದೇ ಹೋಗಿದ್ದರೆ ಅದು ಬೇರೆಯೇ ಆಗಿಬಿಡುತ್ತಿತ್ತು. ಎಲ್ಲರೂ ಎಲ್ಲರನ್ನೂ ಶೋಷಿಸುತ್ತಾರೆ, ಕೌಟುಂಬಿಕ ವಾತಾವರಣದಲ್ಲಿ ಪವಿತ್ರವಾದುದೇನೂ ಇಲ್ಲ ಎಂಬಂಥ ನಿಲುವನ್ನು ಅದು ಧ್ವನಿಸುತ್ತಿತ್ತು.

ಮನುಷ್ಯನ ಒಳ್ಳೆಯತನದಲ್ಲಿ ನಂಬಿಕೆ ಇಟ್ಟೇ ಬರೆಯುವುದು ಬಷೀರ್‌ಗೆ ಹೇಗೆ ಸಾಧ್ಯವಾಯಿತು? ನಾನು ಅವರ ‘ನನ್ನಜ್ಜನಿಗೊಂದಾನೆಯಿತ್ತು’ ಹಾಗೆಯೇ ‘ಬಾಲ್ಯಕಾಲ ಸಖಿ’ ಮುಂತಾದ ಹಲವು ಕೃತಿಗಳನ್ನು ಓದಿದ್ದೇನೆ. ಕೆಲವನ್ನು ಇಂಗ್ಲಿಷ್ ಅನುವಾದದಲ್ಲಿ ಓದಿದ್ದರೆ ಇನ್ನು ಕೆಲವನ್ನು ಕನ್ನಡ ಅನುವಾದದಲ್ಲಿ ಓದಿದ್ದೇನೆ. ಅವರ ಬರೆಹದಲ್ಲಿ ಸೂಫಿ ತಾತ್ವಿಕತೆ ಮತ್ತು ಅದ್ವೈತದಿಂದ ಬಂದ ಗಾಢವಾದ ಹ್ಯುಮನಿಸಂ ಇದೆ. ಈ ಪರಂಪರೆಗಳ ಅತ್ಯುತ್ತಮವಾದುವುಗಳಿಂದ ತಮಗೆ ಬೇಕಾಗಿರುವುದನ್ನು ಅವರು ಆರಿಸಿಕೊಂಡಿದ್ದಾರೆ. ಈ ವಿಷಯವನ್ನು ಮತ್ತೆ ಚರ್ಚಿಸೋಣ.

ಭಾರತೀಯ ತಾತ್ವಿಕ ಪರಂಪರೆ ಮತ್ತು ಅರೇಬಿಯಾದ ತಾತ್ವಿಕ ಪರಂಪರೆಗಳು ಸಂಧಿಸುವ ಒಂದು ಬಿಂದುವನ್ನು ಹುಡುಕುತ್ತಿದ್ದ ಮತ್ತೊಬ್ಬ ವ್ಯಕ್ತಿ ಇದ್ದಾರೆ. ಅವರು ಮೌಲನಾ ಅಬ್ದುಲ್ ಕಲಾಂ ಆಜಾದ್, ತಾನು ಈ ಎರಡೂ ಪರಂಪರೆಗೆ ಸೇರಿದವನೆಂದು ಅವರು ಭಾವಿಸಿದ್ದರು. ಅಷ್ಟೇ ಅಲ್ಲ, ಈ ಎರಡೂ ಪರಂಪರೆಗಳು ಅದ್ವೈತದ ಪರಿಕಲ್ಪನೆಯಲ್ಲಿ ಪರಸ್ಪರ ಸಂಧಿಸುತ್ತವೆ ಎಂದುಕೊಂಡಿದ್ದರು. ಇಸ್ಲಾಮಿನ ಏಕದೇವ ಮತ್ತು ಜ್ಞಾನಯೋಗದ ದೇವರೇ ಇಲ್ಲದಿರುವ ಏಕತ್ವಗಳು ಒಂದೆಡೆ ಸಂಧಿಸುತ್ತವೆಂಬುದು ಆಜಾದ್‌ರ ನಿಲುವಾಗಿತ್ತು. ಇದೇ ರೀತಿಯ ಒಂದು ಸಂಗಮ ಬಷೀರ್‌ರಲ್ಲಿಯೂ ಸಂಭವಿಸುತ್ತದೆ.

ಇಸ್ಲಾಮ್ ನೀಡಿದ ಕಾರುಣ್ಯದ ನೆಲೆಗಟ್ಟಿನಲ್ಲಿ ನಿಂತ ಜ್ಞಾನದಿಂದ ಬಷೀರ್ ಬರೆಯುತ್ತಾರೆ. ಇಷ್ಟಕ್ಕೂ ಅವರು ಸಾಹಿತ್ಯಿಕ ಮಲಯಾಳಂ ಅನ್ನು ತಮ್ಮ ಬರೆಹಗಳಿಗೆ ಬಳಸುವುದಿಲ್ಲ. ಹೀಗೆಯೇ ಸಾಹಿತ್ಯಿಕ ಭಾಷೆಯನ್ನು ಬಳಸದೆಯೇ ಉಳಿದೆಲ್ಲರಿಗಿಂತ ಹೆಚ್ಚು ತಾತ್ವಿಕವಾಗಿ ಮಾತನಾಡಿದವರೊಬ್ಬರಿದ್ದಾರೆ- ರಾಮಕೃಷ್ಣ ಪರಮಹಂಸರು. ಅವರು ಬಹುತೇಕ ಅನಕ್ಷರಸ್ಥ. ಅವರು ಮಾತನಾಡುತ್ತಿದ್ದ ಭಾಷೆ ಕಚ್ಚಾ ಬಂಗಾಳಿ ಅಥವಾ ಬೀದಿಯ ಬಂಗಾಳಿ. ಆಧ್ಯಾತ್ಮದ ಬಗ್ಗೆ ಬಹಳ ಸಂಶಯವಿರುವ ನನ್ನ ಒಬ್ಬ ಕಮ್ಯುನಿಸ್ಟ್ ಗೆಳೆಯ ಹೇಳಿದಂತೆ ರಾಮಕೃಷ್ಣ ಪರಮಹಂಸರ ಸಾವಿನ ನಂತರ ಅತಿ ಹೆಚ್ಚು ಮಾರಾಟವಾದ ಪುಸ್ತಕವೆಂದರೆ ರಾಮಕೃಷ್ಣ ಪರಮಹಂಸರ ‘ವಚನದೇವ’. ರಾಮಕೃಷ್ಣರ ದಿನಚರಿಯನ್ನು ದಾಖಲಿಸಿದ್ದ ಅವರ ಶಿಷ್ಯರೊಬ್ಬರು ಎರಡು ಸಂಪುಟಗಳಲ್ಲಿ ಪ್ರಕಟಿಸಿದ ಪುಸ್ತಕವಿದು. ಇದರ ತುಂಬಾ ಪರಮಹಂಸರು ಹೇಳಿದ ಕಥೆಗಳಿವೆ. ಈ ಕಥೆಗಳ್ಯಾವೂ ಸಾಹಿತ್ಯಿಕ ಬಂಗಾಳಿಯಲ್ಲಿಲ್ಲ. ಇವೆಲ್ಲವೂ ನಿತ್ಯ ಬಳಸುವ ಕಚ್ಚಾ ಬಂಗಾಳಿಯಲ್ಲಿ ಹೇಳಿದ ಕಥೆಗಳು. ಸತ್ಯ ಮತ್ತು ವಾಸ್ತವದೊಂದಿಗೆ ಕರುಣೆ ತುಂಬಿ ಹೇಳಿದ ಈ ಕಥೆಗಳ ಭಾಷೆಯ ‘ಸಾಮಾನ್ಯತ್ವ’ವೇ ಅದರ ಮುಖ್ಯ ಗುಣ. ಬಷೀರ್ ಅವರ ಭಾಷೆಯ ಬಳಕೆಗೂ ಇಂಥದ್ದೊಂದು ಗುಣವಿತ್ತೆಂಬುದನ್ನು ನಾನು ಕೇಳಿ ಬಲ್ಲೆ. ಭಾಷೆಯ ಈ ‘ಸಾಮಾನ್ಯತ್ವ’ವೇ ಅವರ ಕೃತಿಗಳಲ್ಲಿರುವ Spiritual subtletynಗೆ ಕಾರಣವಾಗಿವೆ.

‘ಬಾಲ್ಯಕಾಲ ಸಖಿ’ಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಜೀದ್ ಎಂಬ ಹುಡುಗ ಮತ್ತು ಸಹರಾ ಎಂಬ ಹುಡುಗಿ  ಜಗಳವಾಡುತ್ತಲೇ ಬೆಳೆದು ಪರಸ್ಪರ ಪ್ರೀತಿಸುತ್ತಾರೆ. ಈ ಪ್ರೀತಿ ದುರಂತದಲ್ಲಿ ಕೊನೆಗೊಳ್ಳುತ್ತದೆ. ‘ದೇವದಾಸ್’ ಕೂಡಾ ಇಂಥದ್ದೇ ಒಂದು ದುರಂತ ಪ್ರೇಮ ಕಥೆ. ಎರಡನ್ನೂ ಹೋಲಿಸಿದರೆ ‘ದೇವದಾಸ್’ಗಿಂತ ‘ಬಾಲ್ಯ ಕಾಲ ಸಖಿ’ ಅದೆಷ್ಟೋ ಪಾಲು ಉತ್ತಮ ಕಥೆ ಎನಿಸುತ್ತದೆ. ಆದರೆ ‘ದೇವದಾಸ್’ ಹೆಚ್ಚು ಪ್ರಸಿದ್ಧ ಕಥೆ. ‘ಬಾಲ್ಯಕಾಲ ಸಖಿ’ಗೆ ಈ ಖ್ಯಾತಿ ದೊರೆಯದೇ ಇರುವುದಕ್ಕೆ ಕಾರಣ ಅದು ಇಡೀ ಭಾರತಕ್ಕೆ ತಲುಪಲಿಲ್ಲ ಎಂಬುದಷ್ಟೇ.

ಇದು ಕೇವಲ ಮುಸ್ಲಿಂ ಸಮಾಜವೊಂದರಲ್ಲಿರುವ ಕೆಟ್ಟ ಸಂಪ್ರದಾಯಗಳ ಮೇಲಿನ ದಾಳಿ ಮಾತ್ರ ಅಲ್ಲ. ಜಗತ್ತಿನಾದ್ಯಂತ ಇರುವ ಹೆಚ್ಚಿನ ಮಹಿಳೆಯರು ಅನುಭವಿಸುವ ಕಷ್ಟದ ಒಂದು ಮಾದರಿ ಸುಹರಾಳಲ್ಲಿ ಕಾಣಿಸುತ್ತದೆ. ಈ ಕಥೆಯ ವಸ್ತು ಸಮಾಜವೊಂದರಲ್ಲಿ ಗಟ್ಟಿಯಾಗಿ ಬೇರೂರಿರುವಾಗಲೇ ವಿಶ್ವಾತ್ಮಕವಾದ ಸತ್ಯವೊಂದನ್ನು ಹೇಳುತ್ತದೆ. ಬಷೀರ್ ಅವರ ಸಮಕಾಲೀನರಾಗಿದ್ದ ಹೆಚ್ಚಿನ ವಾಸ್ತವವಾದಿ ಬರೆಹಗಾರರು ಒಂದು ನಿರ್ದಿಷ್ಟ ಅಸಮಾನ ಸಮಾಜದ ಕಥನಗಳನ್ನು ಹೇಳಿದರೆ ಹೊರತು ಸಾಹಿತ್ಯದ ವಿಶ್ವಾತ್ಮಕ ಆಯಾಮವನ್ನು ಶೋಧಿಸಲಿಲ್ಲ. ಈ ವಿರ್ಶವಾತ್ಮಕ ಆಯಾಮವೆಂದರೇನು ಎಂಬುದನ್ನು ಷೇಕ್ಸ್‌ಪಿಯರ್‌ನ ಕಿಂಗ್‌ಲಿಯರ್‌ನ ಉದಾಹರಣೆಯ ಮೂಲಕ ವಿವರಿಸಲು ಪ್ರಯತ್ನಿಸುತ್ತೇನೆ. ಈ ನಾಟಕವನ್ನು ಓದಿದರೆ ಇದು ಒಂದು ಸಾವಿರ ವರ್ಷಗಳ ಹಿಂದೆ ಯಾವುದೋ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಡೆದ ಕಥೆ ಎನಿಸುವುದಿಲ್ಲ. ಇವೆಲ್ಲವೂ ನಿಜವೇ ಆಗಿದ್ದರೂ ಆ ಕೃತಿಯಲ್ಲಿರುವ ಪ್ರತಿಯೊಂದು ಘಟನೆಯೂ ಇಂದೂ ಸಂಭವಿಸಬಹುದು ಎನಿಸುತ್ತದೆ. ಬಷೀರ್ ಸಮಾಜವನ್ನು ವಿಮರ್ಶಿಸುವಲ್ಲಿ ತೋರಿಸುತ್ತಿದ್ದ ಸಂವೇದನಾಶೀಲತೆ ಸಮಾಜವನ್ನು ಪ್ರಜ್ಞಾಪೂರ್ವಕವಾಗಿ ವಿಮರ್ಶೆಗೆ ಗುರಿಪಡಿಸುತ್ತಿದ್ದ ಕಾದಂಬರಿಕಾರರಿಗೆ ಇರಲಿಲ್ಲ. ಇದನ್ನು ನೀವು ಒಪ್ಪುತ್ತೀರೋ ಇಲ್ಲವೋ ಗೊತ್ತಿಲ್ಲ. ನನ್ನ ದೃಷ್ಟಿಯಲ್ಲಿ ಬಷೀರ್ ಏಕಕಾಲದಲ್ಲಿ ವಾಸ್ತವವಾದಿಯಾಗಿಯೂ ಸಾಹಿತ್ಯದ ವಿಶ್ವಾತ್ಮಕ ಸಂವೇದನೆಗಳನ್ನು ಅಳವಡಿಸಿಕೊಂಡರೂ ಬರೆಯುತ್ತಿದ್ದರು. ಅವರು ತನ್ನ ಇತಿಹಾಸಕ್ಕೆ ಬದ್ಧನಾಗಿದ್ದೇ ಅದನ್ನು ಮೀರುತ್ತಿದ್ದರು.

ಬಹಳ ದೊಡ್ಡ ಲೇಖಕರಿಗಷ್ಟೇ ಇದು ಸಿದ್ಧಿಸುತ್ತದೆ. ಅವರೂ ಇತಿಹಾಸಕ್ಕೆ ಬದ್ಧರೇ. ಅವರೂ ನಿರ್ದಿಷ್ಟ ಸಂದರ್ಭಕ್ಕೆ ಅನ್ವಯಿಸುವಂತೆಯೇ ಬರೆಯುತ್ತಾರೆ. ಆದರೆ ಈ ಸಂದರ್ಭಗಳಿಂದ ಅವರ ಕೃತಿಗಳನ್ನು ಮುಕ್ತಗೊಳಿಸಿದರೂ ಅವುಗಳಿಗೊಂದು ಅರ್ಥವಿದೆ. ಎಲ್ಲಾ ಮಹತ್ ಕೃತಿಗಳೂ ಹೀಗೆಯೇ ಇರುತ್ತದೆ. ಮಹಾಭಾರತವನ್ನೇ ಇದಕ್ಕೊಂದು ಉದಾಹರಣೆಯಾಗಿ ಪರಿಗಣಿಸಬಹುದು; ಭಗವದ್ಗೀತೆ ಅನೇಕ ಉಜ್ವಲ ಸತ್ಯಗಳನ್ನು ವಿವರಿಸುವ ಪಠ್ಯ. ನಾವು ಇದನ್ನು ಮಹಾಭಾರತದ ಒಂದು ಭಾಗ ಎಂಬುದನ್ನು ಮರೆಯದೇ ಓದಿದರೆ ಶ್ರೀಕೃಷ್ಣದಿಂದ ಪರಮಜ್ಞಾನವನ್ನು ಅರ್ಜುನ ಪಡೆದುಕೊಂಡೂ ಮತ್ತೆ ಅದೇ ಹಳೆಯ ತಪ್ಪುಗಳನ್ನು ಮಾಡಿದನೆಂದು ತಿಳಿಯುತ್ತದೆ. ಭಗವದ್ಗೀತೆಯನ್ನು ಮಹಾಭಾರತದ ಸಂದರ್ಭದಲ್ಲಿ ಓದಿದರೆ ಅದರ ಆಧ್ಯಾತ್ಮಿಕ ಅರ್ಥದ ಜತೆಗೇ ನಮ್ಮನ್ನು ಗಾಢವಾಗಿ ತಟ್ಟುವ ಮನುಷ್ಯಾವಸ್ಥೆಯ ಮಿತಿಗಳ ಕುರಿತ ಸತ್ಯವೊಂದು ಅನಾವರಣಗೊಳ್ಳುತ್ತದೆ. ದೇವರೇ ಬಂದು ದರ್ಶನ ನೀಡಿದರೂ ಮನುಷ್ಯ ತನ್ನ ಮಿತಿಗಳನ್ನು ಮೀರಲಾರನೆಂಬುದು ಈ ಸತ್ಯ. ಆದ್ದರಿಂದಲೇ ಗೀತಾಚಾರ್ಯ ಹೇಳುತ್ತಾನೆ ‘ಯಥೇಚ್ಚಸಿ ತಥಾ ಕುರು’. ನಾನು ನಿನಗೆ ಸತ್ಯದ ದರ್ಶನ ಮಾಡಿಸಿದ್ದೇನೆ, ಆದರೂ ನಿನ್ನ ಇಷ್ಟದಂತೆ ನೀನು ಮುಂದುವರಿಯಬಹುದು ಎಂಬುದು ಅವನ ನಿಲುವು.

ಈ ಬಗೆಯ ಒಂದು ಸಾಹಿತ್ಯಿಕ ಸತ್ಯವನ್ನು ಅನಾವರಣಗೊಳಿಸಲು ಬಷೀರ್‌ಪ್ರಯತ್ನಿಸುತ್ತಾರೆ. ಅವರ ಪ್ರಯತ್ನ ನಡೆಯುವುದು ಎಲ್ಲಾ ಸಂಪ್ರದಾಯಗಳೂ ಆಚರಣೆಗಳೂ ದಟ್ಟವಾಗಿರುವ ಒಂದು ಮುಸ್ಲಿಂ ಸಮಾಜದಲ್ಲಿ. ಹೀಗೆ ತನ್ನ ಸಂಸ್ಕೃತಿಗೂ ಇತಿಹಾಸಕ್ಕೂ ಬದ್ಧವಾಗಿರುವಾಗಲೇ ಅವರೊಂದು ಮಾನವೀಯ ಕಥನವೊಂದನ್ನೂ ಹೇಳುತ್ತಿರುತ್ತಾರೆ. ಅದರಿಂದಾಗಿಯೇ ನಾನು ಬಷೀರ್ ಬರೆಹಗಳಲ್ಲಿ ಸೂಫೀ ತಾತ್ವಿಕತೆ ಮತ್ತು ಅದ್ವೈತಗಳು ಒಂದಾಗಿವೆ ಎಂದು ಭಾವಿಸುತ್ತೇನೆ.

‘ಮಾತೃಭೂಮಿ’ ಬಷೀರ್‌ರನ್ನು ನೆನಪಿಸಿಕೊಳ್ಳುತ್ತಿರುವುದು ನನಗೆ ಸಂತೋಷದ ವಿಷಯ. ನನ್ನ ದೃಷ್ಟಿಯಲ್ಲಿ ಇನ್ನೂ ಕೆಲವು ಕೆಲಸಗಳು ಆಗಬೇಕಿವೆ. ನಾನು ಸಾಹಿತ್ಯದ ಅಕಾಡೆಮಿಯ ಅಧ್ಯಕ್ಷನಾಗಿದ್ದ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿದ ಕರಾಳ ಘಟನೆ ಸಂಭವಿಸಿತು. ಆಗ ನಾನು ಟ್ಯಾಗೋರ್‌ರ ‘ಗೋರಾ’ ಕಾದಂಬರಿಯನ್ನು ಅಖಿಲ ಭಾರತ ಮಟ್ಟದ ಕೃತಿಯನ್ನಾಗಿಸಲು ತೀರ್ಮಾನಿಸಿದೆ. ಇದು ಭಾರತದ ಮಟ್ಟಿಗೆ ಬಹಳ ಮುಖ್ಯವಾದ ಕಾದಂಬರಿ. ‘ಗೋರಾ’ ಎಂದರೆ ಬಿಳಿಯ. ಈತ ಕಾದಂಬರಿಯ ನಾಯಕ. ಅವನು ತಾನೊಬ್ಬ ಬ್ರಾಹ್ಮಣ, ತಾನು ಭಾರತದ ಪರಿಶುದ್ಧತೆಗೆ, ಹಿಂದೂ ಮತದ ಪರಿಶುದ್ಧತೆಗೆ ಹೋರಾಡಬೇಕೆಂದು ಭಾವಿಸಿದವನು. ಭಾರತದ ರಾಷ್ಟ್ರೀಯತೆಯನ್ನು ಹಿಂದೂ ಸಿದ್ಧಾಂತಗಳ ಮೇಲೆ ಕಟ್ಟಬೇಕೆಂದು ತೀರ್ಮಾನಿಸಿ ಕಾರ್ಯಪ್ರವೃತ್ತನಾದವನು. ಕಾದಂಬರಿಯ ಕೊನೆಯಲ್ಲಿ ಅವನಿಗೆ ತಾನು ಹಿಂದೂ ಅಲ್ಲ ಐರಿಷ್ ಎಂದು ತಿಳಿಯುತ್ತದೆ. ೧೮೫೭ರ ದಂಗೆಯಲ್ಲಿ ಅವನು ತನ್ನವರೆಲ್ಲರನ್ನೂ ಕಳೆದು ಕೊಂಡಾಗ ಈಗ ತನ್ನ ತಾಯಿ ಎಂದು ಆತ ತಿಳಿದುಕೊಂಡಿರುವಾಕೆ ಅವನನ್ನು ಸಾಕಿ ಬೆಳೆಸುತ್ತಾರೆ. ಈ ಸತ್ಯದ ಅರಿವಾದ ಮೇಲೂ ಅವನು ಭಾರತವನ್ನು ಪ್ರೀತಿಸುತ್ತಾನೆ. ಆದರೆ ತನ್ನ ದೇಶ ಕಟ್ಟುವ ಪರಿಕಲ್ಪನೆಯನ್ನು ಬದಲಾಯಿಸಿಕೊಳ್ಳುತ್ತಾನೆ. ರಾಷ್ಟ್ರೀಯತೆಯನ್ನು ಕಟ್ಟುವ ಕ್ರಿಯೆ ಜನಾಂಗೀಯ ಪರಿಶುದ್ಧತೆಯಲ್ಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಟ್ಯಾಗೋರ್ ಈ ಕಾದಂಬರಿಯನ್ನು ಶತಮಾನದ ಆರಂಭದಲ್ಲೇ ಬರೆದಿದ್ದರು. ಭಾರತ ದೇಶ ಯಾವುದನ್ನು ಆಧಾರವಾಗಿಟ್ಟುಕೊಂಡಿರಬೇಕು ಎಂಬ ಪ್ರಶ್ನೆ ಬಂದಾಗಲೆಲ್ಲಾ ನಾನು ಹೇಳುವುದು ಒಂದೇ ಮಾತು: ‘ಗೋರಾ’ ಓದಿ. ಅದು ಭಾರತ ಯಾವುದನ್ನು ಆಧರಿಸಿರಬೇಕೆಂಬ ಪ್ರಶ್ನೆಯನ್ನು ಶಾಶ್ವತವಾಗಿ ಪರಿಹರಿಸಿಬಿಟ್ಟಿದೆ. ಇದೇ ಕಾರಣದಿಂದ ಬಾಬರಿ ಮಸೀದಿ ಪ್ರಕರಣದ ಹಿನ್ನೆಲೆಯಲ್ಲಿ ‘ಗೋರಾ’ ಕಾದಂಬರಿ ದೇಶದ ಎಲ್ಲೆಡೆ ಚರ್ಚೆಯಾಗಲು ಅನುವಾಗುವಂತೆ ಅಕಾಡೆಮಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಮಾಡಿದೆ. ಇದಾದ ಮೇಲೆ ವೈಕಂ ಮಹಮ್ಮದ್‌ಬಷೀರ್ ಕುರಿತಂತೆ ಇದೇ ಬಗೆಯ ಚರ್ಚೆ ಭಾರತಾದ್ಯಂತ ನಡೆಯಬೇಕೆಂದೆ.

ಭಾರತೀಯ ಸಾಹಿತ್ಯದ ದುರಂತವೊಂದಿದೆ. ಬಷೀರ್ ಮಲೆಯಾಳಿಗಳ ಮಟ್ಟಿಗೆ ಹೀರೋ. ಅವರ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದಗೊಂಡರೆ ಅಲ್ಲಿಯೂ ಬಷೀರ್‌ರನ್ನು ಓದಲಾಗುತ್ತದೆ. ಆದರೆ ಇಂಗ್ಲಿಷ್‌ನಲ್ಲಿ ಒಂದು ಕಾದಂಬರಿ ಪ್ರಕಟವಾದರೆ ಅದು ಎಲ್ಲರೂ ಓದುವ ಕಾದಂಬರಿಯಾಗಿಬಿಡುತ್ತದೆ. ಬಷೀರ್‌ರಂಥ ವ್ಯಕ್ತಿಯೊಬ್ಬ ಲೇಖಕನಾಗುವುದರ ಹಿಂದೆ ಅದೆಷ್ಟು ಬಗೆಯ ಅನುಭವಗಳಿವೆ. ಅದೆಷ್ಟು ಕಷ್ಟಗಳು, ಅದೆಂಥ ಬಡತನ… ‘ಪಾತುಮ್ಮಳ ಆಡು’ ಕೃತಿಯಲ್ಲಿ ಬಷೀರ್‌ಹೇಳಿಕೊಂಡಿರುವಂತೆ ಅವರು ಹುಚ್ಚಿನ ಅಂಚಿನ ತನಕ ಹೋಗಿದ್ದರು. ಇದರಲ್ಲಿ ಗೋವಿಂದನ್ ಕುರಿತ ಉಲ್ಲೇಖವೂ ಇದೆ. ಆತ್ಮಕಥಾತ್ಮಕವಾದ ಅನೇಕ ಸಂಗತಿಗಳಿದ್ದರೂ ವಿಶ್ವಾತ್ಮಕವಾದ ಸಾಹಿತ್ಯದ ಎಲ್ಲ ಲಕ್ಷಣಗಳೂ ಈ ಕೃತಿಗಿದೆ. ಬಷೀರ್‌ಕೃತಿಗಳಿಗಿರುವ ಈ ಗುಣವೇ ದೇಶಾದ್ಯಂತ ಚರ್ಚಿಸುವ ಅರ್ಹತೆಯನ್ನು ತಂದುಕೊಟ್ಟಿದೆಯೆಂದು ನಾನಂದುಕೊಂಡಿದ್ದೇನೆ.

ಬಂಗಾಳಿಗಳು ಟ್ಯಾಗೋರ್ ಕಾಲದಲ್ಲಿ ಬಹಳ ರಾಷ್ಟ್ರೀಯವಾದಿಗಳಾಗಿದ್ದರು. ಜೊತೆಗೇ ಅವರು ಇಂಗ್ಲಿಷ್‌ನ ಗಾಢ ಪ್ರಭಾವಕ್ಕೆ ಒಳಗಾಗಿ ಬಾಬುಗಳಾಗಿಬಿಟ್ಟವರು. ಬಂಗಾಳಿ ಬರೆಹಗಾರರು ತಮ್ಮನ್ನು ತಾವು ಓದಿಕೊಳ್ಳುವುದನ್ನು ಬಿಟ್ಟರೆ ಫ್ರೆಂಚ್‌ನಿಂದ ಬಂದದ್ದನ್ನು ಓದುತ್ತಿದ್ದರು. ಫ್ರೆಂಚ್ ಮತ್ತು ಬಂಗಾಳಿಯ ಮಧ್ಯೆ ಹೀಗೊಂದು ಸಂಬಂಧವಿತ್ತು. ಆದರೆ ಅವರಿಗೆ ತಮ್ಮ ನೆರೆಯ ಬಿಹಾರಿ, ಭಾರತದಲ್ಲೇ ಇರುವ ಮಲಯಾಳಂ, ಕನ್ನಡ, ತಮಿಳು, ಮರಾಠಿಗಳೊಂದಿಗೆ ಸಂಬಂಧವಿರಲಿಲ್ಲ. ಕೇರಳ ಒಂದು ಭಿನ್ನ ಪ್ರದೇಶ. ‘ಮಾತೃಭೂಮಿ’ ನಿರಂತರವಾಗಿ ಇತರ ಭಾಷೆಗಳ ಸಾಹಿತ್ಯವನ್ನು ಮಲಯಾಳಂ ಅನುವಾದದಲ್ಲಿ ಪ್ರಕಟಿಸುತ್ತದೆ. ಇತರ ಭಾಷೆಗಳಿಗೆ ಅತಿಥೇಯನಾಗಿರುವ ಒಳ್ಳೆಯ ಗುಣವೊಂದು ಮಲಯಾಳಂಗಿದೆ.

ನಾನು ಬಷೀರ್ ಕುರಿತು ಕೊಲ್ಕೊತ್ತದಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲು ತೀರ್ಮಾನಿಸಿದೆ. ಈ ವಿಚಾರ ಸಂಕಿರಣದ ಆಯೋಜನೆಗೆ ಒಂದು ಷರತ್ತನ್ನೂ ಹಾಕಿದ್ದೆ : ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಷೀರ್ ಕುರಿತು ವಿಷಯ ಮಂಡನೆ ಮಾಡುವವರೆಲ್ಲರು ಬಂಗಾಳಿಗಳೇ ಆಗಿರಬೇಕೇ ಹೊರತು ಮಲೆಯಾಳಿಗಳಿರಬಾರದು. ಬೇಕಿದ್ದರೆ ಒಬ್ಬ ಮಲಯಾಳಂ ವಿಮರ್ಶಕನನ್ನು ಸೇರಿಸಿ ಕೊಳ್ಳಬಹುದು. ನನ್ನ ಈ ಷರತ್ತಿನ ಹಿಂದೆ ಒಂದು ಉದ್ದೇಶವಿತ್ತು. ಬಂಗಾಳಿಗಳು ಬಷೀರ್‌ರನ್ನು ಓದಿ ತಮ್ಮ ಸಾಹಿತ್ಯಕ ಸಂದರ್ಭದಲ್ಲಿ ಬಷೀರ್‌ಗೆ ಇರುವ ಸ್ಥಾನವೇನು ಎಂಬುದನ್ನು ನಮಗೆ ಹೇಳುವುದು ಭಾರತದ ಸಾಹಿತ್ಯಿಕ ಸಂದರ್ಭದ ಒಂದು ಅಗತ್ಯವಾಗಿತ್ತು. ಬಂಗಾಳಿ ಬರೆಹಗಾರರು ವಿಮರ್ಶಕರು ಬಷೀರ್‌ರನ್ನು ಓದಿ ತಮ್ಮ ಪ್ರಬಂಧಗಳನ್ನು ಸಿದ್ಧಪಡಿಸಿಕೊಂಡು ವಿಚಾರ ಸಂಕಿರಣದಲ್ಲಿ ಮಂಡಿಸಿದರು. ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಇಂಥದ್ದೊಂದು ಕಾರ್ಯಕ್ರಮ ನಡೆದದ್ದು ಇದೇ ಮೊದಲಿರಬೇಕು.

ನಾನೀ ಪ್ರಕ್ರಿಯೆಯನ್ನು ಮತ್ತಷ್ಟು ಮುಂದುವರಿಸಬೇಕೆಂದಿದ್ದೆ. ಭಾರತದ ಹತ್ತು ಮುಖ್ಯ ಲೇಖಕರನ್ನು ಗುರುತಿಸಿ ಅವರ ಬಗ್ಗೆ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸುವುದು. ಈ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸುವವರ್ಯಾರೂ ಆ ಲೇಖಕನ ಭಾಷೆಯವರಾಗಿರಬಾರದು ಎಂಬುದು ಮುಖ್ಯ ಷರತ್ತು.

ನಾನೀಗ ‘ಮಾತೃಭೂಮಿ’ಗೆ ನೀಡುವ ಸಲಹೆಯೂ ಇದುವೇ. ಬಷೀರ್‌ಬಗ್ಗೆ ಕರ್ನಾಟಕದಲ್ಲೊಂದು ವಿಚಾರ ಸಂಕಿರಣ ಏರ್ಪಡಿಸಿ. ಕರ್ನಾಟಕದಲ್ಲಿಯೂ ಬಷೀರ್‌ರ ಅನೇಕ ಅಭಿಮಾನಿಗಳಿದ್ದಾರೆ. ಈ ಯುವ ಕನ್ನಡ ಬರೆಹಗಾರರನ್ನು ಒಂದೆಡೆ ಸೇರಿಸಿ ಅವರ ಸಾಹಿತ್ಯಕ ಸಂದರ್ಭದಲ್ಲಿ ಬಷೀರ್ ಏನು ಎಂಬುದರ ಮಾತನಾಡಲು ಹೇಳಬೇಕು. ಈ ಬಗೆಯ ವಿಚಾರ ಸಂಕಿರಣಗಳು ತಮಿಳುನಾಡು, ಬಿಹಾರ ಹೀಗೆ ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ನಡೆಯಬೇಕು. ಇಲ್ಲಿ ಮಾತನಾಡುವ ವಿಮಶರ್ಕರೆಲ್ಲರೂ ಮಲೆಯಾಳಿಗಳಾಗಿರದೆ ಸ್ಥಳೀಯರೇ ಆಗಿರಬೇಕು.

ಈ ಬಗೆಯ ಚರ್ಚೆಗಳಿಲ್ಲದೆ ಹೋದರೆ ಸಾಹಿತ್ಯ ಪ್ರಪಂಚದಲ್ಲಿ ಈಗಿರುವ ಇಂಗ್ಲಿಷ್‌ನ ಯಾಜಮಾನ್ಯವನ್ನು ಮುರಿಯಲು ಸಾಧ್ಯವೇ ಇಲ್ಲ. ಈ ಯಾಜಮಾನ್ಯ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಯೂರೋಪ್ ಕೂಡಾ ಇದೇ ಸವಾಲನ್ನು ಎದುರಿಸುತ್ತಿದೆ. ಹಾಗೆಯೇ ಇದು ಸಾಹಿತ್ಯಕ್ಕಷ್ಟೇ ಸೀಮಿತವಾದುದಲ್ಲ. ಯೂರೋಪಿನ ವಿಜ್ಞನಿಗಳೂ ಕೂಡಾ ತಮ್ಮ ಸಂಶೋಧನೆಯನ್ನು ಹೊರಗೆ ಹಂಚಿಕೊಳ್ಳುವುದಕ್ಕೆ ಇಂಗ್ಲಿಷ್ ಮಾತನಾಡಬೇಕಾದ ಅನಿವಾರ್ಯತೆ ಇದೆ. ಅಮೆರಿಕದ ಪತನದ ಜತೆಗೆ ಈ ಸ್ಥಿತಿ ಬದಲಾಗಿ ಒಂದು ದಿನ ಈಗ ಇಂಗ್ಲಿಷ್ ಇರುವ ಸ್ಥಾನಕ್ಕೆ ಚೈನೀಸ್ ಭಾಷೆ ಬಂದರೂ ಬರಬಹುದು, ಯಾರಿಗೆ ಗೊತ್ತು? ನನ್ನ ಮಟ್ಟಿಗೆ ಇವೆಲ್ಲಾ ಮುಖ್ಯವಾದ ವಿಷಯಗಳೇ ಅಲ್ಲ. ಒಬ್ಬ ಮಹಾನ್ ಲೇಖಕ ಯಾವ ಭಾಷೆಯಲ್ಲಿ ಬರೆದಿದ್ದರೂ ಅವನು ಮಹಾನ್ ಲೇಖಕನೇ. ವೈಕಂ ಮಹಮ್ಮದ್ ಬಷೀರ್ ಅಂತಹಾ ಒಬ್ಬ ಲೇಖಕ. ಆದ್ದರಿಂದ ಈ ಲೇಖಕನನ್ನು ಮಲಯಾಳಂನ ಆಚೆಗೂ ಪರಿಚಯಿಸುವ ಕೆಲಸ ನಡೆಯಬೇಕಾಗಿದೆ. ನಾನು ಬಷೀರ್‌ರನ್ನು ಓದಿದ ಫಲ, ಮಲೆಯಾಳಿಗಳಿಗೂ ಅನುವಾದದಲ್ಲಿ ಪರಿಚಯವಿರುವ ಆಲನಹಳ್ಳಿ ಕೃಷ್ಣ ಅವರಲ್ಲಿ ಕಾಣಿಸಿತ್ತು. ಅವರೂ ಬಷೀರನ್ನು ಓದಿ ಬಹಳ ಮೆಚ್ಚಿಕೊಂಡರು. ಪೂರ್ಣಚಂದ್ರ ತೇಜಸ್ವಿಯೂ ಬಹಳ ಮೆಚ್ಚಿಕೊಂಡಿದ್ದರು. ಆದರೆ ಅವರ ತಂದೆ ಕುವೆಂಪುಗೆ ಮಾತ್ರ ಬಷೀರ್ ಅಷ್ಟೇನೂ ಇಷ್ಟವಾಗಿರಲಿಲ್ಲ.

ಇಂಗ್ಲಿಷ್‌ನ ಯಾಜಮಾನ್ಯ ಈಗ ಯಾವ ಮಟ್ಟಿಗೆ ಇದೆಯೆಂದರೆ ಒಬ್ಬ ಲೇಖಕನ ಪುಸ್ತಕ ಪ್ರಕಟವಾಗಿ ಮಾರುಕಟ್ಟೆಗೆ ಬಂದು ಜನರು ಓದುವ ಮೊದಲೇ ‘ಪ್ರಖ್ಯಾತ’ ನಾಗಿರುತ್ತಾನೆ. ಇದೇಕೆ ಎಂದರೆ ಅವನ ಕಾದಂಬರಿಗೆ ಕೊಟ್ಟಿರುವ ಮುಂಗಡದ ಮೊತ್ತವೇ ಹಲವು ಸಾವಿರ ಡಾಲರ್‌ಗಳಲ್ಲಿರುತ್ತದೆ. ಈ ಮೊತ್ತವೇ ಒಂದು ಸುದ್ದಿ. ಇದು ‘ಮಾತೃಭೂಮಿ’ಯೂ ಸೇರಿದಂತೆ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗುತ್ತದೆ. ಇದನ್ನೋದಿದ ಜನ ಲೇಖಕನಿಗೆ ಪಾವತಿಸಲಾದ ಮುಂಗಡದ ಮೊತ್ತವನ್ನು ನೋಡಿ ಕಾದಂಬರಿ ಮಹತ್ವದ್ದಿರಬಹುದು ಎಂದು ಭಾವಿಸುತ್ತಾರೆ. ಕಾದಂಬರಿ ಮಾರುಕಟ್ಟೆಗೆ ಬರುವ ಹೊತ್ತಿಗೆ ಹಣ ಸೃಷ್ಟಿಸಿದ ಕುತೂಹಲದಿಂದ ಇಡೀ ಜಗತ್ತು ಅದನ್ನು ಖರೀದಿಸಿ ಓದುತ್ತದೆ. ಆಮೇಲೆ ನಾವಂದುಕೊಂಡಷ್ಟು ಚೆನ್ನಾಗಿಲ್ಲ ಎಂಬ ಅಭಿಪ್ರಾಯಗಳು ಹೊರಬೀಳುತ್ತವೆ. ಬುಕರ್ ಪ್ರಶಸ್ತಿಯೂ ಇಂಥದ್ದೇ. ಇದು ಪ್ರಕಾಶಕರ ಲಾಬಿಯಿಂದ ನಿರ್ಧರಿಸಲ್ಪಡುತ್ತದೆ.

ನಮ್ಮ ಭಾಷೆಗಳಲ್ಲಿ ಬರೆದ ದೊಡ್ಡ ಲೇಖಕರು ದೊಡ್ಡವರಾದದ್ದು ಓದುಗರಿಂದ. ಟ್ಯಾಗೋರ್, ಬಷೀರ್, ಕಾರಂತ, ಪ್ರೇಮ್‌ಚಂದ್ ಹೀಗೆ ಯಾರ ಉದಾಹರಣೆಯನ್ನು ತೆಗೆದುಕೊಂಡರೂ ಇದು ಅರ್ಥವಾಗುತ್ತದೆ. ಇವರೆಲ್ಲರನ್ನೂ ಓದುಗರು, ವಿಮರ್ಶಕರು ಗುರುತಿಸಿ ದೊಡ್ಡ ಲೇಖಕರೆಂದರು. ಕೆಲವರಂತೂ ಓದುಗರ ಮಧ್ಯೆ ಒಂದು ಸ್ಥಾನ ಗಳಿಸಿಕೊಳ್ಳುವುದಕ್ಕೆ ಹಲವಾರು ವರ್ಷಗಳ ಕಾಲ ಕಾಯಬೇಕಾಗಿ ಬಂದಿತ್ತು. ಈಗ ಅಂಥ ಕಾಯುವಿಕೆಗಳಿಲ್ಲ. ಯಾರು ಜಗತ್ತಿನ ನಂಬರ್ ಒನ್ ಲೇಖಕ ಎಂದು ಪ್ರಕಾಶಕರೇ ನಿರ್ಧರಿಸಿಬಿಡುತ್ತಾರೆ. ಇದು ಸಾಹಿತ್ಯಿಕ ಪರಂಪರೆಗೆ ಮಾಡುತ್ತಿರುವ ಅವಮಾನ. ಸಾಹಿತ್ಯಿಕ ಪರಂಪರೆ ಓದು, ವಿಮರ್ಶೆ, ಚರ್ಚೆಗಳನ್ನು ಅವಲಂಬಿಸಿರುತ್ತದೆ. ಗೋವಿಂದನ್ ಅವರನ್ನು ನಾವು ಭೇಟಿಯಾಗುತ್ತಿರುವ ದಿನಗಳು ನನಗೀಗಲೂ ನೆನಪಿವೆ. ಅವರು ಮಲಯಾಳಂನ ಹೊಸ ಲೇಖಕರೊಬ್ಬರ ಕುರಿತು  ನಮಗೆ ಹೇಳಿದರೆ ನಾವೆಲ್ಲಾ ಕುಳಿತು ಆ ಕೃತಿಯನ್ನು ಓದುತ್ತಿದ್ದೆವು, ಚರ್ಚಿಸುತ್ತಿದ್ದೆವು. ನಿಧಾನವಾಗಿ ಲೇಖಕ ಸಾಹಿತ್ಯಿಕ ವಲಯದಲ್ಲಿ ಮುಖ್ಯವಾಗುತ್ತಾ ಹೋಗುತ್ತಿದ್ದ. ಈಗ ಎಲ್ಲವೂ ದಿಢೀರ್.

ಸಾಹಿತ್ಯಿಕ ಪರಂಪರೆಗೆ ಅವಮಾನ ಮಾಡುತ್ತಿರುವ ಮಾರುಕಟ್ಟೆ ತಂತ್ರಗಳನ್ನು ವಿರೋಧಿಸಲು ನಮಗಿರುವುದು ಒಂದೇ ಮಾರ್ಗ. ನಮ್ಮ ಮಹಾನ್ ಲೇಖಕರನ್ನು ಜಗತ್ತಿಗೆ ಪರಿಚಯಿಸುವುದು. ಬಷೀರ್ ಈಗ ಅನುವಾದಗಳಲ್ಲಿ ಲಭ್ಯರಿದ್ದಾರೆ. ಈ ಅನುವಾದಗಳ ವ್ಯಾಪ್ತಿ ಹೆಚ್ಚಬೇಕು. ಇಂಗ್ಲಿಷ್ ಅನುವಾದಗಳ ಜತೆಗೆ ಇತರ ಭಾರತೀಯ ಭಾಷೆಗಳ ಅನುವಾದಗಳೂ ಬರಬೇಕು. ಇವುಗಳಿದ್ದರೆ ಮಲಯಾಳಂ ಹೊರತು ಪಡಿಸಿದ ಭಾಷೆಗಳಲ್ಲಿ ಬಷೀರ್ ಕುರಿತ ಚರ್ಚೆಗಳನ್ನು ಏರ್ಪಡಿಸುವುದು ಸುಲಭವಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಹತ್ತು ಅಥವಾ ಇಪ್ಪತ್ತು ಮಹತ್ವದ ಭಾರತೀಯ ಲೇಖಕರನ್ನು ಗುರುತಿಸಿ ಅವರ ಕುರಿತಂತೆ ಭಾರತಾದ್ಯಂತ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳಬೇಕು. ಈ ರೀತಿಯ ಪ್ರಯತ್ನಗಳ ಮೂಲಕ ನಾವು ‘ಭಾರತೀಯ ಸಾಹಿತ್ಯ’ವೆಂಬ ಪರಿಕಲ್ಪನೆಯನ್ನು ಕುರಿತು ಅರಿವು ಮೂಡಿಸಲು ಸಾಧ್ಯವಾಗಬಹುದು. ಈಗಾಗಲೇ ಭಾರತೀಯ ಸಾಹಿತ್ಯವೆಂಬ ಪರಿಕಲ್ಪನೆಯಿದೆ. ಆದರೆ ಅದು ಭಾರತೀಯ ಇಂಗ್ಲಿಷ್ ಬರೆಹಗಳಿಷ್ಟೇ ಸೀಮಿತಗೊಳ್ಳುತ್ತಿದೆ.

ಈ ಮಧ್ಯೆ ಕೇಂದ್ರ ಸರ್ಕಾರ ತಮಿಳಿಗೆ ‘ಅಭಿಜಾತ ಭಾಷೆ’ ಎಂಬ ಸ್ಥಾನ ನೀಡಿ ಬಹಳ ದೊಡ್ಡ ತಪ್ಪು ಮಾಡಿತು. ಇದನ್ನು ಮಾಡಬೇಡಿ ಎಂದು ನಾನು ಬಹಳಷ್ಟು ಸಾರಿ ಹೇಳಿದ್ದೆ. ಯಾವ ಭಾಷೆ ‘ಅಭಿಜಾತ’ ಎಂದು ನಿರ್ಧರಿಸುವುದು ಸರ್ಕಾರದ ಕೆಲಸವಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಇದನ್ನು ರಾಜಕೀಯ ಕಾರಣಗಳಿಗಾಗಿ ಮಾಡಿಯೇ ಬಿಟ್ಟರು. ಈಗ ಎಲ್ಲಾ ನಿರ್ಧಾರಗಳನ್ನೂ ರಾಜಕೀಯ ಲಾಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕೈಗೊಳ್ಳಲಾಗುತ್ತಿದೆ. ಒಂದು ದಿನದ ಹಿಂದಷ್ಟೇ ಕರ್ನಾಟಕ ಸರ್ಕಾರ ನಮ್ಮ ಸಂತ ಕವಿ ಕನಕದಾಸರಿಗೆ ಸಂಬಂಧಿಸಿದಂತೆ ಮೂರು ಕೋಟಿ ರೂಪಾಯಿಗಳ ಯೋಜನೆಯನ್ನು ಘೋಷಿಸಿತು. ಇದನ್ನು ಘೋಷಿಸುವಾಗ ಕನಕದಾಸರ ಸಾಹಿತ್ಯಿಕ ಮಹತ್ವ ಸರ್ಕಾರದ ಮುಂದಿರಲಿಲ್ಲ. ಕನಕದಾಸರ ಹೆಸರಿನಲ್ಲಿ ಯೋಜನೆಯೊಂದನ್ನು ಘೋಷಿಸಿದರೆ ತಮ್ಮ ಪಕ್ಷಕ್ಕೆ ಕುರುಬರ ಓಟು ಗ್ಯಾರಂಟಿ ಎಂಬುದು ಆಡಳಿತರೂಢ ಬಿಜೆಪಿಯ ತಂತ್ರವಾಗಿತ್ತು.

ನಾವು ಸಾಹಿತ್ಯವನ್ನು ಈ ರಾಜಕೀಯ ಹಿಡಿತಗಳಿಂದ ಹೊರತರಬೇಕಾಗಿದೆ. ಒಬ್ಬ ಲೇಖಕನಾಗುವ ಕ್ರಿಯೆಯ ಹಿಂದೆ ಬಹುದೊಡ್ಡ ಶ್ರಮವಿರುತ್ತದೆ. ಕಾಳಿದಾಸನ ಕಾಲವನ್ನೊಮ್ಮೆ ಊಹಿಸಿಕೊಳ್ಳಿ. ತಳೆಯೋಲೆಯ ಮೇಲೆ ಬರೆದು ಪುಸ್ತಕವನ್ನು ಸಿದ್ಧಪಡಿಸಬೇಕಿತ್ತು. ಈ ಪುಸ್ತಕಗಳು ಅರವತ್ತು ವರ್ಷಗಳಿಗಿಂತ ಹೆಚ್ಚುಕಾಲ ಉಳಿಯುತ್ತಿರಲಿಲ್ಲ. ಮದುವೆಯಂಥ ಶುಭಕಾರ್ಯ ಇಲ್ಲವೇ ಸಾವಿನಂಥ ಘಟನೆಗಳು ಸಂಭವಿಸಿದಾಗ ಶಾಸ್ತ್ರದಾನ ಮಾಡುತ್ತಿದ್ದರು. ಇದರ ಪರಿಣಾಮವಾಗಿ ತಾಳೆಯೋಲೆಗಳಲ್ಲಿದ್ದ ಕೃತಿಗಳನ್ನು ಮರುಪ್ರತಿ ಮಾಡಲಾಗುತ್ತಿತ್ತು. ಹೀಗೆ ಸಾವಿರಾರು ವರ್ಷಗಳಿಂದ ನಮ್ಮ ಅನೇಕ ಸಾಹಿತ್ಯಿಕ ಕೃತಿಗಳು ಉಳಿದುಕೊಂಡು ಬಂದವು. ಅವು ನಿಜವಾದ ಅಭಿಜಾತ ಕೃತಿಗಳು. ಈಗ ಮಾರುಕಟ್ಟೆ ಶಕ್ತಿಗಳು ನೂತನ ಕ್ಲಾಸಿಕ್‌ಗಳನ್ನು ಸೃಷ್ಟಿಸಲು ಹೊರಟಿವೆ. ಇದರ ವಿರುದ್ಧ ನಾವು ಹೋರಾಡಬೇಕಾಗಿದೆ.

ಈಗ ಕನ್ನಡ, ತೆಲುಗುಗಳಿಗೂ ‘ಅಭಿಜಾತ ಭಾಷೆ’ ಎಂಬ ಸ್ಥಾನ ದೊರೆತಿದೆ. ನನ್ನಲ್ಲಿ ಯಾರೋ ಮಲಯಾಳಂಗೇಕೆ ಈ ಸ್ಥಾನವಿಲ್ಲ ಎಂದು ಹೇಳಿದರು. ಹೌದು ಮಲಯಾಳಂಗೇಕೆ ಈ ಸ್ಥಾನವಿಲ್ಲ? ಗೋವಿಂದನ್ ಅವರು ಬರೆಯುತ್ತಿದ್ದ ಪದ್ಯಗಳಲ್ಲಿ ಹೆಚ್ಚು ತಮಿಳಿನ ಪ್ರಭಾವವಿತ್ತು. ಅವರು ಮಲಯಾಳಂನ ಪೂರ್ವೇತಿಹಾಸವನ್ನು ತಮಿಳಿನಲ್ಲಿ ಕಾಣುತ್ತಿದ್ದರು. ಅವರ ಕವಿತೆಗಳಲ್ಲಿರುವ ತಮಿಳು ಛಾಯೆಯಿಂದಾಗಿಯೇ ಅವು ಹಲವರಿಗೆ ಇಷ್ಟವಾಗುತ್ತಿರಲಿಲ್ಲ.

ಕರ್ನಾಟಕದಲ್ಲಿ ಅಭಿಜಾತ ಭಾಷೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ನಾನೀಗ ಬಹಳ ಅಪ್ರಿಯನಾದ ವ್ಯಕ್ತಿಯಾಗಿಬಿಟ್ಟಿದ್ದೇನೆ. ನನ್ನ ದೃಷ್ಟಿಯಲ್ಲಿ ನಮ್ಮ ಎಲ್ಲಾ ಭಾಷೆಗಳೂ ಪ್ರಾಚೀನ ಮತ್ತು ಜೀವಂತ ಭಾಷೆಗಳು. ಕನ್ನಡವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅದಕ್ಕೆ ಸಾವಿರ ವರ್ಷಗಳ ಲಿಖಿತ ಇತಿಹಾಸವಿದೆ. ನಮ್ಮ ಆದಿಕವಿ ಪಂಪನನ್ನು ನಾವು ಇಂದಿಗೂ ಓದಿ ಸ್ವಲ್ಪ ಕಷ್ಟಪಟ್ಟು ಅರ್ಥ ಮಾಡಿಕೊಳ್ಳಬಹುದು. ೧೨ನೇ ಶತಮಾನದ ಬಸವ ಮತ್ತಿತರ ವಚನಕಾರರನ್ನು ನಮ್ಮ ಕಾಲದ ಬರೆಹಗಾರರೇ ಎಂಬಷ್ಟ ಸಲೀಸಾಗಿ ಓದಿಕೊಳ್ಳಬಹುದು. ಆದರೆ ಇಂಗ್ಲಿಷ್‌ನಲ್ಲಿ ನಮಗೀಗ ಹದಿನೈದನೇ ಶತಮಾನದ ಚಾಸರ್‌ನನ್ನೂ ಓದಲು ಸಾಧ್ಯವಿಲ್ಲ. ಇಟಾಲಿಯನ್, ಫ್ರೆಂಚ್‌ನಂಥ ಭಾಷೆಗಳ ಪ್ರಾಚೀನ ಸಾಹಿತ್ಯವನ್ನು ನಾವಿಂದು ಓದಿದರೆ ಏನೂ ಅರ್ಥವಾಗುವುದಿಲ್ಲ. ಅವುಗಳನ್ನು ಆಧುನಿಕ ಇಟಾಲಿಯನ್, ಫ್ರೆಂಚ್‌ಗಳಿಗೆ ಅನುವಾದಿಸಬೇಕಾಗುತ್ತದೆ. ಭಾರತದ ಅನೇಕ ಭಾಷೆಗಳು ಹೀಗಿಲ್ಲ. ಅವು ಪ್ರಾಚೀನವೂ ಜೀವಂತವೂ ಆದ ಭಾಷೆಗಳು. ಅವುಗಳನ್ನು ಅದೇ ಹೆಸರಿನಿಂದ ಗುರುತಿಸಬೇಕೇ ಹೊರತು ‘ಅಭಿಜಾತ ಭಾಷೆಗಳು’ ಎಂದಲ್ಲ. ಲ್ಯಾಟಿನ್, ಸಂಸ್ಕೃತಗಳಂಥ ಮೃತ ಭಾಷೆಗಳಿಗಷ್ಟೇ ಈ ‘ಅಭಿಜಾತ’ ಸ್ಥಾನವನ್ನು ನೀಡಬಹುದು.

ನಾನು ಭಾಷೆಯೊಂದರ ಯಜಮಾನ್ಯರ ಕುರಿತು ಮಾತನಾಡುತ್ತಿದ್ದೆ. ನಾವೀಗ ನಮ್ಮದೇ ಭಾಷೆಗಳ ಮಧ್ಯೆ ‘ಅಭಿಜಾತ’ ಸ್ಥಾನವನ್ನು ಪಡೆಯಲು ಮೇಲಾಟ ನಡೆಸುತ್ತಿದ್ದೇವೆ. ಓಟಿಗಾಗಿ ಇಂಥ ಸ್ಥಾನವನ್ನು ಯಾವುದೋ ಒಂದೆರಡು ಭಾಷೆಗಳಿಗೆ ಆಡಳಿತಾರೂಢರು ನೀಡಲೂಬಹುದು. ಆದರೆ ಪ್ರಪಂಚದ ಭಾಷೆಗಳೊಂದಿಗೆ ಸ್ಪರ್ಧೆಗಿಳಿದರೆ ನಮ್ಮ ಈ ಭಾಷೆಗಳು ಎಲ್ಲಿಯೂ ಇರುವುದಿಲ್ಲ. ಏಕೆಂದರೆ ಜಗತ್ತಿನ ಕುತೂಹಲವಿರುವುದು ಯಾರಿಗೆ ಬುಕರ್ ಬಂತು ಎಂಬುದರ ಬಗ್ಗೆಯೇ ಹೊರತು ಕಾಫ್ಕಾನ ಕೈಯಲ್ಲಿ ದುಃಸ್ವಪ್ನದ ಕಥನವಾಗಬಹುದಾಗಿದ್ದ ವಸ್ತುವೊಂದನ್ನು ಇಟ್ಟುಕೊಂಡು ‘ಪಾತುಮ್ಮಳ ಆಡು’ವಿನಂಥ ಕಾದಂಬರಿಯನ್ನು ಬರೆದವರಾರು ಎಂಬುದರ ಬಗ್ಗೆ ಅಲ್ಲ.

ಇಸ್ಲಾಂ ಒಂದು ಧರ್ಮವಾಗಿ ವಿಶ್ವವ್ಯಾಪಿಯಾಗಿರಬಹುದು. ಆದರೆ ಕೇರಳದಲ್ಲಿರುವ ಇಸ್ಲಾಂ ವಿಶಿಷ್ಟವಾದುದು. ಬಷೀರ್ ಅವರ ಕಾದಂಬರಿಗಳ ಅಂತರ್ಧಾರೆಯಾಗಿರುವ ಇಸ್ಲಾಮಿಕ್ ತಾತ್ವಿಕತೆ ಬಹಳ ಮಹತ್ವದ್ದು. ಬಷೀರ್‌ಗೆ ಇತರ ಧರ್ಮಗಳೊಡನೆ ಇದ್ದ ಸಂಬಂಧ ಈ ತಾತ್ವಿಕತೆಗೆ ಬೇರೆಯೇ ಹೊಳಪು ನೀಡಿದೆ.

ನೀವು ಬಷೀರ್ ನೆನಪಿಗೆ ಇಂದು ನಡೆಸುತ್ತಿರುವ ಕಾರ್ಯಕ್ರಮ ಬಹಳ ಉತ್ತಮ ವಾದುದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇದಿಷ್ಟೇ ಸಾಲದು. ಈ ಬಗೆಯ ಕಾರ್ಯಕ್ರಮಗಳನ್ನು ಬೆಂಗಳೂರು, ಚೆನ್ನೈಗಳಲ್ಲಿ ನಡೆಸಬೇಕು. ಸಾಧ್ಯವಿದ್ದರೆ ಹಿಂದೀ ಲೇಖಕರನ್ನು ಬಳಸಿಕೊಂಡು ಪಾಟ್ನಾದಲ್ಲೂ ಒಂದು ಕಾರ್ಯಕ್ರಮ ನಡೆಸಬೇಕು. ಬಷೀರ್‌ರನ್ನು ಓದಿರುವ ಅವರ ಬಗ್ಗೆ ಚರ್ಚಿಸಲು ಸಾಮರ್ಥ್ಯವಿರುವ ಹಿಂದಿ ಲೇಖಕರ ಪಟ್ಟಿಯನ್ನು ಬೇಕಾದರೆ ನಾನೇ ಒದಗಿಸುತ್ತೇನೆ.

ಅದೃಷ್ಟವಶಾತ್ ಟ್ಯಾಗೋರ್‌ರನ್ನು ಇಡೀ ಭಾರತ ಓದಿದೆ. ಇದು ಸಾಧ್ಯವಾದ ಅವರಿಗೆ ನೊಬೆಲ್ ಬಹುಮಾನ ದೊರೆತದ್ದರಿಂದ. ಟ್ಯಾಗೋರ್‌ರಂತೆಯೇ ಭಾರತಾದ್ಯಂತ ಓದುಗರ ಗಮನಸೆಳೆದು ಜನಪ್ರಿಯರಾಗಿದ್ದ ಮತ್ತೊಬ್ಬ ಲೇಖಕನೆಂದರೆ ‘ದೇವದಾಸ್’ ಬರೆದ ಶರಶ್ಚಂದ್ರರು. ಆಂಧ್ರಪ್ರದೇಶದ ಓದುಗರಂತೂ ಶರಶ್ಚಂದ್ರರನ್ನು ತೆಲುಗು ಲೇಖಕ ಎಂದು ಭಾವಿಸಿಬಿಟ್ಟಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ನಾವು ನಮ್ಮ ಸೋದರ ಭಾಷೆಗಳಲ್ಲಿದ್ದುದನ್ನು ಹೆಚ್ಚು ಓದುತ್ತಿದ್ದೆವು. ಸ್ವಾತಂತ್ರ‍್ಯಾನಂತರ ನಾವು ಅಮೆರಿಕ ಮತ್ತು ಯೂರೋಪಿನ ಜತೆಗೆ ಸಂಬಂಧವಿಟ್ಟುಕೊಂಡಷ್ಟು ನಮ್ಮ ನೆರೆಯ ರಾಜ್ಯಗಳೊಂದಿಗೆ ಇಟ್ಟುಕೊಳ್ಳಲಿಲ್ಲ. ಇದು ದಿಗಿಲು ಹುಟ್ಟಿಸುವ ಬೆಳವಣಿಗೆ. ಸ್ವಾತಂತ್ರ‍್ಯಾ ನಂತರ ನಾವು ಪರಸ್ಪರರನ್ನು ಹೆಚ್ಚು ಅರಿತಿರಬೇಕಿತ್ತು. ಹೀಗೆ ಪರಸ್ಪರರನ್ನು ಅರಿಯುವುದಕ್ಕಾಗಿ ನಾವು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಆರಂಭಿಸಿದ ಕಾರ್ಯಕ್ರಮ ನನ್ನ ನಂತರ ಮುಂದುವರಿಯಲಿಲ್ಲ. ಅದು ಮುಂದುವರಿದಿದ್ದರೆ ಇಲ್ಲಿ (ಕೇರಳದಲ್ಲಿ) ಬಂಗಾಲಿ, ತಮಿಳು ಅಥವಾ ತೆಲುಗು ಬರೆಹಗಾರನ ಕುರಿತು ಒಂದು ವಿಚಾರ ಸಂಕಿರಣ ನಡೆದಿರುತ್ತಿತ್ತು.

ನಾವೀಗ ಸಮುದಾಯಗಳ ಬಗ್ಗೆ ಮಾತನಾಡುವುದೆಂದರೆ ಆಯಾ ಸಮುದಾಯಗಳ ಕುರಿತಂತೆ ಮಾಧ್ಯಮಗಳ ಸೃಷ್ಟಿಸಿಟ್ಟಿರುವ ಸಿದ್ಧ ಮಾದರಿಗಳನ್ನು ಮುಂದಿಟ್ಟು ಕೊಂಡು ಮಾತನಾಡುವುದು ಎಂಬಂತಾಗಿಬಿಟ್ಟಿದೆ. ಪ್ರತಿದಿನ ನೀವು ಪತ್ರಿಕೆಯನ್ನು ತೆರೆದರೆ ಯಾವುದೋ ಒಂದು ಬಾಂಬ್ ಸ್ಫೋಟದ ಸುದ್ದಿ ಅದಕ್ಕೆ ಸಂಬಂಧಿಸಿದಂತೆ ಸಂಶಯದ ಮೇಲೆ ಬಂಧಿಸಲಾಗಿರುವ ಕೆಲವು ಮುಸ್ಲಿಮ್ ಹೆಸರುಗಳನ್ನು ಕಾಣಬಹುದು. ಅವರು ‘ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಮಾಧ್ಯಮ ವರದಿಗಳು ಹೇಳುತ್ತಿರುತ್ತವೆ. ಪೊಲೀಸರ ಹಿಂಸೆಗೆ ‘ತಪ್ಪೊಪ್ಪಿಕೊಳ್ಳದವರು’ ಯಾರು? ಆರು ತಿಂಗಳು ನಂತರ ಈ ಬಂಧಿತರೆಲ್ಲಾ ಅಪರಾಧ ಮುಕ್ತರಾದರೆಂದು ತಿಳಿದುಬರುತ್ತದೆ. ಹೈದರಾಬಾದ್‌ನಲ್ಲಿ ಹೀಗೇ ಬಂದಿಸಲಾಗಿದ್ದ ಸುಮಾರು ೨೦ ಮಂದಿ ಯುವಕರನ್ನು ಈಗ ಬಿಡುಗಡೆ ಮಾಡಲಾಗಿದೆ. ಅವರೀಗ ಹೆಚ್ಚು ಕಡಿಮೆ ಹುಚ್ಚರು. ಅವರ ಕುಟುಂಬಗಳೇ ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ನಾನು ಹೋದೆಡೆಯೆಲ್ಲಾ ಆರೋಪ ಸಾಬೀತಾಗುವ ತನಕ ಆರೋಪಿಯ ಹೆಸರನ್ನು ಪ್ರಕಟಿಸಬೇಡಿ ಎಂದು ಮಾಧ್ಯಮಗಳಿಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಇಂಗ್ಲೆಂಡಿನಲ್ಲಿ ಹದಿ ಹರೆಯದವರ ಅಪರಾಧಗಳು ಸಾಬೀತಾಗಿ ಶಿಕ್ಷೆ ವಿಧಿಸಿದರೂ ಅವರ ಹೆಸರುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಿಲ್ಲ. ಈ ಹುಡುಗರು ಮುಂದೊಂದು ದಿನ ತಮ್ಮ ಪಪ್ಪು ತಿದ್ದಿಕೊಂಡು ಬದಲಾಗಬಹುದೆಂಬ ಭರವಸೆಯಲ್ಲಿ ಈ ನೀತಿಯಲ್ಲಿ ಅನುಸರಿಸಲಾಗುತ್ತದೆ. ಹೀಗೆ ತಪ್ಪು ಮಾಡಿದವನು ನನ್ನ ಮಗನೂ ಇದ್ದಿರಬಹುದಲ್ಲವೇ? ಅವನಿಗೊಂದು ಬದಲಾಗುವ ಅವಕಾಶ ಬೇಡವೇ? ಆದ್ದರಿಂದ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ವಿದ್ಯುನ್ಮಾನ ಮಾಧ್ಯಮಗಳು ಈ ವಿಷಯದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು.

ನಾವು ಸಿದ್ಧ ಮಾದರಿಗಳ ಮೂಲಕ ಆ ಸಮುದಾಯಗಳನ್ನು ನೋಡುತ್ತಿದ್ದೇವೆ ಎಂದೆ. ಮುಸ್ಲಿಮರೆಂದರೆ ಹೀಗೆ, ಕ್ರಿಶ್ಚಿಯನ್ನರೆಂದರೆ ಹೀಗೆ, ಬ್ರಾಹ್ಮಣರೆಂದರೆ ಹಾಗೆ ಎಂಬ ನಿರ್ಧಾರಗಳಿಗೆ ಬಂದು ಹಾಗೆಯೇ ಅವರನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಾಯರ್‌ಪಾತ್ರ ಅಥವಾ ಮುಸ್ಲಿಂ ಪಾತ್ರವಿರುವ ಒಂದು ಕಾದಂಬರಿಯನ್ನು ಓದಿದರೆ ಹೀಗೆ ಸಿದ್ಧ ಮಾದರಿಗಳಲ್ಲಿ ಅವುಗಳನ್ನು ಅರ್ಥ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ. ನೀವು ಆ ಪಾತ್ರವನ್ನು ಅದಿರುವ ಸಂದರ್ಭದಲ್ಲಿಟ್ಟೇ ಅರ್ಥ ಮಾಡಿಕೊಳ್ಳುತ್ತಿರುತ್ತೀರಿ. ಸಿದ್ಧ ಮಾದರಿಗಳಲ್ಲಿ ಗ್ರಹಿಸುವಾಗಿನ ಪ್ರತಿಕ್ರಿಯೆ ನಿಮ್ಮದಾಗಿರುವುದಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಒಂದು ಕತೆಯಿದೆ. ಒಬ್ಬ ಪೂರ್ವ ಯುರೋಪಿನ ವ್ಯಕ್ತಿಗೆ ಪಬ್ ಒಂದರಿಂದ ಹೊರಬಂದಾಗ ಒಬ್ಬ ಅಪರಿಚಿತ ಸಿಕ್ಕ. ಪರಿಚಯ ಮಾಡಿಕೊಳ್ಳಲು ಹೆಸರು ಕೇಳಿದಾಗ ಆತನದ್ದು ಯಹೂದಿ ಹೆಸರು. ತಕ್ಷಣ ಈತ ಕಿಸೆಯಿಂದ ಚಾಕು ತೆಗೆದು ಇರಿದು ಕೊಂದುಬಿಟ್ಟ.

ನಿನಗೆ ಆಗಷ್ಟೇ ಪರಿಚಯವಾದ ಒಬ್ಬನನ್ನು ಏಕೆ ಇರಿದು ಕೊಂದೆ ಎಂದು ಕೇಳಿದರೆ ‘ಅವನು ಹೆಸರು ಹೇಳಿದಾಗ ದೇವಪುತ್ರ ಯೇಸುವನ್ನು ಕೊಂದವನು ಅವನೇ ಎಂದು ತಿಳಿಯಿತು. ಅದಕ್ಕೇ ಕೊಂದುಬಿಟ್ಟೆ’ ಎಂದ.

‘ಅದು ಎರಡು ಸಾವಿರ ವರ್ಷಗಳ ಹಿಂದೆಯಲ್ಲವೇ?’

‘ಆದರೇನಂತೆ. ನನಗೆ ಅದು ತಿಳಿದದ್ದು ನಿನ್ನೆ.’

ನಮ್ಮ ಭಾರತದ ರಾಜಕಾರಣದ ಬಹುತೇಕ ಘಟನೆಗಳು ನಡೆಯುತ್ತಿರುವುದು ಹೀಗೆಯೇ? ಔರಂಗಜೇಬ್ ಹಿಂದೂಗಳ ಶತ್ರುವೆಂಬುದು ಅವರಿಗೆ ನಿನ್ನೆಯಷ್ಟೇ ತಿಳಿದಿದೆ. ಅವರಿವತ್ತು ಮುಸ್ಲಿಮರನ್ನು ಕೊಲ್ಲುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ.

ಇದನ್ನು ಬದಲಾಯಿಸಲು ಸಾಧ್ಯವಿರುವುದು ಸಾಹಿತ್ಯಕ್ಕೆ ಮಾತ್ರ. ಅದು ಅನುಭವವನ್ನು ಸಂದರ್ಭದೊಳಗೆ ಇಟ್ಟು ನಮಗೆ ನೀಡುತ್ತದೆ. ಹ್ಯಾಮ್ಲೆಟ್‌ಗೆ ತನ್ನ ತಂದೆಯನ್ನು ಕೊಂದದ್ದು ಚಿಕ್ಕಪ್ಪನೇ ಎಂಬುದು ಗೊತ್ತಿತ್ತು. ಅವನಲ್ಲಿ ಆಧಾರಗಳೂ ಇದ್ದವು. ಚಿಕ್ಕಪ್ಪನನ್ನು ಕೊಲ್ಲಲೂ ಅವನು ಸಿದ್ಧನಾದ. ಆದರೆ ಆತ ಪ್ರಾರ್ಥಿಸುತ್ತಿರುವುದನ್ನು ನೋಡಿ ಕೊಲ್ಲಲು ಹಿಂತೆಗೆದ. ನಾಟಕದಲ್ಲಿ ಹ್ಯಾಮ್ಲೆಟ್ ಕೊಲ್ಲುವುದಕ್ಕೆ ಹಿಂದೆಗೆಯಬಹುದು ಆದರೆ ರಾಜಕಾರಣದಲ್ಲಿ ಹೀಗಾಗುವುದಿಲ್ಲ. ಅವರು ಸುಮ್ಮನೆ ಕೊಂದುಬಿಡುತ್ತಾರಷ್ಟೇ. ನಮ್ಮನ್ನು ಸಾಹಿತ್ಯ ಕೊಲ್ಲುವ ಕ್ರಿಯೆಯಿಂದ ಕೆಲಕಾಲವಾದರೂ ಹಿಂದೆಗೆಯಲು ಕಲಿಸಬಹುದು. ನಮ್ಮ ನಿರ್ಧಾರವನ್ನೇ ನಾವು ಅನುಮಾನಿಸುವುದಕ್ಕೆ ಪ್ರೇರೇಪಿಸಬಹುದು.

ಬಷೀರ್ ತಮ್ಮ ಸಾಹಿತ್ಯದಲ್ಲಿ ಸಾಧಿಸುತ್ತಿದ್ದುದೂ ಇದನ್ನೇ, ಅವರ ಗಾಢವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನುಭವಗಳು, ಮಾನವೀಯ ಅಂತಃಕರಣ ಹಾಗೂ ಅತ್ಯುನ್ನತ ಮಟ್ಟದ ಹಾಸ್ಯಪ್ರಜ್ಞೆಯ ಜತೆಗೆ ಅವರು ಬರೆಯುತ್ತಿದ್ದರು. ಸಂತರಿಗೆ ಮಾತ್ರ ಸಾಧ್ಯವಾಗುವಂಥ ಹಾಸ್ಯಪ್ರಜ್ಞೆ ಇದು. ರಾಮಕೃಷ್ಣ ಪರಮಹಂಸರು ಇಂಥ ಹಾಸ್ಯಭರಿತ ಕಥೆಗಳ ಮೂಲಕವೇ ತಮ್ಮ ಆಧ್ಯಾತ್ಮವನ್ನು ಹೇಳುತ್ತಿದ್ದರು. ಬಷೀರ್ ಕೂಡಾ ಅಂಥದ್ದೇ ಒಂದು ಜಗತ್ತಿನಿಂದ ಬಂದವರು. ಹಾಗಾಗಿ ಅವರು ಭಾರತೀಯ ಲೇಖಕನೆಂದು ನಾವು ಗುರುತಿಸಬೇಕಾಗಿದೆ. ಮಾತೃಭೂಮಿಯಂಥ ಪತ್ರಿಕೆಗಳು ಈ ಕೆಲಸ ಮಾಡಲಿ. ಒಂದು ಪ್ರದೇಶದ ಭಾಷೆಗಾಗಿ ತಮ್ಮನ್ನು ಮೀಸಲಿಟ್ಟುಕೊಂಡ ಇಂಥ ಪತ್ರಿಕೆಗಳನ್ನು ನಾವು ಬಹಳ ಗೌರವಿಸುತ್ತೇನೆ. ಇವು ಭಾಷಾ ಯಾಜಮಾನ್ಯವನ್ನು ಮುರಿಯುವುದಕ್ಕಾಗಿಯೂ ಕೆಲಸ ಮಾಡಬೇಕು. ಬುಕರ್‌ಪ್ರಶಸ್ತಿಯಿಂದ ಖ್ಯಾತನಾದ ಲೇಖಕನನ್ನು ಬದಿಗಿಟ್ಟು ನಮ್ಮ ಭಾಷೆಗಳ ಲೇಖಕರಿಗೆ ಒತ್ತು ನೀಡಬೇಕು. ನಾನೀ ಮಾತನ್ನು ಹೇಳುವಾಗ ಬುಕರ್ ಪ್ರಶಸ್ತಿ ಪಡೆದ ಪುಸ್ತಕಗಳೆಲ್ಲವೂ ಕೆಟ್ಟವೆಂದು ಹೇಳುತ್ತಿಲ್ಲ. ಅದೃಷ್ಟವಶಾತ್ ಕೆಲವು ಒಳ್ಳೆಯ ಪುಸ್ತಕಗಳಿಗೂ ಈ ಪ್ರಶಸ್ತಿ ದೊರೆತಿದೆ. ಇವು ಅಪವಾದಗಳಷ್ಟೇ. ಓದುಗರು ಯಾವ ಪುಸ್ತಕ ಒಳ್ಳೆಯದೆಂದು ನಿರ್ಧರಿಸುವ ಕ್ರಿಯೆಯಲ್ಲಿ ಹೀಗೆ ‘ಅಪವಾದಗಳು’ ಇರುವುದಿಲ್ಲ. ಒಂದು ಕೃತಿಯ ಓದು ತಲೆಮಾರಿನಿಂದ ತಲೆಮಾರಿಗೆ ಹರಿದು ಪುಸ್ತಕವನ್ನು ಜೀವಂತವಾಗಿಡುತ್ತದೆ. ನಾವು ಕಾಳಿದಾಸನನ್ನು ಜೀವಂತವಾಗಿಟ್ಟುಕೊಂಡಿರುವುದೇ ಹೀಗೆ. ಇದಕ್ಕೆ ಹೆಚ್ಚಿನ ಅರ್ಥವಿದೆ. ಪ್ರಾದೇಶಿಕ ಭಾಷೆಗಳು ಇನ್ನೂ ಜಾಗತಿಕ ಮಾರುಕಟ್ಟೆಯ ಒತ್ತಡಗಳಿಗೆ ಬಲಿಯಾಗಿಲ್ಲ. ಆದ್ದರಿಂದಲೇ ಈ ಭಾಷೆಗಳು ಅತ್ಯುತ್ತಮ ಸಾಹಿತ್ಯದ ಭಂಡಾರಗಳಾಗಿವೆ.

(ಕೊಝಿಕ್ಕೊಡ್)

* * *