ಯಂ ಪ್ರೌರಜಂತಂ ಅನುಪೇತಂ ಅಪೇತಕೃತ್ಯಂ
ದ್ವೈಪಾಯನೋ ವಿರಹಕಾತುರ ಆಜುಹಾವ
ಪುತ್ರೇತಿ ತನ್ಮಯತಯಾ ತರವೋಭಿನೇತುಃ
ತಂ ಸರ್ವ ಭೂತಹೃದಯಂ ಮುನಿಮಾನತೋಸ್ಮಿ
– ಭಾಗವತ

ವೇದಿಕೆಯ ಮೇಲಿರುವ ನನ್ನ ಪ್ರೀತಿಯ ಕವಿಗಳೇ ಮತ್ತು ನನಗೆ ಬಹಳ ದಿವಸದಿಂದ ಸ್ಪಂದಿಸುತ್ತಿರುವ ನನ್ನ ಅಪಾರ ಮಿತ್ರರೇ. ನಾನು. ಕೆ.ಆರ್. ನಗರಕ್ಕೆ ಬಂದ ಈ ದಿನವನ್ನು ನನ್ನ ಮಟ್ಟಿಗೆ ಒಂದು ಸಂಭ್ರಮದ ದಿನವಾಗಿ ಮಂಜುನಾಥ್ ಪರಿವರ್ತಿಸಿಬಿಟ್ಟಿದ್ದಾರೆ. ನನಗೆ ಇನ್ನೂ ನೆನಪಿದೆ. ಮಂಜುನಾಥ್‌ನನ್ನು ನನ್ನ ಹತ್ತಿರ ಕಳುಹಿಸಿದ್ದು ಶಿವರಾಮ ಐತಾಳರು. ಅವರು ಮೇಷ್ಟ್ರಾಗಿದ್ದರು. ಬಹಳ ವಿಚಿತ್ರವಾದ ಮನುಷ್ಯ, ಹುಚ್ಚು ಮನುಷ್ಯ. ಆದರೆ ಇವರು ಅಗಾಧ ತಿಳುವಳಿಕೆಯಿದ್ದ ಕನ್ನಡದ ಪಂಡಿತರಲ್ಲಿ ಒಬ್ಬರು. ನೀವು ಶಿವರಾಮ ಐತಾಳರನ್ನು ಓದಿರಬಹುದು. ಅವರು ಹೆಚ್ಚು ಬರೆಯಲಿಲ್ಲ. ಮಂಜುನಾಥನನ್ನು ನನ್ನ ಹತ್ತಿರ ಕಳುಹಿಸಿದಾಗ ಅವರು ಸಣ್ಣದೊಂದು ಕಾಗದ ಬರೆದಿದ್ದರು-‘ಈತನಿಗೊಂದು ಅಪಾರವಾದ ಶಕ್ತಿ ಇರುವ ಹಾಗೆ ಕಾಣಿಸುತ್ತದೆ. ಆದ್ದರಿಂದ ಇವನು ನಿಮ್ಮ ಹತ್ತಿರ ಒಡನಾಡಬೇಕು.’

ನನಗೆ ಐತಾಳರ ಈ ಕಾಗದ ಆಶ್ಚರ್ಯ ಹುಟ್ಟಿಸಿತ್ತು. ಏಕೆಂದರೆ ಅವರು ಬಂದಾಗಲೆಲ್ಲಾ ನನ್ನ ಹತ್ತಿರ ಜಗಳವಾಡುತ್ತಿದ್ದರು. ಆದರೂ ನನ್ನ ಮೇಲೆ ಅವರಿಗೆ ಇಷ್ಟೊಂದು ಅಭಿಮಾನವಿದೆಯಲ್ಲಾ ಎಂದು ಸಂತೋಷವೂ ಆಗಿತ್ತು. ಆಗಿನಿಂದಲೂ ನಾನು ಮಂಜುನಾಥನ ಕವಿತೆಯನ್ನು ಓದಲು ಶುರುಮಾಡಿದೆ. ಮೊದಮೊದಲು ಇಷ್ಟವಾಯಿತು. ಇಷ್ಟವಾಗಿದ್ದರಿಂದಲೇ ತುಂಬಾ ಒಳ್ಳೆಯ ಕಾವ್ಯವನ್ನು ಅಪೇಕ್ಷಿಸಿ ನಿಷ್ಠರುವಾಗಿ ವಿಮರ್ಶೆ ಮಾಡಿಕೊಂಡಿರುವುದಕ್ಕೆ ಸಾಧ್ಯವಾಯಿತು. ನನಗೆ ಏನನ್ನಿಸುತ್ತದೆಯೋ ಅದನ್ನು ಒಪ್ಪದೇ ಇರುವುದೂ ಕೂಡಾ ಅವರಿಗೆ ಸಾಧ್ಯವಿದೆ ಎಂದಾಗ ನಾನು ಹೆಚ್ಚು ನಿಷ್ಠುರವಾಗಿ ಹೇಳುವುದು ಸಾಧ್ಯವಾಗುತ್ತದೆ. ನನಗೆ ಅಡಿಗರ ಜತೆ ಇದ್ದದ್ದು ಇಂಥದ್ದೇ ಸಂಬಂಧ. ನನಗೆ ಏನು ಬೇಕಾದರೂ ಹೇಳುವುದು ಸಾಧ್ಯವಾಗುತ್ತಿತ್ತು. ಕೆಲವನ್ನು ಅವರು ಒಪ್ಪುತ್ತಿದ್ದರು. ಕೆಲವನ್ನು ಒಪ್ಪುತ್ತಿರಲಿಲ್ಲ. ಹಾಗೆಂದು ಸಂಬಂಧಕ್ಕೇನೂ ಧಕ್ಕೆ ಬರಲಿಲ್ಲ.

ಮಂಜುನಾಥ್ ಜತೆ ಇಂಥದ್ದೊಂದು ಸಂಬಂಧ ನನಗೆ ಆತನ ಬಹಳ ಚಿಕ್ಕ ವಯಸ್ಸಿನಿಂದಲೇ ಸಾಧ್ಯವಾಗಯಿತು. ಆಮೇಲೆ ಅವರು ಕೆ.ಆರ್. ನಗರದ ವಾಸಿಯಾಗಿ ಇಲ್ಲಿಯೇ ಇದ್ದು ಬರೆಯತೊಡಗಿದರು. ಮಂಜುನಾಥನ ಪದ್ಯಗಳನ್ನು ಓದುತ್ತಿರುವಾಗ ಮಹಾರಾಷ್ಟ್ರದ ಕವಿ ವಿಂದಾ ಕರಂದೀಕರ್ ಅವರು ಹೇಳಿದ ಒಂದು ಘಟನೆ ನೆನಪಾಗುತ್ತದೆ. ಅವರೊಂದು ಸಾರಿ ಅವರೊಬ್ಬರೇ ಕುಳಿತು ಖಾನ್ ಸಾಹೇಬರ್ ಸಂಗೀತ ಕೇಳಿಸಿಕೊಂಡರಂತೆ. ಖಾನ್ ಸಾಹೇಬರು ಗಂಟೆ ಗಟ್ಟಳೆ ಹಾಡುವಂಥವರು. ಒಂದು ರಾಗವನ್ನು ವಿಸ್ತಾರವಾಗಿ ಹಾಡಿ ಮುಗಿಸಿದ ನಂತರ ವಿಂದಾ ಕಂರಂದೀಕರ್ ಹೇಳಿದರಂತೆ ‘ನಮ್ಮ ಸಂಗೀತ ಹೇಗಿರಬೇಕೆಂದರೆ ನೀವು ಕೇಳಿಸಿಕೊಳ್ಳುವಾಗ ಕೊಂಚ ಕಡಿಮೆಯಾದರೆ ತುಂಬಾ ಕಡಿಮೆಯಾಯಿತು ಅನ್ನಿಸಬೇಕು. ಕೊಂಚ ಹೆಚ್ಚಾದರೆ ತುಂಬಾ ಹೆಚ್ಚಾಯಿತು ಅನ್ನಿಸಬೇಕು. ಸಂಗೀತವೂ ಒಂದು ಶಿಲ್ಪದ ಹಾಗೆ ಇರಬೇಕು’. ಸರಿಯಾಗಿ ಕಡೆದ ಶಿಲ್ಪಕ್ಕೆ ಇಂಥದ್ದೊಂದು ಗುಣವಿರುತ್ತದೆ. ಯಾವುದು ಹೆಚ್ಚಾದರೂ ಕಡಿಮೆಯಾದರೂ ಅದು ಢಾಳಾಗಿ ಕಾಣಿಸುತ್ತದೆ. ಅದೊಂದು ಹದದಲ್ಲೇ ಇರಬೇಕು. ಮಂಜುನಾಥ್ ಇಂಥದ್ದೊಂದು ಹದದಲ್ಲಿ ಕಾವ್ಯವನ್ನು ಸೃಷ್ಟಿ ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.

ವಿಂದಾ ಕರಂದೀಕರ್ ಅವರ ಒಂದು ಕವಿತೆ ಇದೆ. ಇದು ಲೌಕಿಕ ಮತ್ತು ಅಲೌಕಿಕತೆಯ ನಡುವೆ ಇರುವ ಸಂಬಂಧದ ಬಗ್ಗೆ ಹಾಸ್ಯದ ಛಾಯೆ ಇರುವ ಪದ್ಯ. ಇದನ್ನು ಅವರು ಮರಾಠಿಯಲ್ಲಿ ಓದಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಹಾಗೆಯೇ ಅವರು ನನಗಾಗಿ ಅದನ್ನು ಸ್ವಲ್ಪ ಮಟ್ಟಿಗೆ ಇಂಗ್ಲಿಷ್‌ಗೆ ಅನುವಾದಿಸಿಯೂ ವಿವರಿಸಿದ್ದರು.

ಮಹಾರಾಷ್ಟ್ರದಲ್ಲಿ ವಾರ್ಖರಿ ಸಂಪ್ರದಾಯದಲ್ಲಿ ವಿಠಲನನ್ನು ನೋಡುವುದಕ್ಕೆ ಎಲ್ಲರೂ ಭಜನೆ ಮಾಡಿಕೊಂಡು ನೂರಾರು ಮೈಲಿ ಪಾದಯಾತ್ರೆ ಮಾಡುತ್ತಾರೆ. ದಾರಿಯುದ್ದಕ್ಕೂ ಕೀರ್ತನೆಗಳಿರುತ್ತವೆ. ದಾರಿಯಲ್ಲಿಯೇ ಊಟ. ವಾರ್ಖರಿಯೇ ಒಂದು ದೊಡ್ಡ ಸಂಪ್ರದಾಯ. ಒಂದು ಸಾರಿ ಹೀಗೆ ಮರಾಠಿಯ ದೊಡ್ಡ ಕವಿ ತುಕಾರಾಮ್ ಹೋಗುತ್ತಿದ್ದ. ಅವನಿಗೆ ದಾರಿಯಲ್ಲಿ ಇದ್ದಕ್ಕಿದ್ದಂತೇ ಷೇಕ್ಸ್ ಪಿಯರ್ ಸಿಕ್ಕನಂತೆ. ‘ಹೇ ಷೇಕ್ಸ್‌ಪಿಯರ್ ನೀನು ಇಲ್ಲಿ ಸಿಕ್ಕಿಬಿಟ್ಟೆಯಲ್ಲಾ’ ಎಂದು ತುಕಾರಾಮ್ ಸಂತೋಷಿಸಿದನಂತೆ.

ಅದಕ್ಕೆ ಷೇಕ್ಸ್‌ಪಿಯರ್ ‘ನಾನು ಅಲ್ಲಿಂದ ಬಂದಿದ್ದೇನೆ. ನಾವೆಲ್ಲಾ ಲೋಕದ ಬಗ್ಗೆ, ಸಂತೆಯ ಬಗ್ಗೆ ಇಷ್ಟೆಲ್ಲಾ ಬರೆದುಕೊಂಡು ಕೂತಿದ್ದೀವಿ. ಆದರೆ ನೀನು ಈ ಲೋಕ, ಸಂಸಾರ, ಸಂತೆಗಳನ್ನೆಲ್ಲಾ ಮೀರಿ ವಿಠಲನ ದರ್ಶನ ಮಾಡುತ್ತೀಯ. ನನಗೆ ಆಗದೇ ಇರುವುದು ನಿನಗೆ ಸಾಧ್ಯವಾಗಿದೆಯೆಲ್ಲಾ ಅದನ್ನು ನೋಡೋಣ ಎಂದು ಬಂದೆ’ ಎಂದನಂತೆ.

ಅದಕ್ಕೆ ತುಕಾರಾಮ್ ‘ನೀನು ಅದೇನು ಹೇಳುತ್ತಿದ್ದೀಯಾ? ಶ್ರೀಕೃಷ್ಣ ಬಾಯಿ ಬಿಟ್ಟಾಗ ವಿಶ್ವರೂಪ ದರ್ಶನ ಆಯಿತು ಎನ್ನುತ್ತಾರೆ. ನೀನು ಬಾಯಿಬಿಟ್ಟರೂ ವಿಶ್ವರೂಪ ದರ್ಶನವಾಗುತ್ತದೆ. ಇಡೀ ಜಗತ್ತನ್ನು ತೋರಿಸುವವನು ನೀನು. ನಾನೆಲ್ಲಿ? ನೀನೆಲ್ಲಿ?’ ಎಂದು ವಾದಿಸಿದನಂತೆ.

ಹೀಗೇ ವಾದ ಮಾಡಿಕೊಂಡು ವಾರ್ಖರಿಯಲ್ಲಿ ಹೋಗುತ್ತಿದ್ದರು. ಷೇಕ್ಸ್‌ಪಿಯರ್‌ನ ಮನಸ್ಸಿನಲ್ಲಿ ತುಕಾರಾಮ್ ಲೌಕಿಕವನ್ನು ಮೀರಿದವನು ಎಂಬ ಭಾವನೆ ಇತ್ತು. ಆದರೆ ಆತನಿಗೆ ಒಂದು ಗುಟ್ಟು ಗೊತ್ತಿರಲಿಲ್ಲ. ತುಕಾರಾಮನ ಹೆಂಡತಿ ಸಾಮಾನ್ಯ ಎಲ್ಲ ಹೆಂಡಿರ ಹಾಗೆಯೇ ಸ್ವಲ್ಪ ಕಿರಿ ಕಿರಿಯ ಹೆಂಗಸು. ಊಟಕ್ಕೆ ತಡವಾಗಿ ಬಂದರೆ ಬೈಯ್ಯುವುದು. ಅವನು ಧ್ಯಾನ ಮಾಡುತ್ತಾ ಕುಳಿತರೆ ‘ಏನು ನಿನ್ನ ಹಾಳು ಧ್ಯಾನ, ಮನೆಯ ಕಡೆ ನೋಡಿಕೊಳ್ಳುತ್ತಲೇ ಇಲ್ಲ’ ಎಂದು ಸತತವಾಗಿ ರೇಗುವುದರ ಮೂಲಕ ತುಕಾರಾಮನನ್ನು ಈ ಲೋಕಕ್ಕೆ ಉಳಿಸಿದ ಹೆಂಗಸು ಆಕೆ.

ಆಕೆ ಗಂಡನನ್ನು ಕರೆಯಬೇಕೆನಿಸಿದಾಗಲೆಲ್ಲಾ ಒಂದು ಗಂಟೆ ಬಾರಿಸುತ್ತಿದ್ದಳಂತೆ. ಷೇಕ್ಸ್‌ಪಿಯರ್ ಮತ್ತು ತುಕಾರಾಮ್ ಮಾತನಾಡುತ್ತಾ ನಿಂತಾಗಲೂ ಗಂಟೆಯ ಸದ್ದು ಕೇಳಿಸಿದಾಕ್ಷಣ ತುಕಾರಾಮ್ ‘ಅಯ್ಯೋ ಗಂಟೆಯ ಸದ್ದು. ನನ್ನ ಹೆಂಡತಿ ಕರೆಯುತ್ತಿದ್ದಾಳೆ. ನಾನು ಹೋಗಬೇಕು’ ಎಂದು ಅಲ್ಲಿಂದ ಹೋದನಂತೆ.

ಇಲ್ಲಿ ಯಾರು ಅಲೌಕಿಕ? ಯಾರು ಲೌಕಿಕ? ಷೇಕ್ಸ್‌ಪಿಯರ್ ಲೌಕಿಕ ಎಂದು ಕೊಳ್ಳೋಣವೆಂದರೆ ಅವನು ಯಾವ ಬಂಧನಗಳ ರಗಳೆಯೂ ಇಲ್ಲದೆ ಆರಾಮವಾಗಿದ್ದಾನೆ. ಈ ವಿಠಲನ ದರ್ಶನಕ್ಕೆ ಹೊರಟಿರುವ ತುಕಾರಾಮ ಹೆಂಡತಿಯ ಗಂಟೆ ಸದ್ದು ಕೇಳಿಸಿದರೆ ಕೂಡಲೇ ಓಡಿ ಹೋಗುತ್ತಾನೆ.

ಹೀಗೆ ಲೌಕಿಕ ಮತ್ತು ಅಲೌಕಿಕವನ್ನು ಒಂದು ಪದ್ಯದಲ್ಲಿ ಒಟ್ಟಾಗಿ ತರುವ ಪ್ರಯತ್ನವೂ ಮಂಜುನಾಥ್ ಪದ್ಯಗಳಲ್ಲಿ ಸತತವಾಗಿ ನಡೆಯುತ್ತದೆ. ಪುಸ್ತಕದ ಬಗ್ಗೆಯೇ ನನ್ನ ‌ಪ್ರೀತಿಯ ಶಿಷ್ಯರಾಗಿದ್ದವರೂ ಬಹಳ ಆಳವಾಗಿ ಯೋಚನೆ ಮಾಡಬಲ್ಲವರೂ ಆದ ನಾಗಭೂಷಣ ಸ್ವಾಮಿ ಮಾತನಾಡುತ್ತಾರೆ. ನಾನಿಲ್ಲಿ ನನ್ನ ಅನಿಸಿಕೆಗಳನ್ನಷ್ಟೇ ಹೇಳುತ್ತೇನೆ. ಮಂಜುನಾಥ್ ಪದ್ಯಗಳಲ್ಲಿ ಒಂದು ಬಗೆಯ ನಿಧಾನ ಇದೆ. ಇವು ಓಡಿ ಹೋಗುವುದಲ್ಲ. ನಿಧಾನವಾಗಿ ಬೆಳೆದುಕೊಂಡು ಹೋಗುತ್ತವೆ. ಮಂಜುನಾಥ್ ಕಂಡದ್ದರ ಬಗ್ಗೆ ಬರೆಯುವುದಿಲ್ಲ. ಅವರು ಕಾಣುತ್ತಿರುವ ಕ್ರಮಗಳ ಬಗ್ಗೆ ಬರೆಯುತ್ತಾರೆ. ಅಂದರೆ ಅವರು ನಮಗೆ ಬಿಡಿಸಿ ಮುಗಿದ ಚಿತ್ರಗಳನ್ನು ಕೊಡುತ್ತಿಲ್ಲ. ಬಿಡಿಸುತ್ತಾ ಇರುವ ಚಿತ್ರಗಳನ್ನೇ ನಮಗೆ ಕೊಟ್ಟುಬಿಡುತ್ತಾರೆ. ಈ ಪದ್ಯಗಳು ಸಫಲವಾಗುವುದೇ ಅಲ್ಲಿ. ಪದ್ಯಗಳನ್ನು ಸೃಷ್ಟಿಸುತ್ತಿರುವ ಹೊತ್ತಿನಲ್ಲೇ ನಾವೂ ಕವಿಗೆ ಜತೆಯಾಗಿ ಪದ್ಯದ ಸೃಷ್ಟಿಗೆ ಸಹಕರಿಸುತ್ತಿರುತ್ತೇವೆ.

ತುಂಬಾ ಅಲಂಕಾರ ಇರುವ ಪದ್ಯ ಅಲಂಕೃತವಾಗಿ, ಸನ್ನದ್ಧವಾಗಿ ಸಹೃದಯನನ್ನು ನೋಡಲು ನಿಂತಿರುತ್ತವೆ. ಮಂಜುನಾಥ್ ಇಂಥ ಅಲಂಕೃತ ಪದ್ಯಗಳನ್ನು ನಮಗೆ ಕೊಡುವುದಿಲ್ಲ. ಹಾಗಾಗಿ ಇಲ್ಲಿ ಸಣ್ಣ ಅಲಂಕಾರವೂ ಬಹಳ ಚೆನ್ನಾಗಿ ಕಾಣಿಸುತ್ತದೆ. ಮಂಜುನಾಥ್‌ಗೆ ಪು.ತಿ.ನ. ಬಹಳ ಪ್ರಿಯರಾದ ಕವಿ. ಅವರು ಅದ್ಭುತವಾಗಿ ಕಾವ್ಯದ ಬಗ್ಗೆ ಅಲಂಕಾರ ಬರೆದಿದ್ದಾರೆ. ಪು.ತಿ.ನ. ಮಾಸ್ತಿಯ ಬಗ್ಗೆ ಬರೆದದ್ದನ್ನು ಯಾವುದೋ ಕಾಲದಲ್ಲಿ ಎಲ್ಲಿಯೋ ಓದಿದ್ದೆ. ಅದೆಲ್ಲಿ ಎಂಬುದು ಈಗ ನೆನಪಾಗುತ್ತಿಲ್ಲ. ಮಾಸ್ತಿಯವರ ಕಾವ್ಯದಲ್ಲಿ ಅಲಂಕಾರವೇ ಇರುತ್ತಿರಲಿಲ್ಲ. ಸಪ್ಪೆ ಎನಿಸುವಂತೆಯೇ ಅವರು ಬರೆಯುತ್ತಿದ್ದರು. ನಾನೊಂದು ಸಾರಿ ವಿ. ಸೀತಾರಾಮಯ್ಯನವರು ಬರೆಯುವುದು ಸಪ್ಪೆ ಎಂದಾಗ ಅವರಿಗೆ ಸಿಟ್ಟು ಬಂದು ‘ಸಪ್ಪೆಯೂ ಒಂದು ರುಚಿ’ ಎಂದು ನನಗೊಂದು ಪತ್ರ ಬರೆದಿದ್ದರು. ಅದು ನಿಜ ಎಂದು ಈಗ ನನಗನ್ನಿಸುತ್ತಿದೆ.

ನಮಗೆ ಸಪ್ಪೆ ಅನ್ನಸುವ ಮಾಸ್ತಿಯವರು ಬರೆದ ಒಂದು ಸಾಲನ್ನು ಎತ್ತಿಕೊಂಡು ಪು.ತಿ.ನ. ವಿವರಿಸುತ್ತಾರೆ. ಆ ಸಾಲು ಹೀಗಿದೆ ‘ವಿಷ್ಣು ಕ್ರಾಂತಿಯ ಪರಿಮಿತ ನೀಲ’. ವಿಷ್ಣುಕ್ರಾಂತಿ ಹುಲ್ಲಿನ ನಡುವೆ ಬೆಳೆದಿರುತ್ತದೆ. ಅದು ಬಹಳ ಸಣ್ಣದು-ಕಂಡರೆ ಉಂಟು, ಕಾಣದಿದ್ದರೆ ಇಲ್ಲ. ಅಂಥದ್ದಕ್ಕೆ ನಮ್ಮವರು ಕೊಟ್ಟಿರುವ ಹೆಸರು ನೋಡಿ-ವಿಷ್ಣುಕ್ರಾಂತಿ. ಅದರ ನೀಲ ಬಣ್ಣ ಬಹಳ ತೆಳುವಾದ ನೀಲಿ. ಮಾಸ್ತಿಯವರ ಈ ಒಂದು ಸಾಲನ್ನು ಪು.ತಿ.ನ. ಕಾವ್ಯದ ಅತ್ಯುತ್ತಮ ಸಾಲು ಎನ್ನುತ್ತಾರೆ. ಇದೊಂದು ನೋಡುವ ಬಗೆ. ಕಾವ್ಯ ತಾನು ಮತ್ತೆ ಚೈತನ್ಯಶಾಲಿಯಾಗುವುದಕ್ಕೆ ಅಲಂಕಾರಗಳನ್ನೆಲ್ಲಾ ಕಳೆದುಕೊಂಡು ಸಹಜವಾದ ನುಡಿಗೆ ಹಿಂದಿರುಗುತ್ತಿರುತ್ತದೆ. ಪ್ರತೀ ಕವಿಯಲ್ಲೂ ಅದು ಹೀಗೆ ಹಿಂದಿರುಗುತ್ತಿರುತ್ತದೆ.

ಮಂಜುನಾಥ್‌ನಲ್ಲಿಯೂ ಅದು ಹಿಂದಿರುಗಿದೆ. ಈಗ ಅವರು ಅಲಂಕಾರದ ಸಾಧ್ಯತೆ ಇರುವಂಥ ಘನವಾದ ಪದ್ಯಗಳನ್ನೂ ಬರೆದಿದ್ದಾರೆ. ಈ ಇಡೀ ಸಂಕಲನದಲ್ಲಿ ನನಗೆ ಬಹಳ ಮೆಚ್ಚುಗೆಯಾದ ಮತ್ತು ಸಂಕಲನದಲ್ಲೇ ಅತ್ಯುತ್ತಮ ಎನ್ನಬಹುದಾದ ಕವಿತೆ ಎಂದರೆ ‘ಪಟ್ಟದಕಲ್ಲಿನ ಮೇಲೆ’. ಪಟ್ಟದಕಲ್ಲಿನ ದೇವಸ್ಥಾನಗಳು ಉದಯವಾದಂತೆ ಕಾಣಿಸುತ್ತಿರುತ್ತವೆ. ಒಂದು ಮಾತನ್ನು ಆಚೀಚೆ ಮಾಡಲಾರದಂತೆ ಈ ಕವಿತೆಯ ರಚನೆ ಇದೆ.

ಈ ಬಗೆಯ ಕವಿತೆಗಳನ್ನು ಇತ್ತೀಚೆಗೆ ಹಲವು ಕವಿಗಳು ಬರೆಯುತ್ತಿದ್ದಾರೆ. ಎಚ್.ಎಸ್. ವೆಂಕಟೇಶ್‌ಮೂರ್ತಿಯವರೂ ಇತ್ತೀಚೆಗೆ ಕೆಲವು ಅದ್ಭುತವಾದ ಪದ್ಯಗಳನ್ನು ಬರೆದಿದ್ದಾರೆ. ಮೊನ್ನೆಯಷ್ಟೇ ಅವರು ಭರತನ ಬಗೆಗಿನ ಒಂದು ಪದ್ಯ ಕಳುಹಿಸಿಕೊಟ್ಟಿದ್ದರು. ಭರತ ನಿತ್ಯ ಸ್ನಾನ ಮಾಡಿ ಹರಿ ಹರಿ ಎಂದು ಹರಿನಾಮ ಜಪಿಸುತ್ತಾ ಹಲ್ಲನ್ನೆಲ್ಲಾ ಕಳೆದುಕೊಂಡು ಮುದಿಯಾಗಿ ಒಣಗಿಬಿಟ್ಟಿರುತ್ತಾನೆ. ಇಂಥ ಸಂದರ್ಭದಲ್ಲಿ ಹುಲಿಯ ಬಾಯಿಗೆ ಸಿಕ್ಕ ತಾಯಿ ಜಿಂಕೆಯ ಮರಿಯೊಂದನ್ನು ಅವನು ಬದುಕಿಸುತ್ತಾನೆ. ಭರತನಿಗೆ ಹರಿ, ಹರಿ ಎಂದು ಜಪಿಸಿದಾಗ ಸಿಗದ ದೇವರು ಜಿಂಕೆ ಮರಿಯ ಮೇಲೆ ಪ್ರೀತಿ ಉಕ್ಕಿದಾಗ ಸಿಗುತ್ತಾನೆ.

ನಮ್ಮ ಕಾಲದಲ್ಲಿ ಬಹಳ ರ‍್ಯಾಷನಲಿಸಂ ಇದೆ. ಇದಂತೂ ಎಂಥಾ ರ‍್ಯಾಷನಲ್ಲಿಸ್ಟ್ ಕಾಲ ಅಂದರೆ ಯಜ್ಞ ಯಾಗಾದಿಗಳನ್ನೆಲ್ಲಾ ಮಾಡಿದರೂ ಅದನ್ನೂ ಅಧಿಕಾರ ಸಂಪಾದನೆಯಂಥ ರ‍್ಯಾಷನಲ್ ಕಾರಣಗಳಿಗಾಗಿಯೇ ಮಾಡುತ್ತಿರುತ್ತಾರೆ. ಮತ-ಧರ್ಮ ಕೂಡಾ ಬಹಳ ಲೌಕಿಕವಾಗಿಬಿಟ್ಟಿದೆ. ಗುರುಗಳ ಹತ್ತಿರ ಹೋಗುವುದು, ಜಾತಕ ತೋರಿಸುವುದು ಹೀಗೆ ಎಲ್ಲವೂ ಅತ್ಯಂತ ಲೌಕಿಕವಾದ ವಿಷಯಗಳಾಗಿಬಿಟ್ಟಿವೆ. ಇಂಥ ಕ್ರಿಯೆಗಳಿಗೆ ಇರಬಹುದಾದ ನಿಜವಾದ ಸ್ಪಿರಿಚ್ಯುಯಲ್ ಸ್ವರೂಪವೇ ಇಲ್ಲದಂತಾಗಿದೆ.

ಅಂತಹ ಒಂದು ಅಲೌಕಿಕಕ್ಕೆ ತೆರೆದ ಮತಧರ್ಮಗಳ ಆಚರಣೆಗಳಿಗೆ ಸಾವನ್ನು ಗ್ರಹಿಸುವುದು, ಬದುಕಿನ ನಿತ್ಯದ ಲಯವನ್ನು ಗ್ರಹಿಸುವುದು, ನಾನಿಲ್ಲದೇ ಇರುವ ಲೋಕದಲ್ಲೂ ಈ ಲೋಕವಿರುತ್ತದೆ ಎಂಬ ಬೆರಗನ್ನು ಅದು ಪಡೆಯುವುದು ಸಾಧ್ಯವಾಗಬೇಕಿತ್ತು. ಈ ಬೆರಗು ಭಾಗವತದಲ್ಲಿದೆ. ಭಾಗವತದ ಕವಿ ವೇದವ್ಯಾಸರು ಬಹಳ ವ್ಯಾಮೋಹಿ. ಅವರಿಗೆ ಮಗನೆಂದರೆ ಬಹಳ ಪ್ರೀತಿ. ಆದರೆ ಆ ಮಗ ಆದಿ ವಿರಾಗಿ.ಅ ವನು ಹುಟ್ಟುವಾಗಲೇ ವಿರಾಗಿಯಾಗಿ ಹುಟ್ಟಿಬಿಟ್ಟಿದ್ದ. ಅವನು ವೈರಾಗ್ಯದಿಂದ ಮನೆಬಿಟ್ಟು ಹೋಗಿಬಿಡುತ್ತಾನೆ. ವೇದವ್ಯಾಸರು ಮನೆಯಿಂದ ಹೊರಬಂದು ‘ಏ ಮಗನೇ’ ಎಂದು ಕೂಗಿ ಕರೆಯುತ್ತಾರ ಅವರ ಕೂಗಿಗೆ ಎಲ್ಲ ಬೆಟ್ಟ, ಗುಡ್ಡಗಳಿಂದ ಪ್ರತಿಧ್ವನಿ ಬರುತ್ತದೆ. ಆ ಪ್ರತಿಧ್ವನಿಯಲ್ಲೇ ವೇದವ್ಯಾಸರು ಮಗನನ್ನು ಕಂಡರು. ಇಲ್ಲಿ ತನ್ನ ಮಗ ಎನ್ನುವ ಪ್ರೀತಿ ಇಡೀ ವಿಶ್ವದ ಪ್ರೀತಿಯಾಗುವ ಸೋಜಿಗವಿದೆ. (ಯಂ ಪ್ರೌರಜಂತಂ ಅನುಪೇತಂ ಅಪೇತಕೃತ್ಯಂ / ದ್ವೈಪಾಯನೋ ವಿರಹಕಾತುರ ಆಜುಹಾವ / ಪುತ್ರೇತಿ ತನ್ಮಯತಯಾ ತರವೋಭಿನೇತುಃ / ತಂ ಸರ್ವಭೂತಹೃದಯಂ ಮುನಿಮಾನತೋಸ್ಮಿ)

ಈ ರೀತಿಯಲ್ಲಿ ಸಣ್ಣಪುಟ್ಟ ವಸ್ತುಗಳನ್ನೇ ಧ್ಯಾನಿಸುತ್ತಾ, ಇಂಥ ಸಣ್ಣ ಘಟನೆಗಳ ಮುಖಾಂತರವೇ ಪ್ರಪಂಚದ ಬಗೆಗಿನ ಒಂದು ಬೆರಗನ್ನು ಕಾಣುವ ಬಗೆಯೊಂದಿದೆ. ಅರೆ! ಈ ಕವಿಯ ಕಣ್ಣಿಗೆ ಇದೂ ಕಾಣಿಸಿತಲ್ಲವೆ? ಎಂದು ನಾವು ಬೆರಗಾಗುತ್ತೇವೆ. ಸರ್ವೇಸಾಮಾನ್ಯವಾಗಿಬಿಟ್ಟ ನಮ್ಮ ಜಗತ್ತಿನಲ್ಲಿ ಇದು ಒಂದು ವಿಶೇಷ. “ಹೊಳೆದದ್ದು”-ಅಂದರೆ, ಎರಡು ಅರ್ಥಗಳಲ್ಲೂ ನಮಗೆ ಹೊಳೆಯುವಂಥದ್ದು. ನಾವು ಕಣ್ಣಿಗೆ ಕಾಣು ವಂಥದ್ದು ಎಂದು ಅಭ್ಯಾಸಗತವಾಗಿ ಸಲೀಸಾಗಿ ತಿಳಿದುಬಿಟ್ಟಿರುವುದರಲ್ಲಿ ಇದು ಕಾಣಲು ಸಿಗುವುದಿಲ್ಲ. ಆದರೆ ‘ಆ’ ಇನ್ನೊಂದನ್ನು ಕಂಡದ್ದೂ, ಹೊಳೆಯಿಸಿಕೊಂಡದ್ದೂ, ಈ ಮಣ್ಣಿನ ಕಣ್ಣೇ. ಭವಿ ಸ್ಥಿತಿಯಲ್ಲೇ ಅಲೌಕಿಕವಾದುದನ್ನು ಗ್ರಹಿಸಲು ಕವಿ ಪ್ರಯತ್ನಿಸುತ್ತಾನೆ. ಆ ಅಲೌಕಿಕವಾದದ್ದು ಚರಿತ್ರೆಯ ಈ ಮುಹೂರ್ತದಲ್ಲೇ ಇದೆ ಎಂದುಕವಿ ಭಾವಿಸುತ್ತಾನೆ.

ಒಂದು ರೀತಿಯ ದ್ರಾಬೆಯಾದ ರ‍್ಯಾಷನಲಿಸಂ ನಮ್ಮೆನ್ನೆಲ್ಲಾ ಆಳುತ್ತಿರುವಾಗ ಕನ್ನಡದ ಬಹಳ ಕವಿಗಳು-ಕೆಲವು ದಲಿತ ಕವಿಗಳೂ ಕೂಡಾ-ಹೀಗೆ ಇನ್ನೊಂದು ಕಡೆಗೆ ಹೊರಳುತ್ತಿದ್ದಾರೆ. ಇದರಿಂದಾಗಿ ಕನ್ನಡ ಕಾವ್ಯ ಪ್ರಪಂಚದಲ್ಲಿ ಒಂದು ಹೊಸ ಲಯ ಆರಂಭಗೊಂಡಿದೆ. ಇದು ಸುಳ್ಳು ರಿಲಿಜನ್‌ನಲ್ಲಿ ಆಗುತ್ತಿಲ್ಲ. ಈ ವ್ಯಾವಹಾರಿಕ ಪ್ರಪಂಚವಲ್ಲದೆ ಇನ್ನೊಂದೇನೋ ಇದೆ ಎಂದು ನಾವು ಮಡಿಯುಟ್ಟು ಗದ್ಗತಿತರಾಗಿ ಭ್ರಮಿಸಬೇಕಾದ್ದಿಲ್ಲ. ಈಗಿರುವುದರಲ್ಲೇ, ನೀನು ಪರಿಚತವಾದ ಕಣ್ಣಿನಲ್ಲಿ ಕಾಣದೇ ಇರುವುದೊಂದು, ಇಕೋ ಇಲ್ಲೇ ಇದೆ ಎಂದು ನಮಗೆ “ಹೊಳೆಯಿಸುವ” ಆಧ್ಯಾತ್ಮಿಕ ಎಂದು ಕರೆಯಬೇಕಾದ ಅಗತ್ಯವೇ ಇಲ್ಲದ, ಆದರೆ ಆಧ್ಯಾತ್ಮಿಕವಾದ ಸೋಜಿಗ ಈ ಬಗೆಯ ಕಾವ್ಯದ್ದು.

ನಾನು ಮೊದಲೇ ಹೇಳಿದ ಹಾಗೆ ಷೇಕ್ಸ್‌ಪಿಯರ್ ಮತ್ತು ತುಕಾರಾಮ್ ಭೇಟಿಯಾದಾಗ ಇಬ್ಬರೂ ಒಬ್ಬರಲ್ಲೊಬ್ಬರು ಲೀನವಾದರು. ಆದ್ದರಿಂದಲೇ ಅವರಿಗೆ ಒಬ್ಬರನ್ನೊಬ್ಬರು ಮೆಚ್ಚಲು ಸಾಧ್ಯವಾಯಿತು. ಷೇಕ್ಸ್‌ಪಿಯರ್ ಪ್ರಪಂಚವನ್ನೆಲ್ಲ ಗ್ರಹಿಸುತ್ತಲೇ ವೇದವ್ಯಾಸರಂತೆ ಅದಕ್ಕೆ ಅತೀತವಾದುದನ್ನೂ ಗ್ರಹಿಸಿದ್ದಾನೆ. ಅತೀತವನ್ನು ಮಾತ್ರ ಗ್ರಹಿಸುತ್ತೇನೆಂದು ಹೊರಟವನು ಏನನ್ನೂ ಗ್ರಹಿಸದೇ ಇರಬಹುದು. ಅವನು ಹರಿ, ಹರಿ, ಎಂದು ಜಪಿಸುತ್ತಾ ಹರಿಯನ್ನು ಗ್ರಹಿಸದೆಯೇ ಮುದುಕನಾಗಿಬಿಡಬಹುದು. ಆದರೆ ಕೈಗೊಂದು ಜಿಂಕೆಯ ಮರಿ ಸಿಕ್ಕಾಗ ಅವನಿಗೆ ಹರಿಯೂ ಸಿಕ್ಕಿಬಿಡುತ್ತಾನೆ. ಆ ರೀತಿಯ ಒಂದು ‘ಆಧ್ಯಾತ್ಮಿಕತೆ’-ಇದು ಬಹಳ ಶೋಷಿತವಾದ ಪದ-ಆದರೂ ಇದನ್ನೇ ಬಳಸುತ್ತಿದ್ದೇನೆ-ಕನ್ನಡದ ಕವಿಗಳಲ್ಲಿ ಕಾಣಿಸುತ್ತಿದೆ. ಅದೇನೋ ಹೊಸತಲ್ಲ. ಕನ್ನಡ ಕಾವ್ಯಪ್ರಪಂಚದಲ್ಲಿ ಅನೂಚೂನವಾಗಿ ಹರಿದುಬಂದಿರುವಂಥದ್ದು. ಅಲ್ಲಮ, ಬಸವ, ಕುಮಾರವ್ಯಾಸನಲ್ಲಿ ನಮ್ಮ ಈಚಿನ ಕವಿಗಳಲ್ಲೆಲ್ಲಾ ಹರಿದುಬಂದಿರುವಂಥದ್ದು ನಮ್ಮ ಯುವ ಕವಿಗಳಿಗೆ ದೊರೆತಿದೆ.

ಇಂಥವರಲ್ಲಿ ಮಂಜುನಾಥ ಮುಖ್ಯವಾದ ಕವಿ ಎನ್ನುವುದು ನನಗೆ ಬಹಳ ಹೆಮ್ಮೆಯ ವಿಷಯ. ಮತ್ತು ಈ ಪುಸ್ತಕದಲ್ಲಿ ಅವರ ಕೆಲವು ಅತ್ಯುತ್ತಮ ಕವನಗಳಿವೆ ಎಂದು ಹೇಳಿ, ಇನ್ನು ಹೆಚ್ಚು ಹೇಳುವುದಕ್ಕೆ ನಾಗಭೂಷಣ ಸ್ವಾಮಿಯವರಿಗೆ ಅವಕಾಶ ಒದಗಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

(ಕೆ.ಆರ್. ನಗರದಲ್ಲಿ ಎಸ್. ಮಂಜುನಾಥ್ ಅವರಮಗಳು ಸೃಜಿಸಿದ ಸಮುದ್ರಕವನ ಸಂಕಲನ ಬಿಡುಗಡೆಯ ಸಂದರ್ಭದಲ್ಲಿ ಮಾಡಿದ ಭಾಷಣ, ಸೆಪ್ಟೆಂಬರ್ ೨೦೦೮)

* * *