ನನ್ನ ಗೆಳೆಯ ಇಸ್ಮಾಯಿಲ್‌ರ ಅಪಾರವಾದ ಶ್ರಮದ ಫಲ ಈ ಪುಸ್ತಕ. ಇಲ್ಲಿನ ನನ್ನ ಹಲವು ವಿಚಾರಗಳು ಅವರ ಜೊತೆಗಿನ ನನ್ನ ಸ್ನೇಹದ ವಿನಿಮಯಗಳಲ್ಲಿ ಸ್ಪಷ್ಟ ರೂಪವನ್ನು ಪಡೆದವು ಎಂಬುದನ್ನು ಮೊದಲು ನಾನು ಹೇಳಬೇಕು. ಈ ನನ್ನ ಹಲವು ಭಾಷಣಗಳು ಲೇಖನಗಳು ಪುಸ್ತಕ ರೂಪದಲ್ಲಿ ಬರಬೇಕು ಎಂಬ ಆಶಯದಿಂದ ಧ್ವನಿಮುದ್ರಿತವಾದ, ಅವರಿಗೆ ಪ್ರಿಯವೂ ಆದ ನನ್ನ ಭಾಷಣಗಳನ್ನು ಆಯ್ದು, ಬರಹಕ್ಕೆ ಇಳಿಸಿ, ಅವುಗಳ ಮಾತಿನ ಲಯದ ಆಪ್ತತೆಗೆ ಭಂಗ ಬಾರದಂತೆ ಪ್ರ-ಬಂಧದ ಶಿಸ್ತಿಗೆ ಅವನ್ನು ತಂದು, ನನಗೆ ತೋರಿಸಿ, ನಾನು ಒಪ್ಪಿದ್ದನ್ನು ಇಲ್ಲಿ ಪ್ರಕಟಿಸುತ್ತ ಇದ್ದಾರೆ. ನಿಂತಕಾಲಿನ ಮೇಲೆ ಮನಸ್ಸನ್ನು ಹರಿಯಲು ಬಿಟ್ಟು ಅನಿರೀಕ್ಷಿತವಾದದ್ದಕ್ಕೆ ಮಾತಿನಲ್ಲಿ ಎದುರಾಗುವ ನನ್ನ ‘ಗೊಂದಲ’ಗಳು ಇಲ್ಲಿ ಪಡೆದಿರುವ ರೂಪ ನನಗೆ ಸಂತೋಷವನ್ನು ತಂದಿದೆ. ನಾನು ಹೀಗೆ ಕನ್ನಡ ಓದುಗರಿಗೆ ಒದಗುವಂತೆ ಮಾಡಿದ ಇಸ್ಮಾಯಿಲ್‌ಗೆ ನಾನು ಋಣಿ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಘಟಿಕೋತ್ಸವ ಭಾಷಣವನ್ನು ನಾನು ತಯಾರು ಮಾಡುತ್ತಿದ್ದಾಗ ಅದು ಹೆಚ್ಚು ಅರ್ಥಪೂರ್ಣವಾಗುವಂತೆ ನನ್ನ ವಿಚಾರದ ವ್ಯಾಪ್ತಿಯನ್ನು ವಿಸ್ತರಿಸಿದ ಗೆಳೆಯ ಮನುಚಕ್ರವರ್ತಿಯನ್ನು ನಾನು ಇಲ್ಲಿ ನೆನೆಯಲೇ ಬೇಕು.

ಇಲ್ಲಿನ ಕೆಲವು ಲೇಖನಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವುದು ಡಾ. ಆಶಾದೇವಿ. ಕನ್ನಡದ ಈಚಿನ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ಆಶಾದೇವಿ ಹೀಗೆ ನನಗಾಗಿ ತಮ್ಮ ಸಮಯವನ್ನು ಕೊಟ್ಟಿರುವುದು ಅವರು ಔದಾರ್ಯವೆಂದೇ ನಾನು ತಿಳಿದಿದ್ದೇನೆ. ಅವರಿಗೆ ನಾನೂ, ಈ ಪುಸ್ತಕದ ಸಂಪಾದಕರಾದ ಇಸ್ಮಾಯಿಲ್‌ರೂ ಕೃತಜ್ಞರು.

ಈ ನನ್ನ ಭಾಷಣಗಳಿಗೆ ಅವಕಾಶ ಮಾಡಿಕೊಟ್ಟ ಹಲವು ಸಂಸ್ಥೆಗಳಿಗೆ ನಾನು ಆಭಾರಿ. ಲೇಖನಗಳ ಕೊನೆಯಲ್ಲಿ ಮಾತಿನ ಸಂದರ್ಭವನ್ನೂ, ಸಂಸ್ಥೆಗಳ ಹೆಸರನ್ನೂ ಕೊಡಲಾಗಿದೆ.

ನನ್ನ ಎಪ್ಪತ್ತಾರರ ಹುಟ್ಟಿದ ದಿನವೇ ಈ ಪುಸ್ತಕಬರಬೇಕೆಂದು ನಿಶ್ಚಯಿಸಿದವರು ಅಂಕಿತದ ಪ್ರಕಾಶ್ ಕಂಬತ್ತಳ್ಳಿಯವರು. ಇವರ ನಿರ್ಮಲವಾದ ಒಳ್ಳೆತನ ಮತ್ತು ನನ್ನ ಬಗೆಗಿನ ವಿಶ್ವಾಸ ಈ ಪ್ರಕಾಶನದ ಹಿಂದಿದೆ. ಅವರಿಗೆ ನನ್ನ ಧನ್ಯವಾದಗಳು.

ಯು.ಆರ್. ಅನಂತಮೂರ್ತಿ
೨೧ ಡಿಸೆಂಬರ್ ೨೦೦೮

೪೯೮, ಆರನೇ ಎ ಮುಖ್ಯರಸ್ತೆ
ರಾಜಮಹಲ್ ವಿಲಾಸ್ ಎರಡನೇ ಹಂತ
ಬೆಂಗಳೂರು ೫೬೦ ೦೯೪
urananthamurthy@gmail.com