ಕಾಮಶರಂಗಳವರ್ಗ್ಗಳೆರ್ದೆಯನುರ್ಚಿ ಪೋಗಿ ಪರವಸೆಯರಾಗಿ ಮಱುಗಿದಱುನೀರ ಮೀಂಗಳ್ವೊಲಾದರಿದೇಂ ಚೋದ್ಯವೊ ಕುಸುಮಬಾಣ ಬಿಲ್ಬಲ್ಮೆ

ಶ್ಲೋಕ ||      ಅಹೋ ಧನುಷಿ ಕೌಶಲ್ಯಂ ಮನ್ಮಥಸ್ಯ ಮಹಾತ್ಮನಃ
ಅಸ್ಪ*ಶನ್ನಪಿ ಗಾತ್ರಾಣಿ ಛಿನತ್ತೈಂತರ್ಗತಂ ಮನಃ ||

ಇವರ್ಗ್ಗಳ್ ತನ್ಮುಖನಿರೀಕ್,ಣದೊಳಾಸಕ್ತೆಯರಾಗಿರ್ದ್ದರಾಗಳಾ ಇಂದ್ರಪ್ರಭನೆಂಬ ವಿದ್ಯಾಧರಂ ಪ್ರಿಯಸಂಗಮಮೆಂಬ ಪೊೞಲನೆಯ್ದಿ ಭಾನುವೇಗನೆಂಬ ವಿದ್ಯಾಧರಂಗೆ ಪೇೞ್ದನಾದೇಶ ಪುರುಷನಂ ತಂದುಭೂತರಮಣದ ಜ್ಯೋತಿರ್ವಿತಾನಮೆಂಬ ಮಣಿಮಂಟಪದೊಳ್ ಕನ್ನೆಯರ ಪಕ್ಕದಿರಿಸಿ ಬಂದೆನೆನೆ ಆಗಳಾತಂಗೆ ತಣಿವಿನೆಗಂ ತುಷ್ಟಿದಾನಂಗೊಟ್ಟು ವಿಪುಳಶ್ರೀಯೆಂಬ ಖೇಚರಿಯಂ ಕರೆದಿಂತೆಂದಂ ಶೀಘ್ರಂ ಪೋಗಿ ಕೀರ್ತಿಧವಳಂಗೆ ಭೋಜನಾದಿ ವಿಯಂ ಮಾಡೆಂದು ಪೇೞ್ದೊಡಾಕೆಯುಮಂತೆಗೆಯ್ವೆನೆಂದು ಸಪರಿವಾರಂಬೆರಸು ಬಂದಾತಂಗೆ ಮಜ್ಜನ ಭೋಜನ ಪ್ರಸಾಧನಾದಿಗಳುಮಂ ಮಾಡಿ ಮತ್ತೆ ಕುಮಾರನಂ ದಿವ್ಯಶಯ್ಯಾತಳದೊಳ್ ಸುಖದಿನಿರಿಸಿ ಅನಂಗಸುಂದರಿಯೆಂಬ ವಿದ್ಯಾಧರಿಯನಾಡವೇೞ್ದು ನಾಟಕಮನಭಿನಯಿಸುತ್ತುಂ ಕುಮಾರನ ಮುಂದೆ ವಿನಯಾನ್ವಿತೆಯಾಗಿರ್ದೊಳಂ

ಗುಣಸ್ವರೂಪವುಳ್ಳ ೧ ಕಾಮ ಬಾಣಗಳು ಆ ಕನ್ಯೆಯರ ಎದೆಗೆ ನಾಟಿ ಬೆನ್ನಿನಲ್ಲಿ ಹೊರಟು, ಅವರು ಮೂರ್ಛೆಹೋಗಿ, ಕುದಿದ ಬತ್ತಿದ ನೀರಿನ ಮೀನುಗಳಂತೆ ಆದರು. ಪುಷ್ಪಬಾಣನಾದ ಮನ್ಮಥನ ಬಿಲ್ಲಿನ ಸಾಮರ್ಥ್ಯ ಏನೊಂದು ಆಶ್ಚರ್ಯವೋ! *ಮಹಾತ್ಮನಾದ ಮನ್ಮಥನ ಬಿಲ್ಲುವಿದ್ಯೆಯ ನೈಪುಣ್ಯ ಆಶ್ಚರ್ಯಕರ. ಅವನು ದೇಹಗಳನ್ನು ಮುಟ್ಟದೆ ಇದ್ದರೂ ಒಳಗಿರತಕ್ಕ ಮನಸ್ಸನ್ನು ತುಂಡರಿಸುತ್ತಾನೆ.* ಇವರು ಸನತ್ಕುಮಾರನ ಮುಖವನ್ನು ನೋಡುವುದರಲ್ಲೇ ಆಸಕ್ತೆಯರಾಗಿದ್ದರು. ಆಗ ಇಂದ್ರಪ್ರಭನೆಂಬ ವಿದ್ಯಾಧರನು ಪ್ರಿಯಸಂಗಮವೆಂಬ ಪಟ್ಟಣಕ್ಕೆ ಹೋಗಿ ಭಾನುವೇಗವೆಂಬ ವಿದ್ಯಾಧರರಾಜನಿಗೆ ಹೀಗೆಂದನು – “ನಾನು ನಿಮ್ಮ ಆದೇಶದಂತೆ ಆ ಮನುಷ್ಯನನ್ನು (ಸನತ್ಕುಮಾರನನ್ನು) ತಂದು ಭೂತರಣವೆಂಬ ಕಾಡಿನ ಜ್ಯೋತಿರ್ವಿತಾನವೆಂಬ ರತ್ನಮಂಟಪದಲ್ಲಿ ಕನ್ಯೆಯರ ಸಮೀಪದಲ್ಲಿರಿಸಿ ಬಂದಿರುತ್ತೇನೆ. * ಹೀಗೆ ಹೇಳಲು, ಆತನಿಗೆ ಭಾನುವೇಗನು ತೃಪ್ತಿಯಾಗುವ ಮಟ್ಟಿಗೆ ತೃಪ್ತಿಕರವಾದ ದಾನವನ್ನು ಕೊಟ್ಟು ವಿಪುಳಶ್ರೀ ಎಂಬ ವಿದ್ಯಾಧರಿಯನ್ನು ಕರೆದು – “ನೀನು ಬೇಗನೆ ಹೋಗಿ ಧವಳ ಕೀರ್ತಿಶಾಲಿಯಾದ ಆತನಿಗೆ ಊಟ ಮುಂತಾದ ವ್ಯವಸ್ಥೆಯನ್ನು ಮಾಡು* ಎಂದು ಹೇಳಿದನು. ಆಕೆ “ಹಾಗೆಯೇ ಮಾಡುವೆನು* ಎಂದು ಹೇಳಿ ಪರಿವಾರದೊಡನೆ ಬಂದು ಅವನಿಗೆ ಸ್ನಾನ – ಭೋಜನ – ಅಲಂಕಾರಾದಿಗಳನ್ನು ಮಾಡಿದ ನಂತರ, ಕುಮಾರನನ್ನು ದಿವ್ಯವಾದ ಹಾಸಿಗೆಯ ಮೇಲೆ ಸುಖದಿಂದ ಇರುವಂತೆ ಮಾಡಿದಳು. ಅನಂಗಸುಂದರಿಯೆಂಬ ವಿದ್ಯಾಧರಿಯನ್ನು ನಾಟ್ಯವಾಡಲು ಹೇಳಿ,

– – – –

ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನಿಲೋತ್ಪಲ – ಇವು ಐದುಕಾಮ ಬಾಣಗಳು, ಉನ್ಮಾದನ, ತಾಪನ, ಸ್ತಂಭವ, ಸಮ್ಮೋಹನ – ಇವು ಮನಥನ ಪಂಚಬಾಣಗಳ ಗುಣಗಳು – ಹೀಗೆ ಅಮರಕೋಶದಲ್ಲಿ ಹೇಳಿದೆ.)

ಕುಮಾರಂ ನೋಡಿ ಇಂತೆಂದಂ ನೀಮೆನಗೀದೃಗ್ವಿಧಮಪ್ಪುಪಕಾರಮನೇಕೆ ಗೆಯ್ದಪ್ಪಿರ್ ನೀಮೇನಾರ್ಗ್ಗೆಂದು ಬೆಸಗೊಂಡೊಡಾಕೆಯಿಂತೆಂದಳ್ ಕೇಳ್ ಪೇೞ್ಷೆಂ ಸ್ವಾಮಿ ವಿಜಯಾರ್ಧ ಪರ್ವತದೊಳ್ ಪ್ರಿಯಸಂಗಮಪುರಾಪತಿಯಪ್ಪ ಭಾನುವೇಗನೆಂಬ ವಿದ್ಯಾಧರಂಗೆ ಶ್ರೀಮಾಲೆ ಮೊದಲಾಗೊಡೆಯ ಮಹಾದೇವಿಯರೆಣ್ಣರವರ್ಗ್ಗೆ ಪುಟ್ಟಿದೊರೀಯೆಣ್ಬರುಂ ಕನ್ನೆಯರ್ಕಳ್ ಲಕ್ಷ್ಮೀಮತಿ ಕನಕಕಾಂತೆ ಮಂದಾರಸೇನೆ ಅಳಕೆ ಅಲಂಭೂಷೆ ಹೇಮಾವತಿ ಹೇಮಮಾಳಿನಿ ವಿಜಯಾರ್ಧವತಿಯೆಂದೀ ಪೆಸರ್ಗಳನೊಡೆಯರೆಣ್ಬರುಂ ಮಕ್ಕಳನಾರ್ಗೆ ಕುಡುವಮೆಂದೊಂದು ದಿವಸಂ ನೈಮಿತ್ತಿಕನಂ ಭಾನುವೇಗಂ ಬೆಸಕೊಂಡೊಡಾತನಿಂತೆಂದಂ ಕ್ಷುಲ್ಲಕಮಾನಸಮೆಂಬ ಕೊಳದೊಳ್ ಸಿತಯಕ್ಷನೆಂಬ ದೇವನಂ ಸಂಗ್ರಾಮದೊಳಾವೊಂ ಗೆಲ್ಲುಮಾತಂಗೆ ಕೂಸುಗಳಂ ಕುಡಿಮೆಂದು ಪೇಳ್ದನದಱಂ ನೀನೆಮ್ಮ ಸ್ವಾಮಿಯೆಂದು ಪೇೞ್ದವಸರದೊಳ್ ಮಹಾವಿಭೂತಿಯಿಂ ಬರ್ಪ ಖೇಚರೇಂದ್ರನು ತೋಱದೊಡೀತಂ ನಿಮ್ಮ ಮಾವನೆಂದಾಗಳ್ ಕುಮಾರನುಮಿದಿರೆೞ್ದು ತದ್ಯೋಗ್ಯಮಪ್ಪ ವಿನಯಮಂ ಗೆಯ್ದಿರ್ದೊನಂ ವಿದ್ಯಾಧರೇಂದ್ರಂ ಕುಮಾರನಂ ನೋಡಿ ತ್ರಿಭುವನಕ್ಕೆಲ್ಲಂ ತಿಳಕಮಾಗಿರ್ದ್ದಳಿಯನಂ ನಾನೆ ಪೆತ್ತೆನೆಂದಾದ ಮಾನುಂ ಸಂತುಷ್ಟಚಿತ್ತನಾಗಿ ಕುಮಾರನಂ ಕೊಂಡು ಪೊಗಿ ತನ್ನ ಪೊೞಲಂ ಪೊಕ್ಕಾ ದೆವಸದೊಳೆಣ್ಬರ್ ಕನ್ನೆಯರ್ಕ್ಕಳಂ ಕೈನೀರೆಱೆದು ಕುಮಾರಂಗೆ ಕೊಟ್ಟಂ ಕುಮಾರನುಂ ದಿವ್ಯಾಂಗನೆಯರ್ಕ್ಕಳೊಡನೆ

 

ನಾಟಕವನ್ನು ಅಭಿನಯಿಸುತ್ತ ಕುಮಾರನ ಮುಂದೆ ವಿನಯದಿಂದ ಕೂಡಿದವಳಾಗಿದ್ದಳು. ಅವಳನ್ನು ಕುಮಾರನು – “ನೀವು ನನಗೆ ಈ ರೀತಿಯಾಗಿರುವ ಉಪಕಾರವನ್ನು ಯಾಕೆ ಮಾಡುತ್ತಿದ್ದೀರಿ ? ನೀವು ಯಾರು ? ಯಾರ ಸಂಬಂಧದವರು ?* ಎಂದು ಕೇಳಲು ಆಕೆ ಹೀಗೆಂದಳು – ಸ್ವಾಮಿಯೆ, ಕೇಳು ಹೇಳುತ್ತೆನೆ. ವಿಜಯಾರ್ಧಪರ್ವತದಲ್ಲಿ ಪ್ರಿಯಸಂಗಮವೆಂಬ ಪಟ್ಟಣದ ಒಡೆಯನಾದ ಭಾನುವೇಗನೆಂಬ ವಿದ್ಯಾಧರನಿಗೆ ಶ್ರೀಮಾಲೆ ಮೊದಲಾಗುಳ್ಳ ಎಂಟು ಮಂದಿ ರಾಣಿಯರು. ಅವರಿಗೆ ಹುಟ್ಟಿದ ಲಕ್ಷ್ಮೀಮತಿ, ಕನನಕಾಂತೆ, ಮಂದಾರಸೇನೆ, ಅಳಕೆ, ಅಲಂಭೂಷೆ, ಹೇಮವತಿ, ಹೇಮಮಾಳಿನಿ, ವಿಜಯಾರ್ಧವತಿ – ಎಂದು ಹೆಸರುಳ್ಳ ಎಂಟು ಮಂದಿ ಕನ್ಯೆಯರನ್ನು ಯಾರಿಗೆ ಕೊಡೋಣ ? ಎಂದು ಭಾನುವೇಗನು ಒಂದು ದಿನ ಜೋಯಿಸನನ್ನು ಕೇಳಲು ಆತನು “ಕ್ಷುಲ್ಲಕಮಾನಸವೆಂಬ ಸರೋವರದಲ್ಲಿ ಸಿತಯಕ್ಷನೆಂಬ ವ್ಯಂತರದೇವನನ್ನು ಯಾವನು ಯುದ್ಧದಲ್ಲಿ ಗೆಲ್ಲುವನೋ ಅವನಿಗೆ ಹೆಣ್ಣುಮಕ್ಕಳನ್ನು ಕೊಡಿ* ಎಂದು ಹೇಳಿದನು. ಆದುದರಿಂದ ನೀನು ನಮಗೆ ಒಡೆಯನು – ಎಂದು ಹೇಳಿದಳು. ಅದೇ ಸಂದರ್ಭದಲ್ಲಿ ಬಹಳ ವೈಭವದಿಂದ ಬರುತ್ತಿದ್ದ ವಿದ್ಯಾಧರರಾಜನಾದ ಭಾನುವೇಗನನ್ನು ತೋರಿಸಿ, “ಈತನು ನಿಮ್ಮ ಮಾವ* ಎಂದು ಹೇಳಿದಳು. ಕುಮಾರನು ಆಗ ಇದಿರೆದ್ದು ಆತನಿಗೆ ಯೋಗ್ಯವೆನಿಸತಕ್ಕ ವಿನಯವನ್ನು ತೋರಿಸಿದನು. ಅಂತಹ ಸನತ್ಕುಮಾರನನ್ನು ವಿದ್ಯಾಧರರಾಜನು ನೋಡಿ, ಮೂರುಲೋಕಗಳಿಗೆಲ್ಲ ತಿಲಕದಂತೆ ಶ್ರೇಷ್ಠನಾಗಿರುವ ಅಳಿಯನನ್ನು ನಾನೇ ಪಡೆದಿದ್ದೇನೆ. – ಎಂದು ಅತ್ಯಂತವಾಗಿ ಸಂತೋಷಪಟ್ಟನು. ಕುಮಾರನನ್ನು ಕರೆದುಕೊಂಡು ಹೋಗಿ ತನ್ನ ಪಟ್ಟಣವನ್ನು ಪ್ರವೇಶಿಸಿ ತನ್ನ ಎಂಟು ಮಂದಿ ಕನ್ಯೆಯರನ್ನೂ ಕುಮಾರನಿಗೆ ಧಾರೆಯೆರೆದು ಕೊಟ್ಟನು. ಕುಮಾರನು ಆ ದಿವ್ಯ ಸ್ತ್ರೀಯರೊಂದಿಗೆ ಸುಖದಿಂದ ಕೂಡಿದನು.

ಸುಖದಿಂದೊಂದಿದನಾಗಳೊಂದು ವನದೇವತೆ ಬಂದು ಸುನಂದೆಯೆಂಬ ಕನ್ನೆಯ ದುಃಖಮಂ ಕಾಣಲಾರದೆ ಕರುಣಿಸಿ ಕುಮಾರನನೆತ್ತಿಕೊಂಡು ಪೋಗಿ ಹರಿಕೂಟಮೆಂಬ ಪರ್ವತದ ಜ್ಯೋತಿರ್ವನದೊಳ್ ದಿವ್ಯಶಯ್ಯಾತಳಮಂ ವಿಗುರ್ವಿಸಿಯದಱ ಮೇಗೆ ಕುಮಾರನನಿಟ್ಟು ಪೋದೊ ಡಾತನುಂ ಪ್ರಭಾತಸಮಯದೊಳೆೞ್ಚತ್ತು ದೆಸೆಗಳಂ ನೋೞ್ಪೊನಾ ವನಮುಮಂ ತನ್ನಿರ್ದ ಲತಾ ಮಂಟಪಮುಮಂ ನೋಡಿ ಎನಗಿದು ಮಹಾವಿಸ್ಮಯಂ ರಾತ್ರಿಯೊಳ್ ವಿವಾಹಕಲ್ಯಾಣಮೆನಗೆ ಸ್ವಪ್ನದೊಳಾದುದೊ ನಿರುತಮೊ ಎಂದು ಸಂದೇಹಚಿತ್ತನಾಗಿ ತನ್ನ ಕೈಯೊಳ್ ಕಟ್ಟಿದ ಕಂಕಣಮಂ ನೋಡಿ ಕಂಡು ಕುಮಾರನಿಂತೆಂದು ಬಗೆದಂ

ಶ್ಲೋಕ ||       ಭವಿತವ್ಯಂ ಭವತ್ಯೇವ ಕರ್ಮಣಾಮೇಷ ನಿಶ್ಚಯಃ
ವಿಪತ್ತೌ ಕಿಂ ವಿಷಾದೇನ ಸಂಪತ್ತೌ ವಿಸ್ಮಯೇನ ಕಿಂ ||

ಎಂದಿಂತು ವಸ್ತುರೂಪಮಂ ಕುಮಾರಂ ಬಗೆಯುತ್ತಿರ್ಪಿನೆಗಂ ದೂರಾಂತರದೊಳ್ ಸಂಛನ್ನ ಮಾಗುತ್ತಿರ್ದ್ದ ವನದೊಳಿರ್ದ ಕನ್ನೆಯಿಂತೆಂದು ಪುಯ್ಯಲಿಟ್ಟಳ್ ಸಾಕೇತಪ್ಪುರಾಪತಿಯಪ್ಪ ಸುರಥನೆಂಬರಸಂಗಂ ಚಂದ್ರಯಶಿಯೆಂಬ ಮಹಾದೇವಿಗಂ ಪುಟ್ಟದೆನ್ ಸನತ್ಕುಮಾರನ ಭಾರ್ಯೆಯೆನ್ ಸುನಂದೆಯೆನೆಂಬೆನೆನ್ನನನ್ಯಾಯದಿಂ ವಜ್ರವೇಗನೆಂಬ ವಿದ್ಯಾಧರಂ ತಂದು ಕಿನ್ನರ ಕಿಂಪುರುಷ ಗರುಡಗಂಧರ್ವ ಯಕ್ಷರಾಕ್ಷಸಾದಿ ದೇವರ್ಕಳಿರಾ ವಿದ್ಯಾಧರರ್ಕ್ಕಳಿರಾ ಶರಣಾಗಿಮಾರಪ್ಪೊಡಮೆನ್ನಂ

ಆಗ ಒಂದು ವನದೇವತೆ ಬಂದು ಸುನಂದೆ ಎಂಬ ಓರ್ವ ಕನ್ಯೆಯ ವ್ಯಸನವನ್ನು ನೋಡಲಾರದೆ, ಆಕೆಯ ಮೇಲಿನ ಕರುಣೆಯಿಂದ ಕುಮಾರನನ್ನು ಎತ್ತಿಕೊಂಡು ಹೋಯಿತು. ಹರಿಕೂಟವೆಂಬ ಪರ್ವತದ ಜ್ಯೋತಿರ್ವಣದಲ್ಲಿ ದಿವ್ಯವಾದ ಹಾಸಿಗೆಯನ್ನು ಮಾಯೆಯಿಂದ ಸೃಷ್ಟಿಸಿ, ಅದರ ಮೇಲೆ ಸನತ್ಕುಮಾರನನ್ನು ಇಟ್ಟು ತೆರಳಿತು. ಕುಮಾರನು ಪ್ರಾತಃಕಾಲದಲ್ಲಿ ಎಚ್ಚರಗೊಂಡು ದಿಕ್ಕುಗಳನ್ನು ನೋಡುತ್ತಿದ್ದನು. ಆ ಕಾಡನ್ನೂ ತಾನು ಇದ್ದ ಬಳ್ಳಿ ಮಂಟಪವನ್ನೂ ನೋಡಿ, “ನನಗೆ ಇದು ಬಹಳ ಆಶ್ಚರ್ಯ. ನನಗೆ ರಾತ್ರಿಯಲ್ಲಿ ಆದ ಮದುವೆ ಕನಸಿನಲ್ಲಿ ಆಯಿತೊ ! ಆಥವಾ ನಿಜವಾಗಿ ಆಯಿತೋ ? * ಎಂದು ಮನಸ್ಸನಲ್ಲಿ ಸಂಶಯಪಟ್ಟನು. ತನ್ನ ಕೈಯಲ್ಲಿ ಕಟ್ಟಿದ ಕಂಕಣವನ್ನು ನೊಡಿ, ಕುಮಾರನು ಹೀಗೆ ಭಾವಿಸಿದನು. (ಆಗಬೇಕಾದ್ದು ಆಗಿಯೇ ಆಗುತ್ತದೆ. ಕರ್ಮಗಳ ವಿಷಯದಲ್ಲಿ ಇದು ನಿಶ್ಚಯ. ವಿಪತ್ತು ಬಂದಾಗ ದುಃಖಿಸಿ ಪ್ರಯೋಜನವೇನು ? ಸಂಪತ್ತು ಬಂದಾಗ ಆಶ್ಚರ್ಯಪಡುವುದರಿಂದ ಉಪಯೋಗವೇನು ?) ಈ ರೀತಿಯಾಗಿ ಕುಮಾರನು ನಿಜಸಂಗತಿಯನ್ನು ಯೋಚಿಸುತ್ತ ಇರುತ್ತಿರಲು, ದೂರವಾದ ಪ್ರದೇಶದಲ್ಲಿ ದಟ್ಟವಾಗುತ್ತಿದ್ದ ಕಾಡಿನಲ್ಲಿ ಕನ್ಯೆ ಈ ರೀತಿಯಾಗಿ ಮೊರೆಯಿಟ್ಟಳು – “ಸಾಕೇತ ಪಟ್ಟಣದ ಒಡೆಯನಾದ ಸುರಥನೆಂಬ ರಾಜನಿಗೂ ಚಂದ್ರಯಶಿಯೆಂಬ ರಾಣಿಗೂ ನಾನು ಮಗಳಾಗಿ ಜನಿಸಿದೆನು. ನಾನು ಸನತ್ಕುಮಾರನ ಹೆಂಡತಿಯಾಗಿರುವೆನು. ಸುನಂದೆ ಎಂಬವಳಾಗಿರುವೆನು, ವಜ್ರವೇಗನೆಂಬ ವಿದ್ಯಾಧರನು ಅನ್ಯಾಯದಿಂದ ನನ್ನನ್ನು ತಂದಿದ್ದಾನೆ. ಕಿನ್ನರ ಕಿಂಪುರುಷ ಗರುಡ ಗಂಧರ್ವ ಯಕ್ಷರಾಕ್ಷಸರೇ ದೇವತೆಗಳೇ, ವಿದ್ಯಾಧರರೇ, ನನಗೆ ಆಶ್ರಯವನ್ನು ಕೊಡಿ. ಯಾರಾದರೂ ನನ್ನನ್ನು ರಕ್ಷಿಸಿರಿ*. ಹೀಗೆನ್ನತಕ್ಕ ಆರ್ತಧ್ವನಿಯನ್ನು ಕೇಳಿ ಕುಮಾರನು

ರಕ್ಷಿಸಿಮೆಂಬ ಕಾರುಣ್ಯಸ್ವರಮಂ ಕೇಳ್ದಾಶ್ಚರ್ಯಮನದೊನಾಗಿ ದೆಸೆಯಂ ನೋಡಿ ಸಲ್ವೊಂ ಸ್ಪಟಿಕಮಯಮಪ್ಪ ಶಿಲಾಗೃಹದ ಕೆಱಗಿರ್ದ್ದ ಯಕ್ಷಕನ್ನೆಯಂ ಕಂಡು ನೀನಾರ್ಗ್ಗೇನೆಂಬೆಯಾ ಸನತ್ಕುಮಾರನೆಂಬೊನಾರ್ಗ್ಗೆಂದು ಕುಮಾರಂ ಬೆಸಗೊಂಡೊಡೆಕೆಯಿಂತೆಂದು ಪೇೞ್ದಳ್ ಅಯೋಧ್ಯಾಪುರಮನಾಳ್ರ್ವೆಂ ಸುರಥನೆಂಬೊನರಸನಾತನ ಮಹಾದೇವಿ ಚಂದ್ರಯಶಿಯೆಂಬೊಳಾಯಿರ್ವರ್ಗ್ಗಂ ಪುಟ್ಟಿದೆಂ ಸುನಂದೆಯೆಂಬೆಂ ಸನತ್ಕುಮಾರಂಗೆ ಗರ್ಭದೊಳಿರ್ದಂತೆ ನಿವೇದಿಸೆಪಟ್ಟೆನೆನ್ನಂ ಮದನೋದ್ಯಾನದೊಳುಯ್ಯಲಾಡುತ್ತಿರ್ದೊಳಂ ಭೌಮವಿಹಾರಾರ್ಥಂ ಬಂದು ವಜ್ರವೇಗನೆಂಬ ವಿದ್ಯಾಧರಂ ಕಂಡೆನ್ನನೆತ್ತಿಕೊಂಡು ಪುಯ್ಯಲಿಯಿಡೆ ಬಂದನಿಂದಿಂಗೇೞು ದಿವಸಮುಂಟುಮತ್ತಾ ಸನತ್ಕುಮಾರನೆಂಬೊಂ ಹಸ್ತಿನಾಪುರವನಾಳ್ರ್ವೆಂ ವಿಶ್ವಸೇನ ಮಹಾರಾಜನೆಂಬೊನರಸನಾತನ ಮಹಾದೇವಿ ಸಹದೇವಿಯೆಂಬೊಳಾಯಿವ್ವರ್ಗ್ಗಂ ಪುಟ್ಟಿದಂ ಸನತ್ಕುಮಾರನೆಂಬೊನೆಂದು ಪೇೞ್ದೊಡೆ ಕುಮಾರನೆಂದನಾತನಂ ಕಂಡೊಡೇನಱವೋ ಎಂದು ಬೆಸಗೊಂಡೊಡೆ ಸುನೆಂದೆಯಿಂತೆಂದಳ್ ಎನ್ನ ತಂದೆ ವಿಶ್ವಸೇನಮಹಾರಾಜನೊಳಪ್ಪ ಮಿತ್ರಸಂಬಂಧದಿನೊಂದು ದಿವಸಂ ಹಸ್ತಿನಾಪುರಕ್ಕೆ ವೋಗಿ ಕುಮಾರನಂ ಕಂಡಾತನ ರೂಪಂ ಪಟದೊಳ್ ಬರೆದು ತಂದಾ ರೂಪನೆಲ್ಲಾ ಪೊೞ್ತುಂ ನೋೞ್ಪೆನುಂ ಬರೆವೆನುಂ ಭಾವಿಸುತ್ತಿರ್ಪೆ ನಪ್ಪುದಱಂದಱವೆನಾ ರೂಪುಂ ನಿಮ್ಮನೆ ಪೋಲ್ಕುಮೆನೆಯಂತಪ್ಪೊಡಾಂ ಸನತ್ಕುಮಾರನೆನಪ್ಪೆನೆಂದಾಗಳ್ ಹರ್ಷರೋಮಾಂಚಕಂಚುಕಿತೆ ವಿಕಸಿತವದನೆಯಾಗಿಯಱಪ ಬಳ್ಳಿ

ಮನಸ್ಸಿನಲ್ಲಿ ಆಶ್ಚರ್ಯವನ್ನು ತಾಳಿದನು. ದಿಕ್ಕುಗಳನ್ನು ನೋಡುತ್ತ ಇದ್ದನು. ಬಿಳಿಕಲ್ಲಿನಿಂದ ಕೂಡಿದ ಕಲ್ಲ ಮನೆಯ ಕೆಳಗೆ ಇದ್ದ ಯಕ್ಷ ಕನ್ಯೆಯನ್ನು ಕಂಡು “ ನೀನು ಯಾರು ? ಏನು ಹೇಳುತ್ತಿರುವೆ ? ಆ ಸನತ್ಕುಮಾರನೆಂಬುವನು ಯಾರು ? * ಎಂದು ಕುಮಾರನು ಕೇಳಲು ಆಕೆ ಹೀಗೆ ನುಡಿದಳು – “ಅಯ್ಯೋಧ್ಯಾಪಟ್ಟಣವನ್ನು ಆಳತಕ್ಕ ರಾಜನು ಸುರಥನೆಂಬುವನು. ಅವನ ರಾಣಿ ಚಂದ್ರಯಶಿಯೆಂಬುವಳು. ಆ ಇಬ್ಬರಿಗೆ ಹುಟ್ಟಿದ ಸುನಂದೆ ನಾನು. ನಾನು ಗರ್ಭದಲ್ಲಿದ್ದಾಗಲೇ ಸನತ್ಕುಮಾರನಿಗೆ ಅರ್ಪಿತಳಾಗಿದ್ದೇನೆ. ನಾನು ಮದನೋದ್ಯಾನದಲ್ಲಿ ಉಯ್ಯಾಲೆಯಾಡುತ್ತಿದ್ದಾಗ ವಜ್ರವೇಗನೆಂಬ ವಿದ್ಯಾಧರನು ಭೂಮಿಯಲ್ಲಿ ಸಂಚಾರ ಮಾಡುವುದಕ್ಕಾಗಿ ಬಂದು ನನ್ನನ್ನು ಕಂಡು ಎತ್ತಿಕೊಂಡನು. ನಾನು ಹುಯ್ಯಲಿಟ್ಟರೂ ಕೂಡ ಕೇಳದೆ ತೆಗೆದುಕೊಂಡು ಬಂದನು. ಇಂದಿಗೆ ಏಳು ದಿವಸಗಳಾಗಿವೆ. ಇನ್ನು ಆ ಸನತ್ಕುಮಾರನೆಂಬವನಾದರೋ, ಹಸ್ತಿನಾಪುರವನ್ನು ಅಳತಕ್ಕ ಮಹಾರಾಜ ವಿಶ್ವಸೇನನೆಂಬವನಿದ್ದನು. ಅವನ ಮಹಾರಾಣಿ ಸಹದೇವಿಯೆಂಬುವಳು. ಆ ಇಬ್ಬರಿಗೆ ಜನಿಸಿದವನು ಸನತ್ಕುಮಾರನೆಂಬವನು* ಎಂದು ಹೇಳಿದಳು. ಆಗ ಕುಮಾರನು “ಅವನನ್ನು ಕಂಡರೆ ನಿನಗೆ ಗೊತ್ತಾಗುವುದೇ ? * ಎಂದು ಕೇಳಲು ಸುನಂದೆ ಹೀಗೆಂದಳು – – “ನನ್ನ ತಂದೆಯಾದ ಸುರಥನು ವಿಶ್ವಸೇನ ಮಹಾರಾಜನಲ್ಲಿದ್ದ ಸ್ನೇಹಸಂಬಂಧದಿಂದ ಒಂದು ದಿವಸ ಹಸ್ತಿನಾಪುರಕ್ಕೆ ಹೋಗಿ ಕುಮಾರನನ್ನು ಕಂಡು ಅವನ ರೂಪವನ್ನು ಪಟದಲ್ಲಿ (ಬಟ್ಟೆಯಲ್ಲಿ) ಬರೆದು ತಂದನು. ಆ ರೂಪವನ್ನು ನಾನು ಎಲ್ಲ ಹೊತ್ತಿನಲ್ಲಿಯೂ ನೋಡುತ್ತಿರುವೆನು, ಬರೆಯುತ್ತಿರುವೆನು, ಭಾವಿಸುತ್ತಿರುವೆನು – ಆದುದರಿಂದ ಬಲ್ಲೆನು ಆ ರೂಪವು ನಿಮ್ಮನ್ನೇ ಹೋಲುತ್ತಿದೆ*. ಸುನಂದೆ ಹೀಗೆ ಕೆಳಿದಾಗ ಕುಮಾರನು “ಹಾಗಾದರೆ ನಾನು ಸನತ್ಕುಮಾರನೇ ಆಗಿರುವೆನು* ಎಂದನು. ಸುನಂದೆ ಆಗ ಸಂತೋಷದ ರೋಮಾಂಚವೆಂಬ ರವಿಕೆಯುಳ್ಳವಳೂ ಆರಳಿದ ಮುಖವುಳ್ಳವಳೂ ಆಗಿ “ಹುಡುಕುವ

ಕಾಲ್ತೊಡರ್ದತ್ತೆಂಬಂತೆವೊಲಾಯ್ತೆನ್ನ ಭಾಗ್ಯದಿಂದಂ ಸ್ವಾಮಿ ನೀಮಿಲ್ಲಿಗೆ ಬಂದಿರಾ ವಜ್ರವೇಗಂ ತನ್ನ ತಂಗೆಯನೆನಗೆ ಕಾಪಿಟ್ಟು ತನ್ನ ನಿದ್ರೆಗೆಯ್ಯೆ ಪೋದನಾಕೆಯು ಜಳಕ್ರೀಡೆಗೆ ಪೋದಳವಳ್ ಬಾರದನ್ನೆಗಂ ಬೇಗಂ ಪೋಪಮೆನೆ ಕುಮಾರನಿಂತೆಂದನಂಜದಿರ್ ನಿನ್ನ ತಂದೊನನಮೋಘಂ ಮೃತ್ಯುಮುಖಕ್ಕುಯ್ದೊಡಲ್ಲದೆ ಪೋಗೆನೆನೆ ಭಯದಿಂದಂ ನಡುಗಿ ಇಂತೆಂದಳಾತನಾಕಾಶಗಾಮಿ ನೀಮೆಂತು ಕೊಲ್ವಿರೆನೆ ಕುಮಾರಂ ನಕ್ಕಿಂತೆಂದಂ ಆಕಾಶಗಾಮಿಯಪ್ಪ ಕಾಗೆಯನೇಂ ಕೊಲ್ವುದರಿದೆ ಎಂದು ನುಡಿಯುತ್ತಿರ್ಪನ್ನೆಗಂ ವಜ್ರವೇಗನ ಬರವಂ ಕಂಡಾ ಪ್ರಾಸಾದದೊಳಗೆ ಪೋಗಿ ಪೊಕ್ಕಿರ್ದಳ್ ಖೇಚರನುಂ ಕುಮಾರನಂ ಕಂಡು ಪುರುಡಿಂ ಮುಳಿಸು ಪೆರ್ಚ್ಚಿಯೆನ್ನ ಪೆಂಡತಿಯಾಡನೆ ನುಡಿಯುತ್ತಿರ್ದ್ದೊನನಮೋಘಂ ಕೊಲ್ವೆನೆಂದು ಕಿೞ್ತ ಬಾಳ್ವೆರಸು ಬಂದೆಱಗಿ ಇಱದಾತನೇಱಂ ಬಂಚಿಸಿ ಸಿಂಹಲಂಘನದಿಂ ಮೇಗೆ ನೆಗೆದು ವಜ್ರಸಮಾನಮಪ್ಪ ಕೈಯಿಂದಂ ಕುಮಾರನಾತನ ತೆಗಲೆಯಂ ತಿವಿದೊಡಾತನಲ್ಲಿ ತನ್ನ ವಿದ್ಯಾಧರಕರಣಮಂ ತೋರ್ಪ್ಪಂಬೊಲೆ ಮೇಗುಚ್ಚಳಿಸಿ ಬಿೞ್ದೂಗಡೆ ಮಡಿದಂ ಕುಮಾರನಿಂತೆಂದು ಬಗೆದನೊರ್ವಳೆ ಇರ್ದ ಸ್ತ್ರೀಯ ಪಕ್ಕದೆ ಸತ್ಪುರುಷಂಗಿರಲ್ ತಕ್ಕುದಲ್ಲೆಂದು ಮುನ್ನೆ ತನ್ನಿರ್ದ ಲತಾಮಂಟಪದೊಳ್ ಪೋಗಿರ್ದನನ್ನೆಗಮಿತ್ತ ವಜ್ರವೇಗನ ತಂಗೆ ಸಂಧ್ಯಾವಳಿಯೆಂಬೊಳ್ ಮಾನಸಸರೋವರದೊಳ್ ಜಲಕ್ರೀಡೆಯಾಡಿ ಬರ್ಪೊಳನ್ನೆಗಂ ತಮ್ಮಣ್ಣ್ಣಂ ಸತ್ತುದಂ ಕಂಡು

ಬಳ್ಳಿ ಕಾಲಿಗೆ ತೊಡರಿತು (ಸಿಕ್ಕಿಕೊಂಡಿತು) ಎಂಬ ಹಾಗೆ ಆಯಿತು. ಸ್ವಾಮೀ, ನೀವು ನನ್ನ ಪುಣ್ಯದಿಂದ ಇಲ್ಲಿಗೆ ಬಂದಿದ್ದೀರಿ. ಆ ವಜ್ರವೇಗನು ತನ್ನ ತಂಗಿಯನ್ನು ನನಗೆ ಕಾವಲಿಟ್ಟು, ನಿದ್ದೆ ಮಾಡಲು ತನ್ನ ಪಟ್ಟಣಕ್ಕೆ ಹೋಗಿದ್ದಾನೆ. ಆಕೆ ಜಲಕ್ರೀಡೆಗೆ ಹೋಗಿದ್ದಾಳೆ. ಅವಳು ಬರುವುದರೊಳಗಾಗಿ ಬೇಗನೆ ಹೋಗೋಣ* ಎಂದು ಹೆಳಿದಳು. ಆಗ ಕುಮಾರನು – “ಹೆದರಬೇಡ, ನಿನ್ನನ್ನು ತಂದವನನ್ನು ನಿಶ್ಚಯವಾಗಿಯೂ ಮೃತ್ಯುವಿನ ಬಾಯಿಗೆ ಒಯ್ಯದೆ ನಾನು ಹೋಗುವವನಲ್ಲ ಎಂದನು. ಸುನಂದೆ ಆಗ ಹೆದರಿಕೆಯಿಂದ ನಡುಗಿ “ಆತನು ಆಕಾಶದಲ್ಲಿ ಹೋಗಬಲ್ಲವನು, ಅವನನ್ನು ನೀವು ಹೇಗೆ ಕೊಲ್ಲುವಿರಿ* ಎಂದು ಕೇಳಿದಳು. ಕುಮಾರನು ನಕ್ಕು ಇಂತೆಂದನು – “ಆಕಾಶದಲ್ಲಿ ಹೊಗುವ ಕಾಗೆಯನ್ನು ಕೊಲ್ಲುವುದು ಅಸಾಧ್ಯವೇ? * ಹೀಗೆ ಮಾತಾನಾಡುತ್ತಿರುವಾಗ ವಜ್ರವೇಗನು ಬರುವುದನ್ನು ಆ ಕನ್ಯೆ ಕಂಡು ಹೆದರಿ ಮಹಾಭವನದೊಳಗೆ ಹೋಗಿ ಹೊಕ್ಕು ಇದ್ದಳು. ವಜ್ರವೇಗನು ಕುಮಾರನನ್ನು ಕಂಡು ಹೊಟ್ಟೆಕಿಚ್ಚಿನಿಂದ ಕೋಪ ಹೆಚ್ಚಾಗಿ ” ನನ್ನ ಹೆಂಡತಿಯೊಡನೆ ಮಾತಾನಾಡುತ್ತಿದ್ದವನನ್ನು ನಿಶ್ಚಯವಾಗಿ ಕೊಲ್ಲುವೆನು” ಎಂದು ಹಿರಿದ ಖಡ್ಗದೊಂದಿಗೆ ಬಂದು ಮೇಲೆ ಬಿದ್ದು ಹೊಡೆದನು. ಹಾಗೆ ಹೊಡೆದವನ ಏಟನ್ನು ತಪ್ಪಿಸಿಕೊಂಡು ಕುಮಾರನು ಸಿಂಹವು ಹಾರುವಂತೆ ಮೇಲಕ್ಕೆ ಹಾರಿ ವಜ್ರಾಯುಧಕ್ಕೆ ಸಮಾನವಾದ ತನ್ನ ಕೈಯಿಂದ ಅವನ ಎದೆಯನ್ನು ತಿಳಿದನು. ಆಗ ವಜ್ರವೇಗನು ತನ್ನ ವಿದ್ಯಾಧರಕಾರ್ಯವನನ್ನು ತೋರಿಸುತ್ತಾನೋ ಎಂಬಂತೆ ಮೇಲಕ್ಕೆ ನೆಗೆದು ಬಿದ್ದು ಕ್ಷಣವೇ ಸತ್ತುಹೋದನು. ಕುಮಾರನು “ಏಕಾಂಗಿಯಾಗಿ ಇದ್ದ ಹೆಂಗುಸಿನ ಬಳಿಯಲ್ಲಿ ಸತ್ಪುರುಷನು ಇರುವುದು ಯೋಗ್ಯವಲ್ಲ* ಎಂದು ಈ ರೀತಿಯಾಗಿ ಯೋಚಿಸಿ, ತಾನು ಮೊದಲು ಇದ್ದ ಬಳ್ಳಿಮಂಟಪಕ್ಕೆ ಹೋಗಿ ಅಲ್ಲಿದ್ದನು. ಅಷ್ಟರಲ್ಲಿ ಇತ್ತವಜ್ರವೇಗನ ತಂಗಿಯಾದ ಸಂಧ್ಯಾವಳಿಯೆಂಬುವಳು ಮಾನಸಸರೋವರಕ್ಕೆ ಜಲಕ್ರೀಡೆಯಾಡುವುದಕ್ಕಾಗಿ ಹೋಗಿದ್ದಳು. ಜಲಕ್ರೀಡೆ ಮುಗಿಸಿ

ಮೂರ್ಛಾಗತೆಯಾಗಿ ಬಿೞ್ದು ನೀಡಱಂದೆೞ್ವತ್ತು ಕ್ರೋಧಾಗ್ನಿ ಪೆರ್ಚಿ ಎಮ್ಮಣ್ಣನಂ ಕೊಂದ ದುರಾತ್ಮನಂ ಪಾತಾಳಮಂ ಪೊಕ್ಕಿರ್ದನಪ್ಪೊಡಮಱಸಿ ಕೊಲ್ವೆನಮೋಘಮೆಂದು ಭಯಂಕರರೂಪಂ ಕೈಕೊಂಡು ದೆಸೆಗಳಂ ನೋೞ್ಪೊಳನ್ನೆಗಮಾರುಮಂ ಕಾಣದೆ ಸುನಂದೆಯಂ ಬೆಸಗೊಂಡೊಡಾಕೆಯಿಂತೆಂದಳ್ ದುಷ್ಟನಿಗ್ರ್ರಹ ಶಿಷ್ಟಪ್ರತಿಪಾಲಾನಸ್ವರೂಪದಿಂ ಪೃಥ್ವಿಯಂ ರಕ್ಷಿಸುವ ಸ್ವಾಮಿ ಚೋರ ಜಾರ ಪಾದರಿಗರ್ಕ್ಕಳಂ ಕೊಲ್ಲದಿರ್ಕುಮೆ ಎಂದೊಡಾತನಾವೊನೆಲ್ಲದೊಂ ತೋಱೆಂದು ಬೆಸಗೊಂಡೊಡೆ ಸುನಂದೆಯುಂ ಪೋಗಿ ಕುಮಾರನಂ ತೋಱದೊಡಾಕೆಯುಮಸಿಖೇಟಕಹಸ್ತೆಯಾಗಿ ವಿಭೀಷಣಮಪ್ಪ ರೂಪುಮಂ ವಿಗುರ್ವಿಸಿ ಕೊಲ್ವೆನೆಂದು ಸಾರ್ದಾಗಳ್ ಕುಮಾರಂ ಸೌಷ್ಟವದೊಳಿರ್ದ್ದೊನಂ ನೋಡಿ ಕ್ರೋಧಂಗೆಟ್ಟು ಸ್ನೇಹಂ ಪೆರ್ಚಿ ಕಾಮಶರಂಗಳಿಂ ಸ್ಮರವಶಹೃದಯೆಯಾಗಿ ಇಂತೆಂದು ತನ್ನೊಳ್ ಬಗೆದೊಳೆಮ್ಮಣ್ಣಂ ತನ್ನದೋಷದಿಂ ಸತ್ತೊನೀತಂಗೇನುಂ ದೋಷಮಿಲ್ಲೆಂದು ವಿಕಾರಮಪ್ಪ ರೂಪಮನುಪಸಂಹರಿಸಿ ತನ್ನ ಮುನ್ನಿನ ಸ್ವಾಭಾವಿಕಮಪ್ಪ ರೂಪಂ ಕೈಕೊಂಡು ತಮ್ಮಣ್ಣನಂ ಸಂಸ್ಕರಿಸಿ ನೀರಿೞದು ತದ್ವಿರಹಾನಳನಿಂ ಬೆಂದು ಕರಗಿ ಕೊರಗಿ ಬಸಮೞದಿರ್ದ್ದ ಮೆಯ್ಯನೊಡೆಯೊಳ್ ಬಂದು ಸುನಂದಗಿಂತೆಂದಳ್ ನಿನ್ನಪ್ರಸಾದಿಂ ಬಾೞ್ವೆಂ ನೀನನಗೆ ಸೋದರಮುಂ ಕಲ್ಯಾಣಮಿತ್ರೆಯುಮಾದಯ್ ಅದಱಂ ನೀನೀ ಕುಮಾರಂಗೆ ಪೋಗಿ ಇಂತೆಂದು ಪೇೞು ವಿಜಯಾರ್ಧಪರ್ವತದೊಳಗ್ರಮಂದಿರ

ಬರುತ್ತ, ತನ್ನ ಅಣ್ಣನು ಸತ್ತುದನ್ನು ಕಂಡು ಮೂರ್ಛೆ ಹೋಗಿ ಬಿದ್ದಳು. ಬಹಳ ಹೊತ್ತಿನ ನಂತರ ಎಚ್ಚತ್ತಳು. ಸಿಟ್ಟಿನ ಬೆಂಕಿ ಹೆಚ್ಚಾಗಿ – “ನನ್ನ ಆಣ್ಣನನ್ನು ಕೊಂದ ದುಷ್ಟನನ್ನು, ಆತನು ಪಾತಾಳವನ್ನು ಹೊಕ್ಕಿದವನಾದರೂ ವ್ಯರ್ಥವಾಗದಂತೆ ಹುಡುಕಿ ಕೊಂದುಬಿಡುವೆನು* ಎಂದು ಭೀಕರವಾದ ರೂಪವನ್ನು ತಾಳಿದಳು. ದಿಕ್ಕುಗಳ ಕಡೆಗೆ ನೋಡಿದಳು. ಆ ಸಂದರ್ಭದಲ್ಲಿ ಯಾರನ್ನೂ ಕಾಣದೆ ಸುನಂದೆಯನ್ನು ಕೇಳಿದಾಗ ಅವಳು ಹೀಗೆಂದಳು – “ಕೆಟ್ಟವರನ್ನು ನಾಶಮಾಡುವ ಮತ್ತು ಸತ್ಪುರುಷರನ್ನು ರಕ್ಷಣೆ ಮಾಡುವ ಸ್ವರೂಪದಿಂದ ಲೋಕವನ್ನು ಕಾಪಾಡುತಕ್ಕ ಪ್ರಭುವು ಕಳ್ಳರನ್ನೂ ಜಾರರನ್ನೂ ಹಾದರಿಗರನ್ನೂ ಕೊಲ್ಲದಿರುವನೆ* ? ಎಂದು ಹೇಳಿದಾಗ “ಆತನು ಯಾವನು ? ಎಲ್ಲಿದ್ದಾನೆ? ತೋರಿಸು* ಎಂದು ಕೇಳಿದಳು. ಸುನಂದೆ ಹೋಗಿ ಸನತ್ಕುಮಾರನನ್ನು ತೊರಿಸಿದಳು. ಆಗ ಸಂಧ್ಯಾವಳಿ ಕತ್ತಿ ಗುರಾಣಿಗಳನ್ನು ಹಿಡಿದುಕೊಂಡು ಮಾಯೆಯಿಂದ ಭಯಂಕರವಾದ ರೂಪವನ್ನು ತಾಳಿ “ಕೊಲ್ಲುತ್ತೇನೆ* ಎಂದು ಸಮೀಪಕ್ಕೆ ಬಂದಳು. ಸುಂದರವಾದ ರೂಪದಲ್ಲಿದ್ದ ಕುಮಾರನನ್ನು ನೋಡಿ, ಕೋಪವನ್ನು ಬಿಟ್ಟು ಪ್ರೀತಿ ಹೆಚ್ಚಾಗಿ ಕಾಮನ ಬಾಣಗಳಿಂದ ಮನ್ಮಥನಿಗೆ ಅನವಾದ ಮನಸ್ಸುಳ್ಳವಳಾಗಿ ತನ್ನಲ್ಲಿಯೇ ಹೀಗೆ ಯೋಚಿಸಿದಳು “ನನ್ನ ಅಣ್ಣನು ತನ್ನ ದೊಷದಿಂದ ಸತ್ತನು, ಈತನಿಗೆ ಏನೂ ದೊಷವಿಲ್ಲ* ಎಂದುಕೊಂಡು ತನ್ನ ವಿಕಾರವಾದ ರೂಪವನ್ನು ಕೊನೆಗಾಣಿಸಿ, ಹಿಂದಿನ ನೈಜವಾದ ರೂಪವನ್ನು ತಾಳಿಕೊಂಡು ತನ್ನ ಅಣ್ಣನಿಗೆ ತಕ್ಕ ಶವಸಂಸ್ಕಾರವನ್ನು ಮಾಡಿ, ಸ್ನಾನಮಾಡಿ, ಕುಮಾರನ ವಿರಹದ ಬೆಂಕಿಯಿಂದ ಬೆಂದು ಕರಗಿ ಕೊರಗಿ ಶಕ್ತಿಕುಂದಿಹೋದ ಶರೀರವುಳ್ಳವಳಾಗಿ ಸುನಂದೆಯ ಬಳಿಗೆ ಬಂದು ಹೀಗೆಂದಳು – “ನಿನ್ನ ಅನುಗ್ರಹವಿದ್ದರೆ ಮಾತ್ರ ಬದುಕುವೆನು. ನೀನು ನನಗೆ ಸಹೋದರಿಯೂ ಮಂಗಳಕರಳಾದ ಗೆಳತಿಯೂ ಆಗಿರುವೆ. ಆದುದರಿಂದ ನೀನು ಈ ಕುಮಾರನಲ್ಲಿಗೆ ಹೋಗಿ ಹೀಗೆ ಹೇಳು – ವಿಜಯಾರ್ಧ ಪರ್ವತದಲ್ಲಿರುವ

ಪುರಾಪತಿಯಪ್ಪಶನಿವೇಗನೆಂಬ ವಿದ್ಯಾಧರಂಗಂ ವಿದ್ಯುತ್ಪ್ರಭೆಯೆಂಬ ಮಹಾದೇವಿಗಂ ಮಗಳ್ ಸಂಧ್ಯಾವಳಿಯೆಂಬೊಳ್ ನೀಮೆ ಶರಣೆಂದಿರ್ದೊಳಾಕೆಯಂ ನೀಮಮೋಘಂ ಕೈಕೊಳಲ್ವೇೞ್ಕುಮೆಂದಿಂತು ನುಡಿಯೆಂದು ಕಲ್ಪಿಸಿಯಟ್ಟಿದೊಡಾಕೆಯುಂ ಕುಮಾರಂಗೆ ತದ್ವ*ತ್ತಾಂತಮೆಲ್ಲಮಂ ಪೇೞ್ದೊಡಾತನುಂ ಪಿತೃಮಾತೃಗಳೀಯದ ಸ್ತ್ರೀಯರಂ ಕೈಕೊಳ್ವುದೆನಯೋಗ್ಯಮೆಂದು ಮಱುಮಾತುಗೊಟ್ಟೊಡೆ ಸುನಂದೆಯೆಂಬೊಳ್ ಮಿತ್ರಸಂಬಂಗಳಪ್ಪ ಜನಂಗಳ್ ಮುಂತಿಟ್ಟು ಕುಡೆ ಕೊಳಲ್ ತಕ್ಕುದೆಂದು ನುಡಿದೊಡಂಬಡಿಸಿ ದಿವ್ಯದೇವತೆಗಳನೆ ಬಾಂಧವಜನಮಾಗೊಡೆಯಳಂ ಮಹಾವಿಭೂತಿಯಿಂದಂ ಪಾಣಿಗ್ರಹಣಪುರಸ್ಸರಂಸಂಧ್ಯಾವಳಿಯಂ ಕುಮಾರಮಗೆ ಕೊಟ್ಟಳ್ ಸಂಧ್ಯಾವಳಿಯಂ ಸುನಂದೆಯಂ ಕುಮಾರಂಗೆ ಕೊಟ್ಟಳಿಂತನ್ಯೋನ್ಯಸಂಬಂಧದಿಂ ಗಾಂಧರ್ವವಿವಾಹದಿಂ ಕಲ್ಯಾದೊಳ್ ಕೂಡಿ ಸುಖದಿಂದಿರ್ಪೊರ್ ಅನ್ನೆಗಮಿತ್ತಶನಿವೇಗಂ ತನ್ನ ಮಗಂ ಪರಿರಿದು ಪೊೞ್ತು ಪೋಗಿ ತಡೆದನೆಂದು ಮಗನವಸ್ಥೆಯನಱದು ಬಾಯೆಂದವಳೋಕಿನಿಯೆಂಬ ವಿದ್ಯೆಯನಾರಯ್ಯಲಟ್ಟಿದೊಡಾ ವಿದ್ಯೆಯುಂ ಪಾರಾವತರೂಪದಿಂದಾರೈದು ಬಾಯೆಂದವಳೋಕಕಿನಿಯೆಂಬ ವಿದ್ಯೆಯನಾರಯ್ಯಲಟ್ಟಿದೊಡಾ ವಿದ್ಯೆಯುಂ ಪಾರಾವತರೂಪದಿಂದಾರೈದು ಪೋಪ್ಮದಂ ಸಂಧ್ಯಾವಳಿಯಱದಿಂತೆಂದು ತನ್ನ ಭರ್ತಾರಂಗೆ ವಜ್ರವೇಗನ ಸಾವನಱದಮೋಘಂ ನಿಮ್ಮ ಮೇಲೆ ಬರ್ಕುಮದಱಂ ನೀಮೀ ಪ್ರಜ್ಞಪ್ತಿಯೆಂಬ ಮಹಾವಿದ್ಯೆಯಂ

ಅಗ್ರಮಂದಿರವೆಂಬ ಪಟ್ಟಣದ ಒಡೆಯನಾದ ಅಶನಿವೇಗನೆಂಬ ವಿದ್ಯಾಧರನಿಗೂ ವಿದ್ಯುತ್ಪ್ರಭೆಯೆಂಬ ಮಹಾರಾಣಿಗೂ ಮಗಳಾಗಿರುವ ಸಂಧ್ಯಾವಳಿ ಎಂಬವಳು ನೀವೇ ತನಗೆ ಆಶ್ರಯವೆಂದು ಇದ್ದಾಳೆ. ಅವಳನ್ನು ನೀವು ನಿಶ್ಚಯವಾಗಿಯೂ ಸ್ವೀಕರಿಸಬೇಕು – ಎಂದು ಈ ರೀತಿಯಾಗಿ ಹೇಳು* – ಹೀಗೆ ಹೇಳಿಕೊಟ್ಟು ಸುನಂದೆಯನ್ನು ಕಳುಹಿಸಿದಳು. ಸುನಂದೆ ಈ ಸಂಗತಿಯೆಲ್ಲವನ್ನೂ ಕುಮಾರನಿಗೆ ತಿಳಿಸಿದಳು. ಅದಕ್ಕೆ ಕುಮಾರನು – “ತಂದೆ ತಾಯಿಗಳು ಕೊಡದೆ ಇರತಕ್ಕ ಹೆಣ್ಣುಗಳನ್ನು ಸ್ವೀಕರಿಸುವುದು ನನಗೆ ಯೋಗ್ಯವಲ್ಲ* ಎಂದು ಪ್ರತ್ಯುತ್ತರ ಕೊಟ್ಟನು ಆಗ ಸುನಂದೆ ಕುಮಾರನೊಡನೆ “ಮಿತ್ರಸಂಬಂಧವುಳ್ಳ ಜನರು ಮುಂದೆ ಇದ್ದುಕೊಂಡು ಹೆಣ್ಣನ್ನು ಕೊಟ್ಟರೆ ಸ್ವೀಕರಿಸಲು ಯೋಗ್ಯವಾಗುತ್ತದೆ* ಎಂದು ಹೇಳಿ, ಅವನನ್ನು ಒಪ್ಪುವಂತೆ ಮಾಡಿದಳು. ದೇವಲೋಕದ ದೇವತೆಗಳೇ ಬಂಧು ಜನವಾಗಿರತಕ್ಕ ಸಂಧ್ಯಾವಳಿಯನ್ನು ಬಹಳ ವೈಭವದಿಂದ ಪಾಣಿಗ್ರಹಣ ಕ್ರಮಪೂರ್ವಕವಾಗಿ ಕುಮಾರನಿಗೆ ಮದುವೆಮಾಡಿಕೊಟ್ಟಳು. ಸಂಧ್ಯಾವಳಿ ಸುನಂದೆಯನ್ನು ಕುಮಾರನಿಗೆ ಮದುವೆಮಾಡಿಕೊಟ್ಟಳು. ಹೀಗೆ ಪರಸ್ಪರ ಸಂಬಂಧದಿಂದ ಗಾಂಧರ್ವವಿವಾಹ ಕ್ರಮದಿಂದ ಅವರು ಮಂಗಳದಲ್ಲಿ ಕೂಡಿ ಸುಖದಿಂದ ಇದ್ದರು. ಆ ವೇಳೆಗೆ ಇತ್ತ ಆಶನಿವೇಗನು ತನ್ನು ಮಗನು ಹೋಗಿ ಬಹಳ ಹೊತ್ತು ತಡೆದನೆಂದು ಮಗನ ಸ್ಥಿತಿಯೇನೆಂಬುದನ್ನು ವಿಚಾರಿಸಿ ತಿಳಿದುಬರುವಂತೆ ಅವಲೋಕಿನಿ ಎಂಬ ವಿದ್ಯೆಯನ್ನು ಕಳುಹಿಸಿದನು ಆ ವಿದ್ಯೆ ಪಾರಿವಾಳರೂಪದಿಂದ ಬಂದು ವಿಚಾರಿಸಿ ಹೋಗುವುದನ್ನು ಸಂಧ್ಯಾವಳಿ ತಿಳಿದು ತನ್ನ ಗಂಡನಿಗೆ (ಸನತ್ಕುಮಾರನಿಗೆ) ಹೀಗೆಂದಳು – ಸ್ವಾಮಿ, ನನ್ನ ತಂದೆ ಅಶನಿವೇಗ ವಿದ್ಯಾಧರನು ಅತ್ಯಂತ ಭಯಂಕರವಾದ ಮಹಾಶಕ್ತಿ ಸಾಮರ್ಥ್ಯವುಳ್ಳವನು. ಅವನು ವಜುವೇಗನು ಸತ್ತುದನ್ನು ತಿಳಿದು ನಿಶ್ಚಯವಾಗಿಯೂ ನಿಮ್ಮ ಮೇಲೆ ದಂಡೆತ್ತಿ ಬರುವನು. ಆದುದರಿಂದ ನೀವು ಪ್ರಜ್ಞಪ್ತಿಯೆಂಬ ಈ ಮಹಾವಿದ್ಯೆಯನ್ನು ಸ್ವೀಕರಿಸಿಕೊಳ್ಳಿ* ಎಂದು

ಕೊಳ್ಳಿಮೆನೆ ಕುಮಾರಂ ನಕ್ಕು ಪ್ರುಸಿತವದನನಾಗಿ ಖೇಚರರೆಂಬೆರಲೆಗಳಂ ನಿಪಾತಿಸಲ್ಕೆನಗೆ ವಿದ್ಯೆಯುಂ ಬೇೞ್ಕುಮೆ ಎಂದೊಲ್ಲದಿರ್ದೊನ ಪಾದದ್ವಯಂಗಳ್ಗೆಱಗಿ ಪೊಡೆವಟ್ಟಮೋಘಂ ಕೊಳಲೆವೇೞ್ಕುಮೆಂದು ಬಲಾತ್ಕಾರದಿಂ ವಿದ್ಯೆಯಂ ಕೊಟ್ಟಾಡಾ ಅವಸರದೊಳ್ ಮತ್ತಿತ್ತ ರಥನೂಪುರಚಕ್ರವಾಳಪುರಾಪತಿಯಪ್ಪ ಚಂದ್ರಯಶನೆಂಬ ವಿದ್ಯಾಧರಂಗಂ ವಿದ್ಯುದ್ವೇಗೆಯೆಂಬ ಮಹಾದೇವಿಗಮಂತಿರ್ವ್ವರ್ಗಂ ಪುಟ್ಟಿದರ್ ಚಂದ್ರವೇಗನುಂ ಭಾನುವೇಗನುಮೆಂಬರ್ ಮಕ್ಕಳಾಗಿ ಇಂತಿಷ್ಟವಿಷಯಕಾಮ ಭೋಗಂಗಳನನುಭವಿಸತ್ತಿರೆ ಮತ್ತೊಂದು ದಿವಸಂ ನೃಪತಿಗೆ ಸಂಸಾರ ವೈರಾಗ್ಯಮಾಗಿ ಚಮದ್ರವೇಗನೆಂಬ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಕಿಱಯಾತನಪ್ಪ ಭಾನುವೇಗಂಗೆ ಯುವರಾಜಪಟ್ಟಮಂ ಕಟ್ಟಿ ಗುಣಧರರಿಂಬ ಚಾರಣರಿಸಿಯರ ಪಕ್ಕದೆ ಜೈನದಿಕ್ಷೆಯಂ ಕೈಕೊಂಡು ಪಲಕಾಲಂ ತಪಂಗೆಯ್ದು ಸಮ್ಮೇದಪರ್ವದೊಳ್ ಮೋಕ್ಷಕ್ಕೆ ವೋದರ್ ಮತ್ತಾ ಚಂದ್ರವೇಗಂಗೆ ನೂರ್ವರ್ ಪೆಣ್ಗೂಸುಗಳಾದೊರವಗಳತಿಶಯ ರೂಪು ಲಾವಣ್ಯಮನೊಡೆಯೊರವರನಾ ಆಶನಿವೇಗಂ ತನ್ನ ಮಗಂ ವಜ್ರವೇಗಂಗನವರತಂ ಪಾಗುಡಮಂ ಪೆರ್ಗ್ಗೆಡೆಗಳುಮನಟ್ಟುತ್ತಿರ್ಕ್ಕುಂ ಮತ್ತಂ ಪೆಱರುಂ ವಿದ್ಯಾದರರ್ಕ್ಕಳನವರತಂ ಕೂಸುಗಳಂ ಬೇಡಿಯಟ್ಟುತ್ತಿರೆ ಆರ್ಗಂ ಕುಡಲೊಲ್ಲದೆ ಮತ್ತೊಂದು ದಿವಸಂ ಮಕ್ಕಳನಾರ್ಗೆ ಕುಡುವಮೆಂದು ದೈವಜ್ಞನಂ ಬೆಸಗೊಂಡೊಡಾತನಿಂತೆಂದು ಪೇೞ್ದಂ

ಹೇಳಿದಳು. ಆಗ ಕುಮಾರನು ನಕ್ಕು, ನಗೆಯಿಂದ ಕೂಡಿದ ಮುಖವುಳ್ಳವನಾಗಿ “ವಿದ್ಯಾಧರರೆಂಬ ಹುಲ್ಲೆಮರಿಗಳನ್ನು ಬೀಳಿಸುವುದಕ್ಕೆ ನನಗೆ ವಿದ್ಯೆಯೂ ಬೇಕೆ? * ಎಂದು ನಿರಾಕರಿಸಿದನು. ಸಂಧ್ಯಾವಳಿ ಅವನ ಎರಡೂ ಪಾದಗಳಿಗೆ ಬಿದ್ದು ಸಾಷ್ಟಾಂಗ ವಂದಿಸಿ ನಿಶ್ಚಯವಾಗಿಯೂ ಸ್ವೀಕರಿಸಲೇಬೇಕು ಎಂದು ಒತ್ತಾಯದಿಂದ ವಿದ್ಯೆಯನ್ನು ಆ ಸಂದರ್ಭದಲ್ಲಿ ಕೊಟ್ಟಳು. ಅನಂತರ ಇತ್ತ ರಥನೂಪುರಚಕ್ರವಾಳ ಎಂಬ ಪಟ್ಟಣದ ಒಡೆಯನಾದ ಚಂದ್ರಯಶನೆಂಬ ವಿದ್ಯಾಧರನಿಗೂ ವಿದ್ಯುದ್ವೇಗೆ ಎಂಬ ಮಹಾರಾಣಿಗೂ ಅಂತೂ ಇಬ್ಬರಿಗೂ ಚಂದ್ರವೇಗ ಭಾನುವೇಗ ಎಂಬಿಬ್ಬರು ಮಕ್ಕಳಾಗಿ ಜನಿಸಿದರು. ಹೀಗೆ ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇರಲು, ಆಮೇಲೆ ಒಂದಾನೊಂದು ದಿವಸ ರಾಜನಿಗೆ ಸಂಸಾರದಲ್ಲಿ ವೈರಾಗ್ಯವುಂಟಾಗಿ ಹಿರಿಯ ಮಗನಾದ ಚಂದ್ರವೇಗನಿಗೆ ರಾಜ್ಯವನ್ನು ಕಟ್ಟಿ ಕಿರಿಯ ಮಗನಾದ ಭಾನುವೇಗನಿಗೆ ಯುವರಾಜಪಟ್ಟವನ್ನು ಕಟ್ಟಿ ಗುಣಧರರೆಮಭ ಚಾರಣಋಷಿಗಳ ಬಳಿಯಲ್ಲಿ ಜೈನದೀಕ್ಷೆಯನ್ನು ಸ್ವೀಕರಿಸಿ, ಹಲವು ಕಾಲ ತಪಸ್ಸನ್ನು ಮಾಡಿ ಸಮ್ಮೇದಪರ್ವತದಲ್ಲಿ ಮೋಕ್ಷಕ್ಕೆ ತೆರಳಿದರು. ಆಮೇಲೆ ಚಂದ್ರವೇಗನಿಗೆ ನೂರು ಮಂದಿ ಹೆಣ್ಣುಮಕ್ಕಳಾದರು. ಅವರು ಹೆಚ್ಚಾದ ರೂಪ ಲಾವಣ್ಯವುಳ್ಳವರಾಗಿದ್ದರು. ಅವರನ್ನು ಆಶನಿವೇಗನು ತನ್ನ ಮಗನಾದ ವಜ್ರವೇಗನಿಗೆ ತರಬೇಕೆಂದು ಎಡೆಬಿಡದೆ ಕಾಣಿಕೆಯನ್ನೂ ಹೆಗ್ಗಡೆ (ಅರಮನೆಯ ಅಕಾರಿ)ಗಳನ್ನೂ ಕಳುಹಿಸುತ್ತಿದ್ದನು. ಅದಲ್ಲದೆ ಬೇರೆ ವಿದ್ಯಾಧರರೂ ಯಾವಾಗಲೂ ಆ ಕನ್ಯೆಯರನ್ನು ಕೇಳುವುದಕ್ಕೆ ಕಳುಹಿಸುತ್ತಲೇ ಇದ್ದರು. ಚಂದ್ರವೇಗನು ಅವರಲ್ಲಿ ಯಾರಿಗೂ ಕೊಡಲು ಒಪ್ಪದೆ ಅನಂತರ ಒಂದು ದಿವಸ ತನ್ನ ಹೆಣ್ಣುಮಕ್ಕಳನ್ನು ಯಾರಿಗೆ ಕೊಡೋಣ ಎಂದು ದೈವಜ್ಞನಾದ ಜಫಯಿಸನನ್ನು ಕೇಳಿದನು. ಆಗ ಅವನು ಹೀಗೆಂದನು