ವೇದಿಕೆಯ ಮೇಲೆ ಇರುವ ನನ್ನ ಮಿತ್ರರೇ. ಕಾವ್ಯವನ್ನು ಓದಿದ ಎಲ್ಲ ಸ್ನೇಹಿತರೇ. ಬಹಳ ಸಮಯವಾಗಿದೆ. ನನಗೆ ಮಾತನಾಡುವುದು ಬಹಳ ಇದೆ. ಆದರೆ ಅಷ್ಟು ಸಮಯ ನಾನು ತೆಗೆದುಕೊಳ್ಳದೆ ಆದಷ್ಟು ಬೇಗ ಮುಗಿಸಲು ನೋಡುತ್ತೇನೆ. ಮೊದಲನೆಯದಾಗಿ ಎಕ್ಕುಂಡಿಯವರ ಎಲ್ಲ ಕವನಗಳನ್ನು ಇಷ್ಟು ಸುಂದರವಾದ ಪುಸ್ತಕದಲ್ಲಿ ಕೊಟ್ಟಿದ್ದಕ್ಕಾಗಿ ಪ್ರಹ್ಲಾದರನ್ನು ನಾನು ಅಭಿನಂದಿಸುತ್ತೇನೆ. ಆಮೇಲೆ ಎಕ್ಕುಂಡಿಯವರ ಮುಖದ ಎಲ್ಲ ಭಾವಗಳನ್ನು ಸೆರೆ ಹಿಡಿದು ನಮ್ಮೆದುರು ಇಟ್ಟಿದ್ದಕ್ಕಾಗಿ ಮುಕುಂದರನ್ನು ಅಭಿನಂದಿಸುತ್ತೇನೆ.

ನನ್ನ ಪುಣ್ಯ ಎಂದರೆ ನಾನು ಅಧ್ಯಕ್ಷನಾದ ಮೊದಲನೇ ವರ್ಷವೇ ಎಕ್ಕುಂಡಿಯವರ ‘ಬಕುಲ ಹೂವುಗಳು’ ಕೃತಿಗೆ ಪ್ರಶಸ್ತಿಯನ್ನು ಕೊಡುವ ಭಾಗ್ಯ ನನ್ನದಾಗಿತ್ತು. ಆ ಸಂತೋಷವನ್ನು ನಾನು ಇವತ್ತಿಗೂ ಮರೆತಿಲ್ಲ. ನನಗೆ ಎಕ್ಕುಂಡಿ ಒಬ್ಬ ಕವಿಯಾಗಿ ಒದಗಿದ್ದು ನನ್ನ ೨೨ನೇ ವಯಸ್ಸಿನಲ್ಲೋ ಏನೋ. ಆಗ ನಾವು ಅದೆಷ್ಟು ಉಮೇದಿನಲ್ಲಿ ಎಕ್ಕುಂಡಿಯವರನ್ನು ಓದುತ್ತಿದ್ದೆವು ಎಂದರೆ-ನಾವು ಎಂದರೆ ನಾನು ಮತ್ತು ಕೆ.ವಿ. ಸುಬ್ಬಣ್ಣ – ಅವರ ಕವನಗಳು ಇಡಿ ಇಡಿಯಾಗಿ ನನಗೆ ಬಾಯಿ ಪಾಠ ಬರುತ್ತಿತ್ತು.

ನಾನು ಆಗ ಇಂಗ್ಲಿಷ್ ಆನರ್ಸ್‌‌ನಲ್ಲಿ ಓದುತ್ತಿದ್ದೆ. ನಾನು ಹಲವು ರೀತಿಯ ವಿಚಾರಗಳಿಗೆ ಮನಸೋತವನು. ನಾನು ಸಂಪೂರ್ಣವಾಗಿ ಮಾರ್ಕ್ಸ್‌ವಾದಕ್ಕೆ ಮನಸೋತಾಗ ನನಗೆ ನಿರಂಜನರು ಸ್ನೇಹಿತರಾಗಿದ್ದರು. ನನಗೆ ಇಷ್ಟವಾದ ಕವಿ ಎಕ್ಕುಂಡಿಯವರಿಗೆ ಮಾರ್ಕ್ಸ್ ಜತೆಗೆ ಮಧ್ವಾಚಾರ್ಯರೂ ಇಷ್ಟವಾಗುವುದು ಹೇಗೆ? ಈ ವಿರೋಧಾಭಾಸವನ್ನು ಅವರು ಬಗೆಹರಿಸಿಕೊಂಡಿದ್ದು ಹೇಗೆ? ಎಂದು ಬಹಳ ಸಿಟ್ಟಾಗಿ ನಿರಂಜನರಿಗೆ ಒಂದು ಕಾಗದ ಬರೆದಿದ್ದೆ. ನಿರಂಜನರು ಮೈಸೂರಿಗೆ ಬಂದಾಗ ‘ನೋಡಪ್ಪಾ ನಾನು ಬಂಕಿಕೊಡ್ಲಕ್ಕೆ ಹೋಗಿದ್ದೆ. ಅವರು ಸ್ನಾನ ಮಾಡುತ್ತಿದ್ದರು. ಗಟ್ಟಿಯಾಗಿ ನಿನ್ನ ಕಾಗದವನ್ನು ಓದಿ ಹೇಳಿದೆ. ಎಕ್ಕುಂಡಿಯವರು ಸುಮ್ಮನೆ ನಕ್ಕರು’ ಎಂದು ಹೇಳಿದ್ದರು.

ಆಮೇಲೆ ನನ್ನ ತಂದೆ ತೀರಿ ಹೋದಾಗ ಅವರ ಕ್ರಿಯೆಗೆಂದು ಗೋಕರ್ಣಕ್ಕೆ ಹೋಗಿದ್ದವನು ಎಕ್ಕುಂಡಿಯವರ ಮನೆಗೂ ಹೋದೆ. ಗೌರೀಶ ಕಾಯ್ಕಿಣಿಯವರು ಗೋಕರ್ಣದಿಂದ ಬಂಕಿಕೊಡ್ಲಕ್ಕೆ ನನ್ನನ್ನು ನಡೆಸಿಕೊಂಡೇ ಹೋದರು. ಆಗಲೇ ನಾನು ಅವರ ಮನೆಯವರನ್ನೆಲ್ಲಾ ನೋಡಿದ್ದು. ಅವರನ್ನೆಲ್ಲಾ ಇವತ್ತು ಮತ್ತೆ ನೋಡಿದ ಸಂತೋಷವೂ ಆಗುತ್ತಿದೆ. ಆ ದಿನ ಎಕ್ಕುಂಡಿಯವರು ಮನೆಯ ಎದುರು ಒಂದು ಮರದ ಕೆಳಗೆ ಕುಳಿತು ಗಂಟೆಗಟ್ಟಳೆ ನನ್ನ ಜತೆ ಹರಟಿದರು. ನಾನು ಮೊದಲು ಅವರ ಕ್ಷಮೆ ಕೇಳಿದೆ. ನಾನು ‘ನೀವು ಮಾರ್ಕ್ಸ್ ಮತ್ತು ಮಧ್ವರ ನಡುವಣ ವಿರೋಧವನ್ನು ಹೇಗೆ ಒಟ್ಟು ಮಾಡುತ್ತೀರಿ’ ಎಂದು ಕೇಳಿದ್ದೇ ಹೊರತು ನಿಮ್ಮ ಮೇಲೆ ಅಪವಾದ ಹೊರಿಸಿದ್ದಲ್ಲ ಎಂದು ವಿವರಿಸಿದೆ. ಅದಕ್ಕವರು ನಕ್ಕು ‘ನನಗೂ ಈ ಸಮಸ್ಯೆ ಇದೆಯಲ್ಲಾ ಅದನ್ನ ಬಿಡು ಅಂದರು.’

ಆ ಕಾಲದಲ್ಲಿ ಗೋಕಾಕರೂ ಕೂಡಾ ಮನುಷ್ಯನೊಬ್ಬನನ್ನು (ಸಾಯಿಬಾಬಾ) ದೇವರು ಎಂದು ನಂಬಿದ್ದನ್ನು ಕಂಡು ನನಗೆ ಭಯಂಕರವಾದ ಸಿಟ್ಟು ಬಂದಿತ್ತು. ಇದನ್ನೇ ನಾನು ಎಕ್ಕುಂಡಿಯವರ ಮುಂದಿಟ್ಟೆ. ಅವರು ‘ಇಂಥದ್ದನ್ನು ನಾನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಗೋಕಾಕರು ನನಗೆ ಬಹಳ ದೊಡ್ಡ ಮೇಷ್ಟು ನಿಜ. ಆದರೆ ನಾನು ಅವರು ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಕೋಪದಿಂದ ಹೇಳಿದರು. ಅವರಿಗದೆಷ್ಟು ಕೋಪ ಬಂದಿತ್ತೆಂದರೆ ‘ಮನುಷ್ಯ ದೇವರು’ಗಳನ್ನು ನಂಬುವುದನ್ನು ಅವರೆಷ್ಟು ವಿರೋಧಿಸುತ್ತಾರೆ ಎಂಬುದನ್ನು ಅವರ ಕೋಪವೇ ಹೇಳುತ್ತಿತ್ತು. ಎಕ್ಕುಂಡಿ ಹರಿ ಸರ್ವೋತ್ತಮ ತತ್ವ ನಂಬಿದ ಮಾಧ್ವ ಮತದವರಲ್ಲವೇ?

ನಮ್ಮ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಇಬ್ಬರು ಭಕ್ತರಿದ್ದಾರೆ. ಒಬ್ಬರು ಎಕ್ಕುಂಡಿ ಮತ್ತೊಬ್ಬರು ಪು.ತಿ.ನ. ಇಬ್ಬರನ್ನೂ ನಾನು ಭಕ್ತ ಕವಿಗಳು ಎಂದು ಕರೆಯುತ್ತೇನೆ. ಭಕ್ತಿ ಎಂಬುದು ಸಾಧ್ಯವೇ ಇಲ್ಲದಿದ್ದ ಇನ್ನೊಬ್ಬ ಕವಿಯೆಂದರೆ ಗೋಪಾಲಕೃಷ್ಣ ಅಡಿಗರು. ಅಡಿಗರನ್ನು ಒಂದು ಸಂದರ್ಶನದಲ್ಲಿ ನಾನು ಕೇಳಿದ್ದೆ – ‘ಭಕ್ತಿ ನಿಮಗೆ ಸಾಧ್ಯವೇ?’

‘ನೋ. ನನ್ನನ್ನು ನಾನು ಅರ್ಪಿಸಿಕೊಳ್ಳುವುದು ನನಗೆ ಸಾಧ್ಯವೇ ಇಲ್ಲ’ ಎಂದು ಅವರು ಉತ್ತರಿಸಿದ್ದರು.

ಗೋಪಾಲಕೃಷ್ಣ ಅಡಿಗರಿಗೆ ಸದಾ ಆತ್ಮದರ್ಶಕವಾದ ಒಂದು ವ್ಯಕ್ತಿತ್ವ ಇತ್ತು. ನನಗೆ ಅದು ಬಹಳ ಆಕರ್ಷಕವಾಗಿ ಕಾಣಿಸುತ್ತಿತ್ತು. ಅದರ ಜತೆಗೆ ಸರ್ವ ಸಮರ್ಪಣಾ ಭಾವದ ಎಕ್ಕುಂಡಿ ನನ್ನ ಮನಸನ್ನು ಬಹಳ ಹಿಡಿದಿಟ್ಟರು. ಇಂಥ ವಿರೋಧಗಳಿಗೆ ಮನಸ್ಸನ್ನು ಕೊಟ್ಟೇ ನಾವು ಲೇಖಕರಾಗಿರುವುದು. ಈಗ ನನಗೆ ೭೬ ವರ್ಷ. ವಿರೋಧಾಭಾಸಗಳ ನನ್ನ ಸಮಸ್ಯೆಗಳು ಹಾಗೆಯೇ ಉಳಿದಿವೆ. ಯಾವುದನ್ನೂ ನನಗೆ ಬಗೆಹರಿಸಿಕೊಳ್ಳಲು ಆಗಿಲ್ಲ.

* * *

ನಮ್ಮ ಆಚಾರ್ಯರಲ್ಲೆಲ್ಲಾ ಈ ಜಗತ್ತು ಸತ್ಯ ಎಂದು ತಿಳಿದಿದ್ದವರು ಮಧ್ವಾಚಾರ್ಯರು. ಅವರಿಗೆ ಜಗತ್ತು ಮಿಥ್ಯೆ ಇಲ್ಲ-ಸತ್ಯಂ ಜಗತ್. ಕಾರ್ಲ್‌ಮಾರ್ಕ್ಸ್‌ಗೆ ಚರಿತ್ರೆ ಮತ್ತು ಜಗತ್ತು ಸತ್ಯ. ಮನುಷ್ಯನ ವಿಕಾಸ ನಡೆಯುವುದು ಚರಿತ್ರೆಯಲ್ಲೇ. ಅದು ಹಂತ ಹಂತವಾಗಿ ನಡೆಯುವ ಕ್ರಿಯೆ. ಎರಡು ವಿರುದ್ಧ ಶಕ್ತಿಗಳ ಸಂಘರ್ಷದಲ್ಲಿ ನಡೆಯುವ ಕ್ರಿಯೆ ಇದು. ಮಧ್ವರು ಮತ್ತು ಮಾರ್ಕ್ಸ್ ಇಬ್ಬರಿಗೂ ಜಗತ್ತು ಸತ್ಯವಾಗಿರುವುದರಿಂದಲೇ ಎಕ್ಕುಂಡಿಯವರಿಗೆ ಇಬ್ಬರ ಮಧ್ಯೆ ಸಮನ್ವಯ ಸಾಧಿಸಲು ಆಯಿತೇನೋ. ಇದು ನನ್ನ ಖಡಾಖಂಡಿತವಾದ ಅಭಿಪ್ರಾಯವಲ್ಲ. ಕೇವಲ ಒಂದು ಊಹೆ ಮಾತ್ರ.

ಇದು ಮತ್ತೆ ನನ್ನ ಮನಸ್ಸಿಗೆ ತಟ್ಟಿದ್ದು ಯಾವಾಗ ಎಂದರೆ ನಾನು ಕೊಲ್ಕತ್ತಾಕ್ಕೆ ಹೋದಾಗ. ಪಂಡಿತ್ ವಿದ್ಯಾಸಾಗರ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆಯಲು ಅಲ್ಲಿಗೆ ಹೋಗಿದ್ದ ನನಗೆ ವಿದ್ಯಾಸಾಗರರ ಬಗ್ಗೆ ಮಾತನಾಡಬೇಕಾಗಿತ್ತು. ಪಂಡಿತ್ ವಿದ್ಯಾಸಾಗರರು ರಾಮಕೃಷ್ಣ ಪರಮಹಂಸರ ಸಮಕಾಲೀನರು. ಸಂಪೂರ್ಣ ಮಡಿವಂತ ಬ್ರಾಹ್ಮಣ ಕುಟುಂಬದಿಂದ ಬಂದವರು. ಅಂಗಿಯನ್ನೂ ಧರಿಸಿದ ಬ್ರಾಹ್ಮಣ. ಆದರೆ ಮನುಧರ್ಮಶಾಸ್ತ್ರ ಸರಿಯಲ್ಲ, ಪರಾಶರರೇ ಸರಿ ಎಂದು ವಾದಿಸುತ್ತಿದ್ದವರು. ಮನು ಧರ್ಮಶಾಸ್ತ್ರದಿಂದ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿದೆ ಎಂದು ಅನ್ನಿಸಿದ ತಕ್ಷಣ ವಿದ್ಯಾಸಾಗರರು ನೇರವಾಗಿ ತನ್ನ ಅಪ್ಪನ ಹತ್ತಿರ ಹೋಗಿ ‘ಮನುಧರ್ಮಶಾಸ್ತ್ರ ಸರಿಯಿಲ್ಲ, ಪರಾಶರ ಸ್ಮೃತಿಯೇ ಸರಿ ಎಂದು ಬರೆಯಬೇಕೆಂದಿದ್ದೇನೆ. ಅಪ್ಪಣೆ ಕೊಡಿ’ ಎಂದು ಕೇಳುತ್ತಾರೆ. ವಿದ್ಯಾಸಾಗರರ ತಂದೆ ಮಗ ಇಂಥದ್ದನ್ನು ಬರೆದರೆ ಬ್ರಾಹ್ಮಣರಿಂದ ದೈಹಿಕ ದಾಳಿಗೂ ಒಳಗಾಗಬಹುದು ಎಂದು ಅರಿತವರಾದ್ದರಿಂದ ‘ನಾನು ಅಪ್ಪಣೆ ಕೊಡದಿದ್ದರೆ ಏನು ಮಾಡುತ್ತೀಯಾ?’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವಿದ್ಯಾಸಾಗರರು ‘ನೀವು ಸತ್ತ ಮೇಲೆ ಬರೆಯುತ್ತೇನೆ’ ಎಂದು ಉತ್ತರಿಸುತ್ತಾರೆ. ಇದನ್ನು ಕೇಳಿದ ವಿದ್ಯಾಸಾಗರರ ತಂದೆ ‘ಅಲ್ಲಿಯ ತನಕ ಕಾಯಬೇಡ ಈಗಲೇ ಬರೆದುಬಿಡು’ ಎಂದು ಅನುಮತಿ ಕೊಡುತ್ತಾರೆ.

ಪಂಡಿತ ವಿದ್ಯಾಸಾಗರರು ಬಹಳ ದೊಡ್ಡ ಶಿಕ್ಷಣವೇತ್ತರು. ಇಂಗ್ಲಿಷ್‌ನಲ್ಲಿ ಬರ್ಕ್‌‌ಲಿ ಎನ್ನುವಾತ ಬರೆದ ಆನ್ ಹ್ಯೂಮನ್ ಅಂಡರ್ ಸ್ಟ್ಯಾಂಡಿಂಗ್ (On human Understanding) ಎಂಬ ಪುಸ್ತಕವಿದೆ. ಮಾಯಾವಾದಕ್ಕೆ ಬಹಳ ಹತ್ತಿರವಾದ ಪ್ರತಿಪಾದನೆಗಳು ಈ ಪುಸ್ತಕದಲ್ಲಿವೆ. ಅದನ್ನು ಆಗ ಬಂಗಾಳವನ್ನು ಆಳುತ್ತಿದ್ದ ಬ್ರಿಟಿಷ್ ಸರಕಾರ ಕಾಲೇಜುಗಳಿಗೆ ಒಂದು ಪಠ್ಯವನ್ನಾಗಿ ನಿರ್ದೇಶಿಸಿತು. ಪಂಡಿತ್ ವಿದ್ಯಾಸಾಗರರು ಈ ಪುಸ್ತಕ ಪಠ್ಯವಾಗಬಾರದು ಎಂದು ವಾದಿಸಿ ಬ್ರಿಟಿಷ್ ಸರಕಾರಕ್ಕೆ ಒಂದು ಪತ್ರ ಬರೆದರು.

ಮಾಯಾವಾದದಿಂದಾಗಿ ನಮ್ಮ ದೇಶ ಹಾಳಾಗಿ ಹೋಗಿದೆ. ಆದ್ದರಿಂದ ಒಬ್ಬ ಯೂರೋಪಿಯನ್ ಕೂಡಾ ಮಾಯಾವಾದವನ್ನು ಸಮರ್ಥಿಸುತ್ತಾನೆ ಎಂದು ತಿಳಿದು ಬಿಟ್ಟರೆ ನಮ್ಮ ಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ಆದ್ದರಿಂದ ಇದು ಪಠ್ಯವಾಗಬಾರದು ಎಂಬುದು ವಿದ್ಯಾಸಾಗರರ ವಾದ. ನಮ್ಮ ದೇಶ ಯಾವ ಸ್ಥಿತಿಗಳಲ್ಲಿ ಮಾಯಾವಾದದ ಜೊತೆ, ಅದ್ವೈತದ ಜೊತೆ, ದ್ವೈತದ ಜೊತೆ ಹೆಣಗಾಡಿದೆ ಎನ್ನುವುದು ನನ್ನ ಮಟ್ಟಿಗೆ ಸುಮ್ಮನೆ ನಿರಾಕರಿಸದೆ ಗಮನಿಸಬೇಕಾದ ಸಂಗತಿ. ಸತ್ಯಂ ಜಗತ್ ಎಂದುಕೊಂಡಾಗಲೇ ಭಾರತವನ್ನು ಪುನರ್ ನಿರ್ಮಿಸುವುದು ಸಾಧ್ಯ ಎಂಬುದು ವಿದ್ಯಾಸಾಗರರ ನಿಲುವಾಗಿತ್ತು. ಈ ಮಾತುಗಳನ್ನು ನನಗಿಂತ ಮುಂಚೆ ಮಾತನಾಡಿದ ಆನಂದ ಝಂಝರವಾಡರ ಮಾತಿಗೆ ಒಂದು ಸಣ್ಣ ವ್ಯಾಖ್ಯೆಯಾಗಿ ಹೇಳಿದ್ದೇನೆ.

* * *

ಎಕ್ಕುಂಡಿಯವರನ್ನು ನಾನು ಭಕ್ತ ಕವಿ ಎಂದೆ. ಅವರು ಸಂಪೂರ್ಣವಾಗಿ ಸಮರ್ಪಣಾಭಾವದ ಕವಿ. ಕಾವ್ಯವನ್ನು ಧರ್ಮಕ್ಕೆ ದಾರಿಯನ್ನಾಗಿ ಮಾಡಬೇಕಾದರೆ ಕಾವ್ಯದ ಗುಣಗಳನ್ನೆಲ್ಲಾ ಆರಾಧಿಸುವುದರ ಬದಲು ಅದನ್ನು ಕಳೆದುಕೊಂಡು ನಿಶ್ಚಯವಾಗಿ ಇಂಥದ್ದೇ ಎಂದು ಹೇಳುವಂತಾಗಬೇಕು. ಅದಕ್ಕಾಗಿ ವೇದವ್ಯಾಸರು ಭಾಗವತವನ್ನು ಬರೆದರು ಎಂದು ಎಂದು ಝಂಝರವಾಡರು ಹೇಳಿದರು. ಮಾತಿನಲ್ಲೇ ರಮಿಸಬಲ್ಲ ವಾಕ್ಪಟು ಎಕ್ಕುಂಡಿಯವರು ಭಾಷೆಯ ಜತೆ ಆಡುವ ಆಟ ಅದು ಎಷ್ಟು ಅದ್ಭುತ ಎಂದರೆ ಅವರಿಗೆ ಹಾಗೆ ಒಣಗುವುದು ಸಾಧ್ಯವೇ ಇರಲಿಲ್ಲ. ಹೀಗೆ ಒಣಗಲೇ ಬೇಕೆಂದು ಹೆಣಗಿದ ಮತ್ತೊಬ್ಬ ಕವಿ ಯೇಟ್ಸ್ ನಾನು ಒಣಗಬೇಕು. ಹಾಗೆ ಒಣಗಿದಾಗ ಬೀಜವಾಗಿ ಉದುರುತ್ತೇನೆ ಎಂದು ಅವನು ಭಾವಿಸಿದ್ದ. ಸತ್ಯ ಕಾಣಬೇಕಾದರೆ ಒಂದು ಕಡೆ ಒಣಗಬೇಕು, ವ್ಯಾಮೋಹಗಳನ್ನು ಕಳಚಿಕೊಳ್ಳಬೇಕು.

ನನಗೆ ಎಕ್ಕುಂಡಿಯವರ ಮೊದಲನೇ ಸಂಕಲನದ ಒಂದು ಪದ್ಯ (ಪಯಣ)’ ಅದು ಅರ್ಥವಾಗದೆಯೇ ನನ್ನನ್ನು ಬಹಳ ದಿವಸ ಕಾಡಿತ್ತು.

ಬರ್ದಿಲ ಪಥವಿದು ಸುವರ್ಣ ರಥವಿದು, ಮುತ್ತಿನ ಮಂಟಪ ಕಂಭಗಳು
ನೀಲಿಯ ರತ್ನದ ವಲ್ಲರಿಯಂಚಿಗೆ ಕೆತ್ತಿದ ಚಿನ್ನದ ಗೊಂಬೆಗಳು
ಪಾಟಲ ವರ್ಣದ ಪೀಠದ ಸುತ್ತಲು ಝಲ್ಲರಿಸಿದ ಹೂಮಾಲೆಗಳು
ಕಂಡರಿಸಿದ ಗ್ರಹಮಂಡಲದಂಚಿಗೆ ಕಾಂಚನತೋರಣದೋಲೆಗಳು

ಇದು ಪ್ರಕಟವಾದಾಗ ನಾನು ಆನರ್ಸ್ ಓದುತ್ತಿದ್ದೆ. ಪದ್ಯ ಓದಿದ ನನಗೆ ಕನ್ನಡದಲ್ಲಿ ಒಬ್ಬ ಕೀಟ್ಸ್ ಹುಟ್ಟಿದ ಎನಿಸಿತ್ತು. ಕೀಟ್ಸ್‌ಗೆ ಇದೇ ರೀತಿ ಶಬ್ದಗಳಲ್ಲಿ ಒಂದು ಮುದ ಇತ್ತು. ಅದನ್ನು ಅವನು ಎಷ್ಟು ಗಮನಿಸುತ್ತಿದ್ದ ಎಂದರೆ A thing of beauty is a constant joy ಎಂದು ಬರೆದ ನಂತರ ಅವನ ಅಣ್ಣ ಈ ಸಾಲು ಚೆನ್ನಾಗಿಲ್ಲ ಎಂದರೆ ದಿನಗಟ್ಟಳೆ ಯೋಚನೆ ಮಾಡಿ ‘ಹೌದು ಚೆನ್ನಾಗಿಲ್ಲ’ ಎಂದು ಒಪ್ಪಿಕೊಂಡು A thing of beauty is joy forever ಎಂದು ಬರೆದಿದ್ದ.

ಎಕ್ಕುಂಡಿಯವರ ಮೇಲೆ ಹಲವರು ಬರೆದಿದ್ದಾರೆ. ನನಗೆ ಪುತಿನ ಅವರ ಬರೆಹ ಬಹಳ ಇಷ್ಟ. ಅವರು ಎಕ್ಕುಂಡಿಯ ಭಕ್ತಿ ಭಾವವನ್ನೂ ಸ್ವೀಕರಿಸುತ್ತಾರೆ. ಮತ್ತೆ ಅವರ ಪದ ಕೌಶಲವನ್ನೂ ಅರ್ಥ ಮಾಡಿಕೊಂಡು ವಿಶ್ಲೇಷಿಸುತ್ತಾರೆ. ಅವರೇ ಉಲ್ಲೇಖಿಸಿದ ಒಂದು ಪದ್ಯವನ್ನಿಲ್ಲಿ ಓದುತ್ತೇನೆ.

ಸುತ್ತ ಕಾನನ ಮೌನ ನೆಲೆಸಿತು
ಗಾಳಿ ಜಡೆಗಳ ಬಾಚಿತು
ಅಲೆವ ಮೋಡದ
ಚೆಲುವ ನೋಡಿದ
ಕಮಲವೇತಕೋ ನಾಚಿತು

ಇದನ್ನು ನಾವು ಸುಮ್ಮನೆ ಓದಿ ಬಿಡುತ್ತೇನೆ. ಆದರೆ ಪು.ತಿ.ನ. ‘ರಸಿಕ ಮಾರುತನಲ್ಲದೆ ಮಿಕ್ಕವರಾರೂ ಮರಗಳ ಎಲೆ ಜಡೆಗಳನ್ನು ಬಾಚಿ ಕುರುಳುಗಳನ್ನು ಬಿಡಿಸಿಯಾರು?’ ಎಂದು ಈ ಸಾಲುಗಳನ್ನು ವಿವರಿಸುತ್ತಾರೆ. ಕವಿಗೆ ಕಿವಿ ಇರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ‘ಕಮಲದಲ್ಲಿ ‘ಲ’ಕಾರ ಮೂರನೇ ಸ್ಥಾನಕ್ಕೆ ಜಿಗಿದು ಎಂಥ ಬೆಡಗನ್ನು ಆ ಸಾಲಿಗೆ ಕೊಟ್ಟಿದೆ’ ಎನ್ನುತ್ತಾರೆ. ಆ ಸಾಲನ್ನು ಇನ್ನೊಮ್ಮೆ ನೋಡೋಣ ‘ಅಲೆವ ಮೋಡದ/ಚೆಲುವ ನೋಡಿದ’ ಎಂಬ ಎರಡೂ ಸಾಲುಗಳಲ್ಲಿ ‘ಲ’ಕಾರ ಎರಡನೆಯದ್ದು. ‘ಕಮಲವೇತಕೋ ನಾಚಿತು’ ಎಂಬ ಸಾಲಿನಲ್ಲಿ ‘ಲ’ಕಾರ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕವಿಯನ್ನು ನಡೆಸುವ ಸಂಗೀತವೆಂದರೆ ಇದು. ಇಂಥ ಕವಿ ಭಕ್ತ ಕವಿಯೂ ಆಗಿಬಿಟ್ಟರೆ ಆತನೊಳಗೆ ಸರ್ವಸಮರ್ಪಣೆಯ ಎಂತೆಂಥಾ ಕಷ್ಟಗಳಿರುತ್ತವೆಯೆಂದು ವಿವರಿಸಲಾಗದು.

ಎಕ್ಕುಂಡಿ ಕೀರ್ತನೆಯ ರೀತಿಯಲ್ಲೂ ಬರೆಯುವುದಕ್ಕೆ ನೋಡುತ್ತಾರೆ. ಸಂಪೂರ್ಣ ಸಮರ್ಪಣಾ ಭಾವದಲ್ಲಿ ಭಕ್ತಿಗೀತೆಗಳನ್ನು ಬರೆಯುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಈ ಎಲ್ಲಾ ಪ್ರಯತ್ನಗಳಲ್ಲಿಯೂ ಕನ್ನಡದ ಬಹುಮುಖ್ಯ ಕವಿಗಳಿಗೆಲ್ಲಾ ಇರುವ ಭಾಷೆಯ ಬಗೆಗಿನ ಸುಖ ಅವರಲ್ಲಿ ತುಂಬಾ ಎದ್ದು ಕಾಣಿಸುತ್ತದೆ.

ಪು.ತಿ.ನ.ರ ನಂತರ ಎಕ್ಕುಂಡಿಯವರ ಕಾವ್ಯದ ಬಗೆಗಿನ ಬಹಳ ಮಹತ್ವದ ಮಾತುಗಳನ್ನು ಹೇಳಿದ್ದು ಕೆ.ವಿ. ನಾರಾಯಣ. ಬಹುಶಃ ನನ್ನ ಮಟ್ಟಿಗೆ ಕೆ.ವಿ. ನಾರಾಯಣರ ಬರೆವಣಿಗೆಯಲ್ಲೇ ಬಹಳ ಒಳ್ಳೆಯ ಬರೆಹ ಎನ್ನಿಸಿದ್ದು ಅವರು ‘ಬಕುಲದ ಹೂವುಗಳು’ ಕೃತಿಗೆ ಬರೆದ ಮುನ್ನುಡಿ. ಅದರಲ್ಲಿ ಒಂದು ಬಹಲ ಮುಖ್ಯವಾದ ಮಾತಿದೆ. ಯಾಕೆ ಎಕ್ಕುಂಡಿಯವರ ಯಾವ ನಂಬಿಕೆಯೂ ಒಂದು ನಂಬಿಕೆಯಾಗಿ ನಮ್ಮನ್ನು ಬಾಧಿಸುವುದಿಲ್ಲ ಎಂಬುದಕ್ಕೆ ನಾರಾಯಣ ಕೊಡುವ ಕಾರಣ ಹೀಗಿದೆ ‘ಶ್ರೀ ಎಕ್ಕುಂಡಿಯವರು ಕಥಿಸುವ ಜಗತ್ತು ನಂಬುವಿಕೆಯ ಬುನಾದಿಯನ್ನು ಪಡೆದಿದೆ. ನಂಬುವಿಕೆ ಎಂದೆ. ನಂಬಿಸುವಿಕೆ ಎನ್ನಲಿಲ್ಲ’. ಎಕ್ಕುಂಡಿ ನಂಬಿ ಬರೆಯುತ್ತಾರೆಯೇ ಹೊರತು ನಮ್ಮನ್ನು ನಂಬಿಸಲು ಬರೆಯುವುದಿಲ್ಲ. ನಂಬಿಸಲು ಬರೆದರೆ ಅದು ಪ್ರೊಪಗ್ಯಾಂಡಿಸ್ಟ್ ಆಗುತ್ತದೆ. ಹೀಗೆ ಬರೆದಾಗ ‘ನಾನು ಹೇಳುತ್ತೀನಿ ನೀನು ಕೇಳು, ನೀನು ಆಚರಿಸು’ ಎಂಬ ಒತ್ತಾಯ ಕಾಣಿಸುತ್ತದೆ. ಆದರೆ ಕವಿ ತನ್ಮಯವಾಗಿ ತನ್ನಲ್ಲೇ ಅದನ್ನು ಅನುಭವಿಸಿ ಬರೆಯುವುದು ಬೇರೆಯೇ ಪರಿಣಾಮವನ್ನು ನೀಡುತ್ತದೆ.

ನಾರಾಯಣ ಈ ಮುನ್ನುಡಿಯಲ್ಲಿ ಇನ್ನೂ ಒಂದು ಅದ್ಭುತವಾದ ಮಾತನ್ನು ಹೇಳುತ್ತಾರೆ. ‘ಇಲ್ಲಿ ಯಾವುದನ್ನೂ ಸಿಂಬಲ್ ಮಾಡಲು ಹೋಗುವುದಿಲ್ಲ. ಅವು ಅವಾಗಿಯೇ ಇರುತ್ತವೆ.’ ಅಂದರೆ ಕಥೆಗಳನ್ನು ಒಂದು ರೂಪಕವಾಗಿಸಲೋಸುಗ ಬರೆಯುವುದಿಲ್ಲ. ಇನ್ನುಳಿದವರು ಏನು ಬರೆದರೂ ಅದರಿಂದ ಇನ್ನೊಂದು ಅರ್ಥ ಹುಟ್ಟಿಸುವುದಕ್ಕೋಸ್ಕರ ಬರೆಯುತ್ತಾರೆ. ಎಕ್ಕುಂಡಿ ಇನ್ನೊಂದು ಅರ್ಥ ಹುಟ್ಟಿಸುವುದಕ್ಕೆ ಬರೆಯದೆ ತನ್ನ ಅರ್ಥವನ್ನು ತನ್ನ ಒಳಗೇ ಇಟ್ಟುಕೊಂಡಿರುವ ಪದ್ಯಗನ್ನು ಬರೆಯುತ್ತಾರೆ.

ಎಕ್ಕುಂಡಿಯವರು ತಮ್ಮ ಪದಲೋಲುಪತೆಯಿಂದಾಗಿ ಸಿದ್ಧ ಚಿರಾಯುವಿನಂತೆ ಬರೆಯುತ್ತಾರೆ. ಹಾಗಾಗಿ ಅವರು ಇನ್ನು ಬೆಳೆಯುವುದಿಲ್ಲ ಎಂಬ ನಿರ್ಧಾರಕ್ಕೂ ನಾನು ಬಂದಿದ್ದೆ. ಮನುಷ್ಯ ಬೆಳೆಯುವುದು ಬುದ್ಧಿಯಲ್ಲಿ, ವೈಚಾರಿಕತೆಯಲ್ಲಿ. ಮಾಗುತ್ತಾ ಹೋಗುವ ಶಕ್ತಿ ಇರುವುದು ಇವಕ್ಕೇ. ಹೀಗೆ ಮಾಗುವುದಕ್ಕೆ ಸ್ವಲ್ಪ ಒಣಗಲೂ ಬೇಕಾಗುತ್ತದೆ. ಎಕ್ಕುಂಡಿಯವರಂತೆ ಬಹುದೊಡ್ಡ ಶಬ್ದ ಸಂಪತ್ತು ಮತ್ತು ಅದರ ಸುಖ ಇರುವವರು ಒಣಗುವುದಕ್ಕೆ ತಯಾರಿರುವುದಿಲ್ಲ. ಅದಕ್ಕೆ ಅವರು ಭಾಗವತವನ್ನು ಇಷ್ಟಪಡುತ್ತಾರೇನೋ? ಕವಿಯಾದ ಅವರಿಗೆ ಮಧ್ವಾಚಾರ್ಯರಲ್ಲಿ ಇಷ್ಟವಾದ ಇನ್ನೊಂದು ಸಂಗತಿ ಏನಿರಬಹುದೆಂದರೆ ಇದು: – ನನಗೂ ಇದು ಬಹಳ ಅದ್ಭುತ ಎನಿಸುತ್ತದೆ- ಶಂಕರಾ ಚಾಯ್ರಿಗೆ ದೇವರಿದ್ದಾನೆ ಅಥವಾ ಇಲ್ಲ ಎನ್ನುವುದಕ್ಕೆ ಸಿಗುವ ಪ್ರಮಾಣ ಯಾವುದೆಂದರೆ ವೇದಗಳು; ವೇದಗಳಿಗಿಂತ ಮುಖ್ಯವಾಗಿ ಆತ್ಮಜ್ಞಾನ. ಆದರೆ ಮಧ್ವಾಚಾರ್ಯರಿಗೆ ರಾಮಾಯಣ, ಭಾರತ ಮತ್ತು ಭಾಗವತದಂತಹಾ ಕಾವ್ಯಗಳೂ ದೇವರಿರುವುದಕ್ಕೆ ಪ್ರಮಾಣ ಎಂದುಬಿಡುತ್ತಾರೆ. ಇದೊಂದು ಮಾಧ್ವ ಮತದ ವಿಶೇಷ.

ಒಂದು ಕಾವ್ಯವನ್ನು ಪ್ರಮಾಣ ಎಂದು ಒಪ್ಪಿಕೊಂಡ ಕೂಡಲೇ ಬಹಳ ಗೊಂದಲಗಳು ಉಂಟಾಗುತ್ತವೆ. ಹಾಗೆಯೇ ಇದೊಂದು ಅದ್ಭುತವಾದ ಮುಂದಿನ ಹೆಜ್ಜೆಯೂ ಆಗುತ್ತದೆ. ಕಾವ್ಯವೂ ಕೂಡಾ ದೇವರ ಇರುವಿಕೆಗೆ, ಇಲ್ಲದಿರುವಿಕೆಗೆ ಅಥವಾ ಅವನು ಯಾವ ರೀತಿ ಇದ್ದಾನೆ ಎಂಬುದಕ್ಕೆ ಆಧಾರ ಎಂದುಕೊಂಡಿದ್ದರಿಂದ ಆಚಾರ್ಯ ಮಧ್ವರು ‘ಮಹಾಭಾರತ ತಾತ್ಪರ್ಯ ನಿರ್ಣಯ’ ಬರೆಯಬೇಕಾಯಿತು. ಈ ಕಥೆಯಲ್ಲಿ ಹೀಗಿದೆ, ಮತ್ತೊಂದು ಕಥೆಯಲ್ಲಿ ಹಾಗಿದೆ, ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬುದನ್ನು ಸಮನ್ವಯಿಸಿ ಅವರು ವಿವರಿಸಬೇಕಾಯಿತು.

ಎಕ್ಕುಂಡಿಯವರಿಗೆ ಈ ಕಥನಗಳನ್ನು ಇನ್ನೂ ಯಾವುದೋ ಅರ್ಥಕ್ಕಾಗಿ ಬರೆಯಬೇಕಾದ ಕಥನ ಎನಿಸಲಿಲ್ಲ. ತಾನೇ ತಾನಾಗಿ, ತನ್ನ ಅರ್ಥವನ್ನು ತನ್ನಲ್ಲೇ ಪಡೆದವಾಗಿ ಇರುವ ಕಥನಗಳಾಗಿ ಬರೆದುಬಿಟ್ಟರು. ದೇವರ ಇರುವಿಕೆಯನ್ನು ತನ್ಮೂಲಕ ಕಂಡುಕೊಂಡರು. ಉಳಿದ ಕವಿಗಳಿಗೆ ಹಾಗಲ್ಲ. ಕುವೆಂಪು ಅವರಿಗೆ ಇಡೀ ರಾಮಾಯಣವೇ ಒಂದು ರೂಪಕ. ಅದನ್ನು ಅವರು ಹಾಗೆಯೇ ಬರೆಯುತ್ತಾರೆ. ಎಕ್ಕುಂಡಿಯವರು ತಮ್ಮ ಕವನಗಳಿಗೆ ಕಥನಗಳನ್ನು ಆರಿಸಿಕೊಂಡದ್ದು ಇನ್ನೊಂದು ಅರ್ಥವನ್ನು ನೀಡುವುದಕ್ಕಲ್ಲ ಎಂದು ಹೇಳುವುದಕ್ಕೆ ಇಲ್ಲಿ ಕೆ.ವಿ. ನಾರಾಯಣ ಅವರ ಅಭಿಪ್ರಾಯಗಳನ್ನು ವಿಸ್ತರಿಸಿಕೊಂಡು ಬಳಸಿಕೊಳ್ಳುತ್ತಿದ್ದೇನೆ.

ನಾನು ಎಕ್ಕುಂಡಿಯವರ ಪದ ಲೋಲುಪತೆಯ ಬಗ್ಗೆ ಹೇಳಿದೆ. ಎಕ್ಕುಂಡಿಯವರ ಮೊದಲ ಸಂಕಲನದಲ್ಲಿ ‘ಮೀನು ಪೇಟೆ’ ಎಂಬ ಪದ್ಯವೊಂದಿದೆ. ನನ್ನ ಆನರ್ಸ್ ದಿನಗಳಲ್ಲಿ ಬಹಳ ಇಷ್ಟವಾದ ಪದ್ಯ ಇದು. ಬಂಕಿಕೊಡ್ಲದ ಸುತ್ತಮುತ್ತ ತುಂಬಾ ಮೀನುಗಾರರಿದ್ದಾರೆ. ಅವರನ್ನು ನೋಡಿಯೇ ಈ ಪದ್ಯವನ್ನು ಅವರು ಬರೆದಿರಬೇಕು. ಈ ಪದ್ಯವನ್ನು ಓದಿದಾಗ ಅವರಿದ್ದ ಊರಿನ ವಾಸನೆ ಕೂಡಾ ನಮಗೆ ತಿಳಿಯುತ್ತದೆ. ಇದೂ – ವಾಗ್ವಿಲಾಸದಲ್ಲಿ ಮೈಮರೆಯದೇ ಬರೆಯುವುದು – ಎಕ್ಕುಂಡಿಯವರ ಕಾವ್ಯದ ಒಂದು ವಿಶೇಷತೆಯೇ ಹೌದು. ಇದನ್ನು ಗಮನಿಸದೇ ಇದ್ದರೆ ನಾನು ಈವರೆಗೆ ಹೇಳಿರುವುದು ಸರಳೀಕೃತ ವ್ಯಾಖ್ಯೆಯಾಗಿಬಿಟ್ಟೀತು.

ಕಾವ್ಯ ಎಂದರೆ ಏನು ಎಂಬುದು ತಿಳಿಯುವುದು ನಾವು ಓದುವ ಕನ್ನಡ ಕವಿಗಳಿಂದ. ನಾನು ಹೈಸ್ಕೂಲಿನಲ್ಲಿದ್ದಾಗ ನನಗೆ ಇದು ಬೇಂದ್ರೆಯವರ ಮೂಲಕ ತಿಳಿಯಿತು. ಆಮೇಲೆ ಕಾಲೇಜಿಗೆ ಬಂದ ಮೇಲೆ ಇದು ನನಗೆ ತಿಳಿದಿದ್ದು ಅಡಿಗರು ಮತ್ತು ಎಕ್ಕುಂಡಿಯವರಿಂದ. ‘ಮೀನು ಪೇಟೆ’ಯನ್ನು ಕಾಲೇಜಿನಲ್ಲಿರುವಾಗ ಓದಿದಾಗ ಕಾವ್ಯವೆಂದರೆ ಇದು ಅನ್ನಿಸಿತ್ತು. ಈಗಲೂ ಹಾಗನ್ನಿಸುತ್ತದೆಯೇ ಎಂದು ಪರೀಕ್ಷಿಸಲು ಅದರ ಕೆಲವು ಸಾಲುಗಳನ್ನು ಮತ್ತೆ ಓದುತ್ತೇನೆ;

ಕೊಳೆತು ನಾರುತಿರುವುದಿಲ್ಲಿ
ಹಳಸಿ ಹೋದ ಮೀನವು
ಕುಳಿತು ಮಾರುತಿರುವುದಿಲ್ಲಿ
ಜೀವ ದುಃಖ ಮ್ಲಾನವು
ದೈನ್ಯ ಸಾರುತಿರುವುದಿಲ್ಲಿ
ಬಂಡವಲಿನ ಬುಟ್ಟಿಯಲ್ಲಿ
ಜೀತವಾಗಿ ಹುಟ್ಟಿದಲ್ಲಿ
ಬದುಕು ನಿತ್ಯ ದೀನವು
ಬೆಳಗು ಬಂತು
ಸಂಜೆ ಬಂತು
ವರುಷ ವರುಷ ಕಳೆದರೂ
ಹರೆಯ ಮುಪ್ಪು ತಳೆದರೂ
ತೆಂಗಿನ ಸಸಿ ಬೆಳೆದರೂ
ಬುಟ್ಟಿ ಮೀನ ಕೊಳೆತರೂ
ಹರುಷ ಗಿರುಷ ದೊರೆಯಲಿಲ್ಲ
ಇವರ ಬಾಳ ಹಂತಕೆ
ಈ ಬದುಕಿನ ಪಂಥಕೆ
ಇಲ್ಲಿ ಸಾಲು ಕುಳಿತ ಹೆಣ್ಣು
ಎಲ್ಲೋ ಮುಗಿಲಿನತ್ತ ಕಣ್ಣು
ಕುಳಿತರಿಲ್ಲ ಮತ್ಸ್ಯಗಂಧಿ
ಉಟ್ಟುಕೊಂಡು ಹರುಕು ಚಿಂದಿ

‘ಕುಳಿತರಿಲ್ಲಿ ಮತ್ಸ್ಯಗಂಧಿ, ಉಟ್ಟುಕೊಂಡು ಹರುಕು ಚಿಂದಿ’ ಎಂಬ ಸಾಲು ನನ್ನನ್ನು ಥ್ರಿಲ್ ಮಾಡಿತ್ತು. ಇವು ಕನ್ನಡದಲ್ಲಿ ಬಂದ ಅತಿ ಮಹತ್ವದ ಸಾಲುಗಳು. ಇದು ಪರಾಶರರನ್ನು ಆಕರ್ಷಿಸಿದ ಮತ್ಸ್ಯಗಂಧಿಯನ್ನು ನೆನಪಿಸುತ್ತದೆ. ಹರುಕುಚಿಂದಿ ಉಟ್ಟುಕೊಂಡು ಕುಳಿತವಳೂ ಮತ್ಸ್ಯಗಂಧಿ. ಆಕೆಯ ಮೈಯಲ್ಲಿ ಮೀನಿನ ವಾಸನೆ ಇದೆ. ಏಕೆಂದರೆ ಅವಳೆದುರೇ ಮೀನಿನ ಬುಟ್ಟಿಯಿದೆ. ಇಂಥ ಎರಡು ಸಾಲು ಬರೆಯುವುದು ಬಹಳ ಕಷ್ಟ. ಅದೆಷ್ಟು ವಿಷಯಗಳನ್ನು ಎರಡೇ ಸಾಲುಗಳು ಹೇಳುತ್ತಿವೆ. ಅನುಕಂಪ, ದುಃಖ, ಬಡ ಹೆಂಗಸಿನ ಅಳಲು-ಆದರೆ ಅದರ ಜತೆಯಲ್ಲೇ

ನೊಂದ ಜೀವ ನೂಲುತ್ತಿತ್ತು…
ಸುಖ ಸ್ವಪ್ನ ದರ್ಶನ

ಇವಳ ದುಃಖದ ಜತೆಯಲ್ಲೇ ಇವಳು ಮಾರುವ ಮೀನಿನ ಪಾಡೂ ಇದೆ.

ಬಂಡವಲಿನ ಬುಟ್ಟಿಯಲ್ಲಿ
ಜೀತವಾಗಿ ಹುಟ್ಟಿದಲ್ಲಿ
ಬಲೆಗೆ ಬಿದ್ದ ಮೀನದಂತೆ
ವಿಲವಿಲ ಮಣಿದಾಡಿದೆ

ಯಾವ ಅನುಮಾನವೂ ಇಲ್ಲದೆ ಕನ್ನಡದ ಶ್ರೇಷ್ಠ ಕವನಗಳಲ್ಲಿ ಒಂದು ಎನ್ನಬಹುದಾದ ಕವನ ಇದು. ಈ ಪದ್ಯದಲ್ಲಿ ಪದದಲ್ಲಿ ಸುಖಿಸುವ ಗುಣ ಕಾಣಿಸುವುದಿಲ್ಲ. ಕೆಲವು ಪದ್ಯಗಳಲ್ಲಿ ಕಾಣಿಸುವ ಈ ಗುಣವನ್ನು ನಾನು ಇರಬಾರದು ಎಂದು ಹೇಳಲಾರೆ. ನಾನೇ ಬರೆಯುತ್ತಿದ್ದರೂ ಇದೊಂದು ಸಮಸ್ಯೆಯೇ.

ನನಗೆ ‘ಅವಧೂತ’ ಬಹಳ ಇಷ್ಟವಾದ ಪದ್ಯ. ಅದು ಯಾಕೆ ನನಗಿಷ್ಟ ಎಂದರೆ- ಇದು ಇರ‍್ಯಾಷನಲ್ ಇರಬಹುದು – ಅಲ್ಲಿ ಏಳು ಎನ್ನುವದಕ್ಕೊಂದು ದೀರ್ಘ ಬರುತ್ತದೆ. ‘ದೇವಕನ್ನಿಕೆಯರೇಳು ಮಂದಿ ಬಂದಾರ ಮೀಯಲೆಂದು.’

ಹುಟ್ಟುವ ಮೊದಲೇ ವೈರಾಗ್ಯ ಹುಟ್ಟಿದ್ದು ಶುಕ ಮುನಿಗಳಂತೆ. ಅವನು ಬಾಲ ವಿರಾಗಿ. ಭಾಗವತದಲ್ಲಿ ಅದು ಒಂದೇ ಶ್ಲೋಕ. ಈ ಶ್ಲೋಕ ಮರೆತು ಹೋಗಿದೆ. ವೇದವ್ಯಾಸರು ಹೊರಬಂದು ‘ಪುತ್ರೇತಿ’ (ಏ ಮಗನೇ) ಎಂದು ಕೂಗುತ್ತಾರೆ. ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಿಂದ ಬರುವ ಪ್ರತಿಧ್ವನಿಯಲ್ಲಿ ಅವರು ಮಗನನ್ನು ಕಂಡರು. ಮಗ ಪ್ರಕೃತಿಯಲ್ಲಿ ಐಕ್ಯನಾಗಿದ್ದಾನೆ. ಅಲ್ಲಿಯೇ ನಮ್ಮ ಮಗನನ್ನು ಅವರು ಕಂಡರು. ಎಲ್ಲಿ ತಮ್ಮ ಮಗನನ್ನು ಕಂಡರೋ ಅಂಥ ಒಂದು ವಿಚಿತ್ರಕ್ಕೆ ನಮಿಸುತ್ತೇನೆ ಎನ್ನುತ್ತಾನೆ ಭಾಗವತದ ಕವಿ. ಇದು ಇಲ್ಲಿ ಇಡೀ ಒಂದು ಪದ್ಯವಾಗಿದೆ.

ಇಲ್ಲಿರುವ ಬಹಳ ಪದ್ಯಗಳಲ್ಲಿ Good and Evil ಮತ್ತೆ ಮತ್ತೆ ಬರುತ್ತದೆ. ಇಲ್ಲೊಂದು ಪದ್ಯವಿದೆ, ಇದರಲ್ಲಿ ಒಂದು ದ್ವೇಷದ ಶಿಲ್ಪ, ಮತ್ತೊಂದು ಮಮತೆಯ ಶಿಲ್ಪ. ಈ Good and Evilನ ಪರಿಕಲ್ಪನೆ ಎಕ್ಕುಂಡಿಯವರಿಗೆ ಮಧ್ವಾಚಾರ್ಯರಿಂದಲೇ ಬಂದಿದೆ. ನಮ್ಮ ಆಚಾರ್ಯರಲ್ಲೆಲ್ಲಾ ಇದು ಶಾಶ್ವತವಾಗಿ ಇರುತ್ತದೆ ಎಂದವರು ಆಚಾರ್ಯ ಮಧ್ವರೇ. ‘ತಮೋಗುಣಿಗಳಿಗೆ ಮುಕ್ತಿಯೇ ಇಲ್ಲ. ಅವರು ನಿತ್ಯ ನಾರಕಿಗಳು’ ಎಂಬುದು ಮಧ್ವರ ನಿಲುವು. ಇದೊಂದು ನಿರಾಶೆಯ ತತ್ವ ಎಂದು ಬಹು ದೊಡ್ಡ ಚರ್ಚೆಯೇ ನಡೆದಿತ್ತು. ಈ ಸಂದರ್ಭದಲ್ಲಿ ಒಬ್ಬರು ಇದಕ್ಕೆ ಉತ್ತರ ಕೊಟ್ಟಿದ್ದರು. ‘ತಮೋಗುಣಿಗಳಿಗೆ ಮುಕ್ತಿಯ ಬಯಕೆಯೇ ಇಲ್ಲವಲ್ಲ. ಆದ್ದರಿಂದ ಇದು ನಿರಾಶೆಯ ತತ್ವ ಅಲ್ಲ.’

ನಾನು ಹುಡುಗನಾಗಿದ್ದಾಗ ಇವನ್ನೆಲ್ಲಾ ಓದಿಕೊಂಡು ಬೆಳೆದವನು. ಮಠದ ಆಚಾರ್ಯರಲ್ಲಿ ಇದನ್ನು ಕೇಳಿಸಿಕೊಳ್ಳುತ್ತಿದ್ದೆ. ಇದನ್ನೆಲ್ಲಾ ತಿಳಿದುಕೊಂಡ ಮೇಲೆ ನಾನು ಮಾರ್ಕ್ಸ್‌ನನ್ನು ಓದಿದೆ. ಕೆಲವರು ಹೀಗೂ ಇರುತ್ತಾರೆ. ಅವರಲ್ಲಿ Evil ಎಂಬುದು Constant ಆಗಿ ಇರಲೂಬಹುದು. ಅಡಿಗರ ರಾವಣ ಈ ಬಗೆಯವನು.

‘ಕತ್ತಲೆಗೆ ಹತ್ತು ತಲೆ? ಅದು ಅಸಂಖ್ಯ
ಕತ್ತರಿಸಿದಷ್ಟೂ ಬೆಳೆವ ಬೆಳೆದು ಕತ್ತಿಗೆ ಬರುವ ಅದು ಅನಾದಿ.
ಕೋದಂಡ ದಂಡವೂ ಹೀಗೆ ದಂಡ.’
ಶಿಕ್ಷೆಗೆ ಅಗತ್ಯವಾದ ದಂಡ; ಎಷ್ಟು ಶಿಕ್ಷಿಸಿದರೂ ದಂಡವಾದ ದಂಡ.

ನಮ್ಮ ಕವಿಗಳಲ್ಲಿ ಅಂಶವೇ ಇಲ್ಲದೆ ಬರೆದವರು ಕುವೆಂಪುವೇ ಇರಬೇಕು. ರಾಮಾಯಣ ದರ್ಶನಂನಲ್ಲಿ ರಾವಣ ಕೂಡಾ ಸೀತೆಯ ಒಂದು ಮಗುವಾಗಿಬಿಡುತ್ತಾನೆ. ಅದೊಂದು ಅದ್ಭುತವಾದ ಅದ್ವೈತದ ದರ್ಶನ. ಇನ್ನೊಂದು ಕಡೆ Evil ಕಡೆಯ ತನಕ ಇರುತ್ತದೆ ಎಂಬ ಅಡಿಗರ ದರ್ಶನ.

* * *

ಹಸಿರು ಹಾಸಿದಂತ ಬಯಲು ನಡುವೆ ನಿಂತ ಗುಡಿಸಲು,
ಕನಕದಾಸ ಧ್ಯಾನ ಲೀನ ಹೃದಯ ವೀಣೆ ನುಡಿಸಲು…..

ಹೀಗೆ ಶುರುವಾಗುವ ಪದ್ಯದ ಪಲ್ಲವಿ ಹೀಗಿದೆ.

ಧ್ಯಾನಲೀನ ಕನಕದಾಸ ನಲಿದಿರೆ ಮನದಲ್ಲಿ
ಭಗವಂತನ ನೀರೆರೆದನು ತುಳಸೀವನದಲ್ಲಿ
ಕೊನೆಗೆ ಒಂದು ಮಾತು ಬರುತ್ತದೆ.
ವಾದಿರಾಜ ಯತಿಯು ಕನಕದಾಸರೆಡೆಗೆ ಬಂದರು
ಗುಡಿಸಲದೊಳಗಿರುವ ಬೆಳಕು ಗುಡಿಯೊಳಿಲ್ಲವೆಂದರು.

ಬಹಳ ಅದ್ಭುತವಾದ ಸಾಲುಗಳು. ರಾಮನನ್ನೂ ಕೃಷ್ಣನನ್ನೂ ಕುರಿತು ಬರೆಯುವಾಗ ಎಕ್ಕುಂಡಿ ತುಂಬಾ ವರ್ಣಕವಾಗಿ ಬರೆಯುತ್ತಾರೆ. ದೇವರನ್ನು ನಿರಾಕಾರ ನಿರ್ಗುಣ ಎಂದು ತಿಳಿಯುವುದರಿಂದ ಅಲ್ಲಮನಂಥ ಒಗಟಿನ ಕವಿ ಹುಟ್ಟುತ್ತಾನೆ. ದೇವರನ್ನು ಸಾಕಾರ, ಸಗುಣ ಎಂದು ದ್ವೈತದಂತೆ ತಿಳಿದರೆ ಒಬ್ಬ ಎಕ್ಕುಂಡಿ ಹುಟ್ಟುತ್ತಾನೆ. ಆದರೆ ಸಾಕಾರ ಮತ್ತು ಸಗುಣ ಎಂತಲೂ, ಯಾವುದೋ ಒಂದು ಹಂತದಲ್ಲಿ ನಿರಾಕಾರ ನಿರ್ಗುಣ ಎಂತಲೂ ಭಾವಿಸಿಬಿಟ್ಟರೆ ಆ ಸಂಕಟದಿಂದ ಬಹಳ ದೊಡ್ಡ ಕಾವ್ಯ ಹುಟ್ಟುತ್ತದೆ. ಆ ಸಂಕಟದ ತುದಿಯವರೆಗೂ ಎಕ್ಕುಂಡಿ ಬರುತ್ತಾರೆ. ಆದರೆ ಅಂತಹಾ ಸಂಕಟದಲ್ಲಿ ಬರೆದಿದ್ದಾರೆ ಎಂದು ನನಗನ್ನಿಸಿಲ್ಲ. ಒಬ್ಬ ಕವಿ ಏನನ್ನು ಮಾಡಿದ್ದಾನೆ ಮತ್ತು ಏನನ್ನು ನಿರೀಕ್ಷಿಸುವಂತೆ ಮಾಡುತ್ತಾನೆ ಎಂಬುದನ್ನು ವಿವರಿಸುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ. ದೇವರನ್ನು ಅಷ್ಟು ಸಗುಣ, ಸಾಕಾರ ಎಂದು ತಿಳಿದವರ ಕಾವ್ಯವೂ ಕೂಡಾ ಸಗುಣ ಸಾಕಾರವೇ ಆಗಿದ್ದು ಅದರ ಧ್ವನಿ ಸಗುಣ-ಸಾಕಾರದ ಆಚೆಗೆ ಹೋಗಬೇಕು. ಇದು ನನ್ನಂತಹ ಕೆಲವರ ಆಸೆ.

ಹೀಗೆ ಮೀರುವುದನ್ನು ತಾನು ಬಯಸುವುದಿಲ್ಲ ಎಂದು ಎಕ್ಕುಂಡಿ ಹೇಳುತ್ತಾರೆ. ಪದ್ಯಗಳನ್ನು ಒಂದು symbolic  ಆಗಿ Allegorical  ಆಗಿ ಬರೆಯುವುದಿಲ್ಲ. ಎಕ್ಕುಂಡಿಯ ಬಗ್ಗೆ ಅವರ ಅನನ್ಯತೆ ಅವರ ಕೆಲವು ಸಾಲುಗಳಲ್ಲಿರುವ ಒಳಗಡೆ ಇರುವ ನಾದಶಕ್ತಿಯಲ್ಲಿದೆ. ಅದಕ್ಕಾಗಿಯೇ ಅವರು ನಾದದ ಕೊನೆಯಲ್ಲಿ ಸಾಲನ್ನು ನಿಲ್ಲಿಸುವುದಿಲ್ಲ. ಇನ್ನೊಂದು ಸಾಲಿಗೆ ಹರಿದು ಕಿವಿಯ ಮಟ್ಟಿಗೇ ಗೊತ್ತಾಗುವ ಹಾಗೆ ಮಾಡುತ್ತಾರೆ. ಕಣ್ಣಿಗೆ ಎಲ್ಲವನ್ನೂ ಗೊತ್ತಾಗುವ ಹಾಗೆ ಮಾಡಿದ್ದು ರಾಮಾನುಜನ್. ಅವರ ಕಾವ್ಯ ಕಣ್ಣಿಗೆ ಮಾತ್ರ ಗೊತ್ತಾಗುತ್ತಿತ್ತು, ಕಿವಿಗಲ್ಲ. ಏಕೆಂದರೆ ಅವರದು ಕನ್ನಡ ಸೆಕೆಂಡ್ ಲಾಂಗ್ವೇಜ್! ಇದನ್ನು ನಾನು ತಮಾಷೆಗೆ ಹೇಳುತ್ತಿರುವಂತೆಯೇ ಗಂಭೀರವಾಗಿಯೂ ಹೇಳುತ್ತಿದ್ದೇನೆ. ತುಂಬಾ ದೃಶ್ಯಾತ್ಮಕವಾದ ಕಾವ್ಯ ಬರುವುದು ಯಾವಾಗ ಎಂದರೆ ಭಾಷೆಯನ್ನು ಸೆಕೆಂಡ್ ಲಾಂಗ್ವೇಜ್ ಆಗಿ ಗ್ರಹಿಸಿದಾಗ.

ನಾವು ಬೇಂದ್ರೆಯವರನ್ನು ಶ್ರಾವಣ ಪ್ರತಿಭೆ ಎಂದು ಗುರುತಿಸುತ್ತೇವೆ. ಆ ಶ್ರಾವಣ ಪ್ರತಿಭೆಯ ಕೆಲವು ಗುಣಗಳು ಇರುವ ಕನ್ನಡದ ಮಹತ್ವದ ಕವಿ ಎಕ್ಕುಂಡಿ ಎಂದು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

(‘ಸಂಚಯಪ್ರಕಟಿಸಿದ ಎಕ್ಕುಂಡಿಯವರ ಸಮಗ್ರ ಕಾವ್ಯಬೆಳ್ಳಕ್ಕಿ ಹಿಂಡುಬಿಡುಗಡೆ ಸಮಾರಂಭದ ಅಧ್ಯಕ್ಷ ಭಾಷಣ೨೭ ಜುಲೈ ೨೦೦೮)

* * *