ಇವತ್ತು ನಾನು ಹೆಚ್ಚು ಮಾತನಾಡಬಾರದು. ಏಕೆಂದರೆ ನನಗಿಂತ ಮೊದಲು ಮಾತನಾಡಿದವರು ಬಹಳ ಗಂಭೀರವಾಗಿ ಮತ್ತು ಆಳವಾಗಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ನನ್ನದನ್ನಾಗಿ ಮಾಡಿಕೊಳ್ಳುವುದಕ್ಕೆ ಸಮಯ ಬೇಕು. ಅದರ ಜತೆಗೆ ನಾನು ಪ್ರತಿದಿನ ಬೆಳಿಗ್ಗೆ ಒಂದು ಇಂಜೆಕ್ಷನ್ ತೆಗೆದುಕೊಂಡಿರುತ್ತೇನೆ. ಆದ್ದರಿಂದ ನಾನು ಹೆಚ್ಚು ಹೊತ್ತು ಹಸಿದು ಇರುವುದಕ್ಕೆ ಸಾಧ್ಯವಿಲ್ಲ. ಆದರೆ ಕೆ.ಟಿ. ಶಿವಪ್ರಸಾದ್ ಬಹಳ ಒಳ್ಳೆಯ ಉಪನ್ಯಾಸ ನೀಡಿದ್ದಷ್ಟೇ ಅಲ್ಲದೆ ನನಗೆರಡು ಚಾಕಲೇಟ್‌ಗಳನ್ನೂ ಕೊಟ್ಟಿದ್ದಾರೆ ಹಾಗಾಗಿ ನಾನು ಸ್ವಲ್ಪ ಮಾತನಾಡಬಹುದು.

ಮೊಗಳ್ಳಿಯ ‘ದೇವ ಸ್ಮಶಾನ’ವನ್ನು ನಾನು ಓದುತ್ತಾ ಹೋದ ಹಾಗೆ ಅವರ ‘ತಕರಾರು’ವಿಗೆ ತಕರಾರನ್ನು ಎತ್ತುವ ಪದ್ಯಗಳು ಇಲ್ಲಿವೆ ಎಂದು ನನಗನ್ನಿಸಿತು. ಅದೊಂದು ಒಳ್ಳೆಯ ಲಕ್ಷಣ. ಏಕೆಂದರೆ ನೀವು ಒಳ್ಳೆಯ ಲೇಖಕ ಆಗಿದ್ದರೆ ನಿಮ್ಮನ್ನು ನೀವೇ ನಿರಾಕರಿಸಿಕೊಳ್ಳುವ ಶಕ್ತಿಯನ್ನು ಪಡೆದಿರುತ್ತೀರಿ. ಹೀಗೆ ನಿರಾಕರಿಸಿಕೊಳ್ಳುವ ಶಕ್ತಿ ಇರುವವನು ಬೆಳೆಯುತ್ತಾನೆ. ಇದಕ್ಕೆ ಪ್ರತಿಯಾಗಿ ತನ್ನನ್ನು ತಾನೇ ಸ್ಥಾಪಿಸಿಕೊಳ್ಳುತ್ತಾ ಹೋಗುವವನು ಒಂದು ಶಿಲೆಯಾಗಿ ಸ್ಥಾಪಿತವಾಗುತ್ತಾನೆಯೇ ಹೊರತು ಅವನು ಜೀವಂತವಾಗಿ ಉಳಿಯುವುದಿಲ್ಲ. ನಮ್ಮ ವಿಮರ್ಶೆಗಳಲ್ಲಿ ನಮ್ಮನ್ನು ನಾವು ನಿರಾಕರಿಸಿ ಕೊಳ್ಳುವುದು ಕಷ್ಟ. ಏಕೆಂದರೆ ಅಲ್ಲೊಂದು ಬೌದ್ದಿಕ ವ್ಯಾಪಾರವಿರುತ್ತದೆ. ಆಧರೆ ನಾವು ಸಾಹಿತ್ಯವನ್ನು ಬರೆಯುವಾಗ ನಮ್ಮ ಎಲ್ಲಾ ಅಭಿಪ್ರಾಯಗಳನ್ನು ಮೀರಿ ಆ ಸೃಜನಶೀಲ ಘಳಿಗೆಯಲ್ಲಿ ಮೀಯಬೇಕಾಗುತ್ತದೆ. ಕೆ.ಟಿ. ಶಿವಪ್ರಸಾದ್ ವಿವರಿಸಿದ ಬೌದ್ಧ ಕಾವ್ಯ ಮೀಮಾಂಸೆಯ ಮೂಲದಲ್ಲಿರುವುದೂ ಹೀಗೆ ಬರಿದಾಗುವ ಕ್ರಿಯೆ. ಒಂದು ರೀತಿಯಲ್ಲಿ ಶೂನ್ಯವಾಗುವುದು. ನನಗೇನೂ ಗೊತ್ತಿಲ್ಲ ಎಂಬ ಸ್ಥಿತಿಯನ್ನು ತಲುಪಿದಾಗ ನಮಗೇನೋ ಗೊತ್ತಾಗಿಬಿಡುತ್ತದೆ. ನನಗೆಲ್ಲಾ ಗೊತ್ತಿದೆ ಎಂದು ತಿಳಿದುಕೊಂಡವನಿಗೆ ಹೊಸತೇನನ್ನೂ ಬರೆಯಲು ಆಗುವುದಿಲ್ಲ. ಬರೇ ಗೊತ್ತಿದ್ದನ್ನು ಮಾತ್ರ ಬರೆಯುತ್ತಿರುತ್ತಾನೆ. ಆ ಗೊತ್ತಿಲ್ಲದೇ ಇರುವ ಆ ದಿವ್ಯದ ಕಡೆಗೆ ಅಥವಾ ಅನೂಹ್ಯದ ಕಡೆಗೆ ಕೈ ಚಾಚುವ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಶಕ್ತಿ ಇರುವಾತ ಈ ಮೊಗಳ್ಳಿ. ಕಿ.ರಂ. ಇದನ್ನು ಬಹಳ ಅದ್ಭುತವಾಗಿ ‘ಮೊಗಳ್ಳಿ ಮಹೇಶ್ವರ ಸ್ಥಲದಲ್ಲಿದ್ದಾರೆ’ ಎಂದರು. ಈ ಮಹೇಶ್ವರ ಸ್ಥಲದಿಂದ ಶರಣ ಸ್ಥಲಕ್ಕೆ ಬಹಳ ಬೇಗ ಹೋಗಿಬಿಡುವಷ್ಟು ಮೊಗಳ್ಳಿ ಮಹೇಶ್ವರರಾಗಿದ್ದಾರೆ.

ಮೊಗಳ್ಳಿ ಏನನ್ನೂ ಮುಚ್ಚಿಟ್ಟುಕೊಳ್ಳದೆ ಹೇಳಿದ್ದಾರೆ. ನನ್ನ ಬಗ್ಗೆ ಬಹಳ ಕಟುವಾಗಿ ಬರೆದಿದ್ದಾರೆ. ದೇವನೂರು ಮಹಾದೇವ ಏನಾದರೂ ಇದನ್ನು ಓದಿರೆ ಅದು ಹಾಗಲ್ಲ ಎಂದು ಸಾಬೀತು ಮಾಡುವುದಕ್ಕಾಗಿ ಅವನು ನನ್ನ ಹತ್ತಿರ ಜಗಳವಾಡಬೇಕಾಗುತ್ತದೆ. ಆದರೆ ಇಂದಿಗೂ ದೇವನೂರು ಮಹಾದೇವ ನನ್ನ ಹತ್ತಿರ ಜಗಳವಾಡಿಲ್ಲ. ಅಂದರೆ ಮೊಗಳ್ಳಿಯ ಮಾತನ್ನು ಮಹಾದೇವ ನಿರಾಕರಿಸಿದ್ದಾರೆ. ನಾನೂ ನಿರಾಕರಿಸಿದ್ದೇನೆ.

ತೇಜಸ್ವಿ ನನ್ನ ವಿದ್ಯಾರ್ಥಿಯಾಗಿದ್ದರು. ನನಗೂ ಅವರಿಗೂ ಬಹಳ ಜಗಳಗಳಿದ್ದವು. ಆದರೆ ಕೆಲವು ಸಾರಿ ಅವನ್ನು ಮೀರಿದ ರೀತಿಯಲ್ಲಿ ನಾನು ಅವರಿಗೆ ಸ್ಪಂದಿಸಬಲ್ಲವನಾಗಿದ್ದೆ. ಅವರೂ ನನಗೆ ಸ್ಪಂದಿಸಬಲ್ಲವರಾಗಿದ್ದರು. ಅಡಿಗರ ಜನಸಂಘ ಸೇರಿದ ಪರಿಣಾಮವಾಗಿ ನನಗೆ ಅವರ ಜತೆ ಬಹಳ ಜಗಳಗಳಿದ್ದವು. ಆದರೂ ಅವರಿಗೆ ನಾನು ಸ್ಪಂದಿಸಬಲ್ಲವನಾಗಿದ್ದೆ. ಅವರೂ ಹಾಗೆಯೇ ನನಗೆ ಸ್ಪಂದಿಸಬಲ್ಲವರಾಗಿದ್ದರು. ಇಲ್ಲಿ ನಾನು ಹೇಳಬೇಕೆಂದಿರುವುದು ಬಹಳ ಸರಳವಾದ ವಿಷಯ. ಮೊಗಳ್ಳಿ ಒಂದು ಜಾತಿಯಲ್ಲಿ ಹುಟ್ಟಿದ್ದಾರೆ. ಶಿವಪ್ರಸಾದ್ ಮತ್ತೊಂದು ಜಾತಿಯಲ್ಲಿ ಹುಟ್ಟಿದ್ದಾರೆ. ನಾನು ಇನ್ನೊಂದು ಜಾತಿಯಲ್ಲಿ ಹುಟ್ಟಿದ್ದೇನೆ. ಇದಕ್ಕೆ ನಾವ್ಯಾರೂ ಕಾರಣರಲ್ಲ. ಆಯಾ ಜಾತಿಗಳಲ್ಲಿ ಹುಟ್ಟಿಬಿಟ್ಟಿದ್ದೇವೆ ಅಷ್ಟೇ. ಆದ್ದರಿಂದ ನಾವು ಬರೆಯಲು ಹೊರಟಾಗ ನಾವು ನಮ್ಮ ಜಾತಿಗಳಲ್ಲಿ, ನಮ್ಮ ಬಾಲ್ಯದಲ್ಲಿ, ನಮ್ಮ ಯೌವ್ವನದಲ್ಲಿ ನಮ್ಮ ಸಹೋದ್ಯೋಗಿಗಳ ಜತೆ ಕಲಿತಿರುವುದೆಲ್ಲಾ ವಸ್ತುವಾಗಿರುತ್ತದೆ. ಹೀಗೆ ಬರೆಯುವಾಗ ನಾವೆಲ್ಲಾ ಇನ್ನೊಂದು ಜಾತಿಗೆ ಸೇರಿರುತ್ತೇವೆ. ಅದು ನಾನು, ಮೊಗಳ್ಳಿ, ಶಿವಪ್ರಸಾದ್, ಕಿ.ರಂ. ಮುಂತಾದವರೆಲ್ಲರೂ ಇರುವ ಕನ್ನಡ ಸಾಹಿತ್ಯದ ಜಾತಿ. ಮೊಗಳ್ಳಿ ನಮ್ಮ ಈ ಜಾತಿಗೂ ಸೇರಿದ್ದೇ ಅವರ ಈ ಜಾತಿಗೂ ಸೇರಿದವರಾಗಿದ್ದರೆ ಗಂಭೀರವಾದುದನ್ನು  ಕೊಡುತ್ತಾರೆ. ಅವರು ಬರೇ ಆ ಜಾತಿಗೆ ಮಾತ್ರ ಸೇರಿದ್ದರೆ ಏನೂ ಕೊಡುವುದಕ್ಕೂ ಸಾಧ್ಯವಿಲ್ಲ. ಬರೇ ಈ ಜಾತಿಗೆ ಸೇರಿದವರಾಗಿದ್ದರೆ ಬಹಳ ಕೃತಕವಾದುದನ್ನಷ್ಟೇ ಬರೆಯಲು ಸಾಧ್ಯ. ಆದ್ದರಿಂದ ‘ಅನಂತಮೂರ್ತಿಯವರ ಬರೆವಣಿಗೆಯಲ್ಲಿ ಬ್ರಾಹ್ಮಣ ಲೋಕ ಬರುತ್ತದೆ’ ಎಂದರೆ ಅದು ಹೌದು. ಅದು ಬರೆದೇ ವಿಧಿಯಿಲ್ಲ. ಏಕೆಂದರೆ ಅದು ನನ್ನ ಜಾತಿ; ನಮ್ಮ ಜಾತಿ ಸಮಾಜದಲ್ಲಿ ನಮಗೆ ನಮ್ಮ ನಮ್ಮ ಜಾತಿಗಳು ಗೊತ್ತಿರುವಷ್ಟು ಬೇರೆ ಜಾತಿಗಳು ಗೊತ್ತಿರುವುದಿಲ್ಲ. ಪಟ್ಟಣದಲ್ಲಿ ಬೆಳೆದವರಿಗಂತೂ ಗೊತ್ತಿರಲು ಸಾಧ್ಯವೇ ಇಲ್ಲ. ಆದರೆ ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರಿಗೆ ಬೇರೆ ಜಾತಿಗಳ ಬಗ್ಗೆಯೂ ಸ್ವಲ್ಪ ತಿಳಿದಿರುವುದು ಸಾಧ್ಯವಿತ್ತು. ಪುರೋಹಿತರಾಗಿದ್ದ ನನ್ನ ಅಜ್ಜನಿಗೆ ಹಳ್ಳಿಯ ಎಲ್ಲ ಜಾತಿಗಳ ಬಗ್ಗೆ ಗೊತ್ತಿತ್ತು.

ಸ್ವತಃ ಮೊಗಳ್ಳಿ ಗಣೇಶ್‌, ಕುವೆಂಪು ಅವರ ಮನೆ ನೋಡಿದ ನಂತರ ಮೇಳಿಗೆಯಲ್ಲಿರುವ ನಾನು ಹುಟ್ಟಿದ ಮನೆ ನೋಡಿ ಆಶ್ಚರ್ಯ ಪಟ್ಟರಂತೆ. ಇದನ್ನವರು ನನಗೆ ಕರೆದು ಹೇಳಿದರು: ‘ಅದೆಂಥ ಸಣ್ಣ ಗುಡಿಸಲು, ಈಗಲೂ ಹಾಗೆಯೇ ಇದೆ’. ನನಗೆ ಈಗಲೂ ಹಾಗೆಯೇ ಬಡವರಾಗಿರುವ ಸಂಬಂಧಿಕರಿದ್ದಾರೆ. ಆದ್ದರಿಂದ ಬ್ರಾಹ್ಮಣರ ಜತೆ ನನಗೆ ಎಷ್ಟೇ ಜಗಳವಿದ್ದರೂ ನನಗವರ ಬಗ್ಗೆ ಒಂದು ಅನುಕಂಪವೂ ಇರಬೇಕಾಗುತ್ತದೆ. ಇಲ್ಲದೇ ಹೋದರೆ ನನಗವರನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗದೆ ಅಮಾನವೀಯವಾಗಿ ವರ್ತಿಸಿಬಿಡಬಹುದು. ನನ್ನ ಮಕ್ಕಳು ಬ್ರಾಹ್ಮಣರಲ್ಲ,  ನನ್ನ ಹೆಂಡತಿ ಬ್ರಾಹ್ಮಣ ಕುಲಕ್ಕೆ ಸೇರಿದವಳಲ್ಲ. ಆದರೆ ನಾನು ಬ್ರಾಹ್ಮಣ ಲೋಕದಿಂದ ಬಂದಿದ್ದೇನೆ. ನನಗೆ ಅಲ್ಲಿನ ಬಡತನ ಗೊತ್ತು, ದುಃಖ ಗೊತ್ತು, ಸುಖ ಗೊತ್ತು, ಅದಕ್ಕೂ ನಾನು ಮಿಡಿಯಬೇಕು. ಇಲ್ಲದೇ ಹೋದರೆ ನಾನು ಬರೇ ಐಡಿಯಾಲಜಿಕರ್ ಆಗಿಬಿಡುತ್ತೇನೆ.

ಕೆ.ಟಿ. ಶಿವಪ್ರಸಾದ್ ಹೇಳಿದಂತೆ ನಾವೇನಾದರೂ ಸಂಪೂರ್ಣವಾಗಿ ಐಡಿಯಾಲಜಿಕಲ್ ಆಗಿಬಿಟ್ಟರೆ ಓದುಗನಿಗೆ ನಮ್ಮೊಳಕ್ಕೆ ಪ್ರವೇಶವೇ ದೊರೆಯುವುದಿಲ್ಲ. ಏಕೆಂದರೆ ನಮ್ಮ ಸುತ್ತ ಐಡಿಯಾಲಜಿಯ ಗೋಡೆ ಕಟ್ಟಿಕೊಂಡಿರುತ್ತೇವೆ. ಓದುಗನಿಗೆ ಪ್ರವೇಶ ಇರಬೇಕಾದರೆ ನನ್ನ ಲೋಕದ ಬಗ್ಗೆ ನನಗೇ ಅನುಮಾನವಿರಬೇಕು. ಕುವೆಂಪುಗೆ ಒಕ್ಕಲಿಗೆ ಲೋಕದ ಬಗ್ಗೆ ಅನುಮಾನ ಇಲ್ಲದೇ ಇದ್ದಿದ್ದರೆ ಅವರು ದೊಡ್ಡ ಬರೆಹಗಾರ ಆಗುತ್ತಲೇ ಇರಲಿಲ್ಲ. ಕಾರಂತರಿಗೆ ಬ್ರಾಹ್ಮಣ ಲೋಕದ ಬಗ್ಗೆ ಅನುಮಾನವಿಲ್ಲದೇ ಇದ್ದಿದ್ದರೆ ಅವರು ದೊಡ್ಡ ಲೇಖಕರಾಗಿ ಬೆಳೆಯುತ್ತಲೆ ಇರಲಿಲ್ಲ. ಆದ್ದರಿಂದ ಯಾವ ಲೇಖಕನೂ ಕೇವಲ ಆ ಜಾತಿಗೆ ಮಾತ್ರ ಸೇರಿದವನಾಗಿರುವುದಿಲ್ಲ. ಹೀಗಾದಾಗ ಉಳಿದವರಿಗೂ ಅಲ್ಲೊಂದು ಅವಕಾಶ ಸೃಷ್ಟಿಯಾಗುತ್ತದೆ. ಈಗ ಶಿವಪ್ರಸಾದ್ ಅವರ ಚಿತ್ರವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಒಂದು ಅವಕಾಶ ಅಥವಾ ಶೂನ್ಯ ಇಲ್ಲದೇ ಇದ್ದರೆ ಅದರೊಳಕ್ಕೆ ನನಗೆ ಪ್ರವೇಶವಿರುವುದಿಲ್ಲ. ಅದು ನನಗೂ ಕೂಡಾ ಬರೆಯುವಾಗ ತೆರೆದಿಟ್ಟಿರುವ ಅವಕಾಶವಾಗಿರುತ್ತದೆ.

ಮೊಗಳ್ಳಿಯವರ ಪದ್ಯಗಳನ್ನು ಓದುವಾಗ ನಾನು ಬಹಳ ಒಳ್ಳೆಯ ಪದ್ಯಗಳು ಯಾವುವು ಎಂದು ಗುರುತು ಮಾಡಿಕೊಳುತ್ತಾ ಹೋದೆ. ‘ನದಿಯ ಸಂಬಂಧ’, ನಿನ್ನೆಯಿಂದಲೂ, ಯಾರು ಊರಲ್ಲಿ, ದರ್ವೇಶಿ, ಹಳ್ಳಿಯ…., ತನುವಿನೊಳಗೊಂದು ಕಿಚ್ಚು, ಕೈವಾಡ, ಮಿಣುಕು ಹುಳ, ಪ್ರಾರ್ಥನೆ, ಕ್ರಿಯೆ, ದೇವಸ್ಮಶಾನ… ಹೀಗೆ ಗುರುತು ಮಾಡಿಕೊಳ್ಳುತ್ತಾ ಹೋಗುವಾಗ ಕೆಲವನ್ನು ಓದಿ ಬಹಳ ಸಂತೋಷವಾಯಿತು. ಯಾಕೆಂದರೆ ಈ ಕವಿತೆಗಳು ಮೊಗಳ್ಳಿ ಅವರ ಎಲ್ಲಾ ತಕರಾರಿನ ಒಳಗಿದ್ದುಕೊಂಡೂ ಅದನ್ನು ಮೀರಿ ಕನ್ನಡಕ್ಕೆ ಬರುವ ಲೇಖಕ, ಕನ್ನಡದೊಳಗಿನ ನಮ್ಮ ಜಾತಿಯವರು, ನಮ್ಮವರು ಎಂಬ ಭಾವನೆಯನ್ನು ಹುಟ್ಟಿಸಿದವು.

ಮೊಗಳ್ಳಿಯವರ ‘ಅನಾದಿ’ಯನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿ ಮುನ್ನುಡ ಬರೆದಿರುವವರು ಭಾರತದ ಅತ್ಯುತ್ತಮ ಚಿತ್ರಕಲಾಕಾರರಲ್ಲಿ ಒಬ್ಬರಾಗಿರುವ ಕೆ.ಟಿ. ಶಿವಪ್ರಸಾದ್. ಅವರ ಎಲ್ಲಾ ಕೃತಿಗಳಲ್ಲೂ ಅವರು ಹಾಕದೇ ಇದ್ದರೂ ಇರುವಂಥ ರುಜುವೊಂದು ಈ ಮುನ್ನುಡಿಯಲ್ಲೂ ಇದೆ. ಆದರೆ ನನಗೆ ಈ ಕತೆಗಳ ಬಗ್ಗೆ ಕೆಲವು ತಕರಾರುಗಳಿವೆ. ಈ ಪುಸ್ತಕದಲ್ಲೊಂದು ಹಿಂಸೆಯ ಮೀಮಾಂಸೆ ಇದೆ. ಇದು ಬಹಳ ದೊಡ್ಡ ಲೇಖಕರಲ್ಲೆಲ್ಲಾ ಇರುವಂಥದ್ದು.

ಪ್ರೇಮಚಂದರ ಒಂದು ಕತೆ ಇದೆ. ಅದರ ಹೆಸರು ‘ಹೆಣದ ಬಟ್ಟೆ’ ಎಂದೇನೋ ಇರಬೇಕು. ಅದರಲ್ಲಿಬ್ಬರು ದಲಿತರು – ಒಬ್ಬ ಅಪ್ಪ ಮತ್ತು ಮಗ- ಎಷ್ಟು ಕಡು ಬಡವರೆಂದರೆ ಆ ಮುದುಕನಿಗೆ ಸತ್ತು ಹೋಗಿರುವ ತನ್ನ ಸೊಸೆಯನ್ನು ಹೂಳಬೇಕು. ಅದಕ್ಕೊಂದು ಬಟ್ಟೆ ತರಲು ಇಬ್ಬರೂ ಒಡೆಯರ ಮನೆಗೆ ಹೋಗಿ ಅಂಗಲಾಚುತ್ತಾರೆ, ಭಿಕ್ಷೆ ಬೇಡುತ್ತಾರೆ. ಸ್ವಲ್ಪವೂ ಸ್ವಮರ್ಯಾದೆ ಇಲ್ಲದೆ ಅತ್ಯಂತ ಕೀಳು ಸ್ಥಿತಿಗೆ ಹೋಗಿರುತ್ತಾರೆ. ಬಟ್ಟೆಗೆಂದು ಅಂಗಲಾಚಿ ಪಡೆದ ಹಣವನ್ನು ಬಳಸಿಯೇ ಹೆಂಡ ಖರೀದಿಸಿ ಕುಡಿದು ಮಲಗಿಬಿಡುತ್ತಾರೆ.

ನಾನು ಈ ಕಥೆಯನ್ನು ಅಯೋವಾದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿತ್ತು. ನಮ್ಮಲ್ಲಿ ಒಬ್ಬರು ಎಕ್ಸಿಸ್ಟೆನ್ಷಿಯಲಿಸ್ಟ್ ಥಿಯರಿಟೀಷಿಯನ್ ಇದ್ದಳು. ಆಕೆ ಜಪಾನೀ ಸಾಹಿತ್ಯವನ್ನು ಓದಿದವಳು. ಆಕೆ ಇದು ಒಂದು ಎಕ್ಸಿಸ್ಟೆನ್ಷಿಯಲಿಸ್ಟ್ ಎಂದು ವಾದಿಸುತ್ತಿದ್ದಳು. ಒಬ್ಬ ತನ್ನ ಎಲ್ಲಾ ಮಾನವೀಯತೆಯನ್ನು ಕಳೆದುಕೊಂಡು ಕೇವಲ ತನ್ನ ಇಂದ್ರಿಯದ ಭೋಗಕ್ಕೆ ಮಾತ್ರ ಬದ್ಧನಾಗಿರಲು ಸಾಧ್ಯ ಎನ್ನುವ ಮನುಷ್ಯನ ಆದಿಮವಾದ ಸ್ಥಿತಿಯನ್ನು ತೋರಿಸುವ ಕಥೆ ಎಂಬುದು ಆಕೆಯ ವಾದ. ಇದಕ್ಕೆ ನನ್ನದೊಂದು ಪ್ರತಿವಾದವಿತ್ತು. ಅದನ್ನು ಸೂಕ್ಷ್ಮದಲ್ಲಿ ಹೇಳಿಬಿಡುತ್ತೇನೆ. ಇಡೀ ಸಮಾಜ ಒಂದು ಸಮುದಾಯವನ್ನು ಅತ್ಯಂತ ಕೀಳೆಂದು ಭಾವಿಸುತ್ತಾ ಹೋದರೆ ಆ ಸಮುದಾಯ ತಾನೇ ಕೀಳೆಂದುಕೊಂಡು ಬಿಡುವುದು. ತಮ್ಮನ್ನು ಸಮಾಜ ಹೇಗೆ ನೋಡುತ್ತಿದೆಯೋ ಹಾಗೆಯೇ ಆಗಿಬಿಡುವುದು. ಹೀಗಾದಾಗ ಅವರಿಗೆ ಸ್ವಮರ್ಯಾದೆ ಎಂಬುದಿರುವುದಿಲ್ಲ. ಇದನ್ನು ಹೇಳುತ್ತಿರುವಾಗಲೇ ನನಗೆ ಕಾರಂತರ ‘ಚೋಮನ ದುಡಿ’ ನೆನಪಾಯಿತು. ಅಲ್ಲಿ ಚೋಮ ಬರೇ ಭೂಮಿಯನ್ನು ಕೇಳುತ್ತಿರುವುದಿಲ್ಲ. ಸ್ವಮರ್ಯಾದೆಯನ್ನೂ ಕೇಳುತ್ತಿರುತ್ತಾನೆ.

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ಬರುವ ನಾಯಿ ಗುತ್ತಿ ಎಂಬ ಹೊಲೆಯ ಒಂದು ರೀತಿಯಲ್ಲಿ ಸ್ವತಂತ್ರನಾದ ವ್ಯಕ್ತಿ. ಇಡೀ ಪ್ರಕೃತಿಗೆ ಸೇರಿದವನು. ಯಾರು ಹೇಗೆ ಅವನನ್ನು ನೋಡಿಕೊಂಡರೂ ಅವನೂ ಸ್ವತಂತ್ರನಾಗಿಯೇ ಉಳಿಯುತ್ತಾನೆ. ಇದರ ಬಗ್ಗೆ ಹೇಳುತ್ತಾ ನಾನು ‘ಕುವೆಂಪು ಅವರಿಗೆ ಹೀಗೆ ಬರೆಯಲು ಸಾಧ್ಯವಾದದ್ದು ಅವರೊಂದು ಲೋ ಮೈಮೆಟಿಕ್ ಮೂಡ್‌ನಲ್ಲಿ (ಲಘು ಅನುಕರಣ ಪದ್ಧತಿ) ಬರೆಯುತ್ತಾರೆ’. ಎಂದೆ. ದೇವನೂರು ಮಹಾದೇವರ ‘ಒಡಲಾಳ’ವೂ ಈ ರೀತಿಯ ಲಘು ಅನುಕರಣ ಪದ್ಧತಿಯಲ್ಲಿದೆ. ಈ ಪದ್ಧತಿಯಲ್ಲಿ ಬರೆಯುವಾಗ ಅದೊಂದು ಕಾಮಿಡಿ ಆಗಿಬಿಡುತ್ತದೆ. ಪರಿಣಾಮವಾಗಿ ಅದಕ್ಕೊಂದು ಬಿಡಗಡೆಯೂ ಸಿಕ್ಕಿಬಿಡುತ್ತದೆ.

‘ಅನಾದಿ’ಯಲ್ಲಿ ಕೆಂಚಯ್ಯ ಎಂಬ ಪಾತ್ರವಿದೆ. ಅವನು ಬಹಳ ಹೊಲಸಾದ ಮನುಷ್ಯ. ಒಂದು ಮಗುವನ್ನು ಕರೆದುಕೊಂಡು ಹೋಗಿ ಕೊಂದು ಬಿಡುತ್ತಾನೆ. ಹಾಗೆಯೇ ಅಮಾಸೆಯ ಹೆಂಡತಿ ಕೂಡಾ ಮಹಾ ಜಗಳಗಂಟಿ. ಅಮಾಸೆ ಒಬ್ಬ ಅದ್ಭುತವಾದ ಕಥೆಗಳನ್ನು ಹೇಳಬಲ್ಲವನು. ಅವನು ಹೊಲೆಯರಿಗಿಂತ ಕೀಳಾದವನು. ಆದರೆ ಕಥೆಯನ್ನು ಹೇಳುವಾಗ ಅವನೇ ರಾಜಕುಮಾರನಾಗಿಬಿಡುತ್ತಾನೆ. ತನ್ನ ಕಲ್ಪನೆಯಲ್ಲಿ ತನ್ನನ್ನು ತಾನು ಮೀರುತ್ತಾನೆ. ಅದನ್ನು ಕೇಳುವ ಅಜ್ಜ ಮತ್ತು ಅದಕ್ಕೆ ಒಬ್ಬ ಹೆಂಗಸು-ಇದನ್ನು ಕೆ.ಟಿ. ಶಿವಪ್ರಸಾದರೂ ತೋರಿಸಿಕೊಟ್ಟರು- ಮಿಡಿಯುತ್ತಾಳೆ. ಇದು ಶಿವಪ್ರಸಾದ್ ಹೇಳಿದಂತೆ ಬಹಳ ಅದ್ಭುತವಾದ ಒಂದು ತೀರ್ಮಾನ.

ಆದರೆ ಬಹಳ ಕ್ರೂತಿಗಳಾಗಿದ್ದಾರಲ್ಲ ಅವರು ವಿನಾಕಾರಣ ಕ್ರೂರಿಗಳಾಗಿದ್ದಾರೆ ಎಂದು ಮೊಗಳ್ಳಿ ಹೇಳುತ್ತಿದ್ದಾರೋ? ಅಥವಾ ಜನ ಅವರನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಪ್ರೇಮ್‌ಚಂದ್‌ಕತೆಯ ಪಾತ್ರಗಳು ಅಭಿಮಾನ ಶೂನ್ಯರಾಗಿರುವಂತೆ ಇವರೂ ಆಗಿದ್ದಾರೆಯೋ? ಅಥವಾ ಇದೊಂದು ನಿಷ್ಕಾರಣವಾದ ಕ್ರೌರ್ಯವೋ?

ನಿಷ್ಕಾರಣವಾದ ಕ್ರೌರ್ಯವೆಂದು ಹೇಳುವುದಕ್ಕೆ ನನ್ನದೇನೂ ತಕರಾರಿಲ್ಲ. ಆದರೆ ಹೀಗೊಂದು ಕ್ರೌರ್ಯವಿದೆ ಎಂದು ನಮಗೆ ಗೊತ್ತಾದ ಕೂಡಲೇ ನಮ್ಮ ಮನಸ್ಸು ಬೌದ್ಧ ಮನಸ್ಸಾಗಿದ್ದರೆ ಅದು ಅತ್ಯಂತ ಗಂಭೀರವಾದ ಆಲೋಚನಾ ಪ್ರವಾಹವನ್ನು ಉಂಟು ಮಾಡುತ್ತದೆ. ಸೃಷ್ಟಿಯಲ್ಲಿ ಯಾಕೆ ಈ ಕ್ರೌರ್ಯವಿದೆ? ಅದು ಜಾತಿಯನ್ನು ಮೀರಿ ಯಾಕೆ ಇದೆ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಇದನ್ನು ಸಮಾಜಶಾಸ್ತ್ರೀಯವಾಗಿ ನೋಡಿದ ಕೂಡಲೇ ‘ಇವರೆಲ್ಲಾ ದಲಿತರು ಅದರಿಂದಾಗಿಯೇ ಅವರು ಹಾಗಾಗಿದ್ದಾರೆ’ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಎಕ್ಸಿಸ್ಟೆನ್ಷಿಯಲಿಸ್ಟ್ ಆಗಿ ನೋಡಿದಾಗ ಅಂಥದ್ದೊಂದು ಕ್ರೌರ್ಯ ಇರುತ್ತದೆ ಅಷ್ಟೇ ಎಂಬ ತೀರ್ಮಾನಕ್ಕೆ ಬರುತ್ತೇವೆ. ಬೌದ್ಧರಾಗಿ ನೋಡಿದಾಗ ಇನ್ನೂ ದೊಡ್ಡ ಸಮಸ್ಯೆ ಎದುರಾಗುತ್ತದೆ. ಷೇಕ್ಸ್‌ಪಿಯರ್‌ನಲ್ಲಿ ನಾವಿದನ್ನು ಕಾಣಬಹುದು. ಒಥೆಲೊದ ಇಯಾಗ ಯಾವ Motive ಕೂಡಾ ಇಲ್ಲದೆ ನಾಶ ಮಾಡಲು ಹೊರಡುತ್ತಾನೆ. ಒಥೆಲೋ ಮತ್ತು ಡೆಸ್ಡೆಮೋನಾಳ ಪ್ರೇಮವನ್ನು ನಾಶ ಮಾಡುವುದಕ್ಕೆ ಬೇಕಾದ ಎಲ್ಲವನ್ನೂ ಮಾಡುತ್ತಾನೆ. ಇದನ್ನು ಓದಿದ ಕೋಲ್ರಿಜ್ ಇಯಾಗೋನ ಗುಣವನ್ನು motive less malignity ಎಂದು ಕರೆದ.

ಈ ಎಲ್ಲಾ ತಾತ್ವಿಕವಾದ ಆಲೋಚನೆಗಳಿಗೆ ಒಡ್ಡಿಕೊಳ್ಳದೇ ಕ್ರೌರ್ಯವನ್ನು ಮೊಗಳ್ಳಿ ಸೃಷ್ಟಿಸಿರಬಹುದು ಎಂಬ ಅನುಮಾನ ನನಗಿದೆ. ಸೌಂದರ್ಯವನ್ನು ಸೃಷ್ಟಿಸುವಾಗ ಮೊಗಳ್ಳಿಗೆ ಪ್ರಶ್ನೆಗಳೇ ಇಲ್ಲ. ಪ್ರಕೃತಿಯ ಪರಿಧಿಯೊಳಗೆ ಬರುವವರೆಲ್ಲಾ ಅತ್ಯಂತ ಸುಂದರರಾದ ವ್ಯಕ್ತಿಗಳಾಗಿ ಮೂಡಿಬಿಡುತ್ತಾರೆ.

ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ವಾದವೂ ಇದೆ. Evil ಎಂಬುದೊಂದಿದೆ. ಆದ್ದರಿಂದ ವ್ಯವಸ್ಥೆ ಈ Evil ಅನ್ನು ಹತ್ತಿಕ್ಕಲಿಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಬೇಕು. ಪೊಲೀಸ್ ಬೇಕು, ಸೈನ್ಯ ಬೇಕು ಹೀಗೆ. ಒಂದು ಬಾಂಬ್ ಸ್ಫೋಟಿಸಿದ ಕೂಡಲೇ ಎಲ್ಲರೂ ಇದನ್ನೇ ಚರ್ಚಿಸುತ್ತಾರೆ. ಕಟ್ಟುನಿಟ್ಟಾದ ಕಾನೂನುಗಳನ್ನು ಮಾಡಿ ಪ್ರಭುತ್ವಕ್ಕೆ ಶಕ್ತಿ ತುಂಬಬೇಕು ಎಂಬುದು ಈ ಚರ್ಚೆಗಳ ಸಾರ. ಇಂಥ ಕಾನೂನುಗಳನ್ನು ಒಮ್ಮೆ ಮಾಡಿಬಿಟ್ಟರೆ ಅವರು ನನ್ನನ್ನೂ ಸೇರಿದಂತೆ ಯಾರನ್ನು ಬೇಕಾದರೂ ಅನುಮಾನಿಸಿ ಜೈಲಿಗೆ ತಳ್ಳಿಬಿಡಬಹುದು. ಆದರೆ ಪ್ರಭುತ್ವದ ಕೈಯಲ್ಲಿ ಈ ಬಗೆಯ ಶಕ್ತಿಯೇ ಇಲ್ಲ ಎಂದು ಗೊತ್ತಾದರೆ ಶಾಲೆಗೆ ಹೋದ ನಮ್ಮ ಮಕ್ಕಳು ಹಿಂದಿರುಗುತ್ತಾರೆಯೋ ಇಲ್ಲವೋ, ನಮ್ಮ ಮೇಲೆ ದಾರಿಯಲ್ಲಿ ಯಾರಾದರೂ ದಾಳಿ ನಡೆಸಿಬಿಡಬಹುದೇ ಎಂಬ ಭಯಗಳೂ ನಮ್ಮನ್ನು ಕಾಡುತ್ತವೆ. ಪರಿಣಾಮವಾಗಿ ಪ್ರಭುತ್ವಕ್ಕೆ ಕೆಲವು ಶಕ್ತಿಗಳಿರಬೇಕೆಂದು ಬಯಸಲಾರಂಭಿಸುತ್ತೇವೆ.

ಆದ್ದರಿಂದ ಈ ಹಿಂಸಿಸುವ ಅಧಿಕಾರವನ್ನು ವ್ಯಕ್ತಿಗೆ ಕೊಡದೆ ಪ್ರಭುತ್ವಕ್ಕೆ ಕೊಡುತ್ತೇವೆ. ಪ್ರಭುತ್ವ ಅದನ್ನು ವ್ಯಕ್ತಿಯ ವಿರುದ್ಧ ಅತಿಯಾಗಿ ಬಳಸಿಬಿಟ್ಟರೆ ಅದನ್ನು ವಿರೋಧಿಸಿ ವೀರಪ್ಪನ್‌ನಂಥವರು ಹುಟ್ಟಿಕೊಂಡುಬಿಡುತ್ತಾರೆ. ಅಂಥವರನ್ನು ಆರಾಧಿಸುವವರೂ ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ಭಾರತೀಯ ಸಂದರ್ಭದಲ್ಲಿ ನಡೆಸಬೇಕಾದ ಹಿಂಸೆಯ ಮೀಮಾಂಸೆ ಬಹಳ ಗಾಢವಾದದ್ದೇ ಆಗಿರಬೇಕಾಗುತ್ತದೆ. ಇಲ್ಲಿ ಜಾತಿಯ ಹಿಂಸೆ ಇದೆ, ಪ್ರಭುತ್ವದ ಹಿಂಸೆ, ಈ ಹಿಂಸೆಗಳನ್ನು ವಿರೋಧಿಸುವ ಹಿಂಸೆಯೂ ಇದೆ.

ಕೊನೆಯಲ್ಲಿ ಒಂದು ಮಾತು. ಇದು ವೈದಿಕ ಲೋಕಕ್ಕೂ ಮೊಗಳ್ಳಿಯವರ ಲೋಕಕ್ಕೂ ಇರುವ ಸಂಬಂಧದ ಕುರಿತ ಮಾತು. ಈ ಜಾಗತೀಕರಣದ ಕಾಲದಲ್ಲಿ ನಾಮ ಹಾಕಿದವರು, ಜುಟ್ಟು ಬಿಟ್ಟವರೆಲ್ಲಾ ಅಪ್ರಸ್ತುತರಾಗುತ್ತಿದ್ದಾರೆ. ಪರಿಣಾಮವಾಗಿ ಬಹಳ ಜನ ಎನ್‌ಆರ್‌ಐ ಗುರುಗಳು ಬಂದುಬಿಟ್ಟಿದ್ದಾರೆ. ನನ್ನ ಅಜ್ಜನಂಥ ಜುಟ್ಟು ಬಿಟ್ಟ ಬ್ರಾಹ್ಮಣರು ಪೌರೋಹಿತ್ಯದಲ್ಲಿ ಜೀವನ ನಡೆಸುತ್ತಿದ್ದವರು. ಎಲ್ಲಾ ಜಾತಿಯವರಿಗೂ ಪೌರೋಹಿತ್ಯ ಮಾಡಬೇಕಾಗಿದ್ದರಿಂದ ಅವರಿಗೆ ಗೌಡರ ಜತೆ, ದಲಿತರ ಜತೆಯೆಲ್ಲಾ ಒಂದು ಸಂಬಂಧವಿತ್ತು. ಈ ಸಂಬಂಧದಲ್ಲಿ ಅವರಿಗೊಂದು ಯಜಮಾನಿಕೆಯ ಸ್ಥಾನವಿತ್ತು ಎಂಬುದು ನಿಜವಾದರೂ ಅವರು ದಕ್ಷಿಣೆಯನ್ನೂ ಪಡೆಯುತ್ತಿದ್ದರು. ಅಂದರೆ ಅದೊಂದು ದ್ವಂದ್ವದ ಸಂಬಂಧ. ಯಜಮಾನಿಕೆಯ ಜತೆಗೆ ಭಿಕ್ಷುಕನೂ ಆಗಿರುವ ಸಂಬಂಧ.

ಈ ಪುರೋಹಿತ ವರ್ಗದ ಮೇಲೆ ಅದೆಷ್ಟು ಕೋಪ ಮಾಡಿಕೊಂಡರೂ ಐವತ್ತು ವರ್ಷದ ಹಿಂದೆ ಆ ವರ್ಗದ ಮೇಲಿದ್ದ ಕೋಪಕ್ಕೆ ಇದ್ದ ಬೆಲೆ ಈಗ ಇಲ್ಲ. ಈಗ ನಮ್ಮ ಕೋಪಕ್ಕೆ ಒಳಗಾಗಬೇಕಾದ ಬೇರೆಯೇ ಒಂದು ವರ್ಗವಿದೆ. ಈಗ ಪತ್ರಿಕೆಗಳ ಸಂಪಾದಕರು, ಮಾಲೀಕರು, ದೊಡ್ಡ ದೊಡ್ಡ ಟಿ.ವಿ. ಚಾನೆಲ್‌ಗಳಾದ ಸಿಎನ್‌ಎನ್-ಐಬಿಎನ್, ಎನ್‌ಡಿಟಿವಿಯಂಥವುಗಳನ್ನು ನಡೆಸುವವರು ಮತ್ತು ಐ.ಟಿ., ಬಿ.ಟಿಗಳನ್ನು ನಿಯಂತ್ರಿಸುವ ಕಂಪೆನಿಗಳಲ್ಲಿ ಎಲ್ಲಾ ಅಧಿಖಾರವೂ ಕೇಂದ್ರೀಕೃತವಾಗಿದೆ. ಈ ಅಧಿಕಾರದ ಪಲ್ಲಟವನ್ನು ತಿಳಿದುಕೊಂಡ ನಂತರ ಹಿಂದೆ ಸಾಂಪ್ರಾದಾಯಿಕ ವರ್ಗ ಮೇಲೆ ನಾನು ಮಾಡುತ್ತಿದ್ದ ಟೀಕೆಗಳನ್ನು ಮಾಡಲಾರದವನಾಗಿದ್ದೇನೆ. ಅದನ್ನೇ ನಾನು ಮೊಗಳ್ಳಿಗೂ ಹೇಳಲು ಇಷ್ಟಪಡುತ್ತೇನೆ.

ಇದರರ್ಥ ನನಗೆ ಸಿಟ್ಟು ಹೋಗಿದೆ ಎಂದಲ್ಲ. ಒಂದು ವೇಳೆ ನನಗೆ ಸಿಟ್ಟು ಹೋಗಿದ್ದರೂ ಬ್ರಾಹ್ಮಣರಿಗೆ ನಮ್ಮ ಮೇಲಿನ ಸಿಟ್ಟು ಹೋಗಿಲ್ಲ. ನನ್ನ ಮೇಲೊಂದು ಪುಸ್ತಕ ಬಂದಿದೆಯೆಂದು ಇತ್ತೀಚೆಗೆ ನನಗೆ ಜೋಗಿ ಹೇಳಿದರು. ಅದರಲ್ಲಿ ನನಗೆ ಬಂದಿರುವ ಎಲ್ಲಾ ಪ್ರಶಸ್ತಿಗಳನ್ನೂ ನಾನು ರಾಜಕೀಯ ಮಾಡಿಯೇ ಪಡೆದುಕೊಂಡಿದ್ದೇನೆಂದು ಆ ಬ್ರಾಹ್ಮಣ ಲೇಖಕ ಬರೆದಿದ್ದಾನಂತೆ. ನನಗೆ ವೈರಿಗಳು ಎಲ್ಲಾ ಕಡೆಯೂ ಇದ್ದಾರೆ. ನಾನು ಚಿನ್ನಸ್ವಾಮಿಯವರಿಗೂ ಇದನ್ನೇ ಹೇಳಲು ಇಷ್ಟಪಡುತ್ತೇನೆ-ನಿಮಗೆ ವೈರಿಗಳು ಎಲ್ಲಾ ಜಾತಿಯಲ್ಲೂ ಇದ್ದರೆ ಆಗಲೇ ಕ್ಷೇಮ! ನಿಮಗೆ ಸ್ವಲ್ಪ ದಲಿತರಲ್ಲಿಯೂ ವೈರಿಗಳಿದ್ದರೆ ಒಳ್ಳೆಯದು. ಇಲ್ಲದೇ ಇದ್ದರೆ ಇವನು ದಲಿತ ಕವಿ ಎಂಬುದನ್ನೇ ಇಟ್ಟುಕೊಂಡು ‘ದಲಿತ ಕವಿಗಳಲ್ಲೆಲ್ಲಾ ಅತ್ಯುತ್ತಮ ಕವಿ’ ಎಂಬ ಮಾತು ಬರಬಹುದು. ಅದು ಬಹಳ ಕೆಟ್ಟ ಹೊಗಳಿಕೆ.

ಮೊಗಳ್ಳಿ ದಲಿತ ಲೇಖಕರಲ್ಲಿ ಒಬ್ಬ ಒಳ್ಳೆಯ ಲೇಖಕ ಎಂದು ಹೇಳದೆ, ಮೊಗಳ್ಳಿ ನನ್ನ ಲೋಕದಲ್ಲಿ ಒಬ್ಬ ಒಳ್ಳೆಯ ಲೇಖಕ ಎಂದು ಹೇಳಲು ನನಗೆ ಸಾಧ್ಯವಾಗಬೇಕು. ಕನ್ನಡದಲ್ಲಿ ಅದಿನ್ನೂ ಸಾಧ್ಯವಾಗಿಯೇ ಉಳಿದಿದೆ. ನಾಮ ಹಾಕಿದ ಪು.ತಿ.ನ. ಜುಟ್ಟು ಬಿಟ್ಟಿರುವ ಮತ್ಯಾರೋ ಲೇಖಕರ ಜತೆ ಅವರ ನಾಮ ಅಳಿಸಿ, ಜುಟ್ಟು ಕತ್ತರಿಸಲು ಹೊರಟಿರುವ ಮೊಗಳ್ಳಿಯೂ ಒಬ್ಬ ಉತ್ತಮ ಲೇಖಕ ಎಂದು ಹೇಳುವ ಧೈರ್ಯ ಕನ್ನಡಕ್ಕೆ ಇವತ್ತಿಗೂ ಇದೆ.

ಕರ್ನಾಟಕದ ನಿಜವಾದ ಮತ್ತು ಆಳವಾದ ಚಿಂತನೆ ನಡೆದಿರುವುದು ಕನ್ನಡ ಸಾಹಿತ್ಯದ ಲೋಕದಲ್ಲಿ. ಬೇಂದ್ರೆ, ಕುವೆಂಪು, ಪುತಿನ, ತೇಜಸ್ವಿ, ಲಂಕೇಶರಲ್ಲಿ ಅಷ್ಟೇಕೆ ನಮ್ಮೆಲ್ಲರಲ್ಲೂ ಅದು ನಡೆದಿದೆ. ಹೊಸತಾಗಿ ಬರೆಯುವ ಎಲ್ಲಾ ಲೇಖಕರ ಜತೆಗೂ ನನಗೆ ಸಂಬಂಧವಿದೆ. ಒಂದು ಸಾರಿ ಪು.ತಿ.ನ ಅವರಲ್ಲಿಗೆ ಹೋದ ಯಾರೋ ದಲಿತರು ಗಾಂಧೀಯನ್ನು ಬೈದರಂತೆ. ಅದನ್ನು ಕೇಳಿಸಿಕೊಂಡ ಅವರು ‘ಯಾಕಪ್ಪ ಅವರನ್ನ ಬೈತೀರಿ, ನಾನು ಈ ಚಾವಡಿಯಲ್ಲಿ ನಿಮ್ಮ ಜತೆ ಮಾತನಾಡುವುದಕ್ಕೆ ಸಾಧ್ಯಮಾಡಿದ್ದೇ ಗಾಂಧಿ’ ಎಂದರಂತೆ. ಇದು ನಿಜ. ಏಕೆಂದರೆ ಗಾಂಧಿ ನನ್ನಂಥವರಿಗೆ ಒಂದು ಪಾಪ ಭಾವನೆ ಕೊಟ್ಟರೆ ಮೊಗಳ್ಳಿಯಂಥವರಿಗೆ ಕಿಚ್ಚು ಕೊಟ್ಟರು. ಮೊಗಳ್ಳಿಯಲ್ಲಿ ಕಿಚ್ಚು, ನನ್ನಲ್ಲಿ ಪಾಪ ಭಾವನೆ ಇಲ್ಲದೇ ಇದ್ದರೆ ಈ ಜಾತಿ ಸಮಾಜ ಕೇವಲ ಜಾತಿ ಸಮಾಜವಾಗಿಯೇ ಉಳಿದಿರುತ್ತಿತ್ತು. ದಲಿತರಲ್ಲಿ ಕಿಚ್ಚಿರಬೇಕು. ನಮ್ಮಲ್ಲೊಂದು ಪಾಪ ಭಾವನೆ ಇರಬೇಕು. ಕನ್ನಡ ಸಾಹಿತ್ಯ ಇವರೆಡನ್ನೂ ಸೃಷ್ಟಿ ಮಾಡಿದೆ. ಆದ್ದರಿಂದ ಬಸವರಾಜು ಅವರಿಗೆ ನಾನು ಹೇಳುವುದಿಷ್ಟೇ. ಕಿ.ರಂ. ಹೇಳಿದ ಹಾಗೆ ‘ತೆರೆದು ನೋಡದೆ ಇರಬೇಕು’ ಎಂಬ ಭಾವನೆಯಿಂದ ಮಾಡುವ ವಿಮರ್ಶೆ ಕೂಡಾ ಒಂದು ಕಾಲದ ಅಗತ್ಯ. ಹಾಗೆಯೇ ಕೆಲವು ಸತ್ಯದ ಬಾಗಿಲುಗಳನ್ನು ತೆರೆಯುವುದೇ ನಾವು ಅತಿಗೆ ಹೋದಾಗ. ಹೀಗೆ ಬಾಗಿಲನ್ನು ತೆರೆದ ನಂತರ ಕಾಣುವುದೇ ಬೇರೆ.

ಮೊಗಳ್ಳಿ ಬಾಗಿಲು ತೆರೆದಿದ್ದಾರೆ. ಈಗ ಒಳಗಿರುವುದನ್ನು ಸ್ವಲ್ಪ ನೋಡಲಿ. ಹಾಗೆಯೂ ನಮ್ಮವರಾಗಲೀ ಎಂದು ಹಾರೈಸಿ, ಮಹಾದೇವನಿಗೂ ನನಗೂ ಬಹಳ ಒಳ್ಳೆಯ ಸಂಬಂಧವಿರುವುದಕ್ಕೆ ಇರುವ ಮುಖ್ಯ ಕಾರಣ ನಾನು ಬ್ರಾಹ್ಮಣ ಅವರ ದಲಿತ ಎಂಬುದಲ್ಲ. ನಾವಿಬ್ಬರೂ ಮನುಷ್ಯರೂ ಎಂಬುದನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

(೨೦೦೮ ಅಕ್ಟೋಬರ್ ೧೪ ರಂದು ಮೊಗಳ್ಳಿ ಗಣೇಶ್ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾಡಿದ ಭಾಷಣ.)

* * *